ಆಕಾಶದಲ್ಲಿ ಯಾಕೆ ನಿಂತೊ ಮಳೆರಾಯ?
ಗೊಂಬೆ ಹಚ್ಚಡದ ದೊರಮಗನ ಹೊಲದಲ್ಲಿ
ದುಂಡಕ್ಕಿ ಬಾಯ ಬಿಡುತನೆ

ಅಂಬಾರದಲ್ಲಿ ಯಾಕೆ ನಿಂತೊ ಮಳೆರಾಯ?
ತೋಪಿನ ಹಚ್ಚಡದ ದೊರೆಮಗನ | ಹೊಲದಲ್ಲಿ,
ಕಾಚಕ್ಕಿ ಬಾಯಬಿಡುತವೇ

ಅಂಬಾರದಲ್ಲಿ ತುಂಬಿದಂಗಿರುವೋನೆ,
ಗೊಂಬೆ ಹಚ್ಚಡದ ಮಳೆರಾಯ | ನೀನಿಲ್ಲದೆ
ಸಾಲು ಹೊಂಬಾಳೆ ಬಳಿಲ್ಯಾವೊ | ದೇವೇಂದ್ರ

ಕಂಚಿನ ಹಣವಾಗಿ ಸುರಿಬಾರೋ ||
ಅಪ್ಪ ನೀನಿಲ್ಲದೆ ಬೆಪ್ಪಾದೊ ಈ ಭೂಮಿ
ಬಿಟ್ಟ ನೂಲಾದೊ ದನಕರ | ಮಳೆರಾಯ
ಅಂಬಾರದ ಕರುಣಿ ದಯಮಾಡೊ ||