ಹಸರಂಗಿ ಸರದಾರ ಬಿಳ್ಳೀಯ ಉಡಿದಾರ
ಎಲ್ಲಾಡಿ ಬಂದ್ಯೋ ಮಳೆರಾಯ | ಈ ತೋಟ
ನೆಲ್ಲಿ ಗದ್ದೇಗೆ ನವುಲಾಟ ||

ಮಳೆರಾಯಾ ನಿನ್ನ ಕರದೋರು ಯಾರೆಂದುs
ಕರಿಯಾ ಕಂಬಳಿ ಗೌಡsರು | ಹಟ್ಯಾಲೋರು
ಕೈ ಬೀಸಿ ನಿನ್ನಾ ಕರೆದಾರೋ ||

ಹಾದಿ ವೋಣಿ ಕಡೆ ಆದಾವೆ ಮಳೆ ಮಾಡ
ಹೋಗಿ ತಂಗ್ಯಮ್ಮ ಕರುತಾರೋ | ನಮ್ಮನಿಯ
ಮುತ್ತೀನ ಹಂತಿ ಹೊರುವಾಕೆ ||

ತಾಯಿ ಯೇಳಿದ ಮಾತು ಕೇಳ್ಯಾನೆ ತನ ಮಗ
ವೋಗಿ ತಂಗ್ಯಮನ ಕರುತಂದಾ || ಕೋಲು ಕೋಲೆ

ಮುತ್ತೀನ ಹರವೀಗೆ ರತ್ನ ಮಾಣಿಕ್ಯದ ಸಿಂಬೆ
ನಿಸ್ತ್ರೇ ಗೌರಮ್ಮ ಹೊರು ಬಾರೆ || ಕೋಲು ಕೋಲೆ
ಹೊನ್ನೀನ ಹರವೀಗೆ ರನ್ನದ ಮಾಣಿಕ್ಯದ ಸಿಂಬೆ
ರಂಬೆ ಪಾರ್ವತಿ ಹೊರು ಬಾರೆ || ಕೋಲು ಕೋಲೆ

ಬಿತ್ತೋ ಕೂರಿಗೆ ಮುಂದೆ ಬೀಸೋ ಅರವಿ ಹಿಂದೆ
ಅಟ್ಟೇ ಜಾಂಬುವನ ಮಿಣಿ ಮುಂದೆ | ಹಟ್ಯಾಲೋರು
ಮುತ್ತೇ ಬಿತ್ಯಾರೆ ಹೊಲುದಾಗೆ ||

ಸಾಗೋ ಕೂರಿಗೆ ಮುಂದೆ ಹೊನ್ನಿನ ಅರಿವೇ ಹಿಂದೆ
ಸಾಲಾ ಜಾಂಬುವನ ಮಿಣಿ ಮುಂದೆ | ಮಲಸೆಟ್ಯೋರು
ಹೊನ್ನೇ ಬಿತ್ತ್ಯಾರೆ ಹೊಲುದಾಗೆ ||

ಹೊಲಮಾಗಿ ನಿಂತಾವೆ ಕಣಮಾಡೋ ನನ ಕಂದ
ಅಟ್ಟೇ ಜಾಂಬುವನ ಕರಸಪ್ಪ || ಕೋಲು ಕೊಲೆ

ಅಟ್ಟೀ ಜಾಂಬುವ ಬಂದು ದಾರೀಲಿ ನಿಂತವನೆ
ಕಣವೆಲ್ಲೆ ತಾಯಿ ಹಡದಮ್ಮ || ಕೋಲು ಕೋಲೆ

ಎತ್ತೋ ದಿಣ್ಣೇಮಾಲೆ ಏಣೀ ಬಂಡೇ ಮ್ಯಾಲೆ
ಕಡುಸಪ್ಪ ಕಂದ ಕಣುಗೂಳ | ನಿನ್ಹೊಲಕೆ
ಬಸಿರೆಂಗ್ರಸ್ತನ ಬೇಗ ಬರಹೇಳೋ ||

ಬಸಿರ್ರೆಂಗಸ್ರನ್ನ ಬ್ಯಾಗ ಬರಹೇಳೋ
ನಿನ್ನೊಲಕೆ ವರುಸಾದ ಕೂಲಿ ಕಳುವಪ್ಪ ||

ವರುಸಾದನ್ನಾ ಕೂಲಿ ಕಳುವಪ್ಪ ನಿನಗಿನ್ನ
ಬಸವನಪ್ಪಣೆಗಳ ಪಡೆದೀಯೆ | ಕೋಲು ಕೋಲೆ

ತುಪ್ಪ ಉಕ್ಕೀದಾಂಗೆ ತೊಟ್ಟು ಮಾಗೀದಾಂಗೆ
ಅಪ್ಪ ನಿನ್ನೊಲಕೆ ಜಯ ಜಯ | ಕೋಲಾಟದೋರು
ನಾರೇರು ಕೊಟ್ಟಂತ ಹರಕೀಯ ||

ನಾವ್‌ಕೊಟ್ಟ ಹರಕೀಯು ಆನೇಯ ಏರಾಲಿ
ನಿನ್ನಾ ರಾಜ್ಯವು ತಿರುನಾಳು || ಕೋಲು ಕೋಲೆ

ಹೊನ್ನು ಹೆಚ್ಚಾಗಲೀ ಚೆನ್ನಣಸೆ ಉವಾಗಲಿ
ಚೆನ್ನಣ್ಣ ಈಶ್ವುರನ ಕೃಪೆಯಿಂದ | ನಿಮ್ಮನಿಗೆ
ಹೊನ್ನು ಹೆಚ್ಚಾಗಲಿ ದಿನದಿನಕೆ ||

ರೊಕ್ಕ ಹೆಚ್ಚಾಗಲಿ ಮಕ್ಕಳ ಫಲವಾಗಲಿ
ಮುಕ್ಕಣ್ಣ ಈಶ್ವುರನ ಕೃಪೆಯಿಂದ | ಈ ಮನಿಗೆ
ರೊಕ್ಕಾವು ಹೆಚ್ಚಾಗಲಿ ದಿನದಿನಕೆ ||

ನಿಂಬೀಯ ಹಣ್ಣಾಗೋ ನಿಂಬೀಯ ಕಾಯಾಗೋ
ತಿಂಗಳಿಗೊಂದರ ದೊರಿಯಾಗೋ | ಅಣ್ಣಯ್ಯ
ವೋಗುತೀವಿ ದೊರಿಯೇ ತಣ್ಣಾಗಿರೋ ||

ಬಾಳೀಯ ಹಣ್ಣಾಗೋ ಬಾಳೀಯ ಕಾಯಾಗೋ
ಜಾಮಾಕೊಂದೂರು ದೊರಿಯಾಗೋ | ಅಣ್ಣಯ್ಯ
ವೋಗಿಬರುತೀವಿ ದೊರಿಯೆ ತಾನಾಗೀರೋ ||

ಹಾಡಿ ಆಡಿ ನಮ್ಮ ಬಾಯಗಳ ನೊಂದಾವೆ
ಆರುಸಾವಿರ ಮುತ್ತು ಸುರಿದಾವೆ | ಅಣ್ಣಯ್ಯ
ಆರುವರೆ ಕೊಟ್ಟು ಕಳುವಪ್ಪ ||