ರಾಗೀ ಬಣ್ಣದ ಕುದರಿ ರಾಜೇಕ ದೊಡ್ಡದು
ರಾಜಾರೊಳು ರಾಜಾ ಮಳೆರಾಜಾ | ಬರುವಾಗ
ರಾಜೇವ ಕೈಯs ಮುಗದಾವs ||

ಮಳಿಯಪ್ಪ ಮಳಿರಾಜಾ ಕರಿಯುತಾರೋ ನಿನ್ನ
ಮೊದಲು ಕೂರಿಗಿs ರೈತಾರು | ಹೋದಾಗ
ಹೊಲವೆದ್ದು ಕೈಯs ಮುಗಿದಾವs ||

ಮಳಿಯಪ್ಪ ಮಳಿರಾಜಾ ಬೆಳೆ ಒಣಗಿ ಹೋದಾವೊss
ಬಡವರು ಬಾಯs ಬಿಡತಾರs | ಅಡವೆನ್ನ
ಗಿಡಬಳ್ಳಿ ಕೊರಗಿ ಕಮರ‍್ಯಾವs ||

ಬಾಬಾರೋ ಮಳಿರಾಜಾ ಹೊಲದ ಬೆಳಿ ಕರಿಬಾವೋ
ತೆನಿ ಎದ್ದು ಕೈಯ ಮುಗಿದಾವೋ | ಬೆಳವೊಲದ
ಜನ ಮುಗಿಲ ಮಾರೀ ನೋಡ್ಯಾರs ||

ಆ ರಾಜ ಈ ರಾಜ ಘನರಾಜ ಮಳೆರಾಜ
ತೇಜೇರಿ ಸುರಿದ ಮಳೆರಾಜ | ಬೆಳದಾನು
ಲೋಕದೊಳು ರಾಜ ತೆನಿರಾಜ ||

ಆ ರಾಜ ಈ ರಾಜ ಭೋರಾಜ ಮಾರಾಜ
ರಾಜರೊಳು ರಾಜ ಮಳೆರಾಜ | ಘನರಾಜ
ಬೀಜ ಸಕುರಿಗೆ ತೆನಿರಾಜ ||

ಗಾಳೆಪ್ಪ ಧೂಳೆಪ್ಪ ಸಿಡ್ಲಪ್ಪ ಮಿಂಚಪ್ಪ
ಇವರ್ನಾಕ ಮಂದಿ ಅಣತಮ್ರು | ಇದ್ದರ
ಸುತ್ತಣ ಹಳ್ಗೆದೊಡ್ಡವರೋ ||