ಲಿಂಗಯ್ಯ ಅರಡಿಗೆ ಮಂಗಯ್ಯ ದೀವಟಿಗೆ ರಗುರಾಮ
ಗಂಗಾಧರಂಬೋ ತಾಯಿ ಚಾವುಂಡಿಕಿ ಐಕೊಂಡು ರಗುರಾಮ
ರಂಬಿ ಜವಕ ತಾಯಿ ನಡೆದಾಳ ರಗುರಾಮ || ೧

ಹಸುರೊಂದು ತೊಟ್ಟವಳೆ ಹಸುರೊಂದು ಉಟ್ಟವಳೆ ರಗುರಾಮ
ಹಗಲ ಜೋಗಾಡು ತಾಯಿ ನಡೆದಾಳು ರಗುರಾಮ    ೨

ಬಿಳಿದೊಂದು ಉಟ್ಟವಳೆ ಬಿಳಿದೊಂದು ತೊಟ್ಟವಳೆ ರಗುರಾಮ
ಇರುಳ ಜೋಗಾಡು ತಾಯಿ ನಡೆದಾಳ ರಗುರಾಮ    ೩

ನಾಲ್ಕನೆ ಬಜಾರು ತಿರುಗಾಡಿ ಬರುವಾಗ ರಗುರಾಮ
ಬಜಾರ ಮಂದಿ ಏನನ್ನುತ್ತಾರೆ ರಗುರಾಮ ?            ೪

ಬಂಜಿ ಹೊಂಟಾಳ ಈ ಬಯಲಾಗ ರಗುರಾಮ
ಬಂಜೆಯು ಹೊಂಟಾಳ ಈ ದರಿಯೊಳಗೆ ರಗುರಾಮ
ಬಂಜೆಯ ನೆರಳ ಬೀಳು ಬಾರ‍್ದಂತಾರೆ ರಗುರಾಮ     ೫

 

ವಚನ : ಒಬ್ಬ : ಆದಿಯ ಮಾತಂಗಿ ಜೋಗುಳ ಬಾವಿ ಸತ್ತೆಮ್ಮ ಕೇಳಿದಿರೇನ?

ಇನ್ನೊಬ್ಬ: ಅದೇನಕ್ಕ?

ಒಬ್ಬ : ಅವ್ವ ಏಳಗುಡ್ಡದಲ್ಲಿರುವ ಎಲ್ಲಮ್ಮ ಹೊಂಟಿದಾಳೆ. ಆಕೆ ಕುಟ್ಟುವವರ ಮನೆಗೆ ಕುಟ್ಟಲಿಕ್ಕೆ ಬಂದರೂ ಬಂಜೆ ಬಂದಳೆಂದು ಗಾಬರಿಯಾಗ್ತಾರ. ಮತ್ತೆ ಬೀಸುವವರ ಮನೆಗೆ ಬೀಸಲಿಕ್ಕೆ ಬಂದರೂ ಹಾಂಗನ್ನತಾರ.

ಕುಟ್ಟುವವರ ಮನೆಗೆ ಕುಟ್ಟೋಳು ಹೋದರೆ ರಗುರಾಮ
ಬಂಜೆಯ ನೆರಳು ಬೀಳಬಾರ್ದಂತಾರ ರಗುರಾಮ
ಬಂಜೆ ಹೊಂಟಾಳ ಬಾಗಿಲ ಮುಚ್ಚರೆ ರಗುರಾಮ
ಗೊಡ್ಡಿ ಹೊಂಟವಳೆ ಬಾಗಿಲ ಮುಚ್ಚಾರೇ ರಗುರಾಮ
ಗೊಡ್ಡಿಯ ನೆರಳು ಬೀಳಬಾರ್ದಂತಾರ ರಗುರಾಮ

ಓರಿಗೆ ಬೆಳೆದರೆ ನೀರಿಗೆ ಹೋದಲ್ಲಿ ರಗುರಾಮ
ಬಂಜೆ ಹೊಂಟಾಳ ಈ ಬಯಲೊಳಗೆ ರಗುರಾಮ
ಗೊಡ್ಡಿ ಹೊಂಟಾಳ ನೀವು ಹಾದಿ ಬಿಡದು ರಗುರಾಮ
ಬಂಜೆಯ ನೆರಳು ಮೈಮೇಲೆ ಬೀಳ ಬಾರ್ದೇ ರಗುರಾಮ

ಬಂಜೆಯೆಂಬ ಶಬ್ದ ಕೇಳಲ್ಲೇ ಎಲ್ಲಮ್ಮಾ ರಗುರಾಮ
ದುಃಖ ಮಾಡುತಾ ಕುಂತಳೆಲ್ಲಮ್ಮಾ ರಾಮರಾಮ
ದುಃಖವ ಮಾಡುತ್ತಾ ಕುಂತಾಳೆ ಎಲ್ಲಮ್ಮಾ ರಾಮರಾಮ

ಚಿಂತೆ ಮಾಡುತ್ತೈ ಎದ್ದಾಳೆಲ್ಲಮ್ಮಾ ರಾಮರಾಮ
ಚಿಂತೇನ ಮಾಡುತ್ತಾ ಎದ್ದಾಳೆ ನಡೆದಾಳೆಲ್ಲಮ್ಮಾ ರಾಮರಾಮ
ತನಮನೆಗೆ ತಾನು ಬಂದಾಳೆಲ್ಲಮ್ಮಾ ರಾಮರಾಮ

ಮಾಡಿದ್ದು ಮಟ್ಟಿದ್ದು ಮಡದೊಳಗೆ ಇಟ್ಟವಳೇ ರಗುರಾಮ
ತಂದೆ ಬಳಿಗೆ ತಾ ನಡದಾಳೆ ರಗುರಾಮ
ತಂದೆಯ ಬಳಿಗೆ ನಡದಾಳೆ ಎಲ್ಲಮ್ಮಾ ರಗುರಾಮ
ಹಾಲ್ನ ಸರೋರ ದಾಟಿ ನಡದಾಳ ರಗುರಾಮ
ಕೀರಸಮುದ್ರ ದಾಟ್ಯಾಳೆಲ್ಲಮ್ಮಾ ರಗುರಾಮ
ಕೀರ ಸಮುದ್ರಾನ ದಾಟುತ್ತ ನಡದಾಳ ರಗುರಾಮ
ಸಪ್ತ ಸಮುದ್ರ ದಾಟ್ಯಾಳೆಲ್ಲಮ್ಮಾ ರಗುರಾಮ ೧೦

ಅರಣ್ಯ ಎಲ್ಲಮ್ಮಾ ಯಾರದು ಜೋಡಿಲ್ಲ ರಗುರಾಮ
ಸೂರ್ಯ ಚಂದ್ರರ ಏ ಶಿವ ಜೋಡ ರಗುರಾಮ
ಶಿವನ ಮಗಳು ಶೀಲವಂತೆ ಎಲ್ಲಮ್ಮಾ ರಗುರಾಮ
ಶಿವನ ಬಾಗಲಿಗೆ ಹೋಗಿ ನಿಂತವಳೆ ರಗುರಾಮ
ಆವಾಗ ಶಿವರಾಯ ತಾ ನೋಡಿದ್ದಾನೆ ರಗುರಾಮ
ಎಂದಿಲ್ಲ ಎಲ್ಲಮ್ಮಾ ಇಂದ್ಯಾಕೆ ಬಂದ್ಯವ್ವಾ ರಗುರಾಮ
ಬರ್ಯಾಕೋ ತಾಯೇ ನೀ ಒಳಿಯಾಕೆ ರಾಮರಾಮ
ಬಾರವ್ವ ತಾಯಿ ನೀ ಒಳಿಯಾಕ ಎಲ್ಲಮ್ಮಾ ರಾಮರಾಮ
ಕೂಡಲ್ಹಾಕಿದ್ದೇನವ್ವ ಕರಿಮಣಿ ಚೌಕಿ ರಾಮರಾಮ
ಕೂಡವ್ವ ತಾಯಿ ಮಗಳೆ ಎಲ್ಲಮ್ಮಾ ರಾಮರಾಮ
ಕೂಡಿಲ್ಲಿ ಬಂದಿಲ್ಲ ನಿಂದ್ರಿಲ್ಲಿ ಬಂದಿಲ್ಲ ರಾಮರಾಮ
ನನಗೊಂದು ಫಲವ ನೀ ಕೊಡೋ ಶಿವನೇ ರಾಮರಾಮ
ನಿನಗೊಂದು ಫಲವ ಕೊಡುವಂತೆ ಬೇಡಿದರ ರಾಮರಾಮ
ನಿನಗೆ ಒಂದೂ ಇಲ್ಲೇ ಎಲ್ಲಮ್ಮಾ ರಾಮರಾಂ
ನಿನಗೊಂದು ಫಲ ಇಲ್ಲೆಯೇ ಎಲ್ಲಮ್ಮಾ ರಾಮರಾಮ
ಬಡವ ಬಗ್ಗರಿಗೆ ಕೊಟ್ಟಿದ್ದೆ ಮಗಳೇ ರಾಮರಾಮ
ಸಂಜಲೆ ಹುಟ್ಟಲಿ ಮುಂಜಲೆ ಸಾಯಲಿ ರಾಮರಾಮ
ನನಗೊಂದು ಫಲವ ನೀ ಕೊಡು ಶಿವನೇ ರಾಮರಾಮ ೧೧

ವಚನ : ಒಬ್ಬ : ಆದಿಯ ಮಾತಂಗಿ ಜೋಗುಳ ಬಾಂವಿ ಸತ್ತೆಮ್ಮ ಮೇಲೊಬ್ಬರ ಕರಿಯಮ್ಮ ಕೇಳಿದಿರೇನಕ್ಕ>
ಇನ್ನೊಬ್ಬ : ಅದೇನಮ್ಮ?

ಒಬ್ಬ : ವಾ! ಅದೇನಂತ ಕೇಳಿದರ ’ಏಳುಗುಡ್ಡದಲ್ಲಿರುವ ಎಲ್ಲಮ್ಮನು ನಾವು ಗೊಡ್ಡಿ ಬಂಜೆಯಂತ, ಸಾಕ್ಷಿಸಾಂಬನಲ್ಲಿ ಫಲ ತರಲಿಕ್ಕೆ ನಡೆದಿದ್ದಳಮ್ಮ. ಹೋಗಿ ಕಾಡಿದರೆ ಫಲ ಕೊಡುವವನಮ್ಮ? ಕೊಟ್ಟರೆ ನಮಕಿಂತ ಮೇಲು. ಇಲ್ಲಿದ್ರೆ ನಮಕ್ಕಿಂತ ಕೆಳಗು. ಅವ್ವ ಅವಳು ಫಲ ಪಡೆದುಕೊಂಡು ಬರುವ ಸಮಯದಲ್ಲಿ ಮುಂದಿನ ವಿಚಾರ ಮತ್ತಾದರೂ ಹೇಳುತ್ತೇನೆ ಕೇಳಿ :

ನನಗೊಂದು ಫಲ ನೀ ಕೊಡು ಶಿವನೇ ರಗುರಾಮ
ಕೊಟ್ಟಿರು ಕೊಡುವನೆ ಕೊಡುದು ದೊಡ್ಡದಲ್ಲ ರಗುರಾಮ
ಆ ಮಗ ನಿನಗೇ ದಕ್ಕೋದಿಲ್ಲಮ್ಮಾ ರಗುರಾಮ
ನನ್ನ ಹೊಟ್ಟೇಲಿ ಹುಟ್ಟಿ ನನ್ನಿ ಕೊರಳ ಕೊಯ್ಲಿ ರಗುರಾಮ
ನನಗೊಂದು ಫಲ ಕೊಡು ಶಿವರಾಯ ರಗುರಾಮ
ಕೊಟ್ಟರೆ ಕೊಡ ಕೊಡದಿದ್ರೆ ಬಿಡುತ್ತೇನೆ ರಗುರಾಮ
ನನಗೊಂದು ಫಲ ನೀ ಕೊಡು ಶಿವನೇ ರಗುರಾಮ
ಬಂಜೆಯಪವಾದ ನೀ ತೆಗೆ ಶಿವನೇ ರಗುರಾಮ        ೧೨

ಬಾಳೆಯ ಬನದಲ್ಲಿ ಬಂದನೆ ಶಿವರಾಯ ರಗುರಾಮ
ಬಾಳೆಯ ಗೊಲ್ಲ ತಾ ಕೊಯ್ದೊಯ್ದಾನೆ ರಗುರಾಮ
ಬಾಳೆಹಣ್ಣ ತಂದು ಸೀಳಿ ಮಂತ್ರ ಓದಿದ ರಗುರಾಮ
ಬಾಲಿಯೆಲ್ಲಮ್ಮನ ಉಡಿಯ ತುಂಬ್ಯಾನ ರಗುರಾಮ    ೧೩

ನಿಂಬೆಯ ಬನದಲ್ಲಿ ಬಂದಾನ ಶಿವರಾಯ ರಗುರಾಮ
ನಿಂಬೆಯ ಗೊಲ್ಲ ತಾ ಕಡದಾನ ರಗುರಾಮ
ನಿಂಬೆಹಣ್ಣ ತಂದು ತುಂಬ ಮಂತ್ರ ಓದಿದ ರಗುರಾಮ
ರಂಬಿಯೆಲ್ಲಮ್ಮನ ಉಡಿಯ ತುಂಬ್ಯಾನೆ ರಗುರಾಮ    ೧೪

ಉತ್ತತ್ತಿ ಬನದಲ್ಲಿ ಬಂದನೆ ಶಿವರಾಯ ರಗುರಾಮ
ಉತ್ತತ್ತಿ ಗೊಲ್ಲ ತಾ ಕೊಯ್ದೊಯ್ದಾನೆ ರಗುರಾಮ
ಮಿತ್ರಿ ಎಲ್ಲಮ್ಮನ ಉಡಿಯ ತುಂಬ್ಯಾನ ರಗುರಾಮ    ೧೫

ಕರುಣಿಯ ಬನದಲ್ಲಿ ಬಂದವ್ನೆ ಶಿವರಾಯ ರಗುರಾಮ
ಕರುಣಿಯ ಗೊಲ್ಲ ಕಡದಾನೆ ಶಿವರಾಯ ರಗುರಾಮ
ಕನ್ನಿ ಎಲ್ಲಮ್ಮನ ಉಡಿಯ ತುಂಬ್ಯಾನ ರಗುರಾಮ
ಕನ್ನಿ ಎಲ್ಲಮ್ಮನ ಉಡಿಯ ತುಂಬ್ಯಾನ ಶಿವರಾಯ ರಗುರಾಮ
ಕೊಟ್ಟಿದೆ ಹೋಗೆಲಗೆ ಮಗಳೇ ಎಲ್ಲಮ್ಮಾ ರಗುರಾಮ            ೧೬

ಕೊಟ್ಟಿದ ಹೋಗಂದ್ರೆ ಕರೆಯಂಗ ತಿಳಿಯಲು ರಗುರಾಮ
ಕವಡೆಯ ಸರ ಮುಟ್ಟಿ ಹಡದಯ್ಯ ರಗುರಾಮ
ಶುಕ್ರಾರ ದಿನದಲಿ ಮನೆಮಾರ ಸಾರಸಮ್ಮಾ ರಗುರಾಮ
ನಾನೆ ಕೊಟ್ಟಿದ್ದ ಫಲ ಸಲ್ಲುಸ್ಯೆಲ್ಲಮ್ಮಾ ರಗುರಾಮ
ಕೊಟ್ಟೀನಿ ಹೋಗಂತ ಎಲ್ಲಮ್ಮಾಗ್ಹೇಳೀನಿ ರಗುರಾಮ
ಹಿಂದಕ್ಕೆ ತಿರುಗಿ ಹೊಂಟಾಳೆಲ್ಲಮ್ಮಾ ರಗುರಾಮ
ಸಪ್ತ ಸಮುದೂರ ದಾಟಿ ನಡದಾಳೆ ರಗುರಾಮ
ಸಪ್ತ ಸಮುದರ ದಾಟ್ಯಾಳ ನಡದಾಳೆ ರಗುರಾಮ
ಕೀರ ಸಮುದೂರ ದಾಟಿ ನಡದಾಳ ರಗುರಾಮ        ೧೭

ಕೀರ ಸಮುದೂರ ದಾಟುತ ನಡೆದಾಳೆಲ್ಲಮ್ಮಾ ರಗುರಾಮ
ಹಾಲ ಸಮುದ್ರ ದಾಟ್ಯಾಳೆಲ್ಲಮ್ಮಾ ರಗುರಾಮ
ಹಾಲ ಸಮುದ್ರ ದಾಟಿ ಹೊಂಟಾಳ ರಗುರಾಮ
ತನಮನೆಗೆ ಬಂದಾಳೆಲ್ಲಮ್ಮಾ ರಗುರಾಮ
ಶುಕ್ರಾರ ದಿನದಲಿ ಮನೆಮಾರು ಸಾರಸ್ಯಾಳೆ ರಗುರಾಮ
ತಾಯಿ ಒಂದ್ಹೊತ್ತ ತಾ ಉಳುದಾಳೆ ರಗುರಾಮ
ತಾಯಿ ಒಂದ್ಹೊತ್ತ ಉಳಿದಾಳೆಲ್ಲಮ್ಮಾ ರಗುರಾಮ
ತಂದೆ ಕೊಟ್ಟಿದ್ದ ಫಲ ಸಲುಸ್ಯಾಳೆಲ್ಲಮ್ಮಾ ರಗುರಾಮ
ಶಿವನೇ ಕೊಟ್ಟಿದ್ದ ಫಲ ಸಲುಸ್ಯಾಳೆಲ್ಲಮ್ಮಾ ರಗುರಾಮ
ಹೊಟ್ಟಿ ರಾಮಣ್ಣ ಮಾಡಿದ್ದಾನೇನೇ ರಗುರಾಮ                   ೧೮

ಒಂದು ದಿನಂಬೋದು ಒಂದು ತಿಂಗಳವಾಗಿ ರಗುರಾಮ
ಒಂದರದೊಳಗೆ ಏನ ಬಗಿಸ್ಯಾಳೆ ರಗುರಾಮ?
ಒಂದರದೊಳಗೆ ಏನೇನ ಬಗಿಸ್ಯಾಳೆ ರಗುರಾಮ
ಒಂದೆಳಿ ಉಡಿಯ ಏ ಏಳಿ ಮಾವೇ ರಗುರಾಮ        ೧೯

ಎರಡು ದಿನಂಬೋದು ಎರಡು ತಿಂಗಳವಾಗಿ ರಗುರಾಮ
ಎರಡು ತಿಂಗಳದೊಳಗೇ ಏನ ಬಗಿಸ್ಯಾಳೆ ರಗುರಾಮ
ಎರಡರದೊಳಗೆ ಏನೇನ ಬಗಸ್ಯಾಳೆ ರಗುರಾಮ
ಕಡ್ಡಿಯ ಬಳೆಯ ಏ ಕೈಯ ತುಂಬ ರಗುರಾಮ
ಮೂರುದಿನಂಬೋದು ಮೂರ ತಿಂಗಳವಾಗಿ ರಗುರಾಮ          ೨೦

ಮೂರು ತಿಂಗಳದೊಳಗೆ ಏನ ಬಗಿಸ್ಯಾಳೆ ರಗುರಾಮ?
ಮೂರರದೊಳಗೆ ಏನೇನ ಬಗಿಸ್ಯಾಳೆ ರಗುರಾಮ?
ಮೂಡಲ್ದಾಗ್ಹರಿವ ಏ ತಿಳಿ ನೀರೇ ರಗುರಾಮ            ೨೧

ನಾಲ್ಕು ದಿನಂಬೋದು ನಾಲ್ಕು ತಿಂಗಳವಾಗಿ ರಗುರಾಮ
ನಾಲ್ಕರದೊಳಗೆ ಏನ ಬಗಸ್ಯಾಳೆ ರಗುರಾಮ
ನಾಲ್ಕರದೊಳಗೆ ಏನೇನ ಬಗಿಸ್ಯಾಳೆ ರಗುರಾಮ?
ಕಾಕಿಯ ಹಣ್ಣ ಏ ಕೈಯ ತುಂಬಾ ರಗುರಾಮ ೨೨

ಐದ ದಿನಂಬೋದು ಐದು ತಿಂಗಳವಾಗಿ ರಗುರಾಮ
ಐದರದೊಳಗೆ ಏನ ಬಗಸ್ಯಾಳೆ ರಗುರಾಮ?
ಐದರದೊಳಗೆ ಏನೇನ ಬಗಸ್ಯಾಳೆ ರಗುರಾಮ?
ಕೊಯ್ದ ಮಲ್ಲಿಗೆ ಏ ನನೆ ದಂಡೆ ರಗುರಾಮ             ೨೩

ಆರದಿನಂಬೋದು ಆರು ತಿಂಗಳವಾಗಿ ರಗುರಾಮ
ಆರರದೊಳಗೆ ಏನು ಬಗಿಸ್ಯಾಳೆ ರಗುರಾಮ?
ಆರರದೊಳಗೆ ಏನೇನ ಬಗಿಸ್ಯಾಳೆ ರಗುರಾಮ?
ಆರಕ್ಕಿನ ಬಾನ ಏ ಕೆನೆ ಮೊಸರೇ ರಗುರಾಮ         ೨೪

ಏಳುದಿನಂಬೋದು ಏಳು ತಿಂಗಳವಾಗಿ ರಗುರಾಮ
ಏಳರದೊಳಗೆ ಏನ ಬಗಸ್ಯಾಳೆ ರಗುರಾಮ?
ಏಳರದೊಳಗೆ ಏನೇನ ಬಗಸ್ಯಾಳೆ ರಗುರಾಮ?
ಏಳಕ್ಕೆ ಪತ್ತಲ ಏ ಹಸುರ ಕುಪ್ಸ ರಗುರಾಮ   ೨೫

ಎಂಟು ದಿನಂಬೋದು ಎಂಟು ತಿಂಗಳವಾಗಿ ರಗುರಾಮ
ಎಂಟರದೊಳಗೆ ಏನ ಬಗಸ್ಯಾಳ ರಗುರಾಮ?
ಎಂಟರದೊಳಗೆ ಏನೇನ ಬಗಸ್ಯಾಳೆ ರಗುರಾಮ?
ಕಂಟ್ಯಲರಕ್ಕಿ ಏ ಕೊಡ ತುಪ್ಪ ರಗುರಾಮ     ೨೬

ಒಂಬತ್ತು ತಿಂಗಳಿಗೆ ತುಂಬ್ಯಾವೋ ನವಮಾಸ ರಗುರಾಮ
ಸಂದ ಸಂದೆಲ್ಲಾ ಏಸವ್ವ ಬ್ಯಾನೀ ರಗುರಾಮ
ತಾಸೊತ್ತು ಶಿವನೆ ತಾಳೊಲ್ದು ವನ ಜೀವ ರಗುರಾಮ
ತಾಯಮ್ಮ ಹಾಳೇನೋ ಏ ಜಲುಮಕ್ಕೆ ರಗುರಾಮ
ತಾಯಮ್ಮ ಹಾಳೇನೋ ಏ ಜಲುಮಕ್ಕೆ ಕೊರಳೇನೋ ರಗುರಾಮ
ತಾಯ ಕೀಲ ಏ ಸಡಲಾತ ರಗುರಾಮ
ಒತ್ತ ಒತ್ತಿಗೆ ಬ್ಯಾನಿ ಕತ್ತಲ ಕಡದಂಗ ರಗುರಾಮ
ಅತ್ತ್ಯೆಮ್ಮಳೇನವ್ವ ಈ ಜಲುಮಕ್ಕೆ ರಗುರಾಮ
ಅತ್ತ್ಯೆಮ್ಮ ಹಾಳೆಲ್ಲ ಜಲುಮಕೆ ಒದಗ್ಯಾರ ರಗುರಾಮ   ೨೮

ನತ್ತಿನ ಕೀಲಿ ಏ ಸಡಿಲಾತ ರಗುರಾಮ
ಸೂಲಗಿತ್ತಿ ಬಂದಾಳೆ ಬಾಗಿಲಾಗಿಳಿದಾಳೆ ರಗುರಾಮ
ಬಾರವ್ವ ತಾಯಿ ನೀ ಒಳಿಯಕ್ಕೆ ರಗುರಾಮ
ಬೆಳ್ಳೀಯ ಬಟ್ಟಲ್ದಾಗೆ ಒಳ್ಳೆಣ್ಣೆ ಇಟ್ಕೊಂಡು ರಗುರಾಮ
ನಾರೀ ಹೊಟ್ಟೆ ಮ್ಯಾಲೇ ದಾರೀ ಬಿಟ್ಟವಳೇ ರಗುರಾಮ
ನಾರೀ ಹೊಟ್ಟೆ ಮ್ಯಾಲೇ ದಾರೀಯ ಬಿಟ್ಟಾಳೇ ರಗುರಾಮ
ಹೊಟ್ಟೆಲಿ ರಾಮಣ್ಣ ಮಾತಾಡುತ್ತಾನೆ ರಗುರಾಮ       ೨೯

ಹೊಟ್ಟಿಲಿ ರಾಮಣ್ಣ ಮಾತಾಡಿ ಕೇಳ್ತಾನೆ ರಗುರಾಮ
ಎಲ್ಲಿಂದ ಬರಲಿ ಏ ಹಡದವ್ವ ರಗುರಾಮ?
ಎಲ್ಲಿಂದ ಬರಲೆಂತ ಕೇಳಿದ ಮಗರಾಮ ರಗುರಾಮ    ೩೦

ಮರುತ್ಯ ಬಂದಂಗೆ ನೀ ಬಾರೋ ಮಗರಾಮ ರಗುರಾಮ
ಮರುತ್ಯ ಬಂದಂಗೆ ನಾ ಹೊರಬಂದರೆ ರಗುರಾಮ
ಮೈಲಿಗಂತಾರಲ್ಲ ಏ ಜನದಾಗ ರಗುರಾಮ
ಮೈಲಿಗೆ ನನ್ನಗೆ ಅಂತಾರ ಹಡೆದವ್ವ ರಗುರಾಮ
ಮತ್ತೆಲ್ಲಿ ಬರಲಿ ಏ ಹಡದವ್ವ ರಗುರಾಮ
ಮತ್ತೆಲ್ಲಿ ಬರಲೆಂತ ಕೇಳಿದ ಮಗರಾಮ ರಗುರಾಮ
ಬೆನ್ನಿಂದೆ ಬಾರೋ ಮಗನೇ ರಾಮಣ್ಣ ರಗುರಾಮ
ಬೆನ್ನಿಂದೆ ಬಂದರೆ ಬೆನ್ನಾಬಡಕಂತಾರ ರಗುರಾಮ
ಮತ್ತೆಲ್ಲಿ ಬರಲಿ ಏ ಹಡೆದವ್ವಾ ರಗುರಾಮ?
ಮತ್ತೆಲ್ಲಿ ಬರಲೆಂದು ಕೇಳಿದ ಮಗರಾಮ ರಗುರಾಮ   ೩೧

ಕಿವಿಲಿಂದ ಬಾರೋ ಮಗನೇ ರಾಮಣ್ಣ ರಗುರಾಮ
ಕಿವಿಲಿಂದ ಬಂದರೆ ಕಿವುಡನು ಅನ್ನುತಾರೆ ರಗುರಾಮ
ಮತ್ತೆಲ್ಲಿ ಬರಲಿ ಏ ಹಡೆದವ್ವಾ ರಗುರಾಮ?
ಮುತ್ತಿನ ಸೆರಗ ಹರಿದು ನುಂಗವ್ವ ರಗುರಾಮ          ೩೨

ಮುತ್ತಿನ ಸೆರಗ ಹರದ ನುಂಗ್ಯಾಳೆ ರಗುರಾಮ
ಮುತ್ತಿನ ಸೆರಗನ್ನ ಹರಿಯುತ್ತ ನುಂಗ್ಯಾಳೆ ರಗುರಾಮ
ಹೊಟ್ಟ್ಯಾಗ ರಾಮಣ್ಣ ಚಡ್ಡಿ ಉಡುತಾನೆ ರಗುರಾಮ
ಹೊಟ್ಟ್ಯಾಗ ರಾಮಣ್ಣ ಚಡ್ಡಿಯ ಉಡುತಾನೆ ರಗುರಾಮ ೩೩

ಬಲದ ಬುಜದಿಂದ ಸಿಡಿದ ರಾಮಣ್ಣ ರಗುರಾಮ
ಹುಟ್ಟಿದ ಏಳ ದಿವಸ ಅಂಗಿಯ ತೊಡವಲ್ಲ ರಗುರಾಮ
ಬಿಲ್ಲು ಬಾಣವನ ಹೆಗಲಿಗೆ ರಗುರಾಮ
ಬಿಲ್ಲುಬಾಣಗಳ ಹೆಗಲಿಗೆ ಹಾಕ್ಕೊಂಡು ರಗುರಾಮ
ನಾರೇರ ಕೊಡಕ ಎಸದಾಜನ ರಗುರಾಮ    ೩೪

ನಾರೇರ ಕೊಡಕೆ ಬಡಿದ ಮುತ್ತಿನ ಚಂಡ ರಗುರಾಮ
ಚಂಡ ಬಡದಾಗ ಕೊಡ ಒಡದದೇ ರಗುರಾಮ
ಚೆಂಡನ ಗಡದರೆ ಕೊಡನ ಒಡೆದರೆ ರಗುರಾಮ
ಕಾಲಿನ ಕೆಳಗ ಬಿದ್ದದೆ ಚೆಂಡ ರಗುರಾಮ      ೩೫

ಕಾಲಿನ ಕೆಳಗ ಬಿದ್ದದೆ ಏ ಚೆಂಡ ರಗುರಾಮ
ನೀರಿನ ಬಾಲ್ಯರು ರಾಮಣ್ಣಗೆ ಬೈತಾರೆ ರಗುರಾಮ
ನನ್ನಂತ ಅಕ್ಕತಂಗ್ಯಾರು ನಿನಗಿಲ್ಲೇನೋ ರಾಮಣ್ಣ ರಗುರಾಮ?
ನನ್ನಂತ ಅಕ್ಕತಂಗ್ಯಾರು ನಿನಗಿಲ್ಲೇನೋ ರಾಮಣ್ಣ ರಗುರಾಮ?
ನನ್ನಂತ ಅಣ್ಣತಮ್ಮಂದ್ರು ನಿನಗಿಲ್ಲೇನೋ ರಗುರಾಮ?
ಊರಿಲ್ಲ ಉಡಿಗೆಟ್ಟ ಕೇರಿಲ್ದ ಪಡಿಗೆಟ್ಟ ರಗುರಾಮ?
ತಂದಿದ್ದರೆಷ್ಟು ಮೆರೆದಾನೋ ರಾಮಣ್ದ ರಗುರಾಮ?
ಅಪ್ಪಿದ್ದರೆಷ್ಟು ಉರುದಾನೆ ರಾಮಣ್ಣ ರಗುರಾಮ?
ಹಾದರಕೆ ನೀನು ಹುಟ್ಟಿದಲ್ಲೋ ರಾಮ ರಗುರಾಮ?
ಹಾದರಂಬ ಸಬುದ ಕೇಳ್ಯಾನೆ ರಾಮಣ್ಣ ರಗುರಾಮ
ದುಃಖ ಮಾಡುತ್ತ ಕುಂತ ರಾಮಣ್ಣ ರಗುರಾಮ
ಚಿಂತೆ ಮಾಡುತ್ತ  ಎದ್ದ ರಾಮಣ್ಣ ರಗುರಾಮ
ಚಿಂತನೆ ಮಾಡುತ್ತ ಎದ್ದ ನಡುದಾನೆ ರಾಮಣ್ಣ ರಗುರಾಮ
ಏಳ ಕೊಳ್ಳದ ದಾರಿ ಹಿಡುದಾನೆ ರಾಮಣ್ಣ ರಗುರಾಮ
ಬಿರಿಬಿರಿ ಹೋಗ್ಯಾನೆ ಬಿಲ್ಲುಬಾಣ ಒಗದಾನೆ ರಗುರಾಮ
ತಾಯಿ ಪಾದಕ್ಕೊಂದನೆರಗ್ಯಾನೇ ರಗುರಾಮ                    ೩೬

ಯಾಕ್ಯಾಕೋ ಮಗರಾಮ ಮಾರಿ ಬಾಡ್ಯಾವ ಸಣ್ಣ ರಗುರಾಮ?
ಬಾಯಾಗ ನಿಳಿಯ ಬೆವತಾವು ಮಗನೇ ರಗುರಾಮ?
ಯಾರೇನೆಂದಾರೊ ನನ್ನಾಗೆ ಏಳೋ ರಗುರಾಮ
ಯಾರರ ಹೊಡದಾರ ನನ್ನಾಗೆ ಏಳೋ ರಗುರಾಮ
ಹೊಡಿಲ್ಯಾಕೆ ಬಡಿಲ್ಯಾಕೆ ಬಡವರ ಮಗನೇನೋ ರಗುರಾಮ
ಕಲ್ಲಗುಡ್ಡದ ಕರುಣೆಯ ಮಗನೇ ರಗುರಾಮ
ಬಡಿವವರ್ಯಾರೇ ಈ ಹಡದವ್ವ ರಗುರಾಮ?
ತಂದೆ ಎಲ್ಹ್ಯಾನ ನೀ ಮೊದಲ್ಹೇಳೇ ರಗುರಾಮ        ೩೭

ತಂದೆ ಎಲ್ಹ್ಯಾನೇ ಏ ಮೊದಲ್ಹೇಳೇ ರಗುರಾಮ?
ನನಗ ಗಂಡನಿಲ್ಲ ನಿನಗ ತಂದೆಯಿಲ್ಲ ರಗುರಾಮ
ತಂದೆಯಿಲ್ಲದ ಕಂಡ ಹುಟ್ಟಿದಲ್ಲೊ ಮಗನೇ ರಗುರಾಮ
ತಂದೆಯಿಲ್ಲದ ಕಂದ ಹುಟ್ಟಿದಲ್ಲೋ ಮಗ ರಗುರಾಮ
ಎಲ್ಲಿಂದ ತರಲಿ ಹಡದವನ ರಗುರಾಮ?
ಹೇ ಭೂಮಿ ಬೀಜಕೆ ಜೋಡು ನಿನಗ್ಯಾಂಗೆ ಜೋಡಿಲ್ಲ ರಗುರಾಮ?
ಗಂಡಿಲ್ದೆಂಗೆ ನನ್ನನ ಹಡೆದವಳೇ ರಗುರಾಮ?                    ೩೮

ಜೋಡಿಲ್ದೇನ ನನಗ್ಯಾಂಗ ಹಡದೀ ರಗುರಾಮ?
ಗಡಗಡ ಗದ್ದಣಿಸಿ ಕೋಲಮಿಂಚು ಹೊಡೆದಂಗೆ ರಗುರಾಮ
ಮೋಡಿಲ್ದೆ ಮಳೆ ಬೀಳ್ವುದೇನು ರಗುರಾಮ?
ಗಂಡಿಲ್ದೆಂಗೆ ನನ್ನನ ಹಡೆದವಳೇ ರಗುರಾಮ?                    ೩೯

ಕೂರಿಕುಂಟಿಗೆ ಜೋಡಿ ನಿನಗ್ಯಾಂಗ ಜೋಡಿಲ್ಲ ರಗುರಾಮ?
ಹಕ್ಕಿಪಕ್ಕಿಗೆ ಜೋಡು ನಿನಗ್ಯಾಂಗ ಜೋಡಿಲ್ಲ ರಗುರಾಮ?
ಜೋಡಿಲ್ದೆ ನನ್ನನ್ಯಾಂಗ ಹಡೆದವಳೇ ರಗುರಾಮ?      ೪೦

ಬೀಜಿಲ್ದ ಬೆಳೆಹ್ಯಾಂಗೆ ಬೆಳೆಯುವುದು ರಗುರಾಮ?
ಮೋಡಿಲ್ಲ ಮಳೆಹ್ಯಾಂಗೆ ಬೀಳುವುದು ರಗುರಾಮ?
ನನ್ನ ಹಡದಂಗೆ ಇನ್ನೊಂದು ಹಡಿತಾಯಿ ತಂಗಿ ತಮ್ಮಿದ್ರ ನಾ ಕರದೇನು ರಗುರಾಮ
ಇನ್ನೊಂದು ಹಡಿಲೇಕೆ ಮುಂದೊಂದು ಹಡಿಲೇಕೆ ರಗುರಾಮ
ಹುಲ್ಲು ಬೀಜವೇನೋ ಹುಟ್ಟಲಿಕ್ಕೆ ಮಗನೇ ರಗುರಾಮ?
ಮದಗಡ್ಡಿಯೇನೋ ಓಗರ್ಲಿಕ್ಕೆ ಮಗನೇ ರಗುರಾಮ?
ಹಡದವ್ವ ಅಗಮಾಲಿ ಹಡದವ್ವ ದಿಗಮಾಲಿ ರಗುರಾಮ
ದತ್ತುಲ ರಂಡಿ ದಗಬಾಜಿ ರಗುರಾಮ          ೪೧

ನನ್ನ ಹಾಲ ಬಂದು ಬೆನ್ನೆಲ್ಲ ಬಿಗುದಾವೆ ರಗುರಾಮ
ಆಡಿ ಆಡಿ ಬಂದು ಕುಡಿ ಬಾರೋ ಮಗನೇ ರಗುರಾಮ
ಹಾದರಗಿತ್ತಿ ಹಾಲು ಹಾದಿಗೆ ಚೆಲ್ಲವ್ವ ರಗುರಾಮ
ನಾಯಿ ಬೆಕ್ಕಿಗೆ ನೀ ಸಲ್ಲಿಸವ್ವ ರಗುರಾಮ     ೪೨

ಬಟ್ಟಿನೊಟ್ಟ ಕೂಸಿಗೆ ಒಟ್ಟಿಮ್ಯಾಲ ಕಟ್ಟಿಕೊಂಡು ರಗುರಾಮ
ಸಿದ್ಧರ ಮನೆಯಾಗೆ ದುಡಿದೀನಿ ಮಗನೇ ರಗುರಾಮ
ಸಿದ್ಧರ ಮನೆಯಾಗೆ ಕುಟ್ಟಿದೆ ಬೀಸಿದೆ ರಗುರಾಮ
ನಿನಗಾಗಿ ದುಡಿದೇನೆ ಏ ಎನ್ನ ಮಗನೇ ರಗುರಾಮ
ನಿನಗಾಗಿ ಕುಟ್ಟಿದೆ ನಿನಗಾಗಿ ಬೀಸಿದೆ ರಗುರಾಮ
ಸಿದ್ಧ ಸಿದ್ಧರನ್ನೆಲ್ಲ ಗುದ್ದನೆ ಹೊಗಿಸಿದಿ ರಗುರಾಮ
ಮೇಲಣ ಗುಂಡ ನಾ ಜೋಡಿಸಿದೆ ಮಗನೇ ರಗುರಾಮ                    ೪೩

ಜೋಗಿಯ ಮಗಳಲ್ಲ ಜಂಗಮರ ಮಗಳಲ್ಲ ರಗುರಾಮ
ಜಡೆಶಂಕರನ ಮಗಳಲ್ಲ ರಗುರಾಮ
ತಾಯಿಯೇ ಪಾರ್ವತಿ ತಂದೆಯೇ ಶಿವರಾದರು ರಗುರಾಮ
ಶಿವನ ಗದ್ದಿಗೆ ತಿಳಿದು ಬಂದೇನ ರಗುರಾಮ
ಆ ಕಲ್ಲ ಈ ಕಲ್ಲ ಮೇಲೆ ಪರ್ವತ ಕಲ್ಲ ರಗುರಾಮ
ಪಚ್ಚೇದ ಕಲ್ಲ ಶಿರಮೂಲಿ ರಗುರಾಮ
ಕೊರವಂಜಿ ದಾನ ಕೊಟ್ಟಳು ಮಗನೇ ರಗುರಾಮ      ೪೪

ಕೊರವ ನಮ್ಮಪ್ಪನೇ ಕೊರವಿ ನಮ್ಮವ್ವನೇ ರಗುರಾಮ?
ಕೊರವನ್ನ ತೋರವ್ವ ಏ ಸಬೇದಾಗ ರಗುರಾಮ
ಕೊರವನ್ನ ಏ ಸಾರ ಕೊರವಪ್ಪ ಕರಿಯೆಲ್ಲ ರಗುರಾಮ
ಕೊರವಪ್ಪನೆಂದು ನಾ ಕರಿದೀನೀ ರಗುರಾಮ ೪೫

ತಂದೆ ಎಲ್ಲೆಂದು ಕೇಳಿದೆ ರಾಮಣ್ಣ ರಗುರಾಮ
ನಿನ್ನ ತಂದೆಗೆ ಕಳ್ಳರೊಯ್ದರೋ ರಗುರಾಮ
ನಮ್ಮ ತಂದೆಗೆ ಕಳ್ಳರೊಯ್ದರೇ ರಗುರಾಮ?
ಕಳ್ಳರೊಯ್ದ ಹಾದಿ ತೋರಿಸು ಹಡದವ್ವ ರಗುರಾಮ
ನಿನ್ನ ತಂದೆಗೊಯ್ದ ಕಳ್ಳರು ಗಾರೆನೊಳಗೆ ಬಿದ್ದಿದ್ದಾರೆ ರಗುರಾಮ
ಹಾದಿಯ ಮಾತಂಗಿ ಜೋಗುಳ ಬಾವಿ ಸತ್ತೆವ್ವ ರಗುರಾಮ
ಕೇಳೇ ರಾಮಯ್ಯನ ಜೋಗಳವ ರಗುರಾಮ           ೪೬

ನನ್ನ ಹಾಲ ಬಂದು ಬೆನ್ನೆಲ್ಲ ಬಿಗುದಾವೆ ರಗುರಾಮ
ಆಡಿ ಆಡಿ ಬಂದು ಕುಡಿ ಬಾರೊ ಮಗನೆ ರಗುರಾಮ
ಹಾದರಗಿತ್ತಿ ಹಾಲು ಹಾದಿಗಿ ಚೆಲ್ಲವ್ವ ರಗುರಾಮ
ನಾಯಿ ಬೆಕ್ಕೀಗೇ ನೀ ಸಲ್ಲಿಸವ್ವ ರಗುರಾಮ
ನನ್ನ ಹೊಟ್ಟ್ಯಾಗ ಹುಟ್ಟಿ ತಾಯಿಗೆ ಬಯ್ದರೆ ರಗುರಾಮ
ಉಸಿರು ಹತ್ತ್ಯಾವ ನಿನಗೆ ರಗುರಾಮ
ರಾಮ ನಡೆಯಲಿಲ್ಲ ಬೇವ ಕುಡಿಯಲಿಲ್ಲ ರಗುರಾಮ
ಹುಟ್ಟ ಬಂಜ್ಯಾಗಿ ನಾನಿರಲಿಲ್ಲ ರಗುರಾಮ
ತಂದೆ ಹೇಳಿದ ಮಾತು ಒಂದೂ ನೀ ಕೇಳಲಿಲ್ಲ ರಗುರಾಮ
ಮಲೆ ಒತ್ತಿ ರಾಮನ ಕೊಲ್ಲಲಿಲ್ಲ ರಗುರಾಮ
ಕೈದ ಮಳದಾಗೊಯ್ದು ಚೆಲ್ಲಲಿಲ್ಲ ರಗುರಾಮ
ಹೊಟ್ಟೆಲಿ ಹುಟ್ಟಿದ ವೈರಿ ಬೆನ್ನಲ್ಲಿ ಬಿದ್ದಿದ ವೈರಿ ರಗುರಾಮ
ನನಗೊಬ್ಬ ವೈರ್ಯವ್ವ ಮಗರಾಮ ರಗುರಾಮ
ಬಾರಪ್ಪ ಬಾ ನನ್ನ ಗೆಜ್ಜೆ ಕಾಲ ರಾಮಣ್ಣ ರಗುರಾಮ
ಬಾ ನನ್ನ ಮಗನೇ ಈ ಮಲಿ ಉಣ್ಣೊ ರಗುರಾಮ       ೪೭

ತಂದೆ ಎಲ್ಯಾನ ಕೇಳಿದೆ ಮಗರಾಮ ರಗುರಾಮ
ನಿನ್ನ ತಂದೆಗೆ ಹುಲಿಯಾನ ತಿಂದ್ಯಾರೇ ರಗುರಾಮ
ನಮ್ಮ ತಂದೆಗೆ ಹುಲಿಯನ ತಿಂದ್ಯಾರೇ ರಗುರಾಮ
ತಿಂದಿದ ಹುಲಿಯನ್ನು ತೋರಿಸ ಹಡದವ್ವಾ ರಗುರಾಮ
ತಿಂದಿದ ಹುಲಿಯನ ತೋರಿಸಲಿಕ್ಕ ಮಗರಾಮ ರಗುರಾಮ
ಹುಲಿಯ ನುಂಗ್ಯದ ಗಟ್ಟಕೆ ಸೇರಿದೆ ರಗುರಾಮ
ನಮ್ಮ ತಂದೆಯ ತಿಂದ ಹುಲಿ ಗಟ್ಟಾದರು ಸೇರಿದ್ರೆ ರಗುರಾಮ
ಗಟ್ಟದ ಹಾದಿ ತೋರಿಸು ಹಡದವ್ವ ರಗುರಾಮ
ಗಟ್ಟದ ಹಾದಿಗೆ ತೋರಿಸಲಿಕ್ಕೆ ಮಗರಾಮ ರಗುರಾಮ
ಹುಲಿಯ ಬಾಯಾಗ ಸುತ್ತು ಹೋಗ್ಯಾರ ರಗುರಾಮ    ೪೮

ಗಟ್ಟದ ದಾರಿನೇ ತೋರಿಸೆಂದೇಳ್ದವನೇ ರಗುರಾಮ
ಮುತ್ತಿನ ಬಾಣನ ಹೆಗಲಿಗ್ಹಾಕ್ಯವನೆ ರಗುರಾಮ
ಮುತ್ತಿನ ಬಾಣನ ಹೆಗಲಿಗೆ ಹಾಕ್ಯಾನೆ ರಗುರಾಮ
ಗಟ್ಟದ ದಾರಿ ಹಿಡಿದವನೇ ರಾಮಣ್ಣ ರಗುರಾಮ
ಗಟ್ಟಿದೊಳಗೋಗಿ ನಿಂತವನೆ ರಾಮಣ್ಣ ರಗುರಾಮ
ಮುತ್ತಿನ ಬಾಣ ಬಿಟ್ಟು ರಾಮಣ್ಣ ರಗುರಾಮ
ಮುತ್ತಿನ ಬಾಣನ ಬಿಟ್ಟನೆ ರಾಮಣ್ಣ ರಗುರಾಮ
ಗಟ್ಟದಾಗ ಹುಲಿಯ ಹೊರೆಯ ಮಾಡ್ಯವನೆ ರಗುರಾಮ
ಗಟ್ಟದಾಗ ಹುಲಿಯನ್ನೇ ಹೊರೆಯ ಮಾಡ್ಯವನೆ ರಗುರಾಮ
ಗೊಳೆಯ ಮಾಡ್ಯಾನೆ ಹೊಡಕೊಂಡು ಬಂದಾನೆ ರಗುರಾಮ
ಹೊಡಕೊಂಡು ತಂದವನೆ ತಾಯಿಯ ಮುಂದೆ ತಂದು ದಾವಣಾಕ್ಯಾನೆ ರಗುರಾಮ
ಏಳವ್ವ ಏ ತಾಯಿ ಒಳಗಿದ್ದಿ ಹೊರಗಿದ್ಯೆ ರಗುರಾಮ
ಬಾರವ್ವ ಏ ತಾಯೀ ನೀ ಹೊರೆಯಲಕ್ಕೆ ಎಲ್ಲಮ್ಮಾ ರಗುರಾಮ
ನಮ್ಮ ತಂದೆ ತಿಂದ ಹುಲಿಯನ ತೋರಿಸು ಹಡದವ್ವ ರಗುರಾಮ         ೪೯

ನಿಮ್ಮ ತಂದೆಯ ತಿಂದ ಹುಲಿಯ ತೋರಿಸಲಿಕ್ಕೆ ರಗುರಾಮ
ಮುದಿಯ ಆಗಿದೆ ಸತ್ತರ ಹೋಗಿದೆ ರಗುರಾಮ
ಮುದಿಯನಾಗಿದ್ರೆ ಸತ್ತಾರ ಹೋಗಿದ್ರೆ ರಗುರಾಮ
ಹುಲಿ ಸತ್ತ ಎಲುವ ತೋರಿಸೆ ಹಡದವ್ವ ರಗುರಾಮ
ಹುಲಿ ಸತ್ತ ಎಲುವ ತೋರಿಸಲಿಕ್ಕೆ ರಗುರಾಮ
ಬೆಂಕಿ ಮಳೆ ಬಂದು ಸುಟ್ಟನೆ ಹೋಗಿದ್ರೆ ರಗುರಾಮ
ಸುಟ್ಟಿದ ಬೂದಿ ತೋರಿಸಲಿಕ್ಕೆ ಮಗರಾಮ ರಗುರಾಮ
ಉತ್ರಿ ಮಳೆ ಬಿದ್ದು ಉಡಗಿ ಹೋಗಿದೆ ರಗುರಾಮ
ಉತ್ರಿಯ ಮಳೆಬಿದ್ದು ಉಡಗಿಯ ಹೋಗಿದ್ರೆ ರಗುರಾಮ
ಉಡಗಿ ಹೋದ ಜಾಗ ತೋರಿಸ ಹಡದವ್ವ ರಗುರಾಮ
ಉಡಗಿ ಹೋದ ಜಾಗ ತೋರಿಸಲಿಕ್ಕೆ ರಗುರಾಮ
ಸಾತಿ ಮಳೆ ಬಂದು ಸವರಿ ಹೋಗ್ಯಾವು  ರಗುರಾಮ
ಸಾತಿಯ ಮಳೆ ಬಂದು ಸವರಿ ಹೋಗಿದ್ರೆ ರಗುರಾಮ
ಸವರಿ ಹೋಗಿದ್ದ ಜಾಗ ತೋರಿಸ್ಹಡೆದವ್ವ ರಗುರಾಮ
ಸವರಿ ಹೋಗಿದ್ದ ಜಾಗ ತೋರಿಸಲಿಕ್ಕೆ ರಗುರಾಮ
ಕತ್ತೆ ಒಳ್ಯದೆ ಕೂನ ತಪ್ಪಿದೆ ರಗುರಾಮ
ತಪ್ಪಿದ ಜಾಗವ ತೋರಿಸ್ಹಡೆದವ್ವ ರಗುರಾಮ
ತಪ್ಪಿದ ಜಾಗವ ತೋರಿಸಲಿಕ್ಕೆ ಮಗರಾಮ ರಗುರಾಮ
ಕರಕಿ ನಾಟ್ಯದೆ ಕೂನ ತಪ್ಪಿತು ಮಗರಾಮ ರಗುರಾಮ
ಹಡದವ್ವ ಅಗಮಾಲಿ ಹಡದವ್ವ ದಿಗಮಾಲಿ ರಗುರಾಮ
ದತ್ತೋಲಿ ರಂಡಿ ದಗಬಾಜಿ ರಗುರಾಮ
ದತ್ತೋಲಿ ರಂಡಿ ದಗಬಾಜಿ ಕರಿಯೆಲ್ಲ ರಗುರಾಮ
ಮೆಟ್ಟ ಮ್ಯಾಲ ಮೊಗ ನಾ ಸವರೇನೇ ರಗುರಾಮ?    ೫೦

ಮುತ್ತಿನ ಸರಗ ಮುಂಗೈಗಿಡಿದಿದ್ದಾನೆ ರಗುರಾಮ
ರಾದಾ ಬೀದಿಯಾಗೆ ಎಳೆದ ರಾಮಣ್ಣ ರಗುರಾಮ
ರಾದಾ ಬೀದಿಯಲ್ಲಿ ಎಳೆತಂದು ಉಡಿಯಾಗ ರಗುರಾಮ
ಯಾವ ಗುಡ್ಡಗಳು ಸೇರಲಯ್ಯಾ ರಗುರಾಮ?
ಯಾವ ವನಗಳು ಹೋಗಲಯ್ಯಾ ರಗುರಾಮ?
ಗುಡ್ಡವ ಹೊಕ್ಕಂದರ ಬಿಟ್ಟವರ ಮಗನಲ್ಲ ರಗುರಾಮ
ಒಡ್ಡರಿಗಚ್ಚಿ ಒರಸೇನೇ ರಗುರಾಮ
ನನ್ನ ಹಾಲ ಬಂದು ಬೆನ್ನಲ್ಲಿ ಬಿಗುದಾವೆ ರಗುರಾಮ
ಆಡಿ ಆಡಿ ಬಂದು ಕುಡಿ ಬಾರೋ ಮಗನೇ ರಗುರಾಮ
ಹಾದರಗಿತ್ತಿ ಹಾಲು ಹಾದಿಗೆ ಚೆಲ್ಲವ್ವ ರಗುರಾಮ
ನಾಯಿ ಬೆಕ್ಕಿಗೆ ನೀ ಸಲ್ಲಿಸವ್ವ ರಗುರಾಮ
ಹಿಂದಿನ ಕೂದಲ ಹಿಂಗೈಗೆ ಸುತ್ತ್ಯಾನೆ ರಗುರಾಮ
ಹಿಂಗೈಗೆ ಸುತ್ಯಾನೆ ಕಂಬಕ್ಕಟ್ಟ್ಯಾನೆ ರಗುರಾಮ
ಹಿಂಗೈಗೆ ಸುತ್ತ್ಯಾನ ಕಂಬಕ್ಕೆ ಕಟ್ಟ್ಯಾನ ರಗುರಾಮ
ಬಾಯಿ ಬಂದಂಗ ಬೈದ ರಾಮಣ್ಣ ರಗುರಾಮ
ತಾಯಿ ಒಟ್ಟೀಲಿ ಉಟ್ಟಿ ತಾಯಿಗೆ ಬಯ್ದಾನೆ ರಗುರಾಮ
ತಾಯಿ ಬಯ್ದಾರೆ ಕಣ್ಣು ಓಗ್ಯದೆ ರಗುರಾಮ
ಕಣ್ಣು ಓಗ್ಯಾವ ಕೂಡಿ ಬಿದ್ದಾನೆ ರಗುರಾಮ
ನನ್ನ ಹಾಲು ಬಂದು ಬೆನ್ನಲ್ಲಿ ಬಿಗುದಾವೆ ರಗುರಾಮ
ಆಡಿ ಆಡಿ ಬಂದು ಕುಡಿ ಬಾರೋ ಮಗನೇ ರಗುರಾಮ ೫೧

ಮಗನ ಕಣ್ಣೋದ್ದ ನೋಡಿ ತಾಯಿಗೆ ಕಳಕಳ ಆಗಿ ರಗುರಾಮ
ಕಣ್ಣ ತರಲಿಕ್ಕೆ ನಡೆದಾಳೆಲ್ಲಮ್ಮಾ ರಗುರಾಮ
ಶಿವನ ಮಗಳ  ಶೀಲವಂತೆ ಎಲ್ಲಮ್ಮ ರಗುರಾಮ
ಶಿವನ ಬಾಗಲಿಗೆ ಹೋಗಿ ನಿಂತಾಳೆ ರಗುರಾಮ
ಶಿವನ ಬಾಗಲಿಗೆ ಹೋಗಿಯೇ ನಿಂತವಳೆ ರಗುರಾಮ
ಆವಾಗ ಶಿವರಾಯ ತಾ ನೋಡಿದಾನೆ ರಗುರಾಮ
ಆ ಎಂದಿಲ್ದ ಎಲ್ಲಮ್ಮಾ ಇಂದ್ಯಾಕೆ ಬಂದೆವ್ವಾ ರಗುರಾಮ?
ಬಾರವ್ವ ತಾಯಿ ನೀ ಒಳಿಯಕ್ಕ ರಗುರಾಮ
ಬಾರವ್ವ ನೀ ತಾಯಿ ಒಳಿಯಾಕೆ ಎಲ್ಲಮ್ಮಾ ರಗುರಾಮ
ಕೂಡಲ ಹಾಕ್ಯಾರ ಕಿರಿಮಣಿ ಚೌಕಿ ರಗುರಾಮ
ಆ ಕೂಡಲ ಆಕ್ಯಾರ ಮಣಿಚೌಕಿ ಎಲ್ಲಮ್ಮಗ ರಗುರಾಮ
ಕೂಡವ್ವ ತಾಯಿ ಮಗಳೇ ಎಲ್ಲಮ್ಮಾ ರಗುರಾಮ       ೫೨

ಕೂಡಲಿಲ್ಲ ಬಂದಿಲ್ಲ ನಿಲಲಿಲ್ಲಿ ಬಂದಿಲ್ಲ ರಗುರಾಮ
ನನಗೊಂದು ಫಲ ನೀ ಕೊಡು ತಂದೆ ರಗುರಾಮ
ಕೂಡಲಿಲ್ಲ ಬಂದಿಲ್ಲ ನಿಲಲಿಲ್ಲಿ ಬಂದಿಲ್ಲ ರಗುರಾಮ
ನನ ಮಗನ ಕಣ್ಣ ಕೊಡು ನೀ ಶಿವರಾಯ ರಗುರಾಮ
ನಿನ್ನ ಮಗನ ಕಣ್ಣನ್ನು ಕೊಡೆಂದು ಬೇಡಿದೆ ರಗುರಾಮ
ನಾಳೆ ನಿನ್ನ ಜೀವಕ್ಕೆ ಕೇಡಿದೆ ಮಗಳೇ ರಗುರಾಮ
ನನ್ನೀ ಒಟ್ಟೇಲಿ ಉಟ್ಟಿ ನನ್ನ ಕೊರಳ ಕೊಯ್ದ ರಗುರಾಮ
ನನ್ನ ಮಗನ ಕಣ್ಣು ಕೊಡು ಶಿವರಾಯ ರುಗರಾಮ
ನಿನ್ನ ಮಗನ ಕಣ್ಣ ಕೊಡು ಎಂದು ಬೇಡಿದೆ ರಗುರಾಮ
ಕೊಟ್ಟಿದೆ ಹೋಗೇ ಮಗಳೇ ಎಲ್ಲಮ್ಮಾ ರಗುರಾಮ
ಕೊಟ್ಟಿದೆ ಹೋಗಂತ ಎಲ್ಲಮ್ಮಗೇಳ್ಯಾನೀ ರಗುರಾಮ            ೫೩

ಹಿಂದಕ್ಕೆ ತಿರುಗಿ ನಡೆದಾಳೆಲ್ಲಮ್ಮಾ ರಗುರಾಮ
ಹಿಂದಕ್ಕೆ ತಿರುಗಿ ನಡೆದಾಳೆಲ್ಲಮ್ಮಾ ರಗುರಾಮ
ಸಪ್ತ ಸಮುದೂರ ದಾಟಿ ನಡೆದಾಳೆ ರಗುರಾಮ
ಸಪ್ತ ಸಮುದೂರ ದಾಟಿಸಿ ನಡೆದಾಳೆ ರಗುರಾಮ
ಕೀರ ಸಮುದೂರ ದಾಟಿ ನಡೆದಾಳೆ ರಗುರಾಮ
ಕೀರನೆ ಸಮುದ್ರನ ದಾಟಿಯೇ ನಡೆದಾಳೆಲ್ಲಮ್ಮಾ ರಗುರಾಮ
ಹಾಲಿನ ಸಮುದೂರ ದಾಟ್ಯಾಳೆಲ್ಲಮ್ಮಾ ರಗುರಾಮ
ಹಾಲಿನ ಬಲಗೊತ್ತು ರಾಮಣ್ಣನ ಕರೆದಾಳ ರಗುರಾಮ ೫೪

ಬಾ ನನ್ನ ಮಗನೇ ಏ ಮಲಿ ಉಣ್ಣೊ ರಗುರಾಮ
ಹಾಲ ಕುಡಿ ಬಾರ ಎನ್ನುತ ಕರೆದಾಳ ರಗುರಾಮ
ಎನ್ನುತ ತಾ ಕೆಳಗೆ ಓಡ್ಯಾನೆ ರಾಮಣ್ಣ ರಗುರಾಮ
ತಾಯಿ ಪಾದದ ಮ್ಯಾಲ ಬಿದ್ದ ರಾಮಣ್ಣ ರಗುರಾಮ
ತಾಯಿ ಪಾದದ ಮ್ಯಾಲ ಬಿದ್ದು ತಾ ಅಳುತಾನೆ ರಾಮಣ್ಣ ರಗುರಾಮ
ನಿನ್ನ ಮೈಮನ ನನಗೆ ತಿಳಿದಿಲ್ಲ ತಾಯಿ ರಗುರಾಮ
ನಿನ್ನ ಮೈಮನ ನನಗೆ ತಿಳಿದಿಲ್ಲ ಹಡದವ್ದವಾ ರಗುರಾಮ
ಪಾಪಿಲ್ದ ಪಿಂಡ ವಿದ್ಯಲ್ಲಡದಾಳ ರಗುರಾಮ
ಪಾಪಿಲ್ದ ಪಿಂಡ ವಿದ್ಯಲ್ಲಡದಾಳ ರಗುರಾಮ
ನಿನ್ನ ಮೈಮನ ನನಗೆ ತಿಳಿದಿಲ್ಲ ತಾಯಿ ರಗುರಾಮ    ೫೫

ತಾಯ ಕರಕೊಂಡೇ ನಡೆದ ರಾಮಣ್ಣ ರಗುರಾಮ
ಆ ದೇವಿ ಕರಕೊಂಡೇ ನಡೆದ ರಾಮಣ್ಣ ರಗುರಾಮ
ತಾಯಿಗೆ ಕರಕೊಂಡೇ ನಡೆದ ರಾಮಣ್ಣ ರಗುರಾಮ
ಏಳು ಕೊಳ್ಳದ ದಾರಿ ಹಿಡಿದು ರಾಮಣ್ಣ ರಗುರಾಮ
ಬಿರಿ ಬಿರಿ ಓಗ್ಯಾನೆ ಬಿಲ್ಲು ಬಾಣ ಇಡಿದಾನೆ ಗುರಾಮ
ಗುಡ್ಡ ಏರ್ಯನ ಗುಡಿಯ ಕಟ್ಟ್ಯಾನ ರಗುರಾಮ
ದಿನ ಏಳ ಸಾರಿ ಪೂಜಿ ಮಾಡ್ಯಾನೆ ರಗುರಾಮ
ಶುಕ್ರಾರ ಸೌಭಾಗ್ಯ ಮಂಗಳಾರ ನಿನ ಭೋಗ್ಯ ರಗುರಾಮ
ಅಂಗಳಕು ಬಾರೆ ಜೈಜಗದಂಬಾ ರಗುರಾಮ
ಅಂಗಳಕೆ ನೀ ಬಾರೇ ಜಗದಂಬಾ ಮೊಗ ತೋರೇ ರಗುರಾಮ
ಮಂಗಳಾರತಿ ನಾ ಬೆಳಗುವೆ ರಗುರಾಮ ಉಧೋ ಉಧೋ ಉಧೋ   ೫೬