ಸಂಗೀತವೊಂದು ಭಾವಭಾಷೆ. ಪಶು – ಪಕ್ಷಿಗಳಿಗೂ ಮುದನೀಡುವ ಕಲೆ. ಮನುಷ್ಯನ ಆನಂದವನ್ನು ಹೆಚ್ಚಿಸುವುದಕ್ಕೆ ಒಂದು ಆಹಾರ ಎಂಬೆಲ್ಲ ಹೇಳಿಕೆಗಳನ್ನು ವಿಭಿನ್ನ ರುಚಿಯ ಗಾಯಕರು, ವಾದಕರು, ಸಾಹಿತಿಗಳು, ವಿಮರ್ಶಕರು ಹಾಗೂ ಸಹೃದಯ ಶ್ರೋತೃಗಳು ವೇದಿಕೆಯಲ್ಲೋ, ಕಾರ್ಯಕ್ರಮಗಳ ಸಂದರ್ಭಗಳಲ್ಲೋ, ಪತ್ರಿಕೆಗಳಲ್ಲೋ ನೀಡುತ್ತಲೇ ಇರುತ್ತಾರೆ. ಅಷ್ಟೇ ಏಕೆ ‘ಇವರ ಸಂಗೀತ ಅದ್ಭುತವಾಗಿತ್ತು, ರೋಮಾಂಚನವಾಗಿತ್ತು, ವರ್ಣನಾತೀತವಾಗಿತ್ತು’ ಮುಂತಾದ ಮಾತುಗಳನ್ನೂ ಸ್ವಾನುಭವದಿಂದ ಮತ್ತು ಪರಾನುಭವದಿಂದ ಹೇಳುವವರನ್ನು ನೋಡುತ್ತಿದ್ದೇವೆ. ಪರಾನುಭದಿಂದ ಎಂದರೆ ಅನ್ಯರನ್ನು ಅನುಸರಿಸಿ ಅಭಿವ್ಯಕ್ತ ಮಾಡುವ ಅಭಿಪ್ರಾಯ ಎಂದರ್ಥ.

ಸಂಗೀತ ಕಾರ್ಯಕ್ರಮದ ಕುರಿತು ವಿಮರ್ಶೆ ಮಾಡುವುದರಲ್ಲಿ ಮತ್ತು ವರದಿ ಮಾಡುವುದರಲ್ಲಿ ಬಹು ವ್ಯತ್ಯಾಸವಿದೆ. ವಿಮರ್ಶೆ ಮಾಡುವಾಗ ಸಂಬಂಧಪಟ್ಟ ಸಕಲ ಸಾಮಗ್ರಿಗಳು, ಅರ್ಹತೆಗಳು ಇರಬೇಕಾಗುತ್ತದೆ. ಅಂತಹ ಹತ್ತು ಸಲಕರಣೆಗಳಲ್ಲಿ ಒಂದೆರಡು ನ್ಯೂನತೆಯಿದ್ದರೂ ಸಹಿಸಿಕೊಳ್ಳಬಹುದು. ಆದರೆ ಏಳೆಂಟು ಕಡಿಮೆಯಾದರೆ ಹೇಗೆ ತಾನೇ ಸರಿಯಾದೀತು? ಈ ಲೇಖನದ ಆಶಯದ ಹಿನ್ನೆಲೆಯಲ್ಲಿ ಮಹತ್ವದ ರಹಸ್ಯವೊಂದಿದೆ. ಹಿಂದುಸ್ತಾನೀ ಶಾಸ್ತ್ರೀಯ ಸಂಗೀತದ ವಿಮರ್ಶೆಯ ಕುರಿತಾಗಿ ಭೂತ, ವರ್ತಮಾನ ಹಾಗೂ ಭವಿಷ್ಯತ್ತುಗಳ ಪರಾಮರ್ಶೆಯೇ ಅದಾಗಿದೆ.

ಸಂಗೀತಕ್ಕೆ ಶಾಸ್ತ್ರೀಯ ಮತ್ತು ಪ್ರಾಯೋಗಿಕ ಎಂಬ ಎರಡು ಮುಖಗಳಿವೆ. ಎರಡರಲ್ಲೂ ಪರಿಣಿತರಾದವರಿಗೆ ವಾಗ್ಗೇಯಕಾರ ಅಥವಾ ಪ್ರವರ ಎಂದು ಹೆಸರಿಸುತ್ತಾರೆ. ಪ್ರಯೋಗಕುಶಲರು ಶಾಸ್ತ್ರದ ಕುರಿತು ತಿಳಿದಿದ್ದಾರೆಯೇ? ಹಾಗೆಯೇ ಶಾಸ್ತ್ರಜ್ಞಾನವಿರುವವರೆಲ್ಲರೂ ಹಾಡಲು ಅರ್ಹರೇ? ಎಂಬ ಪ್ರಾಯಃ ಎಲ್ಲ ಸಂಗೀತ ಚರ್ಚೆಯ ಸಂದರ್ಭಗಳಲ್ಲಿ ಸುಲಭವಾಗಿ ಉದ್ಭವಿಸುತ್ತದೆ. ಆದರೆ ಇಬ್ಬರನ್ನೂ ಸಂಗೀತಜ್ಞ ಎಂದೇ ಸಮಾಜ ಗುರುತಿಸುತ್ತದೆ, ಗೌರವಿಸುತ್ತದೆ. ಹೀಗಿರುವಾಗ ಸಾಮಾನ್ಯ ಶ್ರೋತೃಗಳಾಗಲೀ, ಅಭಿಮಾನಿಗಳಾಗಲೀ, ಪತ್ರಿಕಾವರದಿಗಾರರಾಗಲೀ ಕಲಾವಿದರು ಹಾಡಿದ ಗಾನದ ಅಥವಾ ನುಡಿಸಿದ ಸಂಗೀತದ ಕುರಿತು ವಿಮರ್ಶೆ ಮಾಡುವುದೆಂದರೆ ಹಾಸ್ಯಾಸ್ಪದವಾದೀತು.

ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಶ್ರೀ. ವಿ. ಎನ್. ಸುಬ್ಬರಾವ್ ಹೇಳುವಂತೆ ಸಂಗೀತದ ಕುರಿತಾಗಿ ಮಾಧ್ಯಮಗಳಲ್ಲಿ ಪ್ರಕಟವಾಗುವ ಲೇಖನ, ವಿಮರ್ಶೆಗಳು ನಿಜಕ್ಕೂ ಸಮಾಧಾನ ಮತ್ತು ನ್ಯಾಯವನ್ನು ಒದಗಿಸುತ್ತಿಲ್ಲ ಎಂದು ಹೇಳಿದರೆ ಖ್ಯಾತ ಪತ್ರಕರ್ತ ಶ್ರೀ. ಎಂ. ಕೆ. ಭಾಸ್ಕರರಾವ್ ಹೇಳುವಂತೆ ಸದ್ಯ ಬೆಂಗಳೂರಿನಲ್ಲಿ ಹಿಂದುಸ್ತಾನೀ ಸಂಗೀತವು ಶೀಘ್ರಗತಿಯಲ್ಲಿ ಪ್ರಸಾರವಾಗುತ್ತಿದ್ದರೂ ವಿಮರ್ಶೆ ಮಾತ್ರ ೩೦ ವರ್ಷಗಳಷ್ಟು ಹಿಂದಿದೆ ಎಂದು. ಇದನ್ನೆಲ್ಲ ಗಮನಿಸಿದರೆ ನಮ್ಮ ಪ್ರಾಚೀನರು ಪ್ರಯೋಗ ಮತ್ತು ಶಾಸ್ತ್ರಗಳಿಗೆ ನೀಡಿದ ಸಮಾನತೆ ಈಗ ಉಳಿದಿಲ್ಲ. ಹಿಂದುಸ್ತಾನೀ ಸಂಗೀತ ಹಾಡುವವರ ಅಥವಾ ಕಲಿಯುವವರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸಂಗೀತವನ್ನು ವಿಮರ್ಶಿಸುವ, ಸರಿಯಾದ ತಿಳಿಯುವವರ ಸಂಖ್ಯೆ ಶೇ. ಒಂದರಷ್ಟೂ ಇಲ್ಲ ಎಂಬುದು ದುಃಖಕರ ಸಂಗತಿಯಾಗಿದೆ.

ಇತರ ಸಂಗೀತ ಕ್ಷೇತ್ರವನ್ನು ಅವಲೋಕಿಸಿದಾಗ ಹಿಂದುಸ್ತಾನೀ ಸಂಗೀತದಲ್ಲಿ ಈ ರೀತಿಯ ಕೃಷಿ ಮಾಡುವವರ ಸಂಖ್ಯೆ ಹೆಚ್ಚಾಗಬೇಕೆಂಬುದು ಸಂಗೀತ ಅಭಿಮಾನಿಗಳ ಅಭಿಪ್ರಾಯ. ಪ್ರಯೋಗಕುಶಲತೆ ಎಷ್ಟು ಮುಖ್ಯವೋ ಅಷ್ಟೇ ಶಾಸ್ತ್ರೀಯ ವಿಮರ್ಶೆಯೂ ಮಹತ್ವದ್ದಾಗಿದೆ. ಸಂಗೀತವನ್ನು ತಿಳಿದವರಷ್ಟೇ ವಿಮರ್ಶೆ ಮಾಡಬಹುದು ಎಂಬುದು ಒಂದು ವಾದವದರೆ, ಅಡುಗೆ ಮಾಡಲಾರದವರೂ ರುಚಿಯನ್ನು ತಿಳಿಯುವಂತೆ ಸಂಗೀತವನ್ನು ಹಾಡದ ಮುಗ್ಧ ವ್ಯಕ್ತಿಯೂ ಅದರ ಮಾಧುರ್ಯವನ್ನು ತಿಳಿದು ಅಭಿಪ್ರಾಯ ಪಡಬಹುದು ಎಂಬುದು ಇನ್ನೊಂದು ಮತ. ಈ ಎಲ್ಲ ವಾದಗಳ ಮಧ್ಯ ಸ್ವಲ್ಪ ಗಹನವಾಗಿಯೇ ವಿಚಾರಮಂಥನ ಮಾಡುವ ಅವಶ್ಯಕತೆ ಇದೆ ಎಂಬುದನ್ನು ಮರೆಯುವಂತಿಲ್ಲ.

ಮೂರು ಗಂಟೆಗಳ ಕಾಲ ನಡೆದ ಸಂಗೀತ (ಗಾಯನ – ವಾದನ) ಕಚೇರಿಗಳನ್ನು ಕೇಳಿ, ನೋಡಿ, ಉಂಡು ಅದನ್ನು ಪತ್ರಿಕೆಯಲ್ಲಿ ವರದಿ ರೂಪದಲ್ಲಿ ಪ್ರಕಟಿಸುವುದು ಸುಲಭ. ಅದಕ್ಕಿಂತ ಸುಲಭವೆಂದರೆ ಕಾರ್ಯಕ್ರಮವನ್ನು ಅನುಭವಿಸದೇ ಯಾರೋ ಹೇಳಿದ ವಿಷಯವನ್ನು ವರದಿರೂಪವಾಗಿ ಪತ್ರಿಕೆಯಲ್ಲಿ ಸಚಿತ್ರವಾಗಿ – ವಿಚಿತ್ರವಾಗಿ ಪ್ರಕಟಿಸುವುದು.

ಕಾರ್ಯಕ್ರಮದಲ್ಲಿ ಇಂತಹ ಗಾಯಕರು ಈ ರಾಗವನ್ನು ಇಷ್ಟು ಗಂಟೆಗಳ ಕಾಲ ಹಾಡಿ ಅನಂತರ ದಾಸರಪದವನ್ನೋ ವಚನವನ್ನೋ ಭಜನೆಯನ್ನೋ ಹಾಡಿ ಭೈರವಿಯೊಂದಿಗೆ ಮುಗಿಸಿದರು. ಕಾರ್ಯಕ್ರಮವನ್ನು ಸಂಘಟಿಸಿದ ಇಂತಹ ಸಂಸ್ಥೆಯ ಅಧ್ಯಕ್ಷರು ಸ್ವಾಗತಿಸಿದರು. ಕಾರ್ಯದರ್ಶಿಗಳು ವಂದಿಸಿದರು. ಉಪಾಧ್ಯಕ್ಷರು ನೆನಪಿನ ಕಾಣಿಕೆಯನ್ನು ನೀಡಿದರು. ಕೋಶಾಧ್ಯಕ್ಷರು ಸಂಭಾವನೆ ನೀಡಿದರು. ಇತ್ಯಾದಿ ಸಾಮಾನ್ಯ ವರದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಇನ್ನೂ ಹೆಚ್ಚಿಗೆ ಪ್ರಚಾರ ಬೇಕಾದರೆ ಕಾರ್ಯಕ್ರಮವನ್ನು ಇಂತಹವರು ಪ್ರಯೋಜಿಸಿದರು ಎಂದೂ ಬರೆಯಬಲ್ಲರು. ಇಂತಹ ವರದಿಯನ್ನೇ ಅನೇಕರು ವಿಮರ್ಶೆ ಎಂದೂ ನಂಬುವುದುಂಟು.

ಆದರೆ ಹಾಡಿನ ರಾಗದ ಶಾಸ್ತ್ರೀಯ ಜ್ಞಾನ, ರಾಗದ ಸಮಯಪ್ರಜ್ಞೆ, ವಾದಿ – ಸಂವಾದಿ ಸ್ವರಗಳ ಸರಿಯಾದ ಪ್ರಯೋಗ ಮಾಡಿದ್ದಾರೆಯೇ? ಸಾಹಿತ್ಯ ಶುದ್ಧಿ ಇತ್ತೆ? ತಾಲ – ಲಯಗಳನ್ನು ಅಳವಡಿಸುವ ರೀತಿ ಮತ್ತು ಸಹ ವಾದ್ಯಗಾರರ ಜೊತೆಗೆ ಸಾಮರಸ್ಯವಿತ್ತೇ? ಇವೇ ಮುಂತಾದ ಸೂಕ್ಷ್ಮ ವಿಷಯಗಳನ್ನು ಕೂಲಂಕುಷವಾಗಿ ವಿಮರ್ಶಿಸಿ ಬರೆಯುವುದು ಅಷ್ಟೊಂದು ಸುಲಭ ಸಾಧ್ಯವಿಲ್ಲ. ಸಮೀಪದ ರಾಗಗಳನ್ನು ಬೇರ್ಪಡಿಸಿ ಹಾಡುವ ಕಲಾಕೌಶಲವನ್ನು ತಿಳಿದು ವಿಮರ್ಶಿಸಬೇಕಾಗುತ್ತದೆ. ಅದರಲ್ಲೂ ನಿಷ್ಪಕ್ಷಪಾತವಾಗಿ ಬರೆಯಬೇಕೆಂದರೆ ಕೆಲವು ತೊಡಕುಗಳು ಇದ್ದೇ ಇರುತ್ತದೆ. ಇವರು ಖ್ಯಾತ ಕಲಾವಿದರು, ಇವರ ಬಳಗ ದೊಡ್ಡದು, ಇವರ ಅಭಿಮಾನಿಗಳಿಗೆ ಬೇಸರವಾಗಬಹುದು ಎಂಬ ಉದ್ದೇಶದಿಂದ ವಾಸ್ತವಿಕತೆಯಿಂದ ದೂರ ಸರಿದರೆ ಅದು ವಸ್ತು ನಿಷ್ಠ ವಿಮರ್ಶೆಯಾಗಲಾರದು. ಆಗ್ರಹ ಮತ್ತು ಪೂರ್ವಾಗ್ರಹಗಳಿದ್ದರೆ ವಿಮರ್ಶಿಸುವುದು ಅಸಾಧ್ಯ. ಅದು ವಿವಾದಕ್ಕೆ ಅಥವಾ ದ್ವೇಷಕ್ಕೆ ಕಾರಣವಾಗಬಹುದು.

ಪ್ರಸಿದ್ಧ ಪತ್ರಿಕೆಯ ಮುಖ್ಯಸ್ಥರೊಬ್ಬರಿಗೆ ಕಲಾವಿದರ ಕುರಿತಾದ ಯಾವುದೋ ಕೆಟ್ಟ ಅಭಿಪ್ರಾಯವಿದ್ದರೆ ಅವರು ತಮ್ಮ ಅಧೀನ ವರದಿಗಾರರನ್ನು ಒತ್ತಾಯಿಸಿ ಅವರಿಂದ ಉದ್ದೇಶಪೂರ್ವಕವಾಗಿ ದೋಷಪೂರಿತ ವಿಮರ್ಶೆಯೊಂದನ್ನು ಪ್ರಕಟಿಸಿದರೆ ಅದು ಸರಿ ಅನಿಸದು. ಹಾಗೆಯೇ ಆ ದಿನ ಚೆನ್ನಾಗಿ ಹಾಡದ ಖ್ಯಾತ ಗಾಯಕನ ಕಾರ್ಯಕ್ರಮದ ಕುರಿತು ಅತಿಶಯವಾಗಿ ವರ್ಣಿಸಿ ಪತ್ರಿಕೆಯಲ್ಲಿ ಪ್ರಕಟಿಸಿದರೂ ಅದು ತಪ್ಪಾಗುತ್ತದೆ.

ಒಟ್ಟಾರೆ ಸಂಗೀತ ವಿಮರ್ಶೆ ಎಂಬ ವಿಷಯವು ದಿಕ್ಕನ್ನು ತಪ್ಪಿಸುವಷ್ಟು ಪರಿಕರಗಳನ್ನು ಒಳಗೊಂಡಿದೆ. ಅದಕ್ಕಾಗಿ ವಿಮರ್ಶಕರನ್ನು ಅತ್ಯುತ್ತಮ, ಉತ್ತಮ ಮತ್ತು ಮಾಧ್ಯಮಎಂದು ಮೂರು ವಿಧವಾಗಿ ವಿಭಾಗಿಸುವುದು ಪ್ರಸ್ತುತ ಸಂದರ್ಭಕ್ಕೆ ಉಚಿತವಾದೀತು. ೧. ಉತ್ತಮ ಸಂಗೀತಗಾರನಾಗಿ, ಶಾಸ್ತ್ರಜ್ಞಾನ ಸಂಪನ್ನನಾಗಿ, ಲೇಖನಕುಶಲತೆಯನ್ನು ಮೆರೆದು ಸಂಗೀತ ಕಚೇರಿಯೊಂದನ್ನು ವಿಶ್ಲೇಷಿಸಿದರೆ ಹಾಗೂ ಅದರಿಂದ ಗಾಯಕನಿಗೂ, ವಾದಕನಿಗೋ, ಸಂಘಟಕನಿಗೋ, ಶ್ರೋತೃಗಳಿಗೋ ಉತ್ತಮ ಮಾರ್ಗದರ್ಶನ ನೀಡುವಂತಿದ್ದರೆ ಅವನಿಂದ ರೂಪಿತವಾದ ವಿಮರ್ಶೆ ಎನಿಸಿಕೊಳ್ಳುತ್ತದೆ. ೨. ಸಂಗೀತದ ಶಾಸ್ತ್ರೀಯ ಜ್ಞಾನವಿದ್ದರೂ ಪ್ರಯೋಗಕುಶಲತೆಯ ನ್ಯೂನತೆಯಿದ್ದರೆ ಅವನಿಂದ ರೂಪಿತವಾದ ವಿಮರ್ಶೆ ಉತ್ತಮ ಎಂಬ ನಾಮಧೇಯವನ್ನು ಹೊಂದಬಹುದು. ೩.ಪ್ರಯೋಗ ಹಾಗೂ ಶಾಸ್ತ್ರಜ್ಞಾನವಿಲ್ಲದ ಕೇವಲ ಲೇಖನ ಚಾಪಲ್ಯದಿಂದ ಸಂಗೀತ ಸಮಾರಂಭವೊಂದನ್ನು ಪ್ರಕಟಿಸಿದರೆ ಅದು ಮಧ್ಯಮ ವಿಮರ್ಶೆ ಎನಿಸಿಕೊಳ್ಳುತ್ತದೆ.

ಈ ದೃಷ್ಟಿಯಲ್ಲಿ ದಿನಪತ್ರಿಕೆಗಳ, ಪಾಕ್ಷಿಕ, ಮಾಸ ಪತ್ರಿಕೆಗಳ ವರದಿಗಾರರಿಗೆ, ಹವ್ಯಾಸಿ ವರದಿಗಾರರಿಗಾಗಿ ಹಾಗೂ ಲೇಖಕರಿಗೆ ಸಂಗೀತ ವಿಮರ್ಶೆಯ ಕುರಿತು ಶಿಬಿರವನ್ನೋ ಕಾರ್ಯಾಗಾರವನ್ನೋ ಏರ್ಪಡಿಸುವುದು ಎಷ್ಟು ಸಮಂಜಸವೋ ಅಷ್ಟೇ ಕರ್ತವ್ಯವೆಂದರೆ ವಿಮರ್ಶೆಗೆ ಅನುಕೂಲವಾದ ವಾತಾವರಣವನ್ನು ಮೂಡಿಸುವ ನಿಟ್ಟಿನಲ್ಲಿ ಸಂಗೀತ ಕಲಾವಿದರಿಗಾಗಿ ಗೋಷ್ಠಿಯನ್ನು, ಕಾರ್ಯಗಾರವನ್ನು ಹಮ್ಮಿಕೊಳ್ಳುವುದುದಾಗಿ, ಅಪರೂಪವೆಂಬಂತೆ ಇಂತಹ ಸಂದರ್ಭ ೨೦೦೫ ಜೂನ್ ತಿಂಗಳಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವತಿಯಿಂದ ಹಿಂದುಸ್ತಾನಿ ಸಂಗೀತ ರಸಗ್ರಹಣ ಶಿಬಿರ ಎಂಬ ಶೀರ್ಷಿಕೆಯಡಿಯಲ್ಲಿ ಮೂರು ದಿನಗಳವರೆಗೆ ಬೆಂಗಳೂರಿನಲ್ಲಿ ಏರ್ಪಟ್ಟಿತ್ತು. ಭಾಗವಹಿಸಿದ ಎಲ್ಲರೂ ಇಂತಹ ಅನೇಕ ವಿಮರ್ಶಾತ್ಮಕ ವಿಷಯಗಳನ್ನು ತಿಳಿದುಕೊಂಡರೆಂದು ಭಾವಿಸಿದೆನು. ಇಂತಹ ಕಾರ್ಯಗಾರಗಳು ಪ್ರತಿ ಜಿಲ್ಲೆಯಲ್ಲೂ ಏರ್ಪಟ್ಟರೆ ಹಿಂದುಸ್ತಾನೀ ಸಂಗೀತ ವಿಮರ್ಶಾ ಕ್ಷೇತ್ರಕ್ಕೊಂದು ಹೊಸ ದಾರಿ ತೋರಿಸಿದಂತಾಗುತ್ತದೆ ಎಂಬುದು ಅನೇಕರ ಅಭಿಪ್ರಾಯವಾಗಿತ್ತು.

ಎಷ್ಟೋ ಸಲ ಸಾಧನೆಯ ಪರಿಶ್ರಮವನ್ನು ವಿಚಾರಿಸದೆ ಪತ್ರಿಕೆಯಲ್ಲಿ ಉತ್ಪ್ರೇಕ್ಷೆಯ ರೀತಿಯಲ್ಲಿ ಹಾಡಿದವರ ಕುರಿತು ವಿಮರ್ಶೆ ಅಥವಾ ವರದಿ ಪ್ರಕಟವಾಗುವುದಿದೆ. ಪುಟ್ಟ ಬಾಲಕನೋ, ಅಪ್ರಬುದ್ಧ ಗಾಯಕನೋ, ವಾದಕನೋ ಕಚೇರಿ ನೀಡಿದಾಗ ಇವರ ಸಂಗೀತವು ಸ್ವರ್ಗ ಸುಖದಂತಿತ್ತು. ಗಂಧರ್ವ ಲೋಕಕ್ಕೆ ಒಯ್ಯಿತು. ಪ್ರೇಕ್ಷಕರನ್ನು ಆನಂದಲೋಕದಲ್ಲಿ ಮುಳುಗಿಸಿತು ಇತ್ಯಾದಿ ಶಿರೋನಾಮೆಗಳ ಆಶ್ರಯದಲ್ಲಿ ಪ್ರಕಟಿಸಿದರೆ ಅದು ಆ ಅಪರಿಪೂರ್ಣ ಗಾಯಕರ ಸಾಧನೆಯನ್ನು ಕುಗ್ಗಿಸಿದಂತಾಗುತ್ತದೆ ಎಂಬುದು ಕೂಡಲೇ ಅರಿವಾಗುವುದಿಲ್ಲ. ಹಾಗೆಯೇ ಶ್ರೇಷ್ಠ ಗಾಯಕರ ಅಥವಾ ವಾದಕರ ಕಚೇರಿಯ ನಂತರ ಕೆಲವೇ ವಾಕ್ಯಗಳಲ್ಲಿ ಅಪೂರ್ಣ ಮಾಹಿತಿಯೊಂದಿಗೆ ವರದಿ ಮಾಡುವುದು ಅನ್ಯಾಯ ಮಾಡಿದಂತೆ. ಸಂಗೀತ ಕ್ಷೇತ್ರದಲ್ಲಿ ದಿಗ್ಗಜರೆನಿಸಿಕೊಂಡವರ ಕಾರ್ಯಕ್ರಮವನ್ನು ಸಂಘಟಕರು ಬಹಳ ಕಷ್ಟಪಟ್ಟು ಸಂಯೋಜಿಸುತ್ತಾರೆ. ಅದರ ಬಗ್ಗೆ ಪತ್ರಿಕೆಗಳಲ್ಲಿ ಸರಿಯಾಗಿ ಸುದ್ದಿ ಮತ್ತು ವರದಿ ಪ್ರಕಟವಾಗದಿರುವ ಸಂದರ್ಭಗಳು ಬಹಳಷ್ಟಿವೆ. ಸರಿಯಾಗಿ ಆಮಂತ್ರಣ ನೀಡಿಲ್ಲ ಎಂಬುದು ಪತ್ರಕರ್ತರ ದೂರು ಮತ್ತು ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ವರದಿಗಾರರು ತಾವಾಗಿಯೇ ಬರಬೇಕಲ್ಲವೆ? ಎಂಬ ಸಂಘಟಕರ ಹೇಳಿಕೆಗಳು ಗಮನಿಸಬೇಕಾದ ಅಂಶ. ವಿಮರ್ಶೆಯಂತೂ ದೂರೇ ಉಳಿಯುತ್ತದೆ. ರಾಜಕೀಯ ಪುಢಾರಿಗಳು ಬಂದಾಗ ವರದಿಗಾರರು ಎಷ್ಟು ಆಸಕ್ತಿಯಿಂದ ತಾವೇ ಕಾರ್ಯಕ್ರಮಕ್ಕೆ ಹೋಗಿ ಕೂಡಲೇ ವರದಿಯನ್ನು ಪ್ರಕಟಿಸುತ್ತಾರೆ. ಆದರೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮದ ಕುರಿತು ಅಷ್ಟೊಂದು ಕಾಳಜಿ ವಹಿಸುವುದಿಲ್ಲ ಎಂಬುದು ಕಲಾಸಕ್ತರನೇಕರ ಅಭಿಪ್ರಾಯವಿದೆ. ಪತ್ರಿಕೆಯ ಮುಖ್ಯಸ್ಥರು ಕನಿಷ್ಠ ಪಕ್ಷ ೨-೩ ಜಿಲ್ಲೆಗೆ ಒಬ್ಬರನ್ನು ಸಾಂಸ್ಕೃತಿಕ ಕಾರ್ಯಕ್ರಮ ವಿಮರ್ಶಕರೆಂದು ನೇಮಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ನೆರೆಯ ಮಹಾರಾಷ್ಟ್ರದಲ್ಲಿ ಜಿಲ್ಲೆಗೊಬ್ಬರಂತೆ ಇಂತಹ ವಿಮರ್ಶಕರು ಇದ್ದಾರೆ. ಪ್ರತಿವರ್ಷ ಪುಣೆಯಲ್ಲಿ ಜರುಗುವ ಸವಾಯಿ ಗಂಧರ್ವ ಉತ್ಸವದ ಸಂದರ್ಭದಲ್ಲಿ ೨೫ಕ್ಕೂ ಹೆಚ್ಚು ವಿಮರ್ಶಕರು ಮುಂಭಾಗದಲ್ಲಿ ಆಶಿನರಾಗಿ ವಿಮರ್ಶಿಸುತ್ತಾರೆ.

ಕೆಲವೊಮ್ಮೆ ಸಂಗೀತ ವಿಮರ್ಶೆಗೆ ತೊಡಕಾಗುವುದು ಕಲಾವಿದರಿಂದಲೇ ಎಂಬುದನ್ನು ಮರೆಯುವಂತಿಲ್ಲ. ಗಾಯಕರು ಹಾಡುವ ರಾಗದ ಕುರಿತು ವಿಮರ್ಶಕರಿಗೆ ಸರಿಯಾದ ಮಾಹಿತಿ ನೀಡಿದರೆ ಮತ್ತು ಹಾಡುವ ಪದ್ಯ ಅಥವಾ ಚೀಜ್ ಅಥವಾ ಬಂದಿಶಗಳನ್ನು ಸ್ಪಷ್ಟವಾಗಿ ತಿಳಿಸಿದರೆ ಅದು ಉತ್ತಮ ಕಚೇರಿಯಾಗಿ ಹೊರಹೊಮ್ಮುತ್ತದೆ. ರಾಗವನ್ನು ಬಹುಕಾಲ ಹಾಡಿ ಚೆನ್ನಾಗಿಯೇ ಪ್ರಸ್ತುತ ಪಡಿಸುತ್ತಾರೆ. ಆದರೆ ಸಾಹಿತ್ಯದ ಸ್ಪಷ್ಟತೆ ಇಲ್ಲದಿದ್ದಾಗ ವಿಮರ್ಶಕರು ಹಾಗೇ ಬರೆಯಬೇಕಾಗುತ್ತದೆ. ಅದು ಕೆಲವು ಗಾಯಕರಿಗೆ ಬೇಸರ ತಂದುಕೊಡುತ್ತದೆ. ಆಗ ಅವರು ಅಭಿಪ್ರಾಯ ಪಡುವುದೇನೆಂದರೆ ನಾವು (ಹಿಂದುಸ್ತಾನಿ ಸಂಗೀತಗಾರರು) ಸಾಹಿತ್ಯಕ್ಕೆ ಅಷ್ಟೊಂದು ಮಹತ್ವ ಕೊಡುವುದಿಲ್ಲ. ನಾವು ಹಾಡುವ ಶೈಲಿ, ಸ್ವರಗಳ, ಅಲಾಪಗಳ ವೈಖರಿಯನ್ನು ನೋಡಿ ಆನಂದಪಡಿಸಿ ಎಂದು ಹೇಳುತ್ತಾರೆ. ಮತ್ತೆ ಕೆಲವರು ಇನ್ನೂ ಮುಂದೆ ಹೋಗಿ ವೇದಿಕೆಯಲ್ಲಿ ಸಂಗೀತದ ಕುರಿತು ಮಾತನಾಡುವ ಸಂದರ್ಭ ಬಂದಾಗ ತಮ್ಮ ಅಸಾಮಾರ್ಥ್ಯವನ್ನು ಹೀಗೆ ನಿವಾರಿಸಿಕೊಳ್ಳುತ್ತಾರೆ – ನಾವು ಮಾತನಾಡುವವರಲ್ಲ, ಬೇಕಾದರೆ ಇನ್ನೂ ಒಂದು ಗಂಟೆ ಹೆಚ್ಚು ಹಾಡಬಲ್ಲೇವು – ಎಂದು.

ವಿಮರ್ಶಕರು ಗಾಯಕರ ಮನೋಧರ್ಮವನ್ನು ಕೂಲಂಕಷವಾಗಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಕೆಲವೊಮ್ಮೆ ಅನ್ಯಾಯವಾಗುವ ಸಂದರ್ಭವಿರುತ್ತದೆ. ಉದಾಹರಣೆಗೆ, ೨೦ ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಜರುಗಿದ ಅಹೋರಾತ್ರಿ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದೆಯೊಬ್ಬರು ಇನ್ನೂ ಐದಾರು ಜನರು ಹಾಡುವವರಿದ್ದರೂ ತನ್ನ ಗಾಯನದ ಕೊನೆಯಲ್ಲಿ ಭೈರವಿ ರಾಗವನ್ನು ಪ್ರಸ್ತುತಪಡಿಸಿದರು. ಅನಂತರ ಹಾಡುವ ಶ್ರೇಷ್ಠ ಗಾಯಕರು ಮುಜುಗತಕ್ಕೊಳಗಾದರು. ವಿಮರ್ಶಕರಿಗೆ ಭೈರವಿ ಹಾಡುವ ಸಮಯ, ಸಂದರ್ಭಗಳು ಸರಿಯಾಗಿ ತಿಳಿದಿದ್ದರೆ ಮೊದಲು ಹಾಡಿದ ಕಲಾಕಾರರು ತಪ್ಪು ಮಾಡಿದ್ದಾರೆ ಎಂದು ಧೈರ್ಯದಿಂದ ಬರೆಯುತ್ತಾರೆ. ೨೦ ವರ್ಷಗಳ ನಂತರ ಅದೇ ವೇದಿಕೆಯಲ್ಲಿ ಮುಜುಗರಕ್ಕೊಳಗಾದ ಗಾಯಕರ ಶಿಷ್ಯರೊಬ್ಬರು ಹಿಂದೆ ಭೈರವಿ ಹಾಡಿದ ಕಲಾವಿದೆಯ ಗಾಯನ ಅನಂತರವಿರುವಾಗಲೇ ಇವರು ಅವಶ್ಯವಾಗಿ ಭೈರವಿ ರಾಗದಿಂದ ಕಾರ್ಯಕ್ರಮ ಸಮಾಪನಗೊಳಿಸಿದರು. ಇಂತಹ ಸಂದರ್ಭವನ್ನು ವಿಮರ್ಶಕರು ಅರ್ಥ ಮಾಡಿಕೊಳ್ಳದಿದ್ದರೆ ಸಂಗೀತ ಕ್ಷೇತ್ರಕ್ಕೆ ಮತ್ತು ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗುತ್ತದೆ.

ಇಷ್ಟೇಲ್ಲದರ ಮಧ್ಯದಲ್ಲಿ ನನಗೆ ನೆನಪಿರುವಂತೆ ಕುಮಟಾದಲ್ಲಿ ೨೦೦೦ ರಲ್ಲಿ ಜರುಗಿದ ಒಂದು ಸಂಗೀತ ಕಚೇರಿಯ ಆರಂಭದಲ್ಲಿ ಖ್ಯಾತ ಗಾಯಕರೊಬ್ಬರು ತಾವು ಅಂದು ಹಾಡುವ ಶಾಸ್ತ್ರೀಯ ಸಂಗೀತದ ಪದ್ಯಗಳನ್ನು ಹಾಗೂ ಅದರ ಅರ್ಥವನ್ನು ಸಂಪೂರ್ಣ ಮಾಹಿತಿಯೊಂದಿಗೆ ಬರೆದು ಕೆಲವು ಪ್ರತಿಗಳನ್ನು ಮಾಡಿಸಿ ಪತ್ರಕರ್ತರಿಗೆ ನೀಡಿದ್ದರು. ಅದರ ಪರಿಣಾಮವಾಗಿ ಮರುದಿನವೇ ಎಲ್ಲ ಪತ್ರಿಕೆಗಳಲ್ಲಿ ಮೂಡಿದ ವರದಿಯ ವಿಮರ್ಶೆತಯಂತೆಯೇ ಇತ್ತು.

ಇದನ್ನೆಲ್ಲ ಗಮನಿಸಿದಾಗ ಸಂಗೀತ ವಿಮರ್ಶೆ ಕೇವಲ ವಿಮರ್ಶಕನ, ವರದಿಗಾರರ ಕೈಯಲ್ಲಿಲ್ಲ. ಅದು ಕಲಾವಿದರಿಗೂ ಸಂಬಂಧಪಟ್ಟಿದೆ ಎಂದು ಮಾತ್ರ ಹೇಳಬಹುದು. ಇಂದಿಗೂ ಕೆಲವು ಸಂಗೀತಾಭಿಮಾನಿ ವಿಮರ್ಶಕರು ಕಾರ್ಯಕ್ರಮಗಳಿಗೆ ಹೋಗಿ ಪೂರ್ಣವಾಗಿ ರಸಾಸ್ವಾದನೆ ಮಾಡಿ ವಿಮರ್ಶೆಯನ್ನು ಬರೆಯುತ್ತಿದ್ದಾರೆಂಬುದು ಸಂತೋಷದ ವಿಷಯ.

ಸಂಗೀತ ಕಚೇರಿಯ ಸಮಗ್ರ ವಿಮರ್ಶೆಯ ಸಂದರ್ಭದಲ್ಲಿ ಕಲಾವಿದರ ನಡವಳಿಕೆಯ ಪೂರ್ವಾಪರ ವಿಷಯವನ್ನು ಅರಿಯಬೇಕೆ? ಅವರ ನಿತ್ಯ ಬದುಕಿನ ಬಗ್ಗೆ ತಿಳಿದುಕೊಳ್ಳಬೇಕೇ ಅಥವಾ ಕೇವಲ ಅಂದಿನ ಸಂಗೀತ ಕಾರ್ಯಕ್ರಮಕ್ಕೆ ಮಾತ್ರ ವಿಮರ್ಶೆಯ ವಿಷಯ ಸೀಮಿತವಾಗಿರಬೇಕೇ ಎಂಬ ಜಿಜ್ಞಾಸೆ ಅನೇಕರಲ್ಲಿದೆ ಮತ್ತು ಇದು ಚರ್ಚೆಗೂ ಗ್ರಾಸವಾಗಿದೆ. ಅನೇಕ ಸಲ ಆ ದಿನ ಕಲಾವಿದನಿಗೆ ಆರೋಗ್ಯ ಅಷ್ಟೊಂದು ಚೆನ್ನಾಗಿ ಇಲ್ಲದಿದ್ದಾಗ ಕಛೇರಿಯು ನೀರಸವಾಗುವ ಸಂದರ್ಭವಿರುತ್ತದೆ. ಆದರೆ ಇಂತಹ ಸಂದರ್ಭದಲ್ಲಿ ಕಲಾವಿದನು ಸೂಕ್ಷ್ಮವಾಗಿ ಸಭೆಗೆ ತಿಳಿಸುವುದು ಯೋಗ್ಯವಾಗಿರುತ್ತದೆ.

ಹಾಗೇ ಕಾರ್ಯಕ್ರಮವನ್ನು ಸಂಘಟಿಸಿದ ಸಂಸ್ಥೆಯನ್ನು ಕುರಿತು ಸಂಗೀತವನ್ನು ಆಲಿಸಲು, ವಿವಿಧ ಪ್ರತಿಕ್ರಿಯೆಗಳನ್ನು ನೀಡಲು ಬಂದಿರುವ ಶ್ರೋತೃಗಳ, ಪ್ರೇಕ್ಷಕರ ಕುರಿತು ಕೆಲವೊಮ್ಮೆ ಬರೆಯಲೇ ಬೇಕಾಗುತ್ತದೆ. ಅವು ಅನುಕೂಲ ಅಥವಾ ಪ್ರತಿಕೂಲ ಸಂಗತಿಗಳು ಇರಬಹುದು. ಎಷ್ಟೋ ಸಲ ಕಡಿಮೆ ವೆಚ್ಚದಲ್ಲಿ ಕಾರ್ಯಕ್ರಮ ಮಾಡಬೇಕೆಂಬ ಉದ್ದೇಶದಿಂದ ವ್ಯವಸ್ಥೆ ಚೆನ್ನಾಗಿ ಇರುವುದಿಲ್ಲ. ಧ್ವನಿವರ್ಧಕ, ಆಸನ ವ್ಯವಸ್ಥೆ, ದೀಪ ಮುಂತಾದ ಅನುಕೂಲಗಳು ಸರಿಯಾಗಿಲ್ಲದಿದ್ದರೆ ಕಲಾವಿದರು ಉತ್ತಮರಾದರೂ ಕಾರ್ಯಕ್ರಮದ ಗುಣಮಟ್ಟ ಕನಿಷ್ಠವಾಗಿರುತ್ತದೆ. ಇದನ್ನೆಲ್ಲ ವಿಮರ್ಶಕರು ಅವಲೋಕಿಸಿ ಬರೆಯುವ ವಸ್ತುನಿಷ್ಠ ಲೇಖನ ನ್ಯಾಯವಾಗಿರುತ್ತದೆ. ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ಉತ್ತಮ ಕಲಾವಿದನು ಕೇವಲ ಸಂಗೀತಜ್ಞನಾಗಿರದೇ ನೈತಿಕವಾಗಿಯೂ ಸಂಪದ್ಭರಿತನಾಗಿ ಸೌಜನ್ಯ ಮೂರ್ತಿಯಾಗಿ ಇತರರಿಗೆ ಅನುಕರಣೀಯನಾಗಿರಬೇಕಾಗುತ್ತದೆ. ಅವನ ಉತ್ತಮ ಸ್ವಭಾವವು ಮುಂದಿನ ಪೀಳಿಗೆಯ ಗಾಯಕರಿಗೆ ಉತ್ತೇಖನ ನೀಡುವಂತಿರಬೇಕು. ಉದ್ಧಟತನ, ಹಟಸ್ವಭಾವ ಮುಂತಾದವುಗಳು ಅವನಲ್ಲಿರಬಾರದು. ಹಾಡುವ ಅಥವಾ ನುಡಿಸುವ ಸಂದರ್ಭಗಳಲ್ಲಿ ಕೆಲವು ಸಂಗೀತ ವಿಷಯಗಳನ್ನು ರಾಗದ ಕುರಿತಾದ ಮಾಹಿತಿಗಳನ್ನು ಸ್ಪಷ್ಟವಾಗಿ ನೀಡಿದ್ದೇ ಆದರೆ ವರದಿಗಾರರಿಗೆ ಹೆಚ್ಚು ಅನುಕೂಲವಾಗುತ್ತದೆ. ಅವನು ಕಲಾಕಾರರಿಂದ ಇಂತಹ ಆಹಾರವನ್ನೇ ನಿರೀಕ್ಷಿಸುತ್ತಿರುತ್ತಾನೆ. ಆದ್ದರಿಂದಲೇ ಕೆಲವು ವರದಿಗಾರರು, ವಿಮರ್ಶಕರು ಕಚೇರಿಯ ಮೊದಲು ಅಥವಾ ಕೊನೆಯಲ್ಲಿ ಕಲಾವಿದರನ್ನು ಸಂದರ್ಶಿಸಿ, ಕೆಣಕಿ ಕೆಲವು ಪ್ರಮುಖ ವಿಷಯಗಳನ್ನು ತಿಳಿಯಲು ಕಷ್ಟಪಡುತ್ತಾರೆ. ಆದರೆ ಇದು ಕೆಲವೊಮ್ಮೆ ಕಲಾವಿದರೆ ಮುಜುಗರ ತಂದುಕೊಡುವ ಸಂದರ್ಭವೂ ಆಗಿರುತ್ತದೆ. ಒಟ್ಟಾರೆ, ಸಂಗೀತ ವಿಮರ್ಶೆಯು ಬಹುಶ್ರಮವನ್ನು ಅಪೇಕ್ಷಿಸುತ್ತದೆ.

ಕಾಲಮಿತಿ – ಒಂದು ಗಾಯನ ಸಮಾರಂಭವು ಜರುಗಿ ಅದೆಷ್ಟೋ ದಿನಗಳಾದರೂ ವಿಮರ್ಶಕನ ಆಲಸ್ಯದಿಂದ ಪ್ರಕಟವಾಗುವುದಿಲ್ಲ. ಅನಂತರ ಜರುಗಿದ ವಿವಿಧ ಕಾರ್ಯಕ್ರಮಗಳ ವಿಮರ್ಶೆ, ವರದಿಗಳು ಪ್ರಕಟವಾಗುತ್ತವೆ. ಇದನ್ನು ನಿವಾರಿಸಬೇಕು ಮತ್ತು ಕಾರ್ಯಕ್ರಮದ ಉತ್ತಮ ಭಾವಚಿತ್ರದೊಂದಿಗೆ ಆದಷ್ಟು ಬೇಗ ವಿಮರ್ಶೆ ಪ್ರಕಟವಾಗಬೇಕು.