ಆರ್ಯಾಣದೆಲ್ಲವ್ಗ ಯಾರ್ಯಾರು ಜೋಡಿಲ್ಲ ಮಾದೇವರೊಬ್ಬ ಭೂಮಿತಾಯಿ
ನೆರಮನಿಗಿ ಕರಿಯಲ್ಲ ಬೆಂಕಿಗಿ ಹೋದಾಳ ಇಕ್ಕಿದ ಕದವ ತೆರಿಲಿಲ್ಲ
ಇಕ್ಕಿದ ನೀ ಕದವ ತೆರಿಯವ ಕರಿಯಲ್ಲ ಬಂಜೀಗಿ ಬೆಂಕಿ ಕೊಡಬೇಡಿರಿ
ಇಷ್ಟು ಅನ್ನುದು ಕೇಳಿ ಮನಿಗ್ಯಾರ ಬಂದಾಳ ಹತ್ತ ಅವತಾರ ತಾಳ್ಯಾಳ
ಹತ್ತ ನೀ ಅವತಾರ ತಾಳಿದ ಕರಿಯಲ್ಲ ನಲ ನಲದ ದಾರಿ ಒಗದಾಳ
ನಲ ನಲದ ನೀದ ದಾರಿ ಒಗದಾಳ ಕರಿಯಲ್ಲ ಹೋದಾಳ ಶಿವನ ಅರಮನಿಗಿ
ಹೋದಾಳ ಶಿವನ ಅರಮನಿಗಿ ಕರಿಯಲ್ಲ ಗಾಜಿನ ಕಂಬಕ ಮರಿಯಾದೆ
ಗಾಜಿನ ಕಂಬಕ ಮರಿಯಾದೆ ಕರಿಯಲ್ಲ ಹನ್ನೊಂದ ಅವತಾರ ತಾಳ್ಯಾಳ
ಹನ್ನೊಂದ ನೀ ರೂಪ ತಾಳಿದ ಕರಿಯಲ್ಲ ನೋಡ್ಯಾನು ಶಿವನು ಕಣತುಂಬ
ನೋಡ್ಯಾನ ಶಿವರಾಯ ಕಣತುಂಬ ಕರಿಯಲ್ಲ ಅಂಜ್ಯಾನ ಶಿವ ಹರನಡಗಿ
ಅಂಜ್ಯಾನ ನೀ ಶಿವ ಹರನಡಗಿ ಕೇಳತಾನ ಯಾರವ್ವ ತಾಯಿ ನೀನ
ತಾಯಿ ನೀ ಯಾರವ್ವ ತಂಗಿ ನೀ ಯಾರವ್ವ ಕುಂದರಗೊಳ್ಳ ಮಣಿಚೌಕಿ
ಕುಂದರ ಬಂದಿಲ್ಲ ನಿಂದರ ಬಂದಿಲ್ಲ ಹರನಯ್ಯ ಫಲವ ದಯಮಾಡ
ಕೊಟ್ಟಾರ ಕೊಟ್ಟೇನ ಕೊಡುವದು ದೊಡ್ಡದಲ್ಲ ಆ ಮಗ ನಿನಗ ದಕ್ಕದ
ಸಂಜೇಲಿ ಹುಟ್ಟಿಲಿ ಮುಂಜೇನೆ ಸಾಯಲಿ ಬಂಜೆಂಬು ಶಬ್ದ ಬಿಡಿಸಯ್ಯ
ಕುಡ್ಡನ್ನ ಕೊಡಲೇನ ಕುಂಟನ್ನ ಕೊಡಲೇನ ಯಾಸಿಗಾಲವನ ಕೊಡಲೇನ
ಕುಡ್ಡನ್ನ ಒಲೆನಪ್ಪ ಕುಂಟನ್ನ ಒಲೆನಪ್ಪ ಯಾಸಿಗಾಲವನ ಒಲೆನಪ್ಪ
ಯಾಸಿಗಾಲವನ ಮೊದಲೊಲ್ಲೆ ಶಿವರಾಯ ದೇಶನಾಳವನ ಕೊಮರಾಮ
ಕುಡ್ಡನ್ನ ಕೊಡಲೇನ ಕುಂಟನ್ನ ಕೊಡಲೇನ ಯಾಸಿಗಾಲವನ ಕೊಡಲೇನ
ಕುಡ್ಡನ್ನ ಒಲೆನಪ್ಪ ಕುಂಟನ್ನ ಒಲೆನಪ್ಪ ಪರಸೀಗಿ ಒಪ್ಪುವ ಮಗನಪ್ಪ
ನಿಂಬೀಯ ನೀ ಹಣ್ಣ ತುಂಬ ಮುದ್ದರಿಹಾಕಿ ರಂಬಿ ಉಡಿಯಾಗ ಕೊಡತಾನ
ರಂಬೀ ನೀ ಉಡಿಯಾಗ ಕೊಡತಾನ ಶಿವರಾಯ ಪೂರ್ವಕೆ ಮಾರ್ಯಾಗಿ ಸಲಿಸವ್ವ
ಬಾಳೀಯ ಹಣ್ಣೀಗಿ ಬಾಳ ಮುದ್ದರಿ ಹಾಕಿ ಬಾಲಿ ಉಡಿಯಾಗ ಕೊಡತಾನ
ಬಾಲೀ ನೀ ಉಡಿಯಾಗ ಕೊಡತಾನ ಉಗರಗೊಳ್ಳ ಸೂರ್ಯಾಗ ಮಾರ್ಯಾಗಿ ಸಲಿಸವ್ವ
ಎರಡಂಬು ತಿಂಗಳಿಗೆ ಎರಡೇನು ಬಗಸ್ಯಾಳ ಎರಡೇಳಿವರದ ಎಳಿ ಹುಣಸಿ
ಎರಡೇಲಿ ನೀವರದ ಎಳಿಹುಣಸಿ ಕರಿಯಲ್ಲ ರಾಮನ ಬಯಕೀಲಿ ಬಗಸ್ಯಾಳ
ಮೂರೆಂಬು ತಿಂಗಳಿಗೆ ಮೂರೇನು ಬಗಸ್ಯಾಳ ಮೂಡಲ ದಿಕ್ಕ ಎಳೆಬೆಳಸಿ
ಮೂಡಲ ದಿಕ್ಕ ಎಳೆಬೆಳಸಿ ಕರಿಯಲ್ಲ ರಾಮನ ಬಯಕೀಲಿ ಬಗಸ್ಯಾಳ
ನಾಕಂಬು ತಿಂಗಳಿಗೆ ನಾಕೇನು ಬಗಸ್ಯಾಳ ಕಾಕಿಯ ಹಣ್ಣು ಕಯತುಂಬ
ಕಾಕೀಯ ನೀ ಹಣ್ಣ ಕಯತುಂಬ ಹಿಡಕೊಂಡ ಕರಿಯಲ್ಲ ರಾಮನ ಬಯಕೀಲಿ ಬಗಸ್ಯಾಳ
ಐದೆಂಬು ತಿಂಗಳಿಗೆ ಐದೇನು ಬಗಸ್ಯಾಳ ಕೊಯ್ದ ಮಲ್ಲಿಗೆ ನೆನಿದಂಡಿ
ಕೊಯ್ದ ನೀ ಮಲ್ಲಿಗಿ ನೆನಿದಂಡಿ ಕರಿಯಲ್ಲ ರಾಮನ ಬಯಕೀಲಿ ಮುಡಿದಾಳ
ಆರೆಂಬು ತಿಂಗಳೀಗೆ ಆರೇನು ಬಗಸ್ಯಾಳ ಆರಿದ ಬಾನ ಕೆನಿಮೊಸರು
ಆರೀದ ನೀ ಬಾನ ಕೆನಿಮೊಸರು ಕರಿಯಲ್ಲ ರಾಮನ ಬಯಕೀಲೆ ತಿಂದೆನಂಬುವಳ
ಏಳೆಂಬು ತಿಂಗಳಿಗೆ ಏಳೇನು ಬಗಸ್ಯಾಳ ಹೇಳಿ ನೇಸಿದ ದಡಿಶ್ಯಾಲ
ಹೇಳಿ ನೀ ನೇಸಿದ ದಡಿಶಾಲ ಕರಿಯಲ್ಲ ರಾಮನ ಬಯಕೀಲಿ ಉಡತಾಳ
ಎಂಟೆಂಟು ತಿಂಗಳಿಗೆ ಎಂಟೇನು ಬಗಸ್ಯಾಳ ಕಂಟಲ್ಯಾಲಕ್ಕಿ  ಕೊಡತುಪ್ಪ
ಕಂಟಲ್ಯಾಲಕ್ಕಿ ಕೊಡತುಪ್ಪ ತಗೊಂಡು ತಾಯಿ ಕರಿಯಲ್ಲ ಬರತಾರ
ಒಂಬತ್ತು ತಿಂಗಳಿಗೆ ತುಂಬ್ಯಾವ ವನಜವ್ವ ಸಂದ ಸಂದೆಲ್ಲ ಕಿರಿಬ್ಯಾನಿ
ಸಂದ ನೀ ಸಂದೆಲ್ಲ ಕಿರಿಬ್ಯಾನಿ ಹಿರಿಬ್ಯಾನಿ ತಂಗೆವ್ವ ಈ ಬ್ಯಾನಿ ತಾಳಲಾರೆ
ತಂಗೆವ್ವ ಈ ಬ್ಯಾನಿ ತಾಳಲಾರೆ ಮನಿಯಾಗ ಹೆತ್ತವ್ವ ಇರಬೇಕ ಜಲಮಾಕ
ಹೆತ್ತವ್ವ ಇರಬೇಕ ಮನಿಯಾಗ ಜಲಮಾಕ ಸೂಲಗಿತ್ತೆರನ ಕರಿಹೋಗ
ನೆರಮನಿ ಅವ್ವಗಳ ನೆರಮನಿ ಅಕ್ಕಗಳ ಮನಿಗ್ಯಾರ ಬಂದು ಹೋಗೀರೆ
ಮನಿಗ್ಯಾರ ಬಂದು ಹೋಗೀಕೆ ಅಕ್ಕಗಳ ಯಲ್ಲಮ್ಮ ಬ್ಯಾನಿ ತಿನ್ನುವಳ
ಯಲ್ಲಮ್ಮ ನೀ ಬ್ಯಾನಿ ತಿಂದಾರ ಕರಿಯಲ್ಲ ಕಂದ ಪರಸ್ರಾಮ ಹುಟ್ಟ್ಯಾನ
ವಾರಿಗಿ ಗೆಳೆಯರು ಆಡಾಕ ಕರದಾರ ಹೋಗತೀನಿ ತಾಯಿ ಆಡಾಕ
ಯಾರಾರ ಬಂದಾರ ಯಾರಾರ ತಡಿವ್ಯಾರ ಹೋಗಬೇಡಪ್ಪ ಆಡಾಕ
ಬಿಲ್ಲು ಬಾಣ ಹೆಗಲಿಗೆ ಹಾಕಿ ಮುತ್ತಿನ ಚಂಡ ತಗೊಂಡು ಆಡಾಕ ಹೋದಾನ
ಹತ್ತು ಸಾವಿರ ಹುಡುಗರು ಒತ್ತಟ್ಟಿ ಆದಾವ ಅರಸಾವಿರ ಹುಡುಗರು
ವಾರಿಲಿ ಅದಾವ ರಾಜಬೀದ್ಯಾಗ ರಾಮ ಜಗ್ಗಿ ಹೂಡ್ಯಾನ
ಚಂಡ ಒಗಿರಪ್ಪ ಚಂಡ ಹಿಡೀತಿನಿ ನೀ ಒಗಿಯಪ್ಪ ನಾವು ಹಿಡೀತೀವಿ
ರಾಜಬೀದ್ಯಾಗ ರಾಮ ಜಗ್ಗಿ ಹೂಡ್ಯಾನ ಚಂಡ ಹೊಡದಾನ
ಚಂಡ ಹೊಡವುದರೊಳಗ ಬಾವ್ಯಾಗ ಬಿದ್ದಿತ ರಾಮ್ಹೋಗಿ ಬಾವಿ ಜಿಗಿದಾನ
ರಾಮ ಹೋಗಿ ಬಾವಿ ಜಿಗದಾನ ಆ ಚಂಡ ತಗೆದು ಕಡೇಕ ಒಗದಾನ
ಕಡೇಕ ಒಗಿವಾಗ ಆ ಚಂಡು ತಾ ಹೋಗಿ ರಂಭೇರ ಕೊಡಕ ಬಡದೀತ
ರಂಭೇರ ಕೊಡಕ ಬಡಿದೀತ ರಾಮಣ್ಣ ರಂಭೇರ ಕೊಡವ ಒಡದಾನ
ರಂಭೇರ ಕೊಡವು ಒಡದೀತ ರಾಮಣ್ಣ ತಂದಿದ್ದರೆಷ್ಟು ಉರಿದೀಯ
ಅತಗೊಂತ ಕರಕೊಂತ ಮನಿಗ್ಯಾರ ಹೋದಾನ ರಾಮಣ್ಣ ಬಾಗಲಿಗೆ ನಿಂತಾನ
ಯಾರ ಬಡಿದಾರ ಮಗನ, ಯಾರ ಬೇದಾರ ಮಗನ, ಯಾಕಪ್ಪ ನೀ ಅಳತೀದಿ
ಯಾರೂ ಬಡಿದಿಲ್ಲ ತಾಯಿ ಯಾರೂ ಬೇದಿಲ್ಲ ತಾಯಿ ರಂಭೇರ ಕೊಡವ ಒಡದೀನಿ
ರಂಭೇರ ಕೊಡವ  ಒಡದೀನಿ ಯಲ್ಲಮ್ಮ ರಂಭೇರ ಹೆಣ್ಣಮಕ್ಕಳು ಬೈದಾರ
ರಂಭೇರ ಹೆಣಮಕ್ಕಳು ಬೇದಾರ ಹಡದವ್ವ ತಂದಿಯ ತೋರ ನನಗೀಗ
ಬಾರಪ್ಪ ನನಮಗನ ಗೆಜ್ಜಿ ಕಾಲ ರಾಮಣ್ಣ ಬಾ ನನ್ನ ಮಗನ ಮಲಿ ಉಣ್ಣ
ನಿನ್ಹಾಲ ಉಣ್ಣದ ಇಂದೀಗೆ ಏಳು ದಿನವಾದೆ ನಿನ್ಹಾಲು ನನಗೆ ಇಸವಾದೆ
ಬಾರಪ್ಪ ನನ ಮಗನ ಗೆಜ್ಜಿಕಾಲ ರಾಮಣ್ಣ ಬೆನ್ನೀಲಿ ಹಾಲು ಎಸದಾವ
ಬೆನ್ನಿಲಿ ಎಸದಾರ ಬೇಲ್ಯಾಗ ಚಲ್ಲವ್ವ ನಿನ್ನ ಹಾಲು ನನಗ ಇಸವಾದ
ನಿನ್ಹಾಲು ನನಗ ಇಸವಾದ ತಾಯವ್ವ ತೋರಿ ಕೊಡ ನನ್ನ ಹಡದಪ್ಪನ
ಅರಿಷಿಣ ಹಚ್ಚಿಲ್ಲ ಸರಿಸಿ ನಾ ಕುಂತಿಲ್ಲ ಬೆರಿಸಿ ನಾನವರ ನೆರದಿಲ್ಲ
ಬೆರಸಿ ನೀ ನಾನವರ ನೆರದಿಲ್ಲ ರಾಮಣ್ಣ ಅರಸರ ಗುರುತ ನನಗಿಲ್ಲ
ಗಂಧವ ಹಚ್ಚಿಲ್ಲ ಹೊಂದಿ ನಾ ಕುಂತಿಲ್ಲ ಮಂದಿ ಮಾನವರು ನೆರದಿಲ್ಲ
ಮಂದಿ ನೀ ಮಾನವರು ನೆರದಿಲ್ಲ ರಾಮಣ್ಣ ಗಂಡನ ಗುರುತು ನನಗಿಲ್ಲ
ಗಂಡನು ಇಲ್ಲದಾಕಿ ಗಂಜಿಯ ಸೀರೆ ಯಾಕ ಸಿರಸಂಗಿ ನಾಡ ಬಳಿಯಾಕ
ಸಿರಸಂಗಿ ನಾಡ ಬಳಿಯಾಕ ಕರಿಯಲ್ಲ ತೋರಿ ಕೊಡ ನನ್ನ ತಂದಿಯ
ಹಳ್ಳಕ ಹೋಗಿದ್ದೆ ಹಳಮುಳ್ಳ ತುಳದಿದ್ದೆ ಹಳಸೋಕಿ ನಿನ್ನ ಹಡದಿದ್ದೆ
ಹಳದಾಗ ಇರುವಂತ ಅಗಸನ ತೋರವ್ವ ಅವನಿಗಪ್ಪಂತ ಕರದೇನ
ಗುಡ್ಡಕ ಹೋಗಿದ್ದೆ ಗುಣಕಲ್ಲ ತುಳದಿದ್ದೆ ಗುಣಸೋಕಿ ನಿನ್ನ ಹಡದೇನ
ಗುಡದಾಗ ಇರುವಂತ ಒಡ್ಡನ ತೋರವ್ವ ಅವನಿಗಪ್ಪಂತ ಕರದೇನ
ನಿಂಬಿಯ ವನದಾಗ ಅಡ್ಡಾಡಲು ಹೋಗಿದ್ದೆ ನಿಂಬೆ ಸೋಕಿ ನಿನ್ನ ಹಡದೇನ
ನಿಂಬಿಯ ವನದಾಗ ಅಂಬಿಗನ ತೋರವ್ವ ಅವನಿಗಪ್ಪಂತ ಕರದೇನ
ಬಾಳಿಯ ವನದಾಗ ಅಡ್ಡಾಡಲು ಹೋಗಿದ್ದೆ ಕಾಯಿ ಸೋಕಿ ನಿನ್ನ ಹಡದೇನ
ಬಾಳಿಯ ವನದನ್ನ ಬಾಲನ್ನ ತೋರವ್ವ ಅವನಿಗಪ್ಪಂತ ಕರದೇನ
ಹೂವಿನ ವನದಾಗ ಅಡ್ಡಾಡಲು ಹೋದಾಗ ಹೂ ಸೋಕಿ ನಿನ್ನ ಪಡದೇನಿ
ಹೂವಿನ ವನದನ್ನ ಹುಡುಗನ್ನ ತೋರವ್ವ ಅವನಿಗಪ್ಪಂತ ಕರದೇನ
ಅರಬಿತ್ತು ರಾಮಣ್ಣ ಬರಬಿತ್ತು ರಾಮಣ್ಣ ಬಳವುಲಿಗೆ ಹೋಗ್ಯಾನ ನಿಮತಂದಿ
ಬಳವಲಿಗೆ ಹೋಗ್ಯಾನ ನಿನ ತಂದಿ ರಾಮಣ್ಣ ಯಾವ ಹುಲಿಕರಡಿ ಸಲಿಸ್ಯಾವ
ತಂದೀ ತಿಂದ ಹುಲಿಯು ಕೆಳಗೈತೆ ಮೇಲೈತೆ ಚಮಡ ಬಿಟ್ಟ ರುಂಡ ತರತೇನಿ
ಚೆಂಡಬಿಟ್ಟ ರುಂಡ ತರತೇನೆ ಕರಿಯಲ್ಲ ರುಂಡಕ ಬಳಿಯ ತಗಸೇನಿ
ರುಂಡಕ ಬಳಿಯ ತಗಿಸ್ಯಾನ ರಾಮಣ್ಣ ತಾಯಿ ಸಾಪಳಿ ಕೊಟ್ಟಾಳ
ತಾಯಿ ಸಾಪಳಿಕ ಕೊಟ್ಟಾಳ ಕರಿಯಲ್ಲ ನಿನ್ನ ಶಬ್ದ ಬೇಡ ರಾಮಣ್ಣ.