ಹಿಂದುಸ್ತಾನಿ ಸಂಗೀತದ ವಿಷಯ ಬಹಳ ವಿಶಾಲವಾದದ್ದು ಆಧುನಿಕ ಸವಾಲುಗಳು ಅದಕ್ಕನುಗುಣವಾಗಿ ಕಾಲಕಾಲಕ್ಕೆ ಜೊತೆಗೂಡುತ್ತಿರುತ್ತವೆ. ಇಂದಿನ ಸವಾಲುಗಳು ಅನೇಕವಿದ್ದರೂ ಮಹತ್ವದ ಕೆಲವನ್ನು ಮಾತ್ರ ಇಲ್ಲಿ ಪ್ರಸ್ತುತಪಡಿಸಲು ಬಯಸುತ್ತೇನೆ. ಈಗ ಮಹತ್ವಪೂರ್ಣ ವಿಷಯದ ಮೇಲೆ ಪ್ರಸ್ತುತ ವಿವೇಚನಾ ಕ್ರಮವನ್ನು ಗಮನಿಸುವುದು ಅವಶ್ಯವಾಗಿದೆ.

) ಸ್ವರಲಿಪಿ : ಸ್ವರಲಿಪಿಯಲ್ಲಿ ಪ್ರಮುಖವಾಗಿ ಎರಡು ಪ್ರಣಾಲಿಗಳಿವೆ. ೧) ಭಾತಖಂಡೆ ಪ್ರಣಾಲಿ, ೨) ಪಲೂಸ್ಕರ ಪ್ರಣಾಲಿ. ಇವಲ್ಲದೆ ಅನೇಕ ವಿದ್ವಾಂಸರು ತಮ್ಮ ತಮ್ಮ ಸ್ವರ ಲಿಪಿ ಪ್ರಣಾಲಿಗಳನ್ನು ಮಾಡಿಕೊಂಡಿದ್ದರೂ ಅವು ಅವರವರ ಮರ್ಯಾದಿತ ಕ್ಷೇತ್ರದಲ್ಲಿ ಮಾತ್ರ ಪ್ರಯೋಗಿಸಲಾಗುವವು. ಇಂದು ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ವೈಜ್ಞಾನಿಕ ಪ್ರಗತಿಯಾದಾಗ್ಯೂ ಸರ್ವಸಮ್ಮತಿ ಸುಧಾರಿತ ಸ್ವರಲಿಪಿಯ ಆವಿಷ್ಕಾರವಾಗಿಲ್ಲ. ವಿದ್ಯಾರ್ಥಿ ಎರಡೂ ಪ್ರಣಾಲಿಗಳಲ್ಲಿ ಪರಿಣಿತರಾದಾಗ ಮಾತ್ರ ಎಲ್ಲ ಪುಸ್ತಕಗಳಲ್ಲಿಯ ಸ್ವರಲಿಪಿ ತಿಳಿಯಲು ಸಾಧ್ಯವಾಗುವುದು ಇದು ಸರಿಯೊ? ಅದು ಸರಿಯೊ? ಎಂಬ ಪ್ರಶ್ನೆ ಉಂಟಾಗುವುದು ಸಹಜ. ಸಂಗೀತವು ಆಧುನಿಕ ಯುಗದ ಜೊತೆಗೆ ಹೆಜ್ಜೆ ಹಾಕಲು ಸ್ವರಲಿಪಿಯು ಏಕರೂಪವಿರುವುದು ಅವಶ್ಯವಾಗಿದೆ. ಹಾಗೆ ನೋಡಿದರೆ ಸಂಗೀತದಲ್ಲಿ ಸ್ವರ-ಲಯ-ತಾಲಯುಕ್ತ ಯಾವುದೇ ಸ್ವರಲಿಪಿ ಎಷ್ಟರಮಟ್ಟಿಗೆ ಪರಿಪೂರ್ಣವಾಗಬಲ್ಲದು? ಎಂಬ ಪ್ರಶ್ನೆ ಇದೆ. ಯಾವುದೇ ಪರಿಸ್ಥಿತಿಯಲ್ಲಿ ಯಾವ ಸ್ವರಲಿಪಿಯೂ ಸಂಗೀತವನ್ನು ಪರಿಪೂರ್ಣವಾಗಿ ಅಂಕಿತಗೊಳಿಸುವುದು ಅಸಾಧ್ಯ. ಆದಾಗ್ಯೂ ವೈಜ್ಞಾನಿಕ ರೀತಿಯಲ್ಲಿ ಅವುಗಳಲ್ಲಿಯ ನ್ಯೂನತೆಗಳನ್ನು ಕಳೆದು ಸ್ವರಲಿಪಿಯ ಮಾನಕೀಕರೂ ಮಾಡಬೇಕಿದೆ. ಪಾಶ್ಚಾತ್ಯರ ಸ್ಟಾಫ್ ನೋಟೇಶನ್ ಜಾಗತಿಕ ಸ್ತರದಲ್ಲಿ ಒಮದೇ ರಿತಿಯಲ್ಲಿದ್ದಂತೆ ಸಂಗೀತದ ವಿಕಾಸವನ್ನು ಗತಿಮಾನ ಮಾಡಲು ಈ ದೆಶೆಯಲ್ಲಿ ಪ್ರಯತ್ನಿಸುವುದು ಅವಶ್ಯವಾಗಿದೆ.

) ರಾಗಸಮಯ : ರಾಗ-ಸಮಯದ ಸಂಭಂಧದ ಬಗ್ಗೆ ಸಂಕಲ್ಪನೆ ಹೇಗಿರಬೇಕೆಂಬುದೊಂದು ಸವಾಲು. ವಿಶಿಷ್ಟ ರಾಗಗಳ ಗಾಯನ ವಿಶಿಷ್ಟ ಸಮಯ ಹಾಗೂ ವಾತಾವರಣದಲ್ಲಿ ಅಧಿಕ ಪ್ರಭಾವಪೂರ್ಣವೆನಿಸುವವು. ಇದರ ಪರಿಣಾಮವೇ ಇಂದು ಪ್ರಚಲಿತ ರಾಗ-ಸಮಯ-ಚಕ್ರದ ಸ್ಥಾಪನೆಯಾಗಿದೆ. ರಾಗ ಸಮಯದ ವಾದ ಒಂದು ಜೊಳ್ಳುವಾದ ಎಂದು ಹೇಳುವವರೂ ಸಹ ಸಂಜೆ ಏಳು ಗಂಟೆ ಬಿಟ್ಟು ಬೆಳಗಿನ ಏಳು ಗಂಟೆಗೆ ಮಾರವಾ ರಾಗವನ್ನು ಪ್ರಸ್ತುತಪಡಿಸಲು ಒಪ್ಪಲಾರರು. ಆದಾಗ್ಯೂ ಇದು ಪರೀಕ್ಷೆಯುಗ. ಇಂದು ಪರೀಕ್ಷೆಯ ಪಠ್ಯಕ್ರಮದಲ್ಲಿದ್ದ ರಾಗಗಳು ಯಾವ ಸಮಯವಾದಾಗ್ಯೂ ಪರೀಕ್ಷೆಯ ವೇಳೆಯಲ್ಲಿ ಅವನ್ನು ಹಾಡಲೇಬೇಕು. ಹಾಗೆ ನೋಡಿದರೆ ಚಿತ್ರಪಟ ಸಂಗೀತ, ಸುಗಮ ಸಂಗೀತದಲ್ಲಿಯ ಯಾವುದೇ ರಾಗಗಳ ಹಾಡನ್ನು ಯಾವಾಗಬೇಕಾದರೂ ಪ್ರಸ್ತುತಪಡಿಸಲಾಗುವುದು. ಆದರೆ ಅಲ್ಲಿ ಪ್ರಸ್ತುತ ಪಡಿಸುವವರ ಪ್ರತಿಭೆ ಹಾಗೂ ಸಂಗೀತ ಸಂಯೋಜನೆಗೆ ಅನುಗುಣವಾಗಿ ಅದು ಸುಂದರವಾಗಿ ಕೇಳಿಸುವುದನ್ನು ಅಲ್ಲಗಳೆಯಲಾಗದು. ಅಲ್ಲದೆ ಅಲ್ಲಿ ಸಾಹಿತ್ಯಕ್ಕೂ ಮಹತ್ವವಿರುತ್ತದೆ. ಇಂದು ರಾಗ ಸಮಯವಾದದ ಅಧ್ಯಯನವನ್ನು ಮನೋವಿಜ್ಞಾನ, ಪರಿಸರ ವಿಜ್ಞಾನ, ಭೂಗೋಳ ಇತ್ಯಾದಿ ಸಂಬಂಧಿತ ವಿಷಯಗಳ ಆಧಾರ, ಬದಲಾಗುವ ಪ್ರಹರ, ಸ್ವರ ಸಂವಾದ ಋತುಗಳೊಂದಿಗೆ ವಾತಾವರಣದಲ್ಲಿ ಸ್ವರಗಳಿಂದಾಗುವ ವ್ಯಕ್ತಿ ಮನಸಿನ ಮೇಲಿನ ಪರಿಣಾಮ ಇವುಗಳ ಪ್ರಯೋಗದೊಂದಿಗೆ ಅಧ್ಯಯನ ಮಾಡಿ ಪ್ರಯೋಗಿಸಿ ರಾಗ-ಸಮಯ ನಿರ್ಧರಿಸುವ ಕಾರ್ಯ ಈಗ ಆಗಬೇಕಿದೆ.

) ಗುರುಶಿಷ್ಯ ಪರಂಪರೆ : ಸಂಗೀತ ಕ್ಷೇತ್ರದಲ್ಲಿ ಹಿಂದಿನ ಹಾಗೂ ಇಂದಿನ ಗುರು-ಶಿಷ್ಯ ಪರಂಪರೆಯ ವಿಷಯ ಮೇಲಿಂದ ಮೇಲೆ ಚರ್ಚೆಗೆ ಕಾರಣವಾಗಿದೆ. ಸಂಗೀತದಲ್ಲಿ ಗುರುಶಿಷ್ಯ ಪರಂಪರೆಯಿಂದಲೇ ಕಲಿಸುವುದು ಉತ್ತಮವೆಂಬ ವಾಡಿಕೆಯಿದೆ. ಹಿಂದೆ ಸಂಗೀತ ಕಲಿಯುವುದು ಪೂರ್ವಯೋಜಿತ, ಉದ್ದೇಶವಿರದೆ ತೀವ್ರ ಆಸಕ್ತಿ ಇರುವವರು ಮಾತ್ರ ತಮ್ಮನ್ನೇ ತಾವು ಆ ಕಲೆಗೆ ಅರ್ಪಿಸಿಕೊಂಡು ಕಲೆಯ ಸಾಧನೆ ಮಾಡುತ್ತಿದ್ದರು. ಓದು, ಬರಹದ ಮಹತ್ವ ಇದಕ್ಕೆ ಬೇಕಿರಲಿಲ್ಲ. ಎಲ್ಲವನ್ನೂ ಕಂಠಪಾಠ ಹಾಗೂ ಗ್ರಹಣ ಶಕ್ತಿಯಿಂದಲೇ ಸಾಧಿಸಬೇಕಾಗುತ್ತಿತ್ತು. ಒಂದು ರಾಗವನ್ನು ಕನಿಷ್ಠ ಒಂದು ವರ್ಷವಾದರೂ ಕಲಿಯುತ್ತಿದ್ದರು. ಇದರಿಂದ ಸಂಪೂರ್ಣ ಗಾಯಕಿ ಆ ರಾಗದಲ್ಲಿ ಅವಗತವಾಗುತ್ತಿತ್ತು.  ಅಡಿಪಾಯವೂ ಗಟ್ಟಿಯಾಗಿರುತ್ತಿತ್ತು. ಗುರುವಿನ ಬಗೆಗೆ ಶೃದ್ಧೆ-ಭಕ್ತಿ ಇರುತ್ತಿದ್ದವು. ಶಿಷ್ಯ ಪೂಣ್ಣ ತಯಾರಾಗದೆ ಅವನಿಗೆ ಹೊರಗೆ ಹಾಡುವ ಅನುಮತಿಯೂ ದೊರೆಯುತ್ತಿರಲಿಲ್ಲ. ಗುರುವಿಗೆ ಯಾವ ಪ್ರಶ್ನೆಯನ್ನೂ ಕೇಳುವ ಅವಕಾಶವಿರಲಿಲ್ಲ.

ಇಂದು ಶಾಲೆ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯದಲ್ಲಿ ಸಂಗೀತ ಅಳವಡಿಸಲಾಗಿದೆ. ಅದರಂತೆ ವಿದ್ಯಾರ್ಥಿಗಳು ಸ್ವತಂತ್ರ ಮನೆ ಪಾಠ ಮಾಡುವವರಲ್ಲಿಯೂ ಕಲಿಯುವರು. ಇದು ಪ್ರಮಾಣಪತ್ರಗಳ ಯುಗವೆಂದರೆ ತಪ್ಪಾಗಲಾರದು. ಉಳಿದ ವಿಷಯಗಳಂತೆ ಪಾಠ್ಯಕ್ರಮ, ಸಮಯ ನಿಬ್ಬಂಧ ಸಂಗೀತ ವಿಷಯದಲ್ಲಿಯೂ ಒಳಗೊಂಡಿವೆ. ಗುರು ಒಂದೇ ರಾಗವನ್ನು ೬ ತಿಂಗಳು. ವರ್ಷ ಕಲಿಸಲು ಸಾಧ್ಯವಾಗದು. ಯಾಕೆಂದರೆ ಪಠ್ಯಕ್ರಮವನ್ನು ಪರೀಕ್ಷೆಗಾಗಿ ಮುಗಿಸಬೇಕು. ಶಿಷ್ಯನಿಗೂ ಅಷ್ಟೇ, ಒಂದೇ ರಾಗ ವಷ್ಷಗಟ್ಟಲೆ ಕಲಿಯಲು ಬೇಸರ. ಬೇಗ ಬೇಗ ಹೊಸರಾಗ ಕಲಿಯುವ ಬಯಕೆ. ಈಗಂತೂ ೨-೩ ತಿಂಗಳ, ೬ ತಿಂಗಳ, ಕೋರ್ಸ್‌ಗಳೆಂಬ ತಲೆಪಟ್ಟಿಯ ಮೇಲೆ ಸಂಗೀತ ಕಲಿಸುವರನ್ನೂ ಕಾಣಬಹುದಾಗಿದೆ. ಇಂದಿನ ತಾಂತ್ರಿಕ ಯುಗದಲ್ಲಿ ಸಮಯವಾದರೂ ಎಲ್ಲಿದೆ? ಗುರುವಿನ ಬಗೆಗೆ ಶ್ರದ್ಧೆ-ಭಕ್ತಿಯೂ ಕಡಿಮೆಯಾಗಿದೆ. ವರ್ಗದಲ್ಲಿ ಗುರು ಕಲಿಸುವಾಗ ಟೇಪ್‌ಮಾಡಿಕೊಳ್ಳುವರು. ಹೇಗೂ ಟೇಪ್‌ಆಗಿದೆ ಆಮೇಲೆ ಕಲಿತರಾಯಿತೆಂದು ಅಲಕ್ಷ ಮಾಡುವರು. ಇದರಿಂದ ಗ್ರಹಣ ಶಕ್ತಿ ಹಾಗೂ ತದಾತ್ಮಕ ಭಾವಗಳ ಅಭಾವವುಂಟಾಗುವುದು. ಪ್ರತಿಯೊಂದನ್ನು ಬರೆಯುವುದರಿಂದ ಬೇಗೆ ಕಂಠಪಾಠವೂ ಆಗುವುದಿಲ್ಲ. ಹಿಂದಿನ ಗಾಯಕರಿಗೆ ೧೦೦೦-೨೦೦೦ ಚೀಜುಗು ಕಂಠಪಾಠ ಬರುತ್ತಿದ್ದರವು. ಈಗೆಲ್ಲಾ ನೋಡಿ ಹಾಡಬಹುದೆಂಬ ಲೆಕ್ಕಾಚಾರ. ಗಾಯನದಲ್ಲಿ ಬಂದಿಶ್‌ಗಳು ರಾಗದ ಎಲ್ಲ ಸತ್ವವನ್ನು ಒಳಗೊಂಡಿರುವುದರಿಂದ ರಾಗ ಅರಿಯಲು ಬಂದಿಶ್‌ಗಳು ಇದ್ದಕ್ಕಿದ್ದಂತೆಯೇ ಬರುವುದ ಅವಶ್ಯವಾಗಿದೆ. ಇಂದಿನ ವಿದ್ಯಾರ್ಥಿಗಳು ಸುಶಿಕ್ಷಿತರಿರುವುದರಿಂದ ತುಲನಾತ್ಮಕ ದೃಷ್ಟಿ ಚುರುಕಾಗಿರುವುದು. ಚಿಕಿತ್ಸಕ ಬುದ್ಧಿಯಿರುವುದು. ಶಾಸ್ತ್ರದಲ್ಲಿ ಪ್ರಾವಿಣ್ಯತೆ ಪಡೆಯಬಹುದು. ಪ್ರಮಾಣ ಪತ್ರ ಹಾಗೂ ವ್ಯವಸಾಯಿಕ ದೃಷ್ಟಿಯಿಂದ ಕಲಿಯುವವರ ಸಂಖ್ಯೆ ಹೆಚ್ಚಾಗಿರುವುದರಿಂದ ನವಕಲಾಕಾರರು ಕಲೆಯಿಂದ ದೂರಾಗುವ ಸಂಭವವಿದೆ.

) ಘರಾನಾ: ಹಿಂದುಸ್ತಾನಿ ಸಂಗೀತದಲ್ಲಿ ಘರಾನಾಗಳು ಮಹತ್ವದ ಪಾತ್ರವನ್ನು ವಹಿಸಿವೆ. ಪ್ರತಿಭಾವಂತ ಗಾಯಕರು ತಮ್ಮದೇ ಆದ ವೈಶಿಷ್ಟ್ಯ ಪೂರ್ಣ ಗಾಯಕಿಯನ್ನು ರೂಪಿಸಿ ಪರಂಪರೆಯನ್ನು ಸ್ಥಾಪಿಸಿದಾಗ ಬೇರೆ ಬೇರೆ ಘರಾನೆಗಳು ರೂಪುಗೊಂಡವು. ಅಂಥ ಗಾಯಕರಿರುವ ಪ್ರದೇಶದಲ್ಲಿ ಈ ಗಾಯಕಿಗಳು ಬೆಳೆದು ಬಂದವು. ಹೀಗಾಗಿ ಹಿಂದಿನ ಕಾಲದ ಶಿಷ್ಯರು ಬೇರೆ ಘರಾನೆಯ ಗಾಯಕಿ ಕೇಳುವ ಪ್ರಮೇಯವಿರಲಿಲ್ಲ. ಇಂದು ಪ್ರತಿಯೊದು ಊರಿನಲ್ಲಿ ಎಲ್ಲ ಘರಾನೆಯ ಗಾಯಕರಿರುವುದರಿಂದ ಎಲ್ಲ ಘರಾನೆಯ ಗಾಯಕಿಯೂ ಕೇಳಲು ದೊರಕುವುದು. ಅದರಂತೆ ಸಂಗೀತ ಕಲಿಸುವಲ್ಲಿ ಬೇರೆ ಬೆರೆ ಘರಾನೆಯ ಗಾಯಕರಿರುವುದರಿಂದ ಸಂಗೀತ ವಿದ್ಯಾರ್ಥಿಯ  ಮೇಲೆ ಎಲ್ಲ ಅಂಶಗಳೂ ಅಳವೊಡುವುದು ಸಹಜ. ಶ್ರೋತೃವಿಗೆ ರಂಜಿಸಲು ನವಕಲಾಕಾರ ಎಲ್ಲ ಘರಾನೆಗಳ ಒಳ್ಳೆ ಅಂಶಗಳನ್ನೂ ಗ್ರಹಿಸುವನು. ಇದರಿಂದ ಘರಾನೆಗಳ ಅಳಿವು ಉಳಿವಿನ ಪ್ರಶ್ನೆ ಉಂಟಾಗುವುದು. ಆದರೆ ಘರಾನೆ ಎಂಬುದೇ ಅತ್ಯಂತ ಸುಸಂಬದ್ಧ ದೃಷ್ಟಿಕೋನ ಇರುವುದರಿಂದ ಇದು ಅಳಿಯಲಾರದು. ಬಹುಶಃ ಅವುಗಳ ಮಾರ್ಗ ರೇಖೆಗಳು ಭಿನ್ನವಾಗಬಹುದು. ಹಳೆಯ ಗಾಯಕರು ಒಂದು ಸಿದ್ದಾಂತ ಹೇಳುತ್ತಿದ್ದರು. ‘ಉತ್ತಮ ಗಾನ, ಮಧ್ಯಮ ಬಜಾನಾ, ನಿಖದ ನಾಚನಾ’ ಕಲಿಯುವುದು ಎಷ್ಟು ಸುಲಭವೋ ಕಲಿಸುವುದು ಅಷ್ಟೇ ಕಠಿಣವಾಗಿದೆ. ಒಳ್ಳೆ ಗಾಯಕಿ ಕಲಿಸುವವರ ಸಂಖ್ಯೆ ಕಡಿಮೆಯಾಗಿದೆ. ಯುವಕಲಾಕಾರರು ಶೀಘ್ರ ಲೋಕಪ್ರಿಯತೆಯ ಭ್ರಮೆಯಲ್ಲಿರುವುದರಿಂದ ಇವರಲ್ಲಿ ವಿಚಕ್ಷಣ ಬುದ್ಧಿ ಕಡಿಮೆಯಿರುವುದು. ಗುರುವಿನ ಬಗೆಯಾಗಿ ಸ್ವಯಂ ನಿರ್ಣಯ ತೆಗೆದುಕೊಳ್ಳುವ ಸಾಹಸ ಅವರಲ್ಲಿಲ್ಲ. ಘರಾನೆಯ ಸೀಮೋಲ್ಲಂಘನವಾದಾಗ್ಯೂ ಶೈಲಿಗಳ ಸಂಕಿರವಾಗದೇ ಇರದು. ಮುಂಬರುವ ಯುಗದಲ್ಲಿ ಸಮಗ್ರ ಗಾಯಕಿಯ ಸೌಂದರ್ಯ ತತ್ವ ರಕ್ಷಿಸುವ ಶೈಲಿಯೂ ಬರಬಹುದು.

) ವೈಜ್ಞಾನಿಕ ಉಪಕರಣಗಳ ಬಳಕೆ: ಇಂದು ವೈಜ್ಞಾನಿಕ ಉಪಕರಣಗಳ ಪ್ರಯೋಗ ಬಹಳಷ್ಟಾಗಿವೆ. ಧ್ವನಿವರ್ಧಕ, ಧ್ವನಿಸುರಳಿ, ಆಕಾಶವಾಣಿ, ದೂರದರ್ಶನ, ಎಲೆಕ್ಟ್ರಾನಿಕ್ ತಾನಪುರ, ತಾಲಮಾಲ, ಧ್ವನಿ ಮುದ್ರಣ ಯಂತ್ರ ಇತ್ಯಾದಿಗಳ ಪರಿಣಾಮ ಸಂಗೀತದ ಮೇಲೆ ಸಾಕಷ್ಟಾಗಿವೆ. ಇವೆಲ್ಲ ಪ್ರಗತಿಯ ದ್ಯೋತಕವಾದಗ್ಯೂ ಇದರಿಂದ ಒಳ್ಳೆಯ ಹಾಗೂ ಕೆಟ್ಟ ಎರಡೂ ಪರಿಣಾಮಗಳನ್ನು ಕಾಣಬಹುದು. ಮೊದಲು ಇದರ ದುಷ್ಪರಿಣಾಮವನ್ನು ಅವಲೋಕಿಸೋಣ.

೧. ಮಂಚ ಪ್ರದರ್ಶನದಲ್ಲಿ ಕೆಟ್ಟ ಧ್ವನಿವರ್ಧಕದಿಂದ ಕಲಾಕಾರನ ಮನಸ್ಥಿತಿ ವಿಚಲಿತವಾಗಿ ಕಾರ್ಯಕ್ರಮದ ಪ್ರಭಾವ ಕಡಿಮೆಯಾಗುವುವು.

೨. ದೃಶ್ಯ ಮಾಧ್ಯಮದಿಂದ ಮಂಚಪ್ರದರ್ಶನದಲ್ಲಿ ಇಂದು ಅಭಿನಯ ಹೆಚ್ಚಾಗಿದೆ.

೩. ಆಕಾಶವಾಣಿ, ದೂರದರ್ಶನ ಬಂದುದರಿಂದ ಕಾರ್ಯಕ್ರಮಗಳಲ್ಲಿ ಶ್ರೋತೃಗಳ ಉಪಸ್ಥಿತಿ ಕಡಿಮೆಯಾಗಿದೆ.

೪. ಧ್ವನಿವರ್ಧಕದಿಂದ ಗಾಯಕ ವಾದಕರ ಸಣ್ಣ ತಪ್ಪೂ ಹೆಚ್ಚು ದೊಡ್ಡದಾಗಿ ಕಂಡುಬರುವುದು.

೫. ಎಲೆಕ್ಟ್ರಾನಿಕ್ ವಾದ್ಯಗಳಲ್ಲಿ ಪಾರಂಪರಿಕ ವಾದ್ಯಗಳ ಸೀಮಾಮಟ್ಟವು ಕಡಿಮೆಯಿರುವುದು.

೬. ವ್ಯವಹಾರಿಕ ಸಂಗೀತದಲ್ಲಿ ಪುಸ್ತಕೀಯ ಜ್ಞಾನವನ್ನು ನಿರ್ಭರಿಸುವುದನ್ನು ಕಾಣಬಹುದು.

೭. ಇಂದಿನ ಕಲಾಕಾರ ಅಧಿಕ ವ್ಯವಸಾಯಿಕನಾಗಿ ಕಲಾರರು ಬೇಡುವ ಹಣದ ಮೇಲೆ ಶ್ರೋತೃಗಳು ಅವರ ದರ್ಜೆ ನಿಶ್ಚಯಿಸುವರು.

೮. ಯುವ ಕಲಾಕಾರ ಕಲಿಯುವ ಮೊದಲು ವ್ಯವಸಾಯಿಕತೆಯ ಮೋಹದಲ್ಲಿ ಬಂಧಿತನಾಗುವನು.

೯. ಗಾಯಕವಾದಕರಿಗೆ ರಿಯಾಜ ಮಾಡಲು ತಬಲಾವಾದಕರ ಕೊರತೆ ತುಂಬಲು ಎಲೆಕ್ಟ್ರಿಕ್ ತಾಲಮಾಲಾ ಇದ್ದಾಗ್ಯೂ ಪ್ರತ್ಯಕ್ಷ ತಬಲಾ ವಾದಕರೊಡನೆ ಮಾಡುವ ರಿಯಾಜು ಕಲಾಸಾಧನೆಗೆ ಶ್ರೇಷ್ಟವಾಗಿದೆ.

೧೦. ವಿದ್ಯುತ್ ಕೊರತೆಯಿಂದ ಈ ಉಪಕರಣಗಳು ಪ್ರಯೋಜನವಾಗಲಾರವು.

ಇನ್ನು ಸಂಗೀತ ಕಲಾಕ್ಷೇತ್ರದ ಪ್ರಗತಿಯ ದಿಶೆಯಲ್ಲಿ ಇವುಗಳ ಲಾಭ ಎಷ್ಟು ಎಂಬುದನ್ನು ನೋಡುವ.

೧. ಧ್ವನಿವರ್ಧಕದಿಂದ ಕಲಾಕಾರನು ಸಾವಿರಾರು ಶ್ರೋತೃಗಳೆದರು ನಿರಾಯಾಸವಾಗಿ ಹಾಡಬಹುದು.

೨. ಧ್ವನಿವಿಸ್ತಾರದಿಂದ ನಿರ್ಮಾಣದಲ್ಲಿ ಧ್ವನಿವಿನ್ಯಾಸ ದೃಷ್ಟಿಯಿಂದಾದ ಯಾವುದೇ ಪರಿವರ್ತನವು ವೈಜ್ಞಾನಿಕ ಆಧಾರದ ಮೇಲೆಯೇ ಆಗಿದೆ. ಪ್ರಸಾರ ಬೆಳೆದಿದ್ದು. ಮನೆಯಲ್ಲಿಯೇ ಕುಳಿತು ಕೇಳುವ ಸೌಲಭ್ಯವಿದೆ.

೩. ಧ್ವನಿಮುದ್ರಣದಿಂದ ಗಾಯನ ವಾದನಗಳನ್ನು ಸುರಕ್ಷಿತವಾಗಿಡುವ ಸುಸಂಧಿ ದೊರತಿದೆ.

೪. ಧ್ವನಿವರ್ಧಕದಿಂದ ಕಲಾಕಾರರ ಪ್ರದರ್ಶನದಲ್ಲಿ ಸುಧಾರಣೆಯಾಗಿದ್ದು ಅವರು ಕಲೆಯ ಬಗೆಗೆ ಸಚೇತರಾಗಿರುವರು.

೫. ಧ್ವನಿಮುದ್ರಣ, ಧ್ವನಿಸುರಳಿಗಳು ವಿದ್ಯಾರ್ಥಿಗಳಿಗೆ ಹಾಗೂ ಕಲಾಕಾರ ತನ್ನ ಹಾಡು ತಾನೇ ಕೇಳಿ ಇತರರ ದೃಷ್ಟಿಯಲ್ಲಿ ಇದನ್ನು ಹೇಗೆ ಪ್ರಭಾವಿತಗೊಳಿಸಬೇಕೆಂದು ಯೋಚಿಸಿ ಪ್ರದರ್ಶಿಸಬಹುದು.

೬. ಎಲೆಕ್ಟ್ರಾನಿಕ್ ತಾನಪೂರಾ, ತಬಲಾಗಳು ರಿಯಾಜಿಗೆ ಸಹಕಾರಿಯಾಗಿದ್ದು ಗುರು ಕಲಿಸುವ ತಾಲೀಮಿನಲ್ಲಿಯೂ ಸಹಕಾರಿಯಾಗಿವೆ.

7. ಯಾತಾಯಾತ ಸೌಲಭ್ಯದಿಂದ ದೇಶವಿದೇಶಗಳಲ್ಲಿ ಕಲಾಪ್ರದರ್ಶನ ನೀಡಲು ಅತ್ಯಧಿಕ ಪ್ರಚಾರ-ಪ್ರಸಾರ ಸಿಗುವುದು.

೮ ವೈಜ್ಞಾನಿಕತೆಯ ದೊಡ್ಡ ಉಪಲಬ್ಧಿಯೆಂದರೆ, ಪ್ರಚಾರ ಪ್ರಸಾರ ಮಾಧ್ಯಮದಿಂದ ಯಾರನ್ನಾದರೂ ಹೆಸರಾಂತ ಕಲಾಕಾರರ ರೂಪದಲ್ಲಿ ಪ್ರಸಿದ್ಧಿ ಕೊಡಿಸುವುದು. ಇಲ್ಲಿ ಸಕಾರಾತ್ಮಕ ಹಾಗೂ ನಕರಾತ್ಮಕ ಎರಡು ಪಕ್ಷಗಳಿವೆ. ನಕಾರಾತ್ಮಕ ದೃಷ್ಟಿಯಲ್ಲಿ ಒಬ್ಬ ಸಾಧಾರಣ ಒಳ್ಳೆಯ ಕಲಾಕಾರನು ಪ್ರಚಾರ ಪ್ರಸಾರ ಮಾಧ್ಯಮದಿಂದ ಬಹಳ ಪ್ರಸಿದ್ಧನಾದರೆ, ಇನೊಬ್ಬ ಸಕಲ ಶ್ರೇಷ್ಟ ಕಲಾಕಾರ ತನ್ನನ್ನೆ ತಾನು ಬಹಳ ಹೇಳಿಕೊಳ್ಳದಂಥವ, ಇವನಿಗೆ ಪ್ರಚಾರ ಪ್ರಸಾರ ಮಾಧ್ಯಮ ದುರ್ಲಭವಾಗಿ ಬಹಳ ಶ್ರೋತೃ ಹಾಗೂ ಪ್ರಶಂಸಕರವರೆಗೆ ಮುಟ್ಟಲು ವಂಚಿತನಾಗುತ್ತಾನೆ. ಸಕಾರಾತ್ಮಕದಲ್ಲಿ ಪ್ರಚಾರ ಪ್ರಸಾರಮಾಧ್ಯಮ ದೊರೆತು ಕಲಾಕಾರನಿಗೆ ಮಾನಸಿಕ ಸಂತುಷ್ಟಿ ಹಾಗೂ ಕಲಾತ್ಮಕ ಪ್ರೇರಣೆ ದೊರೆಯುವುದು. ಹೀಗೆ ವೈಜ್ಞಾನಿಕ ಪ್ರಗತಿಯಿಂದ ಹೆಚ್ಚು ಪ್ರಗತಿಯನ್ನು ಸಂಗೀತ ಕ್ಷೇತ್ರ ಸಾಧಿಸಿದೆ.

ಇನ್ನು ಮಹತ್ವದ ಸವಾಲೆಂದರೆ ಶಾಸ್ತ್ರೀಯ ಸಂಗೀತದ ಮಹತ್ವ ಕಡಿಮೆಯಾಗುತ್ತಿದೆಯೆ? ಎಂಬುದು.

ಶಾಸ್ತ್ರೀಯ ಸಂಗೀತವು ಕಠಿಣ ನಿಯಮಗಳಿಂದ ಕೂಡಿದ್ದು ಪರಿಪೂರ್ಣ ಕಲಾಕಾರರಾಗಲು ಹೆಚ್ಚು ಅವಧಿಯವರೆಗೆ ಕಲಿಯಬೇಕಾಗುವುದು. ಇನ್ನು ಶ್ರೋತೃಗಳು ತಾನಸೇನರಲ್ಲದಿದ್ದರೂ ಕಾನಸೇನರಿರುವುದು ಅವಶ್ಯ. ಜನಸಾಮಾನ್ಯರು ಶಾಸ್ತ್ರೀಯ ಗಾಯಕಿಯನ್ನು ಅರಿಯದೇ ಅದರ ರಸಸ್ವಾದವನ್ನು ಮಾಡಲು ಸಾಧ್ಯವಾಗುವುದಿಲ್ಲ.

ಚಿತ್ರಪಟ ಸಂಗೀತದ ಪ್ರಚಾರವು ಭರದಿಮ್ದ ಆದಂದಿನಿಂದ ಸಾಮಾನ್ಯ ಜನತೆಯ ಜೀವನ ಪ್ರತಿಯೊಂದು ಹಂತದಲ್ಲಿ ಲಘು ಸಂಗೀತವು ಪ್ರಸ್ತುತವಾಗಹತ್ತಿತು. ಚಿತ್ರಪಟ ಸಂಗೀತದ ಮೂಲಕ ಪ್ರಸಾರಿತಗೊಂಡ ಲಘು ಸಂಗೀತ ಇಂದು ಮಾನವನ ಜೀವನದಲ್ಲಿ ಮಹತ್ವದ ಅಂಗಷ್ಟೇ ಅಲ್ಲ ಅನಿವಾರ್ಯವಾಗಿ ಪರಿಣಮಿಸಿದೆ.

ಭಾವಿ ಜೀವನದಲ್ಲಿ ಸಂಗೀತದ ಭವಿಷ್ಯ ಏನಾಗಬಹುದೆಂಬ ಪ್ರಶ್ನೆ ಬಂದಾಗ ಲಘು ಸಂಗೀತ ಅಧಿಕ ಜನಪ್ರಿಯವಾಗಿ ಶಾಸ್ತ್ರೀಯ ಮತ್ತು ಲಘು ಸಂಗೀತಗಳ ಸಮನ್ವಯವಾಗಬಹುದು ಎಂದು ಊಹಿಸಬಹುದು. ಆದರೆ ಇವುಗಳಿಗೆ ಶಾಸ್ತ್ರೀಯ ಆಧಾರ ಬೇಕೆಬೇಕು.

ಆದರೆ ಯಾವ ದೇಶದಲ್ಲಿಯೂ ಶಾಸ್ತ್ರೀಯ ಸಂಗೀತ ಸಾಧಾರಣ ಜನತೆಯ ಸ್ವತ್ತಾಗಿಲ್ಲ. ಆಕಾಶವಾಣಿ, ದೂರದರ್ಶನ, ಶಾಲೆ, ಕಾಲೇಜುಗಳ ಮುಖಾಂತರವಾಗಿ ಇಂದು ಜನಸಾಮಾನ್ಯರ ವರೆಗೆ ಶಾಸ್ತ್ರೀಯ ಸಂಗೀತವನ್ನು ಮುಟ್ಟಿಸುವ ಪ್ರಯತ್ನ ಸಮಾಧಾನಕರವಾಗಿದೆ. ಇದಕ್ಕಾಗಿ ಅನೇಕ ಶಿಷ್ಯವೇತನಗಳನ್ನೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕೊಡಲಾಗುತ್ತಿದೆ. ಇವು ಯುವ ಕಲಾವಿದರಿಗೆ ಪ್ರೋತ್ಸಾಹದಾಯಕವಾಗಿದ್ದು ಸಾಧನೆಗೆ ಅನುಕೂಲವಾಗಿವೆ.

ಇಂದು ಸಂಗೀತ ಶ್ರವಣವು ಒಂದು ಅತ್ಯಂತ ಸರಳ ಹಾಗೂ ಸುಲಭ ಸಂಗತಿಯಾಗಿದೆ. ಯಾವುದೇ ಶ್ರೇಷ್ಠ ಗಾಯಕ ವಾದಕ ಸಂಗೀತವನ್ನು ಮನೆಯಲ್ಲಿಯೇ ಕುಳಿತು ನೋಡಿ ಕೇಳಬಹುದು. ಇದು ಆನಂದದಾಯಕವಾದರೂ ಅತಿ ಪರಿಚಯದಿಂದ ಅವಜ್ಞೇಯೂ ಪ್ರಾರಂಭವಾಗಿದೆ. ಹರಟೆ ಹೊಡೆಯುವಾಗ, ಕೆಲಸ ಮಾಡುವಾಗ, ಅಭ್ಯಾಸ ಮಾಡುವಾಗ ಹಿನ್ನೆಲೆಯಲ್ಲಿ ಸಂಗೀತ ಹಚ್ಚುವುದನ್ನು ಕಾಣಬಹುದಾಗಿದೆ. ಅದರಂತೆ ಟಿ.ವಿ. ರೇಡಿಯೋಗಳಲ್ಲಿ ಪ್ರಾಯೋಜಿತ ಕಾರ್ಯಕ್ರಮಗಳ ಮಧ್ಯದಲ್ಲಿ ಶ್ರೇಷ್ಠ ವಾದಕರ ಧ್ವನಿಮುದ್ರಿತ ವಾದನ ತುಣುಕುಗಳನ್ನು ನುಡಿಸುವುದರಿಂದ ‘ಸಂತತಗಮಾನತ್ ಆನಾದರೊ ಭವತಿ’ ಎಂಬಂತೆ ‘ಸಂತತ ಶ್ರವಣಾತ ಅನಾದರೋ ಭವತಿ’ ಎಂದೆನಿಸಬಹುದಾಗಿದೆ. ವ್ಯಾಪಾರಿ ವಿಭಾಗದಲ್ಲಿ ಪ್ರತಿ ಮಾರುವ ವಸ್ತುವಿಗಿರುವ ಸಂಗೀತದ ಮಾಧ್ಯಮ ನೋಡಿದರೆ ‘ವ್ಯಾಪಾರಿ ಸಂಗೀತ’ ಪ್ರಾರಂಭವಾಗಿದೆಯೆಂದರೆ ತಪ್ಪಾಗಲಾರದು. ಜನಾಭಿರುಚಿಗೆ ತಕ್ಕಂತೆ ಹಾಡುವುದೆಂದರೆ ಲೋಕಪ್ರಿಯತೆ, ದ್ರವ್ಯಲೋಭ ಮತ್ತು ಪ್ರಲೋಭನೆಯ ಮೂಲಕ ತಮ್ಮನ್ನು ತಾವು ಮಾರಿಕೊಂಡಂತಾಗುವುದು.

ಯಾವ ಬಗೆಯ ಸಂಗೀತವೇ ಇರಲಿ ಅದರ ಮೂಲ ಸಾಧನ ಸಾಮಗ್ರಿ ಶಾಸ್ತ್ರೀಯ ಸಂಗೀತವೇ ಎಂಬುದನ್ನು ಮರೆಯಲಾಗದು. ಪಾಶ್ಚಾತ್ಯ ಸಂಗೀತದ ಪ್ರಭಾವ ಬಳಕೆಯನ್ನೂ ಈಗ ಬಹಳಷ್ಟು ಕಾಣಬಹುದು. ಅದರಂತೆ, ಬೇರೆ ಬೇರೆ ಯಾವುದೇ ಸಂಗೀತ ಶೈಲಿಗಳು ಬಂದಾಗ್ಯೂ ಶಾಸ್ತ್ರೀಯ ಸಂಗೀತದ ಬೆಲೆ ಕಡಿಮೆಯಾಗದು. ಆಯಾ ಶೈಲಿಗಳಿಗೆ ಅವುಗಳದೇ ಆದ ಸ್ಥಾನಮಾನಗಳಿವೆ.

ಇಂದು ಸಂಗೀತ ಕಲಿಯುವವರ ಸಂಖ್ಯೆಯೂ ಹೆಚ್ಚಿದೆ. ಶಾಲೆ ಕಾಲೇಜುಗಳಲ್ಲಿ ಪಾಠ ವೈಯಕ್ತಿಕ ಗಮನಕ್ಕೆ ಹೆಚ್ಚು ಅವಕಾಶ ಸಿಗದೆ ಗುಂಪಿನಲ್ಲಿ ಕಾಲೇಜುಗಳಲ್ಲಿ ಪಾಠ ವೈಯಕ್ತಿಕ ಗಮನಕ್ಕೆ ಹೆಚ್ಚು ಅವಕಾಶ ಸಿಗದೆ ಗುಂಪಿನಲ್ಲಿ ಎಲ್ಲವೂ ಗೋವಿಂದ ಎನ್ನುವಂತಾಗುವುದು. ಸಂಗೀತಕ್ಕೆ ಈಗ ಸುಸಂಸ್ಕೃತ ವೇದಿಕೆ ದೊರೆತರೂ ಯುವ ಪೀಳಿಗೆಯಲ್ಲಿ ಪರಿಶ್ರಮದ ಅಂಶ ಬಹಳಷ್ಟು ಕಡಿಮೆಯಾಗಿದೆ. ಇಂದು ಸಂಗೀತ ‘ಕಲೆಗಾಗಿ ಕಲೆ’ ಎಂದುಳಿಯದೆ ಉದರ ಪೋಷಣೆಗಾಗಿ ಕಲೆಯಾಗಿ ಮಾರ್ಪಟ್ಟಿದೆ. ಅದಕ್ಕಾಗಿ ಕೇವಲ ಸಂಗೀತದಲ್ಲಿ ಪ್ರಮಾಣಪತ್ರ ದೊರಕಿಸುವವರ ಸಂಖ್ಯೆಯೂ ಹೆಚ್ಚಾಗಿದೆ.

ಶಾಸ್ತ್ರೀಯ ಸಂಗೀತವು ಜನಾನುರಾಗಕ್ಕೆ ಪಾತ್ರವಾಗಬೇಕಾದರೆ ಕೆಲ ಮಹತ್ವದ ಅಂಶಗಳನ್ನು ಗಮನಿಸಬೇಕು ಇಂದಿನ ಯುವ ಪೀಳಿಗೆಯ ಕಲಾಕಾರರು ತಮ್ಮ ಸಂಗೀತ-ಸಾಧನೆಯಲ್ಲಿ ಶಿಸ್ತು ಹಾಗೂ ಸಂಯಮ ತಾಳ್ಮೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ತಂಬಾಕು, ಅಮಲಿನ ವಸ್ತು ಇತ್ಯಾದಿಗಳನ್ನು ಸೇವಿಸಿದರೆ ಮಾತ್ರ ಚೆನ್ನಾಗಿ ರಿಯಾಜ್ ಮಾಡಬಹುದೆಂಬ ಹುಚ್ಚು ಕಲ್ಪನೆ ಕೆಲ ವಿದ್ಯಾರ್ಥಿಗಳಲ್ಲಿರುವುದು. ಆದರೆ ಸಂಗೀತಕ್ಕೆ ಒಳ್ಳೆ ಗುರು, ಅರ್ಥಪೂರ್ಣ ಸಾಧನೆ ಪರಿಶ್ರಮಗಳೇ ಶ್ರೇಷ್ಠ ಕಲಾಕಾರನಾಗಲು ಸೋಪಾನಗಳಾಗಿವೆ. ಎಷ್ಟೋ ಕಲಾಕಾರರು ಅಸಂಬದ್ಧ ಅರ್ಥವಾಗದ ಚೀಜುಗಳನ್ನು ಯಾಂತ್ರಿಕವಾಗಿ ಹಾಡುವುದರಿಂದ ಶ್ರೋತೃಗಳು ಅಪಹಾಸ್ಯ ಮಾಡುವುದನ್ನು ಕಾಣಬಹುದು. ಆದ್ದರಿಂದ ಚೀಜುಗಳ ಅರ್ಥ ತಿಳಿದು ಸಾಹಿತ್ಯಕ್ಕೂ ಒತ್ತುಕೊಟ್ಟು ಭಾವಪೂರ್ಣವಾಗಿ ಹಾಡಬೇಕು. ಪ್ರತಿಯೊಬ್ಬ ಸಂಗೀತಗಾರನೂ ಶಾಸ್ತ್ರದ ಅಧ್ಯಯನವನ್ನು ಮಾಡಲೇಬೇಕು. ಶಾಸ್ತ್ರೀಯ ಜ್ಞಾನವಿರದೆ ಸಂಗೀತದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡಲು ಸಾಧ್ಯವಿಲ್ಲ. ಶಾಸ್ತ್ರೀಯ ಸಂಗೀತವು ಸ್ವರಮಾಧುರ್ಯ ಮತ್ತು ತಾಲಗಳ ಅಮರ ನಿಧಿಯಾಗಿದೆ. ಬಹು ಬಗೆಯ ವಾದ್ಯಗಳನ್ನು ಪ್ರಯೋಗಿಸಲು, ಸಂಗೀತ ನಿರ್ದೇಶನ ನೀಡಲು, ಸುಗಮ ಸಂಗೀತ, ಚಿತ್ರಕಲೆ ಇತ್ಯಾದಿಗಳನ್ನು ಹಾಡಲು ಶಾಸ್ತ್ರೀಯ ಸಂಗೀತದ ಅಡಿಪಾಯವಿರಲೇಬೇಕು. ರಾಗಗಳ ನವ್ಯ ನಿರ್ಮಿತಿ ಹಾಗೂ ಪ್ರಸ್ತುತಿಗೆ ರಾಗ ಭಿನ್ನತೆ ತೋರುವ ಶಾಸ್ತ್ರ ಜ್ಞಾನವಿರುವುದು ಅವಶ್ಯ. ಇಂದು ಬುದ್ಧಿಮತ್ತೆಯ ಸೃಜನಾತ್ಮಕ, ಕಲಾತ್ಮಕ ಸಂಗೀತ ಪ್ರಸ್ತುತ ಪಡಿಸುವ ಹೊಣೆಗಾರಿಗೆ ಬೇಕಾಗಿದೆ. ಇಂದು ಅನೇಕ ಪ್ರಶಸ್ತಿ ಪುರಸ್ಕಾರಗಳು ಕಲಾಕಾರರಿಗೆ ಪ್ರೊತ್ಸಾಹದಾಯಕವಾಗಿದೆ. ಆದರೆ ಪ್ರಸಿದ್ದಿ, ಪ್ರಶಸ್ತಿ, ಪುರಸ್ಕಾರಗಳಿಗಾಗಿ ಕೀಳುಮಟ್ಟದ ತಂತ್ರ ಬಳಸಿ ಬೆನ್ನು ಬೀಳದೆ, ಅವಸರವನ್ನು ಬಿಟ್ಟು ಪರಿಣಿತಿ ಪಡೆಯುವವರೆಗೆ ಕಲೆಯ ಸಾಧನೆ ಮಾದಿದಲ್ಲಿ ಪರಿಶ್ರಮಕ್ಕೆ ಸತ್ಫಲ ದೊರೆಯುವುದು.

ಸಾಮಾನ್ಯವಾಗಿ ಸಂಗೀತ ಶ್ರೋತೃಗಳು ಸಹ ಅಲ್ಪ ಸಮಯದಲ್ಲಿ ಅಧಿಕ ಮನರಂಜನೆ ಸ್ಸಾಮಾಗ್ರಿಯನ್ನು ಹುಡುಕುವರು. ಆದ್ದರಿಂದ ಕಲಾಕಾರರೂ ಸಹ ದೊರೆತ ಸದವಕಾಶದಲ್ಲಿ ವಿಭಿನ್ನ ಕಲಾತ್ಮಕ ಚಮತ್ಕಾರಗಳನ್ನು ಸಮಾವೇಶಗೊಳಿಸಿ ಜನಮನ ಗೆಲ್ಲಬೇಕು. ಶಾಸ್ತ್ರೀಯ ಸಂಗೀತವೇ ಎಲ್ಲ ಬಗೆಯ ಸಂಗೀತಕ್ಕೂ ಮೂಲಾಧಾರ ಎಂಬ ಮಾತನ್ನು ಎಲ್ಲರೂ ಒಪ್ಪಿದರೂ ಸಹ ಅದೆಷ್ಟು ಜನ ಸಂಗೀತಗಾರರು ಇದರ ವಿಕಾಸಕ್ಕಾಗಿ ಗೋಗುತ್ತಿದ್ದಾರೆ? ಈ ತಮ್ಮ ಸ್ವಾರ್ಥದ ಅಮಲಿನಲ್ಲಿ ಈ ಮಾತಿನ ಸತ್ಯತೆಯ ಅರಿವು ಅದೆಷ್ಟು ಜನ ಸಂಗೀತಗಾರರಿಗಿದೆ? ವಿವಿಧ ರುಚಿ, ಭಿನ್ನ ಮನೋಹಾವನೆಗಳ ಜಾತ್ರೆಯಂತಿರುವ ಈ ವಿಶ್ವದ ಅಗಣಿತ ಹೃದಯ ವೀಣೆಗಳು ಒಂದಾಗಿ ಶೃತಿಗೊಂಡು, ಬಂಧುರವಾಗಿ ತಮ್ಮ ಭಿನ್ನತೆಯನ್ನು ಒಂದು ಕ್ಷಣ ಮರೆಯುವುದು ಸಂಗೀತದ ಸಪ್ತ ಸ್ವರಗಳ ಅಲೆಯಗಳಲ್ಲಿ ತೇಲಿ ತುಳುಕುವಾಗ ಮಾತ್ರ ಅಲ್ಲವೇ? ಯುವ, ನವ ಸಂಗೀತ ಪೀಳಿಗೆ ಗುಣದೋಷಗಳನ್ನುರಿತು ಪ್ರತಿ ಸಾಧಿಸಿಲಿ. ಸಂಸ್ಕೃತಿಯ ಅಧಾರವಾಗಿರುವ ಶಾಸ್ತ್ರೀಯ ಸಂಗೀತ ಲತೆ ಚಲ್ಲವರಿದು ತನ್ನೆಲ್ಲ ಕುಸುಮಗಳನ್ನು ಮಾನವತೆಯ ಮನೋವಿಕಾಸಕ್ಕಾಗಿ ಹರಡಲಿ ಎಂದು ಹಾರೈಸೋಣ.