ತಾಯೀ ತಾಯಮ್ಮನ್ಹೋರೆ ಸುವ್ವಲಾಲೀ
ನಾನು ದಂಡಿಗ್ಹೋಗುತೀನಿ ”
ನಮ್ಮ ಹೆಂಡಾರು ಬಹುಜೋಕೆ ”
ಅಪ್ಪ ಅಪ್ಪಯ್ಯನೋರೆ ”
ನಾನು ದಂಡಿಗ್ಹೋಗುತೀನಿ ”
ನಮ್ಮ ಹೆಂಡಾರು ಬಲುಜೋಕೆ ”
ನಮ್ಮ ತಾಯಮ್ಮನ್ಹೋರೆ ”
ನಾನು ದಂಡಿಗ್ಹೋಗುತೀನಿ ”
ನಮ್ಮ ಹೆಂಡಾತಿ ಬಲುಜೋಕೆ ”
ತಂಗಿ ನಾಗಮ್ಮನೋರೆ ”
ನಾನು ದಂಡಿಗ್ಹೋಗುತೀನಿ ”
ನಮ್ಮ ಹೆಂಡಾತಿ ಬಲುಜೋಕೆ ”
ಹಂಗೆಂದು ಅಣ್ಣಯ್ಯ ”
ಅವನು ದಂಡಿಗೆ ಹೊರಟಾನು ”
ಅಂಗಂದ ಮಾತೀಗೆ ”
ಮಹಾದೇವಿ ಕಣ್ಣೀರು ತರುತಾಳೆ ”
ಅಂಗಂದ ಮಾತೀಗೆ ”
ಕಣ್ಣೀರ ಒರೆಸೂತ ”
ಒಳಕ್ಕೆ ಹೋದಾಳು ”
ದಂಡಿಗೆ ಹೋದಾನು ”
ಅತ್ತೆ ಮನೆಯ ಸೊಸೆಯವಳು ಸುವ್ವಲಾಲಿ
ಹೊತ್ತಾರೆ ಎದ್ದಾಳು ”
ಹತ್ತುತೊಟ್ಟಿ ಸೆಗಣಿ ”
ಒಂದೆ ತೊಟ್ಟಿಗೆ ತುಂಬಿ ”
ಅತ್ತೆ ಅತ್ಯಮ್ಮನವರೆ ಸುವ್ವಲಾಲಿ
ನಮ್ಮ ತೊಟ್ಟಿ ಹೊರಿಸಲು ಬನ್ನಿ ”
ಅಂಗಂದ ಮಾತೀಗೆ ”
ನಾನು ಹೊರೆಸೋದಿಲ್ಲಾ ”
ನಿಮ್ಮ ನಾದುನಿ ಕರೆಯಮ್ಮ ಸುವ್ವಲಾಲಿ
ನಾದುನಿ ನಾಗಮ್ಮ ”
ನಮ್ಮ ತೊಟ್ಟಿ ಹೊರಿಸಲು ಬನ್ನಿ ”
ನಾನಾದ್ರೆ ಹೊರಿಸೋದಿಲ್ಲಾ ”
ನಿಮ್ಮ ಮೈದುನ ಕರೆಯಮ್ಮ ”
ಅಂಗಂದ ಮಾತೀಗೆ ”
ಅಳುವೂತ ಕರೆವೂತ ”
ಅವಳು ಮಹಾದೇವಿ ಅಳುವೂತ ”
ತೊಟ್ಟಿ ಮುಂದಾಕೆ ”
ನೆರೆಮನೆ ಅಕ್ಕಯ್ಯ ”
ನಮ್ಮ ತೊಟ್ಟಿ ಹೊರಿಸಲು ಬನ್ನಿ ”
ನಾನೇಗೆ ಹೊರಿಸಾಲಿ ”
ನಮ್ಮ ತೊಡೆಯಮೇಲೆ ಬಾಲವ್ನೆ ”
ಆಂಗಂದ ಮಾತೀಗೆ ”
ಅವಳು ಮಹಾದೇವಿ ಅಳುತಾಳೆ ”
ಮಹಾದೇವಿ ಅಳುತಾಳೆ ”
ಅವಳು ನೆಲದ ಮೇಗಲ ತೊಟ್ಟಿ ”
ಅವಳು ಎದೆ ಮೇಲೆಳಕೊಂಡು ”
ಎದೆಯ ಮೇಲಿನ ತೊಟ್ಟಿ ”
ಅವಳು ಭುಜದ ಮೇಲೆಳಕೊಂಡು ”
ಭುಜದ ಮೇಗಲ ತೊಟ್ಟಿ ಸುವ್ವಲಾಲೀ
ಅವಳು ತಲೆಯ ಮೇಲೇಳಕೊಂಡು ”
ಅತ್ತೆ ಅತ್ಯಮ್ಮನವರೇ ”
ನಮ್ಮ ತಿಪ್ಪೇಗೆ ದಾರಿ ಯಾವುದಮ್ಮ ”
ನಿಮ್ಮ ನಾದುನಿ ಕೇಳಮ್ಮ ”
ನಾದುನಿ ನಾಗಮ್ಮ ”
ನಮ್ಮ ತಿಪ್ಪೇಗೆ ದಾರಿ ಯಾವುದು ”
ನಾನಾದ್ರೆ ಕಾಣಿನಮ್ಮ ”
ನಿಮ್ಮ ಮೈದುನ ಕೇಳಮ್ಮ ”
ಮೈದ ಮಲ್ಲಿಗೆ ದೊರೆಯೆ ಸುವ್ವಲಾಲೀ
ನಮ್ಮ ತಿಪ್ಪೆಗೆ ದಾರಿ ಯಾವುದಪ್ಪ ”
ನಾನಾದ್ರು ಕಾಣೆನಮ್ಮ ”
ನಿಮ್ಮ ಮಾವನಾದ್ರೆ ಕೇಳವ್ವ ”
ಮಾವ ಮಲ್ಲಿಗೆ ದೊರೆಯೆ ”
ನಮ್ಮ ತಿಪ್ಪೆಗೆ ದಾರಿ ಯಾವುದಪ್ಪ ”
ನಾನಾದ್ರೆ ಕಾಣೆನಮ್ಮ ”
ನಿಮ್ಮ ನೆರೆಮಾನೆ ಅಕ್ಕಯ್ನ ಕೇಳವ್ವ ”
ನೆರೆಮಾನೆ ಅಕ್ಕಯ್ಯ ”
ನಮ್ಮ ತಿಪ್ಪೆಗೆ ದಾರಿ ಯಾವುದನ್ನು ”
ನಾನಾದ್ರು ತೋರೆನೆಂದ್ರೆ ”
ನನ್ನ ತೊಡೆಮೇಲೆ ಬಾಲಯ್ಯವನೆ ”
ಅಂಗಂದ ಮಾತೀಗೆ ”
ಮಹಾದೇವಿ ಅಳುವೂತ ಕರೆವೂತ ”
ಅವಳು ಊರ ಮುಂದೆ ಬಂದು ”
ಕುರಿಯ ಕಾಯೋ ಅಣ್ಣಾ ”
ನೀ ಮರಿಯ ತಿರುವೋ ತಮ್ಮಾ ಸುವ್ವಲಾಲೀ
ನಮ್ಮ ತಿಪ್ಪೆಗೆ ದಾರಿ ಯಾವುದಪ್ಪ ”
ಬಾಳೇಯ ಬಲಕ್ಹಿಡೋ ಸುವ್ವಲಾಲೀ
ಸೀಗೇಯ ಎಡಕ್ಹಿಡೋ ”
ಬಾಳೇಯ ಬಲಕೆ ಬಿಟ್ಟು ”
ಸೀಗೇಯ ಎಡಕೆ ಬಿಟ್ಟು ”
ಅವಳು ನಡುವೆ ಹೋದಾಳು ಮಹಾದೇವಿ ”
ನಡುವೆ ಹೋದೋಳು ಮಹಾದೇವಿ ಸುವ್ವಲಾಲೀ
ಅವಳು ತಟ್ಟೇಯ ಹಾಕ್ಯಾಳು ”
ತಟ್ಟೇಯ ಹಾಕಿದೋಳು ”
ಅವಳು ಅರಮನೆಗೆ ಬಂದಾಳು ”
ಅತ್ತೆ ಅತ್ಯಮ್ಮನವರೇ ”
ನನ್ನ ಕಯ್ಯಿಗೆ ನೀರುಯ್ಯಮ್ಮ ”
ನಾನಾದ್ರೆ ಹುಯ್ಯೊದಿಲ್ಲಾ ”
ನಿಮ್ಮ ನಾದುನಿ ಕರೆಯಮ್ಮ ”
ಅಂಗಂದ ಮಾತೀಗೆ ”
ಅವಳು ಮಹಾದೇವಿ ಅಳುವೂತ ”
ಅವಳು ಕರೆಯೂತ ”
ನಾದುನಿ ನಾಗಮ್ಮ ”
ನೀನು ನೀರಾದ್ರೆ ಹುಯ್ಯಮ್ಮ ”
ನಾನಾದ್ರೆ ಹುಯ್ಯೋದಿಲ್ಲಾ ”
ನಿಮ್ಮ ಮಾವಾನ ಕೇಳಮ್ಮ ”
ಮಾವ ಮಲ್ಲಿಗೆ ದೊರೆಯೆ ”
ನನ್ನ ಕಯ್ಯಿಗೆ ನೀರು ಹುಯ್ಯಪ್ಪ ”
ನಾನಾದ್ರೆ ಹುಯ್ಯೋದಿಲ್ಲಾ ”
ನಿಮ್ಮ ಮೈದುನ ಕೇಳವ್ವ ಸುವ್ವಲಾಲೀ
ಮೈದ ಮಲ್ಲಿಗೆ ದೊರೆಯೆ ಸುವ್ವಲಾಲೀ
ನಮ್ಮ ಕೈಯಗೀಸು ನೀರುಯ್ಯಪ್ಪ ”
ನಾನಾದ್ರೆ ಹುಯ್ಯೋದಿಲ್ಲಾ ”
ನಿಮ್ಮ ನರಮಾನೆ ಅಕ್ಕನ ಕೇಳೆ ಸುವ್ವಲಾಲೀ
ನೆರಮಾನೆ ಅಕ್ಕಯ್ಯ ”
ನನ್ನ ಕಯ್ಯಿಗೀಸು ನೀರುಯ್ಯಕ್ಕ ”
ನಾನ್ಹಾದ್ರೆ ಹುಯ್ಯುತ್ತಿದ್ದೆ ”
ನಮ್ಮ ತೊಡೆಮೇಲೆ ಬಾಲವ್ನೆ ”
ಅಂಗಂದ ಮಾತೀಗೆ ”
ಅವಳು ಅಳುವೂತ ಕರೆಯೂತ ಸುವ್ವಲಾಲೀ
ಅಳುವೂತ ಕರೆಯೂತ ”
ಅವಳು ಒಳಕೆ ಹೋದಾಳು ”
ಒಳಕೆ ಹೋದೋಳು ”
ಅವಳು ಕಯ್ಯಿಗಲ ತೊಳೆದಾಳೆ ”
ಕಯ್ಯಿಗಳ ತೊಳೆದೋಳು ”
ಅವಳು ಕೊಡಗಳ ಹಿಡಿದಾಳೆ ”
ಅತ್ಯ ಅತ್ತಮ್ಮನವೇ ಸುವ್ವಲಾಲೀ
ನೀರು ಭಾವಿಗೆ ದಾರಿ ಯಾವುದು ”
ನಾನ್ಹಾದ್ರೆ ಕಾಣೆನವ್ವ ”
ನಿಮ್ಮ ಮಾವನಾದ್ರೆ ಕೇಳವ್ವ ”
ಅಂಗಂದ ಮಾತೀಗೆ ”
ಅವಳು ಅಳುವೂತ ಕರೆಯೂತ ”
ಮಾವ ಮಲ್ಲಿಗೆ ದೊರೆಯೆ ”
ನೀರು ಭಾವಿಗೆ ದಾರಿ ಯಾವುದು ”
ನಾನಾದ್ರೆ ಕಾಣೆನವ್ವ ”
ನಿಮ್ಮ ಮೈದುನ ಕೇಳವ್ವ ”
ಮೈದ ಮಲ್ಲಪ್ಪ ದೊರೆಯೆ ”
ನೀರು ಬಾವಿಗೆ ದಾರಿ ಯಾವುದು ”
ನಾನಾದ್ರೆ ಕಾಣೆನವ್ವ ”
ನಿಮ್ಮ ನಾದುನಿ ಕೇಳವ್ವ ”
ನಾದುನಿ ನಾಗಮ್ಮ ”
ನಮ್ಮ ನೀರು ಭಾವಿಗೆ ದಾರಿಯಾವುದು ಸುವ್ವಲಾಲೀ
ನಾನಾದ್ರೆ ಕಾಣೆನವ್ವ ”
ನಿಮ್ಮ ನೆರೆಮನೆ ಅಕ್ಕಯ್ನ ಕೇಳವ್ವ ”
ನೆರಮಾನೆ ಅಕ್ಕಯ್ಯ ”
ನಮ್ಮ ನೀರು ಭಾವಿಗೆ ದಾರಿಯಾವುದು ”
ನಾನಾದ್ರೆ ತೋರುತಿದ್ದೆ ”
ನನ್ನ ತೊಡೆಮ್ಯಾಲೆ ಮಗಳವ್ಳೆ ”
ಅಂಗಂದ ಮಾತೀಗೆ ”
ಅವಳು ಅಳುವೂತ ಕರೆವೂತ ”
ಅವಳು ಹಾರುವರ ಕೇರಿಗ್ಹೋಗಿ ”
ಹಾರುವರ ಕೇರಿಗೆ ಹೋಗಿ ಸುವ್ವಲಾಲೀ
ಹಾರುವರ ಅಕ್ಕಯ್ಯದೀರೆ ”
ನೀವು ನೀರಿಗೆ ಬರುತೀರಿ ”
ಆಗಲೆ ತಂದೇವು ಮಹಾದೇವಿ ”
ಅಂಗಂದ ಮಾತೀಗೆ ”
ನೀನು ಈಗ್ಹೋಗೆ ಮಹಾದೇವಿ ”
ಅವಳು ಅಳುವೂತ ಕರೆವೂತ ”
ಅವಳು ಒಕ್ಕಲಿಗರ ಕೇರಿಗ್ಹೋಗಿ ”
ಒಕ್ಕಲಿಗರ ಅಕ್ಕದೀರೆ ”
ನೀವು ನೀರೀಗೆ ಬರುತೀರ ಸುವ್ವಲಾಲೀ
ಆಗಲೆ ತಂದೇವು ”
ನೀನು ಈಗ್ಹೋಗೆ ಮಹಾದೇವಿ ”
ಅಂಗಂದ ಮಾತೀಗೆ ”
ಅವಳು ಅಳುವೂತ ಕರೆಯೂತ ”
ಅವಳು ಕೋಮಟಿಗರ ಕೇರಿಗೆ ”
ಕೋಮಟಿಗರ ಅಕ್ಕಯ್ಯದಿರಾ ”
ನೀವು ನೀರಿಗೆ ಬರುತೀರ ”
ಆಗಲೆ ನೀರ ತಂದೇವ ಸುವ್ವಲಾಲೀ
ನೀನು ಈಗ್ಹೋಗೆ ಮಹಾದೇವಿ ”
ಅಂಗಂದ ಮಾತೀಗೆ ”
ಅವಳು ಅಳುವೂತ ಕರೆವೂತ ”
ಅವಳು ಊರಮುಂದಕೆ ಬಂದು ”
ಕುರಿಯ ಕಾಯೋ ಅಣ್ಣದಿರಾ ”
ಮರಿಯ ಕಾಯೋ ಅಣ್ಣದಿರಾ ”
ಮರಿಯ ತಿರುವೊ ತಮ್ಮದಿರಾ ”
ನೀರು ಭಾವಿಗೆ ದಾರಿಯಾವುದು ”
ಬಾಳೇಯ ಬಲಕಿಡೆ ”
ನಿಂಬೀಯ ಎಡಕಿಡೆ ”
ಬಾಳೇಯ ಬಲಕಿಟ್ಟು ”
ನಿಂಬೀಯ ಎಡಕಿಟ್ಟು ”
ಆಕೆ ನಡುವೆ ಹೋದಾಳು ಮಹಾದೇವಿ ”
ನೀರು ಭಾವಿಗೆ ಹೋದಾಳು ”
ಅವಳು ಒಂದು ಮೆಟ್ಟಿಲಿಳಿದಾಳು ಸುವ್ವಲಾಲೀ
ಒಂದು ಹಲ್ಲಿಟ್ಟು ಕಂಡಾಳು ”
ಅವಳು ಎರಡು ಮೆಟ್ಟಿಲಿಳಿದಾಳು ಸುವ್ವಲಾಲೀ
ಒಂದು ಹಲ್ಲಿಟ್ಟು ಕಂಡಾಳು ”
ಅವಳು ಎರಡು ಮೆಟ್ಟಿಲಿಳಿದಾಳು ”
ಅವಳು ಯಾಲಕ್ಕಿ ಕಂಡಾಳು ”
ಅವಳು ಮೂರು ಮೆಟ್ಟಿಲಿಳಿದಾಳು ”
ಅವಳು ಮಲ್ಲಿಗೆ ಕಂಡಾಳು ”
ಇಳಿ ಇಳಿದಿದು ಹೋದಾಳೆ ”
ಕೊಡೆಗಳ ತುಂಬ್ಯಾಳೆ ”
ಆಕೆ ಮೇಲಕೆ ನೋಡ್ಯಾಳೆ ”
ಮೈದ ಮಲ್ಲಿಗೆ ದೊರೆಯೆ ”
ನನ್ನ ಕೊಡಗಳೆತ್ತ ಬನ್ನಿ ”
ನಾನು ಕೊಡಗಳೊರಿಸೇನು ಸುವ್ವಲಾಲೀ
ಮಹಾದೇವಿ ನೀನ್ಹೇನು ಕೊಡುತೀಯ ”
ನಮ್ಮಪ್ಪ ಮಾಡಿಸಿದಂಥ ”
ನಾನು ಕೊಪ್ಪಾದ್ರು ಕೊಡುತೀನಿ ”
ಅಂಗಂದ ಮಾತೀಗೆ ”
ಅವನು ಎಂಟೆತ್ತಿನ ಬಾರುಕೋಲು ”
ತುಂಡು ತುಂಡೆನಾದಾವು ”
ಮೈದ ಮಲ್ಲಿಗೆ ದೊರೆಯೆ ”
ನನ್ನ ಕೊಡಗಳೊರಿಸು ಬನ್ನಿ ”
ನಿನ್ನ ಕೊಡಗಳೋರಿಸೋಕೆ ”
ಮಹಾದೇವಿ ನೀನ್ಹೇನು ಕೊಡುತೀಯ ”
ನಿಮ್ಮಣ್ಣ ಮಾಡಿಸಿದಂಥ ”
ಹೊನ್ನೋಲೆ ಕೊಡುತೀನಿ ”
ಅಂಗಂದ ಮಾತೀಗೆ ”
ಅವನು ಆರೆತ್ತಿನ ಬಾರುಕೋಲು ”
ಆರೆತ್ತಿನ ಬಾರುಕೋಲಾಗೆ ”
ಅವನು ಎರಡೇಟ ಹೊಡೆದಾನೆ ”
ನೆಲದ ಮೇಗಲ ಕೊಡವ ಸುವ್ವಲಾಲೀ
ಅವಳು ಸೊಂಟಾದ ಮೇಲಕೆ ”
ಸೊಂಟದ ಮೇಲೆಳಕೊಂಡು ”
ಸೊಂಟದ ಮೇಲಿನ ಕೊಡ ”
ಅವಳು ನೆತ್ತಿ ಮೇಲೆಳಕೊಂಡು ”
ನೆತ್ತಿ ಮೇಲೆಳಕೊಂಡು ”
ಅವಳು ಅರಮನೆಗೆ ಬಂದಾಳು ”
ಅವಳು ಕೊಡಗಳ ಇಳಿಸ್ಯಾಳು ”
ಅವಳು ಮಲಗೊ ಮನೆಗ್ಹೋದಾಳು ”
ಅವಳು ಒಂದಾಸಿಗೆ ಹಾಸ್ಯಾಳೆ ”
ಒಂದಾಸಿಗೆ ಹಾಸ್ಯಾಳು ”
ಅವಳು ಎರಡಾಸೆಗೆ ಹೊದ್ದಾಳೆ ಸುವ್ವಲಾಲೀ
ಎರಡಾಸೆಗೆ ಹಾಸ್ಯಾಳೆ ”
ಅವಳು ಮೂರಾಸೆಗೆ ಹೊದ್ಯಾಳೆ ”
ಮೂರಾಸೆಗೆ ಹಾಸ್ಯಾಳು ”
ಅವಳು ನಾಕಾಸೆಗೆ ಹೊದ್ದಾಳೆ ”
ನಾಕ್ಹಾಸೆಗೆ ಹಾಸ್ಯಾಳು ”
ಅವಳು ಐದಾಸೆಗೊಸೆದ್ದಾಳೆ ”
ಐದಾಸೆಗೆ ಹಾಸ್ಯಾಳು ”
ಅವಳು ಕದಗಳ ಹಾಕ್ಯಾಳೇ ”
ಕದಗಳ ಹಾಕಿದೋಳು ”
ಅವಳು ಹೋಗಿನ್ನ ಮನಿಗ್ಯಾಳೆ ”
ಹೋಗಿನ್ನ ಮನಿಗ್ಯಾಳು ”
ದಂಡಿಗ್ಹೋದ ಗಂಡ ಸುವ್ವಲಾಲೀ
ಅವನು ಆಗಲೆ ಬಂದಾನೆ ”
ಬಂದಂಥ ಮಗನೀಗೆ ”
ಅವಳು ತಾಯೀ ನೀರು ಕೊಡಲ್ಹೋಗಿ ಸುವ್ವಲಾಲೀ
ನೀನು ನೀರು ಕೊಡುವೋಕೆ ”
ನೀನು ತಂದಂಥ ಗೌಡತಿಯಲ್ಲೆ ”
ಆಡೋ ಹುಡುಗರಕುಟ್ಟಿ ”
ಅವಳು ಗೋಲಿ ಆಡಕ್ಹೋಗ್ಯವಳೆ ”
ನೀನು ನೀರು ಕೊಡುವಾಕೆ ”
ನೀನು ತಂದ ಸೊಸೆಯಲ್ಲೆ ”
ಚಿಣ್ಣೆ ಹುಡುಗರಕುಟ್ಟಿ ”
ಅವಳು ಚಿನ್ನಾಟಕ್ಹೋಗ್ಯವಳೆ ”
ನೀನು ನೀರು ಕೊಡುವೋಕೆ ”
ನೀನು ತಂದ ಸೊಸೆಯಲ್ಲೆ ”
ತಲೆನೋವು ಮೂಗುನೋವು ”
ಅವಳು ಮಲಗೋ ಮನೆಯಾಗವಳೆ ”
ಮಲಗೋ ಮನೆಗ್ಹೋದಾನು ಸುವ್ವಲಾಲೀ
ಅವನು ಒಂದಾಸೆಗೆತ್ಯಾನು ”
ಒಂದಾಸೆಗೆ ಎತ್ತಿದೋನೆ ”
ಅವಳ ಗಂಧದಪುಡಿ ಕಂಡಾನೆ ”
ಹರಿ ಹರಿಯೆ ಪಾಪವೆ ”
ಇದೇನೊ ಸೋಜಿಗವೆ ”
ಹರಿ ಹರಿಯೆ ಅಂದಾರೆ ”
ನಿಮ್ಮ ತಮ್ಮ ಮಾಡಿದ ಪಾಪ ”
ಅವನು ಎರಡಾಸಿಗೆತ್ಯಾನು ಸುವ್ವಲಾಲೀ
ಎರಡಾಸಿಗೆ ಎತ್ತಿದೋನೆ ”
ಅವನು ಯಾಲಕ್ಕಿ ಕಂಡಾನೆ ”
ಹರಿ ಹರಿಯೆ ಪಾಪವೆ ”
ಇದೇನೊ ಸೋಜಿಗವೆ ”
ಹರಿ ಹರಿಯೆ ಅಂದಾರೆ ”
ನಿಮ್ಮ ತಮ್ಮ ಮಾಡಿದ ಪಾಪ ”
ಅವನು ಎರಡಾಸಿಗೆತ್ಯಾನು ”
ಮೂರಾಸಿಗೆ ಎತ್ತಿದೋನೆ ”
ಅವನು ಕುಂಕುಮ ಕಂಡಾನೆ ”
ಹರಿ ಹರಿಯೆ ಪಾಪವೆ ”
ಇದೇನೊ ಸೋಜಿಗವೆ ”
ಹರಿ ಹರಿಯೆ ಅಂದಾರೆ ”
ನಿಮ್ಮ ತಮ್ಮ ಮಾಡಿದ ಪಾಪ ”
ಅವನು ನಾಲ್ಕಾಸೆಗೆ ಎತ್ಯಾನು ”
ನಾಲ್ಕಾಸ್ಕೆ ಎತ್ತಿದೋನೆ ”
ಅವನು ಎಲೆಅಡಕೆ ಕಂಡಾನೆ ”
ಹರಿ ಹರಿಯೆ ಪಾಪವೆ ”
ಇದೇನೊ ಸೋಜಿಗವೆ ”
ಹರಿ ಹರಿಯೆ ಅಂದಾರೆ ”
ನಿಮ್ಮ ತಮ್ಮ ಮಾಡಿದ ಪಾಪ ಸುವ್ವಲಾಲೀ
ಅವನು ಐದಾಸೆಗೆತ್ಯಾನು ”
ಐದಾಸೆಗೆತ್ತಿದೋನೆ ”
ಅವನು ಕೊಯ್ದಮಲ್ಲಿಗೆ ಕಂಡಾನೆ ”
ಹರಿ ಹರಿಯೆ ಪಾಪವೆ ”
ಇದೇನೊ ಸೋಜಿಗವೆ ”
ಹರಿ ಹರಿಯೆ ಅಂದಾರೆ ”
ನಿಮ್ಮ ತಮ್ಮ ಮಾಡಿದ ಪಾಪ ”
ಬಡ ಬಡನೆ ಎದ್ದಾನೆ ಸುವ್ವಲಾಲೀ
ಅವನು ಅರಮನೆಗೆ ಹೋದಾನೆ ”
ತಾಯಿ ತಾಯಮ್ಮನೋರೆ ”
ನಮಗೆ ಬುತ್ತೀಯ ಕಟ್ಟವ್ವ ”
ತಮ್ಮಗೊಂದು ಬುತ್ತೀಯ ”
ನನಗೊಂದು ಮಡದಿಗೊಂದು ಬುತ್ತೀಯ ”
ಬುತ್ತಿಗಳ ಕಟ್ಯಾರೆ ”
ಅವರು ಮಂಟಪಕ್ಕೆ ಹೋದಾರೆ ”
ಮಂಟಪಕೆ ಹೋದಾರೆ ”
ಅವರು ಮೂರು ಕುದುರೆ ಹಿಡಿದಾರೆ ”
ಅವರು ಕುದುರೆ ಏರ್ಯಾರೆ ”
ಕುದುರೆ ಏರಿರ್ದೋರು ”
ಅವರು ಅರಣ್ಯಕ್ಹೋದರೆ ”
ಅವರು ಆರಂದ ಅಡವಿಯಾಗೆ ”
ಅವರು ಮೂರು ಸೆಲುಮೆ ತೆಗೆದಾರ ”
ಮೂರು ಸೆಲುಮೆ ತೆಗೆದೋರು ”
ಅವರು ಬುತ್ತಿಗಳ ಬಿಚ್ಚಾರೆ ”
ಬುತ್ತಿಗಳ ಬಿಚ್ಚಿದೋರು ”
ಅವನು ಒಂದು ತುತ್ತು ಉಂಡಾನೆ ”
ಮೈದಯ್ಯ ಒಂದು ತುತ್ತ್ಹುಂಡಾನೆ ”
ಅವನು ಒಂದು ಬಾಣ ಬಿಟ್ಟಾನೆ ಸುವ್ವಲಾಲೀ
ಅವಳ ಗಂಡ ಬಿಟ್ಟಾನೆ ಬಾಣ ”
ಅವನು ಅಣ್ಣ ಅಣ್ಣಾ ಅಂದಾನೆ ”
ಅಣ್ಣಾನ ಹೆಂಡಾತಿ ”
ಅವಳು ಅತ್ತಿಗೆ ಅಲ್ಲವೇನೊ ”
ಅಂಗಂದ ಮಾತೀಗೆ ”
ಅವನು ಮೂರು ತುತ್ತು ಉಂಡಾನೆ ”
ಮೂರು ತುತ್ತ ಉಂಡೋನೆ ”
ಅವನು ಮೂರು ಬಾಣ ಬಿಟ್ಟಾನೆ ”
ಮೂರು ಬಾಣ ಬಿಟ್ಟಾನೆ ಸುವ್ವಲಾಲೀ
ಅವನು ಅಪ್ಪ ಅಮ್ಮ ಅಂದಾನೆ ”
ಅಪ್ಪನ ಹೆಂಡಾತಿ ”
ಅವಳು ಹಡೆದತಾಯಮ್ಮನಲ್ಲವೇನೊ ”
ಅಂಗಂದ ಮಾತೀಗೆ ”
ಅವನ ಪ್ರಾಣಗಳ ತೆಗೆದಾನೆ ”
ಪ್ರಾಣವ ಬಾಣದಿ ತೆಗೆದಾನೆ ”
ಅವಳು ಮಹಾದೇವಿ ಬರುತಾಳೆ ”
ಅವರು ಪಟ್ಟಣಕೆ ಬರುತಾರೆ ”
ಪಾಠಾಂತರಗಳು ಮತ್ತು ಸಮಾನ ಆಶಯದ ಪಠ್ಯಗಳು
೧) ಅತ್ತಿಗೆ-ಮೈದುನ; ಹೆಗಡೆ ಎಲ್.ಆರ್. ಗುಮ್ಮಟೆ ಪದಗಳು, ಬೆಂಗಳೂರು ವಿ.ವಿ. ಬೆಂಗಳೂರು, ೧೯೭೮, ಪು.ಸಂ. ೭೧-೭೫.
೨) ಏಟಕs ಏಳು ತುಕುಡ ಆದಾನ ಶಂಕರದೇವ; ಅಂದನೂರು ಶೋಭ, ಕೊಂಬೆರೆಂಬೆಲ್ಲ ಎಳೆಗಾಯಿ, ಪ್ರಸಾರಾಂಗ ಬೆ.ವಿ.ವಿ. ಬೆಂಗಳೂರು, ೧೯೭೮, ಪು.ಸಂ. ೨೯-೩೭.
* ಮಹಾದೇವಿ; ಕ.ರಾ.ಕೃ. ಸೂಸಿ ಹರಿದಾಳೆ ಶಿವಗಂಗೆ, ಜನಪದ ಸಾಹಿತ್ಯ ಅಕಾಡೆಮಿ ಮೈಸೂರು, ೧೯೬೨, ಪು.ಸಂ. ೩೩-೪೫.
Leave A Comment