ಆಚಾರ್ಯ ಬಿ.ಎಂ.ಶ್ರೀ.ಯವರ ‘ನವೋದಯ’ದ ಪ್ರೇರಣೆಯಲ್ಲಿ ತಮ್ಮ ಕಾವ್ಯಾಭಿವ್ಯಕ್ತಿಯನ್ನು ಕಂಡುಕೊಂಡ ಹಲವರಲ್ಲಿ ವಿ.ಸೀ.ಯವರೂ ಒಬ್ಬರು. ಕನ್ನಡ  ನವೋದಯ ಕಾವ್ಯದ ಹೆದ್ದಾರಿಯನ್ನು ಹಳೆಯ ಮೈಸೂರಿನ ಪರಿಸರದಲ್ಲಿ ತೆರೆಯಿತೆಂದು ಹೇಳಲಾದ ಶ್ರೀಯವರ ಕೃತಿಯ ಹೆಸರು ‘ಇಂಗ್ಲಿಷ್ ಗೀತಗಳು’.ಇದು ಪ್ರಕಟವಾದದ್ದು ೧೯೨೬ರಲ್ಲಿ. ವಿ.ಸೀ.ಯವರ ಮೊದಲ ಕವನ ಸಂಕಲನ ಪ್ರಕಟವಾದದ್ದು ೧೯೩೧ರಲ್ಲಿ. ಅದರ ಹೆಸರು ‘ಗೀತಗಳು’. ಸ್ವಾರಸ್ಯದ ಸಂಗತಿ ಎಂದರೆ ‘ಗೀತಗಳು’ ಎನ್ನುವ ಮಾತು ಈ ಇಬ್ಬರ ಕೃತಿಗಳಲ್ಲಿ ಸಮಾನವಾಗಿರುವಂತೆ ತೋರಿದರೂ, (ಒಂದು ಇಂಗ್ಲಿಷ್ ಕವಿತೆಗಳ ಅನುವಾದ, ಮತ್ತೊಂದು ಸ್ವಂತದ್ದು ಅನ್ನುವ ವ್ಯತ್ಯಾಸ ಎಲ್ಲರೂ ಬಲ್ಲ ಸಂಗತಿಯಾದರೂ) ವಿ.ಸೀ. ಯವರದ್ದು ಶ್ರೀಯವರದ್ದಕ್ಕಿಂತ ತೀರಾ ಭಿನ್ನವಾದ ಅರ್ಥವನ್ನು ಕೊಡುವಂಥದ್ದಾಗಿದೆ ಎಂಬುದನ್ನು ಯಾರಾದರೂ ಗುರುತಿಸಬಹುದಾಗಿದೆ. ಶ್ರೀ ಯವರಲ್ಲಿನ ‘ಗೀತಗಳು’ ಅನ್ನುವುದು ಮುಖ್ಯವಾಗಿ ಇಂಗ್ಲಿಷಿನ ಲಿರಿಕ್ ಕಾವ್ಯ ಪದ್ಧತಿಯನ್ನೂ, ತತ್ಪರಿಣಾಮವಾಗಿ ಕನ್ನಡದಲ್ಲಿ ಪ್ರಾರಂಭವಾದ ‘ಭಾವಗೀತೆ’ ಎಂಬ ಕಾವ್ಯ ಪ್ರಕಾರವನ್ನೂ ಸೂಚಿಸುವ ಉದ್ದೇಶದ್ದಾದರೆ, ವಿ.ಸೀ. ಯವರ ‘ಗೀತಗಳು’ ಮುಖ್ಯವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗಗಳ ಪರಿಜ್ಞಾನದಿಂದ ರಚಿತವಾದ ಹಾಡುಗಳ ಪರಂಪರೆಯೊಂದನ್ನು ಸೂಚಿಸುತ್ತವೆ. ಶ್ರೀಯವರ ಮಾರ್ಗದಲ್ಲಿ ರೂಪುಗೊಂಡ ಕನ್ನಡ ‘ಭಾವಗೀತ’ಗಳನ್ನು ಹಾಡಿಗೆ ಅಳವಡಿಸಲು ಸಾಧ್ಯವಿದ್ದರೂ, ಮತ್ತು ಅವು ಅನೇಕ ಸಂಗೀತಗಾರರ ಮೂಲಕ ಸೊಗಸಾದ ಹಾಡುಗಾರಿಕೆಗೆ ಒಳಗಾದರೂ, ಮೂಲತಃ ಅವು ವಾಚನಕ್ಕೆ ಹೇಳಿ ಮಾಡಿಸಿದ ಕಾವ್ಯ ರೂಪಗಳು ನಿಜವಾಗಿ ನೋಡಿದರೆ ಅವು ಓದುವ ಕವಿತೆಗಳು.ಆದರೆ ವಿ.ಸೀ.ಯವರ ‘ಗೀತಗಳು’ ಹಾಗಲ್ಲ. ಅವರೇ ಹೇಳಿಕೊಂಡಿರುವಂತೆ “ಇಲ್ಲಿ ಪ್ರಕಟಿಸಿರುವ ಕವನಗಳೆಲ್ಲ ಬಹುಶಃ ಹಾಡುಗಳಾಗಿಯೇ ಹುಟ್ಟಿದವು….ಅವುಗಳನ್ನು ಹಾಡಿಕೊಳ್ಳದಿದ್ದರೆ ಇರಬಹುದಾದ ಅಲ್ಪಸ್ವಲ್ಪ ಸ್ವಾರಸ್ಯವನ್ನೂ ಅನುಭವಿಸುವುದು ಕಷ್ಟವಾದೀತು” (ಗೀತಗಳು: ಮುನ್ನುಡಿಯಲ್ಲಿ).ಅಷ್ಟೇ ಅಲ್ಲ ವಿ.ಸಿ ಯವರೇ ಒಂದೊಂದು ಕವಿತೆಯ ಮೊದಲಲ್ಲಿಅವುಗಳನ್ನು ಹಾಡಬೇಕಾದ ರಾಗಗಳನ್ನೂ,-ಮೋಹನ, ಹಿಂದೋಳ, ಭೈರವಿ, ಕೇದಾರಗೌಳ ಹೀಗೆ-ಸೂಚಿಸಿದ್ದಾರೆ. ಜತೆಗೆ ದ್ವಿತೀಯಾಕ್ಷರ ಪ್ರಾಸವೂ ಉಳಿದುಕೊಂಡಿದೆ. ೧೯೧೧ರಷ್ಟು ಹಿಂದೆಯೇ ಗೋವಿಂದ ಪೈಯವರು ‘ಪ್ರಾಸತ್ಯಾಗದ ಧೀರ ನಿರ್ಧಾರ’ವನ್ನು ಕೈಗೊಂಡಿದ್ದರೂ, ಶ್ರೀಯವರ ಪ್ರಯೋಗಗಳು ಮತ್ತು ಅವರಿಂದ ಪ್ರೇರಣೆ ಪಡೆದು ಹೊಸ ರೀತಿಯಲ್ಲಿ ಬರೆಯುತ್ತಿದ್ದ ಇನ್ನೂ ಹಲವರೂ, ದ್ವಿತೀಯಾಕ್ಷರ ಪ್ರಾಸ ನಿರ್ಬಂಧವನ್ನು ವರ್ಜಿಸಿ, ಹೊಸ ರೂಪಗಳನ್ನು ಆವಿಷ್ಕಾರ ಮಾಡುತ್ತ ಲವಲವಿಕೆಯ ಕಾವ್ಯ ಬರೆಯುತ್ತಿದ್ದ ಸಂದರ್ಭದಲ್ಲಿ, ಹಿಂದಿನ ಶಾಸ್ತ್ರೀಯ ಸಂಗೀತದ ಚೌಕಟ್ಟಿನಲ್ಲಿ, ದ್ವಿತೀಯಾಕ್ಷರ ಪ್ರಾಸವನ್ನೂ ಉಳಿಸಿಕೊಂಡು ಬರೆದ ಈ ‘ಗೀತಗಳು’ ಯಾವ ಹೊಸತನವನ್ನು ಪ್ರಕಟಿಸಿಯಾವು ಎಂದು ಮೇಲುನೋಟಕ್ಕೆ ತೋರುವುದು ತೀರಾ ಸಹಜವಾಗಿದೆ. ‘ಗೀತಗಳು’ ಸಂಗ್ರಹದಲ್ಲಿ, ಶಾಸ್ತ್ರೀಯ ಸಂಗೀತದ ಮಾದರಿಗೆ ಹೊರತಾದ, ಮತ್ತು ನವೋದಯದ ಲಕ್ಷಣವನ್ನು ಪ್ರತಿನಿಧಿಸುವ ಕೆಲವು ಕವಿತೆಗಳಿದ್ದರೂ, ಬಹುಪಾಲು ಕವಿತೆಗಳು ಹಾಡಲೆಂದೇ, ಹಾಡುಗಳಾಗಿಯೇ ಹುಟ್ಟಿಕೊಂಡ ‘ಗೀತ’ಗಳಾಗಿರುವುದನ್ನು ನೋಡಿದರೆ, ವಿ.ಸೀ.ಯವರು, ಕನ್ನಡ ನವೋದಯಕ್ಕೆ ಕೀರ್ತನ ಪರಂಪರೆಯಿಂದ ಪಡೆಯಬಹುದಾದ ಪ್ರೇರಣೆ ಎಷ್ಟೆಂಬುದನ್ನು ಪರೀಕ್ಷಿಸಿದಂತೆ ತೋರುತ್ತದೆ. ಬಹುಶಃ ಅದಕ್ಕೆ ಒತ್ತಾಸೆಯಾಗಿ ಒದಗಿದ್ದು ಅವರಿಗಿದ್ದ ಶಾಸ್ತ್ರೀಯ ಸಂಗೀತದ ಮೇಲಿನ ಅಭಿರುಚಿ ಮತ್ತು ಪ್ರೀತಿ ಎಂದು ತೋರುತ್ತದೆ. ಈ ದೃಷ್ಟಿಯಿಂದ ನೋಡಿದರೆ, ಪಶ್ಚಿಮದ ಪ್ರಭಾವದಿಂದ ಉಂಟಾದ ಭಾರತೀಯ ಪುನರುಜ್ಜೀವನದ ಒಂದು ಭಾಗವಾದ ‘ಕನ್ನಡ ನವೋದಯ’ ಕಾವ್ಯಕ್ಕೆ ಹಿಂದೆ, ದೇಶೀಯವಾದ ಅನುಭಾವಿಕ, ಜಾನಪದೀಯ, ಹಾಗೂ ಶಿಷ್ಟಕಾವ್ಯ ಪರಂಪರೆಗಳಿರುವಂತೆಯೇ, ಕನ್ನಡದ ಭಕ್ತಿ ಪರಂಪರೆಯ, ಅದರಲ್ಲಿಯೂ ಕೀರ್ತನ ಪರಂಪರೆಯ ಅಥವಾ ಹರಿದಾಸ ಪರಂಪರೆಯ, ಪ್ರೇರಣೆಗಳೂ ಸಾಕಷ್ಟಿವೆ. ವಿ.ಸೀ., ಶ್ರೀನಿವಾಸ, ಡಿ.ವಿ.ಜಿ., ಬೆಟಗೇರಿ ಕೃಷ್ಣಶರ್ಮ ಇಂಥವರ ಕವಿತೆಯ ಒಂದಷ್ಟು ಭಾಗ ಈ ಮಾತಿಗೆ ನಿದರ್ಶನವಾಗಿದೆ ಎಂಬುದನ್ನು ಪರೀಕ್ಷಿಸಿ ನೋಡಬಹುದು.

ವಿ.ಸೀ. ಯವರ ಮೊದಲ ಸಂಕಲನದಲ್ಲಿ ಮಾತ್ರವಲ್ಲ, ಅವರ ಮುಂದಿನ ಒಂದೆರಡು ಸಂಕಲನಗಳಲ್ಲಿಯೂ ಈ ಮಾದರಿಯ ಪದ್ಯರಚನೆಗಳಿವೆ. ೧೯೭೩ ರ ವೇಳೆಗೆ, ಪುನರ್‌ಮುದ್ರಣಗೊಂಡ ಇದೇ ‘ಗೀತಗಳು’ ಸಂಕಲನಕ್ಕೆ ಮತ್ತೊಂದು ಪ್ರಸ್ತಾವನೆ ಬರೆಯುತ್ತಾ, “ಇವೊತ್ತು ಕವಿತೆಯಿಂದ ಗೇಯತೆ ಗಡೀಪಾರಾಗಿದೆ”, ಎಂದು ಬರವಣಿಗೆಯಲ್ಲಿ ಬದಲಾದ ಕ್ರಮಗಳನ್ನು ಕುರಿತು ಕೊರಗುತ್ತಾರೆ. ಕವಿತೆ ಒಳ್ಳೆಯ ಹಾಡುಗಾರಿಕೆಯ ಮೂಲಕ ಹೆಚ್ಚು ಉತ್ಕರ್ಷವನ್ನು, ಬಹು ಜನ ಸಂವಹನತೆಯನ್ನು ಪಡೆದುಕೊಳ್ಳುತ್ತದೆ ಎಂದು ನಂಬಿದವರು ಅವರು. ಆದರೆ, ಸುಗಮ ಸಂಗೀತಕ್ಕೆ ಅಳವಡುವ ಕವಿತೆಗೂ, ಇಂಥದೇ ಶಾಸ್ತ್ರೀಯ ಸಂಗೀತದ ರಾಗದ ಮೂಲಕ ಹಾಡಲೆಂದು ಬರೆದ ಕವಿತೆಗೂ ಮೂಲಭೂತವಾದ ವ್ಯತ್ಯಾಸವಿದೆ. ವಿ.ಸೀ. ಯವರ ‘ಗೀತಗಳು’ ಮುಖ್ಯವಾಗಿ ನಿರ್ದಿಷ್ಟ ರಾಗಗಳ ಮೂಲಕ ಹಾಡಿಕೊಳ್ಳಲೆಂದೇ ಬರೆದವು. “ಅವುಗಳನ್ನು ಹಾಡಿಕೊಳ್ಳದೆ ಇದ್ದರೆ ಇರಬಹುದಾದ ಅಲ್ಪಸ್ವಲ್ಪ ಸ್ವಾರಸ್ಯವನ್ನು ಅನುಭವಿಸುವುದೂ ಕಷ್ಟವಾದೀತು” ಎಂದು ಅವರೇ ಹೇಳಿಕೊಂಡಿರುವುದನ್ನು ನೋಡಿದರೆ, ಅವು ಕೇವಲ ಓದಿಕೊಂಡಾಗ ಅಂತಹ ಸ್ವಾರಸ್ಯವನ್ನೇನ್ನೂ ಕೊಡಲಾರವು ಎಂಬ ಅಳುಕು ಅವರಿಗೇ ಇರುವಂತೆ ತೋರುತ್ತದೆ. ಆದರೆ ಅವರ ಈ ಅಳುಕು ಸಂಪೂರ್ಣ ನಿಜವಲ್ಲ ಅನ್ನುವುದನ್ನು ‘ಮಾಧುಮಾಸ’ ‘ಮೊರೆ’ ‘ಏಳಿ’ ‘ಸ್ನೇಹ’ ‘ಕಸ್ಮೈ ದೇವಾಯ’ ‘ಸಿದ್ಧಾರ್ಥನ ರಾಜ್ಯ ಪರಿತ್ಯಾಗ’ ‘ಮನೆ ತುಂಬಿಸುವುದು’ ‘ಉಂಗುರ ರವ ಕೇಳಿ’-ಇಂಥ ಹಲವಾರು ಕವಿತೆಗಳು ಸಾಬೀತು ಪಡಿಸುತ್ತವೆ. ಹಾಡಿದಾಗ ಇವು, ವಿ.ಸೀ.ಯವರೇ ಸೂಚಿಸುವ ರಾಗಗಳಲ್ಲಿ ಹೆಚ್ಚು ಉತ್ಕರ್ಷವನ್ನು ಪ್ರಕಟಿಸ ಬಹುದಾದರೂ, ಹಾಗೆಯೇ ಗಟ್ಟಿಯಾಗಿ ಓದಿಕೊಂಡಾಗಲೂ ಇವು ತಮ್ಮ ಅರ್ಥಸ್ವಾರಸ್ಯದಿಂದ ತಕ್ಕ ಕಾವ್ಯಾನುಭವವನ್ನು ವ್ಯಂಜಿಸುತ್ತವೆ.

ವಿ.ಸೀ. ಯವರ ‘ಗೀತಗಳು’ ಕನ್ನಡ ನವೋದಯ ಸಂದರ್ಭದಲ್ಲಿ, ಹಿಂದಿನ ‘ಕೀರ್ತನ ಪರಂಪರೆ’ಯ ಮಾದರಿಗಳನ್ನು ಮುಂದುವರಿಸುವ ಪ್ರಯತ್ನದಂತೆ ತೋರುತ್ತವೆ ಎಂಬ ಮಾತು, ‘ಗೀತಗಳು’ ಸಂಗ್ರಹದ ಹಲವು ಕವನಗಳ ‘ರೂಪಾಂಶ’ಕ್ಕೆ ಮತ್ತು ಹಾಡುಗಾರಿಕೆಗೆ ಹೊಂದುವ ಲಕ್ಷಣಕ್ಕೆ ಮಾತ್ರ ಅನ್ವಯಿಸುವ ಮಾತೇ ಹೊರತು, ಅವುಗಳ ವಸ್ತು ಹಾಗೂ ನಿಲುವಿಗೆ ಸಂಬಂಧಿಸಿದ್ದಲ್ಲ. ಯಾಕೆಂದರೆ ಕೀರ್ತನ ಪರಂಪರೆಯ ರಚನೆಗಳು ಒಂದು ನಿರ್ದಿಷ್ಟ ಧಾರ್ಮಿಕ ನಿಲುವನ್ನೂ, ಒಂದು ಇಷ್ಟದೈವದ ಕಲ್ಪನೆಯನ್ನೂ, ಸಾಧನೆಯ ಹಾಗೂ ಧರ್ಮ ಪ್ರಸಾರದ ಉದ್ದೇಶವನ್ನೂ ಒಳಗೊಂಡವುಗಳು.ಆದರೆ ನವೋದಯ ಸಂದರ್ಭದಲ್ಲಿ ‘ಕೀರ್ತನೆ’ಗಳನ್ನು ಹೋಲುವ ವಿ.ಸೀ. ಮತ್ತಿತರರ ರಚನೆಗಳು ಮೂಲತಃ ನವೋದಯದ ಧರ್ಮನಿರಪೇಕ್ಷ ನಿಲುವಿನಲ್ಲಿ ಅಭಿವ್ಯಕ್ತವಾದವುಗಳು. ಅಷ್ಟೆ ಅಲ್ಲ, ನವೋದಯ ಸಂದರ್ಭದಲ್ಲಿ ಈ ಮಾದರಿಯಲ್ಲಿ ಬರೆದವರಿಗಿಂತ ಬೇರೆಯೆಂಬಂತೆ ತೋರುವ, ವಸ್ತುಗಳನ್ನು ವಿ.ಸೀ. ಯವರು ಈ ಗೀತಗಳಲ್ಲಿ ನಿರ್ವಹಿಸಿದ್ದಾರೆ ಎನ್ನುವುದು ಮುಖ್ಯವಾದ ಸಂಗತಿಯಾಗಿದೆ. ಮಾಸ್ತಿಯವರ ‘ಬಿನ್ನಹ’, ಡಿ.ವಿ.ಜಿ. ಯವರ ‘ನಿವೇದನ’ ‘ಅಂತಃಪುರಗೀತೆ’ ಇಂಥ ಸಂಗ್ರಹಗಳ ಕವಿತೆಗಳೊಂದಿಗೆ ಹೋಲಿಸಿ ನೋಡಿದರೂ, ಈ ವ್ಯತ್ಯಾಸ ಸ್ಪಷ್ಟವಾಗುತ್ತದೆ. ವಿ.ಸೀ. ಯವರು ನಿಸರ್ಗ, ಮಾನವೀಯತೆ, ಸಾಮಾಜಿಕ ಸಂದರ್ಭ, ವೈಚಾರಿಕ ಇತ್ಯಾದಿಗಳನ್ನು ‘ವಸ್ತು’ಗಳನ್ನಾಗಿ ಈ ಗೀತರೂಪಗಳಲ್ಲಿ ತಂದಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಹಿಂದಿನ ಭಕ್ತಿ ಪರಂಪರೆಯಲ್ಲಿ, ಒಂದು ಬಗೆಯ ಆರ್ತತೆ, ಹಂಬಲ, ನಿಸರ್ಗವನ್ನು ಕುರಿತ ಸಂಪೂರ್ಣ ನಿರ್ಲಕ್ಷ್ಯ ಇತ್ಯಾದಿಗಳೆ ‘ಕೀರ್ತನ ರೂಪ’ಗಳ ಮುಖ್ಯ ಲಕ್ಷಣಗಳಾಗಿದ್ದರೆ, ಅದೇ ಬಗೆಯ ರೂಪಗಳನ್ನು ವಿ.ಸೀ.ಯವರು ಮಾನವೀಯ ಮೌಲ್ಯಗಳ ಘನತೆಯನ್ನೂ, ನಿಸರ್ಗ ಪ್ರೀತಿಯನ್ನೂ, ಸಾಂಸಾರಿಕ ಸಾಮಾಜಿಕ ಸಂದರ್ಭಗಳನ್ನೂ, ಹೊಸಕಾಲದ ವೈಚಾರಿಕತೆಯನ್ನೂ-ಅಭಿವ್ಯಕ್ತಪಡಿಸಲು ಬಳಸಿಕೊಳ್ಳುತ್ತಾರೆ. ಅಂದರೆ, ಆಧುನಿಕ ವೈಚಾರಿಕತೆ ಹಾಗೂ ಸಂವೇದನೆಗಳನ್ನು, ಹಿಂದಿನ ಕೀರ್ತನ ಪರಂಪರೆಯ ಹಾಡುಗಳ ಮಾದರಿಯ ಅಭಿವ್ಯಕ್ತಿಯಲ್ಲಿ ಎಷ್ಟರ ಮಟ್ಟಿಗೆ ಹಿಡಿದಿಡಬಹುದು ಎಂಬುದನ್ನು ವಿ.ಸೀ. ಯವರು ಪ್ರಾಯೋಗಿಕವಾಗಿ ಪರೀಕ್ಷೆಗೆ ಒಳಗುಪಡಿಸಿದಂತೆ ತೋರುತ್ತದೆ. ಆದರೆ ನಿಜವಾದ ಬದಲಾವಣೆ ಹಾಗೂ ಹೊಸತನ ಎನ್ನುವುದು, ಹೊಸ ಸಂವೇದನೆಗಳಿಗೆ ಹೊಚ್ಚ ಹೊಸ ರೂಪಗಳನ್ನು ಆವಿಷ್ಕಾರ ಮಾಡಿಕೊಂಡಾಗಲೇ, ಹೊಸ-ಭಾಷೆ ಹಾಗೂ ನುಡಿಗಟ್ಟುಗಳನ್ನು ಕವಿಯೊಬ್ಬ ಕಂಡುಕೊಂಡಾಗಲೇ, ಪ್ರಾಪ್ತವಾಗಬಲ್ಲದು ಎಂಬುದನ್ನು ಅವರು ಬಹುಶಃ ಈ ಹಂತದ ನಂತರ ಕಂಡುಕೊಂಡರೆಂದು ತೋರುತ್ತದೆ. ಆದರೂ ಅವರ ಗದ್ಯದ ಭಾಷೆ ಪಡೆದುಕೊಂಡ ಸತ್ವವನ್ನೂ ವೈವಿಧ್ಯತೆಯನ್ನೂ ಸೊಗಸನ್ನೂ ಅವರ ಕಾವ್ಯದ ಭಾಷೆ ಪಡೆದುಕೊಳ್ಳಲೇ ಇಲ್ಲ. ಶಾಸ್ತ್ರೀಯ ಸಂಗೀತದ ಗುಂಗು, ಪಳಿಯುಳಿಕೆಗಳಂಥ ಪದ ಪ್ರಯೋಗಗಳು ಮತ್ತು ಕಾವ್ಯದ ಅನೇಕ ಸಾಧ್ಯತೆಗಳನ್ನು ದುಡಿಸಿಕೊಳ್ಳುವ ಬಗೆಗೆ ಅವರಿಗಿದ್ದ ಹಿಂಜರಿಕೆ-ಇತ್ಯಾದಿಗಳಿಂದ, ಅವರ ಗದ್ಯಬರೆಹ ಪಡೆದುಕೊಂಡ ಗೆಲುವನ್ನು ಅವರ ಕಾವ್ಯ ಪಡೆದುಕೊಳ್ಳಲಿಲ್ಲವೆಂದೇ ಹೇಳಬೇಕು. ಆದರೂ ಅವರು, ಮೂವತ್ತರ ದಶಕದಿಂದ ಎಂಬತ್ತರ ದಶಕದವರೆಗೂ ಕಾವ್ಯಾಭಿವ್ಯಕ್ತಿಯನ್ನು ಮುಂದುವರಿಸಿದರು. ಅದಕ್ಕೆ ಕಾರಣ ಕವಿತೆಯ ಬಗೆಗಿದ್ದ ಪ್ರೀತಿ ಮತ್ತು ತಮ್ಮ ಬಗೆಗಿದ್ದ ವಿಶ್ವಾಸ. ೧೯೭೨ರಲ್ಲಿ ಪ್ರಕಟವಾದ ‘ಅರಲು-ಬರಲು’ ಸಂಗ್ರಹದ ವಿಸ್ತಾರವಾದ ಪ್ರಸ್ತಾವನೆಯಲ್ಲಿ “ನನ್ನ ಪರವಾದ ಒಂದು ಮನಸ್ಸು ಈವರೆಗೆ ನನ್ನನ್ನು ನಡೆಸಿದೆ” ಎಂದು ಅವರು ಹೇಳಿಕೊಂಡಿರುವ ಒಂದು ಮಾತು ಈ ದೃಷ್ಟಿಯಿಂದ ಮುಖ್ಯವಾದದ್ದಾಗಿದೆ.

ಪ್ರತಿಯೊಬ್ಬ ಕವಿಯ ಕಾವ್ಯನಿರ್ಮಿತಿಯ ಹಿಂದೆ ಅವನದೇ ಆದ, ಅವನ ಪರವಾದ ಒಂದು ಮನಸ್ಸು  ಇರುತ್ತದೆ. ಆ ಮನಸ್ಸು ಕವಿಯ ಸಂಸ್ಕಾರ, ಜೀವನಾನುಭವ, ಕಲಿಕೆ ಮತ್ತು ಬದುಕನ್ನು ಗ್ರಹಿಸುವ ವಿಶಿಷ್ಟವಾದ ವಿಧಾನ, ಹಾಗೂ ಮೌಲ್ಯ ಪ್ರಜ್ಞೆ-ಇತ್ಯಾದಿಗಳಿಂದ ರೂಪುಗೊಂಡದ್ದಾಗಿರುತ್ತದೆ. ಅದೇ ಅವನನ್ನು ಹೊಯ್ದಾಡದಂತೆ ಮುನ್ನಡೆಸುವ ಕಾವ್ಯಶ್ರದ್ಧೆ ಕೂಡ. ಈ ದೃಷ್ಟಿಯಿಂದ ಹೇಳುವುದಾದರೆ ವಿ.ಸೀ. ಅವರ ಕಾವ್ಯದ ಹಿಂದೆ ಇರುವುದು ಪೌರುಷಪ್ರಧಾನವಾದ, ವಾಸ್ತವ ಪ್ರಜ್ಞೆಯ ಒಂದು ರಸಿಕ ಜೀವನದ ದೃಷ್ಟಿ ಎಂದು ಹೇಳಬಹುದು.

ಈ ಮಾತನ್ನು ವಿವರಿಸುವುದಾದರೆ: ವಿ.ಸೀ.ಯವರು ಮೂಲತಃ ಪುರುಷಕಾರದಲ್ಲಿ ನಂಬಿಕೆ ಇಟ್ಟವರು; ವಿಧಿವಾದ, ಕರ್ಮವಾದ ಹಾಗೂ ದೈವವಾದಗಳ ಬಗ್ಗೆ ಅವರಿಗೆ ಅದರವಿಲ್ಲ. ಹಾಗೆಂದರೆ ಅದು ದೈವದ ಅಸ್ತಿತ್ವವನ್ನು ನಿರಾಕರಿಸುವ, ಅತೀತವಾದುದನ್ನು ಅಲ್ಲಗಳೆಯುವ ಧೋರಣೆ ಅಲ್ಲ. ಅದರ ಬದಲು ಸುತ್ತಣ ಅನುಭವಗಳಿಗೆ ಒಬ್ಬ ಪ್ರಜ್ಞಾವಂತನಾಗಿ ಸ್ಪಂದಿಸುವ ಮತ್ತು ಪಾರಂಪರಿಕ ಹಾಗೂ ವರ್ತಮಾನದ ವಿಚಾರಗಳನ್ನು ಪ್ರಶ್ನಿಸುವ ಧೋರಣೆಯಾಗಿದೆ. ಅವರ ಮೊದಲ ಸಂಗ್ರಹದಲ್ಲಿರುವ ‘ಕಸ್ಮೈದೇವಾಯ’ ಎಂಬ ಕವಿತೆಯೇ ಇದಕ್ಕೆ ನಿದರ್ಶನವಾಗಿದೆ. ಇದು ಮೂಲಭೂತವಾಗಿ ಹೊಸಕಾಲದ ಹೊಯ್ದಾಟವನ್ನು ಸಾಂಕೇತಿಸುವ ಮತ್ತು ಹೊಸ ವೈಚಾರಿಕತೆಗೆ ತೆರೆದುಕೊಳ್ಳುವ ಮನಸ್ಸಿನ ಲಕ್ಷಣವಾಗಿದೆ. ಮತ್ತು ಇದು ಭಾರತೀಯ ಪುನರುಜ್ಜೀವನದ ಪರಿಣಾಮವೂ ಹೌದು. ಇದುವರೆಗಿನ ಶ್ರದ್ಧೆ, ನಂಬಿಕೆ, ದೈವತ್ವದ ಕಲ್ಪನೆಗಳು ಕುಸಿದು ಹೋಗುತ್ತಿರುವಾಗ ‘ನಾವು ಯಾವ ದೇವರಿಗೆ ಹವಿಸ್ಸನ್ನು ಅರ್ಪಿಸೋಣ’ ಎಂಬ ಪ್ರಶ್ನೆಯನ್ನೆತ್ತುವ ಈ ಕವಿತೆ-

ಇಲ್ಲದಿರೆ ಬೇರಾವ ದೇವರೇ ಬಾರರೊ
ಇಲ್ಲದೊಂದಕೆ ಹೆಸರಿನಿಟ್ಟು ಕರೆಯುವೆವೊ
ಇಲ್ಲದಿರೆ ಮಾನವನ ಸುಗುಣವೇ ದೈವವೊ
ಎಲ್ಲಿಗೂ ಹರಿಯದಿಹ ಸಂಶಯವೆ ಕೊನೆಯೊ!
(ಕಸ್ಮೈದೇವಾಯ,ಸ.ಕಾ.ಪು.೫೦)

ಎಂಬ ಸಂದೇಹದ ಮೂಲಕವಾಗಿಯೇ ಬೇರೊಂದು ತೀರ್ಮಾನಕ್ಕೆ ಬರುತ್ತದೆ.ಅದೆಂದರೆ ‘ಮಾನವನ ಸುಗುಣವೇ ದೈವವೊ’ ಎಂಬ ವಿಚಾರ. ಇದು ವಿ.ಸೀ.ಯವರ ಮನಸ್ಸನ್ನು ಮುನ್ನಡೆಸಿದ ಒಂದು ಧರ್ಮ ನಿರಪೇಕ್ಷವಾದ ನಿಲುವು. ಧರ್ಮ ಹಾಗೂ ನಿರ್ದಿಷ್ಟ ದೈವದ ಕಲ್ಪನೆಯ ಸ್ಥಾನದಲ್ಲಿ ಮಾನವೀಯ ಮೌಲ್ಯಗಳನ್ನು ಇರಿಸಿಕೊಳ್ಳುವುದೆ ಈ ಕಾಲದ ಅಗತ್ಯ ಎಂಬುದನ್ನು ವಿ.ಸೀ.ಯವರು ಇಲ್ಲಿ ಕಂಡುಕೊಂಡಿದ್ದಾರೆ. ಬಹುಕಾಲದಿಂದ ಈ ದೇಶದ ಬದುಕನ್ನು ಹಿಡಿದು ನಡೆಯಿಸಿದ ಸಂಪ್ರದಾಯ, ದೈವ ಹಾಗೂ ನಂಬಿಕೆಗಳನ್ನು ನಿರಾಕರಿಸಿ ಮಾನವೀಯ ಮೌಲ್ಯಗಳಾದ ಸ್ನೇಹ ಪ್ರೀತಿ ವಿಶ್ವಾಸ ಇತ್ಯಾದಿಗಳನ್ನು ನಂಬಿ ನನ್ನ ಬದುಕನ್ನು ರೂಪಿಸಿಕೊಳ್ಳುತ್ತೇನೆ ಎನ್ನುವುದು-ಹೊಸಕಾಲದ ವಿವೇಚನಾಶೀಲವಾದ[1] ಮನಸ್ಸನ್ನೂ, ಪೌರುಷ ಪ್ರಧಾನವಾದ ನಿಲುವನ್ನೂ ಪ್ರತಿನಿಧಿಸುವ ಸಂಗತಿಯಾಗಿದೆ. ಆದುದರಿಂದ ಹಳೆಯದೆಲ್ಲ ಹೋಯಿತಲ್ಲ ಎಂದು ರೋಧಿಸುವ, ಎಲ್ಲವೂ ವಿಧಿಲಿಖಿತವೆಂದು ಅಸಹಾಯಕರಾಗುವ, ‘ನಷ್ಟಸತ್ವ’ರನ್ನು ಅತ್ಯಂತ ನಿಕೃಷ್ಟವಾಗಿ ಕಾಣುತ್ತ,[2] ಬದುಕಿಗೆ ಅಗತ್ಯವಾದ ಧೈರ್ಯ ಹಾಗೂ ನಿರ್ಭಯತೆಯನ್ನು ಈ ಪೌರುಷ ಪ್ರಧಾನವಾದ ನಿಲುವು ಎತ್ತಿ ‘ಹಿಡಿಯುತ್ತದೆ. ಇದು ಅವರ ‘ಅಭೀಃ’ ಎಂಬ ಕವಿತೆಯಲ್ಲಿ ತುಂಬಸೊಗಸಾಗಿ ಅಭಿವ್ಯಕ್ತಿಯನ್ನು ಪಡೆದುಕೊಂಡಿದೆ. ಆದ ಕಾರಣ ಮನುಷ್ಯ ನಿಜವಾದ ಮನುಷ್ಯನಾಗಬೇಕಾದರೆ-

ಮಣಿಯದಿಹ ಮನವೊಂದು ಸಾಧಿಸುವ ಹಟವೊಂದು

ನಿಜದ ನೇರಕೆ ನಿಶ್ಚಲತೆಯೊಂದು
ಅನ್ಯಾಯಕೆಂದೆಂದು ಬಾಗದೆಚ್ಚರವೊಂದು
ಮರುಕಕ್ಕೆ ಪ್ರೇಮಕ್ಕೆ ಚಿರತೆರೆದ ಎದೆಯೊಂದು
(ಸ.ಕಾ. ಅಭೀಃ, ಪು.೧೦೫)

ಈ ಲಕ್ಷಣಗಳು ಅಗತ್ಯವಾದವುಗಳು. ವಿ.ಸೀ. ಯವರ ಶ್ರೇಷ್ಠವಾದ ಕವಿತೆಗಳಲ್ಲಿ ಒಂದಾದ ‘ಅಭೀಃ’ ಪೌರುಷ ಪ್ರಧಾನವಾದ ನಿಲುವಿನ ಪ್ರತಿಕವಾಗಿದೆ.

ಈ ನಿಲುವಿನ ಮತ್ತೊಂದು ಲಕ್ಷಣ ವ್ಯಕ್ತಿಸ್ವಾತಂತ್ರ್ಯ. ವಿ.ಸೀ.ಯವರು ಬರೆಯಲು ಪ್ರಾರಂಭಿಸಿದ ಕಾಲವೇ ದೇಶಕ್ಕೆ ದೇಶವೇ ಪರತಂತ್ರವನ್ನು ಪ್ರತಿಭಟಿಸಿ ಸ್ವಾತಂತ್ರ್ಯಕ್ಕೆ ಹಂಬಲಿಸಿದ ಕಾಲವಾಗಿದೆ. ರಾಷ್ಟ್ರದ ಸ್ವಾತಂತ್ರ್ಯ ಹಾಗೂ ವ್ಯಕ್ತಿಯ ಸ್ವಾತಂತ್ರ್ಯ ಎರಡೂ ಅಭಿನ್ನವಾದ ಕಾಲ ಅದು. ಅವರು ಬರೆದ ‘ಮೃಗಶಾಲೆಯ ಸಿಂಹಗಳು’ (೧೯೩೩) ಈ ಪರತಂತ್ರದ ವೇದನೆಗಳನ್ನೂ, ವ್ಯಕ್ತಿಸ್ವಾತಂತ್ರ್ಯದ ಹಂಬಲಗಳನ್ನೂ ಪ್ರಕಟಿಸುವ ತುಂಬ ಸೊಗಸಾದ ಕವಿತೆಯಾಗಿದೆ. ಅವರ ‘ಶಬರಿ’ ಕವಿತೆಯೂ, ಇದೇ ವಸ್ತುವನ್ನು ಕುರಿತದ್ದಾದರೂ, ಅದು ಶಬರಿಗೂ, ಸ್ವಾತಂತ್ರ್ಯಕ್ಕೆ ಅಥವಾ ಅದರ ಮುಂದಾಳುವಿಗಾಗಿ ಕಾಯುವ ಜನಕ್ಕೂ ಸಮೀಕರಣವನ್ನು ವಾಚ್ಯವಾಗಿ ಹೇಳುವುದರಿಂದ ‘ಮೃಗಶಾಲೆಯ ಸಿಂಹಗಳು’ ಕವಿತೆಯಷ್ಟು ಪರಿಣಾಮಕಾರಿಯಾಗಿಲ್ಲ. ‘ಗಡಿದಾಟು’ ‘ವಿದ್ಯಾರ್ಥಿಗಳು’ ಇಂಥ ಕೆಲವು ಕವಿತೆಗಳು ಭಾರತೀಯ ಸ್ವಾತಂತ್ರ್ಯ ಚಳುವಳಿಯನ್ನು ಚಿತ್ರಿಸುವಂಥವುಗಳಾಗಿವೆ.

ವಿ.ಸೀ.ಯವರು ಎತ್ತಿಹಿಡಿಯುವ, ಪೌರುಷ ಪ್ರಧಾನ್ಯತೆಯ ಮತ್ತೊಂದು ಮೌಲ್ಯ ‘ವಿಶ್ವಾಸ’. ವಿಶ್ವಾಸ ಎಂದರೆ ತನ್ನಲ್ಲಿ, ತನ್ನ ಸಾಮರ್ಥ್ಯದಲ್ಲಿ ಇರುವ ನಂಬಿಕೆ ಅಥವಾ ಆತ್ಮ ಪ್ರತ್ಯಯ. ಅದು-

ಮಾನವನೆತ್ತರ ಆಗಸದೇರಿಗೆ
ಏರುವವರೆಗೂ ಏರೇವು
ಮಾನವ ಹೃದಯಕೆ ವಿಶ್ವವಿಶಾಲತೆ
ಹಾಯುವವರೆಗೂ ಹಾದೇವು
(ವಿಶ್ವಾಸ: ಸ.ಕಾ.ಪು. ೧೧೩)

ಎನ್ನುವ ಸಂಕಲ್ಪದಲ್ಲಿ ಕಾಣಿಸಿಕೊಂಡಿದೆ. ಸ್ನೇಹ, ವಿಶ್ವಾಸ, ನಿರ್ಭಯತೆ, ವೈಚಾರಿಕತೆ, ವ್ಯಕ್ತಿಸ್ವಾತಂತ್ರ್ಯ-ಇವುಗಳು ವಿ.ಸೀ.ಯವರ ಕವಿ ಮನಸ್ಸನ್ನು ರೂಪಿಸಿದ ಪೌರುಷ ಪ್ರಧಾನ ನಿಲುವಿನ ಹಲವು ಮೌಲ್ಯಗಳಾಗಿವೆ.

ವಿ.ಸೀ.ಯವರ ಕವಿತೆಯಲ್ಲಿ ಪ್ರಧಾನವಾಗಿರುವ ಮತ್ತೊಂದು ನಿಲುವು ವಾಸ್ತವ ಪ್ರಜ್ಞೆ. ಇದು ಮುಖ್ಯವಾಗಿ ಪ್ರಕಟವಾಗುವುದು ‘ಇಹ’ದ ಬಗ್ಗೆ ‘ಇರುವುದರ’ ಬಗ್ಗೆ ತೋರುವ ಕಾಳಜಿಗಳಲ್ಲಿ, ಅಂದರೆ ಇರುವ ಬದುಕನ್ನು ಅದು ಇರುವಂತೆಯೆ ಒಪ್ಪಿಕೊಳ್ಳುತ್ತ ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ. ಅವರು ನಿಸರ್ಗವನ್ನು ಕುರಿತು ಬರೆಯಲಿ, ಮಾನವೀಯ ಸಂದರ್ಭಗಳನ್ನು ಕುರಿತು ಬರೆಯಲಿ, ಎಲ್ಲಿಯೂ ಅದನ್ನು ವೈಭವಿಸುವುದಿಲ್ಲ, ಆದರ್ಶೀಕರಿಸುವುದಿಲ್ಲ. ಆದರೆ, ಆ ಚೆಲುವನ್ನು, ಆ ಸಂದರ್ಭವನ್ನು ಅದರ ಸಮಸ್ತ ಹಾಗೂ ಮಾರ್ದವತೆಗಳ ಸಹಿತ ಹಿಡಿದಿರಿಸುತ್ತಾರೆ. ಅವರ ತುಂಬಾ ಜನಪ್ರಿಯವಾದ ‘ಮನೆ ತುಂಬಿಸುವುದು’ ಎಂಬ ಕವಿತೆಯನ್ನು ಇದಕ್ಕೆ ನಿದರ್ಶನವನ್ನಾಗಿ ನೋಡಬಹುದು. ಒಂದು ಮನೆಯ ಬೆಳಕಾದ ಹೆಣ್ಣುಮಗಳನ್ನು, ಮತ್ತೊಂದು ಮನೆ ತುಂಬಿಸುವ ಸಂದರ್ಭದ ಸಂಗತಿಯನ್ನು, ಗೃಹಸ್ಥಧರ್ಮದ ಮೌಲ್ಯಗಳ ಹಿನ್ನೆಲೆಯಲ್ಲಿ ಎಷ್ಟೊಂದು ಸೊಗಸಾಗಿ ಮತ್ತು ಪರಿಣಾಮಕಾರಿಯಾಗಿ ಈ ಕವಿತೆಯಲ್ಲಿ ಚಿತ್ರಿಸಲಾಗಿದೆ! ‘ಶ್ಮಶಾನದಲ್ಲಿ’ ಎಂಬ ಇನ್ನೊಂದು ಕವಿತೆ, ಬದುಕಿನ ಒಂದು ಸಂದರ್ಭವನ್ನು ಯಥಾವತ್ತಾಗಿ ಚಿತ್ರಿಸಿದರೆ, ‘ನಾಟ್ಯಾನುಕರಣ’ ಮತ್ತೊಂದು ಮೋಹಕವಾದ ಸಂದರ್ಭವನ್ನು ಲವಲವಿಕೆಯಿಂದ ಚಿತ್ರಿಸುತ್ತದೆ. ನಿಸರ್ಗ ಪರವಾದ ‘ಹೇಮಂತ ಸಾಮ್ರಾಜ್ಯ’ ‘ನಗುವಚಂದ್ರ’ ‘ಮಧುಮಾಸ’ ‘ಲಾಲ್‌ಬಾಗ್’-ಇಂಥ ಕವಿತೆಗಳಲ್ಲಿ, ಕಣ್ಣಿಗೆ ಕಂಡ, ಮನಸ್ಸಿಗೆ ತಟ್ಟಿದ, ಸೊಗಸುಗಳನ್ನು ಕುರಿತ ಪ್ರತಿಕ್ರಿಯೆಗಳಿವೆ. ಆದರೆ ಕುವೆಂಪು, ಬೇಂದ್ರೆ, ಅವರ ಈ ಬಗೆಯ ಕವಿತೆಗಳಲ್ಲಿ ಕಂಡು ಬರುವ ಗಾಢವಾದ ತಲ್ಲೀನತೆಯಾಗಲೀ, ಮತ್ತು ಆ ಕವಿತೆಗಳ ಮೂಲಕ ಅವರು ಧ್ವನಿಸುವ ಹಾಗೂ ಅನುಭಾವಿಕ ಕಂಪನಗಳಾಗಲೀ, ವಿ.ಸೀ. ಯವರ ಕವಿತೆಗಳಲ್ಲಿ ಇಲ್ಲ ಎಂಬುದು ನಿಜವಾದರೂ, ಒಂದು ರೀತಿಯಲ್ಲಿ ಚೆಲುವಿಗೆ ಸ್ಪಂದಿಸುವ ವಾಸ್ತವಿಕ ನಿಲುವನ್ನು ಯಾರಾದರೂ ಗುರುತಿಸಬಹುದು.

ಆಧುನಿಕ ಕವಿತೆಯಲ್ಲಿ ಗಂಡು ಹೆಣ್ಣಿನ ಸಂಬಂಧವನ್ನು ಕುರಿತ ಪ್ರೀತಿ, ಪ್ರಣಯ, ವಿರಹ, ಕಾತರ ಇತ್ಯಾದಿಗಳ ಚಿತ್ರಣ ಸಾಕಷ್ಟಿವೆ. ದಾಂಪತ್ಯ ಜೀವನದ ಸುಖ-ಸಂತೋಷಗಳನ್ನು ಚಿತ್ರಿಸುವ ಕವಿತೆಗಳು ವಿ.ಸೀ.ಯವರಲ್ಲಿದ್ದರೂ, ‘ದಾಂಪತ್ಯದ ಗೆರೆ’ಯನ್ನು ದಾಟಿದ ಗಂಡು ಹೆಣ್ಣಿನ ಸಂಬಂಧಗಳನ್ನು ಮಾನಸಿಕ ಸಂಘರ್ಷಗಳನ್ನು ಕುರಿತು ವಿ.ಸೀ.ಯವರು ಬರೆದಷ್ಟು ಕವಿತೆಗಳನ್ನು ಅವರ ಸಮಕಾಲೀನರಾದ ಇನ್ನಾರೂ ಬರೆದಿಲ್ಲವೆನ್ನುವುದು ಒಂದು ವಿಶೇಷದ ಸಂಗತಿಯಾಗಿದೆ. ‘ಸೆಳೆ’ (ಪು.೧೫೨) ‘ಬೇಡ’ (ಪು. ೧೫೬), ‘ಬೀಳ್ಕೊಡುಗೆ’ (ಪು. ೧೮೦) ‘ಬಿಟ್ಟುಕೊಡಿ’ (ಪು. ೨೬೨), ‘ನಾನಿಲ್ಲವೆ’ (ಪು. ೪೧೪), ‘ನಾಗಿ’ (ಪು. ೪೧೮) ‘ಹೋಗು ಬೇಕೆನ್ನುವಲ್ಲಿಗೆ’ (ಪು. ೫೨೯)-ಈ ಕೆಲವು ಕವಿತೆಗಳು ಪ್ರೀತಿ-ಪ್ರೇಮಗಳ ಸಾಮಾಜಿಕ ಕಟ್ಟುಪಾಡುಗಳನ್ನು ದಾಟುವ ಬಗೆಯನ್ನು ಕುರಿತವುಗಳಾಗಿವೆ. ಈ ಎಲ್ಲ ಕವಿತೆಗಳ ಕೇಂದ್ರವೂ (ಒಂದು ಪದ್ಯದ ಹೊರತು) ಹೆಣ್ಣು. ‘ನಾನಿಲ್ಲವೆ’ (ಪು. ೪೧೪), ‘ಬಿಟ್ಟು ಕೊಡಿ’ (ಪು. ೨೬೨)-ಈ ಎರಡು ಕವಿತೆಗಳ ವಸ್ತು ಬಹು ಮಟ್ಟಿಗೆ ಒಂದೇ: ನಾನಿರುವಾಗ, ನಿಮಗೆ ಯಾಕೆ ಬೇರೊಂದು ಕಡೆ ಸರಸ-ಎಂದು ಪ್ರಶ್ನಿಸುವ; ‘ಒಳ್ಳೆಯ ಹೆಂಡತಿ’ಯಾಗಲು ನಾನು ಪ್ರಯತ್ನಿಸಿದೆ, ಆದರೂ ನೀವು ಬೇರೊಬ್ಬಳನ್ನು ಒಲಿದು, ನನ್ನ ಸುಖ ಸಂತೋಷಗಳನ್ನು ಹಾಳು ಮಾಡಿದಿರಿ; ಇನ್ನು ನಿಮ್ಮ ದಾರಿಯನ್ನು ನೀವು ಹಿಡಿಯಬಹುದು, ನಾನೂ ನನ್ನ ದಾರಿ ಹಿಡಿಯುತ್ತೇನೆ. ನನಗೆ ಬಿಡುಗಡೆಯನ್ನು ಕೊಡಿ, ಎಂದು ಗಂಡನನ್ನು ಕೇಳಿಕೊಳ್ಳುವ ಹೆಣ್ಣಿನ ತಾಕಲಾಟಗಳ ಚಿತ್ರಣ ಇಲ್ಲಿವೆ. ‘ಸೆಳೆ’ (ಪು. ೧೫೨) ಮತ್ತು ‘ಬೇಡ’ (ಪು. ೧೫೬)-ಈ ಎರಡು ಕವಿತೆಗಳಲ್ಲಿ, ಮೊದಲನೆಯದು ಮದುವೆಯಾದ ಗಂಡೊಬ್ಬನನ್ನು, ಗಂಡ ಬಿಟ್ಟ ಹೆಣ್ಣೊಬ್ಬಳು ಉತ್ಕಟವಾಗಿ ಪ್ರೀತಿಸುವ ಸಂದರ್ಭದ ಮಾನಸಿಕ ಸಂಘರ್ಷಳನ್ನು ಕುರಿತದ್ದಾದರೆ, ಎರಡನೆಯದು, ತಾನೊಲಿದ ನಲ್ಲನಿಂದ ಪರಿತ್ಯಕ್ತಳಾಗಿ, ಬೇರೊಬ್ಬನನ್ನು ಮದುವೆಯಾದ ಸಂದರ್ಭದಲ್ಲಿಯೂ, ಹಿಂದಿನ ನಲ್ಲನ ನೆನಪಿನಿಂದ ಪರಿತಪಿಸುತ್ತ,ನಿಜವಾಗಿಯೂ ಪ್ರೀತಿಸುವ ಈ ಗಂಡನಿಗೆ ತಾನು ದ್ರೋಹ ಮಾಡುತ್ತಿದ್ದೇನೇನೋ ಎಂದು ತಳಮಳಗೊಳ್ಳುತ್ತ, ಇದಕ್ಕೆ ಪರಿಹಾರವಾಗಿ ತಾವಿಬ್ಬರೂ ಯಾಕೆ ಬೇರೆ ಬೇರೆಯಾಗ ಬಾರದು ಎಂದುಕೊಳ್ಳುತ್ತ, ಪಡುವ ಪಾಡು ಚಿತ್ರಿತವಾಗಿದೆ. ‘ಬೀಳ್ಕೊಡುಗೆ’ (ಪು. ೧೮೦) ಎಂಬ  ಕವಿತೆ, ನಾನಿರುವುದು ಇದೊಂದೆ ದಿನ. ನಾಳೆ ನಾನೆಲ್ಲೋ, ನೀನೆಲ್ಲೋ ಎನ್ನುತ್ತ ಬದುಕಿನ ರಸಿಕ ಕ್ಷಣವೊಂದನ್ನು ಕದ್ದು ಸವಿಯುವ ಗಂಡು ಹೆಣ್ಣಿನ ಉತ್ಕಟತೆಯನ್ನು ಚಿತ್ರಿಸಿದರೆ, ‘ನಾಗಿ’ (ಪು. ೫೨೯) ಮತ್ತು ‘ಹೋಗುಬೇಕೆನುವಲ್ಲಿಗೆ’-ಈ ಎರಡೂ ಈ ಸರಣಿಯಲ್ಲಿ ತೀರಾ ವಿಭಿನ್ನವಾದವುಗಳು. ನಾಗಿ ಒಬ್ಬ ಸಾಮಾನ್ಯ, ಬಡವಳಾದ ಹೆಣ್ಣು. ಕೃಷ್ಣ ಎನ್ನುವವನನ್ನು ಈಕೆ ಒಲಿದಿದ್ದಾಳೆ. ಕೃಷ್ಣನೂ ಬಡವ. ಒಂದು ಸಲ ಆತನಿಗೆ ತೀರಾ ಅನಾರೋಗ್ಯವಾಗಿ ಆಸ್ಪತ್ರೆ ಸೇರಬೇಕಾಗುತ್ತದೆ. ಆದರೆ, ಆಸ್ಪತ್ರೆಯ ಔಷಧಿವೆಚ್ಚಗಳಿಗೆ ಅಗತ್ಯವಾದ ಹಣ ಇಲ್ಲ. ಬೇರೆ ದಾರಿ ಕಾಣದೆ ತನ್ನ ನಲ್ಲನ ಜೀವವನ್ನು ಉಳಿಸವ ಸಲುವಾಗಿ ನಾಗಿ ವ್ಯಭಿಚಾರಕ್ಕೆ ಇಳಿಯುತ್ತಾಳೆ. ಆ ಸಂದರ್ಭದಲ್ಲಿ ವಿಟನೊಬ್ಬನನ್ನು ಕುರಿತು ತಾನು ಯಾಕೆ ಈ ಕೆಲಸಕ್ಕೆ ಇಳಿಯಬೇಕಾಯಿತೆಂಬುದನ್ನು ಆತನಿಗೆ ವಿವರಿಸುತ್ತಲೆ, ತನ್ನ ನಲ್ಲನಾದ ಕೃಷ್ಣನ ರಸಿಕತೆ ಹಾಗೂ ಪ್ರೀತಿಗಳ ಬಗೆಗೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ‘ಹೋಗು ಬೇಕೆನ್ನುವಲ್ಲಿಗೆ’ ಎಂಬ ಕವಿತೆ, ಬಹುಕಾಲ ತನ್ನ ಜೊತೆ ಬಾಳಿ ಬದುಕಿದ ಹೆಣ್ಣೊಬ್ಬಳು ತನ್ನನ್ನು ಬಿಟ್ಟು ಬೇರೊಂದು ಕಡೆ ಹೋಗಲು ಅಪೇಕ್ಷಿಸಿದಾಗ, ಅವಳನ್ನು ಕುರಿತು ಗಂಡೊಬ್ಬನು ಮಾತನಾಡುವ ಧಾಟಿಯಲ್ಲಿದೆ. ‘ನೀನು ನಿನಗೆ ಬೇಕೆನ್ನಿಸಿದ ಕಡೆ ಹೋಗು. ನನ್ನ ಅಡ್ಡಿಯೇನಿಲ್ಲ. ಇರುತ್ತೇನೆ ಎಂದರೆ ಈ ಮನೆ ನಿನ್ನದು. ನೀನು ಮತ್ತೆ ಹಿಂದಕ್ಕೆ ಬರುವುದಾದರೆ ಈ ಮನೆಯ ಬಾಗಿಲು ನಿನಾಗಾಗಿ ತೆರೆದೇ ಇರುತ್ತದೆ-ನಾನಿರಲಿ, ಇಲ್ಲದಿರಲಿ’.

ನನ್ನ ದೃಷ್ಟಿಯಲ್ಲಿ ಈಗ ಪ್ರಸ್ತಾಪಿಸಿದ ಈ ಕೆಲವು ಕವಿತೆಗಳು,ಕನ್ನಡದಲ್ಲಿ ಅತ್ಯಂತ ವಿರಳವೂ ವಿಶಿಷ್ಟವೂ ಆದವುಗಳು. ಪ್ರೀತಿ-ಪ್ರೇಮಗಳ ಹೆಸರಿನಲ್ಲಿ ಸಾಮಾಜಿಕ ಕಟ್ಟು ಪಾಡುಗಳನ್ನು ದಾಟುವ ಗಂಡು-ಹೆಣ್ಣುಗಳ ಸಂಬಂಧಗಳನ್ನೂ, ಆ ಸಂದರ್ಭದ ಸಂಘರ್ಷಗಳನ್ನೂ ಚಿತ್ರಿಸುವ ಈ ಕವಿತೆಗಳು ನಮ್ಮ ಸಾಮಾಜಿಕ ವಾಸ್ತವದ ಬೇರೊಂದು ಮುಖವನ್ನು ತೆರೆಯುತ್ತವೆ. ಮೇಲುನೋಟಕ್ಕೆ ಈ ಸಂಬಂಧಗಳು ಅಧಾರ್ಮಿಕವೆಂಬಂತೆ ತೋರಬಹುದು. ಆದರೆ ಆಯಾ ಸಂದರ್ಭಗಳಲ್ಲಿ ಗಂಡಾಗಲಿ, ಹೆಣ್ಣಾಗಲೀ, ತಾಳುವ ನಿಲುವುಗಳಾಗಲೀ, ಅವು ತೆಗೆದುಕೊಳ್ಳುವ ತೀರ್ಮಾನ ಗಳಾಗಲೀ, ಬದುಕಿಗೆ ಅನಿವಾರ್ಯವಾದ ಮಾನವೀಯ ಸಂಬಂಧವಾದ ಕಾಳಜಿಗಳಿಂದಲೇ ಪ್ರೇರಿತವಾದವುಗಳಾಗಿವೆ. ಹೀಗೆ ಒಪ್ಪಿತವಾದ ನೀತಿಯ ಗೆರೆಗಳನ್ನು ದಾಟುವ ಈ ಪಾತ್ರಗಳ ನಡವಳಿಕೆಗಳು ಮೂಲಭೂತವಾಗಿ  ಅದಮ್ಯವಾದ ಜೀವನ ಪ್ರೀತಿಯನ್ನೆ ಎತ್ತಿ ಹಿಡಿಯುತ್ತವೆ.

ಪ್ರೀತಿಯಂತೆಯೆ ‘ಸ್ನೇಹ’ವೂ ವಿ.ಸೀ.ಯವರಿಗೆ ತುಂಬ ಪ್ರಿಯವಾದ ಒಂದು ಮೌಲ್ಯವಾಗಿದೆ. ವಾಸ್ತವದಲ್ಲಿ ವಿ.ಸೀ.ಯವರ ಸ್ವಭಾವವೇ ಸ್ನೇಹದ ಮೂಲಮಾನದಲ್ಲಿ ದೊಡ್ಡ ಬಳಗವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡದ್ದು. ಒಂದೆಡೆ-

‘ಸ್ವರ್ಗದೊಳಗೀ ಸ್ನೇಹ ದೊರೆವುದೇನು?
ಈ ಪರಿಯ ಸೌಹಾರ್ದ ಕೆಳೆಯ ವೈಭವವು?’

ಎಂದು ಪ್ರಶ್ನಿಸುತ್ತಾರೆ. ಒಂದು ವೇಳೆ ಮೇಲಿನ ಆ ಸ್ವರ್ಗದಲ್ಲಿ ಈ ಪರಿಯ ಸ್ನೇಹ ದೊರೆಯದೆ ಹೋದರೆ ಆ ಸ್ವರ್ಗವೇ ಬೇಡ, ಅದರ ಬದಲು ‘ ನನಗಿಲ್ಲೆ ನೂರು ಜನ್ಮಗಳಿರಲಿ’ (ಸ್ನೇಹ; ಸ.ಕಾ.ಪು. ೩೮)-ಎನ್ನುವ ನಿಲುವು ಅವರದು.

ವಿ.ಸೀ.ಯವರ ಮನಸ್ಸನ್ನು ಹಿಡಿದು ನಡೆಸಿದ ಇನ್ನೊಂದು ಲಕ್ಷಣ ಅವರ ‘ರಸಿಕಜೀವನದೃಷ್ಟಿ’. ಒಳ್ಳೆಯ ನಡೆಗೆ, ಒಳ್ಳೆಯ ನುಡಿಗೆ, ಒಳ್ಳೆಯ ಉಡುಗೆ-ತೊಡುಗೆಗೆ, ಒಳ್ಳೆಯ ಸಂಗೀತಕ್ಕೆ, ಒಳ್ಳೆಯ ಸಾಹಿತ್ಯಕ್ಕೆ, ಒಳ್ಳೆಯ ಸ್ನೇಹ ವಿಶ್ವಾಸಕ್ಕೆ ಸದಾ ತುಡಿಯುವ ಅವರ ಸ್ವಭಾವದಲ್ಲಿ ರಸಿಕ ಜೀವನದ ದೃಷ್ಟಿ ಎದ್ದು ಕಾಣುವಂಥದ್ದು. ಅವರ ಬದುಕನ್ನು ಕಂಡವರಿಗೆ ಇದು ಗೊತ್ತಿದೆ. ಅವರ ಸಮಗ್ರ ಸಾಹಿತ್ಯವನ್ನು ಅಧ್ಯಯನ ಮಾಡಿದವರಿಗೂ ಇದು ಗೊತ್ತಾಗುತ್ತದೆ. ಅದು ಬಾಳನ್ನು ಶೋಧಿಸಿ ಶುಚಿಯನ್ನು ಬೆಳೆಯುವ ಹಂಬಲ. ಇಹವನ್ನೇ ಪರವನ್ನಾಗಿ ಮಾರ್ಪಡಿಸುವ ಹಂಬಲ. ಅವರೇ ಹೇಳುತ್ತಾರೆ:

ಬಾಳನು ಶೋಧಿಸಿ ಶುಚಿಯನು ಬೆಳೆದರೆ
ಇಹವೇ ಅರಳದೆ ಪರವಾಗಿ?

-(ವಿಶ್ವಾಸ: ಸ.ಕಾ.ಪು. ೧೧೩)
[3]

-೧೯೯೧


[1] ಸತ್ತ ಮೇಲೆ ಉಳಿವುದೇನು?-
ಪುಸ್ತಕವೆ, ವಿದ್ವತ್ತೆ, ನೆನಪೆ, ಗೈಮೆಯೆ?
ಹತ್ತು ಜನಕಿತ್ತ ನೆರವೆ? ನಟ್ಟು
ನಡಸಿದ ಸುವ್ಯವಸ್ಥೆಗಳ? ಗುಣವೆ?
……………………………….
ಹಣ, ಪದವಿ, ವಿದ್ಯೆ, ಲೋಕ ಸಮ್ಮಾನ
ಅಧಿಕಾರ ಏತರವು ಇದರ ಮುಂದೆ?
ಲೋಕದ ಕಳೆ, ವಿಶ್ವಾಸಗಳಿಗಿಂತ
ಬೇರೆ ಏನಿದೆ?
(ಉಳಿವುದೇನು, ಸ.ಕಾ.ಪು.೪೪೨)

[2] ಹುಟ್ಟಿಸಿದ ದೇವನೆಂತೊ ಪೊರೆಯುವನೆಂಬ
ಕಷ್ಟಗಳನಿತ್ತವನೆ ಪರಿಹರಿಪನೆಂಬ
ಸೃಷ್ಟಿ ಸಮಯದಿ ಬರೆದ ಹಣೆಯಬರೆಹವಿದೆಂಬ
ನಷ್ಟಸತ್ವರ ತತ್ವ ದೂಡಿಬಿಡಿರೇಳಿ.
(ಏಳಿ. ಸ.ಕಾ.ಪು. ೩೦)

[3] ಈ ಲೇಖನದಲ್ಲಿರುವ ಉಲ್ಲೇಖಗಳೆಲ್ಲವೂ ವಿ.ಸೀ.ಯವರ ‘ಸ್ನೇಹ-ವಿಶ್ವಾಸ: ಸಮಗ್ರ ಕಾವ್ಯ ಸಂಪುಟ’ (೧೯೯೦)ದಿಂದ ಎತ್ತಿಕೊಂಡವುಗಳು.