ಪಾತ್ರಗಳು:
ರಾಜ, ರಾಜಕುಮಾರಿ, ರಾಜನ ತಂಗಿ,
ರಾಜನ ತಂಗಿಯ ಮಗ, ಮಾಟಗಾತಿ,
ಮರ, ಮರ ಕಡಿಯುವವನು

ದೃಶ್ಯ ಒಂದು: ಅರಮನೆ.

(ರಾಜ. ರಾಜಕುಮಾರಿ, ರಾಜನತಂಗಿ, ರಾಜನ ತಂಗಿಯ ಮಗ. ರಾಜಕುಮಾರಿಯ ಪ್ರಾಯ ಸುಮಾರು ಹತ್ತು ವರ್ಷ, ರಾಜನ ತಂಗಿಯ ಮಗನದು ಕೂಡ ಅದೇ  ಪ್ರಾಯ. ಹುಡುಗಿ ಆರೋಗ್ಯದಿಂದ ಕೂಡಿ ಚುರುಕಾಗಿದ್ದಾಳೆ. ಜಾಣೆ ಕೂಡ. ಹುಡುಗ ಸಣ್ಣಗೆ ಸಣಕಲಾಗಿ ದುರ್ಬಲನಾಗಿದ್ದಾನೆ. ಅವನು ಅಷ್ಟೊಂದು ಜಾಣನಲ್ಲದಿದ್ದರೂ ಅವನ ತಾಯಿ ಅವನೇ ಜಾಣ ಎಂದು ತೋರಿಸಲು ಪ್ರಯತ್ನಿಸುತ್ತಾಳೆ. ಹುಡುಗಿ ಮತ್ತು ಹುಡುಗ ಒಂದು ಕಡೆ ಚೆಸ್ ಆಟದಲ್ಲಿ ಮಗ್ನರಾಗಿದ್ದಾರೆ. ರಾಜ ಮತ್ತು ಅವನ ತಂಗಿ ಅವರ ಆಟವನ್ನೇ ನೋಡುತ್ತಾ ಕುಳಿತಿದ್ದಾರೆ. ಇಬ್ಬರು ಸೇವಕಿಯರು ಅವರಿಗೆ ಚಾಮರದಲ್ಲಿ ಗಾಳಿ ಹಾಕುತ್ತಿದ್ದಾರೆ)

ರಾಜ: ಇವರಿಗೆ ಯಾವಾಗ ನೋಡಿದರೂ ಚೆಸ್ ಆಟ.

ತಂಗಿ: ನನ್ನ ಮಗ ಚೆಸ್‌ನಲ್ಲಿ ತುಂಬಾ ಜಾಣ.

ರಾಜ: ನಿನ್ನ ಮಗ ಜಾಣನಲ್ಲದಿರುವುದು ಯಾವುದರಲ್ಲಿ? ಊಟದಲ್ಲೂ ಜಾಣ. (ನಗುತ್ತಾನೆ. ತಂಗಿಯ ಮುಖ ಸಪ್ಪಗಾಗುತ್ತದೆ)

ತಂಗಿ: ಆದರೆ ನಿನ್ನ ಮಗಳು ತಿನ್ನುವುದರಲ್ಲೇನೂ ಕಡಿಮೆಯಿಲ್ಲ. ತಿಂದು ತಿಂದು ಡುಮ್ಮಿಯಾಗಿದ್ದಾಳೆ.

ರಾಜ: ತಿಂದರೆ ಡುಮ್ಮಿಯಾಗಲೇ ಬೇಕಲ್ಲ? ಆದರೆ ನಿನ್ನ ಮಗ ಎಷ್ಟು ತಿಂದರೂ ಜಿರಲೆಯ ಹಾಗೆ ಇದ್ದಾನೆ. ಅವನನ್ನೊಮ್ಮೆ ರಾಜವೈದ್ಯರಿಗೆ ತೋರಿಸು.

ತಂಗಿ: ಅವನಿಗೆ ಕಾಯಿಲೆಯೆನೂ ಇಲ್ಲ.

ರಾಜ: ಕಾಯಿಲೆಯಿದ್ದು ಕಾಯಿಲೆಯಿರುವುದು ಸ್ವಾಭಾವಿಕ. ಆದರೆ ಕಾಯಿಲೆಯಿಲ್ಲದೆ ಕಾಯಿಲೆಯಿರುವಂತೆ ತೋರುವುದು ಅಸ್ವಾಭಾವಿಕ. ಅದು ಯಾವುದೋ ದೊಡ್ಡ ಕಾಯಿಲೆಯ ಮುನ್ಸೂಚನೆ. ತಡ ಮಾಡಬೇಡ. ರಾಜವೈದ್ಯರಿಗೆ ತೋರಿಸು.

ಹುಡುಗ: ಚೆಕ್!

ತಂಗಿ: (ಕುಳಿತಲ್ಲಿಂದಲೇ ಹರ್ಷದಿಂದ) ಭೇಷ್!

ಹುಡುಗಿ: ಹಾಗೆ ಚೆಕ್ ಕೊಡಲಿಕ್ಕಾಗುವುದಿಲ್ಲ.

ಹುಡುಗ: ಕೊಟ್ರೆ ಏನಾಗುತ್ತೆ?

ಹುಡುಗಿ: ಕಿಂಗ್‌ಗೆ ರಕ್ಷಣೆ ಎಲ್ಲಿದೆ? ಕಿಂಗ್ ಹೋಗ್ತಾನೆ ಮನೆಗೆ.

ಹುಡುಗ: ಹೌದಾ?

ಹುಡುಗಿ: ಹೌದು. ಬೇಗ ನಿನ್ನ ಕಿಂಗನ್ನು ಹಿಂದಕ್ಕೆ ಕೊಂಡು ಹೋಗಿ ಬೇರೆ ಮೂವ್ ಮಾಡು. ಅಲ್ಲದಿದ್ರೆ ಆಟ ಮುಗೀತು!

(ತಂಗಿಯ ಮುಖ ಸಪ್ಪಗಾಗುತ್ತದೆ. ರಾಜ ಮುಗುಳುನಗೆ ಬೀರುತ್ತಾನೆ. ಹುಡುಗ ಹುಡುಗಿ ಹೇಳಿದಂತೆ ಮಾಡುತ್ತಾನೆ)

ರಾಜ: ಮುಂದಿನ ತಿಂಗಳು ಕುಮಾರಿಯನ್ನು ಯುವರಾಣಿ  ಎಂದು ಘೋಷಿಸುತ್ತೇನೆ.

ತಂಗಿ: ಏನು ಅವಸರ? ಅವಳಿಗಿನ್ನೂ ಹತ್ತು ವರ್ಷ ತುಂಬಿಲ್ಲ.

ರಾಜ: ಯುವರಾಣಿ ಎಂದು ಘೋಷಿಸಲು ಅದೇನೂ ಅಡ್ಡಿಯಾಗುವುದಿಲ್ಲ. ಹೇಗಿದ್ದರೂ ನನ್ನ ನಂತರ ದೇಶವನ್ನು ಅವಳೇ ಆಳುವವಳು.

ತಂಗಿ: ಅದೇನೋ ಸರಿ. ಆದರೆ ಯುವರಾಣಿ ಎಂದು ಘೋಷಿಸುವ ಮೊದಲೇ ಮದುವೆ ಮುಗಿಸಿಬಿಡಬಹುದಲ್ಲಾ?

ರಾಜ: ಯುವರಾಣಿ ಪಟ್ಟಕ್ಕೇ ಪ್ರಾಯವಾಗಿಲ್ಲ ಎನ್ನುತ್ತಿ. ಇದು ಮದುವೆಯ ಪ್ರಾಯವೆ?

ತಂಗಿ: ಮದುವೆ ಯಾವಾಗ ಬೇಕಾದರೂ ಮಾಡಬಹುದು. ನನ್ನ ಮಗನಿಗೆ ಹನ್ನೆರಡಾಯಿತು.

ರಾಜ: ಮದುವೆಯ ವಿಚಾರ ಈಗ ಬೇಡ.

 ತಂಗಿ: ಹಂಗಂದ್ರೆ ಹೇಗಣ್ಣಾ? ತೊಟ್ಟಿಲಲ್ಲಿರುವಾಗಲೇ ನಡೆದ ಮಾತು ಅದು. ಮಹಾರಾಣಿ ಕೂಡ ಅದಕ್ಕೆ ಒಪ್ಪಿದ್ದರು.

ರಾಜ: ಅವಳೀಗ ಜೀವಂತ ಇಲ್ಲ.

ತಂಗಿ: ಜೀವಂತ ಇಲ್ಲದಿದ್ರೆ ಅವರು ಕೊಟ್ಟ ಒಪ್ಪಿಗೆ ಸುಳ್ಳಾಗುತ್ತಾ?

ರಾಜ: ಅದೇನಿದ್ರೂ ಕುಮಾರಿಗೆ ಹದಿನೆಂಟು ತುಂಬಿದ ಮೇಲಿನ ವಿಚಾರ. ನಾನು ಬಾಲ್ಯವಿವಾಹವನ್ನು ಒಪ್ಪುವುದಿಲ್ಲ. (ತಂಗಿ ಸುಮ್ಮನಾಗುತ್ತಾಳೆ)

ಹುಡುಗಿ: ಚೆಕ್!

(ಹುಡುಗ ತುಸು ಹೊತ್ತು ಚೆಸ್ ಬೋರ್ಡನ್ನೇ ನೋಡಿ. ಸಿಟ್ಟಿನಿಂದ ಕಾಯಿಗಳನ್ನು ಅತ್ತ ತಳ್ಳಿ ಓಡಿ ಹೋಗಿ ತಾಯಿಯ ಮಡಿಲಲ್ಲಿ ಕುಳಿತುಕೊಳ್ಳುತ್ತಾನೆ. ಹುಡುಗಿ ಹೋಗಿ ತಂದೆಯ ಬಳಿ ಕುಳಿತುಕೊಳ್ಳುತ್ತಾಳೆ.

ತಂಗಿ: (ಮಗನ ಮೈ ಸವರುತ್ತಾ  ರಾಜಕುಮಾರಿಯನ್ನು  ಕೃತಕ ಪ್ರೀತಿಯಿಂದ ನೋಡುತ್ತಾ) ಜಾಣೆ!

ಹುಡುಗ: ನಾನು?

ತಂಗಿ: ನೀನು ಕೂಡ ಜಾಣ.

ರಾಕು: ಆದ್ರೆ ಸ್ವಲ್ಪ ಕೋಣ

ಹುಡುಗ: ನೀನೇ ಕೋಣ.

ರಾಕು: ಕೋಣ ಗಂಡು. (ನಗುತ್ತಾಳೆ)

ಹುಡುಗ: ಹಾಗಾದ್ರೆ, ನೀನು ಹೆಣ್ಣು ಕೋಣ!

(ರಾಜಕುಮಾರಿ ಜೋರಾಗಿ ನಗುತ್ತಾಳೆ. ರಾಜನಿಗೂ ನಗು ಬರುತ್ತದೆ. ಆದರೆ ರಾಜನ ತಂಗಿ ಗಂಭೀರವಾಗಿದ್ದಾಳೆ)

ಫೇಡ್ ಔಟ್

ದೃಶ್ಯ ಎರಡು:  ಕಾಡು

(ಮಂತ್ರವಾದಿನಿ ಒಬ್ಬಳೇ ಕುಳಿತುಕೊಂಡು ಏನೋ ಮಂತ್ರ ಪಠಣ, ಪೂಜೆ ನಡೆಸಿದ್ದಾಳೆ. ಹೂವಿನ ರಾಶಿ. ಕುಂಕುಮ. ಮೂರ್ತಿಯ ಮೇಲೆ ಹೂ ಕುಂಕುಮ ಎಸೆಯುತ್ತಿದ್ದಾಳೆ. ರಾಜನ ತಂಗಿ ಯ ಪ್ರವೇಶ)

ಮಂ: ಯಾರು? ಓ ನೀವಾ? ಬನ್ನಿ ಬನ್ನಿ. ದೇವಿಗೆ ನಮಸ್ಕಾರ ಮಾಡಿ ಕುಳಿತುಕೊಳ್ಳಿ. ಪೂಜೆ ಮುಗಿಸಿಬಿಡುತ್ತೇನೆ. (ರಾಜನ ತಂಗಿ ಅವಳು ಹೇಳಿದ ಹಾಗೆ ಮಾಡುತ್ತಾಳೆ) ಮಂತ್ರಪಠಣ ಮತ್ತು ಪೂಜೆ ಮುಂದುವರಿಯುತ್ತದೆ. ಪೂಜೆ ಮುಗಿಸಿ ರಾಜನ ತಂಗಿಗೆ ಪ್ರಸಾದ ಕೊಡುತ್ತಾ)

ಮಂ: ಕರೆದುಕೊಂಡು ಬಂದಿದ್ದೀರಾ?

ರಾತಂ: ಇಲ್ಲ. ಇವತ್ತು ಕರೆದುಕೊಂಡು ಬರಲು ಸಾಧ್ಯವಾಗಲಿಲ್ಲ.

ಮಂ: ನೀವು ಕರೆದುಕೊಂಡು ಬನ್ನಿ. ಅನಂತರ ನಾನು ನೋಡಿಕೊಳ್ತೇನೆ.

ರಾತಂ: ಆದ್ರೆ ಅವಳು ಈ ಗವಿಯೊಳಗೆ ಬರಲು ಒಪ್ಪಲಿಕ್ಕಿಲ್ಲ. ನನಗೇ ಇದರ ಬಾಗಿಲಿಗೆ ಬರುವಾಗ ಭಯವಾಗ್ತದೆ.

ಮಂ: (ನಕ್ಕು) ಭಯ ಇರಬೇಕಾದ್ದು ಅಗತ್ಯ. ಭಯದಲ್ಲಿಯೆ ಇರುವುದು ಶಾಂತಿ ಸಮಾಧಾನ.

ರಾತಂ: ಅದೇನೋ ನಿಜ. ಆದ್ರೆ ರಾಜಕುಮಾರಿಯ ಮನಸ್ಸು ಒಲಿಸಿ ಇಲ್ಲಿಗೆ ಕರೆದುಕೊಂಡು ಬರಲು ಕಷ್ಟ.

ಮಂ: (ತುಸು ಚಿಂತಿಸಿ) ಹಾಗಾದ್ರೆ ಹೀಗೆ ಮಾಡಿ. ಅರಮನೆ ಉದ್ಯಾನವನದ ಹೊರಗಡೆ ಒಂದು ನಾಗಸಂಪಿಗೆ ಮರವಿದೆಯಲ್ಲಾ?

ರಾತಂ: ಹೌದು.

ಮಂ: ಅಲ್ಲಿಗೆ ಕರೆದುಕೊಂಡು ಬನ್ನಿ. ನಾನು ಅಲ್ಲಿ ಮರಗಳ ಮರೆಯಲ್ಲಿ ಇರುತ್ತೇನೆ.

ರಾತಂ: ಅವಳನ್ನು ಏನು ಮಾಡ್ತೀರಿ?

ಮಂ: ಆ ವಿಚಾರ ನಂಗೆ ಬಿಟ್ಟುಬಿಡಿ. ಅವಳನ್ನು ನಾನು ಅದೃಶ್ಯ ಮಾಡ್ತೇನೆ.

ರಾತಂ: (ಚಿನ್ನದ ನಾಣ್ಯಗಳ ಒಂದು ಚೀಲವನ್ನು ಕೊಡುತ್ತಾ) ಇದರಲ್ಲಿ  ಒಂದು ಸಾವಿರ ಚಿನ್ನದ ನಾಣ್ಯಗಳಿವೆ. ಕೆಲಸವಾದ ಮೇಲೆ ಇನ್ನೊಂದು ಸಾವಿರ.

ಮಂ: ಆಗಲಿ.

ರಾತಂ:ನಾಳೆ ಮಧ್ಯಾಹ್ನದ ನಂತರ ನಾನು ರಾಜಕುಮಾರಿಯನ್ನು ಕರೆದುಕೊಂಡು ನಾಗಸಂಪಿಗೆ ಮರದ ಬಳಿ ಬರುತ್ತೇನೆ.

ಮಂ: ಸರಿ.

ರಾತಂ: ನಾನಿನ್ನು ಹೊರಡುತ್ತೇನೆ.

ಮಂ: ಆಗಲಿ.

ಫೇಡ್ ಔಟ್

ದೃಶ್ಯ ಮೂರು: ಕಾಡು

(ಕೋಗಿಲೆಯ ಕೂಗು, ಪಕ್ಷಿಗಳ ಕೂಗು ಇತ್ಯಾದಿ. ರಾಜನ ತಂಗಿ ಮತ್ತು  ರಾಜಕುಮಾರಿ. ಕಾಡಿನ ಸೌಂದರ್ಯವನ್ನು ವೀಕ್ಷಿಸುತ್ತಾ ಬರುತ್ತಿದ್ದಾರೆ. ಮರಗಳ ಪೈಕಿ ಎರಡು ಮರಗಳು ಎದ್ದು ಕಾಣಿಸುತ್ತವೆ. ಕೇವಲ ಹೂವುಗಳಿಂದ ತುಂಬಿರುವ ಒಂದು ಮರ ಮತ್ತು  ಒಣಗಿ ನಿಂತಿರುವ ಇನ್ನೊಂದು ಮರ. ರಾಜಕುಮಾರಿ ತಟ್ಟನೆ ನೆಲದ ಮೇಲಿದ್ದ ಒಂದು ಪುಟ್ಟ ಹೂವನ್ನು ಹೆಕ್ಕಿ)

ರಾಕು: ಇದು ಯಾವ ಹೂವು?

ರಾತಂ: ಅದು ಹುಲ್ಲಿನ ಹೂವು.

ರಾಕು: ಯಾವ ಹುಲ್ಲು?

ರಾತಂ: ಅದೆಂಥ ಹೆಡ್ಡ ಪ್ರಶ್ನೆ? ಹುಲ್ಲುಗಳಿಗೆ ಹೆಸರಿಲ್ಲ.

ರಾಕು: (ಗಾಳಿಯಲ್ಲಿರುವ ವಾಸನೆಯನ್ನು ಆಘ್ರಾಣಿಸುತ್ತಾ) ಇದೆಂಥ ವಾಸ್ನೆ?

ರಾತಂ: (ಆಘ್ರಾಣಿಸಿ)ಅದು ನಾಗಸಂಪಿಗೆ ಹೂವಿನ ವಾಸ್ನೆ.

ರಾಕು: ನಾಗಸಂಪಿಗೆ ಮರ ಎಲ್ಲಿದೆ?

ರಾತಂ: ಇಲ್ಲೇ ಸ್ವಲ್ಪ ಮುಂದೆ.

ರಾಕು: ಕುಮಾರನನ್ನೂ ಕರೆದುಕೊಂಡು ಬರಬಹುದಾಗಿತ್ತು.

ರಾತಂ: ಹೌದು. ಆದ್ರೆ ಅವ್ನಿಗೆ ಜ್ವರ ಬರ‍್ತ್ತಾ  ಇದೆ. ಇಲ್ಲದಿದ್ರೆ ಕರ‍್ಕೊಂಡು ಬರ‍್ತಿದ್ದೆ.

(ಹತ್ತಿರದಲ್ಲಿ ಒಂದು ದಪ್ಪ  ಕಾಂಡದ ಒಣಗಿದ ಮೋಟು ಮರವಿದೆ)

ರಾಕು: (ಒಣಮರವನ್ನು ನೋಡಿ) ಈ ಮರದಲ್ಲಿ ಯಾಕೆ ಎಲೆಗಳಿಲ್ಲ?

ರಾತಂ: ಅದು ಸತ್ತಿದೆ.

ರಾಕು: ಇದು ಯಾವ ಮರ?

ರಾತಂ: ನನಗ್ಗೊತ್ತಿಲ್ಲ. ಸತ್ತ  ಮೇಲೆ ಮರ ಯಾವುದಾದರೇನು?

ರಾಕು: ಆದರೆ  ಇದು ಆಶ್ಚರ್ಯ!

ರಾತಂ: ಏನು?

ರಾಕು: ಅದರ ಬುಡದಲ್ಲಿ ಹೂವುಗಳಿವೆ.

ರಾಕು: (ಮರದ ಬಳಿಗೆ ಹೋಗಿ ಹೂವನ್ನು ಹೆಕ್ಕಿ ಮೂಸಿದ್ದೇ  ತಡ, ಒಣ ಮರದ ಹಿಂದಿನಿಂದ ಮಂತ್ರವಾದಿನಿ ಬಂದು ಮರದ ಜೊತೆಗೆ ರಾಜಕುಮಾರಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾಳೆ. ರಾಜಕುಮಾರಿ ಮಂತ್ರವಾದಿನಿಯ ಹಿಡಿತದಿಂದ ಗಾಬರಿಗೊಂಡು) ಯಾರು? ಯಾರು ನೀನು? ಬಿಡು ನನ್ನನ್ನು! (ಬಿಡಿಸಿಕೊಳ್ಳಲು ಹೆಣಗಾಡುತ್ತಾಳೆ. ಮಂತ್ರವಾದಿನಿಯ ಹಿಡಿತ ಬಹಳ ಬಿಗಿಯಾಗಿದೆ)

ಮಂ: ಸಿಕ್ಕಿದ ಮೇಲೆ ಬಿಡುವುದು ನನ್ನ ಜಾತಿ ಧರ್ಮವೇ ಅಲ್ಲ. (ನಗು)

ರಾಕು: ಯಾವ ಜಾತಿ ಧರ್ಮ ಅದು? ಮೊದ್ಲು ಬಿಡು ನನ್ನನ್ನು!

(ಮಂತ್ರವಾದಿನಿ ಅವಳನ್ನು  ಒಣ ಮರಕ್ಕೆ ಹಾಗೆಯೆ ಒತ್ತಿ ಹಿಡಿದುಕೊಂಡು ಏನೋ ಮಂತ್ರ ಹೇಳುತ್ತಾಳೆ. ಬೆಳಕು ನಿಧಾನವಾಗಿ ಕಡಿಮೆಯಾಗಿ ಆರಿಹೋಗಿ ನಿಧಾನವಾಗಿ  ವಾಪಾಸು ಬರುವಾಗ ರಾಜಕುಮಾರಿ ಅದೃಶ್ಯವಾಗಿದ್ದಾಳೆ. ಮಂತ್ರವಾದಿನಿ ಮರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ರಾಜನ ತಂಗಿ ಸಂತಸದಿಂದ ನೋಡುತ್ತಿದ್ದಾಳೆ. ರಾಜಕುಮಾರಿಯ ಧ್ವನಿ ಕೇಳಿಸುತ್ತದೆ.)

ರಾಕು: ನನ್ನನ್ನು ಯಾಕೆ ಹೀಗೆ ಬಂಧಿಸಿಟ್ಟಿರುವೆ? ಬಿಡಿಸು ನನ್ನನ್ನು!

ಮಂ: (ಮರವನ್ನು ಬಿಡುತ್ತಾ) ಇನ್ನು ನಿನ್ನ ಬಿಡುಗಡೆ ಒಂದೇ ಸಲ. ಸಾವಿರಾರು ಗೆದ್ದಲುಗಳು ಬಂದು ನಿನ್ನನ್ನು ಮತ್ತು ಮರವನ್ನು ಒಟ್ಟಿಗೇ ತಿಂದು ಹಾಕುತ್ತವೆ. ಆಗ ನಿನ್ನ ಬಿಡುಗಡೆ.

ರಾತಂ: (ಮಂತ್ರವಾದಿನಿಯ ಹತ್ತಿರ ಬಂದು) ಈ ಹುಡುಗಿ ಸಾಮಾನ್ಯಳಲ್ಲ. ಅವಳಲ್ಲಿ ಏನೋ ವಿಶೇಷ ಶಕ್ತಿಯಿದೆ. ಒಮ್ಮಿಂದೊಮ್ಮೆಲೇ  ಆಕಾವನ್ನು ಕಪ್ಪು ಮೋಡ ಆವರಿಸಿಕೊಂಡಿದೆ.  ಮಳೆ ಬರುವ ಸೂಚನೆ.

ಮಂ: ಅದರಲ್ಲಿ ಏನೂ ವಿಶೇಷವಿಲ್ಲ. ಕೆಲವು ಸಲ ಹಾಗಾಗುತ್ತದೆ.

ರಾತಂ: ಅವಳನ್ನು ತೊಟ್ಟಿಲಿಗೆ ಹಾಕುವಾಗ ನೂರಾರು ಪಕ್ಷಿಗಳು ಒಂದೇ ಸಲ ಚಿಲಿಪಿಲಿಗುಟ್ಟಿದವು, ಕೋಗಿಲೆ ಕಾಜಾಣಗಳು ಹಾಡಿದವು.

ಮಂ: ಹಾಗೆ ಕೂಡ ಕೆಲವು ಸಲ ನಡೆಯುತ್ತದೆ.

ರಾತಂ: ಅವಳು ಮಾತಾಡತೊಡಗಿದಾಗ ಅರಮನೆಯ ದೀಪಗಳು ತಾವಾಗಿ ಹೊತ್ತಿಕೊಂಡವು.

ಮಂ: (ಸ್ವಲ್ಪ ಯೊಚಿಸಿ) ಅದು ಸ್ವಲ್ಪ ವಿಶೇಷ.

ರಾತಂ: ಆದ್ದರಿಂದ ನೀನು ಯಾವಾಗಲೂ ಅವಳ ಮೇಲೆ ಒಂದು ಕಣ್ಣಿರಿಸಬೇಕು.

ಮಂ: ಅವಳನ್ನು ಮರದ ಒಳಗೆ ಕೂಡಿ ಹಾಕಿದ್ದೇನೆ.

ರಾತಂ: ಅವಳಿಗೆ  ಅದರೊಳಗಿಂದ ಹೊರಬರಲು ಸಾಧ್ಯವಿಲ್ಲಾಂತೀಯ?

ಮಂ:  ಸಾಧ್ಯವೇ ಇಲ್ಲ.

ರಾತಂ: ಆದ್ರೂ ಅವಳನ್ನು ನಂಬಲಿಕ್ಕಾಗದು. ನೀನು ಅವಳನ್ನು ಕಾಯುತ್ತಾ ಇರಬೇಕು. ಅವಳೆಲ್ಲಿಯಾದ್ರೂ ತಪ್ಪಿಸಿಕೊಂಡರೆ ನನ್ನ ತಲೆ ಉಳಿಯುವುದಿಲ್ಲ. ನಿನ್ನ ತಲೆಯನ್ನು ಕೂಡ ನಾನು ತೆಗೆಸಬೇಕಾಗುತ್ತದೆ. (ರಂಗದ ಹಿಂದುಗಡೆ ಮೋಟು ಮರದ ಮೇಲೆ ಬೀಳುವ ಬೆಳಕು ನಿಧಾನವಾಗಿ ಕಡಿಮೆಯಾಗುತ್ತಾ ಆರುತ್ತದೆ)

ಮಂ: ನೀವು ಚಿಂತಿಸಬೇಡಿ. ಅವಳನ್ನು ನೋಡಿಕೊಳ್ಳುತ್ತೇನೆ. ನಾನು ಮರದೊಳಗೆ ಅವಳ ಬಳಿಯೆ ಇರುತ್ತೇನೆ.

ರಾತಂ: ಸರಿ. (ಚಿನ್ನದ ನಾಣ್ಯದ ಚೀಲವನ್ನು ಕೊಡುತ್ತಾ) ತಕ್ಕೊ. ಇದರಲ್ಲಿ ಒಂದು ಸಾವಿರ ಚಿನ್ನದ ನಾಣ್ಯಗಳಿವೆ. (ಮಂತ್ರವಾದಿನಿ ಚಿನ್ನದ ಚೀಲವನ್ನು ಉಡಿಯಲ್ಲಿ ಸಿಲುಕಿಸಿಕೊಳ್ಳುತ್ತಾಳೆ. ರಂಗದಲ್ಲಿ ಎಲ್ಲಾ ಕಡೆ ಬೆಳಕು ಆರುತ್ತಾ ಮೋಟು ಮರವಿರುವಲ್ಲಿಗೆ ಮಾತ್ರ ಹಸಿರು ಬಣ್ಣದ ಬೆಳಕು ಬೀಳುತ್ತದೆ. ಮೋಟು ಮರವು ಈಗ ಹಚ್ಚ ಹಸಿರಾಗಿ, ಹೂಗಳಿಂದ ತುಂಬಿರುವ ಮರವಾಗಿದೆ. ರಾಜನ ತಂಗಿ ಮತ್ತು ಮಂತ್ರವಾದಿನಿ ಬೆರಗುಗೊಂಡು ಮರವನ್ನೇ ನೋಡುತ್ತಾರೆ)

ರಾತಂ: ನೋಡಿದೆಯಾ ಅವಳ ಶಕ್ತಿ? ಗೆದ್ದಲುಗಳು ಬರದ  ಹಾಗೆ ಮಾಡಿದ್ದಾಳೆ. ಇನ್ನು ಹೇಗಾದರೂ ಹೊರ ಬಂದಾಳು.

(ಮರದೊಳಗಿಂದ “ನನ್ನನ್ನು ಬಿಡಿಸು ನನ್ನನ್ನು ಬಿಡಿಸು” ಎಂಬ ಕೂಗು ಕೇಳಿಸುತ್ತದೆ)

ಮಂ: (ನಕ್ಕು) ಗೆದ್ದಲುಗಳು ಬರದಿದ್ದರೇನಾಯಿತು? ಮರ ಹಸಿರಾಗಿರುವುದರಿಂದ ಅದೇ ಅವಳಿಗೆ ಶಾಶ್ವತವಾದ ಕೋಟೆ ಆದ ಹಾಗಾಯ್ತು.  ಅವಳ ವಿಶೇಷ ಶಕ್ತಿ ಅವಳಿಗೇ ತಿರುಗುಬಾಣವಾಗಿದೆ! (ನಗು)

ರಾತಂ: ಇಲ್ಲ ಇಲ್ಲ! ಅವಳನ್ನು ನಂಬಲು ಸಾಧ್ಯವಿಲ್ಲ. ನೋಡು!  ಹೇಗೆ ಮರದ ತುಂಬಾ ಎಲೆಗಳನ್ನು ತಂದಳು! ಇನ್ನು ಹೂಗಳನ್ನು ತಂದು ಒಂದು ಹೂವಿನ ಮೂಲಕ ಹೊರಬಂದಾಳು!

ಮಂ: ನೋಡ್ತೇನೆ ಅದ್ಹೇಗೆ ಹೊರಗೆ ಬರ‍್ತಾಳೆ ಅಂತ. ಅವಳ ಶಕ್ತಿ ಕರಗಿ ಹೋಗುವ ತನಕ ನಾನೇ ಬಲವಾಗಿ  ಹಿಡ್ಕೊಳ್ತೇನೆ.

(ಮರದ ಕಡೆಗೆ ಹೋಗುತ್ತಾಳೆ. ಮರವನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾಳೆ. ಹಿಡಿತವನ್ನು ಬಿಡಿಸಿಕೊಳ್ಳಲಿಕ್ಕೆ ಆಗುವುದಿಲ್ಲ. ನರಳುತ್ತಾಳೆ)

ರಾತಂ: (ಮಂತ್ರವಾದಿನಿಯ ಬಳಿಗೆ ಹೋಗಿ) ಏನಾಯ್ತು? ಯಾಕೆ ನರಳ್ತಾ ಇದ್ದಿ?

ಮಂ: ಮರದೊಳಗೆ ನಾನು ಸೇರುವ ಮೊದಲು ಮರವೇ ನನ್ನನ್ನು ಅದರೊಳಗೆ ಸೇರಿಸಿಕೊಳ್ತಾ ಇದೆ.

ರಾತಂ: ಎರಡೂ ಒಂದೇ ಆಲ್ವ?

(ಬೆಳಕು ನಿಧಾನವಾಗಿ ಆರತೊಡಗುತ್ತದೆ)

ಮಂ: ಅಲ್ಲ! ಮರದ ಒಳಗೆ ನಾನು ಸೇರಿಕೊಂಡ್ರೆ ನಾನು ನನಗೆ ಬೇಕಾದಾಗ ಹೊರಗೆ ಬರ‍್ಬಹುದು. ಮರವೇ ನನ್ನನ್ನು ಸೇರಿಸಿಕೊಂಡ್ರೆ ಯಾವಾಗ ಹೊರಗೆ ಬರ‍್ತೀನಿ ಅಂತ ಗೊತ್ತಿಲ್ಲ. ಬನ್ನಿ. ನನ್ನನ್ನು ಆಚೆಗೆ ಎಳೆಯಿರಿ.

ರಾತಂ: ನನ್ನನ್ನೂ ಮರ ಎಳ್ಕೊಂಡ್ರೆ ನನ್ನ ಕತೆಯೂ ಮುಗಿದ ಹಾಗೆಯೆ.

ಮಂ: ನಿಮ್ಮನ್ನು ನಾನು ಬಿಡಿಸ್ತೇನೆ. ಬನ್ನಿ ಬನ್ನಿ . ಮರ ನನ್ನನ್ನು ಒಳಗೆ ಎಳೆದುಕೊಳ್ತಾ ಇದೆ. ಬಿಡಿಸಿ. (ಅವಳ ಉಡಿಯಲ್ಲಿದ್ದ ಚಿನ್ನ ನಾಣ್ಯಗಳ ಚೀಲ ಕೆಳಬೀಳುತ್ತದೆ)

(ಬೆಳಕು ಪೂರ್ತಿಯಾಗಿ ಆರುವುದರಲ್ಲಿದೆ)

ರಾತಂ: ಒಳ್ಳೆಯದಾಯ್ತು. ಮರದಲ್ಲಿಯೆ ಇರು. ಅಲ್ಲದಿದ್ರೆ ನಿನ್ನ ಕಣ್ಣು ತಪ್ಪಿಸಿ ಆ ಹುಡುಗಿ ಹೊರಗೆ ಬಂದಾಳು.

ಮಂ: ಇದು ಅನ್ಯಾಯ!

ರಾತಂ: ಇದೇ ನ್ಯಾಯ.

ಮಂ: ನನ್ನ ಚಿನ್ನದ ನಾಣ್ಯಗಳು!

ರಾತಂ:  ಇನ್ನು ಅದು ಯಾಕೆ ನಿನಗೆ? ಅದೆಲ್ಲ ಇನ್ನು ನನ್ನದೇ.(ಚೀಲವನ್ನು ಹೆಕ್ಕಿಕೊಳ್ಳುತ್ತಾಳೆ. ನಗುತ್ತಾ ) ಇನ್ನು ರಾಜ್ಯ ಕೂಡ ನನ್ನದೇ. ಆದ್ದರಿಂದ ಎಲ್ಲವೂ ಇನ್ನು ನನ್ನದು ಮತ್ತು ನನ್ನ  ಕುಮಾರನದು.

ಮಂ: ನನ್ನ ಗುಹೆಯಲ್ಲಿ  ಹತ್ತು ಸಾವಿರ ಚಿನ್ನದ ನಾಣ್ಯಗಳಿವೆ!

ರಾತಂ: ಅಬ್ಬಾ! ಮಾಟ ಮಂತ್ರದಿಂದ ಅಷ್ಟು ಹಣ ಮಾಡಿಟ್ಟಿದ್ದೀಯ?

ಮಂ: ಅದು ಇಲ್ಲಿಯ  ವರೆಗಿನ ಒಟ್ಟು ಸಂಪಾದನೆ.

(ಬೆಳಕು ಆರುತ್ತದೆ)

ರಾತಂ: ಇನ್ನು ಅದು ಕೂಡ ನನ್ನದೇ. (ನಗು)

ಫೇಡ್ ಔಟ್

ದೃಶ್ಯ ನಾಲ್ಕು: ಅರಮನೆ

(ರಾಜ ಶತಪಥ ತುಳಿಯುತ್ತಿದ್ದಾನೆ. ರಾಜನ ತಂಗಿ ಗಾಬರಿಯಿಂದ ಓಡಿಕೊಂಡು ಬರುತ್ತಾಳೆ. “ರಾಜಕುಮಾರಿ ಎಲ್ಲಿದ್ದಾಳೆ?” ಎಂದು ರಾಜ ಕೇಳುವಷ್ಟರಲ್ಲಿ ರಾಜನ ತಂಗಿ ರೋದಿಸುತ್ತಾ)

ರಾತಂ: ಅಣ್ಣಾ, ರಾಜಕುಮಾರಿ ಕಾಣಿಸುವುದಿಲ್ಲ.

ರಾಜ: ಹೇಗೆ? ಎಲ್ಲಿ  ಹೋದಳು?

ರಾತಂ: ನಾಗಸಂಪಿಗೆಯ ಮರವನ್ನು ತೋರಿಸಲು ರಾಜಕುಮಾರಿ ಹೇಳಿದಳು. ಅರಮನೆಯ ಉದ್ಯಾನವನದ ಹೊರಗಡೆ ನಾನು ಮತ್ತು ರಾಜಕುಮಾರಿ ಹೋದೆವು. ಅವಳು ತಮಾಷೆಗೆ ಅಂತ ಒಂದು ಮರದ ಹಿಂದೆ ಅಡಗಿ ಕುಳಿತು ಕೂ ಅಂದಳು. ನಾನು ಹೋಗಿ  ನೋಡಿದರೆ ರಾಜಕುಮಾರಿ ಕಾಣಿಸಲಿಲ್ಲ. ಅಲ್ಲಿದ್ದ ಎಲ್ಲಾ ಮರಗಳ ಹಿಂದೆ ಹೋಗಿ ಹುಡುಕಿದೆ. ಎಲ್ಲಿಯೂ ಕಾಣಿಸಲಿಲ್ಲ. ಅವಳ ಧ್ವನಿಯೂ ಕೇಳಿಸಲಿಲ್ಲ.

(ಗಾಬರಿಗೊಂಡ ರಾಜ ಚಪ್ಪಾಳೆ ತಟ್ಟುತ್ತಾನೆ. ಸೈನಿಕರು ಬರುತ್ತಾರೆ)

ರಾಜ: (ತಂಗಿಯೊಡನೆ) ಇವರಿಗೆ ಆ ಸ್ಥಳವನ್ನು ತೋರಿಸು. (ಸೈನಿಕರೊಡನೆ) ರಾಜಕುಮಾರಿಯನ್ನು ಹುಡುಕಿ ತನ್ನಿ. ಇಡೀ ಕಾಡು ಹುಡುಕಿ!  (ನಿರ್ಗಮನ)

(ಒಬ್ಬ ಸೈನಿಕ ವಿನಮ್ರನಾಗಿ ರಾಜನ ತಂಗಿಯೊಡನೆ)

ಸೈ: ರಾಜಕುಮಾರಿ ಎಲ್ಲಿ ಕಾಣದಾದ್ರು ಅಮಾವ್ರೆ?

ರಾತ: ಅರಮನೆಯ ಉದ್ಯಾನವನದ ಹೊರಗಿನ ಮರಗಳ ತೋಪಿನಲ್ಲಿ.

ಸೈ: ಯಾವ ಕಡೆಯ ತೋಪು  ಅಮಾವ್ರೆ?

ರಾತಂ: (ಸ್ವಲ್ಪ  ಯೊಚಿಸಿ, ಸುಳ್ಳು ಹೇಳುತ್ತಾಳೆ) ಎಡಗಡೆಗಿರುವ ಮಾವಿನ ಮರಗಳ ತೋಪು.

ಫೇಡ್ ಔಟ್

ದೃಶ್ಯ ಐದು: ಅರಮನೆ

(ರಾಜ, ರಾಜನ ತಂಗಿ. ಚಿಂತಾಕ್ರಾಂತನಾದ ಅರಸ. ತನ್ನ ಮಗನನ್ನು  ಯುವರಾಜನನ್ನಾಗಿ ಘೋಷಿಸಲು ರಾಜನ ತಂಗಿಯ ಒತ್ತಾಯ)

ರಾಜ: ರಾಜಕುಮಾರಿ ಕಾಣೆಯಾಗಿ ಎಂಟು ವರ್ಷಗಳಾದುವು.

ರಾತಂ: ಹೌದು ಜೀವಿಸಿದ್ದರೆ ಅವಳಿಗೀಗ ಹದಿನೆಂಟು ವರ್ಷವಾಗಿರ‍್ತದೆ.

ರಾಜ: ಅವಳು ಜೀವಂತವಾಗಿದ್ದಾಳೆಂದು ನಿನಗೆ ಅನಿಸುತ್ತದೆಯ?

ರಾತಂ: ಅವಳು ಜೀವಿಸಿಲ್ಲ ಎಂದೇ ನನಗನಿಸ್ತದೆ.

ರಾಜ: ಛೆ! ಹೀಗಾಗಬಾರದಿತ್ತು.  ಈ ದೇಶವನ್ನು ಆಳಲು ಅವಳು ನನಗಿಂತಲೂ ಸಮರ್ಥೆ ಎಂದು ನನಗನಿಸುತ್ತಿತ್ತು.

ರಾತಂ: ನನ್ನ ಕುಮಾರ ಕೂಡ ಈಗ  ಬಹಳ ಬುದ್ಧಿವಂತನಾಗಿದ್ದಾನೆ. ನೀವು ಯಾಕೆ ಅವನಿಗೆ ಪಟ್ಟಕಟ್ಟ ಬಾರದು?

ರಾಜ: ಅವನಿಗೆ ಪಟ್ಟ ಕಟ್ಟಿದರೆ ದೇಶದ ಕತೆ ಮುಗಿಯಿತು. ಎಲ್ಲಿದ್ದಾನೆ ಅವನು? ತುಂಬಾ ದಿನಗಳಿಂದ ಕಂಡೇ ಇಲ್ಲ.

ರಾತಂ: ಇಲ್ಲಿ ತುಂಬಾ ಸೆಖೆ ಅಂತ ಬೇಸಗೆ ಮಹಲಿನಲ್ಲಿದ್ದಾನೆ.

ರಾಜ:ಒಳ್ಳೆಯ ಜಾಗ ಪರ್ವತದ ತುದಿ ತುಂಬಾ ತಂಪಗಿರುತ್ತದೆ. ಅಲ್ವ?

ರಾತಂ: ಹೌದು.

ರಾಜ: ದೇಶವಿಡೀ ಬಿಸಿಯಿರುವಾಗ ತಂಪಗಿನ ಜಾಗದಲ್ಲಿ ಕುಳಿತು ದೇಶವನ್ನು ಆಳಬಹುದೆ?

ರಾಜ: ಅಲ್ಲಿ ಏನು ಮಾಡುತ್ತಿದ್ದಾನೆ ಅವನು ರಾಜ್ಯಶಾಸ್ತ್ರ ಅಧ್ಯಯನ ಮಾಡ್ತಿರಬೇಕು ಅಲ್ವ?

ರಾತಂ: ಇರಬಹುದು. ಪುಸ್ತಕಗಳೆಂದರೆ ತುಂಬಾ ಪ್ರೀತಿ ಅವನಿಗೆ.

ರಾಜ: ಎಲ್ಲಿ ಅವನು ಹೇಗೆ ಹೊತ್ತು ಕಳೆಯುತ್ತಿದ್ದಾನೆ ಅಂತ ವರದಿ ಬರ‍್ತಾನೆ ಇರ‍್ತದೆ. ಪರವಾಗಿಲ್ಲ. ತಂಪಿನಲ್ಲಿ ಇರಲಿ. ಆದರೆ ಆಡಳಿತದ ಬಗ್ಗೆ  ಅವನಿಗೆ ಪ್ರಾಥಮಿಕ ತಿಳುವಳಿಕೆ ಕೂಡ ಇಲ್ಲ!

ರಾತಂ: ನೀವು ಅವನಿಗೆ ಪಟ್ಟಕಟ್ಟಿದರೆ ಎಲ್ಲಾ ಸರಿಹೋಗುತ್ತದೆ.

ರಾಜ: (ನಕ್ಕು) ಪಟ್ಟ ಕಟ್ಟಿದರೆ ಸರಿಹೋಗಲು ಇದೇನು ಮಠವೆ? ಮದುವೆ ಮಾಡಿಸಿದರೆ ಸರಿಹೋದೀತೆ ಎಂದು ಯೊಚಿಸುತ್ತಿದ್ದೇನೆ.

ರಾತಂ: ಯಾರು ವಧು?

ರಾಜ: ನಮ್ಮ ಪಾಳೆಯಗಾರರ ಪೈಕಿ ಬೇಕಾದಷ್ಟು ಹುಡುಗಿಯರಿದ್ದಾರೆ.

ರಾತಂ: ರಾಜಕುಮಾರಿ ಸಿಕ್ಕಿದ್ರೆ ಎಷ್ಟು ಚೆನ್ನಾಗಿತ್ತು? ಒಳ್ಳೆಯ ಜೋಡಿ.

ರಾಜ: ಅದನ್ನೆಲ್ಲ ಈಗ ಯೊಚಿಸಿ ಏನು ಪ್ರಯೊಜನ?

ರಾತಂ: ಸುಮ್ಮನೆ ಒಂದು ದೂರದ ಆಸೆ. ಸಿಕ್ಕಿದರೆ ಅಂತ.

ರಾಜ: ಇನ್ನು ಎಲ್ಲಿ ಸಿಗುತ್ತಾಳೆ ಅವಳು. (ದು:ಖ)

ರಾತಂ: ಕೊನೆಯದಾಗಿ ನಾನು ಒಮ್ಮ ಹುಡುಕಿದರೆ ಹೇಗೆ ಎಂದು ಯೊಚನೆ ಮಾಡುತ್ತಿದ್ದೇನೆ.

ರಾಜ: ಅಂದರೆ ಅವಳು ಎಲ್ಲಿರಬಹುದು ಎಂಬ ಬಗ್ಗೆ ನಿನಗೆ ನಿನಗೆ ಬಲವಾದ ಸಂದೇಹವೇನಾದರೂ ಇದೆಯೆ?

ರಾತಂ:  ಹಾಗೇನಿಲ್ಲ. ಆದರೆ ಜನ ಹೇಳೋದನ್ನ ಕೇಳಿದ್ದೀನಿ, ಕಾಡಿನಲ್ಲಿ ಕೆಲವು ಮಂತ್ರವಾದಿನಿಯರಿರುತ್ತಾರಂತೆ. ಅವರು ಗವಿಗಳಲ್ಲಿ ವಾಸಿಸುತ್ತಾರಂತೆ. ಮಕ್ಕಳನ್ನು ಕದ್ದುಕೊಂಡು ಹೋಕಿ ತಮ್ಮ ಜೊತೆ ಇಟ್ಕೊಳ್ತಾರಂತೆ.

ರಾಜ: ಯಾಕೆ?

ರಾತಂ: ಏನೋ ಔಷಧಿ ಕೊಟ್ಟು  ಮಕ್ಕಳು ತಾವು ಯಾರು ಅನ್ನೋದನ್ನ ಮರೆಯುವಂತೆ ಮಾಡ್ತಾರಂತೆ. ಆ ಮೇಲೆ ಅವರನ್ನು ಮಂತ್ರವಾದಿನಿಯರನ್ನಾಗಿ ಮಾಡ್ತಾರಂತೆ. ಅಂಥವರಲ್ಲಿ  ಯಾರಾದರೂ ನಮ್ಮ ರಾಜಕುಮಾರಿಯನ್ನು ಕೊಂಡುಹೋಗಿ ತಮ್ಮ ಜೊತೆ ಇಟ್ಟಕೊಂಡಿರಬಹುದೆ ಎನ್ನುವ ಸಂದೇಹ ಇತ್ತೀಚೆಗೆ ಕೆಲವು ವರ್ಷಗಳಿಂದ ನನ್ನನ್ನು ಕಾಡುತ್ತಿದೆ.

ರಾಜ: ಹಾಗಾದರೆ ಈ ಕೂಡಲೇ ಕಾಡಿನಲ್ಲಿರುವ ಎಲ್ಲಾ ಗವಿ ಗಂಹರಗಳನ್ನೂ ಶೋಧಿಸುವಂತೆ ಕೂಡಲೇ ಸೈನಿಕರಿಗೆ ಆಜ್ಞೆ ಮಾಡುತ್ತೇನೆ.

ರಾತಂ: ಅದರಿಂದ ಪ್ರಯೊಜನವಿಲ್ಲ. ಯಾಕೆಂದರೆ, ಸೈನಿಕರ ಕಣ್ಣಿಗೆ ಅವರು ಕಾಣಿಸುವುದೇ ಇಲ್ಲ. ಮಂತ್ರವಾದಿನಿಯರು ತಮಗೆ ಬೇಕಾದ ರೂಪವನ್ನು ತಾಳಬಲ್ಲರು. ಅಪಾಯದ ಸುಳಿವು ಸಿಕ್ಕ ಕೂಡಲೇ ಅವರು ಮರವೋ ಗಿಡವೋ ಆಗಿಬಿಡುತ್ತಾರೆ!

ರಾಜ: ಹಾಗಾದರೇನು ಮಾಡುವುದು?

ರಾತಂ: ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಒಂದು ಮಂತ್ರವಾದಿನಿಯ ಮೂಲಕ ಇನ್ನೊಂದು ಮಂತ್ರವಾದಿನಿಯನ್ನು ಪತ್ತೆ ಹಚ್ಚಬೇಕು. ನಾನೇ ಕಾಡಿಗೆ ಹೋಗಿ ಸ್ವಲ್ಪ ಕಾಲ ಇದ್ದು ಒಂದು ಮಂತ್ರವಾದಿನಿಯನ್ನು ಪತ್ತೆ ಹಚ್ಚಿ ಏನಾದ್ರೂ ಸಾಧ್ಯವಾಗುತ್ತೋ ಎಂದು ನೋಡುತ್ತೇನೆ.

ರಾಜ: ಬಹಳ ಒಳ್ಳೆಯದು ಹಾಗೇ ಮಾಡು.

ರಾತಂ: ರಾಜಕುಮಾರಿ ಜೀವಂತಳಿದ್ದಾಳೆ ಎನ್ನುವುದು ನನ್ನ ಒಂದು ಸಂದೇಹ ಮಾತ್ರ, ನಂಬಿಕೆಯಲ್ಲ.

ರಾಜ: ನೀನು ಅವಳನ್ನು ಪತ್ತೆ ಹಚ್ಚಿ ಕರೆದು ತಂದರೆ ನಿನ್ನ  ಕುಮಾರನಿಗೂ ರಾಜಕುಮಾರಿಗೂ ಮದುವೆ ಮಾಡಿಸುತ್ತೇನೆ.

ರಾತಂ: (ಒಳಗೊಳಗೇ ಹರ್ಷಿತಳಾಗಿ) ಆಗಲಿ ಪ್ರಯತ್ನಿಸುತ್ತೇನೆ.

ಫೇಡ್ ಔಟ್

ದೃಶ್ಯ  ಆರು: ಕಾಡು

(ರಾಜನ ತಂಗಿ ಕಾಡಿನಲ್ಲಿ ರಾಜಕುಮಾರಿ ಬಂಧಿತಳಾಗಿದ್ದ ಮರದ ಕಡೆಗೆ ಬರುತ್ತಾಳೆ. ಮರವು ಹಸಿರು ಹಸಿರಾಗಿ  ಇನ್ನೂ ಹೆಚ್ಚು  ಹೂಗಳಿಂದ ತುಂಬಿ ಕಂಗೊಳಿಸುತ್ತಿದೆ. ಅವಳು ಹತ್ತಿರ ಬಂದಾಗ  ಕ್ಷೀಣವಾಗಿ  “ಅತ್ತೆ , ನನ್ನನ್ನು ಬಿಡಿಸಿ” ಎಂಬ ಕೂಗು ಕೇಳಿಸುತ್ತದೆ. ದೂರದಿಂದ ಒಂದೊಂದು ಬಾರಿ ಮರ ಕಡಿಯುವ ಸದ್ದು ಕೇಳಿಸುತ್ತದೆ. ರಾಜನ ತಂಗಿ ಮರದ ಬಳಿ ನಿಂತು ಮಂತ್ರವಾದಿನಿಯನ್ನು ಉದ್ದೇಶಿಸಿ ಮಾತಾಡುತ್ತಾಳೆ)

ರಾತಂ: ಅಮಾ, ಮಂತ್ರವಾದಿನಿ.

ಮಂ: ಯಾರದು ನನ್ನನ್ನು ಅಮ್ಮ ಎಂದು ಕರೆಯುವವರು? ಓ ನೀನಾ? ಅರಮನೆಯ ಮಹಾಪಾಪಿ!

ರಾತಂ: ಅಮಾ, ಮಂತ್ರವಾದಿನಿ. ಆದದ್ದೆಲ್ಲವನ್ನೂ ಮರೆತುಬಿಡೋಣ.  ದಯವಿಟ್ಟು ಒಮ್ಮೆ ಹೊರಗೆ ಬಾ. ಒಳ್ಳೆಯ ದಿನಗಳು ನಮ್ಮನ್ನು ಕಾಯುತ್ತಿವೆ. ರಾಜಕುಮಾರಿಯನ್ನು ಹೊರಗೆ ಬಿಡು. ಅವಳ ನೆನಪಿನಲ್ಲಿ ನಡೆದುದರ ನೆನಪು ಅಳಿಸಿ ಹೋಗುವಂತೆ ಮಾಡು. ನೀನು ಕೇಳಿದ್ದನ್ನು ಕೊಡುತ್ತೇನೆ. ನೀನು ಇನ್ನು ಗವಿಯಲ್ಲಿ ಇರಮೇಕಾಗಿಲ್ಲ. ನಿನಗೆ ಒಂದು ಅರಮನೆ ಕಟ್ಟಿಸಿಕೊಡುತ್ತೇನೆ.

ಮಂ: ಹೇಗೆ ಬರಲಿ? ಮರ ನನ್ನನ್ನು ಹಿಡಿದುಕೊಂಡಿದೆ.

ರಾತಂ: ಹೇಗಾದ್ರೂ ಮಾಡಿ ಮರದಿಂದ ಬಿಡಿಸು.

ಮಂ: ನನ್ನ ಕೈ ಕಾಲುಗಳು ಮರದ ಕೈ ಶರೀರದಲ್ಲಿ  ಸೇರಿಹೋಗಿವೆ.

ರಾತಂ: ಹಾಗಾದರೆ ನಿಂಗೆ ಬಿಡುಗಡೆಯೆ  ಇಲ್ಲವೆ?

ಮಂ: ಇಲ್ಲ. ನಂಗೆ ಮತ್ತು ರಾಜಕುಮಾರಿಗೆ ಒಟ್ಟಿಗೇ ಬಿಡುಗಡೆ.

ರಾತಂ:ಯಾವಾಗ?

ಮಂ: ಯಾರಿಗೆ ಗೊತ್ತು? ಮರ ಮೊದಲು ಸಾಯುತ್ತದೆಯೊ ನಾನು ಮೊದಲು ಸಾಯುತ್ತೇನೆಯೊ ರಾಜಕುಮಾರಿ ಮೊದಲು ಸಾಯುತ್ತಾಳೆಯೊ ಯಾರಿಗೆ ಗೊತ್ತು?

ರಾತಂ:  ಮೊದಲು ಮರ ಸತ್ತರೆ?

ಮಂ: ಮರ ಸಾಯುವುದಿಲ್ಲ. ಮರ ಸಾವಿರ ವರ್ಷ ಬದುಕುತ್ತದೆ.

ರಾತಂ: ಮರವನ್ನು ಕಡಿದು ಉರುಳಿಸಿದರೆ?

ಮಂ: ನಾವು ಮೂವರೂ ಒಟ್ಟಿಗೇ ಸಾಯುತ್ತೇವೆ.

(ರಾಜನ ತಂಗಿ ಹಣೆ ಹಣೆ ಬಡಿದುಕೊಂಡು ಹೊರಟು ಹೋಗುತ್ತಾಳೆ. ಬೇರೊಂದು ದಿಕ್ಕಿನಿಂದ ಮರಕಡಿಯುವ ಸುಂದರನಾದ ಒಬ್ಬ ಯುವಕ ಬರುತ್ತಾನೆ.  ಹೆಗಲ ಮೇಲೆ ಕೊಡಲಿಯಿದೆ. ಮರ ಕಡಿದು ಬಹಳ ಬಳಲಿದ್ದಾನೆ. ಬೆವರು ಒರಸಿಕೊಂಡು ತನ್ನ ಹೆಗಲಿನಲ್ಲಿದ್ದ ನೀರಿನ ಸೀಸೆಯಲ್ಲಿದ್ದ ನೀರು ಕುಡಿದು ಚೆಂದದ ಮರಕ್ಕೆ ಒರಗಿ ಕುಳಿತುಕೊಳ್ಳುತ್ತಾನೆ.   “ನನ್ನನ್ನು ಬಿಡಿಸು ನನ್ನನ್ನು ಬಿಡಿಸು” ಎಂಬ ದನಿ ಕೇಳಿ ಬೆರಗಾಗಿ “ಹುಡುಗಿಯ ದನಿ! ಎಲ್ಲಿಂದ ಕೇಳಿಸುತ್ತ್ತಿದೆ?” ಎಂದು ಅತ್ತಿತ್ತ ನೋಡಿ, ಅದೇ ಕೂಗು ಪುನ: ಕೇಳಿಸಿದಾಗ ಮರಕ್ಕೆ ಕಿವಿಯಿರಿಸಿ “ಮರದಿಂದ ಬರುತ್ತಿದೆ!” ಎಂದು ಉದ್ಗರಿಸುತ್ತಾನೆ)

ಯುವ: ಯಾರು?

ರಾಕು: ನಾನು. ರಾಜಕುಮಾರಿ.

ಯುವ: ಎಲ್ಲಿರುವೆ?

ರಾಕು:  ಮರದ ಒಳಗೆ.

ಯುವ: ಮರದ ಒಳಗೆ! ಅದು ಹೇಗೆ ಸಾಧ್ಯ?

ರಾಕು: ಒಬ್ಬಳು ಮಂತ್ರವಾದಿನಿ ನನ್ನನ್ನು  ಇಲ್ಲಿ ಬಂಧಿಸಿ ಇಟ್ಟಿದ್ದಾಳೆ.

ಯುವ: ಮಂತ್ರವಾದಿನಿ ಎಲ್ಲಿದ್ದಾಳೆ?

ರಾಕು: ಅವಳು ಎಂಟು ವರ್ಷದಿಂದ ನನ್ನ ಮೇಲೆ ಕಾವಲು ಕುಳಿತಿದ್ದಾಳೆ. ಈಗ ಅವಳ ಕೈಕಾಲು ಮರದಲ್ಲಿ ಸೇರಿಹೋಗಿದೆ.

ಯುವ:ನಿನ್ನನ್ನು ಬಿಡಿಸುವುದು ಹೇಗೆ?

ರಾಕು: ಮರವನ್ನು ಕಡಿದು ಉರುಳಿಸು. ನಾನು ಹೊರಗೆ ಬರುತ್ತೇನೆ.

ಯುವ: (ಮರವನ್ನು  ನೋಡಿ) ಎಷ್ಟು ಚೆಂದದ ಮರ! ಕಡಿಯಲು ಮನಸ್ಸು ಬರುತ್ತಿಲ್ಲ.

ರಾಕು: ಚೆಂದದ ಮರ ಅಲ್ಲ!  ಅದು ಮಂತ್ರವಾದಿನಿ!

ಮಂ: ಕಡಿಯಬೇಡ! ನೀನು ಮರವನ್ನು ಕಡಿದರೆ ಅದು ನಿನ್ನ ಮೇಲೆಯೆ ಬೀಳುತ್ತದೆ.

ಯುವ: ಯಾರು? ಯಾರು ನೀನು?

ಮಂ: ನಾನು ಮಂತ್ರವಾದಿನಿಗಳ ಚಕ್ರವರ್ತಿನಿ. ಮರ ಕಡಿದ್ರೆ ನೀನು ಸತ್ತುಹೋಗುತ್ತಿ.

ಯುವ: ನೀನು ಯಾಕೆ ರಾಜಕುಮಾರಿಯನ್ನು ಬಂಧನದಲ್ಲಿ ಇರಿಸಿರುವೆ?

ಮಂ: ಅದೆಲ್ಲ ನಿಂಗ್ಯಾಕೆ? ನೀನು ಹೊರಟು ಹೋಗು.

ರಾಕು: ಹೋಗ್ಬೇಡ! ನನ್ನನ್ನು ಬಿಡಿಸು! ಮರ ನಿನ್ನ ಮೇಲೆ ಬೀಳದ ಹಾಗೆ ನಾನು ನೋಡಿಕೊಳ್ಳುತ್ತೇನೆ.

ಮಂ: ಆ ಪೆದ್ದು  ಹುಡುಗಿಯನ್ನು ನಂಬಬೇಡ! ನಾನು ಮರವನ್ನು ನಿನ್ನ ಮೇಲೆಯೆ ನಾನು ಬೀಳಿಸುತ್ತೇನೆ.

ಯುವ: ಬೀಳಲಿ. ಬಂಧನದಲ್ಲಿರುವವರನ್ನು  ಬಿಡಿಸಿಬೇಕಾದ್ದು ನನ್ನ ಧರ್ಮ.

(ಮರವನ್ನು ಕಡಿಯಲು ಆರಂಭಿಸುತ್ತಾನೆ. “ಕಡಿಯಬೇಡ! ಕಡಿಯಬೇಡ!‘” ಎಂದು ಮಂತ್ರವಾದಿನಿ ಬೊಬ್ಬಿಡುತ್ತಾಳೆ. “ಕಡಿ! ನನ್ನನ್ನ್ನು ಬಿಡಿಸು!” ಎಂದು ರಾಜಕುಮಾರಿ ಬೇಡಿಕೊಳ್ಳುತ್ತಾಳೆ. ಮರ ಉರುಳಿಬೀಳುವಾಗ “ಅಯೊ! ಹಾ ಸತ್ತೆ!” ಎಂದು ಮಂತ್ರವಾದಿನಿಯ ಆರ್ತನಾದ ಕೇಳಿಸುತ್ತದೆ. ರಾಜಕುಮಾರಿ (ಈಗ ಹದಿನಾರು ವರ್ಷದ ಚೆಲುವೆ) ಹೊರ ಬರುತ್ತಾಳೆ)

ರಾಕು: ಧನ್ಯವಾದಗಳು ಮಹಾಶಯ. ಬಾ ಅರಮನೆಗೆ ಹೋಗೋಣ.

ಯುವ: ಮಂತ್ರವಾದಿನಿ ಎಲ್ಲಿ  ಹೋದಳು?

ರಾಕು: ಅವಳು ಮರದಲ್ಲಿ ಸಿಕ್ಕಿಬಿದ್ದು ಸತ್ತಳು. ಹೋಗೋಣ ಕತ್ತಲಾಗುತ್ತದೆ. ನಡೆ.  ಹೋಗೋಣ.

ಫೇಡ್ ಔಟ್

ದೃಶ್ಯ ಏಳು: ಅರಮನೆ

(ರಾಜ ಮತ್ತು ರಾಜನ ತಂಗಿ ಏನೋ ಮಾತುಕತೆಯಲ್ಲಿದ್ದಾರೆ (ಶಬ್ದರಹಿತ). ಯುವಕನ ಜೊತೆಯಲ್ಲಿ ರಾಜಕುಮಾರಿಯ ಪ್ರವೇಶ)

ರಾಜ: (ಅಚ್ಚರಿ ಮತ್ತು ಸಂಭ್ರಮದಿಂದ) ಯಾರು?

ರಾಕು: ನಾನು. ನಿಮ್ಮ ಮಗಳು. (ತಂದೆಯ ಕಾಲಿಗೆ ನಮಸ್ಕರಿಸುತ್ತಾಳೆ. ರಾಜ ಮಗಳನ್ನು ಅಪ್ಪಿಕೊಂಡು ಆನಂದಭಾಷ್ಪ  ಸುರಿಸುತ್ತಾನೆ. ಯುವಕನೂ ನಮಸ್ಕರಿಸುತ್ತಾನೆ)

ರಾಜ: ಎಲ್ಲಿದ್ದೆ ಇಷ್ಟು ಕಾಲ? ಇದು ಯಾರು?

(ರಾಜನ ತಂಗಿ ಮೆಲ್ಲನೆ ಎದ್ದು ಹೋಗುವುದರಲ್ಲಿದ್ದಾಳೆ)

ರಾಕು:  ಅದು ದೊಡ್ಡ ಕತೆ. ಎಲ್ಲಾ   ಆ ಮೇಲೆ ಹೇಳ್ತೇನೆ.   ಅತ್ತೆಯನ್ನು  ಓಡಿಹೋಗಲು ಬಿಡಬೇಡಿ! ಎಲ್ಲಾ ಆದದ್ದು ಅವರಿಂದಲೇ.

(ರಾಜ ಚಪ್ಪಾಳೆ ಬಡಿಯುತ್ತಾನೆ. ಸೈನಿಕರು ಬರುತ್ತಾರೆ)

ರಾಜ: ಈಕೆಯನ್ನು ಸೆರೆಮನೆಯಲ್ಲಿ ಇರಿಸಿ.

(ಸೈನಿಕರು ರಾಜನ ತಂಗಿಯನ್ನು ಕರೆದೊಯ್ಯುತ್ತಾರೆ)

ರಾಕು: ಅತ್ತೆ ನನ್ನನ್ನು ಒಂದು ಮಂತ್ರವಾದಿನಿಯ ಕೈಗೆ ಒಪ್ಪಿಸಿದರು. ಮಂತ್ರವಾದಿನಿ ನನ್ನನ್ನು  ಒಂದು ಮರದೊಳಗೆ ಬಂಧಿಸಿ ಇರಿಸಿದಳು. ಇವನು ಮರವನ್ನು ಕಡಿದು ನನ್ನನ್ನು ಬಂಧನದಿಂದ ಬಿಡಿಸಿದ.

ರಾಜ: ಯಾರು ಇವನು? ರಾಜಕುಮಾರನಂತೆ ಕಾಣಿಸುತ್ತಾನೆ.

ಯುವ: ನಾನು ಒಬ್ಬ ಮರಕಡಿಯುವವನು.

ರಾಜ:  (ಮಗಳೊಡನೆ) ಏನು?  ಇವನು ಮರಕಡಿಯುವವನೆ?

ರಾಕು: ಹೌದು. ಆದರೆ ನಾನು ಇವನನ್ನೇ ಮದುವೆಯಾಗುವುದು.

ರಾಜ: ಆಗಲಿ. (ಮಗಳ ಕೈ ಹಿಡಿದುಕೊಂಡು) ನೀನು ಮರಳಿ ಬಂದಿರುವುದಕ್ಕಿಂತ ಸಂತೋಷದ ವಿಷಯ ಬೇರೆ ಇಲ್ಲ. ನಿನ್ನ ಇಚ್ಛೆಯೆ ನನ್ನ ಇಚ್ಛೆ. (ಯುವಕನ ಕಡೆಗೆ ತಿರುಗಿ ಅವನ ಕೈ ಹಿಡಿದುಕೊಂಡು) ಬರೀ ರಾಜವಂಶದ ರಕ್ತ ಬಹಳ ಕಾಲ ಹರಿಯಿತು. ಇದಕ್ಕೆ ಜನಸಾಮಾನ್ಯರ ರಕ್ತ ಸೇರುವುದು ನನಗೆ ಕೂಡ ಸಂತೋಷದ ವಿಷಯ. (ನಕ್ಕು) ಕೂಡಲೇ ನಿಮ್ಮ ವಿವಾಹದ ವ್ಯವಸ್ಥೆ ಮಾಡುತ್ತೇನೆ. ಅದರ ಜೊತೆಯಲ್ಲಿಯೆ  ನಿನಗೆ ಯುವರಾಣಿ ಯಾಗಿ ಪಟ್ಟಾಭಿಷೇಕ ಕೂಡ ನಡೆಯುತ್ತದೆ.

ಫೇಡ್ ಔಟ್