ವೇದ ಕಾಲದಲ್ಲಿ ಋಗ್ವೇದದಲ್ಲಿ ಉದಾತ್ತ, ಅನುದಾತ, ಸ್ವಕತ ಎಂಬ ಮೂರು ಸ್ವರಗಳ ಪ್ರಯೋಗ ಸರ್ವಸಮ್ಮತವಾಗಿದೆ. ಋಗ್ವೇದ ಅನ್ನುವಾಗ ಸ್ವರಗಳನ್ನು ಮೇಲಕ್ಕೇರಿಸಿ, ಕೆಳಗೆ ಇಳಿಸಿ ವೇದ ಮಂತ್ರಗಳನ್ನು ವೃಂದಗಾನದಂತೆ ಅಂದರೆ ಸಾಮೂಹಿಕವಾಗಿ ಅನ್ನುತ್ತಿದ್ದರು. ಮುಂದೇ ಇದೇ ಮಾರ್ಗವು ಸಾಮವೇದವೆಂದು ಪ್ರಸಿದ್ದಿ ಪಡೆಯಿತು. ವೇದ ಕಾಲದಲ್ಲಿ ಸಂಗೀತದ ಸಲುವಾಗಿಯೇ ಮಂಚ ಪ್ರದರ್ಶನ ನಡೆಯುತ್ತಿತ್ತು ಎಂದು ಇತಿಹಾಸದಿಂದ ತಿಳಿದುಬರುತ್ತಿದೆ. ನಂತರ ರಾಮಾಯಣ ಮತ್ತು ಮಹಾಭಾರತ ಕಾಲದಲ್ಲೂ ಇದೇ ರೀತಿಯಾಗಿ ಮಂಚ ಪ್ರದರ್ಶನ ನಡೆಯುತ್ತಿತ್ತು. ಎಂದು ಇತಿಹಾಸದಿಂದ ತಿಳಿದುಬರುತ್ತಿದೆ. ನಂತರ ರಾಮಾಯಣ ಮತ್ತು ಮಹಾಭಾರತ ಕಾಲದಲ್ಲೂ ಇದೇ ರೀತಿಯಾಗಿ ಮಂಚ ಪ್ರದರ್ಶನ ಮುಂದುವರೆಯಿತು. ಆದರೆ ಈ ಕಾಲದಲ್ಲಿ ಲಂಕಾಧಿಪತಿ ರಾವಣ ಕೂಡ ಸಂಗೀತಜ್ಞನಾಗಿದ್ದು, ವೀಣಾವಾದಕನಾಗಿದ್ದನು. ಹಾಗೂ ವಾಲ್ಮೀಕಿ ಋಷಿಗಳು ರಾಮಾಯಣ ಮಹಾಕಾವ್ಯವನ್ನು ಜಾತಿಗಳಲ್ಲಿ ಹಾಡುವುದನ್ನು ಲವಕುಶರಿಗೆ ಕಲಿಸಿದರು. ಮಹಾಭಾರತ ಕಾಲದಲ್ಲಿ ರಾಜಕುಮಾರಿಗೆಲ್ಲ ಎಲ್ಲ ವಿದ್ಯೆಗಳ ಜೊತೆ ಸಂಗೀತ ವಿದ್ಯೆಯನ್ನು ಕಲಿಸುತ್ತಿದ್ದರು. ಹಾಗೂ ಶ್ರೀ ಕೃಷ್ಣನು ವೇಣುವಾದನದಲ್ಲಿ ಪರಿಣಿತನಾಗಿದ್ದು, ಶ್ರೀ ಕೃಷ್ಣನು ಭಗವದ್ಗೀತೆಯು ಒಂದು ಶ್ರೇಷ್ಠವಾದ ಗ್ರಂಥ. ಮಾನವನ ಜೀವನ ಮಾರ್ಗವನ್ನು ಉತ್ತಮಗೊಳಿಸುವುದಕ್ಕೆ ಶ್ರೀ ಕೃಷ್ಣನು ಸಂಗೀತ ಮತ್ತು ಗೀತೆಯ ಸಹಾಯ ಪಡೆದನು.

ನಂತರ ಜೈನ ಬೌದ್ಧ ಧರ್ಮ ಸ್ಥಾಪಿತವಾದ ಕಾಲದಲ್ಲಿ ರಾಜಮಹಾರಾಜರ ಆಸ್ಥಾನದಲ್ಲಿ ಉತ್ತಮ ಕಲಾವಿದರನ್ನು ಪೋಷಿಸುವುದು ಅವರ ಹೆಮ್ಮೆಯ ಕಿರೀಟಕ್ಕೆ ಗರಿ ಇದ್ದಂತೆ. ಹಾಗೆ ಸಂಗೀತ  ಕಲೆಯೂ ರಾಜಾಶ್ರಯ ಪಡೆಯಿತು. ಅನೇಕ ಹೆಸರಾಂತ ರಾಜ ಮಹಾರಾಜರು ಸಂಗೀತ ಕಲೆಯನ್ನು ಪೋಷಿಸಿ ಬೆಳಸಿದರು. ಅವರುಗಳಲ್ಲಿ ಬುಂದೇಲ ಖಂಡ, ರಾಮಪುರ, ವಿಷ್ಣುಪುರ, ಗ್ವಾಲಿಯರ, ಜೈಪುರ ಇತ್ಯಾದಿ ಹಾಗೆ ಸಂಗೀತ ರಾಜಾಶ್ರಯ ಹೊಂದಿದ ಸಂದರ್ಭ. ಸುಮಾರು  ೧೭ ನೇ ಶತಮಾನದಿಂದ ೧೯ ನೇ ಶತಮಾನ, ಆಸುಪಾಸು, ದೆವರ ಸೇವೆಯಲ್ಲಿ ಒಂದಾಗಿದ್ದ ಸಂಗೀತ ರಾಜಾಶ್ರಯ ಪಡೆದು ರಾಜ ಮಹಾರಾಜ ದರಬಾರಿನಲ್ಲಿ ಸಂಗೀತ ಪ್ರದರ್ಶನದ ಮೂಲಕ ಮಂಚ ಪ್ರದರ್ಶನದ ಎರಡನೆಯ ಹಂತ ವಿಕಾಸಗೊಂಡಿತು. ಇಲ್ಲಿ ಮಂಚ ಪ್ರದರ್ಶನ ಕೇವಲ ರಾಜ ದರಬಾರಿನಲ್ಲಿ ಮಾತ್ರ ಸಿಮೀತವಾಗಿತ್ತು. ಅಂದರೆ ಕೇವಲ ಕೆಲವೇ ಜನರಿಗೆ ಸಂಗೀತವನ್ನು ಆಸ್ವಾದಿಸುವ ಅವಕಾಶವಿತ್ತು. ಪ್ರತಿಭಾನ್ವಿತ ಕಲಾಕಾರರನ್ನು ತಮ್ಮ ಓಲಗದಲ್ಲಿ ಇರಿಸಿಕೊಳ್ಳುವುದು ಆಗಿನ ರಾಜರ ಪ್ರತಿಷ್ಠೆ ಆಗಿತ್ತು. ಹೀಗೆ ರಾಜಾಶ್ರಯ ಪಡೆದ ಸಂಗೀತವು ವಿಕಾಸಗೊಂಡ ಅನೇಕ ಸಂಗೀತ ಪರಂಪರೆಗಳು ಹುಟ್ಟಿಕೊಂಡವು. ಉದಾ: ಜೈಪುರ, ಅತ್ರೌಲಿ, ಕಿರಾಣ-ಘರಾಣ, ಗ್ವಾಲಿಯರ್, ಆಗ್ರಾ ಮುಂತಾದವು.

೧೯ ನೇ ಶತಮಾನದ ನಂತರ ಅಂದರೆ ಭಾರತ ಸ್ವತಂತ್ರ್ಯಗೊಂಡ ನಂತರ ಸಂಗೀತವು ರಾಜಾಶ್ರಯ ಕಳೆದುಕೊಂಡಿತು. ತದನಂತರ ಸಾಮಾನ್ಯ ಜನರಿಗೂ ಸಂಗೀತ ಕೇಳುವ ಸುಯೋಗ ದೊರಕಿತಾದರೂ ಸ್ವಲ್ಪ ಮಟ್ಟಿಗೆ ಸಂಗೀತ ಕಲೆಯೂ ಶೀಥಿಲಗೊಂಡಿತು. ಈ ಕಾಲದಲ್ಲಿ ಸಂಗೀತ ಶಿಕ್ಷಣ ಕ್ರಾಂತಿ ಹಾಗೂ ಅದರ ಪ್ರತಿಷ್ಠೆಯನ್ನು ಸದೃಢಗೊಳಿಸಲು ಅನೇಕ ಸಂಗೀತಜ್ಞರು ತಮ್ಮದೇ ಆದ ಶೈಲಿಯಲ್ಲಿ ಹೋರಾಡಿದರು. ಅವರಲ್ಲಿ ಪ್ರಮುಖರಾದವರು ಸೈಯಾಜಿ ರಾವ್, ಗಾಯಕವಾಡ, ಊ. ಮೌಲಭಕ್ಷ, ಪಂ.ವಿಷ್ಣು ದಿಗಂಬರ ಪಲುಸ್ಕರ, ಗ್ವಾಲಿಯರಿನ ಪಂ.ಕೃಷ್ಣರಾವ್ ಪಂಡಿತ. ಪಂ.ವಿಷ್ಣು ದಿಗಂಬರ ಭಾತಖಂಡೆ ಗ್ವಾಲಿಯರಿನ ನರೇಶ್ ಮಾಧವರಾವ್ ಸಿಂಧಿಯಾ, ಅನೇಕ ಸಂಗೀತ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡವು. ಹೀಗೆ ಸಂಗೀತ ಸುಶಿಕ್ಷಿತರ ಸ್ವತ್ತಾಗಿ ಪುನರುತ್ತಾನಗೊಂಡಿತು. ಸಂಗೀತ ಸಮಾರೋಹಗಳು, ಸಂಗೀತ ಸಮ್ಮೇಲನ, ವಿಚಾರಗೋಷ್ಠಿಗಳು ಆಯೋಜಿತವಾಗತೊಡಗಿದವು. ಹೀಗೆ ೧೯ ನೇ ಶತಮಾನದ ನಂತರ ಸಂಗೀತ ಕಲೆಯು ಮಂಚ ಪ್ರದರ್ಶನ ಪರಿಪೂರ್ಣಹಂತವು ಮಾರ್ಪಟ್ಟಿತು.

ಮಂಚ ಪ್ರದರ್ಶನದ ಅರ್ಥವನ್ನು ಅನೇಕ ಸಂಗೀತ ತಜ್ಞರು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಕಲಾವಿದ ಶಾಸ್ತ್ರಕಾರ, ಪೋಷಕ ಮತ್ತು ಸಂಗೀತವನ್ನು ಆಸ್ವಾದಿಸುವ ಶ್ರೋತೃಗಳು ಇದರಿಂದ ನಿರ್ಮಿತವಾದ ವೇದಿಕೆಗೆ ‘ಮಂಚ’ ಎಂದು ಕರಿಯುತ್ತೇವೆ. ಶ್ರೋತೃಗಳನ್ನು ಹಾಗೂ ಕಲಾವಿದರನ್ನು ಒಂದು ಗೂಡಿಸುವ ವೇದಿಕೆ ಇದಾಗಿದೆ. ಮಂಚ ಪ್ರದರ್ಶನ ಶಬ್ಧವು ಹಿಂದುಸ್ತಾನಿ ಸಂಗೀತದಲ್ಲಿ ಹೆಚ್ಚು ಬಳಕೆಯಲ್ಲಿದೆ. ಮಂಚ ಪ್ರದರ್ಶನಕ್ಕೆ ಮಹಿಫಿಲ್, ಸಂಗೀತ ಸಮ್ಮೇಳನ, ಸಂಗೀತ ಗೋಷ್ಟಿ, ಸಂಗೀತ ಸಭೆ, ವಾದ್ಯಗೋಷ್ಟಿ, ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ದಕ್ಷೀಣಾದಿ ಸಂಗೀತದಲ್ಲಿ ಮಂಚ ಪ್ರದರ್ಶನಕ್ಕೆ ‘ಸಂಗೀತ ಕಚೇರಿ’ ಎನ್ನುವ ಪರ್ಯಾಯ ಶಬ್ದವು ಇದೆ, ಪ್ರಾಯಶಃ ಕಚೇರಿ ಎನ್ನುವ ಶಬ್ದವು ಮೊಘಲರ ಆಳ್ವಿಕೆಯಲ್ಲಿ ಮಾಫಿಯಾಗಿ ಒಂದು ಶಬ್ದವಾಗಿದೆ. ಕಲಾವಿದರು ಹಾಗೂ ಶ್ರೋತೃಗಳು ಮಂಚ ಪ್ರದರ್ಸನದ ಎರಡು ಮುಖಗಳಿದ್ದಂತೆ. ಒಂದು ಮುಖ ತನ್ನತೆಯಿಂದ ತನ್ನ ಭಾವನೆಗಳು ಹಾಡುಗಾರಿಕೆ ವಾದನದ ಮೂಲಕ ವ್ಯಕ್ತಪಡಿಸಿದಾಗ ಇನ್ನೊಂದು ಮುಖ ಅಷ್ಟೇ ತನ್ಮಯತೆಯಿಂದ ರಸಾನುಭೂತಿಗೆ ಸ್ಪಂದಿಸಿದರೆ ಅದು ಒಂದು ಪೂರ್ಣ ಪ್ರಮಾಣದ ಮಂಚ ಪ್ರದರ್ಶನ ಎಂದು ಹೇಳಬಹುದು ಇನ್ನು ಸಂಗೀತದ ರಸಸ್ವಾದನೆ ಮಾಡಲು ಸಂಗೀತದ ಜ್ಞಾನವಿರಲೇಬೇಕಾದ ಅವಶ್ಯಕತೆ ಇಲ್ಲ. ವಾಸ್ತವಿಕವಾಗಿ ಒಳ್ಳೆಯ ಸಂಗೀತವು ಮನುಷ್ಯನನ್ನು ಅಷ್ಟೇ ಅಲ್ಲ ಪಶುಪಕ್ಷಿಗಳನ್ನು ಆಕರ್ಷಿಸುವ ಶಕ್ತಿ ಹೊಂದಿದೆ. ಶ್ರೋತೃಗಳ ಸುಪ್ತ ಭಾವನೆಗಳನ್ನು ಜಾಗೃತಗೊಳಿಸಿ ಸಂಗೀತದ ಆಂತರ್ಯವನ್ನು ಅರಿತು ಗಾಯಕ, ವಾದಕ ಹಾಘೂ ನರ್ತನಕಾರರು ಪ್ರದರ್ಶನ ನೀಡಿ ರಂಜಿಸುವುದು ಅವರ ಕರ್ತವ್ಯವಾಗಿದೆ.

ಮಂಚ ಪ್ರದರ್ಶನದಲ್ಲಿ ರಸಾನುಭವ

‘ಮಂಚ ಪ್ರದರ್ಶನ’ ಕಲಾವಿದ ಹಾಗೂ ಶ್ರೋತೃಗಳ ಭಾವನೆಗಳ ಸಮ್ಮಿಲನಗಳ ಕೇಂದ್ರ ವಿಶೇಷವಾಗಿ ಸಂಗೀತವು ಭಾವದ ಭಾಷೆಯೆಂದು ಕರೆಯಲ್ಪಟ್ಟಿದೆ ರಾಗ ರಸಾಭಿವ್ಯಕ್ತಿಯಲ್ಲಿ ಭಾವವು ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಸಂಸ್ಕೃತ ಗ್ರಂಥಕಾರರು ಚರ್ವಣ ಮತ್ತು ಆಸ್ವದನ ಶಬ್ದಗಳನ್ನು ರಸದ ಪರ್ಯಾಯವಾದ ಶಬ್ದಗಳೆಂದು ಹೇಳಿದ್ದಾರೆ. ಸಂಗೀತದಲ್ಲಿಯ ಭಾವನೆಯ ಚರ್ವಣದಿಂದ ನಮಗೆ ರಸಸ್ವಾದನೆ ದೊರಕುತ್ತದೆ. ಲೌಕಿಕದಲ್ಲಿ ಭಾವವು ಕೆಲವು ಸಲ ಸುಖಮಯವಾಗಿರಬಹುದು. ಆದರೆ ಸಾಹಿತ್ಯ ಕಲಾ ಪ್ರಪಂಚದಲ್ಲಿ ಅದು ಯಾವಾಗಲೂ ಆನಂದವನ್ನೇ ನೀಡುತ್ತದೆ. ಕರುಣ ರಸವು ಆನಂದವನ್ನೇ ನೀಡುತ್ತದೆ. ಕರುಣ ರಸದ ಪ್ರಭಾವದಿಂದ ಕೆಲವು ಸಲ ಕಣ್ಣಲ್ಲಿ ನೀರಾಡಬಹುದು. ಆದರೆ ಅದು ದುಃಖಾಶೃವಾಗಿರದೆ ಆನಂದಾಶೃವಾಗಿದೆ. ಹಾಗೆಯೇ ರತಿಭಾವವು ಚಿಂತೆ, ಕಾತುರತೆ, ಉದ್ವೇಗಗಳಿಂದ ಕೂಡಿದ್ದು ಅನೇಕ ಸಲ ಈ ಭಾವವು ಹೃದಯದ ಏರಿಳಿತವನ್ನು ಹೆಚ್ಚಿಸಬಹುದು. ಆದರೆ ಶೃಂಗಾರ ರಸವು ಮಾತ್ರಾ ಯಾವಾಗಲೂ ಆನಂದವನ್ನೇ ಕೊಡುವುದಲ್ಲದೆ ಇದಕ್ಕೆ ವ್ಯತಿರಿಕ್ತವಾದ ಇನ್ನಾವ ರಸಭಾವಕ್ಕೂ ಅಲ್ಲಿ ಆಸ್ಪದವಿರುವುದಿಲ್ಲ. ಈ ಮೇಲಿನ ವಿಷಯಕ್ಕೆ ನಮ್ಮ ನಿತ್ಯ ಜೀವನವನ್ನು ಸೂಕ್ಷ್ಮವಾಗಿ ಗೂಗಿಸಿ ನೋಡಿದಾಗ ಸಂತೋಷದಿಂದ ಸಂತೋಷ, ದುಃಖದಿಂದ ದುಃಖ ದೊರೆಯುತ್ತದಲ್ಲದೆ, ಸಂತೋಷದಿಂದ, ದುಃಖ, ದುಃಖದಿಂದ ಸಂತೋಷ ಸಿಗುವುದು ವಿರಳ. ಆದರೆ ಕಲಾ ಪ್ರಪಂಚದಲ್ಲಿ ಆನಂದವನ್ನುಳದು ಇನ್ನಾವ ಪ್ರಾಪಂಚಿಕ ಭಾವನೆಗಳಿಗೆ ಅಲ್ಲಿ ಸ್ಥಾನವಿಲ್ಲ. ದುಃಖ ಸನ್ನಿವೇಶದಿಂದ ಮನಸ್ಸು ನೊಂದುಕೊಂಡು ದುಃಖಗೊಳ್ಳಬಹುದು. ಆದರೆ ಸಂಗೀತದಲ್ಲಿಯ ಕರುಣ ರಸವನ್ನು ಅನುಭವಿಸಿದಾಗ, ನಾವು ಆನಂದ ರಸದಲ್ಲಿ ತೇಲಿ ಹೋಗುತ್ತೇವೆ. ಹಾಗೆ ಪ್ರತಿಯೊಬ್ಬ ಕಲಾವಿದ ತನ್ನ ಭಾವನೆಗಳನ್ನು ಸಂಗೀತದ ಮುಖಾಂತರ ಹೊರ ಹೊಮ್ಮಿಸಿ ಶ್ರೋತೃಗಳ ಭಾವನೆಗಳನ್ನು ಸ್ಪಂದಿಸುವ ರೀತಿಯಲ್ಲಿ ಕಲೆಯನ್ನು ಪ್ರದರ್ಶಿಸಬೇಕು. ಅಂದಾಗಲೇ ಮಂಚ ಪ್ರದರ್ಶನ ಸಾರ್ಥಕತೆಯನ್ನು ಪಡೆಯುವುದು. ಇನ್ನುಳಿದ ಕಲೆಗಳಾದ ಅಂದರೆ ನೃತ್ಯಕಲೆ ಇದರಲ್ಲಿಯ ಅಂಗ ಪ್ರದರ್ಶನ, ಹಾವಭಾವಗಳಿಂದ ಭಾವನೆಗಳನ್ನು ವ್ಯಕ್ತಪಡಿಸಬಹುದು. ಚಿತ್ರಕಲೆಯಲ್ಲಿ ರೇಖೆಗಳು ಹಾಗೂ ಬಣ್ಣಗಳಿಂದ ಭಾವನೆಗಳನ್ನು ವ್ಯಕ್ತಪಡಿಸಬಹುದು. ಈ ಮೇಲಿನ ಎರಡೂ ಕಲೆಗಳಿಗೂ ಭಾವನೆಗಳನ್ನು ವ್ಯಕ್ತಪಡಿಸಲು ಪೂರಕ ಸಾಧನಗಳಿವೆ. ಆದರೆ ಸಂಗೀತಕ್ಕೆ ಅಮೂರ್ತ ಸ್ವರೂಪವಾದ ನಾದ (ಧ್ವನಿ) ಮಾತ್ರದಿಂದ ಭಾವನೆಗಳನ್ನು ವ್ಯಕ್ತಪಡಿಸಬೇಕು. ಹೀಗಾಗಿ ಅನೇಕ ಪಂಡಿತರು ‘ಸಂಗೀತ ಭಾವನೆಗಳ ಪ್ರದರ್ಶನದ ಕಲೆ’ ಎಂದು ಹೇಳಿದ್ದಾರೆ. ಪಂ. ರವೀಂದ್ರನಾಥ ಟ್ಯಾಗೋರರು ‘ಸಂಗೀತ ಭಾವನೆಗಳನ್ನು ಪ್ರಕಟಗೊಳಿಸುತ್ತದೆ’ ಎಂದು ತಮ್ಮ ಲೇಖನದಲ್ಲಿ ಹೇಳಿದ್ದಾರೆ.

ಮಂಚ ಪ್ರದರ್ಶನದ ವಿವಿಧ ರೂಪಗಳು

ಮಂಚ ಪ್ರದರ್ಶನವಾಗವ ಕಲೆಯನ್ನು ಭರತನು ಯಜ್ಞವೆಂದು ಕರೆದಿದ್ದಾನೆ. ನಾಟ್ಯಶಾಸ್ತ್ರದಲ್ಲಿ ಮಂಚಪೂಜನ ಮತ್ತು ಮಂಚ ಪ್ರದರ್ಶನ ವಿಸ್ತೃತರ್ವನೆಯನ್ನು ನೀಡಲಾಗಿದೆ. ಮಂಚ ಪ್ರದರ್ಶನ ಎಂಬ ಪವಿತ್ರ ಯಜ್ಞವನ್ನು ಅಪವಿತ್ರಗೊಳಿಸಿದಂತೆ ಪೂರ್ಣ ಅವಧಿಯ ತರಬೇತಿ ಪಡೆದು ಪ್ರಬುದ್ಧನಾಗಿ  ಗುರುಗಳ ಅಪ್ಪಣೆಯ ಮೇರೆಗೆ ಸಂಪೂರ್ಣ ತಯಾರಿಯೊಂದಿಗೆ ಮಂಚ ಪ್ರದರ್ಶನಕ್ಕೆ ಅಣಿಯಾಗಬೇಕಾಗುತ್ತಿತ್ತು. ಮಂಚ ಪ್ರದರ್ಶನ ಸರಸ್ವತಿಯ ಮಂದಿರವೆಂದು ಹಿರಿಯ ಕಲಾವಿದರು ಪೂಹಿಸಿದ್ದಾರೆ. ಮಂಚ ಪ್ರದರ್ಶನ ಕಾಲಕ್ಕೆ ತಕ್ಕಂತೆ ಬದಲಾಗುತ್ತ ಬಂದಿದೆ. ಸಂದರ್ಭಕ್ಕೆ ಅನುಸಾರವಾಗೆ ಮಂಚ ಪ್ರದರ್ಶಿಸದ ಸ್ವರೂಪ ನಿರ್ಧರಿಸಲ್ಪಡುತ್ತದೆ. ಮದುವೆ, ಮುಂಜಿವೆ, ಹುಟ್ಟುಹಬ್ಬದ ಸಮಾರಂಭದಲ್ಲಿ ಮಂಚ ಪ್ರದರ್ಶನಗಳು ಬೇರೆ ರೀತಿಯಾಗಿರುತ್ತವೆ. ಈ ರೀತಿ ಮಂಚ ಪ್ರದರ್ಶನಗಳಿಗೆ ಯಾವುದೇ ರೀತಿಯ ಕಟ್ಟುಪಾಡುಗಳು ನೀತಿ ನಿಯಮಗಳು ಇರುವುದಿಲ್ಲ. ಏಕೆಂದರೆ ಮದುವೆ ಮನೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಯುವಾಗ ಅಲ್ಲಿ ನಿರಂತರವಾಗಿ ಬಂದುಹೋಗುವ ಅತಿಥಿಗಳು, ಮಾತನಾಡುವ ಶಬ್ದ, ಭೋಜನಕೂಟ ಮುಂತಾದ ಗಲಾಟೆಗಳಲ್ಲಿ ಕಲಾವಿದನ ಏಕಾಗ್ರತೆ ಭಂಗವಾಗುತ್ತದೆ. ಆದ್ದರಿಂದ ಇಲ್ಲಿ ಕಲಾವಿದನು ಪ್ರದರ್ಶಿಸಬೇಕಾಗುತ್ತದೆ. ಇನ್ನೂ ಧಾರ್ಮಿಕ ಸನ್ನಿವೇಶಗಳಲ್ಲಿ ನಡೆಸುವ ಮಂಚ ಪ್ರದರ್ಶನ ಧಾರ್ಮಿಕ ಸ್ವರೂಪವಾಗಿರುತ್ತದೆ. ಉದಾಹರಣೆಗೆ ರಾಮನವಮಿ, ಗಣೇಶೋತ್ಸವ, ದಸರಾ ಉತ್ಸವ ಮುಂತಾದವುಗಳು. ಇನ್ನು ಟಿಕೇಟ್‌ಗಳ ಮೂಲಕ, ಸದಸ್ಯತ್ವದ ಮೂಲಕ, ಶ್ರೋತೃಗಳ ಭಾಗವಹಿಸುವ ಸಂಗೀತ ಸಭೆಗಳು ಮತ್ತು ಮಹಾನ್ ಸಂಗೀತ ತಜ್ಞರ ಪುಣ್ಯತಿಥಿಯ ಅಥವಾ ಜನ್ಮಜಯಂತಿಯ ಸಂದರ್ಭದ ಕಾರ್ಯಕ್ರಮಗಳು ಬೇರೆ ರೀತಿಯದ್ದಾಗಿರುತ್ತವೆ.

ಸಂಗೀತ ಸಭೆಗಳ ಪ್ರಾಯೋಜಕರು ಸಂಗೀತದ ವಿದ್ವಾನರು, ಏರ್ಪಡಿಸುವ ಮಂಚ ಪ್ರದರ್ಶನದಲ್ಲಿ ಹೆಚ್ಚು ಶಿಸ್ತು, ಸಂಯಮಗಳು ಕಂಡುಬರುತ್ತವೆ. ಇನ್ನು ಈಗಿನ ಆಧುನಿಕ ಕಾಲದಲ್ಲಿ ಸುಗಮ ಸಂಗೀತ, ಗಜಲ್, ಭಜನೆ, ಲೋಕಸಂಗೀತ, ಕವ್ವಾಲಿ, ಇತ್ಯಾದಿ ಪ್ರಕಾರಗಳನ್ನು ಸ್ವತಂತ್ರವಾಗಿ ಪ್ರದರ್ಶಿಸುತ್ತಿರುವರು. ಕಾಲಕಾಲಕ್ಕೆ ಜನರ ಅಭಿರುಚಿಗನುಗುಣವಾಗಿ ಸಂಗೀತವು ಪರಿವರ್ತನ ಶೀಲವಾದಾಗ್ಯೂ ಪ್ರತಿಯೊಂದು ಶೈಲಿಗೂ ಅದರದೇ ಆದ ಸ್ಥಾನವಿದೆ. ಈ ಎಲ್ಲ ಪ್ರಕಾರ ಸಂಗೀತಕ್ಕೆ ಮೂಲ ಬೇರು ಶಾಸ್ತ್ರೀಯ ಸಂಗೀತ. ಇನ್ನು ದೂರದರ್ಶನದ ಸಂಗೀತ ಸಭೆಗಳು ಮತ್ತು ಆಕಾಶವಾಣಿ ಸಂಗೀತ ಸಭೆಗಳು ಸಹ ಮಂಚ ಪ್ರದರ್ಶನದ ಅಂಗಗಳಾಗಿವೆ.

ಮಂಚ ಪ್ರದರ್ಶನದ ರಂಗಮಂಟಪಗಳು (ವೇದಿಕೆ)

ಪುರಾತನ ಕಾಲದಲ್ಲಿ ದೇಗುಲಗಳ ಸಭಾಂಗಣದಲ್ಲಿ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅದಕ್ಕಾಗಿ ಪ್ರತ್ಯೇಕ ರಂಗ ಮಂಟಪಗಳು ಇರುತ್ತಿದ್ದವು. ಅನೇಕ ಪುರಾತನ ದೇವಸ್ಥಾನಗಳಲ್ಲಿ ರಂಗಮಂಟಪಗಣನ್ನು ಕಾಣಬಹುದಾಗಿದೆ. ರಂಗ ಮಂಟಪದ ಮೂರು ಕಡೆ ಜನರಿಗೆ ಕುಳಿತುಕೊಳ್ಳವ ವ್ಯವಸ್ಥೆ ಇರುತ್ತಿತ್ತು. ಇಂದಿಗೂ ಸಹ ಕೇರಳದ ಕೊತ್ತಂಬಲಂ ನಾಟ್ಯಗಳು ಈಗಲೂ ದೇವಾಲಯಗಳ ರಂಗ ಮಂಟಪಗಳಲ್ಲಿ ನಡೆಯುತ್ತದೆ. ನಂತರ ರಾಜಾಶ್ರಯ ಕಾಲದಲ್ಲಿ ರಾಜ ದರ್ಬಾರಿನಲ್ಲಿ ನೃತ್ಯಕ್ಕೆ ಹಾಡುಗಾರಿಕೆಗೆ ಸಹವಾದ್ಯ ವೃಂದದವರಿಗೆ ಪ್ರತ್ಯೇಕ ಮಂಚದ ವ್ಯವಸ್ಥೆ ಇರುತ್ತಿತ್ತು. ಅನೇಕ ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಚಿತ್ರಣ ಸಹಿತ ರಂಗ ಮಂಟಪಗಳನ್ನು ಕಾಣಬಹುದಾಗಿದೆ.

ಇನ್ನು ಆಧುನಿಕ ರಂಗ ಮಂಟಪಗಳನ್ನು ಸಂಯೋಜಕರು ಅಭಿರುಚಿಗೆ ತಕ್ಕಂತೆ ವಿವಿಧ ರೂಪ ಹೊಂದಿರುತ್ತದೆ. ವಿದ್ಯುತ್ ಶಕ್ತಿ, ಧ್ವನಿವರ್ಧಕಗಳ ವ್ಯವಸ್ಥೆ, ಅಲಂಕಾರಯುತವಾದ ವೇದಿಕೆ, ಇವೆಲ್ಲವನ್ನು ಸೂಕ್ಷ್ಚವಾಗಿ ಇಲ್ಲಿ ಕಾಣಬಹುದು. ನೃತ್ಯ ಪ್ರದರ್ಶನವಿದ್ದರೆ ದೀಪದ ವಿಶೇಷ ಅಲಂಕಾರ ಬೇಕಾಗುತ್ತದೆ. ಇನ್ನು ಗಾಯನ ಮತ್ತು ವಾದನ ಕಾರ್ಯಕ್ರಮಗಳಿಗೆ ದೀಪದ ಅಲಂಕಾರ ಬೇಕಾಗುವುದಿಲ್ಲ. ಆಧುನಿಕ ಯುಗದಲ್ಲಿ ಧ್ವನಿ ವರ್ಧಕಗಳು, ಸಂಗೀತ ಕಾರ್ಯಕ್ರಮಗಳಿಗೆ ಅವಶ್ಯಕವಾಗಿ ಬೇಕು. ಧ್ವನಿವರ್ಧಕಗಳು ಒಳ್ಳೆಯ ಗುಣಮಟ್ಟದ್ದಾಗಿರಬೇಕು. ಇಲ್ಲದಿದ್ದರೆ ಕರ್ಕಶ ಧ್ವನಿಯಿಂದ ಮಂಚ ಪ್ರದರ್ಶನದ ಒಳ್ಳೆಯ ವಾತಾವರಣವನ್ನೇ ಕೆಡಿಸಿಬಿಡುತ್ತದೆ. ಇನ್ನು ಸಹವಾದ್ಯಗಾರರಿಗೂ ಸಹ ಪ್ರತ್ಯೇಕ ಧ್ವನಿವರ್ಧಕ ವ್ಯವಸ್ಥೆ ಇರುತ್ತದೆ. ಆದುದರಿಂದ ಅವರು ಸಹ ತಮ್ಮ ಕಲಾಕೌಶಲ್ಯವನ್ನು ಪ್ರದರ್ಶಿಸಬಹುದು. ಇದಕ್ಕನುಸಾರವಾಗಿ ಗಾಯಕನ ಸುತ್ತಲು ಆಸೀನರಾಗಲು ಪಕ್ಕವಾದ್ಯದವರಿಗೂ ಪ್ರತ್ಯೇಕವಾದ ಅವರದೇ ಆಸನಗಳಿರುತ್ತವೆ. ಪ್ರಮುಖವಾಗಿ ಗಾಯಕವ ಸ್ವಲ್ಪ ಹಿಂದುಗಡೆ ತಂಬೂರಿ ಸಾಥಿದಾರರು, ಗಾಯಕರ ಎಡಕ್ಕೆ ತಬಲಾವಾದಕರು, ಬಲಕ್ಕೆ ಹಾರ್ಮೋನಿಯಂ ಅಥವಾ ಸಾರಂಗಿ ಕೀ ಬೋರ್ಡ್ ಸಾಥಿದಾರರು ಕುಳಿತಿರುತ್ತಾರೆ. ನಂತರ ಇನ್ನುಳಿದ ಸಹ ವಾದ್ಯಗಾರರು, ಗಾಯಕನ ಹಿಂದಕ್ಕೆ ಆಸೀನರಾಗಿರುತ್ತಾರೆ.

ಹೀಗೆ ಆಧುನಿಕ ಯುಗದಲ್ಲಿ ಕಾರ್ಯಕ್ರಮಕ್ಕೆ ತಕ್ಕಂತೆ ವೇದಿಕೆಯನ್ನು ಸಿದ್ಧಪಡಿಸುತ್ತಾರೆ.

ಮಂಚ ಪ್ರದರ್ಶನಕ್ಕೆ ಧ್ವನಿ ಸಂಸ್ಕರಣ

ಹಿಂದಿನ ಕಾಲದಲ್ಲಿ ಮಂಚ ಪ್ರದರ್ಶನದಲ್ಲಿ ಶ್ರೋತೃವರ್ಗ ಬಹಳ ಕಡಿಮೆ ಪ್ರಮಾಣದಲ್ಲಿರುತ್ತಿತ್ತು. ಕಲಾಕಾರರು ಖುಲ್ಲಾ ಧ್ವನಿಯಿಂದ ಹಾಡುತ್ತಿದ್ದರು. ಇಂದಿನ ವೈಜ್ಞಾನಿಕ ಯುಗದಲ್ಲಿ ಗಾಯಕನಿಗೆ ಜೋರಾಗಿ ಹಾಡುವ ಪ್ರಮಯವೇ ಇಲ್ಲ. ಕಾರಣ ಧ್ವನಿವರ್ಧಕ ಯಂತ್ರದ ಸಾಹಾಯದಿಂದ ದೂರದವರೆಗೂ ಕಲಾವಿದನ ಪ್ರಸ್ತುತಿಯನ್ನು ಕೇಳಬಹುದು. ಮಂಚ ಪ್ರದರ್ಶನ ಕೈಗೊಳ್ಳುವ ಕಲಾವಿದನು ತನ್ನ ಧ್ವನಿಯನ್ನು ಹೇಗೆ ಸಂಸ್ಕರಿಸಿ ತರಬೇತಿಗೊಳಿಸಬೇಕೆಂದು ಸಂಗೀತ ಸಾರೋದ್ಧಾರದಲ್ಲಿ ಚೆನ್ನಾಗಿ ವಿವರಿಸಿದ್ದಾರೆ.

ಸರ್ವ ಗಾಸೋಪಯೋಗಿ ತ್ವಾಚ್ಚಾರೀರಂ ಲಕ್ಷ್ಯತ್ಯೇಧುನಾ
ರಾಗಾಭಿವ್ಯಕ್ತಿ
ಶಕ್ತತ್ವ ಮನಭ್ಯಾನೇ ಪ್ಲಿಯದ್ವನೇಃ
ತಚ್ಛಾರೀರ
ಮೀತ ಪ್ರೋತ್ತಂ ಶರೀರೇಣ ಸಹೋದ್ಭಾವತ್

ಸಹಜ ಮನುಷ್ಯನ ಕಂಠದಿಂದ ಹೊರಡುವ ಗಾನ-ಯೋಗ್ಯವಾದ ಮೃದು ಮಧುರ ಧ್ವನಿಯನ್ನೇ ಶಾರಿರ (ಧ್ವನಿ) ಎನ್ನುವರು. ರಾಗಾಭಿವ್ಯಕ್ತಿತ್ವಕ್ಕೆ ಬೇಕಾದ ಗಮಕಾದಿಗಳ ಪ್ರಯೋಗ ಭಾವನೆಗಳೊಂದಿಗೆ ಶರೀರದಿಂದಲೇ ಹೊರಹೊಮ್ಮುವುದರಿಂದ ಆ ಧ್ವನಿಯನ್ನೇ ಶಾರೀರ ಎಂದು ಕರೆದಿದ್ದಾರೆ. ಗಾಯಕನಿಗೆ ಇದೊಂದು ದೈವದತ್ತವಾದ ಸ್ವಭಾವತಃ ಒಳ್ಳೆಯ ಶಾರೀರ (ಧ್ವನಿ) ಇರುವುದಿಲ್ಲ. ‘ಅಭ್ಯಾಸ ಸಾರಿಣಿ ವಿದ್ಯಾ’ ಎಂಬಂತೆ ಸತತ ಕಂಥಸಾಧನೆ ಮೂಲ್ಕ ಶಾರೀರದಲ್ಲಿ ಅನೆಕ ಗುಣಗಳನ್ನು ಹೆಚ್ಚಿಸಿಕೊಂಡು ಒಳ್ಳೆಯ ಧ್ವನಿಯನ್ನು ಪಡೆಯುತ್ತಾನೆ.

ಮಂಚ ಪ್ರದರ್ಶನಕ್ಕಾಗಿ ಗಾಯಕರು ಗಮನಿಸಬೇಕಾದ ಅಂಶಗಳು

೧) ಕಲಾಕಾರರಿಗೆ ಆಯೋಜಕರು ಹಾಗೂ ಶ್ರೋತೃಗಳ ಬಗೆಯಾಗಿ ಆತ್ಮೀಯತೆ ಹಾಗೂ ಗೌರವಿಸಬೇಕು.

೨) ಕಾರ್ಯಕ್ರಮ ಸಣ್ಣದಿರಲಿ ದೊಡ್ಡದಿರಲಿ ಯಾವುದೇ ಮಂಚ ಪ್ರದರ್ಶನವನ್ನು ಲಘುವಾಗಿ ಕಾಣಬಾರದು.

೩) ಮುಖ್ಯ ಗಾಯಕನು ಮಂಚ ಪ್ರದರ್ಶನಕ್ಕಿಂತ ಪೂರ್ವದಲ್ಲಿ ತನ್ನ ಧ್ವನಿಯನ್ನು ಸಂಪೂರ್ಣವಾಗಿ ತಯಾರಿ ಪಡಿಸಿಕೊಳ್ಳಬೇಕು.

೪) ಪಕ್ಕವಾದ್ಯಗಳನ್ನೆಲ್ಲಾ ಕಾರ್ಯಕ್ರಮಕ್ಕಿಂತ ಮೊದಲು ಶೃತಿ ಮಾಡಿಕೊಳ್ಳಬೇಕು. ಏಕೆಂದರೆ ಕಾರ್ಯಕ್ರಮ ನಡೆದಾಗ ಮಧ್ಯ ಮಧ್ಯ ಹಾಡುವುದನ್ನು ನಿಲ್ಲಿಸಿ ಶೃತಿ ಮಾದಿದರೆ ಸಭಾಭಂಗವಾಗುತ್ತದೆ.

೫) ಮಂದ್ರ ಸ್ಥಾಯಿಯಲ್ಲಿ ಅಲಾಪನೆಗಳನ್ನು ಮಾಡುವಾಗ ಕತ್ತನ್ನು ಕೆಳಗಡೆ ಬಗ್ಗಿಸಬಾರದು. ಇದರಿಂದ ಕಂಠದಿಂದ ನಾದ ಹೊರಬರಲು ಅಡ್ಡಿಯಾಗುತ್ತದೆ

೬) ನಾದದ ಜೊತೆಗೆ ತಾಲ ಮತ್ತು ಲಯದ ಕಡೆಗೆ ಗಮನವಿಟ್ಟು ಹಾಡಬೇಕು.

೭) ಪಕ್ಕವಾದ್ಯದವರೊಂದಿಗೆ ಪರಸ್ಪರ ಸಕಾರಾತ್ಮಕವಾಗಿ ಕಾರ್ಯಕ್ರಮವನ್ನು ಹಾಡಬೇಕು.

೮) ವಾದನಕಾರರು ತಮ್ಮ ಕೈ ಬೆರಳುಗಳಿಗೆ ಅಘಾತವಾಗದಂತೆ ನೋಡಿಕೊಳ್ಳಬೇಕು ಹಾಗೂ ತಮ್ಮ ಕೈ ಬೆರಳುಗಳಿಗೆ ಅಘಾತವಾಗದಂತೆ ನೋಡಿಕೊಳ್ಳಬೇಕು. ಹಾಗೂ ತಮ್ಮ ವಾದ್ಯಗಳನ್ನು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಒಯ್ಯುವಾಗ ಕಾಳಜಿ ವಹಿಸಬೇಕು.

೯) ಮಂಚ ಪ್ರದರ್ಶನಕ್ಕಿಂತ ಪೂರ್ವದಲ್ಲಿ ಕಲಾಕಾರರು ತಮ್ಮ ಸ್ಥಿತಿಯನ್ನು ಸಮತೋಲನದಲ್ಲಿ ಇಟ್ಟುಕೊಂಡು ಶಾಂತಚಿತ್ತನಾಗಿ ಪ್ರಶಾಂತ ಮನಸ್ಸಿನಿಂದ ತನ್ನ ಗಾಯನವನ್ನು ಪ್ರಸ್ತುತಪದಿಸಬೇಕು.

೧೦) ಶ್ರೋತೃಗಳ ಆಕಾಂಕ್ಷೆಗಳಿಗೆ ಸ್ಪಂದಿಸಬೇಕು.

೧೧) ಗಾಯನದಲ್ಲಿ ರಸವೇ ಜೀವಾಳ ರಾಗ ಪ್ರಸ್ತುತಿಯಲ್ಲ. ಮನಃ ಪೂರ್ವಕ ಒಂದಾದಾಗ ಸ್ವರ ಲಯಗಳ ಚಮತ್ಕಾರಿಕ ಪ್ರಕ್ರಿಯೆಯಲ್ಲಿ ರಸೋತ್ಪತ್ತಿಯಾಗುವಂತೆ ಗಮನವಿರಿಸಿ ಪ್ರಸ್ತುತ ಪಡಿಸಬೇಕು.

೧೨) ರಾಗ ಶುದ್ಧತೆ, ವಾದಿ-ಸಂವಾದಿಗಳ ಭಾವಗಳನ್ನು ಚೆನ್ನಾಗಿ ಅರಿತು ರಾಗ ಪ್ರಸ್ತುತಿ ಪಡಿಸಬೇಕು.

೧೩. ಧ್ವನಿವರ್ಧಕ ಮುಖಾಂತರ ಹಾಡುವಾಗ ಅದನ್ನು ತಮ್ಮ ಧ್ವನಿಗೆ ತಕ್ಕಂತೆ ಅಳವಡಿಸಿಕೊಳ್ಳಬೇಕು.

೧೪) ಧ್ವನಿ ಸಂಸ್ಕಾರಣವನ್ನು ಅರಿತಿರಬೇಕು

೧೫) ಲಘು ಸಂಗೀತ ಕಾರ್ಯಕ್ರಮ ಕೊದುವಾಗ ಸಾಹಿತ್ಯ ಲೋಪವಾಗದಂತೆ ಪ್ರಸ್ತುತ ಪಡಿಸಬೇಕು.

೧೬) ಕಲೆಗಾಗಿ ಕಲೆಯನ್ನು ಬಳಸಬೇಕು.

೧೭) ಗಾಯಕರು ಗಾಯಕನ ಗುಣದೋಷಗಳನ್ನು ಬರೀ ತಿಳಿದಿರುವಷ್ಟೇ ಅಲ್ಲದೆ ಮಂಚ ಪ್ರದರ್ಶನದಲ್ಲಿ ಅಳವಡಿಸಿಕೊಳ್ಳಬೇಕು.

೧೮) ಪ್ರತಿಯೊಂದು ಮಂಚ ಪ್ರದರ್ಶನ ಸಿದ್ಧತೆಯನ್ನು ಪೂರ್ವಯೋಜಿತಗೊಳಿಸಬೇಕು.

೧೯) ಸಂದರ್ಭ ಯೋಜಿತವಾಗಿ ತಮ್ಮ ಗಾಯನವನ್ನು ಪ್ರಸ್ತುತಪಡಿಸಬೇಕು. ಅಂದರೆ ಲಘು ಸಂಗೀತ, ಶಾಸ್ತ್ರೀಯ ಸಂಗೀತ ಅಥವಾ ಲೋಕಗೀತೆ, ಗಜಲ್, ಠುಮ್ರಿ ಇತ್ಯಾದಿ.

೨೦) ಮಂಚ ಕಾರ್ಯಕ್ರಮಕ್ಕೆ ಮೊದಲು ಮತ್ತು ಕೊನೆಗೆ ಮಂಚಕ್ಕೆ ನಮಸ್ಕರಿಸುವುದನ್ನು ಮರೆಯಬಾರದು. ಏಕೆಂದರೆ ಭರತನಾಟ್ಯ ಶಾಸ್ತ್ರದಲ್ಲಿ ಹೇಳಿದಂತೆ ಮಂಚ ಪ್ರದರ್ಶನ ಸಂಗೀತದ ಯಜ್ಞಮಂಟಪವಿದ್ದಂತೆ ಹಾಗೂ ಶಾರದೆಯ ಪೂಜಾ ಮಂದಿರವಿದ್ದಂತೆ.

ಮಂಚ ಪ್ರದರ್ಶನದ ರೂಪರೇಷೆ

೧) ಮಂಚ ಪ್ರದರ್ಶನದ ಅವಧಿ ಹಾಗೂ ಸಮಯವನ್ನು ಗಮನಿಸಿ ರಾಗಗಳನ್ನು ಆಯ್ದುಕೊಳ್ಳಬೇಕು. ಸಾಮಾನ್ಯವಾಗಿ ಮೂರು ಗಂಟೆಗಳ ಕಾರ್ಯಕ್ರಮದಲ್ಲಿ ಖ್ಯಾಲ ಗಾಯನವನ್ನು ಎರಡು ರಾಗಗಳಲ್ಲಿ ಹಾಡಿ ಮುಂದೆ ಉಪಶಾಸ್ತ್ರೀಯ ಸಂಗೀತದ ಯಾವುದೇ ಪ್ರಕಾರದ ಶೈಲಿಯನ್ನು (ಠುಮ್ರಿ, ಟಪ್ಪಾ, ತರಾನಾ, ಚತುರಂಗ) ಹಾಡಿನ ನಂತರ ಶ್ರೋತೃಗಳ ಅಪೇಕ್ಷೆಯ ಮೇರೆಗೆ ಭಜನೆ, ಭಕ್ತಿಗೀತೆಗಳನ್ನೂ ಹಾಡಿ ಭೈರವಿರಾಗದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಬೇಕು.

೨) ಎರಡು ಗಂಟೆಗಳ ಕಾರ್ಯಕ್ರಮದಲ್ಲಿ ಸಮಯೋಚಿತ ಒಂದು ರಾಗವನ್ನು ಸಮಗ್ರ ಗಾಯಕಿಯಲ್ಲಿ ಪ್ರಸ್ತುತ ಪಡಿಸಬೇಕು. ನಂತರ ಉಪಶಾಸ್ತ್ರೀಯ ಸಂಗೀತದ ಒಂದು ಪ್ರಕಾರ, ನಂತರ ಮತ್ತೊಂದು ಯಾವುದೇ ರಾಗದ ಛೋಟಾಖ್ಯಾಲ ಹಾಡಿ ಶ್ರೋತೃಗಳ ಕೋರಿಕೆಯ ರಾಗವೋ ಅಥವಾ ಸುಗಮ ಸಂಗೀತವನ್ನೋ ಹಾಡಿ ಭೈರವಿಯೊಂದಿಗೆ ಕಾರ್ಯಕ್ರಮವನ್ನು ಮುಗಿಸಬೇಕು.

೩) ಒಂದು ಗಂಟೆಯ ಅವಧಿಯಲ್ಲಿ ಒಂದು ರಾಗದ ಗಾಯಕಿಯನ್ನು ನಂತರ ಉಪಶಾಸ್ತ್ರೀಯ ಸಂಗೀತದ ಒಂದು ಶೈಲಿಯನ್ನು ಪ್ರಸ್ತುತಪಡಿಸಬೇಕು. ಅಮೇಲೆ ಭಜನೆ ಇಲ್ಲವೆ ಭಕ್ತಿಗೀತೆಯನ್ನೇ ಭೈರವಿಯಲ್ಲಿ ಪ್ರಸ್ತುತ ಪಡಿಸಬೇಕು.

೪) ಕೇವಲ ಹದಿನೈದು ನಿಮಿಷ ಹಾಡಬೇಕಾದಲ್ಲಿ ಒಂದು ರಾಗದ ಛೋಟಾಖ್ಯಾಲನ್ನು ಹಾಡಿ ಭಜನೆ ಇಲ್ಲವೇ ಭಕ್ತಿಗೀತೆ ಹಾಡಬೇಕು.

ಹೀಗೆ ಯಾವುದೇ ಮಂಚ ಪ್ರದರ್ಶನ ನೀಡಬೇಕಾದರೆ ಕಲಾವಿದನು ಪೂರ್ವದಲ್ಲಿ ಯಾವ ರಾಗ ಹಾಡಬೇಕು ಎಷ್ಟು ಸಮಯದಲ್ಲಿ ಹಾಡಬೇಕು ಎಂಬುದನ್ನು ತಯಾರಿಸಿಕೊಳ್ಳಬೇಕು. ಅದಾಗತಿ ಮಾತ್ರ ಮಂಚ ಪ್ರದರ್ಶನ ಯಶಸ್ವಿಯಾಗುವುದು.

ಆಕಾಶವಾಣಿ ಮತ್ತು ದೂರದರ್ಶನ ಮಂಚ ಪ್ರದರ್ಶನಗಳು

ಆಕಾಶವಾಣಿಯಿಂದ ಬಿತ್ತರವಾಗುವ ಎಲ್ಲ ಕಾರ್ಯಕ್ರಮಗಳೂ ಮಂಚ ಪ್ರದರ್ಶನಗಳೇ ಆಗಿವೆ. ಕಲಾಕಾರರ ಧ್ವನಿ ಪರೀಕ್ಷೆ ಮಾಡಿ ಅವರಿಗೆ ಶ್ರೇಣಿಯನ್ನಿತ್ತು ಉತ್ತಮಗೊಳಿಸಲು ನಿರಂತರವಾಗಿ ಜವಾಬ್ದಾರಿಯನ್ನು ತಂದುಕೊಟ್ಟಿದೆ. ಆಮಂತ್ರಿತ ಶ್ರೋತೃಗಳೆದರು ಅನೇಕ ಸಂಗೀತ ಸಮ್ಮೇಳನಗಳನ್ನು ಏರ್ಪಡಿಸಿ, ಕಲಾಕಾರರಿಗೆ ಪ್ರೋತ್ಸಾಹ ನೀಡುತ್ತವೆ.

ಇನ್ನು ದೂರದರ್ಶನವಂತೂ ಪ್ರತ್ಯಕ್ಷವಾಗಿ ಕಲಾಕಾರರ ಮಂಚ ಪ್ರದರ್ಶನವನ್ನು ಆಸ್ವಾದಿಸುವ ಸೌಲಭ್ಯವಿದೆ. ಗಾಯನ, ವಾದನ, ನರ್ತನ, ನಾಟಕ ಇತ್ಯಾದಿಗಳನ್ನು ಕುಳಿತಲ್ಲೇ ನೋಡುವ ಅವಕಾಶ ದೊರತಿದೆ. ಹಣಕೊಟ್ಟು ಮಹಾನ್ ಕಲಾಕಾರರ ಸಂಗೀತ ಕೇಳಲು ಹೋಗಲಾಗದವರೂ ಸಹ ಅವರ ಸಂಗೀತವನ್ನು ದೂರದರ್ಶನದಲ್ಲಿ ನೋಡುತ್ತ ಕೇಳುವ ಅವಕಾಶ ದೊರೆತಿದೆ.

ಮಂಚ ಪ್ರದರ್ಶನಕ್ಕೆ ಯಾವಾಗಲೂ ಒಳ್ಳೆಯ ಆಯೋಜಕ, ಆಯೋಜಕರಿಗೆ ಒಳ್ಳೆಯ ಕಲಾಕಾರ, ಕಲಾಕಾರರಿಗೆ ಸಹೃದಯ ಶ್ರೋತೃಗಳು ಇರಬೇಕು. ಅಂದಾಗ ಮಾತ್ರ ಮಂಚ ಪ್ರದರ್ಶನ ಯಶಸ್ವಿಯಾಗುವುದು.