ಯಾವುದೇ ಕಲೆಯ ಪ್ರಸಾರದಲ್ಲಿ ಮಾಧ್ಯಮಗಳ ಪಾತ್ರ ಹಿರಿದಾದುದು. ಆಧುನಿಕ ಯುಗದಲ್ಲಿ ಮಾಧ್ಯಮಗಳ ಪ್ರಾಮುಖ್ಯತೆ ಹೇಳತೀರದು. ಮೊದಲಿನ ಕಾಲದಲ್ಲಿ ಬಾಯಿಂದ ಬಾಯಿಗೆ ಕಲಾಪ್ರಸಾರ ನಡೆಯುತ್ತಿತ್ತು. ಅಂದು ಪ್ರಪಂಚ ಚಿಕ್ಕದಾಗಿತ್ತು. ಇಂದು ಬೃಹದಾಕಾರವಾಗಿ ಬೆಳೆದಿದೆ. ಹೀಗಾಗಿ, ಮಾಧ್ಯಮಗಳ ಸಹಾಯವಿಲ್ಲದೆ ಕಲೆಗಳ ಬಗೆಗೆ ತಿಳುವಳಿಕೆ ಜನರಲ್ಲಿ ಮೂಡುವುದು ಸುಲಭವಲ್ಲ. ಒಂದು ನೃತ್ಯ ಕಾರ್ಯಕ್ರಮವೋ, ಸಂಗೀತ ಕಚೇರಿಯೋ, ದೂರದರ್ಶನದಲ್ಲಿ ಬಿತ್ತರಗೊಂಡರೆ ಕೋಟಿ ಕೋಟಿ ಜನ ವೀಕ್ಷಿಸುತ್ತಾರೆ. ದೇಶಾದ್ಯಂತ ಆ ಕಾರ್ಯಕ್ರಮ ಗಮನ ಸೆಳೆಯುತ್ತದೆ. ಕಾರ್ಯಕ್ರಮ ಸಂಘಟಕರಿಗೆ ಕಲಾವಿದರ ಬಗೆಗೆ ತಿಳಿದು ಅವರನ್ನು ಆಹ್ವಾನಿಸಲು ಅನುಕೂಲ ಒದಗುವುದು.

ದೂರದರ್ಶನ ಬರುವ ಮುಂಚೆ ಕೇವಲ ಆಕಾಶವಾಣಿಯೇ ಕಲಾಪ್ರಸಾರವನ್ನು ಮಾಡುತ್ತಿತ್ತು. ಒಂದು ಸಂಗೀತ ಕಚೇರಿ ಆಕಾಶವಾಣಿಯಲ್ಲಿ ಬಿತ್ತರವಾದಾಗ ಆಸಕ್ತರು ಆಲಿಸಿ ಸಂಗೀತಗಾರರ ಸಾಧನೆಯನ್ನು ಮೆಚ್ಚಿಕೊಂಡು ಅವರನ್ನು ಅಲ್ಲಲ್ಲಿ ಕಚೇರಿ ನೀಡಲು ಆಹ್ವಾನಿಸಲು ಅವಕಾಶವಿತ್ತು. ಮುಂಬಯಿ ಆಕಾಶವಾಣಿ ಕೇಂದ್ರ ಭಾರತದ ಪ್ರಥಮ ಆಕಾಶವಾಣಿ ಕೇಂದ್ರಗಳಲ್ಲೊಂದು. ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ಬಿತ್ತರಿಸುವಲ್ಲಿ ಹೆಗ್ಗಳಿಕೆ ಸಾಧಿಸಿತ್ತು. ಮುಂಬಯಿ  ಆಕಾಶವಾಣಿ ಕೇಂದ್ರದಿಂದ ಹಾಡುವುದೆಂದರೆ ಪ್ರತಿಷ್ಠೆಯಾಗಿತ್ತು. ಧಾರವಾಡ ಆಕಾಶವಾಣಿ ಕೇಂದ್ರ ಸ್ಥಾಪನೆಗೊಳ್ಳುವ ಪೂರ್ವದಲ್ಲಿ ನಮ್ಮ ಹಿರಿಯ ತಲೆಮಾರಿನ ಗಾಯಕರಾದ ಮಲ್ಲಿಕಾರ್ಜುನ ಮನ್ಸೂರ, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು ಮೊದಲಾದವರಿಗೆ ಮುಂಬಯಿ ಆಕಾಶವಾಣಿ ಕೇಂದ್ರವೇ ಲಾಂಚಿಂಗ್ ಪ್ಯಾಡ್ ಆಗಿತ್ತು. ಭಾರತದಾದ್ಯಂತ ಶಾಸ್ತ್ರೀಯ ಸಂಗೀತಾಸಕ್ತರು ಮುಂಬಯಿ ಆಕಾಶವಾಣಿ ಕೇಂದ್ರದಿಂದ ಬಿತ್ತರಗೊಳ್ಳುತ್ತಿದ್ದ ಕಾರ್ಯಕ್ರಮಗಳನ್ನು ಗಮನವಿಟ್ಟು ಆಲಿಸುತ್ತಿದ್ದರು.

ಗಂಗೂಬಾಯಿ ಹಾನಗಲ್ ಅವರಿಗೆ ಮುಂಬಯಿ ಆಕಾಶವಾಣಿ ಕೇಂದ್ರದಲ್ಲಿ ಪ್ರಥಮ ಅವಕಾಶ ದೊರೆತುದೊಂದು ಆಕಸ್ಮಿಕ. ಅವರು ಸಹಜವಾಗಿ ಅಲ್ಲಿಗೆ ಹೋಗಿದ್ದರು. ಅಂದು ಹೀರಾಬಾಯಿ ಬಡೋದೆಕರ ಹಾಡಬೇಕಿತ್ತು. ಅಂದು ಆಗುತ್ತಿದುದು ಸಜೀವ ಕಾರ್ಯಕ್ರಮಗಳು. ಇಂದಿನಂತೆ ಮೊದಲೇ ಧ್ವನಿಮುದ್ರಿತ ಕಾರ್ಯಕ್ರಮಗಳಲ್ಲ. ಕೊನೆಯ ಘಳಿಗೆಯಲ್ಲಿ ಉಂಟಾಗಬಹುದಾದ ತೊಂದರೆ ನಿವಾರಿಸಲು ಈಗ ಪೂರ್ವಧ್ವನಿಮುದ್ರಿತ ಕಾರ್ಯಕ್ರಮಗಳು ಜಾರಿಯಲ್ಲಿ ಬಂದಿವೆ. ಅಂದು ಹಿರಾಬಾಯಿ ಬಡೋದೆಕರ ಅವರ ಆರೋಗ್ಯ ಕೊನೆಯ ಘಳಿಗೆಯಲ್ಲಿ ಕೆಟ್ಟಿತು. ಹಾಡುವ ಸ್ಥಿತಿಯಲ್ಲಿರಲಿಲ್ಲ. ಏನು ಮಾಡಬೇಕೆಂಬ ದಿಗಿಲು.

ಸರಿಯಾಗಿ ಆ ಸಮಯಕ್ಕೆ ಗಂಗೂಬಾಯಿ ಹಾನಗಲ್ ಅಲ್ಲಿಗೆ ಬರಬೇಕೆ? ಹೀರಾಬಾಯಿ ಬಡೋದೆಕರ ಬದಲು ಗಂಗೂಬಾಯಿ ಹಾನಗಲ್ ಅವರನ್ನು ಹಾಡಲು ಕೂಡಿಸಿದರು. ಹೇಗೆ ಹಾಡುವರೋ ಗೊತ್ತಿರಲಿಲ್ಲ. ಗಂಗೂಬಾಯಿಯವರ ಗಾಯನವೃತ್ತಿಗೆ ಆರಂಭಿಕ ಹಂತ. ಇನ್ನೂ ಅಷ್ಟು ಪ್ರಸಿದ್ಧರಾಗಿರಲಿಲ್ಲ. ಹಾಗಾಗಿ, ಅವರ ಹೆಸರನ್ನು ಘೋಷಿಸದೆ ಗಾಯನ ಬಿತ್ತರಿಸಿದರು. ಗಾಯನವನ್ನು ಶ್ರೋತೃಗಳು ಎಷ್ಟೊಂದು ಮೆಚ್ಚಿಕೊಂಡರೆಂದರೆ ಹಾಡುತ್ತಿರುವವರು ಯಾರೆಂದು ದೂರವಾಣಿ ಮೂಲಕ ಕರೆಯ ಮಹಾಪೂರವೇ ಹರಿದು ಬಂದಿತು. ಅನಿವಾರ್ಯವಾಗಿ ಗಂಗೂಬಾಯಿ ಹಾನಗಲ್ ಅವರ ಹೆಸರನ್ನು ಗಾಯನ ಮಾಧ್ಯಮದಲ್ಲಿ ಘೋಷಿಸಬೇಕಾಯಿತು. ಅಂದು ಅವರ ಸಂಗೀತ ಯಾತ್ರೆಗೆ ನಾಂದಿಯಾಯಿತು. ಸಂಸ್ಥೆಗಳವರು ಅವರಿಗೆ ಕಚೇರಿ ನೀಡಲು ಆಹ್ವಾನಿಸಿದರು. ಇದೊಂದು ಉದಾಹರಣೆ ಮಾತ್ರ.

೧೯೫೦ರಲ್ಲಿ ಧಾರವಾಡ ಆಕಾಶವಾಣಿ ಕೇಂದ್ರ ಸ್ಥಾಪನೆ. ನಿರ್ದೇಶಕರಾದ ಗುಲ್ವಾಡಿ ಪ್ರತಿಭೆಯನ್ನು ಶೋಧಿಸಲು ಬೆಳಗಾವಿಯಲ್ಲಿ ಸಂಗೀತಗಾರರನ್ನು ಕೂಡಿಸಿ ಧ್ವನಿಪರೀಕ್ಷೆ ನಡೆಸಿದರು. ಸಂಗಮೇಶ್ವರ ಗುರವ ಇನ್ನೂ ಸಾರ್ವಜನಿಕ ಕಚೇರಿ ನೀಡಿರಲಿಲ್ಲ. ಯುವಕರು, ಗುಲ್ವಾಡಿ ಎಷ್ಟೊಂದು ಮೆಚ್ಚಿಕೊಂಡರೆಂದರೆ ಆಕಾಶವಾಣಿ ಕಚೇರಿ ನೀಡಲು ಆಯ್ಕೆಯಾಗಿರುವುದು ಎಂದು ಸ್ಥಳದಲ್ಲೇ ಹೇಳಿದರು. ಮುಂದೆ ಕಾಂಟ್ರಕ್ಟೂ ಬಂತು. ನಂತರದ ಕೆಲವು ವರ್ಷ ಸಂಗಮೇಶ್ವರ ಗುರವ ಮುಂಬಯಿಯಲ್ಲಿ ಇದ್ದುದರಿಂದ ಕಾಂಟ್ರಾಕ್ಟನ್ನು ಮುಂಬಯಿ ಆಕಾಶವಾಣಿ ಕೇಂದ್ರಕ್ಕೆ ವರ್ಗಾಯಿಸಿಕೊಂಡರು. ೧೯೮೨ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಬಂದಾಗ ಕಾಂಟ್ರಾಕ್ಟನ್ನು ಪುನಃ ಧಾರವಾಡ ಆಕಾಶವಾಣಿಗೆ ವರ್ಗಾಂತರಿಸಿಕೊಂಡರು.

ಆಕಾಶವಾಣಿ ಪಾತ್ರದ ಇನ್ನೊಂದು ಅದ್ಭುತ ಪ್ರಸಂಗ. ಭೀಮಸೇನ ಜೋಶಿ ಆಗ ಉದಯೋನ್ಮುಖ ಗಾಯಕ. ರಾಮಪುರದಿಂದ ಲಕ್ನೋಗೆ ಆಗಮನ. ನೇರವಾಗಿ ಆಕಾಶವಾಣಿ ಕೇಂದ್ರಕ್ಕೆ ಹೃದಯಸ್ಪರ್ಶಿ ಗಾಯನ ಬಿತ್ತರಗೊಳ್ಳುತ್ತಿತ್ತು. ಎಲ್ಲೋ ಕೇಳಿದ ಪರಿಚಿತ ಧ್ವನಿ. ಗಾಯನ ಮುಗಿಸಿ ಹೊರಬಂದವರು ಬೇಗಂ ಅಖ್ತರ. ಭಿಮಸೇನ ಜೋಶಿ ಸಾಹಿಬಾರಿಗೆ ಪರಿಚಯಿಸಿಕೊಂಡರು. ‘ಒಂದು ಹಾಡು ಹೇಳು’. ಭೀಮಸೇನರು ಸಂಕ್ಷಿಪ್ತವಾಗಿ ಭೈರವಿ ಹಾಡಿದರು. ತಬಲಾ, ಪೇಟಿ ಯಾವುದೂ ಇಲ್ಲ. ಆದರೂ ಬೇಗಂರಿಗೆ ಹಿಡಿಸಿತು. ನಿರ್ದೇಶಕರಿಗೆ ಶಿಫಾರಸು : ‘ಲಡಕಾ ಅಚ್ಛಾ ಗಾತಾ ಹೈ ಇಸಕೊ ಕುಛ್ ಕಾಮ ದೆ ದೋ’. ತಕ್ಷಣ ಭೀಮಸೇನ ಲಕ್ನೋ ಆಕಾಶವಾಣಿ ಕೇಂದ್ರದ ನಿಲಯ ಕಲಾವಿದರಾಗಿ ನೇಮಕಗೊಂಡರು. ಬೇಗಂ ಅಖ್ತರ್ ಮಾತೆಂದರೆ ಅಷ್ಟು ವಚನ. ಒಂದು ಮಾತು ಹೇಳಿದರೆ ತೆಗೆದು ಹಾಕುವಂತಿರಲಿಲ್ಲ. ಅಂಥ ದಿನಗಳವು. ತಿಂಗಳಿಗೆ ರೂ.೩೨ರ ಸಂಬಳ. ಪ್ರತಿವಾರ ಹತ್ತು ಮಿನಿಟುಗಳ ಮೂರು ಕಾರ್ಯಕ್ರಮ. ಅಲ್ಲಿ ಬಿಸ್ಮಿಲ್ಲಾಖಾನ್ ಸಹೋದ್ಯೋಗಿ. ಎಂಥಾ ಭಾಗ್ಯ!!! ಇಬ್ಬರೂ ಒಂದೇ ಮನೆಯಲ್ಲಿ ವಾಸ. ಸಂಗೀತಾನುಭವಗಳ ಪರಸ್ಪರ ವಿನಿಮಯ. ಈ ರೀತಿ ಪ್ರತಿಯೊಂದು ಕೇಂದ್ರದಲ್ಲಿ ನಿಲಯ ಕಲಾವಿದರನ್ನು ನೇಮಿಸಿಕೊಳ್ಳಲಾಗುತ್ತಿತ್ತು.

ನಮ್ಮ ಶ್ರೇಷ್ಠ ತಬಲಾವಾದಕ ಬಸವರಾಜ ಬೆಂಡೀಗೇರಿ ಅವರದು ಇನ್ನೊಂದ ರೀತಿಯ ಕತೆ. ಅವರ ಗುರುಗಳಾದ ಮೆಹಬೂಬ ಖಾನ ಮಿರಜಕರ್ ತಮ್ಮ ಶಿಷ್ಯನಿಗೆ ಸೋಲೋವಾದನಕ್ಕೆ ಅವಕಾಶ ಕೊಡಿರೆಂದು ಮುಂಬಯಿ ಆಕಾಶವಾಣಿ ಕೇಂದ್ರದ ನಿರ್ದೇಶಕರನ್ನು ಕೋರಿದರು. ಆಗಿನ್ನೂ ಬಸವರಾಜರಿಗೆ ೧೧ ವರ್ಷ. ಶಿಷ್ಯನ ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸುವ ತವಕ ಗುರುಗಳಿಗೆ. ಸರಿ, ಶಿಷ್ಯನನ್ನು ಕರೆದುಕೊಂಡು ಕೇಂದ್ರಕ್ಕೆ ಹೋದರು. ಅಲ್ಲಿ ಪ್ರಸಿದ್ಧ ತಬಲಾಪಟುಗಳಾದ ಶಮಸುದ್ದೀನ್ ಮತ್ತು ಅಲ್ಲಾರಖಾ ನಿಲಯ ಕಲಾವಿದರು. ಚಿಕ್ಕ ಬಾಲಕ ಬಸವರಾಜ ಬೆಂಡೀಗೇರಿಯನ್ನು ನೋಡಿ ‘ಯಹಾ ತಬಲಾ ಬಜಾಯೆಗಾ?’ ಎಂದು ಹುಬ್ಬೇರಿಸಿದರು. ಮೆಹಬೂಬ ಖಾನರಿಗೆ ನಖಶಿಖಾಂತ ಕೋಪ ‘ಮೇರೆ ಶಾಘಿರ್ದ ಆಜ ಅಚ್ಛಾ ಸೋಲೋ ನಹಿ ಬಜಾಯೆಗಾ ತೊ ಮೈ ತಬಲಾ ಬಜಾನಾ ಛೋಡದುಂಗಾ’ ಎಂದು ಆಹ್ವಾನ ಎಸೆದರು. ಬಾಲಕ ಬಸವರಾಜ ಸೋಲೋ ಬಾರಿಸಿ ಹೊರಬಂದಾಗ ಇಬ್ಬರೂ ನಾಮೀ ತಬಲಾ ಪಟುಗಳು  ತಬ್ಬಿಬ್ಬು. ವಾಹ್,  ವಾಹ್ ಎಂದು ಪ್ರಶಂಸೆ. ಆಕಾಶವಾಣಿ ಶಾಸ್ತ್ರೀಯ ಸಂಗೀತ ಬಿತ್ತರಿಕೆಯಲ್ಲಿ ಅಗ್ರ ಪಾತ್ರ ವಹಿಸುತ್ತಿದ್ದುದಕ್ಕೆ ಈ ಕೆಲವು ನಿದರ್ಶನಗಳು ಸಾಕು.

ಇದೂ ಅಲ್ಲದೆ, ಸಂಗೀತಗಾರರನ್ನು ಆಕಾಶವಾಣಿಯ ಸಲಹೆಗಾರರಾಗಿ ನೇಮಿಸಿಕೊಳ್ಳಲಾಗುತ್ತಿತ್ತು. ಮಲ್ಲಿಕಾರ್ಜುನ ಮನಸೂರ ೧೯೬೦ರಿಂದ ೧೯೬೯ರ ವರೆಗೆ ಸಲಹೆಗಾರರಾಗಿ ಹಲವು ಆಕಾಶವಾಣಿ ಕೇಂದ್ರಗಳ ಕಾರ್ಯಕ್ರಮಗಳ ಸುಧಾರಣೆಗಾಗಿ ಮಹತ್ತರ ಮಾರ್ಗದರ್ಶನ ನೀಡಿದರು. ಈ ನೇಮಕಗಳಿಂದ ಸಂಗೀತಗಾರರಿಗೆ ಒಂದು ಆರ್ಥಿಕ ಸ್ಥಿರತೆ ಕೂಡ ಒದಗುತ್ತಿತ್ತು.

ಆಕಾಶವಾಣಿ ಚೇನ್ ಬುಕಿಂಗ್ ಮೂಲಕ ಪ್ರವರ್ಧಮಾನಕ್ಕೆ ಬರುತ್ತಿರುವ ಸಂಗೀತಗಾರರನ್ನು ಹತ್ತು ಹಲವು ಆಕಾಶವಾಣಿ ಕೇಂದ್ರಗಳಿಂದ ಅವರ ಕಚೇರಿ ಬಿತ್ತರಿಸಿ ಅವರ ಪ್ರತಿಭೆ ಬೆಳಗಲು ಅವಕಾಶ ಮಾಡಿಕೊಟ್ಟು ಅವರನ್ನು ವ್ಯಾಪಕವಾಗಿ ಪರಿಚಯಿಸಿಕೊಡುತ್ತಿದೆ.

ಶಾಸ್ತ್ರೀಯ ಸಂಗೀತ ಪ್ರಸಾರದಲ್ಲಿ ಆಕಾಶವಾಣಿಯ ಇನ್ನೊಂದು ಮಹತ್ವದ ಹೆಜ್ಜೆಯೆಂದರೆ ಮಂಗಳವಾರ ಮತ್ತು ಶನಿವಾರ ರಾತ್ರಿ ಬಿತ್ತರಿಸುವ ರಾಷ್ಟ್ರೀಯ ಕಾರ್ಯಕ್ರಮಗಳು. ರಾಷ್ಟ್ರೀಯ ಕಾರ್ಯಕ್ರಮಗಳು ಎಲ್ಲ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಬಿತ್ತರವಾಗುವುದರಿಂದ ಸಂಗೀತಗಾರರನ್ನು ಇಡೀ ದೇಶಕ್ಕೆ ಪರಿಚಯಿಸಿಕೊಟ್ಟಂತಾಗುತ್ತದೆ.

ಇದೂ ಅಲ್ಲದೆ, ಪ್ರತಿವರ್ಷ ತಿಂಗಳುಗಟ್ಟಲೆ ಜರುಗುವ ಆಕಾಶವಾಣಿ ಸಂಗೀತ ಸಮ್ಮೇಳನಗಳು ಶಾಸ್ತ್ರೀಯ ಸಂಗೀತದ ಪ್ರಸಾರದಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಒಂದು ತಿಂಗಳು ಪ್ರತಿ ರಾತ್ರಿ ಎಲ್ಲಾ ಕೇಂದ್ರಗಳಿಂದ ಏಕಕಾಲಕ್ಕೆ ಸಮ್ಮೇಳನದ ಕಾರ್ಯಕ್ರಮಗಳು ಬಿತ್ತರಗೊಳ್ಳುತ್ತವೆ. ದೇಶದ ಬಹುತೇಕ ಸಂಗೀತಗಾರರನ್ನು ಆಲಿಸುವ ಅಹದವಕಾಶ. ಮೇಲಾಗಿ, ಇವೆಲ್ಲ ಕಾರ್ಯಕ್ರಮಗಳನ್ನು ಬೇರೆ ಬೇರೆ ಆಕಾಶವಾಣಿ ಕೇಂದ್ರಗಳಲ್ಲಿ ಆಮಂತ್ರಿತ ಶ್ರೋತೃಗಳ ಸಮ್ಮುಖದಲ್ಲಿ ಕಚೇರಿ ಏರ್ಪಡಿಸಿ ಸಜೀವವಾಗಿ ಧ್ವನಿಮುದ್ರಿಸಿಕೊಂಡು ಬಿತ್ತರಿಸುವುದಿದೆ. ಇದರಿಂದ ಅಲ್ಲಲ್ಲಿಯ ರಸಿಕರಿಗೆ ಸಂಗೀತಗಾರರ ಕಾರ್ಯಕ್ರಮಗಳನ್ನು ನೇರವಾಗಿ ಆಲಿಸಿ ಆನಂದಿಸುವ ಅವಕಾಶ ಪ್ರಾಪ್ತವಾಗುವುದು.

ಇನ್ನೊಂದು ಕಾರ್ಯವೆಂದರೆ ಹಿರಿಯ ಕಲಾವಿದರ ಗಾಯನ/ವಾದನ ಧ್ವನಿಮುದ್ರಿಸಿಕೊಂಡು ಆಕಾಶವಾಣಿ ತನ್ನ ಸಂಗ್ರಹಾಲಯದಲ್ಲಿ ಸಂರಕ್ಷಿಸಿಟ್ಟುಕೊಳ್ಳುವುದು. ಇದರಿಂದ ಅಬ್ಯಾಸಿಗಳಿಗೆ ಹಿಂದಿನವರ ಗಾಯನ ಪದ್ಧತಿ ಹೇಗಿತ್ತು, ಹೇಗೆ ಬದಲಾವಣೆಯಾಗುತ್ತ ಬಂದಿವೆ ಎಂಬುದು ಅರಿವಿಗೆ ಬರುತ್ತದೆ. ಈ ಮೂಲಕ ವಿರಳ ರಾಗಗಳೂ ಲಭ್ಯವಾಗುತ್ತವೆ.  ಈ ವಿರಳ ರಾಗಗಳನ್ನು ಇವತ್ತು ಯಾರೂ ಹಾಡುವುದಿಲ್ಲ. ಉದಾಹರಣೆಗೆ ಮಲ್ಲಿಕಾರ್ಜುನ ಮನಸೂರ ವಿರಳ ರಾಗಗಳ ನೂರಾರು ತಾಸುಗಳ ಧ್ವನಿಮುದ್ರಿಕೆಗಳನ್ನು ಆಕಾಶವಾಣಿ ಸಂಗ್ರಹಾಲಯಕ್ಕೆ ನೀಡಿದ್ದಾರೆ,. ಈಗೀಗ ಆಕಾಶವಾಣಿ ತನ್ನ ಸಂಗ್ರಹಾಲಯದಲ್ಲಿದ್ದ ಧ್ವನಿಮುದ್ರಿಕೆಗಳನ್ನು ಕ್ಯಾಸೆಟ್, ಸಿಡಿ, ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿ, ಸಾರ್ವಜನಿಕರಿಗೆ ಲಭಿಸುವಂತೆ ಮಾಡಿದೆ.

ಪತ್ರಿಕೆಗಳೂ ಶಾಶ್ತ್ರೀಯ ಸಂಗೀತ ಪ್ರಸಾರವನ್ನು ಮಾಡುತ್ತಿವೆ. ಸಂಗೀತ ಕಚೇರಿಗಳ ವಿಮರ್ಶೆ ಪ್ರಕಟಿಸುವ ಮೂಲಕ, ಸಂಗೀತ ಕುರಿತ ಲೇಖನಗಳನ್ನು ಪ್ರಕಟಿಸುವ ಮೂಲಕ ಓದುಗರ ಆಸಕ್ತಿ ಕುದುರಿಸುತ್ತಿವೆ. ಕೆಲವು ಪತ್ರಿಕೆಗಳು ನಿಯತವಾಗಿ ಸಂಗೀತ ವಿಮರ್ಶೆ ಪ್ರಕಟಿಸುತ್ತಿವೆ. ಟೈಮ್ಸ್ ಆಫ್ ಈಂಡಿಯಾ ಇದಕ್ಕೆ ವಿಶೇಷ ಮಹತ್ವ ನೀಡಿದೆ. ನಮ್ಮವರೇ ಆದ ಮೋಹನ ನಾಡಕರ್ಣಿ ಸಾವಿರ ವಿಮರ್ಶೆಗಳ ಸರದಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅವರು ಟೈಮ್ಸ್ ಗ್ರೂಪ್ಸ್ ಪತ್ರಿಕೆಗಳಲ್ಲಿ ಸತತವಾಗಿ ಸಂಗೀತ ಕಚೇರಿಗಳ ವಿಮರ್ಶೆಯನ್ನು ಐದಾರು ದಶಕಗಳ ಕಾಲ ಪ್ರಕಟಿಸುತ್ತ ಬಂದಿದ್ದಾರೆ. ಈ ವಿಮರ್ಶೆಗಳಿಂದ ಸಂಗೀತಗಾರ ತನ್ನ ಹೆಚ್ಚುಗಾರಿಕೆಯ ಜೊತೆಗೆ ಇತಿಮಿತಿಗಳನ್ನು ಕಂಡುಕೊಳ್ಳಬಹುದು. ಅದು ಪ್ರಗತಿಗೆ ಸಹಾಯಕ. ಟೈಮ್ಸ್ ಆಫ್ ಇಂಡಿಯಾ ಕೊಟ್ಟಷ್ಟು ಮಹತ್ವ ಬೇರೆ ಯಾವುದೇ ಪತ್ರಿಕೆಗೆ ಕೊಟ್ಟದ್ದನ್ನು ನಾಕಾಣೆ. ಕನ್ನಡ ಪತ್ರಿಕೆಗಳಲ್ಲಿ ಸಂಗೀತ ವಿಮರ್ಶೆ ಅಷ್ಟೊಂದು ಪ್ರಕಟವಾಗುತ್ತಿಲ್ಲ. ವಿಮರ್ಶಕರ ಕೊರತೆಯ ಜೊತೆಗೆ ಪತ್ರಿಕೆಗಳ ಅನಾಸಕ್ತಿಯೂ ಸೇರಿಕೊಂಡಿದೆ. ಮರಾಠಿ ಪತ್ರಿಕೆಗಳಲ್ಲಿ ಸಂಗೀತ ವಿಮರ್ಶೆಗೆ ಹೆಚ್ಚಿನ ಪ್ರಾಧಾನ್ಯ ನೀಡಲಾಗಿದೆ. ಅಲ್ಲಿ ಬರೆಯುವವರೂ ಇದ್ದಾರೆ. ಓದುವವರು ಇದ್ದಾರೆ, ಪ್ರಕಟಿಸುವವರೂ ಇದ್ದಾರೆ. ಪುಣೆಯಲ್ಲಿ ಶಿಷ್ಯ ಭೀಮಸೇನ ಜೋಶಿ ಸಾರಥ್ಯದಲ್ಲಿ ಜರುಗುವ ಸವಾಯಿ ಗಂಧರ್ವ ಸಂಗೀತೋತ್ಸವದ ವಿವರಗಳನ್ನು, ವಿಮರ್ಶೆಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯಿಂದ ಮರಾಠಿ ಪತ್ರಿಕೆಗಳು ಪ್ರಕಟಿಸುತ್ತಿವೆ. ಅದಕ್ಕಾಗಿ ಸಂಗೀತ ಬಲ್ಲ ವಿಶೇಷ ವರದಿಗಾರರು ನಿಯೋಜಿತರಾಗಿರುತ್ತಾರೆ. ಚೆನ್ನಾಗಿ ಹಾಡಿದರೆ ಆ ಬಗೆಗೆ ಮುಖಪುಟದಲ್ಲಿ ವಿಮರ್ಶೆ ರಾರಾಜಿಸುತ್ತದೆ. ಕನ್ನಡ ಪತ್ರಿಕೆಗಳು ಇದರಿಂದ ಕಲಿತುಕೊಳ್ಳುವುದು ಸಾಕಷ್ಟಿದೆ.

ಇನ್ನು, ದೂರದರ್ಶನದ ಪಾತ್ರ, ದೂರದರ್ಶನ ನಮ್ಮ ಜೀವನದಲ್ಲಿ ಅಗಾಧ ಬದಲಾವಣೆ ತಂದಿದೆ. ಕುಳಿತಲ್ಲೇ ಗುಂಡಿ ಒತ್ತುವ ಮೂಲಕ ಏನೆಲ್ಲ ಪಡೆಯಬಹುದಾಗಿದೆ. ಅನೇಕಾನೇಕ ಸರಕಾರೀ ವ ಖಾಸಗಿ ಚಾನೆಲ್‌ಗಳಿವೆ. ಆದರೆ, ಅವುಗಳದ್ದು ಮನರಂಜನೆಯ ಮೂಲಕ ಲಾಭ ಗಿಟ್ಟಿಸುವ ದೃಷ್ಟಿ. ಆದುದರಿಂದ, ದೂರದರ್ಶನ ಚಾನೆಲ್‌ಗಳಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ವಿರಳ. ಅವುಗಳಲ್ಲಿ ಅಷ್ಟೊಂದಾಗಿ ಪ್ರಾಯೋಜಕರು ಮತ್ತು ಜಾಹೀರಾತುದಾರರು ದೊರೆಯದಿದ್ದುದೇ ಕಾರಣವಾಗಿದೆ. ಸ್ಟಾರ್‌ಪ್ಲಸ್ ಚಾನಲ್‌ದಲ್ಲಿ ಬೆಳಿಗ್ಗೆ ೬ ರಿಂದ ೬.೩೦ರವರೆಗೆ ಆಲಾಪ ಎನ್ನುವ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಬಿತ್ತರಗೊಳ್ಳುತ್ತಿತ್ತು. ಅನೇಕ ಉದಯೋನ್ಮುಖ ಕಲಾವಿದರಿಗೂ ಅವಕಾಶ ಇದು ನೀಡಲಾಗುತ್ತಿತ್ತು. ಆದರೆ, ಈಗೀಗ ಅದು  ಮುಂದುವರೆದಂತಿಲ್ಲ. ಡಿಡಿ ಚಾನೆಲ್ ಗಳಲ್ಲಿ ಆಗಾಗ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳೂ ಬಿತ್ತರವಾಗುತ್ತವೆ. ಡಿಡಿ ಭಾರತಿ ಎಂಬ ಚಾನೆಲ್ ಕಲೆಗಳಿಗಾಗಿಯೇ ಮೀಸಲಾದ ಚಾನೆಲ್ ಆಗಿದೆ. ಅದರಲ್ಲೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ಅಷ್ಟೊಂದಾಗಿ ಬರುತ್ತಿಲ್ಲ. ಟಿ.ವಿ. ಚಾನೆಲ್‌ಗಳು ಮನಸ್ಸು ಮಾಡಿದರೆ ಶಾಸ್ತ್ರೀಯ ಸಂಗೀತ ಮನೆಮಾತಾಗಬಲ್ಲದು. ಆದರೆ ಅವರದು ಹೆಚ್ಚು ಜನ ಏನು ವೀಕ್ಷಿಸುವವರೆಂಬುದರ ಮೇಲೆ ಕಣ್ಣು. ಹಾಗಾಗಿ, ಫಿಲ್ಮ ಸಂಗೀತವನ್ನಾಧರಿಸಿದ ಕಾರ್ಯಕ್ರಮಗಳೇ ಹೆಚ್ಚು. ಪ್ರೈಂಟೈಮ್‌ನಲ್ಲಿ ಧಾರಾವಾಹಿಗಳ ಹಾವಳಿ. ತೀವ್ರ ಅಪರಾತ್ರಿ ನಿದ್ದೆಗೆಟ್ಟು ಶಾಸ್ತ್ರೀಯ ಸಂಗೀತ ಕೇಳುವುದು ಕಷ್ಟ.

ಮೇಲಾಗಿ, ಟಿ.ವಿ.ಯಲ್ಲಿ ಶಾಸ್ತ್ರೀಯ ಸಂಗೀತ ಮೂವತ್ತು ನಿಮಿಷಕ್ಕಿಂತ ಹೆಚ್ಚಿಗೆ ಬಿತ್ತರವಾಗದು. ಅದರಲ್ಲು ರಸಭಂಗವಾಗುವಂತೆ  ಎರಡು ಮೂರು ಸಲ ಜಾಹೀರಾತುಗಳ ಪ್ರಕಟಣೆ. ಕಾರ್ಯಕ್ರಮಗಳಿಗಾಗಿ ಜಾಹೀರಾತು ಬದಲಾಗಿ, ಈಗೀಗ ಜಾಹೀರಾತುಗಳಿಗಾಗಿಯೇ ಕಾರ್ಯಕ್ರಮಗಳಾಗಿವೆ. ದೂರದರ್ಶನ ವೀಕ್ಷಣೆ ವ್ಯಾಪಕವಾಗಿದ್ದು ಆಕಾಶವಾಣಿಯನ್ನು ಆಲಿಸುವವರ ಸಂಕ್ಯೆಯೂ  ಕಡಿಮೆಯಾಗುತ್ತಿರಬಹುದು.

ಒಟ್ಟಂದದಲ್ಲಿ, ಮಾಧ್ಯಮಗಳು ಶಾಸ್ತ್ರೀಯ ಸಂಗೀತ ಪ್ರಸಾರದಲ್ಲಿ ಆಕಾಶವಾಣಿ ಹೊರತುಪಡಿಸಿ, ವಿಶೇಷ ಪ್ರೋತ್ಸಾಹ ನೀಡುತ್ತಿಲ್ಲವೆಂದೇ ಹೇಳಬೇಕು.