ಪಾತ್ರಗಳು:
ರಾಮಣ್ಣ, ರಾಮಣ್ಣನ ಕೆಲಸದಾಳು ಕೊಗ್ಗ
ನ್ಯಾಯಾಧೀಶ, ನಾಯಾಧೀಶನ ಜವಾನ ಕಾಶಪ್ಪ
ಐದು ಮಂದಿ ಹಳ್ಳಿಗರು, ಒಂದು ಕತ್ತೆ

ದೃಶ್ಯ ಒಂದು: ರಸ್ತೆ, ಅರಳೀಕಟ್ಟೆ

(ಐದು ಮಂದಿ ಹಳ್ಳಿಗರು  ನಡೆದು ಬಂದು ಒಂದು ಕಟ್ಟೆಯ ಮೇಲೆ ಕುಳಿತುಕೊಳ್ಳುತ್ತಾರೆ. ಐವರಲ್ಲಿ ಒಬ್ಬನ (೪ನೆಯವನು: ಕಳ್ಳ) ಮುಖ ಚಹರೆ ತುಸು ಭಿನ್ನವಾಗಿದೆ.)

೧ನೆ: ಊಟ ಸಖತ್ತಾಗಿತ್ತಲ್ಲ? ಎರಡು ಬಗೆ ಸ್ವೀಟ್! ಲಡ್ಡು ! ಹೋಳಿಗೆ!…

೨ನೆ: ಸೌತೆಕಾಯಿ ಹುಳಿ, ಬದನೆಕಾಯಿ ಪಲ್ಯ, ಕೊತ್ತಂಬರಿ ಸೊಪ್ಪು ಚಟ್ನಿ …

೩ನೆ: ಅಪ್ಪೆ ಮಾವಿನ ಮಿಡಿ ಉಪ್ಪಿನಕಾಯಿ.

೪ನೆ: ಎರಡೆರಡು ಬಗೆ ಹಪ್ಪಳ.

೫ನೆ: ಹಪ್ಪಳದ ಭೂತ ಹಿಡ್ದಿದೆ ಇವ್ನಿಗೆ ಪುನ: ಪುನ: ಕೇಳಿ ತಿಂದ. ಎಷ್ಟು ಗೊತ್ತಾ?

೧ನೆ: ಎಷ್ಟು?

೨ನೆ: ಏಳು!

ಉಳಿದ ನಾಲ್ವರೂ: ಏಳು!

೪ನೆ: ಹಪ್ಫಳ ಏಳು ತಿಂದ್ರೂ ಒಂದೇ, ಹದಿನೇಳು ತಿಂದ್ರೂ ಒಂದೇ. ಹಪ್ಪಳದಿಂದ ಹೊಟ್ಟೆ ತುಂಬುತ್ತಾ?

೫ನೆ: ಹಾಗಾದ್ರೆ ನಿನ್ನ ಹೊಟ್ಟೆ ತುಂಬ್ಲಿಲ್ವ?

೪ನೆ: ವರ್ಷದಲ್ಲಿ ಒಂದು ದಿವ್ಸ  ಹೊಟ್ಟೆ ತುಂಬಿದ್ರೆ ಸಾಕಾ?

೩ನೆ: ಬಾಕಿ ದಿನ ಎಲ್ಲ ನಿಂಗೆ ಉಪ್ವಾಸಾನಾ?

೪ನೆ: ಉಪ್ವಾಸ ಇಲ್ಲ.

೨ನೆ: ಮತ್ತೆ ರಾಮಣ್ಣೋರು ದಿನಾ ನಿಂಗೆ ಹಬ್ಬದ ಊಟ ಹಾಕ್ಬೇಕಾ? ಕೆಲಸ ಮಾಡಿದ್ದಕ್ಕೆ ಸಂಬಳ ಕೊಡೋಲ್ವ? ಅವ್ರ ತಾಯಿ ನೆನಪಿನಲ್ಲಿ ವರ್ಷಕ್ಕೆ ಒಂದು ದಿವ್ಸ ಇಡೀ ಊರಿಗೆ ಊಟ ಹಾಕ್ತಾರೆ. ಯಾರಿದ್ದಾರೆ ಈ ಊರ‍್ನಲ್ಲಿ ಅಂಥ ಪುಣ್ಯಾತ್ಮರು ಬೇರೆ?

೩ನೆ: ಇಡೀ ಊರಿಗೆ ಊಟ ಹಾಕೋದೇನು ಸಣ್ಣ ವಿಚಾರಾನಾ? ಕಡಿಮೆಯಲ್ಲಿ ಐವತ್ತು ಸಾವಿರ ರೂಪಾಯಿ ಖರ್ಚಾಗ್ತದೆ.

೪ನೆ: ಅಲ್ಲಾ, ರಾಮಣ್ಣೋರ ಹತ್ರ ಇಷ್ಟು ಹಣ ಎಲ್ಲಿಂದ?

೫ನೆ: ರಾಮಣ್ಣೋರ  ಅಪ್ಪ ಸಿದ್ಧಪ್ನೋರು ದೊಡ್ಡ  ವ್ಯಾಪಾರಿಗಳು. ಭಾರೀ ಶ್ರೀಮಂತ್ರು. ಸಿದ್ಧಪ್ನೋರು ತೀರ‍್ಕೊಂಡ ಮೇಲೆ ರಾಮಣ್ಣೋರು ಕೂಡ ವ್ಯಾಪಾರದಲ್ಲಿ ತುಂಬಾ ಹಣ ಮಾಡಿದ್ರು. ಅದ್ಯಾಕೋ ಒಂದಿವ್ಸ  ಎಲ್ಲದರಲ್ಲಿ ಬೇಜಾರು ಬಂದು ಆಸ್ತಿಪಾಸ್ತಿ ಎಲ್ಲಾ ಮಾರಿಬಿಟ್ಟು  ದಾನ ಧರ್ಮ ಶುರು ಮಾಡಿದು. ಊರಿಗೊಂದು ಕೆರೆ ಕಟ್ಟಿಸಿದ್ರು. ಶಾಲೆ ಕಟ್ಟಿಸಿದ್ರು. ರಸ್ತೆ ಮಾಡಿಸಿದ್ರು. ಇನ್ನು ಆಸ್ಪತ್ರೆ ಕಟ್ಟಿಸ್ತಾರಂತೆ.

೧ನೆ: ರಾಮಣ್ಣೋರಿಗೆ ಮಕ್ಕಳು ಮರಿ ಇಲ್ಲ. ಇರೋದನ್ನೆಲ್ಲ ಊರಿನ ಉದ್ಧಾರಕ್ಕಾಗಿ ಖರ್ಚು ಮಾಡಿ ಸಾಯ್ತೀನಿ ಅಂತ ಹೇಳ್ತಿರ‍್ತಾರೆ.

೪ನೆ: ಎಂಬತ್ತು ದಾಟಿದ್ರೂ ಗಟ್ಟಿಮುಟ್ಟಾಗಿದ್ದಾರೆ. ಬೇಗ ಸಾಯೊಲ್ಲ. (ನಗುತ್ತಾನೆ)

೩ನೆ: (ಖಾರವಾಗಿ) ಅದ್ರಲ್ಲಿ ನಗುವಂಥದ್ದೇನಿದೆ? ರಾಮಣ್ಣ ದೇವ್ರಂಥ ಮನುಷ್ಯ. ಅಂಥವ್ರು ನೂರೈವತ್ತು ವರ್ಷ ಬದುಕ್ಬೇಕು!

೨ನೆ: ಅಂಥವರು ಸಾಯೆ ಬಾರ‍್ದು.

೪ನೆ: ಅಲ್ಲಾ ಇಷ್ಟು ಹಣಾನ ಅವ್ರು ಎಲ್ಲಿಟ್ಕೊಳ್ತಾರೆ? ಬ್ಯಾಂಕಿಗೆ ಹೋಗೋದೇ ಇಲ್ವಂತೆ ಅವ್ರು?

೧ನೆ: ನಿಜ. ಬ್ಯಾಂಕಿಗೆ ಹೊಗೋಲ್ಲ. ಹಣವನ್ನೆಲ್ಲಾ ಚಿನ್ನ ಮಾಡ್ಕೊಂಡು ಮನೇಲೇ ಇಟ್ಟ್ಟುಕೊಳ್ತಾರೆ.

೨ನೆ: ಬ್ಯಾಂಕಿನಲ್ಲಿಟ್ಟ ಹಣದ ಮಲ್ಯ ಜಾಸ್ತಿಯಾಗೋಲ್ಲ. ಚಿನ್ನದ ಬೆಲೆ ಜಾಸ್ತಿಯಾಗ್ತಾನೇ ಹೋಗ್ತದೆ  ಅನ್ನೋದು ರಾಮಣ್ಣೋರ ವಾದ.

೪ನೆ: (ನಕ್ಕು) ಒಳ್ಳೇ ವಾದ. ಮನೇಲಿಟ್ಟ ಚಿನ್ನವನ್ನ ಕಳ್ಳರು ಎತ್ತಿಕೊಂಡು ಹೋದ್ರೆ?

೫ನೆ:  ನನ್ನ ಊರಿನಲ್ಲಿ ಕಳ್ಳರಿಲ್ಲ ಅಂತಾರೆ ರಾಮಣ್ಣೋರು.

೧ನೆ: ರಾಮಣ್ಣೋರ ಮನೆಯಿಂದ ಕದೀಲಿಕ್ಕೆ ಯಾರಿಗಾದ್ರೂ ಮನಸ್ಸು ಬಂದೀತಾ? ಊರಿಗೆ ನೀರು ಕೊಟ್ಟೋರು ಅವ್ರು. ನಮ್ಮ ಮಕ್ಕಳಿಗೆ ವಿದ್ಯಾ ಸಿಗೋ ಹಾಗೆ ಮಾಡಿದೋರು ಅವ್ರು. ಇನ್ನು ಆಸ್ಪತ್ರೆ ಒಂದಾಗಿಬಿಟ್ರೆ, ಕಾಯಿಲೆ ಬಂದ್ರೆ ದೂರದ ಪಟ್ಟಣಕ್ಕೆ ಹೋಗೋ ಕಷ್ಟ ಪರಿಹಾರ ಆಗುತ್ತೆ.

೨ನೆ: ದೇವ್ರು ರಾಮಣ್ಣೋರಿಗೆ ದೀರ್ಘಾಯುಸ್ಸು ಕೊಡ್ಲಿ.

ಎಲ್ಲರೂ: ನಿಜ. ದೇವ್ರು ರಾಮಣ್ಣೋರಿಗೆ ದೀರ್ಘಾಯುಸ್ಸು ಕೊಡ್ಲಿ.

ಫೇಡ್ ಔಟ್

ದೃಶ್ಯ ಎರಡು: ರಾಮಣ್ಣನ ಮನೆ

(ಶ್ರೀಮಂತಿಕೆಯ ಲಕ್ಷಣಗಳಿಲ್ಲ. ಒಂದು ಹಾಸಿಗೆ ಮತ್ತು ಎರಡು ಕುರ್ಚಿಗಳು ಮಾತ್ರ)

(ರಾಮಣ್ಣ ಹಾಸಿಗೆಯ ಮೇಲೆ ಕುಳಿತುಕೊಂಡಿದ್ದಾನೆ. ಹಾಸಿಗೆಯಡಿಯಿಂದ ಚಿನ್ನದ ಪೆಟ್ಟಿಗೆ ತೆಗೆದು ತೊಡೆಯ ಮೇಲೆ ಇರಿಸಿಕೊಂಡು  ಅದರಲ್ಲಿರುವ ಚಿನ್ನವನ್ನು ಪರಿಶೀಲಿಸಿ ಸನ್ನೆಯಲ್ಲಿಯೆ ಏನೋ ಲೆಕ್ಕಾಚಾರ ಮಾಡಿ ಪುನ: ಪೆಟ್ಟಿಗೆಯನ್ನು ಹಾಸಿಗೆಯಡಿಯಲ್ಲಿಡುತ್ತಾ  ಕೆಲಸದಾಳು ಕೊಗ್ಗನನ್ನು ಕರೆಯುತ್ತಾನೆ. ದೂರದಿಂದ ಹಸುವಿನ ಅಂಬಾ ದನಿ.)

ರಾ: ಕೊಗ್ಗ್ಗಾ, ಏ ಕೊಗ್ಗಾ.

ಕೊ: ಬಂದೆ ಅಣ್ಣಾವ್ರೆ. (ಓಡಿಕೊಂಡು ಬರುತ್ತಾನೆ. ರಾಮಣ್ಣ ಪೆಟ್ಟಿಗೆಯನ್ನು ಹಾಸಿಗೆಯಡಿಯಲ್ಲಿಡುವುದನ್ನು  ನೋಡುತ್ತಾನೆ)

ರಾ: (ಬೆನ್ನು ಕೊಗ್ಗನ ಕಡೆಗಿದೆ) ಎಲ್ಲಿ  ಹೋಗಿದ್ಯೊ ಕೊಗ್ಗಾ ಬೆಳಿಗ್ಗೆ ಬೆಳಿಗ್ಗೆ?

ಕೊ: ಹಸುವನ್ನು ಕಟ್ಟಿ ಹಾಕೋಕೆ ಹೋಗಿದ್ದೆ ಅಣ್ಣಾವ್ರೆ.

ರಾ: ಯಾವಾಗ್ಲೂ ಹಸುವನ್ನು ಕಟ್ಟಿ ಹಾಕ್ತಾನೇ ಇರ‍್ತಿಯಲ್ಲ? ಎಂಥದು ಕಥೆ? (ನಗು)

ಕೊ: ಅದು ತುಂಬಾ ತುಂಟ ಹಸು ಅಣ್ಣಾವ್ರೆ. ಕಟ್ಟಿದ ಹಗ್ಗವನ್ನ ಕಳಚ್ತಾನೇ ಇರುತ್ತೆ.

ರಾ: ಕಳಚಿಕೊಳ್ಳದ ಹಾಗೆ ಗಂಟು ಹಾಕೋಕೆ ನಿಂಗೆ ಬರೋಲ್ಲ ಅನ್ನು. (ನಗು)

ಕೊ: ಹೌದಾ ಅಣ್ಣಾವ್ರೆ?

ರಾ: ಹೌದು. ಅಲ್ದೆ ಬೇರೇನು? ಹಸುವಿಗೆ ಗಂಟು ಬಿZಕೊಳ್ಳೋಕೆ ಬರುತ್ತಾ? ಸರಿ. ನಾನು ಆಸ್ಪತ್ರೆ ಕೆಲಸ ನಡಿವಲ್ಲಿಗೆ ಹೋಗ್ತೀನಿ.  ನಿನ್ನ ಕಾಪಿs ತಿಂಡಿ ಆಯಾ?

ಕೊ: ಆಯ್ತು ಅಣ್ಣಾವ್ರೆ.

(ರಾಮಣ್ಣನ ನಿರ್ಗಮನ. ಬೆಳಕು ಕಡಿಮೆಯಾಗುತ್ತದೆ. ಕ್ಷಣದ ಬಳಿಕ ಹಸುವಿನ ಕೂಗು )

ಕೊ: ಈ ಹಸುವಿಗೇನಾಯ್ತು? ಪುನ: ಹಗ್ಗ ಬಿಚ್ಚಿಕೊಂಡು ಹೋಯಾ? (ಓಡುತ್ತಾನೆ. ಬೆಳಕು ಮತ್ತೂ ಕಡಿಮೆಯಾಗುತ್ತದೆ. ನಿಮಿಷದ ಬಳಿಕ ಕಳ್ಳನ ಪ್ರವೇಶ. ಕಣ್ಣುಗಳು ಮಾತ್ರ ಕಾಣಿಸುವ ಕಪ್ಪು ಮುಖವಾಡ. ಅತ್ತಿತ್ತ ನೋಡಿ ಒಳ ಪ್ರವೇಶಿಸುತ್ತಾನೆ. ಹಾಸಿಗೆಯನ್ನು ಎತ್ತಿ ಚಿನ್ನದ ಪೆಟ್ಟಿಗೆಯನ್ನು ತೆಗೆದುಕೊಂಡು ಓಡಿಹೋಗುತ್ತಾನೆ. ಕ್ಷಣದ ಬಳಿಕ ಬೆಳಕು. ರಾಮಣ್ಣನ ಪ್ರವೇಶ)

ರಾ: ಕೊಗ್ಗಾ , ಏ ಕೊಗ್ಗಾ.

ಕೊ: (ಬರುವುದು ತುಸು ತಡವಾಗುತ್ತದೆ) ಅಣ್ಣಾವ್ರೆ.

ರಾ: ಎಲ್ಲಿದ್ದೆ?

ಕೊ: ಹಸುವನ್ನು ಕಟ್ಟಿ ಹಾಕ್ತಾ ಇದ್ದೆ  ಅಣ್ಣಾವ್ರೆ. ಏನಣ್ಣಾವ್ರೆ ವಾಪಾಸು ಬಂದ್ರಿ?

ರಾ: ಆಸ್ಪತ್ರೆಯ ಕೆಲಸದವ್ರಿಗೆ ಸ್ವಲ್ಪ  ಹಣ ಬೇಕಾಗಿತ್ತು. (ಅಂಬಾ ಎಂದು ಕರುವಿನ ಕೂಗು) ಅದ್ಯಾವ್ದು ಪುನ: ಕೂಗ್ತಿರೋದು?

ಕೊ: ಅದು ಕರು ರಾಮಣ್ಣೋರೆ.

ರಾ: ಅದು ಕೂಡ ಹಗ್ಗ ಬಿಚ್ಚಿಕೊಂಡು ಹೋಯಾ? ನೋಡು. (ನಗು. ಕೊಗ್ಗ ಹೋಗುತ್ತಾನೆ. ರಾಮಣ್ಣ ಹಾಸಿಗೆಯನ್ನು ಎತ್ತುತ್ತಾನೆ.  ಪೆಟ್ಟಿಗೆಯಿಲ್ಲದಿರುವುದನ್ನು ಕಂಡು)  ಕೊಗ್ಗಾ, ಏ ಕೊಗ್ಗಾ.

ಕೊ: (ಓಡಿಕೊಂಡು ಬಂದು) ಅಣ್ಣಾವ್ರೆ

ರಾ: ಚಿನ್ನದ ಪೆಟ್ಟಿಗೆ ಕಾಣೆಯಾಗಿದೆಯಲ್ಲಾ ಕೊಗ್ಗಾ?

ಕೊ: ಕಾಣೆಯಾಗಿದ್ಯಾ ಅಣ್ಣಾವ್ರೆ?

ರಾ: ಹೌದು. ಯಾರೋ ಕಳ್ಳರ ಕೆಲಸ ಇದು.

ಕೊ: ನಿಜ ಯಾರೋ ಕಳ್ಳರ ಕೆಲಸ ಇದು.

ರಾ: ಈಗೇನ್ಮಾಡೋದು?

ಕೊ: ಈಗೇನ್ಮಾಡೋದು? (ಚಿಂತಿಸುತ್ತಾನೆ)

ರಾ: ದೂರು ಕೊಡ್ಬೇಕು. ನ್ಯಾಯಾಧೀಶರಲ್ಲಿಗೆ ಹೋಗ್ತೇನೆ

ರಾ: ಆಗ್ಲಿ. ನ್ಯಾಯಾಧೀಶರಲ್ಲಿಗೆ ಹೋಗಿ ಅಣ್ಣಾವ್ರೆ.

ಫೇಡ್ ಔಟ್

 

ದೃಶ್ಯ ಮೂರು: ನ್ಯಾಯಾಧೀಶನ ಮನೆ

(ನ್ಯಾಯಾಧೀಶ ಏನೋ ಬರವಣಿಗೆಯಲ್ಲಿ ನಿರತನಾಗಿದ್ದಾನೆ. ಬಾಗಿಲಲ್ಲಿ ಜವಾನ ನಿಂತಿದ್ದಾನೆ)

ರಾ: ನಮಸ್ಕಾರ ನ್ಯಾಯಾಧೀಶರಿಗೆ.

ನ್ಯಾ: ರಾಮಣ್ಣೋರು! ಬನ್ನಿ ಬನ್ನಿ. ಏನ್ಸಮಾಚಾರ? ನಿಮ್ಮನ್ನು ಕಾಣದೆ ಬಹಳ ಕಾಲ ಆಯ್ತು. ಚೆನ್ನಾಗಿದ್ದೀರಾ?

ರಾ: ನಾನು ಚೆನ್ನಾಗಿದೀನಿ ನ್ಯಾಯಾಧೀಶರೆ. ಆದ್ರೆ ಈ ಊರಿನಲ್ಲಿ ಯಾವತ್ತೂ ನಡೆಯದಿದ್ದದ್ದು ಇವತ್ತು ನಡೆದಿದೆ ನ್ಯಾಯಾಧೀಶರೆ.

ನ್ಯಾ: ಏನಾಯಿತು?

ರಾ: ನನ್ನ ಚಿನ್ನದಪೆಟ್ಟಿಗೆ ಕಳವಾಗಿದೆ.

ನ್ಯಾ: ಹೌದೆ? ಈ ಊರಿನಲ್ಲಿ ಕಳ್ಳರಿದ್ದಾರೆಯೆ? (ಆಶ್ಚರ್ಯ)

ರಾ: ಇಲ್ಲ ಅನ್ನುವ ನನ್ನ   ನಂಬಿಕೆ ಸುಳ್ಳಾಗಿದೆ ನ್ಯಾಯಾಧೀಶರೆ.(ಬೇಸರ)

ನ್ಯಾ: ಈ ಕಳ್ಳತನ ಯಾವಾಗ ನಡೆಯಿತು ರಾಮಣ್ಣೋರೆ?

ರಾ: ಇವತ್ತು ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ನ್ಯಾಯಾಧೀಶರೆ. ನಾನು ಯಾವತ್ತಿನ ಹಾಗೆ ಪೆಟ್ಟಿಗೆಯನ್ನು ಹಾಸಿಗೆಯಡಿಯಲ್ಲಿ ಇರಿಸಿ ಆಸ್ಪತ್ರೆಯ ಕೆಲಸ ನಡೆಯುವಲ್ಲಿಗೆ ಹೊರಟೆ. ಹೆಚ್ಚೆಂದರೆ ಐನೂರು ಮೀಟರ್ ದೂರ ಹೋಗಿರಬಹುದು. ಕೆಲಸದವರಿಗೆ ಕೊಡಲು ಹಣವಿಲ್ಲ ಎಂದು ನೆನಪಾಗಿ ವಾಪಾಸು ಹೋಗುವಷ್ಟರಲ್ಲಿ ಪೆಟ್ಟಿಗೆ ಮಾಯವಾಗಿದೆ.

ನ್ಯಾ: ನೀವು ಪಟ್ಟಿಗೆಯನ್ನು ಹಾಸಿಗೆಯಡಿಯಲ್ಲಿ ಇಡುವಾಗ ಮನೆಯಲ್ಲಿ ಯಾರಿದ್ರು?

ರಾ: ನಮ್ಮ ಕೆಲಸದಾಳು ಕೊಗ್ಗ ಇದ್ದ.

ನ್ಯಾ: ನೀವು ಪೆಟ್ಟಿಗೆ ಹಾಸಿಗೆಯಡಿಯಲ್ಲಿಡುವುದನ್ನು ಅವನು ಕಂಡಿರಬಹುದುದೆ?

ರಾ: (ನಸುನಕ್ಕು) ಅವನು ಯಾವಾಗಲೂ ಕಾಣುತ್ತಾನೆ  ಅವನು ಅಂಥವನಲ್ಲ    ನ್ಯಾಯಾಧೀಶರೆ.

ನ್ಯಾ: ಇರಬಹುದು. ಆದರೆ ಪ್ರಲೋಭನ ಪಿಶಾಚಿಯ ರೀತಿಯೆ ವಿಚಿತ್ರ. ಅದು ಯಾವುದೋ ಒಂದು ಅನಿರೀಕ್ಷಿತ ಕ್ಷಣದಲ್ಲಿ ವ್ಯಕ್ತಿಯನ್ನು ಹಿಡಿದುಕೊಳ್ಳುತ್ತದೆ. ಇರಲಿ. ನಿಮ್ಮ ಕಟ್ಟಡದ ಕೆಲಸಗಾರರ ಪೈಕಿ ಬೇರೆ ಊರಿನವ್ರು ಯಾರಾದರೂ ಇದ್ದಾರೆಯೆ ರಾಮಣ್ಣೋರೆ?

ರಾ: ಇಲ್ಲ ನ್ಯಾಯಾಧೀಶರೆ

ನ್ಯಾ: (ಚಿಂತಿಸಿ) ಹಾಗಾದ್ರೆ ಈ ಕಳ್ಳತನವನ್ನ ನಾಳೆಯೆ ನಾನು ಪತ್ತೆ ಹಚ್ತೀನಿ.

ರಾ: ನಾಳೆಯೆ?

ನ್ಯಾ: ಹೌದು. ನಾಳೆಯೆ. ನೀವು ಇವತ್ತು ಸಾಯಂಕಾಲ ಒಂದು ಕತ್ತೆಯನ್ನು ತನ್ನಿ. (ಪೇದೆ ಕಾಶಪ್ಪನನ್ನು ಕರೆಯುತ್ತಾನೆ)

ನ್ಯಾ:  ಕಾಶಪ್ಪ.

ಕಾ: ಸ್ವಾಮಿ.

ನ್ಯಾ: ಡೋಲು ತೆಗೆದುಕೊ. ಊರಲ್ಲಿ ಸಾರು ಏನಂದ್ರೆ, “ರಾಮಣ್ಣೋರ ಮನೆಯಲ್ಲಿ ಕಳ್ಳತನ ಆಗಿದೆ. ಅವರ ಚಿನ್ನದ ಪೆಟ್ಟಿಗೆ ಕಳವಾಗಿದೆ. ನಾಳೆ ಬೆಳಿಗ್ಗೆ ಎಂಟು ಗಂಟೆಗೆ ಹಳ್ಳಿಯ ಎಲ್ಲಾ ಗಂಡಸರೂ ಬುದ್ಧ ನಗರದ ಗಾಂಧೀ ಮೈದಾನದಲ್ಲಿ  ಸೇರಬೇಕು” ಅಂತ.

 ಕಾ: ಅಪ್ಪಣೆ ಸ್ವಾಮಿ. ಹಾಗಾದರೆ ಹೆಂಗಸರಿಗೆ ವಿನಾಯತಿಯಾ?

ನ್ಯಾ: ಗಂಡಸರಲ್ಲಿ ಕಳ್ಳ ಸಿಗದಿದ್ದರೆ ಹೆಂಗಸರನ್ನು ಕರೆಸೋಣ.

(ಕಾಶಪ್ಪ ತಲೆಬಾಗಿ ನಿರ್ಗಮಿಸುತ್ತಾನೆ)

ನ್ಯಾ: ಸರಿ ರಾಮಣ್ಣೋರೆ. ನಮ್ಮ ಪೇದೆ ಇವತ್ತು ಸಾಯಂಕಾಲವೇ ಬುದ್ಧನಗರದ ಗಾಂಧೀ  ಮೈದಾನದಲ್ಲಿ  ಒಂದು ಗುಡಾರ ಹಾಕುತ್ತಾನೆ. ಕತ್ತಲಾದ ಕೂಡಲೇ ನಿಮ್ಮ ಕೆಲಸದವನು ಕತ್ತೆಯನ್ನು ತಂದು  ಗುಡಾರದೊಳಗೆ ಕಟ್ಟಲಿ. ಬರುವಾಗ ಕತ್ತೆಗೆ ಬೇಕಾದಷ್ಟು ಹುಲ್ಲು ಕೂಡ ತರಲು ಹೇಳಿ. ಕತ್ತೆ ಹಸಿವಿನಿಂದ ಕೂಗುವ ಹಾಗೆ ಆಗಬಾರದು.  ನೀವು ನಾಳೆ ಬೆಳಿಗ್ಗೆ ಎಂಟು ಗಂಟೆಗೆ ಗಾಂಧೀ ಮೈದಾನಕ್ಕೆ ಬನ್ನಿ.

ರಾ: ಸರಿ. ನ್ಯಾಯಾಧೀಶರೆ. (ರಾಮಣ್ಣನ ನಿರ್ಗಮನ)

ಫೇಡ್ ಔಟ್

ದೃಶ್ಯ ನಾಲ್ಕು:  ಮೈದಾನ

(ರಂಗದ ಮಧ್ಯೆ ಒಂದು ಟೆಂಟ್. ಅದರ ಬಾಗಿಲ್ಲಿ ಪೇದೆ ಕಾಶಪ್ಪ  ನಿಂತಿದ್ದಾನೆ)

(ನ್ಯಾಯಾಧೀಶನ ಆಗಮನ. ಅವನ ಕೈಯಲ್ಲಿ ಒಂದು ಅತ್ತರಿನ ಸೀಸೆ ಇದೆ. ಟೆಂಟಿನೊಳಗೆ ಇಣುಕಿ ನೋಡಿ)

ನ್ಯಾ: ಕಾಶಪ್ಪ . ಕತ್ತೆಗೆ ಸಾಕಷ್ಟು ಹಸಿ ಹುಲ್ಲು ಹಾಕಿದ್ದೀಯ?

ಕಾ: ಹಾಕಿದ್ದೀನಿ ಸ್ವಾಮಿ.

(ನ್ಯಾಯಾಧೀಶ ಸೀಸೆ ಹಿಡಿದುಕೊಂಡು ಟೆಂಟಿನ ಒಳಗೆ ಹೋಗುತ್ತಾನೆ. ಹಳ್ಳಿಗರೆಲ್ಲ ಬಂದು ಒಂದು ಕಡೆಯಲ್ಲಿ ಜಮಾಯಿಸುತ್ತಾರೆ. ರಾಮಣ್ಣನವರು ಬರುತ್ತಾರೆ. ಮೊದಲಿನ ದೃಶ್ಯದಲ್ಲಿದ್ದವರು, ಕೊಗ್ಗ ಮತ್ತು ಇತರರು ಕೂಡ ಇದ್ದಾರೆ. ನ್ಯಾಯಾಧೀಶ  ಟೆಂಟಿನಿಂದ ಹೊರಗೆ ಬರುತ್ತಾನೆ)

ನ್ಯಾ: (ಜನರೊಡನೆ) ಈಗ ನೀವೆಲ್ಲ ಸಾಲಾಗಿ ನಿಲ್ಲಿ. ಒಬ್ಬೊಬ್ಬರಾಗಿಯೆ ಒಳಗೆ ಹೋಗಬೇಕು. ಒಳಗೆ ಒಂದು ಕತ್ತೆ ಇದೆ. ಅದು ಸತ್ಯದ ಕತ್ತೆ. ನೀವು ಅದರ ಬಾಲವನ್ನು ಎರಡು ಕೈಯಲ್ಲಿಯೂ ಮೃದುವಾಗಿ ಹಿಡಿದುಕೊಂಡು ಮನಸ್ಸಿನಲ್ಲಿಯೆ “ನಾನು ರಾಮಣ್ಣೋರ ಚಿನ್ನದ ಪೆಟ್ಟಿಗೆಯನ್ನು ಕದ್ದಿಲ್ಲ ಎಂದು ಪ್ರಮಾಣಮಾಡುತ್ತೇನೆ”  ಎಂದು ಹೇಳಿ ಹೊರಗೆ ಬನ್ನಿ. ನೀವು ಹೇಳಿದ್ದು ಸತ್ಯ ಎಂದಾದರೆ ಕತ್ತೆ ಸುಮ್ಮನಿರುತ್ತದೆ. ಸುಳ್ಳು  ಎಂದಾದರೆ ಕತ್ತೆ ಕೂಗಿಕೊಳ್ಳುತ್ತದೆ.

(ಹಳ್ಳಿಗರು ಸಾಲು ನಿಲ್ಲುತ್ತಾರೆ. ನ್ಯಾಯಾಧೀಶ  ಟೆಂಟಿನ  ಹೊರಗಡೆ ಮರೆಯಲ್ಲಿ ನಿಲ್ಲುತ್ತಾನೆ. ಟೆಂಟಿನ ಒಳಹೋಗಿ ಹೊರಬಂದ ಪ್ರತಿಯೊಬ್ಬನ ಕೈಯನ್ನೂ ಮೂಸುತ್ತಾನೆ. ಹಳ್ಳಿಗರ ಸಾಲು ಮಗಿಯುತ್ತಾ ಬರುತ್ತದೆ. ಹೊರಗೆ ಬಂದವರನ್ನು ಕಾಶಪ್ಪ ಒಂದು ಕಡೆ ಗುಂಪಾಗಿ ಕುಳ್ಳಿರಿಸುತ್ತಾನೆ. ನ್ಯಾಯಾಧೀಶ ಒಬ್ಬನ ಕೈಗಳನ್ನು ಮೂಸಿ ಅವನನ್ನು  ಈಚೆಗೆ ಕರೆದುಕೊಂಡು  ಬರುತ್ತಾನೆ.

ನ್ಯಾ: ಇವನೇ ಕಳ್ಳ!

(ಎಲ್ಲರೂ ನ್ಯಾಯಾಧೀಶ ಮತ್ತು ಕಳ್ಳನ ಸುತ್ತ ನೆರೆಯುತ್ತಾರೆ. ಕಳ್ಳ ಮೊದಲ ದೃಶ್ಯದ  ಐದು ಮಂದಿ ಹಳ್ಳಿಗರ ಪೈಕಿ ೪ನೆಯವನು)

ರಾ: ಇವನು ಕಳ್ಳನೆ?

ನ್ಯಾ: ಅವನೇ ಹೇಳಲಿ.

೪ನೆ: ಹೌದು ಸ್ವಾಮಿ. ನಾನೇ ರಾಮಣ್ಯೋರ ಚಿನ್ನದ ಪೆಟ್ಟಿಗೆ ಕದ್ದವನು. ತಪ್ಪಾಯ್ತು ಸ್ವಾಮಿ, ಕ್ಷಮಿಸಿ.

ನ್ಯಾ: ಕ್ಷಮೆಯ ವಿಚಾರ ಆ ಮೇಲೆ. ಪೆಟ್ಟಿಗೆ ಎಲ್ಲಿಟ್ಟಿದ್ದಿ?

೪ನೆ: ನನ್ನ ಮನೆಯ ಅಟ್ಟದಲ್ಲಿಟ್ಟಿದ್ದೇನೆ ಸ್ವಾಮಿ.

ನ್ಯಾ: (ಹಳ್ಳಿಗರೊಡನೆ) ನೀವು ಇವನ ಜೊತೆ ಹೋಗಿ ಪೆಟ್ಟಿಗೆಯನ್ನು ತೆಗೆದುಕೊಂಡು ಬನ್ನಿ. ಅದನ್ನು ರಾಮಣ್ಣನವರಿಗೆ ಒಪ್ಪಿಸಿ  ಇವನನ್ನು ಕತ್ತೆಯ ಮೇಲೆ ಕೂರಿಸಿ ಊರಿನಲ್ಲಿ ಮೆರವಣಿಗೆ ಮಾಡಿಸಿ. (ಎಲ್ಲರೂ ಕಳ್ಳನನ್ನು ಕರೆದುಕೊಂಡು ಹೋಗುತ್ತಾರೆ)

ರಾ: ಕಳ್ಳನನ್ನು ನೀವು ಹೇಗೆ ಪತ್ತೆ ಮಾಡಿದಿರಿ ನ್ಯಾಯಾಧೀಶರೆ?

ನ್ಯಾ: (ನಸುನಕ್ಕು) ಎಲ್ಲರೂ ಕತ್ತೆಯ ಬಾಲವನ್ನು ಮುಟ್ಟಿದ್ದರು ರಾಮಣ್ಣೋರೆ. ತಾನು ಮುಟ್ಟಿದ್ರೆ  ಕತ್ತೆ ಕೂಗಿಕೊಳ್ಳಬಹುದು ಅನ್ನೋ ಭಯದಿಂದ ಕಳ್ಳ ಮಾತ್ರ ಮುಟ್ಟಲಿಲ್ಲ.

ರಾ: ಅದು ನಿಮಗೆ ಹೇಗೆ ತಿಳಿಯಿತು ನ್ಯಾಯಾಧೀಶರೆ?

ನ್ಯಾ: ನಾನು ಕತ್ತೆಯ ಬಾಲಕ್ಕೆ ಅತ್ತರು ಬಳಿದಿದ್ದೆ ರಾಮಣ್ಣೋರೆ. ಕಳ್ಳನ ಕೈಯಲ್ಲಿ ಅತ್ತರು ವಾಸನೆ ಇರಲಿಲ್ಲ. (ನಗು)

(ಕಳ್ಳನ ತಲೆಯ ಮೇಲೆ ರಾಮಣ್ಣನವರ ಚಿನ್ನದ ಪೆಟ್ಟಿಗೆ ಹೊರಿಸಿಕೊಂಡು ಜನರು ಬರುತ್ತಾರೆ. ಪೇದೆ ಗುಡಾರದೊಳಗಿಂದ ಕತ್ತೆಯನ್ನು ಹೊರತರುತ್ತಾನೆ. ಕಳ್ಳನನ್ನು ಕತ್ತೆಯ ಮೇಲೆ ಕುಳ್ಳಿರಿಸುತ್ತಾರೆ)

ಒಬ್ಬ: ಒಂದು ಹೂವಿನ ಹಾರ ತನ್ನಿ! (ಕೂಗಿ ಹೇಳುತ್ತಾನೆ)

ನ್ಯಾ: ಮುಚ್ಚು ಬಾಯಿ! ಹೂವಿನ ಹಾರ ಒಳ್ಳೆಯ ಕೆಲಸಗಳನ್ನು ಮಾಡಿದವರಿಗೆ ಮಾತ್ರ ಹಾಕಬೇಕು, ತಿಳೀತಾ?

ಕೆಲವರು:(ಒಂದೇ ದನಿಯಲ್ಲಿ) ಕಳ್ಳನಿಗಲ್ಲ ಸ್ವಾಮಿ. ಕತ್ತೆಗೆ.

ನ್ಯಾ: ಮುಚ್ಚಿ ಬಾಯಿ! ಮೂರ್ಖರಂತೆ ಆಡ್ಬೇಡಿ!

ಕೆಲವರು: ಕ್ಷಮಿಸ್ಬೇಕು ಸ್ವಾಮ್ಯೋರೆ. .

ಜನರು: ಸತ್ಯದೇವತೆಗೆ ಜಯವಾಗಲಿ
ರಾಮಣ್ಣೋರಿಗೆ ಜಯವಾಗಲಿ

(ಮೆರವಣಿಗೆ ಸಾಗುತ್ತದೆ)

ಫೇಡ್ ಔಟ್