ತಂದಾನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನಾ

ಮುದುಗೊಲ್ಲಾರ ಬೀದಿಯಲ್ಲಿ ದೊಡ್ಡವನಾಗಿ ಮಾಕಾಳೊ
ತಂದಾನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ದೊರನಾಗೀಯ ಮಕ್ಕಳು ಚಿಕಗೊಲ್ಲ ದೊಡ್ಡಗೊಲ್ಲಾ
ತಂದಾನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಚಿಕ್ಕನ ಬೆಳ್ಳಿ ಎತ್ತುಂಟು ದೊಡ್ಡನ ಬೆಳ್ಳಿ ಎತ್ತುಂಟು
ತಂದಾನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಅಣ್ಣಯ್ಯನ ಮಡದೀಯ ಅತ್ತಿಗಮ್ಮ ಚಿತುರಾಣಿ
ತಂದಾನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಬಾರಪ್ಪ ನನ ತಮ್ಮ ಹೇಳಿದ ಮಾತ ಕೇಳಯ್ಯ
ತಂದಾನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ನಿನಗೆಣ್ಣಿಗೆ ನಾನು ಹೋಗುತೀನಿ ಚಿಕ್ಕನ ಬೆಳ್ಳಿ ಎತ್ತು ಕಟ್ಟಿ
ತಂದಾನ ಶಿವನೇ ತಂದನ್ನತ ತಂದಾನಾ ಶಿವನೇ ತಂದನ್ನಾ

ನೀನು ದೊಡ್ಡನ ಬೆಳ್ಳಿ ಎತ್ತು ಕಟ್ಟಿ ಮೂಡಲ ಹೊಲವ ಊಳಪ್ಪ
ತಂದಾನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನಾ

ನೀ ಕಟ್ಟೆಣ್ಣೆ ಮೂರು ಬುತ್ತೀಯ ನಾ ತಮ್ಮನಿಗೆಣ್ಣೆಗೋಗುತೀನಿ
ತಂದಾನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನಾ

ಮೂರನ ಬುತ್ತಿ ಹೊತ್ತವನೆ ಕುದುರೆ ತೇಜಿ ಏರವನೆ
ತಂದಾನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನಾ

ತಮ್ಮನಿಗಪ್ಪ ಹೆಣ್ಣೀಗೆ ಹನ್ನೆಡೊರುಷ ಹೊರಟೀರ
ತಂದಾನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನಾ

ಕಟ್ಟಿದ ಬುತ್ತಿ ಬಿಚ್ಚಲಿಲ್ಲ ತಮ್ಮನಿಗೆಣ್ಣು ಸಿಗಲಿಲ್ಲ
ತಂದಾನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನಾ

ಹೆಣ್ಣಿಗೋಗಿ ದೊಡ್ಡಗೊಲ್ಲ ಹನ್ನೆರಡೊರುಷ ತೀರಿತ್ತು
ತಂದಾನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನಾ

ಆ ಪಟ್ಟಣಾರು ತಿರುಗವನೆ ಆ ಪಾಳ್ಯಾನ್ನಾರು ತಿರುಗವನೆ
ತಂದಾನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನಾ

ಅತಿಗಮ್ಮ ಚಿತುರಾಣಿ ಅದಕೇನಂತ ಹೇಳುತಾಳೆ
ತಂದಾನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನಾ

ನವು ಚಿತ್ತುರಡುಗೆ ಮಾಡವೆ ಪಟ್ಟಿ ಮಂಚ ತರುಸವ್ಳೆ
ತಂದಾನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನಾ

ಮೈದುನಾರೆ ಚಿಕ್ಕಗೊಲ್ಲ ಹೊಲವನ್ನಾರೆ ಉತ್ತುಗೊಂಡು
ತಂದಾನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನಾ

ಹನ್ನೆರಡೂವರೆ ಗಂಟ್ಹೆಗೆ ಏರನು ಬಿಟ್ಟು ಬರುತಾನೆ
ತಂದಾನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನಾ

ನವು ಚಿತ್ತುರಡಿಗೆ ಮಾಡಿದಳು ಅತ್ತಿಗಮ್ಮ ಚಿತುರಾಣಿ
ತಂದಾನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಅವ್ನು ಕೊಟಿಗೆಗೋದ ದನವಾರ ಕಟ್ಟವ್ನೆ ಮೈದುನಾದ್ರು ಚಿಕ್ಕುಗೊಲ್ಲ
ತಂದಾನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನಾ

ತೊಟ್ಟಿಕಲ್ ಮೇಲೆ ನಿಂತವ್ನೆ ಮೈದುನಾದ್ರೆ ಚಿಕ್ಕಗೊಲ್ಲ
ತಂದಾನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನಾ

ಅವರತ್ತುಗಮ್ಮ ಚಿತ್ತುರಾಣಿ ಮೈದುನ್ಗೆ ನೀರು ಬಿಟ್ಟವ್ಳೆ
ತಂದಾನ ಶಿವನೇ ತಂದನ್ನ ತಂದನಾ ಶಿವನೇ ತಂದನ್ನ

ಊಟಕಪ್ಪ ಬಡಿಸಿದಳು ಅದಕೇನಂತ ಹೇಳುತಾಳೆ
ತಂದಾನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನಾ

ಅವಳು ಪಟ್ಟಿಸೀರೆ ಉಟ್ಟವ್ಳೆ ಪಟ್ಟೆಯ ರವ್ಕೆ ಧರಿಸವ್ಳೆ
ತಂದನ್ನ ಶಿವನೇ ತಂದನ್ನ ತುದಾನಾ ಶಿವನೇ ತಂದನ್ನ

ಏಳ್ ಮಾರ್ ಮಂಡೆ ಕೆದರವ್ಳೆ, ಜಡೆಯನಾದರೆ ಹೆಣೆದವ್ಳೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಅಪಳಪ್ಪಟ ಮಲ್ಲಿಗೆ ಮುಡುದವ್ಳೆ ದುಂಡುಮಲ್ಲಿಗೆ ಮುಡುದವ್ಳೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಬಾರೋ ಬಾರೋ ಮೈದುನನೆ ಚಿಕ್ಕಗೊಲ್ಲ ಕೇಳಯ್ಯ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ನಿಮ್ಮಣ್ಣ ಹೆಣ್ಣೀಗೆ ಹೋಗೀದ ಹನ್ನೆರಡೊರುಷ ತುಂಬೀತು
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ನಿಮ್ಮಣ್ಣನಿರುವ ತಾಣಾವು ಖಂಡಿತಾ ನಮಗೆ ದೊರೀಲಿಲ್ಲ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ನಿಮ್ಮಣ್ಣನಾಡುವ ಜೂಜನ್ನ ಆಡಲೆಬೇಕು ನನ ಮೈದ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಕೆಟ್ಟವ ನುಡಿಯ ಕೇಳವನೆ ಮೈದುನಾರೆ ಚಿಕ್ಕಗೊಲ್ಲ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಅಣ್ಣನಿಗಮ್ಮ ಬಂದವಳು ನನಗೆ ತಾಯಿನಾಗಲುಬೇಕು
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ನಮ್ಮಣ್ಣನ್ನಾರೆ ಎಂಬುವನು ತಂದೆ ಸುಮನೆ ಉಂಟರ‍್ಲೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಮುಟ್ಠಾಳನಪ್ಪ ನೀನೆಂದ್ಲು ನಾಮನ್ನೇನೋ ನೀನೆಂದ್ಲು
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಮೈದುನಾಂತ ಮುಂಗೆಯ್ಯ ಅತ್ತಿಗಮ್ಮ ಹಿಡಿದವಳೆ
ತಂದನ್ನ ಶಿವನೇ ಸಂಪನ್ನ ತಂದಾನಾ ಶಿವನೇ ತಂದನ್ನಾ

ನೀನು ಕಣ್ಣೆತ್ತಿ ನೋಡಿದುರೆ ಏಳು ಕೋಟಿ ಶಾಪವು
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನಾ

ನೀನು ಕಣ್ಣೆತ್ತಿ ನೋಡಿದುರೆ ಏಳು ಕೋಟಿ ಶಾಪವು
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ನಿನ್ನ ತಲೆಯ ಪಿನ್ನು ತರುತಾರೆ ನನ್ನ ಪಾಪೀಯ ಕಣ್ಣಿಗೆ ಚುಚುತಾರೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ನನ್ನ ಪಾಪಿಯಂಥ ಬಲಗೈಯ ಆಸ್ತಿನಾದುರೆ ಕಡಿತಾರೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಯಮನಂತ ಪಟ್ಟುಣದೊಳಗೆ ಕಬ್ಬಿನ ಗಾಣ್ಕೆ ಆಕುತಾರೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಮಾಯದ ಪಾರಿವಾಳ ಮಾಡವನೆ ಮೈದುನಾರೆ ಚಿಕ್ಕಗೊಲ್ಲ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಆಗ ಹಕ್ಕಿನಾದುರೆ ಹಿಡಕೊಟ್ರಿ ನಿನ ಮಂಚಕೆ ನಾನು ಬರುತೀನಿ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಮೈದುನ ಮುಂಗೈಯ ಬಿಟ್ಟವಳೆ ಚಿಕ್ಕನ ಬೆಳ್ಳಿ ಎತ್ತಿಡಿದು
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಆ ದೊಡ್ಡನ ಬೆಳ್ಳಿ ಎತ್ತಿಡಿದು ಏರ ಕಟ್ಟಿ ಹೊರಟವನೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಅದಕೇನಂತ ಹೇಳುತಾಳೆ ಅತ್ತಿಗಮ್ಮ ಚಿತುರಾಣಿ
ತಂದನ್ನ ಶಿವನೇ ತಂದನ್ನ ತಂದಾನ ಶಿವನೇ ತಂದನ್ನ

ಮುಟ್ಠಾಳಾವ ನನಮಗನೆ ತಕ್ಕದ ಕೆಲಸ ಮಾಡತೀನಿ
ತಂದನ್ನ ಶಿವನೇ ತಂದನ್ನ ತಂದಾನ ಶಿವನೇ ತಂದನ್ನಾ

ಆ ತೊಟ್ಟಿದ್ ಬಳೆಯ ಒಡಕೊಂಡು ಮೈಕೈಯ್ನ ಜಿಗುಟುಗೊಂಡ್ಲು
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಅವಳು ಉಟ್ಟದಂತ ಸೀರೇಯ ಆಚಿಟ್ಟಗಲಾವ ಅರಕೊಂಡ್ಲು
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನಾ

ಪಟ್ಟೆಯ ಮಂಚದ ಮ್ಯಾಲೆ ಮಕ್ಕಾಡ್ನಾದೆ ಮಲಗವಳೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಹೆಣ್ಣಿಗೋಗಿದ್ ದೊಡ್ಡಗೊಲ್ಲ ಇಕ್ಕಿದ ಬುತ್ತಿ ಕಳೀಲಿಲ್ಲ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಕಟ್ಟೀದ್ ಬುತ್ತಿ ಕಳೀಲಿಲ್ಲ ತಮ್ಮನಿಗೆಣ್ಣು ಸಿಗುಲಿಲ್ಲ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಹನ್ನೆರಡಂತ ವರುಷಾಕೆ ಅವನು ಮನೆಗೆ ಬರುತಾನೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಯಾಕೆಲೆ ಎಣ್ಣೆ ಚಿತುರಾಣಿ ಸಪ್ಪಗಿರುವೆ ಎಂದವನೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಎಣ್ಣಿಗೋದ ಮುಟ್ಠಾಳ ಹನ್ನೆರಡೊರಷಾಕೆ ಬಂದೀದಿ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ನಿನ್ನ ತಮ್ಮನಂತ ಚಿಕ್ಕವ್ನ್ಗೆ ಏನನು ಬುದ್ಧಿ ಏಳೋದೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಮಾನಭಂಗಾವ ಮಾಡೀದ ಆ ಮಾನ ಭಂಗಾವ ಮಾಡೀದ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಆ ಪಟ್ಟೀಯ ಮಂಚಕೆ ಬಂದವನೆ ತೊಟ್ಟೀದ ಬಳೆಯ ವೊಡುದವನೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಪಟ್ಟೇಸೀರೆ ಸೆಳೆದೀದ ತೊಟ್ಟಿದ ಬಳೆಯ ಹೊಡೆದೀದ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ತೊಟ್ಟಿದ ಸೀರೆ ಬಳೆಯ ಹೊಡೆದೀದ ಮಾನಭಂಗಾವ ಮಾಡೀದ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಮಂಚದಿಂದಾದ್ರು ಏಳೆಣ್ಣೆ ಅಡಿಗೆನಾದ್ರು ಮಾಡೆಣ್ಣೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಅಡಿಗೆ ಅನ್ನ ಮಾಡೋಕೆ ಹೇಳುತೀನೆ ಕೇಳಯ್ಯ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ನಿನ ತಮ್ಮನ ತಲೆಯ ಕಡೀಬೇಕು ರಗುತಾ ನೀನು ತರಬೇಕು
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಅದಕೇನಂತ ಹೇಳುತಾನೆ ದೊಡ್ಡಗೊಲ್ಲ ತಮ್ಮಯ್ಯ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಪಾಪಿಯಂತ ತಮ್ಮನ ತಲೆಯನೆಂಗೆ ಕಡಿಲೆಣ್ಣೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಬಾರೋ ಬಾರೋ ಹೆಣ್ಣೀಗ ಹೇಳಿದ ಮಾತ ಕೇಳಯ್ಯ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ನಿನ್ನ ತಮ್ಮನಿಗೆಣ್ಣ ಕಟ್ಟುಬಿಟ್ಟು ದೇಶಾಂತರ ನೀ ಹೋಗಯ್ಯ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ನನ್ನ ತಮ್ಮನ್ನೋಡಿ ಕೇಳೆಣ್ಣೆ ಹನ್ನೆರಡೊರುಷ ತುಂಬೀತ್ತು
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಒಂದಿಡಿ ಅನ್ನಾನಾರು ಕೋಡೆಣ್ಣೆ ಅನ್ನನ್ನಾರು ಕೊಟ್ಟುಬಿಟ್ಟು
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ನನ ಕರ್ಮನಾದ್ರು ಕಳಕೊಂಡು ಪಾಪಿ ತಮ್ಮನ ತಲೆಯನ್ನು
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ನಾ ತಲೆಯ ಕಡುದು ಬರುತೀನಿ ರಗುತನಾದ್ರು ತರುತೀನಿ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ದಡ್ಡಬುಡ್ಡನೆ ಎದ್ದವಳೆ ಕರೆಚಿಪ್ಪನ್ನ ಕರೆದವ್ಳೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಅವಳು ತಪ್ಪಲಿಗಾದ ಹಾಕವಳೆ ಹುಳಿದ ಮಜ್ಜಿಗೆ ಉಯ್ದವಳೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಆ ಚಂದುರಾಯ್ದಾವ ಕೊಟ್ಟವಳೆ ಗಂಡನಂತ ಕೈಗಪ್ಪ
ತಂದನ್ನ ಶಿವನೆ ತಂದನ್ನ ತಂದನಾ ಶಿವನೇ ತಂದನ್ನ

ರುದ್ದುರು ಗೋಪ ತಾಳವನೆ ಕಡವೆ ಕೋಪ ತಾಳವನೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಹೊಲವ ಉಳೂವ ತಾನಕ್ಕೆ ಚೆಬ್ಬೆ ಹೊಲಕೆ ಹೊಯ್ತಾನೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಹೊಲವ ಉಳುತ ನಿಂತಿದ್ದ ತಮ್ಮನಾದುರೆ ಚಿಕುಗೊಲ್ಲ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಅಣ್ಣನ ಮುಖವ ನೋಡವನೆ ಕಣ್ಣಲ್ ನೀರ ಸುರಿಸವನೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಚಿಕ್ಕನ ಬೆಳ್ಳಿ ಎತ್ತನ್ನ ದೊಡ್ಡನ ಬೆಳ್ಳಿ ಎತ್ತನ್ನ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಹೊಲದಲ್ಲಾಗ ನಿಲ್ಲುಬುಟ್ಟು ಊಟಕ್ಕೆ ಬರುತವನೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಕಟ್ಟಿದ ಬುತ್ತಿ ಕಳೀಲಿಲ್ಲ ನಿನ್ಗೆ ಹೆಣ್ಣು ಸಿಕ್ಕುಲಿಲ್ಲ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ನಿನ್ಗೆ ಅನ್ನ ತಂದೆ ತಮ್ಮಯ್ಯ ನೀರ ಮರೆತು ಬಂದೀನಿ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ನೀ ಕಟ್ಟಿಯ ತಾಳಿಗೆ ಬಾರಪ್ಪ ನೀನ್ ತಪ್ಲೆ ಅನ್ನ ಉಣ್ಣೂವೆ
ತಂದನ್ನ ಶಿವನೇ ತಂದನ್ನ  ತಂದಾನಾ ಶಿವನೇ ತಂದನ್ನ

ಕರೆಕಲ್ಲಂತ ಕಟಕಕ್ಕೆ ಕರಕಂಡಾರ ಹೋಗುತಾನೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಆ ತಪ್ಪಲೆಯಂತ ಅನ್ನಾವ ತಮ್ಮನ ಕೈಗೆ ಕೊಟ್ಟಾತ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ಕಟ್ಟಿ ಹಿಂದ್ಕೆ ಹೋಗುತಾನೆ ಸರಿಯಾಗಾಯ್ದಾವ ಮಸಿತಾನೆ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಸೂರ್ಯಚಂದ್ರರೆ ಕೇಳ್ರಪ್ಪ ನೀವು ಇದಕ್ಕೆ ಸಾಕ್ಷಿಯು
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ತಾಯಿ ತಂದೆಯ ನೆನೆದವನೆ ಬಂಧು ಬಳಗವ ನೆನೆದವನೆ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಕಣ್ಣೀಗೆ ಬಟ್ಟೆ ಕಟಗೊಂಡು ಚಂದ್ರಾಯ್ದಾವ ಮಸಕೊಂಡು
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಮರೆಯ ಮೋಸ್ದಾಲಿ ಬರುತಾನೆ ತಮ್ಮನ ಹಿಂದೆ ನಿಂತವನೆ
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನಾ

ತಮ್ಮನಾದುರೆ ಚಿಕ್ಕಗೊಲ್ಲ ಮಿದುಕೆ ಅನ್ನ ಉಂಡೀದ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಮಿದುಕೆ ಅನ್ನ ಬಾಯಲ್ಲಿತ್ತು ಮಿದುಕೆ ಅನ್ನ ಕೈಯಲ್ಲಿತ್ತು
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಮರೆಯ ಮೋಸ್ದಲ್ಲಿ ಅವನು ನಿಂತ್ಕೊಂಡು ಅವನು ತಮ್ಮನಾದರೆ ತಲೆಯನ್ನು
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಅಣ್ಣನಾದುರೆ ದೊಡ್ಡಗೊಲ್ಲ ತಮ್ಮನ ತಲೆಯ ಕಡುದವನೆ
ತಂದೆನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಕಟ್ಟೀಗೆ ಹೋಗಿ ಬಿದ್ದಿತು ತಮ್ಮನಪ್ಪ ಮುಂಡಾವು
ತಂದನ್ನ ಶಿವನೆ ತಂದನ್ನ ತಂದಾನ ಶಿವನೇ ತಂದನ್ನ

ನಾನು ಪಾಪಿಯಲ್ಲೊ ಅಣ್ಣಯ್ಯ ನೀ ಧರ್ಮಕರ್ಮ ನೋಡಲಿಲ್ಲೊ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ತಲೆಯನಾದುರೆ ಕಡಿದಲ್ಲೋ ನೀ ಉಣ್ಣಕ್ಕನ್ನ ಬೇಡಣ್ಣ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಉಣ್ಣಕಕನ್ನ ಬೇಡಣ್ಣ ಹೊದಿಯೋಲ್ ಹೊದಪು ಬೇಡಣ್ಣ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಶಾಪ ಕೊಟ್ಟ ತಲೆಯಪ್ಪ ಪ್ರಾಣನಾದ್ರು ಬಿಟ್ಟೀತು
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ತ್ಯಾಗದೆಲೆಯ ಕಿತ್ತುಕೊಂಡು ಜೊನ್ನೆನಾದುರೆ ಕಟ್ಟಿಕೊಂಡು
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಅರಗುತನಾದುರೆ ಆತುಕೊಂಡು ಓಡಿ ಓಡಿ ಬರುತಾನೆ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಅವಳ ಮೈದುನನ ರಗುತಾವ ಚಿತುರಾಣಿಗೆ ಇಕ್ಕೀದ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಅವಳು ತಲೆಯ ರಗುತಾವ ಹಣೆಯಲಾಗ ಇಟುಗೊಂಡು
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಹಣೆಗೆ ರಗುತ ಇಟುಗೊಂಡು ದಡ್ಡಬುಡ್ಡಾನೆ ಎದ್ದವಳೆ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಅಡಿಗೆ ಅನ್ನ ಮಾಡವಳೆ ಗಂಡನಿಗೆ ಊಟಕ್ಕೆ ಬಡಿಸವಳೆ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಅರಮನೆಯಾಗ ಮಾಯ್‌ವಾಯ್ತು | ಕಿರುಮನೆಯಪ್ಪ ಮಾಯ್‌ವಾಯ್ತು
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಉಣ್ಣಕ್ಕನ್ನ ಇಲ್ಲವಲ್ಲೊ ಹೊದಿಕೆಯೊದಪು ಇಲ್ಲವಲ್ಲೋ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಬೆಕ್ಕಿನ ಬೆಳ್ಳಿ ಎತ್ತೂವೆ ದೊಡ್ಡನ ಬೆಳ್ಳಿ ಎತ್ತೂವೆ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಆ ಚಿಟ್ಟೆ ಹೊಲದಲ್ಲಿ ನೊಗವಾ ಹೊತುಕೊಂಡು ನಿಂತಿದ್ವೋ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೆ ತಂದನ್ನ

ಊಟಕ್ಕೋದ ಒಡೆಕಾರ ಮಗುಚಿ ಹಿಂದಕೆ ಬರಲಿಲ್ಲ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೆ ತಂದನ್ನ

ನಮಗೆ ಊಟಕ್ ಬಡಿಸೋರ‍್ಯಾರಪ್ಪ ಏರ್ ಬಿಡೋರ‍್ಯಾರಪ್ಪ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಏರನ್ನಾದರೂ ಕಳೆಯುವರು ಇಲ್ಲವಲ್ಲೋ ಶಿವಲಿಂಗೊ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಎರಡೂ ಆಗ ಕೊಂಬಿನಲ್ಲಿ ಆ ನೊಗವಾ ಬಿಚುಕಂಡು
ತಂದನ್ನ ಶಿವನೆ ತಂದನ್ನ ತಂದನಾ ಶಿವನೇ ತಂದನ್ನ

ಆ ನೊಗವನಾಗ ಬಿಚ್ಚುಕಂಡು ಕಟ್ಟೀಕಡೆಗೆ ಬರುತಾವೆ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಆ ಚಿಕ್ಕಗೊಲ್ಲನ ತಲೆಯ ಎರಡೂ ಎತ್ತಿ ನೋಡೀದೋ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಆ ಪಾಪಿಯಾದ ಅಣ್ಣಯ್ಯ ತಮ್ಮನ ತಲೆಯ ಕಡಿದವ್ನೆ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಆ ಕಟ್ಟೀನಾದುರೆ ಧುಮುಕಿದೋ ಮುಂಡನಾದುರೆ ಎತ್ತುಕೊಂಡೋ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಮುಂಡ ತಲೆಯ ಎತ್ತು ಕೊಂಡೊ ತೊಡೆಯ ಮೇಲೆ ಮುಡುಕೊಂಡೊ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಚಿಕ್ಕನ ಬೆಳ್ಳಿ ಎತ್ತುವು ಹೆಣ ಕಾಯ್ಕಂಡು ಕೂತಿತ್ತು
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ದೊಡ್ಡನ ಬೆಳ್ಳಿ ಎತ್ತಾಗ ನಾಗಲೋಕಕ್ಕೊರಟ್ಟೀತ್ತು
ತಂದನ್ನ ಶಿವನ್ನ ತಂದನ್ನ ತಂದಾನಾ ಶಿವನೇ ತಂದನ್ನ

ಚಂಚುಳವ ತಂದೀರು ಮರಜಲಕಡ್ಡಿ ತಂದೀತು
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಚಿಕ್ಕಗೊಲ್ಲ ಸತ್ತಿದ್ದೋನ ಹನ್ನೆರಡು ದಿನಕ ಎಳಿಸೀದೊ
ತಂದನ್ನ ಶಿವನೆ ತಂದನ್ನ ಕಂದಾನಾ ಶಿವನೇ ತಂದನ್ನ

ನಾಗಲೋಕದ ನಾಗಕನ್ಯೆ ಚಿತ್ತುರ ಲಗ್ನ ಮಾಡಿಕೊಂಡು
ತಂದನ್ನ ಶಿವನೇ ತಂದನ್ನ ತಂದಾನಾ ಶಿವನೇ ತಂದನ್ನ

ನಾಗಕನ್ಯೆ ಲಗ್ನಮಾಡಿಕೊಂಡು ದೊರೆತಾನ ಅಳುತಾನೆ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೆ ತಂದನ್ನ

ಅವರಣ್ಣನಾದುರತ್ತೀಗೆ ಏನಂತ ಹೇಳುತಾರೆ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಅವರುಣ್ಣಾಕನ್ನ ಇಲ್ಲದೆ ಸೌದೇನಾರ ಒತಕೊಂಡು
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ತಮ್ಮನಿರುವ ಪಟ್ಲಕ್ಕೆ ಸೌದೆ ಒತ್ಕೊಂಡು ಬರುತಾರೆ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಅಣ್ಣ ತಮ್ಮ ಕೂಡವ್ರೆ ದುಃಖನಾದುರೆ ಮಾಡವ್ರೆ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಅವರಣ್ಣ ಹೆಂಡ್ತೀಯ ಸುಣ್ಣದಲ್ಹಾಕಿ ಸುಟಬಿಟ್ಟು
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಮೂರು ತಿಂಗಳು ತುಂಬಿದುಕೆ ಅಣನ್ಗ ಲಗ್ನಮಾಡುಕೊಂಡು
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಅವರಣ್ಣ ತಮ್ಮ ಕೂಡವರೆ ದೊರೆತನುವ ಮಾಡವರೆ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ನಾಗಲೋಕದ ಪಟ್ಟಣದ ಗೊಲ್ಲರಂತ ದೊಡ್ಡೀಲಿ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಅವರ್‌ದೊಡ್ಡಿ ರಾಜ್ಯ ಮಾಡವರೆ ಸತ್ಯವಂತರು ಮಕ್ಕಳಯ್ಯೊ
ತಂದನ್ನ ಶಿವನೆ ತಂದನ್ನ ತಂದಾನಾ ಶಿವನೇ ತಂದನ್ನ

ಪಾಠಾಂತರಗಳು ಮತ್ತು ಸಮಾನ ಆಶಯದ ಪಠ್ಯಗಳು

೧) ಅಣ್ಣ-ತಮ್ಮಂದಿರ ಕಥೆ; ಕ್ಯಾತನಹಳ್ಳಿ ರಾಮಣ್ಣ (ಸಂ) ಐದು ಜನಪದ ಕಥನಗೀತೆಗಳು. ಜಾನಪದ ಬಳಗ, ಮೈಸೂರು ೧೯೭೦.

೨) ಎಣ್ಣೆಗೆಂಟಿನ ಹೊನ್ನಮ್ಮ; ಕೆದ್ಲಾಯ ಕುಂಜಿಬೆಟ್ಟು ಸುಬ್ರಹ್ಮಣ್ಣ (ಸಂ) ಹಾಡಿಗೆ ಹನ್ನೆರಡು ಕಬರು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೭೩, ಪು.ಸಂ. ೧೪೫-೧೪೭.

೩) ಮೈದುನನನ್ನು ಕೊಲ್ಲಿಸಿದ ಅತ್ತಿಗೆ; ಕೆದ್ಲಾಯ ಕುಂಜಿಬೆಟ್ಟು ಸುಬ್ರಹ್ಮಣ್ಯ (ಸಂ) ಹಾಡಿಗೆ ಹನ್ನೆರಡು ಕಬರು, ಕ.ಅ. ಸಂಸ್ಥೆ, ಮೈ.ವಿ.ವಿ. ಮೈಸೂರು, ೧೯೭೩, ಪು.ಸಂ. ೧೯೬-೨೦೩.

೪) ಅಣ್ಣ-ತಮ್ಮ; ಲಿಂಗಯ್ಯ ಡಿ. (ಸಂ) ಕರ್ನಾಟಕ ಜನಪದ ಕಾವ್ಯಗಳು, ದಿನಕರ ಪ್ರಕಾಶನ, ಬೆಂಗಳೂರು, ೧೯೭೬, ಪು. ೨೦೯-೨೩೨.

೫) ಐಪಟ ಸ್ವಾಮಿ-ಹೂವೇರಾಯ; ಹೆಗಡೆ ಎಲ್.ಆರ್. (ಸಂ) ಮುಕರಿ ಮತ್ತು ಹೊಲೆಯರ ಪದಗಳು, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ೧೯೭೯. ಪು.ಸಂ. ೪೪-೫೦.

೬) ಸಂಶಯ ಪಿಶಾಚಿ; ಹೆಗಡೆ ಎಲ್.ಆರ್. (ಸಂ) ಮುಕರಿ ಮತ್ತು ಹೊಲೆಯರ ಪದಗಳು ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ೧೯೭೯, ಪು.ಸಂ. ೬೫-೭೭.

೮) ಶಂಕರದೇವನಕಥೆ; ಅಂದನೂರು ಶೋಭ (ಸಂ) ಕೊಂಬೆರೆಂಬೆಲ್ಲ ಎಳಗಾಯಿ. ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ೧೯೭೯, ಪು.ಸಂ. ೩೮-೫೧.

೯) ಅಣ್ಣ ಶಂಕರಲಿಂಗ ತಮ್ಮಸಂದಿಸ್ವಾಮಿ; ಕಂಬಾಳು ಸಿದ್ಧಗಂಗಯ್ಯ ಬಿ. (ಸಂ) ಮಾತಾಡುಮಲ್ಲಿಗೆ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ೧೯೭೩, ಪು.ಸಂ. ೭೦-೭೫.

೧೦) ಅಣ್ಣ ಹೊನ್ನಿಗ-ತಮ್ಮ ಚೆನ್ನಿಗ; ಹೆಗಡೆ ಎಲ್.ಆರ್. ಕೆಲವು ಲಾವಣಿಗಳು. ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೩, ಪು.ಸಂ. ೧೦೮-೧೧೮.*      ಚಿತ್ತುರಾಣಿ; ಕಂಬಾರ ಚಂದ್ರಶೇಖರ, ಮುತ್ತು ಮುತ್ತಿನ ತ್ವಾಟ ಬೆಂಗಳೂರು ವಿಶ್ವವಿದ್ಯಾಲಯ ೧೯೮೧, ಪು.ಸಂ. ೧೧೦-೧೨೦.