ಎನ್ನದು ತತ್ವಾನ್ವೇಷಣ ಕಾರ್ಯ;
ಏನೇತಕೆ ಎಂಬುದೆ ಹವ್ಯಾಸ
ಇದನುಳಿದಾಗದು ಪದವಿನ್ಯಾಸ
[1]

ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಶ್ರೀ ಪು.ತಿ.ನ. ಅವರು ತಮ್ಮ ‘ಕವಿಕರ್ಮ’ವನ್ನು ತಾವೇ ವಿಶ್ಲೇಷಿಸಿಕೊಂಡದ್ದರ ವರ್ಣನೆ ಇದು. ಅಷ್ಟೇ ಅಲ್ಲ, ಪು.ತಿ.ನ. ಅವರ ಕವಿತೆಯನ್ನು ಅರ್ಥಮಾಡಿಕೊಳ್ಳಲು ಬಯಸುವ ಓದುಗರಿಗೆ, ಗಂಭೀರವಾಗಿ ವಿಚಾರ ಮಾಡಬಯಸುವ ವಿಮರ್ಶಕರಿಗೆ, ಕವಿಯೇ ತನ್ನ ಕಾವ್ಯಾಭ್ಯಾಸಕ್ಕೆ ನೀಡಿದ ನಿರ್ದೇಶನದ ಕೀಲಿ ಕೈ ಈ ಸೂತ್ರದಲ್ಲಿದೆ ಎಂದರೂ ತಪ್ಪಾಗಲಾರದು.

ಪು.ತಿ.ನ. ಅವರ ಕಾವ್ಯದ ಪ್ರಧಾನ ಲಕ್ಷಣವೇ ಇದು-ಏನು, ಏತಕ್ಕೆ ಎನ್ನುವ ಹವ್ಯಾಸ ಅಥವಾ ಚಿಂತನಪರತೆ. ಈ ಪ್ರಶ್ನೆಗಳ ಮೂಲಕ ಅವರ ಕವಿ ಮನೋಧರ್ಮ ತತ್ವಾನ್ವೇಷಣ ಕಾರ್ಯದಲ್ಲಿ ತೊಡಗುತ್ತದೆ. ಎಂದರೆ ಪು.ತಿ.ನ. ಅವರದು ಜಿಜ್ಞಾಸುವಿನ ಮನೋಧರ್ಮ. ಆದರೆ ಈ ಜಿಜ್ಞಾಸೆ ತತ್ವಶಾಸ್ತ್ರಜ್ಞನ ಜಿಜ್ಞಾಸೆ ಅಲ್ಲ; ಕವಿಯ ರಸ ಜಿಜ್ಞಾಸೆ. ತಮಗೆ ಸಂವೇದನಾ ರೂಪದಲ್ಲಿ ಪ್ರಾಪ್ತವಾಗುವ ಲೋಕಾನುಭವಗಳನ್ನು ಅದು ತಮಗೆ ಲಭಿಸಿದಂತೆ, ತಮ್ಮ ಕರಣಗಳನ್ನು ತಟ್ಟಿದಂತೆ, ಸುಮ್ಮನೆ ಒಪ್ಪಿಕೊಂಡು,ಇಂದ್ರಿಯ ಹಾಗೂ ಕಲ್ಪನಾಮಯ ಹಂತಗಳಲ್ಲಿ ರೂಪುಕೊಟ್ಟು ತನ್ನ ಹಾಗೂ ಅನ್ಯರ ಆನಂದಕ್ಕಾಗಿ ಎತ್ತಿ ತೋರಿಸುವಷ್ಟರಲ್ಲಿಯೇ ಇವರ ಕವಿತೆ ತೃಪ್ತವಾಗದೆ,ಆ ಅನುಭವದ ನಿಲುವಿನಲ್ಲಿಯೆ ಅದರ ಆಸ್ವಾದ್ಯಾನುಭವದಿಂದ ತಮ್ಮನ್ನು ತಾವೆ ಪ್ರತ್ಯೇಕಿಸಿಕೊಂಡು, ಈ ವಸ್ತು-ಆತ್ಮಗಳ ಸಮ್ಮಿಲನದ ಸ್ವರೂಪವನ್ನೆ ಚಿಂತನೆಗೆ ಒಳಗು ಪಡಿಸಿ, ಆ ಚಿಂತನ ಸೌಂದರ್ಯವನ್ನೆ ತಮ್ಮ ಕಾವ್ಯದ ಮುಖ್ಯ ಸತ್ವವನ್ನಾಗಿ ಮಾಡಿ ನೀಡುವ ರೀತಿ ಇವರದು. ಒಂದೆಡೆ ಈ ನಿಸರ್ಗದ ವಸ್ತುಗಳು ತಮ್ಮ ಮನಸ್ಸಿನ ಮೇಲೆ ಮೂಡಿಸಿದ ರಮಣೀಯತಾ ಅನುಭವಗಳ ರಹಸ್ಯವನ್ನು ಪರಿಶೀಲಿಸುತ್ತಾ-

ಜಗದೀ ದೈನಂದಿನ ಜಂಗಮತೆ
ನನ್ನೊಳು ಜನಿಯಿಸಿತೇತಕೆ ಮಮತೆ?
ಈ ಹೊರ ಜಗಕೂ ಈ ಒಳ ಜಗಕೂ
ಏತರ ನಂಟಿಂತದಕೂ ಇದಕೂ?
[2]

ಎಂದು ಪು.ತಿ.ನ. ಅವರು ಚಿಂತಿಸುತ್ತಾರೆ. ದಾಳಿಂಬೆ ಎಂಬ ಒಂದು ಸುನೀತದಲ್ಲಿ ಈ ಚಿಂತನೆಯ ಲಹರಿಯನ್ನು ಕಾಣಬಹುದು. ದಾಳಿಂಬೆ ಹಣ್ಣಿನ ಒಂದೊಂದೇ ಬಿತ್ತವನ್ನು ಸವಿಯುತ್ತಿರುವಂತೆಯೆ, ಅದು ತನ್ನ ರಸನೆಗೆ ನೀಡಿದ ಮಾಧುರ‍್ಯಾನುಭವವನ್ನು ಕುರಿತು ಇಂಥ ರೂಕ್ಷವಾದ ವೃಕ್ಷದಲ್ಲಿ ಯಾವ ಪಂಚಭೂತಗಳ ಪವಾಡ ಇಂಥ ಮಧುರವಾದ ಹಣ್ಣನ್ನು ಸೃಜಿಸಿ ತಮ್ಮ ನಾಲಗೆಯ ಮೇಲೆ ಹೀಗೆ ರಸವನ್ನು  ಅನುವದಿಸುವಂತೆ ಯಾವ ಪ್ರೀತಿ ಚೋದಿಸಿತು[3] ಎಂದು ಜಿಜ್ಞಾಸೆಗೆ ತೊಡಗುತ್ತಾರೆ. ‘ಮಲೆದೇಗುಲ’ ವೆಂಬ ಅವರ ಕವನ ಸಂಗ್ರಹದ ಒಂದೊಂದು ಪದ್ಯದಲ್ಲಿಯೂ ದೇಗುಲವೆಂಬ ಭಾವನೆಯನ್ನು ಕುರಿತ ಚಂತನೆ ಹೊನಲುವರಿದಿದೆ. ದೇಗುಲವನ್ನು  ಕಂಡು ಕವಿ ಕೇವಲ ಭಾವುಕನಾಗಿ ಕೈ ಮುಗಿದು ತನ್ನ ಭಕ್ತಾನುಭವಗಳನ್ನು ನಿರೂಪಿಸುವುದರಲ್ಲಾಗಲಿ, ಅಥವಾ ಅದರ ಶಿಲ್ಪಕಲಾ ಸೌಂದರ್ಯವನ್ನು ಕಲ್ಪನಾಮಯವಾಗಿ ವರ್ಣಿಸುವುದರಲ್ಲಾಗಲಿ ಪ್ರವೃತ್ತವಾಗದೆ, ಈ ದೇಗುಲ ಎಂದರೆ ಏನು? ಅದರ ನಿರ್ಮಾಣದ ಅಥವಾ ಅಸ್ತಿತ್ವದ ಮೂಲಾರ್ಥವೇನು, ಇಲ್ಲಿಗೆ ಲೋಕದ ಜನ ಯಾವ ಕಾರಣಕ್ಕಾಗಿ ಬರುತ್ತಾರೆ ಎನ್ನುವ ಚಿಂತನೆಗೆ ಸಂದು, ಈ ದೇಗುಲ-

ಮನೆಯಲ್ಲ ಮಠವಲ್ಲ ರಾಜನರಮನೆಯಲ್ಲ
ಇದು ನಾಟ್ಯ ಮಂದಿರ ಛಾತ್ರ ಸತ್ರವಲ್ಲ
ಜೀವ ಬಯಸುವ ಭೋಗದುಪಕರಣವಲ್ಲವಿದು
ಆವರ್ಥ ಘಟಿಸಿತೀ ಮಲೆಯ ಕಲ್ಲ?
[4]

ಎಂಬ ಪ್ರಶ್ನೆಗಳನ್ನೆತ್ತಿ, ಅದೇ ನಿಲುವಿನಲ್ಲಿ ಆಶ್ಚರ್ಯಕರವಾದ ಜಿಜ್ಞಾಸೆಯನ್ನು ನಡೆಯಿಸಿದ್ದಾರೆ. ಬದುಕಿನಲ್ಲಿ ಒದಗುವ ಪ್ರೀತಿ ಸಂಬಂಧವಾದ ಸಂಗಮ-ವಿರಹಗಳನ್ನು ಕುರಿತು-

ಬೆರೆವುದೇತಕ ನಲಿವುದೇತಕೆ
ಬೆರೆದೊಡಗಲುವುದೇತಕೆ?
[5]

ಎಂದು ಚಿಂತಿಸುತ್ತಾರೆ. ‘ಗಣೇಶ ದರ್ಶನ’ವೆಂಬ ನೀಳ್ಗವನದಲ್ಲಿಯೂ ಗಣಪತಿಯ ವಿಗ್ರಹವನ್ನು ಕುರಿತ ಪರಂಪರಾಗತವಾದ ಹಿಂದಿನ ತತ್ವಾನ್ವೇಷಣೆಯನ್ನು ಮಾಡಿದ್ದಾರೆ. ಹೀಗೆ ಇವರ ಕವಿತೆಗಳೆಲ್ಲಾ ಬಹುಮಟ್ಟಿಗೆ ಬೆರಗಿನ ಜಿಜ್ಞಾಸೆಗಳಿಂದ ತುಂಬಿವೆ. ಕವಿತೆಯಲ್ಲಿ ಮಾತ್ರವಲ್ಲ ಅಹಲ್ಯೆ, ಗೋಕುಲ ನಿರ್ಗಮನ, ವಿಕಟಕವಿ ವಿಜಯದಂಥ ನಾಟಕಗಳು ಮೈದಾಳಿರುವುದೂ, ಆಯಾ ವಸ್ತುಗಳನ್ನು ಕುರಿತ ಜಿಜ್ಞಾಸೆಯಿಂದಲೆ. ಅಹಲ್ಯೆಯ ಪತನದ ಕಥೆಯಲ್ಲಿ, ಇಂದ್ರ ಗೌತಮ-ಅಹಲ್ಯೆ ಈ ಮೂವರ ಸ್ವಭಾವದಲ್ಲಿದ್ದ ದೌರ್ಬಲ್ಯವೇ ಹೇಗೆ ಅವರವರು ಬಿದ್ದುದಕ್ಕೆ ಕಾರಣವಾಯಿತು ಎಂಬ ವಿಚಾರ ನಾಟಕದ ಮೈತುಂಬ ಸೂಕ್ಷ್ಮವಾಗಿ ಚರ್ಚಿತವಾಗಿದೆ. ಗೋಕುಲ ನಿರ್ಗಮನದಲ್ಲೂ ಅಷ್ಟೆ: ಅಕ್ರೂರನು ಗೋಕುಲಕ್ಕೆ ಬಂದು ಕೃಷ್ಣ-ಬಲರಾಮರನ್ನು ಮಧುರೆಗೆ ಕೊಂಡೊಯ್ಯುವ ದಿನದ ಹಿಂದಿನ ದಿನ, ಗೋಕುಲದಲ್ಲಿ ಏನಾಗಿರಬಹುದು, ಕೃಷ್ಣನ ನಿರ್ಗಮನವನ್ನು ಯಾರು ಯಾರು ಹೇಗೆ-ಹೇಗೆ ತೆಗೆದುಕೊಂಡರು ಎಂಬ ಭಾವತುಮುಲದ ವಿಚಾರವೇ ಪರಿಶೀಲಿತವಾಗಿದೆ. ‘ವಿಕಟಕವಿ ವಿಜಯ’ ಒಂದು ಅಪರೂಪದ ರಾಜಕೀಯ ಪ್ರಹಸನ ಗೀತರೂಪಕ.ನಮ್ಮ ನಾಡಿಗೆ ರಾಜಕೀಯ ಸ್ರಾತಂತ್ರ್ಯ ಬಂದ ಮೊದಲಲ್ಲಿ, ಒಂದು ಸಂಸ್ಥಾನದ ರಾಜ ಪ್ರಜೆಗಳ ಮನೋರಂಗದ ವಿವಿಧ ಪ್ರತಿಕ್ರಿಯೆಗಳ, ವಿಚಾರಗಳ ಬಹರಿಯನ್ನು ಅದರಲ್ಲಿ ಚಿತ್ರಿಸಿದ್ದಾರೆ.

ಈ ರೀತಿಯ ಚಿಂತನಪರತೆಯಿಂದ ಪು.ತಿ.ನ. ಅವರ ಕವಿತೆ ಒಂದು ರೀತಿಯಲ್ಲಿ ಅನನ್ಯವಾದರೂ,ಈ ಬಗೆಯ ವಿಚಾರಶೀಲತೆಯಿಂದ ಅವರ ಕವಿತೆಯಲ್ಲಿ ರಸತ್ವವನ್ನು ಕುಂಠಿತಗೊಳಿಸುವ ಬುದ್ಧಿಯ ಪ್ರಾಧಾನ್ಯತೆ ಮಿಗಿಲಾಗಿ ಕವಿತೆ ಕ್ಲಿಷ್ಟವಾಗಿದೆ, ಎಂಬ ಆಕ್ಷೇಪಣೆಯೂ ಇವರ ಕಾವ್ಯದ ಬಗೆಗೆ ಬಂದದ್ದುಂಟು. ಒಂದೊಂದು ಸಲ ಇವರ ಕವಿತೆ ಚಿಂತನೆಯ ಚಿಪ್ಪನ್ನೆಳೆದುಕೊಂಡು ಹೋಗುವ ಬಸವನ ಹುಳುವಿನಂತೆ ತೋರಲೂಬಹುದು. ಅವರ ಕವಿತೆಯಲ್ಲಿ ಒಂದು ರೀತಿಯ ಕ್ಲಿಷ್ಟತೆಯೂ ಉಂಟು. ಆದರೆ ಸ್ವಲ್ಪ ಶ್ರಮಪಟ್ಟರೆ, ಅವರ ಚಿಂತನ ಸೌಂದರ್ಯದಿಂದ ಓದುಗರಿಗೆ ದೊರೆಯುವ ಆಹ್ಲಾದದ ಲಾಭ ಅಲ್ಪವೇನಲ್ಲ. ಕೇವಲ ಸುಂದರವಾದ, ಭಾವನಾಮಯವಾದ, ಕಲ್ಪನಾಮಯವಾದ, ವಾಗ್ವಿಲಾಸವೆ ಕಾವ್ಯವೆಂದು ಭಾವಿಸಿದವರಿಗೆ ಪು.ತಿ.ನ. ಅವರ ಕವಿತೆ ಆಸ್ವಾದ್ಯವಾಗುವುದು ಕಷ್ಟವೇ. ಆದರೆ ಅವರ ಕವಿತೆಗಳಲ್ಲಿ ಕಂಡುಬರುವ ಈ ಚಿಂತನೆ ರಸಾನುಭವ ವಲಯದಿಂದ ಹೊರತಾದುದಲ್ಲ. ಅವರ ಚಿಂತನೆ ಕವಿಯ ಕಾವ್ಯಾನುಭವದ ನಿಲುವಿನಲ್ಲಿಯೆ ನಡೆದದ್ದಾದ್ದರಿಂದ, ಚಿಂತನಾಪ್ರಾಸೂತವಾದ ರಸಾನುಭವವೆ ಇವರ ಕಾವ್ಯದ ಅಂತಃಸ್ಸತ್ವವಾಗಿದೆ.

ವಿಜ್ಞಾನಿಯ ದೃಷ್ಟಿ ಮತು ಕವಿಯ ಹೃದಯವುಳ್ಳ ಪು.ತಿ.ನ. ನಲವನ್ನು ಪಡೆಯುವ ಸಂದರ್ಭಗಳಲ್ಲಿಯೂ ಆ ನಲವಿನ ಸೆಳೆತದಿಂದ ತಪ್ಪಿಸಿಕೊಂಡು, ಆ ನಲವನ್ನೆ ಪರಿಭಾವಿಸುವ ವಸ್ತುನಿಷ್ಠತೆಯನ್ನುಳ್ಳ ಈ ಕವಿ, ಅರ್ಪೂವಾಗಿ ಆಗಂತುಕ ಭಾವವನ್ನು ತಮ್ಮ ವ್ಯಕ್ತಿತ್ವದಲ್ಲಿ ಪ್ರಕಟಿಸಿಕೊಳ್ಳುತ್ತಾರೆ. ತಮಗೂ ಈ ಲೋಕಕ್ಕೂ ಇರುವ ಸಂಬಂಧ ಕೇವಲ ಆಗಂತುಕ ಸಂಬಂಧ, ತಾನು ಎಲ್ಲಿಂದಲೋ ಬಂದು ಈ ಲೋಕದ ಉತ್ಸವದಲ್ಲಿ ಭಾಗಿಯಾಗುತ್ತಿರುವವನು ಎನ್ನುವ ವಿಷಾದ ಭಾವನೆ ಇವರ ವ್ಯಕ್ತಿತ್ವದ ನೆಲೆಗಟ್ಟೆಂಬಂತೆ ತೋರುತ್ತದೆ. ‘ಮಲೆ ದೇಗುಲ’ದಲ್ಲಿ ಒಂದೆಡೆ-

ತನ್ನ ಮೈ ಮೊದಲಾಗಿ ಜಗದೆಲ್ಲ ಕಾರ್ಯಗಳು
ತನಗೆ ಹೊರತಾಗಿಯೇ ಜರುಗುವುದ ಕಂಡು
ಈ ದಿವ್ಯ ಸಂಭ್ರಮದಿ ತಾನನಾಹೂತನೆನೆ
ಇಲ್ಲಿ ತಾನಾರೆಂದು ಖೇದಗೊಂಡು
[6]

ನಿಂತ ರೀತಿಯ ವರ್ಣನೆಯಿದೆ. ಆದರೆ ಈ ಖೇದ, ಈ ಆಗಂತುಕಭಾವ ರಸ ವಿರೋಧಿಯಾದುದಲ್ಲ; ತತ್ವಾನ್ವೇಷಣ ಕಾರ್ಯವನ್ನು ಹವ್ಯಾಸವಾಗಿ ಉಳ್ಳ ಕವಿಯದು. ಈ ಲೋಕದ ಅನುಭವಗಳಲ್ಲಿ ಕವಿಚೇತನ ರಮಿಸುತ್ತದೆ; ಆದರೆ ಅವುಗಳಲ್ಲಿ ವಿರಮಿಸುವುದಿಲ್ಲ. ಹಾಗೆ ನೋಡಿದರೆ ಈ ಆಗಂತುಕ ಭಾವನೆ ನಿಜವಾದ ಕವಿಯ ಮನೋಧರ್ಮವೆಂದು ತೋರುತ್ತದೆ. ಪು.ತಿ.ನ. ಅವರೆ ಒಂದೆಡೆ ಕವಿ ಸ್ವರೂಪದ ಬಗ್ಗೆ ಹೀಗೆ ಹೇಳಿದ್ದಾರೆ: “ಕಾವ್ಯದ ಉತ್ಪತ್ತಿಗೆ ಕವಿಗೆ ಹುಟ್ಟಿನಿಂದಲೇ ಪ್ರಾಪ್ತವಾದ ಎರಡು ಗುಣಗಳಿರಬೇಕೆಂದು ತೋರುತ್ತದೆ. ಭವದ ತೀವ್ರ ಸಂವೇದನಾ ರೂಪವಾದ ಪ್ರಜ್ಞೆ-ಇದನ್ನು ಬೇಕಾದರೆ ಭವನಿಮಜ್ಜನ ಚಾತುರ್ಯ ಎಂದು ಕರೆಯಬಹುದು-ಮತ್ತು ಆ ನಿಮಗ್ನತೆಯಿಂದ ಪಾರಾಗಿ ನಿಲ್ಲುವ ಲಘಿಮಾ ಕೌಶಲ; ಈ ಎರಡು ಗುಣಗಳು ಕವಿಗಿದ್ದ ಹೊರತು ಕಾವ್ಯ ಸಿದ್ಧಿಸಲಾರದು”[7] ಎಂದು. ಹೀಗೆ ‘ರಮಿಸಿಯೂ ವಿರಮಿಸದ’ ಆಗುಂತುಕ ಭಾವವನ್ನು ಉಳಿಸಿಕೊಂಡು ಯಾವುದನ್ನೂ ಹಳಿಯದೆ, ಎಲ್ಲದರ ರುಚಿಯನ್ನೂ ನೋಡುತ್ತಾ ಜಿಜ್ಞಾಸೆಯಲ್ಲಿ ತನ್ಮಯವಾಗುವ ಮನೋಧರ್ಮ ಇವರದು.ಈ ವಸ್ತು ನಿಷ್ಠ ದೃಷ್ಟಿಯ, ನಿಶಿತಮತಿಯ ವಿಚಾರವಿಲಾಸವನ್ನು ಅವರ “ಈಚಲ ಮರದ ಕೆಳಗೆ” ಎಂಬ ಪ್ರಬಂಧ ಸಂಗ್ರಹದ ಉದ್ದಕ್ಕೂ, “ಕಾವ್ಯ ಕುತೂಹಲ” ಎಂಬ ಕಾವ್ಯಮೀಮಾಂಸೆಯ ಗ್ರಂಥದಲ್ಲಿಯೂ ಕಾಣಬಹುದು.

ಪು.ತಿ.ನ. ಅವರ ಕವಿತೆಯ ಇನ್ನೊಂದು ವಿಶಿಷ್ಟತೆಯೆಂದರೆ ಅವರ ಕಾವ್ಯಪ್ರಜ್ಞೆ ಬಹುಮಟ್ಟಿಗೆ ಭಾರತೀಯ ಪರಂಪರೆಯಲ್ಲಿ ಅದರಲ್ಲೂ ಭಾಗವತ ಸಂಪ್ರದಾಯದಲ್ಲಿ ಸ್ಥಾಯಿಯಾದದ್ದು ಎನ್ನುವುದು. ಸುಮಾರು ನಲವತ್ತು ವರ್ಷಗಳ ಹಿಂದೆ ಕನ್ನಡದಲ್ಲಿ ಮೊದಲಾದ ನವೋದಯ ಕಾವ್ಯಕ್ಕೆ ಪ್ರಧಾನವಾದ ಪ್ರೇರಣೆ ಒದಗಿದ್ದು ಪಶ್ಚಿಮದಿಂದ. ಮಿಲ್ಟನ್, ಷೆಲ್ಲಿ, ಕೀಟ್ಸ್, ವರ್ಡ್ಸ್‌ವರ್ತ್, ಬರ್ನ್ಸ್ ಮೊದಲಾದ ಕವಿಗಳ ಕಾವ್ಯಾನುಶೀಲನದಿಂದ ಒದಗಿದ ಪ್ರಯೋಗದ ಹಂಬಲದಿಂದ ಕನ್ನಡ ಕಾವ್ಯ ತನ್ನ ದಿಕ್ಕು-ದೆಸೆ, ರೂಪ-ರೀತಿಗಳನ್ನು  ಕಂಡುಕೊಂಡಿತು.  ಇದರ ಜೊತೆಗೆ ಸಮೀಪ ಹಾಗೂ ಸಮಕಾಲೀನ ವಿಭೂತಿಗಳಾದ ಶ್ರೀ ರಾಮಕೃಷ್ಣ ಪರಮಹಂಸ, ವಿವೇಕಾನಂದ, ಶ್ರೀ ಅರವಿಂದರು, ಗಾಂಧಿ, ಟಾಲ್‌ಸ್ಟಾಯ್ ಇತ್ಯಾದಿ ವ್ಯಕ್ತಿಗಳ ಆಧ್ಯಾತ್ಮಿಕ -ತಾತ್ವಿಕ ವಿಚಾರಗಳೂ ಅಂದಿನ ಕವಿಗಳಿಗೆ, ಕಾವ್ಯಕ್ಕೆ ಹೊಸ ತೇಜಸ್ಸನ್ನು ಕೊಟ್ಟವು. ಆದರೆ ಪು.ತಿ.ನ. ಅವರಲ್ಲಿ ಈ ಎರಡರ ಪ್ರಭಾವ ಉಳಿದ ಅವರ ಸಮಕಾಲೀನ ಕವಿಗಳಲ್ಲಿ ಎದ್ದು ಕಾಣುವಷ್ಟರ ಮಟ್ಟಿಗೆ, ಕಾಣದೆ ಇರುವುದು ಸೋಜಿಗದ ಸಂಗತಿಯಾಗಿದೆ. ಕಾರಣ, ಅವರು ಆ ಆಂಗ್ಲ ಕಾವ್ಯ ಪರಿಚಯವನ್ನಾಗಲಿ, ಭಾರತೀಯ ಮಹಾ ವಿಭೂತಿಗಳ ವಿಚಾರಗಳನ್ನಾಗಲಿ, ಅರಿಯದವರಲ್ಲ ಎಂಬುದಲ್ಲ; ಅವರು ತಮ್ಮ ಪ್ರೇರಣೆಯ ಪ್ರಧಾನಾಂಶವನ್ನು ಭಾರತೀಯ ಧಾರ್ಮಿಕ-ಸಾಂಸ್ಕೃತಿಕ ಪರಂಪರೆಯಿಂದಲೆ ವಿಶೇಷವಾಗಿ ಪಡೆದರು ಎಂಬುದು. ಅದರಲ್ಲಿಯೂ ಭಾಗವತ ಸಂಪ್ರದಾಯ ಅವರಿಗೆ ಬಹು ಮೆಚ್ಚಿನದು.ಇದಕ್ಕೆ ಕಾರಣ ಬಹುಶಃ ಕವಿ ಪು.ತಿ.ನ. ಅವರು ಹುಟ್ಟಿ ಬೆಳೆದ ಆವರಣದ ಪ್ರಭಾವವೂ ಇರಬಹುದು. ಅವರು ಬೆಳೆದದ್ದು ಮೇಲುಕೋಟೆಯಂಥ ವೈದಿಕ ವಾತಾವರಣದಲ್ಲಿ.ಓದಿದ್ದು ಸಂಸ್ಕೃತ; ಶಿಕ್ಷಣ ಪಡೆದದ್ದು ಇಂಗ್ಲಿಷ್‌ನಲ್ಲಿ; ಮನೆ ಮಾತು ತಮಿಳು. ಆದರೆ ಕವಿತೆ ಬರೆಯತೊಡಗಿದ್ದು ಅಥವಾ ಆತ್ಮಾಭಿವ್ಯಕ್ತಿಯನ್ನು ಕಂಡುಕೊಂಡದ್ದು ಕನ್ನಡದಲ್ಲಿ. ಇದರಿಂದಾಗಿ ಅವರ ಕಾವ್ಯಕ್ಕೆ ಒಂದು ವಿಷೇಷತೆ, ಮತ್ತೊಂದು ನ್ಯೂನತೆ, ಉಂಟಾದಂತೆ ತೋರುತ್ತದೆ. ವಿಶೇಷತೆ, ಅವರ ಕಾವ್ಯದ ವಸ್ತು, ಪ್ರತಿಮೆಗಳೆಲ್ಲಾ ಬಹುಮಟ್ಟಿಗೆ ಪೌರಾಣಿಕ ಪರಂಪರೆಯನ್ನು ಪ್ರಕಟಿಸುತ್ತವೆ ಎಂಬುದು; ನ್ಯೂನತೆ, ಅವರ ಭಾಷಾಶೈಲಿಯಲ್ಲಿ ಒಂದು ರೀತಿಯ ಸಂದಿಗ್ಧತೆ ಕಾಣಿಸುತ್ತದೆ ಎಂಬುದು. ತಮಿಳಿನ ರೂಪಗಳನ್ನು ಹೋಲುವ ಹಳಗನ್ನಡ ಪದಗಳು, ಉದ್ದುದ್ದನೆಯ ಸಂಸ್ಕೃತ ಪದಪುಂಜಗಳು, ಇದರ ಜತೆಗೆ ವಿಲಕ್ಷಣವಾದ ಚಿಂತನ ಪರತೆ-ಇದಿಷ್ಟು ಸೇರಿಕೊಂಡು ಇವರ ಕಾವ್ಯದ ಮಾಧ್ಯಮವಾದ ಭಾಷೆ ಹೇಳಬೇಕಾದ್ದನ್ನು ಹೇಳುವಲ್ಲಿ ಬಹಳ ಬಳಲುತ್ತದೆ; ಓದುಗರನ್ನು ಬಳಲಿಸುತ್ತದೆ. ನಿದರ್ಶನಕ್ಕೆ ಈ ಒಂದು ಪದ್ಯವನ್ನು ಗಮನಿಸಬಹುದು.

ಪ್ರಕೃತಿಯೊಳಪೃಥವಾಗ್ಭಾವದೊಳಿರುವ
ವಿಕೃತಿಯ ಪ್ರಕೃತದ ಸಕೃದುನ್ಮೇಷವೆ
ಸುಕೃತ ಫಲಂ ಕಣ್ ಕಿವಿ ಮನಗಳಿಗೆ
ಪ್ರಕೃಷ್ಟಮಾಯ್ತೀ ಜೀವಜ್ಜಾಗರ
[8]

ಈ ಪದ್ಯವನ್ನೋದುವುದಾಗಲಿ ಓದಿ ಆಸ್ವಾದಿಸುವುದಾಗಲಿ ಸುಲಭವಲ್ಲ. ಇನ್ನೊಂದು ನಿದರ್ಶನಕ್ಕೆ ಅವರ “ಬಿಸಿಮಿಲ್ಲರ ಸುನಾಯಿಯನ್ನು ಕೇಳಿ”[9] ಎಂಬ ಪದ್ಯವನ್ನು ಕುತೂಹಲವುಳ್ಳವರು ನೋಡಬಹುದು. ಭಾವ-ಭಾಷೆಗಳ ವಿರಸದಾಂಪತ್ಯದಂತಿರುವ ಈ ಶೈಲಿಯು ಅಲ್ಲಲ್ಲಿ ಓದುಗರನ್ನು ಗಾಬರಿಗೊಳಿಸಿದರೂ, ಅತ್ಯಂತ ಹದವಾದ ರೀತಿಯಲ್ಲಿ ಅವರು ಬರೆದ ಕವಿತೆಗಳೂ ಸಾಕಷ್ಟಿವೆ ಎಂಬುದು ಸಮಾಧಾನದ ಸಂಗತಿ. ಹಣತೆ, ಶಾರದಯಾಮಿನಿ ಮತ್ತು ಇತರ ಕವನಗಳು, ಗಣೇಶದರ್ಶನದ ಕೆಲವು ಪದ್ಯಗಳು, ಮತ್ತು ಗೀತ ರೂಪಕವಾದ ಅಹಲ್ಯೆ, ವಿಕಟಕವಿವಿಜಯ ಇವುಗಳಲ್ಲಿ ಮಾತ್ರ ಸೊಗಸಾದ ಭಾಷೆಯ ಅಭಿವ್ಯಕ್ತಿಗಳಿವೆ ಎಂಬುದನ್ನು ಮರೆಯಲಾಗದು.

ಪು.ತಿ.ನ. ಅವರ ಕವಿ ಮನೋಧರ್ಮ ವಿಷೇಷವಾಗಿ ಸನಾತನ ಪರಂಪರೆಯಲ್ಲಿ ಬೇರೂರಿದ್ದರಿಂದ, ಅವರ ಕಾವ್ಯವಸ್ತುವೂ ಬಹುಮಟ್ಟಿಗೆ ಆ ವಲಯಕ್ಕೆ ಸೀಮಿತಗೊಂಡಿದೆ. ಅವರ ಕೃತಿಗಳ ವಸ್ತು ಬಹುಪಾಲು ಇತಿಹಾಸ-ಪುರಾಣಗಳಿಗೆ ಸಂಬಂಧಿಸಿದ್ದು. ಈ ಮಾತು ಮುಖ್ಯವಾಗಿ ಅವರ ಗೀತ ರೂಪಕಗಳಿಗೆ ಒಪ್ಪುತ್ತದೆ. ಪುರಾಣದ ಒಂದೊಂದು ಪ್ರಸಂಗಗಳನ್ನೆತ್ತಿಕೊಂಡು ಅದನ್ನು ರೂಪಕವಾಗಿ ಪುನರ್ ನಿರ್ಮಿಸುವುದರಲ್ಲಿ, ಅಹಲ್ಯೆಯಂಥ ವಸ್ತುವನ್ನೆತ್ತಿಕೊಂಡು ಪುನರ್ ಪರಿಶೀಲಿಸಿ ರೂಪಿಸುವುದರಲ್ಲಿ ಅವರಿಗೆ ಒಲವು ಹೆಚ್ಚು. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆಯಲು ನಿಮಿತ್ತವಾದ ಅವರ “ಹಂಸ ದಮಯಂತಿ ಮತ್ತು ಇತರ ರೂಪಕಗಳು”ಇಂಥ ಐದಾರು ಪುರಾಣ ಪ್ರಸಂಗಗಳನ್ನು ಪುನರ್ ನಿರ್ಮಿಸಿದ ವಸ್ತುಗಳನ್ನು ಕುರಿತದ್ದು. ಅವರು ವಾಸ್ತವವನ್ನು ನೋಡುತ್ತಾ, ಅದರ ಮೂಲಕವೇ ಪುರಾಣ ಪ್ರಪಂಚಕ್ಕೆ ಸಲೀಸಾಗಿ ಹೋಗಬಲ್ಲರು. ಒಂದು ರಾತ್ರಿ, ಸುತ್ತ ಕತ್ತಲು, ಭೋರೆಂದು ಮಳೆ ಹೊಯ್ಯುತ್ತಿದೆ; ದೂರದ ಗೊಲ್ಲನೊಬ್ಬನ ಗುಡಿಸಲಿನಲ್ಲಿ ಹಣತೆಯೊಂದು ಉರಿಯುತ್ತಿದೆ. ಇಷ್ಟು ಸಾಕು ಕವಿಗೆ; ಈ ಪರಿಸರ ತಟಕ್ಕನೆ ಅವರಿಗೆ ಕೃಷ್ಣ ಉದಯವಾದ ಇರುಳಿನ ನೆನಪನ್ನು ತಂದು, ದ್ವಾಪರ ಯುಗದ ಕಣಸು ಕಣ್ಣನ್ನು ತುಂಬುತ್ತದೆ.ಈ ಸಂಗತಿ “ಮಳೆಯು ನಾಡ ತೊಯ್ಯುತಿರೆ”[10] ಎಂಬ ಕವಿತೆಯಾಗಿ ಮೈದಾಳಿದೆ. ಇನ್ನೊಂದು ರಾತ್ರಿ; ಬೆಳದಿಂಗಳ ಬಾನಲ್ಲಿ ಗಾಳಿ ಮೊರೆಯುತ್ತಿದೆ; ಅಂಥ ಸರಿ ರಾತ್ರೆಯಲ್ಲಿ ಯಾವನೋ ಎಲ್ಲಿಯೋ ಉನ್ಮತ್ತವಾಗಿ ಕೊಳಲನ್ನೂದುತ್ತಿದ್ದಾನೆ. ಈ ಕೊಳಲಿನ ಉಲಿಯನ್ನು ಕೇಳಿ ಪು.ತಿ.ನ. ಅವರ ಕವಿಕಲ್ಪನೆ ಕೃಷ್ಣನ ಕೊಳಲಿನ ಬೃಂದಾವನಕ್ಕೆ ತೇಲಿ ಹೋಗುತ್ತದೆ. ‘ಗೋಕುಲ ನಿರ್ಗಮನ’ ರೂಪಕ ಈ ಒಂದು ಪರಿಸರದಿಂದ ರೂಪಿತವಾಗಿದೆ. ಹೀಗೆ ಕವಿಗೆ ಪುರಾಣಯುಗದ ಅಥವಾ ಪ್ರಸಂಗಗಳ ನೆನಪನ್ನು ತರುವ ಸನ್ನಿವೇಶಗಳೋ. ಘಟನೆಗಳೋ, ಕಡೆಗೆ ನೆಪವೋ ಸಿಕ್ಕರೆ ಸಾಕು, ಕವಿ ಅದರ ಹಿಂದೆ ಹೊರಟು ಪ್ರಾಚೀನತೆಯಲ್ಲಿ ಧ್ಯಾನಸ್ಥರಾಗಬಲ್ಲರು. ಈ ಪುರಾಣ ಪ್ರಜ್ಞೆಯ ಪರಿಣಾಮವಾಗಿ ಅವರ ಕಾವ್ಯದ ಉದ್ದಕ್ಕೂ ಮೂಡಿರುವ ಪುರಾಣ ಪ್ರತಿಮೆಗಳೂ ಅವರ ಅಭಿವ್ಯಕ್ತಿಯ ಒಂದು ವಿಶೇಷವೆಂಬಂತೆ ತೋರುತ್ತವೆ. ಅವರ ಪ್ರಕೃತಿ ವರ್ಣನೆಗಳು ಕೂಡ ಇದೇ ಪುರಾಣದ ಪುಟ ಪುಟಗಳನ್ನು ತೆರೆದಿರಿಸಿದ ಹಾಗೆ ತೋರುತ್ತವೆ. ಒಂದೆಡೆ ಸಂಜೆಯ ರಮ್ಯತೆಯನ್ನು-

ತವಸಿ ಶಿವ ಪಾರ್ವತಿಯ ನಸು ನೋಡುತೆವೆ
ಮುಚ್ಚಿದಂದದೊಳು ಸಂಜೆಯಚ್ಚರಿ ಹೊನ್ನ ಬೆಳಕು
[11]

ಎಂದು ವರ್ಣಿಸುತ್ತಾರೆ. ಒಂದು ಪ್ರಭಾತ ಕಾಲದ ಸೂರ್ಯೋದಯವನ್ನು ಕುರಿತು-

ದಾನವ ಹೃತ ಮೇದಿನಿಯಂ
ದಂಷ್ಟ್ರಾಗ್ರದೊಳಿರಿಸಿ
ಭೂದಾರಂ ಪಾತಾಳವನುಳಿ
ದೆದ್ದನೊ ಎನಿಸಿ
ದೂರ ದಿಗಂತದೊಳೊಪ್ಪಿದೆ
ರವಿ ಮಂಡಿತ ಶೃಂಗಂ
[12]

ಎಂದು ಹಿರಣ್ಯಾಕ್ಷನನ್ನು ಸಂಹಾರ ಮಾಡಿ ಶ್ರೀ ವಿಷ್ಣು ವರಾಹಾವತಾರ ಮಾಡಿದ ಸಂದರ್ಭದ ಚಿತ್ರವನ್ನೆ ಮುಂದಿಡುತ್ತಾರೆ. ಇನ್ನೊಂದೆಡೆ ಸೂರ‍್ಯಾಸ್ತಮಯವನ್ನು ಕುರಿತು-

ಬುವಿ ಬಾನಳೆದುರವಣಿಸಿದ
ಹರಿ ಪಾದಕೆ ತಲೆಯೊಡ್ಡುತ
ಕೆಳ ಲೋಕಕೆ ತೆರಳುತ್ತಿಹ
ಬಲಿ ದೊರೆಯಂದದಲಿ
ಮಿಗುವಿರುಳಿನ ನಿಡುನೀಡಿದ
ದೆಸೆಮೆಟ್ಟಿದ ಮುಗಿಲಡಿಯಡಿ
ಮರೆಯಾದುದು ಪಗಲೈಸಿರಿ
ಪಡುವಣ ಕಮರಿಯೊಳು
[13]

ಎಂದು ವರ್ಣಿಸಿ ವಾಮನ-ಬಲಿಚಕ್ರವರ್ತಿ ಇವರ ಕಥೆಯ ಪ್ರಸಂಗವನ್ನು ನೆನಪಿಗೆ ತರುತ್ತಾರೆ. ಒಂದು ಇರುಳನ್ನು ಕಂಡು-

ಬುವಿಯ ಚಾಪೆಯ ತೆರದಿ ಸುತ್ತಿ ಹೊತ್ತೊಯ್ವಂತೆ
ಕತ್ತಲೆಯ ಹಿರಣ್ಯಾಕ್ಷ ಮುತ್ತಿ ಬಹ ನಕ್ಷತ್ರ
ಮೊತ್ತಮಂ ಧಿಕ್ಕರಿಸಿ ಬರುತಿಹನು
ದಿವಕಶಾಂತಿಯ ತಂದು
[14]

ಎಂದು ವರ್ಣಿಸುವಲ್ಲಿ, ಅಂದಿನ ಪೌರಾಣಿಕ ಪ್ರಸಂಗದ ನಿತ್ಯ ಪುನರಾವರ್ತನೆಯ ಚಿತ್ರವನ್ನೆ ಕವಿ ತೆರೆದು ತೋರಿಸುತ್ತಾರೆ. ಪ್ರಕೃತಿ ವರ್ಣನೆಯಿರಲಿ, ಆಧುನಿಕ ವೈಜ್ಞಾನಿಕ ಪ್ರಗತಿಯನ್ನು ಕುರಿತು, ಅದರ ಮಾರಕತೆಯ ಬಗ್ಗೆ ಚಿಂತಿಸುತ್ತಾ, ಹೊರನೋಟಕ್ಕೆ ಉಗ್ರವಾಗಿ ತೋರುವ ಈ ವಿಜ್ಞಾನ, ಅದರ ಅಂತರಂಗದಲ್ಲಿ ಲೋಕದ ಶ್ರೇಯಸ್ಸನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ ಎಂಬ ವಿಚಾರವನ್ನು ಕೂಡ-

ಮುದುಡಿದ ವಿಜ್ಞಾನದ ಹೆಡೆ ಬಿಚ್ಚುತ
ನಮ್ಮೊಳಪ್ರಜ್ಞೆಯನಂತ
ತನ್ನೆದೆ ತಲ್ಪದೊಳಿಹ ಮಂಗಳವನು
ಕಾಪಿಡೆ ತೊಟ್ಟಿದೆ ಪಂಥ
[15]

ಎಂಬ ಪೌರಾಣಿಕ ಪ್ರತಿಮೆಯಲ್ಲಿ ಧ್ವನಿಪೂರ್ಣವಾಗಿ ಚಿತ್ರಿಸುತ್ತಾರೆ. ಪು.ತಿ.ನ. ಅವರ ಈ  ಪುರಾಣ ಪ್ರತಿಮೆಗಳ ಔಚಿತ್ಯವನ್ನೂ, ಸ್ವಾರಸ್ಯವನ್ನೂ ಕುರಿತ ವಿವೇಚನೆಗೆ ಬೇರೊಂದು ಪ್ರಬಂಧವನ್ನೆ ಬರೆಯುವ ಅಗತ್ಯವಿದೆ.

ಹೀಗೆಂದ ಮಾತ್ರಕ್ಕೆ ಅವರು ತಮ್ಮ ಸಮಕಾಲೀನ ಸಂಗತಿಗಳ ಬಗೆಗೆ, ಜೀವನದ ಬಗೆಗೆ ತಟಸ್ಥರೆಂದಾಗಲಿ, ಅಪರಿಚಿತರೆಂದಾಗಲಿ, ಉದಾಸೀನರೆಂದಾಗಲೀ ಅರ್ಥವಲ್ಲ. ಪು.ತಿ.ನ. ಅವರು ಸಮಕಾಲೀನ ಕವಿಯೇ. ‘ಗಣೇಶ ದರ್ಶನ’ದಲ್ಲಿನ ಕೆಲವು ಸಾಮಾಜಿಕ ಕವಿತೆಗಳು, ‘ಹಣತೆ’ಯೊಳಗಿನ ಎಷ್ಟೊ ಕವಿತೆಗಳು, ‘ವಿಕಟಕವಿ ವಿಜಯ’ದಂಥ ಪ್ರಹಸನವೂ, ಈ ಕವಿ ಪ್ರಚಲಿತವಾದ ದೈನಂದಿನ ಬದುಕಿಗೆ ತೀವ್ರವಾಗಿ ಪಡಿ ಮಿಡಿದ ರೀತಿಯನ್ನು ತೋರುತ್ತವೆ. ಅವರ “ಈಚಲು ಮರದ ಕೆಳಗೆ” ಎಂಬ ಪ್ರಬಂಧ ಸಂಕಲನದ ಉದ್ದಕ್ಕೂ, ಅವರ ಸಣ್ಣ ಕತೆಗಳಲ್ಲಿ, ಅವರು ಅದ್ಯತನದ ಬದುಕಿನ ಬಗೆಗೆ ತಾಳಿದ ಎಚ್ಚರವನ್ನು, ಪ್ರತಿಕ್ರಿಯೆಗಳನ್ನೂ ಕಾಣಬಹುದು. ಆದರೆ ಅವರ ಮೊದಲ ಒಲವು ಪುರಾಣ ನಿರ್ಮಿತಿಯ ಕಡೆಗೆ, ಚಿಂತನೆಯ ಕಡೆಗೆ, ತತ್ವಾನ್ವೇಷಣೆಯ ಕಡೆಗೆ, ತಮ್ಮ ಅಭಿವ್ಯಕ್ತಿಯನ್ನು ಹರಳುಗೊಳಿಸುವ (Crystalisation) ಕಡೆಗೆ.

ಕನ್ನಡದಲ್ಲಿ ‘ಗೀತರೂಪಕ’ ವೆಂಬ ಪ್ರಕಾರವನ್ನು ವಿಶೇಷವಾಗಿ ನಿರ್ಮಿಸಿದವರು ಪು.ತಿ.ನ. ಅಹಲ್ಯೆ, ದೋಣಿಯ ಬಿನದ, ಕವಿ, ಗೋಕುಲ ನಿರ್ಗಮನ, ಶಬರಿ, ಹಂಸದಮಯಂತಿ, ಹರಿಣಾಭಿಸರಣ, ವಸಂತ ಚಂದನ, ಶರದ್ ವಿಲಾಸ, ದೀಪಲಕ್ಷ್ಮಿ ಇತ್ಯಾದಿ ವಿಪುಲ ಗೀತರೂಪಕಗಳನ್ನು ರಚಿಸಿದ್ದಾರೆ. ಅಹಲ್ಯೆ, ಗೋಕುಲ ನಿಗರ್ಮನಗಳಂತೂ ರಸಿಕರ ಚಿತ್ತವನ್ನು ಸೂರೆಗೊಂಡಿವೆ. ಈ ಅವರ ಗೀತ ರೂಪಕಗಳು ಪ್ರಧಾನವಾಗಿ ಸಂಗೀತ, ಅಭಿನಯಗಳ ಸಹಾಯದಿಂದ ರುಚಿಸತಕ್ಕವು. ಗೀತ ರೂಪಕಗಳಲ್ಲಿನ ಸಾಹಿತ್ಯಾಂಶ ಸಂಗೀತದ ಮೂಲಕ ಹೆಚ್ಚು ಹೃದಯಸ್ಪರ್ಶಿಯಾಗಬಲ್ಲದು. ಸಂಗೀತದ ಸಾಹಚರ್ಯವನ್ನು ಸಾಹಿತ್ಯಕ್ಕೆ ಹೀಗೆ ಹೊಂದಿಸಬೇಕಾದರೆ, ಕವಿಯೂ ಸಂಗೀತದ ಪರಿಜ್ಞಾನವುಳ್ಳವನಾಗಬೇಕು. ಪು.ತಿ.ನ. ಅವರಿಗೆ ಸಂಗೀತದ ಖಚಿತವಾದ ಪರಿಜ್ಞಾನವಿದೆಯೆಂದು ಸಂಗೀತ ವಿದ್ವಾಂಸರೇ ಒಪ್ಪಿಕೊಂಡಿದ್ದಾರೆ.[16] ಇತ್ತೀಚೆಗಂತೂ ಅವರ ಮುಖ್ಯವಾದ ಒಲವು ಸಂಗೀತದ ಕಡೆಗೇ ಹರಿಯುವಂತೆ ತೋರುತ್ತದೆ ಅವರ ಕವಿತೆಗಳಲ್ಲಿ. ಸಂಗೀತದಿಂದ ಮಾತ್ರ ದೀಪ್ತವಾಗುವ ಸಾಹಿತ್ಯ ಕೇವಲ ಏಕಮುಖವಾಗುತ್ತದೆಂದು ಹೇಳಬಹುದು. ಅಹಲ್ಯೆ, ಗೋಕುಲ ನಿರ್ಗಮನ, ಕವಿ, ಶಬರಿ, ಇಂಥ ಸಹಜ ಸಂಗೀತ-ಸಾಹಿತ್ಯವನ್ನುಳ್ಳ ಗೀತ ರೂಪಕಗಳನ್ನು ಬಿಟ್ಟರೆ, ‘ಹಂಸದಮಯಂತಿ ಮತ್ತು ಇತರ ರೂಪಕಗಳು’, ಅವುಗಳ ಲಿಖಿತ ಸಾಹಿತ್ಯಾಂಶದಿಂದ ಓದುಗರ ಮೇಲೆ ಅಷ್ಟಾಗಿ ಪರಿಣಾಮ ಮಾಡಲಾರವು; ಬದಲು ಸಂಗೀತ-ಅಭಿನಯಗಳ ಮೂಲಕ ಪ್ರದರ್ಶಿತವಾದಾಗ ಇನ್ನೂ ಹೆಚ್ಚಿನ ಪರಿಣಾಮನ್ನುಂಟುಮಾಡುವುದರಲ್ಲಿ ಸಂಶಯವಿಲ್ಲ. ಆದರೆ ಇದು ಈ ಗೀತರೂಪಕಗಳಿಗೆ ಇರುವ ಮಿತಿ ಎಂದು ತಿಳಿಯಬೇಕಾಗಿದೆ.

ಪು.ತಿ.ನ. ಅವರ ಕವಿತೆ, ಇತರ ಸಮಕಾಲೀನ ಪ್ರಮುಖ ಕವಿಗಳ ಕವಿತೆಗಳ ಹಾಗೆ ಹೆಚ್ಚು ಸಾರ್ವತ್ರಿಕವೂ ಸ್ವಾದುವೂ ಆಗದೆ ಇರುವುದು ಆಶ್ಚರ್ಯ-ವಿಷಾದದ ಸಂಗತಿ. ಈ ಕವಿಗೆ ಸಹಜವಾದ ಚಿಂತನಪರತೆ, ಪುರಾಣ ಪ್ರಜ್ಞೆ, ಕನ್ನಡ-ಸಂಸ್ಕೃತಗಳ ವಿಲಕ್ಷಣ ಶೈಲಿ, ಸಂಗೀತದ ಸಾಹಚರ್ಯ, ಈ ಕೆಲವು ಸುಲಭ ಸಾರ್ವತ್ರಿಕವಾಗದ ಅಂಶಗಳಿದ್ದರೂ,ಈ ಮಿತಿಯೊಳಗೇ ಪು.ತಿ.ನ. ಅವರ ಕವಿತೆ ಸಾಧಿಸಿರುವ ಮಹತ್ವ ವಿಶೇಷವಾದದ್ದು. ವಿಚಾರವಂತರಿಗೆ, ಪರಂಪರೆಯ ಪ್ರಜ್ಞೆಯ ಬಹುಶ್ರುತರಿಗೆ, ಸಂಗೀತಪ್ರಿಯರಿಗೆ, ಅವರ ಕವಿತೆ ಕೊಡುವ ಸುಖ-ಸಂತೋಷ ಬೇರೆಯ ರೀತಿಯದು. ಇಂಥ ಮನಃಸ್ಥಿತಿಗೆ ರುಚಿಸುವ ಕಾರಣದಿಂದಲೋ ಏನೊ, ಒಮ್ಮೆ ದಿವಗಂತ ಶ್ರೀ ತೀ.ನಂ.ಶ್ರಿಯವರು ಹೇಳಿದ್ದರು, “ಪು.ತಿ.ನ. ಅವರು ಕವಿಗಳ ಕವಿ” ಎಂದು.

ನವೋದಯ-೧೯೭೬


[1] ಅಹಲ್ಯೆ: ಪು. IV ಪಂಕ್ತಿ ೯-೧೧.

[2] `ರಸ ಸರಸ್ವತಿ ಮತ್ತು ಇತರ ಕವನಗಳು, ಪು. ೩೭

[3] ಅಲ್ಲೇ, ಪು. ೨೯

[4] ಮಲೆದೇಗುಲ: ಪು. ೧೨

[5] ಹಣತೆ: ಪು. ೫೫

[6] ಮಲೆದೇಗುಲ: ಪು. ೩೩

[7] ಪು.ತಿ.ನ.: ಕಾವ್ಯಕುತೂಹಲ ಪು. ೧

[8] ಹೃದಯ ವಿಹಾರಿ: ಪು. ೧೭

[9] ರಸ ಸರಸ್ವತಿ ಮತ್ತು ಇತರ ಕವನಗಳು: ಪು. ೩೨

[10] ಹಣತೆ: ಪು. ೪೧

[11] ಗಣೇಶ ದರ್ಶನ: ಪು. ೨೬

[12] ಮಾಂದಳಿರು: ಪು. ೩೪

[13] ಅಹಲ್ಯೆ: ಪು.೨೫

[14] ಗಣೇಶ ದರ್ಶನ: ಪು. ೩೦

[15] ರಸ ಸರಸ್ವತಿ: ಪು. ೧೮

[16] ‘ಹಂಸದಮಯಂತಿ ಮತ್ತು ಇತರ ರೂಪಕಗಳು’-ಇದರಲ್ಲಿ ಶ್ರೀ ವಿ. ದೊರೆಸ್ವಾಮಿ ಐಯ್ಯಂಗಾರ‍್ಯರು ‘ಈ ಗೀತ ರೂಪಕಗಳ ಸಂಗೀತವನ್ನು ಕುರಿತು’ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಪು. xi-xiii.