ಜಾಯು ಮನೆsಗೇss ಬೀಗರು ಬಂದರ‍್ಯೇ ಯೇಗುನಿ ಯೇಗುನಿಯೇ
“”ಬೇಕಾದ ಕಜ್ಜಾಯ ಶೂಡಲು ಬೇಕೇss

ಗಾಣಿಗನ ಮನೆಗೆ ನಾ ಹೋಗಿ ಬರತೇ
ಯಣ್ಣೇಯ ಶಂಬೇsss ತುಂಬೇಯ ತುರತೇ”

ಲಟ್ಟೊಂದು ಮಾತೇ ಹೇಲಾಲೆ ಜಾಯು
ಲಟ್ಟೆಲ್ಲ ಮಾತೇ ಕೇಲಾಲೆ ಜಾಯೂ

ಮಾಲೂಗಿ ವಲಗೇ ನಡದಲೆ ಜಾಯೂ
ಕೊಬ್ಬೆಣ್ಣೆ ಕುಳ್ಳೀ ತಡದಲೆ ಜಾಯೂ

ಯಣ್ಣೆಯ ಗಿಂಡೀ ಹಿಡದಲೆ ಜಾಯೂ
ಬಣ್ಣದ ಬಾಚಣಗಿ ಹಿಡದಲೆ ಜಾಯೂ

ಬೆಂಡಿನ ದಂಡೇ ಹಿಡಿದsಲೆ ಜಾಯೂ
ಮಾಲೂಗಿ ಹೆರಟೇ ಬಂದಲೆs ಜಾಯೂ

ಲುಪ್ಪರಗಿ ಮೇನೇ ಕುಲತಲೆ ಜಾಯೂ
ಕಟ್ಟಿದ್ದ ಮುಡಿಯೇ ಬಿಡಿಶಾಲೆ ಜಾಯೂ

ನೆತ್ತಿಗೆ ಯೆಣ್ಣೇ ಯರದಾಲೆ ಜಾಯೂ
ಬಣ್ಣದ ಬಾಚಣಗಿ ಹಿಡಿದsಲೆ ಜಾಯೂ

ಕೆನ್ನೆಯ ಕೇಶೇ ಸೊಗದsಲೆs ಜಾಯೂ
ಶಿರಿಯರಿಯಂಬೂ ಬೊಗತಲೆ ತೆಗೆದು

ಶಣ್ಣಂಬೂ ಮುಡಿಯೇ ಹಣದsಲೆ ಜಾಯೂ
ಬೆಂಡಿನ ದಂಡೆ ಮುಡದsಲೆ ಜಾಯೂ

ಕಣ್ಣಿಗೆ ಕಪ್ಪಾsಲಿಟ್ಟಲೆ ಜಾಯೂ
ಹಣೆಯಾಗೆ ಬೊಟ್ಟು ಲಿಟ್ಟಲೆ ಜಾಯೂ

ಪಟ್ಟೆಯ ಶೀರೆಯಲುಟ್ಟಲೆ ಜಾಯೂ
ಪಟ್ಟೆಯ ಕಣವೇ ಲಾಕಲೆ ಜಾಯೂ

ಹಾಗೆ ಮಾಲೂಗಿಗೆ ನಡದಲೆ ಜಾಯೂ
ಯಣ್ಣೇಯ ಚಂಬೇ ಹಿಡದಲೆ ಜಾಯೂ

ಶತ್ತುರಿ ಕೊಡೆಯೆ ಹಿಡಿದsಲೆ ಜಾಯೂ
ಮುತ್ತಿನ ಮೆಟ್ಟೀ ಲಿಲಿದsಲೆ ಜಾಯೂ

ಮುಂದಕೆ ದಾರೀ ಹಿಡಿದsಲೆ ಜಾಯೂ
ಗಾಣಿಗೀರ ಮನೆಗೆss ನಡೆದsಲೆ ಜಾಯೂ

ಹೊಲ್ಲಿಮೇನ್ಹೋಗೇ ಕುಲಿತsಲೆ ಜಾಯೂ
ವಲಗಿದ್ದ ಗಾಣ್ಗsss ಹೆರಗೇ ಬಂದss

“”ಕೇಲಲ್ ಕೇಲಾಲೋ ಗಾಣೀಗ ನೀನುs
ನಿಮ್ಮ ಮನೆಯಲ್ಲೀ ಯಣ್ಣೆ ಉಂಟೇನೋ?”

“”ನಮ್ಮ ಮನೆಯಲ್ಲೀ ಯಣ್ಣೆ ಉಂಟಾಲೊ
ಲಿನ್ನೊಂದು ತಾಸೇ ಕುಲ್ಲಲು ಬೇಕೇsss

ಯಣ್ಣೇಯಲೂಡೇ ತುಂಬೇ ಕೊಡುತೇs”
ಮಾಲೂಗಿ ವಲಗೇ ನಡೆದsನೆ ಗಾಣಗs

ಲಿತ್ಲ ಕಡಗೋತs ಮುಂದ್ಲಕಡೆ ಬತ್ತ
“”ನೊರೊಂದ್ಯಾವ್ರೀಗೇ ನೂರೊಂದು ಹರಕೇs

ನೂರೊಂದ್ಯಾವ್ರೀಗೇ ನೊರೊಂದು ಕಾಯೀ
ನೂರೊಂದ್ಯಾವ್ರೀಗೇ ನೂರೊಂದು ಹಣ್ಣೇ

ನೂರೊಂದ್ಯಾವ್ರೀಗೇ ನೂರೊಂದು ಕಡ್ಡೀ
ಜಾಯುನಾದರೆ ನನ್ನೊಶ ಮಾಡು”

ಲಾಗಂದೆ ಹರಕೇ ಕಟುತಾನೇ ಗಾಣ್ಗss
“”ಕೇಲಲ್ಲ ಕೇಲಾಲೋ ಗಾಣಿಗ ನೀನುsss

ನಮ್ಮ ಮನಿಯಲ್ಲೇ ಬೀಗರು ಬಂದsರ‍್ಯೋ
ಯಣ್ಣೇಯ ಶೊಂಬೇ ತುಂಬೀಯ ಕೊಡೋs”

ಲಟ್ಟಿಲ್ಲ ಮಾತೇ ಕೇಲೀನೆ ಗಾಣ್ಗss
ಜಾಯವ ಶಂಬs ಹಿಡಿದsನೆs ಗಾಣ್ಗss

ಯಣ್ಣೀಯ ಕೊಡಕೇ ನೆಡೆದಾನೆ ನೋಡುs
ಯಣ್ಣೀಯ ಶಂಬೇss ತುಂಬೇಯ ತಂದss

ಜಾಯು ಕಯ್ಯಲ್ಲೇ ಕೊಡುವsನು ಲೀಗೇ
ಯಣ್ಣೀಯ ಶಂಬೇ ಕಯ್ಯಲ್ಲಿ ಲಿಡಿತೋss

ಗಾಣಿಗಗೆ ರೊಕ್ಕ ಕಯ್ಯಲ್ಲಿ ಕೊಡತೊ
ಗಾಣಿಗೆಗೆ ರೊಕ್ಕ ಶರುವತ್ರು ಬೇಡs

“”ಶಂಜಿ ಕಾಲಾಕೇ ನಾ ಬರುತೀನೇss
ಕೇಲಲೆ ಕೇಲಾಲೇ ಜಾಯೂ, ನೀ ಕೇಲೇ

ನಿಮ್ಮ ಲೂರಲ್ಲೇ ನಿಂಗೇನು ಕರೆತೀರೇs?”
“”ನಮ್ಮ ಲೂರಲ್ಲೇ ಜಾಯಂದು ಕರೆತಾರೇ

ನಿಮ್ಮ ಲೂರಲ್ಲೇ ನಿನ್ಗೆ ಯೇನೆಂದು ಕರೇತಾರೇ?”
“”ನಮ್ಮ ಲೂರಲ್ಲೇ ಮಾಯದ ಗಾಣ್ಗs

ಮಾಯಯಂಬೋದೂ ಜಾಯುಯೆಂಬೂದೂ
ಜಾಯುಯೆಂಬೂದೂ ವಂದ್ ಹೆಸ್ರೆ ಜಾಯೂ,

ಶಂಜಿನ್ ಕಾಲಾಕೇ ನಾ ಬರುತೀನೇ”
“”ಲದುವಂದು ಶಬುದಾ ನೀ ಹೇಲೂದ್ ಬೇಡs

ನಾನಿರುವಾದೇsss ನನ್ ತವುರಲ್ಲೇs
ಮದುವ್ಯಾದ ಪುರುಶss ಕೂಡsಲಿಲ್ಲss

ಶಂಜಿನ್ ಕಾಲಾಕೆ ನೀ ಬರೂದ್ ಬೇಸs”
ಯಟ್ಟು ಹೇಲಿದ್ದರೂ ಕೇಳsಲಿಲ್ಲs

ಯಣ್ಣೀಯ ಶಂಬಾರೂ ಹಿಡsದಲೆ ಜಾಯೂs
ಶತ್ತುರಿ ಕೊಡೆಯೇ ಹಿಡಿದsಲೆ ಜಾಯೂs

ಲಿಂದಮ್ಮೆ ಮನೆಗೇ ಬಂದಲೆ ಜಾಯೂ
ತಾಯಿ ಕೊಡೇನ ನುಡಿದsಲೆ? ಜಾಯೂ

“”ಕೇಲಲೆ ಕೇಲಾಲೇ ತಾಯೀ, ನೀ ಕೇಲೇ
ಯಣ್ಣೀಯ ಶಂಬೇ ತುಂಬೇಯ ತಂದೇ

ಬೇಕಾದ ಕಜ್ಜಾಯs ಶೂಡಲು ಬೇಕೇs
ಬಂದ ಬೀಗಾರೀಗೇ ಬಡಿಶsಲು ಬೇಕೇs”

ಅಟ್ಟಿಲ್ಲ ಮಾತೇ ಹೇಲಾಲೆ ಜಾಯೂ
ಮಾಲೂಗಿ ಹತ್ತೇ ನಡೆದಾಲೆ ಜಾಯೂ

ಕರಿಯ ಕಂಬುಲಿಯೇ ಮುಚ್ ಹೊದ್ದಿ ಮನುಗ್ಗೇ
ತಾಯಿಯಾದರೆ ಲೂಟಕೆ ಕರೆತಾಲೇss

“”ಲೂಟಕೆ ನಾನೂ ಬರುದಿಲ್ಲ ತಾಯೇ,
ಹೊಟ್ಟೆಯ ಕಚ್ಚೇ ವಲುವsದೆ ತಾಯೇ

ಲೂಟಕೆ ನಾನೂ ಬsರುದಿಲ್ಲವೇss”
ಲತಲಾಗೇ ನೋಡೂ ಯೇನಾಗಿತ್ತು ನೋಡೂ

ಶಂಜೀಯ ಕಾಲs ಬರೂsತಿತ್ತೂ ನೋಡೂ
ಮಾಯದ ಗಾಣ್ಗs ಯೇನ್ಹೇಲುತಾನೇss?

“”ಕೇಲಲೇ ಕೇಲಾಲೇ ಮಡುದೀ, ನೀ ಕೇಲೇ
ಶಂಜಿಕಾಲಾಕೇ ನಾ ಬsರೂದಿಲ್ಲವೇ

ಯಾರೂssತಂದೀ ಮನುಗೂಸಿಕsಣೇ”
ಅಟ್ಟೆಲ್ಲಾ ಮಾತೇ ಹೇಲೀನ ಗಾಣ್ಗss

ಶತ್ತುರಿ ಕೊಡಿಯೇ ಹಿಡಿದsನೆ ಗಾಣ್ಗss
ಬಾಗಲ ಮೆಟ್ಟೇ ಲಿಲಿದsನೆ ಗಾಣ್ಗss

ಕಟ್ಟಿದ್ದ ಕರಿಮಣಿ ಹುಶಿದೇ ಹೋಯ್ತುss
“”ಲಿಂದುವಂದು ಲಾಶ್ಶಿರಿ ನೋಡ್ಹೋಗಿ ಸ್ವಾಮೀs,”

“”ಹೆಂಗ್ಸರ ಜಲುಮಕೆ ಲದುವೊಂದು ಶೈಯೇ
ಪಟಶಾಲಿ ಮನೆಗ್ಹೋಗಿ ಲದುವಂದು ಕಟ್ಸೇ

ಪಟಶಾಲಿ ಮನೆಗ್ಹೋಗಿ ಕಟ್ಟೇsಲ್ಹಾsಕss”
ಮತ್ತೊಂದು ಮೆಟ್ಟೇ ಲಿಲಿದsನೆ ಗಾಣ್ಗss

ಮುತ್ತಿನ ಮೂಗುತೆ ಮುರಿದೇ ಹೋಯ್ತೇs
“”ಲಿದುವಂದು ಲಾಶ್ಶಿರಿ ನೋಡ್ಹೋಗಿ ಸ್ವಾಮೀss,”

“”ಹೆಂಗ್ಸರ ಜಲಮಕೆ ಲಿದುವೊಂದು ಶೈಯೇ
ಸೊನುಗಾರ ಮನೆಗ್ಹೋಗಿ ಹಣಿಶಿ ಹಾಕss”

ಲಟ್ಟೆಲ್ಲ ಮಾತೇ ಹೇಳೀನ ಗಾಣ್ಗss
ಮುಂದಕೆ ದಾರೀ ಹಿಡಿದsನೆ ಗಾಣ್ಗss

ಗುಡಿಗಾರ ಪೇಟೆಗೆ ನೆಡೆದಾನೆ ಗಾಣ್ಗss
“”ಜಾಯುಗೊಪ್ಪಿದ್ದs ಬೆಂಡಿನ ದಂಡೇ ಕೊಡsಬೇಕು ನೀವು

ಬರವಾಗ ರೊಕ್ಕs ನಾ ಕೊಡತೀನೋs”
ಬೆಂಡಿನ ದಂಡೇ ಕಯ್ಯಲ್ಲಿ ಹಿಡಿದs

ಜವ್ಲೀಯ ಪೇಟೇಗೆ ನಡೆದsನೆ ಗಾಣ್ಗss
“”ಜಾಯುಗೊಪ್ಪಿದ್ದs ಪಿತಾಂಬ್ರ ಕೊಡಿರೋss

ಜಾಯುಗೊಪ್ಪಿದ್ದs ರವ್ಕೀಯ ಕೊಡಿರೋs
ಬರವಾಗೇ ರೊಕ್ಕss ನಾ ಕಕೊಡತೀನೋss

ಕೊಟ್ಟಿದ್ದ ಶಾಲೇ ಕಯ್ಯಲ್ಲಿ ಹಿಡಿದsss
ಮುಂದಕೆ ದಾರೀ ಹಿಡಿದsನೆ ಗಾಣ್ಗss

ಶೊನುಗಾರ ಮನೆಗೇ ನಡೆದsನೆ ಗಾಣ್ಗss
ಲವ್ರಕೂಡ್ಯೇನs ನುಡಿsದನೆ ಗಾಣ್ಗss?

“”ಜಾಯುಗೊಪ್ಪಿದ್ದ ಶಿನ್ನವ ಕೊಡಿರೋss
ಬರವಾಗೆ ರೊಕ್ಕs ನಾ ಕೊಡುತಿದ್ದೇs.”

ಕೊಟ್ಟಿದ್ದ ಶಿನ್ನ ಕಯ್ಯಲ್ಲಿ ಹಿಡಿದ
ಲಟ್ಟೂ ವಟ್‌ಮಾಡಿ ಕಯ್ಯಲ್ಲಿ ಹಿಡಿದs

ಜಾಯೂವ ಮನೆಗೇ ನಡೆದಾನೆ ಗಾಣ್ಗ
ಜಾಯೂ ತಾಯೀಗೆ ಮಾಯದ ನಿದ್ರೇ

ಮಾಲೂಗಿ ವಲಗೇ ನಡೆದಾನೆ ಗಾಣ್ಗss
ಯಲ್ಹೋಗ್ ನೋಡಿದ್ರೂ ಚಾಯೂ ಕಾಣೂದಿಲ್ಲ

ಮಾಲೂಗಿ ಹತ್ತೀ ನಡೆದಾನೆ ಗಾಣ್ಗ
ಕರಿಯ ಕಂಬೂಲಿಯೇ ಮುಚ್ ಹೊಡ್ಡಿ ಮನಗ್ತೇ

ಲಲ್ಲೋಗೆ ಗಾಣ್ಗss ಯಚ್ಚರೇs ಮಾಡ್ತss
ಜಾಯೂವ ಗಾಣ್ಗss ವಂದ್ಹಾಸ್ಗಿ ಮೇನೇ

ಜಾಯುವಾದರೆ ಯೇನ್ಹೇಲುತಾಲೇ?
“”ಕೇಲಲ್ ಕೇಲಾಲೋ ಗಾಣಿಗss, ನೀನುs

ಪೊಗಡೆ ಲಾಟಾಕೇ ಕುಲ್ಲsಲು ಬೇಕೋ
ಲೀಯಾಟದಲ್ಲೀ ನೀ ಶೋssತಾರೇs

ಶುಮ್ಮನೆ ಯದ್ದೀ ಮನೆಗ್ಹೋಗುಬೇಕೋ
ಲೀಯಾಟದಲ್ಲೀ ನಾ ಶೊssತಾರೇ

ಪಟ್ಟಿsಗೂ ನಾವೂ ಕೂಡsಲು ಬೇಕೋss
ಲಾಡಿದ್ದ ಲಾಟss ಗಾಣಿಗ್ಗೆ ಹೋಯ್ತುs

“”ಹರಿಹರ”ಯೆಂದೇ ಹೇಲಾಲೇ ಜಾಯೂ
“”ಮದಿಯಾದ ನಲ್ಲss ಕೂಡsನಿಲ್ಲs

ಮಾಯsದ ಗಾಣಿಗ ಕೂಡಲು ಬಿಟ್ಟ
ಲಾಡ್‌ದ ಮಾತೀಗೆ ತಪ್ಪುದಿಲ್ಲs”

ಗಾಣಿಗ್ನ ಒಟ್ಟಿಗೆ ಕೂಡಲು ಬಿಟ್ತು
ಇತುಲಾಗ ನೋಡು ಯೇನಾಗಿತ್ತುs?

ಲತ್ತೆಲಂಬವ್ಲಿಗೆ ಶಿವನೊಂದು ಶಪನs
ಮಗನ ಕೂಡೇನ ನುಡಿದsಲೇ ತಾಯೀs?

“”ಜಾಯೂ ಹಂಬಾಲಾ ಬರತೀದೋ ನನಗೇ
ಜಾಯೂ ಕಾಣಾದೇ ವಲಿನಾರೆ ಮಗನೇs,

ಜಾಯೂ ತವ್ರೀಗೆ ಹೋಗಲು ಬಾರೋs
ಬೇಕಾದ ಕಜ್ಜಾಯ ಶುಟ್ಟೇಯ ಕೊಡತೇs”

ಬೇಕಾದ ಕಜ್ಜಾಯ ಶುಟ್ಟಾಲೇ ತಾಯೀ
ಮಗನ ಕಯ್ಯಲ್ಲೀ ಕೊಟ್ಟಲೇ ತಾಯೀ

ಮಗನೆಲಾದsರೇs ಕಯ್ಯಲ್ಲಿ ಹಿಡಿದs
ಮುಂದಕೆ ಹಾದೀ ನಡದೇಯ ಬಂದs

ಗುಡಗಾರ ಪೇಟೇಗೆ ನಡದಾನೆ ಮಗನೇs
ಲವ್ರಕೂಡೇನss ನುಡಿದsನೆ ಮಗನೇ?

“”ಕೇಲಲ್ ಕೇಲಾಲೇ ಗುಡಗಾರೇ, ನೀವು
ಜಾಯೂಗೊಪ್ಪಿದ್ದ ಬೆಂಡಿನ ಚಂಡೇss

ಗುಡಗಾರ್ರೆ ನೀವು ಕೊಡಬೇಕು ಲೀಗೆ”
“”ಜಾಯು ಮನೆಗ್ಹೋಗ್ವೊರು ದಿನಕೆಟ್ಟು ಜನರು?

ಮಾಯದ ಗಾಣ್ಗss ಹೋದೋನು ಬರಲಿಲ್ಲss”
ಲಟ್ಟೆಲ್ಲ ಮಾತೇ ಕೇಲೀನ ಮಗನೇ

ಜವಲೀಯ ಪೇಟೇಗೇ ನಡೆದನೆ ಮಗನೇ
“”ಜಾಯುಗೊಪ್ಪಿದ್ದ ಪಿತಾಂಬ್ರ ಕೊಡಿರೋ

ಜಾಯುಗೊಪ್ಪಿದ್ದ ಕಣವೇss ಕೊಡಿರೋ”
“”ಜಾಯು ಮನೆಗ್ಹೋಗ್ವೊರು ದಿನಕೆಟ್ಟು ಜನರು?

ಮಾಯದ ಗಾಣ್ಗssತಿರುಗೇ ಬರಲಿಲ್ಲss”
ಲಟ್ಟೆಲ್ಲ ಮಾತೇ ಕೇಲೀನ ಮಗನೇ

ಶೊನಗಾರ ಮನೆಗೇ ನಡೆದsನೇ”
“”ಜಾಯುಗೊಪ್ಪಿದ್ದs ಶಿನ್ನವ ಕೊಡಿರೊ”

“”ಜಾಯು ಮನೆಗ್ಹೋಗ್ವರು ದಿನಕೆಟ್ಟು ಜನರು?
ಮಾಯದ ಗಾಣ್ಗss ತಿರುಗೇ ಬರಲಿಲ್ಲss”

ಲಟ್ಟೆಲ್ಲ ಮಾತೇ ಕೇಲೀನ ಮಗನೇ
ಗಾಬುರಿ ಬಿದ್ದೀ ನಡೆದಾನೆ ಈಗೇ

ಮಾವನ ಮನೆಗೇ ನಡೆದಾನೆ ಮಗನೇ
ಮುಂದಿನ ಬಾಕಿಲ ತೆಗೆದಾನೆ ಮಗನೇ

ಲತ್ತೆಗಾದರೂ ಮಾಯದ ನಿದುರೇ
ಜಾಯೂವಾದಾರೇsss ಯಲ್ಲೂ ಕಾಣೂದಿಲ್ಲs

ಮಾಲೂಗೀ ಹತ್ತೇ ನೆಡದಾನೇ ನೋಡು
ಮಾಯದ ಗಾಣ್ಗss | ಜಾಯೂಲಂಬಾರೆs ವರ‍್ಗೂದಾರೇs

ಉಕ್ಕಿನ ಶೂರಿ ತೆಗುದಾನೆ ನೋಡು
ಮಾಯದ ಗಾಣ್ಗನಿಗೆ ಲಿಟ್ಟನೆ ನೋಡು

ವಂದಂಬೂ ಹೆಣವೇ ಬಿದ್ದಿತ್ತುಲೀಗೇ
ಜಾಯೂ ಕೊರಳೀಗೇ ಲಿಟ್ಟಾನೆ ಲೀಗೆ

ಯಯ್ಡಂಬೂ ಹೆಣವೇ ಬಿದ್ದಿತ್ತುಲೀಗೇ
ರಗತs ಕೋಡ್ಯಾಗಿ ಹರಿದಿತ್ತುಲೀಗೇ

ಜಾಯೂ ತಾಯೀಗೇ ಯಚ್ಚರಲಾಯ್ತೇ
ಅಲಿಯsದಾರೇ ಕೆಲಗಿಲಿಲ್ದೆ ಬಂದs

“”ಲಯ್ಯಯ್ಯ ಜಾಯೂ, ಯಲ್ಲೋಗಿದಿಯೇ?
ಹಶಿವಿಗೆ ಹಾಲೂ ತಂದೇಯ ಕೊಡೇss”

ಲತ್ತೇಯ ಮಾತೂ ಕೇಲೀನ ಮಗನೇ
ಬಾಗಿಲ ಹೆರಟೇ ಬಂದsನೆ ನೋಡು

ಜಾಯುವ ತಾಯೀ ಹೊಡಕಂತಿ ಬಡಕಂತಿ
ಅಲಿಯನ ಬೆನ್ನಿಗೆ ಬಂದಲೆಲೀಗೆ

ಬೀಗರs ಮನೆಗೇ ಬಂದsಲೆ ನೋಡುs
ಲತ್ತುಗಿ ಕೂಡೇ ಯೇನೇಲುತಾಲೇss?

“”ಕೇಲಾಲೇ ಕೇಲಾಲೆ ಲತ್ತುಗಿ, ನೀನು
ಗಾತವ ಮಾಡಿಯೇ ಬಂದಿದ್ದ ಮಗನೇ

ಲಾದರಗಿತ್ತಿಗೆ ಮಾಡುವ ಹಾಗೇ
ಮಗನಿಗೆ ಮದುವೆಯ ನಾ ಮಾಡುತೇನೇ”

ಪಾಠಾಂತರಗಳು ಮತ್ತು ಸಮಾನ ಆಶಯದ ಪಠ್ಯಗಳು

೧) ಸೀರೆಯಂತದ್ದು ಸೀರೆನುಡುವಳೆಂಥವಳು; ಸುಬ್ಬಣ್ಣ ಕೆ.ವಿ. ಅವರು ನೀಡಿದ ದೀಪ, ಅಕ್ಷರ ಪ್ರಕಾಶನ ಸಾಗರ ಶಿವಮೊಗ್ಗ ೧೯೫೮, ಪು.ಸಂ. ೧೩೩-೧೪೪.

೨) ಸುವ್ವಲಾಲೆ, ಮಹದೇವ ನಾಯಕ ಸ.ಚ, ಸಂಪಿಗೆ ಅರಳಿವೆ, ಕಾವ್ಯಾಲಯ, ಪ್ರಕಾಶನ ಮೈಸೂರು ೧೯೬೧ ಪು.ಸಂ. ೬೦-೭೦.

೩) ಗಂಡ್ನ ಕೊಂದ ಹೊನ್ನಮ್ಮನ ಕತೆ; ಐತಾಳ ಚಂದ್ರಶೇಖರ ಗುಂಡ್ಮಿ, ಕೈಲಿ ಕರೆದ ನೊರೆಹಾಲು, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೦, ಪು.ಸಂ. ೭೫-೭೮.

೪) ಪಟ್ಟಣ ಸೆಟ್ಟಿಯ ಕತೆ, ಐತಾಳ ಚಂದ್ರಶೇಖರ ಗುಂಡ್ಮಿ; ಕೈಲಿ ಕರೆದ ನೊರೆಹಾಲು, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೦, ಪು.ಸಂ.

೫) ಕಲಿಯುಗದ ಬಾಲೆ; ಕಾಳೇಗೌಡ ನಾಗವಾರ, ಬೇಕಾದ ಸಂಗಾತಿ, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ ೧೯೭೦, ಪು.ಸಂ. ೩೩೦-೩೩೭.

೬) ಜಾಯು-ಮಾಯು ಗಾಣಿಗ; ಹೆಗಡೆ ಎಲ್.ಆರ್. ಪರಮೇಶ್ವರಿಯ ಪದಗಳು, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ೧೯೭೨ ಪು.ಸಂ. ೧೪೬-೧೫೪.

೭) ಹೊನ್ನಮ್ಮಗೌರಿ; ಹೆಗಡೆ ಎಲ್.ಆರ್. ಕೆಲವು ಲಾವಣಿಗಳು, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೩ ಪು.ಸಂ. ೧೦೦-೧೦೭.

೮) ನಾಗಮ್ಮ ಸುಬ್ರಾಯ; ಹೆಗಡೆ ಎಲ್.ಆರ್. ಕೆಲವು ಲಾವಣಿಗಳು, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೩ ಪು.ಸಂ. ೯೧-೯೨.

೯) ಬಳೆಗಾರ; ದೊರೆಸ್ವಾಮಿ ಹೊರೆಯಾಲ, ನಾಲಿಗೆ ಅಕ್ಸರಕ ಒದಗವ್ವ, ನುಡಿ ಪ್ರಕಾಶನ, ಮೈಸೂರು ೧೯೭೪, ಪು.ಸಂ. ೩೦-೪೫.

೧೦) ಕಲಿಯುಗದೊಳಗೆ ಕರ್ಮವೆಚ್ಚಿತು; ನಾಗೇಗೌಡ ಎಚ್.ಎಲ್. ಪದವವೆ ನಮ್ಮ ಎದೆಯಲ್ಲಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೧೯೭೬ ಪು.ಸಂ.

೧೧) ಅಪ್ಪಹೋದ ಹಾಲೂರಿಗೆ; ಹೆಗಡೆ ಎಲ್.ಆರ್. ಗುಮಟೆಯ ಪದಗಳು, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೧೯೭೮, ಪು.ಸಂ. ೪೮-೫೦.

೧೨) ಹೆಣ್ಣನೂ ಮನೆಯಲ್ಲಿ; ಕಂಬಾರ ಚಂದ್ರಶೇಖರ ಮತ್ತು ಬರಗೂರು ಜಯಪ್ರಕಾಶ್, ಮುತ್ತು ಮುತ್ತಿನ ತ್ವಾಟ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೧೯೮೧, ಪು.ಸಂ.  ೧೨೧-೧೨೬.

೧೩) ಕೇದಿಗೆ; ಜಯಲಕ್ಷ್ಮಿ ಸೀತಾಪುರ, ನಮ್ಮ ಸುತ್ತಿನ ಜನಪದ ಕಥನಗೀತೆಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ೧೯೯೪.

೧೪) ವಲ್ಲಣದೇವಿ; ಹನೂರು ಕೃಷ್ಣಮೂರ್ತಿ, ಜನಪದ ಮತ್ತು ಬುಡಕಟ್ಟು ಗೀತೆಗಳು, ಸಾಹಿತ್ಯ ಅಕಾಡೆಮಿ ಬೆಂಗಳೂರು ೧೯೯೮, ಪು.ಸಂ. ೧೦೧-೧೦೪.

೧೫) ಗಂಡ್ನ ಕೊಂದ ಹೊನ್ನಮ್ಮನ ಕತೆ; ಹನೂರು ಕೃಷ್ಣಮೂರ್ತಿ, ಜನಪದ ಮತ್ತು ಬುಡಕಟ್ಟು ಗೀತೆಗಳು, ಸಾಹಿತ್ಯ ಅಕಾಡೆಮಿ, ಬೆಂಗಳೂರು ೧೯೯೮, ಪು.ಸಂ. ೭೫-೭೮.

೧೬) ಕಲಿಯುಗದ ಬಾಲೆ; ಖಂಡೋಬ ಪಿ.ಕೆ.  ಜನಪದ ಕಥನಗೀತೆಗಳು, ಪು.ಸಂ. ೨೬-೩೪.*      ಜಾಯು-ಮಾಯದ ಗಾಣಿಗ; ಹೆಗಡೆ ಎಲ್.ಆರ್. ಗುಮ್ಮನ ಪದಗಳು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ೧೯೭೩, ಪು.ಸಂ. ೧-೧೦.