ನಮ್ಮ ಪುರಾತನ ಸಂಗೀತ ಶಾಸ್ತ್ರಕಾರರು ರಾಗಗಳನ್ನು ಪ್ರಾತರ್ಗೇಯ, ಸಾಯಂಗೇಯ, ದಿನಗೇಯ ಹಾಗೂ ರಾತ್ರಿಗೇಯ ಎಂದು ನಾಲ್ಕು ಭಾಗಗಳಲ್ಲಿ ವಿಭಾಗಿಸಿದ್ದಾರೆ. ಇಂಥ ರಾಗವನ್ನು ಇಂಥ ವೇಳೆಗೇ ಹಾಡಬೇಕೆಂಬುದೇ ಇದಕ್ಕೆ ಕಾರಣವಾಗಿದೆ. ಪ್ರತಿಯೊಂದು ರಾಗಕ್ಕೂ ಹಾಡತಕ್ಕ ಸಮಯ ನಿರ್ಬಂಧನೆಯಿದ್ದು, ಅದು ರಾಗಗಳಲ್ಲಿಯ ವಾದಿ, ಸಂವಾದಿ ಸ್ವರಗಳ ಮೇಲೂ, ಶುದ್ಧ, ವಿಕೃತ ಸ್ವರಗಳ ಮೇಲೂ ಅವಲಂಬಿಸಿದೆ.

ಸ್ಥೂಲಮಾನವಾಗಿ ರಾಗಗಳ ಹಾಡತಕ್ಕ ಸಮಯವನ್ನು ದಿನದ ೨೪ ಗಂಟೆಗಳಲ್ಲಿ ಎರಡು ಭಾಗಗಳನ್ನಾಗಿ ಮಾಡಿ ಹಂಚಿದ್ದಾರೆ. ದಿನದ ೧೨ ಗಂಟೆಯಿಂದ ರಾತ್ರಿಯ ೧೨ರವರೆಗಿನ ಕಾಲಾವಧಿಯನ್ನು ಮೊದಲನೆಯ ಅಥವಾ ಪೂರ್ವಭಾಗವೆಂತಲೂ, ರಾತ್ರಿಯ ೧೨ ರಿಂದ ದಿನದ ೧೨ರವರೆಗಿನ ಕಾಲಾವಧಿಯನ್ನು ಎರಡನೆಯ ಅಥವಾ ಉತ್ತರ ಭಾಗವೆಂತಲೂ ಕರೆದಿದ್ದಾರೆ. ದಿನದ ಪೂರ್ವ ಭಾಗದಲ್ಲಿ ಹಾಡತಕ್ಕ ರಾಗಗಳಿಗೆ ಪೂರ್ವರಾಗಗಳೆಂದೂ ಕರೆದಿದ್ದಾರೆ. ಇಲ್ಲಿ ರಾಗದಲ್ಲಿಯ ವಾದಿ ಸ್ವರವು ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಯಾವುದೇ ರಾಗದಲ್ಲಿಯ ವಾದಿ ಸ್ವರವು ಆ ರಾಗದ ಪೂರ್ವಭಾಗದಲ್ಲಿ ಅಂದರೆ ‘ಸಾರೆಗಮ’ ಸ್ವರಗಳಲ್ಲಿ ಯಾವುದಾದರೂ ಒಂದು ಸ್ವರವು ವಾದಿ ಸ್ವರವಾಗಿದ್ದಲ್ಲಿ, ಅಂಥ ರಾಗವನ್ನು ದಿನದ ಪೂರ್ವಭಾಗದಲ್ಲಿ ಹಾಡಬೇಕೆಂಬ ನಿರ್ಬಂಧವಿದ್ದು, ಅಂಥ ರಾಗವನ್ನು ‘ಪೂರ್ವಾಂಗ ವಾದಿ’ರಾಗವೆಂದೂ ಕರೆಯುವರು. ವಾದಿ ಸ್ವರವು ಉತ್ತರಾಂಗದಲ್ಲಿ  ಅಂದರೆ ‘ಪಧನಿ’ ಸ್ವರಗಳಲ್ಲಿ ಯಾವುದಾದರೊಂದು ಸ್ವರವು ವಾದಿ ಆಗಿದ್ದಲ್ಲಿ ಅದನ್ನು ಉತ್ತರಾಂಗವಾದಿ ರಾಗವೆಂದು ಕರೆಯುವರು. ಹಾಗೂ ಅದನ್ನು ದಿನದ ಉತ್ತರಾರ್ಧದಲ್ಲಿ ಹಾಡಬೇಕೆಂಬ ನಿಯಮವಿದೆ.

ಈ ಮೊದಲು ಹೇಳಿದಂತೆ, ದಿನದ ೨೪ ಗಂಟೆಗಳ ಕಾಲಾವಧಿಯನ್ನು ಸರಿಯಾಗಿ ಎರಡು ವಿಭಾಗಗಳಲ್ಲಿ ವಿಂಗಡಿಸಿದಂತೆ ಸಪ್ತಸ್ವರಗಳನ್ನು ಸರಿಯಾಗಿ  ಎರಡು ಭಾಗಗಳಲ್ಲಿ ವಿಂಗಡಿಸಿ, ದಿನದ ಎರಡು ಭಾಗಗಳಿಗೂ ಹಾಗೂ ಸಪ್ತಸ್ವರಗಳ ಎರಡು ಭಾಗಗಳಿಗೂ  ಪರಸ್ಪರ ಹೊಂದಾಣಿಕೆಯನ್ನು ಮಾಡಿದ್ದಾರೆ. ಹೀಗೆ ಸಪ್ತಸ್ವರಗಳನ್ನು ಎರಡು ಭಾಗಗಳಲ್ಲಿ ವಿಂಗಡಿಸುವಾಗ ಸಾಮಾನ್ಯವಾಗಿ ಷಡ್ಜದಿಂದ ಮಧ್ಯಮದವರೆಗೆ ಒಂದು ಭಾಗ, ಹಾಗೂ ಪಂಚಮದಿಂದ ತಾರಷಡ್ಜವರೆಗೆ ಒಂದು ಭಾಗ ಹೀಗೆ ಎರಡು ಭಾಗಗಳನ್ನು ಮಾಡುವುದುಂಟು. ಆದರೆ ಸಪ್ತಸ್ವರಗಳನ್ನು ಷಡ್ಜದಿಂದ ಪಂಚಮದವರೆಗ ಮತ್ತು ಮಧ್ಯಮದಿಂದ ತಾರಷಡ್ಜದವರೆಗೆ  ಹೀಗೆ ಎರಡು ಭಾಗಗಳಲ್ಲಿ ವಿಂಗಡಿಸುವುದು ಹೆಚ್ಚು ಸಮಂಜಸಕರವೂ ಔಚಿತ್ಯಪೂರ್ಣವೂ ಎನ್ನಿಸುವುದು. ಏಕೆಂದರೆ ಷಡ್ಜ-ಪಂಚಮ ಸ್ವರಗಳು ಎರಡೂ ಭಾಗಗಳಲ್ಲಿ ಬರುವವು. ಹಾಗೂ ರಾಗ ನಿಯಮದ ಪ್ರಕಾರ ಈ ಎರಡೂ ಸ್ವರಗಳು ಏಕಕಾಲಕ್ಕೆ ಎಂದೂ ವರ್ಜಿತ ಸ್ವರಗಳಾಗಲಾರವು. ಆದುದರಿಂದ ಈ ಕೆಳಗೆ ಕಾಣಿಸಿದಂತೆ, ಸಪ್ತಸ್ವರಗಳನ್ನು ಸರಿಯಾದ ಎರಡು ಭಾಗಗಳಲ್ಲಿ ವಿಂಗಡಿಸಬಹುದಾಗಿದೆ.

ಪೂರ್ವಭಾಗ

ಸಾ  ರೆ  ಗ

ಮ  ಪ

ಧ  ನಿ  ಸಾ

ಉತ್ತರಭಾಗ

ಮೇಲ್ಕಾಣಿಸಿದ ವಿಭಜನೆಯ ಪ್ರಕಾರ ಎರಡೂ ಭಾಗಗಳಲ್ಲಿ ಮಧ್ಯ ಮತ್ತು ಪಂಚಮ ಸ್ವರಗಳು ಇದ್ದುದು ಕಂಡುಬರುತ್ತದೆ. ಹೀಗೆ ಷಡ್ಜದಿಂದ ಪಂಚಮದವರೆಗಿನ ಸ್ವರಗಳಲ್ಲಿ ಯಾವುದಾದರೂ ಒಂದು ಸ್ವರವು ವಾದಿ ಸ್ವರವಾಗಿದ್ದಲ್ಲಿ ಅಂಥ ರಾಗಕ್ಕೆ ಪೂರ್ವಾಂಗವಾದಿ ರಾಗವೆಂದೂ, ಮತ್ತು ಆ ರಾಗವನ್ನು  ದಿನದ ಪೂರ್ವಭಾಗದಲ್ಲಿ ಅಂದರೆ ದಿನದ ೧೨ ರಿಂದ ರಾತ್ರಿಯ ೧೨ರ ಕಾಲಾವಧಿಯಲ್ಲಿ ಹಾಡುತ್ತಾರೆ. ಅದರಂತೆ ಸಪ್ತಕದ ಉತ್ತರಾರ್ಧದಲ್ಲಿಯ ಮಧ್ಯಮದಿಂದ ತಾರಷಡ್ಜದವರೆಗಿನ ಸ್ವರಗಳಲ್ಲಿ ಯಾವುದಾದರೂ ಸ್ವರವು ವಾದಿಸ್ವರವಾಗಿದ್ದಲ್ಲಿ ಆ ರಾಗವನ್ನು ರಾತ್ರಿಯ ೧೨ ಗಂಟೆಯಿಂದ ದಿನದ ೧೨ ಗಂಟೆಯ ಕಾಲಾವಧಿಯಲ್ಲಿ ಹಾಡುತ್ತಾರೆ. ಉದಾಹರಣಾರ್ಥವಾಗಿ ಯಮನ ರಾಗದಲ್ಲಿ ಗಾಂಧಾರ ಸ್ವರವು ವಾದಿ ಸ್ವರವಾಗಿದ್ದು, ಅದು ಸಪ್ತಕದ ಪೂರ್ವಾರ್ಧದಲ್ಲಿ ಬರುವುದರಿಂದ ಈ ರಾಗವನ್ನು ಸ್ಥೂಲಮಾನವಾಗಿ, ದಿನದ ಪೂರ್ವಾರ್ಧದಲ್ಲಿ ಅಂದರೆ ದಿನದ ೧೨ ಗಂಟೆಯಿಂದ ರಾತ್ರಿಯ ೧೨ ಗಂಟೆಯವರೆಗಿನ ಕಾಲಾವಧಿಯಲ್ಲಿ ಹಾಡಲ್ಪಡುತ್ತದೆ. ಬಿಲಾವಲ ರಾಗದಲ್ಲಿ ಧೈವತವು ವಾದಿ ಸ್ವರವಾಗಿದ್ದು ಅದು ಸಪ್ತಕದ ಉತ್ತರಾರ್ಧದಲ್ಲಿರುವುದರಿಂದ ಬಲಾವಲ ರಾಗವನ್ನು ದಿನದ ಉತ್ತರಾರ್ಧದಲ್ಲಿ ಅಂದರೆ ರಾತ್ರಿಯ ೧೨ ಗಂಟೆಯಿಂದ ದಿನದ ೧೨ ಗಂಟೆಯ ಕಾಲಾವಧಿಯಲ್ಲಿ ಹಾಡಲ್ಪಡುತ್ತದೆ.

ಉದಾಹರಣಾರ್ಥವಾಗಿ ಭೀಮಪಲಾಸ ರಾಗದಲ್ಲಿ ಮಧ್ಯಮ ಮತ್ತು ಷಡ್ಜ ಸ್ವರಗಳು ವಾದಿ-ಸಂವಾದಿ ಸ್ವರಗಳಾಗಿದ್ದು, ಎರಡೂ ಸ್ವರಗಳು ಸಪ್ತಕದ ಪೂರ್ವಾರ್ಧದಲ್ಲಿ ಕಂಡುಬರುತ್ತವೆ. ಇಲ್ಲಿ ನಾವು ಸಪ್ತಕದ ವಿಭಜನೆಯನ್ನು ಕುರಿತು ವಿಚಾರಿಸಿದಲ್ಲಿ ಈ ಮೊದಲಿನ ಷಡ್ಜದಿಂದ ಮಧ್ಯಮ ಮತ್ತು ಪಂಚಮದಿಂದ ತಾರಷಡ್ಜ ಹೀಗೆ ಎರಡು ಭಾಗಗಳನ್ನು ಮಾಡಿದಲ್ಲಿ ಮೇಲ್ಕಾಣಿಸಿದ ಸಮಸ್ಯೆಗೆ ಪರಿಹಾರ ದೊರೆಯದೆ ಅದು ಅಪವಾದಾತ್ಮಕ ಸಂಗತಿಯಾಗಬಹುದಾಗಿದೆ. ಆದರೆ ಸಪ್ತಕದ ವಿಭಜನೆಯನ್ನು ಷಡ್ಜದಿಂದ ಪಂಚಮದವರೆಗೆ ಮತ್ತು ಮಧ್ಯಮದಿಂದ ತಾರ ಷಡ್ಜದವರೆಗೆ ಹೀಗೆ ಎರಡು ಭಾಗಗಳಲ್ಲಿ ವಿಂಗಡಿಸುವುದರಿಂದ ಭೀಮಪಲಾಸ ರಾಗದಲ್ಲಿಯ ಮಧ್ಯಮವು ಸ್ವಾಭಾವಿಕವಾಗಿ ಸಪ್ತಕದ  ವಿಭಜನೆಯ ಪ್ರಕಾರ ಬಸಂತ ರಾಗದ ಷಡ್ಜ-ಮಧ್ಯಮ ವಾದಿ-ಸಂವಾದಿ ಸ್ವರಗಳು ಸಪ್ತಕದ ಉತ್ತರಾರ್ಧದಲ್ಲಿ ಬರುವವು. ಆದರೆ ಸಪ್ತಕದ ಎರಡನೆಯ ವಿಭಜನೆಯ ಪ್ರಕಾರ ಬಸಂತ ರಾದ ವಾದಿ-ಸಮವಾದಿ ಸ್ವರಗಳಲ್ಲಿಯ ಶೃತ್ಯಂತರ ಸಮಸ್ಯೆಯು ತನ್ನಿಂದ ತಾನೇ ಪರಿಹಾರವಾಗುವುದು.

(ಕೆಲವರು ತಾರಷಡ್ಜ ಪಂಚಮ ಸ್ವರಗಳು ಬಸಂತರಾಗದ ವಾದಿ-ಸಂವಾದಿ ಸ್ವರಗಳೆಂದು ಅಭಿಪ್ರಾಯ ಪಡುತ್ತಾರೆ).

ಅದರಂತೆ ಭೈರವೀ ರಾಗವು ಕೂಡಾ ಈ ಪೂರ್ವದ ವಿಭಜನೆಗೆ ವ್ಯತಿರಿಕ್ತವಾಗಿದ್ದು, ಎರಡನೆಯ ವಿಭಜನೆಯ ಪ್ರಕಾರ ಅದರ ವಾದಿ ಸಂವಾದಿ ಶೃತ್ಯಂತರ ಸಮಸ್ಯೆಯು ಉದ್ಬವಿಸಲಾರದು. ಆದುದರಿಂದ ಇಲ್ಲಿ ನಾವು ಈ ಸಪ್ತಕದ ಹೊಸ ವಿಭಜನೆಯ ಔಚಿತ್ಯವನ್ನು ಕಂಡುಕೊಳ್ಳಬಹುದಾಗಿದೆ.

ಮೇಲೆ ಹೇಳಿದ ರಾಗಗಳ ಸಮಯ ವಿಭಜನೆಯು ಸ್ಥೂಲಮಾನವಾಗಿದ್ದು, ಪ್ರತಿಯೊಂದು ರಾಗವನ್ನು ನಿರ್ದಿಷ್ಟಪಡಿಸಿದ ಇಂಥ ವೇಳೆಗೆ ಹಾಡಬೇಕೆಂಬ ನಿಯಮವಿರುತ್ತದೆ. ಆಯಾ ರಾಗಗಳಲ್ಲಿಯ ವಿಕೃತಸ್ವರಗಳ ಮೇಲೂ ಹಾಗೂ ಆ ಸ್ವರಗಳ ರಸಭಾವದ ಮೇಲೂ ಅವಲಂಬಿಸಿದುದು ಕಂಡುಬರುತ್ತದೆ.

ಸ್ವರ ಮತ್ತು ಸಮಯದ ದೃಷ್ಟಿಯಿಂದ ರಾಗಗಳಲ್ಲಿ ಮೂರು ವರ್ಗಗಳನ್ನು ನಾವು ಮಾಡಬಹುದು.

ಇಂಥ ವೇಳೆಗೆ ಇಂಥದೇ ರಾಗವನ್ನು ಹಾಡಬೇಕೆಂಬ ರಾಗಗಳ ಸಮಯ ಸಿದ್ಧಾಂತವು ಪ್ರಾಚೀನಕಾಲದಿಂದಲೇ ಬಂದಿದೆ. ರಾಗಗಳ ಬಗೆಗಿನ ಈ ಸಮಯ ಸಿದ್ಧಾಂತವು ಆಯಾ ರಾಗಗಳಲ್ಲಿಯ ಶುದ್ಧ ಮತ್ತು ವಿಕೃತ ಸ್ವರಗಳನ್ನೇ ಅವಲಂಬಿಸಿದೆ. ಜೊತೆಗೆ ವಾದಿ-ಸಂವಾದಿ ಸ್ವರಗಳ ಸ್ಥಾನಮಾನಗಳು ಇಲ್ಲಿ ಮಹತ್ವದ ಸಂಗತಿಗಳಾಗಿವೆ. ಪ್ರಾಚೀನ ಮತ್ತು ಆರ್ವಾಚೀನ ರಾಗಗಳಲ್ಲಿಯ ವಿಶೇಷ ಭಿನ್ನತೆಯು ನಮಗೆ ಕಂಡುಬಂದರೂ, ರಾಗಗಳ ಈ ಸಮಯ ಸಿದ್ಧಾಂತವು ಇಂದಿಗೂ ಪಡೆದಿದೆ.

ಹಿಂದೂಸ್ತಾನೀಯ ರಾಗಾಣಾಂ ತ್ರಯೋವರ್ಗಾಃ ಸುನಿಶ್ಚಿತಾ |
ಸ್ವರ
ವಿಕೃತ್ಯಧೀನಾಸ್ತೆ ಲಕ್ಷ್ಯ ಲಕ್ಷಣಕೋವಿದೈಃ ||

ಎಂಬ ‘ಶ್ರೀಮಲಕ್ಷ್ಯ ಸಂಗೀತ’ದ ಅಭಿಪ್ರಾಯದಂತೆ ಸ್ವರ ಮತ್ತು ಸಮಯದ ದೃಷ್ಟಿಯಿಂದ ಹಿಂದುಸ್ತಾನಿ ರಾಗಗಳಲ್ಲಿ ಮೂರು ವರ್ಗಗಳನ್ನು ಮಾಡಿದ್ದು ಈ ವರ್ಗೀಕರಣವು ರಾಗಗಳಲ್ಲಿಯ ಶುದ್ಧ, ಕೋಮಲ ಮತ್ತು ತೀವ್ರ ಸ್ವರಗಳನ್ನು ಆಧರಿಸಿದೆ.

) ಕೋಮಲ ರಿಷಭ ಮತ್ತು ಕೋಮಲ ಧೈವತವಿದ್ದ ರಾಗಗಳು

) ಶುದ್ಧ ರಿಷಭ ಮತ್ತು  ಶುದ್ಧ ಧೈವತವಿದ್ದ ರಾಗಗಳು

) ಕೋಮಲ ಗಾಂಧಾರ ಮತ್ತು ಕೋಮಲ ವಿಷಾಧವಿದ್ದ ರಾಗಗಳು

ಮೇಲೆ ಕಾಣಿಸಿದ ಮೂರು ವರ್ಗಗಳಲ್ಲಿಯ ಪ್ರಥಮ ವರ್ಗವು ಕೋಮಲ ರಿಷಭ ಮತ್ತು ಕೋಮಲ ಧೈವತ ಸ್ವರಗಳಲ್ಲಿ ಒಳಗೊಂಡಿದ್ದು, ಇವು ಸಂಧೀ ಪ್ರಕಾಶ ರಾಗಗಳ ಮಾಲಿಕೆಯಲ್ಲಿ ಬರುವವು. ಇಲ್ಲಿ ಕೋಮಲ ರಿಷಭ ಮತ್ತು ಕೋಮಲ ಧೈವತಗಳ ಜೊತೆಗೆ ಗಾಂಧಾರ ಸ್ವರವು ಶುದ್ಧವಾಗಿರುವುದು ಅತ್ಯವಶ್ಯಕವಾಗಿದೆ. ಏಕೆಂದರೆ ಇಲ್ಲಿ ಗಾಂಧಾರವು ಕೋಮಲವಾಗಿದ್ದಲ್ಲಿ ಇದು ಮೂರನೆಯ ವರ್ಗದಲ್ಲಿ ಪರಿಗಣಿಸಲ್ಪಡುತ್ತದೆ.

ಹೀಗೆ ಪ್ರಪಂಚದಲ್ಲಿ ಎರಡು ಸಂಧಿಪ್ರಕಾಶದ ಸಮಯಾವಕಾಶವಿದ್ದು, ಸಂಗೀತದಲ್ಲಿ

೧) ಪ್ರಾತಃಕಾಲೀನ ಸಂಧಿಪ್ರಕಾಶ ರಾಗಗಳು

೨) ಸಾಯಂಕಾಲೀನ ಸಂಧಿಪ್ರಕಾಶ ರಾಗಗಳು

ಎಂದು ಎರಡು ಬಗೆಯ ಸಂಧಿಪ್ರಕಾಶ ರಾಗಗಳ ವಿಭಜನೆಯು ಬರುತ್ತವೆ. ಪ್ರಾತಃಕಾಲೀನ ಸಂಧಿ ಪ್ರಕಾಶದಲ್ಲಿ ಹಾಡತಕ್ಕ-ನುಡಿಸತಕ್ಕ ರಾಗರಾಗಿಣಿಗಳಿಗೆ ಪ್ರಾತಃಕಾಲೀನ ಸಂಧಿಪ್ರಕಾಶ ರಾಗಗಳೆಂತಲೂ, ಸಾಯಂಕಾಲೀನ ಸಂಧಿಪ್ರಕಾಶ ರಾಗಗಳೆಂತಲೂ ಕರೆಯುತ್ತಾರೆ.

ಸಂಧಿಪ್ರಕಾಶ ರಾಗಗಳಲ್ಲಿ ಧೈವತವು ತೀವ್ರ ಅಥವಾ ಕೋಮಲವಾಗಿದ್ದರೂ ರಿಷಭ ಸ್ವರವು ಮಾತ್ರ ಕೋಮಲವಾಗಿದ್ದು ಜೊತೆಗೆ ಗಾಂಧಾರ ಮತ್ತು ನಿಷಾಧಗಳು ಸಾಮಾನ್ಯವಾಗಿ ಶುದ್ಧವಾಗಿರುವುದು ಕಂಡುಬರುತ್ತದೆ.  ಭೈರವಿಯಂಥ ರಾಗವು ಈ ಸಾಮಾನ್ಯ ನಿಯಮಕ್ಕೆ ಅಪವಾದವಾಗಿದೆ.

ಸಂಧಿಪ್ರಕಾಶ ರಾಗಗಳಲ್ಲಿ ಮಧ್ಯಮ ಸ್ವರವು, ವಿಶೇಷವಾದ ಮಾಹಿತಿಯನ್ನು ಹೊಂದಿದೆ. ಪ್ರಾತಃಕಾಲೀನ ಸಂಧಿಪ್ರಕಾಶ ರಾಗಗಳಲ್ಲಿ ಮಧ್ಯಮವು ಸಾಮಾನ್ಯವಾಗಿ ಕೋಮಲವಾಗಿರುತ್ತದೆ. ಮತ್ತು ಸಾಯಂಕಾಲೀನ ಸಂಧಿಪ್ರಕಾಶದ ರಾಗಗಳಲ್ಲಿ ತೀವ್ರ ಮಧ್ಯಮದ ಪ್ರಯೋಗವು ವಿಶೇಷ ಹಾಗೂ ಪ್ರಭಾವಶಾಲಿ ಸ್ವರವಾಗಿರುತ್ತದೆ. ಉದಾಹರಣಾರ್ಥವಾಗಿ ಭೈರವ, ಕಾಲಿಂಗಡಾ ರಾಗಗಳಲ್ಲಿ ಶುದ್ಧ ಮಧ್ಯಮ ಪ್ರಯೋಗವಿದ್ದು, ಈ ರಾಗಗಳು ಪ್ರಾತಃಕಾಲೀನ ಸಂಧಿಪ್ರಕಾಶದ ರಾಗಗಳಾಗಿವೆ. ಅದರಂತೆ ಪೂರ್ವಿ ಮತ್ತು ಮಾರ್ವಾ ರಾಗಗಳಲ್ಲಿ ತೀವ್ರ ಮಧ್ಯಮದ ಪ್ರಯೋಗವಿದ್ದು ಇವು ಸಾಯಂಕಾಲೀನ ಸಂಧಿಪ್ರಕಾಶದ ರಾಗಗಳಾಗಿವೆ.

೨. ರಿಷಭ ಹಾಗೂ ಧೈವತ ಸ್ವರಗಳು ಶುದ್ಧವಿದ್ದ ರಾಗಗಳನ್ನು ಹಾಡತಕ್ಕ ಸಮಯವು ಸಂಧಿಪ್ರಕಾಶದ ಕಾಲಾವಧಿಯ ನಂತರ ಬರುತ್ತದೆ. ಈ ಮೊದಲು ಹೇಳಿದಂತೆ ಸಂಧಿಪ್ರಕಾಶದ ಕಾಲವು ದಿನದಲ್ಲಿ ಎರಡು ಸಲ ಬರುತ್ತಿದ್ದು ಈ ವರ್ಗಕ್ಕೆ ಸೇರಿದ ರಾಗಗಳನ್ನು ಹಾಡತಕ್ಕ ಸಮಯವು ಕೂಡಾ ದಿನದ ೨೪ ಗಂಟೆಗಳ ಕಾಲಾವಧಿಯಲ್ಲಿ ಹಾಡತಕ್ಕ ರಾಗಗಳು, ಕಲ್ಯಾಣ, ಬಿಲಾವಲ, ಹಾಗೂ ಖಮಾಜ ಥಾಟಕ್ಕೆ ಸೇರಿದ ರಾಗಗಳಾಗಿರುತ್ತವೆ.

ಪ್ರಾತಃಕಾಲೀನ ಸಂಧಿಪ್ರಕಾಶ ರಾಗಗಳಲ್ಲಿಯ ಕೋಮಲ, ಶುದ್ಧಸ್ವರಗಳು ದಿನವು ಬಲಿತು ಈ ರಾಗಗಳಲ್ಲಿಯ ಕೋಮಲ ರಿಷಭ ಧೈವತ ಸ್ವರಗಳು ಶುದ್ಧ ಸ್ವರಗಳಾಗಿ ಪರಿವರ್ತನೆಗೊಳ್ಳುವವು. ಹೀಗೆ ಪ್ರಾತಃಕಾಲದ ೭ ಗಂಟೆಯಿಂದ ೧೦ ಗಂಟೆಯವರೆಗಿನ ಹಾಗೂ ಸಾಯಂಖಾಲ ಏಳು ಗಂಟೆಯಿಂದ ರಾತ್ರಿಯ ೧೦ ಗಂಟೆಯವರೆಗಿನ ಕಾಲಾವಧಿಯಲ್ಲಿ ಶುದ್ಧ ರಿಷಭ ಮತ್ತು ಶುದ್ಧ ಧೈವತ ಸ್ವರ  ಪ್ರಧಾನವಾದ ರಾಗಗಳನ್ನು ಹಾಡಲಾಗುತ್ತದೆ. ಇಲ್ಲಿ ಗಾಂಧಾರವು ಶುದ್ಧವಾಗಿಯೇ ಇರಬೇಕು ಎಂಬುದು ಅತ್ಯಗತ್ಯ. ಇದರ ಜೊತೆಗೆ ಮಧ್ಯಮಸ್ವರದ ಮಹತಿಯನ್ನು ನಾನು ಅಲ್ಲಗಳೆಯುವಂತಿಲ್ಲ.  ಹೀಗೆ ಮುಂಜಾನೆ ಏಳು ಗಂಟೆಯಿಂದ ಹತ್ತು ಗಂಟೆಯವರೆಗಿನ ಕೋಮಲ ಮಧ್ಯಮದ ಪ್ರಭಾವವು ವಿಶೇಷವಾಗಿರುತ್ತದೆ. ಉದಾ: ಬಿಲಾವಲ, ಭೈರವ ಮುಂತಾದವು.

ಸಾಯಂಕಾಲದ ಏಳು ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗಿನ ಕಾಲಾವಧಿಯಲ್ಲಿಯ ರಾಗಗಳಲ್ಲಿ ತೀವ್ರ ಮಧ್ಯಮವು ವಿಶೇಷ ಪ್ರಭಾವಶಾಲಿಯಾಗಿರುತ್ತದೆ. ಉದಾ : ಯಮನ, ಶುದ್ಧ ಕಲ್ಯಾಣ ತ್ಯಾದಿ.

೩. ಶುದ್ಧ ರಿಷಭ, ಶುದ್ಧ ಧೈವತ ರಾಗಗಳ ನಂತರ ಮೂರನೆಯ ವರ್ಗದ ಅಂದರೆ ಕೋಮಲ ಗಾಂಧಾರ, ಕೋಮಲ ನಿಷಾಧ ಸ್ವರ ಪ್ರಧಾನ ರಾಗಗಳು ಬರುತ್ತವೆ. ಇ ರಾಗಗಳು ದಿನದ ಹತ್ತು ಗಂಟೆಯಿಂದ ಸಾಯಂಕಾಲ ನಾಲ್ಕರವರೆಗೆ ಹಾಗೂ ರಾತ್ರಿಯ ಹತ್ತು ಗಂಟೆಯಿಂದ ಬೆಳಗಿನ ನಾಲ್ಕು ಗಂಟೆಗಳ ಕಾಲಾವಧಿಯಲ್ಲಿ ಹಾಡಲ್ಪಡುತ್ತವೆ. ಈ ರಾಗಗಳಲ್ಲಿ ರಿಷಭ ಧಯವತ ಸ್ವರಗಳು ಶುದ್ಧವಾಗಿರಬಹುದು ಅಥವಾ ಕೋಮಲವಾಗಿರಬಹುದು. ಆದರೆ ಗಾಂಧಾರ ಸ್ವರವು ಮಾತ್ರ ಅತ್ಯವಶ್ಯಕವಾಗಿ ಕೋಮಲ ಸ್ವರವಾಗಿರಲೇಬೇಕು. ಈ ವರ್ಗದ ರಾಗಗಳಲ್ಲಿ ಪ್ರಾತಃಕಾಲದಲ್ಲಿ ಅಸಾವರಿ, ಜೀವನಪುರಿ, ಗಾಂಧಾರಿ ಇತ್ಯಾದಿ ರಾಗಗಳು ಬರುತ್ತವೆ. ರಾತ್ರಿಯ ಕಾಲಾವಧಿಯಲ್ಲಿ ಬಾಗೇಶ್ರೀ, ಜೈಜೈವಂತಿ, ಮಾಲಕಂಸ ಮುಂತಾದ ರಾಗಗಳು ಬರುತ್ತವೆ.

ರಾಗಗಳಲ್ಲಿಯೂ ಸ್ವರಗಳಿಗೂ, ನಿಸರ್ಗದ ಮೂರು ಹೊತ್ತುಗಳಿಗೂ ಹಾಗೂ ನಮ್ಮ ಮನಸ್ಥೀತಿಗೂ ಒಂದು ನಿಕಟವಾದ ಸಂಬಂಧವು ಕಂಡುಬರುತ್ತದೆ. ಪ್ರಾತಃಕಾಲದಲ್ಲಿ ವಾತಾವರನವು ಕೋಮಲವಾಗಿದ್ದು ಶಾಂತರಸವನ್ನು, ಸಮಾಧಾನಭಾವವನ್ನು ಪ್ರತಿಪಾದಿಸುತ್ತದೆ. ದಿನವಿಡಿ ದುಡಿದು ದಣಿದು ಬಂದ ದೇಹ ಮನಸ್ಸುಗಳಿಗೆ ರಾತ್ರಿಯ ವಿಶ್ರಾಂತಿಯು ನಮ್ಮ ಮನಸ್ಸಿಗೊಂದು ಕೋಮಲತೆಯನ್ನು ತಂದುಕೊಡುತ್ತದಲ್ಲದೆ ಶಾಂತರಸವನ್ನೇ ಪ್ರತಿಪಾದಿಸುತ್ತದೆ.

ಹೀಗೆ ಶಾಂತವಾದ ಮನಸ್ಸಿಗೆ ಪ್ರಾತಃಕಾಲದ ಪ್ರಶಾಂತವಾದ ಕೋಮಲ ವಾತಾವರಣಕ್ಕೆ ಒಗ್ಗುವಂತೆ ಕೋಮಲ ಸ್ವರಪ್ರಧಾನವಾದ ರಾಗಗಳನ್ನು ಹಾಡಿದರೇನೇ ಅದು ಶೋಭಿಸುತ್ತದೆ. ಸೂರ್ಯೋದಯವಾಗಿ ಹೊರಗಿನ ವಾತಾವರಣದಲ್ಲಿಯ ಕೋಮಲತೆಯು ಬಲಿದಂತೆ, ಮನಸ್ಸಿನ ಕೋಮಲತೆಯು ಅಳಿದು ಅದು ರಾಗದಲ್ಲಿಯ ಶುದ್ಧ ಸ್ವರಗಳತ್ತ ಹರಿದು ಶುದ್ಧ ಸ್ವರ ಪ್ರಧಾನವಾದ ರಾಗಗಳು ಹಾಡಲ್ಪಡುವವು. ಹೊರಗಿನ ವಾತಾವರಣವು ಬಲಿದಂತೆ  ಈ ಶುದ್ಧ ಸ್ವರಗಳು ಬಲಿತು ತೀವ್ರಸ್ವರಗಳಾಗಿ ನಮ್ಮ ಮನಸ್ಸೂ ಬಲಿತು, ತೀವ್ರವಾಗಿ, ತೀವ್ರ ಸ್ವರ ಪ್ರಧಾನವಾದ ರಾಗಗಳು ಹಾಡಲ್ಪಡುವವು. ಅದರಂತೆ ಸಾಯಂಕಾಲವಾದಂತೆ, ಮನಸ್ಸಿನಲ್ಲಿಯ ವಾತಾವರಣದಲ್ಲಿಯ ತೀವ್ರತೆಯು ಅಳಿದುಹೋಗಿ, ರಾಗಗಳಲ್ಲಿಯ ತೀವ್ರ ಸ್ವರಗಳು ಕೋಮಲ ಸ್ವರಗಳಾಗಿ ಮಾರ್ಪಟ್ಟು ಸಂಧಿಪ್ರಕಾಶದ ರಾಗಗಳು ಪ್ರಾರಂಭವಾಗುವವು. ಈ ಸಂಧಿ ಪ್ರಕಾಶರಾಗಗಳಲ್ಲಿಯ ತೀವ್ರ ಮಧ್ಯಮವು ಪ್ರಭಾವಶಾಲಿಯಾಗಿದ್ದು, ವಾತಾವರಣವು ಅತ್ಯಂತ ಮಾರ್ಮಿಕವಾಗಿರುವುದು.

ಹೀಗೆ ನಿಸರ್ಗಕ್ಕೂ, ನಮ್ಮ ಮನಸ್ಸಿಗೂ ಹಾಗೂ ರಾಗಗಳಿಗೂ ಅನ್ಯೋನ್ಯ ಸಂಬಂಧವಿದ್ದು ಆಯಾ ಸಮಯಕ್ಕೆ ಸರಿಹೊಂದುವ ರಾಗಗಳನ್ನು ಹಾಡಿದರೇನೇ ರಾಗರಸ ಭಾವಕ್ಕೆ ಕಳೆಕಟ್ಟುವುದಲ್ಲದೆ ಅದು ಹೆಚ್ಚು ಪರಿಣಾಮಕಾರಕವಾಗಿರುವುದು. ಈ ದೃಷ್ಟಿಯಿಂದ ಅವಲೋಕಿಸಿದರೆ ಕೆಲವು ರಾಗಗಳು ಇಲ್ಲಿ ಅಪವಾದಾತ್ಮಕವಾಗಿ ಕಂಡುಬರುವವು. ಉದಾ : ಭೈರವಿ ರಾಗವನ್ನು ಹಾಡತಕ್ಕ ಸಮಯವು ಪ್ರಾತಃಕಾಲವಾಗಿದೆ. ಆದರೆ ಈ ರಾಗವನ್ನು ದಿನದ ೨೪ ಗಂಟೆಗಳ ಕಾಲಾವಧಿಯಲ್ಲಿ ಬೇಕಾದಾಗ ಹಾಡಬಹುದಾಗಿದೆ. ಸಾಮಾನ್ಯವಾಗಿ ಸಂಗೀತ ಕಚೇರಿಗಳನ್ನು ಭೈರವಿ ರಾಗವನ್ನು ಹಾಡಿಯೇ ಸಂಪನ್ನಗೊಳಿಸುವುದು ವಾಡಿಕೆ. ಶಾಸ್ತ್ರೀಯ ನಿಯಮದ ಪ್ರಕಾರ ಈ ರಾಗವನ್ನು ಹಾಡತಕ್ಕ ಸಮಯವು ಪ್ರಾತಃಕಾಲವಾದರೂ ಇದನ್ನು ‘ಸರ್ವಕಾಲಿಕ’ ರಾಗವೆಂದು ಮನ್ನಿಸಲಾಗಿದೆ.

ಹೀಗೆಯೇ ವರ್ಷದಲ್ಲಿಯ ಆರು ಋತುಗಳಿಗೆ ಅನುಗುಣವಾಗಿ ಋತುಮಾನ-ಕಾಲದ ರಾಗ-ರಾಗಿಣಿಗಳನ್ನು ಆಯಾ ರಾಗಗಳಿಗೆ ಸಂಬಂಧಿಸಿದ ಋತುಮಾನದ ಕಾಲಾವಧಿಯಲ್ಲಿ ಯಾವಾಗ ಬೇಕಾದರು ಹಾಡಬಹುದಾಗಿದೆ.  ಶಾಸ್ತ್ರದ ದೃಷ್ಟಿಯಿಂದ ಈ ರಾಗಗಳಿಗೆ ಸಮಯ ನಿರ್ಬಂಧವಿದ್ದರೂ ಆ ರಾಗಗಳ ಋತುಮಾನ ಕಾಲಾವಧಿಯಲ್ಲಿ ಅವುಗಳಿಗೆ ಯಾವ ರೀತಿಯ ಸಮಯ ನಿರ್ಬಂಧವೂ ಇರುವುದಿಲ್ಲ. ಉದಾ : ಬಸಂತರಾಗವನ್ನು ಹಾಡತಕ್ಕ ಸಮಯವು ರಾತ್ರಿಯ ಅಮತಿಮ ಪ್ರಹರವಾದರೂ ವಸಂತ ಋತುವಿನಲ್ಲಿ ಇದು ಸರ್ವಕಾಲಿಕ ರಾಗವೆಂದು ಪರಿಗಣಿಸಲ್ಪಡುವುದು. ಹಾಗೆಯೇ ಗ್ರೀಷ್ಮ ಋತುವಿನಲ್ಲಿ ಭೈರವ, ವರ್ಷಋತುವಿನಲ್ಲಿ ಮೇಘ, ಶರದೃತುವಿನಲ್ಲಿ ಪಂಚಮ, ಹೇಮಂತದಲ್ಲಿ ನಟನಾರಾಯಣ, ಶಿಶಿರದಲ್ಲಿ ಶ್ರೀ ರಾಗಗಳನ್ನು ಸರ್ವಕಾಲಿಕ ರಾಗಗಳೆಂದು ಮನ್ನಿಸಿದ್ದಾರೆ.