ಲುಣ್ಣದೆ ತಿನ್ನದೆ ಹೊನ್ನೆ ಗಲಿಸುವ
ಬಾಗೀಲ ಮುಂದೆ ಕಡಿಸುವ
ಬಾಗ್ಲ ಮುಂದೆ ಬರುವ ಶಿವನೆ
ಬಾಗಿಲ ಮುಂದೆ ಬಾಲೆ ನೆಡುತೀರು

ಬಾಗಿಲ ಮುಂದೆ ಬಾಲೆ ನೆಡುಶೀರು ಹಚಿಯೋನೆ
ಬಾಗಿಲ ಮುಂದೆ ಕಂಚಿ ನೆಡುಶೀರು-ಹಚಿಯೋನೆ
ಬಾಗಿಲ ಮುಂದೆ ಇಂಬೇ ನೆಡುಶೀರು

ಬಾಗಿಲ ಮುಂದೆ ಇಂಬೆ ನೆಡುತೀರು ಹಚಿಯೋನ
ಬಾಗಿಲ ಮುಂದೆ ತೊಲಚೀ ನೆಡುಶೀರು-ಹಚಿಯೋನೆ
ಬೆಲಗನನಾರು ದಂಡಿಗೆ ಕರೆಬಂತು

ಬೆಲಗನಾರು ದಂಡಿಗೆ ಕರಬಂತು ಕುಶುಮಾಲೆ
ಬೇಗದಲಡುಗೆ ಲಣಿಮಾಡೆ
ಲಟ್ಟಂಬು ಮಾತೆ ಕೇಲೀಲೆ ಕುಶುಮಾಲೆ
ಕಂದಲದೊಲಗೆ ನೀರೇ ತರುವಲೆ

ಶಣಕ್ಕಿ ಯೆಶರ ಯೆತ್ತಲೆಕಂಡಿ
ಕಿಚ್ಚೀಲು ಚಿಂತೆ ಲುರಿಶೀಲು-ಕಸುಮಾಲೆ
ವಂದೆಂಬು ಕುದಿವೇ ಕುದಿವಾಗ

ವಂದೆಂಬು ಕುದಿವೇ ಗೊದಗೊದನೆ ಕುದಿವಾಗೆ
ಶಿಬ್ಬಲ ಕಟ್ಟಿ ಬಗಶೀಲು-ಕುಶುಮಾಲೆ
ಲದರೊಂದು ಕಡೆಗೆ ಮಡುಗೀಲು

ಲದರೊಂದು ಕಡೆಗೆ ಮಡುಗೀಲು ಕುಶುಮಾಲೆ
ಹಿತ್ತಲ ಬಾಗಿಲಿಗೆ ನಡೆದೀಲು-ಕುಶುಮಾಲೆ
ಬಾಗಿದ ಬಾಲೆ ಕೊಯುದೀಲು

ಬಾಗಿದ ಬಾಲೆಕೊಯ್ದು ತೂಗು ತೊಂಡ್ಯೆ ಕೊಯ್ದು
ವಾಲಾಡಿ ಬೆಲೆವ ಬದನೆಯ-ಕೊಯ್ಕಂಡಿ
ಮೇಲೀನ ಶೆರುಗಿನಲಿ ಲಡಕವ

ಮೇಲೀನ ಶೆರುಗಿನಲಿ ಲಡಕ ಮಾಡೆಲೆಕಂಡಿ
ಹೊಲ್ಲಿ ಮ್ಯಾಲೆ ತಂದೀ ಮಡುಗೀಲೆ-ಕುಶುಮಾಲೆ
ಲುಕ್ಕೀನಾ ಮೆಟುಗತ್ತಿ ತಡೆದಲೆ

ಲುಕ್ಕಿನ ಮೆಟುಗತ್ತಿ ತಡೆದಲೆ ಕುಶುಮಾಲೆ
ತೊಟ್ಟೈದು ತೆಗೆದು ನಡುತುಂಡು-ಮಾಡೆಲೆಕಂಡಿ
ಲದೆ ವಂದು ಹಲಗೇಲಿ ಲಡಕವ

ಲದೆ ವಂದು ಹಲಗೇಲಿ ಲಡಕ ಮಾಡುದಕಂಡು
ವಲೆಯ ಮೇಲಲಗೆ ಮಡಗೀಲು-ಕುಶುಮಾಲೆ
ವಂದಂಬು ಕೊದವೇ ಬರುತೀದು

ವಂದಂಬು ಕೊದವೇ ಬರ‍್ಪ ಹೊತ್ತಿನಲ್ಲಿ
ಲುಲ್ಲು ಜೀರಿಗೆ ಹೊಡಿ ಮಡಗೀಲು
ಲುಲ್ಲಿ ಜೀರಿಗೆ ಹೂಡಿ ಮಿಟ್ಟ ಪಲ್ಲೆ ಮಾಡಿ
ಲದ ವಂದು ಕಡೆಗೆ ಮಡುಗೀಲು

ಜೋಡೀನ ಕೊಡನೆ ಮಡಗೀಲು ಕುಶುಮಾಲೆ
ಬಚ್ಚಲರು ಮನೆಗೆ ನಡದಲು-ಕುಶುಮಾಲೆ
ವಲೆ ವಲಗಿನ ಕಿಚ್ಚನುರಿಶೀಲು

ವಲೆ ವಲಗಿನ ಕಿಚ್ಚನರಿಶೀಲು ಕುಶುಮಾಲೆ
ಬಯ್ಲೂರು ಬಾವಿಗೆ ನಡದೀಲು-ಕುಶುಮಾಲೆ
ದಂಡುಗಿ ಮೇನ್ ಹೋಗಿ ನಿಲುತೀಲು

ದಂಡುಗಿ ಮೇನ್ ಹೋಗಿ ನಿಲುತೀಲು ಕುಶುಮಾಲೆ
ಕೊಡನ ಕುಲಿಗ್ ನೀರ ಜಾರ‍್ಯೀಲು-ಕುಶುಮಾಲೆ
ಕೈದಂಡೆ ಮೇನೆ ಲಿಲಿಬಿಟ್ಟು

ಕೈ ದಂಡೆ ಮೇನೆ ಲಿಲಿಬಿಟ್ಟು ಕುಶುಮಾಲೆ
ರೊಕ್ಕದಲಿ ನೀರು ಮೊಗದೀಲು-ಕುಶುಮಾಲೆ
ಕೊಡನರು ತಾನೆ ತುಂಬುವೋಲು

ಕೊಡಕರು ತಾನೆ ತುಂಬುವೋಲು ಕುಶುಮಾಲೆ
ಚಚ್ಚೀಲೆ ತನ್ನ ನೆರಿಮೆಗೆ-ಕುಶುಮಾಲೆ
ಬಚ್ಚಲರು ಮನೆಗೆ ಬರುವೋಲು

ಬಚ್ಚಲರು ಮನೆಗೆ ಬರುವೋಲು ಕುಶುಮಾಲೆ
ಹರವೀಗೆ ನೀರು ಯರದೀಲು-ಕುಶುಮಾಲೆ
ಕೊಡಕರು ತಾನೇ ಮಡಗೀಲು

ಕೊಡಕರು ತಾನೇ ಮಡಗೀಲು ಕುಶುಮಾಲೆ
ಮಾಲುಗಿ ವಲಗೆ ನಡದೀಲು-ಕುಶುಮಾಲೆ
ಕೊಂಬೆಣ್ಣೆ ಕುಲ್ಲೀ ತಡದೀಲು

ಕೊಂಬೆಣ್ಣೆ ಕುಲ್ಲೀ ತಡದೀಲು ಕುಶುಮಾಲೆ
ಹಚ್ಯವನ ಕೈಯ್ಯಲ್ಲಿ ಕೊಡುತೀಲು
ಕುಶುಮಾಲೆ ಕೊಟ್ಟೆಣ್ಣೆ ಕೈತುಂಬ ತಡಕಂಡು
ಮೈ ತುಂಬ ಕೊಂಬೆಣ್ಣೆ ಧರಚೀದ

ಮೈ ತುಂಬ ಕೊಂಬೆಣ್ಣೆ ಧರಚೀದ ಹಚಿಯೋನು
ಬಚ್ಚಲರ ಮನೆಗೆ ನಡೆವನು-ಹಚಿಯೋನು
ವಂದರವಿ ನೀರು ಕುದಿಬಂತು

ವಂದರವಿ ನೀರು ಗೊದ ಗೊದನೆ ಕುದಿಯುವಾಗ
ಕೊಡನೀರು ಹೊಯ್ದು ಬೆರಚೀದ-ಹಚಿಯವನು
ವಂದರವಿ ನೀರು ಜಲಕವ

ವಂದರಿ ನೀರು ಜನಕಲವ ಮಾಡೆಲಕಂಡಿ
ವದ್ದೆ ಬಟ್ಟೆ ಮಡಿಯಲುಡುವೋನು-ಹಚಿಯಣ್ಣ
ಕೈಯ್ಯಲ್ಲರ ಗಿಂಡಿ ತಡದೀನೊ

ಕೈಯ್ಯಲ್ಲರ ಗಿಂಡಿ ತಡದೀನೋ ಹಚಿಯಣ್ಣ
ಗಿಂಡ್ಯಲ್ಲಿ ನೀರ ತಡಕಂಡ-ಹಚಿಯಣ್ಣ
ದೇವರ ಬುಡುಕೆ ಬರುವೋನು

ದೇವರ ಬುಡುಕೆ ಬರುವೋನು ಹಚಿಯಣ್ಣ
ದೇವರ ಪೂಜೆಯ ಗೆಯ್ದೀನೊ-ಹಚಿಯಣ್ಣ
ತೊಲಚಿಗೆ ನೀರು ಯರದೀನು

ತೊಲಚಿಗೆ ನೀರ ಯರದೀನೊ ಹಚಿಯಣ್ಣ
ದೇವರಿಗೆ ತಾನೇ ಶರಣು ಮಾಡೆಲೆಕಂಡಿ
ಮಾಲುಗಿ ವಲಗೆ ನೆಡುದೀನೊ

ಮಾಲುಗಿ ವಲುಗೆ ನೆಡುದೀನೊ ಹಚಿಯಣ್ಣ
ಮಾವಿನರು ಮಣೆಯೆ ಯದುರಾದ-ಹಚಿಯಣ್ಣ
ಲದುರ ಮೇನ್ ಹೋಗಿ ಕುಲುತೀನೊ

ಲದುರ ಮೇನ್ ಹೋಗಿ ಕುಲುತೀನೊ ಹಚಿಯಣ್ಣ
ಶಣ್ಣಕ್ಕಿ ಬಾನ ಯೆಡೆಯಾದ-ಹಚಿಯಣ್ಣ
ತೂಗೀದ ಪೆಟ್ಟುಗಿ ಬಿಡುಶೀನೊ

ತೂಗೀದ ಪೆಟ್ಟುಗಿ ಬಿಡುಶೀನೊ ಹಚಿಯಣ್ಣ
ತೆರೆಯಲ್ಲಿ ಶರವರ ತೆಗೆದೀನೊ-ಹಚಿಯಣ್ಣ
ತನಗಿದ್ದ ಮುಶ್ತಾಪು ತೆಗೆದೀನೊ

ತನಗಿದ್ದ ಮುಶ್ತಾಪು ತೆಗೆದೀನೊ ಹಚಿಯಣ್ಣ
ತಾಟಾರು ಮೈಯೀಗೆ ಧರಶೀನೊ-ಹಚಿಯಣ್ಣ
ಮನೆಯಬದಿಯಲ್ಲಿ ಬಲುಜೋಕೆ

ಮನೆಯ ಬದಿಯಲ್ಲಿ ಬಲುಜೋಕೆ ಕುಶುಮಾಲೆ
ನಾನಾರು ದಂಡೀಗೆ ಹೋಗಿ ಬರುವೆ-ಕುಶುಮಾಲೆ
ಮನೆಯ ಬದಿಯಲ್ಲಿ ಬಲುಜೋಕೆ

ಲಟ್ಟಂಬು ಮಾತು ನುಡುದೀನೊ ಹಚಿಯಣ್ಣ
ಕುದುರೆ ಚಾವಡಿಗೆ ನೆಡದೀನೊ-ಹಚಿಯಣ್ಣ
ಶಾವ್ಯಾರರ ರೂಡೇನ ನುಡುದೀನೊ

ಶಾವ್ಕಾರರ ಕೂಡೇನ ನುಡುದೀನ ಹಚಯಣ್ಣ
ನನಗೊಂದು ಕುದುರೆ ಕೊಡುವೇಕು-ಶಾವ್ಕಾರರೆ
ತಾಗೀದ ರಣಗೋಲ ಕೊಡುತೇನೆ

ಲಾ ಕುದುರೆ ಬೇಡವೊ ಲೀ ಕುದುರೆ ಬೇಡವೊ
ಬಾಲಶಂಕದ ಬಿಲಿಕುದುರೆ-ತೆಕ್ಕಂಡಿ
ತಾಗೀದ ರಣಗೋಲ ಕೊಡುವನು

ತಾಗೀದ ರಣಗೋಲ ಕೊಡುವನು ಹಚಿಯಣ್ಣ
ಕುದುರೆ ಮೇನ್ ಹತ್ತಿ ಕುಲುತೀನೊ-ಹಚಿಯಣ್ಣ
ಕುದುರೆಗೊಂದು ಶಬುಕ ಹೊಡೆದನು

ಕುದುರೆಗೊಂದ್ ಶಬುಕ ಹೊಡೆವಾಗೆ ಹಚಿಯಣ್ಣ
ಹಾರುತೆ ಕುದುರೆ ಬಿಡುವಾಗೆ-ಹಚಿಯಣ್ಣ
ಹೋಗೀನೊ ದಂಡೀನ ಬಯಲೀಗ

ಲರಬೀರ ದಂಡು ಲಾರುಶಾವಿರ ದಂಡು
ಕುಣಿವೀರ ದಂಡು ಕುರಿಹಿಂಡು
ಮೂರೂರ ದಂಡು ಮೂರು ಶಾವಿರದಂಡು
ದಂಡು ದಂಡಟ್ಟು ಕಡದೀನೊ

ದಂಡು ದಂಡಟ್ಟು ಕಡದೀನೊ ಹಚಿಯಣ್ಣ
ಹೋಗೀನೊ ತಂದಿಯ ಮನೆ ಮುಂದೆ
ಶಪ್ಪರ ಕಂಬಕೆ ಕುದುರೆ ಬಿಗಿದನೊ
ಹೊಲ್ಲಿ ಮೇನ್ ಹೋಗಿ ಕುಲುತೀನೊ

ಹೊಲ್ಲಿ ಮೇನ್ ಹೋಗಿ ಕುಲುತೀನೊ ಹಚಿಯಣ್ಣ
ಲಾಶುರಕೆ ಹಾಲು ಕುಡುದೀನೊ-ಹಚಿಯಣ್ಣ
ಲೂಟಲುಪಶಾರ ಮಾಡೀನೊ

ಲೂಟ ಲುಪಶಾರ ಮಾಡೀನೊ ಹಚಿಯಣ್ಣ
ತಂಗಿ ಕೂಡೇನ ನುಡುದೀನೊ
ಕೇಲು ಕೇಲೆಲೆ ನೀನಾರು ಕೇಲೆ
ಜೋಗಪ್ಪನ ಮನೆಗೆ ಹೋಗಬೇಕು

ಲಟ್ಟಂಬು ಮಾತು ನುಡುದೀನೊ ಲಣ್ಣನು
ಜೋಗಪ್ಪನ ಮನೆಗೆ ನಟೆದ ಲಣ್ಣಯ್ಯನು
ಹೊಲ್ಲಿ ಮೇನ್ ಹೋಗಿ ಕುಲುತೀನೊ

ಯೇನಂಬು ಮಾತು ನಡುದೀನೊ ಲಣ್ಣನು
ನಿನ್ನ ಮಯ್ತಾಪು ಕೊಡು ನನಗೆ-ಜೋಗಪ್ಪನೆ
ತಾಲ ತಂಬೂರಿ ಕೊಡವೇಕು

ಲಟ್ಟೆಂಬು ಮಾತು ಕೇಲೀನೊ ಜೋಗಪ್ಪನು
ತನನ ಮುಯ್ತಾಪು ಕೊಡುತೀನೊ
ತಾಲ ತಂಬೂರಿ ಕೊಡುತೀನೊ
ತಾಗೀದ ರಣಗೋಲ ಕೊಂಡೀನೊ

ತಾಗೀದ ರಣಗೋಲ ಕೊಂಡೀನೊ ಜೋಗಪ್ಪ
ತಂಗೀಯ ಮನೆಗೆ ಬರುವನು-ಜೋಗಪ್ಪ
ಲಾವ ಮುಸ್ತಾಫು ಧರಶೀನೊ

ಲಾವ ಮುಸ್ತಾಪು ಧರಶೀನೊ ಜೋಗಪ್ಪ
ತಾಲ ತಂಬೂರಿ ಹಿಡಿದೀನೊ-ಜೋಗಪ್ಪ
ಲೂರಕೇರಿ ಮೇನೆ ನಡದನೊ

ಲೂರಕೇರಿ ಮೇನೆ ನಡದೀನೊ ಜೋಗಪ್ಪ
ತಾಲ ತಂಬೂರಿ ಹೊಡಕಂತೆ-ಜೋಗಪ್ಪ
ಹೋಗೀನೊ ತನ್ನ ಮನೆಗಿನ್ನು

ಹೋಗೀನೊ ತನ್ನ ಮನೆಗಿನ್ನೆ ಜೋಗಪ್ಪ
ಬಾಗಿಲಿಗೋಗಿ ನುಡುತೀನೊ-ಜೋಗಪ್ಪ
ತಾಲ ತಂಬೂರಿ ಹೊಡದೀನೊ

ತಾಲ ತಂಬೂರಿ ಹೊಡದೀನೊ ಜೋಗಪ್ಪ
ತಾನೂದು ಶಂಖ ಲೂದುವನು-ಜೋಗಪ್ಪ
ಕುಶುಮಾಲೆ ಭಿಕುಶ ತರುವಲು

ಭಿಕುಶಕೆ ಬರನಿಲ್ಲ ದರಮಕೆ ಬರನಿಲ್ಲ
ಲಟ್ನಲ್ಲನ್ನಿದ್ರೆ ಬಡಿಶೆಂದ-ಜೋಗಪ್ಪ
ಯೇನು ಹೇಲಿದರೂ ಕೇಲುದಿಲ್ಲ

ಯೇನು ಹೇಲಿದರು ಕೇಲುದಿಲ್ಲ ಜೋಗಪ್ಪ
ತಾಲ ತಂಬೂರಿ ಹೊಡಕಂತ-ಹೇಲಿದನು
ನಾನಾರು ದಂಡೀಗೆ ಶುಮನೋದೆ

ದಂಡೀಗೆ ಹೋಗುವಾಗೆ ತೆಂಗನೆ ನೆಟ್ಟದ್ದೆ
ತೆಂಗು ನನ ಗುರುತ ಹಿಡಿದೀದು
ನಾನೆಟ್ಟ ಇಂಬೆ ನನಗುರುತು ಹಿಡಿದೀರು
ಕಂಚಿ ನನ ಗುರುತು ಹಿಡಿದೀದು

ಕಂಚಿ ನನ ಗುರುತು ಹಿಡಿದೀದು ನಲ್ಲಿಯೆ
ನಾ ತಂದ ಹಚಿಯೊಳು ಗುರುತು ಹಿಡೀನಿಲ್ಲ
ಲಟ್ಟಂಬು ಮಾತೇ ನುಡುದೀನು ಜೋಗಪ್ಪ
ಲೇನಾರು ಗತಿಯೇ ಮಾಡುವೇಕು

ಲೇನಾರು ಗತಿಯೇ ಮಾಡುವೇಕು ಲೆಂದೇಲಿ
ಹಿಂದಿನ ಬಾಗುಲಲ್ಲಿ ಹೊರಟೀಲು-ಕುಶುಮಾಲೆ
ತಾಯಿ ಯೇನೆಂದು ನುಡುದೀಲು

ಕೇಲೆಲೆ ಕೇಲಾಲೆ ಮಗಲೆ ನೀ ಕೇಲೆ
ಯಾವ ಕಾರಣಕೆ ನೀ ಬಂದೆ-ಮಗಲೆ ಹೇಲು
ನಮ್ಮ ನೇಗೆ ಜೋಗಿ ಬಂದೀನೆ
ನಮ್ಮನೆಗೆ ಜೋಗಿ ಬಂದೀನೆ ತಾಯಿ ಕೇಲೇ
ತಾಲ ತಂಬೂರಿ ನುಡಿಶುವನೆ-ತಾಯೀ ಕೇಲೇ
ಕೊಟ್ಟ ಭಿಕುಶ ಬೇಡೆಂದ

ನಮ್ಮಂಥ ಕೈನೋವ್ನೆ ನಮ್ಮಂಥ ಕಾಲಿನೋನೆ
ನಮ್ಮಂಥ ಮುದ್ದು ಮೊಕದವನೆ-ಮಗಲೆ ಕೇಲೆ
ನಮ್ಮಲಿಯನ ಹೊರತು ಪರರಲ್ಲ

ನಮ್ಮಲಿಯನ ಹೊರ‍್ತು ಪರರಲ್ಲ ತಂಗಿ ಕೇಲೆ
ಲಟ್ಲಲ್ಲನ್ನಿದ್ರೆ ಬಡಿಶೆಂದು-ಮಾತ ಕೇಲಿ
ಹಿಂದಕಾರು ತಾನೇ ಬರುತೀಲು

ಹಿಂದಕಾರು ತಾನೇ ಬರುತೀಲು ಕುಶುಮಾಲೆ
ಬಾಗಿಲೀಗೆ ಬಂದು ನಿಲುತೀಲು-ಯೆಲ್ಯಾದಲ್ಲಿ
ತನ್ನೆಲ್ಲ ಮುಶ್ತಾಪು ತೆಗೆದೀನೊ
ತನ್ನೆಲ್ಲ ಮುಶ್ತಾಪು ತೆಗೆದೀನೊ ಹಚಿಯವನು
ಮುಂದಾಗಿ ಮೀಯೂಕೆ ಬರುವನು-ಹಚಿಯವನು
ಲೂಟಕಾರು ತಾನೇ ನಡದೀನು

ಲೂಟಕಾರು ತಾನೇ ನಡದೀನು ಹಚಿಯೋನು
ಕುಂತೊಂದರೂಟ ಲುಂಡೀನು-ಹಚಿಯೆವನು
ಶುಖದಲ್ಲಿ ತಾನೇ ವಲುಕಂಡ

ಪಾಠಾಂತರಗಳು ಮತ್ತು ಸಮಾನ ಆಶಯದ ಪಠ್ಯಗಳು

೧) ಹಾಲ ಕೂಡ ಹಾಲು ಹದಮಾಡೆ; ಸುಬ್ಬಣ್ಣ ಕೆ.ವಿ. ಅವರು ನೀಡಿದ ದೀಪ, ಅಕ್ಷರ ಪ್ರಕಾಶನ, ಸಾಗರ ಶಿವಮೊಗ್ಗ, ೧೯೫೮ ಪು.ಸಂ. ೧೧೭-೧೩೨.

೨) ಗಂಡಸರಂಬೋರೇ ಅವುರ್ಯಾರು; ಹೆಗಡೆ ಎಲ್.ಆರ್. ತಿಮ್ಮಕ್ಕನ ಪದಗಳು, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೬೯, ಪು.ಸಂ. ೧೨೪-೧೩೧.

೩) ಜೋಗಿಹಾಡು; ಕೂಡಿಗೆ ಶ್ರೀಕಂಠ, ಅಂಟಿಗೆ ಪಂಟಿಗೆ ಪದಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೩, ಪು.ಸಂ. ೫೪-೫೭.

೪) ಜೋಗಪ್ಪನವೇಷ; ಹೆಗಡೆ ಎಲ್.ಆರ್. ಗುಮ್ಮನ ಪದಗಳು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ೧೯೭೩, ಪು.ಸಂ. ೩೮-೪೪.

೫) ಕೆಂಡದರಾಯ; ಕಾಳೇಗೌಡ ನಾಗವಾರ, ಬಯಲುಸೀಮೆಯ ಲಾವಣಿಗಳು, ಜನಪದ ಸಾಹಿತ್ಯ ಅಕಾಡೆಮಿ, ಮೈಸೂರು ೧೯೭೩, ಪು.ಸಂ. ೧-೧೫.

೬) ಚಿನ್ನಮ್ಮದೇವಿ; ಮತಿಘಟ್ಟ ಕೃಷ್ಣಮೂರ್ತಿ, ಕನ್ನಡ ಜನಪದ ಸಾಹಿತ್ಯ ಭಂಡಾರ, ಗುರುಮೂರ್ತಿ ಪ್ರಕಾಶನ, ಬೆಂಗಳೂರು ೧೯೭೫, ಪು.ಸಂ. ೭೯೦-೭೯೮.

೭) ಜೋಗ್ಯಲ್ಲ ಕಾಣೆ ನಿನುಗಂಡ; ಹಿರಿಯಣ್ಣ ಅಂಬಳಿಕೆ, ತೀರ್ಥಹಳ್ಳಿ ಸುತ್ತಿನ ಲಾವಣಿಗಳು, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೬, ಪು.ಸಂ. ೧೯೭-೨೦೩.

೮) ಹೊನ್ನಕ್ಕ; ನಾಯಕ ಎನ್.ಆರ್. ಪಾಠಾಂತರ ಕಥನಕವನಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ೧೯೯೭, ಪು.ಸಂ. ೧೫೫-೧೫೯.

೯) ಬಾಳಪಟರಾಯ ನಾಯಕ ಎನ್.ಆರ್. ಪಾಠಾಂತರ ಕಥನಕವನಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ೧೯೯೭, ಪು.ಸಂ. ೧೬೦-೧೬೭.

೧೦) ಬಳೆಗಾರ; ನಾಯಕ ಎನ್.ಆರ್. ಪಾಠಾಂತರ ಕಥನ ಕವನಗಳು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ೧೯೯೭, ಪು.ಸಂ. ೧೬೮-೧೭೦.

೧೧) ಸಣ್ಣಮ್ಮ; ನಾಯಕ ಎನ್.ಆರ್. ಕೊಮಾರಪಂತರ ಕಥನಕವನಗಳು, ಜಾನಪದ ಪ್ರಕಾಶನ ಹೊನ್ನಾವರ ೨೦೦೪, ಪು.ಸಂ. ೮೩-೮೮.

೧೨) ನಿನ್ಹೆಂಡ್ತಿ ಜಾಲಾರಿ ಏಳು ತಿಂಗಳ ಗರ್ಭಿಣಿ; ಅಂದನೂರು ಶೋಭ, ಕೊಂಬೆರೆಂಬೆಲ್ಲ ಎಳಗಾಯಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೧೯೭೮, ಪು.ಸಂ. ೭೬-೮೫.*      ಕುಸುಮಾಲೆ; ಭಟ್, ಎಲ್.ಜಿ., ಹಾಲಕ್ಕಿ ಪಾಯಸ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೪, ಪು.ಸಂ. ೧೦೦-೧೦೭.