ಸೃಷ್ಟಿ ರಹಸ್ಯದಷ್ಟೇ ಅದ್ಭುತವೂ ರಮ್ಯವೂ ಆದುದು ಕಾವ್ಯರಹಸ್ಯ. ಏಕೆಂದರೆ ಕಾವ್ಯವೂ ಒಂದು ಸೃಷ್ಟಿ. ಬೀಜದಿಂದ ಭೂಜವೇಳುವ ಕ್ರಿಯೆಯೂ, ಭ್ರೂಣದಿಂದ ಪ್ರಾಣ ಮೈದಾಳಿ ನಿಲ್ಲುವ ಪರಿಯೂ, ಕವಿಯಲ್ಲಿ ಕವಿತೆ ಹುಟ್ಟುವ ಬಗೆಯೂ ಬಹುಶಃ ಒಂದೇ.

ಕವಿಯ ಕವನವೊಂದನ್ನೋದಿ ನಾವು ಆನಂದಾನುಭವವನ್ನು ಪಡೆಯುತ್ತೇವೆ. “ಆಹಾ ಎಷ್ಟು ಚಂದ” ಎಂದು ಉದ್ಗಾರವೆತ್ತುತ್ತೇವೆ. ನಾವು ಸವಿದ ಕೃತಿಯನ್ನೋದಿ ನಮ್ಮಸುತ್ತ ಮುತ್ತಲಿನವರಿಗೆ ವ್ಯಾಖ್ಯಾನಿಸಿ ಕೃತಿಯ ಕಡೆ, ಕೃತಿಯನ್ನು ರಚಿಸಿದ ಕವಿಯ ಕಡೆ ಅವರ ಗಮನವನ್ನು ಸೆಳೆಯುತ್ತೇವೆ. ಇಂಥ ರಮ್ಯಸೃಷ್ಟಿಯನ್ನು ಕಂಡ ಕವಿ ನಮಗೆ ಪವಾಡದಂತೆ ತೋರುತ್ತಾನೆ; ನಮ್ಮದನ್ನೇ ನಮ್ಮದಲ್ಲದ ರೀತಿಯಲ್ಲಿ, ನೂತನವೆಂಬಂತೆ ರಮ್ಯವೆಂಬಂತೆ ತೋರಿದ ಅವನ ಕಾವ್ಯದ ಮೋಡಿಗೆ ಬೆರಗಾಗುತ್ತೇವೆ. ಈ ಆನಂದಾಸ್ವಾದದನಂತರ ನಮ್ಮಲ್ಲಿ ಪ್ರಶ್ನೆ ಮೂಡುತ್ತದೆ, ಕವಿಯಲ್ಲಿ ಈ ಕವಿತೆ ಹೇಗೆ ಹುಟ್ಟಿತು ಎಂದು.

ಕವಿಯ ಕೃತಿಯನ್ನೋದಿ ಅದರಿಂದ ಬರುವ ಆನಂದವನ್ನು ಸವಿದರೆ ಸಾಲದೆ, ಅದು ಹೇಗೆ ಬಂದರೇನು, ಅದು ನೀಡುವ ಸವಿಯನ್ನು ಅನುಭವಿಸಿದರೆ ಸಾಲದೆ- ಎಂಬ ಚಾರ್ವಾಕಬುದ್ಧಿಯನ್ನು ಒತ್ತಟ್ಟಿಗೆ ಸರಿಸಿ ನಾವು ನಮಗೆ ತೋರಿದಂತೆ ಕಾವ್ಯದ ಉಗಮವನ್ನು ಕುರಿತು ಚಿಂತಿಸುತ್ತೇವೆ; ತಿಳಿದವರು, ವಿಮರ್ಶಕರು ಏನಾದರೂ ಹೇಳಿದ್ದಾರೆಯೆ ಎಂದು ನೋಡುತ್ತೇವೆ; ಕವಿಯ ಮನಸ್ಸನ್ನೂ ಚಿಕಿತ್ಸೆಗೆ ಒಳಗುಮಾಡಿ ಮನಸ್‌ಶಾಸ್ತ್ರಜ್ಞರೇನಾದರೂ ಹೇಳಿದ್ದಾರೆಯೇ ಎಂದು ಹುಡುಕುತ್ತೇವೆ.  ಅಲ್ಲೆಲ್ಲಾ ಏನೋ ಒಂದು ರೀತಿಯ ಉತ್ತರ ದೊರೆತರೂ, ಕಡೆಗೆ ಕವಿಯ ಕವನಕ್ಕೇ ಶರಣು ಬರುತ್ತೇವೆ. ಕವಿ ತನ್ನ ಕವನದಲ್ಲೇ, ಕಾವ್ಯಮೂಡಿದ ಪರಿಯನ್ನು ಹೇಳಿರುವುದೂ ಉಂಟು; ಅಂಥ ಕವನಗಳಿಂದ ಈ ವಿಚಾರ ತಕ್ಕಮಟ್ಟಿಗೆ ಸ್ಪಷ್ಟವಾಗುವುದುಂಟು. ತನ್ನ ಬಸಿರಲ್ಲಿ ಬೆಳೆಯುವ ಮಗುವಿನ ಬಗ್ಗೆ ತಾಯಿಯಾದವಳಿಗೆ ಎಷ್ಟು ಗೊತ್ತೊ, ಅಷ್ಟೇ, ಅಥವಾ ಅದಕ್ಕೂ ಮಿಗಿಲಾಗಿ ಕವಿಗೆ ಕಾವ್ಯರಹಸ್ಯ ಗೊತ್ತಿರಬಹುದು ಎಂದುಕೊಂಡು ನಾವು ಕವಿಯನ್ನು ಕೇಳುತ್ತೇವೆ: ಕಾವ್ಯ ನಿಮ್ಮಲ್ಲಿ ಹೇಗೆ ಹುಟ್ಟಿತು?

ಕಾವ್ಯದಿಂದ ಕವಿಯೋ, ಕವಿಯಿಂದ ಕಾವ್ಯವೋ? ಬೀಜವೃಕ್ಷನ್ಯಾಯದಂತೆ ಇದೂ ಒಂದು ಒಗಟು. ಬೇಂದ್ರೆಯವರು ಹೇಳುತ್ತಾರೆ “ಹಕ್ಕಿಗೆ ಗರಿ ಇದ್ದಂತೆ ಕವಿಗೆ ಕವನ”[1] ಎಂದು. ಹಕ್ಕಿಗೂ ಗರಿಗೂ ಯಾವ ಒಂದು ಅವಿನಾ ಸಂಬಂಧವಿದೆಯೋ, ಉದ್ದೇಶವಿದೆಯೋ ಹಾಗೆ ಕವಿ-ಕಾವ್ಯ ಎರಡೂ ಒಂದಕ್ಕೊಂದು ಪೂರಕ. ಹಾಗಾದರೆ ಕವಿ ಎಂದರೆ ಯಾರು? ಬೇಂದ್ರೆಯವರು ವಂಗಕವಿ ರವೀಂದ್ರರನ್ನು ‘ಗುರುದೇವ’ ಎಂದು ಗೌರವಿಸಿ ಪ್ರಶಂಸಿಸುವಲ್ಲಿ ಕವಿ ಎಂದರೆ ಯಾರು ಎಂಬುದನ್ನು ಬಹು ಸೊಗಸಾಗಿ ಹೇಳಿದ್ದಾರೆ:

ನುಡಿದು ಬೇಸತ್ತಾಗ| ದುಡಿದುಡಿದು ಸತ್ತಾಗ
ಜನಕ ಹಿಗ್ಗಿನ ಹಾಡ ನೀಡಾ
s[2]

ಈ ಲೋಕದಲ್ಲಿ ನಾವು ದೈನಂದಿನ ಕರ್ಮದಲ್ಲಿ ತೊಡಗಿ ಹೊಟ್ಟೆಯ ಪಾಡಿಗಾಗಿ  ದುಡಿದೂ ದುಡಿದೂ ಸಾಯುತ್ತೇವೆ; ಅದಕ್ಕೆ ಸಂಬಂಧಿಸಿದ ಮಾತನ್ನೇ ಆಡಿ ಆಡಿ ಬೇಸರದಲ್ಲಿ ಮುಳುಗುತ್ತೇವೆ. ಹೀಗೆ ಮಾಡಿದ್ದನ್ನೇ ಮಾಡಿ, ಆಡಿದ್ದನ್ನೇ ಆಡಿ ಯಾಂತ್ರಿಕವಾದ ಬದುಕಿನಲ್ಲಿ ತೊಡಗಿರುವ ಈ ಜನಕ್ಕೆ ಕವಿ ಹಿಗ್ಗಿನ ಹಾಡನ್ನು ನೀಡುವವನು. ಕವಿ ನೀಡುವುದು ಹಾಡು; ಹಿಗ್ಗಿನ ಹಾಡು. ಹಾಗಾದರೆ ಕವಿಗೆ ಕುಗ್ಗೆಂಬುದೇ ಇಲ್ಲವೆ? ಅಂತಹ ಸುಖಪುರುಷನೆ ಅವನು ಹಿಗ್ಗಿನ ಹಾಡನ್ನು ನೀಡಲು? ಅಲ್ಲ; ಅವನೂ ವ್ಯಕ್ತಿಯೇ, ಎಲ್ಲರಿಗೂ ಸಮಾನವಾದ ಪಾಡು ಅವನಿಗೂ ಉಂಟು; ಕವಿ ಹೇಳುತ್ತಾನೆ-

ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ!
[3]

ನನ್ನ ಪಾಡು ನನಗಿರಲಿ; ಇಗೋ ತೆಗೆದುಕೋ ಅದರ ಹಾಡನ್ನು ಮಾತ್ರ. ಏಕೆಂದರೆ ಅವನಲ್ಲಿ-

ಪಟ್ಟಪಾಡೆಲ್ಲವು ಹುಟ್ಟು ಹಾಡಾಗುತ
ರಸವಾಗಿ ಹೊಸವಾಗಿ ಹರಿಯುತಿವೆ
[4]

ಪಾಡೆಲ್ಲ ಸಹಜವಾಗಿಯೇ ಹಾಡಾಗುತ್ತದೆ; ಹೀಗೆ ರಸವಾಗಿ ಹೊಸವಾಗುತ್ತವೆ. ಈ ಹಾಡಿನಿಂದ ಕವಿ ಬಯಸುವುದಿಷ್ಟು:

ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ
[5]

ಕವಿಯ ಕಾವ್ಯವನ್ನೋದಿ, ಸಹೃದಯನ ಕಲ್ಲುಸಕ್ಕರೆಯಂಥ ಹೃದಯ ಕರಗಿದರೆ ಅವನಿಗೆ ತೃಪ್ತಿ. ಹೀಗೆ ಸಹೃದಯನನ್ನು  ಕರಗಿಸಬೇಕಾದರೆ ಕವಿ ಪಾಡನ್ನು ಕೇವಲ ಪಾಡನ್ನಾಗಿಯೇ ನೀಡುವುದಿಲ್ಲ; ಅದನ್ನು ಹಾಡಾಗಿ ಪರಿವರ್ತಿಸುತ್ತಾನೆ. ಹೀಗೆ ಕವಿ ಜನಕ್ಕೆ ಹಿಗ್ಗಿನ ಹಾಡನ್ನು ನೀಡುತ್ತಾನೆ.

ಆದರೆ ಪಾಡು ಹಾಡಾಗುವುದು ಹೇಗೆ? ನಮ್ಮಲ್ಲಿ ಪಾಡು ಪಾಡಾಗಿಯೇ ಉಳಿದರೆ, ಅದು ಕವಿಯಲ್ಲಿ ಹೇಗೆ ಹಾಡಾಗಿ ಮೂಡಿಬರುತ್ತದೆ? ಈ ಪ್ರಶ್ನೆಗೆ ಕವಿ ಕವಿತೆಯಲ್ಲೇ ಉತ್ತರ ನೀಡಿದ್ದಾರೆ. ಏಕೆಂದರೆ ಕವಿ ಸಹೃದಯನೊಂದಿಗೆ ಮಾತನಾಡುವುದು ಕಾವ್ಯದಲ್ಲೇ:

ತೇಲಾಡುವಾಗ ಮನಸು
ಮೇಲಾಡುತಾವ ಕನಸು
ತಾಕಾಡುವಾಗ ಇತ್ತ
ತೇಕಾಡುತಾವ ಚಿತ್ತ
[6]

ನಾವೆಲ್ಲ ಈ ಲೋಕಕ್ಕೆ ಅಂಟಿಕೊಂಡಿದ್ದೇವೆ. ಲೋಕದ ವಸ್ತುಗಳನ್ನು ನಮಗೆ ಅನುಕೂಲವಾದ ಫಲಾಫಲಗಳ ದೃಷ್ಟಿಯಿಂದ ನೋಡುವುದು ನಮ್ಮ ಸ್ವಭಾವ. ಹೀಗೆ ನಾವು ಈ ಲೋಕದೊಂದಿಗೆ ತಾಕಾಡುತ್ತೇವೆ. ಈ ಕಾರಣದಿಂದ ನಾವು ಈ ಲೋಕವ್ಯಾಪಾರಗಳಲ್ಲಿ ಸುಮ್ಮನೆ ತೇಕಾಡುತ್ತೇವೆ; ತಳಮಳಗೊಳ್ಳುತ್ತೇವೆ. ಆದುದರಿಂದಲೇ ನಾವು ಕವಿ ಕಾಣುವಂಥ ಚೆಲುವನ್ನು ಕಾಣಲು ಅಸಮರ್ಥರಾಗಿದ್ದೇವೆ;  ಪಾಡನ್ನು ಹಾಡನ್ನಾಗಿಸಲು ಅಸಮರ್ಥರಾಗಿದ್ದೇವೆ. ಆದರೆ ಕವಿ ಈ ಲೋಕದ ವ್ಯಾವಹಾರಿಕ ಜಂಜಡಗಳಿಂದ ತೇಲಾಡುವುದನ್ನು ಕಲಿತವನು; ಆದುದರಿಂದಲೇ ನಾವು  ಕಾಣದ ಕನಸುಗಳು ಅವನ ಮೇಲೆ ಆಡುತ್ತವೆ. ಭವದಿಂದ ಎದ್ದು ಭಾವದಲ್ಲಿ ತೇಲಾಡುವ, ವಸ್ತುವಿನ ಲೌಕಿಕ ಬಯಕೆಯ ಸೆರೆಯಿಂದ ಮೇಲೆದ್ದು ನಿಲ್ಲುವ ಈ ಕೌಶಲವೇ ಕವಿಯ ಸಾಮರ್ಥ್ಯ. ಈ ಒಂದು ಶಕ್ತಿಯಿಂದ ಅವನು ಪಾಡನ್ನು ಹಾಡನ್ನಾಗಿ ಪರಿವರ್ತಿಸಬಲ್ಲ.

ಹಾಗಾದರೆ ಕವಿ ಕಾಣುವುದು ಕೇವಲ ಕನಸುಗಳನ್ನೇ? ಎಂಬ ಪ್ರಶ್ನೆ ಏಳುತ್ತದೆ. ಆದರೆ ಇದು ಕನಸು ಎಂದರೆ ತೋರಿ ಮಾಯವಾಗುವ ನಮ್ಮಕನಸುಗಳಂತೆ ಅಲ್ಲ. ಕವಿಯ ಮನಸು ಜನದ ಮನಸು. ಅವನ ಇಂದಿನ ಮನಸು, ನಮ್ಮ ಮುಂದಿನ ನನಸು. ಕವಿ ನಮ್ಮ ಆಕ್ಷಾಂಕ್ಷೆಗಳನ್ನು ಕನಸಾಗಿ ಕಾಣುತ್ತಾನೆ; ಅದನ್ನು ನಾಳಿನ ಜನನನಸಾಗಿ ಕಟ್ಟಬೇಕು. ಅಥವಾ ಅವನ ಕನಸು ಕೇವಲ ಕಲ್ಪನಾವಿಲಾಸವಾಗಲಿ, ಸದ್ಯದ ಬಾಳಿನೊಂದಿಗೆ ಸಂಪರ್ಕವನ್ನು ಹೊಂದದೆ ಇರುವುದಾಗಲೀ ಅಲ್ಲ; ಕವಿ ಹೇಳುತ್ತಾನೆ-

ತನ್ನ ಸುತ್ತ ತಿರುಗುತ್ತಿತ್ತು ಮೂಕಭಾವ ಯಂತ್ರ
ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರ!
[7]

ಈ ಲೋಕ, ಅದರ ವ್ಯವಹಾರಗಳು ಬರಿದೇ ಯಾಂತ್ರಿಕವಾಗಿ ಕವಿಯ ಸುತ್ತ ತನ್ನ ದೈನಂದಿನ ಕರ್ಮದಲ್ಲಿ ತಿರುಗುತ್ತಿದೆ. ಅದಕ್ಕೂ ನೂರಾರು ಬಗೆಯ ಭಾವನೆಗಳಿವೆ; ಆದರೆ ಅದು ಮೂಕ.  ಈ ಮೂಕಭಾವಯಂತ್ರ ಕವಿಯ ಸುತ್ತ ತಿರುಗುತ್ತಲಿದೆ.  ಆದರೆ ಈ ಲೋಕದ ಭಾವಗಳು ಕವಿ ಹೃದಯದ ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿದು ಮಂತ್ರವಾಗುತ್ತವೆ. ಕವಿಹೃದಯ ಗರ್ಭಗುಡಿ, ಪೂಜ್ಯವಾದ, ಪವಿತ್ರವಾದ ಶಕ್ತಿಯೊಂದರ ನೆಲೆ. ಅಲ್ಲಿ ಪಡಿನುಡಿದ ಈ ಲೋಕಭಾವಗಳು ‘ಮಂತ್ರ’ವಾಗುತ್ತವೆ. ಯಾವ ಭಾಷೆ ಲೋಕದಲ್ಲಿ ಕೇವಲ ಅಭಿಪ್ರಾಯ ಪ್ರವಹಣ ತಂತ್ರವೋ ಅದು ಇಲ್ಲಿ ರಸೋದ್ದೀಪನ ಮಂತ್ರವಾಗುತ್ತದೆ ಕವಿಯ ಕಾವ್ಯದಲ್ಲಿ. ಮಂತ್ರ ಎಂದರೆ ಶಕ್ತಿ; ಮಂತ್ರ  ಎಂದರೆ ಮೋಹಕತೆ-ಕವಿಯ ಕಾವ್ಯ ಎರಡೂ ಹೌದು. ಅದು ಓದುಗನನ್ನು ಆಕರ್ಷಿಸುವುದು ಮಾತ್ರವಲ್ಲ, ಆಕ್ರಮಿಸುತ್ತದೆ. ಹೀಗೆ ಲೋಕದ ಮಾತು, ಲೋಕದ ಭಾವ, ಕವಿಯಲ್ಲಿ ಮಂತ್ರವಾಗುತ್ತದೆ; ಇಲ್ಲೇ ಕವಿಯ ತಂತ್ರವಿರುವುದು. ಕಾವ್ಯ ಎಂಬುದು-

ಸ್ಫೂರ್ತಾ, ಅಮೂರ್ತಾ, ಅವಿರ್ಭೂತಾ,
ಭವ ಮಂಥನ ತಂತ್ರಾ
s[8]

ಕವಿಯಲ್ಲಿ ಸ್ಫೂರ್ತಗೊಂಡದ್ದು; ಮೊದಮೊದಲು ಅಮೂರ್ತವಾಗಿ ಆನಂತರ ಮೂರ್ತಗೊಂಡು ಕವಿ ಮುಖೇನ ಆವಿರ್ಭವಿಸತಕ್ಕದ್ದು. ಅದು ‘ಭವಮಂಥನ ತಂತ್ರ’ ಈ ಲೋಕದ ಭಾವಗಳು ಪಡಿನುಡಿದುದು ಮಾತ್ರವಲ್ಲ; ಕವಿಯ ಪ್ರತಿಭೆಯ ಕಡೆ ಗೋಲು ಈ ಭವವನ್ನು ಕಡೆದದ್ದರಿಂದ ಹಾಲನ್ನು ಕಾಯಿಸಿ ಹೆಪ್ಪು ಹಾಕಿ ಕಡೆಗೋಲಿನಿಂದ ಕಡೆದು ಬೆಣ್ಣೆಯನ್ನು ತೆಗೆಯುವಂತೆ, ಕವಿ ಈ ಭವವನ್ನು ಕಡೆದು ಆ ಸಾರವನ್ನು ತೆಗೆಯುವ ತಂತ್ರ ಈ ಕಾವ್ಯ. ಹೀಗೆ ಕಂಡದ್ದನ್ನು ಕಂಡರಿಸುವ ತಂತ್ರ ಕವಿಗೆ ಸಿದ್ಧಿಸಿದಾಗ ಅದನ್ನು ‘ರೂಪಶಕ್ತಿ’ ಎನ್ನುತ್ತೇವೆ. ಈ ರೂಪಕ ಶಕ್ತಿ ಉದಯವಾದಾಗ-

ಕೊಟ್ಟದ್ದೆ ರೂಪವು ಇಟ್ಟದೆ ನಾಮವು
ಕಟ್ಟಿದ್ದೆ ಹುರುಳೆಂಬ ಮುದದೊಳಿರೆ
ಬ್ರಹ್ಮಪಟ್ಟವನೇರಿ ರೂಪಶಕ್ತಿಯು
ಸೃಷ್ಟಿಯನಳೆಯಿತು ದೃಷ್ಟಿಯೊಳೆ
[9]

ಕವಿಯ ದೃಷ್ಟಿ ಬ್ರಹ್ಮಪಟ್ಟವನ್ನೇರಿ, ದೃಷ್ಟಿಯಿಂದ ಸೃಷ್ಟಿಯನ್ನು ಅಳೆಯುತ್ತದೆ. ಆಗ ಅದು ಕೊಟ್ಟದ್ದೆ ರೂಪ,ಇಟ್ಟದ್ದೆ ನಾಮ, ಕಟ್ಟಿದ್ದೆ ಹುರುಳು. ಈ ರೂಪಕ ಶಕ್ತಿಯ ಸೆಳವಿಗೆ ಏನು ಸಿಕ್ಕರೂ ಸಾಕು, ಅದು ಕವಿಯಲ್ಲಿ ಹಾಡಾಗುತ್ತದೆ-

ಕವಿಜೀವನದ ಬ್ಯಾಸರ ಹರಿಸಾಕ
ಹಾಡ ನುಡಿಸಾಕ
ಹೆಚ್ಚಿಗೇನು ಬೇಕ?
ಒಂದ ಹೂತ ಹುಣಸೀಮರ ಸಾಕ
[10]

ಒಂದು ಹೂಬಿಟ್ಟ ಹುಣಸೆಯ ಮರವೇ ಸಾಕು; ಕವಿ ಜೀವದ ಬೇಸರವನ್ನು ಹರಿಸಿ ಹಾಡನ್ನು ಹೊಮ್ಮಿಸುತ್ತದೆ. ಹೀಗೆ ಕವಿಯ ರೂಪಶಕ್ತಿ ಹಾಡನ್ನು ಕಟ್ಟುವಲ್ಲಿ ಅವನೊಡನೆ ಸಮಸ್ತ ಸೃಷ್ಟಿ ಮತ್ತು ಅದರ ಅನುಭವಗಳು ಸಹಕರಿಸುತ್ತವೆ.

ಋತುಗಳ ಏರಿಳಿತ ಕಾಳರಿಂಗಣಗುಣಿತ
ಬಿಡಿಬಿಡಿಸಿ ಬರೆದಂತೆ ಚಿತ್ರದೊಳು!
ಬಡವರ ಅಲೆದಾಟ, ಹೊಟ್ಟೆಯ ಬೆಂಬತ್ತಿ
ಗುಳೆಯೆತ್ತಿ, ಹೊರಟವರ ಹೋರಾಟವು
ದುಡಿವರ, ತಿರುಕರ, ಕೂಲಿ ಕುಂಬಳಿಯವರ
ಜೀವನ ಮೂಡಿರೆ ಹಾದಿಯೊಳು
ಮಳೆಯಾಕೆ, ಚಳಿಯಾಕೆ ಭೂಮಿಯ ಬೆಳೆಯಾಕೆ
ಬಿಸಿಲಾಕೆ ನನ್ನಾಕೆ ನೆರೆಯಾದರು
ಇರುಳವಳು ಹಗಲವಳು ಬೆಳಕು-ನೆಳಲಿನವಳು
ಬೆಳುದಿಂಗಳಿವಳು ನಮ್ಮವಳಾದಳು
ಗಿಡಮರ ತೂಗಾಟ ಹಸು ಹಕ್ಕಿ ಕೂಗಾಟ
ಚಿನ್ನಾಟ ನನ್ನಾಟ ಒಂದಾದವು
ಗಾಳಿಯ ಹಾರಾಟ, ಏರಾಟ ಚೀರಾಟ
ಭೋರಾಟ ಕುಣಿದಾಟ ತುಳಿದಾಟವು
ಎಳೆದಾಟ ತೂರಾಟ ಎಲೆಗಳ ಕಳೆವಾಟ
ಸುಟ್ಟುರೆಯ ಗಾಳಿಯ ಹುಡಿಯಾಟವು
ಛಂದೋಗತಿಯ ಚೆಂದ, ತಾಳಲಯಾನಂದ
ಸ್ವಚ್ಛಂದ ಬಂಧವ ಕಲಿಸಿದವು
ನಾಡಬಳಕೆಯ ನುಡಿಗೆ ಸೋತಿದ್ದ ಮನವನ್ನು
ಹಾಡಿನ ಮೋಡಿಗೆ ಒಲಿಸಿದವು.
[11]

ಕವಿ ಜೀವದ ಮೇಲೆ ಪರಿಣಾಮ ಮಾಡಿದ ಸುತ್ತಲಿನ ವಸ್ತುಗಳ ಪಟ್ಟಿಗೆ ಮೊದಲೆಲ್ಲಿ ಕಡೆ ಎಲ್ಲಿ? ಮಾನವ ಪ್ರಪಂಚ-ಪ್ರಕೃತಿ ಪ್ರಪಂಚ ಎರಡರ ಸಮ್ಮಿಳನ ಕವಿಯ ಅಂತರಂಗದಲ್ಲಿ ಒಂದಾಗಿ ಕವಿಯ ಛಂದಸ್ಸನ್ನು ರೂಪಿಸುತ್ತವೆ. ಪ್ರಕೃತಿಯಲ್ಲಿ ಜೀವನದಲ್ಲಿ ಕವಿ ಕಂಡ, ಕೇಳಿದ, ತಾಳ-ಲಯ, ಇವು ಕವಿಯಲ್ಲಿ ಹಾಡನ್ನು ಕಟ್ಟುತ್ತವೆ. ಪ್ರಕೃತಿಯ ಭಾಷೆ, ಜನಭಾಷೆ-ಎರಡೂ ಸೇರಿ ಕವಿಯಲ್ಲಿ ಹಾಡಿನ ಮೋಡಿಯನ್ನು ಸೃಜಿಸುತ್ತವೆ. ಈ ಮೋಡಿಗೆ ಸಿಕ್ಕ ಚಿಂತೆಯು ಸಂಗೀತವಾಗುತ್ತದೆ-

ನಮ್ಮಿಂದ ಹರಿದು ಚಿಂತಿ
ಜುಮ್ಮೆನ್ನು ತಾವ ತಂತಿ!
[12]

ಹೀಗೆ ಹಾಡಾಗುವಾಗ ಅವು ಸಹಜವಾದ ಪ್ರಾಸವನ್ನು ಪಡೆದು ‘ಮಾತು ಮಾತು ಮಥಿಸಿ ಬಂದ ನಾದದ ನವನೀತ’ವಾಗಿ ಮೂರ್ತಗೊಂಡು ನಿಲ್ಲುತ್ತವೆ. ಅದು ಪರಿಪೂರ್ಣ ಶಿಲ್ಪವಾಗಿ ನಿಂತಾಗ ಕವಿ ಅದನ್ನು ಗುರುತಿಸುತ್ತಾನೆ.

ಕೂಡಿರೆ ಮೈ ಕೈ ತಾಲಕೆ ತಾಲ
ಅಲ್ಲಿದೆ ನೃತ್ಯದ ನಿತ್ಯದ ಸೊತ್ತು
ಹೊಂದಿರೆ ಒಂದನೆ ಪ್ರಾಸಕೆ ಪ್ರಾಸ
ಅದುವೇ ಕಾವ್ಯವಿಲಾಸದ ಗೊತ್ತು.
[13]

ಹೇಗೆ ನಾಟ್ಯದಲ್ಲಿ ಮೈಕೈಗಳ ವಿನ್ಯಾಸಕ್ಕೆ ತಾಳಕ್ಕೆ ತಾಳ ಕೂಡಿದರೆ ಸರಿಯಾದ ನರ್ತನವಾಗುವುದೋ ಹಾಗೆ, ಕಾವ್ಯದಲ್ಲೂ ಪ್ರಾಸಕ್ಕೆ ಪ್ರಾಸ ಹೊಂದಿದರೆ ಕಾವ್ಯವಿಲಾಸ ಒಂದು ಗೊತ್ತನ್ನು ಪಡೆಯುತ್ತದೆ. ಕೃತಿ ಸುಂದರವಾಗಿ ರೂಹುವಡೆದು ನಿಂತಾಗ ಅದು ಕವಿಗೇ ಒಂದು ಪವಾಡದಂತೆ ತೋರುತ್ತದೆ; ತನ್ನ ಕಾವ್ಯಕ್ಕೆ ತಾನೇ ಬೆರಗಾಗುತ್ತಾನೆ ಕವಿ-

ಅರೆಮರವು ಮಾಡುವೀ ಬಂಧ
ಯಾವುದೀ ಛಂದ
ಯಾವುದೀ ಧಾಟಿ
ಸವಿರಾಗ ಬೆರಸಿದಾ ಉಸಿರು
ಇದಕೆ ಯಾ ಹೆಸರು
ಇದಕೆ ಯಾ ಹೆಸರು
ಅಂಬಿಕಾತನಯನ ಹಾಡ
ಬೆಳದಿಂಗಳ ನೋಡ!
[14]

ಕವಿಯನ್ನೇ ಕೃತಿ ಅಚ್ಚರಿಗೊಳಿಸುತ್ತದೆ. ತನ್ನನ್ನೇ ಅರೆಮರೆವು ಮಾಡುವ ಈ ಬಂಧ ಯಾವುದು? ತನಗರಿಯದೆ ಮೂಡಿದ ಈ ಛಂದ ಯಾವುದು? ಇದರ ಧಾಟಿ ಏನು? ಇದಕ್ಕೆ ಏನು ಹೆಸರು? ಎನ್ನುತ್ತಾರೆ. ಕಡೆಗೆ ಅಂದುಕೊಳ್ಳುತ್ತಾರೆ ಇದು ‘ಸವಿರಾಗ ಬೆರಸಿದಾ ಉಸಿರು.’ ಕವಿಯ ಉಸಿರು, ಎಂದರೆ ಅಂತಸ್ಸತ್ವ ಸವಿರಾಗ ಬೆರೆತು ಕವಿತೆಯಾಯಿತು. ತನ್ನದೇ ಆದ ವಿಶಿಷ್ಟ ಪದರಚನೆಯಲ್ಲಿ ಕವಿಯ ಉಸಿರಿನಿಂದ ಹೊಮ್ಮಿದ ಈ ಕವಿತೆಯಲ್ಲಿ ಕವಿ ತನ್ನತನವನ್ನು  ಕಂಡುಕೊಂಡು ಇದು ಅಂಬಿಕಾತನಯನ ಹಾಡು ಎಂದು ಹೆಸರು ಕೊಡುತ್ತಾರೆ. ಇಲ್ಲಿಗೆ ಕವನ ಎಂದರೇನು ಎಂಬುದನ್ನು ಒಂದು ಮಾತಿನಲ್ಲಿ ಹೇಳುವುದಾದರೆ, ಅದು ಹೀಗೆ:

ಗಾಳಿ ಕಿರಿ ಸುಳಿ ಹುಟ್ಟಿತು
ತಾನೆ ತುಸ ಕಣ್ಬಿಟ್ಟಿತು
ಮೆಲ್ಲನೆದೆಯನು ತಟ್ಟಿತು
ಅದುವೆ ಆಗಸ ಮುಟ್ಟಿತು
[15]

ಹೀಗೆ ಅಂತರನುಭವದ ಚೈತನ್ಯಸ್ಪಂದನದಿಂದ  ಗಾಳಿಯಂತೆ ಸುಸೂಕ್ಷ್ಮವಾಗಿ ಹೊರಟು ಬರುವಾಗ-

ಕಣ್ಣು ಬಣ್ಣವನಿಟ್ಟಿತು
ಉಸಿರುನಡಿಗೆಯ ಕೊಟ್ಟಿತು
ನೆವಕೆ ನುಡಿಯನ್ನುಟ್ಟಿತು
ಕವನ ವೇಷವ ತೊಟ್ಟಿತು
……………………..
ಭೂತವೂ ಜಡಜಾತವೂ
ಇದರೊಳೋತಪ್ರೋತವೂ!
[16]

ಕವಿತೆ ಮೂಡಿತು-ಕವಿಯ ಅನುಭವದ ಪಾರಿಪಾಕದಿಂದ. ಅದೂ ಒಂದು ಸೃಷ್ಟಿ! “ಕಲಾಸೃಷ್ಟಿಯೂ ಹಳೆಯದರ ಅನುಭವದ ಪ್ರಳಯಾಂಧಕಾರದೊಳಗಿಂದಲೇ ನವೀನ ಸೃಷ್ಟಿಯ ತರಂಗಗಳೇಳುವುವು. ಹೊಸ ಮೂರ್ತಿಯ ದರ್ಶನವಾಗುವುದು” ಅಂತಹ ಸೃಷ್ಟಿ ಈ ಕಾವ್ಯ. ಆದರೆ ಈ ಸೃಷ್ಟಿ ಬ್ರಹ್ಮ ಸೃಷ್ಟಿಗೆ ಒಂದು ಮಜಲು ಕಡಮೆ-

“ಓಂಕಾರದ ಶಂಖನಾದಕಿಂತ ಕಿಂಚಿದೂನ”

ಈ ಕಾರಣದಿಂದಲೇ ಕಾವ್ಯ ನೀಡುವ ಆನಂದವನ್ನು ನಮ್ಮ ಅಲಂಕಾರಿಕರು ‘ಬ್ರಹ್ಮಾನಂದನ ಸಹೋದರ’ ಎಂದರು. ಇಂತಹ ಕಾವ್ಯ ಹಿಗ್ಗಿನಿಂದ ಮೂಡಿ ಹಿಗ್ಗನ್ನು ಬೀರಿ ಓದಿದವರನ್ನು ಹಿಗ್ಗಿಸುತ್ತದೆ. ಬೇಂದ್ರೆಯವರು ಕಾವ್ಯಕ್ಕೆ “ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಾಗೀತಾ” ಎಂದಿದ್ದಾರೆ. ಎಂದರೆ ಕವಿತೆಗೆ ಇಂಥದೇ ಎಂಬ ಒಂದು ನಿರ್ಡಿಷ್ಟವಾದ ನಿಘಂಟಿನ ಅರ್ಥವಿಲ್ಲ; ಅದು ಅವನವನ ಸಂಸ್ಕಾರಕ್ಕೆ ತಕ್ಕಹಾಗೆ ಅರ್ಥವಾಗುತ್ತಾ ಹೋಗುತ್ತದೆ. ಅಂತೆಯೇ ಅದಕ್ಕೆ ಯಾವ ಸ್ವಾರ್ಥವೂ ಇಲ್ಲ; ಎಂದರೆ ಯಾವ ಲೌಕಿಕ ಬಯಕೆಯ ಪ್ರಚಾರದ ಸಾಧನವೂ ಅದಲ್ಲ; ಪರಾರ್ಥವೇ, ಎಂದರೆ ಹಿಗ್ಗನ್ನು ಬೀರಿ ಹಿಗ್ಗಿಸುವುದೇ ಅದರ ಗುರಿ.

ಇಂತಹ ಕವನವನ್ನೋದಿ ನಾವೇ ಇಷ್ಟೊಂದು ಆನಂದಪಡುವುದಾದರೆ. ಕವಿಗೆ ಈ ಕಾವ್ಯದ ಅನುಭವ ಹೇಗಿದ್ದಿರಬೇಕು? ಕವಿ ತನಗಾದ ಅನುಭವವನ್ನೆಲ್ಲಾ ಕಾವ್ಯದಲ್ಲಿ ಹಿಡಿದಿಡಲು ಸಾಧ್ಯವಾಗಿದೆಯೆ? ಕವಿಗೆ ನಿಜವಾಗಿಯೂ ಇದರಿಂದ ತೃಪ್ತಿಯಾಗಿದೆಯೆ-ಎಂಬ ಪ್ರಶ್ನೆ ಏಳುತ್ತದೆ ಒಂದೊಂದು ಸಲ. ಕವಿ ಹೇಳುತ್ತಾನೆ-

ಹಾಸಾದ ಮಿಂಚಿನಂದ
ಬೀಸಿದ್ದ ಸೆರಗಿನಿಂದ
ಸೆಳೆದಂತೆ ಎರಡು ನೂಲು
ಉಳಿದಾವ ನಾಕು ಸಾಲು!

ಅದ್ಭುತವಾದ ಭಾವನೆ ಇದು! ಮಗುವನ್ನು ತನ್ನ ಸೀರೆಯ ಸೆರಗಿನಿಂದ ಹೊದಿಸಿ ತಾಯಿ ಪಕ್ಕದಲ್ಲಿ ಮಲಗುತ್ತಾಳೆ. ಮಗು ತಾಯಿಯ ಸೆರಗನ್ನು ತನ್ನ ಪುಟ್ಟ ಕೈಗಳಲ್ಲಿ ಹಿಡಿದುಕೊಳ್ಳುತ್ತದೆ. ಮಗುವಿಗೆ ನಿದ್ದೆ ಹತ್ತಿದಾಗ ತಾಯಿ ಯಾವಾಗಲೋ ಎದ್ದು ಹೋಗುತ್ತಾಳೆ. ಆಗ ಅದು ಹಿಡಿದ ಸೀರೆಯ ಸೆರಗಿನಿಂದ ನಾಲ್ಕು ನೂಲು ಮಗುವಿನ ಕೈಯಲ್ಲಿ ಉಳಿದುಕೊಳ್ಳುತ್ತದೆ. ಹಾಗೆಯೇ, ದಿವ್ಯ ಪ್ರತಿಭೆ ಕವಿಯ ಮೇಲೆ ತನ್ನ ಮಿಂಚಿನ ಸೆರಗನ್ನು ಬೀಸಿದಾಗ ಕವಿಯ ಕೈಯಲ್ಲಿ ಅದರದೆರಡು ನೂಲನ್ನು ಸೆಳೆದಂತೆ ನಾಲ್ಕು ಸಾಲು ಕವಿತೆ ಉಳಿದುಕೊಳ್ಳುತ್ತದೆ.ಈ ನಾಲ್ಕು ಸಾಲಿನಲ್ಲೇ ನಮಗಿಷ್ಟು ಆನಂದ; ಆ ಸೆರಗಿಗೆ ಸಂದಾಗ ಆ ಕವಿಯ ಆನಂದ ಎಷ್ಟು; ಎಲ್ಲೋ ನಾಲ್ಕು ಸಾಲು ಉಳಿದಾಗ, ಸಂತೋಷದ ಜೊತೆಗೆ ಕೊರಗೂ ಎಷ್ಟು! ಈ ಕೊರಗು, ಈ ಅತೃಪ್ತಿ ಕವಿಯ ಕಾವ್ಯಕ್ಕೆ ನಿರಂತರಪ್ರೇರಣೆ.

ಈ ನಿರಂತರ ಪ್ರೇರಣೆಯಿಂದ ಬಂದ ಕವಿತೆ ಕೇವಲ ಕವಿಯ ಸ್ವಸಂತೋಷಕ್ಕಲ್ಲ; ಪರಾರ್ಥಕ್ಕೆ, ಜನಕ್ಕೆ. ಬೇಂದ್ರೆಯವರ ಕಣ್ಣಿಗೆ ಸದಾ ಜನತೆಯ ಚಿತ್ರ ಕಣ್ಣಿಗೆ ಕಟ್ಟಿದೆ. ಅವರೇ ಹೇಳಿದ್ದಾರೆ-

ಏಕಾಂತದ ಜಿನುಗು ಲೋಕಾಂತಕೆಳೆಯಿತು
ಜನವು ಜನಾರ್ದನನೆಂದರಿತೆ.

ಅವರ ಕಾವ್ಯದ ಹೊನಲಿನ ಸಂಗಮಸ್ಥಾನ ಜನಸಮುದ್ರ. ತಾನು ಪಡೆದ ಹಾಡು ಜನವನ್ನು ಹಿಗ್ಗಿಸಲಿ; ಅವರ ಪಾಡನ್ನು ತಗ್ಗಿಸಲಿ-ಎಂಬುದೇ ಅವರ ಹಂಬಲ. ಲೋಕೋದ್ಧಾರಕವಾದ ಗಂಗಾಶಕ್ತಿಯನ್ನು ಆಹ್ವಾನಿಸುತ್ತಾ-

ನಾಡಿನಾಡಿಯನು ಸುತ್ತ ಬಾ
ನಮ್ಮ ನಾಡನ್ನೆ ಸುತ್ತ ಬಾ
ಸತ್ತ ಜನವನ್ನು ಎತ್ತ ಬಾ

ಎನ್ನುತ್ತಾರೆ-

ತಾಯಿ ಪಾದದಾನಂದ ಗಂಧ ಉಂಡು
ಬೆಂದವರ ಜೀವ ಬೆರಸೋಣ ಬಾ

ಎಂದು ಕರೆಯುತ್ತಾರೆ. ಹೀಗೆ ಇವರು ಜೀವನದ ಪ್ರೀತಿಯನ್ನು, ದೈವೀಶ್ರದ್ಧೆಯನ್ನು ಸ್ಫೂರ್ತಿಯನ್ನಾಗಿ ಉಳ್ಳ ಕವಿ. ತಮ್ಮ ಕವಿತೆ ಬಂದುದು ಅಲ್ಲಿಂದ, ಹೋಗುವುದೂ ಅಲ್ಲಿಗೇ. ಅವರೇ ಒಂದೆಡೆ ತಮ್ಮ ನಿಲುವನ್ನು ಹೇಳಿಕೊಂಡಿದ್ದಾರೆ-“ಇವು ನನ್ನ ಕವನಗಳೆಂದು ಹೇಳಿದೆ. ಅದೊಂದು ರೂಢಿಯ ಮಾತು. ಇವು ನನ್ನವಲ್ಲ. ಕನ್ನಡದ ಕವನಗಳು. ಕನ್ನಡದ ಆಶರೀರವಾಣಿಯು ಸಾವಿರ ಬಾಯಿಗಳಲ್ಲಿ ತನ್ನ ಕಣಸನ್ನು ಕನ್ನಡಿಸುತ್ತಿದೆ. ಆ ಸಾವಿರ ಬಾಯಿಗಳಲ್ಲಿ ನನ್ನದೊಂದು”

ನವೋದಯ-೧೯೭೬

—-


[1] ಗರಿ-ಸಂದರ್ಭಸೂಚನೆ, ಪು. ೪.

[2] ಸಖೀಗೀತ, ಪು. ೨.

[3] ನಾದಲೀಲೆ.

[4] ಸಖೀಗೀತ, ಪು. ೬೫.

[5] ನಾದಲೀಲೆ.

[6] ಗಂಗಾವತರಣ, ಪು. ೧೭.

[7] ನಾದಲೀಲೆ, ಪು. ೮೪.

[8] ಸೂರ‍್ಯಪಾನ, ಪು. ೬.

[9] ಸಖೀಗೀತ, ಪು. ೮೩.

[10] ಸಖೀಗೀತ, ಪು.೩೮.

[11] ಸಖೀಗೀತ, ಪು. ೮೩.

[12] ಗಂಗಾವತರಣ, ಪು. ೧೮.

[13] ಗಂಗಾವತರಣ, ಪು. ೬೩.

[14] ನಾದಲೀಲೆ, ಪು. ೭೬.

[15] ನಾದಲೀಲೆ, ಪು. ೮೧.

[16] ಮೂರ್ತಿ ಮತ್ತು ಕಾಮಕಸ್ತೂರಿ-ಮುನ್ನುಡಿಯಲ್ಲಿ.

(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)