ಏಳು ಕೊಳ್ಳಕ ಹೋಗೂನು ರಾಮಾ ನಡೀ ನಡಿ
ಅಲ್ಲಿ ಸಿದ್ಧನ ಕೊಳ್ಳಕ ಹೋಗೂನು ನಡೀ ನಡಿ ಪಲ್ಲ

ಹಲ್ಲಬಿದ್ದ ಮುದಕಿಯಂಗ
ಗಲ್ಲದ ತೊಗಲು ಜೋತಬಿದ್ದ
ಹೊಕ್ಕಾಳ ದೇವಿ ಕಾಲ್ಮುಂದ ಮಾಡಿ ಮಾಡಿ
ನನ್ನವ್ವ ಹೊಕ್ಕಾಳ ದೇವಿ ಕಾಲ್ಮುಂದ ಮಾಡಿ ಮಾಡಿ   ೧
ಹಿಂದ ಏಳ ಉಡಿಯ ಕೊಟ್ಟ
ಮುಂದೆ ಏಳ ಕೊಳ್ಳ ಕೊಟ್ಟ
ಸಿದ್ಧನಕೊಳ್ಳ ತಿರುಗತಾಳ ವಾರಿ ವಾರಿ
ನನ್ನವ್ವ ಸಿದ್ಧನಕೊಳ್ಳ ತಿರುಗತಾಳ ವಾರಿ ವಾರಿ        ೨

ಕಂಡಾಟ ಕಾರೀ ತಪ್ಪಲ
ಬಂದಾಟ ತುರಬಿ ತಪ್ಪಲ
ಹರದ ಹರದು ತುಂಬತಾಳ ಉಡಿ ಉಡಿ
ನನ್ನವ್ವ ತೆರದ ತೆರದು ತುಂಬತಾಳ ಉಡಿ ಉಡಿ      ೩

ಅಂಗಯ್ಯ ಒಳ್ಳಮಾಡಿ
ಮುಂಗಯ್ಯ ವನಕಿಮಾಡಿ
ಹಾರಿ ಹಾರಿ ಕುಟ್ಟತಾಳ ಗಾಂಜೀಪುಡಿ
ನನ್ನವ್ವ ನೋಡಿ ನೋಡಿ ಕುಟ್ಟತಾಳ ಗಾಂಜೀಪುಡಿ     ೪

ಕಲ್ಲ ಕಡಬನು ಮಾಡಿ
ಮುಳ್ಳ ಸ್ಯಾವಿಗಿ ಮಾಡಿ
ಏಳುಮಂದಿ ಸಿದ್ಧರಿಗ್ಹಾಕಿ ಬಿನ್ನಾಯ ಹೇಳಿ
ನನ್ನವ್ವ ಏಳಮಂದಿ ಸಿದ್ಧರಿಗ್ಯಾಕೇ ಬಿನ್ನಾಯ ಹೇಳಿ     ೫

ಏಳುಮಂದಿ ಸಿದ್ಧರವರು
ಬ್ಯಾಟಿ ಆಡಿ ಬರೂದರೊಳಗ
ಹೇಳಿದಂಥ ಊಟ ತಯಾರ ಮಾಡಿ ಮಾಡಿ
ನನ್ನವ್ವ ಹೇಳಿದಂಥ ಊಟ ತಯಾರ ಮಾಡಿ ಮಾಡಿ   ೬

ಉಂಡು ತಿಂದು ಕುಂತ ಬಳಿಕ
ರಂಗಿನ ಸಿದ್ಧರೇನಂತಾರ
ತಲಬಾತು ತಂದಕೊಡ ಗಾಂಜಿ ಪುಡಿ ಪುಡಿ
ನನ್ನವ್ವ ತಲಬಾತ ತಂದಕೊಡ  ಗಾಂಜೀ ಪುಡಿ ಪುಡಿ ೭

ಅರವಿಯೊಂದು ಕಕ್ಕಡ ಮಾಡಿ
ಮರವಿನೊಂದು ಚಿಲುಮಿ ಮಾಡಿ
ಹದಮಾಡಿ ತಂದುಕೊಟ್ಟಾಳ ಗಾಂಜಿ ಪುಡಿ ಪುಡಿ
ನನ್ನವ್ವ ಹದಮಾಡಿ ತಂದಕೊಟ್ಟಾಳ ಗಾಂಜೀ ಪುಡಿ ಪುಡಿ        ೮

ಏಳುಮಂದಿ ಸಿದ್ಧರವರು ಗಾಂಜೀಸೇದಿ
ದಂಗುಹಾರಿ ದಿಕ್ಕಿಗೊಬ್ಬರೋಡಿ ಓಡಿ
ಅವರು ಕಿತ್ತಿವೊಗದ್ರು ನೆತ್ತಿಮ್ಯಾಗಿನ ಜಡಿ ಜಡಿ
ನನ್ನವ್ವ ಅವರು ಕಿತ್ತಿವೊಗದ್ರು ನೆತ್ತಿ ಮ್ಯಾಗಿನ ಜಡಿ ಜಡಿ         ೯

ಇಷ್ಟರೊಳಗ ಒಬ್ಬ ದುಷ್ಟ ರೇವಣಸಿದ್ಧ
ಕೊಲ್ಲಬ್ಯಾಡ ತಾಯಿ ಎಂದು
ಹುಲ್ಲುಕಡ್ಡಿ ಕಚ್ಚಿ ಶರಣ ಮಾಡಿ ಮಾಡಿ
ನನ್ನವ್ವ ಹುಲ್ಲಕಡ್ಡಿ ಕಚ್ಚಿ ಶರಣಮಾಡಿ ಮಾಡಿ  ೧೦

ಏಳಮಂದಿ ಸಿದ್ಧರನಾಕಿ ಒತ್ತಿಬಿಟ್ಟಾಳ
ಪಾತಾಳಕ ದೂಡಿ ದೂಡಿ
ಮ್ಯಾಲಿನಿಂದ ಸೀಸದ ಗುಂಡು ಓಡೀ ಓಡಿ
ನನ್ನವ್ವ ಮ್ಯಾಲಿನಿಂದ ಸೀಸದಗುಂಡು ಓಡೀ ಓಡಿ      ೧೧

ಬಾಗಲ ಬಾಗಲ ಭರಮ
ಮ್ಯಾಗ ಟೊಪ್ಪಿಗಿ ಭರಮ
ನಿನ ಮುಂದ ಐತಿ ಮಾತಂಗಿ ಗುಡಿ ಗುಡಿ
ನನ್ನವ್ವ ನಿನ ಹೊಂದೀಲೈತಿ ಜಮದಗ್ನಿ ಗುಡಿ ಗುಡಿ     ೧೨

ಚಕ್ಕಚೌಕಿ ಗುಡ್ಡಾನೇರಿ
ನಾಲ್ಕು ದಿಕ್ಕು ಸಂಹಾರ ಮಾಡಿ
ಹೊಕ್ಕಾಳ ದೇವಿ ಕಾಲ್ಮುಂದ ಮಾಡಿ ಮಾಡಿ
ನನ್ನವ್ವ ಹೊಕ್ಕಾಳ ದೇವಿ ಕಾಲ್ಮುಂದ ಮಾಡಿ ಮಾಡಿ   ೧೩