ಆರು ಮೂರಾರತಿ ಅಂಗೈಯಾಗ ಹಿಡಿಕೊಂಡು
ಧರಮರ ಕಲೆಯ ಬಲಗೊಂಬೆ

ಅಂಗಳದಾಗವ್ವಣ್ಣೆ ಮಣ್ಣ ಗುಂಪಯದಗ್ದಾ
ಬಣ್ಣದೊನಕೀಲೆ ಕುಟ್ಟುವಳೆ

ಬಣ್ಣದೊನಕೀಲೆ ಕುಟ್ಟುವೇಳ್ಯಾದಾಗ
ಭೀಮಸೇನರ ನದರ

ಬಡ ಬಡ ಬಂದಾನ ಹಡದವ್ವಗ ಹೇಳ್ಯಾನ
ರಡ್ಡ್ಯಾರ ಮನಿಗೆ ಹೆಣ್ಣಿಗೆ ಹೋಗ

ಅವರು ರಡ್ಡ್ಯಾರಪ್ಪಾ ನಾವು ಕ್ಷತ್ತ್ಯಾರಪ್ಪಾ
ನಮಗ ಹೆಣ್ಣು ಕೊಡುದಿಲ್ಲ

ಕೊಟ್ಟಾರಿ ಕೊಡಲವ್ವ ಬಿಟ್ಟಾರ ಬಿಡಲೆವ್ವ
ಹೋಗಿ ಬರುವನು ಹಡೆದವ್ವ

ಮುಂದ ಮುಂದ ಬೀಮಸಿ ಹಿಂದಿಂದ ಕೂಂತೆವ್ವ
ಹೋದಾರ ರಡ್ಡ್ಯಾರ ಅರಮನಿಗೆ

ಎಂದಿಲ್ಲದ ಕೊಂತವ್ವ ಇಂದೇನಬಂದಿ
ಕುಂಡರಗೊಳ್ಳುವಂತೆ ಚೌಕ

ಕುಂಡ್ರಾಕು ಬಂದಿಲ್ಲ ನಿಂದ್ರಾಕು ಬಂದಿಲ್ಲ
ಅಪ್ಪಣ್ಣೆ ಬೇಡಾಕ ಬಂದೇವ್ರವ್ವಾ

ನೀವು ಛತ್ರೇರವ್ವ “ನಾವು ಲಡ್ಡೇರವ್ವಾ
ನಿಮ್ಮನಿಗೆ ಹೆಣ್ಣ ಕೊಡುದಿಲ್ಲ

ಕುಂತಿರು ಭೀಮತಿ ಚಟ್ಟನೆ ಎದ್ದಾನ
ಕರಿಕರಿ ಹಲ್ಲ ಕಡಿದಾನ

ಕರಿಕರಿ ಹಲ್ಲನಾದರೂ ಕಡಿದಾನ
ಬಟ್ಟಲಗಣ್ಣ ತಿರುವ್ಯಾನ

ಬಟ್ಟಲಗಣ್ಣ ನೀ ತಿರುವ್ಯಾನ ಭೀಮುಸಿ
ಕೊಕ್ಕರ ಮೀಸಿ ಹುರಿ ಮಾಡಿ

ಕೊಕ್ಕರ ಮೀಸಿ ಹುರಿ ಮಾಡಿ ಭೀಮುಸಿ
ದಕ್ಕಂತ ಕಟ್ಟೀಯ ಇಳಿದಾನ

ದಕ್ಕಂತ ಕಟ್ಟೀಯ ಇಳದಾನ ಕಾಲಾಗ
ಚೆಂಬುಳಿಯ೧ಮೆಟ್ಟ್ಯಾನ

ಕಾಲಾಗ ಚೆಂಬುಳಿಗಿ ಮೆಟ್ಟ್ಯಾನಭೀಮುಸಿ
ದಕ್ಕಂತ ಕಟ್ಟೀಯ ಇಳದಾನ

ಏಳೇಳ ಹಡದವ್ವ ಎಷ್ಟೊತ್ತ ಕುಂತಿದಿ
ದಂಡೀಗಿಲೊಂದಡಗಿ ಮಾಡವ್ವ

ಕಾಲಪಾನ೨ಬ್ಯಾಳಿಗೆ ಹಾಕಿ ಆರ ಹೋಳಿಗಿ ಮಾಡಿ
ಬನ್ನೀಯ ಎಲಿಯಾಗ ಎಡಿಮಾಡಿ

ಬನ್ನೀಯ ಎಲಿಯಾಗ ಎಡಿಮಾಡಿ ಬೇಡಿಕೊಂಡೆ
ರಡ್ಡ್ಯಾರ ಹೆಣ್ಣ ನನಗೊಲಿಯಲಿ

ಬಾಡ ಬಂಕಾಪುರ ಚಾವಡಿ ಮಲ್ಲಾಪುರ
ಅವ್ವಣ್ಣಿ ಬೇಡಾಕ ಬಂದಾರವ್ವಾ

ಉಕ್ಕು ಹಾಲನಾಗ ಶಾವೀಗಿ ಸುರವ್ಯಾರ
ಸುತ್ತ ಸಕ್ಕರಿ ದೊಳದಾರ

ಸುತ್ತನೂ ಸಕ್ಕು ರಿದೊಳದಾರ ಅವ್ವಣ್ಣಿ
ಪಾಯಸ ಮಾಡಿ ಇಳವ್ಯಾರ

ಉಕ್ಕು ನೀರಿನ್ಯಾಗ ಅಕ್ಕಿಯ ಸುರುವಿ
ಬಾನವ೩ಬಸದ ಇಳುವ್ಯಾರ

ಬಾನವ ಬಸದ ಇಳುವ್ಯಾರ ಮೇಲದ
ಕಣತಲಿಗೆ ಇಳುವ್ಯಾರ

ಹಸರ ಹಾಗಲ ಕಾಯಿ ಕುಸರ ಬೆಂಡಿಕಾಯಿ
ಕೂಡ್ಯಾಡಿ ಬೆಳೆದ ಎಳೆಚವಳಿಕಾಯಿ

ಕೂಗ್ಯಾಡಿ ಬೆಳೆದ ಎಳೆಚವಳಿಕಾಯಿ ಪಲ್ಯ
ಒಗ್ಗರಣೆ ಕೊಟ್ಟ ಇಳೆವ್ಯಾರ

ಒಗ್ಗರಣೆ ಕೊಟ್ಟ ಇಳಿವ್ಯಾರವರು
ಮುತ್ತಿನ ಕಣಚಲಿಗೆ ಇಳವ್ಯಾರ

ಹಪ್ಪಳ ಉಪ್ಪಿನಕಾಯಿ ತುಪ್ಪವ ಕಾಸಿ
ಒಪ್ಪುಳ್ಳ ಉಪ್ಪಿನಕಾಯಿ ಇಳವ್ಯಾರ

ತುಪ್ಪವ ನೀ ಕಾಸಿ ಇಳವ್ಯಾರ
ಮುತ್ತಿನ ಕಣಚಲಿಗೆ ಇಳವ್ಯಾರ

ಮೇಲಾದ ಕಣತಲಿಗೆ ಇಳವ್ಯಾರ ಅವ್ವಣ್ಣಿ
ಮಾತು ಕತೆಗಳು ನಡೆದಾವ

ಮಾತು ಕತೆಗಳು ನಡೆದಾವ ಅವ್ವಣ್ಣಿವು
ಊಟದ ಸಂಪಗವರಣ೧ನಡದೈತಿ

ಮಲಗಿರು ಭೀಮುಸಿ ಚಟ್ಟನ ಎದ್ದಾನ
ಇದು ಯಾತರ ಕಾಳಿ ಹಡೆದವ್ವ

ಬಾಡ ಬಂಕಾಪುರ ಚವಡಿ ಮಲ್ಲಾಪುರ
ಅವ್ವಣ್ಣಿ ಬೇಡಾಕ ಬಂದಾರ

ಕುಂತಿರು ಭೀಮುಸಿ ಛಟ್ಟನ ಎದ್ದಾನ
ತಣ್ಣೀರ ಗಿಂಡೀಲಿ ಮಕದೊಳೆದ

ತಣ್ಣೀರಿನ ಗಿಂಡೀಲಿ ಮಕದೊಳೆದು
ಕಾಲಾಗ ಚೆಂಬುಳಿಗಿ ಮಟ್ಟ್ಯಾನ

ಕಾಲಾಗ ಚೆಂಬುಳಿಗಿ ಮೆಟ್ಟ್ಯಾನ ಭೀಮುಸಿ
ಹುತ್ತದೊಳು ಕೈಯ ಇಡತಾನ

ಕಾಗಿಯ ಸುಳಿವಿಲ್ಲ ಗುಬ್ಬಿಯ ಸುಳಿವಿಲ್ಲ
ಇದ ಯಾರ ಕೈಯ ತೆಗೀರಪ್ಪಾ

ಅವನು ಲಗ್ನವಾಗಲಿ ನಾನು ಆಳುವವನಾಗಲಿ
ಹಂಗೊಂದರೊಚನೆ ಕೊಡ ನನಗ

ಅವನು ಲಗ್ನವಾಗಲಿ ನೀನು ಆಳವನಾಗಲಿ
ಹಿಂಗೊಂದರೊಚನ ಕೊಟ್ಟೇನ ಹೋಗ

ನಿಂಬವ್ವ ನೀಲವ್ವ ಗಂಗವ್ವ ಗೌರವ್ವ
ಕೇಲ ಐರಾಣಿ ತುಂಬರೆವ್ವಾ

ಕೆಲನೂ ಐರಾಣಿ ತರುವೇಳೆದಾಗ
ಐರಾಣಿದೊಂದು ಮಗಿ ಒಡದ

ಐರಾಣಿದೊಂದ ಮಗಿ ಒಡದ ಅವರಪ್
ಸಂಶೇವ ಹಿಡಿದಾನ

ಈ ಸಂಶೆ ಈ ಸಂಶೆ ಇವ ನನ್ನ ತೆಲಿಮ್ಯಾಲ
ಮುಂದಿನ ಕಾರೇವು ನಡೀಲೆಂದ

ಗಂಗವ್ವ ಗೌರವ್ವ ನಿಂಬೆವ್ವ ನೀಲವ್ವ
ಐದಳಿ ಸುರಗಿ ಸುತ್ತ ಬರ‍್ಯ

ಐದು ಎಳಿ ಸುರಗಿ ಸುತ್ತ ಎಳೆದಾಗ
ಸುರಗಿದೊಂದೆಳಿಹರದತಿ

ಸುರಗಿದೊಂದೆಳಿ ಹರಿದ ಎಳೆದಾಗ
ಅವರಣ್ಣ ಸಂಶೇವ ಹಡೆದಾನ

ಆ ಸಂಶೆ ಈ ಸಂಶೆ ಅವ ನನ್ನ ತಲಿಮ್ಯಾಲ
ಮುಂದೀನ ಕಾರೇವು ನಡೀಲಂದ

ಒಂದಿಂಬುಡಕೀಲೆ ಎರಡ ಇಂಬಡಕೀಲೆ
ಮೂರ ಇಂಬಡಕೀಲೆ ಮಿಡಿ ನಾಗರ

ಮೂರ ಇಂಬಡಕೀಲೆ ಮಿಡಿ ನಾಗರಬಂದ
ಹಿಂಬಡಗಟ್ಟಿ ಹೊರಳ್ಯಾನ

ಹನ್ನೊಂದು ವರುಷದ ಮಗಳ ಹನ್ನೆರಡು ವರುಷದ ಮಗಳ
ರಂಡಿತನಕ್ಕ ಗುರಿಯಾದೆ ಮಗಳ

ರಂಡಿಯ೧ತನಕ ಗುರಿಯಾದ ಅವ್ವಣ್ಣಿ
ಅವರಪ್ಪ ಅಂದಂದ ಅಳತಾನ

ಹದಿನಾಕು ವರುಷದ ಮಗಳ ಹದಿನಾರು ವರುಷದವಳು
ರಂಡಿತನಕ ಗುರಿಯಾದೆ

ರಂಡಿತನಕ ಗುರಿಯಾದೆ ಅವ್ವಣ್ಣಿ
ಅವರಣ್ಣ ದೈರೇವ೨ಕೊಡತಾನ

ಅವರಣ್ ದೈರೇವ ಕೊಡತಾನ ಅವ್ವಣ್ಣಿಗೆ
ಗಂಡ ಮಗನಾಗಿ ಇರನಡಿಯ

ಇದ್ದಾರ ಇರುವ ಇದ್ದೇನಾದಾಗ
ನನಗೇನು ನೀವು ಕೊಡತೀರಿ

ಮನಿಯ ನಿನಗವ್ವ ಮಾರನಿನಗವ್ವ
ಮನಿಯ ಚಜಗಾಣಿ೩ ಎನಗವ್ವ

ಬದುಕು ನಿನಗವ್ವ ಬಾಳೇವು ನಿನಗವ್ವ
ಬಗಲಾನ ಬಾಲ ನಿನಗವ್ವ

ಇಷ್ಟಲ್ಲ ಅನ್ನೂದು ನಿಂಬೆವ್ವ ಕೇಳ್ಯಾಳ
ನೀಲವ್ವನ ಮುಂದ ಹೇಳ್ಯಾಳ

ಮನಿಯವಳಿಗಿಂತ ಮಾರವಳಿಗಂತ
ಮನೆಯನ್ನ ಜೆಜಗಾಣೆ ಅಱಳಗಂಡ

ಬದುಕು ಅವಳಿಗಂತ ಬಾಳೆ ಅವಳಿಗಂತ
ಬಗಲನ್ನು ಬಾಲ ಅವಳಿಗಂತ

ಇಷ್ಟೆಲ್ಲಾ ಅನ್ನೂದು ಅವ್ವಣ್ಣಿ ಕೇಳ್ಯಾಳ
ಇರಬಾರದ ತವರ ಮನಿಯಾಗ

ಕುಂತಿರು ಅವ್ವಣ್ಣಿ ಚಟ್ಟನೆ ಎದ್ದಾಳ
ತಣ್ಣೀರಿನ ಗಿಂಡೀಲಿ ಮಕದೊಳೆದು

ತಣ್ಣೀರಿನ ಗಿಂಡಿಯಲಿ ಮಕದೊಳೆದು
ಕಾಲಾಗ ಚೆಂಬುಳಿಗಿ ಮೆಟ್ಟ್ಯಾಳ

ಕಾಲಾಗ ಜೆಂಬುಳಿಗಿ ಮೆಟ್ಟ್ಯಾಳ ಅವ್ವಣ್ಣಿ
ಹಳವದ ದಾರಿ ಹಿಡಿದಾಳ

ಏಳೆಳು ಭೀಮುಸಿ ಎಷ್ಟೊತ್ತ ಮಲಗೀದಿ
ರಡ್ಡೇರ ಅವ್ವಣ್ಣಿ ಕೈಯ ಸೆರಿಯ

ಮನಗಿರು ಭೀಮುಸಿ ಚಟ್ಟನೆ ಎದ್ದಾನ
ತಣ್ಣೀರಿನ ಗಿಂಡೀಲಿ ಮಕದೊಳೆದು

ತಣ್ಣೀರಿನ ಗಿಂಡೀಲಿ ಮಕದೊಳೆದು ಭೀಮುಸಿ
ಕಾಲಾಗ ಚೆಂಬುಳಿಗಿ ಮೆಟ್ಟ್ಯಾಳ

ಕಾಲಾಗ ಜೆಂಬುಳಿಗಿ ಮೆಟ್ಟ್ಯಾಳ ಭೀಮುಸಿ
ಜಿಡ್ಡಿಯ ಹಾದೀಯ ಹಿಡಿದಾನ

ಬಾಳಿಯ ಗಿಡದಾಗ ಗಿಳಿಯ ಲಿಂಬಿಯ ಗಿಡದಾನ ಗಿಳಿಯ
ರಂಭೆ ಹೋದ ದಾರಿ ನಿಜ ಹೇಳ

ಬಾಳಿಯ ಯಡ ಮಾಡು ನಿಂಬಿಯ ಬಲಮಾಡು
ನೀರಲ ಗಿಡಕ ನಿಜ೧ ಹೋಗ

ನೀರಲ ನೀ ಗಿಡಕ ನೇರ ಹೋಗಿ ಭೀಮುಸಿ
ದಕ್ಕಂತ ಗಿಡವನೇರ‍್ಯಾನ

ದಕ್ಕಂತ ನೀ ಮರವನೇರಿ ಭೀಮುಸಿ
ನೀರಲ ಹಣ್ಣ ಉದರಸ್ಯಾನ

ಮಲಗಿರುವ ಅವ್ವಣ್ಣಿ ಚಟ್ಟನ ಎದ್ದಾಳ
ಉಡಿ ಕಟ್ಟಿ ಹಣ್ಣ ಅರಿಸ್ಯಾಳ

ಇವ ನಮ್ಮಣ್ಣಗ ಇವ ನಮ್ಮ ತಮ್ಮಗ
ಇವ ನಮ್ಮಣ್ಣನ ಮಕ್ಕಳಿಗೆ

ಇಷ್ಟೆಲ್ಲಾ ಅದ್ನೂದು ಭೀಮುಸಿ ಕೇಳ್ಯಾನ
ದಕ್ಕಂತ ಮರವ ಇಳದಾನ

ದಕ್ಕಂತ ನೀ ಮರವ ಇಳದಾನ ಭೀಮುಸಿ
ಹಣ್ಣಿನ ಸುಂಕ ಕೊಡಬಾಲಿ

ಬೆಂಡಿಯ ಸುಂಕಲ್ಲ ಪುಂಡಿಯ ಸುಂಕಲ್ಲ
ಇದ ಯಾತರ ಸುಂಕ ಬಿಡ ಭೀಮು

ಕಾಗಿಯ ಸುಳವಿಲ್ಲ ಗುಬ್ಬಿಯ ಸುಳವಿಲ್ಲ
ಅವ್ವಣ್ಣಿ ಭತ್ತವೆ ಆಳದಾನ೧

ಒಂದಂಬು ತಿಂಗಳಿಗೆ ಒಂದೇನ ಬಯಸ್ಯಾಳ
ಒಂದೇಲಿ ಚಿಗರ ಎಲಿ ಹುಣಸಿ

ಎರಡಂಬು ತಿಂಗಳಿಗೆ ಎರಡೇನ ಬಯಸ್ಯಾಳ
ಎರಿಯ ಹೊಲದಾನ ಎಳಿ ಸವತಿ

ಮೂರಂಬು ತಿಂಗಳಿಗೆ ಮೂರೇನ ಬಯಸ್ಯಾಳ
ಮೂಡಲದಿಕ್ಕ ಮಗಿ ಮಾವ

ನಾಕಂಬು ತಿಂಗಳಿಗೆ ನಾಕೇನ ಬಯಸ್ಯಾಳ
ಕಾಕೀಯ ಹಣ್ಣ ಕೈತುಂಬ

ಐದಂಬು ತಿಂಗಳಿಗೆ ಐದೇನ ಬಯಸ್ಯಾಳ
ಕೊಯ್ದ ಮಲ್ಲಿಗಿ ಕೈ ತುಂಬ

ಆರೆಂಬು ತಿಂಗಳಿಗೆ ಆರೇನ ಬಯಸ್ಯಾಳ
ಅರಿಂದ ಬಾನ ಕೆನಿ ಮಸರ

ಏಳೆಂಬು ತಿಂಗಳಿಗೆ ಏಳೇನ ಬಯಸ್ಯಾಳ
ಹೇಳಿ ಕಳುಹಾಕ ತವರಿಲ್ಲ

ಎಂಟೆಂಬು ತಿಂಗಳಿಗೆ ಎಂಟೇನ ಬಯಸ್ಯಾಳ
ಸೊಂಟ೨ ಯಾಲಕ್ಕಿ ಕೊಡ ತುಪ್ಪ

ಒಂಭತ್ತ ತಿಂಗಳಿಗೆ ತುಂಬ್ಯಾವ ದಿನಗಳು
ಸಂದಿ ಸಂದಿಗೆಲ್ಲಾ ಕರಿಬ್ಯಾನಿ

ತಾಸಿನ ಬ್ಯಾನಿ ತಾಳವ ಕಟದಂಗ೧
ತಾಯವನಿರಬೇಕ ಜನುವಲಕ

ಹೊತ್ತ ಹೊತ್ತಿನ ಬ್ಯಾನಿ ಕತ್ತೀಲ ಕಟದಂಗ
ಅತ್ತೆವ್ವನಿರಬೇಕ ಜನುಮಕ

ಹತ್ತೆಂಬು ತಿಂಗಳಿಗೆ ಮತ್ತೇನ ಬಯಸ್ಯಾಳ
ಹರಲೀಯ೨ಮಗನ ಬಯಸ್ಯಾಳ

ಹರಲೀಯ ಹೊರಬ್ಯಾಡ ದುರ್ಲಭ ಹೊಗಬ್ಯಾಡ
ಹರದ ಹೊಚ್ಚ ನನ್ನ ಹೊಸ ಶಾಲ

ಕಾಲ ನಮ್ಮಣ್ಣನವು ಕೈ ತಮ್ಮನವು
ಬೆನ್ನ ಚತ್ರ್ಯಾರ ಭೀಮನವ

ಕಲ್ಲಾಗ ಹುಟ್ಟಿದ ಮಗನ ಮುಳ್ಳಾಗ ಹುಟ್ಟಿದ ಮಗನ
ಬಬ್ರುವಾಹನನೆಂದು ಹೆಸರಿಡಿದೆ*      ರಡ್ಡೇರ ಅವ್ವಣ್ಣಿ, ನಾವಲಗಿ ಸಿ.ಕೆ. ಮತ್ತು ಶಕುಂತಲಾ ಚನ್ನಬಸವ, ಜನಪದ ಕಥನಗೀತ ಸಂಚಯ, ಕನಕ ಸಾಹಿತ್ಯ ಪ್ರತಿಷ್ಠಾನ, ಬೆಂಗಳೂರು ೨೦೦೨, ಪು.ಸಂ. ೩೫-೪೨ ಪ್ರತಿಯೆರಡು ಸಾಲಿಗೊಮ್ಮೆ “ಸುವ್ವಿ ಸುವ್ವಾಲೆ” – ಪಲ್ಲವಿ ಹೇಳಬೇಕು.