ಬೇಂದ್ರೆ ಅಂದರೆ ಕಾವ್ಯ, ಕಾವ್ಯ ಅಂದರೆ ಬೇಂದ್ರೆ ಅನ್ನುವಷ್ಟರಮಟ್ಟಿಗೆ ಕವಿತೆಯನ್ನೆ ತಮ್ಮ ಕೇಂದ್ರ ಕಾಳಜಿಯನ್ನಾಗಿ ಮಾಡಿಕೊಂಡು ಬದುಕಿದವರು ಬೇಂದ್ರೆಯವರು. ಕಾವ್ಯೇತರವಾದ ಹಲವು ಪ್ರಕಾರಗಳಲ್ಲಿಯೂ, -ನಾಟಕ, ಹರಟೆ, ಸಾಹಿತ್ಯವಿಮರ್ಶೆ, ಕಾವ್ಯಮೀಮಾಂಸೆ, ಅನುವಾದ ಇತ್ಯಾದಿ ಕ್ಷೇತ್ರಗಳಲ್ಲಿ- ಅವರು ಗಣನೀಯವಾದ ಗೆಲುವನ್ನು ಪಡೆದರೆಂಬುದು ನಿಜವಾದರೂ ಅವರು ತಮ್ಮ ಸಮಗ್ರ ವ್ಯಕ್ತಿತ್ವವನ್ನು ಇಡಿಯಾಗಿ ತೊಡಗಿಸಿಕೊಂಡದ್ದು ಕವಿತೆಯಲ್ಲಿಯೇ. ಆದಕಾರಣವೇ ಅವರ ಕವಿತೆ ತನ್ನ ಗೇಯಗಾರುಡಿಯಿಂದ, ಛಂದೋ ವೈವಿಧ್ಯ ಹಾಗೂ ಭಾಷಾ ವೈವಿಧ್ಯಗಳಿಂದ ಸಮೃದ್ಧವಾದ ಅನುಭವ ಪ್ರಪಂಚಗಳನ್ನು ಅನಾವರಣಗೊಳಿಸುತ್ತ ಕನ್ನಡ ಜನಮನವನ್ನು ಮರುಳುಗೊಳಿಸಿದೆ. ಅದು ತನ್ನ ಮೂಲಗುಣವಾದ ಉತ್ಸಾಹ ಮತ್ತು ಲವಲವಿಕೆಗಳಿಂದ ಸದಾ ಪುಟಿಯುವ ಚಿಲುಮೆಯ ಲಕ್ಷಣಗಳನ್ನು ಒಳಗೊಂಡಿದೆ. ಬೇಂದ್ರೆಯವರ ವ್ಯಕ್ತಿತ್ವವೇ ಒಂದು ಚೈತನ್ಯದ ಚಿಲುಮೆ ಎಂದರೆ ಅದೇನೂ ಉತ್ಪ್ರೇಕ್ಷೆಯ ಮಾತಲ್ಲ.

ತಮ್ಮ ಕವಿತೆಗೆ ಪುಟಿಯುವ ಚಿಲುಮೆಯ ಲಕ್ಷಣವಿದೆ ಎಂಬ ಮಾತನ್ನು ಅವರೇ ಪ್ರಾಸಂಗಿಕವಾಗಿ ಸೂಚಿಸಿದ ಸಂದರ್ಭವೊಂದು ನನಗಿನ್ನೂ ನೆನಪಿದೆ: ಬಹುಶಃ ಅದು ಐವತ್ತರ ದಶಕದ ಪ್ರಾರಂಭ ಎಂದು ಕಾಣುತ್ತದೆ. ಬೇಂದ್ರೆ, ಗೋಕಾಕ್, ಕಾರಂತರಂಥ ಪ್ರಸಿದ್ಧ ಲೇಖಕರು ಯಾವ್ಯಾವುದೋ ಸಭೆ-ಸಮಾರಂಭಗಳಿಗೆ ಮೈಸೂರಿಗೆ ಆಗಾಗ ಬರುತ್ತಿದ್ದರು. ಹಾಗೆ ಈ ದೊಡ್ಡ ಸಾಹಿತಿಗಳು ಮೈಸೂರಿಗೆ ಬರುತ್ತಾರೆ ಅನ್ನುವುದೇ ಸಾಹಿತ್ಯಾಸಕ್ತರಾದ ಹಾಗೂ  ತರುಣರಾದ ನಮಗೆ ಒಂದು ಸಂಭ್ರಮದ ಸಂಗತಿಯಾಗಿತ್ತು. ಈ ಯಾರು ಬಂದರೂ, ನಾವು ಅವರ ಕಾರ‍್ಯಕ್ರಮಗಳು ಎಲ್ಲೆಲ್ಲಿ ನಡೆಯುತ್ತವೆ ಎಂಬುದನ್ನು ಪತ್ತೆಹಚ್ಚಿ, ಅಲ್ಲಲ್ಲಿಗೆ ಹೋಗಿ, ಅವರನ್ನು ನೋಡುವುದು, ಅವರ ಮಾತುಗಳನ್ನು ಕೇಳುವುದು ನಮಗೊಂದು ರೋಮಾಂಚನಕಾರಿಯಾದ ಅನುಭವವಾಗಿತ್ತು. ಈ ಎಲ್ಲ ಸಾಹಿತಿಗಳ ಮಾತುಗಾರಿಕೆಯ ಮಧ್ಯೆ ಬೇಂದ್ರೆಯವರ ವಾಗ್ವಿಲಾಸದ ಹಾಗೆ ಮತ್ತೆ ಯಾರದೂ ಅಷ್ಟರಮಟ್ಟಿಗೆ ನಮ್ಮನ್ನು ಮರುಳುಗೊಳಿಸಲಿಲ್ಲ. ತಮ್ಮ ಕವಿತೆಯ ಮೋಡಿಯಿಂದ ಹೇಗೋ ಹಾಗೆ ತಮ್ಮ ಮಾತುಗಾರಿಕೆಯಿಂದಲೂ ಒಂದು  ಕಾಲಮಾನದ ಜನತೆಯನ್ನು ಬೇಂದ್ರೆಯವರಂತೆ ಬೆರಗುಗೊಳಿಸಿದ ಕವಿ ಕನ್ನಡದಲ್ಲಿ ಮತ್ತೊಬ್ಬರಿಲ್ಲ ಅನ್ನಿಸಿಬಿಡುವಂಥ ವ್ಯಕ್ತಿತ್ವ ಅವರದು. ಒಮ್ಮೆ ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಬೇಂದ್ರೆಯವರ ಭಾಷಣ-ಎರಡು ತಾಸು ಮುಂಗಾರಿನ ಮಳೆಯ ಹಾಗೆ. ನಾವೆಲ್ಲ ಮಂತ್ರಮುಗ್ಧರಾಗಿ ಕೂತಿದ್ದೆವು. ಆ ದಿನದ ಒಂದು ಮಾತು ಈಗಲೂ ಮನಸ್ಸಿನಲ್ಲಿ ಅಚ್ಚೊತ್ತಿದೆ. ಅವತ್ತಿನ ಹಿಂದಿನ ಸಂಜೆ ಬೇಂದ್ರೆಯವರು ಮೈಸೂರಿನ ತಮ್ಮ ಗೆಳೆಯರ ಜತೆಗೆ, ಸಮೀಪದ ಕನ್ನಂಬಾಡಿಕಟ್ಟೆ (ಕೃಷ್ಣರಾಜಸಾಗರ)ಗೆ ಹೋಗಿದ್ದರಂತೆ. ಕನ್ನಂಬಾಡಿಕಟ್ಟೆಯ ಹಿಂದೆ ನಿಂತ ವಿಸ್ತಾರವಾದ ಜಲರಾಶಿ, ಕಟ್ಟೆಯ ಕೆಳಗೆ ಪುಟಿಯುವ ಚಿಲುಮೆಗಳ ನಯನ ಮನೋಹರ ದೃಶ್ಯ, ಈ ಒಂದು ಅನುಭವವನ್ನು ಮಾತಿನ ಮಧ್ಯೆ ಒಂದು ಪ್ರತಿಮೆಯನ್ನಾಗಿ ಮಾಡಿ ಬೇಂದ್ರೆ ಹೇಳಿದರು. ನೀವೆಲ್ಲ ನನ್ನ ಭಾಷಣಾ ಕೇಳತೀರಿ ಹೌದಲ್ಲೋ. ಕವಿತಾನೂ ಕೇಳತೀರಿ. ಆದರೆ ಇದರ ಹಿಂದಕ್ಕ ಏನೇನು, ಯಾವ್ಯಾವಾಗಿಂದು ಅನುಭವಾ ಅದ ಅಂಬೋದು ನಿಮಗೆ ತಿಳಿದೀತು ಹ್ಯಾಂಗ? ಹಾಂಗ ನೋಡಿದರ ಅದು ನನಗೂ ತಿಳಿದದ ಅಂತ ತಿಳಿಕೋ ಬ್ಯಾಡ್ರಿ. (ಈ ಮಾತಿಗೆ ಸಭೆಯಲ್ಲಿ ನಗೆಯ ಅಲೆಗಳು ಎದ್ದವು) ಈಗ ನೋಡ್ರಿ ಕನ್ನಂಬಾಡಿ ಕಟ್ಟೆ ಹಿಂದ ನೀರಿನ ಎತ್ತರ ಮತ್ತ ಅದರ ಒತ್ತಡ ಎಷ್ಟದ, ಅಷ್ಟರಮಟ್ಟಿಗೆ ಈ ಕೆಳಗಿನ ಕಾರಂಜಿಗಳು ಪುಟೀತಾವ. ಈಗ ನಿಮ್ಮ ಮುಂದ ನಾನು I am marking my water level ಅಂದರು. ಬೇಂದ್ರೆಯವರ ಕವಿತೆಯ ಹಿಂದೆ ಅವರ ಮಾತುಗಾರಿಕೆಯ ಹಿಂದೆ ಇದ್ದ ಈ water level ಸದಾ ಸಮೃದ್ಧವಾದದ್ದು. ಆದರಿಂದಲೇ ಅವರ ಕವಿತೆಯಾಗಲೀ ಮಾತುಗಾರಿಕೆಯಗಾಲೀ ಪುಟಿಯುವ ಚಿಲುಮೆಯ ಲಕ್ಷಣಗಳನ್ನು ಪಡೆದುಕೊಂಡದ್ದು.

ಕನ್ನಡದ ಸಂದರ್ಭದಲ್ಲಿ ನಾವೀಗ ಮೂರು ನಾಲ್ಕು ಮುಖ್ಯ ಚಳುವಳಿಗಳ ಮೂಲಕ ಶ್ರೀಮಂತವಾದ ಆಧುನಿಕ ಸಾಹಿತ್ಯದ ಶಿಖರಸ್ಥಾನದಲ್ಲಿ ನಿಂತಿದ್ದೇವೆ ಎಂದು ಹೇಳಬಹುದು. ಈ ಚಳುವಳಿಗಳು ಅಂದಂದಿನ ಕಾಲಮಾನದ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಒತ್ತಡಗಳ ಪರಿಣಾಮವಾಗಿ ಸಾಹಿತ್ಯದ ನಿರಂತರತೆಯನ್ನು ಕಾಯ್ದುಕೊಂಡು ಬಂದ ವೇಗವರ್ಧಕಗಳಂತೆ ವರ್ತಿಸಿವೆ ಎಂಬುದನ್ನೂ, ಒಂದೊಂದು ಚಳುವಳಿಯೂ ಅದುವರೆಗೂ ಅಪರಿಚಿತವಾದ ಅನುಭವ ಪ್ರಪಂಚಗಳನ್ನು ಅನಾವರಣಗೊಳಿಸಿ, ಕನ್ನಡ ಸಾಹಿತ್ಯಕ್ಕೆ ಬೇರೆ ಬೇರೆಯ ಆಯಾಮಗಳನ್ನು ನೀಡಿವೆ ಎಂಬುದನ್ನೂ ಈಗ ನಾವು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗಿದೆ. ಈ ಎಲ್ಲ ಸಾಹಿತ್ಯ ಚಳುವಳಿಗಳ ಸಂದರ್ಭದಲ್ಲೂ ಕನ್ನಡದ ಸೃಜನಶೀಲತೆ ಪಶ್ಚಿಮದ ಹಾಗೂ ಅನ್ಯದೇಶೀಯವಾದ ಸಾಹಿತ್ಯ ಹಾಗೂ ವಿಚಾರಗಳೊಂದಿಗೆ ಮುಖಾಮುಖಿಯಾಗುತ್ತ ತನ್ನ ಪ್ರಾದೇಶಿಕತೆಯಲ್ಲಿ ಪುನರ್ಭವಗೊಳ್ಳಲು ಅಗತ್ಯವಾದ ಪ್ರೇರಣೆ-ಪ್ರಭಾವಗಳನ್ನು ಎಷ್ಟರಮಟ್ಟಿಗೆ ಬರಮಾಡಿಕೊಂಡಿತೆಂಬುದನ್ನು ಕನ್ನಡ ಸಾಹಿತ್ಯ ವಿಮರ್ಶೆ ಈಗಾಗಲೇ ತಕ್ಕಮಟ್ಟಿಗೆ ಗುರುತಿಸಿದೆ. ಭಾರತದ ಚರಿತ್ರೆಯಲ್ಲಿ ರಾಜಕೀಯ ದೃಷ್ಟಿಯಿಂದ “ವಸಾಹತುಶಾಹೀ ಸಂದರ್ಭ”ವೆಂದೂ, ಸಾಂಸ್ಕೃತಿಕವಾಗಿ ‘ಪುನರುಜ್ಜೀವನ’ (ರೀನೇಸಾನ್ಸ್) ಕಾಲವೆಂದೂ ಕರೆಯಲಾಗುವ ಈ ಕಾಲಮಾನದಲ್ಲಿ ವಿವಿಧ ಭಾರತೀಯ ಪ್ರಾದೇಶಿಕ ಸಾಹಿತ್ಯಗಳ ಹಾಗೆ ಕನ್ನಡವೂ ತನ್ನ ಗ್ರಹಿಕೆಯ ಕ್ರಮಗಳಲ್ಲಿ ಅಭಿವ್ಯಕ್ತಿ ಹಾಗೂ ತಂತ್ರಗಳಲ್ಲಿ ಬದಲಾದದ್ದಕ್ಕೆ ಕಾರಣ, ಅದು ಪಶ್ಚಿಮದ ಸಾಹಿತ್ಯದೊಂದಿಗೆ ಪಡೆದುಕೊಂಡ ಸಂಪರ್ಕ ಹಾಗೂ ಅದಕ್ಕೆ ತೋರಿದ ಸೃಜನಾತ್ಮಕ ಪ್ರತಿಕ್ರಿಯೆಗಳಲ್ಲಿದೆ ಎಂದು ಹೇಳಬಹುದು. ಹಾಗಾದರೆ ಭಾರತೀಯ ಸೃಜನಶೀಲ ಮನಸ್ಸು ಈ ಸಂದರ್ಭದಲ್ಲಿ, ತಾನು ಹೊಸತಾಗುವುದಕ್ಕೆ ಪಶ್ಚಿಮದ ಪ್ರೇರಣೆ-ಪ್ರಭಾವಗಳಿಗೆ ತೋರಿದ ಪ್ರತಿಕ್ರಿಯೆಯ ಸ್ವರೂಪವೇನು ಅನ್ನುವುದು ಸ್ವಾರಸ್ಯವಾಗಿದೆ. ಈ ಸಂಗತಿಯನ್ನು ಶ್ರೀ ಅರವಿಂದರು ಬಂಗಾಳೀ ಸಾಹಿತ್ಯದ ಪುನರುಜ್ಜೀವನದ ಹಿನ್ನೆಲೆಯಿಂದ ವಿಶ್ಲೇಷಿಸುವ ಕ್ರಮ ಗಮನಾರ್ಹವಾಗಿದೆ. ಅವರ ಪ್ರಕಾರ ಮೊದಲನೆಯದು, ಪಶ್ಚಿಮದ ಸಂಪರ್ಕ ಹಾಗೂ ಪ್ರೇರಣೆಗಳನ್ನು ಯಾವ ತಕರಾರೂ ಇಲ್ಲದೆ, ಅದು ತನ್ನ ಪುನರುಜ್ಜೀವನಕ್ಕೆ ಅಗತ್ಯ ಎಂಬಂತೆ ಸ್ವೀಕರಿಸುವ ಒಂದು ಮನೋಧರ್ಮ. ಎರಡನೆಯದು, ಪಶ್ಚಿಮದ ಪ್ರೇರಣೆಗಳನ್ನು ಪ್ರಬಲವಾಗಿ ನಿರಾಕರಿಸುತ್ತ, ತನ್ನ ದೇಶೀಯತೆಗೆ ಮರಳುವ ಒಂದು ಪ್ರವೃತ್ತಿ. ಭಾರತೀಯವಾದುದುದೆಲ್ಲವೂ, ಅದು ಭಾರತೀಯ ಎನ್ನುವ ಕಾರಣಕ್ಕೆ ಒಪ್ಪಿಕೊಳ್ಳಬೇಕೆನ್ನುವ ಮನೋಧರ್ಮ. ಮೂರನೆಯದು, ಆಧುನಿಕವಾದ ಆಶಯ ಹಾಗೂ ಆಕೃತಿಗಳ ನಿರ್ಮಾಣಕ್ಕೆ ಯಾವ ಹೊರಗಿನ ಪ್ರೇರಣೆಗಳನ್ನಾದರೂ ಅರಗಿಸಿಕೊಳ್ಳುವುದು ಅನಿವಾರ್ಯ ಎನ್ನುವ ನಿಲುವು.[1]

ಶ್ರೀ ಅರವಿಂದರು ಬಂಗಾಳಿ ಸಾಹಿತ್ಯದ ಹಿನ್ನೆಲೆಯಿಂದ ಗುರುತಿಸಿರುವ ‘ಸೃಜನಾತ್ಮಕ ಪ್ರತಿಕ್ರಿಯೆ’, ಕನ್ನಡ ಕವಿಗಳು ನವೋದಯ ಸಾಹಿತ್ಯ ಸಂದರ್ಭದಲ್ಲಿ ತೋರಿದ ಪ್ರತಿಕ್ರಿಯೆಗಳಿಗೂ ಬಹುಮಟ್ಟಿಗೆ ಅನ್ವಯಿಸುವಂತಿದೆ ಅನ್ನುವುದು ಸ್ವಾರಸ್ಯದ ಸಂಗತಿಯಾದರೂ, ನವೋದಯ ಆಚಾರ್ಯರೆಂದು ಪ್ರಶಂಸಿತರಾಗಿರುವ ಬಿ. ಎಂ. ಶ್ರೀಕಂಠಯ್ಯನವರು ಈ ಕುರಿತು ಹೇಳಿರುವ ಕೆಲವು ಮಾತುಗಳು ತುಂಬ ಮಹತ್ವದವುಗಳಾಗಿವೆ ಎಂಬುದು ನಮ್ಮ ತಿಳವಳಿಕೆಯಾಗಿದೆ. ಶ್ರೀಯವರಿಗೆ ಗೊತ್ತಿತ್ತು ಕನ್ನಡ ಸಾಹಿತ್ಯ ಪರಂಪರೆಯೊಳಗಿನ, ಅದುವರೆಗಿನ ಸಿದ್ಧರೂಪಗಳು, ಹೊಸಕಾಲದ ಸಂವೇದನೆಗಳನ್ನು ಅಭಿವ್ಯಕ್ತಿಸಲು ತೀರಾ ಅಸಮರ್ಥವಾದವುಗಳೆಂಬ ಸಂಗತಿ. ಆದ ಕಾರಣವೇ “ಇಂಗ್ಲಿಷ್ ಸಾಹಿತ್ಯವೇ ಜೀರ್ಣವಾದ ನಮ್ಮ ಕಾವ್ಯಮಾಲೆಯನ್ನು ಕೈಕೊಟ್ಟು ಎತ್ತಬೇಕು. ಇಂಗ್ಲಿಷ್ ಸಾಹಿತ್ಯವೇ ಸಂಸ್ಕೃತ ಸಾಹಿತ್ಯದಿಂದ ನಮ್ಮ  ಕಾವ್ಯಮಾಲೆಗೆ ಇಳಿದಿರುವ ದೋಷಗಳನ್ನು ಪರಿಹಾರ ಮಾಡಬೇಕು.”[2]– ಎಂದು ಇಂಗ್ಲಿಷ್ ಸಾಹಿತ್ಯದ ಪ್ರೇರಣೆ-ಪ್ರಭಾವಗಳನ್ನು ತುಂಬ ಮುಕ್ತವಾಗಿ ಸ್ವಾಗತಿಸುವ ಮಾತನ್ನಾಡುತ್ತಾರೆ. ಹಾಗಾದರೆ ಇಂಗ್ಲಿಷ್ ಸಾಹಿತ್ಯದಿಂದ ನಾವು ಪಡೆಯುವ ಪ್ರೇರಣೆ ಹೇಗಿರಬೇಕು? ನಾವು ಅದನ್ನು ಅನುಸರಿಸಬೇಕೆ, ಅನುಕರಿಸಬೇಕೆ-ಎಂಬ ಪ್ರಶ್ನೆಗಳನ್ನು ಎತ್ತಿಕೊಂಡು ಅವರು ಕನ್ನಡ ಸಾಹಿತ್ಯದ ಪುನರುಜ್ಜೀವನವನ್ನು ಹೀಗೆ ವ್ಯಾಖ್ಯಾನಿಸುತ್ತಾರೆ. ‘ಪುನರುಜ್ಜೀವನವೆಂದರೆ, ಅದು ಬರಿಯ ಪುನರುತ್ಥಾನವಲ್ಲ ಜೀರ್ಣೋದ್ಧಾರವಲ್ಲ, ಅನುಸರಣವಲ್ಲ, ಅನುಕರಣವಲ್ಲ. ಪುನರುಜ್ಜೀವನ ಏನೋ ಒಂದು ಬಗೆಯ ಧೈರ್ಯದಿಂದ ಕೂಡಿದ ವಿಚಾರ. ಹೊಸ ಹೊಸ ನಿರ್ಮಾಣ: ಮರುಹುಟ್ಟು; ಆಳವಾದ ಸಮನ್ವಯ-ಹೊಸತು ಹಳದು, ನಮ್ಮದು, ಹೆರರದು ಎಲ್ಲವನ್ನೂ ಹೊಂದಿಕೆ ಮಾಡುವುದು.’[3] ಇದು ಕನ್ನಡ ಸಾಹಿತ್ಯದ ಪುನರುಜ್ಜೀವನಕ್ಕೆ ಕನ್ನಡದ ಸೃಜನಶೀಲತೆ ಪಶ್ಚಿಮದ ಸಾಹಿತ್ಯಕ್ಕೆ ತೋರಬೇಕಾದ ಪ್ರತಿಕ್ರಿಯೆಯ ಸ್ವರೂಪವನ್ನು ಕುರಿತ ಸಮರ್ಥವಾದ ನಿರ್ದೇಶನವಾಗಿದೆ. ಈಗ ನಿಂತು ಒಮ್ಮೆ ಹೊರಳಿ ನೋಡಿದರೆ, ಇಡೀ ಹೊಸಗನ್ನಡ ಸಾಹಿತ್ಯ ಪರಂಪರೆ ತನ್ನ ವಿವಿಧ ಸಾಹಿತ್ಯ ಚಳುವಳಿಗಳ ಸಂದರ್ಭದಲ್ಲಿ ಪಶ್ಚಿಮದ ಸಾಹಿತ್ಯ ಪ್ರೇರಣೆ ಪ್ರಭಾವಗಳಿಗೆ, ತನ್ನ ಸೃಜನಾತ್ಮಕ ಪ್ರತಿಕ್ರಿಯೆಗಳ ಮೂಲಕ ‘ಪುನರುಜ್ಜೀವನ’ಗೊಂಡ ಕ್ರಮವು ಬಹುಮಟ್ಟಿಗೆ ಆಚಾರ‍್ಯ ಶ್ರೀಯವರ ನಿರ್ದೇಶನಕ್ಕೆ ಅನುಸಾರವಾಗಿಯೆ ಇದೆ ಎಂದು ತೋರುತ್ತದೆ-ಒಂದೊಂದು ಸಲ ಅಲ್ಲಲ್ಲಿ ಪಶ್ಚಿಮದ ನೆರಳು ದಟ್ಟವಾಗಿ ಕಾಣಿಸಿಕೊಂಡರೂ.[4]

ಇತ್ತೀಚಿನ ದಶಕಗಳಲ್ಲಿ ವಸಾಹತುಶಾಹೀ ಸಂದರ್ಭದ ಪರಿಣಾಮಗಳನ್ನು ಕುರಿತು ಕೆಲವು ವಿಚಾರಗಳು ಪ್ರಕಟವಾಗುತ್ತಿವೆ. ಅದೇನೆಂದರೆ, ಈ ವಸಾಹತುಶಾಹಿಯ ಕಾರಣದಿಂದ ನಾವು ನಮ್ಮ ಮೌಲಿಕವಾದ ದೇಶೀಯವಾದ ಎಷ್ಟೋ ತಿಳವಳಿಕೆಗಳಿಗೆ ಬಹುಕಾಲ ವಿಮುಖರಾದೆವು; ಅಷ್ಟೇ ಅಲ್ಲ ದೇಶೀಯವಾದ ಎಷ್ಟನ್ನೊ ಅದು ನಾಶಮಾಡಿತು. ಅಷ್ಟೇ ಅಲ್ಲ. ಇಂಥ ದೇಶೀಯವಾದ ಎಷ್ಟೋ ವಿಚಾರಗಳ ಬಗೆಗೆ ನಮ್ಮ ಬುದ್ಧಿಯ ಮೇಲೆ ಒಂದು ಮಹಾ ವಿಸ್ಮೃತಿ ಕವಿದುಕೊಂಡಿತು. ಆದಕಾರಣ ಈ ವಸಾಹತುಶಾಹಿ ಪ್ರಭಾವ ಹಾಗೂ ನೆನಪುಗಳಿಂದ ಬಿಡಿಸಿಕೊಂಡು ನಮ್ಮ ದೇಶೀಯವಾದುದರತ್ತ ಅಥವಾ ನಮ್ಮ ಬೇರುಗಳ ಕಡೆಗೆ ಹಿಮ್ಮರಳುತ್ತ ನಮ್ಮ ಅಸ್ತಿತ್ವಕ್ಕೆ ಅಗತ್ಯವಾದ ಪರ‍್ಯಾಯ ಸಂಸ್ಕೃತಿಯೊಂದನ್ನು ನಾವು ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಬೇಕಾಗಿದೆ.[5]

ಈ ವಿಚಾರಗಳ ಮೌಲಿಕತೆಯನ್ನು ಗುರುತಿಸುತ್ತಲೇ ಹೇಳಬೇಕಾದ ಮಾತೆಂದರೆ ಭಾರತೀಯ ಮನಸ್ಸು ವಸಾಹತುಶಾಹೀ  ಸಂದರ್ಭಕ್ಕೆ ತೋರಿದ ಪ್ರತಿಕ್ರಿಯೆಗಳನ್ನು ಆಳವಾಗಿ ಗ್ರಹಿಸದೆಹೋದ ಕಾರಣದಿಂದ ಈ ಬಗೆಯ ಅಭಿಪ್ರಾಯಗಳು ಹುಟ್ಟಿಕೊಂಡವೇನೋ ಎಂಬ ಗುಮಾನಿಯಿದೆ ನಮಗೆ. ಹಾಗೆಂದರೆ ವಸಾಹತುಶಾಹೀ ನಮ್ಮ ದೇಶೀಯತೆಯ ಮೇಲೆ ಯಾವ ಆಘಾತವನ್ನೂ ಮಾಡಲಿಲ್ಲ ಎಂದು ನಾವು ಹೇಳುತ್ತಿಲ್ಲ. ಅದರ ಕನ್ನಡದ ಶಕ್ತಿ ಪ್ರತಿಭೆಗಳು, ಹೊರಗಿನ ಈ ಪ್ರಭಾವಗಳನ್ನು ಅರಗಿಸಿಕೊಂಡು ತಮ್ಮ ತಮ್ಮ ಪ್ರಾದೇಶಿಕತೆಯಲ್ಲಿ ವಿಶಿಷ್ಟವಾದ ರೀತಿಯಲ್ಲಿ ಕೃತಿ ರಚನೆ ಮಾಡಿದವೆಂಬುದನ್ನು ಮಾಸ್ತಿ, ಪು.ತಿ.ನ., ಕುವೆಂಪು ಇಂಥವರ ಬರೆಹಗಳು ಸಾಬೀತುಪಡಿಸುತ್ತವೆ. ಇವರೆಲ್ಲರ ನಡುವೆ ಬೇಂದ್ರೆಯವರು ಮಾತ್ರ (ಉಳಿದವರಂತೆ ಇಂಗ್ಲಿಷ್ ಶಿಕ್ಷಣಕ್ಕೆ ಒಳಗಾದರೂ) ಪಶ್ಚಿಮದ ಪ್ರೇರಣೆ-ಪ್ರಭಾವಗಳ ಹಂಗೇ ಇಲ್ಲದವರಂತೆ, ದೇಶೀಯ ಪ್ರಜ್ಞೆಯಲ್ಲಿ ಬೇರೂರಿ ಅರಳಿಕೊಂಡ ಸಮೃದ್ಧ ಪ್ರತಿಭೆಯ ಅಭಿವ್ಯಕ್ತಿಯಂತೆ ತೋರುತ್ತಾರೆ.

ಕನ್ನಡ ಕಾವ್ಯ ಪರಂಪರೆಯಲ್ಲಿ ‘ಮಾರ್ಗ’, ‘ದೇಸಿ’  ಎಂಬ ಎರಡು ಬರೆವಣಿಗೆಯ ಕ್ರಮಗಳು ಹಾಗೂ ಮನೋಧರ್ಮಗಳು ಗುರುತಿಸಲ್ಪಟ್ಟಿವೆ.  ಮಾರ್ಗ ಎಂದರೆ ಪ್ರೌಢವೂ ಗಂಭೀರವೂ ಆದ ಭಾಷೆಯಲ್ಲಿ ಬಹುಮಟ್ಟಿಗೆ ಪರಂಪರೆಯ ಸಿದ್ಧ ಪ್ರಸಿದ್ಧ ವಸ್ತುಗಳನ್ನು ನಿರ್ವಹಿಸುವ ಕೃತಿಗಳನ್ನುಳ್ಳದ್ದು. ದೇಸಿ ಎಂದರೆ ಪ್ರಾದೇಶಿಕವೂ ಜಾನಪದೀಯವೂ ಹಾಗೂ ಜನಬಳಕೆಯ ಮಾತಿನ ರೀತಿಯನ್ನು ಬಳಸುವ ಕೃತಿಗಳನ್ನುಳ್ಳದ್ದು ಎಂದು ಸ್ಥೂಲವಾಗಿ ಹೇಳಬಹುದು. ಬೇಂದ್ರೆಯವರು ಚಾರಿತ್ರಿಕವಾಗಿ ಇಂಗ್ಲಿಷ್ ರಮ್ಯಕಾವ್ಯದ ಪ್ರೇರಣೆಯಿಂದ ರೂಪುಗೊಂಡ ಕನ್ನಡ ನವೋದಯ ಸಂದರ್ಭಕ್ಕೆ ಸೇರಿದವರಾದರೂ, ಅವರು ತಮ್ಮನ್ನು ಮುಖ್ಯವಾಗಿ ಗುರುತಿಸಿಕೊಳ್ಳುವುದು ಪಂಪ, ರನ್ನ, ರುದ್ರಭಟ್ಟರಂಥ ಮಾರ್ಗಕವಿಗಳ ಜತೆಗೆ ಅಲ್ಲ; ದೇಸೀ ಪರಂಪರೆಗೆ ಸೇರಿದ ಕುಮಾರವ್ಯಾಸನ, ವಚನಕಾರರ, ಹರಿದಾಸರ, ರತ್ನಾಕರ,  ಸರ್ವಜ್ಞರ ಮತ್ತು ಹಳ್ಳಿಯ ಹಾಡುಗಳನ್ನು ಬರೆದ ಜನಪದ ಗಾಯಕರ ಮತ್ತು ತತ್ವಪದಕಾರರ ಜತೆಗೆ. ಆದ ಕಾರಣ ಬಿ.ಎಂ.ಶ್ರೀ ಅವರು ತೆರೆದ ನವೋದಯದ ಹಿಂದಿರುವ ಇಂಗ್ಲಿಷ್ ಸಾಹಿತ್ಯದಲ್ಲಿ ಬೇಂದ್ರೆಯವರ ಸಾಹಿತ್ಯದ ಬೇರುಗಳನ್ನು ಗುರುತಿಸಲು ಪ್ರಯತ್ನಪಡುವುದು ವ್ಯರ್ಥ ಯಾಕೆಂದರೆ ಬಿ.ಎಂ. ಶ್ರೀ ಅವರ ಇಂಗ್ಲಿಷ್ ಗೀತೆಗಳ ಪ್ರಭಾವದಲ್ಲಿ ಹುಟ್ಟಿದ ನವೋದಯ ಸಂಪ್ರದಾಯಕ್ಕೂ, ಬೇಂದ್ರೆಯವರ ಕಾವ್ಯಕ್ಕೂ ಹೆಚ್ಚಿನ ಸಂಬಂಧವಿಲ್ಲ. ಬೇಂದ್ರೆಯವರ ಕಾವ್ಯದ ಬೇರುಗಳು ಆವೊಂದು ಮಜಲಿನಲ್ಲಿ ಹಾಯ್ದು ಹೋಗಿರಬಹುದು.[6] ಹಾಗೆ ಹಾಯ್ದುಹೋದ ಅವರ ಕಾವ್ಯದ ಬೇರುಗಳಿರುವುದು ಈಗಾಗಲೇ ಪ್ರಸ್ತಾಪಿಸಿದಂತೆ, ಉತ್ತರ ಕರ್ನಾಟಕದ ಸಂತರ ಶರಣರ ದಾಸರ ಹಾಗೂ ದೇಶೀ ಪ್ರಧಾನ ಕವಿಗಳ ಪರಂಪರೆಯಲ್ಲಿ. ಈ ಶತಮಾನದ ಮೂವತ್ತರ ದಶಕದಲ್ಲಿ ಹಲಸಂಗಿಯ ಮಧುರಚೆನ್ನರ ಗೆಳೆಯರ ಗುಂಪಿನವರು ಸಿದ್ಧಪಡಿಸಿದ ‘ಗರತಿಯ ಹಾಡು’ ‘ಜೀವನ ಸಂಗೀತ’ ಎಂಬ ಎರಡು, ಮೊದಲ ಜನಪದಗೀತೆಗಳ ಸಂಗ್ರಹಗಳೊಡನೆ ಬೇಂದ್ರೆಯವರಿಗಿದ್ದ ಆತ್ಮೀಯ ಸಂಬಂಧವು “ಸಾಂಸ್ಕೃತಿಕ ದೃಷ್ಟಿಯಿಂದ  ಎಷ್ಟು ಮಹತ್ವದ್ದಾಗಿತ್ತೊ, ಬೇಂದ್ರೆಯವರ ಸ್ವಂತ ಕಾವ್ಯದ ದೃಷ್ಟಿಯಿಂದಲೂ ಅಷ್ಟೇ ಮಹತ್ವದ್ದಾಗಿತ್ತು.”[7] ಹೀಗಾಗಿ ಬೇಂದ್ರೆಯವರ ಕವಿತೆಯೊಳಗಣ ಜಾನಪದ ಸತ್ವವನ್ನು ಅವರ ದೇಸೀಯಪ್ರಜ್ಞೆಯ ಲಕ್ಷಣವಾಗಿದೆ. ಈ ಜಾನಪದ ಸತ್ವವನ್ನು ತಮ್ಮ ಕಾವ್ಯಭಾಷೆಗೆ ತಂದುಕೊಂಡ ಕ್ರಮವನ್ನು ಅವರೇ ತಮ್ಮ  ‘ಗರಿ’ (೧೯೩೨)  ಕವನ ಸಂಗ್ರಹದ ಮುನ್ನುಡಿಯಲ್ಲಿ ಹೀಗೆ ಹೇಳಿಕೊಂಡಿದ್ದಾರೆ: “ಇಲ್ಲಿ ತುಂಗಭದ್ರೆಯ ಉತ್ತರಾಪಥದ ದೇಶೀಯ ಮಾರ್ಗವನ್ನು ಹುಡುಕುವ ಹಾಗೂ ಹುಟ್ಟಿಸುವ ಕುರುಹಿದೆ.” ಈ ಉಕ್ತಿಯೊಳಗಣ ‘ದೇಶೀಯ ಮಾರ್ಗ’ ಎನ್ನುವ ನುಡಿಗಟ್ಟಿನೊಳಗಣ ಚಮತ್ಕಾರವೂ ಗಮನಿಸತಕ್ಕದ್ದಾಗಿದೆ. ಅಷ್ಟೇ ಅಲ್ಲ, ಸ್ಪಷ್ಟವಾಗಿ ಅವರು ತಾವು ಯಾವ ಅಭಿವ್ಯಕ್ತಿ ಪರಂಪರೆಗೆ ಸೇರಿದವರೆಂಬುದನ್ನು, ತಮ್ಮನ್ನು ಪ್ರಭಾವಿಸಿದ ಛಂದೋಲಯಗಳು ಯಾವುವೆಂಬುದನ್ನು ಕುರಿತು ಪ್ರಾಸಂಗಿಕ ಉಲ್ಲೇಖಗಳು ಅವರ ಕವಿತೆಗಳೊಳಗೆ ಅಲ್ಲಲ್ಲಿ ದಾಖಲಾಗಿವೆ. ‘ಮತ್ತೆ ಶ್ರಾವಣಾ ಬಂತು’ (೧೯೭೩)-ಎಂಬ ಸಂಕಲನದಲ್ಲಿ, ಸಖೀಗೀತ ಹಿಂದಿನ ಬಾಲಕಾಂಡದಲ್ಲಿ-

ಶಾಂತಕವಿ ಸಕ್ಕರಿ ಕಾವ್ಯಾನಂದರ ಝರಿ
ಲಾವಣಿ ಸಾಂಗತ್ಯ ಹುಡುಕಾಡಿದೆ
ಕೋಲು ಹಾಡುಗಳನ್ನು ಹಾಡಿಸಿ ದಣಿಸಿದೆ
ಅಂಬಿಕೆಯ ನಂಬಿಕೆಯ ನಾ ಕಾಡಿದೆ

ದಾಸರ ಪದಗಳು ಪುರಾಣ ವಾಚನ
ಪಾರಿಜಾತದ ಹಾಡು ಹಗಲಿರುಳು
ಹಾಡುವುದೆ ಚಟವಾಗಿ ಹಾಳಿ-ಹಡಗಕ್ಕಾಗಿ
ಗಾಳಿಗೆ ಪಟವಾಗಿ ಏರಿಸಿದ್ದೆ

ಎಂದು ಹೇಳಿಕೊಂಡಿದ್ದಾರೆ. ಇದಕ್ಕೂ ಮೊದಲಿನ ‘ಸಖೀಗೀತ’ (೧೯೩೭)ದಲ್ಲಿ

ಛಂದೋಗತಿಯ ಚಂದ ತಾಳ-ಲಯಾನಂದ
ಸ್ವಚ್ಛಂದ ಬಂಧವ ಕಲಸಿದವು
ನಾಡ ಬಳಕೆಯ ನುಡಿಗೆ ಸೋತಿದ್ದ ಮನವನ್ನು
ಹಾಡಿನ ಮೋಡಿಗೆ ಒಲಿಸಿದವು.

ಎನ್ನುತ್ತಾರೆ. ಇದು ಬೇಂದ್ರೆಯವರು ತಮ್ಮ ಕಾವ್ಯದ ಹಿಂದಿನ ಪ್ರೇರಣೆಗಳನ್ನು ಹಾಗೂ ತಮ್ಮ ಕಾವ್ಯದ ಭಾಷೆಗಾಗಿ ನಡೆಯಿಸಿದ ಹುಡುಕಾಟವನ್ನು ಸೂಚಿಸುತ್ತದೆ. ಸಂಸ್ಕೃತಿಯ ಮುಖ್ಯ ಪ್ರವಾಹದಿಂದ ಹೊರತಾದ, ಈ ದೇಸೀಯ ಜಾನಪದ ಸತ್ವದೊಂದಿಗೆ ಬೇಂದ್ರೆಯವರು ಬೆಸೆದುಕೊಂಡದ್ದರಿಂದಲೇ, ‘ನಾಡಬಳಕೆಯ’ ನುಡಿಯನ್ನು ಹಾಡಿನ ಮೋಡಿಗೆ ಅವರು ಪರಿವರ್ತಿಸಲು ಸಾಧ್ಯವಾಯಿತು. ಆದರೆ ಅದು ಅಷ್ಟೇ ಅಲ್ಲ, ಬೇಂದ್ರೆಯವರ ಕವಿತೆ ಭಾಷೆಯ ಬೇರೆ ಬೇರೆ ಸ್ತರಗಳನ್ನೂ ಸ್ಮೃತಿಗಳನ್ನೂ ತನ್ನಲ್ಲಿ ಒಳಗೊಳ್ಳುವಷ್ಟು ವೈವಿಧ್ಯತೆಯಿಂದ ಕೂಡಿದೆ. ನಗರ ಭಾಷೆ, ಗ್ರಾಮಭಾಷೆ, ಅಚ್ಚಗನ್ನಡ, ಸಂಸ್ಕೃತ ಭೂಯಿಷ್ಠ ಕನ್ನಡ ಈ ಎಲ್ಲವನ್ನು ಬಳಸಿಕೊಳ್ಳುತ್ತ ಕನ್ನಡ ಭಾಷೆಯ ಪಾರಂಪರಿಕ ಸ್ಮರಣೆಗಳನ್ನು ಶ್ರವಣಗೋಚರವನ್ನಾಗಿಸುವ ಸಾಮರ್ಥ್ಯವನ್ನು ಪ್ರಕಟಿಸುತ್ತದೆ.

ಬೇಂದ್ರೆಯವರ ದೇಶೀನಿಷ್ಠ ಅಭಿವ್ಯಕ್ತಿಯ ಮತ್ತೊಂದು ಸ್ವಾರಸ್ಯವೆಂದರೆ, ಅದು ಒಂದೆಡೆ ಜಾನಪದ ಹಾಡುಗಾರರ ಪರಂಪರೆಗೆ ಜೋಡಿಸಿಕೊಂಡಂತೆ, ಇದೇ ದೇಸೀ  ಪರಂಪರೆಯ ಸಂತರ-ಶರಣರ-ಭಕ್ತಿಕವಿಗಳ ‘ಅನುಭಾವ’ದೊಂದಿಗೆ ತನ್ನನ್ನು ಕೂಡಿಸಿಕೊಳ್ಳುತ್ತದೆ. ಈ ದೇಶದ ಸಂತರ ಅಭಿವ್ಯಕ್ತಿಗಳಲ್ಲಿ ಕಂಡುಬರುವ ಒಂದು ವಿಶಿಷ್ಟತೆಯೆಂದರೆ, ಅವರು ತಮ್ಮ ಹಾಡುಗಳ ಅಥವಾ ಉಕ್ತಿಯ ತುದಿಗೆ ಬಳಸುವ ಅಂಕಿತಗಳು. ಈ ಅಂಕಿತ ಅವರವರ ಇಷ್ಟದೈವದ್ದಾಗಿರಬಹುದು, ಗುರುವಿನದಾಗಿರ ಬಹುದು ಅಥವಾ ಕೆಲವು ವೇಳೆ ತಮ್ಮ ನಿಜನಾಮವೇ ಆಗಿರಬಹುದು. ಬೇಂದ್ರೆಯವರು ತಮ್ಮ ಕವಿತೆಗಳಲ್ಲಿ ನಿಯತವಾಗಿ ಅಲ್ಲದಿದ್ದರೂ, ಪ್ರಾಸಂಗಿಕವಾಗಿ ಬಹುವೇಳೆ ಬಳಸುವ ‘ಅಂಬಿಕಾತನಯದತ್ತ’ ಎಂಬ ಅಂಕಿತವು ಸಂತರ-ಶರಣರ-ದಾಸರ ಅನುಭಾವ ಕಾವ್ಯದೊಂದಿಗೆ ಇರುವ ಸಂಬಂಧವನ್ನು ಸೂಚಿಸುತ್ತದೆ. ಬಹುಶಃ ವಚನಕಾರರಿಂದ ಕರ್ನಾಟಕದಲ್ಲಿ ಪ್ರಾರಂಭವಾದ, ‘ಅಂಕಿತ’ವನ್ನು ತಮ್ಮ ಅಭಿವ್ಯಕ್ತಿಯ ತುದಿಗೆ ಬಳಸುವ ಪದ್ಧತಿ, ಆನಂತರ ದಾಸರಲ್ಲಿ, ತತ್ವಪದಕಾರರಲ್ಲಿ ಹಾಗೂ ಉತ್ತರ ಭಾರತದ ಭಕ್ತಿಪಂಥಗಳವರ ಗೀತಗಳಲ್ಲಿ-ವ್ಯಾಪಕವಾಗಿ ಬಳಕೆಗೆ ಬಂದಿತೆಂಬುದನ್ನು ಗಮನಿಸಬಹುದು:

‘ಸವಿರಾಗ ಬೆರಸಿದೀ ಉಸಿರು
ಇದಕ ಯಾ ಹೆಸರು?
ಇದಕ ಯಾ ಹೆಸರು
ಅಂಬಿಕಾತನಯನ ಹಾಡ
ಬೆಳುದಿಂಗಳಾ ನೋ
s

‘ಅಂಬಿಕಾತನಯನ ಜಂಬದ ಪಾಡಳಿದು
ನಂಬಿಕೆಯ ಹಾಡಾಗಿ ಬಂತಿಲ್ಲಿಗೆ’

‘ಅಂಬಿಕಾತನಯ ಕಟ್ಟಿದ ಕಗ್ಗ
ಜಗ್ಗಬೇಡ ಹಿಗ್ಗಾಮುಗ್ಗ’

‘ಅಂಬಿಕಾತನಯನತ್ತೆ ಬಾ’

‘ಅಂಬಿಕಾತನಯನ ನಂಬಿಗೆಗೀಡಾದ
ನಿಜಗುಣದಲಿ ಬೆರೆದು ಕೋಗಿಲೆ’

ಹೀಗೆ ಇನ್ನೂ ಸಾಕಷ್ಟು ಉಕ್ತಿಗಳು ಕಂಡುಬರುತ್ತವೆ. ಈ ಅಂಕಿತದೊಳಗಣ ‘ಅಂಬಿಕೆ’ ಬೇಂದ್ರೆಯವರ ತಾಯಿಗೆ ಸಂಬಂಧಿಸಿದ್ದು. ಈ ಅಂಕಿತ ಮುಖ್ಯವಾಗಿ ಬೇಂದ್ರೆಯವರಿಗೆ ತಮ್ಮ ಹೆತ್ತತಾಯಿಯ ಬಗೆಗಿನ ಪ್ರೀತಿ-ಗೌರವಗಳ ಸಂಕೇತವಾದರೂ, ಅದು ಅಂತಿಮವಾಗಿ ತಾಯ್ತನದ ಬಗ್ಗೆ ಬೇಂದ್ರೆಯವರಿಗಿರುವ ಶ್ರದ್ಧೆಯಾಗಿ ಅವರ ಕಾವ್ಯದ ಮೂಲಸೆಲೆಯಾಗಿ ನಿಂತಿದೆ. ಈ ಜಗತ್ತನ್ನು ಹಿಡಿದು ನಡೆಯಿಸುವ ಮಾತೃಶಕ್ತಿಯೊಂದು ತನ್ನನ್ನು ಹಿಡಿದು ನಡೆಸುತ್ತ ಪೊರೆಯುತ್ತಿದೆ ಎಂಬ ಒಂದು ಭಾವನೆ ಅವರ ಕಾವ್ಯಶ್ರದ್ಧೆಯ ಸ್ಥಾಯಿಯಾಗಿದೆ. ಈ ‘ತಾಯಿ’ ಮೊದಲ ನೆಲೆಯಲ್ಲಿ ತನ್ನ ಹೆತ್ತತಾಯಿಯಾಗಿ, ಅರವಿಂದಾಶ್ರಮದ ‘ಮದರ್’ಅನ್ನೂ ಒಳಕೊಂಡು ಒಂದು ವಿಶ್ವವ್ಯಾಪಕವಾದ ಚೈತನ್ಯವೆಂಬಂತೆ ಭಾವಿತವಾಗಿ ಅಭಿವ್ಯಕ್ತಿಯನ್ನು ಪಡೆದುಕೊಂಡಿದೆ. ಬೇಂದ್ರೆಯವರು ತಮ್ಮನ್ನು ತಾವು ‘ಐದು ಐದೆ’ಯರ (ಐದು ತಾಯಂದಿರ) ಮಗನೆಂದು ಒಂದೆಡೆ ಘೋಷಿಸಿಕೊಳ್ಳುತ್ತಾರೆ. ಮೊದಲಿನವಳು ವಿಶ್ವಮಾತೆ, ಎರಡನೆಯವಳು ಭೂಮಿ ತಾಯಿ, ಮೂರನೆಯವಳು ಭರತಮಾತೆ, ನಾಲ್ಕನೆಯವಳು ಕನ್ನಡ ತಾಯಿ, ಐದನೆಯವಳು ತಮ್ಮ ಹೆತ್ತ ತಾಯಿ.[8] ಯಾವ ಪ್ರೀತಿ ಮೊದಲು ಈ ಲೋಕದಲ್ಲಿ ಮೊಲೆಹಾಲಿನ ಧಾರೆಯನ್ನು ಹುಡುಕುತ್ತ ಬಂದು ಹೆತ್ತತಾಯಿಯನ್ನು ಕಂಡುಕೊಂಡಿತೋ, ಅದು  ಅನಂತರ ವಿಶ್ವವ್ಯಾಪಕವಾಗಿ ಹಬ್ಬಿಕೊಂಡ ಬಗೆ ಆಶ್ಚರ್ಯಕರವಾಗಿದೆ. ಈ ತಾಯಿಯ ಬಗ್ಗೆ-

ತಾಯೆ ಮಾಯೆ ಅಂಬಿಕೆಯೇ
ನಿನ್ನ ತನಯ ದತ್ತನು,
ನೀನು ಇತ್ತುದಿತ್ತನು
ನಿನ್ನ ಹೆಸರಿನಲ್ಲಿ ನಾವು ಬರೆವುದೇನು ಸೋಜಿಗ
ತಿಳಿಯಲಾರದೀ ಜಗ

ಎಂದು ಕವಿ ಆ ಮಾತೃಶಕ್ತಿಯ ಮಹಿಮೆಯನ್ನು ಎತ್ತಿಹಿಡಿಯುತ್ತಾರೆ. ಅಷ್ಟೇ ಅಲ್ಲ, ‘ಪಾತಾಳ ಕಂಡರೇನು| ಆ ತಾಯಿ ಬಿಡುವಳೇನು’ ಎಂಬ ನಂಬಿಕೆಯೂ ಅವರನ್ನು ಹೊಯ್ದಾಡದಂತೆ ನಡೆಯಿಸುತ್ತದೆ. ಅಷ್ಟೇ ಅಲ್ಲ, ಸಮಸ್ತ ಭೌಗೋಳಿಕ ವಿಸ್ತಾರವೂ ನಿಸರ್ಗವೂ ಬೇಂದ್ರೆಯವರಲ್ಲಿ ತಾಯ್ತನದ ಪ್ರತೀಕಗಳಲ್ಲಿ ವರ್ಣಿತವಾಗಿದೆ.  ಧಾರವಾಡ ಧಾರವಾಡದ ತಾಯಿಯಾಗುತ್ತಾಳೆ.  ಹಗಲು-ಇರುಳು ಹಾಗೂ ಋತುಗಳೂ ‘ಹಗಲವಳು| ಇರುಳವಳು| ಬೆಳಕು ನೆಳಲಿನವಳು’, ‘ಮಳೆಯಾಕೆ ಚಳಿಯಾಕೆ| ಬೆಳೆಯಾಕೆ| ಬಿಸಿಲಾಕೆ’ಯಾಗಿ ಗೋಚರಿಸುತ್ತವೆ. ‘ಬಿತ್ತಿದರೆ ಕಾಳು ಹನಿಹನಿಯಾಗಿ| ಬರ‍್ತಾಳ ತಾಯಿ ತೆನೆತೆನೆಯಾಗಿ’ ಎಂಬ ಉಕ್ತಿಯಲ್ಲೂ ಈ ನೆಲದ ಫಲವಂತಿಕೆಯ ಹಿಂದಿರುವ ತಾಯ್ತನದ ಸೃಜನಶೀಲತೆಯನ್ನು ಬೇಂದ್ರೆ ಗುರುತಿಸುತ್ತಾರೆ. ಬೇಂದ್ರೆ ಮನುಷ್ಯನ ನಾಗರಿಕತೆಯನ್ನು ವಿಶ್ಲೇಷಿಸುವಾಗಲೂ ಮಾತೃಶಕ್ತಿಯ ಪ್ರಧಾನ ಮೌಲ್ಯಗಳನ್ನು ಮೂಲ ಮಾನವನ್ನಾಗಿರಿಸಿಕೊಂಡು ನೋಡುತ್ತಾರೆ. ಅವರ ‘ಮೊದಲ ಗಿತ್ತಿ’, ‘ಚಿಗುರಿಗಂಗಳ ಚೆಲುವಿ’ ಈ ಭೂಮಿಗೀತಗಳನ್ನು ಈ ದೃಷ್ಟಿಯಿಂದ ನೋಡಬೇಕು. ಕಾವ್ಯನಿರ್ಮಿತಿಗೆ ಮೂಲವಾದ ಪ್ರತಿಭಾತತ್ವವನ್ನು ತಾಯ್ತನದ ಪ್ರತೀಕದಲ್ಲಿ ಬೇಂದ್ರೆ ವರ್ಣಿಸಿದ ರೀತಿ ಹೀಗಿದೆ:

ಹಾಸಾದ ಮಿಂಚಿನಂದ
ಬೀಸಿದ್ದ ಸೆರಗಿನಿಂದ
ಸೆಳೆದಂತೆ ಎರಡು ನೂಲು
ಉಳಿದಾವ ನಾಕು ಸಾಲು

ಇದೊಂದು ಅದ್ಭುತವಾದ ಕಲ್ಪನೆ. ಮಗುವಿಗೆ ತಾಯಿ ತನ್ನ ಸೀರೆಯ ಸೆರಗನ್ನು ಹೊದಿಸಿ ಪಕ್ಕದಲ್ಲಿ ಮಲಗಿಸಿಕೊಳ್ಳುತ್ತಾಳೆ. ಮಗು ತನ್ನ ಪುಟ್ಟ ಕೈಗಳಿಂದ ಆ ಸೀರೆಯ ಸೆರಗನ್ನು ಹಿಡಿದುಕೊಂಡು ಮಲಗಿರುತ್ತದೆ. ಮಗುವಿಗೆ ನಿದ್ದೆಹತ್ತಿದಾಗ ಯಾವಾಗಲೋ ಎದ್ದು ತನ್ನನ್ನು ಮನೆಗೆಲಸದಲ್ಲಿ ತೊಡಗಿಸಿಕೊಳ್ಳುತ್ತಾಳೆ. ಹಾಗೆ ಆಕೆ ಎದ್ದು ಹೋಗುವಾಗ ಮಗುವಿನ ಕೈಯಲ್ಲಿ ಆ ತಾಯಿಯ ಸೀರೆಯ ನಾಲ್ಕಾರು ನೂಲು ಉಳಿದುಕೊಳ್ಳುತ್ತವೆ. ಪ್ರತಿಭೆಯ ತಾಯಿ ತನ್ನ ಉಜ್ವಲವಾದ ಮಿಂಚಿನ ಸೆರಗನ್ನು ಕವಿಯ ಮೇಲೆ ಬೀಸಿದಾಗ, ಕವಿಯ ಪಾಲಿಗೆ ಉಳಿದುಕೊಳ್ಳುವುದು ‘ನಾಕು ಸಾಲು’ ಮಾತ್ರ! ಬೇಂದ್ರೆಯವರ ಇಡೀ ಕಾವ್ಯದ ತುಂಬ ಅವರ ಪ್ರಜ್ಞೆಯನ್ನು ಆವರಿಸಿಕೊಂಡ ಮಾತೃಶಕ್ತಿಯ ಹುಡುಕಾಟವನ್ನು ಗುರುತಿಸಬಹುದು. “ನಮ್ಮ ಸಂಸ್ಕೃತಿಯಲ್ಲಿ ಮಾತೃಶಕ್ತಿಯ ಮಿಥ್‌ನ ನೆಲೆಗಳು ಹರಪ್ಪಾ ಮೊಹೆಂಜೋದಾರೋದಷ್ಟು ಹಿಂದೆ ಕಂಡುಬರುತ್ತವೆ.”[9] ಅಷ್ಟೇ ಅಲ್ಲ, “ಭಾರತೀಯ ಮನಸ್ಸು ಅತ್ಯಂತ ಉತ್ಕಟವಾಗಿ ಸ್ಪಂದಿಸುವುದು ಈ ತಾಯಿ ತತ್ವದ ವಿವಿಧ ಅಭಿವ್ಯಕ್ತಿಗಳಿಗೆ.”[10] ತಾಯ್ತನದ ಪರವಾದ ಈ ಶ್ರದ್ಧೆ, ಈ ಕೃಷಿ ಪ್ರಧಾನವಾದ ದೇಶದ ಬಹುಸಂಖ್ಯಾತರಾದ ಮಣ್ಣಿನಮಕ್ಕಳ ಶ್ರದ್ಧೆಯೂ ಹೌದು. ಈ ಮಣ್ಣಿನ ಮಕ್ಕಳ ಅಭಿವ್ಯಕ್ತಿಯಾದ ಜನಪದ ಗೀತೆಗಳ ತುಂಬ ಕೀರ್ತಿತವಾಗಿರುವುದು ತಾಯ್ತತನದ ಬಗ್ಗೆ ಅವರಿಗಿರುವ ಪ್ರೀತಿ-ಶ್ರದ್ಧೆ-ಗೌರವಗಳೇ. ಈ ದೃಷ್ಟಿಯಿಂದ ಬೇಂದ್ರೆಯವರಿಗಿರುವ ದೇಸೀಯ ಬಗೆಗಿನ ಒಲವನ್ನು ಡಾ. ಎಚ್.ಎಸ್. ರಾಘವೇಂದ್ರರಾವ್ ಅವರು ಬೇಂದ್ರೆಯವರ ಕುಟುಂಬದ ಸ್ತ್ರೀಪೋಷಿತ ಪರಿಸರದ ಫಲಿತ ಎಂದು ಗುರುತಿಸುತ್ತ, “ಬೇಂದ್ರೆಯವರು ವೇದಪಂಡಿತರ ಮನೆತನಕ್ಕೆ ಸೇರಿದವರಾದರೂ, ಅವರ ಕಿವಿಯಮೇಲೆ ಬಿದ್ದದ್ದು ಹಾಡುಗಳೇ ವಿನಾ ಮಂತ್ರಗಳಲ್ಲ. ಈ ಹಾಡುಗಳ ಹಿಂದೆ ಇದ್ದವರು ಹೆಣ್ಣುಗಳು, ಹರಿದಾಸರು, ಸಂತರು, ಶರಣರು. ಇವರೆಲ್ಲ ಬೇಂದ್ರೆಯವರ ಅಂತರಂಗದ ಭಾಗವಾಗಿದ್ದು, ಈ ವಾತಾವರಣದಿಂದಲೇ.”[11] ಎಂದು ಹೇಳುವ ಮಾತು ತುಂಬ ಗಮನಾರ್ಹವಾದದ್ದು ಮತ್ತು ವಿಚಾರಣೀಯವಾದದ್ದು.

ಬೇಂದ್ರೆಯವರು ತಮ್ಮ ಕವಿತೆಗಳ ಕೊನೆಗೆ ಪ್ರಾಸಂಗಿಕವಾಗಿ ತರುವ ‘ಅಂಬಿಕಾತನಯದತ್ತ’ ಎಂಬ ಅಂಕಿತವು ಅವರ ಕಾವ್ಯನಾಮವೂ ಹೌದು. ವಾಸ್ತವವಾಗಿ ಅವರ ಇಡೀ ಕಾವ್ಯ ಪ್ರಕಟಗೊಂಡಿರುವುದು ಈ ಹೆಸರಿನಿಂದಲೇ. ಹೀಗೆ ಲೋಕ ವ್ಯವಹಾರದ ಹೆಸರಿಗಿಂತ ಭಿನ್ನವಾದ ಕಾವ್ಯನಾಮವನ್ನು ತಮ್ಮ ಅಭಿವ್ಯಕ್ತಿಯ ಸಂದರ್ಭದಲ್ಲಿ ಬಳಸುವುದರ ಮೂಲಕ ತಮ್ಮ ಕಾವ್ಯವ್ಯಕ್ತಿತ್ವವನ್ನು ಲೋಕವ್ಯಕ್ತಿತ್ವದಿಂದ ಬೇರೆ ಎಂಬಂತೆ ಅವರು ವ್ಯಾಖ್ಯಾನಿಸುತ್ತಾರೆ. ಅವರ ಪ್ರಕಾರ ಬೇಂದ್ರೆ ಮಾಸ್ತರ ಬೇರೆ, ಅಂಬಿಕಾತನಯದತ್ತ ಬೇರೆ; “ತಮ್ಮೊಳಗಿನ ‘ಅಂಬಿಕಾತನಯದತ್ತ’ನು ಹೇಳಿದ್ದನ್ನು ಬೇಂದ್ರೆ ಬರೆದುಕೊಳ್ಳುತ್ತಾರೆ ಎಂದು ಬೇಂದ್ರೆಯವರು ಒಮ್ಮೊಮ್ಮೆ ಹೇಳುತ್ತಿದ್ದರು”[12] ಎಂದು ಕುರ್ತುಕೋಟಿಯವರು ನೆನಪುಮಾಡಿಕೊಳ್ಳುತ್ತಾರೆ. ಇದು ಭಕ್ತಕವಿಗಳ ಅಹಂನಿರಸನದ ವಿನಯದ ನಿಲುವು-‘ವೀರ ನಾರಾಯಣನೆ ಕವಿ ಲಿಪಿಕಾರ ಕುಮಾರವ್ಯಾಸ’ ಎಂದ ಹಾಗೆ. ತನ್ನ ವ್ಯಕ್ತಿತ್ವವನ್ನು ಬೇರೊಂದು ಶಕ್ತಿಯ ಉಪಕರಣವೆಂದು ಭಾವಿಸುವ ಅಹಂನಿರಸನ ಕಾವ್ಯತತ್ವ ಇದು. ಆದ್ದರಿಂದಲೆ-

ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ

ಎಂಬ ಮಾತಿನಲ್ಲಿ ‘ಪಾಡು’ ಮತ್ತು ‘ಹಾಡು’ ಗಳಿಗಿರುವ ವ್ಯತ್ಯಾಸವನ್ನೂ ಆ ಎರಡೂ ನೆಲೆಯ ವ್ಯಕ್ತಿತ್ವವೇ ಬೇರೆ ಎಂಬುದನ್ನೂ ಅವರು ಸೂಚಿಸುತ್ತಾರೆ. ಕವಿ ಒಬ್ಬ ಲೋಕವ್ಯಕ್ತಿಯಾಗಿ ಅನುಭವಿಸುವ ‘ಪಾಡು’ಗಳನ್ನು ಅವನ ಕವಿವ್ಯಕ್ತಿತ್ವ ‘ಹಾಡು’ಗಳನ್ನಾಗಿ ಪರಿವರ್ತಿಸುತ್ತದೆ. ಟಿ. ಎಸ್. ಇಲಿಯಟ್ ಈ ಕುರಿತು The man who suffers, and the mind which creates ಎಂದು ಒಂದೆಡೆ ಹೇಳುತ್ತಾನೆ. ‘ಪಾಡು’-ದೈನಂದಿನ ಲೋಕಜೀವನದ ಅನುಭವಗಳಲ್ಲಿ ತಲ್ಲಣಗೊಳ್ಳುವ ಮನುಷ್ಯ ; ಭವಲೋಕದ ಅನುಭವಗಳ ಸಂಘರ್ಷದ ಸ್ವರೂಪವೇ ಅದು. ಆದರೆ ಈ ಅನುಭವಗಳನ್ನು ಈ ಭವದಿಂದ ಎತ್ತಿ ಕವಿಯ ಭಾವವನ್ನಾಗಿ ಪರಿವರ್ತಿಸಿಕೊಂಡಾಗಲೇ ‘ಪಾಡು’ ಹಾಡಾಗಿ ಮೂಡುತ್ತದೆ. ಬೇಂದ್ರೆ ಬೇರೊಂದೆಡೆ ‘ಪಟ್ಟ ಪಾಡೆಲ್ಲವು ಹುಟ್ಟು ಹಾಡಾಗುತ, ಹೊಸವಾಗಿ ರಸವಾಗಿ ಹರಿಯುತಿವೆ’ ಎಂಬ ಉಕ್ತಿಯಲ್ಲಿ ಇದೇ ಅನುಭವವನ್ನು ಇನ್ನೂ ಪರಿಣಾಮಕಾರಿಯಾಗಿ ಹೇಳುತ್ತಾರೆ. ಬೇಂದ್ರೆ ಎತ್ತಿ ಹಿಡಿಯುವುದು ಈ ಅಹಂನಿರಸನ ಕಾವ್ಯತತ್ವವನ್ನೆ. “ಬೇಂದ್ರೆಯವರ ಕಾವ್ಯದಲ್ಲಿ ವ್ಯಕ್ತಿನಿಷ್ಠೆಗೆ ಹೆಚ್ಚಿನ ಬೆಲೆ ಇಲ್ಲ. (ಯಾಕೆಂದರೆ) ಅವರ ಕಾವ್ಯ ವ್ಯಕ್ತಿತ್ವದ ಅಭಿವ್ಯಕ್ತಿ ಅಲ್ಲ.”[13]

ಈ ಬಗೆಯ ವ್ಯಕ್ತಿ ನಿರಪೇಕ್ಷಕ ನಿಲುವು ವಿಶೇಷವಾಗಿ ಅಭಿವ್ಯಕ್ತವಾಗುವುದು ಭಕ್ತಕವಿಗಳಲ್ಲಿ. ಬೇಂದ್ರೆಯವರು ಈ ಭಕ್ತಕವಿಗಳಿಂದ ಪಡೆದ ಪ್ರೇರಣೆ ಕಡಿಮೆಯಾದುದೇನಲ್ಲ. ಅವರ ಎಷ್ಟೋ ಕವಿತೆಗಳ ಉಕ್ತಿಕ್ರಮ ಹಾಗೂ ಛಂದೋಲಯಗಳಲ್ಲಿ ಭಕ್ತಿಕಾವ್ಯದ ಅನುರಣನವನ್ನು ನಾವು ಗುರುತಿಸಬಹುದು. ನಿದರ್ಶನಕ್ಕೆ ಗರಿ ಸಂಕಲನದೊಳಗಿನ ಅವರ ‘ಕೋಗಿಲೇ ಚೆಲ್ವ ಕೋಗಿಲೆ’, ‘ಅಂಬಿಕಾತನಯನ ನಂಬಿಗೆಗಿಂಬಾದ ನಿಜಗುಣದಲಿ ‘ಬೆರೆತ ಕೋಗಿಲೆ’ ಎಂದು ಮುಕ್ತಾಯವಾಗುತ್ತ ನಿಜಗುಣ ಶಿವಯೋಗಿಗಳ  ಅದೇ ಹೆಸರಿನ ಗೀತೆಯನ್ನು ನೆನಪಿಗೆ ತರುತ್ತದೆ-’

‘ಮಾತಾಡು ಮಾತಾಡು ಲಿಂಗವೇ
ನೀ ಮಾತಾಡಲೊಲ್ಲ್ಯಾಕೋ ಲಿಂಗವೇ’

‘ಗಗನದಾಗ ನೀ ಕುಂತಿ
ಬಿಚ್ಚೋದ್ಹ್ಯಂಗ ಇಲ್ಲಿ ಕಂತಿ
ಸುಮ್ಮನ, ಸುಷ್ಮಮ್ನನ ನಿಂತೀ ಗುರುವೆ’
‘ಒಲೀ ಹೊತ್ತಿಸಬೇಕಮ್ಮ
ಅಡಿಗೀ ಮನಿಯೊಳಗ
ಅನ್ನಾ ಎಡೀ ಮಾಡಬೇಕು
ಅನ್ನದಾನೀಶ್ವರಗ’

ಇಂಥ  ಕೆಲವು ಅಭಿವ್ಯಕ್ತಿಗಳು ಬೇಂದ್ರೆಯವರವೋ ಅಥವಾ ಅವರಿಗೂ ಹಿಂದಿನ ತತ್ವಪದಕಾರರವೋ ಎಂಬ ಭ್ರಮೆಯನ್ನು ಹುಟ್ಟಿಸುವಂತೆ, ಆ ಭಕ್ತಿಕಾವ್ಯದೊಂದಿಗೆ ಸಾಮ್ಯವನ್ನು ಪಡೆದುಕೊಂಡಿವೆ. ಬೇಂದ್ರೆಯವರ ‘ತುತ್ತಿನ ಚೀಲ’ ಎಂಬ ಕವಿತೆಯ ಲಯಗಾರಿಕೆಯನ್ನು ಅಲ್ಲಮನ ಒಂದು ವಚನದ ಲಯದೊಂದಿಗೆ ಇರಿಸಿ ನೋಡೋಣ:

ಮುಗಿಲೆಂಬುವುದು ಕಿಸಿದಿತು ಹಲ್ಲು ಪುರಾಣವೆಂಬುದು ಪುಂಡರ ಗೋಷ್ಠಿ
ಬಂದಾ ಬೆಳೆಯುವ ಮಿಡಿಚಿಯ ಮೇವು  ಶಾಸ್ತ್ರವೆಂಬುದು ಸಂತೆಯ ಮಾತು
ನರಗಳ ನೂತನ ಪರೆಪರೆಚೀಲಾ                    ತರ್ಕವೆಂಬುದು ತಗರ ಹೋರಟೆ

ಈ ಎರಡರ ನುಡಿಗಾರಿಕೆ ಒಂದೇ ಬಗೆಯಾಗಿದೆ. ಬೇಂದ್ರೆಯವರ ‘ಸಂಜೆಯ ಜಾವಿಗೆ’ ಎಂಬ ಕವಿತೆಯೊಳಗಿನ-

ಸಂಜೆಯ ಜಾವಿಗೆ ಹೊರಟಿದಿ ನೀರಿಗೆ
ಗುಲಬಾಕ್ಷಿ ಮಲ್ಲಿಗೆ ಕೇಳ್ಯಾವೊ ಕಲ್ಲಿಗೆ
ಕಳಿಸೋದೆ ನೀರಿಗೆ ಇಂಥ ಸುಕುಮಾರಿಗೆ
ಚಾಚ್ಯವಂಗಾಲಿಗೆ ಮುಚ್ಚಂಜೆ ನಾಲಿಗೆ

ಈ ಪಂಕ್ತಿಗಳ ನಡೆಯನ್ನು, ನಿಜಗುಣ ಶಿವಯೋಗಿಗಳ ಪಾರ್ವತೀ ಸ್ತುತಿಯ-

ಸಾರಸಗಂಧಿಗೆ| ಶಿವನುತ ಬಂದಿಗೆ
ವಾರಿಜವದನೀಗೆ| ವಿದ್ಯಾಸದನೀಗೆ
ಪಾರಾವಾರಿಗೆ | ಪುಣ್ಯಾಕಾರಿಗೆ

ಈ ಪಂಕ್ತಿಗಳ ನಡೆಯೊಂದಿಗೆ ಹೋಲಿಸಿ ನೋಡಿದರೆ ಬೇಂದ್ರೆಯವರ ಕವಿತೆಯ ಪ್ರೇರಣೆಗಳ ಮೂಲ ಸೆಲೆ ಯಾವುದೆಂಬುದು ತಾನೇ ಸ್ಪಷ್ಟವಾಗುತ್ತದೆ. ಬೇಂದ್ರೆಯವರ ಒಲವು ಈ ದೇಶದ ಭಕ್ತಿ-ಅನುಭಾವ-ಆಧ್ಯಾತ್ಮದ ಕಡೆಗೆ ಇತ್ತು ಎಂಬುದೂ ಗಮನಿಸಬೇಕಾದ ಸಂಗತಿಯಾಗಿದೆ.

ತಮ್ಮ ‘ನಾಕು ತಂತಿ’ ಕವನ ಸಂಗ್ರಹದ ಮುನ್ನುಡಿಯಲ್ಲಿ ಬೇಂದ್ರೆ ಹೇಳುತ್ತಾರೆ: “ಭೋಗಸಾಧನೆಯ ಕವನ ಭಾಂಡಾರವೂ ಇದೆ, ಯೋಗ ಸಾಧನೆಯ ಕವನ ಮಾರ್ಗವೂ ಇದೆ” ಎಂದು. ಹಾಗೆಯೇ ಅವರು ಬೇರೊಂದೆಡೆ ಕವಿಗಳನ್ನು, ಸಾಹಿತ್ಯ ಕವಿಗಳು, ಭಕ್ತ ಕವಿಗಳು ಎಂದು ವಿಂಗಡಿಸಿ ಕನ್ನಡ ಸಾಹಿತ್ಯಚರಿತ್ರೆಯನ್ನು ನೋಡುವ ಬೇರೊಂದು ಕ್ರಮವನ್ನು ಸೂಚಿಸುತ್ತಾರೆ. ಈ ವಿಂಗಡಣೆಯಲ್ಲಿ ಬೇಂದ್ರೆಯವರ ಪಕ್ಷಪಾತವಿರುವುದು ಭಕ್ತಕವಿಗಳ ‘ಯೋಗ ಸಾಧನೆಯ ಕವನ ಭಂಡಾರ’ದ ಕಡೆಗೆ. ಆದುದರಿಂದಲೇ ಅವರು ಹಿಂದಿನ ಭಕ್ತಕವಿಗಳು ಬರೆದಂಥ ಬಹುಸಂಖ್ಯೆಯ ಪ್ರಾರ್ಥನಾಗೀತೆಗಳನ್ನೂ, ತತ್ವಪದಕಾರರನ್ನು ನೆನಪಿಗೆ ತರುವಂಥ ‘ಪದ’ಗಳನ್ನೂ ಬರೆಯಲು ಸಾಧ್ಯವಾಯಿತು. ಅವರ ಸುಪ್ರಸಿದ್ಧವಾದ ‘ಗಂಗಾವತರಣ’ಕೂಡಾ, ಬೇಂದ್ರೆಯವರ ಮುಖ್ಯ ಪ್ರತೀಕವಾದ ಮಾತೃಶಕ್ತಿಯ ಆವಾಹನೆಯನ್ನು ಕುರಿತ ಕವಿತೆಯಾಗಿದೆ. ಅವರ ಕವಿತೆಗಳ ಹಿಂದೆ ಭಕ್ತಿ ಅನ್ನುವುದು ಒಂದು ಶಕ್ತಿಯಾಗಿ ಅವರ ನಿರಂತರ ಶ್ರದ್ಧೆಗೆ ಸಾಕ್ಷಿಯಾಗಿದೆ. ಕವಿತೆ ಕೂಡಾ ಅವರಿಗೆ ಭಕ್ತನ ಉತ್ಕಟ ಏಕಾಗ್ರತೆಯಲ್ಲಿ ಪ್ರತ್ಯಕ್ಷವಾಗುವಂಥದು. ಕುದುರಿಯವರು ಎಂಬ ಕವಿತೆಯಲ್ಲಿ ಈ ಭಾವವು ಹೀಗೆ ಮೂರ್ತಗೊಂಡಿದೆ.

ಸಂಜೀ ಮುಂಜಾನೆ ನಾವು
ಎಂದಾರೆ ಒಂದು ದಿನ
ಅಲಕ್ನಂತ ನಿಮ್ಮ ಮುಂದೆ
ಬರತೇವಿ. ಅವಾಗ
ಬೊಗಸೀ ತುಂಬ ಭಕ್ತಿ ಹಿಡಿದು
ಆಗಸೀ ಬಾಗಲ್ದಾಗ ನಿಂದ್ರು
ಕುದರೀಯವರು ಅಂದ್ರು

ಈ ಭಕ್ತಿ ಒಂದು ಆಧ್ಯಾತ್ಮಿಕ ಹಂಬಲವಾಗಿ ವಿವಿಧ ಪ್ರತೀಕಗಳ ಮೂಲಕ ಒಟ್ಟಿಗೇ ಅಭಿವ್ಯಕ್ತವಾಗಿರುವುದು ಅವರ ನಾದಲೀಲೆ (೧೯೩೮) ಕವನ ಸಂಗ್ರಹದ ಹನ್ನೆರಡು ಕವಿತೆಗಳಲ್ಲಿ. ಈ ಕವನ ಸಂಗ್ರಹದ ಶೀರ್ಷಿಕೆಯೆ ಬೇಂದ್ರೆಯವರ ಕವಿತೆಯ ಮುಖ್ಯ ಲಕ್ಷಣವೊಂದನ್ನು ಸೂಚಿಸುತ್ತದೆ. ಬೇಂದ್ರೆಯವರ ಕವಿತೆ ‘ಮಾತು ಮಾತು ಮಥಿಸಿ ಬಂದ ನಾದದ ನವನೀತ’. ಬೇಂದ್ರೆಯವರಂತೆ ಮಾತಿನೊಳಗಣ ‘ನಾದ’ವನ್ನು ಅಥವಾ ಶಬ್ದ ಸಂಗೀತವನ್ನು ತೆರೆದ ಕವಿಗಳು ತೀರಾ ವಿರಳ. ಅವರ ಈ ಕವಿತೆ ಶಬ್ದದೊಳಗಣ ನಾದವನ್ನು ತೆರೆದು ತೋರುವ ಒಂದು ‘ಲೀಲೆ’ ಅಥವಾ ಆಟವೂ ಆಗಿದೆ. ಈ  ಸಂಗ್ರಹದಲ್ಲಿ ಅವರ ಹಿಂದಿನ ಕವನ ಸಂಗ್ರಹದೊಳಗಣ ಕೆಲವು ವಸ್ತುಗಳು ಮುಂದುವರಿದಿದ್ದರೂ, ಬದುಕಿನೊಳಗಣ ದ್ವಂದ್ವಗಳನ್ನೂ, ರಹಸ್ಯಮಯತೆಯನ್ನೂ ಶೋಧಿಸುವ ಅನುಭಾವಿಕ ನೆಲೆಯ ಒಂದು ಉತ್ಕಟತೆಯೂ, ಕಾವ್ಯಸೃಷ್ಯಿಯನ್ನು ಕುರಿತು ಒಂದು ಚಿಂತನಧಾರೆಯೂ ಈ ಹಂತದಿಂದಲೆ ಉಗಮಗೊಂಡಂತೆ ತೋರುತ್ತದೆ. ಇದೇ ಸಂಗ್ರಹದೊಳಗಣ ‘ಎಲ್ಲಿರುವೆ ರಾಜಗಂಭೀರಾ’ ಎಂಬ ಕವಿತೆಯೊಳಗೆ ಬರುವ “ಕಾಣದ ವಸ್ತುವ ಕಾಣಬೇಕೆಂಬಾಸೆ! ಮಿತಿಯ ಮೀರಿದ ಜೀವಾ” ಎಂಬ ಉಕ್ತಿಯೊಳಗೆ ಸೂಚಿತವಾಗುವ ‘ಅನುಭಾವ’ದ ಆಶಯವು, ಒಟ್ಟು

ಹನ್ನೆರಡು ಕವಿತೆಗಳಲ್ಲಿ (ನಾದಲೇಲೆ-ಶುಭನುಡಿಯೆ-ಏಳುಕನ್ನಿಕೆಯರು- ಮಲ್ಲಾಡದಗಿಳಿಯೆ-ನಾಯಿ-ಎದೆಯ ಒಕ್ಕಲಿಗ-ನಿರ್ಭಯಾ-ನಾಲಗೆ-ಚಿಗುರೆ- ಸಚ್ಚಿದಾನಂದ-ಮರೆಯುವೆಯೊ ಅರಿಯುವೆಯೊ-ಎಲ್ಲಿರುವೆ ರಾಜಗಂಭೀರಾ) ಪ್ರತೀಕದಿಂದ ಪ್ರತೀಕಕ್ಕೆ ಮುಂದುವರಿದಿರುವ ಕ್ರಮವೆ ಪ್ರತ್ಯೇಕವಾದ ಪರಿಗಣನೆಗೆ ವಸ್ತುವಾಗಿದೆ. ಇವು ಸಾಧಕನೊಬ್ಬನ ಅನ್ವೇಷಕ ಮನಃಸ್ಥಿತಿಯ, ಸಂಶಯ-ಭಯ -ತಲ್ಲಣ-ತಾಕಲಾಟ ಹಾಗೂ ಶ್ರದ್ಧೆಗಳನ್ನು, ನೆಳಲು ಬೆಳಕುಗಳ ಚೌಕಟ್ಟುಗಳೊಳಗೆ ಚಿತ್ರಿಸುವ ಕ್ರಮವು ವಿಶೇಷ ರೀತಿಯದಾಗಿದೆ. ಕಂಗೊಳಿಸುವ ಕೆಂಪು, ಕಂಗೆಡಿಸುವ ಮಂಜು; ಬೇಟೆಗಾರನ ನೆರಳು; ಇರುಳಗಾಳಿಗೆ ಹೊಯ್ದಾಡುವ ಹಣತೆ ಸೊಡರು, ಕತ್ತಲಿನ ತಳಕ್ಕೆ ಗಾಜಿನ ಚೂರುಗಳಂತೆ ಸಿಕ್ಕಿಕೊಂಡ ಚಿಕ್ಕಿಗಳ ಆಕಾಶ; ಲೊಚಗುಟ್ಟುವ ಹಲ್ಲಿ, ಶುಭದ ನುಡಿಗೆ ಹಾರೈಸುವ ಮನಸ್ಸು; ಸಂಜೆ ಮುಸುಕಿದ ಅರೆವೀದಿಯಲ್ಲಿ ತನ್ನ ಒಡೆಯನಿಂದ ತಪ್ಪಿಸಿಕೊಂಡು ಅಲೆದಾಡುವ ನಾಯಿ; ಮುಗಿಲ ಚಿಕ್ಕೆಗಳೆಲ್ಲ ಮೊಗ ಕೆಳಗೆ ಹಾಕಿ, ಅಮವಾಸ್ಯೆ ಹರಹಿದ ಅರಮನೆಯಲ್ಲಿ, ಅಗಲಿದ ರಾಜನಿಗಾಗಿ ಹಂಬಲಿಸುವ ವಿರಹಿಣಿಯರು; ತನ್ನ ಸಂಗಡಿಗರಿಂದ ಅಗಲಿ, ಬಯಲುನಾಡಿನ ಮರದ ಕೊಂಬೆಯ ಮೇಲೆ ಕೂತು ಚಿಂತಿಸುವ ಒಂಟಿಗಿಳಿ;-ಇತ್ಯಾದಿ ಪ್ರತೀಕಗಳ ಮೂಲಕ ಸಾಧಕನ ಪಯಣದ ಹಾದಿಯ ಹಂಬಲವನ್ನು ಚಿತ್ರಿಸುವ ಕತ್ತಲು-ಬೆಳಕಿನ ಹೆಣಿಗೆಯ ಈ ಕವಿತೆಗಳು, ಮುಂದೆ ಅವರು ಬರೆದ ‘ಜೋಗಿ’ಎಂಬ ಕವಿತೆಯ ಶಿಲ್ಪಕ್ಕೆ ನಾಂದಿಯಾಗುತ್ತವೆ. ಒಟ್ಟಾರೆಯಾಗಿ ಈ ಅನುಭಾವ ಕವಿತೆಗಳು ಬದುಕಿನ ನಶ್ವರತೆ ಹಾಗೂ ಕೇಡುಗಳನ್ನು, ಅದರದೊಂದು ಭಾಗವೆಂಬಂತೆ ಒಪ್ಪಿಕೊಂಡೂ, ಬದುಕಿನಲ್ಲಿ ಗಾಢವಾಗಿ ತೊಡಗಿಕೊಳ್ಳುವ ಆದಮ್ಯವಾದ ಜೀವನಪ್ರೀತಿಯಿಂದ ಅವುಗಳನ್ನು ದಾಟಿ ನಿಲ್ಲುವ ಶ್ರದ್ಧೆಯ ಮನಃಸ್ಥಿತಿಯೊಂದನ್ನು ಚಿತ್ರಿಸುತ್ತವೆ. ಬೇಂದ್ರೆಯವರು ‘ಯೋಗ ಸಾಧನೆಯ ಕವನ ಭಂಡಾರ’ದ ಬಗೆಗಿನ ತಮ್ಮ ಪಕ್ಷಪಾತದಿಂದ, ಅವರು ಬರೆದ ಅನುಭಾವಕಾವ್ಯ ಸಾಕಷ್ಟಿದ್ದರೂ, ಮಧುರಚೆನ್ನರಂತೆ ಅದೊಂದನ್ನೆ ತಮ್ಮ ಕೇಂದ್ರ ಕಾಳಜಿಯನ್ನಾಗಿ ಅವರು ಮಾಡಿಕೊಳ್ಳದೆ ಹೋದ ಕಾರಣದಿಂದ, ಬೇಂದ್ರೆಯವರ ಕವಿತೆಯ ವಸ್ತು ಅತ್ಯಂತ ವೈವಿಧ್ಯಮಯವೂ, ವಿಸ್ತಾರವೂ ಆಗುತ್ತ ಬದುಕಿನ ಬಹು ಮುಖತ್ವವನ್ನು ಗ್ರಹಿಸುತ್ತ ಅತ್ಯಂತ ಲೋಕಪ್ರಿಯವಾಗಿದೆ.


[1] Aurobind Poddar: Ravindranath and the Renaissance in Bengal, p.63 (Ravindranath Tagore:125th  in birth anniversary volume, pub: Govt of West Bengal 1987).

[2] ಶ್ರೀ ಸಾಹಿತ್ಯ (ಸಂ.) ಡಾ. ಹಾ. ಮಾ.ನಾಯಕ, ಪು.೨೫೦: ಪ್ರ.ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು (೧೯೮೩)

[3] ಅಲ್ಲೇ, ಪು. ೨೮೫

[4] ಒಂದು ವೇಳೆ ಈ ಬಗೆಯ ವಸಾಹತುಶಾಹಿ ಸಂದರ್ಭ ಏರ್ಪಡದಿದ್ದರೆ ಕನ್ನಡ ಸಾಹಿತ್ಯ ಹೇಗೆ ರೂಪುಗೊಳ್ಳುತ್ತಿತ್ತು ಎನ್ನುವುದು ಸದ್ಯಕ್ಕೆ ಊಹೆಯ ಮಾತಾದರೂ, ಪಶ್ಚಿಮದ ಸಂಪರ್ಕ ರೂಢಿ ಜಡವಾದ ಭಾರತೀಯ ಬದುಕಿನಲ್ಲಿ ಚಲನಶೀಲತೆಯನ್ನು ತಂದೀತೆಂಬುದು ಚಾರಿತ್ರಿಕವಾದ ಸತ್ಯವಾಗಿದೆ.

[5] ಈ ಮಾತುಗಳು, ಇಡೀ ದೇಶ, ಜಾಗತೀಕರಣ ಹಾಗೂ ಉದಾರೀಕರಣ ನೀತಿಗಳಿಂದಾಗಿ, ಜಗತ್ತಿನ ಬಂಡವಾಳಶಾಹಿ ಸಂಸ್ಕೃತಿಯ ಆಕ್ರಮಣಗಳಿಗೆ ಯಾವ ಆತಂಕವೂ ಪ್ರತಿರೋಧವೂ ಇಲ್ಲದ ರೀತಿಯಲ್ಲಿ  ಒಳಗಾಗುತ್ತಿರುವ ಸಂದರ್ಭದಲ್ಲಿ ಪ್ರಸ್ತಾಪಿತವಾಗುತ್ತಿರುವುದು ಒಂದು ವಿಪರ‍್ಯಾಸವಾಗಿದೆ. ವಿವಿಧ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಜಗತ್ತಿನ ಎಲ್ಲ ವಿಕಾರಗಳೂ ಕಲೆಯ ಹೆಸರಿನಲ್ಲಿ  ನಮ್ಮ ಮೇಲೆ, ನಮ್ಮ  ಎಳೆಯರ ಹಾಗೂ ತರುಣರ ಮೇಲೆ ದಾಳಿ ಮಾಡುತ್ತಿರುವ ಕ್ರಮ ನಮ್ಮ ದೇಶೀಯ ಸಂಸ್ಕೃತಿಯನ್ನು ಧ್ವಂಸ ಮಾಡುವಷ್ಟು ಪ್ರಬಲವಾಗಿದೆ.

[6] ರಾಜೇಂದ್ರ ಚೆನ್ನಿ: ಅಧ್ಯಯನ (೧೯೮೭) ಕನ್ನಡ ವಿಶ್ವವಿದ್ಯಾಲಯ, ಹಂಪಿ

[7] ಕೀರ್ತಿನಾಥ ಕುರ್ತುಕೋಟಿ: ಭೃಂಗದ ಬೆನ್ನೇರಿ ಬಂತು, ಪು.೪೭-೪೮

[8] ಕುವೆಂಪು ಪ್ರತಿಪಾದಿಸಿದ ವಿಶ್ವಮಾನವ ಕಲ್ಪನೆಗೂ, ಬೇಂದ್ರೆಯವರು ತಾವು ಐದು ಐದೆಯರ ಮಗನೆಂದು ವರ್ಣಿಸಿಕೊಂಡ ಕಲ್ಪನೆಗೂ ಇರುವ ಸಾಮ್ಯ ಆಶ್ಚರ್ಯಕರವಾಗಿದೆ.

[9] ರಾಜೇಂದ್ರ ಚೆನ್ನಿ: ಬೇಂದ್ರೆ ಕಾವ್ಯ, ಪು. ೪೬, ಪ್ರ. ಕೆಸ್ತ ಕಾಲೇಜು ಕನ್ನಡ ಸಂಘ (೧೯೮೯)

[10] ಡಿ.ಆರ್. ನಾಗರಾಜ: ಶಕ್ತಿ ಶಾರದೆಯ ಮೇಳ, ಪು. ೫೩

[11] ಎಚ್.ಎಸ್. ರಾಘವೇಂದ್ರರಾವ್: ಹಾಡೆ ಹಾದಿಯ ತೋರಿತು, ಪು.೮೮ ಪ್ರ. ಕೆಸ್ತ ಕಾಲೇಜು ಕನ್ನಡ ಸಂಘ, ಬೆಂಗಳೂರು (೧೯೯೫)

[12] ಕೀರ್ತಿನಾಥ ಕುರ್ತುಕೋಟಿ: ಬಾರೊ ಸಾಧನಕೇರಿಗೆ, ಪು. ೨೪

[13] ರಾಜೇಂದ್ರ ಚೆನ್ನಿ: ಬೇಂದ್ರೆ ಕಾವ್ಯ, ಪು. ೧೪