ಸುವ್ವಿ ಸುವ್ವಿ ಸುವ್ವಿಯೋ ಸುವ್ವಿಯೋಳ್ ಸುವ್ವಿ (ಸೊಲ್ಲು)
ಏಳು ಜನ ಅಣ್ಣ ತಮ್ಮದೀರು | ಸುವ್ವಿ |
ಒಬ್ಬಳೆ ಹೆಣ್ಣು ಮಗಳು | ಸುವ್ವಿ |
ಹೆಣ್ಣು ಮಗಳು ಲಗ್ನವಾಗಿ | ಸುವ್ವಿ |
ಆರು ಜನಕು ಲಗ್ನವಾಗಿ | ಸುವ್ವಿ |
ಎಲ್ಲಕ್ಕಿಂತ ಕಿರಿ ತಮ್ಮ | ಸುವ್ವಿ |
ಎಲ್ಲು ಹೆಣ್ಣು ಕೇಳುದ್ರುವೆ | ಸುವ್ವಿ |
ಅವನು ಏನಂಥ ಮಾತನಾಡಿದನು | ಸುವ್ವಿ |
ಎಲ್ಲೂ ಹೆಣ್ಣು ಒಪ್ಪುವುದಿಲ್ಲ | ಸುವ್ವಿ |
ಹಿರಿಯ ಮಗನು ತಾಯಿಯ ತವಕೆ | ಸುವ್ವಿ |
ತಮ್ಮ ನೋಡಿದ್ರೆ ಒಪ್ಪೋದಿಲ್ಲವಲ್ಲ | ಸುವ್ವಿ |
ಇನ್ನೆಲ್ಲಿ ಹೆಣ್ಣು ಬೇಕು ತಮ್ಮ | ಸುವ್ವಿ |
ಅಕ್ಕನ ಮಗಳು ತರಬೇಕೆಂದ | ಸುವ್ವಿ |
ಆ ಮಾತ ಕೇಳಿ ಅಕ್ಕನ ಮನೆಗೋದನು (ಅಣ್ಣ) | ಸುವ್ವಿ |
ಅಕ್ಕನ ಮನೆಗೆ ಹೋದನವನು | ಸುವ್ವಿ |
(ಎಂದು ಬಾರದ ಅಣ್ಣ ಇಂದೇನು ಬಂದೆ | ಸುವ್ವಿ |
ತಮ್ಮನಾದ್ರು ಬರುತಾನೆ ನಿನ್ನ ಮನೆ ಹೆಣ್ಣ ತರುವೊಕ | ಸುವ್ವಿ !)
ಎಂದು ಬರದ ತಮ್ಮ ಇಂದೇನು ಬಂದೆ | ಸುವ್ವಿ |
ನಿನ್ನ ಮನೆ ಹಾಲು ಅನ್ನಕೆ ಬಂದಿವಿನಿ ಅಕ್ಕ | ಸುವ್ವಿ |
ಅವಳು ಆ ಮಾತ ಕೇಳಿ ಬಿರ್ರನೆ ನೀರ ಕೊಟ್ಟಳು | ಸುವ್ವಿ |
ಅವಳು ಹುಡುಗಿನಾದರೆ ತಮನಿಗೆ ಮಾಡಿ | ಸುವ್ವಿ |
ತವರಿನ ಋಣವ ತೀರಿಸ್ಬೇಕು ಅಂತ ಮಾತಿ | ಸುವ್ವಿ |
ಊಟ ಆದ್ಮೇಲೆ ತಾಂಬೂಲ ಕೊಟ್ಟವಳೆ | ಸುವ್ವಿ |

ಅವರ ಬಾವನ್ನಾದರೆ ಕರೆದವಳೆ | ಸುವ್ವಿ |
ನಿನ ಬಾವಮೈದ ಎಲ್ಲು ಹೆಣ್ಣೊಪ್ಪೊದಿಲ್ಲ | ಸುವ್ವಿ |
ನಿನ್ನ ಮಗಳನಾದರೆ ಕೊಡಬೇಕು | ಸುವ್ವಿ |
ಆಗಲಿ ಎಂದು ಒಪ್ಪಿಕೊಂಡ್ರು | ಸುವ್ವಿ |
ಒಪ್ಪಿ ಕೊಂಡಾಯ್ತಲೆ ಮಾತ ತಿರುಗಿಸಿಕೊಂಡ್ರು | ಸುವ್ವಿ |
ಅವನು ಹಟ್ಟಿಗೆ ಮಾತ ತೀರಿಸಿಕೊಂಡು ಬಂದು | ಸುವ್ವಿ |
ಹೆಣ್ಣು ಒಪ್ಪಿ ಅವನ ಮಾತು ಆಯಿತು ಕಾಣವ್ವ | ಸುವ್ವಿ |
ಅವರು ಆರು ಜನುವೆ ಸೇರಿಕೊಂಡ್ರು | ಸುವ್ವಿ |
(ಈ ಹೆಣ್ಣೀನ ರೂಪ ತಡಿನಾರ‍್ದೆಹೋದ್ರು | ಸುವ್ವಿ |)
ಅವರು ಏನಂತ ಮಾತಾಡುತಾರೆ | ಸುವ್ವಿ |
ನೋಡು ಎಲ್ಲು ಹೆಣ್ಣು ಕೇಳ್ದ್ರು ಒಪ್ಪಲ್ಲ | ಸುವ್ವಿ |
ಅಕ್ಕನ ಮಗಳ್ಗ ವಾಲಾಡ್ಕಂಡು | ಸುವ್ವಿ |
ಈಗ ಅರಿಸಿನ ಬಾಳೆ ಹಣ್ಣಿಗೆ ಹೋಗಬೇಕು | ಸುವ್ವಿ |

ಶಾಸ್ತ್ರವಾದರೆ ಕೇಳಬೇಕು | ಸುವ್ವಿ |
ಅವರ ತಾಯಿಯನಾದರೆ ಕರೆದವನೆ | ಸುವ್ವಿ |
ಹಣ್ಣು ಕಾಯ ತಕಂಡು ಬವ್ವ | ಸುವ್ವಿ |
ಗಂಧದ ಕಡ್ಡಿ ಕರ್ಪೂರ ತಕ್ಕಂಡು ಬವ್ವ | ಸುವ್ವಿ |
ಅವನು ಒಂದು ಹಣವನಾದರೆ ತಕ್ಕಂಡು | ಸುವ್ವಿ |

ಅವರ ತಾಯಿಯನಾದರೆ ಕರಕಂಡು | ಸುವ್ವಿ |
ಅವನು ಶಾಸ್ತ್ರಕಾದರೆ ಹೊಯ್ತಾನೆ | ಸುವ್ವಿ |
ಏಳು ದಿನಕೆ ಲಗ್ನವೆ ಬಿಳುತು | ಸುವ್ವಿ |
ಅವನು ಸಾಮಾನನಾದರೆ ತಗಿಯಕೆ | ಸುವ್ವಿ |
ಅವನು ಮೈಸೂರಿಗಾದರೂ ಹೋದಾನು | ಸುವ್ವಿ |
ಅವರು ಏಳು ದಿನಕೆ ಅಂಬರಿಸವರೆ | ಸುವ್ವಿ |
ಅವರು ಇಳ್ಳೆ ಶಾಸ್ತ್ರಕ್ಕೆ ಹೊರಟವರೆ | ಸುವ್ವಿ |
ಶಾಸ್ತ್ರಕಾದರೆ ಅಕ್ಕನ ಮನೆಗೆ ಹೊರಟವರೆ | ಸುವ್ವಿ |
ಇಲ್ಲಿ ಮೇಲಕಟ್ಟೆ ಕಟ್ಟುತ್ತಾರೆ | ಸುವ್ವಿ |
ವಾಲಗದವರು ಬಂದವರೆ | ಸುವ್ವಿ |
ಶಾಸ್ತ್ರಗಾರರು ಬಂದವರೆ | ಸುವ್ವಿ |
ಹೆಣ್ಣನಾದರೆ ಕರಕಂಡು | ಸುವ್ವಿ |
ದೇವಸ್ಥಾನಕ್ಕೆ ಬಂದವರೆ | ಸುವ್ವಿ |
ಶಾಸ್ತ್ರ ಮುಗಿಸಿ ಬಂದವರೆ | ಸುವ್ವಿ |

ಲಗ್ನವಂತು ಆಗೋಯ್ತು | ಸುವ್ವಿ           ಮಾ.ವ |
ಊಟಕಾದರು ಬಡಿಸುತಾರೆ | ಸು
ಅವರು ಹೆಣ್ಣು ಗಂಡು ಕರಕೊಂ
ಇವರು ಮೂರು ದಿವಸಕೆ ಹಣ
ಕರೆಯಕಾದ್ರು ಹೋದಾರು |
ಕರೆಕೊಂಡಾದ್ರು ಮನೆಗೆ ……
ಕರಕೊಂಡು ಬಂದ ಮಾರನೆ……..

ಅವರ ಹಿರೇ ಅಣ್ಣ ಏನಂದ | ಸುವ್ವಿ |
ನಮ್ಮ ಸರೀಕರೆಲ್ಲ ಹೆಜ್ಜೇನು ಬೇಟೆಗೆ | ಸುವ್ವಿ |

ಎಲ್ಲ ಹೊಯ್ತರೆ ನಡಿ ನಮ್ಮ | ಸುವ್ವಿ |
ನಾವು ಏಳು ಜನುವೆ ಹೋಗಬೇಕು | ಸುವ್ವಿ |
ನಮ್ಮ ಕುಲದವರು ಬರುತಾರೆ | ಸುವ್ವಿ |
ಹಂಗಂದ ಮಾತಿಗೆ ತಮ್ಮ ಏನಂದ | ಸುವ್ವಿ |
ಅರಿಸಿನದ ಮೈಯ ತೊಳೆದಿಲ್ಲ | ಸುವ್ವಿ |
ಅಣ್ಣ ನಾ ಹೇಗೆ ಬರಲಣ್ಣ | ಸುವ್ವಿ |
ಇವರು ಆರು ಜನುಮೆ ಮಾತಾಡಿಕೊಂಡು | ಸುವ್ವಿ |
ಇವನ ಹೆಂಡತಿನಾದ್ರು ಅಪಹರಿಸಬೇಕು | ಸುವ್ವಿ |
ಇವನು ಮಾತ್ರ ಕರಕೊಂಡು ಹೋಗಬೇಕು | ಸುವ್ವಿ |
ಇವನು ಕಾಣದಂಗಾಗ ಮಾತಾಡಿಕೊಂಡ್ರು | ಸುವ್ವಿ |
ಹಂಗಂದ ಮಾತಿಗೆ ಏನಂದ | ಸುವ್ವಿ |
ಅಣ್ಣ ನಿಮ್ಮೊಂದಿಗೆ ನಾನುಟ್ಟಲ್ಲವಣ್ಣ | ಸುವ್ವಿ |
ನನ ಕರಕೊಂಡು ಹೋಗೋದು ಧರ್ಮವಲ್ಲಣ್ಣ | ಸುವ್ವಿ |
ನೀನು ಏನು ಆಟವಾಡಿದ್ರು ಬರಬೇಕು ತಮ್ಮ | ಸುವ್ವಿ |
ಅವನು ಅವ್ವನ ತಕೆ ಹೋಗುತಾನೆ | ಸುವ್ವಿ |

ಅವ್ವ ನಾನೇನಂತ ಇದ್ನ ಹೇಳಲವ್ವ | ಸುವ್ವಿ |
ನನ್ನ ಹೆಜ್ಜೇನು ಬೇಟೆಗೆ ಕರಿತಾರೆ | ಸುವ್ವಿ |
ಅಂಗಂದ ಮಾತಿಗೆ ಅವನ ತಾಯಿಯು | ಸುವ್ವಿ |
ಆರು ಜನ ಅಣ್ಣದೀರುಗೂ ಹೆಜ್ಜೇನು ಬೇಟೆ ಯಾಕಪ್ಪ | ಸುವ್ವಿ |
ನಿನ್ನ ತಮ್ಮನ ನೀವು ಯಾಕಪ್ಪ ಕರಿದೀರಿ | ಸುವ್ವಿ |
ಅವನು ಅರಿಶಿನದ ಮೈಯ ತೊಳೆದಿಲ್ಲ | ಸುವ್ವಿ |
ನಾವು ಅವನ ಬುಟ್ಟು ಮಾತ್ರ ಹೋಗೋದಿಲ್ಲವ್ವ | ಸುವ್ವಿ |

ಹಂಗಂದ ಮಾತಿಗೆ ನಿನ್ನ ಸೊಸೆಯನಾದ್ರು ಕರಗೊಂಡು ಬವ್ವ | ಸುವ್ವಿ |
ತಮ್ಮನಾದ್ರೂ ಹೇಳಿದ ಮಾತಿಗೆ ತಾಯಿಯಾದ್ರು ಕರೆದು ತಂದಳು | ಸುವ್ವಿ |

ಅವಳಕಂಡು ಹಿಂಗಂತ ಅಂದಾನು | ಸುವ್ವಿ |
ನಿನ್ನ ಗಂಡ ಸತ್ತೋದ ಅಂತ ತಿಳ್ಕೊ ಹೆಣ್ಣೆ | ಸುವ್ವಿ |
ಅರಿಶಿನ ಕುಂಕುಮ ಕೆಡಿಸೆಣ್ಣೆ | ಸುವ್ವಿ |
ಬಳೆಯನಾದ್ರು ಒಡೆದುಬುಡು ಹೆಣ್ಣೆ | ಸುವ್ವಿ |
ನಿನ್ನ ಹೂವನಾದ್ರು ತೆಗೆದು ಹಾಕುಬುಡು | ಸುವ್ವಿ |
ಅವಳು ಹಂಗಂದ ಮಾತ ಕೇಳಕಂಡು | ಸುವ್ವಿ |
ಅವಳು ಬೇಕಂತ ಶೋಕ ಪಡುತಾಳೆ | ಸುವ್ವಿ |
ನೀನು ಶೋಕನಾದರೆ ಮಾಡಬೇಡೆಣ್ಣೆ | ಸುವ್ವಿ |
ನೀನು ಮನೆಯ ಕೋಣೆ ತಾರಿಸೆಣ್ಣೆ | ಸುವ್ವಿ |
ನೀನು ನೀರನಾದರೆ ಕಾಯಿಸೆಣ್ಣೆ | ಸುವ್ವಿ |
ನೀನು ಮೂರು ಬುತ್ತಿ ಕಟ್ಟೆಣ್ಣೆ | ಸುವ್ವಿ |
ನನಗೆ ನೀರನಾದರೆ ಉಯ್ಯಿಬಾರೆ | ಸುವ್ವಿ |
ನೀನು ಅರಿಶಿನ ಕುಂಕುಮ ತಗೆಂಡು ಬಾರೆ | ಸುವ್ವಿ |
ಅವನು ನಡಂಗಳದಲ್ಲಿ ನಿಂತವನೆ | ಸುವ್ವಿ |
ಅವಳು ಮಣೆನಾದರೆ ಹಾಕವಳೆ | ಸುವ್ವಿ |
ಅವಳು ಅರಿಶಿನ ಕುಂಕುಮ ಇಕ್ಕುತಾಳೆ | ಸುವ್ವಿ |
ಅವಳು ಪಾದಪೂಜೆ ಮಾಡುತಾಳೆ | ಸುವ್ವಿ |
ಇಸತಿ ನನ್ನ ಆಸೆ ನಿನಗೆ ಬೇಡೆಣ್ಣೆ | ಸುವ್ವಿ |
ನಿನ್ನಾಣೆ ನನಗೆ ಬೇಡಕಾನೆಣ್ಣೆ | ಸುವ್ವಿ |
ಅವರ ತಾಯಿಗಾದರು ಹೇಳುತಾನೆ | ಸುವ್ವಿ |
ಅವ್ವ ನನ್ನಾಸೆ ನಿನಗೆ ಬೇಡಕಾನವ್ವ | ಸುವ್ವಿ |
ಅವರು ಆಮಾತ ಕೇಳೆಲ್ಲ ಸಂಕಟಪಡುತಾರೆ | ಸುವ್ವಿ |
ಅವರು ಬುತ್ತಿನಾದರು ಹೆಗಲಿಗಾಕಿ | ಸುವ್ವಿ |
ಅವರು ಏಳು ಜನುವೆ ಕಾಡಿಗಾದರೂ | ಸುವ್ವಿ |
ಅವರು ಕಾಡಿಗಾದರು ಹೊರಟು ಹೋದರು | ಸುವ್ವಿ |
ಅವರು ಏಳು ಜನುವೆ ಒಂತಾವು ಕೂತುಕೊಂಡು | ಸುವ್ವಿ |
ಹುಲಿ ಬರುವ ಜಾಗಕವನ | ಸುವ್ವಿ |
ಅವರ ತಮ್ಮನಾದ್ರು ಒಂತಾವು ಕೂಂಡ್ರಿಸಿ | ಸುವ್ವಿ |

ಇವರು ಆರುಜನ ಒಂತಾವುನಾದರೆ | ಸುವ್ವಿ |
ಅಲ್ಲಿ ಅವನು ಏನಂತಾನೆ | ಸುವ್ವಿ |
ಅವರು ಆರು ಜನುವೆ ಕಾಡಿಗಾದರೂ | ಸುವ್ವಿ |
ಅವರು ಕಾಡಿಗಾದರೂ ಹೊರಟು ಹೋದರು | ಸುವ್ವಿ |
ಅವರು ಏಳು ಜನುವೆ ಒಂತಾವು ಕೂತುಕೊಂಡು | ಸುವ್ವಿ |
ಹುಲಿ ಬರುವ ಜಾಗಕವನ | ಸುವ್ವಿ |
ಅವರ ತಮ್ಮನಾದ್ರು ಒಂತಾವು ಕೂಂಡ್ರಿಸಿ | ಸುವ್ವಿ |
ಇವರು ಆರುಜನ ಒಂತಾವುನಾದೆ | ಸುವ್ವಿ |
ಅಲ್ಲಿ ಅವನು ಏನಂತಾನೆ | ಸುವ್ವಿ |
ಅವರು ಆರು ಜನುವೆ ಒಂದುತಾವು | ಸುವ್ವಿ |
ನಾನು ಒಬ್ಬಾನೆ ಒಂದು ತಾವು | ಸುವ್ವಿ |
ಹುಲಿಯನಾದರು ಬಂದದೆ | ಸುವ್ವಿ |
ಅವನು ಏನಂತ ಮಾತ ಹುಲಿಗಂದ | ಸುವ್ವಿ |
ನನಗೆ ಅಣ್ಣಂದಿರು ಅನ್ಯಾಯ ಮಾಡಿದರು | ಸುವ್ವಿ |
ನನ್ನ ನೀನು ತಿನ್ನಬೇಡ | ಸುವ್ವಿ |
ಆಗ ಬಂದುಲಿಯದು ಬಯಲಾಗಿ ಹೋಯ್ತು | ಸುವ್ವಿ |
ಆಮೇಗೆ ಅಣ್ಣಂದಿರು ಬಂದರು | ಸುವ್ವಿ |
ಇವನಿಗೆ ಏನ ಮಾಡಿದರೂ ಸಾಯಲಿಲ್ಲ | ಸುವ್ವಿ |
ಮರಕೆನಾದರೆ ಹತ್ತಿಸಬೇಕು | ಸುವ್ವಿ |
ಆಗ ಈ ಮರಕೆ ನೀನು ಹತ್ತು ಅಂತ | ಸುವ್ವಿ |
ದೊಡ್ಡ ಮರಕೆ ಹತ್ತಿಸಿಬಿಟ್ರು | ಸುವ್ವಿ |
ಮರಕ್ಕೆನಾದರೆ ಹತ್ತಿ ಬುಟ್ಟು | ಸುವ್ವಿ |
ಆಚಾರಿ ಈಚಾರಿ ಇದ್ದ ಮೊಟ್ಟೆಗಳ | ಸುವ್ವಿ |
ಎಲ್ಲನು ಕತ್ತರಿಸಿ ಹಾಕಿ | ಸುವ್ವಿ |
ಕೊನೆಯ ಮೊಟ್ಟಿಲಿ ಕೂತವನೆ ತಮ್ಮ | ಸುವ್ವಿ |

ಇಸತಿ ನೀನು ಬಿದ್ದಿರು ತಮ್ಮ | ಸುವ್ವಿ |
ನಿನ್ನ ಹೆಂಡ್ತಿ ಇವತಿಗೆ ಮುಂಡೆಕಾನೊ | ಸುವ್ವಿ |
ನಮ್ಮೂರು ಜನಕೆ ನಿನ್ನ ಹೆಂಡ್ತಿ | ಸುವ್ವಿ |
ಅಣ್ಣ ನಿಮ್ಮೊಂದಿಗೆ ನಾನು ಹುಟ್ಟಲ್ಲವಣ್ಣ | ಸುವ್ವಿ |
ನನ್ನನಾದರು ಕರಕಳ್ರಣ್ಣ | ಸುವ್ವಿ |
ಅವನು ಮರದ ಮೇಲೆ ಶೋಕಪಡುತಾನೆ | ಸುವ್ವಿ |

ಅಂಗಂದ್ರೂ ಅವರು ಕರಕಳಲಿಲ್ಲ | ಸುವ್ವಿ |
ಅವರು ಊರಿಗಾದರೆ ಬಂದವರೆ | ಸುವ್ವಿ |
ಅವರ ತಾಯಿ ಎಲ್ಲಪ್ಪ ಕಿರಿಮಗನು | ಸುವ್ವಿ |
ಅಂಥ ತಾಯಿ ಕೇಳಿದ ಮಾತಿಗೆ ಏನಂದ | ಸುವ್ವಿ |
ಅವನು ನೆನ್ನೆಯನಾದರೆ ಬಂದನಲ್ಲವ್ವ | ಸುವ್ವಿ |
ಇತ್ತ ಮರದ ಮೇಲಿದ್ದವನಿಗೆ ಹೊಟ್ಟೆಗೆ ಅನ್ನಿಲ್ಲ | ಸುವ್ವಿ |
ಕುಡಿಕಾದರೆ ನೀರಿಲ್ಲ | ಸುವ್ವಿ |
ಅಲ್ಲಿಗಲ್ಲಿಗೂ ಹದಿನೈದು ದಿನಗಳು ಆಗೋದೊ | ಸುವ್ವಿ |
ಹಲ್ಲಿ ಹಂಗೆ ಅತ್ತವನೆ | ಸುವ್ವಿ |
ಅವರ ತಾಯಿಯ ಸಪುನಕೆ ಬಿದ್ದವನೆ | ಸುವ್ವಿ |
ಆ ಸಪುನದಲ್ಲಿ ಏನಂತ ಹೇಳುತಾನೆ | ಸುವ್ವಿ |
ನನ್ನ ಹೆಂಡ್ತಿನಾದರು ಕರಕಂಡು | ಸುವ್ವಿ |
ಒಂದು ಮೊರದಲಿ ರತ್ನ ತುಂಬಿ | ಸುವ್ವಿ |
ಒಂದು ಮೊರದಲಿ ಮುತ್ತ ತುಂಬಿ | ಸುವ್ವಿ |
ಹಣ್ಣಕಾಯ ತಕ್ಕೊಂಡು | ಸುವ್ವಿ |
ಅರಿಸಿನ ಕುಂಕುಮ ತಕ್ಕೊಂಡು | ಸುವ್ವಿ |
ನನ್ನ ಹೆಂಡ್ತಿ ಸಿಸ್ತು ಸ್ರುಂಗಾರ ಮಾಡಿಕೊಂಡು | ಸುವ್ವಿ |
ಮೂಡಲಾಗಿ ಬರಲೆಂದು | ಸುವ್ವಿ |
ಅಂಥ ಸಪುನವ ಕಂಡಳು ತಾಯಿ | ಸುವ್ವಿ |
ಆ ಮಾತನಾದರೆ ಕೇಳಿಕೊಂಡು | ಸುವ್ವಿ |
ಸೊಸೆನಾದರು ಕರಕೊಂಡು | ಸುವ್ವಿ |
ಅವನು ಹೇಳಿದ ಸಾಮಾನೆಲ್ಲ ತಕ್ಕಂಡು | ಸುವ್ವಿ |
ಆ ಮರದ ತಕೆ ಹೊರಟಾರು | ಸುವ್ವಿ |
ಆ ಮರದ ಮೇಲಾದ್ರೆ ಕೂತುಕಂಡವನೆ | ಸುವ್ವಿ |
ಇವರು ಅತ್ತೆ ಸೊಸೆ ಮರದಡಿಯಲ್ಲಿ | ಸುವ್ವಿ |
ಅವರು ಮೇಲೆ ನೋಡಿ ಸಾಕಾಗವರೆ | ಸುವ್ವಿ |
ಅವನ ಹೆಂಡ್ತಿ ಸೋಕ ಮಾಡ್ತಾವ್ಳೆ | ಸುವ್ವಿ |
ಅವನು ಮೇಲೆ ಕೂತ್ಕೊಂಡು ಶೋಕ ಮಾಡುತಾನೆ | ಸುವ್ವಿ |
ಅವನು ಏನಂತ ಶೋಕ ಮಾಡ್ತಾನೆ | ಸುವ್ವಿ |
ಮರದ ಬುಡದಲ್ಲಿ ಎಲ್ಲನುವೆ | ಸುವ್ವಿ |
ಮಡಗಿ ಪೂಜೆ ಮಾಡ್ರವ್ವ | ಸುವ್ವಿ |
ನಿನ್ನ ಸೊಸೆ ಕೈಯಲ್ಲಿ ಮಾಡಿಸವ್ವ | ಸುವ್ವಿ |
ಮಾಡಯ್ತಲೆ ಅವನು ಏನ್ ಹೇಳ್ತಾನೆ | ಸುವ್ವಿ |
ನೀನು ತಿರುಗಿಕೊಂಡು ಮಾತ್ರ ನೋಡಬೇಡವ್ವ | ಸುವ್ವಿ |
ನಾನು ನಿಮ್ಮೊಂದಿಗೆ ಇಳಿದು ಬರ‍್ತೀನಿ ಅವ್ವ | ಸುವ್ವಿ |
ನೀವು ನೋಡದೆ ಮಾತ್ರ ಹೋಗಿರವ್ವ | ಸುವ್ವಿ |
ಅದರಂತವರು ತಿರುಗಿ ನೋಡದೆ ಬರುತಾರೆ | ಸುವ್ವಿ |
ಅವನು ಅರ್ಧಕ್ಕೆ ಆದ್ರೆ ಇಳಿದವನೆ | ಸುವ್ವಿ |

ತಾಯಿ ಹೆತ್ತ ಕರುಳಿಗೆ ತಿರುಗಿ ನೋಡಿಬಿಡುತಾಳೆ | ಸುವ್ವಿ |
ಇವಳು ತಿರುಗಿ ನೋಡುತಳೆ ಗಗನಕೆ | ಸುವ್ವಿ |
ಮರ ಹೋಗಿ ಬುಡುತು | ಸುವ್ವಿ |
ಗಗನಕೆ ಮರಹೊಯ್ತಲೆ | ಸುವ್ವಿ |
ನೀನು ಯಾವತಿದ್ರುವೆ ಕೆಟ್ಟಿಕನ ಹೋಗು | ಸುವ್ವಿ |
ಹಿಂದಕ್ಕೆ ಅವನು ಕರಕೊಂಡು | ಸುವ್ವಿ |
ನಾನು ಇಸತಿ ಆಳು ಕೂಗಿನ ಹಕ್ಕಿ ಆಗುತೀನಿ | ಸುವ್ವಿ |
ನಾನು ಸಂಜೆಗೆ ನಿಮ್ಮಯ ಮನೆ ಮೇಲ್ಕೆ ಬರುತೀನಿ | ಸುವ್ವಿ |
ನಾನು ಆರು ಜನ ಅಣ್ಣದಿರನು ಕೂಗಿದಾಗ | ಸುವ್ವಿ |
ಆರು ಜನುವೆ ಮಡಿದು ಹೋಗುತಾರೆ | ಸುವ್ವಿ |
ಆರು ಜನ ಅತ್ತಿಗೆರುವೆ ಮಡಿದು ಹೊಗ್ತಾರೆ | ಸುವ್ವಿ |
ಮನೆ ಮಠವೆ ಮಡಿದು ಹೊಯ್ತಾದೆ | ಸುವ್ವಿ |
ನನ್ನ ಹೆಂಡ್ತಿ ನೀನು ಕರಕೊಂಡು | ಸುವ್ವಿ |
ಅಕ್ಕನ ಮನೆಗೆ ಸೇರಿಕವ್ವ | ಸುವ್ವಿ |
ಹಿಂಗೆಂಗೋ ಬದುಕು ಮುಗಿದೋಯ್ತು | ಸುವ್ವಿ |*      ಆಳು ಕೂಗಿನ ಹಕ್ಕಿ; ಜಯಲಕ್ಷ್ಮಿ ಸೀತಾಪುರ, ನಮ್ಮ ಸುತ್ತಿನ ಜನಪದ ಕಥನಗೀತೆಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ೧೯೯೪, ಪು.ಸಂ. ೫೫-೬೧.