ಹೋಗೂನ ನಡಿಗೆ ಎಲ್ಲಮ್ಮನ ಗುಡ್ಡಕ
ಹೋಗೂನ ನಡಿರೆ ತಾಯಿ ಪಾದಕ
ಜಗದಂಬಿ ಜಾತರಿ ಬಲು ಕಡಕ
ಉಗರಗೊಳ್ಳಾ ಸವದತ್ತಿ ನಡಕ
ಜೋಗಳಬಾವ್ಯಾಗ ಮಾಡಬೇಕ್ರಿ ಜಳಕ
ಸುತಿ ಚೌಡಕಿ ತಾಳ ಗಂಟಿ ಚಮಕ
ದೇವಿ ಗುಡಿಮುಂದ ಬಿಜಲಿಯ ಬೆಳಕ
ಗಚ್ಚಿನ ಗುಡಿಯ ಹುಚ್ಚಯ್ಯ ಮೂರ್ತಿ
ಗಂಡಿಹುಣ್ಣಿವ್ಯಾಗ ಆದೆವ್ವ ಹೆಚ್ಚಿನಾಕಿ
ಮುತ್ತೈದಿ ಹುಣ್ಣಿವ್ಯಾಗ ಆದೆವ್ವ ದೊಡ್ಡಾಕಿ
ಮೊದಲಿಂದ ನೆನೆದೆನವ್ವ ತಾಯಿ ಆರಂಭ
ಯವ್ವ ಮಾತಾ ನನಗೆ ಕೊಡಬೇಕ ಜಗದಂಬ
ಬುದ್ಧಿ ನನಗೆ ಕೊಡಬೇಕ ಜಗದಂಬ
ದೂರಿನ್ನಾಡ ಸೀಮಿ ಮಂದಿನ ಕರಿಸಿ
ಯವ್ವ ತೆಲಿಮ್ಯಾಲ ಸಣ್ಣ ಕೊಡವ ಹೊರಸಿ
ಯವ್ವ ತೆಲಿಮ್ಯಾಲ ಹಿರೆ ಕೊಡವ ಹೊರಸಿ
ತೆಗ್ಗಿನಾಗ ಐತಿ ಸವದತ್ತಿ ಊರ
ರಾಮದಾಸಾಳ ಪದ ಮಾಡ್ಯಾನ ನೋಡ