ಪಾತ್ರಗಳು:
ಮಣಿಮಾಲಾ (ಅಂಜು)
ಮಂದಾರ (ಮಣಿಮಾಲಳ ತಂದೆ)
ಸೌಪರ್ಣಿಕಾ (ಮಣಿಮಾಲಳ ಮಲತಾಯಿ)
ಮಂಜೀರ ಮತ್ತು ಕಂಜೀರ (ಅವಳಿಜವಳಿ-ಸೌಪರ್ಣಿಕಳ ಮಕ್ಕಳು)
ಸತ್ಯದರ್ಶಿ(ರಾಜಕುಮಾರ)
ಕೆಲಸದಾಕೆ
ಕತೆ ಹೇಳುವ ಮತ್ತು ನರ್ತಿಸುವ ಹೆಂಗಸರು
ನಾಯಿ, ರಾಜದೂತರು ಇತ್ಯಾದಿ
ದೃಶ್ಯ ಒಂದು: ಹೂದೋಟ
(ಹಿನ್ನೆಲೆಯಲ್ಲಿ ಮನೆ ಮತ್ತು ಹೂದೋಟ. ಹೂದೋಟದಲ್ಲಿ ಮೋಟು ಮರದ ಬುಡದಲ್ಲಿ ಒಂದು ದೊಡ್ಡ ಬಂಡೆ. ರಂಗದ ಮುಂಭಾಗದಲ್ಲಿ ಒಂಬತ್ತು ಹುಡುಗಿಯರು (ಸುಮಾರು ಏಳು ವರ್ಷದ ಹುಡುಗಿಯರು-ಇವರು ಕೊನೆಯ ಎರಡು ದೃಶ್ಯಗಳಲ್ಲಿ ಅರಮನೆಯಲ್ಲಿ ಮಣಿಮಾಲಾ, ಮಂಜೀರ ಮತ್ತು ಕಂಜೀರರೊಡನೆ ನರ್ತಿಸುವವರಾಗಿರುತ್ತಾರೆ. ಆಗ ಇವರ ಪ್ರಾಯ ಸುಮಾರು ಹದಿನಾರು ವರ್ಷವಾಗಿರುವುದರಿಂದ ಉಡುಪು ಬದಲಾಗಿರಬೇಕು-ಹಾಡುತ್ತಾ ನರ್ತಿಸುತ್ತಾ ಬರುತ್ತಾರೆ. ಹಾಡನ್ನು ಸೂಕ್ತವಾದ ಅಭಿನಯದ ಮೂಲಕ ಹಾಡಬಹುದು)
ಹು೧: ಮಂದಾರನೆಂದೊಬ್ಬ ಸಿರಿವಂತನಿದ್ದ.
ಊರ ಮಂದಿಗೆಲ್ಲ ಅಚ್ಚುಮೆಚ್ಚಾಗಿದ್ದ.
ಕಷ್ಟ ಸುಖಗಳಲ್ಲಿ ಜನರೊಡನಿದ್ದ.
ಜನರನ್ನು ತುಂಬಾ ಪ್ರೀತಿಸುತಿದ್ದ
ಹು೧:ಮಂದಾರಸಿಂಹನ ಪತ್ನಿ ವನಮಾಲಾ
ಹು೨: ಪತಿಯಿರಿಸಿದ ಹೆಜ್ಜೆಯಲ್ಲೇ ನಡೆವ ವನಮಾಲಾ
ನಡೆಯಲ್ಲಿ ಗೆಲುವು ನುಡಿಯಲ್ಲಿ ಒಲವು ವನಮಾಲಾ
ಚಂದ್ರನ ತಂಪು ಕಮಲದ ಕಂಪು ವನಮಾಲಾ
ಪ್ರೀತಿಯ ಕಡಲು ಶಾಂತಿಯ ಒಡಲು ವನಮಾಲಾ
ಹು೧: ಮಂದಾರನ ಮಗಳು ಮಣಿಮಾಲಾ
(ಕೈಯಲ್ಲಿ ಒಂದು ಗೊಂಬೆ)
ಹು೨: ಮಣಿಮಾಲಾ ಅಲ್ಲ!
ಹು೩: ಮಣಿಮಾಲಾ ಅವಳ ಹೆಸರಲ್ಲ. ಅವಳ ಹೆಸರು ಮಂಜು.
ಹು೪: ಮಣಿಮಾಲಾ ಅವಳಮ್ಮ ಇಡಬಯಸಿದ ಹೆಸರು.
ಹು೫: ಆದರೆ ಆ ಹೆಸರು ಹೊರಬರಲೇ ಇಲ್ಲ!
ಹು೧: ಯಾಕೆ ಗೊತ್ತಾ?
ಹು೨: ತೊಟ್ಟಿಲ ಮಗುವನು ನೋಡಿ ಒಬ್ಬಳು ಕೊರವಂಜಿ
ಹೆಸರೇನಿಡುತ್ತೀರಿ ಎಂದು ಕೇಳಿದಳು.
ಮಣಿಮಾಲಾ ಎಂದಳು ವನಮಾಲಾ
ಅದು ದುರದೃಷ್ಟದ ಹೆಸರು ಎಂದಳು ಕೊರವಂಜಿ
ಒಂದೊಳ್ಳೆಯ ಹೆಸರು ಹೇಳೆಂದಳು ವನಮಾಲಾ
ಮಂಜು ಎಂದಳು ಕೊರವಂಜಿ.
ಹು೬: ಹಾಗಾಯಿತು ಮಣಿಮಾಲಳ ಹೆಸರು ಮಂಜು, ಮಂಜಮ್ಮ
ಹು೭: ಹೌದು ಹೌದು ಮಂಜು, ಮಂಜಮ್ಮ
ಹು೧: ಆದರೆ ನಮಗವಳು ಮಣಿಮಾಲಾ.
ಮಣಿಮಾಲಾ ಮಣಿಮಾಲಾ
ಚೆಂದದ ಕಂದ ಮಣಿಮಾಲಾ
ಹು೪: ವಜ್ರದ ಮಣಿಯೆ ಮಣಿಮಾಲಾ
ಜೇನಿನ ಹನಿಯೆ ಮಣಿಮಾಲಾ
ಹು೫: ಗುಲಾಬಿ ಮೊಗ್ಗು ಮಣಿಮಾಲಾ
ಹೂವಿನ ಹಿಗ್ಗು ಮಣಿಮಾಲಾ
ಹು೬: ಚಂದ್ರನ ತಂಪು ಮಣಿಮಾಲಾ
ಹೂವಿನ ಕಂಪು ಮಣಿಮಾಲಾ
ಹು೧: ಇದ್ದರು ಮೂವರೂ ಸುಖವಾಗಿ
ಹು೭: ಆದರೆ ದೇವತೆಯಂತಹ ವನಮಾಲಾ
ಸತ್ತುಹೋದಳು ಒಂದು ದಿನ
ಮಂದಾರನ ದು:ಖಕ್ಕೆ ಮಿತಿಯಿಲ್ಲ
ಮಣಿಮಾಲಳ ಅಳು ನಿಲ್ಲಲೇ ಇಲ್ಲ.
(ನರ್ತಕಿಯರು ನರ್ತಿಸುತ್ತಾ ನರ್ತಿಸುತ್ತಾ ತೆರೆಯ ಹಿಂದೆ ಹೋಗುತ್ತಾರೆ. ಹೂದೋಟದಲ್ಲಿ ಮಣಿಮಾಲಾ (ಏಳು ವರ್ಷ) ಮತ್ತು ಅವಳ ತಂದೆ ಮಂದಾರ ಮಗಳನ್ನು ಸಂತೋಷವಾಗಿಡಲು ಪ್ರಯತ್ನಿ ಸುತ್ತಿರುತ್ತಾನೆ)
ಮಣಿ: ಅಪ್ಪಾ. ಆಕಾಶ ಯಾಕೆ ನೀಲಿಯಾಗಿದೆ?
ಮಂ: (ಆಕಾಶವನ್ನು ತೋರಿಸಿ) ಅಲ್ಲಿ ಏನೂ ಇಲ್ಲ ಮಂಜು ಅದು ಖಾಲಿ. ಅದಕ್ಕೇ ಅದು ನೀಲಿ.
ಮಣಿ: ಚಿಟ್ಟೆಗಳು ಎಲ್ಲಿಂದ ಬರುತ್ತವೆ?
ಮಂ: ಚಿಟ್ಟೆಹುಳು ಚಿಟ್ಟೆಯಾಗುತ್ತದೆ.
ಮಣಿ: ಚಿಟ್ಟೆಹುಳು ಎಲ್ಲಿಂದ ಬರುತ್ತದೆ?
ಮಂ: ಚಿಟ್ಟೆಹುಳು ಚಿಟ್ಟೆಯ ಹೊಟ್ಟೆಯಿಂದ ಬರುತ್ತದೆ.
ಮಣಿ: ಮಳೆ ಎಲ್ಲಿಂದ ಬರುತ್ತದೆ?
ಮಂ: ಮಳೆ ಮೋಡದಿಂದ ಬರುತ್ತದೆ.
ಮಣಿ: ಮೋಡ ಎಲ್ಲಿಂದ ಬರುತ್ತದೆ?
ಮಂ: ಮೋಡ ಕಡಲಿನಿಂದ ಬರುತ್ತದೆ.
ಮಣಿ: ಹಕ್ಕಿ ಹಕ್ಕಿಯೊಡನೆ ಹೇಗೆ ಮಾತಾಡುತ್ತದೆ?
ಮಂ: ಹಕ್ಕಿಗಳ ಭಾಷೆಯಲ್ಲಿ ಮಾತಾಡುತ್ತದೆ.
ಮಣಿ: ಹಕ್ಕಿಗಳು ಸತ್ತ ಮೇಲೆ ಎಲ್ಲಿಗೆ ಹೋಗುತ್ತವೆ?
ಮಂ: ಎಲ್ಲಿಗೂ ಹೋಗುವುದಿಲ್ಲ. ಮಣ್ಣು ಸೇರುತ್ತವೆ.
ಮಣಿ: ನಾವು ಸತ್ತ ಮೇಲೆ?
ಮಂ: ನಾವು ಕೂಡ. ಸತ್ತ ಮೇಲೆ ಎಲ್ಲವೂ ಮಣ್ಣು ಸೇರುತ್ತದೆ. ಬಾ. ಮಂಜು. ಇವತ್ತಿಗೆ ತೋಟ ನೋಡಿದ್ದು ಸಾಕು. ಬಾ. ತಿಂಡಿ ತಿನ್ನುವಿಯಂತೆ.
ಮಣಿ: ತಿಂಡಿ ತಿಂದು ಬೇಜಾರಾಗಿದೆ. ನಂಗೆ ತಿಂಡಿ ಬೇಡ.
ಮಂ: ಮತ್ತೇನು ಬೇಕು?
ಮಣಿ: ನಂಗೆ ಅಮ್ಮ ಬೇಕು.
ಮಂ: ಅಮ್ಮ ಬಹಳ ದೂರ ಹೋಗಿದ್ದಾಳೆ ಮಂಜು.
ಮಣಿ: ಅಮ್ಮ ಕೂಡ ಮಣ್ಣು ಸೇರಿದ್ದಾಳಾ?
ಮಂ: ಹೌದು ಮಂಜು.
ಮಣಿ: ಅವಳಿನ್ನು ಬರುವುದಿಲ್ವ?
ಮಂ: ಇಲ್ಲ ಮಂಜು.
ಮಣಿ: ಸತ್ತವರೆಲ್ಲಾ ಒಟ್ಟಿಗೆ ಬೇರೆಯೆ ಒಂದು ಲೋಕದಲ್ಲಿ ಇರ್ತಾರಂತೆ.
ಮಂ: ಯಾರು ಹೇಳಿದ್ದು?
ಮಣಿ: ಕೆಲಸದವಳು ಹೇಳಿದ್ಲು.
ಮಂ: ಒಂದ್ರೀತಿಯಲ್ಲಿ ಅದೂ ಸರಿ.
ಮಣಿ: ನಮ್ಗೂ ಅಲ್ಲಿಗೆ ಹೋಗ್ಬಹುದಲ್ಲಾ?
ಮಂ: ಹೋಗ್ಬಹುದು. ಒಂದಿವ್ಸ ನಾವೆಲ್ಲ ಅಲ್ಲಿಗೆ ಹೋಗ್ತೇವೆ.
ಮಣಿ: ಯಾವಾಗ?
ಮಂ: ಸ್ವಲ್ಪ ಕಾಲದ ನಂತರ.
ಮಣಿ:ಈಗ್ಲೇ ಹೋಗೋಣ.
ಮಂ: ಈಗ್ಲೇ ಹೋಗೋಕಾಗಲ್ಲ. ಆ ಲೋಕದವ್ರು ನಮ್ಮನ್ನು ಕರೀಬೇಕು.
ಮಣಿ: ಬೇಗ ಕರೀಲಿಕ್ಕೆ ಹೇಳು.
ಮಂ: ಆಗ್ಲಿ ಹೇಳೋಣ. ಬಾ ಮಂಜು. ಕತ್ತಲೆಯಾಗ್ತಾ ಇದೆ. ನಾನು ನಿಂಗೊಂದು ಕತೆ ಹೇಳ್ತೀನಿ.
ಮಣಿ: ಅಮ್ಮ ಹೇಳ್ತಿದ್ದ ಕತೆ ಹೇಳು.
ಮಂ: ಆಗ್ಲಿ. ಅದೇ ಕತೆ ಹೇಳ್ತೀನಿ.
(ಬೆಳಕು ಕಡಿಮೆಯಾಗುತ್ತಾ ಪೂರ್ತಿ ಆರಿ ಮತ್ತೆ ಬೆಳಕು ಬರುವಷ್ಟರಲ್ಲಿ ನರ್ತಕಿಯರು ರಂಗದ ಮೇಲೆ ಮತ್ತೆ ಹಾಡು ಮತ್ತು ನರ್ತನ ಮುಂದರಿಸಿದ್ದಾರೆ)
ನರ್ತಕಿಯರು:
ಹು೧: ಅಮ್ಮ ನ ನೆನಪು ಮಾಸುವುದಿಲ್ಲ
ಮಣಿಮಾಲಾಳ ದು:ಖ ಮಾಯುವುದಿಲ್ಲ
ಹು೮: ಕನಸಿನ್ಲೂ ರಾತ್ರಿ ತಾಯಿಯ ನೆನಪು
ಅಮ್ಮ, ಅಮ್ಮ, ಎಲ್ಲಿರುವೆ ನೀನು?
ಕೂಗುವಳವಳು ನಿದ್ರೆಯಲ್ಲಿ
ಅವಳನ್ನು ಸಂತೈಸಿ ಸುಸ್ತಾದ ಮಂದಾರ
ಹು೧:
ತಾನೂ ಸತ್ತರೆ ಮಣಿಮಾಲಾ ಅನಾಥೆಯಾಗುತ್ತಾಳೆ ಅನ್ನೋ ಚಿಂತೇಲಿ ಮುಳುಗಿ
ಅವಳಿಗೊಂದು ಅಮ್ಮನಿರಲಿ ಎಂದೊಂದು ಪುನ: ಮದುವೆಯಾದ.
ಹು೯: ಮಣಿಮಾಲಳ ಮಲತಾಯಿ ಸೌಪರ್ಣಿಕಾ
ನೋಡಿಕೊಂಡಳು ಮಣಿಮಾಲಳನ್ನು
ತನ್ನದೇ ಮಗಳೆಂಬಂತೆ ಅಕ್ಕರೆಯಿಂದ
ಆದರೆ ಅದು ಆಗಿರಲಿಲ್ಲ ನಿಜವಾದ ಪ್ರೀತಿ
ಗಂಡನ ಮೆಚ್ಚಿಸಲು ಸೌಪರ್ಣಿಕಾ
ಮಾಡುತಿದ್ದಳು ಪ್ರೀತಿಯ ನಟನೆ.
ಮಣಿಮಾಲಾಗೆ ಗೊತ್ತಿತ್ತು ಮಲತಾಯಿ ಮನಸು
ಆದ್ದರಿಂದವಳಿಗೆ ತಂದೆಯೆ ದೇವರು
ಹೋದಲ್ಲಿ ಬಂದಲ್ಲಿ ಅಪ್ಪನ ನೆರಳಲ್ಲೇ ಹೆಜ್ಜೆ.
ಅಪ್ಪ ಆಡಿದರೆ ಮಾತು ಅಪ್ಪ ಉಣಿಸಿದರೆ ತುತ್ತು.
ಹು೨: ಸೌಪರ್ಣಿಕಾ ಹೆತ್ತಳು ಅವಳಿ ಜವಳಿ
ಮಂಜೀರ ಮತ್ತು ಕಂಜೀರ ಅವರ ಹೆಸರು
ಬೆಳೆಸಿದಳು ಅವರನು ಸೌಪರ್ಣಿಕಾ
ತನ್ನ ಕಣ್ಣೊಳಗಿನ ಮಣಿಗಳ ಹಾಗೆ
ನೋವೇ ಅರಿಯದ ಗೊಂಬೆಗಳಂತೆ
ಬಾಡದ ಚಿನ್ನದ ಹೂವುಗಳಂತೆ
ಹು೩: ಹದಿನಾರು ತುಂಬಿತು ಮಣಿಮಾಲಾಗೆ
ಆದರೂ ಅವಳದು ಮಗುವಿನ ಮನಸು
ಹು೪: ಅವಳಂಥ ಚೆಲುವೆ ಇನ್ನೊಬ್ಬಳಿಲ್ಲ
ಹು೫: ಆದರೂ ಅವಳದು ಮಗುವಿನ ಮನಸು
ಹು೪:ಮಣಿಮಾಲಾಂದರೆ ಮಿಂಚಿನ ಬಳ್ಳಿ
ಹು೫:ಆದರೂ ಅವಳದು ಮೋಡದ ತಂಪು
ಹು೪:ಮಣಿಮಾಲಾಂದರೆ ರತ್ನದ ಕಾಂತಿ
ಹು೫:ಆದರೂ ಅವಳದು ಮಗುವಿನ ಮನಸು
ಹು೧: ಮಣಿಮಾಲ ಚೆಲು ಚೆಲು ಕೆಂಪು ಕೆಂಪು ಗುಲಾಬಿ
ಮೊದಲ ಮಳೆ ಕರೆತಂದ ಮೊಗ್ಗಿನಂತೆ.
ಮಣಿಮಾಲ ಚೆಲು ಚೆಲು ಮಾತನಾಡುವ ಕವಿತೆ
ಮನದಲ್ಲಿ ನುಡಿಯುವಾ ನಾದದಂತೆ
(ಮೇಲಿ ನಾಲ್ಕು ಸಾಲುಗಳು ರಾಮರ್ಟ್ ಬರ್ನ್ಸನ ಸುಪ್ರಸಿದ್ಧ ಕವಿತೆಯಿಂದ)
(ನರ್ತಕಿಯರು ನರ್ತಿಸುತ್ತಾ ನರ್ತಿಸುತ್ತಾ ತೆರೆಯ ಹಿಂದೆ ಹೋಗುತ್ತಾರೆ.
ಫೇಡ್ ಔಟ್
ದೃಶ್ಯ ಎರಡು: ಮನೆ ಮತ್ತು ಹೂದೋಟದ ಒಂದು ಭಾಗ
(ಹತ್ತು ವರ್ಷದ ನಂತರ. ಅದೇ ದೃಶ್ಯ, ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ. ಮಣಿ ಮಾಲಾ ಈಗ ಹದಿನಾರರ ಹುಡುಗಿ)
ಮಣಿ: ಈಗ್ಲೂ ಅಮ್ಮ ಸತ್ತಿಲ್ಲ ಎಂದೇ ನಂಗನಿಸ್ತದಪ್ಪಾ.
ಮಂ: ನಿಜ. ಎಷ್ಟೋ ಕಾಲ ನಂಗೂ ಹಾಗೇ ಅನಿಸ್ತಿತ್ತು ಮಂಜು. ಆದರೆ ಅದು ನಮಗಾಗೋ ಭ್ರಮೆ ಮಾತ್ರ. ಸತ್ತವರು ವಾಪಾಸು ಬರೋದುಂಟಾ?
ಮಣಿ: ಆದ್ರೂ ನಂಗನಿಸೋದು ಅಮ್ಮ ಎಲ್ಲೋ ಇದ್ದಾಳೆ ಅಂತ.
ಮಂ: ಅಮ್ಮ ಸತ್ತು ಹತ್ತು ವರ್ಷವಾಯ್ತು ಮಂಜು. ಎಲ್ಲೋ ಇದ್ರೆ ಇಷ್ಟರಲ್ಲಿ ಬರ್ತಿರ್ಲಿಲ್ವ?
ಮಣಿ: ನಿಜ. ಅಮ್ಮ ಸತ್ತು ಹೋಗಿದ್ದಾಳೆ. ಇನ್ನು ಬರುವುದಿಲ್ಲ. (ಅಳುತ್ತಾಳೆ)
ಮಂ: (ಕಣ್ಣೀರು ಮಿಡಿಯುತ್ತಾ) ನಿಜ. ನಿಂಗೆ ಹದಿನಾರು ತುಂಬಿತು ಮಂಜು. ನಿಂಗೆ ಎಲ್ಲಾ ಅರ್ಥವಾಗುತ್ತೆ. ಹುಟ್ಟಿದವರಿಗೆ ಸಾವು ಇದ್ದೇ ಇದೆ. ಅಲ್ವ?
ಮಣಿ: ಹೌದು.
ಮಂ: ಸಾವು ನಂಗೂ ಇದೆ, ನಿಂಗೂ ಇದೆ. ಅಲ್ವ?
ಮಣಿ: ಹೌದಪ್ಪಾ. ಆದ್ರೆ ನೀನು ಸಾಯಬಾರ್ದು. (ಅಪ್ಪಿಹಿಡಿದುಕೊಳ್ಳುತ್ತಾಳೆ)
ಮಂ: (ಮುಗುಳ್ನಕ್ಕು) ಅದು ನಮ್ಮ ಆಸೆ ಅಷ್ಟೆ ಮಂಜು. ಆದ್ರೆ ನಾವು ವಾಸ್ತವ ಏನು ಅನ್ನೋದನ್ನ ತಿಳ್ಕೊಂಡು ಈಡೇರದ ಆಸೆಗಳನ್ನ ಬಿಡಬೇಕು. ನಂಗೆ ವಯಸ್ಸಾಗಿದೆ. ನಂಗಿರುವ ಒಂದೇ ಒಂದು ಚಿಂತೆ ಅಂದ್ರೆ ನಾನು ಸಾಯೊ ಮೊದ್ಲು ನಿನ್ನ ಮದುವೆ ನಡೀಬೇಕು ಅನ್ನೋದು.
(ಬೆಳಕು ಕಡಿಮೆಯಾಗುತ್ತಾ ಪೂರ್ತಿ ಆರಿ ಮತ್ತೆ ಬೆಳಕು ಬರುವಷ್ಟರಲ್ಲಿ ನರ್ತಕಿಯರು ರಂಗದ ಮೇಲೆ ಮತ್ತೆ ಹಾಡು ಮತ್ತು ನರ್ತನ ಮುಂದರಿಸಿದ್ದಾರೆ)
ಹು೧: ಒಂದಿನ ಮಂದಾರ ಸತ್ತುಹೋದ
ಹು೯: ಅವನು ಸತ್ತ ಮರುದಿನವೇ ಕಾಣಿಸಿಕೊಂಡಿತು
ಮಣಿಮಾಲಳ ಮಲತಾಯಿ ಸೌಪರ್ಣಿಕಳ ನಿಜರೂಪ
ತನ್ನ ಮಕ್ಕಳು ಮಂಜೀರ ಮತ್ತು ಕಂಜೀರಗೆ ಸುಖದ ಸುಪ್ಪತ್ತಿಗೆ
ಮಣಿಮಾಲಾಗೆ ಹರಕು ಚಾಪೆ
ಹು೨: ಮಂಜೀರ ಕಂಜೀರಗೆ ಪಂಚಭಕ್ಷ ಪರಮಾನ್ನ
ಮಣಿಮಾಲಗೆ ಒಣರೊಟ್ಟಿ
ಮಂಜೀರ ಕಂಜೀರರಿಗೆ ಹಗಲು ರಾತ್ರಿ ಆರಾಮ
ಮಣಿಮಾಲಗೆ ಹಗಲು ರಾತ್ರಿ ಕೆಲಸ
ತಾಯಿ ಮಕ್ಕಳಿಗೆ ಹಗಲಿಡೀ ವಿಹಾರ
ಮನೆಕಾಯುವ ಕೆಲಸ ಮಣಿಮಾಲಗೆ
ಹು೧: ಅವರು ಆ ಕಡೆ ಹೋದೊಡನೆ ಅಲ್ಲಿ ಇಲ್ಲಿ ಅಡಗಿ ಕುಳಿತುಕೊಂಡಿದ್ದ ಮಣಿಮಾಲಳ ಐವರು ಗೆಳೆಯರು ಬರ್ತಾರೆ.
ಹು೩: ನಾಲ್ಕು ಬೆಕ್ಕುಗಳು
ಟೋಟೊ ಎಂಬ ನಾಯಿ
ಅವರಿಗೆ ಅವಳೆಂದರೆ ಅಚ್ಚುಮೆಚ್ಚು
ಅವಳಿಗೆ ಅವರೆಂದರೆ ಅಚ್ಚುಮೆಚ್ಚು
ಮಣಿಮಾಲಾಗೆ ಬೇರೆ ಗೆಳೆಯರೆ ಇಲ್ಲ
ಈ ಐವರು ಗೆಳೆಯರೆ ಅವಳಿಗೆ ಎಲ್ಲ
(ನರ್ತಕಿಯರು ನರ್ತಿಸುತ್ತಾ ನರ್ತಿಸುತ್ತಾ ತೆರೆಯ ಹಿಂದೆ ಹೋಗುತ್ತಾರೆ. ಬೆಳಕು ಆರಿ ಮತ್ತೆ ಬರುವಾಗ ತೋಟದಲ್ಲಿ ಮಣಿಮಾಲಾ. ಮರುಕ್ಷಣ ನಾಲ್ಕು ಬೆಕ್ಕುಗಳು ಮತ್ತು ನಾಯಿ ಬರುತ್ತವೆ. ಮಣಿಮಾಲಾ ಅವುಗಳ ಮೈಸವರಿ ಪ್ರೀತಿ ತೋರಿಸುತ್ತಾಳೆ. ಅವುಗಳೊಡನೆ ಮಾತಾಡುತ್ತಾಳೆ.)
ಹಿನ್ನೆಲೆಯಲ್ಲಿ ಹಾಡು:
ಸೌಪರ್ಣಿಕಾ ಮಂಜೀರ ಕಂಜೀರರದು ನಾಯಿ ಬೆಕ್ಕುಗಳಿಗೂ ಭಯ
ಅವರ ಕಣ್ಣಿಗೆ ಬೀಳದ ಹಾಗೆ ಅಡಗಿಕೊಳ್ತಾವೆ ಪೊದರುಗಳ ಹಿಂದೆ
(ಕುದುರೆ ಗಾಡಿ ಬಂದು ನಿಂತ ಶಬ್ದ. ನಾಯಿ ಮತ್ತು ಬೆಕ್ಕುಗಳು ಅಡಗಿಕೊಳ್ಳುತ್ತವೆ. ಮಣಿಮಾಲಾ ಮನೆಯೊಳಗೆ ಹೋಗುತ್ತಾಳೆ. ಸೌಪರ್ಣಿಕಾ, ಮಂಜೀರ ಮತ್ತು ಕಂಜೀರರ ಆಗಮನ. ಧಾಂ ಧೂಂ ನಡೆ ನುಡಿ. (ಮಂಜೀರ ಮತ್ತು ಕಂಜೀರ ಚಾಕಲೇಟು ತಿನ್ನುತ್ತಿದ್ದಾರೆ ಅದರ ಹೊದಿಕೆ ಮತ್ತು ಇತರ ಕಸಗಳನ್ನು ಎಸೆಯುತ್ತಾರೆ.)
ಸೌ: ಏಯ ಮಂಜು. ಎಲ್ಲಿ ಸತ್ತು ಬಿದ್ದಿದ್ದೀಯೆ? (ಮಣಿಮಾಲಾ ಬರುತ್ತಾಳೆ. ಅವಳ ತಲೆಗೆ ಕುಟ್ಟಿ) ಇದೆಂಥದು ಕಸ? ಕಣ್ಣು ಕಾಣಿಸುವುದಿಲ್ವ ನಿಂಗೆ? ಗುಡಿಸು ಬೇಗ ಗುಡಿಸು! (ಮಣಿಮಾಲ ಓಡಿಹೋಗಿ ಪೊರಕೆ ತಂದು ಗುಡಿಸುತ್ತಾಳೆ) ಅಡಿಗೆ ಎಲ್ಲಾ ಆಗಿದ್ಯಾ?
ಮಣಿ: ಆಗಿದೆ ಚಿಕ್ಕಮ್ಮ.
ಸೌ: ಏನೇನು ಮಾಡಿದ್ದಿ?
ಮಣಿ: ಸೌತೆಕಾಯಿ ಹುಳಿ, ಹೂಕೋಸು ಪಲ್ಯ, ತೋವೆ ಮತ್ತು ಸಾರು.
ಸೌ: ಸೌತೆ, ಕೋಸು ಎಲ್ಲಾ ಖಾಲಿ ಮಾಡಿದ್ಯಾ, ನಾಳೆಗೆ ಉಳಿಸಿದ್ದೀಯಾ?
ಮಣಿ: ಉಳಿಸಿದ್ದೀನಿ ಚಿಕ್ಕಮ್ಮ.
ಮಂಜಿ: (ಏನೋ ಬೇಕರಿ ತಿಂಡಿ ತಿನ್ನುತ್ತಾ )ನಂಗೆ ಹಸಿವಾಗ್ತ್ತಿದೆ.
ಕಂಜಿ: (ಬಾರ್ ಚಾಕಲೇಟು ತಿನ್ನುತ್ತಾ)ನಂಗೂ ಹಸಿವಾಗ್ತ್ತಿದೆ.
ಸೌ: ಹೂಂ. ಮಂಜು, ಎಲ್ಲಾ ಟೇಬಲ್ ಮೇಲೆ ಇಡು.
ಮಣಿ: ಆಗ್ಲಿ ಚಿಕ್ಕಮ್ಮ.
ಫೇಡ್ ಔಟ್
ದೃಶ್ಯ ಮೂರು: ಮಣಿಮಾಲಳ ಮನೆ
(ಸೌಪರ್ಣಿಕಾ, ಮಂಜೀರ ಮತ್ತು ಕಂಜೀರ ಮನೆಯೊಳಗೆ ಏನೋ ಆಟದಲ್ಲಿದ್ದಾರೆ. ಮಣಿಮಾಲಾ ಹೊರಗಡೆ ಪಾತ್ರೆ ತೊಳೆಯುತ್ತಿದ್ದಾಳೆ. ಮೇಜಿನ ಮೇಲೆ ಬೆಲೆ ಬಾಳುವ ಉಡುಪುಗಳ ದೊಡ್ಡ ರಾಶಿ. ಕೆಲಸದಾಕೆ ಉಡುಪು ಮಡಚಿಡುತ್ತಿದ್ದಾಳೆ.)
ಡಂಗುರ: “ಕೇಳಿರಿ ಕೇಳಿರಿ. ರಾಜಕುಮಾರ ಮದುವೆಯಾಗಲು ತೀಮಾನಿಸಿದ್ದಾನೆ. ಅವನಿಗೆ ಅತ್ಯಂತ ಚಲೋದಾಗಿ ನರ್ತಿಸುವ ಚೆಲುವೆ ಬೇಕು. ಈಗಾಗಲೇ ಪ್ರತಿಯೊಂದು ನಗರದಲ್ಲಿಯೂ ಆಯೆಮಾಡಿದ ಹನ್ನೆರಡು ಚೆಲುವೆಯರ ನೃತ್ಯ ನೋಡಿದ್ದಾನೆ. ೩೦ ದಿನಗಳು ಕಳೆದಿವೆ. ೩೬೦ ಸುಂದರಿಯರ ನೃತ್ಯ ನೋಡಿದ್ದಾನೆ. ಈ ತನಕ ಯಾರೂ ಇಷ್ಟವಾಗಿಲ್ಲ. ಇವತ್ತು ಕೊನೆಯದಾಗಿ ರಾಜಧಾನಿಯ ಸುಂದರಿಯರಲ್ಲಿ ಹನ್ನೆರಡು ಚೆಲವೆಯರ ನೃತ್ಯ ನೋಡುತ್ತಾನೆ. ಇವತ್ತು ಅವನಿಗೆ ಇಷ್ಟವಾಗುವ ಹುಡುಗಿ ಸಿಕ್ಕಿದರೆ ಅವಳನ್ನು ಮದುವೆಯಾಗುತ್ತಾನೆ. ಅವನಿಗೆ ಇಷ್ಟವಾಗುವ ಹುಡುಗಿ ಸಿಗದಿದ್ದರೆ ಅವಿವಾಹಿತನಾಗಿ ಉಳಿಯುತ್ತಾನೆ”
ಕೆಲಸದಾಕೆ: ರಾಜಕುಮಾರ ಅತ್ಯಂತ ಅದ್ಭತ ನರ್ತಕ ಎಂದು ಜನ ಹೇಳುತ್ತಾರೆ. ಅಷ್ಟು ಚೆನ್ನಾಗಿ ನರ್ತಿಸಬಲ್ಲವರು ಇಡೀ ರಾಜ್ಯದಲ್ಲಿ ಇನ್ನೊಬ್ಬರಿಲ್ಲವಂತೆ.
ಸೌ: ನಿಜ. ನಾನು ಜನ ಹಾಗನ್ನುವುದನ್ನು ಕೇಳಿದ್ದೇನೆ.
ಕೆಲಸದಾಕೆ: ಅವನು ಸ್ವಲ್ಪ ಹೊತ್ತು ನರ್ತನವನ್ನು ನೋಡುತ್ತಾನಂತೆ. ಅನಂತರ ತಾನು ಮೆಚ್ಚಿದವಳೊಡನೆ ನತಿಸುತ್ತಾನಂತೆ. ಈ ತನಕ ಯಾರೊಬ್ಬರೂ ಅವನ ನಿರೀಕ್ಷೆಯ ಮಟ್ಟ ಮುಟ್ಟಿಲ್ಲವಂತೆ.
ಸೌ: ಅವನ ನಿರೀಕ್ಷೆಯ ಮಟ್ಟ ಏನು ಅಂತ ಅವನಿಗೇ ಗೊತ್ತು. ಬಹುಶ: ಮದುವೆಯಾಗದೇ ಉಳಿಯುವುದೇ ಅವನ ಇಚ್ಛೆಯಾಗಿರಬಹುದು. (ನಗು)
ಕೆಲಸದಾಕೆ: ಮದುವೆಯಾಗದೆ ಉಳಿದರೆ ದೊಡ್ಡ ನಷ್ಟ ಅಲ್ವಾ ಅಮಾ?
ಸೌ: ಯಾರಿಗೆ ನಿಂಗಾ?
ಕೆ: ಅಲ್ಲಮ್ಮ. ಹೆಣ್ಣು ಹೆತ್ತ ಹುಡುಗಿಯರ ಅಮ್ಮಂದಿರಿಗೆ.
ಮಂಜಿ: ನರ್ತನ ಸ್ಪರ್ಧೆಗೆ ನಾನು ಹೋಗಲಾ ಅಮಾ ?
ಕಂಜಿ: ನಾನು ಹೋಗಲಾ ಅಮಾ ನರ್ತನ ಸ್ಪರ್ಧೆಗೆ?
ಸೌ: ಹೋಗಿ. ಇಬ್ಬರಲ್ಲಿ ಒಬ್ಬಳನ್ನು ರಾಜಕುಮಾರ ಖಂಡಿತ ಇಷ್ಟಪಡುತ್ತಾನೆ.
ಕೆ: ಇಬ್ಬರೂ ಎಷ್ಟು ಚೆನ್ನಾಗಿ ನರ್ತನ ಮಾಡುತ್ತಾರೆ! ಇಬ್ಬರನ್ನೂ ಇಷ್ಟಪಟ್ಟರೂ ಪಟ್ಟಾನು.
ಸೌ: ನಿಜ. ಅಸಂಭವವಲ್ಲ. ನಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ. ಇಬ್ಬರೂ ಹೋಗಿ.
ಮಂಜಿ: (ಮೇಜಿನ ಮೇಲಿರುವ ಉಡುಪಿನಲ್ಲಿ ಹುಡುಕುತ್ತಾ)ಅಮಾ, ನಾನು ಯಾವ ಡ್ರೆಸ್ಸು ಹಾಕಲಿ?
ಕಂಜಿ: ನಾನು ಮೊನ್ನೆ ಬರ್ತ್ಡೇಗೆ ಹಾಕಿಕೊಂಡ ಉಡುಪು ಹಾಕಲಾ?
ಸೌ: ಇಬ್ಬರೂ ನಿಮ್ಮ ಬರ್ತ್ಡೇ ದಿನ ಹಾಕಿಕೊಂಡ ಉಡುಪನ್ನೇ ಹಾಕಿಕೊಳ್ಳಿ.
ಕೆ: ಹೌದಮ್ಮ. ಅದರಲ್ಲಿ ನೀವು ಊರ್ವಶಿ ಮೇನಕೆಯರ ಹಾಗೆ ಕಾಣಿಸುತ್ತೀರಿ.
ಮಂಜಿ: ಊರ್ವಶಿ ಮೇನಕೆಯರನ್ನು ಎಲ್ಲಿ ಕಂಡದ್ದು ನೀನು?
ಕೆ: ಕಂಡಿಲ್ಲ ಕೇಳಿದ್ದೇನೆ.
(ಅವಳ ಮಾತಿಗೆ ಮಂಜೀರ ಮತ್ತು ಕಂಜೀರ ನಗುತ್ತಾರೆ)
ಸೌ: ಸಾಕು ತಮಾಷೆ. ಹೋಗಿ. ಮೊದಲು ಇಬ್ಬರು ಅತ್ತರು ಬೆರಸಿದ ನೀರಿನಲ್ಲಿ ಸ್ನಾನ ಮಾಡಿ.
ಮಣಿ: (ಪಾತ್ರೆ ತೊಳೆಯುವುದನ್ನು ಅರ್ಧದಲ್ಲಿ ನಿಲ್ಲಿಸಿ ಒಳ ಬಂದು ಹೆದರುತ್ತಾ ಹೆದರುತ್ತಾ ಮಲತಾಯಿಯೊಡನೆ) ಚಿಕ್ಕಮ್ಮ, ನಾನು ಹೋಗಲಾ ನರ್ತನ ಸ್ಪರ್ಧೆಗೆ?
ಸೌ: ಏನು? ನೀನು ನರ್ತನ ಸ್ಪರ್ಧೆಗೆ ಹೋಗ್ತೀಯ? ಕತ್ತೆ! ನಡಿ ಹೊರಗೆ? ಒಂದಷ್ಟು ಪಾತ್ರೆಗಳು ಹಾಗೇ ಬಾಕಿ ಇವೆ. ತೊಳೆಯೊ ಬಟ್ಟೆ ರಾಶಿ ಬಿದ್ದಿದೆ. ರಾತ್ರಿಯ ಅಡಿಗೆ ಬೇರೆ ಆಗ್ಬೇಕು. ನರ್ತನಕ್ಕೆ ಹೋಗ್ತಾಳಂತೆ ನರ್ತನಕ್ಕೆ! ನಡಿ. ಕೆಲಸ ಎಲ್ಲಾ ಮುಗಿಸಿ ಬಾಗಿಲು ಹಾಕಿ ಮಲಗು. ನಾವು ವಾಪಾಸು ಬರುವ ವರೆಗೆ ನಿದ್ದೆ ಮಾಡ್ಬೇಡ.
(ಮಣಿಮಾಲಾ ತಿರುಗಿಹೋಗಿ ಕಣ್ಣೀರು ಒರಸಿಕೊಳ್ಳುತ್ತಾ ಪಾತ್ರೆ ತಿಕ್ಕುವುದನ್ನು ಮುಂದರಿಸುತ್ತಾಳೆ)
ಫೇಡ್ ಔಟ್
ದೃಶ್ಯ ನಾಲ್ಕು: ಮಣಿಮಾಲಾ ಮನೆಯ ತೋಟ
(ಮಣಿಮಾಲಾ ದೊಡ್ಡ ಬಂಡೆಯ ಬಳಿ ಒಂಟಿಯಾಗಿ ಕುಳಿತಿದ್ದಾಳೆ. ಅವಳ ಉಡುಪಿನ ಮೇಲೆ ಮಸಿ ಗುರುತುಗಳು. ನಾಲ್ಕು ಬೆಕ್ಕುಗಳು ಮತ್ತು ನಾಯಿ ಅವಳ ಬಳಿ ಕುಳಿತಿವೆ. ಮಣಿಮಾಲಾಳ ಕಣ್ಣುಗಳಲ್ಲಿ ಆಗಾಗ ಕಣ್ಣೀರು ಚಿಮ್ಮುತ್ತದೆ. ನಾಯಿ ಮತ್ತು ಬೆಕ್ಕುಗಳು ಕೂಡ ಅವಳಿಗೆ ಅಂಟಿ ಕುಳಿತುಕೊಂಡು ಸಹಾನುತಾಪ ತೋರುತ್ತವೆ. ತಕ್ಷಣ ಒಬ್ಬಳು ಯಕ್ಷಿಣಿ ಕಾಣಿಸಿಕೊಳ್ಳುತ್ತಾಳೆ.)
ಯಕ್ಷಿ: ಮಣಿಮಾಲಾ?
ಮಣಿ: ಮಣಿಮಾಲಾ? ಯಾರು ಮಣಿಮಾಲಾ?
ಯಕ್ಷಿ: ನೀನು. ನೀನೇ ಮಣಿಮಾಲಾ.
ಮಣಿ: ನಾನು ಮಣಿಮಾಲಾ ಅಲ್ಲ. ನನ್ನ ಹೆಸರು ಮಂಜು.
ಯಕ್ಷಿ: ಮಣಿಮಾಲಾ ಅಂತ ನಿನ್ನ ಹೆಸರು. ಅದು ನಿನ್ನಮ್ಮ ವನಮಾಲಾ ನಿನಗಾಗಿ ತನ್ನ ಮನಸ್ಸಿನಲ್ಲಿಟ್ಟುಕೊಂಡಿದ್ದ ಹೆಸರು.
ಮಣಿ: ನಿಂಗೆ ಹೇಗೆ ಗೊತ್ತಾಯ್ತು?
ಯಕ್ಷಿ: (ನಕ್ಕು) ನಾನು ನಿನ್ನ ಅಮ್ಮನ ಗೆಳತಿ.
ಮಣಿ: ಏನು ನನ್ನ ಅಮ್ಮನ ಗೆಳತಿಯೆ?
ಯಕ್ಷಿ: ಹೌದು ಮಗು. ನಾನು ಯಕ್ಷಿ. ನಂಗೆ ಮನುಷ್ಯರ ಮನಸ್ಸಿನೊಳಗಿರೋದನ್ನ ತಿಳಿಯೊ ಶಕ್ತಿ ಇದೆ. (ಮಣಿಮಾಲಾ ಮತ್ತು ಅವಳ ಗೆಳೆಯರು ಬೆರಗುಗೊಳ್ಳುತ್ತಾರೆ)
ಯಕ್ಷಿ: ಇವತ್ತಿನಿಂದ ನೀನು ಮಣಿಮಾಲಾ. ನಿನಗೆ ಅರಮನೆಯಲ್ಲಿ ನರ್ತಿಸಲು ಮನಸ್ಸಿದೆಯಲ್ಲವೆ ಮಣಿಮಾಲಾ?
ಮಣಿ: ಹೌದು ಇದೆ.
ಯಕ್ಷಿ: ಕಂಜೀರ ಮಂಜೀರ ನಿನ್ನನ್ನು ಬಿಟ್ಟುಹೋದರಲ್ಲಾ?.
ಮಣಿ: ಹೌದು. ಅವರು ನನ್ನನ್ನು ಬಿಟ್ಟುಹೋದರು.
ಯಕ್ಷಿ: ನಾನು ನಿನ್ನನ್ನು ನರ್ತನಕ್ಕೆ ಕಳಿಸುತ್ತೇನೆ.
ಮಣಿ: (ಆಶ್ಚರ್ಯದಿಂದ)ಹೇಗೆ?
ಯಕ್ಷಿ: ನೋಡು. ಆ ಬಂಡೆ ರಥವಾಗ್ತದೆ. ನಿನ್ನ ಪ್ರೀತಿಯ ಈ ನಾಲ್ಕು ಬೆಕ್ಕುಗಳು ಕುದುರೆಗಳಾಗ್ತವೆ. ಟೋಟೊ ಸಾರಥಿಯಾಗ್ತದೆ. ನೀನು ರಥವನ್ನು ಏರಿದ ಕೂಡಲೇ ರಥ ಓಡಿ ಅರಮನೆಯ ಮುಂದೆ ನಿಲ್ಲುತ್ತದೆ. ಅಲ್ಲೊಬ್ಬ ಇವತ್ತು ನರ್ತಿಸುವ ಹುಡುಗಿಯರ ಹೆಸರುಗಳನ್ನು ಬರೆದುಕೊಳ್ಳುತ್ತಾನೆ. ಅವನೊಡನೆ ನಿನ್ನ ಹೆಸರು ಮಣಿಮಾಲಾ ಎಂದು ಹೇಳು. ಎಲ್ಲಾ ಸ್ಪಷ್ಟವಾಯಾ?
ಮಣಿ: ಆಯಿತು. ಆದರೆ ನನ್ನ ಉಡುಪು?
ಯಕ್ಷಿ: (ನಕ್ಕು)ನಿನ್ನ ಉಡುಪು ಹೇಗೆ ಬದಲಾಗಿರುತ್ತದೆ ಎಂದು ನೀನೆ ನೋಡುವಿಯಂತೆ. ಯಾವ ಬಣ್ಣ ಇಷ್ಟ ನಿನಗೆ?
ಮಣಿ: ಬಿಳಿ.
ಯಕ್ಷಿ: ಸರಿ. ನಿನ್ನ ಉಡುಪು ಬೆಳದಿಂಗಳಂತೆ ಬಿಳಿಯಾಗಿರುತ್ತದೆ. ನರ್ತನ ರಾಜಕುಮಾರನಿಗೆ ಇಷ್ಟವಾದಷ್ಟು ಹೊತ್ತು ನಡೆಯುತ್ತದೆ. ಆದರೆ ನೀನು ಹನ್ನೆರಡು ಗಂಟೆ ಬಡಿಯುವಾಗ ಮತ್ತೆ ರಥ ಏರಬೇಕು. ತಡಮಾಡಕೂಡದು. ಯಾಕೆಂದರೆ, ಗಂಟೆ ಹನ್ನೆರಡು ಬಾರಿ ಬಡಿದು ಮುಗಿದ ಕೂಡಲೇ ಕುದುರೆಗಳು ಬೆಕ್ಕುಗಳಾಗ್ತವೆ. ಸಾರಥಿ ನಾಯಿ ಆಗ್ತದೆ. ಅರ್ಥವಾಯಾ?
ಯಕ್ವಿ: ನೀನು ನರ್ತನದಲ್ಲಿ ಭಾಗವಹಿಸಿದ್ದು ಯಾರಿಗೂ ತಿಳಿಯುವುದಿಲ್ಲ. ಆದೀತಾ?
ಮಣಿ: (ಹರ್ಷದಿಂದ) ಆದೀತು.
ಯಕ್ಷಿ: ಆದರೆ ನೆನಪಿರಲಿ. ಗಡಿಯಾರ ಹನ್ನೆರಡು ಹೊಡೆಯಲು ತೊಡಗಿದೊಡನೆ ನೀನು ಅಲ್ಲಿಂದ ಹೊರಡಬೇಕು. ಒಂದು ಸೆಕುಂಡು ಕೂಡ ತಡವಾಗಬಾರದು. ತಡವಾದರೆ ಅಲ್ಲೇ ನೀನು ಇದೇ ಮಂಜು ಆಗಿಬಿಡುತ್ತಿ. ನಿನ್ನ ರಥ ಬಂಡೆಯಾಗುತ್ತದೆ. ಕುದುರೆಗಳು ಬೆಕ್ಕುಗಳಾಗ್ತವೆ. ಸಾರಥಿ ನಾಯಿಯಾಗ್ತದೆ. ಎಲ್ಲಾ ರಹಸ್ಯವೂ ಬಯಲಾಗ್ತದೆ!
ಮಣಿ: ಗಡಿಯಾರ ಮೊದಲ ಬಡಿತ ಕೇಳಿಸಿದ ಕೂಡಲೇ ರಥ ಏರುತ್ತೇನೆ.
ಯಕ್ಷಿ: ಹೌದು ಹಾಗೇ ಮಾಡು.
(ಯಕ್ಷಿ ತನ್ನ ಕೈಯಲ್ಲಿರುವ ಮಂತ್ರದ ಕೋಲನ್ನು ನಾಯಿ ಬೆಕ್ಕುಗಳ ಮೇಲೆ ಮತ್ತು ಬಂಡೆಯ ಮೇಲೆ ಆಡಿಸುತ್ತಿರುವಾಗ)
ಫೇಡ್ ಔಟ್
ದೃಶ್ಯ ಐದು:ಅರಮನೆ. ನೃತ್ಯದ ಹಾಲ್
(ರಾಜಕುಮಾರ ಎತ್ತರದ ಆಸನದಲ್ಲಿ ಕುಳಿತಿದ್ದಾನೆ. ಅವನ ಬಳಿ ಉದ್ದನೆಯ ಪೇಟ ಧರಿಸಿದ ರಾಜಸೇವಕ ನಿಂತಿದ್ದಾನೆ. ಅವನ ಕೈಯಲ್ಲಿ ಒಂದು ಕಾಗದ)
ಸೇವಕ: ಈಗಾಗಲೇ ನಡೆದಿರುವ ಮೊದಲ ನರ್ತನ ಸ್ಪರ್ಧೆಯಲ್ಲಿ ಆಯೆಯಾಗಿರುವ ಹನ್ನೆರಡು ಮಂದಿಯಲ್ಲಿ ಹನ್ನೊಂದು ಮಂದಿ ಮಾತ್ರ ಬಂದಿದ್ದಾರೆ.
ರಾಕು: ಹನ್ನೊಂದು ಮಂದಿ ಹೇಗೆ ನರ್ತಿಸುತ್ತಾರೆ? ಹನ್ನೆರಡು ಮಂದಿ ಬೇಡವೆ?
ಸೇವಕ: ಹೌದು ರಾಜಕುಮಾರ. ಹನ್ನೆರಡನೆಯವಳು ಬಂದಿಲ್ಲ.
ರಾಕು: ಹನ್ನೊಂದು ಮಂದಿಯ ನರ್ತನ ಚೆನ್ನಾಗಿರುವುದಿಲ್ಲ. ಯಾರಾದರೂ ಬಂದರೆ ಅವಳನ್ನು ಸೇರಿಸಿಕೊ.
ಸೇವಕ: ಆಗಲಿ ರಾಜಕುಮಾರ. ಈಗ ನಾನು ಸ್ಪಧಿಗಳ ಹೆಸರನ್ನು ಓದಿಹೇಳುತ್ತೇನೆ. ಅವರು ನರ್ತನಕ್ಕೆ ಸಿದ್ಧರಾಗಿ ವೇದಿಕೆಗೆ ಬರಬೇಕು. ಅವರಲ್ಲಿ ಯಾರ ನರ್ತನ ತನಗೆ ಇಷ್ಟವಾಗುತ್ತದೋ ಅವಳನ್ನು ಆರಿಸಿ ಅವಳೊಡನೆ ರಾಜಕುಮಾರ ನರ್ತಿಸುತ್ತಾನೆ. ಆಯೆಯಾದವರ ಹೆಸರುಗಳು ಈ ರೀತಿ ಇವೆ:
(ಅವನು ಒಂದೊಂದೇ ಹೆಸರು ಕೂಗಿದಂತೆ, ಒಬ್ಬೊಬ್ಬರೇ ಬಂದು ರಾಜಕುಮಾರನಿಗೆ ವಂದಿಸಿ ನರ್ತನಕ್ಕೆ ಸಜ್ಜಾಗಿ ನಿಲ್ಲುತ್ತಾರೆ)
ಕಂಜೀರ, ಮಂಜೀರ, ಮಧುಮಾಲಿಕಾ, ಮಧುಚಂದ್ರಿಕಾ,
ಮಣಿಚಂದ್ರಿಕಾ, ಪುಷ್ಪಮಾಲಿಕಾ, ಪುಷ್ಪಚಂದ್ರಿಕಾ, ವನಮಾಲಿಕಾ,
ವನಚಂದ್ರಿಕಾ, ಜ್ಯೋತಿಮಾಲಿಕಾ, ನೀಹಾರಿಕಾ,
(ಹನ್ನೊಂದನೆಯವಳು ಬಂದು ನಿಂತ ಹೊತ್ತಿನಲ್ಲಿಯೆ ಬಾಗಿಲಲ್ಲಿ ರಥ ಬಂದು ನಿಲ್ಲುತ್ತದೆ. ಎಲ್ಲರೂ ಬೆರಗಾಗಿ ನೋಡುತ್ತಾರೆ. ಮಣಿಮಾಲಾ ಇಳಿದು ಬರುತ್ತಾಳೆ. ಅವಳನ್ನು ಇಳಿಸಿ ರಥ ಹಿಂದಕ್ಕೆ ಹೋಗುತ್ತದೆ)
ರಾಸೇ: ನೀನು ನರ್ತಿಸಲು ಬಂದಿದ್ದೀಯಾ?
ಮಣಿ: ಹೌದು. ನನ್ನನ್ನು ಸೇರಿಸಿಕೊಳ್ಳುತ್ತೀರಾ?
ರಾಸೇ: ಸೇರಿಸಿಕೊಳ್ಳುತ್ತೇವೆ. ಏನು ನಿನ್ನ ಹೆಸರು?
ಮಣಿ: ನನ್ನ ಹೆಸರು ಮಣಿಮಾಲಾ
ರಾಸೇ: ವಿಳಾಸ?
ಮಣಿ: ಮತ್ತೆ ಹೇಳುತ್ತೇನೆ.
ರಾಸೇ: ಸರಿ. ಸೇರಿಕೊ.
ರಾಕು: ಇನ್ನು ನರ್ತನ ಆರಂಭವಾಗಲಿ.
ರಾಸೇ: ಎಲ್ಲರೂ ಕೇಳಿ. ನರ್ತನವನ್ನು ನಿಲ್ಲಿಸಲು ರಾಜಕುಮಾgನ ಅಪ್ಪಣೆಯಾಗುವ ವರೆಗೆ ನರ್ತನ ನಡೆಯುತ್ತಾ ಇರಬೇಕು.
(ಎಲ್ಲರೂ ನರ್ತಿಸುತ್ತಾರೆ. ಮಣಿಮಾಲಾಳ ನೃತ್ಯ ರಾಜಕುಮಾರನಿಗೆ ಇಷ್ಟವಾಗಿರುವುದು ಅವನ ಮುಖಭಾವದಲ್ಲಿ ವ್ಯಕ್ತವಾಗುತ್ತದೆ. ಅವನು ತನ್ನ ಆಸನದಿಂದ ಏಳುತ್ತಾನೆ. ಅದೇ ಹೊತ್ತು ಹನ್ನೆರಡು ಗಂಟೆಯ ಗಡಿಯಾರ ಬಡಿತ ಆರಂಭವಾಗುತ್ತದೆ. ಮಣಿಮಾಲಾ ಲಗುಬಗೆಯಿಂದ ನರ್ತನ ಬಿಟ್ಟು ಹೊರಬರುತ್ತಾಳೆ. ರಥ ಬಂದು ನಿಲ್ಲುತ್ತದೆ. ರಥ ಏರುತ್ತಾಳೆ. ರಥ ನಿರ್ಗಮಿಸುತ್ತದೆ. ಅವಳು ರಥವನ್ನೇರುವ ತರಾತುರಿಯಲ್ಲಿ ಅವಳ ಬಂಗಾರದ ಬಣ್ಣದ ರೇಶಿಮೆ ಪಾದರಕ್ಷೆ ಉಳಿದುಹೋಗುತ್ತದೆ. ರಾಜಕುಮಾರ ಅದನ್ನು ಹೆಕ್ಕಿಕೊಂಡು ಅದರ ಅಂದ ನೋಡಿ ಮೈಮರೆಯುತ್ತಾನೆ. ನೃತ್ಯ ಮುಂದರಿದಿದೆ. ಚಪ್ಪಾಳೆ ಬಡಿಯುತ್ತಾನೆ. ನೃತ್ಯ ನಿಲ್ಲುತ್ತದೆ.
ರಾಸೇ: ನೀವೆಲ್ಲರೂ ಮರಳಬಹುದು. ರಾಜಕುಮಾರನ ನಿರ್ಧಾರವನ್ನು ನಾಳೆ ತಿಳಿಸಲಾಗುವುದು.
(ರಂಗದ ಮೇಲೆ ರಾಜಕುಮಾರ ಮತ್ತು ರಾಜಸೇವಕ ಮಾತ್ರ ಉಳಿಯುತ್ತಾರೆ)
ರಾಕು: ಇದೆಂಥಾ ಪಾದರಕ್ಷೆ. ಇಂಥ ಪಾದರಕ್ಷೆಯನ್ನು ನಾನು ಈ ತನಕ ನೋಡಿಲ್ಲ.
ರಾಸೇ: ತುಂಬಾ ಸುಂದರವಾಗಿದೆ ಮತ್ತು ಅಷ್ಟೇ ಬಹಳ ನಾಜೂಕಾಗಿದೆ.
ರಾಕು: ರೇಶಿಮೆಯಿಂದ ಮಾಡಿದಂತಿದೆ. ಮೇಲೆಲ್ಲಾ ನವರತ್ನಗಳನ್ನು ಕುಳ್ಳಿರಿಸಲಾಗಿದೆ. ಇದು ಸಾಮಾನ್ಯ ಮನುಷ್ಯರು ಧರಿಸುವ ಬೂಟಿನಂತೆ ಇಲ್ಲ.
ರಾಸೇ: ರಂಭೆಯದೋ, ಮೇನಕೆಯದೋ, ಊರ್ವಶಿಯದೋ, ತಿಲೋತ್ತಮೆಯದೋ ಎಂಬಂತಿದೆ.
ರಾಕು: ಅವರ ಬೂಟುಗಳನ್ನು ನೀನು ನೋಡಿದ್ದೀಯ?
ರಾಸೇ: ಇಲ್ಲ.
ರಾಕು: ಮತ್ತೆ ಹೇಗೆ ಹೇಳುತ್ತಿ ಅವರ ಪಾದರಕ್ಷೆಯ ಹಾಗಿದೆ ಅಂತ?
ರಾಸೇ: ಊಹಿಸಿದೆ ಅಷ್ಟೆ. ಯಾಕೆಂದರೆ, ಇದನ್ನು ಧರಿಸಿದವಳು ರಂಭೆ, ಮೇನಕೆ, ಊರ್ವಶಿ ಮತ್ತು ತಿಲೋತ್ತಮೆಯ ಹಾಗಿದ್ದಳು.
ರಾಕು: ಅದು ನಿಜ. ನಾನು ಅವಳನ್ನೇ ವರಿಸಲು ನಿರ್ಧರಿಸಿದ್ದೆ. ಅಷ್ಟರಲ್ಲಿ ಅವಳು ಅದೃಶ್ಯವಾದಳಲ್ಲಾ? ಅವಳನ್ನು ಪತ್ತೆ ಹಚ್ಚುವುದು ಹೇಗೆ?
ರಾಸೇ: ಬಹಳ ಸುಲಭ. ಈ ಬೂಟಿನ ಜೊತೆ ಯಾರೊಡನಿದೆಯೊ ಅವಳೇ ಅವಳು!
ರಾಕು: ಅದೇನೋ ನಿಜ. ಆದರೆ ಅವಳು ಯಾರು, ಎಲ್ಲಿದ್ದಾಳೆ ಎಂದು ಪತ್ತೆ ಹಚ್ಚುವುದು ಹೇಗೆ?
ರಾಸೇ: ಅದಕ್ಕೇನಾದರೂ ಒಂದು ಉಪಾಯ ಮಾಡಬೇಕು. (ಇಬ್ಬರೂ ಯೊಚನೆಯಲ್ಲಿ ಮುಳುಗುತ್ತಾರೆ)
ಫೇಡ್ ಔಟ್
ದೃಶ್ಯ ಆರು: ಮಣಿಮಾಲಾ ಮನೆ
(ಮಣಿಮಾಲ ನೆಲಗುಡಿಸುತ್ತಿದ್ದಾಳೆ. ಮಂಜೀರ ಮತ್ತು ಕಂಜೀರ ಅವಳು ಗುಡಿಸಿದಲ್ಲಿಗೆ ಪುನ: ಪುನ: ಕಾಗದದ ಚೂರುಗಳನ್ನು ಹಾಕಿ ಅವಳನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾರೆ. ಸೌಪರ್ಣಿಕಾ ಈ ದೃಶ್ಯವನ್ನು ನೋಡಿ ನಗುತ್ತಿದ್ದಾಳೆ. ಮಣಿಮಾಲಳ ಉಡುಪು ಕೊಳೆಯಾಗಿದೆ. ಮಂಜೀರ ಕಂಜಿರರ ಉಡುಪು ವೈಭವಯುತವಾಗಿದೆ. )
ಡಂಗುರ: “ಕೇಳಿರಿ ಕೇಳಿರಿ. ನಿನ್ನೆ ಅರಮನೆಗೆ ಬಂದಿರುವವರ ಮನೆಗೆ ರಾಜಕುಮಾರ ಒಂದು ವಿಶೇಷವಾದ ಪಾದರಕ್ಷೆ ಕಳಿಸಿದ್ದಾನೆ. ಅದು ಯಾರ ಕಾಲಿಗೆ ಹೊಂದುತ್ತದೋ ಅವಳನ್ನು ರಾಜಕುಮಾರ ಮದುವೆಯಾಗುತ್ತಾನೆ. ಪಾದರಕ್ಷೆಯನ್ನು ಹಿಡಿದುಕೊಂಡು ಇಬ್ಬರು ಸೈನಿಕರು ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ. ಸೈನಿಕರು ಈಗಾಗಲೇ ಅರಮನೆಯಿಂದ ಹೊರಟಿದ್ದಾರೆ. ರಾಜಕುಮಾರ ಕೂಡ ಅವರ ಜೊತೆಯಲ್ಲಿಯೆ ಬರುತ್ತಾನೆ. ಕನ್ಯೆಯರು ತಮ್ಮ ಪಾದವನ್ನು ಆ ಪಾದರಕ್ಷೆಯಲ್ಲಿ ಇರಿಸಿ ತಮ್ಮ ಭಾಗ್ಯ ಪರೀಕ್ಷೆ ಮಾಡಬಹುದು. ”
ಕೆ: (ಒಳಬರುತ್ತಾ) ಡಂಗುರ ಕೇಳಿಸ್ತಾ?
ಸೌ: ಕೇಳಿಸ್ತು. ರಾಜಕುಮಾರನಿಗೆ ಮುಖಕಮಲಕ್ಕಿಂತ ಪಾದಕಮಲವೇ ಹೆಚ್ಚು ಪ್ರಿಯವಾಗಿರುವ ಹಾಗೆ ತೋರುತ್ತದೆ. (ನಗು)
ಕೆ: ಹಾಗಲ್ಲ. ಮುಖದಲ್ಲಿ ಮೂವತ್ತಕ್ಕೇ ವಯಸ್ಸು ಕಾಣಿಸುತ್ತದೆ. ಪಾದಗಳಲ್ಲಿ ಅರುವತ್ತರಲ್ಲಿಯೂ ಯವನ ಉಳಿದಿರುತ್ತದೆ. (ನಗು) ಅದೆಂಥಾ ಪಾದರಕ್ಷೆಯೊ ದೇವರೇ ಬಲ್ಲ!
ಸೌ: ವಿಶೇಷವಾದ ಪಾದರಕ್ಷೆ!
ಕೆ: ಅದೂ ಕೂಡ ಒಂದೇ ಕಾಲಿನ್ದು!
ಮಂಜಿ ಮತ್ತು ಕಂಜಿ: ಯಾವ ಕಾಲಿನ್ದಂತೆ?
ಕೆ: ರಾಜಕುಮಾರನಿಗೇ ಗೊತ್ತು.
ಸೌ: ಡಂಗುರದವನಿಗೆ ಗೊತ್ತಿರ್ಲಿಕ್ಕೂ ಸಾಕು.
ಕೆ: ಡಂಗುರದವನಿಗೆ ಗೊತ್ತಿರುವುದು ಡಂಗುರ ಮಾತ್ರ! ಅವನಿಗೆ ಅದಕ್ಕಿಂತ ಹೆಚ್ಚು ಏನೂ ಗೊತ್ತಿರುವುದಿಲ್ಲ.
ಮಂಜಿ: ನಾನು ಒಂದಾದ ಮೇಲೆ ಒಂದು, ಎರಡೂ ಕಾಲು ಹಾಕಿ ನೋಡ್ತೀನಿ.
ಕಂಜಿ: ನಾನು ಕೂಡ ಒಂದಾದ ಮೇಲೆ ಒಂದು, ಎರಡೂ ಕಾಲು ಹಾಕಿ ನೋಡ್ತೀನಿ.
ಕೆ: ನಿನ್ನೆ ಅರಮನೆಗೆ ಹೋದವರು ಅಂದ್ರೆ ನೀವು ಕೂಡ ಒಂದು ಕೈ ನೋಡ್ಬಹುದು ಅಲ್ವಾ ಅಮ್ಮ? (ನಗು)
ಸೌ: ಅಂದ್ರೆ?
ಕೆ: ನೀವು ಕೂಡ ಒಂದು ಕಾಲು ಹಾಕಿ ನೋಡ್ಬಹುದು ಅಂದೆ. ನಿಮ್ಮ ಪಾದ ಚಿಕ್ಕದಾಗಿ ಚೊಕ್ಕವಾಗಿದೆ. ನಿಮ್ಮ ಎರಡು ಪಾದಗಳಲ್ಲಿ ಒಂದಕ್ಕೆ ಆದ್ರೆ ಆಯ್ತಲ್ಲಾ, ನಿಮ್ಮ ಭಾಗ್ಯ. ರಾಜಕುಮಾರ ನಿಮ್ಮನ್ನೇ ವರಿಸಬೇಕಾಗುತ್ತದೆ.
ಸೌ: ಕನ್ಯೆ ಅಂತ ಡಂಗುದವನು ಹೇಳಿದನಲ್ಲ?
ಕೆ: ಡಂಗುರದವನು ಕೆಲವು ಸಲ ತುಂಬಾ ಅಧಿಕಪ್ರಂಗಿಯಾಗಿರ್ತಾನೆ. ಕೆಲವು ನಾಟಕದವರ ಹಾಗೆ ತನ್ನ ಸ್ವಂತ ಶಬ್ದಗಳನ್ನ ಸೇರಿಸಿಕೊಳ್ತಾನೆ. (ನಗು)
(ಹೊರಗಡೆ ರಥ ಬಂದ ಶಬ್ದವಾಗುತ್ತದೆ)
ಕಂಜಿ: ಅಮಾ, ಅಮಾ . ರಾಜಕುಮಾರನ ರಥ ಬಂದೇ ಬಿಡ್ತು!
ಸೌ: ಛೆ! ಚೆನ್ನಗಿ ಡ್ರೆಸ್ ಹಾಕ್ಕೊಳ್ಳೋಕೂ ಅವಕಾಶ ಕೊಡ್ಲಿಲ್ಲ!
(ಇಬ್ಬರು ಸೈನಿಕರ ಜೊತೆ ರಾಜಕುಮಾರನ ಪ್ರವೇಶ. ಮಂಜೀರ ಮತ್ತು ಕಂಜೀರ ಮತ್ತು ಸೌಪರ್ಣಿಕಾ ಗಡಿಬಿಡಿಯಿಂದ ಅತ್ತಿತ್ತ ಓಡಿ ಒಂದು ಸುಂದರವಾದ ಕುರ್ಚಿ ತಂದಿರಿಸುತ್ತಾರೆ. )
ಸೌ: ರಾಜಕುಮಾರರ ಪಾದಸ್ಪರ್ಶದಿಂದ ನಮ್ಮ ಮನೆಯು ಪಾವನವಾಯಿತು. ರಾಜಕುಮಾರ ದಯವಿಟ್ಟು ಆಸನವನ್ನು ಅಲಂಕರಿಸಬೇಕು.
(ರಾಜಕುಮಾರ ಕುಳಿತುಕೊಳ್ಳುತ್ತಾನೆ)
ಸೈ೧: ಬನ್ನಿ. ಯಾರು ಇಲ್ಲಿ ಪಾದಪರೀಕ್ಷೆ ಮಾಡುವವರು? (ಪಾದರಕ್ಷೆಯನ್ನು ನೆಲದ ಮೇಲಿರಿಸುತ್ತಾನೆ)
ಮಂ: ನಾನು! (ಮುಂದೆ ಬಂದು ಕಾಲು ಹಾಕುತ್ತಾಳೆ. ಅವಳ ಯಾವ ಕಾಲೂ ಅದರೊಳಗೆ ಹೋಗುವುದಿಲ್ಲ. ಕಂಜೀರ ಆತುರದಿಂದ ಮಂಜೀರಳಂತೆಯೆ ಪರೀಕ್ಷೆ ಮಾಡುತ್ತಾಳೆ. ಇಬ್ಬರೂ ಸೋತ ಮುಖಮಾಡುತ್ತಾರೆ.
ಮಣಿ: (ಒಳಗಿಂದ ಓಡಿ ಬಂದು) ನಾನು ಕಾಲು ಹಾಕಿ ನೋಡಲೆ? (ಮಣಿಮಾಲಾ ಬೂಟು ಕೈಗೆತ್ತಿಕೊಳ್ಳುವಾಗ ಸೌಪರ್ಣಿಕಾ ಬೂಟನ್ನು ಅವಳ ಕೈಯಿಂದ ಸೆಳೆದುಕೊಳ್ಳುತ್ತಾಳೆ)
ಸೌ: ಕತ್ತೆ! ನಿನ್ನ ಕೊಳಕು ಕಾಲನ್ನು ಅದಕ್ಕೆ ತಾಗಿಸಬೇಡ! ನನ್ನ ಕಾಲಿಗೆ ಆಗುತ್ತೋ ನೋಡ್ತೀನಿ. (ಕಾಲು ತುರುಕುತ್ತಾಳೆ. ಪಾದರಕ್ಷೆ ಮುರಿದುಹೋಗುತ್ತದೆ) ಅಯೊ ಮುರಿದು ಹೋಯಿತಲ್ಲಾ! (ಭಯಗ್ರಸ್ತಳಾಗುತ್ತಾಳೆ. ಮಣಿಮಾಲಾ ತಟ್ಟನೆ ತನ್ನ ಅಂಗಿಯ ಜೇಬಿನಿಂದ ಇನ್ನೊಂದು ಪಾದರಕ್ಷೆ ತೆಗೆದು ಕಾಲಿಗೆ ಹಾಕಿಕೊಳ್ಳುತ್ತಾಳೆ. ತಕ್ಷಣ ರಾಜಕುಮಾರ ಎದ್ದು ಮಣಿಮಾಲಾಳ ಕೈಹಿಡಿಯುತ್ತಾನೆ)
ರಾಕು: ನೀನೇ ಮಣಿಮಾಲಾ. ಅಲ್ವ?
ಮಣಿ: ಹೌದು ರಾಜಕುಮಾರ.
ಸೌಪರ್ಣಿಕಾ, ಕಂಜೀರ, ಮಂಜೀರ (ಮೂಕವಿಸ್ಮಿತರಾಗಿ): ಮಣಿಮಾಲಾ!
ರಾಕು: ಮಣಿಮಾಲಾ, ನಿನ್ನನ್ನು ನಾನು ವರಿಸುತ್ತೇನೆ. ಬಾ. (ನಿರ್ಗಮನ. ಸೌಪರ್ಣಿಕಾ, ಮಂಜೀರ ಮತ್ತು ಕಂಜೀರ ಮೂಕವಿಸ್ಮಿತರಾಗಿ ನೋಡಿ ನಿಲ್ಲುತ್ತಾರೆ)
ಫೇಡ್ ಔಟ್
Leave A Comment