ಪಾತ್ರಗಳು:
ಮನೆ ಮಾಲಿಕ, ಕಳ್ಳ, ಉಪ್ಪಾರ, ಹೆಂಗಸು, ಅಕ್ಕಸಾಲಿಗ, ಸೇವಕ
ಗುರು, ಶಿಷ್ಯ, ಅಂಗಡಿಯವನು, ಅರಸ, ಮಂತ್ರಿ, ಸೈನಿಕರು, ಸೇನಾಧಿಪತಿ
ದೃಶ್ಯ ಒಂದು: ನಗರದ ರಸ್ತೆ.
(ಸಾಯಂಕಾಲದ ಹೊತ್ತು. ಕಾಷಾಯ ವಸ್ತ್ರ ಧರಿಸಿದ ಗುರು ಮತ್ತು ಶಿಷ್ಯ. ನಗರದ ಅಂದವನ್ನು ವೀಕ್ಷಿಸುತ್ತಾ ನಡೆಯುತ್ತಿದ್ದಾರೆ)
ಶಿಷ್ಯ: ನಾವೀಗ ಒಂದು ಹೊಸ ರಾಜ್ಯವನ್ನು ಪ್ರವೇಶಿಸಿದ್ದೇವೆ ಗುರೂಜಿ.
ಗುರು: ಹೌದು ಶಿಷ್ಯ. ನೋಡು. ನಾಮಫಲಕಗಳ ಅಕ್ಷರಗಳು ಬದಲಾಗಿವೆ. ಒಂದಕ್ಷರವನ್ನು ಸಹ ಓದಲು ಆಗುತ್ತಿಲ್ಲ. ನಿನ್ನಿಂದಾಗುತ್ತದೆಯೆ?
ಶಿಷ್ಯ: ಇಲ್ಲ ಗುರೂಜಿ. ಗುರುವಿಗೇ ಆಗುತ್ತಿಲ್ಲ ಎಂದ ಮೇಲೆ ಶಿಷ್ಯನಿಂದಾಗುತ್ತದೆಯೆ? (ನಗು)
ಗುರು: ಕೆಲವು ಶಿಷ್ಯರು ಗುರುವಿಗೆ ಗೊತ್ತಿಲ್ಲದಂತೆ ಏನನ್ನಾದರೂ ಕಲಿತುಕೊಂಡಿರುತ್ತಾರೆ. (ನಗು)
ಶಿಷ್ಯ: ನಾನು ಅಂಥವನಲ್ಲ ಗುರೂಜಿ. ನಾನು ಗುರುವಿನಷ್ಟೇ ಅಜ್ಞಾನಿ.
ಗುರು: ಹಾಗಂದ್ರೆ?
ಶಿಷ್ಯ: ಹಾಗಂದ್ರೆ, ಈ ಅಕ್ಷರ ಯಾವುದು, ಇದು ಯಾವ ಭಾಷೆ ಅಂತ ನಿಮಗೆ ತಿಳಿದಷ್ಟೇ ನನಗೂ ತಿಳಿದಿದೆ. (ನಗು)
ಗುರು: ನೀನು ಬಹಳ ಬುದ್ಧಿವಂತನಿರುವೆ. ನಾನೆಲ್ಲಾದರೂ ಈ ದೇಶದ ರಾಜನಾದರೆ ನೀನೇ ನನ್ನ ಪ್ರಧಾನ ಮಂತ್ರಿ. (ನಗು)
ಶಿಷ್ಯ: ವಿರಕ್ತರಾದ ನಿಮಗೂ ಆಳರಸನಾಗುವ ಬಯಕೆಯೆ ಗುರೂಜಿ?
ಗುರು: ಆಳರಸನಾಗುವ ಬಯಕೆ ಯಾರಿಗಿಲ್ಲ ಶಿಷ್ಯ? ಕುಂಟನಿಗಿದೆ. ಕುರುಡನಿಗಿದೆ. ಪರಮ ಮೂರ್ಖನಿಗಿದೆ. ಕೊನೆಯುಸಿರು ಬಿಡುತ್ತಾ ಹಾಸಿಗೆಯಲ್ಲಿ ಬಿದ್ದಿರುವವನಿಗಿದೆ. ಹಾಗಿರುವಾಗ ವಿರಕ್ತನಿಗಿರುವುದರಲ್ಲಿ ಏನು ತಪ್ಪು? ಇದಂತೂ ಶಾಂತ ಸುಂದರ ದೇಶ. ಇದನ್ನು ಆಳುವುದು ಬಹಳ ಸುಲಭ.
ಶಿಷ್ಯ: ಸುಂದರವೇನೋ ನಿಜ. ಆದರೆ ಶಾಂತ ಎಂದು ಹೇಗೆ ಹೇಳುವುದು?
ಗುರು: ಖಂಡಿತವಾಗಿಯೂ ಶಾಂತ. ಯಾಕೆಂದರೆ, ಈಗ ಸಾಯಂಕಾಲದ ಹೊತ್ತು ಹೌದು ತಾನೆ?
ಶಿಷ್ಯ: ಸೂರ್ಯ ಅಸ್ತಮಿಸುತ್ತಿದ್ದಾನೆ. ಆದ್ದರಿಂದ ಇದು ಸಾಯಂಕಾಲವಾಗಿರಲೇ ಬೇಕು.
ಗುರು: ಸಾಯಂಕಾಲದ ಹೊತ್ತು ಇಷ್ಟು ಪ್ರಶಾಂತವಾಗಿರುವ ನಗರವನ್ನು ನಾನು ಎಲ್ಲಿಯೂ ನೋಡಿಲ್ಲ.
ಶಿಷ್ಯ: ಅದು ನಿಜ. ರಸ್ತೆಯ ಮೇಲೆ ಒಬ್ಬನೇ ಒಬ್ಬ ಮನುಷ್ಯನಿಲ್ಲ. ಒಂದೇ ಒಂದು ಅಂಗಡಿ ಮುಂಗಟ್ಟಿನ ಬಾಗಿಲು ತೆರೆದಿಲ್ಲ.
(ನಗರದ ಮಹಾಗಡಿಯಾರ ಆರು ಬಡಿದ ಶಬ್ದ . ತಟ್ಟನೆ ಒಂದು ಮಹಾನಗರದ ಸಕಲ ಶಬ್ದಗಳೂ ಕೇಳಿಸತೊಡಗುತ್ತವೆ)
ಗುರು: ಏನದು ಶಿಷ್ಯ?
ಶಿಷ್ಯ: ಗಂಟೆ ಆರು ಬಡಿಯಿತು.
ಗುರು: ಅದು ನನಗೂ ಕೇಳಿಸಿದೆ. ಈ ಘನಘೋರ ಶಬ್ದವು ಏನು?
ಶಿಷ್ಯ: ಇಡೀ ನಗರದ ಜನರು ಎಚ್ಚರಗೊಂಡ ಹಾಗಿದೆ. ಎಲ್ಲರೂ ಬೀದಿಗಿಳಿಯುತ್ತಿದ್ದಾರೆ.
ಗುರು: ಏನು, ಏನಾದರೂ ದೊಂಬಿ ನಡೆಯುವ ಸೂಚನೆಯೆ?
ಶಿಷ್ಯ: ಅಲ್ಲ. ಯಾಕೆಂದರೆ, ಪ್ರತಿಯೊಂದು ಮನೆ, ಅಂಗಡಿ ಮುಂಗಟ್ಟಿನ ಬಾಗಿಲು ಕೂಡ ತೆರೆದುಕೊಳ್ಳುತ್ತಲಿದೆ.
ಗುರು: ಹಾಗಾದರೆ ಇದರಲ್ಲೇನೋ ವಿಚಿತ್ರವಿದೆ. ಸರಿಯಾಗಿ ನೋಡು ಇದು ಸೂಯಾಸ್ತಮಾನವೇ ಸೂಯೊದಯವೆ?
ಶಿಷ್ಯ: (ಆಕಾಶ ವೀಕ್ಷಿಸಿ) ಖಂಡಿತವಾಗಿಯೂ ಸೂಯಾಸ್ತಮಾನ ಗುರೂಜಿ. ಸೂರ್ಯ ಸ್ವಲ್ಪ ಮಾತ್ರವೇ ಉಳಿದಿದ್ದಾನೆ.
ಗುರು: ಈ ರಾಜ್ಯದ ಹೆಸರೇನೆಂದು ತಿಳಿಯಲೇ ಇಲ್ಲವಲ್ಲ?
ಶಿಷ್ಯ: ಹೆಸರು ಆ ಮೇಲೆ ತಿಳಿದರೆ ಸಾಕು. ಹಸಿವಾಗ್ತಾ ಇದೆ ಗುರೂಜಿ. ಇಲ್ಲಿ ಒಂದು ಹೋಟೆಲು ಬಾಗಿಲು ತೆರೀತಾ ಇದೆ. ತಿನ್ನಲು ಏನಾದರೂ ಸಿಗುವುದೊ ನೋಡೋಣ.
ಗುರು: ಭಾಷೆಯ ಸಮಸ್ಯೆ ಇದೆಯಲ್ಲ?
ಶಿಷ್ಯ: ತಿನ್ನಲು ಏನಾದ್ರೂ ಸಿಗುವುದೆ ಎಂದು ಕೇಳಲು ಭಾಷೆ ಯಾಕೆ? ಈ ಭಾಷೆ (ಸಂಜ್ಞೆಯಲ್ಲಿ ಸೂಚಿಸಿ) ಸಾಲದೆ?
ಗುರು: ಶಿಷ್ಯ, ನೀನು ಅಪಾರ ಬುದ್ಧಿವಂತನಿರುವೆ.
ಶಿಷ್ಯ: ನಿಮ್ಮ ಕೃಪೆ ಗುರೂಜಿ.
ಫೇಡ್ ಔಟ್
ದೃಶ್ಯ ಎರಡು: ಹೋಟೆಲು
(ಒಬ್ಬಿಬ್ಬರು ಗಿರಾಕಿಗಳು. ಗುರು ಶಿಷ್ಯ ಹೋಗಿ ಕುಳಿತುಕೊಳ್ಳುತ್ತಾರೆ. ಸರ್ವರ್ ಬರುತ್ತಾನೆ)
ಸರ್ವ: ನಿಮಗೆ ಏನು ಕೊಡಲಿ?
ಶಿಷ್ಯ: ತಿನ್ನಲು ಏನಿದೆ?
ಸರ್ವ: ಸದ್ಯ ಇಡ್ಲಿ ಮಾತ್ರ ಸಿದ್ದವಿದೆ. ಎರಡು ನಿಮಿಷದಲ್ಲಿ ಊಟ ಸಿದ್ಧವಾಗುತ್ತದೆ.
ಶಿಷ್ಯ: ಒಂದು ಇಡ್ಲಿಗೆ ಎಷ್ಟು?
ಸರ್ವ: ಒಂದು ರುಪಾಯಿ.
ಗುರು: ಊಟಕ್ಕೆ ಎಷ್ಟು?
ಶಿಷ್ಯ: ಒಂದು ರುಪಾಯಿ.
ಗುರು: ಏನು, ಒಂದು ಇಡ್ಲಿಗೂ ಒಂದು ರುಪಾಯಿ, ಒಂದು ಊಟಕ್ಕೂ ಒಂದು ರುಪಾಯಿಯೆ?
ಸರ್ವ: ಹೌದು.
ಗುರು: ಅದು ಹೇಗೆ?
ಸರ್ವ: ನೀವು ಈ ರಾಜ್ಯದವರಲ್ವ?
ಶಿಷ್ಯ: ಅಲ್ಲ.
ಸರ್ವ: ಹಾಗಾದರೆ ಕೇಳಿ. ರಾಜಾಜ್ಞೆಯ ಪ್ರಕಾರ ಇಲ್ಲಿ ಎಲ್ಲದಕ್ಕೂ ಒಂದೇ ಬೆಲೆ. ಕುದುರೆಗೂ ಒಂದು ರುಪಾಯಿ, ಕೋಳಿಗೂ ಒಂದು ರುಪಾಯಿ. ಷರ್ಟಿಗೂ ಒಂದು ರುಪಾಯಿ, ಕರವಸ್ತ್ರಕ್ಕೂ ಒಂದು ರುಪಾಯಿ.
ಗುರು: ಇದು ನಿಜಕ್ಕೂ ವಿಚಿತ್ರವಾಗಿದೆ. ನಮಗೆ ಊಟವೇ ಆದೀತು. ನಾವು ಕಾಯುತ್ತೇವೆ.
ಸರ್ವ: ರಾಜಾಜ್ಞೆಯಂತೆ ಹಣ ಮೊದಲೇ ಕೊಡಬೇಕು. ಎರಡು ಊಟಕ್ಕೆ ಎರಡು ರುಪಾಯಿ ಕೊಡಿ.
ಶಿಷ್ಯ: ಆಗಲಿ. (ಹಣ ಕೊಡುತ್ತಾನೆ)
ಗುರು:ರಾಜಾಜ್ಞೆ ಬೇರೆ ಏನು ಹೇಳುತ್ತದೆ?
ಸರ್ವ: ರಾಜಾಜ್ಞೆಯ ಪ್ರಕಾರ ಹಗಲು ರಾತ್ರಿಯಾಗಿದೆ, ರಾತ್ರಿ ಹಗಲಾಗಿದೆ. ಹಗಲು ಏನೇನು ನಡೆಯುತ್ತದೆಯೊ ಅದೆಲ್ಲ ರಾತ್ರಿ ನಡೆಯುತ್ತದೆ. ರಾತ್ರಿ ಏನೇನು ನಡೆಯುತ್ತದೆಯೊ ಅದೆಲ್ಲಾ ಹಗಲು ನಡೆಯುತ್ತದೆ.
ಶಿಷ್ಯ: ಅಂದರೆ, ಹಗಲು ನಿದ್ರೆ ರಾತ್ರಿ ಕೆಲಸ.
ಸರ್ವ:ಹೌದು.
ಗುರು: ಎಷ್ಟು ಕಾಲದಿಂದ ಇದು ಹೀಗಿದೆ?
ಸರ್ವ: ಏಳು ದಿನಗಳಿಂದ.
ಗುರು: ಇದು ಖಾಯಂ ವ್ಯವಸ್ಥೆಯೆ?
ಸರ್ವ: ಹೌದು.
ಶಿಷ್ಯ: ಅದ್ಭುತ! ಪ್ರತಿಯೊಂದು ವಸ್ತುವಿಗೂ ಒಂದು ರುಪಾಯಿ!
ಗುರು: ರಾತ್ರಿ ಹಗಲು, ಹಗಲು ರಾತ್ರಿ!
ಶಿಷ್ಯ: ನಿಜ. ಸೂಯೊದಯಕ್ಕೆ ದಿನ ಅಂತ್ಯ, ಸೂಯಾಸ್ತಮಾನಕ್ಕೆ ದಿನ ಆರಂಭ.
ಸರ್ವ: ಹೌದು. ಈಗ ಎಲ್ಲಾ ಸ್ಪಷ್ಟವಾಯಿತೆ?
ಶಿಷ್ಯ: ಆಯಿತು. ಗಂಡು ಮತ್ತು ಹೆಣ್ಣು ಅದಲು ಬದಲು ಆಗಿಲ್ಲವಷ್ಟೆ?
ಸರ್ವ: ಇಲ್ಲಿಯ ವರೆಗೆ ಆಗಿಲ್ಲ. (ನಗುತ್ತಾ) ನಿಮ್ಮ ಊಟ ಸಿದ್ಧವಾಗಿದೆ.
ಶಿಷ್ಯ: ಸಂತೋಷ. ನಾವು ಸಿದ್ಧವಾಗಿಯೆ ಇದ್ದೇವೆ.
ಫೇಡ್ ಔಟ್
ದೃಶ್ಯ ಮೂರು: ರಸ್ತೆ.
(ಆರಾಮವಾಗಿ ನಡೆಯುತ್ತಾ ಇದ್ದಾರೆ)
ಗುರು: ಈ ಒಂದು ರುಪಾಯಿಯ ಊಟ ಸಾಕು. ನಾವು ಬೇಗನೆ ಈ ದೇಶ ಬಿಟ್ಟು ಹೋಗುವುದು ಕ್ಷೇಮ.
ಶಿಷ್ಯ: ಯಾಕೆ ಗುರೂಜಿ?
ಗುರು: ಶಿಷ್ಯ, ಇದು ಮೂರ್ಖ ಸಾಮಾಜ್ಯ! ಇನ್ನು ಕೆಲವೇ ದಿನಗಳಲ್ಲಿ ಈ ದೇಶ ದೀವಾಳಿಯಾಗುತ್ತದೆ. ಇಲ್ಲಿ ಯಾವ ದಿನ ಯಾವ ರಾಜಾಜ್ಞೆ ಜಾರಿಯಾಗುತ್ತದೆ ಎಂದು ಹೇಳಲಿಕ್ಕಾಗದು. ಹೊರಡು ಬೇಗನೆ ಹೋಗಿಬಿಡೋಣ.
ಶಿಷ್ಯ: ಒಂದು ರುಪಾಯಿಗೆ ಒಂದು ವಸ್ತು ಸಿಗುವುದು ಎಂದರೆ ಇದಕ್ಕಿಂತ ಉತ್ತಮವಾದ ದೇಶ ಬೇರೆ ಎಲ್ಲಿದ್ದೀತು? ಗುರೂಜಿ, ಒಂದು ರುಪಾಯಿಗೆ ಒಂದು ಮನೆ ಕೊಂಡ್ಕೊಂಡು ಇಲ್ಲೇ ಇದ್ದುಬಿಡೋಣ.
ಗುರು: ಇಲ್ಲ. ಈ ದೇಶದಲ್ಲಿ ಯಾವ ಹೊತ್ತು ಯಾವ ಅಪಾಯ ಅಂತ ಹೇಳಲಿಕ್ಕಾಗದು.
ಶಿಷ್ಯ: ಇಲ್ಲ ಗುರೂಜಿ. ನಾನು ಇಲ್ಲಿ ಇರೋಣ ಎಂದು ಹೇಳುತ್ತಿದ್ದೇನೆ.
ಗುರು: ಇದು ನಿನ್ನ ಕೊನೆಯ ನಿರ್ಧಾರವೆ?
ಶಿಷ್ಯ: ಹೌದು ಗುರೂಜಿ.
ಗುರು: ಯೊಚಿಸಿ ನೋಡು ಶಿಷ್ಯ, ಯೊಚಿಸಿ ನೋಡು ಇದು ಮೂರ್ಖ ಅರಸನ ದೇಶ!
ಶಿಷ್ಯ: ಒಂದು ರುಪಾಯಿಗೆ ಒಂದು ಊಟ. ಊಟದ ಜೊತೆ ತುಪ್ಪ , ಮತ್ತು ಒಂದೊಂದು ಲಡ್ಡು! ಯಾವ ದೇಶದಲ್ಲಿದ್ದೀತು ಗುರೂಜಿ? ನಾನು ಇಲ್ಲೇ ಇರುತ್ತೇನೆ.
ಗುರು: ಹಾಗಾದ್ರೆ ನೀನು ಇರು. ನಾನು ಹೋಗುತ್ತೇನೆ. (ಹೋಗುತ್ತಾನೆ)
ಫೇಡ್ ಔಟ್
ದೃಶ್ಯ ನಾಲ್ಕು: ರಸ್ತೆ , ಮನೆ
(ಊಟ ಮುಗಿಸಿ ಶಿಷ್ಯ ಹೊಟ್ಟೆ ಸವರಿಕೊಂಡು ಬರುತ್ತಾನೆ. ತುಂಬಾ ದಪ್ಪಗಾಗಿದ್ದಾನೆ. ಕೈಯಲ್ಲಿ ಒಂದು ಬಾಳೆಗೊನೆ. ಕೆಲವೇ ಹಣ್ಣುಗಳಿವೆ.)
ಶಿಷ್ಯ: ಊಟ ಎಂದರೆ ಹೀಗಿರ್ಬೇಕು! ಒಂದು ರುಪಾಯಿಗೆ ಹೊಟ್ಟೆ ತುಂಬುವಷ್ಟು! ಎಂಥ ಅದ್ಭುತ ದೇಶ! ಒಂದು ಹಣ್ಣಿಗೂ ಒಂದು ರುಪಾಯಿ, ಗೊನೆಗೂ ಒಂದು ರುಪಾಯಿ. (ಬಾಳೆ ಹಣ್ಣು ತೆಗೆದು ತಿನ್ನುತ್ತಾ ) ರಾತ್ರಿ ಹಗಲು! ಹಗಲು ರಾತ್ರಿ! (ತಿನ್ನುತ್ತಾ ನಗುತ್ತಾ ಒಂದು ಮೂಲೆಯಲ್ಲಿ ಕುಳಿತುಕೊಳ್ಳುತ್ತಾನೆ. ಅತ್ತ ಕಡೆ ಒಂದು ಮನೆಯಿದೆ. ಒಬ್ಬ ಕಳ್ಳ ಬಂದು ಮನೆಯ ಗೋಡೆಯ ಬುಡದಲ್ಲಿ ಕುಳಿತು ಗೋಡೆಯನ್ನು ಕೊರೆಯತೊಡಗುತ್ತಾನೆ. ಅವನ ಕೆಲಸ ಶಿಷ್ಯನ ಕಣ್ಣಿಗೆ ಬೀಳುತ್ತದೆ. ಆದರೆ ಕಂಡೂ ಕಾಣದವನಂತಿರುತ್ತಾನೆ) ಬೇರೆ ದೇಶದಲ್ಲಿ ರಾತ್ರಿ ನಡೆಯುವ ಈ ಕೆಲಸ ಇಲ್ಲಿ ಹಗಲೇ ನಡೆಯುತ್ತದೆ! ಹಗಲುದರೋಡೆ! (ನಗುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ಗೋಡೆ ಕುಸಿದು ಕಳ್ಳನ ಮೇಲೆ ಬೀಳುತ್ತದೆ. ಕಳ್ಳ ಅಯೊ ಸತ್ತೆ! ಎಂದು ಬೊಬ್ಬಿಡುತ್ತಾನೆ. ಜನರು ಯಾರು ಯಾರು ಎಂದ ದನಿ. ಶಿಷ್ಯ ಅಲ್ಲಿಂದ ಓಡಿಹೋಗುತ್ತಾನೆ. ಓಡಿಕೊಂಡು ಬಂದ ಇಬ್ಬರು ಗಂಡಸರಲ್ಲಿ ಒಬ್ಬ ನಿದ್ದೆಗಣ್ಣಿನಲ್ಲಿದ್ದಾನೆ)
೧ನೆ: (ನಿದ್ದೆಗಣ್ಣಿನಲ್ಲಿ, ಬಾಯಿ ಆಕಳಿಸುತ್ತಾ) ಯಾರು?
೨ನೆ:ಒಬ್ಬ ಕಳ್ಳ.
೧ನೆ: ಏನು ಮಾಡ್ತಿದ್ದ?
೨ನೆ: ಕನ್ನ ಕೊರೆಯುತ್ತಿದ್ದ.
೧ನೆ: ಏನಾಗಿದೆ?
೨ನೆ: ಗೋಡೆ ಅವನ ಮೇಲೆ ಬಿದ್ದಿದೆ.
೧ನೆ: ಯಾಕೆ ಬಿದ್ದಿದೆ?
೨ನೆ:ಗೋಡೆ ಗಟ್ಟಿಯಾಗಿರಲಿಲ್ಲ.
೧ನೆ: ಸರಿಯಾಗಿ ಬಿದ್ದಿದೆಯೆ?
೨ನೆ: ಸರಿಯಾಗಿ ಬಿದ್ದಿದೆ.
೧ನೆ: ಕಳ್ಳ ಸತ್ತಿದ್ದಾನೆಯೆ?
೨ನೆ: ಹೌದು.
೧ನೆ: ಸರಿ ಹಾಗಾದರೆ. ಬಾ ನಿದ್ರೆಯನ್ನು ಮುಂದರಿಸೋಣ.
(ಇಬ್ಬರೂ ಹೋಗುತ್ತಾರೆ)
ಫೇಡ್ ಔಟ್
ದೃಶ್ಯ ಐದು: ಅರಮನೆ
(ಅರಸ ಮತ್ತು ಮಂತ್ರಿ. ಸೇವಕ ಬರುತ್ತಾನೆ. ಒಬ್ಬ ವ್ಯಕ್ತಿ ಮಹಾಪ್ರಭುಗಳನ್ನು ಕಾಣಲು ಬಂದಿದ್ದಾನೆ)
ಅರಸ: ಕರೆದುಕೊಂಡು ಬಾ.
(ಸೇವಕ ವ್ಯಕ್ತಿಯನ್ನು ಕರೆದುಕೊಂಡು ಬರುತ್ತಾನೆ. ವ್ಯಕ್ತಿ ಅರಸನಿಗೆ ವಂದಿಸಿ ನಿಲ್ಲುತ್ತಾನೆ)
ಅರಸ: ಯಾರು, ಏನಾಗಬೇಕು?
ವ್ಯ೧: ಮಹಾಪ್ರಭು, ನನ್ನ ತಮ್ಮ ಕರ್ತವ್ಯನಿರತನಾಗಿರುವ ಹೊತ್ತಿನಲ್ಲಿ ಸಾವನ್ನಪ್ಪಿದ್ದಾನೆ.
ಅರ: ಬಹಳ ಒಳ್ಳೆಯ ಸಾವು. ಏನು ಸಂಭವಿಸಿತು?
ವ್ಯ೧: ಗೋಡೆ ಅವನ ಮೇಲೆ ಬಿತ್ತು.
ಅರ: ಹೇಗೆ ಬಿತ್ತು?
ವ್ಯ೧: ಅವನು ಕನ್ನ ಕೊರೆಯುತ್ತಿದ್ದಾಗ ಶಿಥಿಲವಾದ ಗೋಡೆ ಜರಿದು ಅವನ ಮೇಲೆ ಬಿತ್ತು.
ಅರ: ಯಾರ ತಪ್ಪು?
ವ್ಯ೧: ಅಷ್ಟು ಕೆಳ ಗುಣಮಟ್ಟದ ಗೋಡೆಯನ್ನು ಕಟ್ಟಿದ ಮನೆಯ ಯಜಮಾನನದ್ದೇ ತಪ್ಪು. ಇದಕ್ಕೆ ಆತನಿಗೆ ತಕ್ಕ ಶಿಕ್ಷೆಯಾಗಬೇಕು.
ಅರ: (ಮಂತ್ರಿಯೊಡನೆ) ಈತನ ವಾದ ಸರಿಯಾಗಿದೆಯೆ?
ಮಂ: ಸರಿಯಾಗಿದೆ ಮಹಾಪ್ರಭು.
(ಅರಸ ಚಪ್ಪಾಳೆ ತಟ್ಟುತ್ತಾನೆ. ಸೈನಿಕ ಪ್ರತ್ಯಕ್ಷನಾಗುತ್ತಾನೆ)
ಅರ: ಈತನನ್ನು ಕರೆದುಕೊಂಡು ಹೋಗಿ ಈತ ತೋರಿಸುವ ಆತನನ್ನು ಕರೆದುಕೊಂಡು ಬಾ.
(ಸೈನಿಕ ಮತ್ತು ವ್ಯಕ್ತಿ೧ ನಿರ್ಗಮನ. ಮೈಮನಲ್ಲಿ: ರಾಜ ಮತ್ತು ಮಂತ್ರಿಯ ಸರಸ ಸಂಭಾಷಣೆ. ಅರಸನ ಮನ ಅಟ್ಟಹಾಸ. ಮಂತ್ರಿ ಹೊಟ್ಟೆ ಹಿಡಿದುಕೊಂಡು ನಗುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ಸೈನಿಕನೊಂದಿಗೆ ವ್ಯ೧ ಮತ್ತು ವ್ಯ ೨ (ಬಹಳ ತೆಳ್ಳಗಿನ ಮನುಷ್ಯ) ಪ್ರವೇಶ)
ಅರ: ನಿನ್ನ ಮನೆಗೆ ಕನ್ನ ಹಾಕುತ್ತಿದ್ದ ಕಳ್ಳನ ಮೇಲೆ ನಿನ್ನ ಮನೆಯ ಗೋಡೆ ಬಿದ್ದು ಕಳ್ಳ ಸತ್ತದ್ದು ನಿಜವೆ?
ವ್ಯ೨: ನಿಜ ಮಹಾಪ್ರಭು.
ಅರ: ಅಷ್ಟು ದುರ್ಬಲವಾದ ಗೋಡೆಯಿಂದಾಗಿ ಸಾವು ಸಂಭವಿಸಿದೆ. ಈ ಸಾವಿಗೆ ನೀನೇ ಹೊಣೆಗಾರನಾಗಿರುವೆ. ನಿನ್ನನ್ನು ಫಾಶಿ ಕತ್ತರಿಯಲ್ಲಿ ಹಾಕಿ ಸಾಯಿಸಲಾಗುವುದು.
ವ್ಯ೨ : ಇಲ್ಲ ಮಹಾಪ್ರಭು. ಉಪ್ಪಾರ ಗೋಡೆಯನ್ನು ಸರಿಯಾಗಿ ಕಟ್ಟಿಲ್ಲ . ಆದ್ದರಿಂದ ಗೋಡೆ ಕಳ್ಳನ ಮೇಲೆ ಬಿದ್ದಿದೆ. ಆದ್ದರಿಂದ ಉಪ್ಪಾರನೇ ಈ ಸಾವಿಗೆ ಹೊಣೆಗಾರನಾಗಿದ್ದಾನೆ.
ಅರ: (ಮಂತ್ರಿಯೊಡನೆ)ಈತನ ಅಭಿಪ್ರಾಯ ಸರಿಯೆ?
ಮಂ: ಸರಿ ಮಹಾಪ್ರಭು.
(ಅರಸ ಚಪ್ಪಾಳೆ ತಟ್ಟುತ್ತಾನೆ. ಸೈನಿಕ ಪ್ರತ್ಯಕ್ಷನಾಗುತ್ತಾನೆ)
ಅರ: ಈತನನ್ನು (ವ್ಯ೨ನನ್ನು ತೋರಿಸಿ)ಈತನನ್ನು ಕರೆದುಕೊಂಡು ಹೋಗಿ ಈತ ತೋರಿಸಿದ ಆತನನ್ನು ಕರೆದುಕೊಂಡು ಬಾ.
(ಸೈನಿಕನೊಂದಿಗೆ ವ್ಯಕ್ತಿಯ ನಿರ್ಗಮನ. ಮಂದ ಬೆಳಕಿನಲ್ಲಿ ರಾಜ, ಮಂತ್ರಿ ಮತ್ತು ವ್ಯ೧ ಅರ್ಧ ನಿಮಿಷ ಪಿsಜ್. ಸೈನಿಕ ಮತ್ತು ವ್ಯ೩ ಪ್ರವೇಶ)
ಅರ: ಈತನ (ವ್ಯ೨) ಮನೆಯ ಗೋಡೆಯನ್ನ್ನು ಕಟ್ಟಿದ ಉಪ್ಪಾರ ನೀನೆಯೊ?
ವ್ಯ೩ : ಹೌದು ಮಹಾಪ್ರಭು.
ಅರ: ನೀನು ಬಹಳ ದುರ್ಬಲವಾದ ಗೋಡೆಯನ್ನು ನಿರ್ಮಿಸಿದ್ದರಿಂದ ಕನ್ನ ಕೊರೆಯುತ್ತಿದ್ದ ಕಳ್ಳನ ಮೇಲೆ ಗೋಡೆ ಬಿದ್ದು ಕಳ್ಳ ಸತ್ತಿದ್ದಾನೆ. ಆದ್ದರಿಂದ ಅವನ ಸಾವಿಗೆ ನೀನು ಹೊಣೆಗಾರನಾಗಿರುವೆ. ನಿನ್ನನ್ನು ಫಾಶಿ ಕತ್ತರಿಯಲ್ಲಿ ಹಾಕಿ ಸಾಯಿಸಲಾಗುವುದು.
ವ್ಯ೩ : ಕ್ಷಮಿಸಬೇಕು ಮಹಾಪ್ರಭು. ಅದು ನನ್ನ ತಪ್ಪಲ್ಲ. ನಾನು ಆ ಗೋಡೆಯನ್ನು ಕಟ್ಟುತ್ತಿರುವಾಗ ಒಬ್ಬಳು ಸುಂದರಿಯಾದ ಹೆಂಗಸು ಕಾಲಿಗೆ ಝಣಝಣ ಎನ್ನುವ ಗೆಜ್ಜೆಗಳನ್ನು ಧರಿಸಿಕೊಂಡು ಬೀದಿಯಲ್ಲಿ ಆ ಕಡೆಗೊಮ್ಮೆ ಈ ಕಡೆಗೊಮ್ಮೆ ಹೋಗುತ್ತಾ ನನ್ನ ಗಮನ ಸೆಳೆಯುತ್ತಿದ್ದಳು. ಆದ್ದರಿಂದ ನನಗೆ ಕೆಲಸದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಆಗಲಿಲ್ಲ. ಈ ತಪ್ಪಿಗೆ ಆ ಹೆಂಗಸೇ ಹೊಣೆಗಾರಳು.
ಅರ: (ಮಂತ್ರಿಯೊಡನೆ) ಈತನ ಅಭಿಪ್ರಾಯ ಸರಿಯೆ?
ಮಂ: ಸರಿ ಮಹಾಪ್ರಭು.
(ಅರಸ ಚಪ್ಪಾಳೆ ತಟ್ಟುತ್ತಾನೆ. ಸೈನಿಕ ಪ್ರತ್ಯಕ್ಷನಾಗುತ್ತಾನೆ)
ಅರ: ಈತನನ್ನು (ವ್ಯ೩ನ್ನು ತೋರಿಸಿ) ಕರೆದುಕೊಂಡು ಹೋಗಿ ಈತ ತೋರಿಸಿದ ಹೆಂಗಸನ್ನು ಕರೆದುಕೊಂಡು ಬಾ.
(ಸೈನಿಕನೊಂದಿಗೆ ವ್ಯಕ್ತಿಯ ನಿರ್ಗಮನ. ಮಂದ ಬೆಳಕಿನಲ್ಲಿ ರಾಜ, ಮಂತ್ರಿ ಮತ್ತು ವ್ಯ೧ ಮತ್ತು ವ್ಯ ೨ ಅರ್ಧ ನಿಮಿಷ ಪಿsಜ್. ಸೈನಿಕ ಮತ್ತು ಹೆಂಗಸು ಪ್ರವೇಶ)
ಅರ: ಈ ಉಪ್ಪಾರ ಈತನ (ವ್ಯ೨ನ್ನು ತೋರಿಸಿ) ಮನೆಯ ಗೋಡೆಯನ್ನ್ನು ಕಟ್ಟುತ್ತಿರುವಾಗ ನೀನು ಕಾಲಿಗೆ ಕಾಲಿಗೆ ಝಣಝಣ ಎನ್ನುವ ಗೆಜ್ಜೆಗಳನ್ನು ಕಟ್ಟಿಕೊಂಡು ಬೀದಿಯಲ್ಲಿ ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ಹೋದದ್ದು ಹೌದಾ?
ಹೆಂ: ಹೌದು ಮಹಾಪ್ರಭು.
ಅರ: ನೀನು ಹಾಗೆ ಮಾಡಿದ್ದರಿಂದ ಉಪ್ಪ್ಪಾರನ ಗಮನ ನಿನ್ನ ಕಡೆಗೆ ಹೋಗಿ ಅವನು ಕಟ್ಟುತ್ತಿದ್ದ ಗೋಡೆ ದುರ್ಬಲವಾಯಿತು. ಆ ಕಾರಣದಿಂದ ಗೋಡೆ ಕನ್ನ ಕೊರೆಯುತ್ತಿದ್ದ ಕಳ್ಳನ ಮೇಲೆ ಬಿದ್ದು ಕಳ್ಳ ಸತ್ತ. ಈ ಸಾವಿಗೆ ನೀನೇ ಹೊಣೆಗಾರಳಾಗಿರುವೆ. ಆದ್ದರಿಂದ ನಿನ್ನನ್ನು ಫಾಶಿಕತ್ತರಿಯಲ್ಲಿ ಸಿಕ್ಕಿಸಿ ಸಾಯಿಸಲಾಗುವುದು.
ಹೆಂ: ಕ್ಷಮಿಸಬೇಕು ಮಹಾಪ್ರಭು. ಉಪ್ಪಾರನ ಗಮನವನ್ನು ಸೆಳೆಯುವುದು ನನ್ನ ಉದ್ದೇಶವಾಗಿರಲಿಲ್ಲ. ನಾನು ನನ್ನ ಮಗಳ ಮಂಗಳ ಸೂತ್ರವನ್ನು ಮಾಡಿಸಲು ಆ ಬೀದಿಯ ಕೊನೆಯಲ್ಲಿರುವ ಅಕ್ಕಸಾಲಿಗನಿಗೆ ಚಿನ್ನ ಕೊಟ್ಟಿದ್ದೆ. ಮಗಳ ಮದುವೆ ಸಮೀಪಿಸುತ್ತಲಿತ್ತು. ಅವನು ಈಗ ಬಾ ಮತ್ತೆ ಬಾ ಎಂದು ಸತಾಯಿಸುತ್ತಲಿದ್ದ. ಆದ್ದರಿಂದ ಈ ಸಾವಿಗೆ ಆ ಅಕ್ಕಸಾಲಿಗನೇ ಹೊಣೆಗಾರನಾಗಿದ್ದಾನೆ.
ಅರ: (ಮಂತ್ರಿಯೊಡನೆ) ಈಕೆಯ ಅಭಿಪ್ರಾಯ ಸರಿಯೆ?
ಮಂ: ಸರಿ ಮಹಾಪ್ರಭು.
(ಅರಸ ಚಪ್ಪಾಳೆ ತಟ್ಟುತ್ತಾನೆ. ಸೈನಿಕ ಪ್ರತ್ಯಕ್ಷನಾಗುತ್ತಾನೆ)
ಅರ: ಈಕೆಯನ್ನು ಕರೆದುಕೊಂಡು ಹೋಗಿ ಈಕೆ ತೋರಿಸುವ ಅಕ್ಕಸಾಲಿಗನನ್ನು ಕರೆದುಕೊಂಡು ಬಾ.
(ಹೆಂಗಸು ಮತ್ತು ಸೈನಿಕನ ನಿರ್ಗಮನ. ಮಂದ ಬೆಳಕಿನಲ್ಲಿ ರಾಜ, ಮಂತ್ರಿ, ವ್ಯ೧ ವ್ಯ ೨ಮತ್ತು ವ್ಯ೩ ಅರ್ಧ ನಿಮಿಷ ಪಿsಜ್. ಹೆಂಗಸು ಮತ್ತು ಸೈನಿಕನ ಪ್ರವೇಶ)
ಅರ: ನೀನು ಏನು ಕೆಲಸ ಮಾಡುತ್ತಿ?
ಅಕ್ಕ: ಮಹಾಪ್ರಭು, ನಾನು ಅಕ್ಕಸಾಲಿಗ
ಅರ: ನೀನು ಈಕೆಯ ಮಗಳ ಮಂಗಳ ಸೂತ್ರವನ್ನು ಮಾಡಲು ಚಿನ್ನವನ್ನು ತೆಗೆದುಕೊಂಡು, ಹೇಳಿದ ಹೊತ್ತಿಗೆ ಮಾಡಿಕೊಡದೆ, ಈಗ ಬಾ ಮತ್ತೆ ಬಾ ಎಂದು ಸತಾಯಿಸಿದ್ದರಿಂದ, ಈಕೆ ಬೀದಿಯಲ್ಲಿ ಆ ಕಡೆ ಈ ಕಡೆ ಹೋಗುವ ಪರಿಸ್ಥಿತಿ ನಿಮಾಣವಾಗಿ, ಗೋಡೆಕಟ್ಟುತ್ತಿದ್ದ ಉಪ್ಪಾರನ ಗಮನ ಈಕೆಯ ಕಡೆಗೆ ಹೋಗಿ, ಆ ಗೋಡೆಯು ದುರ್ಬಲವಾಗಿ, ಕನ್ನ ಕೊರೆಯುತ್ತಿದ್ದ ಕಳ್ಳನ ಮೇಲೆ ಗೋಡೆ ಬಿದ್ದು ಕಳ್ಳ ಸತ್ತಿದ್ದಾನೆ. ಆದ್ದರಿಂದ ಕಳ್ಳನ ಸಾವಿಗೆ ನೀನೇ ಹೊಣೆಗಾರನಾಗಿರುವೆ. ನಿನ್ನನ್ನು ಫಾಶಿಕತ್ತರಿಯಲ್ಲಿ ಸಿಕ್ಕಿಸಿ ಸಾಯಿಸಲಾಗುವುದು.
ಅಕ್ಕ: ಕ್ಷಮಿಸಬೇಕು ಮಹಾಪ್ರಭು. ಈಕೆಯ ಮಗಳ ಮಂಗಳಸೂತ್ರವನ್ನು ಮಾಡಲು ನಾನು ಒಪ್ಪಿಕೊಂಡದ್ದು ನಿಜ. ಆದರೆ ಆ ಕೆಲಸವನ್ನು ಮಾಡಲಿಕ್ಕೆ ಅವಕಾಶ ಕೊಡದೆ, ತನ್ನ ಮಗಳ ಆಭರಣಗಳನ್ನು ಅದಕ್ಕೆ ಮೊದಲು ಮಾಡಿಕೊಡಲೇಬೇಕು ಎಂದು ನನ್ನ ಮೇಲೆ ಒತ್ತಾಯ ಹೇರಿದ ಶ್ರೀಮಂತನಿಂದಾಗಿ ನನಗೆ ಈಕೆಯ ಕೆಲಸವನ್ನು ಸಕಾಲದಲ್ಲಿ ಮಾಡಿಕೊಡಲು ಆಗಲಿಲ್ಲ. ಆದ್ದರಿಂದ ಆ ಶ್ರೀಮಂತನೇ ಅದಕ್ಕೆ ಹೊಣೆಗಾರನಾಗಿದ್ದಾನೆ.
ಅರ: (ಮಂತ್ರಿಯೊಡನೆ) ಈತನ ಅಭಿಪ್ರಾಯ ಸರಿಯೆ?
ಮಂ: ಸರಿ ಮಹಾಪ್ರಭು.
(ಅರಸ ಚಪ್ಪಾಳೆ ತಟ್ಟುತ್ತಾನೆ. ಸೈನಿಕ ಪ್ರತ್ಯಕ್ಷನಾಗುತ್ತಾನೆ)
ಅರ: ಈ ಅಕ್ಕಸಾಲಿಗನ ಜೊತೆ ಹೋಗಿ ಆ ಶ್ರೀಮಂತನನ್ನು ಕರೆದುಕೊಂಡು ಬಾ.
ಅಕ್ಕ: (ತಕ್ಷಣ (ವ್ಯ೨)ವನ್ನು ತೋರಿಸಿ) ಆ ಶ್ರೀಮಂತ ಇಲ್ಲೇ ಇದ್ದ್ದಾನೆ ಮಹಾಪ್ರಭು. ಯಾವ ಮನೆಯ ಗೋಡೆಯು ಕತರವ್ಯನಿರತ ಕಳ್ಳನ ಮೇಲೆ ಬಿತ್ತೋ ಆ ಮನೆಯ ಒಡೆಯನೂ ಈತನೇ ಆಗಿದ್ದಾನೆ.
ಅರ: ಹೌದಾ, ನೀನೆಯೊ ಆ ಶ್ರೀಮಂತ ಮತ್ತು ಆ ಮನೆಯ ಒಡೆಯ?
ಅಕ್ಕ: ಹೌದು ಮಹಾಪ್ರಭು.
ಅರ: ಈತನನ್ನು ಫಾಶಿಕತ್ತರಿಯಲ್ಲಿ ಸಿಕ್ಕಿಸಿ ಸಾಯಿಸಿ.
(ಅರಸ ಚಪ್ಪಾಳೆ ತಟ್ಟುತ್ತಾನೆ. ಇಬ್ಬರು ಸೈನಿಕರು ಬರುತ್ತಾರೆ)
ಸೈ೧: (ಶ್ರೀಮಂತನನ್ನು ಪರಾಂಬರಿಸಿ) ಮಹಾಪ್ರಭು.
ಅರ: ಏನು?
ಸೈ೧: ಈತನನ್ನು ಫಾಶಿ ಕತ್ತರಿಯಲ್ಲಿ ಸಿಲುಕಿಸಲು ಸಾಧ್ಯವಿಲ್ಲ ಮಹಾಪ್ರಭು.
ಅರ: ಯಾಕೆ ಸಾಧ್ಯವಿಲ್ಲ?
ಸೈ೧: ಈತ ಬಹಳ ತೆಳ್ಳಗಿದ್ದಾನೆ. ಫಾಶಿ ಕತ್ತರಿಗೆ ಸಿಲುಕಿಸಬೇಕಾದರೆ ಮನುಷ್ಯ ದಪ್ಪಗಿರಬೇಕಾಗುತ್ತದೆ.
ಅರ: (ಮಂತ್ರಿಯೊಡನೆ) ಈತನ ಅಭಿಪ್ರಾಯ ಸರಿಯೆ?
ಮಂ: ಸರಿ ಮಹಾಪ್ರಭು.
ಅರ: (ಸೈನಿಕರೊಡನೆ) ಸರಿ ಹಾಗಾದರೆ ಇವನನ್ನು ಬಿಟ್ಟುಬಿಡಿ. ಇವನ ಬದಲು ಒಂದು ದಪ್ಪನೆಯ ಮನುಷ್ಯನನ್ನು ಕರೆದುಕೊಂಡು ಬನ್ನಿ.
ಫೇಡ್ ಔಟ್
ದೃಶ್ಯ ಆರು: ಬಯಲು
(ಅರಸ ಮತ್ತು ಮಂತ್ರಿ ಮತ್ತು ಮೂರನೆಯ ದೃಶ್ಯದಲ್ಲಿದ್ದ ಮಂದಿ. ಸೈನಿಕರು ಶಿಷ್ಯನನ್ನು ಕರೆದುಕೊಂಡು ಬರುತ್ತಾರೆ. ಶಿಷ್ಯ ತುಂಬಾ ದಪ್ಪಗಾಗಿದ್ದಾನೆ)
ಅರ: (ಮಂತ್ರಿಯೊಡನೆ)ನಿನ್ನ ಅಭಿಪ್ರಾಯದಲ್ಲಿ ಇಷ್ಟು ದಪ್ಪ ಸಾಕೆ?
ಮಂ: ಸಾಕು ಮಹಾಪ್ರಭು.
ಅರ: (ಸೈನಿಕರೊಡನೆ) ಈತನನ್ನು ಯಾಕೆ ಫಾಶಿ ಕತ್ತರಿಯಲ್ಲಿ ಹಾಕಲಾಗುತ್ತದೆ ಎಂದು ಈತನಿಗೆ ತಿಳಿಸಿದ್ದೀರಾ?
ಸೈ೧, ಸೈ೨: ತಿಳಿಸಿದ್ದೇವೆ ಮಹಾಪ್ರಭು.
ಶಿಷ್ಯ: (ದು:ಖಿಸುತ್ತಾ) ನನ್ನ ಅಪರಾಧವು ಏನು ಮಹಾಪ್ರಭು?
ಅರ: ಅಪರಾಧವಲ್ಲ. ಫಾಶಿ ಕತ್ತರಿಯಲ್ಲಿ ಸಿಲುಕಿಸಲು ನೀನು ಅತಿ ಮೇಲಿನ ಅರ್ಹತೆಯುಳ್ಳ ಮನುಷ್ಯನಾಗಿರುವೆ.
ಶಿಷ್ಯ: ಅಯೊ ಶಿವನೆ. ಮಹಾಪ್ರಭು. ನನ್ನನ್ನು ಕತ್ತರಿಗೆ ಸಿಕ್ಕಿಸುವ ಮೊದಲು ಕೊನೆಯದಾಗಿ, ಒಂದು ನಿಮಿಷ ದೇವರನ್ನು ಪ್ರಾರ್ಥಿಸಲು ಒಂದು ಅವಕಾಶ ನೀಡಬೇಕು ಮಹಾಪ್ರಭು.
ಅರ: (ಮಂತ್ರಿಯೊಡನೆ) ಕೊಡಬಹುದೆ?
ಮಂತ್ರಿ: ಕೊಡಬಹುದು ಮಹಾಪ್ರಭು.
ಅರ: ಸರಿ ಮಾಡು.
(ಶಿಷ್ಯ ಒಂದು ಮೂಲೆಗೆ ಹೋಗಿ ನಿಂತುಕೊಂಡು) ಗುರೂಜಿ. ನಿಮ್ಮ ಮಾತನ್ನು ಕೇಳದ್ದರಿಂದ ನನಗೆ ಈ ಗತಿ ಬಂದೊದಗಿದೆ. ನಾನು ನಿಮ್ಮನ್ನು ದೇವರಿಗೆ ಸಮಾನ ಎಂದು ನಂಬಿದ್ದೇನೆ. ನೀವೇ ನನ್ನನ್ನು ರಕ್ಷಿಸಬೇಕು.
(ಗುರುವಿನ ಪ್ರವೇಶ. ಗುರುವಿನ ವರ್ಚಸ್ಸಿನ ಪ್ರಭಾವದಿಂದಾಗಿ ಎಲ್ಲರೂ ತಲೆಬಾಗಿ ವಂದಿಸುತ್ತಾರೆ. ಶಿಷ್ಯ ಗುರುವಿನ ಪಾದಕ್ಕೆ ಬೀಳುತ್ತಾನೆ)
ಶಿಷ್ಯ: ಗುರೂಜಿ, ನನ್ನನ್ನು ಉದ್ಧರಿಸಬೇಕು.
ಗುರು: (ಅರಸನ ಕಡೆಗೆ ತಿರುಗಿ) ಇಲ್ಲಿ ಏನೇನು ಸಂಭವಿಸಿದೆ ಎಂದು ನಾನು ದಿವ್ಯಜ್ಞಾನದಿಂದ ಕಂಡುಕೊಂಡಿದ್ದೇನೆ. ನಮ್ಮ ಗುರುಸಂಪ್ರದಾಯದ ಪ್ರಕಾರ ಶಿಷ್ಯ ಯಾವ ಶಿಕ್ಷೆಗೆ ಗುರಿಯಾಗುತ್ತಾನೋ ಅದನ್ನು ಮೊದಲು ಗುರು ಸ್ವೀಕರಿಸಬೇಕು. ಆದ್ದರಿಂದ ಮೊದಲು ನನ್ನ ತಲೆಯನ್ನು ಕತ್ತರಿಸಿರಿ. ಅನಂತರ ನನ್ನ ಶಿಷ್ಯನ ತಲೆಯನ್ನು ಕತ್ತರಿಸಿರಿ.
(ಎಲ್ಲರೂ ಖೇದ ಮತ್ತು ಆಶ್ಚರ್ಯದ ಉದ್ಗಾರ ಹೊರಡಿರುತ್ತಾರೆ)
ಶಿಷ್ಯ: ಸಾಧ್ಯವಿಲ್ಲ ಗುರೂಜಿ. ಮೊದಲು ನನ್ನ ತಲೆಯನ್ನು ಕತ್ತರಿಸಲಿ.
ಗುರು: ಮೊದಲು ನನ್ನ ತಲೆಯನ್ನು ಕತ್ತರಿಸಿರಿ.
ಶಿಷ್ಯ: ನನ್ನ ತಲೆ.
ಗುರು: ನನ್ನ ತಲೆ.
ಶಿಷ್ಯ: ನನ್ನ ತಲೆ.
(ಗುರು ಶಿಷ್ಯನೊಡನೆ ಸಂಜ್ಞೆಯ ಮೂಲಕ ಸುಮ್ಮನಿರುವಂತೆ ಸೂಚಿಸಿ, ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಿ ಅವನ ಕಿವಿಯಲ್ಲಿ ಏನೋ ಹೇಳುತ್ತಾನೆ. ಇಬ್ಬರೂ ಅರಸನ ಬಳಿ ಬರುತ್ತಾರೆ)
ಗುರು: ನಾವು ಒಪ್ಪಂದಕ್ಕೆ ಬಂದಿದ್ದೇವೆ. ಏನೆಂದರೆ, ಮೊದಲು ನನ್ನ ತಲೆಯನ್ನು ಕತ್ತರಿಸಬೇಕು. ಅನಂತರ ನನ್ನ ಶಿಷ್ಯನ ತಲೆಯನ್ನು ಕತ್ತರಿಸಬೇಕು. ಆದರೆ ಮಹಾರಾಜರಲ್ಲಿ ಒಂದು ಬಿನ್ನಹ.
ಅರ: ಏನು?
ಗುರು: ಶಿಕ್ಷೆಯನ್ನು ಜಾರಿಗೊಳಿಸುವ ಸ್ಥಳ ಮತ್ತು ಹೊತ್ತನ್ನು ಬದಲಿಸಬೇಕು. ಅರಮನೆಯ ಮುಂದಿನ ಬಯಲಿನಲ್ಲಿರವ ಅಶ್ವತ್ಥಮರದ ಅಡಿಯಲ್ಲಿ ನಾಳೆ ರಾತ್ರಿ ಅಂದರೆ ಹಗಲು ಚಂದ್ರ ಸರಿಯಾಗಿ ನೆತ್ತಿ ಯ ಮೇಲೆ ಬಂದ ಕೂಡಲೇ…
ರಾಜ: ರಾತ್ರಿಯಲ್ಲ, ಹಗಲು.
ಗುರು: ಹೌದು ಹೌದು ಹಗಲು. ಚಂದ್ರ ಸರಿಯಾಗಿ ನೆತ್ತಿಯ ಮೇಲೆ ಬಂದ ಕೂಡಲೇ
ಶಿಕ್ಷೆಯನ್ನ ಜಾರಿಗೊಳಿಸಿರಿ.
ಅರ: ಈ ಬದಲಾವಣೆಯ ಅಗತ್ಯವೇನು?
ಗುರು: ನಮ್ಮ ತ್ಯಾಗಕ್ಕೆ ದೇವರಿಂದ ನಮಗೆ ಉಡುಗೊರೆ ದೊರೆಯುತ್ತದೆ ಮಹಾರಾಜ.
ಅರ: ಎಂಥ ಉಡುಗೊರೆ?
ಗುರು: (ಅರಸನ ಬಳಿ ಬಂದು ಅವನ ಕಿವಿಯಲ್ಲಿ) ಅದು ಒಂದು ರಹಸ್ಯ ವಿಷಯ ಮಹಾರಾಜ. ಈ ವಿಷಯವು ಬೇರೆ ಯಾರಿಗೂ ತಿಳಿಯಬಾರದು. ಆದ್ದರಿಂದ ಅದನ್ನು ಎಲ್ಲರ ಸಮಕ್ಷಮ ಹೇಳುವಂತಿಲ್ಲ.
ಅರ: (ಚಪ್ಪಾಳೆ ಬಡಿದು) ಎಲ್ಲರೂ ದೂರ ಹೋಗಿ. (ಎಲ್ಲರೂ ದೂರ ಹೋಗುತ್ತಾರೆ)
ಮಂತ್ರಿ: ನಾನು ಕೂಡ?
ಗುರು: ಮಂತ್ರಿ ಮಹಾಶಯರು ಇರಬಹುದು ಮಹಾರಾಜ, ನಾಳೆ ಪೂರ್ಣಿಮೆ. ಸಾಧಾರಣ ಪೂರ್ಣಿಮೆಯಲ್ಲ ಮಹಾರಾಜ, ತ್ರಿಭುವನ ಪೂರ್ಣಿಮೆ. ನಾಳೆ ಚಂದ್ರ ಸರಿಯಾಗಿ ನೆತ್ತಿಯ ಮೇಲೆ ಬರುವ ಶುಭ ಘಳಿಗೆಯಲ್ಲಿ, ರಾಜಾಜ್ಞೆಯ ಪ್ರಕಾರ ಶಿರಚ್ಛೇದನಗೊಳ್ಳುವ ಮೊದಲ ವ್ಯಕ್ತಿ ಮುಂದಿನ ಜನ್ಮದಲ್ಲಿ ಅರಸನಾಗಿ ಹುಟ್ಟುತ್ತಾನೆ. ಎರಡನೆಯ ವ್ಯಕ್ತಿ ಪ್ರಧಾನ ಮಂತ್ರಿಯಾಗಿ ಹುಟ್ಟುತ್ತಾನೆ.
ಅರ: ಹಾಗೊ? (ಚಪ್ಪಾಳೆ ಬಡಿಯುತ್ತಾನೆ. ಇಬ್ಬರು ಸೈನಿಕರು ಪ್ರತ್ಯಕ್ಷವಾಗುತ್ತಾರೆ) ಇವರನ್ನು ಕೊಂಡುಹೋಗಿ ಸೆರೆಮನೆಯಲ್ಲಿ ಹಾಕಿ. ನಾಳೆ ಚಂದ್ರ ಸರಿಯಾಗಿ ನೆತ್ತಿಯ ಮೇಲೆ ಬಂದ ಕೂಡಲೇ ಅರಮನೆಯ ಮುಂದಿರುವ ಅಶ್ವತ್ಥ ಮರದಡಿಗೆ ಕೊಂಡುಹೋಗಿ ಇಬ್ಬರ ತಲೆಯನ್ನೂ ಕತ್ತರಿಸಿ ಹಾಕಿ. ಮೊದಲು ಗುರುವಿನದ್ದು ಆಮೇಲೆ ಶಿಷ್ಯನದ್ದು. ನೆನಪಿರಲಿ. (ಸೈನಿಕರು ಗುರು ಮತ್ತು ಶಿಷ್ಯನನ್ನು ಕರೆದೊಯ್ಯುತ್ತಾರೆ) ಇನ್ನು ಇವರು ಹೇಗೆ ಮುಂದಿನ ಜನ್ಮದಲ್ಲಿ ರಾಜ ಮತ್ತು ಪ್ರಧಾನಿಯಾಗುತ್ತಾರೆ ನೋಡೋಣ. ಹೇಗಿದೆ ನನ್ನ ತಂತ್ರ?
ಮಂತ್ರಿ: ನನಗೆ ಅರ್ಥವಾಗಲಿಲ್ಲ ಮಹಾಪ್ರಭು.
ಅರ: ಈ ಗುರು ಮತ್ತು ಶಿಷ್ಯ ತಮ್ಮಷ್ಟು ಬುದ್ಧಿವಂತರು ಬೇರೆ ಇಲ್ಲ ಎಂದುಕೊಂಡಿದ್ದಾರೆ. ಮುಂದಿನ ಜನ್ಮದಲ್ಲಿ ಕೂಡ ಅರಸ ಮತ್ತು ಪ್ರಧಾನಿ ನಾನು ಮತ್ತು ನೀನೇ ಆಗಬೇಕು.
ಮಂತ್ರಿ: ನಿಜ ಮಹಾಪ್ರಭು. ಆದರೆ ಹೇಗೆ ಮಹಾಪ್ರಭು?
ಅರ: ನಿಜ. ಅವರಿಗೆ ನಿದ್ರೆ ಬಂದೊಡನೆ, ಅವರ ಉಡುಪು ಕಳಚಿ ನಾವು ಧರಿಸಿ ಅವರ ಜಾಗದಲ್ಲಿ ನಾವು ಮಲಗೋಣ.
ಮಂತ್ರಿ: ಉಡುಪು ಕಳಚುವಾಗ ಅವರಿಗೆ ಎಚ್ಚರವಾದರೆ?
ಅರ: ಎಚ್ಚರವಾಗದ ಹಾಗೆ ಅವರಿಗೆ ಕೊಡುವ ಆಹಾರದಲ್ಲಿ ನಿದ್ರೆ ಮಾತ್ರೆ ಹಾಕಿಸು.
ಮಂತ್ರಿ: ಹಾಗೇ ಮಾಡೋಣ.
ಫೇಡ್ ಔಟ್
ದೃಶ್ಯ ಏಳು: ಬಯಲು. ಪ್ರಾತ:ಕಾಲ
(ಒಂದು ಕಡೆ ಕಾಷಾಯ ವಸ್ತ್ರ ಧರಿಸಿದ ಅರಸ ಮತ್ತು ಮಂತ್ರಿಯ ಶವಗಳನ್ನಿರಿಸಲಾಗಿದೆ. ಶೋಕಗ್ರಸ್ತರಾದ ಮಂತ್ರಿಗಳು, ಸೇನಾನಾಯಕ, ಸೈನಿಕರು ಮತ್ತು ಇತರ ಜನರು)
ಸೇ: (ಸೈನಿಕರೊಡನೆ) ಆ ಗುರು ಮತ್ತು ಶಿಷ್ಯರ ಬದಲು ಅರಸ ಮತ್ತು ಮಂತ್ರಿ ತಲೆ
ಕಳೆದುಕೊಂಡಿದ್ದಾರೆ. ಇದು ಹೇಗೆ ನಡೆಯಿತು?
ಸೈ೧: ಹೇಗೆಂದು ನಮಗೆ ಅರ್ಥವಾಗುತ್ತ್ತಿಲ್ಲ.
ಸೈ೨: ಆ ಗುರು ಮತ್ತು ಶಿಷ್ಯರು ಮಹಾಪುರುಷರೆಂಬುದರಲ್ಲಿ ಸಂದೇಹವಿಲ್ಲ.
ಸೇ: ಅವರು ಎಲ್ಲಿದ್ದಾರೆ?
ಸೈ೧: ಅವರು ಸೆರೆಮನೆಯಲ್ಲಿಯೆ ಇರಬೇಕೆಂದು ತೋರುತ್ತದೆ.
ಸೇ: ಅವರನ್ನು ಇಲ್ಲಿಗೆ ಕರೆದುಕೊಂಡು ಬನ್ನಿ
(ಸೈನಿಕರ ನಿರ್ಗಮನ)
ಸೇ: (ನೆರೆದ ಮಂದಿಯೊಡನೆ) ನಮ್ಮ ಮಹಾರಾಜ ಮತ್ತು ಪ್ರಧಾನಿಯ ತಲೆಯನ್ನು ಪ್ರಮಾದವಶಾತ್ ನಮ್ಮ ಸೈನಿಕರು ಕತ್ತರಿಸಿದ್ದಾರೆ. (ಜನರಿಂದ ನಮ್ಮ ಸೈನಿಕರೆ? ಹೇಗಾಯಿತು? ವಿಚಿತ್ರ, ಪ್ರಮಾದ? ಇತ್ಯಾದಿ ಗುಸುಗುಸು ಮಾತುಗಳು ಮತ್ತು ಗುಲ್ಲು) ಮಹಾರಾಜರಿಗೆ ಮಕ್ಕಳಿಲ್ಲ. ನಮ್ಮ ದೇಶವು ಅರಾಜಕವಾಗಿದೆ. ನಾವು ಈಗ ರಾಜಪಟ್ಟಕ್ಕೆ ಯಾರನ್ನು ಆರಿಸುವುದು ಎಂದು ತೀಮಾನಿಬೇಕಾಗಿದೆ.
(ಗುರು ಮತ್ತು ಶಿಷ್ಯನನ್ನು ಸೈನಿಕರು ಕರೆದುಕೊಂಡು ಬರುತ್ತಾರೆ. ರಾಜನ ಉಡುಪಿನಲ್ಲಿ ಗುರು ಮತ್ತು ಮಂತ್ರಿಯ ಉಡುಪಿನಲ್ಲಿ ಶಿಷ್ಯ)
ಸೇ: (ಅವರನ್ನು ನೋಡಿ ಆಶ್ಚರ್ಯದಿಂದ) ಇದು ಹೇಗಾಯಿತು?
ಗುರು: ನಾವು ಗಾಢನಿದ್ರೆಯಲ್ಲಿದ್ದಾಗ ನಡುರಾತ್ರಿಗೆ ಸ್ವಲ್ಪ ಮೊದಲು ನಮ್ಮಉಡುಪನ್ನು ಬಲವಂತವಾಗಿ ಕಳಚಿ ನಮಗೆ ಬೇರೆ ಉಡುಪು ತೊಡಿಸಲಾಯಿತು. ಯಾರು ಯಾಕೆ ಎಂದು ಕೇಳಿದರೆ ಯಾರೂ ಉತ್ತರಿಸಲಿಲ್ಲ. ಅವರು ನಮಗೆ ತೊಡಿಸಿದ್ದು ಮಹಾರಾಜರ ಮತ್ತು ಮಂತ್ರಿಯ ಉಡುಪು ಎಂದು ನಮಗೆ ತಿಳಿದದ್ದು ಇವತ್ತು ಬೆಳಿಗ್ಗೆ.
ನಿಮಗೆ ಈ ಉಡುಪನ್ನು ತೊಡಿಸಿದವರು ಯಾರು ಎಂಬ ಬಗ್ಗೆ ನಿಮಗೆ ಯಾರ ಮೇಲಾದರೂ ಸಂದೇಹವಿದೆಯೆ?
ಶಿಷ್ಯ: ಅವರು ಉಸಿರಾಡುವ ರೀತಿಯಿಂದ ಅದು ಮಹಾರಾಜರು ಮಂತ್ರಿಯಾಗಿರಬೇಕು ಎಂದು ನನಗನಿಸಿತು. ಅಲ್ಲವೆ ಗುರೂಜಿ?
ಗುರು: ಹೌದು ನನಗೂ ಹಾಗೆಯೆ ಅನಿಸಿತು.
ಸೇ: ಅವರು ಯಾಕೆ ಹಾಗೆ ಮಾಡಿರಬಹುದು?
ಗುರು: ದೈವಾದೇಶವಾಗಿರಬಹುದೆ ಎಂಬುದು ನಮ್ಮ ಸಂದೇಹ
ಸೇ: ಹಾಗಾದರೆ ಈ ದೇಶವನ್ನು ಆಳುವ ಜವಾಬ್ದಾರಿಯನ್ನು ಅವರು ನಿಮಗೆ ವಹಿಸಿದ್ದಾರೆ ಎಂದು ಅರ್ಥ.
ಗುರು: ನಮಗೆ? ಛೆ ಛೆ. ನಮಗಿದು ಬೇಡ. ನಾವು ವಿರಕ್ತರು.
ಶಿಷ್ಯ: ನಿಜ. ದೇಶವನ್ನು ಆಳುವುದು ಶುದ್ಧ ಮೂರ್ಖರ ಕೆಲಸ.
ಸೇ: ದೇಶವನ್ನು ಆಳಲು ನೀವು ಅತ್ಯಂತ ಸಮರ್ಥರು. ಗುರುವಿಗೆ ನಾವು ರಾಜಪಟ್ಟವನ್ನು ಕಟ್ಟುತ್ತೇವೆ. ಶಿಷ್ಯ ಪ್ರಧಾನಿಯಾಗಬೇಕು.
ಗುರು: ಬೇಡ. ನಮ್ಮನ್ನು ಬಿಟ್ಟುಬಿಡಿ. ನಾವು ಲೋಕ ಸಂಚಾರಿಗಳು. ವಿಶ್ವವೇ ನಮ್ಮ ಸಾಮಾಜ್ಯ.
ಸೇ: ಲೋಕಸಂಚಾರವನ್ನು ನಿಲ್ಲಿಸಿ ಲೋಕಾಡಳಿತವನ್ನು ಸ್ವೀಕರಿಸಿ ಈ ದೇಶಕ್ಕೆ ಒಳ್ಳೆಯದು ಮಾಡಬೇಕು ಎಂದು ನಾವು ನಿಮ್ಮನ್ನು ಪ್ರಾರ್ಥಿಸುತ್ತೇವೆ. ದಯವಿಟ್ಟು ಒಪ್ಪಿಕೊಳ್ಳಿ.
ಗುರು: ಜನತೆ ಇದನ್ನು ಒಪ್ಪುತ್ತದೆಯೆ?
ಸೇ: ಖಂಡಿತವಾಗಿಯೂ ಒಪ್ಪುತ್ತದೆ. (ಜನರ ಕಡೆಗೆ ತಿರುಗಿ) ಇದು ನಿಮಗೆ ಒಪ್ಪಿಗೆಯೆ?
(ತುಸು ಹೊತ್ತು ಗುಸು ಗುಸು ಮಾತು ಸಮಾಲೋಚನೆ)
ಜನರ ದನಿ: ಹೌದು ಒಪ್ಪಿಗೆ!
ಸೇ: ಇನ್ನೊಮ್ಮೆ ಹೇಳಿ!
ಜನರ ದನಿ: ಹೌದು ಒಪ್ಪಿಗೆ!
ಸೇ: ಜನಾದೇಶ ಕೂಡ ಸಿಕ್ಕಿದೆ.
ಗುರು: (ಶಿಷ್ಯನೊಡನೆ) ಏನು ನಿನ್ನ ಅಭಿಪ್ರಾಯ ಶಿಷ್ಯ?
ಶಿಷ್ಯ: ಇದು ಜನರ ಇಚ್ಛೆ ಎಂದಾದ ಮೇಲೆ ಸ್ವೀಕರಿಸದೆ ಇರುವುದು ಹೇಗೆ ಗುರೂಜಿ?
ಗುರು: (ಗಂಭೀರವಾಗಿ) ಸರಿ. ಸ್ವೀಕರಿಸಿದ್ದೇವೆ.
ಸೇ: ಮಹಾರಾಜರು ಜನತೆಯನ್ನು ಉದ್ದೇಶಿಸಿ ಎರಡು ಮಾತು ಆಡಬೇಕು.
ಗುರು: (ತುಸು ಯೊಚಿಸಿ, ದೊಡ್ಡ ದನಿಯಲ್ಲಿ) ಕೇವಲ ಎರಡು ಮಾತು. ಇವತ್ತಿನಿಂದಲೇ ಹಗಲು ಹಗಲು ರಾತ್ರಿ ರಾತ್ರಿ ಎಂದು ತಿಳಿಯಿರಿ. (ಜನರ ಹರ್ಷೋದ್ಗಾರ. ಮಹಾರಾಜರಿಗೆ ಜಯವಾಗಲಿ! ಎಂಬ ಘೋಷ) ಇವತ್ತಿನಿಂದಲೇ ಒಂದು ರುಪಾಯಿಗೆ ಏನು ಸಿಗುವುದೋ ಅದು ಮಾತ್ರ ಒಂದು ರುಪಾಯಿಗೆ ಸಿಗುವುದು. ಇತರ ಎಲ್ಲಾ ವಸ್ತುಗಳಿಗೂ ಅದರ ನಿಜವಾದ ಬೆಲೆಯಲ್ಲಿಯೆ ಮಾರಾಟವಾಗಬೇಕು. (ಪುನ:ಜನರ ಹರ್ಷೋದ್ಗಾರ. ಮಹಾರಾಜರಿಗೆ ಜಯವಾಗಲಿ! ಎಂಬ ಘೋಷ. ಆದರೆ ಜನರ ದನಿ ಮೊದಲಿಗಿಂತ ಬಹಳ ಕ್ಷೀಣವಾಗಿದೆ)
ಫೇಡ್ ಔಟ್
Leave A Comment