ಪಾತ್ರಗಳು:
ಚಿನ್ನ (ಅಣ್ಣ) ಚಿನ್ನಿ (ತಂಗಿ), ಮಾಮ, ಇಬ್ಬರು ಕಳ್ಳರು
ಅಳಿಲು, ಗಿಳಿ, ಎರಡು ಗುಬ್ಬಚ್ಚಿಗಳು, ಅಜ್ಜಿ

 

ದೃಶ್ಯ ಒಂದು: ಶ್ರೀಮಂತ ಮನೆ

(ಕೋಣೆ. ಆಟಿಕೆಗಳು ಮತ್ತು ಗೊಂಬೆಗಳ ರಾಶಿ. ಅಣ್ಣ  (ಚಿನ್ನ) ತಂಗಿ (ಚಿನ್ನಿ) ಮನವಾಗಿ ಆಗಾಗ ಕಣ್ಣೀರು ಒರಸಿಕೊಳ್ಳುತ್ತಾ ಅವರಷ್ಟಕ್ಕೇ ಆಟವಾಡುತ್ತಾ ಇದ್ದಾರೆ. ಹೊರಗಡೆ ಸಾರೋಟು ಬಂದು ನಿಂತ ಶಬ್ದ. ಒಬ್ಬ ಸುಮಾರು ನಲ್ವತ್ತು ವರ್ಷ ಪ್ರಾಯದ ಮನುಷ್ಯ (ಮಾಮ) ಒಳಗೆ ಬರುತ್ತಾನೆ. ಮಕ್ಕಳನ್ನು ಕಂಡದ್ದೇ ಓಡಿ ಹೋಗಿ ಇಬ್ಬರನ್ನೂ ಬಲವಾಗಿ ಅಪ್ಪಿ ಹಿಡಿದುಕೊಂಡು ಅಳುತ್ತಾನೆ.)

ಮಾಮ: ಅಯೊ ಮಕ್ಕಳೆ. ಹೀಗಾಗ್ತದೆ ಅಂತ ಯಾರೆಣಿಸಿದ್ದರು? ಇಬ್ರೂ ಆರೋಗ್ಯವಾಗಿದ್ದರಲ್ಲಾ? ಏನಾಗಿತ್ತು ಅವರಿಗೆ?

ಚಿನ್ನ: (ಅಳುತ್ತಾ) ಎಲ್ರೂ ಕಾಲರಾ ಅಂತಾರೆ ಮಾಮ.

ಮಾಮ: ಛೆ! ಎಂಥ ಅನ್ಯಾಯ. ದೇವರಿಗೆ ಅವರೇ ಬೇಕಾಯಿತೆ? ನಿಮ್ಮನ್ನು ನೋಡಿಯಾದರೂ ದೇವರಿಗೆ ಕರುಣೆ ಉಂಟಾಗಲಿಲ್ಲವೆ? (ಸ್ವಲ್ಪ ಹೊತ್ತು ಅತ್ತು) ನನಗೆ ವಿಷಯ ತಿಳಿಯುವಾಗ ತಡವಾಯಿತು. ತಿಳಿದ ಕೂಡಲೇ ಹೊರಟು ಬಂದುಬಿಟ್ಟೆ. ಇನ್ನು ಹೆದರಬೇಡಿ. ನನ್ನ  ತಂಗಿಯ ಮಕ್ಕಳು ನಂಗೆ ಬೇರೆಯವರಲ್ಲ. ನನ್ನ ಮಕ್ಕಳ ಹಾಗೇ. ಕೆಲಸದವಳು ಬರ‍್ತಾಳಾ?

ಚಿನ್ನ: ಸಾಯಂಕಾಲದ ಹೊತ್ತಿಗೆ ಬಂದು ರಾತ್ರಿ ನಮ್ಮ  ಜೊತೆ ಇರ‍್ತಾಳೆ. ಬೆಳಿಗ್ಗೆ ಬೇಗನೆ ಎದ್ದು ಮನೆಕೆಲಸ ಎಲ್ಲಾ ಮುಗಿಸಿ, ಅಡಿಗೆ ಮಾಡಿಟ್ಟು ಅವಳ ಮನೆಗೆ ಹೋಗ್ತಾಳೆ.

ಮಾಮ: ಇನ್ನು ಅವಳು ಇಲ್ಲಿ ರಾತ್ರಿ ಇರ‍್ಬೇಕಾಗಿಲ್ಲ. ನಾನಿದ್ದೀನಿ. ನೀವು ಶಾಲೆಗೆ ಹೋಗದೆ ಎಷ್ಟು ದಿನ ಆಯ್ತು?

ಚಿನ್ನಿ: ನಾಲ್ಕುದಿನ ಆಯ್ತು  ಮಾಮ.

ಮಾಮ:  ಶಾಲೆಗೆ ಹೋಗ್ಬಹುದು. ನಾಲ್ಕು ದಿವ್ಸ  ಕಳೀಲಿ. ನಿಮ್ಮನ್ನ ಕರ‍್ಕೊಂಡು ಹೋಗ್ಲಿಕ್ಕೆ ನಾನು ವ್ಯವಸ್ಥೆ ಮಾಡ್ತೀನಿ.

ಚಿನ್ನಿ: ಅಪ್ಪ ಅಮ್ಮ ಇನ್ನು ಬರೋಲ್ವ ಮಾಮ?

(ಅವಳ ಪ್ರಶ್ನೆ ಕೇಳಿ ಮಾಮನಿಗೆ ದು:ಖವುಮ್ಮಳಿಸಿ ಬರುತ್ತದೆ)

ಮಾಮ: (ಕಣ್ಣೀರು ಮಿಡಿಯುತ್ತಾ) ಇಲ್ಲ ಮಕ್ಕಳೆ, ಬರುವುದಿಲ್ಲ. “ನಮ್ಗೇನಾದ್ರೂ ಕಷ್ಟ ಬಂದ್ರೆ ನಮ್ಮ ಮಕ್ಕಳನ್ನು ನೀನೇ ನೋಡಿಕೊಳ್ಬೇಕು” ಅಂತ ಯಾವಾಗ್ಲೂ ನನ್ನ ಬಳಿ ಹೇಳ್ತಿದ್ರು. ಆದ್ರೆ ಹೀಗಾಗ್ತದೆ ಅಂತ ಯಾರೆಣಿಸಿದ್ರು? (ದು:ಖಿಸುತ್ತಾನೆ)

ಚಿನ್ನ: ಮಾಮಿ ಯಾಕೆ ಬಂದಿಲ್ಲ ಮಾಮ?

ಮಾಮ: ನಾನು ಅವಸರದಲ್ಲಿ ಹೊರಟು ಬಂದ್ಬಿಟ್ಟೆ. ಎರಡು ದಿನ ಕಳೆದ್ಮೇಲೆ ಹೋಗಿ ಕರೆದುಕೊಂಡು ಬರ‍್ತೀನಿ. ಎರಡು ದಿನಗಳಿಂದ ಮನೆಯೊಳಗೇ ಇದ್ದೀರಾ?

ಚಿನ್ನ, ಚಿನ್ನಿ: ಹೌದು ಮಾಮ.

ಮಾಮ: (ಜೇಬಿನಿಂದ ಚಾಕಲೇಟು ಪೊಟ್ಟಣ ತೆಗೆದುಕೊಟ್ಟು) ಹೊರಗೆ ಹೋಗಿ ತೋಟದಲ್ಲಿ ತಿರುಗಾಡಿಕೊಂಡು ಬರೋಣ್ವ?

ಚಿನ್ನ, ಚಿನ್ನಿ: ಆಗಲಿ ಮಾಮ.

ಫೇಡ್ ಔಟ್

 

ದೃಶ್ಯ ಎರಡು: ಮನೆ

(ಮಾಮ ಸೋಫದಲ್ಲಿ ಆರಾಮವಾಗಿ ಕುಳಿತುಕೊಂಡು ಪತ್ರಿಕೆ ಓದುತ್ತಿದ್ದಾನೆ.  ಇಬ್ಬರು ಕುಳ್ಳರಾದ ಮನುಷ್ಯರು ಬರುತ್ತಾರೆ)

ಮಾಮ: ಬನ್ನಿ ಕುಳಿತುಕೊಳ್ಳಿ. ಯಾರಾದರೂ ಸಿಕ್ಕಿದ್ರಾ?

ಒಂದನೆಯವನು: ಹೂಂ. ಒಬ್ರು ಸಿಕ್ಕಿದ್ರು. ಜಾಗ ಅವರು ನೋಡಿದ್ದಾರಂತೆ.  “ ಹಳೇ ಮನೆ, ಕಾಪಿs ತೋಟ ಹಾಳು ಬಿದ್ದಿದೆ. ಬಾಕಿಯೆಲ್ಲಾ ಬರೀ ಕಾಡು ಗುಡ್ಡ ” ಅಂತಾರೆ. ಹತ್ತು ಲಕ್ಷ ಕೊಡಲು ಸಿದ್ಧರಿದ್ದಾರೆ.

ಎರಡನೆಯವನು: ಆಗ್ಬಹುದಾದ್ರೆ ರೆಕಾರ್ಡ್ಸ್ ರೆಡಿಯಾದ ಕೂಡ್ಲೇ ಹಣ ತಕ್ಕೊಂಡು ಬರ‍್ತಾರಂತೆ.

ಒಂ: ಮಕ್ಕಳನ್ನೇನು ಮಾಡ್ತೀರಿ? ನೀವು ಕರ‍್ಕೊಂಡು ಹೋಗ್ತೀರಾ?

ಮಾಮ: ಮಕ್ಕಳಿಗೆ ಬೇರೆ ವ್ಯವಸ್ಥೆ ಮಾಡ್ಬೇಕು. ನಿಮ್ಗೆ  ಹತ್ತು   ಹತ್ತು  ಸಾವಿರ ಕೊಡುತ್ತೇನೆ. ದಿನಾ  ಬಂದು ಅವರ ಹತ್ರ ಮಾತಾಡಿ ಫ್ರೆಂಡ್‌ಶಿಪ್ ಮಾಡ್ಕೊಳ್ಳಿ. ನಾಲ್ಕೆ ದು ದಿನಗಳ ನಂತರ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ.  ಕಾಡಿನ ದಾರಿಯಲ್ಲಿ ಒಂದು ಹಾಳು ಬಾವಿ ಸಿಗ್ತದೆ. ಕತ್ತು ಹಿಸುಕಿ ಬಾವಿಗೆ ಹಾಕಿ. ವಾಪಾಸು ಬಂದು ತೆಂಗಿನ್ಗಿಡ ನಡೋಕೆ ನಾಲ್ಕಾರು ಗುಂಡಿ ತೋಡಿ. ಅದರ ಮಣ್ಣನ್ನ ಬಾವಿಗೆ ಹಾಕಿ.

ಇಬ್ಬರೂ: (ಮುಖ ಮುಖ ನೋಡಿಕೊಂಡು) ಸರಿ. ಬೆಳಿಗ್ಗೆ ಎಷ್ಟು ಗಂಟೆಗೆ ಬರ‍್ಬೇಕು?

ಮಾಮ: ಎಂಟು ಗಂಟೆಗೇ ಬನ್ನಿ. ಮಕ್ಕಳಿಗೆ ನಿಮ್ಮ ಪರಿಚಯ ಆಗ್ಬೇಕಲ್ಲ? ಅವರ ಜೊತೆ ಸ್ನೇಹದಿಂದ ಮಾತಾಡಿ. ಸ್ನೇಹ ಬೆಳೆಸ್ಕೊಳ್ಳಿ.

ಇಬ್ಬರೂ: ಆಗಲಿ. ಬೆಳಿಗ್ಗೆ ಎಂಟು ಗಂಟೆಗೆ ಮೊದಲೇ ಬರುತ್ತೇವೆ.

ಫೇಡ್ ಔಟ್

 

ದೃಶ್ಯ ಮೂರು: ಕಾಡು, ಮರಗಳು

(ಇಬ್ಬರು ವ್ಯಕ್ತಿಗಳ ಜೊತೆ ಮಕ್ಕಳು ನಡೆದು ಬಳಲಿದ್ದಾರೆ)

ಚಿನ್ನ: ಇದು ನಾವು ಯಾವಾಗಲೂ ಶಾಲೆಗೆ ಹೋಗುವ ದಾರಿ ಅಲ್ಲ.

ಚಿನ್ನಿ: ಶಾಲೆ ಇಷ್ಟು ದೂರ ಇಲ್ಲ.

ಒಂದನೆಯವನು: ಇದು ಹತ್ತಿರದ ದಾರಿ ಅಂತ ಇಲ್ಲಿಂದ ಕರೆದುಕೊಂಡು ಬಂದೆವು. ಈಗ ನೋಡಿದರೆ ಇದು ದೂರದ ದಾರಿ.

ಎರಡನೆಯವನು: ಹೌದು ತುಂಬಾ ದೂರದ ದಾರಿ. ಯಾವ ಕಡೆಯಿಂದ ಕಾಡಿನಿಂದ ಹೊರಗೆ ಹೋಗ್ಬೇಕು ಅಂತ್ಲೇ ತಿಳೀತಿಲ್ಲ.

ಚಿನ್ನ: ನಂಗೆ ತುಂಬಾ ಬಾಯಾರಿಕೆ.

ಚಿನ್ನಿ: ನಂಗೂ.

ಒಂ: ಇಲ್ಲೇ ಇರಿ. ಎಲ್ಲಿಯಾದರೂ ಹತ್ತಿರ ನೀರು ಸಿಗುತ್ತದೆಯೆ ಎಂದು ನೋಡಿಕೊಂಡು ಬರುತ್ತೇವೆ.

(ಇಬ್ಬರೂ ಹೋಗುತ್ತಾರೆ. ಸ್ವಲ್ಪ ದೂರದಲ್ಲಿ  ಮಕ್ಕಳಿಗೆ ಕಾಣಿಸದಂತೆ ನಿಂತು ತಗ್ಗಿದ ದನಿಯಲ್ಲಿ ಮಾತಾಡುತ್ತಾರೆ)

ಒಂ: ಕೊಲ್ಲಲು ಮನಸ್ಸು ಬರುವುದಿಲ್ಲವಲ್ಲ? ಏನು ಮಾಡೋಣ?

ಎರ: ಇಲ್ಲೇ ಇರಲಿ. ನಾವು ಹೋಗಿ ಬಿಡೋಣ.

ಒಂ: ಇಲ್ಲೇ ಬಿಟ್ಟರೆ ಕಾಡು ಮೃಗಗಳ ಬಾಯಿಗೆ ಬೀಳಬಹುದು.

ಎರ: ಈ ಕಡೆ ಕಾಡುಮೃಗಗಳಿಲ್ಲ.  ಸೌದೆ ಆರಿಸಲು ಜನ ಬರ‍್ತಾ ಇರ‍್ತಾರೆ. ಅವರ ಕಣ್ಣಿಗೆ ಬಿದ್ದರೆ ಕರ‍್ಕೊಂಡು ಹೋದಾರು.

ಒಂ: ಒಂದು ವೇಳೆ ಯಾರೂ ಬರದೇ ಇದ್ರೆ?

ಎರ: ನಮಗೇನಾಗಬೇಕು? ಬಾವಿಗೆ ಹಾಕಿದ್ದೇವೆ ಅಂತ ಹೇಳುವ. ನಮ್ಗೆ ಹಣ ಸಿಕ್ಕಿದ್ರೆ ಸಾಕು. ಈಗ್ಲೇ ಹೋಗೋಣ.

ಒಂ: ಅವ್ನು ಹಣ ಕೊಡದೆ ಮೋಸ ಮಾಡಿದ್ರೆ?

ಎರ: ಮಕ್ಕಳನ್ನ ವಾಪಾಸು ತಂದು ಬಿಡೋಣ. ಅಥವಾ ಅವನನ್ನೇ ಬಾವಿಗೆ  ಹಾಕೋಣ.

ಒಂ: ನಡಿ ಹೋಗುವ. (ಹೋಗುತ್ತಾರೆ)

(ಮಕ್ಕಳು ಕುಳಿತಲ್ಲಿಂದ ಎದ್ದು ಸುತ್ತಲೂ ನೋಡುತ್ತಾರೆ)

ಚಿನ್ನ: ಇವ್ರು ಕಾಣಿಸ್ತಾ ಇಲ್ಲವಲ್ಲ?

ಚಿನ್ನಿ: ಹಸಿವಾಗ್ತಿದೆ.

(ಮರದ ಹಿಂದಿನಿಂದ ಒಂದು ಅಳಿಲು ಚಿಂವ್ ಚಿಂವ್ ಎನ್ನುತ್ತಾ ಬಂದು ಮಕ್ಕಳ ಕೈಯಲ್ಲಿ ಕೆಲವು ಹಣ್ಣುಗಳನ್ನು ಇರಿಸುತ್ತದೆ. ಮಕ್ಕಳು ಸಂತೋಷದಿಂದ ತೆಗೆದುಕೊಂಡು ತಿನ್ನುತ್ತಾರೆ. ದೊಡ್ಡದಾದ ಒಂದು ಗಿಳಿ ನೀನಿ ನೀನಿ ಎನ್ನುತ್ತಾ ಉದ್ದನೆಯ ಎಲೆಗಳಿಂದ  ದೊನ್ನೆಗಳಲ್ಲಿ  ನೀರು ತಂದು ಕೊಡುತ್ತದೆ. ಮಕ್ಕಳು ಅವುಗಳನ್ನು ಕುಡಿಯುತ್ತಾರೆ. ಎರಡು ಬುಲ್ ಬುಲ್ ಪಕ್ಷಿಗಳು ಬಂದು ಮಕ್ಕಳ ಬಳಿ ಕುಳಿತುಕೊಳ್ಳುತ್ತವೆ. ಅಳಿಲು ಮಕ್ಕಳ ಮೈಮುಟ್ಟಿ ಆಡುತ್ತಾ ಚಿನ್ನನಿಗೆ ತಿಳಿಯದಂತೆ ಅವನ ಅಂಗಿಯ ಒಂದು ಗುಂಡಿ ತೆಗೆದು ಒಂದು ಗುಬ್ಬಚ್ಚಿಗೆ ಕೊಡುತ್ತದೆ. ಗಿಳಿ  ಕೊಕ್ಕಿನಿಂದ ಚಿನ್ನಿಯ ತಲೆಗೂದಲಿಗೆ  ಕಟ್ಟಿದ ರಿಬ್ಬನಿನ ಒಂದು ತುಂಡು ಕತ್ತರಿಸಿ ಕೊಡುತ್ತದೆ. ಗುಬ್ಬಚ್ಚಿಗಳು ಅವುಗಳನ್ನು ಎತ್ತಿಕೊಂಡು ಹಾರಿಹೋಗುತ್ತವೆ. ಮಕ್ಕಳು ಗಿಳಿ ಮತ್ತು ಅಳಿಲಿನ ಜೊತೆ ಆಡುತ್ತಾ, ಹಾಡುತ್ತಾ ಕುಣಿಯುತ್ತಾ ಇರುತ್ತಾರೆ.)

ಫೇಡ್ ಔಟ್

 

ದೃಶ್ಯ ನಾಲ್ಕು: ಗುಡಿಸಲು

(ಗುಡಿಸಲಿನ ಅಂಗಳದಲ್ಲಿ  ಅಜ್ಜಿ  ನೆಲ ಗುಡಿಸುತ್ತಾ ಇದ್ದಾಳೆ. ಬುಲ್‌ಬುಲ್‌ಗಳು ಬಂದು ಚಿಪ್ ಚಿಪ್ ಎಂದು ಶಬ್ದ ಮಾಡುತ್ತಾ  ಅವಳು ಗುಡಿಸಿದ ಜಾಗದಲ್ಲಿ  ತಾವು ತಂದ ಅಂಗಿ ಗುಂಡಿ ಮತ್ತು ರಿಬ್ಬನ್ ತುಂಡು ಹಾಕುತ್ತವೆ. ಅಜ್ಜಿ ಪಕ್ಷಿಗಳನ್ನು ಒಮ್ಮೆ ನೋಡಿ, ಅಂಗಿ ಗುಂಡಿ ಮತ್ತು ರಿಬ್ಬನ್ ತುಂಡು ಹೆಕ್ಕಿಕೊಂಡು ಪರಿಶೀಲಿಸುತ್ತಾಳೆ)

ಅಜ್ಜಿ: ಇದು ಚಿನ್ನನ ಅಂಗಿ ಗುಂಡಿ! ಇದು ಚಿನ್ನಿಯ ರಿಬ್ಬನ್ ತುಂಡು! (ಬುಲ್‌ಬುಲ್‌ಗಳನ್ನು ನೋಡಿ) ಇದು ನಿಮಗೆಲ್ಲಿ  ಸಿಕ್ಕಿತು?

(ಬುಲ್‌ಬುಲ್‌ಗಳು ಹಾಡುತ್ತಾ ದೂರದೂರ ಹೋಗುತ್ತವೆ. ಅಜ್ಜಿ ಅವುಗಳನ್ನು ಹಿಂಬಾಲಿಸುತ್ತಾಳೆ)

ಫೇಡ್ ಔಟ್

 

ದೃಶ್ಯ ಐದು: ಕಾಡು, ಮರ

(ಬುಲ್‌ಬುಲ್‌ಗಳು  ಮಕ್ಕಳಿರುವಲ್ಲಿಗೆ ಅಜ್ಜಿಯನ್ನು ಕರೆದುಕೊಂಡು ಬರುತ್ತವೆ. ಮೊಮ್ಮಕ್ಕಳನ್ನು ಕಂಡ ಅಜ್ಜಿ ಅವರನ್ನು ಬಲವಾಗಿ ಅಪ್ಪಿಕೊಂಡು ಮುದ್ದಾಡುತ್ತಾಳೆ)

ಅಜ್ಜಿ: ನೀವು ಇಲ್ಲಿಗೆ ಹೇಗೆ ಬಂದಿರಿ ಮಕ್ಕಳೆ?

ಚಿನ್ನ: ಅಪ್ಪ ಅಮ್ಮ ಸತ್ತು ಹೋದರು!

ಅಜ್ಜಿ: ಅಪ್ಪ ಅಮ್ಮ ಸತ್ತು ಹೋದರೆ? ಹೇಗೆ?

ಚಿನ್ನಿ: ಕಾಲರಾ ಬಂದು.

ಅಜ್ಜಿ: ಯಾವಾಗ?

ಚಿನ್ನ: ಮೊನ್ನೆ.

ಅಜ್ಜಿ: ನಂಗೆ ತಿಳೀಲೇ ಇಲ್ಲವಲ್ಲಾ ಮಕ್ಕಳೆ. (ದು:ಖಿಸುತ್ತಾಳೆ)

ಚಿನ್ನ: ತಿಳಿಸೋರೂ ಯಾರೂ ಇಲ್ಲ.  ಊರಿನ ಜನ ಬಂದು ಗುಂಡಿ ತೋಡಿ ಅಪ್ಪ ಅಮ್ಮನನ್ನು ಗುಂಡಿಯಲ್ಲಿಟ್ಟು ಮುಚ್ಚಿದ್ರು.

ಚಿನ್ನಿ: ಮಾಮ ಬಂದ.

ಅಜ್ಜಿ: ಯಾವ ಮಾಮ? ಆ ಉದ್ದ ಮೂಗಿನ ಬಿಳಿಯಂಗಿಯ ಮಾಮನ?

ಚಿನ್ನ: ಹೌದು.

ಅಜ್ಜಿ: ಬಂದು ಏನ್ಮಾಡ್ದ?

ಚಿನ್ನ: ಪ್ರೀತಿಯಿಂದ ಮಾತಾಡ್ದ. ಯಾರೋ ಇಬ್ರನ್ನ ಕರೆಸಿ ಅವರ ಜೊತೆ ನಮ್ಮನ್ನ ಶಾಲೆಗೆ ಕಳಿಸ್ದ.

ಚಿನ್ನಿ: ಅವರು ನಮ್ಮನ್ನ ಕಾಡಿನಲ್ಲಿ ಬಿಟ್ಟುಹೋದ್ರು.

ಅಜ್ಜಿ: ನನ್ನ ಪುಣ್ಯ ಮಕ್ಕಳೆ. ಈ ಹಕ್ಕಿಗಳು ನಿಮ್ಮ ಪ್ರಾಣ ಉಳಿಸಿದ್ವು. ಆ ನಿಮ್ಮ ಉದ್ದ ಮೂಗಿನ ಬಿಳಿಯಂಗಿ ಮಾಮ ಮಹಾ ದುಷ್ಟ!

ಚಿನ್ನ; ಮಾಮಆಸ್ತಿ ಮಾರಾಟ ಮಾಡೋ ವಿಚಾರ ಮಾತಾಡ್ತಿದ್ರು.

ಅಜ್ಜಿ: ಯಾರ ಬಳಿ?

ಚೆನ್ನ: ನಮ್ಮನ್ನ ಶಾಲೆಗೆ ಕರ‍್ಕೊಂಡು ಹೋಗ್ಲಿಕ್ಕೆ ಬಂದ್ರಲ್ಲಾ, ಅವರ ಬಳಿ.

ಅಜ್ಜಿ: ಹೂಂ. ಅವನು ನಿಮ್ಮನ್ನ ಕೊಂದು ಹಾಕಲಿಕ್ಕೆ ಅಂತ ಆ ಚಂಡಾಲರ ಜೊತೆ ನಿಮ್ಮನ್ನ ಕಳಿಸಿರ‍್ಬಹುದು. ಅವ್ರಿಗೆ ನಿಮ್ಮ ಮುಖ ನೋಡಿ ನಿಮ್ಮನ್ನ ಕೊಲ್‌ಲಿಕ್ಕೆ ಮನಸ್ಸು ಬರಲಿಲ್ವೊ ಏನೊ. (ಮುದ್ದು ಮಾಡುತ್ತಾ) ಮನುಷ್ಯರಾದೋರಿಗೆ  ಮಕ್ಕಳನ್ನು ಕೊಲ್‌ಲಿಕ್ಕೆ  ಮನಸ್ಸು  ಬಂದೀತಾ?

ಚಿನ್ನ: ಈ ಅಳಿಲು ನಮಗೆ ತಿನ್ನಲು ಹಣ್ಣು  ತಂದು ಕೊಟ್ಟಿತು.

(ಅಳಿಲು ಚಿಂವ್ ಚಿಂವ್ ಎಂದು ಕುಣಿಯುತ್ತದೆ)

ಚಿನ್ನಿ: ಗಿಳಿ ಕುಡಿಯಲು ನೀರು ತಂದು ಕೊಟ್ಟಿತು.

(ಗಿಳಿ ನೀನಿ ನೀನಿ ಎಂದು ಕುಣಿಯುತ್ತದೆ)

ಅಜ್ಜಿ: ಎಲ್ಲರೂ ಬನ್ನಿ. ನಾವೆಲ್ಲಾ  ಒಂದೇ ಕಡೆ ಬದುಕಬಹುದು.

ಚಿನ್ನ: ನಮಗೆ ಶಾಲೆಗೆ ಹೋಗಬೇಕು ಅಜ್ಜಿ.

ಅಜ್ಜಿ: ನಿಮ್ಮನ್ನು ನಾನು ಶಾಲೆಗೆ ಕರೆದುಕೊಂಡು ಹೋಗುತ್ತೇನೆ. ಇಲ್ಲೇ ಹತ್ತಿರ ಒಂದು ಶಾಲೆ ಇದೆ. (ಅಳಿಲು, ಗಿಳಿ ಮತ್ತು ಪಕ್ಷಿಗಳು ಒಟ್ಟಿಗೇ ಜೋರಾಗಿ ಹಾಡುತ್ತವೆ. ಅವುಗಳನ್ನು ನೋಡಿ) ಏನು ನಿಮ್ಗೆ ಏನಾಗಬೇಕು ?

ಚಿನ್ನ, ಚಿನ್ನಿ: ಅವರಿಗೂ ಶಾಲೆಗೆ ಹೋಗ್ಬೇಕಂತೆ.

ಅಜ್ಜಿ: ಆಗಲಿ. ನಿಮ್ಮ ಜೊತೆ ಅವರೂ ಶಾಲೆಗೆ ಬರಲಿ.

(ಅಳಿಲು, ಗಿಳಿ ಮತ್ತು ಪಕ್ಷಿಗಳ ಜೊತೆ ಸೇರಿಕೊಂಡು ಮೂವರೂ ಸಂತೋಷದಿಂದ ಕುಣಿಯುತ್ತಾರೆ)

ಫೇಡ್ ಔಟ್