ಪಾತ್ರಗಳು:
ರಾಜಕುಮಾರ
ಡೊಳ್ಳ (ಅತೀವ ದಪ್ಪ್ಪಗಿನ ದೇಹದವನು)
ಲಂಬು (ಅತೀವ ಎತ್ತರದ ದೇಹದವನು)
ಕುಳ್ಳ (ಅತೀವ ಕುಳ್ಳಗಿನ ದೇಹದವನು)
ಕೊಕ್ರ(ಅತ್ತಿತ್ತ ಕತ್ತು ತಿರುಗಿಸುವವನು)
ಚಳಿಯ(ನಿರಂತರ ಚಳಿಯಿಂದ ನಡುಗುತ್ತಿರುವವನು)
ರಾಣಿ, ರಾಜಕುಮಾರಿ, ಪ್ರಧಾನ ಮಂತ್ರಿ, ಜನರು

ದೃಶ್ಯ ಒಂದು: ಕಾಡು

(ಮರಗಿಡಗಳು. ಒಂದು ಬಂಡೆಯ ಮೇಲೆ ರಾಜಕುಮಾರ ದು:ಖಿತನಾಗಿ ಕುಳಿತಿದ್ದಾನೆ. ತಲೆ ತಗ್ಗಿಸಿ ಕುಳಿತಿರುವ ಅವನನ್ನು ನೋಡಿ ಒಬ್ಬ ಬಹಳ ದಪ್ಪಗಿನ ದೇಹದ, ದೊಡ್ಡ ಹೊಟ್ಟೆಯ ಕುಳ್ಳ ಹತ್ತಿರ ಬರುತ್ತಾನೆ)

ಡೊಳ್ಳ: ಯಾರು ನೀನು?

ರಾಕು: ನಾನು ಒಬ್ಬ ಪರದೇಶಿ.

ಡೊಳ್ಳ: ನೋಡಿದರೆ ಪರದೇಶಿಯ ಹಾಗ ಇಲ್ಲ. ರಾಜಕುಮಾರನ ಹಾಗೆ ಇರುವೆ.ಯಾವ ದೇಶ ನಿನ್ನದು?

ರಾಕು: ನನಗೆ ದೇಶವೂ ಇಲ್ಲ ವಾಸವೂ ಇಲ್ಲ.

ಡೊಳ್ಳ: ನನ್ನಂಥ ದರಿದ್ರನಿಗೆ ಸಹ ದೇಶ ಮತ್ತು ವಾಸ ಎರಡೂ ಇದೆ. ನಿನಗಿಲ್ಲವೆಂದರೆ ಹೇಗೆ? ಹೇಳು ಏನು ನಿನ್ನ ದು:ಖಕ್ಕೆ ಕಾರಣ?

ರಾಕು: ನಾನು ರಾಜಕುಮಾರ ನಿಜ. ಆದರೆ ನನ್ನ ತಂದೆಯನ್ನು ಕೊಂದು ಪ್ರಧಾನ ಮಂತ್ರಿ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದಾನೆ. ನಾನು ಹೇಗೋ ತಪ್ಪಿಸಿಕೊಂಡೆ. ಆದರೆ ಮಂತ್ರಿಯ ಸೈನಿಕರು ನನ್ನನ್ನು ಹುಡುಕುತ್ತಿದ್ದಾರೆ. ಅವರ ಕೈಗೆ ಸಿಕ್ಕಿದರೆ ನನ್ನ ತಲೆ ಕಡಿಯುತ್ತಾರೆ. (ಭೀತಿ ಮತ್ತು ದು:ಖ )

ಡೊಳ್ಳ: (ನಕ್ಕು) ನೀನಿನ್ನೂ ಚಿಕ್ಕವನು. ಅದಕ್ಕೇ ಸಾವಿನ ಯೊಚನೆಯಿಂದಲೇ ಹೆದರಿಬಿಟ್ಟಿದ್ದೀಯೆ.  ಸಾವಿನ ಕುರಿತು ಯೊಚಿಸ್ಬೇಡ; ಬದುಕಿನ ಕುರಿತು ಯೊಚಿಸು. ಇರು ನನ್ನ  ಜೊತೆ. ನಿನ್ನನ್ನು ನಾನು ರಕ್ಷಿಸುತ್ತೇನೆ.

ರಾಕು: ನಿನ್ನ ದೇಹವನ್ನು ಎತ್ತಲಿಕ್ಕೇ ನಿನಗೇ ಕಷ್ಟವಾಗುತ್ತಿರುವಾಗ ನನ್ನನ್ನು ಹೇಗೆ ರಕ್ಷಿಸುತ್ತಿ?

ಡೊಳ್ಳ: ಇಡೀ ಜಗತ್ತಿನಲ್ಲಿ ಎಲ್ಲೆಲ್ಲಿ ಯಾರ‍್ಯಾರು ಏನು ಮಾತಾಡುತ್ತಾರೆ ಎಂದು ನನಗೆ  ಕೇಳಿಸುತ್ತದೆ. ಅಷ್ಟೇ ಅಲ್ಲ. ನಾನು ಇಡೀ ಸಾಗರದ ನೀರನ್ನು ಕುಡಿಯಬಲ್ಲೆ.

ರಾಕು : ನೀನು ಸಾಗರದ ನೀರನ್ನು ಕುಡಿದರೆ ನನಗೆಂಥ ರಕ್ಷಣೆ ಸಿಗುತ್ತದೆ?

ಡೊಳ್ಳ:ಅದು ರಕ್ಷಣೆಯ ಆಗತ್ಯ ಬಂದಾಗ ತಿಳಿಯುವುದು. ನನಗೆ ಸ್ನೇಹಿತರಿದ್ದಾರೆ. ಅವರು ನಿನಗೆ ಸಹಾಯ ಮಾಡುತ್ತಾರೆ.

ರಾಕು:  ಯಾರು ನಿನ್ನ ಸ್ನೇಹಿತರು? ಎಲ್ಲಿದ್ದಾರೆ ಅವರು?

ಡೊಳ್ಳ: ಇಲ್ಲೇ ಹತ್ತಿರ ಗುಡಿಸಲಿನಲ್ಲಿ ನಿದ್ರೆ ಮಾಡುತ್ತಿದ್ದಾರೆ. ಒಬ್ಬೊಬ್ಬರನ್ನೇ ಪರಿಚಯ ಮಾಡಿಸುತ್ತೇನೆ.

(ಡೊಳ್ಳ ಸಿಳ್ಳು ಹೊಡೆಯುತ್ತಾನೆ. ಒಬ್ಬ ವಿಪರೀತ ಎತ್ತರದ ಮನುಷ್ಯ ಬಂದು ವಿಧೇಯತೆಯಿಂದ ನಿಲ್ಲುತ್ತಾನೆ)

ಡೊಳ್ಳ: ಲಂಬು,ರಾಜಕುಮಾರನಿಗೆ ನಿನ್ನ ಸಹಾಯದ  ಅಗತ್ಯವಿದೆ.

ಲಂಬು: ಆಗಲಿ. (ತಲೆಬಾಗುತ್ತಾನೆ)

ರಾಕು: ನೀನು ಎಷ್ಟು ಎತ್ತರ ಇರುವೆಯೆಂದರೆ  ನಿನ್ನ ತಲೆಯೆ ನನಗೆ ಕಾಣಿಸುತ್ತಿಲ್ಲ. ನೀನು  ಯಾವ ರೀತಿ ಸಹಾಯ ಮಾಡುವೆ?.

ಲಂಬು: ನಾನು ನಾಲ್ಕು ಹೆಜ್ಜೆಯಲ್ಲಿ ನಾಲ್ಕು ದೇಶಗಳನ್ನು ದಾಟುವೆ.

ರಾಕು: ಅದರಿಂದ ನನಗೇನು ಪ್ರಯೊಜನ?

ಲಂಬು:  ಅದು ಕಾಲ ಬಂದಾಗ ತಿಳಿಯುವುದು ರಾಜಕುಮಾರ.

(ಡೊಳ್ಳ ಸಿಳ್ಳು ಹೊಡೆಯುತ್ತಾನೆ. ಒಬ್ಬ ಬಹಳ ಕುಳ್ಳನಾದ ಬಹಳ ಚಿಕ್ಕ ದೇಹದ ಮನುಷ್ಯ ಬಂದು  ವಿಧೇಯತೆಯಿಂದ ನಿಲ್ಲುತ್ತಾನೆ)

ಡೊಳ್ಳ:  ಕುಳ್ಳ, ರಾಜಕುಮಾರನಿಗೆ ನಿನ್ನ ಸಹಾಯದ  ಅಗತ್ಯವಿದೆ.

ಕುಳ್ಳ: ಆಗಲಿ. (ತಲೆಬಾಗುತ್ತಾನೆ)

ರಾಕು: ನೀನು ಕಣ್ಣಿಗೇ ಕಾಣಿಸುತ್ತಿಲ್ಲ. ನೀನು ಯಾವ ರೀತಿ ಸಹಾಯ ಮಾಡುವೆ?

ಕುಳ್ಳ; ನನಗೆ ಸಮುದ್ರದಡಿಯಲ್ಲಿರುವ ಸೂಜಿ ಕೂಡ ಕಾಣಿಸುತ್ತದೆ.

ರಾಕು: ಅದರಿಂದ ನನಗೇನು ಪ್ರಯೊಜನ?

ಕುಳ್ಳ: ಅದು  ಕಾಲ ಬಂದಾಗ ತಿಳಿಯುವುದು ರಾಜಕುಮಾರ.

(ಡೊಳ್ಳ ಸಿಳ್ಳು ಹೊಡೆಯುತ್ತಾನೆ. ಒಬ್ಬ ಮನುಷ್ಯ ಬಂದು ವಿಧೇಯತೆಯಿಂದ ನಿಲ್ಲುತ್ತಾನೆ. ಅವನ ಕತ್ತು ಒಮ್ಮೆ ಬಲಗಡೆಗೆ  ಒಮ್ಮೆ ಎಡಗಡೆಗೆ ಹೊರಳುತ್ತಿರುತ್ತದೆ.)

ಡೊಳ್ಳ: ಕೊಕ್ರ, ರಾಜಕುಮಾರನಿಗೆ ನಿನ್ನ ಸಹಾಯದ ಅಗತ್ಯವಿದೆ.

ಕೊಕ್ರ: ಆಗಲಿ. (ತಲೆಬಾಗುತ್ತಾನೆ)

ರಾಕು: ನಿನ್ನ ತಲೆ ನಿಂತಲ್ಲಿ ನಿಲ್ಲುವುದಿಲ್ಲ. ನೀನು ಯಾವ ರೀತಿ ಸಹಾಯ ಮಾಡುವೆ?

ಕೊಕ್ರ: ಅದು ಸಹಾಯದ ಅಗತ್ಯ ಬಂದಾಗ ತಿಳಿಯುವುದು ರಾಜಕುಮಾರ.

(ಡೊಳ್ಳ ಸಿಳ್ಳು ಹೊಡೆಯುತ್ತಾನೆ. ಒಬ್ಬ ಸಾಮಾನ್ಯ ಗಾತ್ರದ ಮನುಷ್ಯ ಬಂದು ವಿಧೇಯತೆಯಿಂದ ನಿಲ್ಲುತ್ತಾನೆ. ಅವನು ನಡುಗುತ್ತಿದ್ದಾನೆ)

ಡೊಳ್ಳ: ಚಳಿಯ, ರಾಜಕುಮಾರನಿಗೆ ನಿನ್ನ ಸಹಾಯದ ಅಗತ್ಯವಿದೆ.

ರಾಕು: ನೀನೇಕೆ ಹಾಗೆ ನಡುಗುತ್ತಿರುವೆ?

ಚಳಿಯ: ನಾನು ಚಳಿಯಿಂದ ನಡುಗುತ್ತಿರುವೆ.

ರಾಕು: ಈ ಸೆಖೆಯಲ್ಲಿ , ಈ ಸುಡುವ ಬಿಸಿಲಿನಲ್ಲಿ ನಿನಗೆ ಚಳಿಯೆ?

ಡೊಳ್ಳ: ಬಿಸಿ ಜಾಸ್ತಿಯಾದಷ್ಟು ನನಗೆ ಚಳಿ ಜಾಸ್ತಿ. ನನ್ನನ್ನು  ನೀವು ಸೂರ್ಯನ ಮೇಲೆ ನಿಲ್ಲಿಸಿದರೆ ನಾನು ಚಳಿಯಲ್ಲಿ ಮರಕಟ್ಟಿ ಸತ್ತುಹೋಗುತ್ತೇನೆ.

ರಾಕು: ಈ ಚಳಿ ನಿನಗೆ ಶಾಶ್ವತವೆ?

ಚಳಿಯ: ಹೌದು. ಆದರೆ ಯಾರಾದರೊಬ್ಬರು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು “ನಿನ್ನ ಚಳಿ ನನಗೆ ಬರಲಿ” ಎಂದರೆ ಈ ಚಳಿ ಅವರಿಗೆ ಹೋಗುತ್ತದೆ.

ರಾಕು: ಅಂಥವರೊಬ್ಬರು ನಿನಗೆ  ಈ ತನಕ ಸಿಗಲಿಲ್ವ?

ಚಳಿಯ: ಇಲ್ಲ. ಯಾರಿಗೆ ಬೇಕು ಇಂಥ ಚಳಿ? ನನ್ನನ್ನು ಕಂಡರೇನೇ ಎಲ್ಲರೂ ಹೆದರಿ ಓಡುತ್ತಾರೆ.

ರಾಕು: ಹೀಗೆ ನಿರಂತರ ಚಳಿಯಲ್ಲಿ ನಡುಗುವ ನೀನು ಎಂಥ ಸಹಾಯ ಮಾಡುವೆ?

ಚಳಿಯ: ಅದು ಸಹಾಯದ ಅಗತ್ಯ ಬಿದ್ದಾಗ  ತಿಳಿಯುವುದು ರಾಜಕುಮಾರ.

ಡೊಳ್ಳ: ಸರಿ  ಇನ್ನು ಹೊರಡೋಣ.

ಎಲ್ಲರೂ: ಎಲ್ಲಿಗೆ?

ಡೊಳ್ಳ: ಲಂಬು, ನಮ್ಮನ್ನು ಎತ್ತಿಕೊಂಡು ಆ ಬೆಟ್ಟವನ್ನು ಹತ್ತು. ಅಲ್ಲಿಂದ ನಾನು ನಿನಗೆ ಮಹಾರಾಣಿ ಮಣಿಮೇಖಲಾ ಆಳುತ್ತಿರುವ ಮಂಗಳಗಂಗಾಪುರ ತೋರಿಸುತ್ತೇನೆ. ನಮ್ಮನ್ನು ಅದರ ಗಡಿಯಾಚೆ ಇಳಿಸು. ಅಲ್ಲಿಂದ ಮುಂದೆ  ನಮ್ಮ ಕಾರ್ಯಕ್ರಮ ಏನು ಎಂದು ಅಲ್ಲಿ ತಿಳಿಸುತ್ತೇನೆ.

ರಾಕು: ಮಂಗಳಗಂಗಾಪುರ! ಅದು  ಆರು ನೂರು ಮೈಲು ದೂರದಲ್ಲಿದೆ!

ಲಂಬು: ನನಗೆ ಮೈಲುಗಳ ಲೆಕ್ಕ ಗೊತ್ತಿಲ್ಲ. ನನಗೆ ಅದು ಕೇವಲ ಹತ್ತು ಹೆಜ್ಜೆ ದೂರ.

ಫೇಡ್ ಔಟ್

ದೃಶ್ಯ ಎರಡು: ಅರಮನೆ

(ರಾಣಿ ಸಿಂಹಾಸನದಲ್ಲಿ ಕುಳಿತಿದ್ದಾಳೆ. ಸೇವಕ ಬರುತ್ತಾನೆ)

ಸೇವ: ಒಬ್ಬ ರಾಜಕುಮಾರ ಮಹಾರಾಣಿಯವರನ್ನು ಕಾಣಲು ಬಂದಿದ್ದಾನೆ.

ರಾಣಿ: (ಸ್ವಗತ) ಈ ರಾಜಕುಮಾರರಿಂದ ಶಾಂತಿಯಿಲ್ಲದಾಗಿದೆ. ಒಬ್ಬರಾದ ಮೇಲೊಬ್ಬರು ಬರುತ್ತಲೇ ಇರುತ್ತಾರೆ. ಮೂರು ವರ್ಷದಲ್ಲಿ  ಮೂರು ಸಾವಿರ ಮಂದಿ ತಲೆ ಕಳೆದುಕೊಂಡಿದ್ದಾರೆ. ಆದರೂ ಬರುತ್ತಲೇ ಇದ್ದಾರೆ. (ಸೇವಕಿಯೊಡನೆ) ಇವನು ಹೇಗಿದ್ದಾನೆ?

ಸೇವ: (ಪ್ರಫುಲ್ಲತೆಯಿಂದ)ತುಂಬಾ ಚೆಂದ ಇದ್ದಾನೆ ಮಹಾರಾಣಿ.

ರಾಣಿ: ಈ ತನಕ ಬಂದ ಎಲ್ಲಾ ರಾಜಕುಮಾರರಿಗಿಂತ ಚೆಂದವೆ?

ಸೇವ: ಹೌದು ಮಹಾರಾಣಿ.

ರಾಣಿ: ಮೂರು ಪರೀಕ್ಷೆಗಳಲ್ಲಿ ಕೂಡ ಗೆಲ್ಲುವ ಸಾಮರ್ಥ್ಯ ಇರುವವನಂತೆ ಕಾಣಿಸುತ್ತದೆಯೆ? ಇಲ್ಲಿಯ ವರೆಗೆ ಯಾರೊಬ್ಬರಿಂದಲೂ ಒಂದು ಪರೀಕ್ಷೆಯನ್ನು ಎದುರಿಸಲು ಆಗಲಿಲ್ಲ.

ಸೇವ: (ಕರುಣೆಯಿಂದ)ಈತ ಬಹಳ ಚಿಕ್ಕ ಪ್ರಾಯದವನು ಮಹಾರಾಣಿ.

ರಾಣಿ: ಅಂದರೆ ನಮ್ಮ ರಾಜಕುಮಾರಿಗಿಂತಲೂ ಚಿಕ್ಕವನೆ?

ಸೇವ: ಸುಮಾರಾಗಿ ಅದೇ ಪ್ರಾಯದವನಿರಬಹುದು, ಮಹಾರಾಣಿ

ರಾಣಿ: ಸರಿ. ಕರೆದುಕೊಂಡು ಬಾ.

(ಸೇವಕಿ ರಾಜಕುಮಾರನನ್ನು ಕರೆದುಕೊಂಡು ಬರುತ್ತಾಳೆ. ರಾಜಕುಮಾರ ತಲೆ ಬಾಗಿ ವಂದಿಸುತ್ತಾನೆ)

ರಾಣಿ: ನೀನು ರಾಜಕುಮಾರನೆ? (ಅಚ್ಚರಿಯಿಂದ)

ರಾಕು: ಹೌದು ಮಹಾರಾಣಿ.

ರಾಣಿ: ಯಾವ ರಾಜ್ಯ?

ರಾಕು: ನಾನು  ಗುಲಾಬಿದೇಶದ ರಾಜಕುಮಾರ.

ರಾಣಿ: ಗುಲಾಬಿ ದೇಶ! (ವ್ಯಂಗ್ಯವಾಗಿ) ಅಲ್ಲಿ ಈಗ ಗುಲಾಬಿಗಳು ಬೆಳೆಯುತ್ತಿವೆಯೆ ಅಥವಾ ಮುಳ್ಳುಗಳು ಮಾತ್ರ ಬೆಳೆಯುತ್ತಿವೆಯೆ?

ರಾಕು: ಮುಳ್ಳುಗಳಿರುವ ಗುಲಾಬಿಗಳು ಮತ್ತು  ಗುಲಾಬಿಗಳಿರುವ ಮುಳ್ಳುಗಳು ಬೆಳೆಯುತ್ತವೆ ಮಹಾರಾಣಿ.

(ಅವನ ಉತ್ತರದಿಂದ ತುಸು ಅಪ್ರತಿಭಳಾಗುತ್ತಾಳೆ)

ರಾಣಿ: ನಿನಗೆ ರಾಜಕುಮಾರಿಯನ್ನು ಮದುವೆಯಾಗುವ ಬಯಕೆಯೆ?

ರಾಕು: ಹೌದು ಮಹಾರಾಣಿ.

ರಾಣಿ: (ಆಕಳಿಸುತ್ತಾ) ಪರೀಕ್ಷೆಗಳೇನೆಂದು ತಿಳಿದಿದೆಯೆ?

ರಾಕು: ಇಲ್ಲ ಮಹಾರಾಣಿ.

ರಾಣಿ: ಪರೀಕ್ಷೆಗಳೇನೆಂದು ತಿಳಿದುಕೊಳ್ಳದೆ ಪರೀಕ್ಷೆಗಳನ್ನು ಎದುರಿಸಲು ಬಂದಿರುವೆ. ಆಶ್ಚರ್ಯ! (ರಾಜಕುಮಾರ ಮನವಾಗಿದ್ದಾನೆ) ಸರಿ. ಒಟ್ಟು ಮೂರು ಪರೀಕ್ಷೆಗಳಿವೆ. ಒಂದು ಪರೀಕ್ಷೆಯಲ್ಲಿ ಯಶಸ್ವಿಯಾದರೆ  ಮಾತ್ರ ಮುಂದಿನ ಪರೀಕ್ಷೆ  ಏನೆಂದು ತಿಳಿಸಲಾಗುವುದು.

ರಾಕು: ಯಸ್ ಮಾಡಮ.

ರಾಣಿ: (ಪರಮಾಶ್ಚರ್ಯಭರಿತಳಾಗಿ) ಹಾಗೆಂದರೆ?

ರಾಕು: ಕ್ಷಮಿಸಬೇಕು ಮಹಾರಾಣಿ. ಅದು ನಮ್ಮ ದೇಶದ ಶಾಲೆಗಳ ಭಾಷೆ. ಅಭ್ಯಾಸದಿಂದ ನಾಲಿಗೆಗೆ ಬಂದುಬಿಟ್ಟಿತು.

ರಾಣಿ: ಏನು ಅದರ ಅರ್ಥ?

ರಾಕು: ಸರಿ ಮಹಾರಾಣಿ ಎಂದೇ ಅರ್ಥ.

ರಾಣಿ: ಸರಿ ಹಾಗಾದರೆ.  ಕೇಳು. ಮೊದಲ ಪರೀಕ್ಷೆ.   ಕೆಂಪು ಸಮುದ್ರಕ್ಕೆ ನನ್ನದೊಂದು ಉಂಗುರ ಬಿದ್ದುಬಿಟ್ಟಿದೆ. ಅದನ್ನು ತಂದುಕೊಡಬೇಕು. ನೆನಪಿರಲಿ. ಈ ಮೊದಲನೆಯ ಪರೀಕ್ಷಯಲ್ಲಿಯೆ ಸೋತು ಮೂರು ಸಾವಿರ ರಾಜಕುಮಾರರು ತಲೆಕಳೆದುಕೊಂಡಿದ್ದಾರೆ.

ರಾಕು: ಸಾಯಂಕಾಲದೊಳಗೆ ನಿಮ್ಮ ಉಂಗುರ ತಂದುಕೊಡುವೆ ಮಹಾರಾಣಿ.

(ರಾಜಕುಮಾರನ ನಿರ್ಗಮನ)

ಫೇಡ್ ಔಟ್

ದೃಶ್ಯ ಮೂರು: ಗುಡಿಸಲು.

(ರಾಜಕುಮಾರನ ಐವರು ಬಂಟರು. ಸರಸ ಸಂಭಾಷಣೆಯಲ್ಲಿ ಆನಂದವಾಗಿದ್ದಾರೆ. ರಾಜಕುಮಾರನ ಆಗಮನ)

ಡೊಳ್ಳ: ಮಹಾರಾಣಿಯ ಭೇಟಿಯಾಯಿತೆ ರಾಜಕುಮಾರ?

ರಾಕು: ಆಯಿತು.

ಡೊಳ್ಳ: ಮಹಾರಾಣಿಯ ಎದುರು ನಿಂತಾಗ ನಡುಕವೇನಾದರೂ ಬಂತೆ? (ನಗು)

ರಾಕು: ಇಲ್ಲ. ಒಂದು ಹಂತದಲ್ಲಿ ಬಾಯಿತಪ್ಪಿನಿಂದ ಮ್ಯಡಮ ಎಂದು ಕರೆದುಬಿಟ್ಟೆ!

ಡೊಳ್ಳ: ಹೌದೆ? ಏನಿತ್ತು ಅದಕ್ಕೆ ಆಕೆಯ ಪ್ರತಿಕ್ರಿಯೆ?

ರಾಕು: ಆಕೆಗೆ ಆಶ್ಚರ್ಯವಾಗಿ, ಮಾಡಮ ಎಂದರೇನರ್ಥ ಎಂದು ಕೇಳಿದಳು. ಮಾಡಮ ಅಂದರೆ ಮಹಾರಾಣಿ ಎಂದು ಅರ್ಥ ಅಂತ ಹೇಳಿದೆ.

ಡೊಳ್ಳ. ಗುಡ್. ಹಾಗೆ ಅವಳನ್ನು ಫೂಲ್ ಮಾಡಬೇಕಾದ ಅಗತ್ಯ ಇದೆ. ಅಷ್ಟೇ ಅಲ್ಲ, ಅವಳಿಗೆ ಜ್ಞಾನೋದಯವಾಗಬೇಕಬೇಕಾಗಿದೆ!

ರಾಕು: ಯಾಕೆ?

ಡೊಳ್ಳ: ಯಾಕೆಂದರೆ, ಅವಳ ಬಂಟರ ಉಪಟಳ ಸಹಿಸಲಾಗದೆ ಈ ರಾಜ್ಯ ಬಿಟ್ಟು ಹೋದವರು ನಾವು!  ಸರಿ. ಇರಲಿ. ಅವಳ ಶರತ್ತುಗಳೆಲ್ಲ ನಮಗೆ ಗೊತ್ತಿವೆ. ಏ ಕುಳ್ಳಣ್ಣ್ಪ , ಆ ಉಂಗುರ ಎಲ್ಲಿದೆ ನೋಡು. (ಕುಳ್ಳ ಕಣ್ಣು ಸಣ್ಣದು ಮಾಡಿ ಏಕಾಗ್ರತೆಯಿಂದ ನೋಡುತ್ತಾನೆ) ಕಾಣಿಸುತ್ತಿದೆಯೆ?

ಕುಳ್ಳ:   ಕಾಣಿಸುತ್ತಿದೆ.

ಡೊಳ್ಳ: ಎಲ್ಲಿದೆ?

ಕುಳ್ಳ: ಸಮುದ್ರದ ತಳದಲ್ಲಿದೆ.

ಡೊಳ್ಳ: ಲಂಬೂ, ಅದನ್ನು ಎತ್ತಿ ಕೊಡು.

ಲಂಬು: ನೀರಿನಡಿಯಲ್ಲಿರುವ ಉಂಗುರ ನನಗೆ ಕಾಣಿಸದಿದ್ದರೆ ನಾನು ಅದನ್ನು ತೆಗೆಯುವುದು ಹೇಗೆ?

ಡೊಳ್ಳ: ನೀರು ನಾನು ಖಾಲಿ ಮಾಡುತ್ತೇನೆ. (ಕುಕ್ಕರಗಾಲಿನಲ್ಲಿ ಕುಳಿತು ಬಾಯನ್ನು ನೆಲಕ್ಕೆ ಹಚ್ಚಿ ನೀರು ಹೀರುವ ಶಬ್ದ ಮಾಡಿ)  ನೀರು ಖಾಲಿಯಾಗಿದೆ. ಈಗ ತೆಗಿ ಉಂಗುರ. (ಲಂಬು ಕೈ ಉದ್ದ ಮಾಡಿ ಉಂಗುರವನ್ನು ಎತ್ತಿ ರಾಜಕುಮಾರನ ಕೈಯಲ್ಲಿಡುತ್ತಾನೆ) ಡೊಳ್ಳ: ಸರಿ. ಇನ್ನು  ಸಮದ್ರಕ್ಕೆ ನೀರನ್ನು ಕೊಟ್ಟುಬಿಡುತ್ತೇನೆ. (ಕುಕ್ಕರಗಾಲಿನಲ್ಲಿ ಕುಳಿತು ಬಾಯನ್ನು ನೆಲಕ್ಕೆ ಹಚ್ಚಿ ನೀರು ಹರಿಸುವ ಶಬ್ದ ಮಾಡುತ್ತಾನೆ)

ಫೇಡ್ ಔಟ್

ದೃಶ್ಯ ನಾಲ್ಕು: ಅರಮನೆ

(ರಾಣಿಯ ಮುಂದೆ ರಾಜಕುಮಾರ ನಿಂತಿದ್ದಾನೆ. ರಾಣಿಯ ಕೈಯಲ್ಲಿ ಉಂಗುರವಿದೆ. ಉಂಗುರವನ್ನು ಪರಿಶೀಲಿಸುತ್ತಿದ್ದಾಳೆ)

ರಾಣಿ: ಸರಿ. ನೀನು ಮೊದಲ ಪರೀಕ್ಷೆಯಲ್ಲಿ ಗೆದ್ದಿರುವೆ.  ಇನ್ನು ಎರಡನೆಯ ಪರೀಕ್ಷೆ.

ರಾಕು: ಆಗಲಿ ಮಹಾರಾಣಿ.

ರಾಣಿ: ಆ ಮೈದಾನದಲ್ಲಿ ಒಂದು ಸಾವಿರ ಕುರಿಗಳಿವೆ. ಅವುಗಳನ್ನೆಲ್ಲ ಮಧ್ಯಾಹ್ನದೊಳಗೆ ತಿಂದು ಮುಗಿಸಬೇಕು. ಅರಮನೆಯ ನೆಲಮಾಳಿಗೆಯಲ್ಲಿ ಒಂದು ಸಾವಿರ ಗ್ಯಾಲನ್ ವೈನ್ ಇದೆ. ಅದನ್ನು ಕುಡಿದು ಮುಗಿಸಬೇಕು.

ರಾಕು: ಆಗಲಿ ಮಹಾರಾಣಿ. ನನ್ನ ಒಬ್ಬನೇ ಒಬ್ಬ ಸ್ನೇಹಿತನನ್ನು  ನನ್ನ ಸಹಾಯಕ್ಕೆ ತೆಗೆದುಕೊಳ್ಳಲು ಅನುಮತಿ ನೀಡಬೇಕು.

ರಾಣಿ: ಆಗಲಿ. (ನಸುನಕ್ಕು) ಆದರೆ ಒಬ್ಬನೇ ಒಬ್ಬ.

ರಾಕು: ಆಗಲಿ ಮಹಾರಾಣಿ. ಒಬ್ಬನೇ ಒಬ್ಬ.

(ರಾಜಕುಮಾರನ ನಿರ್ಗಮನ)

ಫೇಡ್ ಔಟ್

ದೃಶ್ಯ ಐದು: ಗುಡಿಸಲು

(ರಾಜಕುಮಾರನ ಐವರು ಬಂಟರು. ಸರಸ ಸಂಭಾಷಣೆಯಲ್ಲಿ ಆನಂದವಾಗಿದ್ದಾರೆ. ರಾಜಕುಮಾರನ ಆಗಮನ)

ಡೊಳ್ಳ: ಸರಿ. ನಡಿ ರಾಜಕುಮಾರ ಮೊದಲು ಕುರಿಗಳನ್ನು ಮುಗಿಸುತ್ತೇನೆ. ಅನಂತರ ದ್ರಾಕ್ಷಾರಸದ ಗೋದಾಮು ಖಾಲಿ ಮಾಡುತ್ತೇನೆ. (ನಗುತ್ತಾನೆ. ಇತರರು ಕೂಡ ನಗುವಿನಲ್ಲಿ ಪಾಲುಗೊಳ್ಳುತ್ತಾರೆ)

ಲಂಬು: ನಮಗೆ ಉಪವಾಸವೆ?

ಡೊಳ್ಳ: ಸದ್ಯಕ್ಕೆ ಜೋಳದ ರೊಟ್ಟಿ ಮಾಡಿಕೊಳ್ಳಿ. ಔತಣದ ದಿನ ಹತ್ತಿರದಲ್ಲಿಯೆ ಇದೆ.

ಕುಳ್ಳ: ಜೋಳದ ಒಣ ರೊಟ್ಟಿ ತಿಂದು ತಿಂದು ಸಾಕಾಗಿದೆ.

ಡೊಳ್ಳ: ನನ್ನ ಬಳಿ ಸ್ವಲ್ಪ ಹಣವಿದೆ. ಲಂಬೂ ಎಲ್ಲಿಂದಾದ್ರೂ ಸ್ವಲ್ಪ ಬೆಣ್ಣೆ   ಮತ್ತು ಏನಾದ್ರೂ ಒಳ್ಳೆಯ ಪಲ್ಯ ತರ‍್ತೀಯ?

ಲಂಬು: ಆಗ್ಲಿ ಎಲ್ಲಿಂದ ತರ್ಲಿ? ಮಂಗಳಗಂಗಾಪುರದ ಯಾವ ಹೋಟೆಲಿನಲ್ಲಿ ಯಾವ ಪಲ್ಯವೂ ಚೆನ್ನಗಿಲ್ಲ.

ಡೊಳ್ಳ: ನಿಂಗೆ ದೂರ ಹತ್ತಿರ ಎಲ್ಲಾ ಒಂದೇ ಅಲ್ವ? ಯಾವುದಾದರೂ ದೂರ ದೇಶದಿಂದ್ಲೇ ತಾ.

ಚಳಿಯ: ಕಾಶ್ಮೀರಪುರದಿಂದ ಏನಾದ್ರೂ ಬಿಸಿಯಾಗಿರುವುದನ್ನು ತಾ.

ಕುಳ್ಳ: ಅಥವಾ ಕೇರಳಾಪುರದಿಂದ ಏನಾದ್ರೂ ಕರ‍್ದದ್ದನ್ನು ತಾ.

ಕೊಕ್ರ: ಅಥವಾ ಶ್ರೀಲಂಕಾಪುರದಿಂದ ಏನಾದ್ರೂ ಹುರ‍್ದದ್ದನ್ನು ತಾ.

ಡೊಳ್ಳ: ಒಟ್ಟಿನಲ್ಲಿ  ದೂರದಿಂದ್ಲೇ ಏನಾದ್ರೂ ರುಚಿರುಚಿಯಾದ್ದನ್ನ ತಾ. ಇನ್ನೂ ಹೆಚ್ಚು ರುಚಿಯಾದದ್ದು ಬೇಕಂದ್ರೆ ನಮ್ಮ ರಾಜಕುಮಾರನ ಮದುವೆಯ ವರೆಗೆ ಕಾಯಬೇಕು. ಅಲ್ವಾ ರಾಜಕುಮಾರ?

ರಾಕು: ಬದುಕಿ ಉಳಿದ್ರೆ?

ಡೊಳ್ಳ: ಬದುಕಿದವರಿಗಲ್ಲದೆ ಸತ್ತವರಿಗೆ ಇದೆಯೆ ಮದುವೆ? ಎಲ್ಲಾ ಪರೀಕ್ಷೆಗಳನ್ನು ದಾಟಿ ನಾವು ಉಳಿದೇ ಉಳಿಯುತ್ತೇವೆ, ಪ್ರಿಯ ರಾಜಕುಮಾರ. ಆಗಲೇ ಹೇಳಿದೆ, ಸಾವಿನ ಕುರಿತು ಯೊಚಿಸಬೇಡ, ಬದುಕಿನ ಕುರಿತು ಯೊಚಿಸು ಅಂತ. ಮರೆತುಬಿಟ್ಟೆಯೆನು?

ರಾಕು: ಇಲ್ಲ, ಮರೆತಿಲ್ಲ.

ಡೊಳ್ಳ: ಬಾ ಹೋಗೋಣ. ಮಣಿಮೇಖಲೆಯ ವೈನ್ ಮತ್ತು  ಕುರಿಗಳ ಸಾಮಾಜ್ಯಕ್ಕೆ. (ನಿರ್ಗಮನ)

ಫೇಡ್ ಔಟ್

ದೃಶ್ಯ ಆರು: ಅರಮನೆ

(ರಾಣಿ ಯ ಮುಂದೆ  ರಾಜಕುಮಾರ ನಿಂತಿದ್ದಾನೆ.

ರಾಣಿ: ಈ ಪರೀಕ್ಷೆಯಲ್ಲಿ ಕೂಡ ಗೆದ್ದುಬಿಟ್ಟೆ!

ರಾಕು: ಹೌದು ಮಹಾರಾಣಿ.

ರಾಣಿ: ಮುಂದಿನ ಸವಾಲಿಗೆ ಸಿದ್ಧನಿರುವೆಯ?

ರಾಕು: ಸಿದ್ಧನಿರುವೆ ಮಹಾರಾಣಿ.

ರಾಣಿ: ಸರಿ ಹಾಗಾದರೆ. ನೀನು ಒಂದು ಮುರುಕು ಗುಡಿಸಲಿನಲ್ಲಿ ವಾಸವಾಗಿರುವೆ ಎಂದು ನನಗೆ ಸುದ್ದಿ ಸಿಕ್ಕಿದೆ. ರಾಜಕುಮಾರನಾಗಿರುವ ನೀನು ಅಂಥ ಕಡೆ ವಾಸವಾಗಿರುವುದು ಚೆನ್ನಾಗಿರುವುದಿಲ್ಲ. ಅಲ್ಲದೆ ಈಗ ಎರಡು ಪರೀಕ್ಷೆಗಳಲ್ಲಿ ನೀನು ಗೆದ್ದಿರುವುದರಿಂದ ನಿನ್ನನ್ನು ನಮ್ಮ ಅತಿಥಿ ಎಂದು ಪರಿಗಣಿಸಲಾಗುತ್ತದೆ. ನಿನ್ನ ವಾಸಕ್ಕಾಗಿ ಒಂದು ಅರಮನೆಯನ್ನು ಸಿದ್ಧಗೊಳಿಸಲಾಗಿದೆ. ಅದರ ಒಂದು ಕೋಣೆಯಲ್ಲಿ ಈ ರಾತ್ರಿ ರಾಜಕುಮಾರಿಯನ್ನು ಕುಳ್ಳಿರಿಸಲಾಗುವುದು. ಅದೇ ಕೋಣೆಯಲ್ಲಿ ನೀನ್ನು ಒಂದು  ಇಡೀ ರಾತ್ರಿ ಇರಬೇಕು. ನೀನು ಒಂದು ಕುರ್ಚಿಯಲ್ಲಿ ಕುಳಿತುಕೊಳ್ಳಬೇಕು. ಕುಳಿತಲ್ಲಿಂದ ಏಳಬಾರದು. ಅವಳನ್ನೇ ನೋಡಬಾರದು. ಅವಳ ಮೇಲೆ ಒಂದು ಕಣ್ಣಿರಿಸಬೇಕು.  ಅವಳ ಜೊತೆ ಮಾತಾಡಬಾರದು. ನಿದ್ದೆ ಮಾಡಬಾರದು. ನೀನು ಒಂದು ನಿಮಿಷ ಕಣ್ಣು ಮುಚ್ಚಿದರೂ ಆ ಕ್ಷಣ ರಾಜಕುಮಾರಿ ಮಾಯವಾಗುತ್ತಾಳೆ. ನಡುರಾತ್ರಿಯಲ್ಲಿ ಯಾವುದೇ ಹೊತ್ತು ನಾನು ನೋಡಲು ಬರುತ್ತೇನೆ. ಆಗ ರಾಜಕುಮಾರಿ ನಿನ್ನ ಕೋಣೆಯಲ್ಲಿ ಇಲ್ಲದಿದ್ದರೆ ನಿನ್ನನ್ನು ನೇರವಾಗಿ ವಧಾಸ್ಥಾನಕ್ಕೆ ಒಯ್ಯಲಾಗುವುದು.

ರಾಕು: ಆಗಲಿ ಮಹಾರಾಣಿ. ಆದರೆ ನನ್ನ ಪ್ರಾಣಸ್ನೇಹಿತರಿಗೆ ಕೂಡ  ಅರಮನೆಯಲ್ಲಿ ವಾಸಿಸಲು ಅನುಮತಿಸಬೇಕು ಮಹಾರಾಣಿ.

ರಾಣಿ: ಆಗಲಿ. ಅವರಿಗೆ ಪ್ರತ್ಯೇಕವಾದ ಕೋಣೆಯನ್ನು ನೀಡಲಾಗುವುದು. ನಿನ್ನ ಕೋಣೆಗೆ ಅವರಿಗೆ ಪ್ರವೇಶಿಸಲು ಅನುಮತಿಯಿಲ್ಲ.

ರಾಕು: ಆಗಲಿ ಮಹಾರಾಣಿ.

(ರಾಜಕುಮಾರನ ನಿರ್ಗಮನ)

ಫೇಡ್

ದೃಶ್ಯ ಏಳು: ರಾಜಕುಮಾರನ ಕೋಣೆ

(ರಂಗದ ನಡುವೆ ಗೋಡೆ. ಎಡಗಡೆಯ ಕೋಣೆಯಲ್ಲಿ ರಾಜಕುಮಾರಿ ಒಂದು ಕುರ್ಚಿಯಲ್ಲಿ ಪ್ರತಿಮೆಯಂತೆ ಕುಳಿತಿದ್ದಾಳೆ. ಅವಳ ಪಕ್ಕದಲ್ಲಿ ಒಂದು ಖಾಲಿ ಕುರ್ಚಿಯಿದೆ. ರಾಜಕುಮಾರನ ಪ್ರವೇಶ. ಖಾಲಿಯಾಗಿರುವ ಕುರ್ಚಿಯಲ್ಲಿ ಅವಳಿಗೆ ಬೆನ್ನು ಹಾಕಿ ಕುಳಿತುಕೊಳ್ಳುತ್ತಾನೆ. ರಾಜಕುಮಾರಿ ತನಗೆ ಏನೂ  ಕಾಣಿಸುವುದಿಲ್ಲ ಎಂಬಂತಿದ್ದಾಳೆ. ಬಲಗಡೆಯ ಕೋಣೆಯಲ್ಲಿ  ರಾಜಕುಮಾರನ ಸ್ನೇಹಿತರಿದ್ದಾರೆ)

ಡೊಳ್ಳ: ಮಣಿಮೇಖಲೆ ಯಾವುದೋ ಭಯಾನಕವಾದ ತಂತ್ರ ಹೂಡಿದ್ದಾಳೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ನಾವು ಇಡೀ ರಾತ್ರಿ ಎಚ್ಚರವಾಗಿಯೆ ಇರಬೇಕು.

ಲಂಬು: ನಾನು ಬಾಗಿಲಿನ ಸನಿಹ ಇರುತ್ತೇನೆ. ತಂತ್ರದ ಸುಳಿವು ಸಿಕ್ಕ ಕೂಡಲೇ ನನಗೆ ತಿಳಿಸಿ. ತಕ್ಷಣ ನಾನು ಕಾರ್ಯಪ್ರವೃತ್ತನಾಗುತ್ತೇನೆ. (ಬಾಗಿಲಿಗೆ ಅಂಟಿಕೊಂಡು ನಿಲ್ಲುತ್ತಾನೆ)

ಡೊಳ್ಳ: ಯಾವುದೇ ಅನುಮಾನಾಸ್ಪದ ಶಬ್ದ ಕೇಳಿಸಿದರೆ ತಕ್ಷಣ ತಿಳಿಸುತ್ತೇನೆ. (ನೆಲಕ್ಕೆ ಕಿವಿ ಹಚ್ಚಿ ಕುಳಿತುಕೊಳ್ಳುತ್ತಾನೆ)

ಕುಳ್ಳ: ಅತ್ಯಂತ ಸೂಕ್ಷ ವಾದ ಯಾವುದೇ ವಸ್ತುವಿನ ಚಲನೆಯನ್ನು  ನಾನು ಪತ್ತೆ ಮಾಡುತ್ತೇನೆ. (ಎಲ್ಲಾ ಕಡೆ ಸೂಕ್ಷ ವಾಗಿ ಗಮನಿಸುತ್ತಾನೆ)

ಕೊಕ್ರ: ನಾನು ಎಲ್ಲಾ ದಿಕ್ಕುಗಳಲ್ಲಿಯೂ ಕಣ್ಣಿರಿಸುತ್ತೇನೆ. (ಕೋಣೆಯ ಮಧ್ಯದಲ್ಲಿ ನಿಂತಲ್ಲಿಯೆ ನಿಧಾನಗತಿಯಲ್ಲಿ ತಿರುಗುತ್ತಾನೆ)

ಚಳಿಯ: (ಬೇಸರದಿಂದ) ಎಂದಿನಂತೆಯೆ ನನಗೆ ಯಾವ ಕೆಲಸವೂ ಇದ್ದಂತಿಲ್ಲವಲ್ಲ?

ಡೊಳ್ಳ: ನೀನು ನಾವು ನಾಲ್ಕು ಮಂದಿಯ ಮೇಲೆ ಸದಾ ಕಣ್ಣಿರಿಸು. ನಾವು ಕಣ್ಣು ಮುಚ್ಚಿದರೆ ತಕ್ಷಣ ಎಚ್ಚರಿಸು. (ಚಳಿಯ ಅವರೆಲ್ಲರನ್ನೂ ಅವಲೋಕಿಸುತ್ತಾನೆ)

(ಸ್ವಲ್ಪ ಹೊತ್ತಿನಲ್ಲಿ ರಂಗದಲ್ಲಿ ಬೆಳಕು ಕಡಿಮೆಯಾಗುತ್ತದೆ. ಎರಡು ಕೋಣೆಯಲ್ಲಿಯೂ ಹೊಗೆ ತುಂಬಿಕೊಳ್ಳುತ್ತದೆ. ರಾಜಕುಮಾರನಿಗೆ ನಿದ್ದೆ ಬಂದು ಹಾಗೆಯೆ ಕುರ್ಚಿಯಲ್ಲಿ ಒರಗಿ ಕುಳಿತುಕೊಳ್ಳುತ್ತಾನೆ. ಆಚೆ ಕೋಣೆಯಲ್ಲಿ ಅವನ ಸ್ನೇಹಿತರು ತಾವಿದ್ದಲ್ಲಿಯೆ ಕುಸಿದು ಕುಳಿತು ನಿದ್ದೆಹೋಗುತ್ತಾರೆ. ಬೆಳಕು ಆರುತ್ತದೆ. ನಿಧಾನವಾಗಿ ಬೆಳಕು ಬಂದಾಗ  ಎಲ್ಲರೂ ನಿದ್ರೆಯಲ್ಲಿಯೆ ಇದ್ದಾರೆ. ರಾಜಕುಮಾರಿ ಮಾಯವಾಗಿದ್ದಾಳೆ. ರಾಜಕುಮಾರ  ಎಚ್ಚರಗೊಳ್ಳುತ್ತಾನೆ)

ರಾಕು: ರಾಜಕುಮಾರಿ ಮಾಯವಾಗಿದ್ದಾಳೆ!

(ರಾಜಕುಮಾರನ ಕೂಗನ್ನು ಕೇಳಿ ಅವನ ಸ್ನೇಹಿತರು ಎಚ್ಚರಗೊಳ್ಳುತ್ತಾರೆ)

ಲಂಬು: ಡೊಳ್ಳಣ್ಣ , ಏನು ಕೇಳಿಸುತ್ತಿದೆ?

ಡೊಳ್ಳ: ರಾಣಿ ರಾಜಕುಮಾರನ ತಲೆಕಡಿಯಲು ಸಿದ್ಧವಾಗಿರಿ ಎಂದು ಸೈನಿಕರಿಗೆ ಹೇಳುತ್ತಿದ್ದಾಳೆ.

ಲಂಬು: ಕುಳ್ಳಣ್ಣ . ಎಲ್ಲಿದ್ದಾಳೆ ರಾಜಕುಮಾರಿ?

ಕುಳ್ಳ: ನಾಲ್ಕು ಬೆಟ್ಟಗಳಾಚೆ ಒಂದು ಬೇಸಗೆ ಮಹಲಿನಲ್ಲಿದ್ದಾಳೆ.

ಲಂಬು: ಏನು ಮಾಡುತ್ತಿದ್ದಾಳೆ?

ಕುಳ್ಳ: ನಿದ್ದೆ ಮಾಡುತ್ತಿದ್ದಾಳೆ.

(ಲಂಬು ಬಾಗಿಲು ತೆರೆದು ಹೊರಹೋಗುತ್ತಾನೆ. ಮರುಕ್ಷಣದಲ್ಲಿ ರಾಜಕುಮಾರಿಯನ್ನು ಎತ್ತಿಕೊಂಡು ಬರುತ್ತಾನೆ. ರಾಜಕುಮಾರನ ಕೋಣೆಯೊಳಗೆ ಹೋಗಿ ಅವಳ ಕುರ್ಚಿಯಲ್ಲಿ ಕುಳ್ಳಿರಿಸುತ್ತಾನೆ. ಅವಳಿನ್ನೂ ನಿದ್ದೆಯಲ್ಲಿಯೆ ಇದ್ದಾಳೆ. ಲಂಬು ಹೊರಟುಹೋದ ಮರುಕ್ಷಣವೇ ರಾಣಿ ಒಳಬರುತ್ತಾಳೆ. ರಾಜಕುಮಾರನನ್ನು ಮತ್ತು ಕುರ್ಚಿಯಲ್ಲಿ ಒರಗಿ ನಿದ್ರಿಸಿರುವ ರಾಜಕುಮಾರಿಯನ್ನು  ತೀಕ್ಷ ವಾಗಿ ನೋಡುತ್ತಾಳೆ)

ರಾಕು: ನಾನು ನಿದ್ದೆ ಮಾಡಿಲ್ಲ. ರಾಜಕುಮಾರಿ ನಿದ್ದೆ ಮಾಡಿದ್ದಾಳೆ.

(ರಾಣಿ ಕ್ರುದ್ಧಳಾಗಿ ಏನೂ ಹೇಳದೆ ಹೊರಟುಹೋಗುತ್ತಾಳೆ. ಆ ಕಡೆ ರಾಜಕುಮಾರನ ಸ್ನೇಹಿತರು ಗೆದ್ದೆವೆಂಬ ಭಾವದಲ್ಲಿ ಕುಣಿದು ಕುಪ್ಪಳಿಸಿ ನರ್ತಿಸುತ್ತಾರೆ)

ಫೇಡ್ ಔಟ್

ದೃಶ್ಯ ಎಂಟು: ಅರಮನೆ

(ರಾಣಿ ಯ ಮುಂದೆ  ರಾಜಕುಮಾರ ನಿಂತಿದ್ದಾನೆ)

ರಾಣಿ: ಮೂರು ಪರೀಕ್ಷೆಗಳಲ್ಲಿ ಕೂಡ ಗೆದ್ದಿರುವೆ. ಆದರೆ ನೀನು ಗೆದ್ದಿರುವುದು ನಿನ್ನ ಬಂಟರ ಸಹಾಯದಿಂದ ಹೊರತು ನಿನ್ನ ಸ್ವಂತ ಶಕ್ತಿಯಿಂದಲ್ಲ. ಸ್ವಂತ ಶಕ್ತಿಯನ್ನು ಉಪಯೊಗಿಸದೆ ಪರೀಕ್ಷೆಗಳನ್ನು ಗೆದ್ದಿರುವವನಿಗೆ ನಾನು ರಾಜಕುಮಾರಿಯನ್ನು ಕೊಡಲು ಸಿದ್ಧಳಿಲ್ಲ.  ನೀನು ನಿನ್ನ ಸ್ವಂತ ಶಕ್ತಿಯಿಂದ ಒಂದು ಪರೀಕ್ಷೆಯ ಗೆದ್ದು ತೋರಿಸಿದರೆ ಮಾತ್ರ ನಿನಗೆ ರಾಜಕುಮಾರಿ ಸಿಗುತ್ತಾಳೆ. (ತುಸು ತಡೆದು) ನಿನ್ನ ಮುಂದೆ ಎರಡು ಆಯೆಗಳಿವೆ.

ರಾಕು: ಅವು ಏನೆಂದು ತಿಳಿಯಲು ಬಯಸುತ್ತೇನೆ ಮಹಾರಾಣಿ.

ರಾಣಿ: ಒಂದು, ಈ ಹೊಸ ಪರೀಕ್ಷೆ ಬೇಡ ಎಂದು ನೀನು ಹಿಂತಿರುಗಿ ಹೋಗಬಹುದು. ತಲೆ ಸಹಿತ ಹಿಂತಿರುಗಿ ಹೋದ ಮೊದಲ ರಾಜಕುಮಾರನಾಗುತ್ತಿ. ಎರಡು, ಈ ಹೊಸ ಪರೀಕ್ಷೆಯನ್ನು ಸ್ವೀಕರಿಸಿ ಅದರಲ್ಲಿ ನೀನು ಗೆದ್ದರೆ, ರಾಜಕುಮಾರಿ ನಿನ್ನವಳಾಗುತ್ತಾಳೆ.

ರಾಕು: ಈ ಹೊಸ  ಪರೀಕ್ಷೆ ಏನೆಂಬದನ್ನು  ತಿಳಿಯಲು  ಇಚ್ಛಿಸುತ್ತೇನೆ ಮಹಾರಾಣಿ.

ರಾಣಿ:  ಅರಮನೆಯ ಮೈದಾನದಲ್ಲಿ ನಾಲ್ಕು ಆನೆ ಎತ್ತರದ ಒಂದು ಸೌದೆಯ ರಾಶಿಯನ್ನು ಸಿದ್ಧಪಡಿಸುತ್ತೇವೆ. ನೀನು ಅದರ ಮೇಲೆ ಕುಳಿತುಕೊಳ್ಳಬೇಕು. ಸೌದೆಯ ರಾಶಿಗೆ ಬೆಂಕಿ ಇಡಲಾಗುತ್ತದೆ. ಸೌದೆಯೆಲ್ಲಾ ಉರಿದು ಮುಗಿದ ಮೇಲೆ ನೀನು ಅದರಿಂದ ಹೊರಬರಬೇಕು. ನೀನು ಜೀವಂತವಾಗಿ ಹೊರಬಂದರೆ ರಾಜಕುಮಾರಿ ನಿನ್ನ ಕೈಹಿಡಿಯುತ್ತಾಳೆ.

ರಾಕು: ಆಗಲಿ ಮಹಾರಾಣಿ.

ರಾಣಿ: ಏನು ಈ ಅಗ್ನಿಪರೀಕ್ಷೆಯನ್ನು ನೀನು ಸ್ವೀಕರಿಸುತ್ತೀಯ?

ರಾಕು: ಹೌದು ಮಹಾರಾಣಿ.

ರಾಣಿ: (ಎದ್ದು ಬಂದು ಅವನ ಬೆನ್ನು ತಟ್ಟಿ) ಈ ಪಣದಲ್ಲಿ ನೀನು ಗೆದ್ದರೂ ಸೋತರೂ ಈ ಸವಾಲನ್ನು ಸ್ವೀಕರಿಸದ ರಾಜಕುಮಾರ ನೀನು ಆಗಿರುವಿ!

ರಾಕು: (ನಕ್ಕು)ಅಹ! ಎಂಥ ಭಾಗ್ಯ? ಯಾರಿಗುಂಟು ಯಾರಿಗಿಲ್ಲ? (ವ್ಯಂಗ್ಯವಾಗಿ)ಗೆದ್ದು ಬಾ ಎಂದು ಇನ್ನೊಮ್ಮೆ ಬೆನ್ನು ತಟ್ಟಿಬಿಡಿ ಮಹಾರಾಣಿ.

ರಾಣಿ:  (ಗಂಭೀರವಾಗಿ) ಇನ್ನೊಮ್ಮೆ ಬೆನ್ನು ತಟ್ಟುವುದು ಗೆದ್ದು ಬಂದರೆ ಮಾತ್ರ!  ಹೋಗು.  ನಾಳೆ ಬೆಳಿಗ್ಗೆ  ಎಂಟು ಗಂಟೆಗೆ ಬೆಂಕಿ ಬೆಟ್ಟ ಸಿದ್ಧವಾಗುವುದು. ರಾಜಧಾನಿಯ ಜನರೆಲ್ಲ  ಈ ಅಪೂರ್ವವಾದ ದೃಶ್ಯವನ್ನುನೋಡಲು ಬರುತ್ತಾರೆ.

ರಾಕು: ಸರಿ ಮಹಾರಾಣಿ.

(ರಾಜಕುಮಾರನ ನಿರ್ಗಮನ)

ಫೇಡ್ ಔಟ್

ದೃಶ್ಯ ಒಂಬತ್ತು : ಮೈದಾನು

(ರಾಜಕುಮಾರ ಮತ್ತು ಅವನ ಸ್ನೇಹಿತರು ಒಂದು ಕಡೆ ನಿಂತಿದ್ದಾರೆ. ರಾಣಿ, ರಾಜಕುಮಾರಿ ಮತ್ತು ರಾಣಿ ಇನ್ನೊಂದು ಕಡೆ ಕುರ್ಚಿಯಲ್ಲಿ ಕುಳಿತಿದ್ದಾರೆ. ರಾಣಿಯ ಪರಿವಾರದವರು ಅವರ ಆ ಕಡೆ ಈ ಕಡೆ ನಿಂತಿದ್ದಾರೆ)

ರಾಣಿ: (ಸೈನಿಕನೊಬ್ಬನನ್ನು  ಬಳಿಗೆ ಕರೆದು) ಪರೀಕ್ಷೆಗೆ ಎಲ್ಲ ಸಿದ್ಧವಾಗಿದೆಯಷ್ಟೆ?

ಸೈನಿ: ಎಲ್ಲ ಸಿದ್ಧವಾಗಿದೆ.

ರಾಣಿ: ಹಾಗಿದ್ದರೆ ಘೋಷಿಸು.

ಸೈನಿ: ಎಲ್ಲ ಸಿದ್ಧವಾಗಿದೆ. ರಾಜಕುಮಾರ ಸೌದೆಯ ರಾಶಿಯ ಮೇಲೆ ಕುಳಿತುಕೊಳ್ಳಬೇಕು.

(ರಾಜಕುಮಾರ ಹೊರಡುತ್ತಾನೆ. ಅವನ ಸ್ನೇಹಿತರು ತೀವ್ರವಾದ ದು:ಖದಲ್ಲಿದ್ದಾರೆ. ತಾವು ರಾಜಕುಮಾರನನ್ನು ಕಳೆದುಕೊಳ್ಳುತ್ತಿದ್ದೇವಲ್ಲ ಎಂದು ಅವನ ಕೈ ಮೈ ಮುಟ್ಟಿಕೊಂಡು ರೋದಿಸುತ್ತಾರೆ. ಲಂಬು ರಾಜಕುಮಾರನ ಕೊರಳಿಗೆ ಒಂದು ಹೂವಿನ ಮಾಲೆಯನ್ನು ಹಾಕುತ್ತಾನೆ. ರಾಜಕುಮಾರ ಮೊದಲು ಲಂಬುವನ್ನು , ಆ ಮೇಲೆ ಡೊಳ್ಳನನ್ನು , ಆ ಮೇಲೆ ಕುಳ್ಳನನ್ನು , ಆಮೇಲೆ ಕೊಕ್ರನನ್ನು ಆಲಿಂಗಿಸುತ್ತಾನೆ. ಅಲ್ಲಿ ಸೇರಿರುವ ಮುಖದಲ್ಲಿಯೂ ದು:ಖವಿದೆ. ಕೆಲವರು ಅಳುತ್ತಿದ್ದಾರೆ. ರಾಜಕುಮಾರ ಕೊನೆಯಲ್ಲಿ ಚಳಿಯನನ್ನು ಆಲಿಂಗಿಸುವಾಗ ಅವನನ್ನು ಬಲವಾಗಿ ಅಪ್ಪಿಕೊಂಡು “ನಿನ್ನ ಚಳಿ ನನಗೆ ಬರಲಿ” ಎನ್ನುತ್ತಾನೆ. ತಕ್ಷಣ ಚಳಿ ಅವನನ್ನ್ನು ಬಿಟ್ಟು ರಾಜಕುಮಾರನನ್ನು ಹಿಡಿದುಕೊಳ್ಳುತ್ತದೆ. ಅವನು ಸೌದೆಯ ರಾಶಿಯ ಕಡೆಗೆ ನಡೆಯುವಾಗ ಚಳಿಯಿಂದ ನಡುಗುವುದು ರಾಣಿಗೆ ಕೂಡ ಕಾಣಿಸುತ್ತದೆ)

ರಾಣಿ. ಭೀತಿಯಿಂದ ನಡುಗುತ್ತಿದ್ದಾನೆ!  (ತಿರಸ್ಕಾರದ ನಗು)

(ರಾಜಕುಮಾರ ನಿಧಾನವಾಗಿ ನಡೆದು ಹೋಗುತ್ತಾನೆ)

ಮಂತ್ರಿ: ನಿಜಕ್ಕೂ  ಈ ರಾಜಕುಮಾರ ಧೀಮಂತ,  ಧೈರ್ಯವಂತ!

ರಾಣಿ: ಆದರೆ ಇದು ಹುಚ್ಚು ಧೈರ್ಯ!

ಮಂತ್ರಿ: ಈ ಅಸಾಧ್ಯ ಪರೀಕ್ಷೆಗೆ ಇವನು ಯಾಕೆ ಸಿದ್ಧನಾಗಿದ್ದಾನೊ ದೇವರೇ ಬಲ್ಲ.

ರಾಣಿ: ಈ ರೀತಿ ಸುಟ್ಟು ಬೂದಿಯಾಗಬೇಕು ಎಂದು ಅವನ ಹಣೆಯಲ್ಲಿ ಬರೆದಿದ್ದರೆ,  ತಡೆಯುವವರು ಯಾರು?

ಸೈನಿ: ರಾಜಕುಮಾರ ಸೌದೆಯ ರಾಶಿಯ ಮೇಲೆ ಕುಳಿತಿದ್ದಾನೆ. ಇನ್ನು ಬೆಂಕಿ ಕೊಡಬಹುದಲ್ಲವೆ ಮಹಾರಾಣಿ

ರಾಣಿ: ಕೊಡಬಹುದು.

(ಸೈನಿಕ  ಉರಿಸಿದ ದೊಂದಿಯನ್ನು ಹಿಡಿದುಕೊಂಡು ಹೋಗುತ್ತಾನೆ.

ಮಂತ್ರಿ: (ಕನಿಕರ ತುಂಬಿದ ದನಿಯಲ್ಲಿ) ಮಹಾರಾಣಿಯವರು ಈ ಪರೀಕ್ಷೆಯನ್ನು ರದ್ದುಮಾಡುವ ಸಾಧ್ಯತೆಯನ್ನು ಪರಿಗಣಿಸುವ ಸಂಭವನೀಯತೆಯ ಸಂಭವನೀಯತೆಯ….

ರಾಣಿ: (ಅವನ ಮಾತನ್ನು ಅರ್ಧದಲ್ಲಿ ತಡೆದು) ಇಲ್ಲ!

(ರಂಗದಲ್ಲಿ ಬೆಳಕು ಆರುತ್ತದೆ. ರಂಗದ ಮೇಲಿನ ಬೆಳಕು ನಿಧಾನವಾಗಿ ಸೌದೆ ರಾಶಿ ಉರಿಯುವ ಪ್ರಭೆಯಾಗಿ ಪರಿವರ್ತಿತವಾಗುತ್ತದೆ. ಅದರ ಉಷ್ಣವನ್ನು  ತಾಳಿಕೊಳ್ಳಲಿಕ್ಕಾಗದೆ ಎಲ್ಲರೂ ನಿಧಾನವಾಗಿ ಹಿಂದೆ ಹಿಂದೆ ಸರಿಯುತ್ತಾರೆ. ಕ್ರಮೇಣ ರಂಗ ನಿರ್ಜನವಾಗುತ್ತದೆ. ಪ್ರಭೆ ಇನ್ನಷ್ಟು ಪ್ರಜ್ವಲಿಸಿದ ಬಳಿಕ ನಿಧಾನವಾಗಿ ಕಡಿಮೆಯಾಗುತ್ತಾ , ರಂಗದ ಬೆಳಕಿನೊಂದಿಗೆ ಮಿಳಿತವಾಗಿ ಆರುತ್ತದೆ. ಮತ್ತೆ ಬೆಳಕು ಬಂದಾಗ ರಂಗದ ಮಧ್ಯೆ  ರಾಜಕುಮಾರ ನಡುಗುತ್ತಾ ನಿಂತಿದ್ದಾನೆ.  ಕೊರಳಿನಲ್ಲಿದ್ದ  ಹೂಮಾಲೆಯನ್ನು ತೆಗೆದು ಕೈಯಲ್ಲಿ ಹಿಡಿದುಕೊಂಡಿದ್ದಾನೆ. ತಟ್ಟನೆ  ಚಳಿಯ ಧಾವಿಸಿಬಂದು ಅವನನ್ನು ಬಲವಾಗಿ ಅಪ್ಪಿಕೊಂಡು “ನಿನ್ನ ಚಳಿ ನನಗೆ ಬರಲಿ” ಎನ್ನುತ್ತಾನೆ. ಚಳಿ ತಟ್ಟನೆ ಚಳಿಯನನ್ನು  ಹಿಡಿದುಕೊಳ್ಳುತ್ತದೆ. ಚಳಿಯ ನಡುಗುತ್ತಾ ಓಡಿಹೋಗುತ್ತಾನೆ. ನಿಧಾನವಾಗಿ ರಾಜಕುಮಾರನ  ಉಳಿದ ನಾಲ್ವರು ಸ್ನೇಹಿತರು ಬರುತ್ತಾರೆ. ಆ ಕಡೆಯಿಂದ ರಾಣಿ, ರಾಜಕುಮಾರಿ ಮತ್ತು ರಾಣಿಯ ಪರಿವಾರ ಬರುತ್ತದೆ. ರಾಜಕುಮಾರಿಯ ಕೈಯಲ್ಲಿ ಹೂವಿನ ಮಾಲೆ. ಎಲ್ಲರೂ ಸಂತೋಷದಿಂದಿದ್ದಾರೆ. ರಾಣಿ ರಾಜಕುಮಾರಿ ಮತ್ತು ರಾಜಕುಮಾರನ ಕೈಜೋಡಿಸುತ್ತಾಳೆ. ರಾಜಕುಮಾರಿ ರಾಜಕುಮಾರನ ಕೊರಳಿಗೆ ಮಾಲೆ ಹಾಕುತ್ತಾಳೆ.  ರಾಜಕುಮಾರ ರಾಜಕುಮಾರಿಯ ಕೊರಳಿಗೆ  ತನ್ನ ಕೈಯಲ್ಲಿದ್ದ ಮಾಲೆ ಹಾಕುತ್ತಾನೆ)

ಫೇಡ್ ಔಟ್