ನಾಡಿನುದ್ದಕೂ ಕಿರಣವ ಹರಡಿತು
ಬೆಳ್ಳೂರಿನ ಬೆಳಗು,
ಶ್ರೀ ಪ್ರಭೆಯಲಿ ಕಣ್ತೆರೆದವು ಕೋಟಿ ಕಂಠಗಳು
ನವೋದಯದ ಮೊಳಗು!

ಹತ್ತೊಂಬತ್ತನೆಯ ಶತಮಾನದ ಕೊನೆಯ ಮೂರು ದಶಕಗಳು ಮತ್ತು ಇಪ್ಪತ್ತನೆಯ ಶತಮಾನದ ಮೊದಲ ಒಂದು ದಶಕ-ಈ ನಾಲ್ಕು ದಶಕಗಳು (೧೮೭೦-೧೯೧೦) ಹೊಸಗನ್ನಡ ಸಾಹಿತ್ಯದ ದೃಷ್ಟಿಯಿಂದ, ಅದರಲ್ಲಿಯೂ ನವೋದಯವೆಂದು ಗುರುತಿಸುವ ಸಾಹಿತ್ಯಕ ಸಂದರ್ಭದಲ್ಲಿ, ಅತ್ಯಂತ ಮಹತ್ವದ ಸಾಹಿತಿಗಳಿಗೆ ಜನ್ಮಕೊಟ್ಟ ಒಂದು ಅಪೂರ್ವವಾದ ಕಾಲವಾಗಿದೆ. ಪಂಜೆ, ಪೈ, ಶ್ರೀ, ಕೈಲಾಸಂ, ಡಿ.ವಿ.ಜಿ., ಎ.ಅರ್.ಕೃ., ಮಾಸ್ತಿ, ಬೇಂದ್ರೆ, ವಿ.ಸೀ., ಕಾರಂತ, ಕುವೆಂಪು, ಶ್ರೀರಂಗ, ಪು.ತಿ.ನ., ಅ.ನ.ಕೃ., ಗೋಕಾಕ್ ಮತ್ತು ಇನ್ನೂ ಹಲವರು ಹುಟ್ಟಿದ್ದು ಈ ನಾಲ್ಕು ದಶಕಗಳಲ್ಲಿಯೇ. ಈ ಇವರೆಲ್ಲರ ಸಾಧನೆಯಿಂದ ಅಧುನಿಕ ಸಾಹಿತ್ಯ ಹಿಂದೆಂದೂ ಕಾಣದ ಸಮೃದ್ಧಿಯನ್ನೂ, ವೈವಿಧ್ಯವನ್ನೂ ಕಂಡಿದೆ. ಸುಮಾರು ಒಂದೂವರೆ ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿರುವ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ, ನಿಜವಾದ ಅರ್ಥದಲ್ಲಿ ಸುವರ್ಣಯುಗವೆಂದು ಕರೆಯಬಹುದಾದ  ಕಾಲವೆಂದರೆ, ನಿಸ್ಸಂದೇಹವಾಗಿಯೂ ಕಳೆದ ಆರೇಳು ದಶಕಗಳ ಹೊಸಗನ್ನಡ ಸಾಹಿತ್ಯದ ಕಾಲವೇ ಎಂದು ನನ್ನ ತಿಳಿವಳಿಕೆ. ಯಾಕೆಂದರೆ ಹಿಂದೆ ಎಂದೂ ಹೀಗೆ ಏಕಕಾಲಕ್ಕೆ ಈ ಎತ್ತರದ ಇಷ್ಟೊಂದು ಸಾಹಿತಿಗಳು ಇದ್ದುದಾಗಲಿ, ಈ ವೈವಿಧ್ಯಮಯವಾದ ಸಾಹಿತ್ಯ ನಿರ್ಮಿತಿಯಲ್ಲಿ ತೊಡಗಿ ಅದನ್ನು ಬಹುಮುಖವಾಗಿ ಶ್ರೀಮಂತಗೊಳಿಸಿದ್ದಾಗಲಿ ಕಂಡುಬರುವುದಿಲ್ಲ. ಈ ಮಹನೀಯರಲ್ಲಿ ಹಲವರು ಈಗಾಗಲೆ ಶತಮಾನೋತ್ಸವದ ಗೌರವಕ್ಕೆ ಪಾತ್ರರಾಗಿದ್ದಾರೆ. ಇನ್ನೂ ಹಲವರು ಶತಮಾನೋತ್ಸವ ದೂರವೇನಿಲ್ಲ.

ಹೊಸಗನ್ನಡ ಸಾಹಿತ್ಯ ಸಂದರ್ಭದಲ್ಲಿ ಬಿ.ಎಂ.ಶ್ರೀ. ಅವರದು ವಿಶಿಷ್ಟವಾದ ವ್ಯಕ್ತಿತ್ವ. ಅವರನ್ನು ನವೋದಯದ ಆಚಾರ್ಯರೆಂದು ಗುರುತಿಸಿ ಗೌರವಿಸಲಾಗಿದೆ. ಆಗಾಧವಾದ ವಿದ್ವತ್ತು, ಬಹುಭಾಷಾ ಪ್ರಭುತ್ವ, ಹೊಸಗನ್ನಡ ಕಾವ್ಯದ ಹೆದ್ದಾರಿಯನ್ನು ತೆರೆದಂಥ ಸೃಜನ ಹಾಗೂ ಪ್ರಯೋಗ ಸಾಮರ್ಥ್ಯ; ಅಪ್ರತಿಮವಾದ ಬೋಧನ ಪ್ರಾವೀಣ್ಯ ಮತ್ತು ಪ್ರಭಾವಶಾಲಿಯಾದ ವಾಗ್ಮಿತೆ; ಕನ್ನಡದ ಮೇಲಿನ ಅನನ್ಯವಾದ ಪ್ರೀತಿ; ಕನ್ನಡದ ಎಚ್ಚರಕ್ಕೆ ಹಾಗೂ ಏಕೀಕರಣಕ್ಕೆ ಅವರು ಪಟ್ಟಶ್ರಮ; ತಮ್ಮ ವ್ಯಕ್ತಿತ್ವದ ಪ್ರಭಾವದಿಂದ ನಿರ್ಮಿಸಿದ ಹೊಸಗನ್ನಡ ಲೇಖಕರ ಒಂದು ಪರಂಪರೆ; ಛಂದಸ್ಸು, ಗ್ರಂಥಸಂಪಾದನೆ, ಲಿಪಿಸುಧಾರಣೆ, ಸಾಹಿತ್ಯಚರಿತ್ರೆ, ಸಾಹಿತ್ಯ ವಿಮರ್ಶೆ, ಜಾನಪದ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಅವರು ಹಾಕಿಕೊಟ್ಟ ಹೊಸ ದಾರಿಗಳು-ಈ ಎಲ್ಲವನ್ನೂ ನೆನದರೆ, ಅವರನ್ನು ಹೊಸಗನ್ನಡ ಆಚಾರ್ಯಪುರುಷರೆಂದು ಕರೆದಿರುವುದು ಉತ್ಪ್ರೇಕ್ಷೆಯಲ್ಲ ಎಂದು ಇಂದು ಯಾರಿಗಾದರೂ ಅನ್ನಿಸದಿರದು.

“ಕನ್ನಡ ನಾಡಿಗೆ ಕನ್ನಡವೇ ಗತಿ. ಅನ್ಯಥಾ ಶರಣಂ ನಾಸ್ತಿ. ಸಂಸ್ಕೃತವಲ್ಲ, ಇಂಗ್ಲಿಷಲ್ಲ, ಹಿಂದಿಯಲ್ಲ, ಕನ್ನಡ”-ಎಂದು ಘೋಷಿಸಿದ ಈ ಇಂಗ್ಲಿಷ್ ಪ್ರಾಧ್ಯಾಪಕ ಬಿ.ಎಂ.ಶ್ರೀಕಂಠಯ್ಯನವರು ಅದುವರೆಗೂ ಸುಮಾರು ಎರಡು ಶತಮಾನಗಳಿಂದ  ಸ್ಥಗಿತಗೊಂಡು ನಿಂತ ನೀರಾಗಿದ್ದ ಕನ್ನಡ ಸಾಹಿತ್ಯಕ್ಕೆ, ಹೊಸ ನೀರನ್ನು ನುಗ್ಗಿಸಿ ಹೊಸ ಕಾಲುವೆಗಳನ್ನು ನಿರ್ಮಿಸಿ, ಹೊಸ ಬೆಳೆಯನ್ನು ಹೊಮ್ಮಿಸುವುದರ ಮೂಲಕ ಚಲನಶೀಲತೆಯನ್ನು ತಂದವರಲ್ಲಿ ಬಹು ಮುಖ್ಯರಾದವರು. ಈ ಕಾರ್ಯದಲ್ಲಿ ಅವರ ‘ಇಂಗ್ಲಿಷ್ ಗೀತಗಳು’ ವಹಿಸಿದ ಪಾತ್ರ ಅನನ್ಯವಾದದ್ದು. ಶ್ರೀ ಅವರ ಸಮಕಾಲೀನರಾದ ಇನ್ನೂ ಹಲವರು, ಇಂಗ್ಲಿಷಿನಿಂದ ಕನ್ನಡಕ್ಕೆ ಕವಿತೆಗಳನ್ನು ಅನುವಾದ ಮಾಡುವುದರ ಮೂಲಕ, ಕನ್ನಡ ಸಾಹಿತ್ಯದ ಸ್ಥಗಿತಗೊಂಡ ರೂಪಗಳನ್ನು ಮುರಿದು ಹೊಸ ರೂಪಗಳನ್ನು ಆವಿಷ್ಕಾರಮಾಡುವ ಪ್ರಯತ್ನದಲ್ಲಿ ತೊಡಗಿದ್ದರೂ, ಅವರ ಪ್ರಯೋಗಗಳೆಲ್ಲ ಹಳೆಯ ಬಂಧಗಳ ಬಂದಿವಾಸದಿಂದ ಕನ್ನಡ ಕವಿತೆಯನ್ನು ಯಶಸ್ವಿಯಾಗಿ ಪಾರುಮಾಡಲು ಸಾಧ್ಯವಾಗಲಿಲ್ಲ; ಮತ್ತು ಶ್ರೀಯವರ ‘ಇಂಗ್ಲಿಷ್ ಗೀತಗಳು’ ಪಡೆದುಕೊಂಡ ಭಾಷೆಯ ಹಾಗೂ ರೂಪದ ಹೊಸತನ ಉಳಿದವರಲ್ಲಿ ಅಷ್ಟಾಗಿ ಕಾಣಿಸಲಿಲ್ಲ. ಯಾಕೆಂದರೆ ಶ್ರೀಯವರ ಇಂಗ್ಲಿಷ್ ಗೀತೆಗಳು ಕೇವಲ ಅನುವಾದಗಳಾಗದೆ, ಕನ್ನಡ ಕಾವ್ಯಕ್ಕೆ ಹೊಸ  ರೂಪ ಮತ್ತು ಭಾಷೆಯನ್ನು ಕೊಡುವ ಸೃಜನಾತ್ಮಕ ಪ್ರಯೋಗಗಳಾಗಿವೆ. ಇಂಗ್ಲಿಷ್ ಗೀತಗಳನ್ನು ನೋಡಿದರೆ ಮುಖ್ಯವಾಗಿ ಕಂಡುಬರುವ ಸಂಗತಿ ಎಂದರೆ, ಅವು ಮೂಲದ ಇಂಗ್ಲಿಷ್ ಕವನಗಳ ಆಕೃತಿಗಳನ್ನೇ ಕನ್ನಡದಲ್ಲಿಯೂ ಪಡೆದುಕೊಂಡಿವೆ-ಪಾದಗಳ ಸಂಖ್ಯೆಯಲ್ಲಿ ಮತ್ತು ಪದ್ಯ ಬಂಧಕ್ರಮ (Stanza pattern)ದಲ್ಲಿ ಎನ್ನುವುದನ್ನು ಗುರುತಿಸಬಹುದು; ಮತ್ತು ಈ ಆಕೃತಿಗಳು (ಷಟ್ಪದಿ, ಸಾಂಗತ್ಯ ಇಂಥವು ಹೊರತು) ಕನ್ನಡ ಸಾಹಿತ್ಯದಲ್ಲಿ ಅದುವರೆಗೂ ಇರಲಿಲ್ಲ ಎಂಬುದೂ ಮುಖ್ಯವಾದ ಸಂಗತಿಯಾಗಿದೆ. ಈ ದೃಷ್ಟಿಯಿಂದ ಮೂಲದ ಇಂಗ್ಲಿಷ್ ಕವಿತೆಗಳಿಗೆ ಸಂವಾದಿಯಾದ ಕನ್ನಡ ರೂಪಗಳನ್ನು ಸಿದ್ಧ ಮಾಡಿದ್ದು ಮತ್ತು ಅದಕ್ಕಾಗಿ ಅವರು ಅಳವಡಿಸಿದ ಛಂದೋ ವೈವಿಧ್ಯಗಳು ಹಾಗೂ ಅವುಗಳಲ್ಲಿನ ಭಾಷೆಯ ಲವಲವಿಕೆ-ಈ ಎಲ್ಲವೂ ನವೋದಯ ಕಾವ್ಯದ ಮೂಲ ಮಾದರಿಗಳಾಗಿವೆ. ಬಿ.ಎಂ.ಶ್ರೀಯವರ ಕಾವ್ಯ ಭಾಷೆ, ಕನ್ನಡದ ಪ್ರಾದೇಶಿಕ ವೈವಿಧ್ಯಗಳನ್ನೆಲ್ಲ ಒಳಗೊಳ್ಳುವಂಥ ಪ್ರಯೋಗಶೀಲತೆಯನ್ನು ಪ್ರಕಟಿಸದಿದ್ದರೂ, ಕರ್ನಾಟಕದ ಒಂದು ಭಾಗದ ಕವಿಗಳ ಭಾಷೆಯಾಗಿ ಮುಂದುವರಿಯುವ ಸ್ವರೂಪದ್ದಾಗಿದೆ ಎಂಬುದು ನಿಜ. ಇವತ್ತಿಗೂ ಶ್ರೀ ಅವರ ಇಂಗ್ಲೀಷ್ ಗೀತಗಳನ್ನಾಗಲೀ ಮತ್ತು ಅವರ ಸ್ವತಂತ್ರ ಕವಿತೆ (‘ಹೊಂಗನಸು’)ಗಳನ್ನಾಗಲೀ ಓದಿದರೆ ಅವರ ಕವಿತೆಗಳಲ್ಲಿ ಕಂಡುಬರುವ ಮೊದಲ ಗುಣವೆಂದರೆ, ಅವುಗಳಲ್ಲಿ ಪುಟಿಯುವ ಭಾಷೆಯ ಹೊಸತನ. ಭಾಷೆಗೆ ಈ ಬಗೆಯ ಹೊಸತನ ಬರುವುದು, ಭಾಷೆಯನ್ನು ಸೃಜನಾತ್ಮಕವಾಗಿ ಬಳಸಿದಾಗಲೇ. ಪಂಪನ ಭಾಷೆಗೆ, ವಚನಕಾರರ ಭಾಷೆಗೆ ಇರುವ ಹೊಸತನ ಈ ಕಾರಣದಿಂದ ಪ್ರಾಪ್ತವಾದದ್ದೆ. ಮತ್ತೊಂದು ವಿಶೇಷವೆಂದರೆ, ವಸ್ತು ನಿಷ್ಠ ಕಾವ್ಯಪರಂಪರೆಯ ಕನ್ನಡ ಸಾಹಿತ್ಯದಲ್ಲಿ, ವ್ಯಕ್ತಿನಿಷ್ಠವಾದ ವಸ್ತುಗಳು ಕಾವ್ಯವಾಗಬಲ್ಲವೆಂಬ ಸಾಧ್ಯತೆ ಹಾಗೂ ಧೈರ್ಯವನ್ನು ತಂದುಕೊಡುವುದರಲ್ಲಿ ಇಂಗ್ಲಿಷ್ ಗೀತಗಳಲ್ಲಿ ಕಂಡುಬರುವ ಕಾವ್ಯವಸ್ತುಗಳು, ಕನ್ನಡ ಕವಿಗಳಿಗೆ ಮಾರ್ಗದರ್ಶಕವಾದವು, ಎನ್ನುವುದು.ಹೀಗೆ ವಸ್ತು, ರೂಪ (ಆಕೃತಿ) ಮತ್ತು ಭಾಷೆ-ಈ ಮೂರು ದೃಷ್ಟಿಯಿಂದ ಶ್ರೀಯವರ ‘ಇಂಗ್ಲಿಷ್ ಗೀತಗಳು’ ಹೊಸಗನ್ನಡ ಕಾವ್ಯದ ದಾರಿಯನ್ನು ತೆರೆದದ್ದು ಮಹತ್ವದ ಸಂಗತಿಯಾಗಿದೆ.ಈ ಕಾರಣದಿಂದ ಶ್ರೀ ಅವರ ಇಂಗ್ಲಿಷ್ ಗೀತಗಳನ್ನು, ಕೇವಲ ಅನುವಾದಗಳೆಂದು ಭಾವಿಸುವುದು ಅಸಮರ್ಪಕವಾದದ್ದು. ಅವರ ಮುಖ್ಯ ಉದ್ದೇಶ ಅನುವಾದಗಳನ್ನು ಸಿದ್ಧಪಡಿಸುವುದಾಗಿರಲಿಲ್ಲ; ಕೇವಲ ಅನುವಾದಗಳನ್ನು ಸಿದ್ಧಪಡಿಸುವುದೇ ಆಗಿದ್ದರೆ, ಅವರು ಇಂಗ್ಲಿಷ್ ಕಾವ್ಯದ ಅತ್ಯುತ್ತಮ ಪದ್ಯಗಳನ್ನು ಮಾತ್ರ ಆಯ್ದುಕೊಳ್ಳುವ ಕಡೆಗೆ ಅವರ ಗಮನ ಬಹುಶಃ ಕೇಂದ್ರೀಕೃತವಾಗುತ್ತಿತ್ತು. ಆದರೆ, ಅವರ ಇಂಗ್ಲಿಷ್ ಗೀತಗಳಲ್ಲಿ ತಮ್ಮ ಪ್ರಯೋಗಗಳಿಗೆ ಆರಿಸಿಕೊಂಡ ಕವಿತೆಗಳು ಅವರೇ ಹೇಳಿಕೊಂಡಿರುವಂತೆ ಇಂಗ್ಲಿಷ್ ಕಾವ್ಯ ಮಾಲೆಯ ಅತ್ಯುತ್ಕೃಷ್ಟವಾದ ಪದ್ಯಗಳೇನಲ್ಲ. ಅವರಿಗೆ, ತಾವು ಆಯ್ದುಕೊಂಡ ಇಂಗ್ಲಿಷ್ ಕವಿತೆಗಳು ಅತ್ಯುತ್ತಮವಾದವುಗಳೇ ಅಲ್ಲವೇ ಎನ್ನುವುದು ಮುಖ್ಯವಾಗಲಿಲ್ಲ; ಅವರಿಗೆ ಮುಖ್ಯವಾದದ್ದು ಇಂಗ್ಲಿಷ್ ಕಾವ್ಯದ ಪ್ರೇರಣೆಯಿಂದ ಕನ್ನಡದಲ್ಲಿ ಹೊಸರೂಪಗಳನ್ನು ಆವಿಷ್ಕಾರ ಮಾಡುವುದು ಹೇಗೆ ಎನ್ನುವುದು. ಇಂಥ ಸೃಜನಸಾಮರ್ಥ್ಯ ಉಳ್ಳ ಈ ವ್ಯಕ್ತಿ ಸ್ವತಂತ್ರವಾದ ಕವಿತೆಗಳನ್ನು ಬರೆದದ್ದು ಎಷ್ಟೊಂದು ಕಡಿಮೆ (ಅವರ ಸ್ವತಂತ್ರ ಕವನಗಳು ಕೇವಲ ಹದಿನಾರು) ಎನ್ನುವುದು ಆಶ್ಚರ್ಯದ ಸಂಗತಿಯಾಗಿದೆ. ಇದಕ್ಕೆ ಕಾರಣ ಅವರು ಮೂಲತಃ ‘ಪ್ರಯೋಗ ಪರಿಣತಮತಿ’ಗಳಾಗಿದ್ದರು, ಮತ್ತು ನವೋದಯದ ಅಂದಿನ ಸಂದರ್ಭದಲ್ಲಿ-ಕೇವಲ ಸೃಜನ ಸಾಹಿತಿಯಂತೆ ಹುತ್ತಗಟ್ಟಿ ಕುಳಿತುಕೊಳ್ಳುವ ವ್ಯವಧಾನವಿಲ್ಲದೆ-ಕನ್ನಡದ ಹಲವು ಹತ್ತು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಮುಖ್ಯವೆಂದು ಭಾವಿಸಿದ್ದರು. ಇದರಿಂದಾಗಿ, ಅನುವಾದ, ಅಳವಡಿಕೆ, ರೂಪಾಂತರ ಇತ್ಯಾದಿ ಪ್ರಯೋಗಗಳ ಮೂಲಕ ಹೊಸಗನ್ನಡ ಸಾಹಿತ್ಯದ ಹಲವು ಮೊದಲ ರೂಪಗಳನ್ನು-ಪ್ರಗಾಥ, ಭಾವಗೀತೆ, ರುದ್ರನಾಟಕ, ಸಾಹಿತ್ಯ ಚರಿತ್ರೆ, ಸಾಹಿತ್ಯ ವಿಮರ್ಶೆ-ಸಿದ್ಧಪಡಿಸುವ ಕಾಯಕದಲ್ಲಿ, ನಿಷ್ಠೆಯಿಂದ ತಮ್ಮನ್ನು ತೊಡಗಿಸಿಕೊಂಡರು.

ಆದರೂ ಅವರ ಸ್ವತಂತ್ರ ಕವಿತೆಗಳು, ನವೋದಯದ ಸಂದರ್ಭದಲ್ಲಿ ಅವರ ಇಂಗ್ಲಿಷ್ ಗೀತಗಳಷ್ಟು ಗಮನದ ಹಾಗೂ ಚರ್ಚೆಯ ವಿಷಯವಾಗದಿದ್ದರೂ, ಅವರ ಸ್ವತಂತ್ರ ಕವಿತೆಗಳ ಸಾಲಿನಲ್ಲಿರುವ ‘ಪ್ರಗಾಥ’ಗಳು ನಿಸ್ಸಂದೇಹವಾಗಿಯೂ ಕನ್ನಡಕ್ಕೆ ಒಳ್ಳೆಯ ಕೊಡುಗೆಗಳಾಗಿವೆ. ಈ ಪ್ರಗಾಥಗಳೊಳಗಿನ ರಾಜನಿಷ್ಠ ಧೋರಣೆಯನ್ನು ಇಂದು ನಾವು ಮೆಚ್ಚದಿದ್ದರೂ, ಅವುಗಳ ಬಂಧ-ಶಿಲ್ಪ-ಛಂದಸ್ಸಿನ ವೈವಿಧ್ಯ ಹಾಗೂ ಅವುಗಳಲ್ಲಿ ಮಿಡಿಯುತ್ತಿರುವ ಕನ್ನಡದ ಪ್ರೇಮ ಇವುಗಳನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಕನ್ನಡದಲ್ಲಿ ಅದುವರೆಗೂ ಇರದಿದ್ದ ಒಂದು ಹೊಸ ಕಾವ್ಯರೂಪವನ್ನೂ ಅದಕ್ಕೊಂದು ಹೊಸ ಹೆಸರನ್ನೂ ಕೊಟ್ಟು ರೂಢಿಸಿದವರು ಶ್ರೀಯವರು. ಅಷ್ಟೇ ಅಲ್ಲ, ಅವರ ಈ ಸ್ವತಂತ್ರ ಕವಿತೆಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಅವರ ಪ್ರಗಾಥಗಳಲ್ಲಿ ಕಂಡುಬರುವ ನಿಸರ್ಗ ವರ್ಣನೆಯ ಸೊಗಸು, ಕನ್ನಡದ ಸಂದರ್ಭದಲ್ಲಿ ತೀರಾ ಹೊಸತು ಮಾತ್ರವಲ್ಲ, ಮುಂದಿನ ಕವಿಗಳಿಗೂ ನಿಸರ್ಗವನ್ನು ನೋಡುವ ಬಗೆಗೆ, ಹೊಸ ಕಣ್ಣನ್ನು ತೆರೆಯುವಂಥದ್ದಾಗಿದೆ. ಶ್ರೀ ಅವರು ಕನ್ನಡದ ಕೆಲಸಕ್ಕಾಗಿ ಊರೂರನ್ನು ಸುತ್ತುವಾಗ, ಊರೂರು ಕೇರಿಗಳಲ್ಲಿ ಹಗಲೆನ್ನದೆ, ಇರುಳೆನ್ನದೆ ತಮ್ಮ ಭಾಷಣಗಳಿಂದ ಜನವನ್ನು ಬಡಿದೆಬ್ಬಿಸುವ ಸಂಚಾರದಲ್ಲಿ ತೊಡಗಿದಾಗ, ಅವರು ಕಂಡ ಕನ್ನಡ ನಾಡಿನ ಬಯಲುಗಳ, ಬೆಟ್ಟಗಳ, ಬಾನುಗಳ, ಕಾನನಗಳ, ಹೊಳೆ-ಹಳ್ಳ-ಕಡಲು-ನೀರ್ ಬೀಳಗಳ, ಜನದ ನಡೆ, ನುಡಿ, ಬಣ್ಣ ಬೆಡಗುಗಳ ಸೊಗಸು ಅವರ ನಿಸರ್ಗ ವರ್ಣನೆಗಳ ತುಂಬ ಚೇತೋಹಾರಿಯಾಗಿ ಮಡುಗಟ್ಟಿದೆ. ‘ಏನು ಚೆಲುವಿನ ನಾಡು, ಚೆಲುವು ಚೆಲ್ಲುವ ನಾಡು, ಕನ್ನಡ ನಾಡು’ ಎಂಬ ಅವರ ಹರ್ಷೋದ್ಗಾರದ ಹಿಂದೆ ಈ ಅನುಭವವೆ ತುಂಬಿಕೊಂಡಿದೆ.

ಶ್ರೀ ಅವರು ಹೊಸಗನ್ನಡ ನಾಟಕ ಪರಂಪರೆಗೆ ಸಲ್ಲಿಸಿದ ಕೊಡುಗೆ ಕೂಡಾ ಗಮನಿಸುವಂಥದು.ಕನ್ನಡದಲ್ಲಿ ನಾಟಕಗಳೇ ಇಲ್ಲದಿದ್ದ ಸಂದರ್ಭದಲ್ಲಿ ಪದ್ಯ ನಾಟಕಗಳ, ಅದರಲ್ಲಿಯೂ ಗ್ರೀಕ್ ಮಾದರಿಯ ರುದ್ರನಾಟಕಗಳ ಸಂಪ್ರದಾಯವನ್ನು ಪ್ರಾರಂಭಿಸಿದವರು ಶ್ರೀ ಅವರು. ಅವರ ಅಶ್ವತ್ಥಾಮನ್, ಗದಾಯುದ್ಧ ಮತ್ತು ಪಾರಸಿಕರು-ಈ ಮೂರೂ ಅಳವಡಿಕೆ, ರೂಪಾಂತರ, ಹಾಗೂ ಅನುವಾದಗಳ ದೃಷ್ಟಿಯಿಂದ ಅಧ್ಯಯನ ಮಾಡತಕ್ಕವರಿಗೆ ಒಳ್ಳೆಯ ಅವಕಾಶಗಳನ್ನು ಒದಗಿಸುತ್ತವೆ. ‘ಅಶ್ವತ್ಥಾಮನ್’ ನಾಟಕ ಪರಂಪರಾಗತವಾದ ವಸ್ತುವೊಂದನ್ನು, ಗ್ರೀಕ್ ನಾಟಕದ ಚೌಕಟ್ಟಿನೊಳಗೆ ಅಳವಡಿಸಿದ್ದು ಮಾತ್ರವಲ್ಲ, ಪರಂಪರಾಗತವಾದ ನಂಬಿಕೆಗಳಿಗೂ ಒಂದು ಆಘಾತ (ಚಿರಂಜೀವಿಯೆಂದು ಭಾವಿಸಲಾದ ಅಶ್ವತ್ಥಾಮನ ಆತ್ಮಹತ್ಯೆಯಿಂದ) ವನ್ನು ತಂದು ಕೋಲಾಹಲಕ್ಕೆ ಕಾರಣವಾಯಿತು.ಆದರೆ ಅವರ ‘ಗದಾಯುದ್ಧ ನಾಟಕಂ’ ಕವಿ ರನ್ನನ ಕಾವ್ಯವಾದ ಗದಾಯುದ್ಧದಿಂದ ಬಿಡಿಸಿ ಹೊರೆತೆಗೆದದ್ದಾದರೂ, ಅದು ಕನ್ನಡ ನಾಟಕಗಳ ಬೇರೊಂದು ಪರಂಪರೆಯನ್ನೇ ರೂಢಿಸಿದ ಪ್ರಯೊಗವಾಗಿದೆ. ಯಾವಾಗ ರನ್ನನ ಕಾವ್ಯದ ಶರೀರದೊಳಗೊಂದು ನಾಟಕವಿದೆ ಎಂಬುದನ್ನು ಶ್ರೀ ಅವರು ತಮ್ಮ ‘ಎಕ್ಸ-ರೇ’ ದೃಷ್ಟಿಯಿಂದ ಕಂಡುಕೊಂಡರೋ ಮತ್ತು ಅದನ್ನು ತಮ್ಮ ಕೌಶಲದಿಂದ ಬಿಡಿಸಿ ತೆಗೆದು ತೋರಿಸಿದರೋ, ಆಗ ಕನ್ನಡ ಕಾವ್ಯಗಳೊಳಗೆ ಇರುವ ನಾಟ್ಯದ ಸಾಧ್ಯತೆಯನ್ನು ಬಿಡಿಸಿ ತೆಗೆದು ರೂಪಿಸುವ ಕೆಲಸವೊಂದು ಕನ್ನಡದಲ್ಲಿ ಪ್ರಾರಂಭವಾಯಿತೆಂದು ತೋರುತ್ತದೆ. ಲಕ್ಷ್ಮೀಶನ ಜೈಮಿನಿ ಭಾರತದೊಳಗಿನ ಸೀತಾ ಪರಿತ್ಯಾಗ ಪ್ರಸಂಗವನ್ನು, ಕುವೆಂಪು ಅವರು ‘ವಾಲ್ಮೀಕಿಯ ಭಾಗ್ಯ’ವೆಂಬ ನಾಟಕವನ್ನಾಗಿ ಬಿಡಿಸಿದರು; ರಾಘವಾಂಕನ ಹರಿಶ್ಚಂದ್ರ ಕಾವ್ಯವನ್ನು ನಾಟಕಕ್ಕೆ, ನನಗೆ ತಿಳಿದಂತೆ ಹಲವರು ಅಳವಡಿಸಿದ್ದಾರೆ-ಅವುಗಳಲ್ಲಿ ಮುಖ್ಯವಾದುವು ಎಸ್.ವಿ. ರಂಗಣ್ಣನವರ ಹರಿಶ್ಚಂದ್ರ ರೂಪಕ, ಮತ್ತು ಪು.ತಿ.ನ. ಅವರ ಸತ್ಯಾಯನ ಹರಿಶ್ಚಂದ್ರ. ಜನ್ನನ ಯಶೋಧರ ಚರಿತೆಯಿಂದ, ಗಿರೀಶ ಕಾರ್ನಾಡರು ‘ಹಿಟ್ಟಿನ ಹುಂಜ’ ಎಂಬ ನಾಟಕವನ್ನು ರಚಿಸಿದ್ದಾರೆ; ಪಂಪನ ಭರತಬಾಹುಬಲಿ ಪ್ರಸಂಗ ‘ಪರಿವರ್ತನ’ ಎಂಬ (ನಾದಸೇತು ಮತ್ತು ಇತರ ನಾಟಕಗಳು) ರೂಪಕವಾಗಿ ಆಕಾರಗೊಂಡಿದೆ; ನಾಗಚಂದ್ರನ ‘ಪಂಪರಾಮಾಯಣ’ದಲ್ಲಿನ  ‘ಉಪರಂಭೆಯ ಪ್ರಸಂಗ’ ಒಂದು ಬಿಡಿನಾಟಕವಾಗಿ ಬಂದಿದೆ ಎಂದು ನನಗೆ ನೆನಪು. ಕನ್ನಡದಲ್ಲಿ ನಾಟಕಗಳೇ ಇಲ್ಲ ಎಂದು ಸುಮ್ಮನೆ ಹೇಳಲಾಗುತ್ತಿರುವ ಸಾಹಿತ್ಯ ಪರಂಪರೆಯಲ್ಲಿ ಹಿಂದಿನ ಕನ್ನಡ ಕಾವ್ಯಗಳ ಒಳಗೇ ನಾಟಕ ಅಥವಾ ನಾಟ್ಯಸಾಧ್ಯತೆ ಆಡಗಿದೆಯೆಂಬುದನ್ನು ತೋರಿಸಿದವರು, ಮತ್ತು ಆ ಬಗೆಯ ಪ್ರಯೋಗಗಳಿಗೆ ನಿರ್ದೇಶನ ನೀಡಿದವರು ಶ್ರೀ ಅವರು. ಶ್ರೀ ಅವರ ಎಲ್ಲ ನಾಟಕಗಳೂ ರುದ್ರನಾಟಕಗಳೇ, ಟ್ರ್ಯಾಜಿಡಿಗಳೇ. ಶ್ರೀ ಅವರ ವೈಯಕ್ತಿಕ ಜೀವನವೇ ಒಂದು ‘ರುದ್ರನಾಟಕ’ ದಂತೆ ಇದ್ದದ್ದು, ಈ ಬಗೆಯ ನಾಟಕಗಳ ಬಗೆಗೆ ಅವರಿಗಿದ್ದ ಒಲವಿಗೆ ಒಂದು ಪ್ರತೀಕವಾಗಿದೆ.

ಈ ನಾಟಕಗಳ ಭಾಷೆಯನ್ನು ಕುರಿತು ಒಂದು ಮಾತು: ಶ್ರೀ ಅವರು ತಮ್ಮ ನಾಟಕಗಳಿಗೆ ಬಳಸಿದ್ದು ಹಳಗನ್ನಡವನ್ನು  (ಗದಾಯುದ್ಧ ನಾಟಕದ ಭಾಷೆ ರನ್ನನದೇ). ಹಳಗನ್ನಡ ಅದುವರೆಗೂ ಕನ್ನಡ ಓದುಗರಿಗೆ ಪರಿಚಯವಾದದ್ದು ಮಾರ್ಗಕಾವ್ಯಗಳ ಭಾಷೆಯಾಗಿ. ಆದರೆ ಅದೇ ಭಾಷೆಯನ್ನು ಶ್ರೀ ಅವರು ನಾಟಕಗಳಿಗೆ ಬಳಸಿದಾಗ, ಬಹುಶಃ ಅವರ ಉದ್ದೇಶ, ಗಂಭೀರವಾದ ಗ್ರೀಕ್ ಮಾದರಿಯ ನಾಟಕಗಳಿಗೆ ಒಂದು ಬಗೆಯ ಗಂಭೀರವಾದ ಭಾಷೆಯನ್ನು ಹಳಗನ್ನಡ ರೂಪಿಸಿಬಹುದೇ ಹೇಗೆ ಎಂಬುದನ್ನು ಪರೀಕ್ಷಿಸುವುದು ಒಂದು; ಮತ್ತೊಂದು, ಹಳಗನ್ನಡವನ್ನು ನಾಟ್ಯಭಾಷೆಯನ್ನಾಗಿ ಮಾಡುವುದರ ಮೂಲಕ ಅದರ ಸಂವಹನದ ಸಾಧ್ಯತೆಗಳನ್ನು ವಿಸ್ತರಿಸಬಹುದೆಂಬ ಕುತೂಹಲ. ಈ ಎರಡೂ ಉದ್ದೇಶಗಳೂ ಶ್ರೀಯವರ ಈ ಪ್ರಯೋಗದಲ್ಲಿ ಈಡೇರಿವೆ. ಈ ನಾಟಕಗಳ ಪ್ರಯೋಗ ಒಂದರ್ಥದಲ್ಲಿ ‘ಪಂಡಿತರ ಸವಾಲು’ಗಳಂತೆ ತೋರಿದರೂ, ಯಾವುದೇ ಹವ್ಯಾಸಿ ರಂಗಭೂಮಿಯವರೂ ಈ ನಾಟಕದ ಭಾಷೆಯ ಕಾರಣದಿಂದ ಅವುಗಳನ್ನು ಪ್ರಯೋಗಿಸಿ ತೋರಿಸಲು ಹಿಂಜರಿದರೂ, ಈ ನಾಟಕಗಳನ್ನು ರಂಗಪ್ರಯೋಗಕ್ಕೆ ಅಳವಡಿಸಿದಾಗ, ತಕ್ಕಷ್ಟು ಪೂರ್ವಸಿದ್ಧತೆ ಹಾಗೂ ಎಚ್ಚರಿಕೆಯಿಂದ ಮಾತುಗಳನ್ನು ಉಚ್ಚರಿಸಿದಾಗ,ರನ್ನನ ‘ಗದಾಯುದ್ಧ’ದ ಭಾಷೆ ಕಾವ್ಯದ ಸಂದರ್ಭದಲ್ಲಿ ಪಡೆದುಕೊಳ್ಳಲಾಗದಿದ್ದ ಸಂವಹನವನ್ನು, ನಾಟಕಪ್ರಯೋಗದ ಸಂದರ್ಭದಲ್ಲಿ ‘ಸಾಹಿತ್ಯೇತರ ವಿದ್ಯಾರ್ಥಿ’ಗಳಾದ ಪ್ರೇಕ್ಷಕರಲ್ಲಿಯೂ ಪಡೆದುಕೊಂಡದ್ದು ನನಗೆ ನೆನಪಿದೆ. ಆದರೆ ಶ್ರೀ ಅವರ ನಾಟಕಗಳು, ಒಂದು ಪರಂಪರೆಯಾಗಿ ಮುಂದುವರಿಯಲಿಲ್ಲ ಎಂಬುದು ನಿಜ.

ಕನ್ನಡಕ್ಕೆ ಶ್ರೀ ಅವರಿಂದ ಬಂದ ಪಾಶ್ಚಾತ್ಯ ರುದ್ರನಾಟಕಗಳ ಹಿನ್ನೆಲೆಯಿಂದ ಹೇಳಬಹುದಾದ ಮತ್ತೊಂದು ಮಾತೆಂದರೆ, ಶ್ರೀ ಅವರ ಸಾಹಿತ್ಯ ವಿಮರ್ಶೆ, ಕನ್ನಡ ಕಾವ್ಯಗಳಲ್ಲಿ ದುರಂತ ವಸ್ತುವಿನ್ಯಾಸ ಹಾಗೂ ದುರಂತ ಪಾತ್ರ ಇತ್ಯಾದಿಗಳನ್ನು ಗುರುತಿಸಿ, ಚರ್ಚಿಸುವ ಕ್ರಮವೊಂದನ್ನು ಹಾಕಿಕೊಟ್ಟಿತೆಂಬುದು. ಶ್ರೀ ಅವರ ನಿಲುವು ಒಂದೊಂದು ಸಲ, ಪ್ರಾಚೀನ ಕನ್ನಡ ಕಾವ್ಯಪರಂಪರೆಯ ನಿರಾಕರಣೆಯೆಂಬ ಭ್ರಮೆಯನ್ನು ಹುಟ್ಟಿಸುವಂತೆ ತೋರಿದರೂ, ಪ್ರಾಚೀನ ಸಾಹಿತ್ಯ ಸಂಪ್ರದಾಯದ ಚರ್ವಿತ ಚರ್ವಣ ಲಕ್ಷಣಗಳನ್ನೂ, ಅದರ ಅನುಸರಣದಿಂದಾಗಲೀ, ಅನುಕರಣದಿಂದಾಗಲೀ ಆಗುವ ಅಪಾಯಗಳನ್ನು ವಿರೋಧಿಸುವಂಥದೇ ಹೊರತು, ಕಾವ್ಯಪರಂಪರೆಯ ಉತ್ತಮಾಂಶಗಳಿಗೆ ಹಾಗೂ ಅದರಿಂದ ನಾವು ಪಡೆಯಬಹುದಾದ ಪುಷ್ಟಿಗೆ ಖಂಡಿತ ವಿಮುಖವಾದದ್ದಲ್ಲ ಎಂಬುದನ್ನು, ಎಚ್ಚರದಿಂದ ಅವರ ಬರಹಗಳನ್ನು ಓದುವ ಯಾರೇ ಆಗಲಿ ಕಂಡುಕೊಳ್ಳಬಹುದು. ಈ ದೃಷ್ಟಿಯಿಂದ ನೋಡಿದರೆ ಶ್ರೀ ಅವರ ಸಾಹಿತ್ಯ ವಿಮರ್ಶೆ ಮುಖ್ಯವಾಗಿ ಪ್ರಾಚೀನ ಸಾಹಿತ್ಯ ಪರಂಪರೆಯನ್ನು ವರ್ತಮಾನದವರಿಗೆ ಪರಿಚಯ ಮಾಡಿಕೊಡುವ ವರ್ಣನಾತ್ಮಕ ವಿಧಾನದ್ದಾಗಿದ್ದರೂ ನಮ್ಮ ಪ್ರಾಚೀನ ಸಾಹಿತ್ಯವನ್ನು  ಪಾಶ್ಚಿಮಾತ್ಯ ಸಾಹಿತ್ಯ ತತ್ವಗಳ ಹಿನ್ನೆಲೆಯಿಂದಲೂ ನೋಡುವುದು ಲಾಭದಾಯಕ ಎಂಬುದನ್ನು ತೋರಿಸಿತು. ಹೀಗಾಗಿ ದುರಂತ ವಸ್ತುವಿನ್ಯಾಸ, ಹಾಗೂ ದುರಂತ ಪಾತ್ರಕಲ್ಪನೆಗಳ ದೃಷ್ಟಿಯಿಂದ ಪಂಪ-ರನ್ನರ ದುರ್ಯೋಧನ, ಪಂಪನ ಕರ್ಣ ಹಾಗೂ ನಾಗಚಂದ್ರನ ರಾವಣ ಇಂಥ ಪಾತ್ರಗಳನ್ನು ತೌಲನಿಕವಾಗಿ ನೋಡುವ ಕ್ರಮಗಳನ್ನು ಅವರ ವಿಮರ್ಶೆಯ ಬರಹಗಳು ಸೂಚಿಸುತ್ತವೆ. ಕುವೆಂಪು ಅವರು ಬರೆದ ‘ಕುಮಾರವ್ಯಾಸನ ದುರಂತ ಕರ್ಣ’, ತೀ.ನಂ.ಶ್ರೀ ಅವರು ಬರೆದ ‘ಕಾಳಿದಾಸನ ನಾಟಕಗಳಲ್ಲಿ ದುರಂತ ವಸ್ತುವಿನ್ಯಾಸ’ ಎಂಬ ಲೇಖನಗಳೂ, ‘ಪಂಪ ರಾಮಾಯಣ ಸಂಗ್ರಹ’ಕ್ಕೆ ಡಿ.ಎಲ್. ನರಸಿಂಹಚಾರ್ಯರು ಬರೆದ ವಿಮರ್ಶಾತ್ಮಕ ಪ್ರಸ್ತಾವನೆಯ ಧೋರಣೆಗಳೂ, ಬಿ.ಎಂ.ಶ್ರೀ ಅವರ ವಿಮರ್ಶೆಯ ಪರಿಣಾಮಗಳಾಗಿವೆ ಎಂದು ನಾನು ತಿಳಿದಿದ್ದೇನೆ. ಶ್ರೀ ಅವರ ‘ಕನ್ನಡ ಕೈಪಿಡಿ’ಯಲ್ಲಿ ಸಾಹಿತ್ಯ ಚರಿತ್ರೆಯ ಬರೆಹವಾಗಲೀ, ಹಿಂದಿನ ಕವಿಕೃತಿಗಳ ಸಂಗ್ರಹಗಳನ್ನು ಸಿದ್ದಪಡಿಸುವ ಕಾರ್ಯಗಳಾಗಲಿ (ಇದಂತೂ ಒಂದು ಪರಂಪರೆಯೇ ಆಗಿದೆ), ವರ್ತಮಾನಕ್ಕೆ ಪರಂಪರೆಯೊಂದಿಗಿರುವ ಸಂಬಂಧವನ್ನು ಗಾಢವಾಗಿ ಸ್ಥಾಪಿಸುವ ಜವಾಬ್ದಾರಿಯನ್ನು ಪ್ರಕಟಿಸುತ್ತವೆ. ಕೇವಲ ತಮ್ಮ ಪರಿಸರದ್ದಲ್ಲ, ಜಗತ್ತಿನ ಬೇರೆ ದೇಶದ, ಬೇರೆ ಭಾಷೆಯ ಸಾಹಿತ್ಯದಲ್ಲಿ ಸತ್ವಯುತವಾದದ್ದು ಏನುಂಟೋ ಅದೆಲ್ಲದರಿಂದಲೂ ಕನ್ನಡಿಗನಾದವನು ತನ್ನ ಪುಷ್ಟಿಯನ್ನು ಗಳಿಸಿಕೊಳ್ಳಬೇಕೆಂಬ ನಿಲುವನ್ನು ಶ್ರೀ ಅವರು ಉದ್ದಕ್ಕೂ ಎತ್ತಿ ಹಿಡಿದರು. ಇದಕ್ಕೆ ಮಾರ್ಗವೆಂದರೆ ತೌಲನಿಕ ಅಧ್ಯಯನ. ಜಗತ್ತಿನ ಹಲವಾರು ಸಾಹಿತ್ಯಗಳ ಅಧ್ಯಯನದಿಂದ ಒದಗುವ ತಿಳಿವು, ಮೂಡುವ ದೃಷ್ಟಿ ಎಂಥದೆಂಬುದನ್ನು ಸ್ವಾನುಭವದಿಂದ ಕಂಡುಕೊಂಡ ಶ್ರೀಕಂಠಯ್ಯನವರು, ‘ಅವಳ ತೊಡಿಗೆ ಇವಳಿಗಿಟ್ಟು’ ಹಾಡ ಬಯಸಿದ್ದು ಆಶ್ಚರ್ಯವೇನಲ್ಲ. ಶ್ರೀಯವರು ತೆರೆದ ನವೋದಯ, ಇಂಥ   ತೌಲನಿಕ ಅಧ್ಯಯನಗಳ ಪರಿಣಾಮವಾಗಿದೆ. ತೌಲನಿಕ ಅಧ್ಯಯನದ ಬಗ್ಗೆ ಅವರಿಗಿದ್ದ ಆಲೋಚನೆಗಳು ‘ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ’ ಎಂಬ ಬರೆಹದ ಉದ್ದಕ್ಕೂ ಹರಹಿಕೊಂಡಿವೆ. ಕನ್ನಡದಲ್ಲಿ ತೌಲನಿಕ ಅಧ್ಯಯನ ಬೀಜಗಳನ್ನು ಮೊದಲು ಬಿತ್ತಿದವರು ಬಿ.ಎಂ.ಶ್ರೀ ಅವರೇ.

ಜಗತ್ತಿನ ಹಲವಾರು ಭಾಷೆ ಹಾಗೂ ಸಾಹಿತ್ಯಗಳ ಮೇಲಿನ ಅಭಿಮಾನದಿಂದ ಶ್ರೀ ಅವರು ಕನ್ನಡದ ಮೇಲಿನ ತಮ್ಮ ಪ್ರೀತಿಯನ್ನು ಎಂದೂ ಕಡಿಮೆ ಮಾಡಿಕೊಳ್ಳಲಿಲ್ಲ. ಕನ್ನಡದ ಪುನರುಜ್ಜೀವನ ಎನ್ನುವುದು ಅನ್ಯ ಭಾಷೆಗಳ ಅನುಕರಣದಿಂದಾಗಲಿ, ಅನುಸರಣದಿಂದಾಗಲಿ, ಖಂಡಿತ ಆಗುವಂಥದಲ್ಲ; ಅದು ಕನ್ನಡದಿಂದಲೇ ಸಾಧ್ಯ ಮತ್ತು ನಮ್ಮ ದೃಷ್ಟಿಯನ್ನು ಜಗತ್ತಿನ ಇತರ ಸಾಹಿತ್ಯಗಳ  ತಿಳಿವಿನಿಂದ ವಿಶಾಲವನ್ನಾಗಿ ಮಾಡಿಕೊಳ್ಳುವುದರಿಂದ ಸಾಧ್ಯ ಎಂದು ನಂಬಿದವರು ಅವರು. ಆದ್ದರಿಂದ ಅವರು ಕೇಳಿಕೊಂಡ ಮೊದಲ ಪ್ರಶ್ನೆ ಎಂದರೆ, “ನಮ್ಮ ಪುನರುಜ್ಜೀವನಕ್ಕೆ ಯಾವ ಭಾಷೆ ಮಹತ್ವ ಉಳ್ಳದ್ದು?” ಎನ್ನುವುದು. ಅದಕ್ಕೆ ಉತ್ತರ, “ಇದು ಕಷ್ಟಪಟ್ಟು ನಮ್ಮ ಬುದ್ಧಿಶಕ್ತಿಯನ್ನೆಲ್ಲಾ ವೆಚ್ಚಮಾಡಿ ಕಲಿಯುವ ಭಾಷೆಯಿಂದ ನೆರವೇರುವುದಿಲ್ಲ; ಯಾವುದು ಸರಾಗವಾಗಿ ನಮ್ಮನ್ನು ಒಲಿದುಬಂದಿರುತ್ತದೆಯೋ, ಯಾವುದು ನಮ್ಮನ್ನು ಬೆನ್ನಟ್ಟಿ ಬಂದು ರಕ್ತಗತವಾಗಿರುತ್ತದೆಯೋ ಅಂಥ ಭಾಷೆಯಿಂದ ಮಾತ್ರ ಸಾಧ್ಯ” (ಶ್ರೀ ಸಾಹಿತ್ಯ. ಪು. ೨೯೧). ಅಂಥ ಭಾಷೆ, ಕನ್ನಡಿಗರಿಗೆ, ಕನ್ನಡ ಎಂದು ಬೇರೆ ಹೇಳಬೇಕಾಗಿಲ್ಲ. ನವೋದಯದ ಆರಂಭ ಕಾಲದಲ್ಲಿ ಈ ಕನ್ನಡ ತೀರಾ ಶೋಚನೀಯ ಸ್ಥಿತಿಯಲ್ಲಿತ್ತು. ಕನ್ನಡ ನಾಡು ಹರಿದುಹಂಚಿಹೋಗಿ, ಕನ್ನಡಿಗರಲ್ಲಿ ಅಭಿಮಾನಶೂನ್ಯತೆಯೂ, ಅನ್ಯಭಾಷೆಗಳ ಪ್ರಾಬಲ್ಯವೂ ಹೆಚ್ಚಾಗಿತ್ತು. ಕನ್ನಡ ಸಾಹಿತ್ಯವಂತೂ ತನ್ನ ಚಲನಶೀಲತೆಯನ್ನು ಕಳೆದುಕೊಂಡು ಸ್ತಬ್ಧವಾಗಿತ್ತು. ಕನ್ನಡಿಗರನ್ನು ಕವಿದಿದ್ದ ದುಃಸ್ಥಿತಿಯನ್ನು, ಕನ್ನಡಿಗರಿಗೆ ಆವರಿಸಿದ ಜಡತೆಯನ್ನು ಕಂಡು, ‘ಕನ್ನಡ ಮಾತು ತಲೆ ಎತ್ತುವ ಬಗೆ’ ಯಾವುದು ಎಂದು ಮೊದಲಿನಿಂದಲೂ ಅವರು ಯೋಚಿಸುತ್ತಿದ್ದರು. ಈ ಸಂಬಂಧದ ಅವರ ತಳಮಳಗಳು, ಮುಂದೆ ಅವರು ಬರೆದ ‘ಕನ್ನಡ ತಾಯನೋಟ’ ಎಂಬ ಕವಿತೆಯಲ್ಲಿ ಅತ್ಯಂತ ನಾಟ್ಯಮಯವಾಗಿ ಅಭಿವ್ಯಕ್ತಗೊಂಡಿವೆ. ಈ ಕವಿತೆಯಲ್ಲಿ ಶ್ರೀ ಅವರು ಕನ್ನಡ ತಾಯನ್ನು ಕಂಡು ಮಾತನಾಡುವುದು ಹಾಳು ಹಂಪೆಯ ಪರಿಸರದಲ್ಲಿ, ಎನ್ನುವುದು ಅತ್ಯಂತ ಅರ್ಥಪೂರ್ಣವಾಗಿದೆ. ಒಂದು ಕಾಲಕ್ಕೆ ಜಗದ್ವಿಖ್ಯಾತವಾದ ಸಾಮ್ರಾಜ್ಯದ ರಾಜಧಾನಿಯಾಗಿದ್ದ ವಿಜಯನಗರ, ಈಗ ಹಾಳು ಹಂಪೆಯಾಗಿ ಕರುಳಿರಿಯುವಂತೆಯೆ, ಕಾವೇರಿಯಿಂದ ಗೋದಾವರಿಯವರೆಗೆ ಹರಹಿಕೊಂಡು ಉಜ್ವಲವಾದ ಸ್ಥಿತಿಯಲ್ಲಿದ್ದ ಕನ್ನಡ ನಾಡು ಈಗ ಹರಿದು ಹಂಚಿಹೋಗಿ ಎಂಥ ದುಃಸ್ಥಿತಿಗೆ ಬಂದಿದೆ ಎನ್ನುವುದನ್ನು ಈ ಕವಿತೆಯಲ್ಲಿ ಚಿತ್ರಿಸಿರುವುದರ ಜತೆಗೆ, ಈ ಜನದ ಎಚ್ಚರ,ಅಭಿಮಾನ ಹಾಗೂ ಶ್ರದ್ಧೆಗಳಿಂದ ಈ ಕನ್ನಡದ ‘ಹಳೆಯ ಮುತ್ತೈದೆ’ ಭುವನೇಶ್ವರಿಯಾಗಿ ರಥವನ್ನೇರಿ ಮುನ್ನಿನ ವೈಭವದಿಂದ ರಾರಾಜಿಸುವಳೆಂಬ ಕಣಸನ್ನು ಶ್ರೀ ಅವರು ಕಂಡಿದ್ದಾರೆ. ಶ್ರೀ ಅವರು ಕನ್ನಡದ ಹೋರಾಟಗಾರರು ಮಾತ್ರವಲ್ಲ, ಕನಸುಗಾರರು ಕೂಡಾ ಆಗಿದ್ದರೆಂಬುದನ್ನು ಈ ಕವಿತೆಯೂ ಅವರ ಇನ್ನಿತರ ಬರೆಹಗಳೂ ಸಮರ್ಥಿಸುತ್ತವೆ. ಕನ್ನಡನಾಡಿನಲ್ಲಿ ಕನ್ನಡದ ಸ್ಥಾನಮಾನದ ಸ್ವರೂಪವನ್ನು ಕುರಿತು ಅರ್ಧ ಶತಮಾನಕ್ಕೂ ಹಿಂದೆ ಅವರು ನಡೆಯಿಸಿದ ಚಿಂತನೆಗಳು, ಇಂದಿಗೂ ಅತ್ಯಂತ ಸುಸಂಗತವಾಗಿವೆ. ಶ್ರೀ ಅವರನ್ನು ಕುರಿತು ಬೇರೆ ಬೇರೆಯ ವಿಷಯಗಳಲ್ಲಿ ಹಲವಾರು ಆಕ್ಷೇಪಣೆಗಳಿದ್ದರೂ, ಅವರ ಕನ್ನಡ ಪ್ರೇಮವನ್ನು ಕುರಿತು ಯಾರೂ ಸಂದೇಹಪಡುವಂತಿಲ್ಲ.

ಆದರೆ ಅವರ ಕನ್ನಡ ನಾಡಿನ ಮೇಲಣ ಪ್ರೇಮ, ಕೇವಲ ಅಂದಿನ ಮಾದರಿ ಮೈಸೂರಿನ ಆಳರಸರ ಮೇಲಿನ ಅಭಿಮಾನದ ಜತೆಗೆ ಬೆರೆತುಕೊಂಡಿದ್ದರಿಂದ, ಅವರ ಕಾವ್ಯಜೀವನಕ್ಕೆ ಆದ ನಷ್ಟ ಬಹು ದೊಡ್ಡದು.ಭಾರತೀಯ ನವೋದಯದ ಪ್ರಮುಖವಾದ ಧಾರೆ ಎಂದರೆ ರಾಷ್ಟ್ರೀಯತೆ ಮತ್ತು ಆ ಮೂಲಕ ಎಚ್ಚರಗೊಂಡ ಸಾಮಾಜಿಕ ನಿಲುವುಗಳು. ಶ್ರೀ ಅವರಲ್ಲಿ ಕಂಡುಬರುವ ಸಾಮಾಜಿಕ-ಧಾರ್ಮಿಕ ಉದಾರವಾದ, ಇಂಗ್ಲಿಷ್ ಶಿಕ್ಷಣದ ಪರಿಣಾವೇ ಹೊರತು, ಅದು ರಾಷ್ಟ್ರಾದ್ಯಂತ ವ್ಯಾಪಿಸಿದ ರಾಷ್ಟ್ರೀಯತೆಯ ಪರಿಣಾಮದಿಂದ ರೂಪುಗೊಂಡದ್ದಲ್ಲ. ಅವರ ಸಮನಕಾಲೀನರಾದ ಪಂಜೆ, ಗೋವಿಂದ ಪೈ, ಬೇಂದ್ರೆ, ಕುವೆಂಪು, ಇಂಥ ಕವಿಗಳಲ್ಲಿ ಉಜ್ವಲವಾಗಿ ಹಾಗೂ ಧೈರ್ಯವಾಗಿ ರಾಷ್ಟ್ರೀಯ ಭಾವನೆಗಳು ಮುಖ್ಯವಾಗಿ ಭಾರತೀಯ ಸ್ವಾತಂತ್ರ್ಯ ಸಂಪಾದನೆ, ಮತ್ತು ಚಳವಳಿಗಳನ್ನು ಕುರಿತು, ಆ ಚಳುವಳಿಯಲ್ಲಿ  ತೊಡಗಿದ ಮಹಾನಾಯಕರ ವ್ಯಕ್ತಿತ್ವವನ್ನು ಕುರಿತು ಅಭಿವ್ಯಕ್ತವಾದಂತೆ, ಶ್ರೀಯವರಲ್ಲಿ ಅಭಿವ್ಯಕ್ತಗೊಳ್ಳಲಿಲ್ಲ ಅನ್ನುವುದು ತೀರಾ ವಿಲಕ್ಷಣವಾಗಿ ತೋರುತ್ತದೆ. ಹೀಗಾಗಿ ಶ್ರೀ ಅವರ ನವೋದಯ, ನಿಜವಾದ ಅರ್ಥದಲ್ಲಿ ಪಡೆದುಕೊಳ್ಳಬಹುದಾಗಿದ್ದ ಆಯಾಮವನ್ನು ಪಡೆದುಕೊಳ್ಳಲಿಲ್ಲ. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಕಾವಿನಲ್ಲೂ ಶ್ರೀ ಅವರು ಇಷ್ಟೊಂದು ತಣ್ಣಗಿರಬೇಕಾದ ಅಗತ್ಯವಿರಲಿಲ್ಲ. ಒಂದು ವೇಳೆ ಅವರ ಸಾಹಿತ್ಯ ಹಾಗೂ ವ್ಯಕ್ತಿತ್ವ ಭಾರತೀಯ ನವೋದಯದ ಮುಖ್ಯಧಾರೆಯಾದ ರಾಷ್ಟ್ರೀಯತೆಯನ್ನೂ ಒಳಗೊಂಡಿದ್ದರೆ, ಅವರ ಸಾಹಿತ್ಯಕ್ಕೆ ಪ್ರಾಪ್ತವಾಗಬಹುದಾಗಿದ್ದ ತೂಕ ಬೇರೆಯೇ ಆಗಬಹುದಾಗಿತ್ತು ಎಂದು ಭಾವಿಸುವುದು ಅನಿವಾರ್ಯವಾಗಿದೆ. ಆದರೂ, ಶ್ರೀಯವರ ವ್ಯಕ್ತಿತ್ವ ಹಾಗೂ ಸಾಹಿತ್ಯಕ ಸಾಧನೆಗಳ ತೂಕ ಇದರಿಂದ ಕಡಿಮೆಯೇನೂ ಆಗುವುದಿಲ್ಲ. ಕನ್ನಡಕ್ಕಾಗಿ ಅವರೇನು ಮಾಡಿದ್ದಾರೆ, ಅದರ ಪರಿಣಾಮ ತುಂಬ ಗಾಢವಾದದ್ದಾಗಿದೆ; ಪ್ರಾತಃಸ್ಮರಣೀಯವಾಗಿದೆ. ಶ್ರೀ ಅವರು “ಕನ್ನಡ ನವೋದಯಕ್ಕೆ ನಾಂದೀಸ್ವರೂಪರಾದವರು” ಎಂದು ಅವರ ಶಿಷ್ಯರಾದ ಶ್ರೀ ಕುವೆಂಪು ಅವರು ಹೇಳಿದ ಮಾತು ತುಂಬ ಅರ್ಥಪೂರ್ಣವಾಗಿದೆ.

ಬೆಡಗು-೧೯೮೯