ಯಾತಕೆ ಮಳೆ ಹೋದಾವೋ? – ಶಿವ ಶಿವ
ಲೋಕ ತಲ್ಲಣಿಸುತಾವೊ !
ಬೇಕಿಲ್ಲದಿದ್ದರಿರೆ ಬೆಂಕಿಯ ಮಳೆ ಸುರಿದು,
ಉರಿಸಿ ಕೊಲ್ಲಲು ಬಾರದೇ ||
ಹೊಟ್ಟೆಗೆ ಅನ್ನ ಇಲ್ಲದಲೇ
ನಡೆದರೆ ಜೋಲಿ ಹೊಡೆಯುತಲೇ,
ಪಟ್ಟದಾನೆಯಂಥ ಸ್ತ್ರೀಯರು ಸೊರಗಿ
ಸೀರೇ ನಿಲ್ಲದಿಲ್ಲಿ ಸೊಂಟದಲೇ
ಹಸುಗೂಸು ಹಸಿವಿಗೆ ತಾಳದಲಿ
ಅಳುತವೆ ರೊಟ್ಟಿ ಕೇಳೀ ಕೇಳೀ
ಹಡದ ಬಾಣಂತಿಗೆ ಅನ್ನವಿಲ್ಲವಲೆ
ಏರೂತಾವೆ ಮುಂಗೈಗೆ ಬಳೀ
ಯಾವ ಕಡೆ ಹೋಗಾನ ವನವಾಸಾ
ತಾವಾ ನದಿ ಇಲ್ಲಿ ಯಾವ ದೇಶ
ಎಲ್ಲಿ ನೋಡಿದರೂ ಒಂದೇ ಶಬ್ದ
ದಯಮಾಡೋ ನೀ ಜಗದೀಶಾ
ಒಕ್ಕಲು ಮಕ್ಕಳಂತೇ-ಅವರಿನ್ನು
ಮಕ್ಕಳ ಮಾರ‍್ಯುಂಡಾರೋ
ಮಕ್ಕಳನು ಮಾರ‍್ಯುಂಡು ದುಃಖವನು ಮಾಡುತಾರೆ
ಮುಕ್ಕಣ್ಣ ಮಳೆ ಕರುಣಿಸೋ