“ನಾವು ಮೊದಲು ಕನ್ನಡಿಗರು. ಅನಂತರ ಭಾರತೀಯರು ಎಂದರೆ ಅದು ಸ್ವಾಭಾವಿಕ, ಕಾರ್ಯ ಸಾಧ್ಯ, ಕ್ಷೇಮಕರ, ಅವಶ್ಯ ಕರ್ತವ್ಯ”- ಇದು ಕನ್ನಡದ ಉಳಿವು ಅಳಿವಿನ ಹೋರಾಟದ ಇಂದಿನ ದಿನಗಳಲ್ಲಿ ಯಾರೋ ಕನ್ನಡ ಚಳುವಳಿಗಾರರು ಆಡಿದ ಮಾತಲ್ಲ. ಈ ಹೊತ್ತಿಗೆ ಅರ್ಧಶತಮಾನಕ್ಕೂ ಹಿಂದೆ, ಪ್ರೊ.ಎ.ಆರ್. ಕೃಷ್ಣ ಶಾಸ್ತ್ರಿಗಳು ಹೇಳಿದ ಮಾತು. ಅವರು ಆ ಮಾತನ್ನು ಘೋಷಿಸಿದ್ದು ೧೯೪೧ ರಂದು ಹೈದರಾಬಾದಿನಲ್ಲಿ ನಡೆದ ೨೬ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ. ಈ ಮಾತು ಇಂದಿಗೂ ಎಷ್ಟು ಪ್ರಸ್ತುತವಾದದ್ದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಆದರೆ, ಈ ಮಾತನ್ನು ಇಂದು ಯಾರಾದರೂ ಹೇಳಿದರೆ, ರಾಷ್ಟ್ರೀಯ ಭಾವೈಕ್ಯತೆಯ ಆತಂಕದ ಈ ದಿನಗಳಲ್ಲಿ ಅದು ಶುದ್ಧ ಅರಾಷ್ಟ್ರೀಯವೆಂಬಂತೆ ಕೆಲವರ ಕಿವಿಗೆ ಕೇಳಬಹುದು. ಆದರೆ ತಾನು-ತನ್ನದು ಎಂಬ ಮೊದಲ ನೆಲೆಯಿಂದ, ನನ್ನ ದೇಶ, ನನ್ನ ರಾಷ್ಟ್ರ, ನನ್ನ ಜಗತ್ತು ಎನ್ನುವುದರ ಕಡೆ ಮನುಷ್ಯ ಬೆಳೆಯುವುದು ತೀರಾ ಸಹಜವಾದ ನಿಲುವು. ಈ ಸ್ವಾಭಾವಿಕವಾದ, ಕಾರ್ಯಸಾಧ್ಯವಾದ, ಕ್ಷೇಮಕರವಾದ ಹಾಗೂ ಅವಶ್ಯ ಕರ್ತವ್ಯವಾದ ನಿಲುವಿನಲ್ಲಿ ನಾವು ಮೊದಲು ಗಟ್ಟಿಯಾಗಿ ನಿಂತರೆ ನಾವು ಮೊದಲು ನಿಜವಾದ ಕನ್ನಡಿಗರಾಗುತ್ತೇವೆ. ಅನಂತರ ಭಾರತೀಯರೂ ಆಗುತ್ತೇವೆ.

ಇದೇ ಸಮ್ಮೇಳನದ ವೇದಿಕೆಯಿಂದ, ಕೃಷ್ಣಶಾಸ್ತ್ರಿಗಳು ಇಂಡಿಯಾದಂಥ ಬಹುಭಾಷಿಕವಾದ ಈ ರಾಷ್ಟ್ರದಲ್ಲಿ ಭಾಷೆಗಳ ಶ್ರೇಣೀಕರಣ ವ್ಯವಸ್ಥೆಯನ್ನು ಕುರಿತು:  “ಇವುಗಳಲ್ಲಿ ಮಾತೃಭಾಷೆಗೆ ಮೊದಲ ಸ್ಥಾನ. ದೇಶ ಭಾಷೆ ಎರಡನೆಯದು. ಇಂಗ್ಲೀಷು ಮೂರನೆಯದು. ಎಲ್ಲಿ ಮಾತೃಭಾಷೆಯೆ ದೇಶಭಾಷೆಯಾಗುತ್ತದೋ, ಅಲ್ಲಿ ದಾರಿ ಸುಗಮವಾಯಿತು”- ಎಂದು ಹೇಳುತ್ತಾರೆ. ಪ್ರೊ.ಶಾಸ್ತ್ರಿಗಳ ಈ ಅಭಿಪ್ರಾಯವೂ ತುಂಬ ಸ್ವಾಗತಾರ್ಹವಾದದ್ದು. ಕನ್ನಡದ ಸಂದರ್ಭದಲ್ಲಿ ಕೃಷ್ಣಶಾಸ್ತ್ರಿಗಳು ಸಂಸ್ಕೃತ ಸಾಹಿತ್ಯವನ್ನು ಕುರಿತು, ಅಧಿಕೃತವಾಗಿ ಕೆಲಸ ಮಾಡಿದ ಮೊದಲಿಗರು. ಕನ್ನಡದಲ್ಲಿ ಹೇಗೋ ಸಂಸ್ಕೃತದಲ್ಲಿಯೂ ಅದ್ವಿತೀಯವಾದ ಪಾಂಡಿತ್ಯವಿತ್ತು. ಆದರೂ ಅವರ ಸಂಸ್ಕೃತ ಪ್ರೇಮ, ಅವರು ನಿರೂಪಿಸುವ ಭಾಷಾನೀತಿಯ ಒಳಗೆ ಆ ಭಾಷೆಯನ್ನೂ ಸೇರಿಸುವ ಅಂಧಾಭಿಮಾನವಾಗಲಿಲ್ಲ. ಅವರ ಪ್ರಕಾರ ಮಾತೃಭಾಷೆ/ದೇಶ ಭಾಷೆ ಹಾಗೂ ಇಂಗ್ಲೀಷಿನ ನಂತರದ ಸ್ಥಾನ ಸಂಸ್ಕೃತಕ್ಕೆ. ಜತೆಗೆ “ಸಂಸ್ಕೃತದ ಸಹಾಯವಿಲ್ಲದಿದ್ದರೆ ನಮಗೆ ಸಂಸ್ಕೃತಿಯೇ ಇರುತ್ತಿರಲಿಲ್ಲ ಎಂಬುದನ್ನು ನಾನು ನಂಬಲಾರೆ….ಸಂಸ್ಕೃತದಲ್ಲಿ ಸಾರವತ್ತಾದುದನ್ನು ಕೃತಜ್ಞತೆಯಿಂದ ತೆಗೆದುಕೊಳ್ಳೋಣ, ಕನ್ನಡಿಸಿಕೊಳ್ಳೋಣ-ಬರಿಯ ಅದರ ‘ಗಾಂಭೀರ್ಯ’ಕ್ಕೆ ಮರುಳಾಗದಿರೋಣ”- ಎನ್ನುವ ಅವರ ನಿಲುವುಗಳು ಎಂತಹ ಎಚ್ಚರವನ್ನೂ, ಸಮತೂಕವನ್ನೂ ಪ್ರಕಟಿಸುತ್ತವೆ ಎಂಬುದನ್ನು ನಾವು ಮತ್ತೆ ಗಮನಿಸಬೇಕಾಗಿದೆ.

ಎ.ಆರ್.ಕೃಷ್ಣಶಾಸ್ತ್ರಿಗಳು ನವೋದಯದ ಮೊದಲ ದಿನಗಳಲ್ಲಿ ತಮ್ಮ ಅದಮ್ಯವಾದ ಕನ್ನಡ ಪ್ರೇಮ ಹಾಗೂ ತತ್ಸಂಬಂಧವಾದ ಭಾಷಾ ನೀತಿಗಳಿಂದ, ಪ್ರಬುದ್ಧ ಕರ್ನಾಟಕದಂಥ ಪತ್ರಿಕೆಯನ್ನು ಪ್ರಾರಂಭಿಸಿ, ಆ ಮೂಲಕ ಅಂದಿನ ಸೃಜನ ಹಾಗೂ ಸೃಜನೇತರ ಪ್ರತಿಭೆಗಳನ್ನು ಬೆಳಕಿಗೆ ತಂದು ಕನ್ನಡವನ್ನು ಕಟ್ಟಿ ಬೆಳೆಯಿಸಿದ ರೀತಿ ಅನನ್ಯವಾದದ್ದು. ಅಷ್ಟೇ ಅಲ್ಲ, ಕನ್ನಡ ನವೋದಯ ಸಾಹಿತ್ಯ ಸಂದರ್ಭದಲ್ಲಿ ಕನ್ನಡದ ವಿದ್ವತ್ತು ಹಾಗೂ ಸಾಹಿತ್ಯ ವಿಮರ್ಶೆಗೆ ಭಾರತೀಯ ಮತ್ತು ಕನ್ನಡ ಪರಂಪರೆಗಳ ಭದ್ರವಾದ ಬುನಾದಿಯನ್ನು ನಿರ್ಮಿಸಿದವರು ಕೃಷ್ಣಶಾಸ್ತ್ರಿಗಳು. ಸಂಸ್ಕೃತ, ಬಂಗಾಳಿ ಮತ್ತು ಕನ್ನಡ ಈ ಮೂರು ಸಾಹಿತ್ಯಗಳ ಪರಿಚಯ ಮತ್ತು ಪಾಂಡಿತ್ಯಗಳು ಕೃಷ್ಣಶಾಸ್ತ್ರಿಗಳ ಸಾಹಿತ್ಯ ನಿರ್ಮಿತಿಯ ಮೂಲ ದ್ರವ್ಯಗಳಾಗಿವೆ.

ಕನ್ನಡಿಗರಾದ ನಾವು ಬೆಳೆಯಬೇಕಾದರೆ, ಬಹುಭಾಷಾ ಸಾಹಿತ್ಯದ ಪ್ರಯೋಜನ ಅನುವಾದಗಳ ಹಾಗೂ ವಿದ್ವತ್‌ಪೂರ್ಣ ಪರಿಚಯಗಳ ಮೂಲಕ ನಮಗೆ ದೊರಕಬೇಕೆಂಬುದು ಶಾಸ್ತ್ರಿಗಳ ನಿಲುವಾಗಿತ್ತು. ಒಂದು ಭಾಷೆಯ ಸಂಪತ್ತನ್ನು ಸ್ವತಂತ್ರಕೃತಿಗಳು ಮಾತ್ರವಲ್ಲ ಅನುವಾದ ಕೃತಿಗಳೂ ಹೆಚ್ಚಿಸುತ್ತವೆ ಎನ್ನುವುದು ಅವರ ಅಭಿಪ್ರಾಯ. ಅವರು ಹೇಳುತ್ತಾರೆ: “ಕನ್ನಡ ಭಾಷೆಯಲ್ಲಿ ಬರೆದಿರತಕ್ಕವು ಕನ್ನಡ ಗ್ರಂಥಗಳೆ ಹೊರತು, ಅನ್ಯಭಾಷೆಯವುಗಳಾಗಲಾರವು”. ಅನ್ಯ ಭಾಷೆಯಿಂದ ನಮ್ಮ ಭಾಷೆಗೆ ಬಂದ ಗ್ರಂಥಗಳು “ಪರರ ಮನೆಯ ಹೆಣ್ಣು ಮಕ್ಕಳನ್ನು ತಂದು ನಮ್ಮ ಮಕ್ಕಳಿಗೆ ಮದುವೆ ಮಾಡಿಕೊಂಡ ಹಾಗೆ.”

ಕೃಷ್ಣಶಾಸ್ತ್ರಿಗಳಿಂದ ಹೀಗೆ ಕನ್ನಡಕ್ಕೆ ಬಂದ ಮುಖ್ಯ ಕೃತಿಗಳೆಂದರೆ ಅವರ ‘ಸಂಸ್ಕೃತ ನಾಟಕ’, ‘ಭಾಸಕವಿ’ ಮತ್ತು ಬಂಕಿಂ, ಟ್ಯಾಗೂರ್ ಇಂಥವರ ಬಂಗಾಳಿ ಕೃತಿಗಳು. ಅವರ ‘ಸಂಸ್ಕೃತ ನಾಟಕ’ ಎಂಬ ಕೃತಿ ಅತ್ಯಂತ ಅಧಿಕೃತವಾಗಿ ಸಂಸ್ಕೃತನಾಟಕ ಪರಂಪರೆಯನ್ನು ಪರಿಚಯಮಾಡಿ ಕೊಡುತ್ತದೆ. ಈ ಬಗೆಯ ಕೃತಿ ಇತರ ಭಾರತೀಯ ಭಾಷೆಗಳಲ್ಲಿಯೇ ಇಲ್ಲ ಎಂದು ವಿಮರ್ಶಕರು ಹೇಳುತ್ತಾರೆ. ಅವರ ‘ಭಾಸ ಕವಿ’ ಇಡಿಯಾಗಿ ಸಂಸ್ಕೃತದ ಮಹತ್ವದ ನಾಟಕಕಾರನನ್ನು ಕುರಿತ ಒಂದು ಸಮಗ್ರ ವಿವೇಚನೆಯಾಗಿದೆ. ಅವರ ‘ವಚನ ಭಾರತ’ ಮತ್ತು ‘ಕಥಾಸರಿತ್ಸಾಗರ’ಗಳು ಕನ್ನಡದಲ್ಲಿ ಅಪೂರ್ವವಾದ ಕೃತಿಗಳು. ಜತೆಗೆ ಸಂಸ್ಕೃತ ಕಾವ್ಯವಿಮಾಂಸೆಗೆ ಸಂಬಂಧಪಟ್ಟ ಸಂಗತಿಗಳು, ‘ಕನ್ನಡ ಕೈಪಿಡಿ’ಯ ಮೂಲಕ ಸಾರವತ್ತಾಗಿ ಬಂದದ್ದೂ ಅವರಿಂದಲೇ.

ಕನ್ನಡ ನವೋದಯದ ಹಿಂದೆ ಇಂಗ್ಲಿಷ್ ಸಾಹಿತ್ಯದ ಪ್ರೇರಣೆಯೊಂದು ಇದ್ದರೂ, ಬಂಗಾಳಿ ಸಾಹಿತ್ಯದ, ಅದರಲ್ಲಿಯೂ ರವೀಂದ್ರನಾಥ ಟ್ಯಾಗೂರ್ ಮತ್ತು ಬಂಕಿಂಚಂದ್ರರ ಪ್ರಭಾವವೂ ದಟ್ಟವಾಗಿತ್ತು. ಕೃಷ್ಣಶಾಸ್ತ್ರಿಗಳು ಬಂಗಾಳಿಯನ್ನು – ತಾವು ವೃತ್ತಿಯಿಂದ ನಿವೃತ್ತರಾದ ಅನಂತರ-ಕಲಿತು,  ಪ್ರಭುತ್ವವನ್ನು ಪಡೆದುಕೊಂಡು ಬಂಕಿಂ ಅವರ ಜೀವನ ಹಾಗೂ ಸಾಧನೆಯನ್ನು ಕುರಿತು ವಿವರವೂ ಸಮಗ್ರವೂ ಆದ ಕೃತಿಯನ್ನು ಬರೆದದ್ದು ಆಶ್ಚರ್ಯ ಹಾಗೂ ಸಾಹಸದ ಸಂಗತಿಯಾಗಿದೆ. ಇದರ ಜೊತೆಗೆ ಟ್ಯಾಗೂರ್ ಅವರ ನಿಬಂಧಮಾಲಾ, ನಾಗಮಹಾಶಯ, ಶ್ರೀರಾಮ ಕೃಷ್ಣ ಪರಮಹಂಸ ಈ ಬಗೆಯ ಕೃತಿಗಳನ್ನೂ ಬರೆದರು.

ಸಂಸ್ಕೃತ ಬಂಗಾಳಿ ಭಾಷೆ ಸಾಹಿತ್ಯ ಕೃತಿಗಳನ್ನಲ್ಲದೆ, ಅವರು ಹೊಸಗನ್ನಡದ ಅಂದರೆ ಮುಖ್ಯವಾಗಿ ನವೋದಯ ಸಾಹಿತ್ಯ ವಿಮರ್ಶೆಯನ್ನು ವಿಭಿನ್ನವಾದ ರೀತಿಯಲ್ಲಿ ಶ್ರೀಮಂತಗೊಳಿಸಿದವರು. ಅವರು ಶ್ರೀ ಟಿ.ಎಸ್.ವೆಂಕಣ್ಣಯ್ಯನವರೊಡನೆ ಸೇರಿ ಸಂಪಾದಿಸಿದ ರಾಘವಾಂಕನ ಹರಿಶ್ಚಂದ್ರ ಕಾವ್ಯದ ಪೀಠಿಕೆ, ಅತ್ಯುತ್ತಮವಾದ ಸಂಶೋಧನ ವಿಮರ್ಶೆಗೆ ಸಾಕ್ಷಿಯಾಗಿದೆ. ಹಾಗೆಯೇ ಪ್ರಾಚೀನ ಮತ್ತು ಸಮಕಾಲೀನ ಸಾಹಿತ್ಯಗಳನ್ನು ಕುರಿತು ಕೃಷ್ಣಶಾಸ್ತ್ರಿಗಳು ಬರೆದ ವಿಮರ್ಶೆ ಅತ್ಯಂತ ಗಟ್ಟಿಮುಟ್ಟಾದ ನಿಲುವುಗಳನ್ನು ಪ್ರತಿಪಾದಿಸುತ್ತದೆ.

ನವೋದಯ ಸಾಹಿತ್ಯ ಸಂದರ್ಭದಲ್ಲಿ ಕೃಷ್ಣಶಾಸ್ತ್ರಿಗಳ ವಿಮರ್ಶೆ ಮೂಲತಃ ಸಂಶೋಧನಾತ್ಮಕ ಹಾಗೂ ವರ್ಣನಾತ್ಮಕ ಸ್ವರೂಪದ್ದಾಗಿದ್ದರೂ, ಅದು ಸಮಕಾಲೀನರಾದ ಇತರ ವಿಮರ್ಶಕರಿಗಿಂತ ಹೆಚ್ಚು ಸತ್ಯಪಕ್ಷಪಾತವನ್ನೂ, ನಿಷ್ಠುರ ಪ್ರವೃತ್ತಿಯನ್ನೂ, ವಿಶ್ಲೇಷಣ ಸಾಮರ್ಥ್ಯವನ್ನೂ ಪ್ರಕಟಿಸುತ್ತದೆ. ಅವರ ‘ಸಂಸ್ಕೃತ ನಾಟಕ’ ಮತ್ತು ‘ಭಾಸಕವಿ’ ಈ ಎರಡು ಕೃತಿಗಳೂ ಮೊದಲು ಆಯಾ ಕೃತಿಗಳಿಗೆ ಸಂಬಂಧಿಸಿದ ವಸ್ತುಮಾಹಿತಿಯನ್ನು ವಿವರವಿವರವಾಗಿ ಪರಿಚಯ ಮಾಡಿಕೊಡುವ ಕಡೆ ಪ್ರವೃತ್ತವಾಗುತ್ತವೆ. ಬಂಕಿಂ ಅವರನ್ನು ಕುರಿತ ಕೃತಿಯಲ್ಲೂ ಅಷ್ಟೆ. ಬಂಕಿಂ ಅವರ ಎಲ್ಲ ಕಾದಂಬರಿಗಳನ್ನೂ ಕುರಿತ ಸಾರಾಂಶವನ್ನು ಮೊದಲು ಕೊಟ್ಟು ಅನಂತರ ಅವುಗಳ ವಿಮರ್ಶೆಗೆ ಅವರು ತೊಡಗುತ್ತಾರೆ. ‘ವಚನಭಾರತ’, ‘ಕಥಾಮೃತ’ಗಳ ಕಥಾಭಾಗವನ್ನು ಕನ್ನಡದಲ್ಲಿ ತಿಳಿಯಾಗಿ ನಿರೂಪಿಸುವುದರ ಜತೆಗೆ, ಆಯಾಕೃತಿಗಳ ಸುದೀರ್ಘ ಪ್ರಸ್ತಾವನೆಗಳಲ್ಲಿ ವಿದ್ವತ್ ಪೂರ್ಣವಾದ ವಿವರಗಳನ್ನು ಶಾಸ್ತ್ರಿಗಳು ದಾಖಲಿಸುತ್ತಾರೆ. ವಚನ ಭಾರತದ ಒಟ್ಟು ಬರವಣಿಗೆಯೇ, ಕೃಷ್ಣಶಾಸ್ತ್ರಿಗಳು ಮೂಲ ಮಹಾಭಾರತಕ್ಕೆ ತೋರಿರುವ ವಿಮರ್ಶಾತ್ಮಕ ಪ್ರತಿಕ್ರಿಯೆ ಅನ್ನಬಹುದು. ಯಾಕೆಂದರೆ ವ್ಯಾಸಭಾರತದ ವಿಸ್ತಾರವಾದ ಕಥೆಯನ್ನು ಅವರು ಮೊದಲು ಅಧ್ಯಯನ ಮಾಡಿ, ಅದನ್ನು ಕನ್ನಡದಲ್ಲಿ ನಿರೂಪಿಸುವ  ಕಥನಕ್ರಮವನ್ನು ಕುರಿತು, ಬರಹಕ್ಕೆ ಪೂರ್ವದಲ್ಲಿ ಅವರು ನಡೆಯಿಸಿರುವ ವಿವೇಚನೆಯೇ ಈ ವಿಮರ್ಶಾತ್ಮಕ ಪ್ರತಿಕ್ರಿಯೆ. ಈ ದೃಷ್ಟಿಯಿಂದ ‘ವಚನಭಾರತ’, ಮೂಲದ ಕತೆಯನ್ನು ಕನ್ನಡಕ್ಕೆ ಅನುವಾದ ಮಾಡುವ ಪ್ರಯತ್ನವಷ್ಟೇ ಎಂದು ಭಾವಿಸುವುದು, ಅವರ ಸಾಹಸವನ್ನು ತೀರಾ ಸರಳೀಕರಿಸಿದಂತೆ ಆಗುತ್ತದೆ. ಇನ್ನು ‘ವಚನಭಾರತ’ ಹಾಗೂ ‘ಕಥಾಮೃತ’ಗಳ ಪೀಠಿಕಾಪ್ರಕಣಗಳಂತೂ ಮಹತ್ವದ ಸಂಶೋಧನೆಯ ಹಾಗೂ ಜೀವನಪರಿಣತಿಯ ಪರಿಣಾಮಗಳು. ಸಂಸ್ಕೃತ ಮಹಾಭಾರತಗಳ ಕನ್ನಡ ಅವತರಣಿಕೆಗಳ ವಿಚಾರ, ಮಹಾಭಾರತದ ಉಪಾಖ್ಯಾನಗಳು ಮಹಾಭಾರತದ ಕರ್ತೃವಿನ ಕಾಲ; ಆ ಕಾಲದ ಮುಖ್ಯದರ್ಶನಗಳು; ಅಲ್ಲಿ ಪ್ರಕಟವಾಗಿರುವ ಧರ್ಮದ ಸ್ವರೂಪ; ಮಹಾಭಾರತದ ಕಾವ್ಯಗುಣ;- ಇತ್ಯಾದಿಗಳನ್ನು ವಿವರವಾಗಿ ಚರ್ಚಿಸುತ್ತಲೇ, “ಕೃಷ್ಣನು ಮಹಿಮಾ ಪುರುಷನೇನೋ ಹೌದು, ಆದರೆ ಅವನು ತನ್ನನ್ನು ಪೂಜಿಸಿ ಎಂದು ಹೇಳಿಕೊಂಡಿರಲಾರನು. ಭಗವದ್ಗೀತೆ ರಚಿತವಾದಾಗ ಕೃಷ್ಣನು ಬದುಕಿರಲಿಲ್ಲ. ಅವನ ಕಾಲಕ್ಕೆ ಎಲ್ಲರೂ ಅವನನ್ನು ಅವತಾರಪುರುಷನೆಂದಾಗಲೀ ಭಗವಂತನೆಂದದಾಗಲೀ ಎಣಿಸಿರಲಿಲ್ಲ”- ಎಂಬಂಥ, ಹೊಸ ಮತ್ತು ಭಾವುಕರು ಬೆಚ್ಚಿ ಬೀಳುವಂಥ ವಿಷಯಗಳನ್ನು ನಿರ್ಭಿಡೆಯಿಂದ ಬರೆಯುತ್ತಾರೆ. ‘ಕಥಾಮೃತ’ದ ಪ್ರಸ್ತಾವನೆಯೂ ಅಷ್ಟೆ; ಇದುವರೆಗೆ ಬಂದ ಕನ್ನಡ ಭಾಷಾಂತರಗಳನ್ನು ಕುರಿತು, ಸಂಸ್ಕೃತದೊಳಗಿನ ಈ ಬಗೆಯ ಕಥಾಕೋಶಗಳನ್ನು ಕುರಿತು; ಈ ಬಗೆಯ ಕಥಾಸಾಹಿತ್ಯದ ವಸ್ತು-ಭಾಷೆ-ಉದ್ದೇಶಗಳನ್ನು ಕುರಿತು ಶಾಸ್ತ್ರಿಗಳು ಕೊಡುವ ಮಾಹಿತಿ ಅವರ ಅಪೂರ್ವ ಸಂಶೋಧಕ ಪ್ರವೃತ್ತಿಗೆ ಸಾಕ್ಷಿಯಾಗಿದೆ.

‘ಸಂಸ್ಕೃತ ನಾಟಕ’ದ ಚರ್ಚೆಯ ಸಂದರ್ಭದಲ್ಲಿ, ಸಂಸ್ಕೃತ ನಾಟಕಗಳ ಮೇಲೆ ಗ್ರೀಕ್ ನಾಟಕಗಳ ಪ್ರಭಾವವಾಗಿದೆ ಎಂಬ ಒಂದು ವಾದವನ್ನು ಶಾಸ್ತ್ರಿಗಳು ಮರುವಿಮರ್ಶೆಗೆ ಒಳಪಡಿಸಿರುವ ಕ್ರಮವು ಗಮನಿಸತಕ್ಕದ್ದಾಗಿದೆ. ಸಂಸ್ಕೃತ ನಾಟಕಗಳಲ್ಲಿ ಬಳಸುವ ತೆರೆಗೆ ಯವನಿಕ ಎಂದು ಹೆಸರು. ಯವನಿಕಾ ಅನ್ನುವುದು ಗ್ರೀಕ್ ನಾಟಕದ ಪರದೆ ಎಂದು ಅರ್ಥಮಾಡಿ, ಸಂಸ್ಕೃತ ನಾಟಕಗಳು, ಈ ಪದವನ್ನೆ ಬಳಸುವ ಕಾರಣದಿಂದ, ಅವು ಗ್ರೀಕ್ ನಾಟಕದ ನೇರವಾದ ಪ್ರಭಾವಕ್ಕೆ ಒಳಗಾಗಿವೆ- ಎಂದು ಹೇಳುವವರಿದ್ದಾರೆ. ಇದನ್ನು ವಿಮರ್ಶಿಸುತ್ತ ಶಾಸ್ತ್ರಿಗಳು ಹೇಳುತ್ತಾರೆ: “ಈ ಸಾಮ್ಯ ಕೇವಲ ಕಾಕತಾಳೀಯ. ಯವನಿಕ ಎಂಬುದಕ್ಕೆ ಗ್ರೀಕ್ ನಾಟಕದ ಪರದೆ ಎಂದೇ ಅರ್ಥಮಾಡಬೇಕಾಗಿಲ್ಲ. ಯವನಿಕ ಎಂದರೆ ಪರ್ಷಿಯಾ ಮುಂತಾದ ಪ್ರಾಂತ್ಯದಿಂದ ಹಡಗುಗಳಲ್ಲಿ ಇಂಡಿಯಾಕ್ಕೆ ಬಂದ ಬಟ್ಟೆ ಎಂದು ಅರ್ಥವಿದ್ದಿರಬಹುದು. ಗ್ರೀಕ್ ನಾಟಕದವರನ್ನು ಅನುಕರಿಸಿ ಉಪಯೋಗಿಸಿದ ಪರದೆ ಎಂದೇ ಅರ್ಥವಾಗಬೇಕಾಗಿಲ್ಲ. ಗ್ರೀಕ್ ನಾಟಕ ರಂಗದಲ್ಲಿ ಅಂಥ ಪರದೆ ಇರಲೂ ಇಲ್ಲ.”

‘ರನ್ನಕವಿ ಪ್ರಶಸ್ತಿ’-ನವೋದಯ ಸಾಹಿತ್ಯ ಸಂದರ್ಭದಲ್ಲಿ ಬಂದ ಒಂದು ವಿಮರ್ಶನ್ನೋದ್ದೇಶದ ಕೃತಿ. ಬಹಳ ಲೇಖನಗಳು ಅತ್ಯಂತ ಉತ್ಸಾಹವನ್ನೂ, ಪ್ರಶಂಸೆಯನ್ನೂ ತಮ್ಮಲ್ಲಿ ಒಳಗೊಂಡಿವೆ. ಕನ್ನಡ ವಿಮರ್ಶೆಯ ಮೊದಲ ದಿನಗಳಲ್ಲಿ ರನ್ನನಂಥ ಕವಿಯನ್ನು ಕುರಿತು ಇಂಥ ಸಂಭ್ರಮದ ವಿಮರ್ಶೆ ಬಂದದ್ದು ತಪ್ಪೇನಲ್ಲ. ಇದೇ ಪ್ರಶಸ್ತಿ ಗ್ರಂಥದಲ್ಲಿ ಕೃಷ್ಣ ಶಾಸ್ತ್ರಿಗಳು ಗದಾಯುದ್ಧ ಮತ್ತು ಅಜಿತ ಪುರಾಣಗಳನ್ನು ಕುರಿತು ಬೇರೆಯೆ ಆದ ಮಾತನ್ನು ಹೇಳುತ್ತಾರೆ: “ಗದಾಯುದ್ಧವು ಒಂದು ರಸಘಟ್ಟಿ. ಅದರಲ್ಲಿ ಚರಿತ್ರೆ ಎಂಬ ಕಸವು ಸಿಕ್ಕಿಕೊಂಡಿದೆ. ಈ ಕಾವ್ಯವನ್ನು ಬರೆದು ರಾಜಾಸ್ಥಾನದಲ್ಲಿ ರನ್ನನು ಓದಿದಾಗ ರಸಕ್ಕಿಂತ ಕಸವೇ ಮೇಲಾಗಿ ಗಣ್ಯವೆನಿಸಿದ್ದಿರಬಹುದು.” ಅಜಿತ ಪುರಾಣವನ್ನು ಕುರಿತು: “ಅಜಿತಪುರಾಣ ರಚನೆಯಲ್ಲಿ ರನ್ನನಿಗೆ ಅಂಥ ಉತ್ಸಾಹವಿಲ್ಲ. ದೇವರ ಪೂಜೆ ಮಾಡಬೇಕಲ್ಲಾ ಎಂದು ಮಂತ್ರಗಳನ್ನೆಲ್ಲ ದಡಬಡನೆ ಉಚ್ಚರಿಸಿ ಮುಗಿಸುವ ಅರ್ಚಕನಂತೆ ಅವನು ಈ ಪುರಾಣವನ್ನು ಬರೆದು ಮುಗಿಸಿದಂತೆ ತೋರುತ್ತದೆ.” ಕೃಷ್ಣಶಾಸ್ತ್ರಿಗಳ ಈ ವಿನೋದಶೈಲಿಯ ವಿಮರ್ಶೆ, ಅವರ ಸತ್ಯ ಪಕ್ಷಪಾತ ಹಾಗೂ ನಿರ್ಭಿಡೆಗಳಿಗೆ ಒಂದು ನಿದರ್ಶನವಾಗಿದೆ.

ಬಂಕಿಂಚಂದ್ರರನ್ನು ಕುರಿತು ಕೃಷ್ಣಶಾಸ್ತ್ರಿಗಳು ಕನ್ನಡದಲ್ಲಿ ಬರೆದಂಥ, ಒಂದು ಕೃತಿ ಬಂಕಿಂ ಅವರ ನೆಲವಾದ ಬಂಗಾಳಿಯಲ್ಲಿಯೂ ಇಲ್ಲ ಎಂದು ಹೇಳಲಾಗಿದೆ. ಈ ಕೃತಿಯಲ್ಲಿ ಬಂಕಿಂ ಅವರ ಎಲ್ಲ ಕಾದಂಬರಿಗಳನ್ನೂ ಬಂಗಾಳಿಯಲ್ಲಿ ಓದಿ ಕೃಷ್ಣಶಾಸ್ತ್ರಿಗಳು-ಕನ್ನಡದಲ್ಲಿ ನಿರೂಪಿಸಿರುವ ಸಾರಾಂಶವಿದೆ. ಪ್ರತಿಯೊಂದು ಕಾದಂಬರಿಯ ಕತೆಯನ್ನೂ ಸಂಕ್ಷೇಪವಾಗಿ ಕೊಟ್ಟನಂತರ ಆಯಾ ಕಾದಂಬರಿಗಳನ್ನು ಕುರಿತ ಪ್ರಾಸಂಗಿಕವಾದ ವಿಮರ್ಶೆಯ ಪ್ರತಿಕ್ರಿಯೆಗಳಿವೆ. ವಿಷವೃಕ್ಷ ಕಾದಂಬರಿಯ ಸಾರಾಂಶವನ್ನೂ, ಅದು ಪ್ರತಿನಿಧಿಸುವ ದೇಶ-ಕಾಲಗಳ ಲಕ್ಷಣಗಳನ್ನು ಹೇಳಿ “ವಿಷವೃಕ್ಷವೆಂದರೆ ಕಾಮಕ್ರೋಧಾದಿಗಳಿಗೆ ವಶರಾಗಿ ನಾವು ಮಾಡುವ ಕಾರ್ಯ. ಅದು ಎಲ್ಲರ ಮನೆಯ ಅಂಗಳದಲ್ಲಿ ಬೆಳೆಯಲು ಸಾಧ್ಯವಿದೆ. ವಿಷವೃಕ್ಷದಲ್ಲಿ  ಬಗೆಬಗೆಯ ಹಣ್ಣುಗಳು-ಅದು ಹುಟ್ಟುವ ಸ್ಥಳವನ್ನನುಸರಿಸಿ ಬೆಳೆಯುತ್ತವೆ. ಇವುಗಳನ್ನು ತಪ್ಪಿಸಬೇಕಾದರೆ ಗಿಡವು ಹುಟ್ಟದಂತೆ ನೋಡಿಕೊಳ್ಳಬೇಕಾಗಿದೆ. ಎಂದರೆ ಮನಸ್ಸನ್ನು ಗಟ್ಟಿಮಾಡಿಕೊಳ್ಳಬೇಕು”- ಎನ್ನುವ ಕೃಷ್ಣಶಾಸ್ತ್ರಿಗಳ ಈ ಮಾತುಗಳು ಸಾಹಿತ್ಯ ವಿಮರ್ಶೆಯ ವಲಯವನ್ನು ದಾಟಿ ಜೀವನ ವಿಮರ್ಶೆಯ ವಿವೇಕದ ನುಡಿಗಳಾಗುತ್ತವೆ.

ಬಂಕಿಂಚಂದ್ರರ ಐತಿಹಾಸಿಕ ಕಾದಂಬರಿಗಳನ್ನು ಕುರಿತ ಒಂದು ಅಧ್ಯಾಯವೇ-ಬಂಕಿಂ ಅವರನ್ನು ಕುರಿತು ಶಾಸ್ತ್ರಿಗಳು ಬರೆದ ಗ್ರಂಥದಲ್ಲಿದೆ. ಈ ಅಧ್ಯಾಯಕ್ಕೆ ಪೀಠಿಕೆಯಾಗಿ ಐತಿಹಾಸಿಕ ಕಾದಂಬರಿಗಳ ಸ್ವರೂಪವನ್ನು ಕುರಿತ ಚರ್ಚೆ ಇದೆ. ಈ ಸಂದರ್ಭದಲ್ಲಿ ತುಂಬ ಮೌಲಿಕವಾದ ತಾತ್ವಿಕ ಚರ್ಚೆಯೊಂದನ್ನು ಕೃಷ್ಣಶಾಸ್ತ್ರಿಗಳು ಪ್ರಸ್ತಾಪಿಸುತ್ತಾರೆ. ಇತಿಹಾಸವನ್ನು ತನ್ನ  ಕೃತಿಯ ವಸ್ತುವನ್ನಾಗಿ ಮಾಡಿಕೊಂಡಾಗ, ಕಾದಂಬರಿಕಾರ ಅದನ್ನು ನಿರ್ವಹಿಸುವ ಬಗೆ ಹೇಗೆ ಎಂಬುದೇ ಇಲ್ಲಿರುವ ಪ್ರಶ್ನೆ. ಶಾಸ್ತ್ರಿಗಳು ಹೇಳುತ್ತಾರೆ: “ಕಾದಂಬರಿಕಾರನು ಐತಿಹಾಸಿಕ ಸಂಗತಿಗಳಿಗೆ ಅಂಟಿಕೊಂಡು ಹೋಗುವುದು ನಿಷ್ಪ್ರಯೋಜಕ. ಚರಿತ್ರೆಯ ಭಿತ್ತಿಯಲ್ಲಿ ಒಂದು ಸ್ಥೂಲವಾದ ರೇಖೆ ಸಿಕ್ಕಿದರೆ ಅದನ್ನು ಚಿತ್ರಮಯವನ್ನಾಗಿ ಮಾಡುವುದು ಜೀವ ತುಂಬುವುದು ಸುಲಭ. ಕಾದಂಬರಿಯಲ್ಲಿ ಎಲ್ಲ ಘಟನೆಗಳೂ ಐತಿಹಾಸಿಕವಾಗಿರಬೇಕಾಗಿಲ್ಲ. ಹಾಗೆಯೆ ಚರಿತ್ರೆಯನ್ನು ಕಾದಂಬರಿಯ ಸ್ಥಾನದಲ್ಲಿ ಕೂರಿಸಬೇಕಾಗಿಲ್ಲ.” ಚರಿತ್ರೆ ಹಾಗೂ ಸಾಹಿತ್ಯಕೃತಿಗಳ ಸಂಬಂಧವನ್ನು ಕುರಿತು ಗ್ರೀಕ್ ತತ್ವ ಶಾಸ್ತ್ರಜ್ಞ ಅರಿಸ್ಟಾಟಲ್ ಇದೇ ಅರ್ಥದ ಮಾತುಗಳನ್ನು ಹೇಳಿದ್ದಾನೆಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಸಾಮಾನ್ಯವಾಗಿ, ಸಂಸ್ಕೃತ ಹಾಗೂ ಪ್ರಾಚೀನ ಕನ್ನಡ ಸಾಹಿತ್ಯಗಳಿಗೆ ಮನಸ್ಸನ್ನು ತೆತ್ತ ಎಷ್ಟೋ “ಘನವಿದ್ವಾಂಸರು” ಕೆಲವು ವೇಳೆ ತಮ್ಮ ಸಮಕಾಲೀನ ಸಾಹಿತ್ಯದ ಬಗ್ಗೆ ಅಷ್ಟಾಗಿ ಒಲವನ್ನುಳ್ಳವರಾಗಿರುವುದಿಲ್ಲ. ಆದರೆ ಎ.ಆರ್.ಕೃಷ್ಣಶಾಸ್ತ್ರಿಗಳು ಆ ಬಗೆಯ ಪಂಡಿತರಲ್ಲ. ಕನ್ನಡ ಭಾಷೆ-ಸಾಹಿತ್ಯ, ಸಂಸ್ಕೃತಿಗಳೊಂದಿಗೆ ಅವರು ಇರಿಸಿಕೊಂಡ ಗಾಢವಾದ ಸಂಬಂಧಗಳೂ ಮತ್ತು ತಮ್ಮ ಸಮಕಾಲೀನತೆಯಲ್ಲಿ ಸಂಭವಿಸುತ್ತಿದ್ದ ಹೊಸ ಹುಟ್ಟುಗಳನ್ನು ಗುರುತಿಸುವ, ಪ್ರೋತ್ಸಾಹಿಸುವ, ಆಸ್ವಾದಿಸುವ ಹಾಗೂ ವಿಮರ್ಶಾತ್ಮಾಕವಾಗಿ ಪ್ರತಿಕ್ರಿಯಿಸುವ ಮನೋಧರ್ಮವೂ, ಅವರನ್ನು ‘ಪ್ರಾತಃ ಸ್ಮರಣೀಯ’ರನ್ನಾಗಿ ಮಾಡಿವೆ. ಶ್ರೀಯವರ ‘ಗದಾಯುದ್ಧನಾಟಕ’ವನ್ನು ಕುರಿತು, ಕೈಲಾಸಂ ಅವರ ‘ಟೊಳ್ಳುಗಟ್ಟಿ’ ನಾಟಕವನ್ನು ಕುರಿತು, ಮಹಿಳಾ ಕಾದಂಬರಿಕಾರ್ತಿಯ ‘ಪೂರ್ಣಕಲಾ’ ಎಂಬ ಕಾದಂಬರಿಯನ್ನು ಕುರಿತು, ಶ್ರೀನಿವಾಸರ ಸಣ್ಣಕತೆಗಳನ್ನು, ಡಿ.ವಿ.ಜಿ.ಯವರ ‘ವಸಂತಕುಸುಮಾಂಜಲಿ’ಯನ್ನು ಕುರಿತು, ಆ ಕಾಲದ ‘ಅರುಣ’, ‘ಕಮಲ’ ಎಂಬ ಮಾಸಿಕಗಳನ್ನು ಕುರಿತು-ಅವರು ತೋರಿದ ಪ್ರತಿಕ್ರಿಯೆಗಳು ಅವರಿಗೆ ಸಮಕಾಲೀನ ಸಾಹಿತ್ಯ ಚಟುವಟಿಕೆಗಳ ಬಗ್ಗೆ ಇದ್ದ ಕಾಳಜಿಗಳನ್ನು ಸೂಚಿಸುತ್ತವೆ. ಮೈಸೂರು ಚರಿತ್ರೆಯಲ್ಲಿ ಕತೆ-ಕಾದಂಬರಿಗಳನ್ನು ಬರೆಯುವವರಿಗೆ ದೊರಕುವ ಸಾಮಗ್ರಿಗಳ ಸಾಧ್ಯತೆಯನ್ನು ಕುರಿತು ಅಂದಿನ ಲೇಖಕರ ಗಮನವನ್ನು ಸೆಳೆದು ಅವರು ಬರೆದ ಲೇಖನದ ಪರಿಣಾಮವಾಗಿ, ಕುವೆಂಪು ಅವರ ‘ರಕ್ತಾಕ್ಷಿ’, ಮಾಸ್ತಿಯವರ ‘ಚನ್ನಬಸವ ನಾಯಕ’ ಹಾಗೂ ಸಂಸರ ಅನೇಕ ನಾಟಕಗಳು ಮತ್ತಿತರ ಕೃತಿಗಳು ಹುಟ್ಟಿಕೊಳ್ಳಲು ಕಾರಣವಾಯಿತು. ಅಷ್ಟೇ ಅಲ್ಲ ೧೯೨೮ರಷ್ಟು ಹಿಂದೆಯೆ ಬೆಂಗಳೂರು ಸೆಂಟ್ರಲ್ ಕಾಲೇಜು ಕರ್ನಾಟಕ ಸಂಘದಲ್ಲಿ ಮೊಟ್ಟಮೊದಲ ವಿದ್ಯಾರ್ಥಿ ಕವಿಸಮ್ಮೇಳನವನ್ನು ಏರ್ಪಾಡು ಮಾಡಿ, ಆಗ ವಿದ್ಯಾರ್ಥಿಯಾಗಿದ್ದ ಕೆ.ವಿ. ಪುಟ್ಟಪ್ಪ (ಕುವೆಂಪು) ನವರನ್ನು ಅದರ ಅಧ್ಯಕ್ಷರನ್ನಾಗಿ ಮಾಡಿದವರು ಕೃಷ್ಣಶಾಸ್ತ್ರಿಗಳು.

ಎ.ಆರ್.ಕೃಷ್ಣಶಾಸ್ತ್ರಿಗಳ ವಿಮರ್ಶೆಯ ಇನ್ನೊಂದು ಮುಖ್ಯ ವಿಶೇಷತೆಯೆಂದರೆ, ಕನ್ನಡದಲ್ಲಿ ಸಮಗ್ರ ಕೃತಿ ಪರಿಶೀಲನೆಯ ಪರಂಪರೆಯನ್ನು ಪ್ರಾರಂಭಿಸಿದ್ದು. ಅಂದಿನ ನವೋದಯ ವಿಮರ್ಶೆ ತನಗಿದ್ದ ಪರಂಪರೆಯ ಹಿನ್ನಲೆಗನುಸಾರವಾಗಿ-ಕೃತಿಯೊಂದರ ಬಿಡಿಬಿಡಿ ಸಂಗತಿಗಳನ್ನೆ ಚರ್ಚಿಸುತಿದ್ದ ಸಂದರ್ಭದಲ್ಲಿ ಕೃತಿಯೊಂದನ್ನು ಇಡಿಯಾಗಿ ವಿಮರ್ಶೆಗೆ ಗುರಿಪಡಿಸುವ ಕೆಲಸವನ್ನು ‘ಭಾಸಕವಿ’, ‘ಬಂಕಿಂಚಂದ್ರ’ (ಮುಳಿಯ ತಿಮ್ಮಪ್ಪಯ್ಯನವರ ‘ನಾಡೋಜ ಪಂಪ’ ಕೃತಿಯನ್ನು ಬಿಟ್ಟರೆ) ಎಂಬ ಕೃತಿಗಳ ಮೂಲಕ ಪ್ರಾರಂಭಿಸಿದರು.

ನವೋದಯ ವಿಮರ್ಶೆ ಬಹುಮಟ್ಟಿಗೆ ಆಗತಾನೆ ಪರಿಚಿತವಾದ ಪಾಶ್ಚಾತ್ಯ ಕಾವ್ಯಮಿಮಾಂಸೆ ಹಾಗೂ ಸಾಹಿತ್ಯ ವಿಮರ್ಶೆಯ ತತ್ವ ಹಾಗೂ ವಿಧಾನಗಳನ್ನು ಅನ್ವಯಿಸಿ ಹೊಸಗನ್ನಡ ವಿಮರ್ಶೆಯನ್ನು ಕಟ್ಟತೊಡಗಿದ ಸಂದರ್ಭದಲ್ಲಿ ಎ.ಆರ್.ಕೃಷ್ಣಶಾಸ್ತ್ರಿಗಳು ಭಾರತೀಯ ಕಾವ್ಯಮಿಮಾಂಸೆಯ ತತ್ವಗಳನ್ನು, ಪರಿಕಲ್ಪನೆಗಳನ್ನು ಅನ್ವಯಿಸಿ ಕನ್ನಡ ಸಾಹಿತ್ಯ ವಿಮರ್ಶೆಯನ್ನು ಬೆಳೆಯಿಸಲು ಮಾಡಿದ ಪ್ರಯತ್ನ ಗಮನಿಸತಕ್ಕದ್ದಾಗಿದೆ. ‘ರನ್ನನ ರಸಪ್ರತಿಪಾದನೆ’ ಎಂಬ ಲೇಖನದಲ್ಲಿ (೧೯೨೮) “ಗದಾಯುದ್ಧದಲ್ಲಿ ವೀರರಸವು ಪ್ರಧಾನ ರೌದ್ರಕರುಣಗಳು ಅವುಗಳಿಗೆ ಉಪಷ್ಟಂಭಕ. ಶೃಂಗಾರಾದಿ ಮಿಕ್ಕ ರಸಗಳೂ ಬಂದಿವೆ. ಆದರೆ ಅವು ಯಾವಕ್ಕೂ ಪುಷ್ಟಿಯಿಲ್ಲ-ಕರುಣರಸವು ಬಿಟ್ಟು ಬಿಟ್ಟು ಬರುವ ಮಳೆಯಂತೆ ಗ್ರಂಥದ ಉದ್ದಕ್ಕೂ ಅದರಲ್ಲಿಯೂ ವಿಶೇಷವಾಗಿ ಗ್ರಂಥದ ಪೂರ್ವಾರ್ಧದಲ್ಲಿ ಬರುತ್ತದೆ.” “ಅಜಿತ ಪುರಾಣ”ವನ್ನು ಕುರಿತ ಅವರ ವಿಮರ್ಶೆಯಲ್ಲಿಯೂ ಈ ರಸತತ್ವದ ವಿಚಾರವಿದೆ. ಕೇವಲ ಪ್ರಾಚೀನ ಕೃತಿಗಳನ್ನು ಕುರಿತಂತೆ ಮಾತ್ರ ಅಲ್ಲ; ಹೊಸಗನ್ನಡದ ಕೃತಿಗಳನ್ನು ರಸತತ್ವದ ಮೂಲ ಮಾನದಿಂದ ಕೃಷ್ಣಶಾಸ್ತ್ರಿಗಳು ವಿಮರ್ಶಿಸಿರುವುದು ಸ್ವಾರಸ್ಯದ ಸಂಗತಿಯಾಗಿದೆ. ಬಂಕಿಂ ಅವರ ‘ವಿಷವೃಕ್ಷ’ ಕಾದಂಬರಿಯನ್ನು ಕುರಿತು: “ಇದು ಶೋಕ ಪ್ರಧಾನವಾದ ಕೃತಿ. ಇಂಥ ಶೋಕ ಪ್ರಧಾನವಾದ ಕೃತಿಯಲ್ಲೂ ಘೋರಾಂಧಕಾರದ ಕಾರ್ಮುಗಿಲಿನ ಮಧ್ಯ ಮುಂಚಿನಂತೆ ಹಾಸ್ಯರಸವು ಸ್ಫುರಿಸುವುದು.” ಮಾಸ್ತಿಯವರ ‘ಬಾದಷಹನ ನ್ಯಾಯ’ ಎಂಬ ಸಣ್ಣ ಕತೆಯನ್ನು ಕುರಿತು : “ಇದನ್ನು ಓದುತ್ತಿದ್ದರೆ ಅರ್ಥಾಲಂಕಾರಗಳ ಮಧ್ಯದಲ್ಲಿ ಬರುವ ಶಬ್ದಾಲಂಕಾರವೂ, ರಸವತ್ತಾದ ಪದ್ಯಗಳ ಮಧ್ಯೆ ಬರುವ ಪ್ರೌಢವಾದ ಗದ್ಯವೂ, ಧ್ವನಿಕಾವ್ಯದ ಮಧ್ಯ ಬರುವ ಚಿತ್ರಕಾವ್ಯವೂ ಜ್ಞಾಪಕಕ್ಕೆ ಬರುತ್ತದೆ” ಎಂದು ಬರೆಯುತ್ತಾರೆ. ಮಾಸ್ತಿಯವರ ಈ ಕತೆ ತೀರಾ ಸಾಮಾನ್ಯ ಎಂಬುದನ್ನು ಸೂಚಿಸುವ ಕ್ರಮ ಇದು! ಕೃಷ್ಣಶಾಸ್ತ್ರಿಗಳ ಈ ಭಾರತೀಯ ಕಾವ್ಯಮಿಮಾಂಸೆಯನ್ನು ಅನ್ವಯಿಸಿ ಕನ್ನಡ ವಿಮರ್ಶೆಯನ್ನು ಬೆಳೆಯಿಸುವ ಕ್ರಮ ಕೇವಲ ಕುತೂಹಲಕರವಾದ ಒಂದು ಪ್ರಯತ್ನದಂತೆ ತೋರುತ್ತದೆಯೆ ವಿನಾ, ಅದಕ್ಕಿಂತ ಹೆಚ್ಚೇನನ್ನೂ ಸಾಧಿಸುವಂತೆ ತೋರುವುದಿಲ್ಲ. ಮುಂದೆ ಐವತ್ತರ ದಶಕದಲ್ಲಿ ಬಂದ ತೀ.ನಂ.ಶ್ರೀಕಂಠಯ್ಯನವರ ‘ಭಾರತೀಯ ಕಾವ್ಯ ಮಿಮಾಂಸೆ’, ಕೃಷ್ಣಶಾಸ್ತ್ರಿಗಳಿಗಿಂತ ಭಿನ್ನವಾದ ರೀತಿಯಲ್ಲಿ ಭಾರತೀಯ ಕಾವ್ಯ ಮಿಮಾಂಸೆಯ ಧ್ವನಿತತ್ವದ ವಿಚಾರಗಳು ಹೇಗೆ ಆಧುನಿಕ ಸಾಹಿತ್ಯ ವಿಮರ್ಶೆಯಲ್ಲಿ ಹೆಚ್ಚು ಯಶಸ್ವಿಯಾಗಿ ಬಳಕೆಯಾಗಬಹುದೆಂಬ ಹೊಸ ಸಾಧ್ಯತೆಗಳನ್ನು ನಿರ್ದೇಶಿಸುತ್ತವೆ.

ಈ ಪದ್ಧತಿಗಿಂತ ಬೇರೆಯಾಗಿ, ಸಾಹಿತ್ಯದ ಬಗ್ಗೆ ಕಾವ್ಯಮಿಮಾಂಸೆಯ ತತ್ವಗಳ ಬಗ್ಗೆ ಕೃಷ್ಣಶಾಸ್ತ್ರಿಗಳು ಮಂಡಿಸುವ ವಿಚಾರಗಳು ಹೆಚ್ಚು ಖಚಿತವೂ, ವಿಶಿಷ್ಟವೂ ಆಗಿವೆ. ಭಾರತೀಯ ಕಾವ್ಯ ವಿಮಾಂಸೆಯಲ್ಲಿ ಧ್ವನಿತತ್ವ ಒಂದು ಪ್ರಮುಖವಾದ ಘಟ್ಟ. ಧ್ವನಿ ಎಂದರೆ ಏನು ಎನ್ನುವುದನ್ನು ಕುರಿತು: “ಒಂದು ಮರದ ದಿಮ್ಮಿಯನ್ನು ಸಲಾಕೆಯಿಂದ ಹೊಡೆದರೆ ಧಡ್ ಎಂದು ಸದ್ದಾಗುತ್ತದೆ. ಅದೇ ಒಂದು ಲೋಹದ ಅಥವಾ ಕಂಚಿನ ಪಾತ್ರೆಯನ್ನು ಹೊಡೆದರೆ ಠಣ್ ಎಂದು ಸದ್ದಾಗುತ್ತದೆ. ಆ ಸದ್ದು ಅಲ್ಲಿಯೇ ಅಡಗಿ ಹೋಗುವುದಿಲ್ಲ; ಹರಡುತ್ತದೆ. ಅಲೆಯಲೆಯಾಗಿ ಮುಂದುವರಿಯುತ್ತದೆ. ಅನುರಣಿತವಾಗುತ್ತದೆ. ಹೀಗೆ ಸತ್ವ ಉಳ್ಳ, ಜೀವ ಉಳ್ಳ ಒಂದು ಮಾತು ಹತ್ತು ಮಾತಿನ ಕೆಲಸ ಮಾಡುತ್ತದೆ. ಇದು ಧ್ವನಿಯ ಮಹತ್ವ”-ಎನ್ನುತ್ತಾರೆ ಕೃಷ್ಣಶಾಸ್ತ್ರಿಗಳು. ಸಾಹಿತ್ಯ ಎಂದರೇನು ಎನ್ನುವುದನ್ನು ಕುರಿತು ಈ ಹೊತ್ತಿಗೂ ತೃಪ್ತಿಕರವಾದ ಸೂತ್ರ ಮಂಡಿತವಾಗಿಲ್ಲ. ಆದರೆ “ಸಾಹಿತ್ಯ ಎನ್ನುವುದು ಮನುಷ್ಯರು ಮನುಷ್ಯರಿಗಾಗಿ ಜೀವನದಲ್ಲಿ ಕಂಡದ್ದನ್ನು ಕೇಳಿದ್ದನ್ನು ಅನುಭವಿಸಿದ್ದನ್ನು ತಿಳಿಸುತ್ತದೆ.” (ವ.ಭಾ.೧೪೭) ಎಂಬ ಈ ಕೃಷ್ಣಶಾಸ್ತ್ರಿಗಳ ಸೂತ್ರ, ನಮಗೆ ಪರಿಚಿತವಾದ ಎಷ್ಟೋ ಸೂತ್ರಗಳಿಗಿಂತ ಭಿನ್ನವೂ ಮೇಲೆ ನೋಡಲು ಸರಳವೂ, ಆದರೆ ಅತ್ಯಂತ ಅರ್ಥಪೂರ್ಣವೂ ಮತ್ತು ಎಲ್ಲದಕ್ಕಿಂತ ಮಿಗಿಲಾಗಿ ಮಾನವಕೇಂದ್ರಿತವೂ ಆಗಿದೆ-ಎ.ಆರ್.ಕೃಷ್ಣಶಾಸ್ತ್ರಿಗಳ ವ್ಯಕ್ತಿತ್ವದಂತೆಯೇ.

ವಿಸ್ತರಣ: ೧೯೯೫