ಪಾತ್ರಗಳು, ಪರಿಕರ:
ಪುಟ್ಟ ಪುಟ್ಟಿ ಮತ್ತು ಅವರ ತಾಯಿ ತಂದೆ ಬಂಟು
ಪಿಂಟು ಮತ್ತ ಅವರ ತಾಯಿ ತಂದೆ
ಹಲವು ಮಕ್ಕಳು, ಹಲವು ಗೊಂಬೆಗಳು, ಆಟಿಕೆಗಳು
ದೃಶ್ಯ ಒಂದು: ಗೊಂಬೆ ಮನೆ
(ರಂಗದ ಮೇಲೆ ಎಲ್ಲಾ ವಿಧದ ಆಟಿಕೆಗಳು ಮತ್ತು ಗೊಂಬೆಗಳ ರಾಶಿ. ಎಲ್ಲವೂ ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಅವುಗಳೆಡೆಯಲ್ಲಿ ಗೊಂಬೆ ಉಡುಪು ತೊಟ್ಟು ಗೊಂಬೆಗಳ ಹಾಗೆಯೆ ಕಾಣಿಸುವ ನಾಲ್ವರು ಮಕ್ಕಳು ಬಿದ್ದುಕೊಂಡಿದ್ದಾರೆ. ಒಂದು ಅಪ್ಪ, ಒಂದು ಅಮ್ಮ, ಒಂದು ಹುಡುಗ ಒಂದು ಹುಡುಗಿ. ಬೇರೆ ಇಬ್ಬರು ಮಕ್ಕಳು (ಬಂಟು ಮತ್ತು ಪಿಂಟು) ಗೊಂಬೆಗಳ ನಡುವೆ ಏನನ್ನೋ ಹುಡುಕುತ್ತಾ, ಒಂದು ಆಟಿಕೆಯನ್ನು ಎತ್ತುತ್ತಾ ಇನ್ನ್ನೊಂದನ್ನು ಕೆಳಗೆಸೆಯುತ್ತಾ ದಾಂಧಲೆ ನಡೆಸಿದ್ದಾರೆ. (ಕೆಲವು ಮಕ್ಕಳಿಗೆ ಗೊಂಬೆ ಉಡುಪು ತೊಡಿಸಿ ಆಟಿಕೆಗಳ ನಡುವೆ ಅಲ್ಲಿ ಇಲ್ಲಿ ಕುಳ್ಳಿರಿಸಬಹುದು. ಸಂಭಾಷಣೆಯ ಕಾಲದಲ್ಲಿ ಇವರು ಸುಮ್ಮನಿರಬೇಕು) ಬಂಟು(ಅಣ್ಣ) ಮತ್ತು ಪಿಂಟು(ತಂಗಿ) ಪಕ್ಕದ ಮನೆಯ ಮಕ್ಕಳು,
ಬಂಟು: ಪಿಂಟು, ಆ ಬಿಗ್ ಡ್ಯಾಡಿ ಡಾಲ್ ಎಲ್ಲಿ ಹುಡುಕಿದರೂ ಸಿಗುತ್ತಿಲ್ಲ. ಕಳೆದ ಸಲ ರಜೆಯಲ್ಲಿ ಅಂಕಲ್ ಫ್ಯಾಮಿಲಿ ಅಮೆರಿಕೆಗೆ ಹೋಗುವಾಗ ಇದ್ದ ಡಾಲ್ಗಳೆಲ್ಲ ಎಲ್ಲಿ ಹೋದುವು?
ಪಿಂಟು: ಅವರ ಮಕ್ಕಳು ತಮ್ಮ ಜೊತೆ ಕೊಂಡ್ಹೋಗಿರಬಹುದು.
ಬಂಟು: ಅವರು ಯಾಕೆ ಕೊಂಡ್ಹೋಗುತ್ತಾರೆ? ಅಮೆರಿಕೆಯಲ್ಲಿ ಡಾಲ್ಸ್ ಇಲ್ವ?
ಪಿಂಟು: ಹಾಗಾದರೆ ಮಾರಿರಬಹುದು.
ಬಂಟು: ನಿನ್ನ ತಲೆ! ಹಳೆಯ ಡಾಲ್ಗಳನ್ನು ಯಾರು ಕೊಂಡ್ಕೊಳ್ಳುತ್ತಾರೆ?
ಪಿಂಟು: ಹಾಗಾದರೆ ಬೇರೆ ಎಲ್ಲಾದರೂ ಇಟ್ಟಿರ್ಬಹುದು.
ಬಂಟು: ನನಗೂ ಅದೇ ಅನುಮಾನ ಬಂಟು. ಪಕ್ಕದ ಕೋಣೆಗೆ ದೊಡ್ಡ ಬೀಗ ಹಾಕಿ ಹೋಗಿದ್ದಾರೆ. ಬಹುಶ: ಅದರೊಳಗೆ ಇಟ್ಟಿರಬಹುದು. ಇವತ್ತಿನ ಆಟ ಸಾಕು. ನಡಿ ಹೋಗೋಣ.
ಪಿಂಟು: ಏನು ಅವಸರ? ಇನ್ನೂ ಸ್ವಲ್ಪ ಹೊತ್ತು ಆಡೋಣ.
ಬಂಟು: ಆಡಿದ ಆಟಿಕೆಗಳ ಜೊತೆಯೆ ಆಡಿ ಬೋರಾಯ್ತು.
(ದೂರದಿಂದ “ಏಯ ಬಂಟು, ಪಿಂಟು. ಬನ್ರೊ ಕಾಪಿs ತಿಂಡಿ ಆಯ್ತು ” ಎಂದು ಅವರ ಅಮ್ಮನ ದನಿ ಕೇಳಿಸುತ್ತದೆ. ಅದೇ ಹೊತ್ತು ಎತ್ತರದಲ್ಲಿ ಷೆಲ್ಫಿನ ಮೇಲಿದ್ದ ಕೋಗಿಲೆ ರೂಪದ ಗಡಿಯಾರ (ಗಡಿಯಾರದ ಡಯಲ್ ಮತ್ತು ಮುಳ್ಳುಗಳು ದೂರಕ್ಕೆ ಕಾಣಿಸದಷ್ಟು ಚಿಕ್ಕದು) “ಕೂ” ಎಂದು ಏಳು ಬಾರಿ ಕೂಗುತ್ತದೆ. ಅದರ ಕೂಗನ್ನು ಕೇಳಿ ಬಂಟು ಮತ್ತು ಪಿಂಟು ಮಂತ್ರಮುಗ್ಧರಾದವರಂತೆ ಅದನ್ನೇ ನೋಡಿ ನಿಲ್ಲುತ್ತಾರೆ)
ಪಿಂಟು: ಅಹ, ಎಷ್ಟು ಸವಿಯಾದ ದನಿ!
ಬಂಟು: ಇಷ್ಟು ಸವಿಯಾಗಿ ಗಂಟೆ ಹೇಳುವ ಗಡಿಯಾರವೂ ಇದೆಯೆ?
ಪಿಂಟು: ಕೋಗಿಲೆ ಅಂತ್ಲೇ ಅಂದ್ಕೊಂಡೆ.
(ಬಂಟು ಕೂಡಲೇ ಕುರ್ಚಿಯ ಮೇಲೆ ಹತ್ತಿ ಗಡಿಯಾರವನ್ನು ತೆಗೆದುಕೊಂಡು ಕೆಳಗಿಳಿಯುತ್ತಾನೆ. ಇಬ್ಬರೂ ಅದರ ಅಂದವನ್ನು ವೀಕ್ಷಿಸುತ್ತಾರೆ)
ಪಿಂಟು: ತುಂಬ ಚೆಂದ ಇದೆ.
ಬಂಟು: ಹೌದು ತುಂಬ ಚೆಂದ. ಇದನ್ನು ನಾವು ಕೊಂಡ್ಹೋಗುವ.
ಪಿಂಟು: ಅಂಕಲ್ದಲ್ವ? ಅವರಿಗೆ ಬೇಡ್ವ?
ಬಂಟು: ಅವರು ಬರುವುದು ಮೂರು ತಿಂಗಳ ನಂತರ. ಅಲ್ಲಿಯ ವರೆಗೆ ಇಲ್ಲಿ ಗಂಟೆ ಯಾಕೆ?
(ಪುನ: ಅಮ್ಮನ ಕೂಗು, “ಬನ್ರೊ. ತಿಂಡಿ ತಿಂದು ಹೋಮವರ್ಕ್ ಮುಗಿಸಿ”)
ಪಿಂಟು: ಹೋಗೋಣ. ಅಮ್ಮ ತಿಂಡಿಗೆ ಕರೀತಿದ್ದಾಳೆ.
(ಬಂಟು ಪಿಂಟು ನಿರ್ಗಮನ. ಡಾಲ್ಗಳ ರಾಶಿಯಿಂದ ಸಂಭಾಷಣೆ ಆರಂಭ)
ಪುಟ್ಟಡಾಲ್ ಮತ್ತು ಪುಟ್ಟಿಡಾಲ್: ನಮ್ಮ ಕೋಗಿಲೆ ಗಡಿಯಾರ ಹೋಯ್ತು!
ಅಮ್ಮ: ಛೆ! ಎಂಥ ಅನ್ಯಾಯ!
ಪುಟ್ಟಿ: ನಮಗೆ ಇನ್ನು ಗಂಟೆ ತಿಳಿಯುವುದು ಹೇಗೆ?
ಅಮ್ಮ: ಗಂಟೆಗೊಂದು ಸಲ ಕೋಗಿಲೆ ಗಡಿಯಾರದ ದನಿ ಕೇಳಿಸದಿದ್ರೆ ನಂಗೆ ನಿದ್ರೆ ಸಹ ಬರಲ್ಲ.
ಪುಟ್ಟಿ: ನಂಗೆ ಎಚ್ಚರವೇ ಆಗಲ್ಲ.
ಪುಟ್ಟ: ನಂಗೆ ಎಷ್ಟು ಹೊತ್ತಿಗೆ ಸಂಗೀತ ಕ್ಲಾಸಿಗೆ ಹೋಗ್ಬೇಕಂತ ಗೊತ್ತಾಗಲ್ಲ.
ಪುಟ್ಟಿ: ನಂಗೆ ಎಷ್ಟು ಹೊತ್ತಿಗೆ ಡಾನ್ಸ್ ಕ್ಲಾಸಿಗೆ ಹೋಗ್ಬೇಕಂತ ಗೊತ್ತಾಗಲ್ಲ.
ಅಮ್ಮ: ಈಗೇನು ಮಾಡುವುದು?
ಅಮ್ಮ: ಆ ಬಂಟು ಮತ್ತು ಪಿಂಟು ಹತ್ರ ಮಾತಾಡ್ಲಿಕ್ಕೆ ನಮ್ಮಿಂದಾಗಲ್ಲ.
ಪುಟ್ಟಿ: ಅವರ ದನಿ ನಮಗೆ ಕೇಳ್ಸತ್ತೆ. ನಮ್ಮ ದನಿ ಅವರಿಗೆ ಕೇಳ್ಸಲ್ಲ.
ಪುಟ್ಟ: ಹಾಗಾದರೆ ಏನು ಮಾಡುದು?
ಅಮ್ಮ: ಅಪ್ಪನ ಹತ್ರ ಕೇಳು.
ಪುಟ್ಟಿ: ಅಪ್ಪನಿಗೆ ಇನ್ನೂ ನಿದ್ದೆ ಬಿಟ್ಟಿಲ್ಲ.
ಪುಟ್ಟ: ಅಪ್ಪಾ ಅಪ್ಪಾ.
ಅಪ್ಪ: (ಎಚ್ಚರಗೊಳ್ಳುತ್ತಾ) ಏನು?
ಪುಟ್ಟಿ: ಏಳಪ್ಪಾ.
ಅಪ್ಪ: (ಏಳುತ್ತಾ) ಗಂಟೆ ಎಷ್ಟು?
ಪುಟ್ಟ, ಪುಟ್ಟಿ: ಗಂಟೆ ಇಲ್ಲ.
ಅಪ್ಪ: ಏನಾಯ್ತು?
ಪುಟ್ಟ: ಆ ಬಂಟು ಮತ್ತು ಪಿಂಟು ಕೊಂಡ್ಹೋದ್ರು.
ಅಪ್ಪ: ಛೆ! ಅನ್ಯಾಯ!
ಅಮ್ಮ: ಬೆಳಗಾಗೋದು ತಡ, ಬೀಗದ ಕೈ ತಕ್ಕೊಂಡು ಬಂದ್ಬಿಟ್ಟಿದಾರೆ!
ಪುಟ್ಟಿ: ನನ್ನ ಮೈ ಕೈಯೆಲ್ಲಾ ನೋವು. ಅವರು ನನ್ನ ಹೊಟ್ಟೆಗೆ ಮತ್ತು ಬೆನ್ನಿಗೆ ತುಂಬಾ ಸಲ ಗುದ್ದಿದ್ರು!
ಪುಟ್ಟ: ನನ್ನ ಕೈಕಾಲುಗಳನ್ನು ಆ ಪಿಂಕಿ ತಿರುಗಿಸಿದ್ದೇ ತಿರುಗಿಸಿದ್ದು.
ಅಮ್ಮ: ನನ್ನನ್ನು ಕೂಡ ಸಾಕಷ್ಟು ಅತ್ತ ಇತ್ತ ಹೊರಳಿಸಿದ್ದಾರೆ.
ಪುಟ್ಟ: ಅಪ್ಪನನ್ನು ಕೂಡ ಹೊರಳಿಸಿದ್ದಾರೆ. ಆದ್ರೆ ಅಪ್ಪನಿಗೆ ಗೊತ್ತೇ ಆಗ್ಲಿಲ್ಲ.
ಅಮ್ಮ: ಅಪ್ಪನ ನಿದ್ರೆಯೆ ಹಾಗೆ. (ದನಿಯೆರಿಸಿ) ಅವರು ಗಡಿಯಾರ ಕೊಂಡ್ಹೋಗುವಾಗ ನಿಮಾದ್ರೂ ಎಚ್ಚರ ಇದ್ದಿದ್ರೆ…
ಅಪ್ಪ: ನನ್ನಿಂದ ಏನು ಮಾಡೋಕಾಗುತ್ತೆ? ನಿಮ್ಮ ಹಾಗೆಯೆ ನಾನು ಕೂಡ ಒಂದು ಗೊಂಬೆ ಅಲ್ವ?
ಪುಟ್ಟ: ಅಪ್ಪಾ, ಬಂಟು ನನ್ನನ್ನು ದರದರ ಅಂತ ನೆಲದ ಮೇಲೆ ಎಳೆದ! (ತನ್ನ ಪ್ಯಾಂಟು ಷರ್ಟು ತೋರಿಸಿ, ಕೊಡವುತ್ತಾ) ಎಷ್ಟು ಕೊಳೆಯಾಗಿದೆ!
ಅಪ್ಪ: ಬೇರೆ ಡ್ರೆಸ್ ಹಾಕಲು ಅಮ್ಮನೊಡನೆ ಹೇಳು.
ಪುಟ್ಟ್ಟ: ಬಟ್ಟೆ ಬದಲಾಯಿಸಮಾ. ನಂಗೆ ಎಂಟು ಗಂಟೆಗೆ ಸಂಗೀತ ಕ್ಲಾಸು ಇದೆ.
ಪುಟ್ಟಿ: ನಂಗೆ ಒಂಬತ್ತು ಗಂಟೆಗೆ ಡಾನ್ಸ್ ಕ್ಲಾಸ್ ಇದೆ. ನನ್ನ ಬಟ್ಟೇನೂ ಬದಲಾಯಿಸಮ್ಮ.
(ಅಮ್ಮ ಡಾಲ್ ಎದ್ದು ಪೆಟ್ಟಿಗೆಯಲ್ಲಿ ಬಟ್ಟೆ ಹುಡುಕುತ್ತದೆ)
ಅಮ್ಮ: ಗಂಟೆ ಇಲ್ಲದೆ ಹೊತ್ತು ಗೊತ್ತಾಗಲ್ಲ.
ಪುಟ್ಟ: ಏನು ಮಾಡುವುದು? (ಚಿಂತಿಸುತ್ತದೆ)
ಪುಟ್ಟಿ: ಏನು ಮಾಡುವುದು? (ಚಿಂತಿಸುತ್ತದೆ)
ಅಪ್ಪ: ನಾವು ಗೊಂಬೆಗಳಲ್ವ? ನಮ್ಮಿಂದ ಏನು ಮಾಡೋಕಾಗುತ್ತೆ?
ಅಮ್ಮ: ಹಾಗೆ ಹೇಳ್ತಾ ಇರ್ಬಹುದು ಅಷ್ಟೆ. ಯಾರಿಗೂ ಕೇಳ್ಸಲ್ಲ.
ಪುಟ್ಟ್ಟಿ: ಅವರಾಗಿಯೆ ಗಡಿಯಾರ ಕೋಗಿಲೆಯನ್ನು ವಾಪಾಸು ತಂದಿಡುವ ಹಾಗೆ ಮಾಡ್ಬೇಕು.
ಪುಟ್ಟ: ಹೇಗೆ?
ಪುಟ್ಟಿ: ನಾವೆಲ್ಲಾ ಸೇರಿ ಬಲವಾಗಿ ದೇವರನ್ನು ಪ್ರಾರ್ಥಿಸೋಣ.
ಪುಟ್ಟ: ಪ್ರಾರ್ಥನೆಯಿಂದ ಏನಾಗುತ್ತೆ?
ಅಪ್ಪ: ಆಗುತ್ತೋ ಇಲ್ವೋ. ನಮ್ಮಿಂದ ಬೇರೇನು ಮಾಡಕ್ಕಾಗಲ್ವಲ್ಲ?
ಅಮ್ಮ: ಸರಿ. ಈಗ ಪ್ರಾರ್ಥಿಸೋಣ.
ಪುಟ್ಟ: ಏನಂತ?
ಪುಟ್ಟಿ: ದೇವರೆ, ಬಂಟು ಮತ್ತು ಪಿಂಟು ನಮ್ಮ ಗಡಿಯಾರ ಕೋಗಿಲೆಯನ್ನು ತಂದು ಅದರ ಜಾಗದಲ್ಲಿ ಇರಿಸುವಂತೆ ಏನಾದರೂ ಮಾಡು ಅಂತ ಅಲ್ವಪ್ಪಾ?
ಅಮ್ಮ: (ಅಪ್ಪಡಾಲ್ನೊಡನೆ) ಪ್ರಾರ್ಥಿಸೋಣವೆ?
ಅಪ್ಪ: ಪ್ರಾರ್ಥಿಸೋಣ. ಎಲ್ಲರೂ ಕಣ್ಣು ಮುಚ್ಚಿ ಕೈಜೋಡಿಸಿ ಕುಳಿತುಕೊಳ್ಳಿ.
(ಎಲ್ಲರೂ ಕಣ್ಣುಮುಚ್ಚಿ ಕೈಜೋಡಿಸಿ ಕುಳಿತುಕೊಳ್ಳುತ್ತಾರೆ. ಅಪ್ಪಡಾಲ್ ಹೇಳಿದಂತೆ ಮೂವರೂ ಪುನರುಚ್ಚರಿಸುತ್ತಾರೆ)
ಅಪ್ಪ: ದೇವರೆ,
ಮೂವರೂ: ದೇವರೆ,
ಅಪ್ಪ: ನಮ್ಮ ಕೋಗಿಲೆ ಗಡಿಯಾರ
ಮೂವರೂ:ನಮ್ಮ ಕೋಗಿಲೆ ಗಡಿಯಾರ
ಅಪ್ಪ: ಎಲ್ಲಿದ್ದರೂ
ಮೂವರೂ: ಎಲ್ಲಿದ್ದರೂ
ಅಪ್ಪ: ಮರಳಿ ಇಲ್ಲಿಗೆ ಬರುವಂತೆ ಮಾಡು.
ಮೂವರೂ: ಮರಳಿ ಇಲ್ಲಿಗೆ ಬರುವಂತೆ ಮಾಡು.
ಪುಟ್ಟ: ಅಪ್ಪಾ, ಅಷ್ಟು ಸಾಕಾ?
ಅಪ್ಪ: ಸಾಕು. ಪ್ರಾರ್ಥನೆ ಯಾವಾಗಲೂ ಚಿಕ್ಕದಾಗಿರಬೇಕು.
ಅಮ್ಮ: ಚಿಕ್ಕ ಪ್ರಾರ್ಥನೆ ದೇವರನ್ನು ಬೇಗ ಮುಟ್ಟುತ್ತದೆ.
ಫೇಡ್ ಔಟ್
ದೃಶ್ಯ ಎರಡು: ಬಂಟು ಮತ್ತು ಪಿಂಟು ಮನೆ
(ಬಂಟು, ಪಿಂಟು, ಅವರ ಅಪ್ಪ ಮತ್ತು ಅಮ್ಮ. ಷೆಲ್ಫಿನ ಮೇಲೆ ಕೋಗಿಲೆ ಗಡಿಯಾರವಿದೆ. ಗೋಡೆಯ ಮೇಲೆ ಬೇರೊಂದು ದೊಡ್ಡ ಗಡಿಯಾರವಿದೆ. ವಾಕಿಂಗ್ ಹೋಗಿದ್ದ ಅಪ್ಪ ಒಳ ಬರುತ್ತಾನೆ. ಒಳ ಹೊಕ್ಕೊಡನೆಕೋಗಿಲೆ ಗಡಿಯಾರ ಅವನ ಕಣ್ಣಿಗೆ ಬೀಳುತ್ತದೆ)
ಅಪ್ಪ: ಎಲ್ಲಿಂದ ಆ ಗಡಿಯಾರ?
ಬಂಟು: ನಾವು ತಂದದ್ದು.
ಅಪ್ಪ: ಎಲ್ಲಿಂದ?
ಪಿಂಟು: ರವಿರಾಜ ಅಂಕಲ್ ಮನೆಯಿಂದ.
ಅಪ್ಪ: ಯಾಕೆ?
ಬಂಟು: ಅಂಕಲ್ ಮತ್ತು ಮನೆಯವರು ಬರುವುದು ಮೂರು ತಿಂಗಳ ಮೇಲೆ. ಅಲ್ಲಿ ಅದು ಸುಮ್ಮನೆ ಗಂಟೆ ಕೂಗಿಕೊಂಡು ಇರುತ್ತದೆ.
ಅಪ್ಪ: ಇರಲಿ. ಅದು ಅದರ ಕೆಲಸ.
ಬಂಟು: ಅದೇ ಕೆಲಸ ಇಲ್ಲಿ ಮಾಡಲಿ. ಅಲ್ಲಿ ಅದರ ದನಿಯನ್ನು ಕೇಳುವವರು ಯಾರೂ ಇಲ್ಲ.
ಅಪ್ಪ: (ಗೋಡೆಯ ಮೇಲಿನ ಗಡಿಯಾರವನ್ನು ತೋರಿಸಿ) ನಮ್ಮದೇ ಗಡಿಯಾರ ಉಂಟಲ್ಲ?
ಪಿಂಟು: ಅದು ಕೂಗುವುದೂ ಇಲ್ಲ , ಬಡಿಯುವುದೂ ಇಲ್ಲ.
ಅಮ್ಮ: ಗಡಿಯಾರ ಕೂಗದಿದ್ದರೆ ಬಡಿಯದಿದ್ದರೆ ಏನು?ಗಂಟೆ ತೋರಿಸಿದರೆ ಸಾಕಲ್ಲ?
ಬಂಟು: ಕೂಗುವ ಬಡಿಯುವ ಗಡಿಯಾರವೇ ಚೆನ್ನ.
ಅಮ್ಮ: ಬೆಳಿಗ್ಗೆ ಆರು ಗಂಟೆಗೆ ತಲೆಗೆ ಬಡಿದು ಎಬ್ಬಿಸುವ ಗಡಿಯಾರ ಇದ್ರೆ ಇನ್ನೂ ಚೆನ್ನ.
ಪುಟ್ಟ: (ಅಮ್ಮನನ್ನು ತೋರಿಸಿ) ಒಂದು ಉಂಟಲ್ಲ ಇಲ್ಲಿ!
ಅಮ್ಮ: (ಮುನಿಸಿನಿಂದ) ಅದಿಲ್ಲದಿದ್ರೆ ಹ್ಯಾಗೆ? ಗಡಿಯಾರ ಬಂದು ನಿಮ್ಮನ್ನು ಎಬ್ಬಿಸುತ್ತಾ?
ಅಪ್ಪ: ಆಗಲಿ. ಒಂದು ಕೂಗುವ ಗಡಿಯಾರ ತರೋಣ.
ಬಂಟು: ಈ ಕೋಗಿಲೆ ಗಡಿಯಾರದ ದನಿ ತುಂಬಾ ಸವಿ ಅಪ್ಪಾ.
ಪಿಂಟು: ಹೌದು. ಈ ಗಡಿಯಾರದಷ್ಟು ಸವಿಯಾದ ದನಿ ಬೇರೆ ಯಾವ ಗಡಿಯಾರಕ್ಕೂ ಇಲ್ಲ.
(ಕೋಗಿಲೆ ಗಡಿಯಾರ ಎಂಟು ಬಾರಿ ಕೂ ಎಂದು ಕೂಗುತ್ತದೆ)
ಬಂಟು: (ಉತ್ಸಾಹದಿಂದ) ಅಮಾ , ದನಿ ಎಷ್ಟೊಂದು ಸವಿಯಾಗಿದೆ ಅಲ್ವ?
ಅಪ್ಪ: ಆದರೆ ಅಂಕಲ್ ಮನೆಯಿಂದ ಅವರಿಲ್ಲದಾಗ ನೀವು ಅದನ್ನು ತಂದದ್ದು ಸರಿಯಲ್ಲ.
ಅಮ್ಮ: ಇನ್ನೊಬ್ಬರ ವಸ್ತುಗಳನ್ನು ಮುಟ್ಟಿ ಹಾಳು ಮಾಡಬಾರದು.
ಪಿಂಟು: ನಾವು ಅದನ್ನು ಜೋಪಾನವಾಗಿ ಇಟ್ಟುಕೊಳ್ಳುತ್ತೇವೆ.
ಅಪ್ಪ: ಹೌದು ನೀವು ಜೋಪಾನವಾಗಿ ಇಟ್ಟುಕೊಳ್ಳುತ್ತೀರಿ! ಏನು ಕೈಗೆ ಸಿಕ್ಕರೂ ಕಳಚಿ ಕಳಚಿ ಹಾಕುತ್ತೀರಿ!
ಬಂಟು: ಒಳ್ಳೊಳ್ಳೆಯ ಆಟಿಕೆ ಮತ್ತು ಗೊಂಬೆಗಳನ್ನು ಅಂಕಲ್ ಒಂದು ಕೋಣೆಯಲ್ಲಿಟ್ಟು ಬೀಗ ಹಾಕಿ ಹೋಗಿದ್ದಾರೆ.
ಅಮ್ಮ: ಅದು ಅವರ ಇಷ್ಟ. ಎಲ್ಲವನ್ನೂ ನಿಮ್ಗೆ ಕೊಡ್ಬೇಕೇನು?
ಬಂಟು: ಅವರು ಮನೆಯನ್ನು ನೋಡಿಕೊಳ್ಳಿ ಎಂದು ಬೀಗದ ಕೈ ಕೊಟ್ಟು ಹೋಗುವಾಗ ಆ ಕೋಣೆಯ ಬೀಗದ ಕೈ ಕೊಡಲಿಲ್ಲ.
ಅಮ್ಮ: ಇನ್ನೊಬ್ಬರ ವಸ್ತುವಿಗೆ ಆಸೆಪಡಬಾರದು.
ಅಪ್ಪ: ಅಂಕಲ್ ಮನೆ ಬೀಗದ ಕೈ ಕೊಟ್ಟುಹೋಗಿರೋದು ಮನೇನ ಸ್ವಲ್ಪ ಗಮನಿಸ್ಕೊಳ್ಳಿ ಅಂತ. ಹಾಲ್ನಲ್ಲಿರುವ ಆಟದ ಸಾಮಾನುಗಳ ಜೊತೆ ಆಡ್ಕೊಳ್ಳಿ ಅಂತ ಕೂಡ ಹೇಳಿದ್ದಾರೆ ಅಲ್ವ?
ಬಂಟು: ಸುಮಾರು ಆಟದ ಸಾಮಾನುಗಳನ್ನು ಬೇರೆ ಕೋಣೆಯಲ್ಲಿಟ್ಟು ಬೀಗ ಹಾಕಿದ್ದಾರೆ!
ಅಪ್ಪ: (ಸಿಟ್ಟಿನಿಂದ) ಮತ್ತೆ ಎಲ್ಲಾ ನಿಮ್ಮ ಕೈಗೆ ಕೊಟ್ಟು ಹೋಗ್ಬೇಕಾ? ಆ ಗಡಿಯಾರವನ್ನು ಈಗಲೇ ಕೊಂಡು ಹೋಗಿ ಮೊದಲಿನ ಜಾಗದಲ್ಲಿಯೆ ಇಟ್ಟು ಬನ್ನಿ.
ಪಿಂಟು: ನಮಗೆ ಅಂಥದೇ ಒಂದು ಗಡಿಯಾರ ಬೇಕು.
ಅಪ್ಪ: ಆಗಲಿ ತರುತ್ತೇನೆ.
ಬಂಟು: ಅದು ಅಮೆರಿಕೆಯದ್ದು. ಅಂಥದು ಇಲ್ಲಿ ಸಿಗುವುದಿಲ್ಲ.
ಅಪ್ಪ: ಭಾರಿ ಗೊತ್ತಾ ನಿಂಗೆ? ಇಲ್ಲಿ ಎಲ್ಲಾ ಸಿಗುತ್ತದೆ.
ಬಂಟು: ನೀನು ಅಂಥದೇ ಇನ್ನೊಂದು ಗಡಿಯಾರ ತರುವ ವರೆಗ ಇದು ಇಲ್ಲೇ ಇರ್ಲಿ.
ಅಪ್ಪ: (ಎದ್ದು) ಆಗಲಿ. (ಕೋಗಿಲೆ ಗಡಿಯಾರವನ್ನು ತೆಗೆದು ಷೆಲ್ಫಿನೊಳಗೆ ಇಟ್ಟು ಬೀಗ ಹಾಕುತ್ತಾನೆ)
ಬಂಟು: ಷೆಲ್ಫಿನೊಳಗೆ ಇಟ್ಟರೆ ಅದರ ದನಿ ಬಹಳ ಚಿಕ್ಕದಾಗುತ್ತದೆ.
ಅಪ್ಪ: ಆಗಲಿ. ಅದಕ್ಕೇನೂ ಕೇಡಾಗುವುದಿಲ್ಲ.
ಪಿಃಟು: ನಮಗೆ ಸರಿಯಾಗಿ ಕೇಳಿಸುವುದಿಲ್ಲ.
ಅಪ್ಪ: ಅಷ್ಟು ಕೇಳಿಸಿದರೆ ಸಾಕು. ಈಗ ಬಾಯಿಮುಚ್ಚಿಕೊಂಡು ನಿಮ್ಮ ಹೋಮವರ್ಕ್ ಮಾಡಿ ಮುಗಿಸಿ.
ಫೇಡ್ ಔಟ್
ದೃಶ್ಯ ಮೂರು: ಗೊಂಬೆ ಮನೆ
(ಗೊಂಬೆಗಳನ್ನೆಲ್ಲಾ ಓರಣವಾಗಿರಿಸಲಾಗಿದೆ. ಗೊಂಬೆ ಉಡುಪಿನಲ್ಲಿರುವ ಮಕ್ಕಳು ಕೂಡ ಸಾಲಾಗಿ ಶಿಸ್ತಿನಿಂದ ಕುಳಿತಿದ್ದಾರೆ)
ಪುಟ್ಟ: ಯಾಕೋ ತುಂಬಾ ಬೇಜಾರು.
ಅಮ್ಮ: ಯಾಕೆ?
ಪುಟ್ಟಿ: ನಂಗೂ ಬೇಜಾರು.
ಎಲ್ಲಾ ಮಕ್ಕಳು ಒಂದೇ ದನಿಯಲ್ಲಿ: ನಮ್ಗೂ ಬೇಜಾರು.
ಅಮ್ಮ: ಕೋಗಿಲೆ ಗಡಿಯಾರ ಇಲ್ಲ ಅಂತ ಬೇಜಾರ?
ಎಲ್ಲಾ: ಹೌದು.
ಪುಟ್ಟ: ನಮ್ಮ ಪ್ರಾರ್ಥನೆ ದೇವರಿಗೆ ಕೇಳಿಸಲಿಲ್ಲವೊ ಏನೊ.
ಅಮ್ಮ: ಖಂಡಿತ ಕೇಳಿಸಿರುತ್ತೆ.
ಪುಟ್ಟ: ಮನುಷ್ಯರು ಮಳೆಗೆ, ಬೆಳೆಗೆ, ಅನ್ನಕ್ಕೆ ನೀರಿಗೆ ಪ್ರಾರ್ಥನೆ ಮಾಡುತ್ತಾರೆ. ಅದು ದೇವರಿಗೆ ಕೇಳಿಸುತ್ತಾ?
ಅಮ್ಮ: ಮನುಷ್ಯರಿಗೇ ಗೊತ್ತು.
ಅಪ್ಪ: ನಾವು ಬರೀ ಗೊಂಬೆಗಳು. ನಮ್ಮ ಪ್ರಾರ್ಥನೆ ದೇವರಿಗೆ ಕೇಳಿಸಿಯೆ ಕೇಳಿಸುತ್ತೆ.
ಪುಟ್ಟ್ಟಿ: ಆದರೆ ನಮ್ಮ ಕೋಗಿಲೆ ಗಡಿಯಾರ ಇನ್ನೂ ಬರಲಿಲ್ಲ.
ಪುಟ್ಟ್ಟ: ನಾಳೆ ನಾನು ಎಂಟು ಗಂಟೆಗೆ ಸಂಗೀತ ಕ್ಲಾಸಿಗೆ ಹೋಗುವುದು ಹೇಗೆ?
ಪುಟ್ಟಿ: ನಾಳೆ ಬೆಳಿಗ್ಗೆ ಒಂಬತ್ತು ಗಂಟೆಗೆ ನಾನು ಡಾನ್ಸ್ ಕ್ಲಾಸಿಗೆ ಹೋಗುವುದು ಹೇಗೆ?
ಅಮ್ಮ: ನನ್ನ ಮನಸ್ಸು ಹೇಳ್ತದೆ ಸಾಯಂಕಾಲದೊಳಗೆ ಕೋಗಿಲೆ ಗಡಿಯಾರ ವಾಪಸು ಬರ್ತದೆ ಅಂತ.
ಪುಟ್ಟಿ: ಅಮ್ಮನಿಗೆ ಹಾಗನ್ಸಿದ್ರೆ ಖಂಡಿತ ಬಂದೇ ಬರ್ತದೆ ಅಲ್ವ ಅಪ್ಪಾ .(ನಗು)
ಅಪ್ಪ: ಹೌದು ಮಗೂ. ಖಂಡಿತ ಬರ್ತದೆ.
ಪುಟ್ಟ: ಈಗ ಗಂಟೆ ಎಷ್ಟಾಗಿರ್ಬಹುದು?
ಪುಟ್ಟಿ: ಹನ್ನೆರಡಾಗಿರ್ಬಹುದು.
ಅಮ್ಮ: ಹನ್ನೆರಡಾಗಿರ್ಲಿಕ್ಕಿಲ್ಲ. ಹನ್ನೊಂದಾಗಿರ್ಬಹುದು.
ಪುಟ್ಟ: ನಂಗನಿಸತ್ತೆ ಈಗ ಗಂಟೆ ಒಂದು.
ಪುಟ್ಟಿ: ಒಂದಾಗಿರ್ಲಿಕ್ಕಿಲ್ಲ. ಹನ್ನೆರಡಾಗಿರ್ಬಹುದು.
ಪುಟ್ಟ: ಹನ್ನೆರಡಲ್ಲ . ಒಂದು.
ಪುಟ್ಟಿ: ಒಂದಲ್ಲ . ಹನ್ನೆರಡು.
ಪುಟ್ಟ: ಹನ್ನೆರಡಲ್ಲ . ಒಂದು.
ಪುಟ್ಟಿ: ಒಂದಲ್ಲ . ಹನ್ನೆರಡು.
(ಅವರು ಹಾಗೆಯೆ ಹೇಳುತ್ತಾ ಇರುವಾಗ)
ಫೇಡ್ ಔಟ್
ದೃಶ್ಯ ನಾಲ್ಕು: ಬಂಟು ಮತ್ತು ಪಿಂಟು ಮನೆ
(ಮಕ್ಕಳು ಮೇಜಿನ ಸುತ್ತ ಕುಳಿತು ಓದು ಮತ್ತು ಬರವಣಿಗೆಯಲ್ಲಿ ನಿರತರಾಗಿದ್ದಾರೆ. ಅಮ್ಮ ಏನೋ ಕೆಲಸದಲ್ಲಿದ್ದಾಳೆ. ಗೋಡೆಯ ಮೇಲಿನ ದೊಡ್ಡ ಗಡಿಯಾರದಲ್ಲಿ ಹನ್ನೆರಡು ಹೊಡೆಯಲು ಒಂದೆರಡು ನಿಮಿಷಗಳಿವೆ. ಅಪ್ಪನ ಪ್ರವೇಶ)
ಬಂಟು: ಅಪ್ಪಾ ಅಪ್ಪಾ. ಕೋಗಿಲೆ ಗಡಿಯಾರದ ಆರೋಗ್ಯ ಕೆಟ್ಟಿದೆ.
ಅಪ್ಪ: (ಆತಂಕದಿಂದ ಗಡಿಯಾರ ಕಪಾಟಿನೊಳಗಿದೆಯೆ ಎಂದು ಗಮನಿಸಿ) ಏನಾಯಿತು?
ಅಮ್ಮ: ನನಗೆ ಹುಚ್ಚು ಹಿಡಿಯುವುದೊಂದು ಬಾಕಿ.
ಅಪ್ಪ: ಅಂದ್ರೆ?
ಪಿಂಟು: ಅಪ್ಪಾ, ಕೋಗಿಲೆ ಗಡಿಯಾರ ವಿಕಾರವಾಗಿ ಕೂಗತೊಡಗಿದೆ.
ಬಂಟು: ಗಂಟೆಯಿಂದ ಗಂಟೆಗೆ ಅದರ ಸ್ವರ ದೊಡ್ಡದಾಗುತ್ತಾ ಹೋಗಿದೆ.
ಅಮ್ಮ: ಈಗ ಹನ್ನೊಂದು ಗಂಟೆಗೆ ಅದು ಕೂಗಿದ್ದು ಇಡೀ ಊರಿಗೇ ಕೇಳಿಸುವ ಹಾಗಿತ್ತು.
ಪಿಂಟು: ಕಿವಿ ತೂತಾಗುವ ಹಾಗೆ ಇತ್ತು ಅದರ ಕೂಗು.
(ಗಡಿಯಾರ ಹನ್ನೆರಡು ಬಾರಿ ಕೂಗುತ್ತದೆ. ಕೂಗು ಆರಂಭಗೊಂಡೊಡನೆ ಎಲ್ಲರೂ ಕಿವಿ ಮುಚ್ಚಿಕೊಳ್ಳುತ್ತಾರೆ. ಅದರ ಅತ್ಯಂತ ತೀಕ್ಷ ವಾದ ಕೂಗನ್ನು ಸಹಿಸಿಕೊಳ್ಳಲಿಕ್ಕಾಗದೆ ಪಾಡುಪಡುತ್ತಾರೆ. ಕೂಗು ನಿಂತಾಗ ಅಬ್ಬ ಎಂದು ಉಸಿರು ಬಿಡುತ್ತಾರೆ)
ಪಿಂಟು: ಹನ್ನೊಂದು ಗಂಟೆಗೆ ಕೂಗಿದ್ದಕ್ಕಿಂತ ಈಗ ಜೋರು ಕೂಗಿದೆ!
ಅಮ್ಮ: (ಗಂಡನೊಡನೆ) ನೀವದನ್ನೊಮ್ಮೆ ಕೊಂಡ್ಹೋಗಿ ಅದು ಎಲ್ಲಿತ್ತೋ ಅಲ್ಲಿ ಇಟ್ಟು ಬನ್ನಿ.
ಅಪ್ಪ: ನನಗೆ ಈಗ ವೇಳೆಯಿಲ್ಲ. ಈಗ ಮೂರು ಗಂಟೆಗೆ ಮೀಟಿಂಗ್ ಇದೆ. ಸಾಯಂಕಾಲ ಬಂದ ಕೂಡಲೇ ಕೊಂಡ್ಹೋಗಿ ಇಡ್ತೇನೆ.
ಅಮ್ಮ: ಅಲ್ಲಿಯ ವರೆಗೆ ಅದರ ಕೂಗನ್ನು ಸಹಿಸುವುದು ಯಾರು?
ಅಪ್ಪ: ಅಷ್ಟು ಕಷ್ಟ ಆಗ್ಲಿಕ್ಕಿಲ್ಲ. ಆರು ಗಂಟೆಯೊಳಗೆ ಬರುತ್ತೇನೆ. ಅಲ್ಲಿ ವರೆಗೆ ಸಹಿಸಿಕೊಳ್ಳಿ.
ಪಿಂಟು: (ಲೆಕ್ಕಹಾಕುತ್ತಾ) ಒಂದು, ಎರಡು, ಮೂರು, ನಾಲ್ಕು, ಐದು. ಅಂದ್ರೆ ಒಟ್ಟು ಹದಿನೈದು ಬಡಿತಗಳು! ನಮ್ಮ ಕಿವಿ ತಮಟೆ ಹರಿದೇ ಹೋಗ್ತ್ತದೆ.
ಅಪ್ಪ: ಹಾಗೆಯೆ ಆಗಬೇಕು ನಿಮ್ಗೆ! ತಪ್ಪಿಗೆ ತಕ್ಕ ಶಿಕ್ಷೆ! ಅನುಭವಿಸಿ.
ಬಂಟು: ಕಪಾಟಿನ ಬೀಗ ತೆಗಿ. ನಾವು ಕೊಂಡು ಹೋಗಿ ಇಟ್ಟು ಬರುತ್ತೇವೆ.
ಅಪ್ಪ: ಬೇಡ. ನೀವು ಮತ್ತೇನಾದ್ರೂ ಅಧಿಕಪ್ರಸಂಗ ಮಾಡ್ತೀರಿ! ನಾನೇ ಕೊಂಡ್ಹೋಗಿ ಇಡ್ತೇನೆ.
ಅಮ್ಮ: ನಾನು ಕೊಂಡ್ಹೋಗಿ ಇಟ್ಟು ಬರಲೆ?
ಅಪ್ಪ: ಬೇಡ.
ಅಮ್ಮ: ಹಾಗಾದ್ರೆ ಇನ್ನು ಹದಿನೈದು ಬಾರಿ ಅದರ ಕೂಗನ್ನು ಕೇಳಬೇಕು.
ಅಪ್ಪ: ಬೇಡ ಅಂತಾದ್ರೆ, ಹೊರಗೆ ಹೋಗಿ ಗಾರ್ಡನಿನಲ್ಲಿ ಕೂತ್ಕೊಳ್ಳಿ.
ಅಮ್ಮ: ಅಂದರೆ ಗಂಟೆಗೊಂದು ಸಲ!
ಅಪ್ಪ: (ನಕ್ಕು) ಹೂಂ. ಒಂದೈದು ನಿಮಿಷಕ್ಕೆ ಮುಂಚೆ!
ಬಂಟು: ಅಪ್ಪ, ಅಲ್ಲಿಗೂ ಕೇಳಿಸುತ್ತೆ ಅದರ ಕೂಗು!
ಅಪ್ಪ: (ಒಳಹೋಗುತ್ತಾ) ಮುನಿಸಿಪಲ್ ಪಾರ್ಕಿನಲ್ಲಿ ಕೂತ್ಕೊಳ್ಳಿ! ಬೇರೆಯವರ ವಸ್ತುವಿಗೆ ಆಸೆಪಡಬಾರದು ಅಂದ್ರೆ, ಹಾಗೆ ಹೀಗೆ ಅಂತ ವಾದಿಸಿದಿರಿ!
ಬಂಟು, ಪಿಂಟು: ಇನ್ನು ಆಸೆಪಡುವುದಿಲ್ಲ.
ಅಮ್ಮ: ನಾನೇನು ತಪ್ಪು ಮಾಡಿದ್ದೀನಿ?
ಅಪ್ಪ: ತಾಯಿತಂದೆ ಮಾಡಿದ ಪಾಪ ಮಕ್ಕಳನ್ನು ಕಾಡುತ್ತಂತೆ. ಮಕ್ಕಳು ಮಾಡಿದ ಪಾಪ ತಾಯಿತಂದೆಯರನ್ನು ಕಾಡೋದೂ ಇದೆ. (ಎಲ್ಲರೂ ಮನವಾಗಿದ್ದಾರೆ. ಅಪ್ಪ ಏಳುತ್ತಾ) ಸರಿ. ಏಳಿ ಊಟ ಮಾಡೋಣ.
ಫೇಡ್ ಔಟ್
ದೃಶ್ಯ ಐದು: ಬೊಂಬೆ ಮನೆ
(ಗೊಂಬೆಗಳನ್ನೆಲ್ಲಾ ಓರಣವಾಗಿರಿಸಲಾಗಿದೆ. ಗೊಂಬೆ ಉಡುಪಿನಲ್ಲಿರುವ ಮಕ್ಕಳು ಕೂಡ ಸಾಲಾಗಿ ಶಿಸ್ತಿನಿಂದ ಕುಳಿತಿದ್ದಾರೆ)
ಪುಟ್ಟ: ನಾಳೆ ನಾನು ಸಂಗೀತ ಕ್ಲಾಸಿಗೆ ಹೋಗುವುದು ಹೇಗೆ?
ಅಮ್ಮ: ಯಾಕೆ, ಏನಾಯ್ತು?
ಪುಟ್ಟ: ಎಂಟು ಗಂಟೆ ಆದದ್ದು ಗೊತ್ತಾಗುವುದು ಹೇಗೆ? ಇವತ್ತು ತಡವಾಯಿತು ಅಂತ ಮೇಸ್ಟ್ರು ಗದರಿಸಿದ್ರು.
ಪುಟ್ಟಿ: ನಂಗೂ ತಡಮಾಡಿದ್ದಕ್ಕೆ ಡಾನ್ಸ್ ಟೀಚರ್ ಗದರಿಸಿದ್ರು.
(ಬಾಗಿಲಿನ ಬೀಗ ತೆಗೆದ ಶಬ್ದ. ತಟ್ಟನೆ ಎಲ್ಲರೂ ಬಿದ್ದುಕೊಳ್ಳುತ್ತಾರೆ. ಇತರ ಗೊಂಬೆಗಳು (ಮಕ್ಕಳು) ಅಲ್ಲಾಡದೆ ಕುಳಿತುಕೊಳ್ಳುತ್ತವೆ. ಬಂಟುವಿನ ಅಪ್ಪ ಕೋಗಿಲೆ ಗಡಿಯಾರವನ್ನು ಎತ್ತರದಲ್ಲಿ ಷೆಲ್ಫಿನಲ್ಲಿ ಇರಿಸಿ ಹೊರಟುಹೋಗುತ್ತಾನೆ. ಅವನು ಬಾಗಿಲು ಹಾಕಿ ಬೀಗಹಾಕಿ ಹೋದ ಶಬ್ದ ಕೇಳಿಸಿದ್ದೇ ತಡ ನಾಲ್ವರೂ ಎದ್ದು ನಿಂತು ಗಡಿಯಾರವನ್ನು ನೋಡುತ್ತಾರೆ. ಕಣ್ಣು ಪಿಳಿ ಪಿಳಿ ಮಾಡುತ್ತಾ ಕುಳಿತಿದ್ದ ಗೊಂಬೆಗಳು ಕೂಡ ಹರ್ಷದಿಂದ ಶಬ್ದ ಮಾಡುತ್ತಾ ಎದ್ದು ನಿಲ್ಲುತ್ತವೆ)
ಅಮ್ಮ: ಹೋದ ಜೀವ ಬಂದಂತಾಯಿತು.
ಪುಟ್ಟ: ನಂಗೆ ನಾಳೆ ಬೆಳಿಗ್ಗೆ ಎಂಟು ಗಂಟೆಗೆ ಸರಿಯಾಗಿ ಸಂಗೀತ ಕ್ಲಾಸಿಗೆ ಹೊರಡ್ಬಹುದು.
ಪುಟ್ಟಿ: ನಂಗೆ ಕೂಡ ಒಂಬತ್ತು ಗಂಟೆಗೆ ಸರಿಯಾಗಿ ಡಾನ್ಸ್ ಕ್ಲಾಸಿಗೆ ಹೋಗ್ಬಹುದು.
ಅಮ್ಮ: ಕೋಗಿಲೆ ಗಡಿಯಾರ ರಾತ್ರಿ ಹತ್ತು ಹೊಡೆದ ಕೂಡಲೇ ನಂಗೆ ನಿದ್ರೆ ಮಾಡ್ಬಹುದು.
ಅಪ್ಪ: ನಮಗೆ ಮನುಷ್ಯರ ಹಾಗೆ ಗಂಟೆಗಂಟೆಗೆ ತಿನ್ನುವುದು ಕುಡಿಯುವುದು ಇಲ್ಲದ್ದರಿಂದ ಎಷ್ಟು ಅನುಕೂಲ ಅಲ್ವ?
ಅಮ್ಮ: ಕೋಗಿಲೆ ಗಡಿಯಾರದ ಕೂಗು ಕೇಳ್ತಾ ಇದ್ರೆ ಸಾಕು. ಬೇರೇನೂ ಬೇಡ.
ಪುಟ್ಟಿ: ಅದು ನಮ್ಮ ಗಡಿಯಾರ ಅಲ್ವ ಅಮಾ?
ಅಮ್ಮ: ಹೌದು. ಅದು ನಮ್ಮ ಗಡಿಯಾರ. ಆದ್ದರಿಂದ ಅದು ತಾನಾಗಿ ವಾಪಾಸು ಬಂದಿದೆ!
ಅಪ್ಪ: ನಿಜ. ದೇವರಿಗೆ ನಮ್ಮ ಪ್ರಾರ್ಥನೆ ಕೇಳಿಸಿದೆ. ನಾವು ದೇವರಿಗೆ ಕೃತಜ್ಞತೆ ಹೇಳಬೇಕು. ಎಲ್ಲರೂ ಕೈಜೋಡಿಸಿ ಮನಸ್ಸಿನಲ್ಲಿಯೆ “ದೇವರೆ, ನಿನಗೆ ಥ್ಯಾಂಕ್ಸ್ ” ಎಂದು ಹೇಳಿ.
(ಎಲ್ಲರೂ (ಗೊಂಬೆ ಉಡುಪಿನಲ್ಲಿರುವ ಮಕ್ಕಳು ಕೂಡ) ಕ್ಷಣ ಹೊತ್ತು ಕೈಜೋಡಿಸಿ ನಮಿಸುತ್ತಾರೆ)
ಅಮ್ಮ: ಈಗ ಗಡಿಯಾರದ ಹಾಡು ಹಾಡೋಣವೆ?
ಎಲ್ಲರೂ: ಸರಿ. ಹಾಡೋಣ.
ಎಲ್ಲರೂ ಹಾಡುತ್ತಾರೆ:
ಗಂಟೆ ಗಂಟೆ ಗಡಿಯಾರ
ಕೋಗಿಲೆ ಗಡಿಯಾರ
ಅಮ್ಮ: ಬೊಂಬೆ ಮನೆಯ ಸಂಸಾರ
ಅಪ್ಪ: ಕಾಲದ ಕುದುರೆಯ ಸರದಾರ
ಎಲ್ಲರೂ: ಕೋಗಿಲೆ ಗಡಿಯಾರ
ಗಂಟೆ ಗಂಟೆ ಗಡಿಯಾರ
ಕೋಗಿಲೆ ಗಡಿಯಾರ
(ಕೋಗಿಲೆ ಗಡಿಯಾರ ಆರು ಸಲ ಸುಶ್ರಾವ್ಯವಾಗಿ ಕೂ ಎನ್ನುತ್ತದೆ. ಪುನ: ಎಲ್ಲರೂ ಹಾಡುತ್ತಾರೆ:
ಗಂಟೆ ಗಂಟೆ ಗಡಿಯಾರ
ಕೋಗಿಲೆ ಗಡಿಯಾರ
ಫೇಡ್ ಔಟ್
Leave A Comment