ಹೊಸಗನ್ನಡದ ಕಿರಣೋದಯಕ್ಕೆ ತಮ್ಮ ವ್ಯಕ್ತಿತ್ವದ ಪ್ರಭೆಯನ್ನು ಸೇರಿಸಿದ ಹಲವು ಹಿರಿಯ ಸಾಹಿತಿಗಳಲ್ಲಿ ಗೋವಿಂದ ಪೈ ಅವರೂ ಒಬ್ಬರು. ಕನ್ನಡ ಕಾವ್ಯ ಸ್ಥಗಿತಗೊಂಡು  ಆಗಲೇ ಮೂರು ದಶಕಗಳಾಗಿದ್ದ ಅಂದಿನ ಪರಿಸರದಲ್ಲಿ, ಅದಕ್ಕೆ ಹೊಸ ನೀರನ್ನು ನುಗ್ಗಿಸಿ,ಹೊಸ ಕಾಲುವೆಗಳನ್ನು ತೋಡಿ, ಹೊಸ ಹಸಿರನ್ನು ಬೆಳೆಯಲು ಶ್ರಮಿಸಿದವರಲ್ಲಿ ಪೈ ಅವರು ಮುಖ್ಯರಾದವರು. ಅಂದಿನ ಸಾಹಿತ್ಯಕ್ಕೆ ಚಲನಶೀಲತೆಯನ್ನು ತರುವ ಹೊಸರೂಪಗಳ ಹುಡುಕಾಟ ನಡೆದದ್ದು, ಮಂಗಳೂರು, ಮೈಸೂರು ಮತ್ತು ಧಾರವಾಡದ ಪರಿಸರಗಳಲ್ಲಿ.ಮಂಗಳೂರಿನ ಪರಿಸರದಲ್ಲಿ ಇನ್ನೂ ಹಲವರ ಜತೆ, ತಮ್ಮ ಸಂಶೋಧನೆ ಹಾಗೂ ಬರೆಹಗಳ ಮೂಲಕ, ಹೊಸ ರೂಪಗಳನ್ನು ಕನ್ನಡ ಸಾಹಿತ್ಯಕ್ಕೆ ತಂದವರು ಪೈ ಅವರು ಸಾಹಿತ್ಯ ಸಂಶೋಧನೆ ಮತ್ತು ಕಾವ್ಯ ಈ ಎರಡೂ ಅವರು ಕೆಲಸ ಮಾಡಿದ ಪ್ರಮುಖ ಕ್ಷೇತ್ರಗಳು. ಕನ್ನಡ ಸಂಶೋಧನೆಯ ಶಿಲಾತಲದಿಂದ ಅವರು ತೆಗೆದ ಎಷ್ಟೋ ಸಂಗತಿಗಳು, ಮುಂದಿನವರ ಚಿಂತನೆಯ ನೆಲೆಗಟ್ಟುಗಳಾಗಿವೆ.

ಗೋವಿಂದ ಪೈ ಮೊದಲು ತಮ್ಮ ಕವಿತೆಯನ್ನು ಪ್ರಕಟಿಸಿದ್ದು ೧೯೦೦ರಲ್ಲಿ; ಆನಂತರ ಆರು ದಶಕಗಳವರೆಗೆ ಸಾಗಿತು ಅವರ ಸಾಹಿತ್ಯ ನಿರ್ಮಿತಿ. ಪೈ ಅವರು ಸಾಹಿತ್ಯ ನಿರ್ಮಿತಿಗೆ ತೊಡಗಿದ ಕಾಲವನ್ನು ಇಂದು ನಾವು ‘ನವೋದಯ’ ಎಂದು ಗುರುತಿಸುತ್ತೇವೆ, ಮತ್ತು ಕಾವ್ಯದ ಮಟ್ಟಿಗೆ ಅವರನ್ನು ನವೋದಯ ಪರಂಪರೆಗೆ ಸೇರಿದವರು ಎಂದು ಪರಿಗಣಿಸುತ್ತೇವೆ. ಇಂದು ಯಾವುವನ್ನು ‘ನವೋದಯ ಸಾಹಿತ್ಯದ ಲಕ್ಷಣಗಳು’ ಎಂದು ಗುರುತಿಸುತ್ತೇವೆಯೋ, ಅವು ಪೈ ಅವರ ಕಾವ್ಯದಲ್ಲಿ ಸಮೃದ್ಧವಾಗಿ ಕಾಣಿಸಿಕೊಳ್ಲುತ್ತವೆ. ಈ ದೃಷ್ಟಿಯಿಂದ ಪೈ ಅವರ ಕಾವ್ಯ ನವೋದಯದ ಚೌಕಟ್ಟಿನೊಳಗಣದು. ನವೋದಯ ಕಾವ್ಯದ ಈ ಹಾದಿಯಲ್ಲಿ, ಕನ್ನಡ ಕಾವ್ಯ ಪ್ರಕಾರಗಳ ದೃಷ್ಟಿಯಿಂದ ಮತ್ತು ಪ್ರಯೋಗಗಳ ದೃಷ್ಟಿಯಿಂದ ಹಲವು ‘ಮೊದಲು’ಗಳನ್ನು ತೆರೆದವರು ಅವರು.

‘ಪ್ರಾಸ ತ್ಯಾಗದ ಧೀರ ನಿರ್ಧಾರ’-ಈ ‘ಮೊದಲು’ಗಳಲ್ಲಿ ಮುಖ್ಯವಾದದ್ದು. ಕನ್ನಡ ಕಾವ್ಯ ಪರಂಪರೆಯಲ್ಲಿ ಶತಮಾನಗಳಿಂದಲೂ, ವಸ್ತು-ರೀತಿ-ಧೋರಣೆಗಳಲ್ಲಿ ಏನೇ ಬದಲಾವಣೆಗಳಾದರೂ, ದ್ವಿತೀಯಾಕ್ಷರ ಪ್ರಾಸದ ನಿರ್ಬಂಧ ಮಾತ್ರ ಅಚಲವಾಗಿ  ಉಳಿದೇ ಬಿಟ್ಟಿತ್ತು. ಕಾವ್ಯದ ರೂಪಗಳು ಬದಲಾದರೂ ಅಲ್ಲಿ, ಈ ದ್ವಿತೀಯಾಕ್ಷರ ಪ್ರಾಸವನ್ನು ಬಿಟ್ಟು ಬರೆಯುವ ಧೈರ್ಯವನ್ನು ನಮ್ಮ ಕವಿಗಳು ಮಾಡಲಿಲ್ಲ. ಈ ಬಗೆಯ ದ್ವಿತೀಯಾಕ್ಷರ ಪ್ರಾಸ ನಿಯಮವು, ಕಾವ್ಯವನ್ನು ಒಂದು ನಿರ್ದಿಷ್ಟ ಕಟ್ಟು ಪಾಡಿಗೆ ಒಳಪಡಿಸುವುದಲ್ಲದೆ, ನಿರರ್ಗಳವಾದ ಅಭಿವ್ಯಕ್ತಿಗೂ ಒಂದು ಆತಂಕವಾಗುವುದೆಂಬುದನ್ನು ಕಂಡುಕೊಂಡ ಪೈ ಅವರು, ೧೯೧೧ ರಲ್ಲಿ ಈ ಬಗೆಯ ಪ್ರಾಸವನ್ನು ಬಿಟ್ಟು ಬರೆಯುವ ಧೈರ್ಯವನ್ನು ಮೊದಲು ತೋರಿಸಿದರು.ಈ ರೀತಿ ಪ್ರಾಸ ಬಿಟ್ಟು ಅವರು ಬರೆದ ಪದ್ಯ ‘ಹೊಲೆಯನು ಯಾರು?’ ಎಂಬುದು. ಅದು ಅವರ ‘ಗಿಳಿವಿಂಡು’ ಸಂಗ್ರಹದಲ್ಲಿದೆ. ‘ಪ್ರಾಸ ತ್ಯಾಗದ ಧೀರ ನಿರ್ಧಾರ’ವೆಂದು ಹೆಸರಿಸಲಾಗಿರುವ ಪೈ ಅವರ ಈ ಪ್ರಯತ್ನ, ಹೊಸಗನ್ನಡ ಕಾವ್ಯ ತನ್ನ ಹೊಸ ರೂಪಗಳನ್ನು ಕಂಡುಕೊಳ್ಳುವ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಯಿತು. ದ್ವಿತೀಯಾಕ್ಷರ ಪ್ರಾಸವನ್ನು ಬಿಟ್ಟು ಅವರು ಬರೆದ ಪದ್ಯ ಮೊದಲು ಪ್ರಕಟವಾದಾಗ, ಅದನ್ನು ಕುರಿತು ಎದ್ದ ಕೋಲಾಹಲವನ್ನು ಗಮನಿಸಿದರೆ, ಕನ್ನಡ ಕಾವ್ಯ ಸ್ಥಗಿತಗೊಂಡ ರೀತಿ ಎಷ್ಟು ದಟ್ಟವಾಗಿತ್ತೆಂಬುದು ತಿಳಿಯುತ್ತದೆ.[1]

ಗೋವಿಂದ ಪೈ ಅವರ ಇನ್ನೊಂದು ‘ಮೊದಲು’, ಕನ್ನಡದಲ್ಲಿ ಮೊಟ್ಟ ಮೊದಲ ‘ಸಾನೆಟ್’ ಅನ್ನು ಬರೆದವರು ಅವರು ಎಂಬುದು. ‘ಕವಿತಾವತಾರ’ ಎನ್ನುವುದು ಅವರ ಶೀರ್ಷಿಕೆ. ಅದು ರಚಿತವಾದದ್ದು ೧೯೧೬ ರಲ್ಲಿ. ಪೈ ಅವರು ಇಂಗ್ಲಿಷ್ ‘ಸಾನೆಟ್’ ರೂಪಕ್ಕೆ ಕನ್ನಡದಲ್ಲಿ ‘ಚತುರ್ದಶಪದಿ’ ಎಂದು ಕರೆದರು. ಪೈ ಅವರ ಇನ್ನೂ ಒಂದು ‘ಮೊದಲು’ ಎಂದರೆ ಕನ್ನಡದಲ್ಲಿ ಖಂಡಕಾವ್ಯಗಳನ್ನು ಬರೆದದ್ದು. ೧೯೩೧ ರಲ್ಲಿ ಅವರು ಬರೆದ ಗೋಲ್ಗೊಥಾ ಕನ್ನಡದ ಮೊದಲ ಖಂಡಕಾವ್ಯ ಮಾತ್ರವಲ್ಲ, ಕ್ರಿಸ್ತನ ಬದುಕನ್ನು ಕುರಿತು ಮೊಟ್ಟ ಮೊದಲು ಕನ್ನಡದಲ್ಲಿ ರಚಿತವಾದ ಖಂಡ ಕಾವ್ಯ ಇದು. ಜತೆಗೆ ಬಹುಸಂಖ್ಯೆಯಲ್ಲಿ ‘ವಿಯೋಗಗೀತೆ’ (Elegy) ಗಳನ್ನೂ ಬರೆದವರು ಅವರೇ. ಅವರ ‘ಗಿಳಿವಿಂಡು’ (೧೯೩೦) ಸಂಗ್ರಹದ ‘ಕಡವಿನಲ್ಲಿ’ ‘ಯುಗಾದಿಯ ನೆನಪು’ ‘ಸುಮ್ಮನೇಕೆನ್ನನೆಲೆ ವಿಧಿಯೆ ಕಾಡಿಸುವೆ’ ಎಂಬ ಕವಿತೆಗಳಲ್ಲಿ ಕಾಣಿಸಿಕೊಳ್ಳುವ ಅವರ ವಿಯೋಗ ಗೀತೆಗಳು ‘ನಂದಾದೀಪ’ ಕವನ ಸಂಗ್ರಹದ ತುಂಬ ತುಂಬಿಕೊಂಡಿವೆ.

ಕನ್ನಡ ನವೋದಯ ಸಂದರ್ಭದಲ್ಲಿ ನಡೆದ ಬಹುಮುಖ್ಯವಾದ ಕಾರ್ಯವೆಂದರೆ, ಅನ್ಯಭಾಷಾ ಸಾಹಿತ್ಯಗಳ-ಅದರಲ್ಲಿಯೂ ಪಶ್ಚಿಮದ-ಪ್ರೇರಣೆಯಿಂದ ಹೊಸ ರೂಪಗಳನ್ನು ಆವಿಷ್ಕಾರ ಮಾಡಿದ್ದು. ಗೋವಿಂದ ಪೈ ಅವರು ಮೊದಲು ಕನ್ನಡದಲ್ಲಿ  ಬರೆದ ‘ಸಾನೆಟ್’ ‘ಖಂಡ ಕಾವ್ಯ’ ಇವುಗಳು ಮೂಲತಃ ಪಶ್ಚಿಮದ ಕಾವ್ಯದಿಂದಲೇ ಪ್ರೇರಣೆ ಪಡೆದವು. ಪಾಶ್ಚಾತ್ಯ ಕಾವ್ಯ ರೂಪಗಳಿಗೆ ಸಂವಾದಿಯಾದ ರೂಪಗಳನ್ನು ನಮ್ಮಲ್ಲಿ ಸಿದ್ಧಪಡಿಸುವುದರ ಜತೆಗೆ, ಪಶ್ಚಿಮದ ಕೃತಿಗಳ ಅನುವಾದ ರೂಪಾಂತರಗಳ ಮೂಲಕವೂ ಕನ್ನಡ ಕಾವ್ಯಕ್ಕೆ ಹೊಸ ತಿರುವನ್ನು ತರುವುದು, ಅಂದಿನವರ ಉದ್ದೇಶವಾಗಿತ್ತು. ಗೋವಿಂದ ಪೈ ಅವರೂ ಈ ಬಗೆಯ ಅನುವಾದಗಳನ್ನು ಮಾಡಿದ್ದಾರೆ, ವರ್ಡ್ಸ್‌ವರ್ತ್‌ನ ‘ಚಿಟ್ಟೆಗೆ’ (To a butterfly); ಷೆಲ್ಲಿಯ ‘ಬಾನಕ್ಕಿಗೆ’ (To a skylark); ಜರ್ಮನ್ ಕವಿಯ ಪದ್ಯ, ಕೊಳುಗುಳದ ಮನವಿ; ಉಮರ್ ಖಯ್ಯಾಮನ ರುಬಾಯತ್‌ಗಳ ಅನುವಾದ; ಇಕ್ಬಾಲ್ ಕವಿಯ (ಉರ್ದು) ಹಿಂದೂಸ್ಥಾನ್ ಹಮಾರಾ; ಠ್ಯಾಗೂರ್ ಅವರ, ಮರಾಠಿಯ ಕೇಶವಸುತರ ಕವಿತೆಗಳ ಅನುವಾದ ಹಾಗೂ ಅಳವಡಿಕೆಗಳು-ಇಂಥವುಗಳ ಮೂಲಕ ಪೈ ಅವರು ಹೊಸ ಕಾವ್ಯದ ಹೊಸ ರೂಪಗಳನ್ನು ಕನ್ನಡಕ್ಕೆ ತಂದವರಲ್ಲಿ ಒಬ್ಬರು. ಆದರೆ ಪೈ ಅವರ ಅನುವಾದ ಇತ್ಯಾದಿಗಳು, ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರ ಪ್ರಯತ್ನಗಳ ಹಾಗೆ ನವೋನವವೂ, ಮಾರ್ಗದರ್ಶಕವೂ ಆಗಲಿಲ್ಲ.

ನವೋದಯ ಕಾವ್ಯದ ಮತ್ತೊಂದು ಮುಖ್ಯ ಲಕ್ಷಣ ರಾಷ್ಟ್ರೀಯತೆ. ಭಾರತವನ್ನು ಕುರಿತು ಪ್ರೀತಿ, ಸ್ವಾತಂತ್ರ್ಯದ ಹಂಬಲ, ಕರ್ನಾಟಕದ ಮೇಲಿನ ಹಾಗೂ ಕನ್ನಡದ ಮೇಲಿನ ಅಭಿಮಾನ, ಇತ್ಯಾದಿಗಳೆಲ್ಲವೂ ಇದರಲ್ಲಿ ಸಮಾವೇಶವಾಗುತ್ತವೆ. ಪೈ ಅವರ ಕಾವ್ಯದಲ್ಲಿ ರಾಷ್ಟ್ರೀಯ ಭಾವನೆಯನ್ನು ಕುರಿತು ಕವನಗಳು ಸಾಕಷ್ಟು ಸಂಖ್ಯೆಯಲ್ಲಿವೆ. ‘ಗಿಳಿವಿಂಡು’ ಸಂಗ್ರಹದಲ್ಲಿ ಐದು, ‘ಹೃದಯರಂಗ’ದಲ್ಲಿ ಹದಿಮೂರು ಕವನಗಳಿವೆ. ಜತೆಗೆ ‘ಚಿತ್ರಭಾನು’ ಎಂಬ ಅವರ ನಾಟಕವೂ ಇದೇ ವಸ್ತುವನ್ನುಳ್ಳದ್ದು. ಈ ಜಾತಿಗೆ ಸೇರಿದ ಕವಿತೆಗಳನ್ನು ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಕಾಲದವುಗಳೆಂದು ವಿಭಾಗಿಸಿ ನೋಡಬಹುದು. ಇದೇ ಕಾಲದಲ್ಲಿ ಬರೆಯುತ್ತಿದ್ದ ಬಿ.ಎಂ. ಶ್ರೀಯವರಲ್ಲಿ ಕಾಣಿಸಿಕೊಳ್ಳದಿದ್ದ ರಾಷ್ಟ್ರೀಯ ಪ್ರಜ್ಞೆ ಪೈ ಅವರಲ್ಲಿ ಸಾಕಷ್ಟು ಗಮನಾರ್ಹವಾಗಿ ಕಾಣಿಸಿಕೊಂಡಿದ್ದು ವಿಶೇಷವಾದ ಸಂಗತಿಯಾಗಿದೆ. ಭಾರತೀಯ ಸ್ವಾತಂತ್ರ್ಯದ ಕಳಕಳಿ, ಮತ್ತು  ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಭ್ರಷ್ಟಾಚಾರಗಳನ್ನು ಪೈ ಅವರು ತಮ್ಮ ಈ ಕವಿತೆಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ಈ ದೇಶವನ್ನು ಕುರಿತು,

ಭಾರತವನುಳಿಯುತ್ತ ಅನ್ಯ ಜೀವನವೆತ್ತ
ಭಾರತವೆ ನನ್ನುಸಿರು ನನ್ನೊಗೆದ ಬಸಿರು
ಭಾರತವೆ ಧನ ಧಾನ್ಯ, ಭಾರತವೆ ಮನೆ ಮಾನ್ಯ
ಭಾರತವೆ ದೇವಾರವೆನ್ನಸಂಸಾರ
……………………………..
ಭಾರತೀಯ ಸ್ವಾತಂತ್ರ್ಯ ಸಾಧನವೆ ನಿಜಮಂತ್ರ
ಭಾರತದ ಜಯಮೂರ್ತಿ ಮನ್ಮನಪೂರ್ತಿ (ಹೃದಯರಂಗ,ಪು.೨)

ಎಂದು ಆಶಿಸಿದ ಪೈ ಅವರು, ಬೇರೊಂದು ಕವಿತೆಯಲ್ಲಿ,

ನಮಗೀ ಪರತಂತ್ರದ ಹೊಲೆಗಲಸಿರಲಿಂತು
ನಿನ್ನಯ ಸಂತಾನರೆಂತು?         (ಗಿಳಿವಿಂಡು,ಪು.೧೬)

ಎಂದು ತಮ್ಮನ್ನು ತಾವೇ ನಿಂದಿಸಿಕೊಳ್ಳುತ್ತಾರೆ. ‘ಹೊಲೆಯನು ಯಾರು’ ಎಂಬ ಕವಿತೆಯಲ್ಲಿ,

ರಾಷ್ಟ್ರದುನ್ನತಿಯ ಸಾಧಿಸೆ ಶ್ರಮಿಸದವ ಹೊಲೆಯ
ತನ್ನ ರಾಷ್ಟ್ರಕೆ ದ್ರೋಹ ಚಿಂತಿಪನೆ ಹೊಲೆಯ
ಸ್ವಾರ್ಥದಿಂ ರಾಷ್ಟ್ರಹಿತವನು ಮರೆವವನು ಹೊಲೆಯ
ರಾಷ್ಟ್ರಭಕ್ತಿಯ ಲವಲೇಶವಿಲ್ಲದವ ಹೊಲೆಯ
(ಗಿಳಿವಿಂಡು, ಪು. ೧೬)

ಎಂದು, ರಾಷ್ಟ್ರದ ಬಗ್ಗೆ ಚಿಂತಿಸುವ ಸಂದರ್ಭ, ಬದಲಾದ ಪರಿಸರದಲ್ಲಿ ‘ಹೊಲೆಯ’ನನ್ನು ‘ಹೊಲೆತನ’ವನ್ನು ಕುರಿತ ವ್ಯಾಖ್ಯಾನವೂ ಆಗಿದೆ. ಹಾಗೆಯೆ, ಅಂದಿನ ರಾಷ್ಟ್ರೀಯ ಹೋರಾಟವನ್ನು ಕುರಿತು, ಕೇಶವಸುತರ ಮರಾಠೀ ಕವಿತೆಯೊಂದರ ಪ್ರೇರಣೆ ಪಡೆದು,

ತಾರ ನನಗೊಂದು ತುತೂರಿಯಂ

ಎಂದು ಮೊದಲಾಗುವ ಸುದೀರ್ಘ ಪದ್ಯವೊಂದನ್ನು ಬರೆದಿದ್ದಾರೆ. “ಎದ್ದೇಳಿರಿ ಜೀವನ ರಣವೀರರೆ ಮೆಟ್ಟಿದಡಿಯ ಹಿಮ್ಮೆಟ್ಟದೆ ನಡಿರಿ” ಎಂದು ೨೨೫ ಪಂಕ್ತಿಗಳಷ್ಟು ಹರಹಿಕೊಂಡಿರುವ ಈ ಕವಿತೆ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕುವ ಕರೆಯನ್ನು ಅತ್ಯಂತ ಕಳಕಳಿಯಿಂದ ನಿರೂಪಿಸುತ್ತದೆ. ಸ್ವಾತಂತ್ರ್ಯಪೂರ್ವದ ಈ ಕಳಕಳಿ ಮತ್ತು ಈ ಎಚ್ಚರ, ಸ್ವಾತಂತ್ರ್ಯೋತ್ತರ ಪರಿಸರದಲ್ಲಿಯೂ ಮುಂದುವರಿದಿದೆ. ಸ್ವಾತಂತ್ರ್ಯೋತ್ತರ ಭಾರತೀಯ ಪರಿಸರದ ಘಟನೆಗಳು ಪೈ ಅವರ ಕನಸನ್ನು ಒಡೆದು ತಲ್ಲಣಗೊಳಿಸಿವೆ. ನವಖಾಲಿಯ ಕಗ್ಗೊಲೆಗಳು, ಹಿಂದೂ ಮುಸ್ಲಿಂ ಜಾತೀಯ ಜಗಳಗಳು, ಕಲ್ಕತ್ತಾದ ಭೀಕರ ಬರಗಾಲದ ಬವಣೆಗಳು ಅವರ ಮನಸ್ಸನ್ನು ಕಲಕಿ ಸ್ವಾತಂತ್ರ್ಯ ಬಂದದ್ದರಿಂದ ನಾವು ಪಡೆದುಕೊಂಡಿದ್ದೇನು ಎಂಬ ಚಿಂತೆಯೂ ಅವರನ್ನು ಕಾಡಿದೆ. ಈ ಸಂದರ್ಭದಲ್ಲಿ ಅವರು ದೇವರನ್ನು ಕುರಿತು,

“ಬೇಡಿದೀ ಸ್ವಾತಂತ್ರ್ಯವಿತ್ತು ಅಖಿಲ ಕೇಡತೊಡಗಿಸಿದೆ”
(ಮನವಾರ್ತೆ, ಹೃದಯರಂಗ, ಪು. ೪೬)

ಎಂದು ನೊಂದು ನುಡಿಯುತ್ತಾರೆ. ಸ್ವಾತಂತ್ರ್ಯ ಬಂದದ್ದು, ರಾಹು ಹೋಗಿ ಕೇತು ಬಂದಂತಾಯಿತು ಎನ್ನುತ್ತಾರೆ.

“ಏನು ತೋರಿಸಿದೆಮಗೆ, ಮೇಣೇನನಿತ್ತೆ?
ಕಳಕೊಂಡ ಬಿಡುಗಡೆಯ ನಮಗಿತ್ತೆ ತಂದೆ
ಆದರೀಗಣ ಕತೆಯ ಬಲ್ಲೆಯಾ ಮತ್ತೆ?
ರಾಹುವನು ತೊಲಗಿಸಿದೆ ಕೇತುವನು ತಂದೆ”
(ಹೃದಯರಂಗ, ಪು. ೪೬)

ಒಟ್ಟಿನಲ್ಲಿ ಸ್ವಾತಂತ್ರ್ಯ ಬಂದುದರಿಂದ ಏನನ್ನೂ ಪಡೆದಂತಾಗಲಿಲ್ಲ. ಪರದೇಶದ ಶೋಷಕರು ತೊಲಗಿ, ಸ್ವದೇಶೀ ಶೋಷಕರು ನೆಲೆನಿಂತಂತಾಯಿತು; ರಾಹುವಾಗಲೀ ಕೇತುವಾಗಲೀ ಮಾಡುವ ಕೆಲಸ ಬರೀ ‘ನುಂಗು’ವುದು ತಾನೇ! ಒಟ್ಟಿನಲ್ಲಿ ಅನಿಷ್ಟದಿಂದ ಈ ದೇಶ ಪಾರಾಗಲಿಲ್ಲ ಎಂಬುದು ಪೈ ಅವರ ಅನುಭವ. ಈ ಸ್ಥಿತಿಯಲ್ಲಿ,

ಧನ್ಯಂ ತೋರ್ದೆನಗಂದು ಮದ್ಭರತ ಭೂಸ್ವಾತಂತ್ರ್ಯ ಸಂಪ್ರಾಪ್ತಿಯಂ
ಐಕ್ಯಂ ಬಾರದೆ, ಶಾಂತಿ ಸಾರದೆ, ಎಮಗೀ ಸ್ವಾತಂತ್ರ್ಯವಿದ್ದೇಂಫಲಂ?
ತಾರಾ ಶಾಂತಿಯನ್, ಎಮ್ಮೊಳೈಕ್ಯವ ಶ್ರೀ ಮಾತೃಭೂಮೀಶ್ವರಾ
(ಹೃದಯರಂಗ, ಪು. ೫೧)

ಎಂದು ಮಾತೃಭೂಮೀಶ್ವರನಲ್ಲಿ ಮೊರೆಯಿಡುತ್ತಾರೆ: ಸ್ವಾತಂತ್ರ್ಯಪೂರ್ವದಲ್ಲಿ ಕಂಡ ಆಸೆಗಳು ನುಚ್ಚುನೂರಾಗಿವೆ.

ಬಡವರತಿಪಾಡು ನೀಗಿಸುವ ಮದ್ದಿಲ್ಲ
ದೇಶದ ಹೆಸರ ನೆವದಿ ಜಂಬವ ಮೆರೆಸೆ
ಎನಿತೊ ವಾಚಾಲಕರ ಜಗದ ತಿರುಗಾಟ

(ಹೃದಯರಂಗ, ಪು. ೫೫)

ಜನ ಬಡತನದಿಂದ ನರಳುವ ಹೊತ್ತಿನಲ್ಲಿ ನಮ್ಮ ರಾಜಕಾರಣಿಗಳು,ತಮ್ಮ ಪ್ರತಿಷ್ಠೆಗಳನ್ನು ಮೆರೆಸುವ ಸಲುವಾಗಿ ದೇಶದೇಶಗಳನ್ನು ಸುತ್ತುತ್ತಾ ಕೇವಲ ವಾಚಾಲಕ (ಭಾಷಾಣಕಾರ)ರಾಗಿದ್ದಾರೆ. ಹೀಗಾಗಿ,

“ಹೊರಗೆ ಹೆಸರಿನ ಕಂಪು ಒಳಗೆ ತವುಡಿನ ಬೆಂಕಿ
ನೆಚ್ಚಿನ ಅಮೆರಿಕಾವೊ ಹೊನ್ನೊರೆಯ ಕತ್ತಿ”
(ಹೃದಯರಂಗ, ಪು. ೪೬)

ಎಂಬಂತಾಗಿದೆ ನಮ್ಮ ಸ್ಥಿತಿ. ಈ ಪರಿಸ್ಥಿತಿಂiಲ್ಲಿ ಮಹಾತ್ಮಗಾಂಧಿಯವರು ಜೀವಂತರಾಗಿದ್ದರೆ ಚೆನ್ನಾಗಿತ್ತು, ಹಾಗಾಗಿದ್ದರೆ ದೇಶ ಹೀಗಿರುತ್ತಿರಲಿಲ್ಲ ಎಂಬ ಕನವರಿಕೆಯಲ್ಲಿ,

ಇನ್ನಿನಿಸು ನೀ ಮಹಾತ್ಮ ಬದುಕಬೇಕಿತ್ತು
ಈಗ ಭಾರತಕಗತ್ಯವಿದೆ ನಿನ್ನ
ಬಿರುಗಾಳಿಗೊಲೆವ ಹಡಗದಂತಿಹುದಾಸತ್ತು
ನಿನ್ನ ಹೊರತಾರೊಯ್ಯೆ ರೇವಿನೊಳದನ್ನ
ಸ್ವಾರ್ಥಪರರಾಗಿಹೆವು, ದೇವರಿಲ್ಲೆಮಗಿಂದು
ಸೋದರತೆ ಇಲ್ಲ, ಮುಂದಿನದಿಲ್ಲ ಗೊಡವೆ
ಧರ್ಮ ಬಾಹಿರರೆಮ್ಮನೆತ್ತಲಾರೆಂದು
ತೋಚದೆ ಮಹಾತ್ಮ ನಿನಗಿಂತು ಮೊರೆಯಿಡುವೆ

(ಹೃದಯರಂಗ, ಪು. ೪)

ಮಹಾತ್ಮಗಾಂಧಿಯವರ ಅಗತ್ಯವನ್ನು ಕುರಿತ ಈ ಪದ್ಯ, ಸದ್ಯದ ಪರಿಸ್ಥಿತಿಯನ್ನು ಅತ್ಯಂತ ಕಳಕಳಯಿಂದ ನಿರೂಪಿಸುತ್ತದೆ. ಈ ಪದ್ಯ ಕೂಡಾ ಮಿಲ್ಟನ್‌ನನ್ನು ಕುರಿತು, ವರ್ಡ್ಸ್‌ವರ್ತ್ ಬರೆದ ಪದ್ಯದ ಅನುಕರಣವಾದರೂ (‘Milton thou should be living at this hour, England hath need of thee’) ಪೈ ಅವರ ಕಳಕಳಿ ಇದರ ಮೂಲಕ ಅತ್ಯಂತ ಪ್ರಾಮಾಣಿಕವಾಗಿ ಮೈ ಪಡೆದಿದೆ.

ಸಂಶೋಧನೆಯ ಸುರಂಗದಲ್ಲಿದ್ದರೂ, ಪೈ ಅವರ ಕವಿ ಹೃದಯ, ಈ ರಾಷ್ಟ್ರದ ಆಗು-ಹೋಗುಗಳನ್ನು ಕುರಿತು ಹೇಗೆ ಸದಾ ಎಚ್ಚರದಲ್ಲಿದ್ದು ಕೊಂಡು ಪ್ರತಿಕ್ರಿಯಿಸುತ್ತಿತ್ತು ಎನ್ನುವುದಕ್ಕೆ ರಾಷ್ಟ್ರೀಯ ಭಾವನೆಯನ್ನು ಕುರಿತು, ಬರೆದ ಬಹು ಸಂಖ್ಯೆಯ ಕವಿತೆಗಳು ಸಾಕ್ಷಿಯಾಗಿವೆ.

ಇದರ ಜತೆಗೆ, ನಿಜವಾದ ಸ್ವಾತಂತ್ರ್ಯಪ್ರಿಯತೆ ಎನ್ನುವುದು, ಕೇವಲ ತನ್ನ ದೇಶವೊಂದನ್ನು ಕುರಿತ ಪ್ರೀತಿ ಮಾತ್ರವಲ್ಲ; ಜಗತ್ತಿನಲ್ಲಿ ಎಲ್ಲೆಲ್ಲಿ ಪರತಂತ್ರಕ್ಕೆ ಸಿಕ್ಕ ದೇಶಗಳಿವೆಯೋ, ಅವುಗಳ ಸ್ವಾತಂತ್ರ್ಯಪ್ರಿಯತೆಯನ್ನು ಗೌರವಿಸುವುದು, ಬೆಂಬಲಿಸುವುದು, ಸ್ವಾತಂತ್ರ್ಯವನ್ನು ಒಂದು ಮೌಲ್ಯವೆಂದು ಕಂಡುಕೊಂಡ ವ್ಯಕ್ತಿತ್ವದ ನಿಲುವಾಗಿರಬೇಕು. ಇದು ಮುಖ್ಯವಾಗಿ ಪ್ರಕಟವಾಗುವುದು, ಅನ್ಯಾಕ್ರಮಣ ವಿರೋಧೀ ಅಥವಾ ಯುದ್ಧ ವಿರೋಧೀ ನಿಲುವಿನಲ್ಲಿ. ಪೈ ಅವರಲ್ಲಿ ಉದ್ದಕ್ಕೂ ಸ್ವಾತಂತ್ರ್ಯವೆಂಬ ಮೌಲ್ಯದ ಬಗ್ಗೆ ಗೌರವ ಹಾಗೂ ಯುದ್ಧವಿರೋಧೀ ನಿಲುವುಗಳು ಕಂಡುಬರುತ್ತವೆಂಬುದು ಮಹತ್ವದ ಸಂಗತಿಯಾಗಿದೆ. ಇಟಲಿ ದೇಶವು ತುರ್ಕಿಯ ಮೇಲೆ ಧಾಳಿ ಮಾಡಿದಾಗ-

ನಿರಪರಾಧಿಯ ರಕ್ತ
ದಿಂದ ನೆಲಜಲಸಿಕ್ತ
ವಾಗದೊಲು ಕಾಪಾಡು ದೇವಕೀ ತನಯಾ
(ಗಿಳಿವಿಂಡು, ಪು. ೧೭)

ಎಂದು ‘ತುರ್ಕಿಯ ಪರವಾಗಿ ದೇವರಲ್ಲಿ ಪ್ರಾರ್ಥನೆ’ ಮಾಡುತ್ತಾರೆ. ಅಮೆರಿಕಾ ಜಪಾನಿನ ಹಿರೋಷಿಮಾ ನಾಗಸಾಕಿಗಳ ಮೇಲೆ ಅಣುಬಾಂಬನ್ನೆಸೆದಾಗ-

“ಈ ಯುದ್ಧಸರ್ವಥಾ ಅಂತಿಮ ಯುದ್ಧವಲ್ಲ
ಹೊಸತೆನಿತೊ ಯುದ್ಧಗಳ ತಾಯಿ, ಮುತ್ತಾಯಿ
ಪರರ ಬಿಡುಗಡೆಯನಡಿ ಮೆಟ್ಟಿ, ಜಗವೆಲ್ಲ
ತನಗೆ ತನಗೆಂಬ ಮನುಜಾ ಸಾಯೊ ಸಾಯಿ.”

(ಹೃದಯರಂಗ, ಪು. ೧)

ಎಂದು, ಪರರ ಸ್ವಾತಂತ್ರ್ಯವನ್ನು ಮೆಟ್ಟುವ ಪ್ರವೃತ್ತಿಯನ್ನು ಖಂಡಿಸುತ್ತಾರೆ. ಪೈ ಅವರ ಈ ಯುದ್ಧ ವಿರೋಧೀ ಧೋರಣೆ, ಸ್ವಾತಂತ್ರ್ಯವನ್ನು ಒಂದು ಮೌಲ್ಯವೆಂದು ಪರಿಗಣಿಸಿದ ಚೇತನದ ಅಭಿವ್ಯಕ್ತಿಯಾಗಿದೆ.

ನವೋದಯದ ಇನ್ನೊಂದು ಮುಖ್ಯ ಲಕ್ಷಣವೆಂದರೆ, ರಾಷ್ಟ್ರೀಯತೆಯ ಒಂದು ಅಂಗವಾಗಿ, ತಮ್ಮ ಪ್ರಾದೇಶಿಕ ಸಂಸ್ಕೃತಿಯ ಬಗ್ಗೆ ತಾಳಿದ ಎಚ್ಚರ. ಕರ್ನಾಟಕದ ಮಟ್ಟಿಗೆ ಅದು, ಒಂದು ಭಾಷೆಯನ್ನಾಡುವ ಜನ ಒಂದಾಗುವುದು ಅಗತ್ಯವೆಂಬ, ತಮ್ಮ ಭಾಷೆ-ಸಾಹಿತ್ಯ-ಸಂಸ್ಕೃತಿಗಳ ಬಗ್ಗೆ ಅಭಿಮಾನವನ್ನು ಬೆಳೆಯಿಸಿಕೊಳ್ಳಬೇಕೆಂಬ ಪ್ರವೃತ್ತಿಯಾಗಿ ಪ್ರಕಟವಾಯಿತು. ಒಟ್ಟಿನಲ್ಲಿ ‘ಕನ್ನಡತನದ’ ಅರಿವು ಇದರಲ್ಲಿ ಮುಖ್ಯವಾದದ್ದು-

“ತನು ಕನ್ನಡ ಮನ ಕನ್ನಡ ಧನ ಕನ್ನಡ”

ಎನ್ನುವ ಪೈ ಅವರು, ಕನ್ನಡ ತಾಯನ್ನು ‘ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ’ ಎಂದು ಪ್ರಾರ್ಥಿಸುತ್ತಾರೆ. ತನ್ನ ಭಾಷೆಯಲ್ಲಿ ಅಲ್ಲದೆ ಬೇರೆ ಭಾಷೆಯ ಮೂಲಕ ನಾವು ನಿಜವಾದ ಅರಿವನ್ನು ಪಡೆಯುವುದು ಸಾಧ್ಯವೇ ಇಲ್ಲ ಎಂಬ ತಿಳಿವಿನಿಂದ,

“ತನ್ನ ತಾಯ್ನುಡಿಯಿಂದ ದುಡಿದು ಬಿಜ್ಜೆಯೆ ಬಿಜ್ಜೆ
ಹೆರರ ನಾಲಗೆಯೆಂಜಲೆನ್ನಗಂ ಸವಿಯೆ?”

(ಗಿಳಿವಿಂಡು, ಪು. ೩೬)

ಎಂದು ಶಿಕ್ಷಣದ ಮೂಲತತ್ವವನ್ನು ಎತ್ತಿ ಹಿಡಿಯುತ್ತಾರೆ. ಯಾವುದೇ ಒಂದು ಭಾಷೆಗೆ ಸತ್ವವನ್ನು ತುಂಬಬೇಕಾದರೆ, ಅದನ್ನು ಎಲ್ಲ ಹಂತಗಳಲ್ಲಿಯೂ ದುಡಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆದ ಜನರಿಂದ ಮಾತ್ರ ಸಾಧ್ಯ. ಆದರೆ ಕನ್ನಡ ಜನ ಎಂಥವರೆಂದರೆ-

“ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ”

(ಗಿಳಿವಿಂಡು, ಪು. ೮೨)

ಎಂಬಂತಾಗಿದೆ. ತನ್ನೊಳಗಿರುವ ಕಂಪನ್ನು ತಾನರಿಯದೆ, ಅದನ್ನು ಹೊರಗೆ ಹುಡುಕುವ ಕಸ್ತೂರಿ ಮೃಗದಂತಾಗಿದ್ದಾರೆ ನಮ್ಮಜನ. ಆದ ಕಾರಣ-

ಕನ್ನಡ ಕಸ್ತೂರಿಯನ್ನ
ಹೊಸತುಸಿರಿಂ ತೀಡದನ್ನ
ಸುರಭಿ ಎಲ್ಲಿ? ನೀನದನ್ನ
ನವಶಕ್ತಿಯನೆಬ್ಬಿಸು
ಹೊಸ ಸುಗಂಧದೊಸಗೆಯಿಂದ ಜಗದಿ ಹೆಸರ ಹಬ್ಬಿಸು.

(ಗಿಳಿವಿಂಡು, ಪು. ೬೮)

ಎಂದು ಕನ್ನಡಿಗರನ್ನು ಎಚ್ಚರಿಸುತ್ತಾರೆ. ತಮ್ಮ ಕಾವ್ಯ ಹಾಗೂ ಸಂಶೋಧನೆಗಳ ಮೂಲಕ, ಕನ್ನಡ ಭಾಷೆ-ಸಾಹಿತ್ಯ-ಸಂಸ್ಕೃತಿ-ಇತಿಹಾಸ ಇತ್ಯಾದಿಗಳ ಬಗ್ಗೆ ಪೈ ಅವರು ತೆರೆದು ತೋರಿದ ಕನ್ನಡದ ಶ್ರೀಮಂತಿಕೆ ಮತ್ತು ಹೊಸ ಅರಿವು ಸ್ಮರಣೀಯವಾಗಿವೆ.

ಭಾರತೀಯ ನವೋದಯ ಇನ್ನೊಂದು ಲಕ್ಷಣವೆಂದರೆ, ದೇವರು-ಧರ್ಮ ಇತ್ಯಾದಿಗಳ ವಿಚಾರದಲ್ಲಿದ್ದ, ಪರಂಪರಾಗತವಾದ ದೃಷ್ಟಿಕೋನಗಳನ್ನು ಬದಲಾಯಿಸಿದ್ದು. ಇದು ಸಾಧ್ಯವಾದದ್ದು ಸಾಂಸ್ಥಿಕ ಧರ್ಮಗಳ ನಿರಾಕರಣದಿಂದ. ಇದರಿಂದ ಒಂದು ಧಾರ್ಮಿಕ ಉದಾರವಾದೀ ಧೋರಣೆ ಅಥವಾ ಸಮನ್ವಯದೃಷ್ಟಿ ಉದಯವಾಯಿತು. ಪೈ ಅವರಿಗೆ ವೈಯಕ್ತಿಕವಾಗಿ, ಕೃಷ್ಣ ‘ಇಷ್ಟದೈವ’ದಂತೆ ಕಂಡರೂ ಕೃಷ್ಣ-ಕ್ರಿಸ್ತ-ಬುದ್ಧ ಈ ಮೂವರ ವ್ಯಕ್ತಿತ್ವಗಳು ಸಂಗಮಿಸಿದ ಒಂದು ಧಾರ್ಮಿಕ ನಿಲುವು ಅವರಲ್ಲಿ ಕಾಣಿಸುತ್ತದೆ. ಒಂದು ಕವಿತೆಯಲ್ಲಿ ಯೇಸು ಮತ್ತು ಕೃಷ್ಣ ಇವರಿಬ್ಬರ ಸಾಮ್ಯವನ್ನು ತರ್ಕಬದ್ಧವಾಗಿ ಗುರುತಿಸುತ್ತಾರೆ:

ಕೊಳಲ ಸೂಸಿ ಹಸುಮೇಸಿದೆ, ಕೊಡತಿಯ
ಹಿಡಿದು ಬಡಗಿಯಾ ಪಡಿ ದುಡಿದೆ.
ರಾಧೆ ಬಿಗಿದ ಭುಜ ಬಂಧದ ಬಂದಿಯೊ
ಮರಿಯಾಳ ಮುತ್ತುಗಳಂದುಗವೊ

(ಗಿಳಿವಿಂಡು, ಪು. ೪೦)

ಎಂಬ ಸಮೀಕರಣ ಈ ನಿಲುವಿಗೆ ಸಾಕ್ಷಿಯಾಗಿದೆ. ಮಹಾತ್ಮಗಾಂಧಿಯವರು ಇಪ್ಪತ್ತೊಂದುದಿನಗಳ ಕಾಲ ಉಪವಾಸ ಮಾಡಿದಾಗ, (೧೯೨೪ರಲ್ಲಿ) “ಉರು ಮೇಲೆಯರಳಿಯಡಿಯಲಿ ಚಿರಂ ಹಸಿದು ಮಾರನಂ ಮುರಿದು” ತಪಸ್ಸು ಮಾಡಿದ ಬುದ್ಧನ ನೆನಪಾಗುತ್ತದೆ ಪೈ ಅವರಿಗೆ. ಹಾಗೆಯೆ “ಯೇಸು ಯೋರ್ದನಿನ ಬನದಿ ನಲವತ್ತು ದಿನ ಹಸಿದಂ” ಎಂಬುದನ್ನೂ, ಮಹಮದ್ ಪೈಗಂಬರ್ ಅವರು ಉಪವಾಸ ಮಾಡಿ ಹೊಸ ಜೀವನವನ್ನು ಹುಡುಕಿದ ಪರಿಯನ್ನೂ (ಗಿಳಿವಿಂಡು ಪು. ೪೫)ಪೈಗಳು ನೆನಪಿಗೆ ತಂದುಕೊಳ್ಳುತ್ತಾರೆ. ಮುಂದೆ ‘ಗೊಲ್ಗೊಥಾ’ ‘ವೈಶಾಖಿ’ ಇತ್ಯಾದಿ ಖಂಡಕಾವ್ಯಗಳಿಗೆ ಬುನಾದಿಯಾದದ್ದು ಈ ಧಾರ್ಮಿಕ ಉದಾರವಾದೀ ಧೋರಣೆ. ಭಾರತೀಯ ಪರಿಸರಕ್ಕೆ ಬಂದು, ಕೆಸ್ತ ಧರ್ಮವೇ ಶ್ರೇಷ್ಠವೆಂಬ ಧೋರಣೆಯಿಂದ, ಅದನ್ನು ಪ್ರಚಾರಮಾಡಿ ಭಾರತೀಯರನ್ನು ಮತಾಂತರಗೊಳಿಸುತ್ತಿದ್ದ ಕೆಸ್ತ ಮಿಷ ನರಿಗಳಿಗೆ, ಕ್ರಿಸ್ತನ ವಿಚಾರದಲ್ಲಿ ಅನನ್ಯ ಶ್ರದ್ಧೆಯಿಂದ ‘ಗೊಲ್ಗೊಥಾ’ ಖಂಡಕಾವ್ಯವನ್ನು ಬರೆದ ಪೈ ಅವರ ನಿಲುವು ಒಂದು ಸವಾಲು ಹಾಗೂ ಸಮಸ್ಯೆಯಾಗಿ ಕಂಡಿದ್ದರೆ ಆಶ್ಚರ್ಯವಲ್ಲ. ಕ್ರಿಸ್ತ, ಬುದ್ಧರನ್ನು ಕುರಿತಂತೆ ಕಾವ್ಯ ಬರೆದ ಪೈ ಅವರು, ಕೃಷ್ಣನ ಕೊನೆಯದಿನಗಳನ್ನು ಕುರಿತು, ಗಾಂಧೀಜಿಯ ಕೊನೆಯ ದಿನಗಳನ್ನು ಕುರಿತು, ಬರೆದ ಖಂಡಕಾವ್ಯಗಳು, ಅರ್ಧದಲ್ಲೇ ನಿಂತಿವೆ.

ಒಂದು ಸ್ವಾರಸ್ಯವಾದ ಸಂಗತಿಯೆಂದರೆ, ಪೈ ಅವರಲ್ಲಿ ಕಂಡುಬರುವ ನಿಸರ್ಗ ಪರವಾದ ತಲ್ಲೀನತೆಯ ಹಾಗೂ ಸಾಮಾಜಿಕ ಕಳಕಳಿಯ ಅಭಾವ. ವಾಸ್ತವವಾಗಿ ನವೋದಯ ಕಾವ್ಯದ ಬಹು ಮುಖ್ಯವಾದ ಲಕ್ಷಣಗಳಲ್ಲಿ ನಿಸರ್ಗಪರವಾದ ತಲ್ಲೀನತೆ ಅತ್ಯಂತ ಮುಖ್ಯವಾದದ್ದು. ತನ್ನ ಸುತ್ತಣ ನಿಸರ್ಗದ ಸೊಗಸನ್ನು, ಅತ್ಯಂತ ತಲ್ಲೀನತೆಯಿಂದ ವರ್ಣಿಸುವ ಕವಿತೆಗಳು ನವೋದಯ ಕಾವ್ಯದ ಬಹು ಭಾಗವನ್ನು ತುಂಬಿಕೊಂಡಿವೆ. ಈ ಪ್ರವೃತ್ತಿ ಒಂದು ರೀತಿಯಲ್ಲಿ ಜೀವನ ಪ್ರೀತಿಯ ವಿಸ್ತರಣೆ ಕೂಡಾ. ಇದರ ಜತೆಗೆ, ತಮ್ಮ ಅನುಭಾವಿಕ ಅಥವಾ ಉದಾರ ಧಾರ್ಮಿಕ ನಿಲುವಿನೊಂದಿಗೆ ತಾಕಲಾಡದ ರೀತಿಯಲ್ಲಿ ಈ ಕಾಲದ ಕವಿಗಳು, ತಮ್ಮ ಸುತ್ತಣ ಸಾಮಾಜಿಕ ಅಸಮತೆ-ವಿಷಮತೆಗಳನ್ನೂ ಕುರಿತು ಸಾಕಷ್ಟು ಸಂಖ್ಯೆಯ ಕವಿತೆಗಳನ್ನು ಬರೆದರು. ಇದು ಮುಂದಿನವರ ‘ಸಾಮಾಜಿಕ ಪ್ರಜ್ಞೆ’ಯಷ್ಟು ದಟ್ಟವಾಗಿರದಿದ್ದರೂ, ತಮಗಿಂತ ಹಿಂದೆ ಇಲ್ಲದಿದ್ದ ರೀತಿಯಲ್ಲಿ ಕಾಣಿಸಿಕೊಂಡ ‘ಸಾಮಾಜಿಕ ಪ್ರಜ್ಞೆ’ ಎಂದು ಗುರುತಿಸಬಹುದು. ಆದರೆ ಗೋವಿಂದ ಪೈ ಅವರಲ್ಲಿ ಭಗವತ್ ಪರವಾದ ಒಂದು ನಿಲುವು, ಅವರ ಅನೇಕ ಕವನಗಳ ಹಿಂದೆ ಇದ್ದರೂ, ಅವರಲ್ಲಿ ನಿಸರ್ಗವನ್ನು ಕುರಿತು ತಲ್ಲೀನತೆಯಿಂದ ಬರೆದ ಒಂದು ಕವಿತೆಯೂ ಕಾಣದಿರುವುದು ಮತ್ತು ಸುತ್ತಣ ಸಾಮಾಜಿಕ ಪರಿಸರವನ್ನು ಕುರಿತು ಯಾವ ಪ್ರತಿಕ್ರಿಯೆಯೂ ವ್ಯಕ್ತವಾಗದಿರುವುದು ಆಶ್ಚರ್ಯದ ಸಂಗತಿಯಾಗಿದೆ. ಅವರ ಕವಿತೆಗಳು, ರಾಷ್ಟ್ರಪ್ರೇಮ, ಕನ್ನಡ ಭಾಷೆ, ಯುದ್ಧ ವಿರೋಧೀ ಧೋರಣೆ, ಭಗವದ್ ಭಕ್ತಿ ಇತ್ಯಾದಿ ‘ಸಾರ್ವತ್ರಿಕ’ ವಿಷಯಗಳನ್ನು ಕುರಿತದ್ದಾಗಿವೆಯೆ ಹೊರತು. ತೀರಾ ‘ವ್ಯಕ್ತಿ ನಿಷ್ಠ’ ವಿಷಯಗಳನ್ನು ಕುರಿತಿರುವುದು (ಅವರ ಪತ್ನೀವಿಯೋಗವನ್ನು ಕುರಿತ ಕೆಲವು ಕವಿತೆಗಳನ್ನು ಹೊರತು) ತೀರಾ ಕಡಿಮೆ. ಅವರ ಭಗವತ್ ಪರವಾದ ನಿಲುವನ್ನು ಕುರಿತ ಅನೇಕ ಕವಿತೆಗಳ ಮೇಲೆ ಕೂಡಾ ರವೀಂದ್ರನಾಥಟ್ಯಾಗೂರರ ಕವಿತೆಗಳ ಪ್ರಭಾವಗಳನ್ನು ಗುರುತಿಸಬಹುದು.

ಪೈ ಅವರ ಸಾಹಿತ್ಯಕ ಜೀವನ ಶುರುವಾದದ್ದೆ ಕಾವ್ಯರಚನೆಯಿಂದ. ಅವರು ಮೊಟ್ಟಮೊದಲು ಬರೆದ ಪದ್ಯ ‘ಸುಹಾಸಿನಿ’ ಎಂಬ ಹೆಸರಿನದು;  ಅದನ್ನು ಬರೆದದ್ದು ೧೯೦೦ ರಲ್ಲಿ. ಅದು, ಅದೇ ಹೆಸರಿನ ಪತ್ರಿಕೆಯಲ್ಲಿ ಪ್ರಕಟವಾಯಿತು. ಅವರ ಕೊನೆಯ ಪದ್ಯ, ೧೯೬೨ ರಲ್ಲಿ ಬರೆದದ್ದು ‘ರಾಹುವನು ತೊಲಗಿಸಿದೆ, ಕೇತುವನು ತಂದೆ’ ಎಂಬುದು. ಇದು ಅವರ ‘ಹೃದಯರಂಗ’ ಸಂಗ್ರಹದಲ್ಲಿ ಬಂದಿದೆ. ಅರವತ್ತೆರಡು ವರ್ಷಗಳ ಕಾಲ ಬರೆಹದಲ್ಲಿ ತೊಡಗಿದ ಪೈ ಅವರು, ಮುಖ್ಯವಾಗಿ ಕವಿಯಾಗಿ ಕೆಲಸಮಾಡಿದ್ದು ಮೊದಲ ಮೂವತ್ತು-ಮೂವತ್ತೆರಡು ವರ್ಷಗಳು ಮಾತ್ರ. ಅವರ ಮೊದಲ ಕವನ ಸಂಗ್ರಹ ‘ಗಿಳಿವಿಂಡು’ ಪ್ರಕಟವಾದದ್ದು ೧೯೩೦ರಲ್ಲಿ. “ಈ ಕವಿತೆಗಳು ಕಳೆದ ಮೂವತ್ತೇನೋ  ವರ್ಷಗಳಲ್ಲಿ ಅಷ್ಟಮಿಗೊಂದು, ಶಿವರಾತ್ರಿಗೊಂದು ಎಂಬಂತೆ ರಚಿತವಾಗಿವೆ” ಎಂದು ಅವರೆ ‘ಗಿಳಿವಿಂಡು’ ಸಂಗ್ರಹದ ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ. “ಆನಂತರದ ಕೆಲವು ವರ್ಷಗಳಲ್ಲಿ ಅವರ ಕವಿತಾ ರಚನೆ ತುಸು ಹಿಮ್ಮೆಟ್ಟಿ ಪ್ರಾಕ್ತನಶೋಧನೆಯಲ್ಲಿ ಅವರು ಮುಳುಗಿ ಬಿಟ್ಟರೆಂದು ತೋರುತ್ತದೆ. ನಾಟಕ ಕ್ಷೇತ್ರದಲ್ಲೂ ಅವರು ಮನಸ್ಸು ತೊಡಗಿಸಿದುದು ೧೯೪೬-೪೭ ರಲ್ಲಿ. ಹೀಗಾಗಿ ೧೯೨೭ ರಿಂದ ೧೯೪೭ರವರೆಗಿನ ಇಪ್ಪತ್ತು ವರ್ಷಗಳ ಅವಧಿ ಬಹುಬಗೆಯ ಬರವಣಿಗೆಯ ಉತ್ಕರ್ಷದ ಕಾಲ. ಆನಂತರದ ಬರವಣಿಗೆ ಮಂದಗತಿಯದು. ೧೯೫೩ರ ವೇಳೆಗೆ (ಆಗ ಅವರ ವಯಸ್ಸು ಎಪ್ಪತ್ತು) ಅದು ತೀರಾ ಕುಂಠಿತವಾಯಿತು” (ಗೋವಿಂದ ಪೈ ವಾಙ್ಮಯ ದರ್ಶನ ಪು.೮)

ಪೈ ಅವರು ಕಾವ್ಯ ರಚನೆಗೆ ಶುರುಮಾಡುವ ವೇಳೆಗೆ, ಹೊಸಗನ್ನಡ ಕಾವ್ಯದ ನೆಲವನ್ನು ಹೊಸ ಬೆಳೆಗೆ ಹಸನು ಮಾಡುವ ಕೆಲಸ ನಡೆದಿತ್ತು-ಕೆಂಪು ನಾರಾಯಣ, ಬಸವಪ್ಪ ಶಾಸ್ತ್ರೀ, ಶಾಂತಕವಿಗಳು, ಪಂಜೆ ಮಂಗೇಶರಾಯರು, ಹಟ್ಟಿಯಂಗಡಿ ನಾರಾಯಣರಾಯರು ಇಂಥವರಿಂದ. ಇಂಗ್ಲಿಷ್ ಕವಿಗಳ ಕವನಗಳ ವರ್ಚಸ್ಸು ಕನ್ನಡಕ್ಕೆ ಬರುವಂತೆ ಮಾಡಿದವರಲ್ಲಿ ಪಂಜೆಯವರೇ ಮೊದಲಿಗರು ಮತ್ತು ೧೮೯೩ಕ್ಕೆ ಮೊದಲೇ ಅವರು ಕವಿತೆಗಳನ್ನು ಬರೆದಂತೆ ತೋರುತ್ತದೆ. ಈ ಹಿನ್ನೆಲೆಯಲ್ಲಿ ಪೈ ಅವರು ೧೯೦೦ ರಿಂದ೧೯೩೦ ರವರೆಗೆ ಬರೆದ ಕವಿತೆಗಳ ಸಂಗ್ರಹ, “ಗಿಳಿವಿಂಡು” ೧೯೩೦ರಲ್ಲಿ ಮೊದಲು ಬೆಳಕು ಕಂಡಿತು. ವಾಸ್ತವವಾಗಿ ೧೯೦೦ ರಿಂದ ೧೯೩೦ ರವರೆಗಿನ ಹೊಸಗನ್ನಡ ಕಿರಣೋದಯದ ಈ ಕಾಲ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಕಾಲ. ಹೊಸಗನ್ನಡ ತನ್ನ ನೆಲೆಯನ್ನು ಕಂಡುಕೊಂಡ ಉತ್ಸಾಹದ ಕಾಲ ಅದು. ಮಾಸ್ತಿಯವರ ಮೊದಲ ಸಂಗ್ರಹ ‘ಬಿನ್ನಹ’ ಪ್ರಕಟವಾದದ್ದು ೧೯೨೨ರಲ್ಲಿ; ‘ಅರುಣ’ ೧೯೨೪ರಲ್ಲಿ; ಡಿ.ವಿ.ಜಿಯವರ ‘ನಿವೇದನ’ ಪ್ರಟಕವಾದದ್ದು ೧೯೨೪ರಲ್ಲಿ; ಶ್ರೀಯವರ “ಇಂಗ್ಲಿಷ್ ಗೀತಗಳು” ೧೯೨೬ರಲ್ಲಿ; ಕುವೆಂಪು ಅವರ ‘ಕೊಳಲು’ ೧೯೩೦ರಲ್ಲಿ; ವಿ.ಸೀಯವರ ‘ಗೀತಗಳು’ ೧೯೩೧ ರಲ್ಲಿ; ಬೇಂದ್ರೆಯವರ ‘ಗರಿ’ ೧೯೩೨ರಲ್ಲಿ; ಕಡೆಂಗೋಡ್ಲು ಶಂಕರಭಟ್ಟರ ‘ಹಣ್ಣು ಕಾಯಿ’ ೧೯೩೩ರಲ್ಲಿ; ಪು.ತಿ.ನ. ಅವರ ‘ಹಣತೆ’  ೧೯೩೩ರಲ್ಲಿ. ಅಂತೂ ೧೯೦೦ರಿಂದ ೧೯೩೦ ವರೆಗಿನ ಕಾಲ, ಹೊಸಗನ್ನಡದ ನವೋದಯದಲ್ಲಿ ಹೆಸರು ಮಾಡಿದ ಕವಿಗಳೆಲ್ಲರೂ ಅತ್ಯಂತ ಕ್ರಿಯಾಶೀಲವಾಗಿದ್ದ ಕಾಲ ಅದು. ಈ ಪರಿಸರದಲ್ಲಿ  ಬಂದ ಪೈ ಅವರ ಕಾವ್ಯ, ಈಗಾಗಲೇ ಪ್ರಸ್ತಾಪಿಸಿದಂತೆ ಕೆಲವು ‘ಮೊದಲು’ಗಳನ್ನು ಸ್ಥಾಪಿಸಿದರೂ, ಉಳಿದ ಅನೇಕರ ಕವಿತೆಯ ಹಾಗೆ ತನ್ನ ಲವಲವಿಕೆಯನ್ನು ಕಾಯ್ದುಕೊಳ್ಳದೆ ಒಂದು ರೀತಿಯಲ್ಲಿ ಸ್ಥಗಿತಗೊಂಡಂತೆ ತೋರುತ್ತದೆ. ಕೆಲಮಟ್ಟಿಗೆ ಡಿ.ವಿ.ಜಿ.ಯವರ ಕಾವ್ಯದೊಂದಿಗೆ, ಅದನ್ನು ಹೋಲಿಸಬಹುದಾದರೂ, ಡಿ.ವಿ.ಜಿ.ಯವರ ಕಾವ್ಯ ಪಡೆದುಕೊಂಡ ಗೆಲುವನ್ನೂ, ಆಳವನ್ನೂ ಪೈ ಅವರ ಕಾವ್ಯ ಪಡೆದುಕೊಂಡಿತೆಂದು ಹೇಳಲಾಗುವುದಿಲ್ಲ.

ಪೈ ಅವರ ಕವಿತೆಯನ್ನು ಪರಿಶೀಲಿಸಿದರೆ, ಅವರ ಕಾವ್ಯರಚನೆ ೧೯೬೨ರವರೆಗೆ ಚಾಚಿಕೊಂಡರೂ (ಅವರ ಕೊನೆಯ ಪದ್ಯ ‘ರಾಹುವನು ತೊಲಗಿಸಿದೆ ಕೇತುವನು ತಂದೆ’ ೧೯೬೨ ರಲ್ಲಿ ಬರೆದದ್ದು) ಅವರ ಮೊದಲ ಸಂಗ್ರಹದ ಕವಿತೆಗಳ ಭಾಷೆಗೂ, ಅವರ ಕಡೆಯ ಪದ್ಯದ ಭಾಷೆಗೂ ಅಂತಹ ವ್ಯತ್ಯಾಸವೇ ಇಲ್ಲ (“ತಾಯೆ ಬಾರ ಮೊಗವ ತೋರ….” ಇಂತಹ ಒಂದೆರಡು ಕವಿತೆಗಳ ಹೊರತು) ಎನ್ನಿಸುತ್ತದೆ. ಈ ಅವಧಿಯಲ್ಲಿ ಕನ್ನಡ ಕಾವ್ಯ ತೊಟ್ಟ ರೂಪಗಳೆಷ್ಟು, ಅದಕ್ಕೆ ಹಿನ್ನೆಲೆಯಾದ ಸಾಹಿತ್ಯಕ ಚಳುವಳಿಗಳೆಷ್ಟು! ಅದೊಂದೂ ಪೈ ಅವರನ್ನು ತಟ್ಟಿದಂತೆ ಕಾಣುವುದಿಲ್ಲ. ಹಾಗೆಂದರೆ ಅವರ ಕಾವ್ಯ ನವೋದಯದ ಹೊಸ ಸಂವೇದನೆಗಳಿಗೆ ಅಭಿವ್ಯಕ್ತಿ ನೀಡಲಿಲ್ಲವೆಂದಲ್ಲ. ಅವರ ಕವಿತೆ ನವೋದಯದ ಭಾವನೆಗಳು-ಆಲೋಚನೆಗಳನ್ನು, ವಿಚಾರಗಳನ್ನು ಹೇಗೆ ಅಭಿವ್ಯಕ್ತಿಸಿದೆ ಎಂಬುದನ್ನು ಈಗಾಗಲೇ ತೋರಿಸಲಾಗಿದೆ. ಆದರೆ ಈ ಹೊಸ ಸಂವೇದನೆಗಳಿಗೆ ಅವರು ಸಮರ್ಥವಾದ ಹೊಸ ಭಾಷೆಯನ್ನು ನಿರ್ಮಾಣ ಮಾಡಿಕೊಳ್ಳಲಿಲ್ಲ; ಹೊಸ ರೂಪಗಳೇನೋ ಇವೆ ಅವರಲ್ಲಿ, ಆದರೆ ಆ ‘ರೂಪ’ ಹೊಸ ಭಾಷೆಯಿಂದ ನಿರ್ಮಿತವಾದದ್ದಲ್ಲ. ಒಂದೇ ಒಂದು ನಿದರ್ಶನದಿಂದ ಈ ಮಾತನ್ನು ಸ್ಪಷ್ಟಪಡಿಸುವುದಾದರೆ-

ಬಲ್ಲುದೆ ಲತೆ ಫಲಂ ತನ್ನ
ಸಿಹಿಯೊ ಕಹಿಯೊ ಎಂಬುದನ್ನ

(ಗಿಳಿವಿಂಡು, ಪು. ೧೦೩)

ಎಂದು ಮೊದಲಾಗುವ ಕವಿತೆಯ ಈ ಎರಡು ಸಾಲುಗಳು,

ಬಲ್ಲುದೆ ಲತೆ ತನ್ನ ಫಲಂ
ಸಿಹಿಯೊ ಕಹಿಯೊ ಎಂಬುದಂ

ಎಂದು ರಚಿತವಾಗಿದ್ದರೆ, ‘ಫಲಂ’ ‘ಎಂಬುದಂ’ ಎಂಬ ಹಳಗನ್ನಡ ರೂಪಗಳು ಹಾಗೇ ಉಳಿದುಕೊಂಡೂ, ‘ಫಲಂ ತನ್ನ’ ‘ಎಂಬುದನ್ನ’ ಎಂಬುದನ್ನೊಳಗೊಂಡ ಬಂಧಕ್ಕಿಂತಲೂ ಹೊಸತಾಗಿ ತೋರುತ್ತಿತ್ತೆಂದು ನಮಗೆ ಅನ್ನಿಸುತ್ತದೆ. ಆದರೆ ಪೈ ಅವರ ‘ರಚನೆ’ ಹೊಸಗನ್ನಡವಾಗಿಯೂ (ಭಾಷೆಯ ದೃಷ್ಟಿಯಿಂದ), ಹೇಗೆ ಓದುಗರ ಪಾಲಿಗೆ ಸುಗಮವಾಗದೆ ಹೋಗುತ್ತದೆಂಬುದನ್ನು ಗಮನಿಸಬಹುದು. ದ್ವಿತೀಯಾಕ್ಷರ ಪ್ರಾಸವನ್ನು ಬಿಟ್ಟರೂ ಅವರ ಕವಿತೆ, ಮತ್ತೆ ಹಳೆಯ ‘ಬಂಧ’ಗಳನ್ನೇ ನೆನಪಿಗೆ ತರುವ ರೂಪಗಳಲ್ಲಿ ಮೈ ಪಡೆದುಕೊಂಡಂತೆ ತೋರುತ್ತದೆ. ಅವರಿಗೆ ಷಟ್ಪದಿ ಮತ್ತು ಸಾನೆಟ್ ಈ ರೂಪಗಳು ಯಾಕೆ ಹೆಚ್ಚು ಪ್ರಿಯವಾದುವೆಂಬುದನ್ನು ಈ ಹಿನ್ನೆಲೆಯಿಂದ ನೋಡಬಹುದು. ಅವರು ತಮ್ಮ ಸುತ್ತಣ ಕಾವ್ಯ ಭಾಷೆಯಲ್ಲಿ ನಡೆದ ಪ್ರಯೋಗಗಳನ್ನು ಗಮನಿಸಿ ಅವುಗಳಿಂದ ಯಾವ ಪ್ರೇರಣೆಯನ್ನೂ ಪಡೆಯಲಿಲ್ಲವೇನೋ. ಅವರ ಗುರುಗಳಾದ ‘ಪಂಜೆ’ಯವರ ಪದ್ಯಗಳಲ್ಲಿರುವ ಆ ಉತ್ಸಾಹ ಹಾಗೂ ಹೊಸತನಕ್ಕಾಗಲಿ, ಶ್ರೀಯವರು ಮತ್ತಿತರ ಮುಖ್ಯ ಕವಿಗಳು ಕಾವ್ಯ ಭಾಷೆಗೆ ತಂದ ಜೀವಂತಿಕೆಗಾಗಲಿ, ಸುತ್ತಣ ಜನಭಾಷೆಯ ಜಾನಪದೀಯ ಪ್ರೇರಣೆಗಾಗಲಿ ಪೈ ಅವರು ಸ್ಪಂದಿಸಿದಂತೆ ತೋರುವುದಿಲ್ಲ. ಬಹುಶಃ ಈ ಕಾರಣದಿಂದಲೇ ಅವರ ಕಾವ್ಯದ ಭಾಷೆ ಪೆಡಸಾಗುತ್ತ. ಹಳೆಯ ಕಾಲದ ಕೋಟೆ ಕೊತ್ತಲಗಳಂತೆ ತಟಸ್ಥವಾಗಿ ನಿಂತುಕೊಂಡ ಹಾಗೆ ತೋರುತ್ತದೆ.

ಹೀಗಾದದ್ದಕ್ಕೆ ಕಾರಣ, ಅವರ ಸಂಶೋಧನೆ ಅವರೊಳಗಿನ ಕವಿಯನ್ನು ‘ಇಕ್ಕಿಮೆಟ್ಟಿ’ದ್ದೇ ಇರಬಹುದು. ಅವರು ಕಾವ್ಯ ಬರೆಯುವಾಗ ಕೂಡಾ, ತಾವು ಎತ್ತಿಕೊಂಡ ಕಾವ್ಯ ವಸ್ತುವಿನ ಬಗ್ಗೆ ಸಂಶೋಧನೆಯಲ್ಲಿ ತೊಡಗುತ್ತಾರೆ. ‘ಗೋಲ್ಗೊಥಾ’ದಂಥ ವಸ್ತುವನ್ನು ಕುರಿತು ಬರೆಯುವ ಮುನ್ನ, ಅದಕ್ಕೆ ಸಂಬಂಧಪಟ್ಟ ಸಂಗತಿಗಳನ್ನು ಆಮೂಲಾಗ್ರವಾಗಿ ಅಧ್ಯಯನಮಾಡಿ ಆನಂತರ ಅದನ್ನು ಕಾವ್ಯವನ್ನಾಗಿ ನಿರ್ವಹಿಸುತ್ತಾರೆ. ‘ವೈಶಾಖಿ’ಯನ್ನು ಬರೆದಾಗಲೂ ಅಷ್ಟೇ. ಇಡೀ ಬೌದ್ಧ ಸಾಹಿತ್ಯವನ್ನು ತಮ್ಮ ಅಧ್ಯಯನಕ್ಕೆ ಒಳಗುಪಡಿಸಿಕೊಳ್ಳುತ್ತಾರೆ. ಈ ಬಗೆಯ ವ್ಯುತ್ಪತ್ತಿಯನ್ನು, ಪೈ ಅವರು ತಮ್ಮ ಕಾವ್ಯಕ್ಕೆ ಹಿನ್ನೆಲೆಯಾಗಿ ಇರಿಸಿಕೊಂಡದ್ದರಿಂದಲೇ, ಗೋಲ್ಗೊಥಾ ಹಾಗೂ ವೈಶಾಖಿ ಕೃತಿಗಳು ವಸ್ತುವಿನ ದೃಷ್ಟಿಯಿಂದ ಅತ್ಯಂತ ನಿರ್ದುಷ್ಟವೂ, ಅಧಿಕೃತವೂ ಆಗಿವೆ. ಜತೆಗೆ ಅವರು ತಮ್ಮ ಎಷ್ಟೋ ಕವಿತೆಗಳಿಗೆ ಕೊಡುವ ಅಡಿಟಿಪ್ಪಣಿಗಳೂ ಹಾಗೂ ದಾಖಲೆಗಳೂ, ಈ ಸಂಶೋಧಕ ಪ್ರವೃತ್ತಿಯ ಪರಿಣಾಮಗಳಾಗಿವೆ. ಅವರ ಕವಿತೆಗಳೂ ಸಂಶೋಧಕ ಲೇಖನಗಳಂತೆ ಅಡಿಟಿಪ್ಪಣಿಗಳಿಂದ ಕೂಡಿರುವುದು, ಪೈ ಅವರ ಕಾವ್ಯದ ಒಂದು ಲಕ್ಷಣವಾಗಿದೆ. ಒಂದೆಡೆ ಕಾವ್ಯ ಮತ್ತೊಂದೆಡೆ ಸಂಶೋಧನೆ ಈ ಎರಡನ್ನೂ ಹಿಡಿದು ನಡೆಸುವ ತಮ್ಮ ಕಷ್ಟವನ್ನು ಕುರಿತು, ಅವರೇ ತಮ್ಮ “ಸಾಹಿತ್ಯಜ್ಞರ ಆತ್ಮಕಥನ”ದಲ್ಲಿ ಹೇಳಿಕೊಂಡಿದ್ದಾರೆ:

“ಕವಿತಾಮಾರ್ಗ ಬೇರೆ, ಸಂಶೋಧನದ ಮಾರ್ಗ ಬೇರೆ. ವಿಶಿಷ್ಟವಾದ ಕೃಪೆ ಉಳ್ಳವರು ಅವೆರಡನ್ನೂ ಕೈಕೊಂಡು ಹೊತ್ತನ್ನು ಹಿಡಿತದಿಂದ ಬಳಸಿದರೆ ಸವ್ಯಸಾಚಿಯಾಗಬಹುದಾದರೂ, ನನ್ನ ಬಗೆಗಾದರೊ ಅವು ಮುಳುವಾಗಿವೆ. ಹಾಲು ಕಾಸಲಿಕ್ಕೂ ಹುರುಳಿ ಹುರಿಯಲಿಕ್ಕೂ  ಸರಿಯಾಗಿದೆ. ಅವನ್ನು ಸವಡಿಸಲಿಕ್ಕೆ ಯತ್ನಿಸುವಲ್ಲಿ, ಒಂದು ಒರೆಯಲ್ಲಿ ಎರಡು ಕತ್ತಿಗಳನ್ನು ಸಿಕ್ಕಿಸಿಡಲಿಕ್ಕೆ ಪೇಚಾಡುತ್ತೇನೆ. ಅವಲ್ಲಿ ಒಂದೊ ಅಥವಾ ಎರಡೂ ಮುರಿಯದಿರವೆಂದು ಬಲ್ಲೆ. ಆದರೆ ಎಷ್ಟೋ ವರ್ಷಗಳಿಂದ ಅವೆರಡನ್ನು ಸಾಧಿಸುತ್ತಾ ಹೋದ ಮೇಲೆ ಇನ್ನು ಹೆಡಮೆಟ್ಟಲಾಗುವುದಿಲ್ಲ. ಕಾಲವೂ ತಪ್ಪಿತು. ಕಾಲೂ ತಪ್ಪಿತು. ಈಸಿದಷ್ಟು ಈಸುವುದು, ಮತ್ತೆ ಗಂಗಾದೇವಿ ತೇಲಿಸಿಕೊಂಡು ಹೋದಲ್ಲಿ….” (ದೀವಿಗೆ: ಭಾಗ ೨, ಕೃತಿಗಳು.ಕನ್ನಡ ಸಾಹಿತ್ಯಜ್ಞರ ಆತ್ಮಕಥನ: ಪು. ೪-೫)

ಇದು ಪೈ ಅವರ ಇಕ್ಕಟ್ಟು. ನಿರಂತರ ಸಂಶೋಧನೆ, ಮತ್ತೆ ಅನೇಕಭಾಷೆಗಳ ಮೇಲೆ ಪ್ರಭುತ್ವವನ್ನು ಸಾಧಿಸಿಕೊಳ್ಳುವ ಪ್ರಯತ್ನ-ಇತ್ಯಾದಿಗಳಿಂದಾಗಿ, ಅವರ ಮನಸ್ಸನ್ನು ಕವಿತೆಯೊಂದರ ಮೇಲೇ ಕಾವು ಕೂಡಿಸುವುದು ಸಾಧ್ಯವಾಗಲಿಲ್ಲ. ಅವರ ಸಂಶೋಧನೆ ಹಾಗೂ ಇತರ ಸೃಜನಶೀಲ ಬರವಣಿಗೆಗಳನ್ನು ಒಟ್ಟಿಗೆ ಇರಿಸಿಕೊಂಡು ನೋಡಿದರೆ, ಅವರ ಸಾಧನೆ ಬಹು ದೊಡ್ಡದು; ಮತ್ತು ಅದರೊಳಗಿನಿಂದ ಮೂಡಿನಿಲ್ಲುವ ವ್ಯಕ್ತಿತ್ವ ಇನ್ನೂ ದೊಡ್ಡದು, ಹಾಗೂ ಗೌರವಾಸ್ಪದವಾದದ್ದು.

ಬೆಡಗು-೧೯೮೯


[1] ವಿವರಗಳಿಗೆ ನೋಡಿ: ಎಸ್. ಅನಂತನಾರಾಯಣ: ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ, ಪು. ೩೯-೪೧.

(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)