ಯಾವುದೇ ಸಂಗೀತ ಶ್ರವಣ ಮಾದ್ಯಮದಿಂದ ಪಸರಿಸುತ್ತದೆ. ನಮ್ಮ ದೇಶದ ಪ್ರಮುಖ ಪ್ರಸಾರವಾಹಿನಿ ಆಕಾಶವಾಣಿಯೂ ಹಲವಾರು ದಶಕಗಳಿಂದ ಶಾಸ್ತ್ರೀಯ ಸಂಗೀತವನ್ನು ಪ್ರಸಾರ ಮಾಡುತ್ತ ಬಂದಿದೆ. Information (ಸುದ್ದಿ ಪ್ರಸಾರ) Entertainment (ಮನರಂಜನೆ) Education (ಬೋಧನೆ) ಈ ಮೂರು ತತ್ವಗಳು ಆಕಾಶವಾಣಿ ಪ್ರಸಾರದ ಮೂಲಭೂತ ಉದ್ದೇಶಗಳು. ಇದರಲ್ಲಿ ಕರ್ನಾಟಕ ಹಾಗೂ ಹಿಂದುಸ್ತಾನಿ ಸಂಗೀತ ಪದ್ಧತಿಗಳು, ಪ್ರಸಾರದ ಹೆಚ್ಚು ಸಮಯವನ್ನು ಆಕ್ರಮಿಸಿಕೊಂಡಿವೆ. ಇದು ಸಂಗೀತಕ್ಕೂ ಹಾಗೂ ಶ್ರೋತೃಗಳಿಗೂ ಇಬ್ಬರಿಗೂ ಹೆಚ್ಚು ಅನುಕೂಲಕರ. ಈ ಕಲಾ ಪ್ರಕಾರಗಳು ದೇಶದ ಮೂಲೆ ಮೂಲೆಗಳು, ಹಳ್ಳಿಯ ಕೇಳುಗನ ಮನೆಯನ್ನು, ಮನವನ್ನು ತಲುಪಲು ಆಕಾಶವಾಣಿಯೇ ಮೂಲ ಕಾರಣ. ಇದು ಮೊದಲಿನಿಂದಲೂ ಒಂದು ರಾಷ್ಟ್ರೀಯ ಪ್ರಸಾರವಾಹಿನಿಯಾಗಿ, ನಮ್ಮ ಶಾಸ್ತ್ರೀಯ ಸಂಗೀತಕ್ಕೆ ಆದ್ಯತೆ ನೀಡಿ, ಕಲಾವಿದರನ್ನು, ಶ್ರೋತೃವೃಂದವನ್ನು ಬೆಳೆಸಿ ಪೋಷಿಸುತ್ತಾ ಬಂದಿರುವುದು ಒಂದು ಐತಿಹಾಸಿಕ ಸತ್ಯ.

ನಮ್ಮ ದೇಶದ ಎಲ್ಲಾ ರಾಜ್ಯದ ರಾಜಧಾನಿಗಳಲ್ಲೂ ಹಾಗೆಯೇ ಹಲವು ರಾಜ್ಯದ ಬೇರೆ ಬೇರೆ ಪ್ರಮುಖ ಕೇಂದ್ರಗಳಲ್ಲೂ ಈ ಆಕಾಶವಾಣಿ ಕೇಂದ್ರಗಳು ಸ್ಥಾಪಿತವಾಗಿವೆ. ಅಂತೆಯೇ ಆಯಾ ಪ್ರದೇಶದ ಕಲಾವಿದರು, ಕೇಳುಗರು, ಚಿಂತಕರು, ಜನಪದ ಸಂಗೀತ ಈ ಎಲ್ಲಾ ವರ್ಗಕ್ಕೂ ಇದರಿಂದ ಪ್ರಚಾರ, ಪ್ರೋತ್ಸಾಹ ದೊರೆಯುತ್ತಾ ಬಂದಿದೆ.

ಶಾಸ್ತ್ರೀಯ ಸಂಗೀತವನ್ನು ಪ್ರಸಾರ ಮಾಡುವಲ್ಲಿ ಆಕಾಶವಾಣಿಯು ಮೊದಲಿನಿಂದ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಾ ಬಂದಿದೆ. ಹೀಗಾಗಿ ಅದು ಒಂದು ವಿಶೇಷ ಗುಣಮಟ್ಟದಿಂದ ಕೂಡಿದ್ದಾಗಿದೆ. ಅಲ್ಲಿಯ ಸಂಗೀತದ ಆಡಿಷನ್ (ಧ್ವನಿ ಪರೀಕ್ಷೆ) ನೀಡಬೇಕಾದರೆ, ಒಬ್ಬ ನಿರ್ದಿಷ್ಟ ಗುರುವಿನಲ್ಲಿ ಅಥವಾ  ಗುರುಗಳಲ್ಲಿ  ಕೆಲಕಾಲ ತರಬೇತಿ ಹೊಂದಿರಬೇಕು. ಆಕಾಶವಾಣಿಯು ನಿಗದಿಪಡಿಸಿದ ೪೦ ರಾಗಗಳ ಪಟ್ಟಿಯಿಂದ ಕನಿಷ್ಠ ೨೫ ರಾಗಗಳು ಅಭ್ಯರ್ಥಿಗೆ ಅಭ್ಯಾಸವಾಗಿರಬೇಕು. ಅವರ ಧ್ವನಿ ಪರೀಕ್ಷೆಗೆ ಮೊದಲನೆಯ ಹಂತವಾಗಿ ಸ್ಥಳೀಯ ಪರೀಕ್ಷಣಾ ಮಂಡಳಿಯ (Local Audition Committee) ಎದುರು ಕಲಾವಿದರು ಹಾಡಬೇಕು. ಇಂತಹ ಮಂಡಳಿಯಲ್ಲಿ ಮಹಾನ್ ಕಲಾವಿದರಾದ ಪಂ|| ಮಲ್ಲಿಕಾರ್ಜುನ ಮನ್ಸೂರ, ಗಂಗೂಬಾಯಿ ಹಾನಗಲ್ ಇಂತಹ ಹಿರಿಯ ಗಾಯಕ, ವಾದಕರು ಸದಸ್ಯರಾಗಿರುತ್ತಿದ್ದರು. ಮೊದಲನೆಯ ಹಂತದ ಪರೀಕ್ಷೆಯ ಉತ್ತೀರ್ಣರಾದವರ ಧ್ವನಿ  ಮುದ್ರಿಸಿ ದೆಹಲಿಯಲ್ಲಿರುವ ಕೇಂದ್ರೀಯ ಪರೀಕ್ಷಕ ಮಂಡಳಿಯ ಅವಗಾಹನೆಗಾಗಿ ಕಳಿಸುವರು. ಇದರ ಉದ್ದೇಶ ಇಷ್ಟೇ, ಯಾವುದೇ ಸ್ಥಳೀಯ ಒತ್ತಡಗಳಿಂದ ಫಲಿತಾಂಶ ಹೊರತಾಗಿರುವುದು. ಹಗೆ ಇದೊಂದು, ಪರೋಕ್ಷವಾಗಿ ರಾಷ್ಟ್ರೀಯ ಮಟ್ಟದ ಧ್ವನಿ ಪರೀಕ್ಷೆಗಾಗಿ ಕಲಾವಿದರು ಹೆಚ್ಚಿನ ಮಟ್ಟದ ಶೃದ್ಧೆ, ಶ್ರಮ, ತಾಲೀಮು ಪಡೆಯಬೇಕಾಗುತ್ತದೆ. ಆದರೆ ಆಕಾಶವಾಣಿಯ ಪಟ್ಟಿಯಿಂದ ಹೊರಗೂ, ಹಲವಾರು ನುರಿತ ಕಲಾವಿದರಾಗಿ ಹೋಗಿದ್ದಾರೆ. ಆದರೆ ಗುಣಮಟ್ಟದ ದೃಷ್ಟಿಯಿಂದ ಕಲಾವಿದರ ಆಯ್ಕೆಯಲ್ಲಿ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ. ಉನ್ನತ ಮಟ್ಟದ ಕಲಾವಿದರಿಂದ ಮೊದಲ್ಗೊಂಡು ಯುವ ಪ್ರತಿಭೆ, ಬಾಲ ಪ್ರತಿಭೆವರೆಗೂ, ಸಂಗೀತ ಪ್ರಸಾರದಲ್ಲಿ, ಆಕಾಶವಾನಿಯು ಮೊದಲಿನಿಂದಲೂ ಗಮನಹರಿಸುತ್ತಾ ಬಂದಿದೆ. ಶಾಸ್ತ್ರೀಯ ಸಂಗೀತದ ಬೇರೆ ಬೇರೆ ಪ್ರಕಾರಗಳಾದ ಧ್ರುಪದ್, ಧಮಾರ್, ಖಯಾಳ್, ಠುಮ್ರಿ, ವಾದ್ಯ ಸಂಗೀತ ಎಲ್ಲವುಗಳಿಗೂ ಆದ್ಯತೆ ನೀಡುತ್ತಾ ಬಂದಿದೆ. ಬೆಳಗಿನ ಪ್ರಸಾರ ಆರಂಭವಾಗುವುದು ಮಂಗಳವಾದ್ಯ ಮೊಳಗುವುದರಿಂದ. ದಕ್ಷಿಣ ಭಾರತದ ಕೇಂದ್ರಗಳಾದರೆ ‘ನಾದಸ್ವರ’ ವಾದನ, ಉತ್ತರಭಾರತದ ಕೇಂದ್ರಗಳಾದರೆ ‘ಶಹನಾಯಿ’ ವಾದನದಿಂದ. ಹಿಂದುಸ್ತಾನಿ ಸಂಗೀತದ ತವರೂರಾದ ಧಾರವಾಡ ಆಕಾಶವಾಣಿ ಭೌಗೋಳಿಕವಾಗಿ ದಕ್ಷಿಣ ಭಾರತದಲ್ಲಿದ್ದರೂ; ಮುಂಜಾವಿನಲ್ಲಿ ಮೊದಲು ಬಿಸ್ಮಿಲ್ಲಾಖಾನ್ ಅವರದೇ ಧ್ವನಿಮುದ್ರಿಕೆ.

ಆಕಾಶವಾಣಿಯ ಒಟ್ಟು ಪ್ರಸಾರದ ಸಮಯದಲ್ಲಿ, ಹಿಂದಿನ ಕಾಲದಿಂದಲೂ ಶಾಸ್ತ್ರೀಯ ಸಂಗೀತದ್ದೇ ಸಿಂಹಪಾಲು. (ನನ್ನ ಬಾಲ್ಯದ ದಿನಗಳಲ್ಲಿ ಸಂಗೀತ ಕೇಳಿದ್ದೇ ಆಕಾಶವಾಣಿಯ ಮೂಲಕ. ನಮ್ಮೂರಾದ ಹೊಸಪೇಟೆಗೆ ಹೆಚ್ಚು ಶಾಸ್ತ್ರೀಯ ಸಂಗೀತಗಾರರು ಬರುತ್ತಿರಲಿಲ್ಲ.) ಮತ್ತು ಪ್ರತಿ  ಶನಿವಾರ ರಾತ್ರಿ ೯.೩೦ ರಿಂದ ೧೧.೦೦ ಗಂಟೆಯವರೆಗೆ ರಾಷ್ಟ್ರೀಯ ಸಂಗೀತ ಕಾರ್ಯಕ್ರಮ ಬಿತ್ತರಗೊಳ್ಳುತ್ತಿತ್ತು. ದೆಹಲಿಯಿಂದ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮಗಳನ್ನು ಇಡೀ ದೇಶದ ಎಲ್ಲಾ ಕೇಂದ್ರಗಳು ಏಕಕಾಲಕ್ಕೆ ಪ್ರಸಾರ ಮಾಡುತ್ತಿವೆ. ಇದರಲ್ಲಿ ಭಾಗವಹಿಸಲು ‘ಎ’ ಶ್ರೇಣಿ ಹಾಗೂ ಇನ್ನೂ ಹೆಚ್ಚಿನ ಗುಣಮಟ್ಟದ ಕಲಾವಿದರನ್ನು ಆಯ್ಕೆ ಮಾಡುತ್ತಾರೆ. ಯಾವುದೇ ಕಲಾವಿದನ ಜೀವನದಲ್ಲಿ ಈ ಪ್ರಸಾರ ಒಂದು ಮೈಲಿಗಲ್ಲು. ಇದು ರಾಷ್ಟ್ರದ ಮನೆಮನೆಯಲ್ಲೂ ಒಬ್ಬನೇ ಕಲಾವಿದರ ಸಂಗೀತ ಅಂದರೆ ಎಂತಹ ಹೆಮ್ಮೆಯ ವಿಷಯ!!! ಇದಲ್ಲದೆ ಭಾನುವಾರವು ಒಂದು ರಾಷ್ಟ್ರೀಯ ಸಂಗೀತ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು.

ಮಂಗಳವಾರದ ಸಂಗೀತ ಸಭೆಯ ಮೂಲಕ ಕೆಲವು ಯುವ ಕಲಾವಿದರಿಗೂ ರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ನೀಡಲಾಗುತ್ತಿದೆ. ಆಕಾಶವಾಣಿಯ ನಿಲಯದ ಕಲಾವಿದರು ಶ್ರೇಷ್ಠ ಮಟ್ಟದ, ನುರಿತ ಕಲಾವಿದರಾಗಿರುತ್ತಿದ್ದರು. ಹಾಗೂ ಕಾರ್ಯಕ್ರಮ ನಿರೂಪಕರಾಗಿ ಪಂ. ಮಲ್ಲಿಕಾರ್ಜುನ ಮನ್ಸೂರ; ಎಂ.ಆರ್. ಗೌತಮ್, ಉಸ್ತಾದ್ ಹಫೀಜ್ ಅಲಿಖಾನ್, ಡಾ||ಪ್ರಭಾ ಮುಂತಾದ ಹಿರಿಯ ಕಲಾವಿದರು ಸೇವೆ ಸಲ್ಲಿಸಿದ್ದಾರೆ. ಈ ಕಾರಣದಿಮದ ಇಲ್ಲಿಯ ಶಾಸ್ತ್ರೀಯ ಸಂಗೀತದ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಆಗಿನ ಕಾಲದಲ್ಲಿ ‘ರೇಡಿಯೋ ಸ್ಟಾರ್’ ಎನಿಸಿಕೊಳ್ಳುವುದು ಒಂದು ಹೆಮ್ಮೆಯ ವಿಷಯವಾಗಿತ್ತು.

ಈ ಆಡಿಷನ್ ಪದ್ಧತಿ, ಹಾಗೂ ಸಮಯದ ನಿರ್ಬಂಧ, ಈ ತರಹದ ವಿಷಯಗಳು ಕೆಲವು ಸಾರಿ ಹಳೆಯ ತಲೆಮಾರಿನ ಕಲಾವಿದರಿಗೆ ಇರುಸು-ಮುರುಸು ಮಾಡಿದ್ದುಂಟು. ಇದನ್ನು ಗಮನಿಸಿದ ಕೆಲ ಅಧಿಕಾರಿಗಳು ಕಾನೂನಿನ ಚೌಕಟ್ಟಿನೊಳಗೆ ಕಲಾವಿದರನ್ನು ಆಕಾಶವಾಣಿಗೆ ಕರೆತಂದರು. ‘ಒಂದು ಬಾರಿ ಹಿರಿಯ ಉಸ್ತಾದರಿಗೆ ಆಕಾಶವಾಣಿಯಲ್ಲಿ ಹಾಡಲು ಆಮಂತ್ರಣ ಬಂತು. ಉಸ್ತಾದರು ಸಮಯ ಎಷ್ಟು ಎಂದು ಕೇಳಿದಾಗ ಒಂದೂವರೆ ಗಂಟೆ ಎಂದು ಹೇಳಿದರು. ದಯವಿಟ್ಟು ಕ್ಷಮಿಸಬೇಕು; ಅಷ್ಟು ಕಡಿಮೆ ಸಮಯವಾದರೆ ನಾನು ಹಾಡುವುದಿಲ್ಲ ಎಂದರು ಉಸ್ತಾದರು. ಆದರೆ ಅವರ ಖಾನದಾನಿ ಸಂಗೀತವನ್ನು ಜನಗಳಿಗೆ ಕೇಳಿಸಲೇಬೇಕೆಂಬ ಹೆಬ್ಬಯಕೆ ನಿಲಯದ ನಿರ್ದೇಶಕರದಾಗಿದ್ದಕಾರನ ಉಸ್ತಾದಜಿ ಅವರ ಹೇಳಿಕೆಗೆ ಒಪ್ಪಿಗೆ ನೀಡಿದರು. ನಿಗದಿತ ದಿನಾಂಕದಂದು ಕಲಾವಿದರನ್ನು ಸ್ಟುಡಿಯೋಗೆ ಆಮಂತ್ರಿಸಲಾಯಿತು. ಉಸ್ತಾದರ ಹಾಡು ನಿಗದಿತ ಸಮಯಕ್ಕಿಂತ ಒಂದುವರೆ ಗಂಟೆ ಮುಂಚೆ ಆರಂಭವಾಯಿತು. ಆದರೆ ಒಂದುವರೆ ಗಂಟೆ ಬಾಕಿ ಇರುವಾಗಲೇ ಕಾರ್ಯಕ್ರಮದ ಕೆಂಪುದೀಪ ಶುರುವಾಯಿತು. ಒಟ್ಟಿನಲ್ಲಿ  ಉಸ್ತಾದರಿಗೆ ಮೂರುಗಂಟೆ ಹಾಡಿದ ಸಮಾಧಾನ. ನಿರ್ದೇಶಕರಿಗೆ ಅವರ ಕಾರ್ಯಕ್ರಮವನ್ನು ಅರ್ಧ ಮುದ್ರಿಸಿ, ಇನ್ನರ್ಧ ನೇರಪ್ರಸಾರ ಮಾಡಿದ ತೃಪ್ತಿ. (ಈ ಘಟನೆಯನ್ನು ನಾನು ಆಕಾಶವಾಣಿ ಅಧಿಕಾರಿಯಾಗಿ ದೆಹಲಿಗೆ ತರಬೇತಿಗೆ ಹೋದಾಗ ನಮಗೆ ಒಬ್ಬ ರಿಟೈರ್ಡ್ ನಿರ್ದೇಶಕರು ಹೇಳಿದ್ದರು.)

ವರ್ಷಾನುಗಟ್ಟಲೆಯಿಂದ ನಡೆದು ಬಂದಿರುವ ಇನ್ನೊಂದು ಮಹತ್ತರ ಕಾರ್ಯಕ್ರಮ ಎಂದರೆ ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ನಡೆಯುವ ಸಂಗೀತ ಕಾರ್ಯಕ್ರಮ. ಇದೂ ಸಹ ದೇಶಾದ್ಯಂತ ಎಲ್ಲಾ ಪ್ರಮುಖ ಕೇಂದ್ರಗಳಿಂದ ಏರ್ಪಾಡಾಗುವ ಈ ಕಾರ್ಯಕ್ರಮದಲ್ಲಿ ಲಖನೌ ಮೂಲದ ಕಲಾವಿದರು ಬೆಂಗಳೂರಿಗೆ ಬಂದರೆ ; ಚೆನ್ನೈ ಮೂಲಕ ಕಲಾವಿದರು ಲಖನೌಗೆ ಆಮಂತ್ರಿತರಾಗುತ್ತಿದ್ದರು. ಈ ಮೂಲಕ ಕರ್ನಾಟಕೀ-ಹಿಂದುಸ್ತಾನಿ-ಗಾಯನವಾದನ ಎಲ್ಲಾ  ಕಲಾವಿದನ ಬೇರೆ ಊರುಗಳಲ್ಲಿ, ದೇಶದ ಎಲ್ಲೆಡೆ ಸಂಚರಿಸಿ ಕಾರ್ಯಕ್ರಮ ನೀಡುವುದರಿಂದ, ಕೆಲವು ಅಪರೂಪದ, ದೂರ ಪ್ರದೇಶದ ಕಲಾವಿದರನ್ನು ಜೀವನದಲ್ಲಿ ಒಮ್ಮೆಯಾದರೂ ನೋಡುವ ಅವಕಾಶ ಕೇಳುಗರ ಪಾಲಿಗಿರುತ್ತದೆ. ಹಾಗೆಯೇ ಕಲಾವಿದರ ಮತ್ತು ಶ್ರೋತೃವಿನ ಮಧ್ಯೆ ಒಂದು ವಿಶೇಷ ಭಾವನಾತ್ಮಕ ಸಂಬಂಧ ಬೆಳೆಯುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಬೇರೆ ಊರಿನ ಸಹಕಲಾವಿದರು ‘ಸಾಥ್ ಸಂಗೀತ್’ ನೀಡುತ್ತಾರೆ. ಉದಾರಣೆಗೆ ಒಮ್ಮೆ ಕಲ್ಕತ್ತಾ ಆಕಾಶವಾಣಿ ಏರ್ಪಡಿಸಿದ್ದ ಆಮಂತ್ರಿತ  ಶ್ರೋತೃಗಳ ಸಮ್ಮುಖದ ಕಾರ್ಯಕ್ರಮದಲ್ಲಿ ಪುಣೆಯ ಡಾ. ಪ್ರಭಾ ಆಪ್ಟೆ ಹಾಡುಗಾರರಾಗಿದ್ದರೆ, ತಬಲಾ ಧಾರವಾಡದ ರಘುನಾಥ ನಾಕೋಡ್ ಬಂದಿದ್ದರು. ಇದರಿಂದ ನಾಡಿನ ಬೇರೆ ಬೇರೆ ಭಾಗದ ಗಾಯಕ-ವಾದಕರ ಮಧ್ಯೆಯೂ, ಸಂಪರ್ಕ, ಪರಿಚಯ, ಸಂಗೀತದ ಬಾಂಧವ್ಯ ಬೆಳೆಯುತ್ತದೆ. ಶಾಸ್ತ್ರೀಯ ಸಂಗೀತ ಕಲಾವಿದರು ಶ್ರೋತೃಗಳು ಒಂದುಗೂಡಿ ಬೆಸೆಯುವಲ್ಲಿ ಆಕಾಶವಾಣಿಯು ಮಾಡಿದ ಈ ಪ್ರಯತ್ನ ಶ್ಲಾಘನೀಯವಾದುದು.

ಉಸ್ತಾದ್ ಬಡೇ ಗುಲಾಂ ಅಲಿಖಾನ್ ಪಟಿಯಾಲ ಘರಾನಾದ ಮೇರು ಗಾಯಕ. ಭಾರತ-ಪಾಕಿಸ್ತಾನ ವಿಭಜನೆಯಾದಾಗ ಲಾಹೋರ್ ಮೂಲಕ ಪಾಕಿಸ್ತಾನ್ ಹೋಗಬೇಕಾಗಿತ್ತು. ಲಾಹೋರ್ ಆಕಾಶವಾಣಿಯಿಂದ ಉಸ್ತಾದರ ಗಾಯನದ ನೇರ ಪ್ರಸಾರ; ಖಾನ್ ಸಾಹೇಬರು ತೋಡಿ ರಾಗದಲ್ಲಿ ‘ಅಬ ಮೋರೆ ರಾಮ…..’ ಬಂದಿಶ್ ಹಾಡಲು ಸಿದ್ಧತೆ ನಡೆಸಿದ್ದರು.

ಸ್ವತಂತ್ರ ಪಾಕಿಸ್ತಾನದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಮಂತ್ರಿಗಳು ಜನರಲ್ ಬುಖಾರಿ ಅಲ್ಲಿಗೆ ಬಂದರಂತೆ. ಖಾನ್ ಸಾಹೇಬರ ಗಾಯನದ ಪೂರ್ವ ಸಿದ್ಧತೆಯನ್ನು ಕೇಳಿ ‘ಉಸ್ತಾದಜೀ, ನೀವೀಗ ಪಾಕಿಸ್ತಾನ ರೇಡಿಯೋದಲ್ಲಿ ಹಾಡ್ತಾ ಇದ್ದೀರಿ; ರಾಮ-ಕೃಷ್ಣನ ಬದಲು ಅಲ್ಲಾನ ಗುಣಗಾನ ಮಾಡಬೇಕು’ ಎಂದರಂತೆ. ಸಂಗೀತವನ್ನೇ ಒಂದು ಧರ್ಮವನ್ನಾಗಿ ಸ್ವಿಕರಿಸಿದ್ದ ಬಡೇ ಗುಲಾಮ್ ಅಲಿ ಅವರು ‘ನಾನು ಹಾಡುವುದು ರಾಮನ ಕುರಿತಾದ ಹಾಡನ್ನೇ; ನೀವು ಬೇಕಾದರೆ ಪ್ರಸಾರ ಮಾಡಿ, ಇಲ್ಲದಿದ್ದರೆ ನಾನು ಮನೆಗೆ ಹೋಗುತ್ತೇನೆ’ ಎಂದು ಗುಡುಗಿದರು. ಕಾರ್ಯಕ್ರಮ ಬಿತ್ತರವಾಯಿತು. ಮರುದಿನವೇ ಖಾನ್ ಸಾಹೇಬರು ಪಾಕಿಸ್ತಾನವನ್ನು ಬಿಟ್ಟು ಭಾರತಕ್ಕೆ ವಾಪಸಾದರು. (ನಾನು ಆಕಾಶವಾಣಿಯಲ್ಲಿ ೧೯೮೮ರಿಂದ ೧೯೯೧ರವರೆಗೆ ಕಾರ್ಯಕ್ರಮ ನಿರ್ವಾಹಕನಾಗಿ ಕೆಲಸ ಮಾಡಿದ್ದೇನೆ. ಇಲ್ಲಿಯ ಶಾಸ್ತ್ರೀಯ ಸಂಗೀತದ ಪ್ರಸಾರ ಯಾವುದೇ ಧರ್ಮ, ಪಂಥ, ಜನಾಂಗವನ್ನು ಆಧರಿಸಿಲ್ಲ. ಆಕಾಶವಾಣಿಯು ನಿಜವಾಗಲೂ ಜಾತ್ಯಾತೀತ ಶುದ್ಧ ಶಾಸ್ತ್ರೀಯ ಸಂಗೀತದ ಪ್ರಚಾರ-ಪ್ರಸಾರಕ್ಕೆ ಬದ್ಧ!)

ಯುವ ಜನಾಂಗದಲ್ಲಿ ಶಾಸ್ತ್ರೀಯ ಸಂಗೀತದ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಆಕಾಶವಾಣಿಯು ಪ್ರತಿ ವರ್ಷವೂ ಒಂದು ರಾಷ್ಟ್ರೀಯ ಮಟ್ಟದ ಸ್ಪರ್ಧೆಯನ್ನು ಏರ್ಪಡಿಸುತ್ತದೆ. ಇದರಲ್ಲಿ ೧೮ ರಿಂದ ೨೫ ವರ್ಷದ ವಯೋಮಿತಿಯ ಯುವ ಕಲಾವಿದರು ಭಾಗವಹಿಸಬಹುದು. ಈ ಕಲಾವಿದರ ಸ್ಥಳೀಯ ಸ್ಪರ್ಧೆಯ ಫಲಿತಾಂಶದ ನಂತರ, ಆಯ್ಕೆಯಾದ ಅಬ್ಯರ್ಥಿಗಳ ಧ್ವನಿಮುದ್ರಣವನ್ನು ವಲಯ ಮಟ್ಟಕ್ಕೆ ಕಳುಹಿಸಲಾಗುತ್ತದೆ. ದಕ್ಷಿಣ ವಲಯ – ಉತ್ತರ ವಲಯ ಹೀಗೆ ಹಲವಾರು ವಲಯಗಳಿಂದ ಮೊದಲೆರಡು ಸ್ಥಾನಗಳಿಸಿದ ಅಭ್ಯರ್ಥಿಗಳ ಧ್ವನಿಮುದ್ರಿಕೆಯನ್ನು ಬಳಸಿ, ಸ್ಪರ್ಧೆಯಲ್ಲಿ ಗೌಪ್ಯತೆ, ನಿಷ್ಪಕ್ಷಪಾತತೆಯನ್ನು ಕಾಯ್ದುಕೊಳ್ಳಲಾಗುತ್ತದೆ. ಧಮಾರ್, ಧ್ರುಪದ್, ಖ್ಯಾಲ್, ರುದ್ರವೀಣೆ, ಸಿತಾರ್, ಕೊಳಲು, ತಬಲಾ ಹೀಗೆ ಎಲ್ಲಾ ವಿಧವಾದ ಗಾಯನ ಹಾಗೂ ವಾದನ ಪ್ರಕಾರಗಳಲ್ಲಿ ಸ್ಪರ್ಧೆ ಏರ್ಪಡಿಸಿ, ಯುವ ಜನಾಂಗದಲ್ಲಿ ಈ ಪರಂಪರಾಗತ ಕಲೆಯನ್ನು ಕಲಿಯುವ ಪ್ರೋತ್ಸಾಹ ನೀಡಲಾಗುತ್ತದೆ. ಶಾಸ್ತ್ರೀಯ ಸಂಗೀತದ ಬಗ್ಗೆ ಅರಿವು, ಆಸಕ್ತಿ, ಪ್ರೀತಿ, ಯುವ ಪೀಳಿಗೆಯಲ್ಲಿ ಬೆಳೆಯಲು ಆಕಾಶವಾನಿಯ ಕೊಡುಗೆ ಮಹತ್ತರವಾದುದು. ಹೀಗೆ ರಾಷ್ಟ್ರಮಟ್ಟದಲ್ಲಿ ಬಹುಮಾನ ಪಡೆದ ಅಭ್ಯರ್ಥಿಗಳಿಗೆ ಆಹ್ವಾನಿಸಿ ಶ್ರೋತೃಗಳ ಎದುರು ಕಾರ್ಯಕ್ರಮ ನಡೆಸಿ, ಹಿರಿಯ ಕಲಾವಿದರ ಕೈಯಿಂದ ಬಹುಮಾನ ಕೊಡಿಸಿ, ನಂತರದ ದಿನಗಳಲ್ಲಿ ಆಕಾಶವಾಣಿಯಲ್ಲಿ ಪ್ರಸಾರ ಮಾಡಲು ಅಧಿಕೃತ (Approved) ಕಲಾವಿದರೆಂದು ಮಾನ್ಯತೆ  ನೀಡಲಾಗುತ್ತದೆ.

ಆಕಾಶವಾಣಿಯ ನಿಲಯದ ಕಲಾವಿದರು : ನಿಲಯದ ಕಲಾವಿದರಿಗೆ ರಾಷ್ಟ್ರದ ಆಕಾಶವಾಣಿ ಕೇಂದ್ರಗಳಲ್ಲಿ ಉನ್ನತ ಶ್ರೇಣಿಯ ಕಲಾವಿದರ ಸೇವೆ ಸಲ್ಲಿಸುತ್ತಾ ಬಮದಿದ್ದಾರೆ. ಇದರಿಂದ ಸಾರಂಗಿ, ಪಖಾವಜ್ ದಂತಹ ಅಪರೂಪದ ವಾದ್ಯಗಳು, ಕಲಾವಿದರ ಪ್ರತಿಭೆ ನಿರಂತರವಾಗಿ ಬೆಳಕಿಗೆ ಬಂದಿವೆ. ಇದಲ್ಲದೆ ಆಕಾಶವಾಣಿ ಏರ್ಪಡಿಸುವ ಪರೀಕ್ಷೆ (ಆಡಿಷನ್) ನಲ್ಲಿ ಉತ್ತೀರ್ಣರಾದ ಕಲಾವಿದರೂ ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ದಶಕಗಳಿಂದ ಉತ್ತಮ ಮಟ್ಟದ ಸಂಗೀತವೂ ಪ್ರಸಾರ-ಪ್ರಚಾರ ಆಗುವುದರಲ್ಲಿ ಆಕಾಶವಾಣಿ ಕೇಂದ್ರಗಳು ನಿರಂತರ ಶ್ರಮಿಸುತ್ತಿವ.

ಹಳೆಯ ಕಾಲದ ಸಂಗೀತಗಾರರ ಕಾರ್ಯಕ್ರಮ ಪ್ರಸಾರ ಮಾಡುವುದಲ್ಲದೆ, ಅವರ ‘ಧ್ವನಿಭಂಡಾರ’ (Archives)ನಲ್ಲಿ ಅಪರೂಪದ ಧ್ವನಿಮುದ್ರಣಗಳನ್ನು ಕಾಯ್ದಿರಿಸಿ ಈ ಸಂಸ್ಥೆಯು ಹಲವಾರು ಹಿರಿಯ ಕಲಾವಿದರ ಸಂಗೀತವನ್ನು ಅಮರಗೊಳಿಸಿದೆ. ಉಸ್ತಾದ್ ಫಯಾಜ್ ಖಾನ್, ಅಬ್ದುಲ್ ಕರೀಂಖಾನ್, ಓಂಕಾರ್ ನಾಥ ಠಾಕೂರ್ ಇವರೇ ಮೊದಲಾದ ಕಲಾವಿದರುಗಳು ಇಂದಿನ ಯುವ ಪೀಳಿಗೆಗೆ ಕೇಳುವ ಅವಕಾಶ ಇರುವುದಾದರೆ, ಇದರಲ್ಲಿ ಆಕಾಶವಾಣಿಯ ಪಾತ್ರ ಅತಿ ಮಹತ್ವದ್ದಾಗಿದೆ. ಸಂಗೀತ ಶ್ರವಣ ವಿದ್ಯೆಯಾಗಿದ್ದರಿಂದ ಪರಂಪರಾಗತ, ಸಂಪ್ರದಾಯಿಕ ಕಲಾವಿದರ ಧ್ವನಿಮುದ್ರಕಗಳನ್ನು ಕೇಳಿ, ಮನನ ಮಾಡುವುದರಿಂದ ಯುವ ಕಲಾವಿದರ ಸಂಗೀತದಲ್ಲಿ ಅಂದು-ಇಂದು ಭವಿಷ್ಯಕ್ಕೆ ಕೊಂಡಿಯಾಗಿ ಮುಂದುವರೆಯುತ್ತದೆ. ಹೆಚ್ಎಂವಿ ಮುಂತಾದ ಖಾಸಗಿ ಕಂಪನಿಗಳು ವಾಣಿಜ್ಯ ಹಾಗೂ ವ್ಯಾಪಾರ, ಜನಪ್ರಿಯತೆ ದೃಷ್ಟಿಯಿಂದ ಕಲಾವಿದರ ಸಂಗೀತವನ್ನು ಧ್ವನಿ ಮುದ್ರಿಸಿದರೆ, ಆಕಾಶವಾಣಿಯು, ಕಲಾವಿದರು – ಪರಂಪರೆಯನ್ನು ದಾಖಲಿಸಲು, ಅಜರಾಮರಗೊಳಿಸಲು ಧ್ವನಿ ಮುದ್ರಿಸಿವೆ. ಇತ್ತೀಚೆಗೆ ಈ ಧ್ವನಿ ಭಂಡಾರದಿಂದ ಧ್ವನಿಮುದ್ರಿಕೆಗಳಿಗೆ ಜನಸಾಮಾನ್ಯರಿಗೂ ಮಾರಾಟದ ಮೂಲಕ, ಅತ್ಯಂತ ಕಡಿಮೆ ಬೆಲೆ ಮೂಲಕ ಉಪಲಬ್ಧಗೊಳಿಸಿರುವುದು ಸ್ತುತ್ಯಾರ್ಹ.

ಆಕಾಶವಾಣಿಯ ಪ್ರಮುಖ ವಾಹಿನಿಯಲ್ಲಿ ವಾರ್ತೆ, ಇತರೇ ಕಾರ್ಯಕ್ರಮ, ಸಂಗೀತ ಮುಂತಾದ ವಿಷಯಗಳಿಗೆ ಸಮಯ ಹಂಚಿ ಹೋದಾಗ, ಜನ ಸಾಮಾನ್ಯರ ಮನರಂಜನೆಗಾಗಿ ಆಕಾಶವಾಣಿಯು ವಿವಿಧಭಾರತಿ ಕೇಂದ್ರಗಳನ್ನು ಪ್ರಾರಂಭಿಸಲಾಯಿತು. ಬಹುಪಾಲು ಸಿನೆಮಾ ಸಂಗೀತವನ್ನೇ ಅವಲಂಬಿಸಿದ ವಿವಿಧಭಾರತಿಯಲ್ಲೂ ‘ಅನುರಂಜಿನಿ’ ಎನ್ನುವ ಕಾರ್ಯಕ್ರಮ ಬಿತ್ತರಗೊಳ್ಳತೊಡಗಿತು. ಇದರಲ್ಲಿ ಒಂದು ರಾಗದ ಪರಿಚಯ, ವಾದಿ, ಸಂವಾದಿ, ಪಕ್ಕಡ್, ಮುಂತಾದ ವಿವರಗಳೊಂದಿಗೆ ಒಬ್ಬ ಪ್ರಸಿದ್ಧ ಕಲಾವಿದರು ಹಾಡಿದ ಅಥವಾ ನುಡಿಸಿದ ಬಂದಿಶ್ ಕೂಡಾ ಜನ ಕೇಳುವಂತಾಯಿತು. ಹಾಗೆಯೇ ಆ ದಿನದ ರಾಗಕ್ಕೆ ಸಂಬಂಧಿಸಿದಂತೆ ಸುಪ್ರಸಿದ್ಧ ಚಲನಚಿತ್ರದ ಗೀತೆಯೊಂದನ್ನೂ ಪ್ರಸಾರ ಮಾಡಲಾರಂಭಿಸಿದರು. ಎಷ್ಟೋ ಜನ ಈ ‘ಅನುರಂಜಿನಿ’ ಕಾರ್ಯಕ್ರಮವನ್ನು ಪ್ರಸಾರದ ಸಮಯದಲ್ಲಿ ಧ್ವನಿ ಮುದ್ರಿಸಿಕೊಂಡು ಪುನಃ ಪುನಃ ಕೇಳಿ ರಾಗದ ಮಾಹಿತಿಯನ್ನು ಮನವರಿಕೆ ಮಾಡಿಕೊಂಡಿದ್ದುಂಟು. ಹಲವಾರು ಕಾರಣಗಳಿಂದ ಶಾಸ್ತ್ರೀಯ ಸಂಗೀತದ ಕಲಾವಿದರು, ಕೇಳುಗರು (ದೇಶದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ) ಪ್ರತಿಶತ ಕಡಿಮೆ, ಹೀಗಿರುವಾಗ ಈ ಕಲೆಯನ್ನು ಮನೆ ಮನೆಗೂ ತಲುಪಿಸುವಲ್ಲಿ ಆಕಾಶವಾಣಿಯ ‘ಅನುರಂಜಿನಿ’ ಕಾರ್ಯಕ್ರಮ ಶ್ರಮ ಶ್ಲಾಘನೀಯವಾದುದು. ಇದಲ್ಲದೆ ಮಧ್ಯಾಹ್ನದ ಪ್ರಸಾರದಲ್ಲೂ ವಿವಿಧಭಾರತಿಯಲ್ಲಿ ಶಾಸ್ತ್ರೀಯ ಸಂಗೀತ ಪ್ರಸಾರವಾಗುತ್ತಿತ್ತು.

ಆಕಾಶವಾಣಿಯ ಮೂಲಕ ಸಂಗೀತ ಪಾಠವೂ ಪ್ರಸಾರಗೊಳ್ಳುತ್ತಿದೆ. ಸಂಪೂರ್ಣ ಸಂಗೀತವನ್ನು ಆಕಾಶವಾಣಿಯ ಪಾಠಗಳಿಂದ ಕಲಿಯಲು ಸಾಧ್ಯವಿಲ್ಲವಾದರೂ ಕೆಲವು ಸರಳವಾದ ರಾಗ-ರಚನೆಯನ್ನು ಖಂಡಿತವಾಗಿಯೂ ಕಲಿಯಬಹುದು. ಅನುಭವಿ, ನುರಿತ, ಹಿರಿಯ ಕಲಾವಿದರು; ನಿಲಯದ ಕಲಾವಿದರು ನಡೆಸಿಕೊಡುವ ಈ ಕಾಯ್ಕ್ರಮದಿಂದ ಯಾವುದೇ ಹಣ-ಸಮಯದ ಖರ್ಚಿಲ್ಲದೆ ಕೆಲವು ಹಾಡುಗಳನ್ನು ಕಲಿಯಬಹುದು.

ಇನ್ನೂ ಕೆಲವು ಪ್ರಮುಖ ಆಕಾಶವಾಣಿ ಕೇಂದ್ರಗಳಲ್ಲಿ ವಾದ್ಯವೃಂದವನ್ನು ರಚಿಸಿ, ಹಲವಾರು ಹಿರಿಯ ಕಲಾವಿದರು ಒಟ್ಟಿಗೇ ನುಡಿಸುವ, ಧುನ್‌ಗಳನ್ನು ರಚಿಸುವ ಕಾರ್ಯಕ್ರಮಗಳು, ಶಾಸ್ತ್ರೀಯ ಸಂಗೀತದಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸುವಂತೆ ಪ್ರೇರೇಪಿಸಿತು. ಸ್ವಭಾವತಃ ಸಂಪ್ರದಾಯಕ್ಕೆ ಅಮಟಿಕೊಳ್ಳುವ ಕಲಾವಿದರು, ಇ ಸಂದರ್ಭದಲ್ಲಿ ಹೊಸ ಪ್ರಯತ್ನಕ್ಕೆ ಮನ ತೆರೆದರು. ಯಾವುದೇ ಕಲೆ ನಿಂತ ನೀರಾದರೆ; ಅದರ ಬೆಳವಣಿಗೆ ಕುಂಠಿತವಾಗುತ್ತದೆ. ಈ ವಾದ್ಯವೃಂದಗಳು ಶಾಸ್ತ್ರ ಅಥವಾ ರಾಗವನ್ನು ಬದಲಿಸದಿದ್ದರೂ, ನಾವು ನೋಡುವ, ಕೇಳುವ ದೃಷ್ಟಿಯನ್ನು ಬದಲಾಯಿಸಿತು.

ಸಂಗೀತ ಕಲಾವಿದರ ಬಗ್ಗೆ ಪರಿಚಯಾತ್ಮಕ ಸಂದರ್ಶನಗಳು, ಸಂಗೀತ ರೂಪಕಗಳು, ಸಂಗೀತ ವಿಮರ್ಶಕರು, ಶಾಸ್ತ್ರಜ್ಞರು, ಕಲಾವಿದರ ಸಂದರ್ಶನಗಳನ್ನಾಧರಿಸಿ ಬಿತ್ತರಗೊಂಡ ಕಾರ್ಯಕ್ರಮಗಳು, ಸಂಗೀತ ಬಗ್ಗೆ ಒಂದು ಸಮತೋಲಿತ ದೃಷ್ಟಿಯನ್ನು ಬೆಳೆಸುವಲ್ಲಿ ನೆರವಾದವು. ಹಿರಿಯ ಕಲಾವಿದರ ಸ್ಮರಣಾರ್ಥ ನಡೆಯುವ ಸಂಗೀತ ಕಾರ್ಯಕ್ರಮಗಳು, ಉದಾಹರಣೆಗೆ ಸವಾಯಿ ಗಂಧರ್ವರ ಪುನ್ಯತಿಥಿ, ಕುಂದಗೋಳ, ಉಸ್ತಾದ್ ಅಲ್ಲಾದಿಯಾ ಖಾನ್ ಪುಣ್ಯತಿಥಿ ಕಾರ್ಯಕ್ರಮ ಧಾರವಾಡ, ಹೀಗೆ ಹಿರಿಯ ಸಂಗೀತಗಾರರ ಸ್ಮರಣಾರ್ಥ ರಾಷ್ಟ್ರದ ವಿವಿಧೆಡೆಗೆ ನಡೆಯುವ ಪ್ರಮುಖ ಕಾಯ್ಕ್ರಮಗಳ ನೇರ ಪ್ರಸಾರ, ಆಯ್ದಭಾಗಗಳ ಪ್ರಸಾರ, ಒಟ್ಟಿನಲ್ಲಿ ಶಾಸ್ತ್ರೀಯ ಸಂಗೀತಗಾರರು ಹಾಗು ಕೇಳುಗರ ಮಧ್ಯೆ ಒಂದು ನಿರಂತರ ಸಂಬಂಧವನ್ನು ತಮ್ಮ ನಿಲಯದ ಒಳಗೂ-ಹೊರಗೂ ಬೆಳೆಸುವಲ್ಲಿ ಯಶಸ್ವಿಯಾಗಿದೆ.

ಇಂದಿನ ಯುಗದಲ್ಲಿ ಕ್ಯಾಸೆಟ್, ಸಿಡಿ, ಎಂಪಿ೩ ಸಿಡಿ, ದೂರದರ್ಶನ, ಎಫ್.ಎಂ ರೇಡಿಯೋ, ನೂರಾರು ಖಾಸಗಿ ಟಿವಿ ಚಾನೆಲ್, ಮನೆಯಲ್ಲೇ ಡಿವಿಡಿ, ವಿಸಿಡಿ, ಇಂಟರ್‌ನೆಟ್ ಇವೆಲ್ಲವುಗಳ ಮೂಲಕ ಸಂಗೀತ ಲಭ್ಯವಿದ್ದಾಗಲು ಆಕಾಶವಾಣಿಯು ಇನ್ನೂ ವರೆಗೂ ತನ್ನ ವಿಶೇಷ ಸ್ಥಾನವನ್ನು ಉಳಿಸಿಕೊಂಡಿದೆ.