ಕನ್ನಡ ನವೋದಯ ಸಾಹಿತ್ಯದ ಹಿಂದಿರುವ ಹಲವು ಪ್ರೇರಣೆಗಳಲ್ಲಿ, ಜಾನಪದ ಬಗೆಗೆ ಈ ನಾಡಿನ ಪ್ರಜ್ಞಾವಂತರಲ್ಲಿ ಹುಟ್ಟಿಕೊಂಡ ಎಚ್ಚರ ಹಾಗೂ ಆಸಕ್ತಿಗಳು ಬಹಳ ಮುಖ್ಯವಾದವುಗಳೆಂದು ನನ್ನ ತಿಳಿವಳಿಕೆ. ಒಂದೆಡೆ ಪಶ್ಚಿಮದ ಕಾವ್ಯರೂಪಗಳಿಂದ ಪ್ರಭಾವಿತರಾಗಿ, ಅವುಗಳಿಗೆ ಸಂವಾದಿಯಾದ ಹೊಸ ರೂಪಗಳನ್ನು ಕನ್ನಡದಲ್ಲಿ ಆವಿಷ್ಕಾರ ಮಾಡುವ ಪ್ರಯತ್ನಗಳು, ಅನುವಾದ ರೂಪಾಂತರ ಆಳವಡಿಕೆ ಇತ್ಯಾದಿಗಳ ಮೂಲಕ ಕೆಲವರಿಂದ ಪ್ರಾರಂಭವಾದರೂ, ಈ ಹೊಸ ರೂಪಗಳ ಒಳಕ್ಕೆ ತುಂಬಿಕೊಳ್ಳಬೇಕಾದ ಹೂರಣ ಈ ನೆಲದ ಮಣ್ಣಿನಿಂದ ಬೆಳೆದುಕೊಂಡಿದ್ದೇ ಆಗಿರಬೇಕೆಂಬ ತಿಳಿವು ಇದರ ಹಿನ್ನೆಲೆಯಲ್ಲಿತ್ತೆಂಬುದು ಮಹತ್ವದ ಸಂಗತಿಯಾಗಿದೆ. ಕನ್ನಡಕಾವ್ಯ ತನ್ನ ನವೋದಯ ಸಂದರ್ಭದಲ್ಲಿ ರಾಷ್ಟ್ರೀಯತೆಯ ಮತ್ತು ಪ್ರಾದೇಶಿಕ ಸಂಸ್ಕೃತಿಯ ಬಗೆಗೆ ಇರಿಸಿಕೊಂಡ ಕಳಕಳಿ ಈ ಮಾತಿಗೆ ಒಂದು ನಿದರ್ಶನವಾಗಿದೆ. ಪ್ರಾದೇಶಿಕ ಸಂಸ್ಕೃತಿಯ ಬಗೆಗಿನ, ಇದರ ಕಳಕಳಿ ಮುಖ್ಯವಾಗಿ ಕಾಣಿಸುವುದು, ಈ ಕಾವ್ಯ ನಿರ್ಮಿತಿಯಲ್ಲಿ ತೊಡಗಿಕೊಂಡ ಹಲವರು, ಪ್ರಾದೇಶಿಕ ಸಂಸ್ಕೃತಿಯ ಅಂತಸ್ಸತ್ವವಾದ ಜಾನಪದದ ಬಗೆಗೆ ತೋರಿದ ಆಸಕ್ತಿಯಲ್ಲಿದೆ. ಅದು ಮುಖ್ಯವಾಗಿ ಜನಪದ ಗೀತೆಗಳ ಸಂಗ್ರಹ, ಮತ್ತು ತನ್ಮೂಲಕ ನಡೆದ ಕರ್ನಾಟಕ ಸಂಸ್ಕೃತಿಯ ವ್ಯಾಖ್ಯಾನ ಇತ್ಯಾದಿಗಳ ಸ್ವರೂಪದ್ದಾಗಿತ್ತು. ಉತ್ತರ ಕರ್ನಾಟಕದ ‘ಗೆಳೆಯರ ಗುಂಪು’ ಸಂಗ್ರಹಿಸಿ ಪ್ರಕಟಿಸಿದ ‘ಗರತಿಯ ಹಾಡು’ ‘ಮಲ್ಲಿಗೆ ದಂಡೆ’ ‘ಜೀವನ ಸಂಗೀತ’ ಇವುಗಳು ಜಾನಪದ ಕ್ಷೇತ್ರದ ಮೊದಲ ಕೆಲಸಗಳು ಮಾತ್ರವಲ್ಲ, ಬೇಂದ್ರೆಯವರಂಥ ಕವಿಗಳ ಕಾವ್ಯದ ಹಾಗೂ ಕನ್ನಡ ಕಾವ್ಯದ ದೃಷ್ಟಿಯಿಂದಲೂ ಅಗತ್ಯವಾದ ಕೆಲಸಗಳಾಗಿದ್ದವು. ಇದರ ಜತೆಗೆ ಬೆಟಗೇರಿ ಕೃಷ್ಣಶರ್ಮರು, ದೇವುಡು ಅವರು, ಮಾಸ್ತಿಯವರು-ಇಂಥ ಇನ್ನೂ ಹಲವರು ಕರ್ನಾಟಕ ಜನಪದ ಅಭಿವ್ಯಕ್ತಿಗಳ ಬಗೆಗೆ ಮತ್ತು ಕರ್ನಾಟಕ ಸಂಸ್ಕೃತಿಯ ಬಗೆಗೆ ಬರೆದ ವ್ಯಾಖ್ಯಾನ ರೂಪದ ಕೃತಿಗಳು ಈ ಕಾರ್ಯದ ಒಂದು ಮುಖ್ಯ ಅಂಗವಾಗಿ ಪರಿಣಮಿಸಿದವು. ಹೀಗೆ ಹುಟ್ಟಿಕೊಂಡ ಈ ಹೊಸ ಎಚ್ಚರ, ಜಾನಪದದ ಬಗೆಗೆ ಹೊಸ ದೃಷ್ಟಿಕೋನಗಳನ್ನು ತೆರೆದುದಲ್ಲದೆ, ಈ ಜಾನಪದ ಸತ್ವ ಎನ್ನುವುದು ಹೇಗೆ ಪ್ರಾಚೀನ ಕಾಲದಿಂದಲೂ ಕನ್ನಡ ಕಾವ್ಯಕ್ಕೆ ಒಂದು ಜೀವಂತಿಕೆಯನ್ನು  ತಂದುಕೊಟ್ಟಿದೆ ಎನ್ನುವುದನ್ನೂ ಮತ್ತು ಇಂದಿಗೂ ಅದು ಹೇಗೆ ಆಧುನಿಕ ಸಾಹಿತ್ಯದ ಒಂದು ಮುಖ್ಯ ಸತ್ವವಾಗಿದೆ ಎನ್ನುವುದನ್ನೂ ಗುರುತಿಸುವ ಪ್ರವೃತ್ತಿಯನ್ನು ಮೂಡಿಸಿದೆ. ಹೀಗೆ ಅರ್ಧ ಶತಮಾನಕ್ಕೂ ಹಿಂದೆ, ಪ್ರಾರಂಭವಾದ ಜಾನಪದದ ಈ ಕೆಲಸ ಅನೇಕ ಉತ್ಸಾಹೀ ಕೆಲಸಗಾರರಿಂದ, ವಿಪುಲವಾದ ಹಾಡು, ಗಾದೆ, ಒಗಟು, ಕತೆ ಇತ್ಯಾದಿ ಸಾಮಗ್ರಿಗಳ ಸಂಗ್ರಹ, ಸಂಪಾದನೆ ಹಾಗೂ ಪ್ರಕಟಣೆಗಳ ಮೂಲಕ, ಇಂದು ಸಾಕಷ್ಟು ನಡೆದಿದೆ. ಆದರೆ ಈ ಕಾರ್ಯ ಒಂದು ಅಧ್ಯಯನದ ಶಿಸ್ತನ್ನು ಪಡೆದುಕೊಂಡದ್ದು, ಕಳೆದ ಹದಿನೈದು-ಇಪ್ಪತ್ತು ವರ್ಷಗಳಲ್ಲಿ-ಅದೂ ವಿಶ್ವವಿದ್ಯಾಲಯದ ಸ್ನಾತಕೋತ್ತರ ಹಂತದಲ್ಲಿ ಒಂದು ಅಧ್ಯಯನದ ವಿಷಯವಾದಾಗಿನಿಂದ.ಆದರೂ ಈ ಹದಿನೈದು-ಇಪ್ಪತ್ತು ವರ್ಷಗಳ ಕಾಲದಲ್ಲಿ ಅದು ಒಂದು ಅಧ್ಯಯನದ ಶಿಸ್ತನ್ನು ಪಡೆದುಕೊಂಡರೂ ಕೂಡ, ಅದನ್ನು ಇನ್ನೂ ವೈಭವಿಸಿ ನೋಡುವ ರಸನಿಷ್ಠ ನಿಲುವಿನಿಂದ ನಾವು ಪಾರಾಗಿದ್ದೇವೆಂದು ಹೇಳಿಕೊಳ್ಳಲು ಸಾಧ್ಯವಾಗಿಲ್ಲ. ಜಾನಪದ ಅಧ್ಯಯನ ಹೆಚ್ಚು ವೈಜ್ಞಾನಿಕವಾಗುತ್ತ, ಅದು ಮೂಲತಃ ಸಂಸ್ಕೃತಿಯ ಒಂದು ಅಂಗ ಎನ್ನುವ ತಿಳಿವು ನಮ್ಮ ಅಧ್ಯಯನಕ್ಕೆ ಪ್ರಾಪ್ತವಾಗಬೇಕಾಗಿದೆ.

ಸಾಹಿತ್ಯದ ಒಬ್ಬ ವಿದ್ಯಾರ್ಥಿಯಾಗಿ ನನಗೆ, ಜಾನಪದ ಅನ್ನುವುದು, ಕನ್ನಡ ಸಾಹಿತ್ಯದಷ್ಟೇ ಅಲ್ಲ.  ಅದಕ್ಕೂ ಹಿಂದಿನಿಂದಲೂ ಇದ್ದುಕೊಂಡು, ಅಂದಂದಿನ ಸಾಹಿತ್ಯದ ಜತೆಗೆ ಸಮಾನಾಂತರವಾಗಿ ಬಂದ ಮತ್ತು ಸಾಹಿತ್ಯದ ಮೇಲೆ ತನ್ನ ಪ್ರಭಾವವನ್ನು ಒಡ್ಡುತ್ತ ಬಂದ ಒಂದು ಜೀವಸತ್ವವಾಗಿದೆ. ನಾವು ಯಾರನ್ನು ಮೌಲಿಕವಾದ ಬರಹಗಾರರೆಂದು ಕರೆಯುತ್ತೇವೋ ಅವರೆಲ್ಲರ ಬರಹಗಳಲ್ಲಿ ಈ ಜಾನಪದ ಜೀವಸತ್ವ ಬೇರೆ ಬೇರೆಯ ಸ್ವರೂಪಗಳಲ್ಲಿ ಪ್ರಕಟವಾಗಿಯೇ ಇದೆ.

ನಮ್ಮ ಜಾನಪದ ಅಭಿವ್ಯಕ್ತಿಗಳಲ್ಲಿ ಕಂಡುಬರುವ ನಿಲುವುಗಳು, ಅದಕ್ಕೆ ಸಮಾನಾಂತರವಾಗಿ ಬಂದ ಸಾಹಿತ್ಯಕ ನಿಲುವುಗಳಿಂದ ಅನೇಕ ರೀತಿಯಲ್ಲಿ ಬೇರೆಯಾಗಿವೆ ಎನ್ನುವುದು, ಗುರುತಿಸಿಕೊಳ್ಳಬೇಕಾದ ಸಂಗತಿಯಾಗಿದೆ. ‘ಸಾಹಿತ್ಯ’ ಅನ್ನುವುದು, ಮೂಲತಃ ಜನಜೀವನ ಹಾಗೂ ಆ ಜನದ ಆಚಾರ-ವಿಚಾರ-ನಿಲುವು -ನಂಬಿಕೆ ಇತ್ಯಾದಿಗಳ ಅಭಿವ್ಯಕ್ತಿಯಾಗಿದೆ ಎಂದು ನಾವು ಭಾವಿಸಿದರೂ, ಈ ಸಾಹಿತಿಗಳು ಬರೆದ ‘ಸಾಹಿತ್ಯ’ ಅಭಿವ್ಯಕ್ತಪಡಿಸುವ ‘ಜನದ’ ನಿಲುವುಗಳಿಗೂ, ಜನಪದಾಭಿವ್ಯಕ್ತಿಗಳಲ್ಲಿ ಪ್ರಕಟವಾಗಿರುವ ‘ಜನದ’ ನಿಲುವುಗಳಿಗೂ ವಿಶೇಷವಾದ ವ್ಯತ್ಯಾಸಗಳಿವೆ ಎನ್ನುವುದು ಸ್ವಾರಸ್ಯದ ಸಂಗತಿಯಾಗಿದೆ.

ಸಾಹಿತ್ಯವನ್ನು ಅದರಲ್ಲೂ ಹಿಂದಿನ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವಾಗ ಕಂಡುಬರುವ  ನಿಲುವುಗಳನ್ನು  ಮುಖ್ಯವಾಗಿ ಎರಡು ಎಂದು ಹೇಳಬಹುದು.   ಒಂದು ‘ಇಹ’ನಿಷ್ಠ ನಿಲುವು; ಮತ್ತೊಂದು ‘ಪರ’ನಿಷ್ಠ ನಿಲುವು.

ಸಾಹಿತ್ಯ ಅನ್ನುವುದು ಹುಟ್ಟಿಕೊಳ್ಳುವುದು ಮೂಲತಃ ಈ ‘ಇಹ’ದ ಅನುಭವಗಳಿಂದಲೇ ಆದರೂ, ಈ ಲೋಕಜೀವನ, ಅದರ ಅರ್ಥ ಮತ್ತು ಅದು ತಲುಪಬೇಕಾದ ನೆಲೆ ಇತ್ಯಾದಿಗಳನ್ನು ಕುರಿತ ವಿಚಾರಗಳು, ಆಯಾ ಕವಿಗಳು ಹುಟ್ಟಿ ಬೆಳೆದ ಮತ-ಧರ್ಮದ ನಿಲುವುಗಳಿಂದಾಗಿ ಬಹುಮಟ್ಟಿಗೆ ಈ ಲೋಕದಾಚೆಯ ‘ಪರ’ದ ಕಡೆಗೇ ಕಾತರಿಸುವ ಸ್ವರೂಪದವುಗಳಾಗಿವೆ-ಎಂಬುದು ಹಿಂದಿನ ಸಾಹಿತ್ಯವನ್ನು ಓದಿದ ಯಾರಿಗಾದರೂ ಸ್ಪಷ್ಟವಾಗುವ ಸಂಗತಿಯಾಗಿದೆ. ಇಹದ  ಬದುಕಿಗಿಂತ, ಪರದ ಬದುಕು ಮುಖ್ಯವಾದಾಗ, ಇಂಥ ನಿಲುವಿನಲ್ಲಿ ಕಾವ್ಯ ಬರೆಯಬೇಕಾದ ಕವಿಯ ಧೋರಣೆ ಒಂದು ರೀತಿಯ ದ್ವಂದ್ವಕ್ಕೆ ಸಿಕ್ಕಿಕೊಳ್ಳುತ್ತದೆ. ಇದರಿಂದ ಪಾರಾಗುವ ದಾರಿ ಎಂದರೆ, ಕಾವ್ಯಪ್ರಜ್ಞೆಯನ್ನು, ಲೌಕಿಕ ಆಗಮಿಕ ಎಂದು ವಿಭಾಗಿಸಿಕೊಂಡು, ಕೆಲವು ಜೈನಕವಿಗಳಂತೆ ಬದುಕುವುದು; ಅಥವಾ ಅವೆರಡರ ಸಮನ್ವಯವನ್ನು ಒಪ್ಪಿಕೊಂಡೂ, ‘ಪರ’ದ ಮಹತ್ವವನ್ನೆ ಕೊನೆಗೆ ಭರತವಾಕ್ಯವನ್ನಾಗಿ ಹೇಳುವುದು ಅಥವಾ ಇಹವನ್ನು ತುಚ್ಛೀಕರಿಸಿ ಪರವೊಂದೇ ಪರಮವಾದದ್ದೆಂದು ಹಾಡುವುದು. ಇಡೀ ಕನ್ನಡ ಕಾವ್ಯ ಪರಂಪರೆಯನ್ನು ಗಮನಿಸಿದರೆ,ಇದಕ್ಕಿಂತ ಭಿನ್ನವಾದ ನಿಲುವುಗಳನ್ನು ಕಾಣುವುದು ಕಷ್ಟ. ಕಾಲದಿಂದ ಕಾಲಕ್ಕೆ ವಸ್ತುವಿನಲ್ಲಿ, ರೀತಿಯಲ್ಲಿ, ಛಂದಸ್ಸಿನಲ್ಲಿ ಎಷ್ಟೇ ಬದಲಾಗುತ್ತಾ ಬಂದರೂ, ಅಂದಂದಿನ ಮತ-ಧರ್ಮಗಳು ರೂಪಿಸಿದ ಜೀವನದೃಷ್ಟಿಯ ಹಿಡಿತದಿಂದ, ಕವಿಗಳೂ-ಕಾವ್ಯಗಳೂ ಹೊರಕ್ಕೆ ಬರಲು ಸಾಧ್ಯವಾಗಲಿಲ್ಲ. ಜೈನರಾಗಲಿ, ವೀರಶೈವರಾಗಲಿ, ವೈಷ್ಣವರಾಗಲಿ, ಅಭಿವ್ಯಕ್ತಪಡಿಸಿರುವುದು ಮುಖ್ಯವಾಗಿ ‘ಪರ’ ನಿಷ್ಠೆಯನ್ನೇ ಎಂಬುದನ್ನು ನಮ್ಮ ಹಿಂದಿನ ಸಾಹಿತ್ಯ ಸಾಧಿಸಿ ತೋರುತ್ತದೆ. ಈ ನಿಷ್ಠೆಯನ್ನು ಎತ್ತಿ ಹಿಡಿದಂಥ ಕೃತಿಗಳು, ಕಾವ್ಯ ಹಾಗೂ ಕಲಾದೃಷ್ಟಿಯಿಂದ ಎಷ್ಟೇ ಮೌಲಿಕವಾಗಿದ್ದರೂ, ಅವುಗಳು ಪ್ರತಿನಿಧಿಸುವ ಜೀವನ ದೃಷ್ಟಿ, ಮನುಷ್ಯ ಈ ಲೋಕಕ್ಕೆ ಸೇರಿದವನು, ಅವನು ಈ ಲೋಕದಲ್ಲಿ ಬದುಕಲು ಅರ್ಹನಾದವನು ಎಂಬುದನ್ನು ಒತ್ತಿ ಹೇಳುವುದರ ಬಗ್ಗೆ ಯಾಕೋ ಹಿಂಜರಿಯುವಂತೆಯೇ ತೋರುತ್ತದೆ. ಜೀವನವನ್ನು ಗಾಢವಾಗಿ ಪ್ರೀತಿಸುತ್ತ, ಬದುಕಿನ ಅನುಭವಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಅದರಿಂದ ಬರಬಹುದಾದ ಪರಿಣತಿಯಿಂದ, ಅವನನ್ನು ಈ ನಿಲುವು ವಂಚಿಸುವಂತೆ ತೋರುತ್ತದೆ. ನಿದರ್ಶನಕ್ಕೆ ಜೈನಪುರಾಣಗಳನ್ನೆ ತೆಗೆದುಕೊಳ್ಳಬಹುದು. ‘ಭೋಗದ ಕೊನೆ ತ್ಯಾಗ, ವೈಭವದ ಕೊನೆ ವೈರಾಗ್ಯ’ ಎನ್ನುವುದನ್ನು ಪ್ರತಿಪಾದಿಸುವುದು, ರಾಜಮಹಾರಾಜರ ಭೋಗ-ವೈಭವದ ಕಥೆಗಳ ಮೂಲಕ. ಒಬ್ಬ ಚಕ್ರವರ್ತಿ ಕಥಾನಾಯಕ. ಅವನ ಭೋಗ-ವೈಭವಗಳಿಗೆ ಕೊರತೆ ಇಲ್ಲ.ಅಂಥ ಕಟ್ಟರೆಯಾಗುವ ಸುಖ-ಸಂಪತ್ತಿನಲ್ಲಿ ಆ ರಾಜಮಗ್ನನಾಗಿರುತ್ತಾನೆ. ಅವನಿಗೆ ಒಂದು ದಿನ, ತಲೆಯಲ್ಲಿ ನೆರೆಕೂದಲು ಕಂಡದ್ದರಿಂದಲೋ, ಅಥವಾ ಇನ್ನಾವುದೋ ಕಾರಣದಿಂದಲೋ ತಟಕ್ಕನೆ ವೈರಾಗ್ಯ ಹುಟ್ಟುತ್ತದೆ.ಆತ, ಈ ಶರೀರ, ಭೋಗ-ವೈಭವಗಳೆಲ್ಲಾ ನಶ್ವರ ಎಂದು, ಈ ಸಂಪತ್ತು-ಸುಖ ಎಲ್ಲವನ್ನೂ ಹಳಿದು ಅವೆಲ್ಲವನ್ನೂ ಬಿಟ್ಟು ಪರಮ ವಿರಾಗಿಯಾಗಿ, ತಪಸ್ಸು ಮಾಡಿ ಸಿದ್ಧನೋ ಅರ್ಹಂತನೋ ಆಗುತ್ತಾನೆ. ಇದೆಲ್ಲಾ ಒಂದು ಕಥೆಯಾಗಿ ಹಾಗೂ ಆದರ್ಶವಾಗಿ ಚೆನ್ನಾಗಿದೆ.ಆದರೆ ಒಟ್ಟಿನಲ್ಲಿ ಅದು ಹೇಳುವುದೇನನ್ನು? ಈ ಲೋಕದ ಭೋಗ-ವೈಭವಾದಿಗಳು ನಶ್ವರ, ಅವುಗಳನ್ನು ಬಿಡುವುದರಿಂದ ಪರಮಸುಖ ಅಥವಾ ‘ಪರ’ ಲೋಕ ಪ್ರಾಪ್ತವಾಗುತ್ತದೆ ಎಂಬುದನ್ನು ತಾನೆ? ಆದರೆ ಇದನ್ನು ಓದುವ, ಈ ದೇಶದ ಲಕ್ಷಾಂತರ ಓದುಗರು, ಅದೂ ಬದುಕಿನಲ್ಲಿ ಯಾವ ಸುಖ-ಸಂಪತ್ತನ್ನೂ ಕಾಣದ ಸಾಮಾನ್ಯ ಓದುಗರು, ಇಂಥ ಕೃತಿಯನ್ನು ಹೇಗೆ ಗ್ರಹಿಸುತ್ತಿದ್ದರು ಎಂಬುದೇ ನನಗೆ ಅರ್ಥವಾಗದ ಸಂಗತಿ. ಭೋಗ-ವೈಭವಗಳಿಂದ ಕಟ್ಟರೆಯಾಗಿ ಅದನ್ನೆಲ್ಲಾ ನಶ್ವರ ಎಂದು ಬಿಟ್ಟುಹೋದ ರಾಜನೊಬ್ಬನ ಅದ್ಭುತ ವೃತ್ತಾಂತವನ್ನು, ಹೊಟ್ಟೆಗೇ ಇಲ್ಲದ ಬಹುಸಂಖ್ಯಾತ ಓದುಗ (ಶ್ರಾವಕ) ವರ್ಗ ಹೇಗೆ ಮೆಚ್ಚಿಕೊಂಡು ಬೆರಗಾಗಬೇಕು! ನೀವೂ ಹೀಗೇ ಮಾಡಿ, ಹೀಗೆ ಮಾಡುವುದರಿಂದ ಮಾತ್ರ ನಿಮಗೂ ಪರಮಸುಖ ಎಂಬುದನ್ನು ಈ ಕಾವ್ಯ ಹೇಳಿದ ಹಾಗಾಯಿತು.ಆ ರಾಜಧಿರಾಜರುಗಳೇನೋ ಮಹತ್ತಾದ ಭೋಗ-ವೈಭವಗಳಿದ್ದುವೆಂದು ಅವುಗಳನ್ನು ಬಿಟ್ಟರು; ಆದರೆ ಅದೇನೂ ಇಲ್ಲದ ಬಹುಜನ ಸಮುದಾಯ ‘ಪರಮಪದ’ಕ್ಕಾಗಿ ಏನನ್ನು ಬಿಡಬೇಕು? ಇರುವ ಪ್ರಾಣವನ್ನು ಮಾತ್ರ ಬಿಡಬೇಕು ಅಷ್ಟೆ! ಇನ್ನು ವೀರಶೈವ ಕಾವ್ಯಗಳೂ ಹೀಗೆಯೇ. ಹರಿಹರನ ರಗಳೆಗಳ ತುಂಬ ಇದೇ ಕಥೆ. ದೇವರಿಗಾಗಿ ಕಣ್ಣನ್ನೇ ಕೊಡುವ; ದೇವರಿಗಾಗಿ ಹಸಿವು, ಬಡತನಗಳನ್ನು ‘ವರ’ವೆಂದು ಭಾವಿಸಿ ಬದುಕುವ, ಶಿವನ ಜತೆಗೆ ಕೈಲಾಸಕ್ಕೆ ಹೋಗಲು ಕಾತರಿಸುವ ಭಕ್ತರ ಕಥೆಗಳು. ಇನ್ನು ದಾಸ ಸಾಹಿತ್ಯದ್ದೂ ಇಷ್ಟೇ. ಒಟ್ಟಿನಲ್ಲಿ  ಮನುಷ್ಯ ಇಲ್ಲಿ ಇರಲು ಅರ್ಹನಲ್ಲ. ‘ಅಲ್ಲಿದೆ ನಮ್ಮಮನೆ, ಇಲ್ಲಿ ಬಂದೆ ಸುಮ್ಮನೆ’-ಅನ್ನುವ ನಿಲುವುಗಳೇ ಮುಖ್ಯ. ಹಾಗಾದರೆ ಇವುಗಳ ನಡುವಣ ನಿಲುವು ಇಲ್ಲವೆ ಅಂದರೆ, ಇದೆ ಅಲ್ಪಸ್ವಲ್ಪ. ಈ ಮರ್ತ್ಯದ ಮಹತ್ತನ್ನು ಎತ್ತಿ ಹೇಳಿದ ವಚನಕಾರರಲ್ಲಿ, ಮತ್ತೆ ಪಂಪನಂಥ ಕವಿಗಳಲ್ಲಿ. ಆದರೆ, ಈ ಲೋಕ, ಅದರ ಬದುಕು ಏನೇನೂ ಅಲ್ಲ ಎಂದೂ ಹೇಳದಿದ್ದರೂ, ಮೂಲತಃ ಈ ಬದುಕಿನಾಚೆಯ ‘ಪರ’ದ ಮೇಲೆ ಈ ಎಲ್ಲ ಧೋರಣೆಗಳ ಕಣ್ಣು.

ಈ ನಿಲುವಿಗೆ ಹೋಲಿಸಿದರೆ ನಮ್ಮ ಜಾನಪದಾಭಿವ್ಯಕ್ತಿಗಳಲ್ಲಿ ಕಂಡು ಬರುವ ನಿಲುವು ಇದಕ್ಕೆ ತದ್ವಿರುದ್ಧವಾದದ್ದು. ಇದರ ಕಣ್ಣು ಮೂಲತಃ ‘ಇಹ’ ನಿಷ್ಠವಾದದ್ದು.ಈ ನೆಲ, ಈ ಜಲ, ಈ ಮರ-ಗಿಡ ಇವುಗಳಿಗೆ ಬದ್ಧವಾದದ್ದು. ಈ ಸುತ್ತಣ ಲೋಕದಿಂದಲೇ ನಮ್ಮ ಬದುಕು. ಆದಕಾರಣ ಅದನ್ನು ಗಾಢವಾಗಿ ಪ್ರೀತಿಸಬೇಕು ಅನ್ನುವುದು ಇಲ್ಲಿನ ಧೋರಣೆ. ಬೆಳಿಗ್ಗೆ ಎದ್ದರೆ, ಈ ಮನಸ್ಸುಗಳು ನೆನಯುವುದು ಭೂಮಿತಾಯಿಯನ್ನು-

ಬೆಳಗಾಗ ನಾನೆದ್ದು ಯಾರ‍್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳ
ಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯ
ಎದ್ದೊಂದು ಗಳಿಗೆ ನೆನದೇನ,

ಎಂಬ ಈ ಸ್ತುತಿಯೊಂದಿಗೆ, ಕನ್ನಡ ಸಾಹಿತ್ಯದಲ್ಲಿನ ಪ್ರಾರ್ಥನಾಪದ್ಯಗಳನ್ನು ಹೋಲಿಸಿ  ನೋಡಿದರೆ ಅವೆರಡರ ನಡುವಣ ಅಂತರ ತಾನೇ ಗೊತ್ತಾಗುತ್ತದೆ. ಆ ಶಿಷ್ಟ ಕವಿಗಳ ದೇವತೆಗಳೆಲ್ಲಾ ಈ ಲೋಕದವರಲ್ಲ; ಆ ಲೋಕದವರು. ಆದರೆ ಈ ‘ಭೂಮಿತಾಯಿ’ಯ ವರ್ಣನೆಯಲ್ಲಿ ‘ಪಾದಪದ್ಮ’ಗಳಿಲ್ಲ; ಕೀರಿಟ-ಹಾರಾದಿಗಳಿಲ್ಲ; ಅಲೌಕಿಕ ತೇಜಸ್ಸಿಲ್ಲ. ಅದರ ಬದಲು, ಈ ಭೂಮಿ ಈ ಜನದ ‘ತಾಯಿ’ ಎಂಬ ಕಲ್ಪನೆ; ಆಕೆ ಜೀವನ ಸಮೃದ್ಧಿ ಹಾಗೂ ಮರಣಗಳನ್ನು (ಜೀರಿಗೆ ಮತ್ತು ಎಳ್ಳು ಇವುಗಳ ಸಾಂಕೇತಿಕ ಅರ್ಥವನ್ನು ಯೋಚಿಸಿರಿ) ಒಳಕೊಳ್ಳುವ ಒಂದು ಶಕ್ತಿಯಾಗಿದ್ದಾಳೆ-ಎಂಬ ಸಂಗತಿ ಇಲ್ಲಿ ಪ್ರಧಾನವಾಗಿದೆ.ಹೀಗಾಗಿ ಈ ‘ಜನಪದ ಸಾಹಿತ್ಯ’ ಮುಖ್ಯವಾಗಿ ನೆಲಕ್ಕೆ, ಈ ಬದುಕಿಗೆ, ಅದರ ಸುಖ-ದುಃಖಾದಿಗಳಿಗೆ ಸಂಬಂಧಿಸಿದ್ದು.ತಮ್ಮ ದೈನಂದಿನ ಹಾಡು ಪಾಡುಗಳನ್ನು, ಮಾನವೀಯ ಸಂಬಂಧಗಳನ್ನು, ಪ್ರಾಣಿ-ಪಶು-ಪಕ್ಷಿಗಳನ್ನು, ಗಿಡ-ಮರ-ಬಳ್ಳಿ-ಬೆಳೆಗಳನ್ನು, ತಮ್ಮ ದುಡಿಮೆಯನ್ನು ಕುರಿತು ಸಮೃದ್ಧವಾಗಿ ಅಭಿವ್ಯಕ್ತಿಸುವ ಸಾಹಿತ್ಯ  ಇದು. ಜೀವನ ಪ್ರೀತಿಯಿಂದ ತುಡಿಯುವ ಈ ಸಾಹಿತ್ಯ, ಕನ್ನಡ ಸಾಹಿತ್ಯದ ಉದ್ದಕ್ಕೂ ಒಂದರ್ಥದಲ್ಲಿ ‘ಜೀವನ ವಿಮುಖ’ ಸಾಹಿತ್ಯದೊಂದಿಗೆ ಸಮಾಂತರವಾಗಿ ಬಂದಿರುವುದು ಸ್ವಾರಸ್ಯನಾದ ಸಂಗತಿಯಾಗಿದೆ.

ಈ ಜೀವನಪ್ರೀತಿ ತನಗಿಂತ ಮಿಗಿಲಾದದ್ದೊಂದಿದೆ ಎಂಬ ಅರಿವಿನ ಅಭಾವದಿಂದ ಹುಟ್ಟಿದಲ್ಲ.  ತನಗಿಂತ ದೊಡ್ಡದಾದ ದೈವದೊಂದಿಗೆ ಇರಿಸಿಕೊಂಡ ಶ್ರದ್ಧೆಯಿಂದ ಹುಟ್ಟಿದ್ದು.  ಈ ಶ್ರದ್ಧೆ ನಮ್ಮ ಹಿಂದಿನ ಕವಿಗಳ ‘ಧಾರ್ಮಿಕಶ್ರದ್ಧೆ’ಯನ್ನು ಯಾವ ರೀತಿಯಲ್ಲೂ ಹೋಲುವುದಿಲ್ಲ. ‘ಜಿನ’ ‘ಶಿವ’ ‘ವಿಷ್ಣು’ಗಳು ಕನ್ನಡ ಕವಿಗಳಿಗೆ, ಕೈವಲ್ಯ, ಕೈಲಾಸ, ವೈಕುಂಠಗಳೆಂಬ ಪರಮ ಪದಗಳಿಗೆ ಪ್ರತೀಕವಾಗುವ ಹಾಗೆ, ಈ ಜಾನಪದ ‘ಕವಿ’ಗಳಿಗೆ ಆಗಿಲ್ಲ. ಇವರ ಪಾಲಿಗೆ ದೇವರು, ಏಕಕಾಲಕ್ಕೆ ಎತ್ತರದವನೂ ಹೌದು, ಹತ್ತಿರದವನೂ ಹೌದು. ‘ಎತ್ತರದವನು’ ಯಾಕೆ ಅಂದರೆ, ಆತ ಈ ಲೋಕವನ್ನು ಕಾಪಾಡುವವನು, ನಡೆಸುವವನು; ಹತ್ತಿರದವನು ಯಾಕೆ ಅಂದರೆ, ಅವನನ್ನು ಈ ಮನಸ್ಸು ಕಲ್ಪಿಸಿಕೊಳ್ಳುವುದು, ಹತ್ತಿರದ ನೆಂಟನೆಂಬಂತೆ, ತಮ್ಮ ಹಾಗೆಯೆ ಪ್ರೀತಿ-ಕರುಣೆ-ವಾತ್ಸಲ್ಯಗಳುಳ್ಳ ಒಬ್ಬ ವ್ಯಕ್ತಿ ಎಂಬಂತೆ. ಗೌರಿ ಹಬ್ಬವನ್ನು ಕುರಿತು ಒಂದು ಜನಪದಗೀತೆ ಈ ಭಾವನೆಯನ್ನು ಬಹು ಸೊಗಸಾಗಿ ಪ್ರತಿಮಿಸುತ್ತದೆ. ಆ ಹಾಡು ಹೀಗೆ ಶುರುವಾಗುತ್ತದೆ: ಒಂದು ಸಲ ಶಿವ ಪಾರ್ವತಿ ಸರಸದಲ್ಲಿರುವಾಗ, ಪಾರ್ವತಿ ಶಿವನನ್ನು ಕುರಿತು ಹೇಳಿದಳಂತೆ,

“ಅರಸರೇ ತೌರೂರಿಗ್ಹೋಗಿ ಬರುವೆ”

ಎಂದು. ಆ ತೌರೂರು ಯಾವುದೂ ಅಲ್ಲ, ಈ ಭೂಲೋಕ. ತನ್ನ ಸತಿಯ ತೌರಿನ ಹಂಬಲಕ್ಕೆ ಶಿವ ಒಪ್ಪಿ, “ನೀನು ಎಷ್ಟು ದಿನ ಹೋಗುತ್ತೀಯ” ಎಂದು ಕೇಳಿದಾಗ,

“ಮೂರು ದಿನ, ಐದು ದಿನ,
ತಪ್ಪಿದರೆ ಏಳು ದಿನ”

ಅನ್ನುತ್ತಾಳೆ. ಶಿವ ಅವಳನ್ನು ಕಳುಹಿಸಿಕೊಡುತ್ತಾನೆ. ಗೌರಿ ಹಬ್ಬದಲ್ಲಿ ಗೌರಿ-ಗಣೇಶರು ಬರುವ ಈ ಸಂದರ್ಭಕ್ಕೆ ಜಾನಪದ ಮನಸ್ಸು ಕಲ್ಪಿಸಿದ ಹಿನ್ನೆಲೆ ಇದು. ಗೌರಿಯ ತವರು ಮನೆ ಈ ಲೋಕ; ಈ ತವರಿನ ಮೇಲಿನ ಪ್ರೀತಿಯಿಂದ ಆಕೆ ಪ್ರತಿ ಶ್ರಾವಣಮಾಸದಲ್ಲೂ ಇಲ್ಲಿಗೆ ಬರುತ್ತಾಳೆ.ಅಂದರೆ, ನಾವು, ಈ ಲೋಕದವರು ಮಣ್ಣಿನ ಮಗಳಾದ ಗೌರಿಯನ್ನು, ಕೈಲಾಸದ ಶಿವನಿಗೆ ಕೊಟ್ಟು ಮದುವೆ ಮಾಡಿದ್ದೇವೆ. ಹೀಗಾಗಿ ಶಿವ ನಮಗೆ ತೀರಾ ಸಮೀಪದ ಬಂಧುವಾಗಬೇಕು. ಶಿವ-ಪಾರ್ವತಿಯರ ಬಾಂಧವ್ಯದ ಬೆಳುದಿಂಗಳಿನಲ್ಲಿ ನೆಲ-ಮುಗಿಲು ಒಂದಾಗಿಬಿಡುತ್ತವೆ.   ”If man is of the earth he is also of the heaven” ಎನ್ನುವ ಮಾತಿದೆ. ಆ ಮಾತು ಇಲ್ಲಿ ಸಾರ್ಥಕವಾಗಿದೆ. ದೇವರೆಂದರೆ, ನಮ್ಮಿಂದ ದೂರವಿರುವ, ಮೋಕ್ಷವೆಂಬಂಥ ಮಹಪದವಿಯನ್ನು ಕರುಣಿಸುವ ಅಲೌಕಿಕವಾದ ಒಂದು ಚೈತನ್ಯ ಎಂಬಲ್ಲಿರುವ ದೂರ ಭಾವನೆಗೂ, ದೇವರೆಂಬುವನು ನಮ್ಮ ಸಮೀಪ ಬಂಧುವೆಂಬಂತೆ ಭಾವಿಸುವ ಈ ಆತ್ಮೀಯ ಭಾವನೆಗೂ ಇರುವ ವ್ಯತ್ಯಾಸವನ್ನು ಇಲ್ಲಿ ಕಾಣಬಹುದು.ನಂಜನಗೂಡು ನಂಜುಂಡನೋ, ಮೈಸೂರು ಚಾಮುಂಡಿಯೋ, ಅಥವಾ ಒಳ್ಳೊಳ್ಳೆ ಮರಗಳನ್ನು ಕಡಿಯಲು ಬರುವ ‘ಜವರಾಯ’ನೋ-ಈ ಎಲ್ಲರೂ ಇವರ ಕಲ್ಪನೆಯಲ್ಲಿ ಮಾನವರಂತೆಯೇ ತೋರುತ್ತಾರೆ. ದೈವತ್ವಕ್ಕೆ ಒದಗಿದ ಮಾನವೀಕರಣ ಒಂದು ವಿಶೇಷದ ಅಂಶವಾಗಿದೆ ಜಾನಪದ ಅಭಿವ್ಯಕ್ತಿಗಳಲ್ಲಿ.

ಈ ಜನಪದದ ಅಭಿವ್ಯಕ್ತಿಗಳಲ್ಲಿ ತಮ್ಮ ಪರಿಸರದ ಬದುಕಿಗೆ ಬದ್ಧವಾದ ಮನಸ್ಸುಗಳು ಕಾಣುತ್ತವೆ. ಯಾವ ಬಗೆಯ, ಐಹಿಕವಾದ ಅಥವಾ ಆಧ್ಯಾತ್ಮಿಕವಾದ ‘ಎತ್ತರದ ನೆಲೆ’ಗಳ ಕಡೆಗೂ ಪರದಾಡದೆ, ಇರುವ ಬದುಕನ್ನು ಒಪ್ಪಿಕೊಂಡು,ಬದುಕುವ ಒಂದು ಬಗೆಯ ಸಂತೃಪ್ತಿ ಹಾಗೂ ಜೀವನ ಪ್ರೀತಿ ಇಲ್ಲಿ ಮುಖ್ಯವಾಗುತ್ತದೆ.ಹೀಗೆಂದರೆ ಬದುಕಿನ ವೈಪರೀತ್ಯಗಳನ್ನು, ದಾರುಣತೆಗಳನ್ನು, ಈ ಅಭಿವ್ಯಕ್ತಿಗಳು ದಾಖಲು ಮಾಡಿಲ್ಲವೆಂದು ಅರ್ಥವಲ್ಲ. ಒಂದು ಸಲ ದಾರುಣವಾದ ಬರಗಾಲ ಬಂದಾಗ-

ಒಕ್ಕಲಗೇರಾಗ್ಯ ಮಳೆರಾಯ
ಅವರು ಮಕ್ಕಳ ಮಾರ‍್ಯಾರೊ ಮಳೆರಾಯ
ಮಕ್ಕಳ ಮಾರಿ ರೊಕ್ಕ ತಕ್ಕೊಂಡು
ಭತ್ತಂತ ತಿರುಗ್ಯಾರೊ ಮಳೆರಾಯ

ಎಂಬ ವರ್ಣನೆಯಲ್ಲಿ, ಹೊಟ್ಟೆಯ ಅನ್ನಕ್ಕಾಗಿ ಮಕ್ಕಳನ್ನೇ ಮಾರಿದ ಸಂಗತಿ ದಾಖಲಾಗಿದೆ. ಅಷ್ಟೇ ಅಲ್ಲ, ಮಕ್ಕಳನ್ನು ಮಾರಿ ರೊಕ್ಕ ತಕ್ಕೊಂಡು, ಭತ್ತಕ್ಕಾಗಿ ತಿರುಗಿದರು ಅಂದಮೇಲೆ, ಅದೇ ಪರಿಸರದಲ್ಲಿ ‘ಭತ್ತ’ವನ್ನು ಕದ್ದುಮುಚ್ಚಿ ಕೊಡುವಂಥವರೂ ಇದ್ದರು ಎಂದಂತಾಯಿತು. ಜತೆಗೆ ಯಾವ ಮುಚ್ಚುಮರೆಯೂ ಇಲ್ಲದೆ, ತಮ್ಮ ಪರಿಸರದ ಮುಕ್ತಪ್ರಣಯ ವ್ಯಾಪಾರಗಳಿಗೂ ‘ಜನಪದ ಸಾಹಿತ್ಯ’ ಸಮೃದ್ಧವಾಗಿ ಅಭಿವ್ಯಕ್ತಿಯನ್ನು ನೀಡಿದೆ. ಒಟ್ಟಿನಲ್ಲಿ ನಿಸ್ಸಂಕೋಚವಾದ, ಒಂದು ಪ್ರವೃತ್ತಿ, ಸಾಮಾನ್ಯಾರ್ಥದ ನೀತಿ, ತತ್ವ, ಧರ್ಮ ಇತ್ಯಾದಿ ಉಪಾಧಿಗಳಿಗೆ ಬದ್ಧವಾಗದ ಒಂದು ತೆರೆದ ಮನಸ್ಸಿನ ಹದ ಈ ಹಾಡು-ಕತೆ ಇತ್ಯಾದಿಗಳಲ್ಲಿ ಪ್ರಕಟವಾಗಿದೆ.

ಈ ಒಂದು ‘ಮುಗ್ಧ’ ಸ್ಥಿತಿಯಿಂದಾಗಿಯೆ, ಈ ಜಾನಪದ ಬದುಕು ತೀರಾ ಸುಲಭವಾಗಿ ಶೋಷಣೆಗೆ ಒಳಗಾಗಿದೆ.ಕಲ್ಲನಕೇರಿಯ ಮಲ್ಲನಗೌಡ ಕಟ್ಟಿಸಿದ ಕೆರೆಯೊಂದಕ್ಕೆ ಸಣ್ಣ ಸೊಸಿ ಭಾಗೀರಥಿ ಬಲಿಯಾಗಬೇಕಾಗಿ ಬಂದ ಒಂದು ಲಾವಣಿ ‘ಕೆರೆಗೆ ಹಾರ’ ಈ ಮಾತಿಗೆ ಒಂದು ಸಾಕ್ಷಿಯಾಗಿದೆ. ಊರಗೌಡ, ಜೋಯಿಸ ಇವರು ಸೇರಿ, ಸಾಮಾಜಿಕವಾಗಿ ಹೇಗೆ ಶೋಷಣೆಗೆ ಗುರಿಪಡಿಸಿದರೆಂಬುದು ಆ ಲಾವಣಿಯ ವಸ್ತುವಾಗಿದೆ. ಹೆಣ್ಣನ್ನು ಕುರಿತ ಕಲ್ಪನೆ ಕೂಡಾ ಈ ಜಾನಪದ ಅಭಿವ್ಯಕ್ತಿಗಳಲ್ಲಿ ಇದೇ ರೀತಿ ಸಾಂಪ್ರದಾಯಿಕ ನಂಬಿಕೆಗಳಿಂದ ಬೇರೆಯಾಗಿಲ್ಲ. ‘ಹೆಣ್ಣು ಆಗೋದಕ್ಕಿಂತ ಮಣ್ಣು ಆಗೋದು ಲೇಸು’ ಎಂದು ಮೊದಲಾಗುವ ಹಾಡೊಂದರಲ್ಲಿ, ಹೆಣ್ಣು ಆಗೋದು ಯಾಕೆ ಲೇಸು ಎಂಬುದನ್ನು ಸಮರ್ಥಿಸುತ್ತಾ, ಮಣ್ಣಾದರೆ, ಅದರ ಮೇಲೊಂದು ಗಿಡಹುಟ್ಟಿ ಹೋಗಿ ಬರುವ ಜನಕ್ಕೆ ನೆರಳಾದರೂ ಆಗುತ್ತದೆ ಎಂಬ ಸಮಾಧಾನ ವ್ಯಕ್ತವಾಗಿದೆ. ಇಂಥ ಹಾಡುಗಳನ್ನು ನಮ್ಮ ಹೆಣ್ಣು ಮಕ್ಕಳು ಪರಂಪರಾಗತವಾಗಿ ಹಾಡುತ್ತಾ ಬಂದಿದ್ದಾರೆ.ಈ ಹಾಡಿನೊಳಗಣ ಭಾವನೆಯನ್ನು ನಂಬುವುದು ಎಷ್ಟೊಂದು ಅಪಾಯಕಾರಿ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.ಹೆಣ್ಣಿನ ಬಗ್ಗೆ ಕೀಳರಿಮೆ ಹುಟ್ಟಿಸುವ ಇಂಥ ಹಾಡುಗಳು ವ್ಯಕ್ತಿಯ ಆತ್ಮಪ್ರತ್ಯಯಕ್ಕೆ ಮಾರಕವಾಗುತ್ತ, ಜೀವನವಿರೋಧಿ ಧೋರಣೆಯೊಂದನ್ನು ಪ್ರತಿಪಾದಿಸುತ್ತವೆ. ಈ ಬಗೆಯ ಧೋರಣೆಗಳನ್ನು, ಜಾನಪದವನ್ನು  ಕುರಿತು  ಅಧ್ಯಯನ ಮಾಡುವವರು, ವಿಶ್ಲೇಷಿಸಿ, ಜನಕ್ಕೆ ಆ ಬಗ್ಗೆ ಸರಿಯಾದ ತಿಳುವಳಿಕೆ ಕೊಡುವುದು ಅಗತ್ಯವಾಗಿದೆ. ಅಷ್ಟೆ ಅಲ್ಲ, ಅದನ್ನು ವೈಭವಿಸದೆ, ವಸ್ತುನಿಷ್ಠ ದೃಷ್ಟಿಯಿಂದ ಪರಿಶೀಲಿಸಿ, ಅದರಲ್ಲಿ ಅಭಿವ್ಯಕ್ತವಾಗಿರುವ ಮನೋಧರ್ಮದ ಸ್ವರೂಪವನ್ನೂ, ಅದು ಹಾಗಿರುವುದಕ್ಕೆ ಹಿನ್ನೆಲೆಯಾದ ಕಾರಣಗಳನ್ನೂ, ಮತ್ತು ಇವತ್ತಿನ ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕಾದ ಸರಿಯಾದ ದೃಷ್ಟಿಕೋನಗಳನ್ನು ತಿಳಿಯಹೇಳುವ ಜವಾಬ್ದಾರಿಯನ್ನೂ ಹೊರಬೇಕಾಗಿದೆ.

ಬೆಡಗು-೧೮೮೯.