ಜಗಂಜ್ಯೋತಿ ಮಾವಿನ ಮರವೆ ತಂದೆನಾನ
ಬಯಲುಸೀಮೆಯ ಗೌಡನ ಮಗಳೆ ತಂದೆನಾನ | ಹಿಮ್ಮೇಳ ||
ಯಾವ ಸೀಮೆ ಗೊಲ್ಲಾರ‍್ಹುಡುಗ
ಏಳು ಸಾವಿರ ಹುಂಡಿ ದನವ
ಹೊಡಕೊಂಡಿ ಗೊಲ್ಲರುಡುಗ
ಸುರಹೊನ್ನೆ ಮತಕ್ಕೆ
ಸುರಹೊನ್ನೆ ಮತಕ್ಕೆ ಬಂದು
ಕಾಯೆ ಕಂಬಳಿಯ
ತಿರುಗಿ ಗದ್ದಿಗೆ ಹೂಡಿ

ಕರಿಯ ಕಂಬಳಿಯು
ಬೀಸಿ ಗದ್ದಿಗೆ ಹೂಡಿ
ಕಾಳು ನಾಯಿ ಜೂಲು ನಾಯಿ
ಏಳು ಸಾವಿರ ಹುಂಡಿದನವ
ಮಯ್ಯಾಕೆ ಹೊಡೆದು ಬುಟ್ಟು
ಚಿನ್ನದ ಕೊರಳ ಬೆಳ್ಳಿ ಕೊರಳ
ಲಾಲೇಸಿನುಡಿತಾನೆ
ಬಯಲು ಸೀಮೆಯ ಗೌಡನ ಮಗಳು
ಬಿಂದಿಗೆಯ ತಕ್ಕೊಂಡು
ನೀರಿಗೆ ಬರುತಾಳೆ
ನೀರಿಗೆ ಬರುವಾಗ
ಅವನು ಲಾಲೇಸಿ ನುಡುತಾನೆ
ಅವಳು ಗ್ಯಾನೇಸಿ ಕೇಳಾಳೆ
ಬಿಂದಿಗೆಯ ಇಟ್ಟುಬುಟ್ಟು
ಸುರ ಹೊನ್ನೆ ಮರತಾಕೆ
ಹೋದಾಳೆ ಗೌಡನ ಮಗಳು
ಯಾವ ಸೀಮೆ ಚೆಲುವಾನೊ
ಯಾವ ನಾಡ ದೊರೆಮಗನೊ
ನಾವು ಇನವಂದ ಆಡೂನ ಬಾರೊ
ಕೇಳವ್ವನ ತಾಯಿ
ನಾನೋಡಿದರೆ ಗೊಲ್ಲರ ಹುಡುಗ
ನೀನೋಡಿದರೆ ಗೌಡನ ಮಗಳು
ನಿನ್ನೊಂದಿಗೆ ಇನವಂದ
ನಾನಾಡೋದಿಲ್ಲ ತಾಯಿ
ಅಂಜಬ್ಯಾಡ ಅಳುಕಬ್ಯಾಡ
ನಾವಿನವಂದ ಆಡೂನಬಾ
ನಿನ್ನೊಂದಿಗೆ ಇನವಂದ
ನಾನಾಡೋದಿಲ್ಲ
ಏನೇನ್ಹೆಳಿದ ರೂವೆ
ಕೇಳಳೆಲೆ ಗೌಡನ ಮಗಳು
ನಿನ್ನೊಂದಿಗೆ ಇನವಂದ
ಆಡಿದರೆ ಸರಿಹೋಯ್ತು
ಇನವಂದ ಆಡದೆ ಹೋದ್ರೆ
ನಿನ್ನ ಶಿರವ ಕಡಿಸೂವೆ
ನಿನ್ನ ಶಿರವಾನೆ ಮೆಟ್ಟಿಕೊಂಡು
ನಾ ತಣ್ಣೀರ ಮೀಯುತೀನಿ
ಅವಳೇನೇನ್ಹೇಳಿದರೂವೆ
ಕೇಳಾನಲ್ಲೆ ಗೊಲ್ಲ ರ‍್ಹುಡುಗ
ತೊಟ್ಟಿದ ಬಳೆಗಳ
ಲಗ್ಗಾನೆ ನರಕಾಳೆ
ಇಕ್ಕಿದ್ದ ಸೀರೆ ರವಕೆ
ಪರಪರನೆ ಹರುದಾಳೆ
ಬಳೆಯಗಾಜ ತಕ್ಕೊಂಡವಳು
ಮೈ ಕೈಯ್ಯ ಗಂಜುಕೊಂಡು
ಬಿಂದಿಗೆಯ ನಿಟ್ಟುಬಿಟ್ಟು
ಊರಿಗೆ ಹೋಗುತಾಳೆ
ಮಂಚಾಕೆ ಮೊಕಾಡೆಯಾಗಿ
ಮಲಗಾಳೆ ಗೌಡನ ಮಗಳು
ಬಯಲು ಸೀಮೆ ಗೌಡನ ಹೆಡ್ತಿ
ಮಗಳಿದ್ದ ಮಂಚಕೆ ಬಂದಳು
ಯಾಕವ್ ನನಕಂದ
ಊಟಾವ ಮಾಡುಬಾರೆ
ನಿನ ಊಟ ಯಾರಿಗೆ ಬೇಕು
ಹೋಗವ್ವ ಅಂಗಂದು
ಅವರ ತಾಯಿಯ ಕಳುಗಾಳೊ
ಬಯಲುಸೀಮೆ ಗೌಡನ ಹೆಂಡ್ತಿ
ತನ್ನ ಗಂಡನಿಗೆ ಹೇಳಿದಳೆ
ಬಯಲು ಸೀಮೆ ಗೌಡ ಬಂದಿ
ಏನೆಂದು ಕೇಳುತಾನೆ
ಯಾಕವ್ವ ನನ ಕಂದ
ನಿನ್ನ ಕಷ್ಟವೇನೆ ಸುಖವೇನೆ
ಹೇಳವ್ವ ನಿನ್ನೊಂದಿಗೆ

ಕೇಳಪ್ಪ ನನ ತಂದೆ
ಅಂಜಿ ಬಿನ್ನ ಮಾಡಲೊ
ನಾನಂಜದೆ ಬಿನ್ನ ಮಾಡಲೊ
ಅಂಜಬ್ಯಾಡ ಅಳುಕಬ್ಯಾಡ
ಹೇಳವ್ವ ನನ್ನೊಂದಿಗೆ
ಕೇಳಪ್ಪ ನನ ತಂದೆ
ಅವನ್ಯಾವ ಸೀಮೆಯ ಗೊಲ್ಲರ‍್ಹುಡುಗ
ಅವನು ಏಳು ಸಾವಿರ ಹುಂಡಿದನವ
ಅಟ್ಟಿಕೊಂಡು ಗೊಲ್ಲರ‍್ಹುಡುಗ
ಸುರಹೊನ್ನೆ ಮರತಾಕೆ ಬಂದಿ
ಕರಿಯ ಕಂಬಳಿಯ
ತಿರುಗಿ ಗದ್ದಿಗೆ ಹೂಡಿ
ಕರಿಯ ಕಂಬಳಿಯ
ಬೀಸಿ ಗದ್ದಿಗೆ ಹೂಡಿ
ಕಾಳು ನಾಯಿ ಜೂಲುನಾಯಿ
ಏಳು ಸಾವಿರ ಹುಂಡಿದನವ
ಮೆಯ್ಯೊಕೆ ಹೊಡುತಾನೆ
ಚಿನ್ನದ ಕೊರಳ ಬೆಳ್ಳಿಕೊರಳ
ಲಾಲೇಸಿ ನುಡುತಾನೆ
ಬಿಂದೀಗೆ ತಕ್ಕೊಂಡು
ನಾ ನೀರಿಗೆ ಹೋಗುವಾಗ
ಕಂಡನಲ್ಲೊ ಗೊಲ್ಲರ‍್ಹುಡುಗ
ಕೈ ಗುದ್ದೀಗೆ ಮೈಗುದ್ದೀಗೆ
ಬಂದಾನೆ ಗೊಲ್ಲರ‍್ಹುಡುಗ
ಬ್ಯಾಡ ಅಂದು ನಾನು
ಸಾರಿ ಹೇಳುತ ಬಂದೆ
ಕೇಳಲಿಲ್ಲ ಗೊಲ್ಲರ‍್ಹುಡುಗ
ಅವನ ಶಿರವ ಮೆಟ್ಟಿಲು ಕೊಂಡು
ನಾ ತಣ್ಣೀರು ಮೀಯಬೇಕು
ಬಂದಾನೆ ಬಯಲುಸೀಮೆ ಗೌಡ
ದಂಡನಾದರೆ ಕರಕೊಂಡು

ಸುರಹೊನ್ನೆ ಮರತಾಕೆ ಹೋಗಿ
ತಪ್ಪು ಕಾಣದೆ ತಾಗುಕಾಣದೆ
ಅವನ ಶಿರವನ್ನು ಕಡುತಾನೆ
ಮಗಳಿಗೆ ತಂದು ಕೊಡುತಾನೆ
ಅವನ ಶಿರವ ಮೆಟ್ಟಲುಗೊಂಡು
ತಣ್ಣೀರ ಮೀಯುತಾಳೆ

* * * *

ಎಲ್ಲಿ ಕಂಡವೊ ಯಾತಾವು ಕಂಡವೊ
ಬಂದವಲ್ಲೆ ಕಾಳುನಾಯಿ ಜೂಲುನಾಯಿ
ಕಾಳು ನಾಯಿ ಜೂಲು ನಾಯಿ
ಆಕಾಶ ಕಾರುತಾವೆ

ಭೂಮಿಗೆ ಬೀಳುತಾವೆ
ಏಳು ಸಾವಿರ ಹುಂಡಿದನ
ಬಂದಿನ್ನು ನೋಡುತಾವೆ
ಜೂಜು ಕೊಂಬಿನ ಹೋರಿ
ಬಟ್ಟು ಕೊಂಬಿನ ಬಸವ
ಕಾಮ ಜೇನು ಅನ್ನುವ ಹಸ
ನವಿಲು ಅನ್ನುವ ಹೋರಿ
ಕಾಳು ನಾಯಿ ಜೂಲುನಾಯಿ
ಅವ ಕರಕೊಂಡು ಹೋಗುತಾವೆ
ಏಳು ಸಾವಿರ ಹುಂಡಿದನ
ಅವನ ಪಟ್ಟಣಕೆ ಹೋಗುತಾವೆ
ಬಯಲು ಸೀಮೆ ಗೌಡನ
ಹಟ್ಟಿಗೆ ಸೀಮೆ ಗೌಡನ ಮಗಳ
ಒದ್ದಿ ಜೀವನ ತಗದಿ
ಬಯಲು ಸೀಮೆ ಗೌಡನ
ತುಳದಿ ಜೀವವ ತಗದಿ
ಅವನ ಶಿರವನ್ನು ತಗುದಾವೆ
ಈಚೆಗೆ ಮಡಗೀದೊ
ಕಾಮಜೇನು ಅಂಬುವ ಹಸ
ಕೊಂಬಿನೆಡೆಯಲು ಮಡಗಿಕೊಂಡು
ಸುರಹೊನ್ನೆ ಮರತಕ್ಕೆ ಬಂದು
ಮಂಡಕ್ಕೆ ಶಿರವನ್ನು ಮಡಗಿ
ಮರುಜವಳಿ ಕಡ್ಡಿಯ ತಂದು
ಮಂತ್ರಿಸಿ ಜೀವವತಂದಿ
ಏಳಯ್ಯ ನನ ತಂದೆ
ನಾನು ಪಟ್ಟಣಕ್ಕೆ ಹೋಗನಂದು
ಕರಕೊಂಡು ಹೋಗುವಾಗ
ಜಗಂಜ್ಯೋತಿ ಮಾವಿನ ಮರವೆ
ಬಯಲುಸೀಮೆಯ ಗೌಡನ ಮಗಳೆ

ಪಾಠಾಂತರಗಳು ಮತ್ತು ಸಮಾನ ಆಶಯದ ಪಠ್ಯಗಳು

೧) ಗೊಲ್ಲರ ಹುಡುಗ; ಭಾನುಮತಿ ವೈ.ಸಿ. ಪುಟ್ಟಮಲ್ಲಿಗೆ ಹಿಡಿತುಂಬ, ತಾರಾ ಪ್ರಿಂಟಿಂಗ್ ಪ್ರೆಸ್, ಮೈಸೂರು ೨೦೦೧, ಪು.ಸಂ. ೯೧-೧೦೧.

೨) ಗೋಮೇಸೋ ಗೊಲ್ಲಾರ‍್ಹುಡುಗ; ಕೆದ್ಲಾಯ ಕುಂಜಿಬೆಟ್ಟು ಸುಬ್ರಹ್ಮಣ್ಯ, ಹಾಡಿಗೆ ಹನ್ನೆರಡು ಕಬರು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೩, ಪು.ಸಂ. ೧೧೫-೧೨೩.*      ಬಯಲು ಸೀಮೆಯ ಗೌಡನ ಮಗಳು; ಹನೂರು ಕೃಷ್ಣಮೂರ್ತಿ, ಜನಪದ ಮತ್ತು ಬುಡಕಟ್ಟು ಗೀತೆಗಳು; ಸಾಹಿತ್ಯ ಅಕಾಡೆಮಿ ಬೆಂಗಳೂರು ೧೯೯೮ ಪು.ಸಂ. ೧೨೧-೧೨೬.