ಇಪ್ಪತ್ತನೆಯ ಶತಮಾನದ ಸಾಹಿತ್ಯ ಸಂದರ್ಭದಲ್ಲಿ, ಶತಮಾನೋತ್ಸವದ ಗೌರವಕ್ಕೆ ಪಾತ್ರರಾದ ಮತ್ತು ಪಾತ್ರರಾಗಬಹುದಾದ ಕೆಲವೇ ಮಹತ್ವದ ಸಾಹಿತಿಗಳ ಸಾಹಿತ್ಯ ಸಾಧನೆಗೆ ಹೋಲಿಸಿದರೆ, ಮಧುರಚೆನ್ನರ ಕೊಡುಗೆ ಅಂಥ ಸಮೃದ್ಧವೂ ವೈವಿಧ್ಯಮಯವೂ ಆದದ್ದೇನೂ ಅಲ್ಲ. ಅವರು ತಮ್ಮ ಐವತ್ತು ವರ್ಷಗಳ ಜೀವಿತ ಕಾಲದಲ್ಲಿ ಬರೆದು ಪ್ರಕಟಿಸಿದ ಕವನ ಸಂಗ್ರಹ ಒಂದೇ ಒಂದು! ಅದು ‘ನನ್ನ ನಲ್ಲ’. ೧೯೩೩ರಲ್ಲಿ ಪ್ರಕಟವಾದ ಈ ಸಂಕಲನದೊಳಗಿರುವ ಕವಿತೆಗಳ ಸಂಖ್ಯೆ ಕೇವಲ ಹದಿನೈದು! ಹೀಗೆ ಕೇವಲ ಒಂದೇ ಒಂದು ಕವನ ಸಂಕಲನದ ಮೂಲಕ ಕನ್ನಡದಲ್ಲಿ ಮರೆಯಲಾಗದ ಸ್ಥಾನವನ್ನು ಗಳಿಸಿಕೊಂಡು, ಶತಮಾನ ಸ್ಮರಣೀಯ ಗೌರವಕ್ಕೆ ಪಾತ್ರವಾಗುವ ಸತ್ವ ಉಳ್ಳವರು ಮಧುರಚೆನ್ನರೊಬ್ಬರೇ ಎನ್ನುವುದು ಕನ್ನಡ ಸಾಹಿತ್ಯದ ಆಶ್ಚರ್ಯಗಳಲ್ಲಿ ಒಂದು ಎಂದು ಹೇಳಬಹುದು. ಡಾ. ಕಾಪಸೆಯವರ ಪರಿಶ್ರಮ ಹಾಗೂ ಪ್ರಯತ್ನಗಳ ಕಾರಣದಿಂದಾಗಿ ಮಧುರಚೆನ್ನರ ಚದುರಿ ಹೋದ ಗದ್ಯ ಬರಹಗಳೂ ‘ಆತ್ಮಶೋಧ’ ರೂಪದ ಅವರ ಅನುಭಾವ ಕಥನವೂ ಮತ್ತೂ ಇನ್ನೂ ಒಂದಷ್ಟು ಕವಿತೆಗಳು ಎರಡು ಸಂಪುಟಗಳಲ್ಲಿ ಪ್ರಕಟಗೊಂಡಿರುವುದು ನಿಜವಾದರೂ, ಒಂದು ವೇಳೆ ‘ನನ್ನ ನಲ್ಲ’ದಂಥ ಅಪ್ಪಟ ಅನುಭಾವ ಕಾವ್ಯವೇನಾದರೂ ಲಿಖಿತಗೊಳ್ಳದಿದ್ದರೆ ಅಥವಾ ಪ್ರಕಟವಾಗದಿದ್ದರೆ, ಬಹುಶಃ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈ ಮಹತ್ವದ ಸ್ಥಾನವನ್ನು ಮಧುರಚೆನ್ನರು ಪಡೆದುಕೊಳ್ಳುತ್ತಿದ್ದರೊ ಇಲ್ಲವೋ ಎನ್ನುವುದು ಸಂದೇಹದ ಸಂಗತಿಯಾಗಿದೆ.

ಮಧುರಚೆನ್ನರ ‘ನನ್ನ ನಲ್ಲ’ ಮೊದಲು ಪ್ರಕಟವಾದದ್ದು ೧೯೩೩ರಲ್ಲಿ ದ.ರಾ.ಬೇಂದ್ರೆಯವರ ‘ಗರಿ’ ಪ್ರಕಟವಾದದ್ದು ೧೯೩೩ರಲ್ಲಿ. ಪು.ತಿ.ನ. ಅವರ ‘ಹಣತೆ’ ಪ್ರಕಟವಾದದ್ದು ೧೯೩೩ರಲ್ಲಿ; ಕುವೆಂಪು ಅವರ ‘ಕೊಳಲು’ ಪ್ರಕಟವಾದದ್ದು ೧೯೩೦ರಲ್ಲಿ; ಹಾಗೆಯೇ ಗೋವಿಂದ ಪೈ ಅವರ ‘ಗಿಳಿವಿಂಡು’ ಪ್ರಕಟವಾದದ್ದು ೧೯೩೦ರಲ್ಲಿ. ಈ ಹಿನ್ನೆಲೆಯಿಂದ ನೋಡಿದರೆ, ಕಳೆದ ಶತಮಾನದ ಮೂರನೆಯ ದಶಕವು ನವೋದಯ ಸಾಹಿತ್ಯ ಸಂದರ್ಭದ ಅನೇಕ ಹೊಸ ಹುಟ್ಟುಗಳ ಕಾಲ. ಹಾಗೆ ನೋಡಿದರೆ ಈ ಎಲ್ಲ ಕವನ ಸಂಕಲನಗಳೂ ಮುಂದೆ ಮಹತ್ವದ ಕವಿಗಳಾಗಿ ರೂಪುಗೊಂಡ ಅವರವರ ಮೊದಲ ಸಂಕಲನಗಳು. ಮಧುರಚೆನ್ನರ ‘ನನ್ನ ನಲ್ಲ’ವೂ ಅವರ ಮೊದಲ ಕವನ ಸಂಕಲನವೇ. ಆದರೆ ಬೇಂದ್ರೆ, ಪು.ತಿ.ನ, ಪೈ. ಕುವೆಂಪು ಅವರುಗಳ ಮೊದಲ ಸಂಕಲನಗಳಿಗೂ ಮಧುರಚೆನ್ನರ ‘ನನ್ನ ನಲ್ಲ’ ಎಂಬ ಮೊದಲಿನ ಸಂಕಲನಕ್ಕೂ ಮೌಲಿಕವಾದ ವ್ಯತ್ಯಾಸವಿದೆ. ಅದೆಂದರೆ ಕುವೆಂಪು. ಬೇಂದ್ರೆ, ಪೈ., ಪು.ತಿ.ನ ಅವರ ಮೊದಲ ಸಂಕಲನಗಳು, ಅವರವರ ಕಾವ್ಯವು ಮುಂದೆ ಮೈ ತಳೆದ ಅವರ ಕಾವ್ಯಸತ್ವದ ಕೆಲವು ಲಕ್ಷಣಗಳ ಹಾಗೂ ಆಶಯಗಳ ‘ಬೀಜರೂಪ’ದಂತಿವೆ ಎನ್ನುವುದಾದರೆ, ಮಧುರಚೆನ್ನರ ‘ನನ್ನ ನಲ್ಲ’ ಅವರ ಕಾವ್ಯದ ಮೊದಲೂ ಆಗಿದೆ, ತುದಿಯೂ ಆಗಿದೆ; ಬೀಜವೂ ಆಗಿದೆ, ಹಣ್ಣೂ ಆಗಿದೆ, ಮತ್ತು ಕನ್ನಡದಲ್ಲಿ ನಿಜವಾದ ಅನುಭಾವ ಕಾವ್ಯದ ಪ್ರತಿನಿಧಿಯಾಗಿದೆ.

‘ನಾಕುತಂತಿ’ ಎಂಬ ಕವನ ಸಂಗ್ರಹದ ಮುನ್ನುಡಿಯಲ್ಲಿ ಕವಿ ಬೇಂದ್ರೆಯವರು ಹೇಳುತ್ತಾರೆ: ‘ಭೋಗ ಸಾಧನೆಯ ಕವನ ಭಂಡಾರವೂ ಇದೆ; ಯೋಗ ಸಾಧನೆಯ ಕವನ ಮಾರ್ಗವೂ ಇದೆ’ ಎಂದು. ಹಾಗೆಯೇ ಅವರು ಈ ಹಿನ್ನೆಲೆಯಿಂದ ಕವಿಗಳನ್ನು ‘ಭಕ್ತ ಕವಿಗಳು’ ಮತ್ತು ‘ಸಾಹಿತ್ಯ ಕವಿಗಳು’ ಎಂದು ವಿಭಾಗಿಸಿ ನೋಡುತ್ತಾರೆ. ಈ ವರ್ಗೀಕರಣದಲ್ಲಿ ಬೇಂದ್ರೆ ಮೂಲತಃ ಭಕ್ತ ಕವಿಗಳ ಪರವಾಗಿ ನಿಂತು ಯೋಗ ಸಾಧನೆಯ ಕವನಮಾರ್ಗಕ್ಕೆ ಒಲಿದವರಾಗಿದ್ದಾರೆ. ‘ಭಕ್ತ ಕವಿಗಳು’ ಮತ್ತು ‘ಸಾಹಿತ್ಯ ಕವಿಗಳು’ ಈ ವಿಭಾಗವು ಮೇಲ್ನೋಟಕ್ಕೆ ಸಾಧುವೆಂಬಂತೆ ತೋರಿದರೂ, ಅವೆರಡರ ನಡುವಣ ವ್ಯತ್ಯಾಸದ ಗೆರೆ ತೀರ ತೆಳುವಾದದ್ದು. ಯಾಕೆಂದರೆ ಯಾರನ್ನು ‘ಸಾಹಿತ್ಯ ಕವಿಗಳು’ ಎಂದು ಬೇಂದ್ರೆಯವರು ನಿರ್ದೇಶಿಸುತ್ತಾರೋ ಅವರ ಅಂತರಾಳದಲ್ಲಿ ಭಕ್ತನ ಹಾಗೂ ಅನುಭಾವಿಯ ತುಡಿತಗಳು ಇರುವುದಿಲ್ಲ ವೆಂದೇನೂ ಅಲ್ಲ. ಒಂದು ಮಾತಂತೂ ನಿಜ. ಭಕ್ತ ಕವಿಗಳು ಎಂಬ ವರ್ಗೀಕರಣ ಮೂಲತಃ ಯಾವುದಾದರೊಂದು ಧರ್ಮಕ್ಕೆ ಸಂಬಂಧಪಟ್ಟವರು ಎಂಬ ಅರ್ಥವನ್ನು ಕೊಡುತ್ತದೆ. ಭಕ್ತನಾದವನಿಗೆ ಅವನು ಒಪ್ಪಿಕೊಂಡ ಧರ್ಮದೊಳಗಿನ ಶ್ರದ್ಧೆ ಮುಖ್ಯವಾಗುತ್ತದೆ. ಈ ದೇಶದ ಸಂತರು, ಶರಣರು ಯಾವುದೋ ಒಂದು ಧರ್ಮಕ್ಕೆ ಸೇರಿದ ಭಕ್ತರೂ ಆಗಿದ್ದಾರೆ. ಆದರೆ ಯೋಗಸಾಧನೆಯ ಕವನಮಾರ್ಗ ಈ ಭಕ್ತಿಯ ಗೆರೆಯನ್ನು ಅತಿಕ್ರಮಿಸುವಂಥದ್ದು. ಅದು ಸಾಂಸ್ಥಿಕ ಧರ್ಮದ ಉಪಾಧಿಗಳನ್ನು ಮೀರುವಂಥದ್ದು. ನಿಜವಾಗಿ ನೋಡಿದರೆ ಶುದ್ಧ ಸಾಹಿತ್ಯ ಕವಿಗಳು ಎಂದು ಕರೆಯಬಹುದಾದ ಒಂದು ವರ್ಗೀಕರಣವನ್ನು ಕಲ್ಪಿಸಿಕೊಳ್ಳುವುದೇ ನಮ್ಮ ಸಾಹಿತ್ಯ ಸಂದರ್ಭದಲ್ಲಿ ಕಷ್ಟ. ಯಾಕೆಂದರೆ ಅವರಿಗೆ ಅವರದೆ ಅದೊಂದು ಜೀವನ ದೃಷ್ಟಿ ಅಥವಾ ಜೀವನವನ್ನು ಕುರಿತಾದ ಒಂದು ತಾತ್ವಿಕ ನಿಲುವು ಇರುತ್ತದೆ. ಹಿಂದಿನ ಕವಿಗಳಂತೆ ಯಾವುದೇ ಒಂದು ಮತ ಧರ್ಮಕ್ಕೆ, ತಮ್ಮ ಹುಟ್ಟಿನ ಕಾರಣದಿಂದ ಸೇರಿದವರಂತೆ ತೋರಿದರೂ, ಇಂದಿನ ಕವಿಗಳು ತಮ್ಮ ಧರ್ಮ ನಿರಪೇಕ್ಷಕ ನಿಲುವಿನಿಂದ ತಮ್ಮ ಸೃಜನಶೀಲತೆಯ ಹಂತಗಳಲ್ಲಿ ಅದನ್ನು ಮೀರಬಲ್ಲವರಾಗಿದ್ದಾರೆ. ಇವರಿಗೆ ಸಮಗ್ರ ಬದುಕು ಮುಖ್ಯ. ತಮ್ಮ ಸಮಕಾಲೀನ ವಾಸ್ತವತೆಗೆ ಒಡ್ಡಿಕೊಂಡ ಬೇಂದ್ರೆ, ಕುವೆಂಪು, ಪು.ತಿ.ನ ಇಂಥ ಮಧುರಚೆನ್ನರ ಓರಗೆಯ ಕವಿಗಳು ಕರ್ನಾಟಕದ ಹಾಗೂ ಭಾರತೀಯ ಬದುಕಿನ ಪರಿವರ್ತನೆಗಳಿಗೆ, ವಿವಿಧ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಸ್ಪಂದನಗಳಿಗೆ ಮುಖವಾಣಿಯಾದವರು. ನವೋದಯ ಸಾಹಿತ್ಯದ ಸೀಮಾರೇಖೆಗಳನ್ನು ತಮ್ಮ ಬಹುಮುಖ ಪ್ರತಿಭೆಯಿಂದ ವಿಸ್ತರಿಸಿದವರು. ಈ ಮೂವರಲ್ಲೂ ಆಧ್ಯಾತ್ಮಿಕವಾದ ಅನುಭಾವಿಕವಾದ ತುಡಿತಗಳೂ, ಹೊಳಹುಗಳೂ ಕಾಣಿಸಿಕೊಂಡರೂ ಅದೊಂದೇ ಅವರ ಕೇಂದ್ರಕಾಳಜಿಯಾಗಿರಲಿಲ್ಲ.[1] ಈ ಹಿನ್ನೆಲೆಯಿಂದ ನೋಡಿದರೆ, ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಯೋಗಸಾಧನೆಯ ಕವನಮಾರ್ಗವನ್ನು ತಮ್ಮ ಬದುಕಿನ  ಕೇಂದ್ರವನ್ನಾಗಿ ಮಾಡಿಕೊಂಡು ನಿಜವಾದ ಅರ್ಥದಲ್ಲಿ ‘ಅನುಭಾವ ಕವಿ’ ಎಂದು ಕರೆಯಿಸಿಕೊಳ್ಳಲು ಅರ್ಹರಾದವರು ಮಧುರಚೆನ್ನರೊಬ್ಬರೇ ಎಂದು ಹೇಳಬಹುದು.

ಮಧುರಚೆನ್ನರ ಹಿಂದೆ ಇರುವ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಿವಿಧ ಧರ್ಮಕ್ಕೆ ಸೇರಿದ ಕವಿಗಳ ಕೃತಿಗಳಿವೆ. ಆಯಾ ಕೃತಿಗಳಲ್ಲಿ ಆಂಶಿಕವಾಗಿ ‘ಅನುಭಾವ’ ದ ಹೊಳಹುಗಳಿವೆ ಎಂಬುದು ನಿಜವಾದರೂ, ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭುವಿನಲ್ಲಿ ಪ್ರಖರವಾಗಿ ಎರಡು ನೆಲೆಗಳಲ್ಲಿ ಕಾಣಿಸಿಕೊಳ್ಳುವ,[2] ಹರಿದಾಸರ ಕೀರ್ತನೆಗಳಲ್ಲಿ ಕ್ವಚಿತ್ತಾಗಿ ಮಿಂಚುವ, ರತ್ನಾಕರವರ್ಣಿಗೆ ಮನೋಗೋಚರವಾಗುವ, ಹತ್ತೊಂಬತ್ತನೆಯ ಶತಮಾನದ ಕೆಲವು ಸಂತರಲ್ಲಿ ಹಾಗೂ ತತ್ವಪದಕಾರರಲ್ಲಿ ಅಭಿವ್ಯಕ್ತವಾಗುವ ಅನುಭಾವದ ಮೂಲ ಸೆಲೆಗಳ ಅಮೂರ್ತ ಯೌಗಿಕ ಜಗತ್ತನ್ನು, ಅದುವರೆಗಿನ ಅದರ ಮತ ಧಾರ್ಮಿಕ ಸಂಸರ್ಗದಿಂದ ಬಿಡಿಸಿ, ಗದ್ಯ, ಪದ್ಯ ರೂಪಗಳಲ್ಲಿ ಮಧುರಚೆನ್ನರು ಮೂರ್ತಗೊಳಿಸಿರುವ ಕ್ರಮ ‘ಸಾಹಿತ್ಯ’ವೂ ಆಗಿದೆ ಎನ್ನುವುದು ಹರ್ಷದಾಯಕವಾಗಿದೆ.

ಮಧುರಚೆನ್ನರ ಶತಮಾನೋತ್ಸವವು ಬಾಗಲಕೋಟೆಯಲ್ಲಿ ಏರ್ಪಟ್ಟಿರುವುದು ತುಂಬ ಅರ್ಥಪೂರ್ಣವಾದ ಸಂಗತಿಯಾಗಿದೆ. ಯಾಕೆಂದರೆ ಅವರ ಮೂಲಸ್ಥಳವಾದ ಹಲಸಂಗಿಯನ್ನು ಒಳಗೊಳ್ಳುವ ಬಿಜಾಪುರದ ಪರಿಸರಕ್ಕೆ ಈ ಬಾಗಲಕೋಟೆ ಸೇರಿದೆ ಎಂಬ ಕಾರಣದಿಂದ ಮಾತ್ರವಲ್ಲ, ಮಧುರಚೆನ್ನರ ಅನುಭಾವ ಜೀವನದಲ್ಲಿ ಮೊದಲ ಸಾಕ್ಷಾತ್ಕಾರದ ಹೊಳಹುಗಳು ಅವರಿಗೆ ಕಾಣಿಸಿಕೊಂಡದ್ದು ಈ ಊರಿನಲ್ಲೇ. ಅವರು ತಮ್ಮ ಅನಾರೋಗ್ಯದ ಕಾರಣದಿಂದ ಬಾಗಿಲುಕೋಟೆಯ ಆರೋಗ್ಯಧಾಮದಲ್ಲಿ ಕೆಲವು ಕಾಲ ಇರಬೇಕಾಗಿ ಬಂದ ಸಂದರ್ಭದಲ್ಲಿ, ಅವರ ಹನ್ನೆರಡನೆಯ ವಯಸ್ಸಿಗೆ ಅವರೊಳಗೆ ಹೊತ್ತಿಕೊಂಡ ಅಧ್ಯಾತ್ಮದ ಕಿಚ್ಚು, ಉದ್ದಕ್ಕೂ ಕಾತರದ ಹಾಗೂ ಅನ್ವೇಷಣೆಯ ಉರಿಯಾಗಿ,  ಅವರ ಇಪ್ಪತ್ತಾರನೆಯ ವಯಸ್ಸಿನ ವೇಳೆಗೆ ಮೊದಲ ಸಾಕ್ಷಾತ್ಕಾರದ ಕಿರಣಗಳ ಸ್ಪರ್ಶವಾಗಿ ಅವರ ಅನುಭವಕ್ಕೆ ಬಂದದ್ದು ಈ ಊರಿನಲ್ಲಿಯೇ. ಈ ಕುರಿತು ತಮ್ಮ ‘ನನ್ನ ನಲ್ಲ’ದಲ್ಲಿ :

‘ತಂದೆ ನೀ ಕಣ್ತೆರೆದರಂದಿಗರುಣೋದಯವು
ಮುಂದೆ ಸೂರ್ಯೋದಯದ ಚಿಂತೆಯಿಲ್ಲ
ಹಿಂದೆ ಕತ್ತಲೆಯಲ್ಲಿ ಕಂಗೆಟ್ಟು ಕೊರಗಿದೆನು
ಇಂದೊಳಗು ಹೊರಗು ಬೆಳಗಾಯಿತಲ್ಲ.
ಈಸುದಿನ ಕಂಡಿದ್ದೆ ಬಾಗಿಲಿಲ್ಲದ ಕೋಟೆ
ಇಂದು ಬಾಗಿಲುಕೋಟೆಯಾಯಿತಲ್ಲ
ಈಸೀಸಿ ದಣಿದಣಿದು ಕೊನೆಗೆ ದಂಡೆಯ ಕಂಡೆ
ಇಂತು ದೇವನ ರಾಜ್ಯ ಲಭಿಸಿತಲ್ಲ     (೮೧-೮೨)’

ಎಂದು ತಮ್ಮಅಂತರನುಭವದ ಸ್ವರೂಪವನ್ನು ತೋಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರು ಅನಂತರ ಬರೆದುಕೊಂಡ ‘ಆತ್ಮಶೋಧ’ವೆಂಬ ಗದ್ಯಕಥನದಲ್ಲಿ ಈ ಅನುಭವವನ್ನು ‘ಬ್ರಹ್ಮಸಂಸ್ಪರ್ಶ’ ಅಥವಾ ವಿಶ್ವಪ್ರಜ್ಞೆಯೊಂದಿಗೆ ಸಾಧಕನು ಪಡೆಯುವ ಸಂಪರ್ಕದ ಅನುಭವ ಎಂದು ವಿವರಿಸಿದ್ದಾರೆ. ಈ ಅನುಭವವಾದದ್ದು ಅವರ ಇಪ್ಪತ್ತಾರನೆಯ ವಯಸ್ಸಿನಲ್ಲಿ; ನಿಖರವಾಗಿ ಹೇಳಬೇಕೆಂದರೆ, ಡಿಸೆಂಬರ್ ೪, ೧೯೨೯ರಂದು, ಬಾಗಿಲುಕೋಟೆಯ ಆರೋಗ್ಯಧಾಮದಲ್ಲಿ ಇದ್ದ ಸಂದರ್ಭದಲ್ಲಿ. ಈ ಹಿನ್ನೆಲೆಯಿಂದ ಹೇಳುವುದಾದರೆ ಅವರ ಜೀವಿತ ಕಾಲದಲ್ಲಿ ಹಲಸಂಗಿ, ಬಿಜಾಪುರ, ಬಾಗಿಲಕೋಟೆಯ ಪರಿಸರಗಳು ಸಾಹಿತ್ಯಕವಾಗಿ ಹಾಗೂ ಸಾಂಸ್ಕೃತಿಕವಾಗಿ ಮಧುರಚೆನ್ನರ ಕ್ರಿಯಾಶೀಲತೆಯಿಂದ ಎಚ್ಚರಗೊಂಡ ಸ್ಥಳಗಳೂ ಹೌದು. ಅದರಲ್ಲಿಯೂ ಈ ಹೊತ್ತಿನಂತೆ ಸುಗಮ ಸಂಚಾರ ಸಾಧನಗಳಿಲ್ಲದ ಆ ಕಾಲದಲ್ಲಿ, ಹಲಸಂಗಿಯಂಥ ಸಣ್ಣ ಗ್ರಾಮವೊಂದನ್ನು ಕರ್ನಾಟಕದ ಸಾಂಸ್ಕೃತಿಕ ಭೂಪಟದಲ್ಲಿ ಚಿರಸ್ಮರಣೀಯವಾಗುವಂತೆ ಅಂಕಿತಗೊಳಿಸಿದವರು ಮಧುರಚೆನ್ನರು. ಕೇವಲ ಮುಲ್ಕಿ ಪರೀಕ್ಷೆಯಷ್ಟನ್ನೇ ಮಾಡಿಕೊಂಡ ಮಧುರಚೆನ್ನರು ಸ್ವಯಂ ಅಧ್ಯಯನದಿಂದ ಮೈಗೂಡಿಸಿಕೊಂಡ ತಿಳಿವಿನ ವಿಸ್ತಾರ ಆಶ್ಚರ್ಯಕರವಾಗಿದೆ. ವೇದೋಪನಿಷತ್ತುಗಳನ್ನು, ಭಾರತೀಯ ಹಾಗೂ ಪಾಶ್ಚಿಮಾತ್ಯ ತತ್ವಜ್ಞಾನವನ್ನು ಹಾಗೂ ಶ್ರೀ ಅರವಿಂದರ ತತ್ವಜ್ಞಾನವನ್ನು, ಮೂಲದಲ್ಲಿಯೇ ಓದಿ ಕರಗತ ಮಾಡಿಕೊಳ್ಳುವಷ್ಟರ ಮಟ್ಟಿಗೆ ಇಂಗ್ಲಿಷ್ ಭಾಷೆಯಲ್ಲಿ ಅವರು ಪರಿಣತಿಯನ್ನು ಪಡೆದುಕೊಂಡದ್ದಲ್ಲದೆ, ಇಪ್ಪತ್ತಕ್ಕೂ ಹೆಚ್ಚು ಭಾಷೆಗಳನ್ನು ಸ್ವಂತ ಪರಿಶ್ರಮದಿಂದ ಕಲಿತರು ಎನ್ನುವುದು ಅವರ ಅಂತಃಸತ್ವಕ್ಕೆ ಸಾಕ್ಷಿಯಾಗಿದೆ. ಸಂಶೋಧನೆ, ಅನುವಾದ ಹಾಗೂ ಶಾಸನಗಳ ಬಗೆಗೂ ಅವರಿಗೆ ಇದ್ದ ಆಸಕ್ತಿ ಗಣನೀಯವಾದದ್ದು. ಸಾಮಾನ್ಯ ಗ್ರಾಮೀಣ ಕೃಷಿಕ ವೃತ್ತಿಯನ್ನು ಅವಲಂಬಿಸಿದ ಮಧುರಚೆನ್ನರು, ತಮ್ಮ ಅಂತರಂಗದ ಕೃಷಿಕರಾಗಿಯೂ ತೆಗೆದ ಬೆಳೆ ಆಶ್ಚರ್ಯಕರವಾಗಿದೆ. ಭಕ್ತಕವಿ ಹರಿಹರನು ‘ಇಳೆಯಾಂಡ ಗುಡಿಮಾರ’ನೆಂಬ ಶಿವಭಕ್ತ ಕೃಷಿಕನನ್ನು ಕುರಿತು ‘ಇಂತೊಳಗೆ ಭವನ ಭಕ್ತ್ಯಾರಂಭವಂ ಮಾಳ್ಪ| ಅಂತೆಲ್ಲರರಿಯೆ ಹೊರಗಾರಂಬವಂ ಮಾಳ್ಪ|’ ಎಂದು ಹೇಳುವ ಈ ಉಕ್ತಿಯನ್ನು ಮಧುರಚೆನ್ನರ ವ್ಯಕ್ತಿತ್ವಕ್ಕೆ ಯಥೋಚಿತವಾಗಿ ಅನ್ವಯಿಸಬಹುದು. ಮೂಲತಃ ಚೆನ್ನಮಲ್ಲಿಕಾರ್ಜುನ- ನಿಗೊಲಿದ ಅಕ್ಕಮಹಾದೇವಿಯ ಮಧುರಭಾವದ ಉತ್ಕಟತೆಯನ್ನು ತಮ್ಮ ವ್ಯಕ್ತಿತ್ವದ ಮಾದರಿಯನ್ನಾಗಿ ಮಾಡಿಕೊಂಡ ‘ಮಧುರಚೆನ್ನ’ರು ಹಲಸಂಗಿಯ ಕೇಂದ್ರದಲ್ಲಿ ಹುಟ್ಟಿಸಿದ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಮತ್ತು ಅನುಭಾವಿಕ ಎಚ್ಚರವೂ ಅನನ್ಯವಾದದ್ದು. ಅವರ ಸಮಕಾಲೀನರಾದ ಹಲವು ಮಹತ್ವದ ಸಾಹಿತಿಗಳು, ಮಧುರಚೆನ್ನರು ಹಲಸಂಗಿಯಲ್ಲಿ ಏರ್ಪಡಿಸುತ್ತಿದ್ದ ಸಾಹಿತ್ಯ ಕಾರ್ಯಕ್ರಮಗಳಿಗೆ ಬಂದು ಹೋಗುತ್ತಿದ್ದರೆಬುದೂ, ವರಕವಿ ಬೇಂದ್ರೆಯವರಿಗೂ, ಮಧುರಚೆನ್ನರಿಗೂ ಹಲಸಂಗಿಯ ನೆಲದಲ್ಲಿ ನಡೆದ ‘ಸುಖ್ಯಯೋಗ’ದ ಸಂಭ್ರಮದ ಸಂಗತಿಗಳೂ ಈಗ ಹೊಸಗನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮರೆಯಲಾರದ ನೆನಪುಗಳಾಗಿವೆ. ಸ್ವಾರಸ್ಯದ ಸಂಗತಿ ಎಂದರೆ, ಅಂದು ಮಧುರಚೆನ್ನರು ಹುಟ್ಟಿಸಿದ ಈ ಸಾಂಸ್ಕೃತಿಕ ಎಚ್ಚರದ ಪ್ರಭಾವ ಹಲಸಂಗಿಯಲ್ಲಿ ಈ ಹೊತ್ತಿಗೂ ಮುಂದುವರಿದಿದೆ.

ಕನ್ನಡದ ‘ನವೋದಯ ಸಾಹಿತ್ಯ’ವನ್ನು ಕುರಿತು ಮಾತನಾಡುವಾಗ, ಸಾಹಿತ್ಯ ಚರಿತ್ರಕಾರರು ಮುಖ್ಯವಾಗಿ ಮೂರು ಕೇಂದ್ರಗಳನ್ನು ಗುರುತಿಸುತ್ತಾರೆ. ಒಂದು ಆಚಾರ್ಯ ಬಿ.ಎಂ.ಶ್ರೀಯವರ ಮೈಸೂರು ಕೇಂದ್ರ: ಮಾಸ್ತಿ, ಡಿ.ವಿ.ಜಿ., ಕುವೆಂಪು, ಪು.ತಿ.ನ., ಕೆ.ಎಸ್.ನ- ಇವರು ಈ ಕೇಂದ್ರದ ಮುಖ್ಯ ಸಾಹಿತಿಗಳು. ಎರಡನೆಯದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕೇಂದ್ರ; ಗೋವಿಂದ ಪೈ, ಪಂಜೆ, ಕಡೆಂಗೋಂಡ್ಲ ಶಂಕರಭಟ್ಟ ಇಂಥವರು ಈ ಕೇಂದ್ರದ ಮುಖ್ಯ ಕವಿಗಳು. ಮೂರನೆಯದು, ಬೇಂದ್ರೆಯವರ ಗೆಳೆಯರ ಗುಂಪಿನ ಗೋಕಾಕ, ಮುಗಳಿ, ಆನಂದಕಂದ, ಸಾಲಿ ರಾಮಚಂದ್ರರಾಯರು ಇವರನ್ನೊಳಗೊಂಡ ಧಾರವಾಡದ ಕೇಂದ್ರ. ಇವುಗಳ ಜತೆಗೆ ಮಧುರಚೆನ್ನರ ಗೆಳೆಯರ ಬಳಗದ ಸಿಂಪಿ ಲಿಂಗಣ್ಣ, ಕಾಪಸೆ ರೇವಣ್ಣ ಇವರನ್ನು ಒಳಗೊಂಡ ಹಲಸಂಗಿಯನ್ನೂ ನವೋದಯದ ನಾಲ್ಕನೆಯ ಕೇಂದ್ರವೆಂದು ಪರಿಗಣಿಸುವುದು ಅಗತ್ಯವಾಗಿದೆ. ಬೇಂದ್ರೆಯವರು ಮಧುರಚೆನ್ನರ ಅತ್ಯಂತ ಆಪ್ತ ಗೆಳೆಯರಾಗಿದ್ದುದರಿಂದಲೋ ಬೇಂದ್ರೆಯವರ ಗೆಳೆಯರ ಗುಂಪಿನ ಒಂದು ವಿಸ್ತರಣೆಯೋ, ಶಾಖೆಯೋ ಆಗಿ ಹಲಸಂಗಿಯ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ ಎಂಬ ಸ್ಥೂಲವಾದ ಗ್ರಹಿಕೆಯಿಂದಲೋ ಸಾಹಿತ್ಯ ಚರಿತ್ರಕಾರರು ಮಧುರಚೆನ್ನರ ಕೇಂದ್ರವಾದ ಹಲಸಂಗಿಯ ಸಾಹಿತ್ಯಕ ನಿಲುವುಗಳ ಹಾಗೂ ಸಾಧನೆಗಳ ವೈಶಿಷ್ಟ್ಯವನ್ನು ಅಷ್ಟಾಗಿ ಗಣನೆಗೆ ತೆಗೆದುಕೊಂಡಂತೆ ತೋರುವುದಿಲ್ಲ. ಕನ್ನಡದ ನವೋದಯದ ನಾಲ್ಕನೆಯ ಕೇಂದ್ರವಾದ ಹಲಸಂಗಿ ಗೆಳೆಯರ ವಿಶೇಷತೆಯೇನೆಂದರೆ, ಕನ್ನಡ ನವೋದಯಕ್ಕೆ ಅನುಭಾವ ಕಾವ್ಯದ ಧಾರೆಯೊಂದನ್ನು ಸೇರಿಸಿದ್ದಲ್ಲದೆ, ಜಾನಪದವನ್ನು ಕುರಿತ ಮೊದಲ ಕೆಲಸವನ್ನು ಪ್ರಾರಂಭಿಸುವುದರ ಮೂಲಕ[3] ಕರ್ನಾಟಕದಲ್ಲಿ ಅನಂತರ ನಡೆದ ಜಾನಪದ ಅಧ್ಯಯನದ ಒಂದು ಪರಂಪರೆಯ ಪ್ರೇರಣೆಯಾದದ್ದು[4] ಈ ಕೇಂದ್ರದಿಂದಲೇ. ನವೋದಯ ಕಾವ್ಯದ ಬಹುಮುಖತ್ವದ ಪರಿಗಣನೆಯಲ್ಲಿ ಈ ಸಂಗತಿಯನ್ನು ನಿರ್ಲಕ್ಷಿಸಬಾರದು.

ಜಾನಪದ ಪ್ರಭಾವ ಮತ್ತು ಅದರ ಅಧ್ಯಯನ ಒಂದು ಪರಂಪರೆಯಾದಂತೆ, ಹಲಸಂಗಿಯ ಕೇಂದ್ರದ ನಿಜವಾದ ಅನುಭಾವ ಕವಿಯಾದ ಮಧುರಚೆನ್ನರ ಕಾವ್ಯ ಒಂದು ಪರಂಪರೆಯಾಗಿ ಮುಂದುವರಿಯಿತೆ ಎಂದು ಕೇಳಿದರೆ, ಅದಕ್ಕೆ ಉತ್ತರವನ್ನು ಹೇಳುವುದು ಕಷ್ಟ. ಯಾಕೆಂದರೆ, ನವೋದಯದ ಇನ್ನಿತರ ಮಹತ್ವದ ಕವಿಗಳಲ್ಲಿ  ಅನುಭಾವ ಎನ್ನುವುದು, ಅವರವರ ಕಾವ್ಯದ ಹಲವು ಮುಖಗಳಲ್ಲಿ ಒಂದಾಗಿದ್ದರೆ, ಮಧುರಚೆನ್ನರಲ್ಲಿ ಎಲ್ಲವೂ ಅದೇ ಆಗಿದೆ. ಅದು ಅವರ ಕಾವ್ಯದ ಮೊದಲೂ ಹೌದು, ತುದಿಯೂ ಹೌದು, ಅಷ್ಟೇ ಅಲ್ಲ, ಅದು ಮೂಲತಃ ಸಾಧಕನಾದ ಹಾಗೂ ಆತ್ಮ ಶೋಧಕನಾದ ವ್ಯಕ್ತಿತ್ವವೊಂದರ ಅಧ್ಯಾತ್ಮಿಕ ಪ್ರಯಾಣದ ಅಂತರನುಭವಗಳ ಸ್ವಗತಲಹರಿಯಾಗಿದೆಯೇ ಹೊರತು, ಸಾಹಿತ್ಯ  ನಿರ್ಮಿತಿಯ ಉದ್ದೇಶ ಅಥವಾ ತುರ್ತಿನಿಂದ ರಚಿತವಾದದ್ದಲ್ಲ. ಆದ ಕಾರಣವೇ ಅದು ‘ಈ ಜನ್ಮದಲ್ಲಿ ಪರಮಾತ್ಮನ ಪ್ರತ್ಯಕ್ಷ ಅನುಭವವನ್ನು ಪಡೆಯುವುದಕ್ಕಿಂತ ಹೆಚ್ಚಿನದೇನೂ ಇಲ್ಲ’ ಎಂಬ ಎಚ್ಚರವೊಂದರ ಹಾದಿಯಲ್ಲಿ ಹೊರಟ ಪಯಣಿಗನ ಹಂಬಲ, ವ್ಯಾಕುಲ, ಸಂಘರ್ಷ, ಸತ್ಯದ ಸಕೃದ್ದರ್ಶನದಿಂದ ಒದಗುವ ಸಂಭ್ರಮ, ತದನಂತರ ಥಟ್ಟನೆ ಕವಿದುಕೊಳ್ಳುವ ‘ಕಾಳರಾತ್ರಿ’ಯ ತಲ್ಲಣಗಳು ಮತ್ತು ಮುಂದಿನರುಣೋದಯದ ಬೆಳಕಿನ ಆನಂದ ಇತ್ಯಾದಿಗಳ ಕಥನ ಮಾತ್ರವಾಗುತ್ತದೆಯೇ ಹೊರತು, ಸಾಮಾಜಿಕ ಪ್ರಜ್ಞೆ, ವಾಸ್ತವಿಕತೆ, ರಾಷ್ಟ್ರೀಯತೆ, ನಿಸರ್ಗ ಸೌಂದರ್ಯನಿಷ್ಠೆಯಂತಹ ಸಾಹಿತ್ಯಕ ಕಾಳಜಿಗಳು ಮುಖ್ಯವಾಗುವುದಿಲ್ಲ. ಹಾಗೆ ಅವು ಮುಖ್ಯವಾಗುವುದಿಲ್ಲ ಎಂಬುದನ್ನು ಅವರ ಕಾವ್ಯ ಸಾಮರ್ಥ್ಯದ ಅಥವಾ ಸಂವೇದನೆಯ ಕೊರತೆ ಎಂದೇನೂ ತಿಳಿಯಬೇಕಾಗಿಲ್ಲ. ಯಾಕೆಂದರೆ ಯಾವ ಚೇತನಕ್ಕೆ ಈ ಎಚ್ಚರದೊಳಗೊಂದು ಹೊಸ ಎಚ್ಚರ ಹುಟ್ಟಿ, ಆ ಎಚ್ಚರದ ಮೂಲವನ್ನು ಅರಿಯುವ ಹಾಗೂ ಅದರೊಂದಿಗೆ ಬೆರೆಯುವ ಅನುಭಾವದ ಹಂಬಲವೊಂದೇ ಹಾಸಲುಂಟು ಹೊದೆಯಲುಂಟು ಎಂಬ ಉತ್ಕಟವಾದ ಅವಸ್ಥಾ ವಿಶೇಷವಾಗುತ್ತದೋ, ಅದಕ್ಕೆ ತಾನುಂಟು  ತನ್ನ ದೈವ ಉಂಟು ಎಂಬುದರ ಹೊರತು ಮತ್ತಾವುದೂ ಬೇಕಾಗುವುದಿಲ್ಲ. ಹಾಗೆ ನೋಡಿದರೆ ಮಧುರಚೆನ್ನರು ಸರ್ವಸಂಗ ಪರಿತ್ಯಾಗಿಯಾದ ಸನ್ಯಾಸಿಯೇನು ಅಲ್ಲ; ಅವರು ಸಂಸಾರಿಯಾದ ಹಾಗೂ ಬಹುಮಂದಿ ಮಕ್ಕಳ ತಂದೆಯಾದ ಸದ್‌ಗೃಹಸ್ಥರು. ಒಬ್ಬ ಕೃಷಿಕ ಹಾಗೂ ತಮ್ಮ ಸಾಮಾಜಿಕ ಸಂದರ್ಭದ ಸಾಹಿತಿ, ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳ ಸಂಘಟಕರೂ ಕೂಡ. ಈ ಹಲವು ಹಂತಗಳಲ್ಲಿ ಏಕಕಾಲಕ್ಕೆ ಅವರು ತಮ್ಮನ್ನು ತೊಡಗಿಸಿಕೊಂಡರೆಂಬುದನ್ನು ನಾವು ಗುರುತಿಸಬಹುದಾದರೂ, ಅವುಗಳೆಲ್ಲದರ ಹಿಂದೆ ಸ್ಥಾಯಿಯಾಗಿ ಮತ್ತು ನಿರಂತರವಾಗಿ ಇರುವುದು ಮಧುರಚೆನ್ನರ ಅನುಭಾವೀ ವ್ಯಕ್ತಿತ್ವವೇ. ಈ ಅನುಭಾವಪರವಾದ ಆತ್ಮಶೋಧನೆಯು ಪೂರ್ವರಂಗ, ಕಾಳರಾತ್ರಿ ಮತ್ತು ಬೆಳಗು ಎಂಬ ಮೂರು ಹಂತಗಳ ಮೂಲಕ ಪ್ರಯಾಣಿಸುವ ಪರಿಯನ್ನು ಅವರ ‘ನನ್ನ ನಲ್ಲ’ ಅತ್ಯಂತ ಉತ್ಕಟವಾಗಿ ಮತ್ತು ಉಜ್ವಲವಾಗಿ ಹರಳುಗೊಳಿಸಿ ಅಭಿವ್ಯಕ್ತಿಸಿದರೆ, ಇದಕ್ಕೆ ಬರೆದ ಭಾಷ್ಯವೋ ಎಂಬಂತಿರುವ ಅವರ ‘ಆತ್ಮಶೋಧ’ವೆಂಬ ಆತ್ಮ ಕಥನವು ಅವರ ಅನುಭಾವ ಜೀವನದ ಹುಡುಕಾಟಗಳನ್ನೂ ತಲ್ಲಣಗಳನ್ನು ಲೋಕ ಜೀವನದೊಂದಿಗೆ ತಮ್ಮಅನುಭಾವಿಕ ವ್ಯಕ್ತಿತ್ವವು ಮುಖಾಮುಖಿಯಾದ ಸಂದರ್ಭದ ಸಂಘರ್ಷಗಳನ್ನೂ, ತಮ್ಮ ಅಂತರನುಭವಗಳು ಜಗತ್ತಿನ ವಿವಿಧ ದೇಶಗಳ ಅನುಭಾವಿಗಳ ಅವಸ್ಥೆಗಳೊಂದಿಗೆ ತಾಳೆಯಾಗುವ ವಿಸ್ಮಯಗಳನ್ನು ವಿಸ್ತಾರವಾದ ಅನುಭಾವ ಸಾಹಿತ್ಯದ ಅಧ್ಯಯನದ ಮೂಲಕ ಕಂಡುಕೊಳ್ಳುತ್ತ ಹಾಗೂ ತಮ್ಮ ಅನುಭವಗಳನ್ನು ಆ ಮೂಲಕ ಪ್ರಮಾಣೀಕರಿಸಿಕೊಳ್ಳುತ್ತ, ತಮ್ಮ ಶ್ರದ್ಧೆಯನ್ನು ಗಟ್ಟಿಸಿಗೊಳಿಸುತ್ತ ಮುನ್ನಡೆದ ವಿವರಗಳನ್ನು ಪದರ ಪದರಗಳಾಗಿ ಚಿತ್ರಿಸುತ್ತದೆ. ಸ್ವಾನುಭವದ ಕಥನದ ನಿರೂಪಕ ತನ್ನನ್ನು ಜ್ಞಾನಭಿಕ್ಷು ಎಂದು ಕರೆದುಕೊಂಡು, ಅಹಂ ನಿರಸನದ ನೆಲೆಯಲ್ಲಿ ತನ್ನನ್ನು ನಿಲ್ಲಿಸಿಕೊಂಡು ಮಾತನಾಡುವ ಕ್ರಮ ವಿಶೇಷ ರೀತಿಯದಾಗಿದೆ. ಈ ಬರೆಹವನ್ನು ಕುರಿತು ಕವಿ ದ.ರಾ.ಬೇಂದ್ರೆಯವರು ಹೇಳುತ್ತಾರೆ: ‘ಕರ್ನಾಟಕದೊಳಗಿನ ಅಧ್ಯಾತ್ಮ ವಸಂತ ಸಮಯವನ್ನು ಸೂಚಿಸುವ ಕುಕಿಲು ಚಿಗುರು ಇವರ ಬರಹ’.

ಅನುಭಾವ ಎಂಬುದು ಒಂದು ಹಂತದಲ್ಲಿ ಧಾರ್ಮಿಕ ವಲಯದೊಂದಿಗೆ ಸಂಬಂಧಿಸಿದ್ದಾದರೂ, ಅದು ಯಾವುದೇ ಒಂದು ಧರ್ಮದ ಭಾಗವಾಗಿರಬೇಕಾಗಿಲ್ಲ. ಅದು ಧಾರ್ಮಿಕ ಮತ್ತು ಧಾರ್ಮಿಕೇತರ ಎಂಬ ಎರಡೂ ನೆಲೆಗಳಲ್ಲಿ ಅಭಿವ್ಯಕ್ತವಾಗಬಹುದು. ಧಾರ್ಮಿಕ ವಲಯಗಳಲ್ಲಿ ಅನುಭಾವ ಎರಡು ರೀತಿ ಪ್ರಕಟವಾಗಬಹುದು. ಒಂದು, ತಾನು ಒಪ್ಪಿಕೊಂಡ ಧರ್ಮದ ಚೌಕಟ್ಟಿನ ಇಷ್ಟದೈವದ ಕಲ್ಪನೆಯ ಮೂಲಕವೇ ಅವರ ಅನುಭಾವ ಅವರವರ ಇಷ್ಟದೈವ ಸಾಕ್ಷಾತ್ಕಾರದ ‘ಸಾಕಾರ’ದ ದರ್ಶನದ ವರ್ಣನೆಯ ಮೂಲಕ ಅಭಿವ್ಯಕ್ತವಾಗಬಹುದು. ಇದು ಮುಖ್ಯವಾಗಿ ಭಕ್ತಿಪಂಥದವರ ಅಥವಾ ಭಕ್ತಸ್ಥಲದ ಮೂಲಕ ಮುಂದುವರಿಯುವವರ ಅನುಭಾವ. ಹರಿದಾಸರಲ್ಲಿ, ಅಕ್ಕಮಹಾದೇವಿ, ಮೀರಾ ಇಂಥವರಲ್ಲಿ ಅವರವರ ಇಷ್ಟದೈವಗಳ ಸಾಕಾರ ಸಾಕ್ಷಾತ್ಕಾರಗಳ ಮೂಲಕ ಮೈದೋರುವುದು ‘ಧಾರ್ಮಿಕ ಅನುಭಾವ’. ಎರಡನೆಯದು ಈ ಧಾರ್ಮಿಕ ಅನುಭಾವ ತನ್ನ ಇಷ್ಟದೈವದ ಸೌಕಾರ ದರ್ಶನದ ಆನಂದದ ನೆಲೆಯನ್ನು ತಲುಪಿದರೂ ಆ ಆಕಾರದ ಮೂಲಕವಾಗಿಯೇ ನಿರಾಕಾರ ಸ್ವರೂಪದ ಅನುಭಾವವನ್ನು ತಲುಪಬಹುದು. ನಿದರ್ಶನಕ್ಕೆ ಶ್ರೀ ರಾಮಕೃಷ್ಣ ಪರಮಮಹಂಸರ, ಅಲ್ಲ ಮಪ್ರಭುಗಳ, ಶಿಶುನಾಳ ಶರೀಫರ ಅನುಭಾವ ಇಂಥದು. ಭಕ್ತನಾದವನ ಅಥವಾ ಭಕ್ತಿಮಾರ್ಗದ ‘ಧಾರ್ಮಿಕ’ ಅನುಭಾವಕ್ಕೂ ಅದನ್ನೂ ಮೀರಿದ ‘ಧಾರ್ಮಿಕೇತರ’ ಅನುಭಾವಕ್ಕೂ ಇರುವ ವ್ಯತ್ಯಾಸವನ್ನು ನಾವು ಗಮನಕ್ಕೆ ತೆಗೆದುಕೊಳ್ಳುವುದು ಒಳ್ಳೆಯದು. ಅದರಲ್ಲಿಯೂ ಆಧುನಿಕ ಸಾಹಿತ್ಯ ಸಂದರ್ಭದಲ್ಲಿ ಅದು ಅನುಭಾವಿಕ ಪ್ರವೃತ್ತಿಯುಳ್ಳ ಕೆಲವು ಕವಿಗಳಲ್ಲಿ ಮತ ಧರ್ಮದ ಉಪಾಧಿಗಳನ್ನು ಮೀರುವ ಒಂದು ಕ್ರಮವಾಗಿ ಕಾಣಿಸಿಕೊಂಡಿದೆ. ಮಧುರಚೆನ್ನರು ಅವರ ಸಮಕಾಲೀನರಾದ ಉಳಿದೆಲ್ಲ ಕವಿಗಳಿಗಿಂತ ಭಿನ್ನವಾದ ‘ಯೋಗಸಾಧನೆಯ ಕವನಮಾರ್ಗದ’ ಮೀಸಲು ಪಯಣಿಗರಾದ ಕಾರಣ ಪಂಪ ಮತ್ತು ಕುವೆಂಪು ಅವರು ಕನಸು ಕಂಡ ‘ವಿಶ್ವಮಾನವ ಪ್ರಜ್ಞೆ’ಯನ್ನು ತೀರಾ ಸಹಜವಾಗಿಯೇ ಎತ್ತಿಹಿಡಿದರೆಂಬುದು ವಿಶೇಷದ ಸಂಗತಿಯಾಗಿದೆ. ಹೀಗಾಗಿ ಅವರದು ಮತ ಧರ್ಮದ ಹಂಗು ಹರಿದುಕೊಂಡ, ಧಾರ್ಮೀಕೇತರ ಅಥವಾ ಧರ್ಮ ನಿರಪೇಕ್ಷಕ ಅನುಭವವಾಗಿದೆ. ಇದನ್ನು ಬೇರೆಯ ಮಾತುಗಳಲ್ಲಿ ವಿವರಿಸುವುದಾದರೆ ಮಧುರಚೆನ್ನರು ಹುಟ್ಟಿ ಬೆಳೆದದ್ದು ವೀರಶೈವ ಧರ್ಮದಲ್ಲಿ, ಮೈಗೂಡಿಸಿಕೊಂಡದ್ದು ಜಗತ್ತಿನ ಎಲ್ಲ ಧರ್ಮಗಳ ಸಾರವನ್ನು, ಬೆಳೆದದ್ದು ಶ್ರೀ ರಾಮಕೃಷ್ಣ ವಿವೇಕಾನಂದ ರಮಣ ಅರವಿಂದಾದಿಗಳ ದರ್ಶನದ ಬೆಳಕಿನಲ್ಲಿ.

ಒಂದು ಹಂತದಲ್ಲಿ ಮಧುರಚೆನ್ನರು ತಮ್ಮ ಧರ್ಮಚಿಹ್ನವನ್ನು ಕಿತ್ತು ಎಸೆದರು. ಹಾಗೆ ನೋಡಿದರೆ ಇದು ಉಪಾಧಿಗಳನ್ನು ಮೀರುವ ನಿಜವಾದ ಅನಿಕೇತನ ಚಿತ್ತಸ್ಥಿತಿಯ ಲಕ್ಷಣವೂ ಹೌದು. ಮಧುರಚೆನ್ನರ ಈ ನಡವಳಿಕೆಯಿಂದ ಈತ ಮಹಾನಾಸ್ತಿಕನೆಂಬ ಕೂಗು ಎದ್ದಿತು. ಈತನ ವಿಷಯದಲ್ಲಿ ಪ್ರೀತಿ ಅಭಿಮಾನವಿದ್ದ ತರುಣ ಮಠಾಧೀಶರೊಬ್ಬರು ಇವರನ್ನು ತಮ್ಮ ಮಠಕ್ಕೆ ಕರೆಯಿಸಿಕೊಂಡು, ‘ಜನತೆಯಲ್ಲೆಲ್ಲ ಗದ್ದಲವಾಗುವಂಥ ಈ ಕಾರ್ಯವನ್ನೇಕೆ ಮಾಡಿದಿರಿ’ ಎಂದು ಕೇಳಿದರು. ಅದಕ್ಕೆ ಜ್ಞಾನಭಿಕ್ಷುವಾದ ಮಧುರಚೆನ್ನರು ಹೇಳಿದ್ದು ಹೀಗೆ: ‘ನಾನೇನೂ ಧರ್ಮ ಚಿಹ್ನವನ್ನು ಬಿಟ್ಟು ಬಿಡಬೇಕೆಂಬ ಸಿದ್ಧಾಂತಕ್ಕೇನೂ ಬಂದಿಲ್ಲ. ಅದಿಲ್ಲದೆ ಉನ್ನತಿಯೇ ಇಲ್ಲವೆಂದು ತಿಳಿದಿಲ್ಲ. ನನ್ನ ಮಟ್ಟಿಗೆ ಅದೊಂದು ಸಾಮಾಜಿಕ ಚಿಹ್ನವೇ ಹೊರತು ಧಾರ್ಮಿಕವೇನೂ ಅಲ್ಲ… ನನಗೇನೋ ಇಂಥದೊಂದು ಜಾತಿಮತದವನೆಂದು ಹೇಳಿಕೊಳ್ಳುವುದಕ್ಕೆ ಜೀವನದಲ್ಲಿ ಸಮ್ಮತಿಯಿಲ್ಲ. ಸರ್ವಸಮಾನರೆಲ್ಲಾ ಒಂದೇ ಜಾತಿ. ಮನುಷ್ಯ ಜಾತಿಯೆಂಬುದೊಂದೇ ಒಂದು. ಈಗಿರುವ ಸರ್ವದೇಶಗಳ ಜನಾಂಗಗಳ ಧರ್ಮಗ್ರಂಥಗಳ ಸತ್ಯತೆಯು ಸರ್ವರಿಗೆ ವಿದಿತವಾಗಿ, ಇನ್ನು ಮುಂದೆ ಒಂದೇ ಮನೆಯಲ್ಲಿ ಒಬ್ಬೊಬ್ಬರು ತಮ್ಮ ತಮ್ಮ ಅಭಿರುಚಿಯಂತೆ ಬೇರೆ ಬೇರೆ ಯಾವುದಾದರೊಂದರಲ್ಲಿ ಹೇಳಿದ ಪದ್ಧತಿಯಂತೆ ಸಾಧನವನ್ನು ಮಾಡುತ್ತಲಿರುವ ಕಾಲವೊಂದು ಬೇಗನೆ ಬರುವುದರಲ್ಲಿ ನನಗೆ ಎಳ್ಳಷ್ಟೂ ಸಂದೇಹವು ತೋರುವುದಿಲ್ಲ.’[5]

ಮಧುರಚೆನ್ನರ ‘ಆತ್ಮಶೋಧ’ವೆಂಬ ಆತ್ಮಕಥನದೊಳಗಿಂದ ಉಲ್ಲೇಖಿಸಿದ ಈ ಮೇಲಿನ ಪ್ರಸಂಗವು, ನಿಜವಾದ ಅನುಭಾವಿಯ ದೃಷ್ಟಿಯಲ್ಲಿ ಧರ್ಮದ ಹಾಗೂ ವ್ಯಕ್ತಿಯ ಸಂಬಂಧಗಳನ್ನು ಕುರಿತ ತುಂಬ ಸೊಗಸಾದ ವ್ಯಾಖ್ಯಾನವಾಗಿದೆ. ಧರ್ಮ ಹಾಗೂ ಅದಕ್ಕೆ ಸಂಬಂಧಿಸಿದ ಆಚರಣೆಗಳನ್ನು ಕುರಿತು, ನಿಜವಾದ ಧರ್ಮದ ಸ್ವರೂಪವನ್ನು ಕುರಿತು, ವ್ಯಕ್ತಿಗಳ ಧಾರ್ಮಿಕ ಸ್ವಾತಂತ್ರ್ಯವನ್ನು ಕುರಿತು ಆರು ದಶಕಗಳಿಗೂ ಹಿಂದೆ ಮಧುರಚೆನ್ನರು ತಾಳಿದ ಈ ನಿಲುವುಗಳು, ದೇವರು ಹಾಗೂ ಧರ್ಮದ ಹೆಸರಿನಲ್ಲಿ ಪ್ರಚಲಿತವಾಗುತ್ತಿರುವ ತಪ್ಪು ತಿಳಿವಳಿಕೆ ಮತ್ತು ಅಪವ್ಯಾಖ್ಯಾನಗಳ ಗೊಂದಲದಲ್ಲಿ, ಧಾರ್ಮಿಕ ಮೂಲಭೂತವಾದಿಗಳಿಂದ ಮನುಷ್ಯತ್ವವೇ ಚೂರುಚೂರಾಗಿ ಒಡೆದು ಹೋಗುತ್ತಿರುವ ಈ ಹೊತ್ತಿನ ಸಂದರ್ಭದಲ್ಲಿ ಎಷ್ಟೊಂದು ಪ್ರಸ್ತುತವೂ ಮಾರ್ಗದರ್ಶಕವೂ ಆಗಿವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಯಾವುದೂ ಸಣ್ಣದಲ್ಲ : ೨೦೦೪


[1] ಕುವೆಂಪು ಅವರಲ್ಲಿ ‘ದೇವರು ರುಜುಮಾಡಿದನು’ ಎಂಬಂಥ ಕವಿತೆಯಿಂದ ಮೊದಲುಗೊಂಡು, ನಿಸರ್ಗದಲ್ಲಿ ಅವರು ಈ ವಿಶ್ವಚೈತನ್ಯದೊಂದಿಗೆ ನಡೆಯಿಸುವ ಸಂವಾದ ಮತ್ತು ತಾದಾತ್ಮ್ಯದ ಅದ್ವೆ ತಾನುಭವಗಳನ್ನು ವರ್ಣಿಸುವ ಎಷ್ಟೋ ಕವಿತೆಗಳಲ್ಲಿ ‘ಅನುಭಾವಪರತೆ’ಯನ್ನು ಗುರುತಿಸಬಹುದು. ಮೂಲತಃ ಭಾಗವತ ಪರಂಪರೆಯ ಭಕ್ತಿಯ ನೆಲೆಯಲ್ಲಿ ನಿಲ್ಲುವ ಪು.ತಿ.ನ ಅವರ ದೇವಾಲಯ ಕಲ್ಪನೆ ಮತ್ತು ನಿಸರ್ಗದ ನಡುವಣ ಆನಂದಾನುಭೂತಿಗಳಲ್ಲಿ ಅನುಭಾವದ ಸ್ಪರ್ಶವಿದೆ. ಬೇಂದ್ರೆಯವರಂತೂ ಕರ್ನಾಟಕದ ಸಂತಪರಂಪರೆಯೊಂದಿಗೆ ತಮ್ಮನ್ನು ಬೆಸೆದುಕೊಳ್ಳುವ ಮೂಲಕ ಈ ಸಂತರ ಮುಖವಾಣಿಯೂ ಆಗುತ್ತ ಅನೇಕ ಕವಿತೆಗಳಲ್ಲಿ ಎಚ್ಚರದೊಳಗಿನ ಎಚ್ಚರವನ್ನು ಅಭಿವ್ಯಕ್ತಿಸಿದ್ದಾರೆ.

[2] ಅಕ್ಕನಲ್ಲಿ ಕಾಣಿಸಿಕೊಳ್ಳುವ ದೈವಿಕತೆಯ ಅನ್ವೇಷಣೆಯ ಹಾದಿಯ ಉತ್ಕಟವಾದ ತಳಮಳಗಳು ಒಂದು ನೆಲೆಯಾದರೆ, ಅಲ್ಲಮನ ಅನುಭಾವ ಸ್ಥಿತಿಯೊಳಗಿನ ಪ್ರಶಾಂತಿ ಹಾಗೂ ಬೆಳಗು ಇನ್ನೊಂದು ನೆಲೆ.

[3] ಕನ್ನಡದಲ್ಲಿ ಜಾನಪದ ಅಧ್ಯಯನವನ್ನು ಪ್ರಾರಂಭಿಸಿದವರು ಯಾರು ಎಂಬ ಪ್ರಶ್ನೆಗೆ ಕೆಲವರು ಮಾಸ್ತಿಯವರು ಅನ್ನುತ್ತಾರೆ. ಆದರೆ ವಿಜಾಪುರದ ಒಂಬತ್ತನೆಯ ಸಾಹಿತ್ಯ ಸಮ್ಮೇಳನದ (೧೯೨೩) ಸಂದರ್ಭದಲ್ಲಿ ‘ಹಳ್ಳಿಯ ಹಾಡುಗಳು’ ಎಂಬ ಬಗ್ಗೆ ಮಧುರಚೆನ್ನರು ಮಂಡಿಸಿದ ಬರಹ ೧೯೨೪ರ ‘ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ’ಯಲ್ಲಿ ಪ್ರಕಟವಾಗಿದೆ. ಇದರಿಂದಾಗಿ ಜಾನಪದದ ಬಗ್ಗೆ ವಿಚಾರಮಾಡಿದ  ಮೊದಲಿಗರು ಮಧುರಚೆನ್ನರೇ ಅನ್ನುವುದು ಸ್ಪಷ್ಟವಾಗಿದೆ. ೧೯೩೧ರಲ್ಲಿ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ, ಇವರು ಕೂಡಿ ಪ್ರಕಟಿಸಿದ ‘ಗರತಿಯ ಹಾಡು’ ಬಹುಶಃ ಕನ್ನಡದ ಮೊಟ್ಟಮೊದಲ (ಜನಪದ ಹಾಡುಗಳ) ಸಂಗ್ರಹ. ಇದರ ಯಶಸ್ಸು ಮುಖ್ಯವಾಗಿ ಮಧುರಚೆನ್ನರಿಗೇ ಸೇರಬೇಕು. ಈ ಜಾನಪದ ಸಂಗ್ರಹದ ಕಾರ್ಯ ಬೇಂದ್ರೆಯವರ ಕಾವ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿತ್ತು. (ಮಧುರಚೆನ್ನ. ಮಹಾಪ್ರಬಂಧ-೧೯೭೬, ಜಿ.ಎಸ್.ಕಾಪಸೆ, ಪುಟ ೪೯-೫೦)

[4] ಮಧುರಚೆನ್ನರು ಮತ್ತು ಅವರ ಗೆಳೆಯರು ಪ್ರಾರಂಭಿಸಿದ ಜಾನಪದ ಸಂಗ್ರಹ ಹಾಗೂ ಅಧ್ಯಯನ ಕಾರ್ಯ, ಮುಂದೆ ಕರ್ನಾಟಕದಾದ್ಯಂತ ಉತ್ಸಾಹದಿಂದ ನಡೆದು ಈ ಬಗೆಯ ಕೆಲಸಗಳಿಗೆ ಪ್ರೇರಣೆಯಾದದ್ದಲ್ಲದೆ, ಜಾನಪದ ಅಧ್ಯಯನವು ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಸೇರ್ಪಡೆಯಾಗುವುದಕ್ಕೂ ಹಿನ್ನೆಲೆಯಾಗಿದ್ದು, ಈಗ ಜಾನಪದ ಅಧ್ಯಯನ ಬಹುಮುಖವಾಗಿ ಬೆಳೆದಿದೆ.

[5] ‘ಆತ್ಮಶೋಧ’; ಮಧುರಚೆನ್ನ: ಸಂ.ಡಾ. ಗುರುಲಿಂಗ ಕಾಪಸೆ (೧೯೯೮) ಪುಟ ೨-೧-೪-೧೫