ಸತ್ಯವಂತಿ ಎಲ್ಲೌನ ಹೆಸರು ಬಿತ್ತ ನಾಡಾಗ
ಏನಾನಂದಾರತಿ ಆಗತಾವ ಗುಡದಾಗ       ಪಲ್ಲ

ತಾಯಿರುವ ಠಿಕಾಣ ಹೇಳತೇನ ನಾ ನಿನಗ
ಗವಿಯಾಗ ನೆನದಾಳೊ ಆತ್ಮ ತೋರಿಸ್ಯಾಳೊ ಹೆಚ್ಚಿಂದಾ
ಸಭೆದಾಗ ನೆನದಾಳೊ ಮಯಿಮೆ ತೋರಿಸ್ಯಾಳೊ ಹೆಚ್ಚಿಂದಾ
ವಾಲಿ ಬುಗುಡಿ ಕಟಾಣಿ ಜೋಡುನತ್ತ ಮೂಗಿನ್ಯಾಗಾ    ೧

ಹದಿನೆಂಟ ಸರದ ಪುತಳಿ ಸರ ಕೊರಳಾಗ
ವರಿಗ್ಹಚ್ಚಿದ ಪಟ್ಟಿ ವಜ್ರಡಾಬ ನಡದಾಗ
ಗುಡ್ಡೆಲ್ಲ ಮಾತಾಡತೈತಿ ನಗರಖಾನಿ ನುಡದಾಂಗ
ಏನಾನಂದಾರತಿ ಆಗತಾವ ಗುಡದಾಗ       ೨

ತಾಯಿ ಕುಂಡ್ರು ವಿಷಯ ಏನ ಹೇಳಲಿ ಅಕ್ಕರತಿ
ಸಾಕ್ಷಾತ್ ಪ್ರಾಣಕೊಟ್ಟಂಗ ಪಾಶಧರ ಮೂರ್ತಿ
ಸುತ್ತೆಲ್ಲ ಪರವುತ ನಡುವೆ ಗುಡಿಯು ಗಚ್ಚಿಂದ
ಮೇಲೆ ಭಂಗಾರ ಕಳಸ ಬೆಳಕ ಕೋಲಮಿಂಚಿಂದ      ೩

ನಾಕುಮೂಲಿಗಿ ದೀಪಮಾಲಿ ಕಂಬ ಶೆಡಗರ ಸಾಮಾನಾ
ಸುತವಾರಿ ಕಡಸ್ಯಾಳ ಪರಸಿಬಂದ ಕಮಾನಾ
ದಿಟ್ಟ ಸಿದ್ಧರನ್ನೆಲ್ಲಾ ಹೊಗಿಸಿದಾಳ ಗವೇದಾಗ
ಏನಾನಂದಾರತಿ ಆಗತಾವ ಗುಡದಾಗ       ೪

ತಾಯಿ ರಂಡಿಹುಣಿವಿಗಿ ಬಳಿ ಒಡೀತಾರೊ ನಡಕ
ಆಕಿ ಮಗ ಪರಸರಾಮ ವೈರಿ ಆದ್ನೊ ಖಡಕ
ತಾಯಿ ಓಡಿ ಬರುವಾಗ ಬಡದೀತ ಬಾಗಲ ಫಡಕ
ತಾಯಿ ಬಕ್ಕ ನೆತ್ತಿಗೆ ಓದು ಹಚ್ಯಾನ ಕಿಚ್ಚಕ    ೫

ಅಲ್ಲಿ ಹಲಗಿ ಬಜಂತ್ರಿ ಕರಡಿ ಡೊಳ್ಳ ಸಾಮಾನಾ
ತಾಯಿ ಮುಂದ ಹಾಡತಾರ ಗಂಡ ಜೋಗತೇರರ್ಮಯಾಳಾ
ದೇವಿ ಮುಂದ ಹಾಡತಾರ ಗಂಡ ಜೋಗತೇರಮ್ಯಾಳಾ
ಅಂಕಲಗಿ ಮಾಮೈ ಮಾಡ್ಯಾನ ಜೋಡಿ ಈ ಮ್ಯಾಳಾ ೬