ವರ್ಣ , ಅಲಂಕಾರ, ತಾನ್ ಹಾಗೂ ಸ್ವರ ಪ್ರಸ್ತಾರ ಕ್ರಿಯೆಗಳು ಸಂಗೀತ ವಿಸ್ತಾರ ತತ್ವಕ್ಕೆ ಸಂಬಂಧಿಸಿವೆ. ಏಳು ಸ್ವರಗಳ ಆಧಾರದ ಮೇಲೆ ಯಾವ ಪ್ರಕಾರವಾಗಿ ಸಂಗೀತದ ಸೃಷ್ಟಿಯು ಆಗುತ್ತದೆಯೋ ಅದನ್ನು ತಿಳಿಯುವಲ್ಲಿ ಈ ನಾಲ್ಕೂ ಕ್ರಿಯೆಗಳ ಮಹತ್ವವಿದೆ. ಈ ನಾಲ್ಕು ಕ್ರಿಯೆಗಳಲ್ಲಿ ಸ್ವರ ಪ್ರಸ್ತಾರವನ್ನು ಈಗ ವಿಸ್ತೃತ ಗಮನಿಸೋಣ.

ಪ್ರಸ್ತಾರ ಇದು ತಾಲದ ಹತ್ತನೆಯ ಪ್ರಾಣವಾಗಿದೆ. ಪ್ರಸ್ತಾರ ವಿಷಯವು ಶುದ್ಧ ಭಾರತೀಯವಾಗಿದ್ದು, ಬಹಳ ಪ್ರಾಚೀನ ಕಾಲದಿಂದಲೂ, ಅಖಂಡಿತವಾಗಿ, ಪರಂಪರಾಗತವಾಗಿ ಹಾಗೂ ನಿರಂತರವಾಗಿ ನಡೆದು ಬಂದಿದೆ. ಬೇರೆ ಬೇರೆ ಜ್ಞಾನ ಶಾಖೆಗಳಲ್ಲಿ ಪ್ರಸ್ತಾರ ಪ್ರಪಂಚವು ಬೇರೆ ಬೇರೆ ವಿಧದಲ್ಲಿ ಪ್ರಸ್ತುತವಾಗಿದೆ. ಪ್ರಾಚೀನ ಛಂದ : ಶಾಸ್ತ್ರದಲ್ಲಿ ಲಘು ಗುರುಗಳೆಂದೂ, ದರ್ಶನ ಶಾಸ್ತ್ರದಲ್ಲಿ ಪಂಚೀಕರಣವೆಂದೂ, ಸಂಗೀತ ಶಾಸ್ತ್ರದಲ್ಲಿ ಸ್ವರ ಮತ್ತು ತಾಲ ಪ್ರಸ್ತಾರವೆಂದೂ ಸೃಷ್ಟಿಕರಣಗೊಳಿಸಲಾಗಿದೆ.

ಸಂಗೀತದಲ್ಲಿ ವಸ್ತು ನಿಷ್ಠವಾಗಿ ನೋಡಿದಾಗಮ ವಿಸ್ತಾರ ಹೇಗೆ ಮಾಡಬೇಕು ಮತ್ತು ಎಷ್ಟು ಮಾಡಬೇಕು? ತಾನ್ ಹೇಗೆ ರಚಿಸಬೇಕು? ಮತ್ತು ದಾವ ತಾಲದ ಬೋಲ್, ಕಾಯ್ ದೆ, ಪರನ್ ಗಳ ರಚನೆ ಇತ್ಯಾದಿ ವಿಷಯ ಅದರಲ್ಲಿ ಸ್ಪಷ್ಟ ಮತ್ತು ಪೂರ್ಣಕ್ರಿಯಾಕ್ಷಮ್ಯ ಎನಿಸುವ ಭಾಗ್ಯವನ್ನು ಸಾಧನೆಯಿಂದ ಸಿದ್ದಮಾಡಿಕೊಂಡರೆ, ಸಂಗೀತದ ಹೃದಯವೇ ಸಿದ್ಧಿಸಿದಂತಾಗುತ್ತದೆ ಎಂದು ನಿಶ್ಚಯವಾಗಿ ಹೇಳಬಹುದು. ಹೀಗೆ ಒಂದೊಂದು ಘಟಕವನ್ನು ಪ್ರತ್ಯೇಕವಾಗಿ ಅಭ್ಯಸಿಸಿದಾಗ ಎಷ್ಟು ಘಟಕಗಳಾಗುತ್ತವೆಯೋ ಅವುಗಳನ್ನು ಒಂದು ವಿಶಿಷ್ಟ ಕ್ರಮದಿಂದ ಪ್ರಸ್ತುತೀಕರಣ ಮಾಡಬಹುದೇ? ಈ ಪ್ರಸ್ತುತೀಕರಣ ಹೇಗೆ ಅಂದರೆ ಅದರ ವಿಶಿಷ್ಟ ಕ್ರಮ ಹೇಗಿರುತ್ತದೆ? ಆ ಪ್ರಸ್ತುತೀಕರಣದ ಪ್ರತ್ಯೇಕ ಘಟಕದ ಪ್ರತ್ಯೇಕ ಕ್ರಮಾಂಕ ಸಂಖ್ಯೆ ಹೇಳಿದರೆ, ಕ್ರಮಾಂಕದ ಘಟಕ ಸ್ವರೂಪವನ್ನು ನಿಶ್ಚಯಿಸುವುದು, ಇತ್ಯಾದಿ ಪ್ರಶ್ನೆಗಳ ವಿಚಾರವೇ ಪ್ರಸ್ತುತ ಪ್ರಸ್ತಾರದ ವಿಷಯವಾಗಿದೆ. ಉದಾಹರಣೆಗೆ ‘ಸಾರೆಗ’ ಇದು ಮೂರು ಸ್ವರಗಳ ಗುಂಪು. ಇದರಲ್ಲಿ ಸ್ವರಗಳ ಕ್ರಮವನ್ನು ಬದಲಿಸಿ (ಹೆಚ್ಚಿಸಿ ಸ್ವರಗಳನ್ನು ಬಳಸದೇ ಪುನರಾವೃತ್ತಿ ಇಲ್ಲದೆ ಹಾಗೂ ಯಾವುದೇ ಸ್ವರವನ್ನು ಬಿಡದೆ) ಈ ಸಾರೆಗ ಸ್ವರ ಸಮುದಾಯದಲ್ಲಿ ನವೀನ ರೂಪ ಸೃಜಿಸಬೇಕಾಗಿದೆ. ಅದು ಹೇಗೆಂದರೆ ೧) ಸಾರೆಗ ೨) ರೆಸಾಗ ೩) ಸಾಗರೆ ೪) ಗಸಾರೆ ೫) ರೆಗಸಾ ೬) ಗರೆಸಾ ಎಂದು ಆರು ಪ್ರಕಾರಗಳಾಗುತ್ತವೆ. ಈ ಮೂರು ಸ್ವರಗಳಲ್ಲಿ ಇದಕ್ಕಿಂತ ಹೆಚ್ಚಿನ ಪ್ರಸ್ತಾರಗಳು ಸಾಧ್ಯವಿಲ್ಲ. ಈ ರೀತಿ ಸ್ವರಗಳ ಬೇರೆ ಬೇರೆ ಪ್ರಸ್ತಾರಗಳನ್ನು ತಯಾರಿಸಬಹುದಾಗಿದೆ. ಈ ಪ್ರಸ್ತಾರ ಪದ್ಧತಿಯನ್ನು ಕ್ರಮ ಸಂಖ್ಯೆ ಗುಣಿತದ (Permutation and Combination) ಸಿದ್ದಾಂತ ಸಹಾಯದಿಂದ ಸಿದ್ಧಪಡಿಸಬಹುದಾಗಿದೆ.

1 ನೇ ಸ್ವರ ಪ್ರಸ್ತಾರ – 1 x 1 = 01 ಆಗುತ್ತದೆ
2 ನೇ ಸ್ವರ ಪ್ರಸ್ತಾರ 2 x 1 = 02 ಆಗುತ್ತದೆ
3 ನೇ ಸ್ವರ ಪ್ರಸ್ತಾರ 3 x 2 x 1 = 06 ಆಗುತ್ತದೆ
4 ನೇ ಸ್ವರ ಪ್ರಸ್ತಾರ 4 x 3 x 2 x 1 = 24 ಆಗುತ್ತದೆ
5 ನೇ ಸ್ವರ ಪ್ರಸ್ತಾರ 5 x 4 x 3 x 2 x 1 = 120 ಆಗುತ್ತದೆ
6 ನೇ ಸ್ವರ ಪ್ರಸ್ತಾರ 6 x 5 x 4 x 3 x 2 x 1 = 720 ಆಗುತ್ತದೆ
7 ನೇ ಸ್ವರ ಪ್ರಸ್ತಾರ 7 x 6 x 5 x 4 x 3 x 2 x 1 = 5040 ಆಗುತ್ತದೆ

ಇದಲ್ಲದೆ ಪ್ರಸ್ತಾರ ಸಂಖ್ಯೆಯನ್ನು ತಿಳಿಯಲು ಬೀಜಗಣಿತದ ಪದ್ಧತಿಯನ್ನು ಅನುಸರಿಸುವುದು ಉತ್ತಮ ಕ್ರಮವಾಗಿದೆ. A ಸಂಖ್ಯೆಯ ಎಲ್ಲ ವಸ್ತುಗಳನ್ನು ಒಂದೇ ಸಲ ಉಪಯೋಗಿಸಿದ್ದಾರೆ. ಅದರ Permutation ಸಂಖ್ಯೆ: A (A – 1 x A – 2 x A – 3 x  A ………….A ವರೆಗೆ) ನಂತರ ಏಳು ಸ್ವರಗಳನ್ನು ಒಂದೇ ಸಲ ತೆಗೆದುಕೊಳ್ಲುವುದರಿಂದ Permulation ದ ಸಂಖ್ಯೆ

7 (7 – 1 x 7 -2 x 7 – 3 x 7 – 4 x 7 – 5 x 7 – 6) ಅಂದರೆ

7 x 6 x 5 x 4 x 3 x 2 x 1 = 5040  ಆಯಿತು.

ಈ ರೀತಿ ಸಂಪೂರ್ಣ ಕೂಟ ತಾನದ ಸಂಖ್ಯೆಗಳು 5040 ಆದವು. ಅಪೂರ್ಣ ಕೂಟ ತಾನಗಳನ್ನು ತಯಾರಿಸಲು ಅಂದರೆ ಏಳುಸ್ವರಗಳನ್ನು ತೆಗೆದುಕೊಳ್ಳದೇ ಏಳಕ್ಕಿಂತ ಕಡಿಮೆ ಸ್ವರಗಳನ್ನು ತೆಗೆದುಕೊಂಡು Permutation ದೊಂದಿಗೆ Combination  ಕೂಡ ಮಾಡಬೇಕಾಗುತ್ತದೆ. ಏಳು ಸ್ವರಗಳಲ್ಲಿ ಎರಡರೆಡು ಸ್ವರಗಳ ಎಷ್ಟು ಸಮೂಹಗಳಾಗುತ್ತವೆ ಎಂಬುದನ್ನು ಲೆಕ್ಕಿಸಬಹುದಾಗಿದೆ. ಈ ಸಮೂಹಗಳಿಗೆ Combination ಎನ್ನುವರು.

A ಸಂಖ್ಯೆಯ ವಸ್ತುಗಳಲ್ಲಿ B ಸಂಖ್ಯೆ ವಸ್ತುಗಳನ್ನು ಒಂದೊಂದು ಸಲ ತೆಗೆದುಕೊಂಡಾಗ Combination ದ ಸಂಖ್ಯೆ

A x (A – 1 x A – 2 x A – 3 x A……………………….. A – B + 1 ವರೆಗೆ)
B (B – 1) (B – 2) ……………………………………………….. B – (B + 1)

ಉದಾಹರಣೆಗೆ ಏಳು ಸ್ವರಗಳಲ್ಲಿ ಎರಡೆರೆಡು ಸ್ವರಗಳ ಎಷ್ಟು ಸಮೂಹಗಳಾಗುತ್ತವೆ.

A = 7    B = 2

7 (7 – 2 + 1) = 42 = 21
2 x 1  2

ಈ ಪ್ರಕಾರ ಏಳು ಸ್ವರಗಳಲ್ಲಿ ಎರಡೆರಡು ಸ್ವರಗಳ ಸಮೂಹ ಒಟ್ಟು ೨೧ ಆಗುತ್ತದೆ. ಈ ವಿಧಾನದಿಂದ ಏಳು ಸ್ವರಗಳಲ್ಲಿ ಎಲ್ಲ ಸಂಖ್ಯೆ ತೆಗೆಯಲಾಗಿ ಈ ಕೆಳಗಿನ ಸಂಖ್ಯೆಗಳು ಸಿಗುತ್ತವೆ.

ಸ್ವರ ಸಂಖ್ಯೆ 7 6 5 4 3 2 1
ಒಟ್ಟು ಸಮೂಹ ಸಂಖ್ಯೆ 1 7 21 35 35 21 7

ಏಳು ಸ್ವರಗಳ ವಿಭಿನ್ನ ಸಂಖ್ಯೆಗಳ ಸ್ವರ ಸಮೂಹಗಳ ಒಟ್ಟು ಪ್ರಸ್ತಾರ ಸಂಖ್ಯೆ ಈ ಕೆಳಗಿನ ಕೋಷ್ಟಕದಿಂದ ಹೇಳಬಹುದು.

ಸ್ವರ ಸಂಖ್ಯೆ ಸಮೂಹ ಸಂಖ್ಯೆ ಒಟ್ಟು ಪ್ರಸ್ತಾರ ಸಂಖ್ಯೆ
1 2 7 x 1 = 7
2 21 21 x 2 = 42
3 35 35 x 3 = 21
4 35 35 x 4 = 840
5 21 21 x 120 = 2520
6 7 7 x 720 = 5040
7 1 1 x 5040 = 5040

ಈ ರೀತಿ ಸ್ವರ ಪ್ರಸ್ತಾರದ ಗಣಿತ ವಿಧಿ ಹಾಗೂ ಸಂಖ್ಯಾ ಕ್ರಮವನ್ನು ನೋಡಿದೆವು. ಈಗ ಪ್ರಶ್ನೆ ಉದ್ಭವಿಸುವುದೇನೆಂದರೆ, ಈ ಸ್ವರ ಪ್ರಸ್ತಾರಗಳನ್ನು ತಯಾರಿಸುವಾಗ ನಿಶ್ಚಿತ ಕ್ರಮದಂತೆಯೇ ತಯಾರಿಸಬೇಕೆ? ಅಥವಾ ಇಲ್ಲವೆ? ಒಂದು ವೇಳೆ ಪ್ರಸ್ತಾರ ತಯಾರಿಸುವ ಸ್ವಲ್ಪವೇ ಪ್ರಯತ್ನ ಮಾಡಿದಾಗ ಒಂದು ನಿಶ್ಚಿತ ಕ್ರಮವಿಲ್ಲದಿದ್ದರೆ, ಮುಂದುವರೆಯುವುದು ಬಹಳ ಕಠಿಣವಾಗುತ್ತೆಯೆಂದು ಎಲ್ಲರಿಗೂ ತಿಳಿಯುತ್ತದೆ. ಒಂದು ಸಲ ತಯಾರಿಸಿ, ಪ್ರಸ್ತಾರ ಪುನರಾವೃತ್ತಿಯಾಗುವ, ಬರಬೇಕಾದ ಪ್ರಸ್ತಾರ ಬರದೇ ಇರುವ, ತಪ್ಪಾಗುವ ಎಲ್ಲಾ ಸಾಧ್ಯತೆಗಳು ಇರುತ್ತವೆ. ಮತ್ತು ಸ್ವರಗಳ ಸಂಖ್ಯೆ ಹೆಚ್ಚಾದಂತೆಯೇ ಸ್ವರ ಪ್ರಸ್ತಾರ ಪೂರ್ಣಗೊಳಿಸುವುದು ಅಸಂಭವವೆನಿಸತೊಡಗುತ್ತದೆ. ಯಾರಾದರೂ ಇದನ್ನು ಸ್ವತಃದ ಪ್ರಯೋಗದಿಂದ ಅನುಭವಕ್ಕೆ ತಂದು ಕೊಳ್ಳಬಹುದಾಗಿದೆ. ನಿಶ್ಚಿತ ಕ್ರಮದ ಅನುಭವಸಿದ್ದ ಅವಶ್ಯಕತೆಯನ್ನು ಲಕ್ಷ್ಯದಲ್ಲಿಟ್ಟುಕೊಳ್ಳುತ್ತಾ ಈ ಕೆಳಗಿನ ಉಪಯುಕ್ತ ವಿವರಣೆಯನ್ನು ಕೊಡಬಹುದು.

ಒಂದು ಸ್ವರಕ್ಕೆ ಯಾವುದೇ ಹಿಂದು – ಮುಂದಿನ ಸ್ವರ ಇರದಿದ್ದುದರಿಂದ ಒಂದು ಸ್ವರದಿಂದ ಒಂದೇ ಅಲಂಕಾರ ಆಗುತ್ತದೆ. ಹಿಂದು ಮುಂದು ಮಾಡಲು ಕನಿಷ್ಠ ಎರಡು ಸ್ವರಗಳಾದರೂ ಬೇಕು. ಸಾ ಮತ್ತು ರೆ ಸ್ವರದಿಂದ ಸಾರೆ ಆರೋಹ ಕ್ರಮದಲ್ಲಿ ಹಾಗೂ ರೆಸಾ ಅವರೋಹ ಕ್ರಮದಲ್ಲಿ ಹೀಗೆ ಎರಡು ಸ್ವರ ಪ್ರಸ್ತಾರಗಲಾಗುತ್ತವೆ. ಇದಕ್ಕಿಂತ ಸ್ವರ ಪ್ರಸ್ತಾರಗಳು ಆಗುವದಿಲ್ಲ.

ಈಗ ಮುನ್ನಡೆದು ‘ಸಾರಿಗ’ ಈ ಮೂರು ಸ್ವರಗಳನ್ನು ತೆಗೆದುಕೊಳ್ಳೋಣ. ಆಗ ಹೆಚ್ಚಿನ ಸ್ವರ ಪ್ರಸ್ತಾರಗಳನ್ನು ನಿರ್ಮಿಸಬಹುದು. ಈ ಹಿಂದೆ ಹೇಳಿದಂತೆ ಇದರಿಂದ ಆರು ಸ್ವರ ಪ್ರಸ್ತಾರಗಳನ್ನು ಸಿದ್ಧಪಡಿಸಬಹುದು. ಆದರೆ ‘ರೆಗಮ’ ಸ್ವರಗಳ ಗುಂಪಿನಿಂದಲೂ ಆರು ಸ್ವರ ಪ್ರಸ್ತಾರಗಳನ್ನು ಸಿದ್ಧಪಡಿಸಬಹುದು. ಅದರಂತೆ ಗಮಪ, ಮಪದ, ಪದನಿ, ಕೂಡ ಈ ರೀತಿ ಮೂರು ಸ್ವರಗಳ ಗುಂಪು ಆಗುತ್ತದೆ ಅಂದು ಲೆಖ್ಖಿಸುವುದು ಜಟಿಲವಾಗುತ್ತದೆ. ಇದೇ ರೀತಿ ನಾಲ್ಕು, ಐದು, ಆರು, ಏಳು ಸ್ವರಗಳ ಗುಂಪಿಗೂ ಈ ಜಟಿಲತೆ ಗೆಳೆಯುತ್ತ ಹೋಗುತ್ತದೆ. ಆದ್ದರಿಂದ ಇದಕ್ಕೆ ಒಂದು ಕ್ರಮವನ್ನು ವಿಧಿಸಿ ಒಂದು ವ್ಯವಸ್ಥೆಯನ್ನು ತರೋಣ.

ಮೂರು ಸ್ವರಗಳ ಪ್ರಸ್ತಾರಕ್ಕಾಗಿ

೧. ಎಷ್ಟು ಅಂಶಗಳನ್ನು ಕಾಯಂ ಇಟ್ಟು ಉಳಿದವುಗಳನ್ನುಯ ಬದಲಿಸ ಹೊಸ ಪ್ರಸ್ತಾರ ತಯಾರಿಸಲು ಬರುವುದೋ ಅವುಗಳನ್ನು ಕಾಯಂ ಇಡೋಣ

೨. ಎಲ್ಲಿಯವರೆಗೆ ಸಾಧ್ಯವಿದೆಯೋ ಅಲ್ಲಿಯವರೆಗೆ ಮೊದಲನೆಯ ಸ್ವರಗಳ ಆರೋಹ ಕ್ರಮ ಇಟ್ಟು ನಂತರ ಅವರೋಹ ಕ್ರಮದಲ್ಲಿ ಇಡಬೇಕು.

೩. ಎರಡನೆಯ ನಿಯಮದ ಆಧಾರದ ಮೇಲೆ ಪ್ರಸ್ತಾರವನ್ನು ಬರೆಯುವಾಗ ಬಲಗಡೆಯ ಅಂಶವನ್ನು ಮೊದಲೇ ಇಡಬೇಕು.

ಇದೇ ರೀತಿ 4, 5, 6 ಮತ್ತು 7 ಸ್ವರಗಳ ಪ್ರಸ್ತಾರ ತಯಾರಿಸುವ ಕ್ರಮಯುಕ್ತ ಅವಧಿಯನ್ನು ತಿಳಿಯೋಣ.

ಸಾರೆಗಮಈ ನಾಲ್ಕು ಸ್ವರ ಅಂದರೆ ‘ಮ’ ವನ್ನು ಆರು ಸಲ ಕಾಯಂ ಆಗಿ ಒಂದೇ ಸ್ಥಾನಕ್ಕೆ ಇಡಬಹುದಾಗಿದೆ. ಏಕೆಂದರೆ ಅದಲ್ಲದೆ ನಮಗಮ ಬಳೀ ಮೂರು ಸ್ವರಗಳಿವೆ. ಮತ್ತು ಆ ಮೂರು ಸ್ವರಗಳಿಂದ ಆರು ಪ್ರಕಾರಗಳನ್ನು ಮಾಡಬಹುದು. ನಂತರ ಸಾರೆಗಮದಲ್ಲಿ ಬಲಗಡೆಯಿಂದ ಎರಡನೇಯ ಸ್ವರ ‘ಗ’ ವನ್ನು ಅಂತ್ಯದಲ್ಲಿ ಆರು ಸಲ ಕಾಯಂ ಇಟ್ಟು ‘ಸಾರೆಮ’ ಈ ಸ್ವರ ಗುಚ್ಛದಿಂದ ಆರು ಸ್ವರ ಪ್ರಸ್ತಾರಗಳನ್ನು ಮಾಡಬಹುದು. ನಂತರ ಬಲಗಡೆಯಿಂದ ಮೂರನೆಯ ಸ್ವರವಾದ ‘ರೆ’ ಯನ್ನು ಅಂತ್ಯದಲ್ಲಿ ಆರು ಸಲ ಕಾಯಂ ಇಟ್ಟು ‘ಸಾಗಮ’ ದಿಂದ ಆರು ಸ್ರ ಪ್ರಸ್ತಾರಗಳನ್ನು ಮಾಡಬಹುದು. ನಂತರ ಬಲಗಡೆಯಿಂದ ೪ ನೇ ಸ್ವರವಾದ ‘ಸಾ’ ಅಂತ್ಯದಲ್ಲಿಟ್ಟು ‘ರೆಮಪ’ ದಿಂದ ಆರು ಸ್ವರ ಪ್ರಸ್ತಾರಗಳನ್ನು ಮಾಡಬಹುದು. ಹೀಗಿ ಒಟ್ಟು ೨೪ ಸ್ವರ ಪ್ರಸ್ತಾರಗಳಾಗುತ್ತವೆ.

ಸಾರೆಗಮಪ: ‘ಪ’ ಕೊನೆಯಲ್ಲಿಟ್ಟು ‘ಸಾರೆಗಮಪ’ ದಿಂದ ಇಪ್ಪತ್ನಾಲ್ಕು ಸ್ವರ ಪ್ರಸ್ತಾರಗಳು ‘ಮ’ ಕೊನೆಯಲ್ಲಿಟ್ಟು ‘ಸಾರೆಗಪ’ ದ ಇಪ್ಪತ್ನಾಲ್ಕು ಸ್ವರ ಪ್ರಸ್ತಾರಗಳು ‘ಗ’ ಕೊನೆಯಲ್ಲಿಟ್ಟು ‘ಸಾರೆಮಪ’ ದ ಇಪ್ಪತ್ನಾಲ್ಕು ಸ್ರ ಪ್ರಸ್ತಾರಗಳು ‘ರೆ’ ಕೊನೆಯಲ್ಲಿಟ್ಟು ‘ಸಾಗಮಪ’ ದ ಇಪ್ಪತ್ನಾಲ್ಕು ಸ್ವರ ಪ್ರಸ್ತಾರಗಳು ‘ಸಾ’ ಕೊನೆಯಲ್ಲಿಟ್ಟು ‘ರೆಗಮಪ’ ದ ಇಪ್ಪತ್ನಾಲ್ಕು ಸ್ವರ ಪ್ರಸ್ತಾರಗಳು ಹೀಗೆ ಒಂದನೂರಾ ಇಪ್ಪತ್ತು ಸ್ವರ ಪ್ರಸ್ತಾರಗಳಾಗುತ್ತವೆ.

ಸಾರೆಗಮಪದ: ಮೇಲ್ಕಾಣಿಸಿದ ಕ್ರಮದಲ್ಲಿ ಪ್ರಸಾರ ಹಾಕಲಾಗಿ ‘ಸಾರೆಗಮಪದ’ ದಿಂದ ಏಳುನೂರಾ ಇಪ್ಪತ್ತು ಸ್ವರ ಪ್ರಸ್ತಾರಗಳಾಗುತ್ತವೆ.

ಸಾರೆಗಮಪಧನಿ: ಅದೇ ರೀತಿ ಸಾರೆಗಮಪಧನಿ ಸ್ವರಗಳಿಂದ ಐದು ಸಾವಿರದ ನಲವತ್ತು ಪ್ರಸ್ತಾರಗಳಾಗುತ್ತವೆ.

ಈ ರೀತಿ ಸ್ಥೂಲ ರೂಪವಾಗಿ ಪ್ರಸ್ತಾರ ತಯಾರಿಸುವ ವಿಧಿ ತಿಳಿದುಕೊಂಡೆವು. ಈ ಕ್ರಮವು ನಮ್ಮ ಪೂರ್ವಹರಿಗೆ ಬಹಳ ವರ್ಷಗಳ ಹಿಂದೆಯೇ ತಿಳಿದಿತ್ತು.

೧೩ನೇ ಶತಮಾನದ ಪ್ರಾರಂಭದಲ್ಲಿ ದೇವಗಿರಿಯ ರಾಜ ಯಾದವ ಸಿಂಘಣದೇವನ ಕಂದಾಯ ಮಂತ್ರಿಯಾಗಿದ್ದ ಸೋಢಳದೇವನ ಪುತ್ರನೂ, ಭಾಸ್ಕರ ದೇವನ ಪೌತ್ರನೂ ಆದ ನಿ:ಶಂಕ ಶಾರ್ಙ್ಮದೇವ ಸೂರಿಯು ‘ಸಂಗೀತ ರತ್ನಾಕರ’ ವೆಂಬ ಗ್ರಂಥವನ್ನು ಸಂಸ್ಕೃತದಲ್ಲಿ ರಚಿಸಿದನು. ಬ್ರಹತ್ತು – ಮಹತ್ತುಗಳಲ್ಲಿ ‘ಸಂಗೀತ ರತ್ನಾಕರ’ ವು ಅಸಾಮಾನ್ಯವಾದುದು. ಸಾಟಿ ಇಲ್ಲದುದು. ಪಂಚಮವೇದವೆಂದು ಪ್ರಸಿದ್ಧವಾದ, ವೇದ ವ್ಯಾಸ ಪ್ರಣೀತ ಮಹಾಭಾರತದಂತೆ, ಸಂಗೀತ ವಿಷಯವಾಗಿ, ‘ಸಂಗೀತ ರತ್ನಾಕರ’ ದಲ್ಲಿ ಹೇಳದಿದ್ದುದು ಬೇರೆಯಲ್ಲಿಯೂ ಇಲ್ಲ. ಬೇರೆಡೆ ಇರುವದೆಲ್ಲ ಇಲ್ಲಿದೆ. ಇದು ವೇದ ಸದೃಸವಾದುದು. ಇಂತಹ ಸಂಗೀತ ಗ್ರಂಥ ಇಲ್ಲಿಯವರೆಗೂ ಯಾರಿಂದಲೂ ರಚಿಸಲ್ಪಡಲಿಲ್ಲ.

ಈ ಗ್ರಂಥದ ಪ್ರಥಮ ಅಧ್ಯಾಯವಾದ ಸ್ವರಗತಾಧ್ಯಾಯವ ಪದಾರ್ಥ ಸಂಗ್ರಹವೆಂಬ ಪ್ರಥಮ ಪ್ರಕರಣದ ಮೂವತ್ನಾಲ್ಕನೆಯ ಶ್ಲೋಕದ ಪ್ರಥಮ ಪಂಕ್ತಿ –

ಪ್ರಸ್ತಾರ: ಖಂಡ ಮೇರುಶ್ಚನಷ್ಟೋದಿಷ್ಟ ಪ್ರಭೋದಕ: ಅಂದರೆ ಪ್ರಸ್ತಾರ ಮತ್ತು ನಷ್ಟ ಉದ್ದಿಷ್ಟಗಳನ್ನು ತಿಳಿಸಿಕೊಡುವಂತಹುದು ಖಂಡಮೇಯ. ಮುಂದುವರೆದು ಸ್ವರಗತಾಧ್ಯಾಯದ ನಾಲ್ಕನೆಯ ಪ್ರಕರಣ ಗ್ರಾಮ ಮೂರ್ಛನ – ಕ್ರಮ – ತಾನ – ಪ್ರಕರಣದಲ್ಲಿ ೬೩ ನೇ ಶ್ಲೋಕದಿಂದ ೯೧ ನೇ ಶ್ಲೋಕದವರೆಗೆ ನಷ್ಟೋದಿಷ್ಟಕ್ರಿಯೆ ಗಳಿಂದೊಡಗೂಡಿದ ಖಂಡಮೇರು ಸ್ವರ ಪ್ರಸ್ತಾರದ ಬಗ್ಗೆ ವಿಷಯವಾಗಿ ವಿವರಿಸಲಾಗಿದೆ.

ಯಾವುದಾದರೊಂದು ನಿರ್ಧಿಷ್ಟ ಸಂಖ್ಯೆಯ ಸ್ವರಗಳನ್ನು ತೆಗೆದುಕೊಂಡು ಸಾಧ್ಯವಾಗುವ ಎಲ್ಲಾ ಬಗೆಯ ಜೋಡಣೆಗಳನ್ನು ನಿರ್ಧರಿಸುವದು ಸ್ವರ ಪ್ರಸ್ತಾರ. ಒಂದರಿಂದ ಏಳರ ವರೆಗೆ ವಿವಿಧ ಸಂಖ್ಯೆಯ ಪ್ರಸ್ತಾರದಿಂದ ಬರುವ ಸಂಖ್ಯೆಗಳನ್ನು ಕ್ರಮಬದ್ಧವಾಗಿ ಒಂದು ಪಥದಲ್ಲಿ ತೋರಿಸುವುದು ‘ಖಂಡ ಮೇರು’. ಖಂಡ ಮೇರುವಿನಲ್ಲಿ ಒಂದು ಸಂಖ್ಯೆಯ ಸಹಾಯದಿಂದ ಪ್ರಸ್ತಾರ ಕ್ರಮದಲ್ಲಿ ಅದರ ಸ್ಥಾನವನ್ನು ರಚನೆಯನ್ನು ಕಂಡು ಹಿಡಿಯುವುದಕ್ಕೆ ‘ನಷ್ಟ’ ಎನ್ನುವರು. ನಿರ್ಧಿಷ್ಟ ಸಂಖ್ಯೆಯ ಸ್ವರಗಳುಳ್ಳ ಯಾವುದೇ ಸಂಖ್ಯೆಯ ಸಮುಚ್ಚಯವನ್ನು ಕೊಟ್ಟರೂ ಖಂಡ ಮೇರುವಿನಲ್ಲಿ ಆ ಸಂಖ್ಯೆ ಸ್ವರಗಳ ಪ್ರಸ್ರಾರವನ್ನು ಕೊಟ್ಟ ಸಮುಚ್ಚಯದ ವ್ಯತ್ಯಯ ಸಂಖ್ಯೆಯನ್ನು ಕಂಡು ಹಿಡಿಯುವುದಕ್ಕೆ ‘ಉದ್ದಿಷ್ಟ’ ಎನ್ನುವರು.

ನಷ್ಟೋದ್ದಿಷ್ಟ ಕ್ರಿಯೆಯನ್ನು ತಿಳಿಯುವುದಕ್ಕೆ ಮೊದಲು ‘ಖಂಡಮೇರು’ ವಿನ ಬಗ್ಗೆ ಈ ಕೆಳಗಿನ ವಿಷಯ ಲಕ್ಷ್ಯದಲ್ಲಿಡಬೇಕು. ಖಂಡ ಮೇರುವಿನ ರಚನೆ ಇದನ್ನು ವಿಭಿನ್ನ ಸ್ವರ ಪ್ರಸ್ತಾರದಲ್ಲಿ ಆಗುವ ವರ್ಗದ ಆಧಾರದ ಮೇಲೆ ತಯಾರಿಸಲಾಗಿದೆ.

ಸಾ

ರೆ

ನಿ

10

0

0

0

0

0

1

2

6

14

120

720

4

12

48

24

1440

18

72

360

2160

96

360

2160

600

3600

4320

೨) ಮೇಲ್ಕಾಣಿಸಿದ ಪಂಕ್ತಿಯಲ್ಲಿ ಎಡಗಡೆಯಿಂದ ಬಲಗಡೆಯ ಕಡೆಗೆ ಮನೆಗಳು ಸ್ವರಗಳ ಸಂಖ್ಯೆಯ ದ್ಯೋತಕವಾಗಿವೆ. ಮತ್ತು ಅದರಿಂದ ಕೆಳಗಿನ ಮನೆಗಳು ವಿಸ್ತಾರ ವರ್ಗದ ದ್ಯೋತಕವಾಗಿವೆ. ಹೇಗೆಂದರೆ ೧ ಸ್ವರದ ಒಂದೇ ಪ್ರಸಾರವಾಗುತ್ತದೆ. ಆದ್ದರಿಂದ ಮೊದಲನೆಯ ಮನೆಯ ಕೆಳಗೆ ಯಾವುದೇ ಮನೆಯಲ್ಲಿ ಎರಡು ಸ್ವರಗಳ ಪ್ರಸ್ತಾರದ್ದು ಎರಡು ವರ್ಗವಾಗುತ್ತದೆ. ಆದ್ದರಿಂದ ಮೇಲಿನಿಂದ ಕೆಳಗೆ ೨ ಮನೆಗಳಿವೆ. ಮೂರು ಸ್ವರಗಳ ಪ್ರಸ್ತಾರದ ದ್ಯೋತಕವಾಗಿ ಮೂರು ಮನೆಗಳಿವೆ. ಇದೇ ಕ್ರಮದಿಂದ ಮನೆಗಳ ಸಂಖ್ಯೆ ಏಳರವರೆಗೆ ಬೆಳೆಸಲಾಗಿದೆ.

೩) ಮೇಲಿನಿಂದ ಕೆಳಗೆ ಮನೆಗಳಲ್ಲಿ ಬರೆದಿರುವ ಸಂಖ್ಯೆಗಳು ಪ್ರಸ್ತಾರ ವರ್ಗದ ಅಂತರ್ಗತವಾಗಿ ಪ್ರಸ್ತಾರ ಸಂಖ್ಯೆಯನ್ನು ತೋರಿಸುತ್ತವೆ. ಮೇಲಿನ ಪಂಕ್ತಿಯಲ್ಲಿ ಎಡದಿಂದ ಬಲಗಡೆಗೆ ಮೊದಲನೆಯ ಮನೆಯ ನಂತರ ಎಲ್ಲ ಮನೆಗಳಲ್ಲಿ ಶೂನ್ಯ ಇಡಲಾಗಿದೆ. ಇದಕ್ಕೆ ಕಾರಣವೇನೆಂದರೆ, ಒಂದು ಸ್ವರದಿಂದ ಒಂದೇ ಸ್ವರ ಪ್ರಸ್ತಾರ ಸಾಧ್ಯವಿದೆ. ಆದ್ದರಿಂದ ಮೊದಲನೆಯ ಮನೆಯಲ್ಲಿ ಮಾತ್ರ ೧ ಇಡಲಾಗಿದೆ. ಅದರ ನಂತರ ಎರಡು ಸ್ವರಗಳ ಎರಡು ಪ್ರಸ್ತಾರಗಳಿವೆ. ಮತ್ತು ಎರಡೇ ಮಾರ್ಗಗಳಿವೆ. ಏಕೆಂದರೆ ಒಂದು ಸ್ವರ ಒಂದು ಸಲ ಬಲಗಡೆಗೆ ಹಾಗೂ ಇನ್ನೊಂದು ಸಲ ಎಡಗಡೆಗೆ ಇರುತ್ತದೆ. ಆದ್ದರಿಂದ ಕೆಳಗಡೆಯ ಎರಡನೆಯ ಮನೆಯಲ್ಲಿ ೧ ಇಡಲಾಗಿದೆ. ಮೊದಲನೆಯ ಮನೆಯಲ್ಲಿ ಶೂನ್ಯವಿಡುವ ಅಭಿಪ್ರಾಯವೇನೆಂದರೆ, ಯಾವುದೇ ಸಂಖ್ಯೆಗಳ ಸ್ವರ ಪ್ರಸ್ತಾರದ ವರ್ಗದಲ್ಲಿ ಎಷ್ಟು ಪ್ರಸ್ತಾರಗಳು ಬರುತ್ತದೆಯೋ ಅವೆಲ್ಲವನ್ನು ಮೊದಲನೆಯ ಮನೆಯಲ್ಲಿ ತೆಗೆದುಕೊಳ್ಳಲಾಗಿದೆ. ಉದಾಹರಣೆಗಾಗಿ – ಮೂರು ಸ್ವರಗಳ ಪ್ರಸ್ತಾರದಲ್ಲಿ ೨ – ೨ ಪ್ರಸ್ತಾರಗಳ ಮೂರು ವರ್ಗಗಳಾಗುತ್ತದೆ. ಮೊದಲನೆಯ ವರ್ಗದಲ್ಲಿ ಎರಡು ಪ್ರಸ್ತಾರಗಳು ಪೂರ್ಣವಾದ ನಂತರವೇ ಎರಡನೆಯ ವರ್ಗ ಆರಂಭವಾಗುತ್ತದೆ. ಆದ್ದರಿಂದ ಮೇಲಿನಿಂದ ಮೊದಲನೆಯ ಮನೆಗೆ ಮೊದಲನೇ ವರ್ಗದ ದ್ಯೋತಕವೆಂದು ತಿಳಿದು ಶೂನ್ಯ ಇಡಲಾಗಿದೆ.

೪) ಕೆಳಗಿನ ಕಡೆಗೆ ಎಲ್ಲ ಮನೆಗಳಲ್ಲಿ ಬರೆದಿರುವ ಪ್ರಸ್ತಾರ ಸಂಖ್ಯೆಗೆ ಎಡಗಡೆಗೆ ಹೊರಳಿಸಿದ ರೇಖೆಯ ಜೊತೆ ಜೊತೆಗೆ ಕೂಡಿಸುತ್ತಾ ಹೋದರೆ, ಪ್ರತ್ಯೇಕ ಸಂಖ್ಯೆಯ ಸ್ವರಗಳ ಒಟ್ಟು ಪ್ರಸ್ತಾರ ಸಂಖ್ಯೆ ಸಿಗುತ್ತದೆ.

‘ಖಂಡಮೇರು’ವಿನಲ್ಲಿ ‘ನಷ್ಟ’ ಮತ್ತು ಉದ್ದಿಷ್ಟಕ್ರಿಯೆಗಳನ್ನು ಈಗ ಗಮನಿಸೋಣ. ಮೊದಲು ನಷ್ಟವನ್ನು ತೆಗೆದುಕೊಳ್ಳೋಣ.

‘ಸಾ ರೆ ಗ ಮ ಪ’ ಈ ಐದು ಸ್ವರಗಳ ಒಂದು ನೂರಾ ಐದನೆಯ ಸ್ವರ ಪ್ರಸ್ತಾರವನ್ನು ಕಂಡುಹಿಡಿಯಬೇಕು.

ಈಗ ‘ಖಂಡಮೇರು’ ವಿನ ಮೊದಲ ಪಂಕ್ತಿಯಲ್ಲಿ ಎಡಗಡೆಯಿಂದ ಬಲಗಡೆಗೆ ಐದನೆಯ ಮನೆಯವರೆಗೆ ಎಣಿಸುವುದು. ಆ ಮನೆಯಿಂದ ಕೆಳಗಡೆ ೧೦೫ ನೇ ಸಂಖ್ಯೆಗಿಂತ ಕಡಿಮೆಯಿದ್ದು, ಆ ಸಂಖ್ಯೆಗೆ ಸಮೀಪ ಇರುವ ಮನೆಯನ್ನು ಗುರುತಿಸಿಕೊಳ್ಳಬೇಕು. ಈಗ ಒಂದನೇಯ ಸ್ವರದ ಕೆಲಸ ಮುಗಿಯಿತು. ಹಾಗೂ ಗುರುತಿಸಿದ ಮನೆಯ ಸಂಖ್ಯೆ ೯೬ ನ್ನು ೧೦೫ ರಲ್ಲಿ ಕಳೆಯಬೇಕು. ಉಳಿದದ್ದು ೯, ಈಗ ನಾಲ್ಕು ಸ್ವರಗಳ ಕೆಲಸ ಉಳಿಯಿತು. ಮತ್ತ ಮೊದಲನೆಯ ಪಂಕ್ತಿಯಲ್ಲಿ ಎಡಗಡೆಯಿಂದ ಬಲಗಡೆಗೆ ನಾಲ್ಕನೆಯ ಮನೆಯನ್ನು ಗುರುತಿಸಿ ಅದರಿಂದ ೯ ಸಂಖ್ಯೆಗಿಂತ ಕಡಿಮೆ ಇರುವ ಆದರೆ ೯ ಸಂಖ್ಯೆಗೆ ಸಮೀಪ ಇರುವ ಮನೆಯನ್ನು ಗುರುತಿಸಿಕೊಳ್ಳಬೇಕು. ಅದು ಇಲ್ಲಿ ೬ ಆಗಿದೆ. ಈಗ ೯ ರಲ್ಲಿ ೬ ನ್ನು ಕಳೆದರು ಸಿಗುವದು ೩. ಇದೇ ರೀತಿ ಉಳಿದ ಮೂರು ಸ್ವರಗಳಿಗೆ ಸಂಖ್ಯಾ ಮನೆಗಳನ್ನು ಕಂಡುಹಿಡಿದಾಗ ಸಂಖ್ಯೆಗಳ ಕ್ರಮ ಹೀಗಾಗುತ್ತದೆ.

96 + 6 + 2 + 0 +1 = 105

‘ಸಾ ರೆ ಗ ಮ ಪ’ ಇದು ಮೂಲ ಐದು ಸ್ವರಗಳ ಕ್ರಮ. ಗುರುತಿಸಿದ ಮನೆಗಳ ಕ್ರಮ ಸಂಖ್ಯೆಗಳ ಅನುಸಾರ ಈ ಸ್ವರಗಳ ಕ್ರಮ ಸಂಖ್ಯೆಯನ್ನು ಸರಿಯಾಗಿ ಕೂಡಿಸುವುದರಿಂದ ಪ್ರಸ್ತಾರದ ಸ್ವರೂಪ ಸಿಗುತ್ತದೆ. ಹೇಗೆಂದರೆ ‘ಸಾ ರೆ ಗ ಮ ಪ’ ದಲ್ಲಿ ಬಲಗಡೆಯಿಂದ ಎಡಗಡೆಗೆ ಮೊದಲು ಗುರುತಿಸಿದ ಮನೆ ೫ನೇಯದ್ದಾಗಿದೆ. ಆದ್ದರಿಂದ ಮೂಲ ಕ್ರಮದಲ್ಲಿ ಬಲಗಡೆಯಿಂದ ಎಡಗಡೆಗೆ ೫ನೇ ಸ್ವರ, ಪ್ರಸ್ತಾರದಲ್ಲಿ ಬಲಗಡೆಗೆ ಮೊದಲ ಸ್ವರವಾಗುತ್ತದೆ. xxxx ಸಾ, ಸಾ ರೆ ಗ ಮ ಪ ದಲ್ಲಿ ಸಾ ಹೋದ ನಂತರ ‘ರೆ ಗ ಮ ಪ’ ಮೂಲಕ ೪ ಸ್ವರಗಳ ಕ್ರಮವಾಗುತ್ತದೆ. ಈಗ ಸಂಖ್ಯಾ ಕ್ರಮದಲ್ಲಿ ಬಲಗಡೆಯಿಂದ ಎಡಗಡೆಗೆ ಗುರುತಿಸಿದ ಮನೆ ೨ ನೇಯದ್ದಾಗಿದೆ. ಆದ್ದರಿಂದ ಮೂಲ ಕ್ರಮದಲ್ಲಿ ಬಲಗಡೆಯಿಂದ ಎಡಗಡೆಗೆ ೨ ನೇ ಸ್ವರ ‘ಮ’ ಆಗಿದೆ. ಈ ಪ್ರಸ್ತಾರದಲ್ಲಿ ಬಲಗಡೆಯಿಂದ ಎಡಗಡೆ ೨ನೇ ಸ್ವರ ‘ಮ’ ಆಯಿತು. ಆದ್ದರಿಂದ ಸ್ವರ ಪ್ರಸ್ತಾರದ ಸ್ವರೂಪ xxx ಮಸಾ ಆಯಿತು. ಈಗ ಉಳಿದ ಸ್ವರಗಳ ಮೂಲಕ್ರಮ ‘ರೆಗಪ’ ಆಯಿತು. ಈಗ ಬಲಗಡೆಯಿಂದ ಎಡಗಡೆಗೆ ೨ ಸಂಖ್ಯೆ ಇರುವ ಮನೆ ‘ಗ’ ಸ್ವರವನ್ನು ಕೂಡುತ್ತದೆ. ಆದ್ದರಿಂದ ಸ್ವರ ಪ್ರಕಾರ xx ಗಮಸಾ ಸ್ವರೂಪವನ್ನು ಪಡೆಯಿತು. ಈಗ ಉಳಿದ ಸ್ವರಗಳ ಮೂಲ ಸ್ವರೂಪ ‘ರೆಪ’ ಆಯಿತು. ಈಗ ಬಲಗಡೆಯಿಂದ ಎಡಗಡೆಗೆ ‘೦’ ಸಂಖ್ಯೆ ಮನೆಯಲ್ಲಿ ‘ಪ’ ಇದೆ. ಆದ್ದರಿಂದ ಸ್ವರ ಪ್ರಸ್ತಾರ x ಪಗಮಸಾ ಆಯಿತು. ಮತ್ತು ಉಳಿದ ಸ್ವರ ರೆ ಎಡಗಡೆ ಕೊನೆಯಲ್ಲಿ ಸೇರಿಸಲಾಗಿ ಸ್ವರ ಪ್ರಸ್ತಾರ ‘ರೆಪಗಮಸಾ’ ಸ್ವರೂಪ ಪಡೆಯಿತು.

ಉದ್ದಿಷ್ಟ: ಈಗ ಉದ್ದಿಷ್ಟವನ್ನು ಗಮನಿಸೋಣ.

ಈಗ ‘ಗ ಮ ಪ ರೆ ಸಾ’ ಈ ಸ್ವರ ಪ್ರಸ್ತಾರದ ಕ್ರಮ ಸಂಖ್ಯೆಯನ್ನು ಕಂಡುಹಿಡಿಯೋಣ. ‘ ಗ ಮ ಪ ರೆ ಸಾ’ ಇವರ ಮೂಲ ಕ್ರಮ ‘ಸಾ ರೆ ಗ ಮ ಪ’ ಇದ್ದು ಕಂಡುಹಿಡಿಯಬೇಕಾದ ಸ್ವ ಸಮೂಹದ ಸ್ವರಗಳನ್ನು ಮೂಲ ಕ್ರಮದ ಸ್ವರಗಳೊಂದಿಗೆ ಹೋಲಿಸಿ ಸಂಖ್ಯೆಗಳನ್ನು ಕ್ರಮವಾಗಿ ಬರೆದರೆ ಸ್ವರ ಪ್ರಸ್ತಾರ ಸಂಖ್ಯೆಯು ಸಿಗುತ್ತದೆ. ಅದು ಹೇಗೆಂದರೆ ‘ಖಂಡಮೇರು’ ವಿನ ಮೊದಲ ಪಂಕ್ತಿಯಲ್ಲಿ ಎಡಗಡೆಯಿಂದ ಬಲಗಡೆಗೆ ಐದನೇಯ ಮನೆಯವರೆಗೂ ಎಣಿಸಬೇಕು. ಈಗ ಪ್ರಸ್ತಾರದಲ್ಲಿ ಬಲಗಡೆಯಿಂದ ಎಡಗಡೆಗೆ ಹೋಗುತ್ತ ಪ್ರತ್ಯೇಕ ಸ್ವರದ ಮೂಲ ಕ್ರಮದಲ್ಲಿ ಕ್ರಮಿತ ಸ್ಥಾನ ನೋಡುತ್ತ ಅದಕ್ಕೆ ಅನುಸಾರವಾಗಿ ಖಂಡಮೇರುವಿನಲ್ಲಿ ಬಲದಿಂದ ಎಡಕ್ಕೆ ಹೋಗುತ್ತ ಮೇಲಿನಿಂದ ಕೆಳಗೆ ಗುರುತಿಸುತ್ತ ಹೋಗಬೇಕು. ಕೊನೆಗೆ ಗುರುತಿಸಿದ ಮನೆಗಳ ಸಂಖ್ಯೆಗಳನ್ನು ಸಂಕಲನ ಮಾಡಿದಾಗ ಸ್ವರ ಪ್ರಸ್ತಾರ ಸಂಖ್ಯೆ ದೊರೆಯುತ್ತದೆ. ಹೇಗೆಂದರೆ,

ಮೊದಲ ಪಂಕ್ತಿಯಲ್ಲಿ ಐದನೇಯ ಮನೆಯಿಂದ ಮೂಲ ಕ್ರಮವಾದ ‘ ಸಾರೆಗಮಪ’ ದಲ್ಲಿ ಎಡಗಡೆಯಿಂದ ಬಲಗಡೆಗೆ ಹೋಗುತ್ತ ‘ಖಂಡಮೇರು’ ವಿನಲ್ಲಿ ಮೇಲಿನಿಂದ ಕೆಳಗೆ ಹೋಗಿ ಐದನೆಯ ಸ್ವರವಾದ ‘ಸಾ’ ಬರುವವರೆಗೆ ಎಣಿಸಿ ಆ ಸಂಖ್ಯೆ ಮನೆಯ ಸಂಖ್ಯೆಯನ್ನು ಗುರುತಿಸಿಕೊಳ್ಳಬೇಕು. ಅದು ಇಲ್ಲಿ ೯೬  ಆಗಿದೆ. ಈಗ ಉಳಿದ ಸ್ವರಗಳ ಕ್ರಮ ‘ ರೆ ಗ ಮ ಪ’ ಕೊಟ್ಟ ಸ್ವರ ಪ್ರಸ್ತಾರದ ‘ಸಾ’ ತೆಗೆದುಹಾಕಲಾಗಿ ಉಳಿದ ಸ್ವರಗಳು ‘ಗಮಪರೆ’ ಈಗ ಮೇಲ್ಕಾಣಿಸಿದ ಕ್ರಿಯೆಯನ್ನು ಉಳಿದ ಸ್ವರಗಳಿಗೆ ಮಾಡಿದಾಗ ೧೮,೦,೦ ಹಾಗೂ ೧ ಸಂಖ್ಯೆಗಳು ದೊರೆಯುತ್ತವೆ. ಈಗ ಅವುಗಳನ್ನೆಲ್ಲ ಸಂಕಲಿಸೋಣ.

96 + 18 + 0 + 0 + 1 = 115

‘ಗ ಮ ಪ ರೆ ಸಾ’ ಈ ಸ್ವರ ಪ್ರಸ್ತಾರದ ಕ್ರಮ ಸಂಖ್ಯೆ ಉದ್ದಿಷ್ಟ ಕ್ರಿಯೆಯಿಂದ ‘೧೧೫’ ಎಂದು ನಿಖರವಾಗಿ ಹೇಳಬಹುದು.

ಮೇಲ್ಕಾಣಿಸಿದ ಲೆಕ್ಕಾಚಾರದಿಂದ ಸ್ವರ ಪ್ರಸ್ತಾರ ತಯಾರಿಸುವ ಕ್ರಮ ಬದ್ಧ ಕ್ರಿಯೆಯು ಮತ್ತು ಯಾವುದೇ ಸಂಖ್ಯೆಯ ಪ್ರಸ್ತಾರ ಅಥವಾ ಪ್ರಸ್ತಾರ ಸಂಖ್ಯೆಯನ್ನು ಕಂಡು ಹಿಡಿಯುವ ಕ್ರಮವು ಸ್ಪಷ್ಟವಾಗುತ್ತದೆ.

ಸಂಗೀತದಲ್ಲಿ ಪ್ರಸ್ತಾರ ಕ್ರಮಬದ್ಧ ವಿಧಿಗೆ ಮಹತ್ವ ಎಷ್ಟಿದೆಯೋ ಅಷ್ಟು ಮಹತ್ವ ನಷ್ಟೋದಿಷ್ಟ ಗಣಿತ ವಿಧಿಗೆ ಇಲ್ಲ. ಅಲಂಕಾರದ ಆಧಾರದ ಮೇಲೆ ತಾನ್ ಸಿದ್ಧವಾಗುತ್ತದೆ. ಏಕೆಂದರೆ ಅಲಂಕಾರ, ಸ್ವರಗಳ ಕ್ರಮದ ಗತಿಯನ್ನು ತಿಳಿಸುತ್ತದೆ ಮತ್ತು ತಾನ್ ಆಕ್ರಮಿತ ಗತಿಗೆ ರಾಗದ ನಿಯಮಾನುಸಾರವಾಗಿ ಉಪಯೋಗದಲ್ಲಿರುವುದರಿಂದ ತಯಾರಾಗುತ್ತದೆ. ಈ ದೃಷ್ಟಿಯಿಂದ ಸ್ವರ ಪ್ರಸ್ತಾರಕ್ಕೆ ಸಹ ತಾನ್ ಕ್ರಿಯೆಯು ಆಧಾರಭೂತ ತುಕಡಾಗಳ ರೂಪದಲ್ಲಿ ತಿಳಿಸಬಹುದಾಗಿದೆ. ಉದಾಹರಣೆಗಾಗಿ ‘ಸಾಗರೆ’ ಈ ಸ್ವರ ಪ್ರಸ್ತಾರ ಯಾವುದೇ ರಾಗದ ನಿಯಮಾನುಸಾರ ತಾನಿಗೆ ರೂಪಾಂತರಗೊಳ್ಳುತ್ತದೆ. ಕಲ್ಯಾಣದಲ್ಲಿ ನಿಗರೆ, ರೆಮಗ, ಗಮಪ, ಇತ್ಯಾದಿ ತುಕಡಾಗಳ ತಾನ್ ತಯಾರಿಸಬಹುದಾಗಿದೆ. ಮೇಲ್ಕಾಣಿಸಿದ ರೀತಿಯಂತೆ ಸ್ವರ ಪ್ರಸ್ತಾರ ತಯಾರಿಸುವ ಸರಳ ಕ್ರಮ ಸಂಗೀತ ಸಾಧಕರಿಗೆ ತಿಳಿಯುವುದರಿಂದ ತಾನ್, ವಿಸ್ರಾರಗಳ ಕೀಲಿ ಕೈ ಹಸ್ತಗತವಾಗುತ್ತದೆ. ಕೇವಲ ತಾನ್ ಅಷ್ಟೇ ಏಕೆ ಆಲಾಪದಲ್ಲಿ ಕೂಡ ಸ್ವರ ಪ್ರಸ್ತಾರದ ತುಕುಡಾಗಳನ್ನು ಯಥಾಸ್ಥಾನ ಉಪಯೋಗದಲ್ಲಿ ತರಬಹುದಾಗಿದೆ. ಪ್ರಸ್ತಾರ ಈ ರೀತ ಕರತಲಾಮಲಕ ಆಗುವುದರಿಂದ ವಿಸ್ತಾರದ ಅನಂತ ಭಂಡಾರ ಕೈಗೆಟುಕುತ್ತದೆ. ವಿಭಿನ್ನ ರಾಗಗಳ ಶುದ್ಧ, ವಿಕೃತ ಸ್ವರಗಳ ಯೋಜನೆ, ಆರೋಹ, ಅವರೋಹ, ಅಲ್ಪತ್ವ – ಬಹುತ್ವ ಇತ್ಯಾದಿಗಳ ನಿಯಮ ಲಕ್ಷ್ಯದಲ್ಲಿಟ್ಟುಕೊಂಡು ಪ್ರಸ್ತಾವಿತ ವಿಧಿಯನ್ನು ಯಥೋಚಿತವಾಗಿ ಆಧರಿಸಿ ಅಭ್ಯಸಿಸುವುದರಿಂದ ವಿಸ್ತಾರಕ್ಕಾಗಿ ಮಾರ್ಗವು ಪ್ರಶಸ್ತವಾಗುತ್ತದೆ. ಇದುವೆ ಪ್ರಸ್ತಾರದ ಸಾಕ್ಷಾತ್ ಉಪಯೋಗ. ಅದರ ಮಹತ್ವವನ್ನು ಸಂಗೀತ ವಿದ್ಯಾರ್ಥಿಗಳು, ಸಾಧಕರು ಸದಾ ಲಕ್ಷ್ಯದಲ್ಲಿಡಬೇಕು. ಇಲ್ಲಿ ಗಣಿತದ ಉಪಯೋಗ ಕೇವಲ ಪ್ರಸ್ತಾರದ ಜಟಿಲತೆಯನ್ನು ನಿವಾರಿಸಲು ಮಾಡಲಾಗಿದೆ. ಏಕೆಂದರೆ ಯಾವುದೇ ಪ್ರಕಾರವಾಗಿ ಪ್ರಸ್ತಾರದ ಪುನರಾವೃತ್ತಿಯಾಗದೆ ಪೂರ್ಣ ಪ್ರಸ್ತಾರ ಜಟಿಲತೆಯನ್ನು ನಿವಾರಿಸಲು ಮಾಡಲಾಗಿದೆ. ಏಕೆಂದರೆ ಯಾವುದೇ ಪ್ರಕಾರವಾಗಿ ಪ್ರಸ್ತಾರದ ಪುನರಾವೃತ್ತಿಯಾಗದೇ ಪೂರ್ಣ ಪ್ರಸ್ತಾರವು ಕನ್ನಡಿಯಂತೆ ಸ್ಪಷ್ಟವಾಗಿ ದೃಷ್ಟಿಗೋಚರವಾಗುತ್ತದೆ. ಮೇಲ್ಕಾಣಿಸಿದ ವಿಷಯವು ಆತ್ಮಗತವಾದರೆ, ಸಂಗೀತದ ಅಭ್ಯಾಸದ ಸಮಯದಲ್ಲಿ ಪ್ರಸ್ತಾರಗಳನ್ನು ಬರೆದು ಎದುರಿಗೆ ಇಟ್ಟುಕೊಳ್ಳಬೇಕಾದ ಪ್ರಮೇಯ ಬರುವದಿಲ್ಲ.

ಸ್ವರ ಪ್ರಸ್ತಾರದ ಆಧಾರದ ಮೇಲೆ ಸ್ವರಗಳನ್ನು ಹಿಂದು ಮುಂದುಮಾಡಿ ವಿವಿಧತೆಯನ್ನು ತರಲಾಗುವುದೆಂದು ನಂತರ ಸ್ವರಗಲ ಅವಸ್ಥಾಭೇದ, ಅವುಗಳ ಅಂತರಾಳದ ಭೇದ, ಸ್ಥಾನ ಭೇದ, ಉಚ್ಚಾರು – ಭೇದ, ಕಾಕು – ಭೇದ, ಪ್ರಯೋಗ ಭೇದ ಇತ್ಯಾದಿ ಅನೇಕ ತತ್ವಗಳಿಂದ ರಾಗವನಗನು ಸಿದ್ಧಗೊಳಿಸಲಾಗುತ್ತದೆ. ಭಾವ ಪ್ರಕಟಿಸಲಾಗುತ್ತದೆ. ಹಾಗೂ ರಸವನ್ನು ಅವಿರ್ಭಾವಗೊಳಿಸಲಾಗುತ್ತದೆ. ಈ ರಸ ಕ್ರಿಯೆಗಳನ್ನು ನಿರ್ಲಕ್ಷಿಸಿ ಕೇವಲ ಖಂಡಮೇರುವಿನ ಪ್ಪರಯೋಗವನ್ನು ಸರ್ವಸ್ವವೆಂದು ತಿಳಿದು, ರಸ ಪರಿಪಾಕದಿಂದ ವಂಚಿತರಾಗಬೇಕಾಗುತ್ತದೆ. ಮತ್ತು ಅರ್ಥಹೀನ ಸ್ವರ ಪ್ರಸ್ತಾರದಲ್ಲಿ ಮುಳುಗಿ ಸಂಗೀತದ ಆನಂದದಿಂದ ಸ್ವಯಂ ಅಸ್ಪೃಶ್ಯರಾಗಿ ಶೋತೃಗಳನ್ನು ರಸಾಸ್ಪೃಶ್ಯರನ್ನಾಗಿಸುತ್ತಾರೆ. ಆದ್ದರಿಂದ ಪ್ರಸ್ತಾರ ಗಣಿತ – ಸಿದ್ಧವಾಗಿದ್ದರೂ ಕೂಡ ರಾಗ – ನಿಯಮಾನುಕೂಲತೆ ಮತ್ತು ರಸವಾಭಾವನುಕೂಲತೆಗೆ ತಕ್ಕ ಉಪಯೋಗವೇ ಅಪೇಕ್ಷಿತವು. ಇಲ್ಲದಿದ್ದರೆ ಶುಷ್ಕವಾದ ಗಣಿತ ಜನ್ಯ ಸ್ವರ ಪ್ರಸ್ತಾರ ನೀರಸ ಮತ್ತು ಯಾಂತ್ರಿಕ ಸ್ವರ ಯೋಜನೆಯ ಸೃಷ್ಟಿಯಾಗುತ್ತದೆ. ಸಂಗೀತದ ರಂಜನೆಯ ಮುಖ ತಿರುಗಿಸಿದಂತಾಗುತ್ತದೆ. ಇಲ್ಲಿ ಇನ್ನಂದು ವಿಷಯವೇನೆಂದರೆ, ಸ್ವರ ಪ್ರಸ್ತಾರದ ಅಭ್ಯಾಸದಿಂದ ತಾನ್ ಗಳ ಮೂಲಕ ತ್ವರಿತಗತಿ ಮತ್ತು ವಿವಿಧ ಸ್ವರ ರಚನೆಗಳನ್ನು ತೋಸುವಲ್ಲಿ ಕೇವಲ ಕಂಠದ ತಯಾರಿ, ಹಿಂದು – ಮುಂದು ತಿರುಗುವಲ್ಲಿ ಕಂಠದ ಪ್ರಭುತ್ವ ಮತ್ತು ಕೆಲವು ಅಂಶಗಳಲ್ಲಿ ಅದ್ಭುತ ರಸದ ಚಮತ್ಕಾರಿಕ ದರ್ಶನ ಆಗುತ್ತದೆ. ಅದರಲ್ಲಿ ಗಮಕವನ್ನು ಉಪಯೋಗಿಸಿದಾಗ ಕೆಲವು ಅಂಶಗಳಲ್ಲಿ ಭಯಾನಕ ರಸದ ನಿಷ್ಪತ್ತಿ ಆಗುತ್ತಲಿದೆಯೆಂದೆನಿಸುತ್ತದೆ. ಆದರೆ ಅನ್ಯರಸಗಳ ಅಭಿವ್ಯಕ್ತಿಗೆ ತಾನ್ – ಪ್ರಯೋಗ ಉಪಯೋಗವಿಲ್ಲ. ಆದ್ದರಿಂದ ಸ್ವರ ಪ್ರಸ್ತಾರಗಳನ್ನು ಬೇರೆ – ಬೇರೆ ರೂಪದಿಂದ ಸಣ್ಣ ಸಣ್ಣ ತುಕಡಾಗಳ ಮೂಲಕ ಆಲಾಪದಲ್ಲಿನ ಯಥಾಸ್ಥಾನ ಭಾವಾನುಕೂಲ ಉಚ್ಛಾರದೊಂದಿಗೆ ಉಪಯೋಗಿಸಬೇಕು. ಇಲ್ಲದಿದ್ದರೆ ಸಂಗೀತವು ಕೇವಲ ಕಂಠ ಕಸರತ್ತು ಅಥವಾ ಸರ್ಕಸ್ ಆಗಿ ಸಂಗೀತದ ಪ್ರತಿ ಆಕರ್ಷಣೆ ಕಡಿಮೆಯಾಗುತ್ತ ಹೋಗುತ್ತದೆ.

ಈ ‘ಖಂಡ ಮೇರು’ ವಿನಿಂದ ಸ್ವರ ಪ್ರಸ್ತಾರ ಪದ್ಧತಿಯು ೧೩ನೇ ಶತಮಾನದ ‘ಸಂಗೀತ ರತ್ನಾಕರ’ ದಲ್ಲಿ ಪ್ರಸ್ತುತವಾಗಿರುವುದು ನಮ್ಮ ಸಂಗೀತದ ಪ್ರಾಚೀನತೆಯ ಕಲ್ಪನೆಯನ್ನು ಕೊಡುತ್ತದೆ. ಈ ಪದ್ಧತಿಯು ೧೩ನೇ ಶತಮಾನಕ್ಕಿಂತ ತುಂಬ ಹಳೆಯದಾಗಿದೆ. ಏಕೆಂದರೆ ನಿ:ಶಂಕ ಶಙ್ಗದೇವ ಸೂರಿಯು ಈ ವಿಷಯಗಳನ್ನು ಕ್ಲಿಷ್ಟವಾದ ಸಂಸ್ಕೃತ ಶ್ಲೋಕಗಳನ್ನು ರಚಿಸಿ ಉಲ್ಲೇಖಿಸಿದ್ದಾನೆ. ಯಾವುದೇ ವಿಷಯ ಪದ್ಯವಾಗುವುದಕ್ಕಿಂತ ಮೊದಲು ಗದ್ಯವಾಗಿ ಮತ್ತು ಅದಕ್ಕಿಂತ ಮೊದಲು ಅವ್ಯಕ್ತ ಸ್ವರೂಪವನ್ನು ಹೊಂದಿರುತ್ತದೆ. ಅವ್ಯಕ್ತತೆಯಿಂದ ವ್ಯಕ್ತ ರೂಪಕ್ಕೆ ಬಂದು, ಅದು ಕಾವ್ಯ ಸ್ವರೂಪವನ್ನು ಪಡೆಯಲು ಬಹಳ ಸಮಯ ಹಿಡಿಯುತ್ತದೆ. ಆದ್ದರಿಂದ ‘ಖಂಡ ಮೇರು’ ಸ್ವರ ಪ್ರಸ್ತಾರ ಪದ್ಧತಿಯ ವಿಷಯವು ಬಹಳ ಪುರಾತನವಾದುದಾಗಿದೆ.