ಹುಟ್ಟಿಬಂದೊಮ್ಮೆ ಹಿರಿಗುಡ್ಡಕ ನಡಿರಿ
ನಟ್ಟನಡುವ ಎಲ್ಲಮ್ಮನ ಗುಡಿರಿ
ಏಳ ಕೊಳ್ಳದಾಗ ಎಲ್ಲಮ್ಮನ ಪಡಿರಿ
ಹಣಿಗೆ ಹೆಚ್ಚೂದು ಭಂಡಾರ ಪುಡಿರಿ  ೧

ಉಗರಗೊಳ್ಳಾ ಸವದತ್ತಿಗಿ ತಡಿರಿ
ಛತ್ರಕಂಡು ಕಾಯಿಯ ನೀವು ಪಡಿರಿ
ಆದಿಶಕ್ತಿಗೆ ದೇವಿಗೆ ಭೆಟ್ಟಿ ಆಗಿರಿ
ನಟ್ಟನಡುವೆ ಎಲ್ಲಮ್ಮನ ಗುಡಿರಿ      ೨

ಜೋಗುಳಬಾವಿ ಸತ್ತೆವ್ವನ ಜಳಕ ಮಾಡಿರಿ
ಗಂಧದುಟ್ಟಿಗಿ ಬೇವಿನ ತಪ್ಪಲ ಉಡಿರಿ
ನಿಮ್ಮ ಮನದಾನ ಮೈಲಿಗಿ ತೊಳಿರಿ
ಏಳು ಕೊಳ್ಳದಾಗ ಎಲ್ಲಮ್ಮನ ಗುಡಿರಿ         ೩

ಸ್ವಚ್ಛ ಉಧೋಯೆಂದು ಬಾಯಿಲಿ ನುಡಿರಿ
ನೀವು ಪಾಪಕರ್ಮವನೆಲ್ಲ ತೊಳಿರಿ
ನೀವು ನಿಧಿಗೊಮ್ಮೆ ಅಡ್ಲಿಗೆ ತುಂಬರಿ
ಆರು ನದಿದಾಟ ಮುಂದಕ ನಡಿರಿ   ೪

ಏಳು ಕೊಳ್ಳದಾಗ ಕಲ್ಲಿನ ಪಡಿರಿ
ಏರಿ ಹೋಗುವಾಗ ಜಗ್ಗಿ ಜೋಲಿ ಹಿಡಿರಿ
ಎಲ್ಲಮ್ಮನ ಗುಡಿಮ್ಯಾಲೆ ಹಾರುದು ಭಂಡಾರ ಪುಡಿರಿ
ದೇವಿಯ ಮುಂದೆ ಕಾಣುವದು ಕರ್ಪೂರದ ಉರಿರಿ     ೫

ಎಲ್ಲಮ್ಮ ಇರುವದು ಗಚ್ಚಿನ ಗುಡಿರಿ
ನಟ್ಟನಡುವೆ ಜಗದಂಬನ ಗುಡಿರಿ
ಹುಟ್ಟಿ ಬಂದೊಮ್ಮೆ ಹಿರಿಗುಡ್ಡಕ ನಡಿರಿ
ಸುದ್ದಮನ ಹೇಳಿದಾಂಗ ನೀವು ನಡಿರಿ        ೬