ಸಂಗೀತಕಲೆ ಸ್ವರ, ರಂಗ, ಭಾವ, ಲಯ, ಹಂಗು ಶೃತಿಗಳಿಂದ ಕೂಡಿದ ಧ್ವನಿ ಸಮನ್ವಯವಾಗಿದೆ. ಧ್ವನಿಯು ಮಾನವನ ದೈಹಿಕ ಬೌದ್ಧಿಕ ಹಾಗೂ ಮಾನಸಿಕ ಆರೋಗ್ಯದ ಸಮತೋಲನವನ್ನು ಕಾಯ್ದುಕೊಂಡು ಗೋಗುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಆದ್ದರಿಂದಲೇ ಭಾರತದಲ್ಲಿ ಹಾಗು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ‘ಸಂಗೀತ ಚಿಕಿತ್ಸೆಯು’ ಹೆಚ್ಚು ಜನಪ್ರಿಯವಾಗುತ್ತಿದ್ದು, ಸಂಗೀತ ಚಿಕಿತ್ಸೆಗಾಗಿಯೇ ವಿಶೇಷ ಪಠ್ಯಕ್ರಮವನ್ನು ರೂಪಿಸಲಾಗಿದೆ.

‘ರಾಗ ಪದ್ಧತಿ’ಯನ್ನು ಕುರಿತು ೯ ನೇ ಶತಮಾನದಲ್ಲಿ ಮತುಂಗಮುನಿಯು ಹೀಗೆ ಹೇಳಿದ್ದಾರೆ : ‘ರಾಗವು ಸುಮಧುರವಾದ ಧ್ವನಿಯ ಸಂಯೋಜನೆಯಾಗಿದ್ದು, ಮಾನವನ ಹೃದಯವನ್ನು ಪ್ರಫುಲ್ಲಿತವಾಗಿ ಮಾಡುವ ಶಕ್ತಿ ಹೊಂದಿದೆ. ಒಂದು ರಾಗಕ್ಕೆ ನಿರ್ದಿಷ್ಟಪಡಿಸಿದ ರಾಗವನ್ನು ಮೇಲಿಂದ ಮೇಲೆ ಕೇಳುವುದರಿಂದ ನಿರ್ದಿಷ್ಟವಾದ ತರಂಗಗಳು ಉತ್ಪತ್ತಿಯಾಗಿ, ರೋಗಪೀಡಿತ ನರಗಳಿಗೆ ಹಾಗೂ ಸ್ನಾಯುಗಳಿಗೆ ವಿಶೇಷ ಸಂವೇದನೆಯನ್ನು ನೀಡಿ ಅವುಗಳಲ್ಲಿ ಹೆಚ್ಚಿನ ರಕ್ತಪರಿಚಲನೆಯನ್ನು ಹಾಗೂ ಶಕ್ತಿಯನ್ನು ಉಂಟುಮಾಡುತ್ತದೆ’ ಇದರಿಂದ ಆ ರೋಗಿಯು ತನ್ನಿಂದ ತಾನೇ ಸಹಜವಾಗಿ ಗುಣಮುಖನಾಗುತ್ತಾನೆ.

ವಿದೇಶಿ ಮೂಲಕ ಸಂಗೀತ ಚಿಕಿತ್ಸೆ:

ಪಾಶ್ಚಿಮಾತ್ಯರಿಗೆ ಅನಾದಿ ಕಾಲದಿಂದಲೂ ಸಂಗೀತ ಮತ್ತು ಆರೋಗ್ಯದ ನಡುವಿನ ಸಂಬಂಧದ ಬಗೆಗೆ ಅರಿವಿತ್ತು. ಉದಾಹರಣೆಗೆ: ಗ್ರೀಕರ ಅಪೊಲೊ, ಸಂಗೀತ ಮತ್ತು ಕಲೆಗೆ ಮಾತ್ರವಲ್ಲ ಗುಣಪಡಿಸುವಿಕೆ ಕ್ರಿಯೆಗೆ ಅಧಿದೇವನಾಗಿರುವುದು. ಪಾಶ್ಚಿಮಾತ್ಯರದೇ ಆದ ಪೈಥಾಗೊರಸ್ ತತ್ವಶಾಸ್ತ್ರ ದರ್ಶನವು ಭಾರತೀಯ ‘ಅನಾಹತನಾದ’ ಪರಿಕಲ್ಪನೆಯನ್ನು ಬಹುಪಾಲು ಹೋಲುತ್ತದೆ. ಅರಿಸ್ಟಾಟಲ್ ಮತ್ತು ಪ್ಲೆಟೋರ ಬರಹಗಳಲ್ಲಿಯೂ ಸಂಗೀತ ಮತ್ತು ಆರೋಗ್ಯದ ನಡುವಿನ ಸಂಬಂದವನ್ನು ಚರ್ಚಿಸಲಾಗಿದೆ. ಅಷ್ಟೇ ಅಲ್ಲದೇ ಆಧುನಿಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಂಗೀತ ಚಿಕಿತ್ಸೆ ಹೆಚ್ಚಿನ ಖ್ಯಾತಿಯನ್ನು ಪಡೆದಿದ್ದು ಪ್ರಥಮ ಹಾಗೂ ದ್ವಿತೀಯ ಮಹಾಯುದ್ಧಗಳಲ್ಲಿ ಭಾಗವಹಿಸಿ ಮಾನಸಿಕ ಹಾಗೂ ದೈಹಿಕ ತುಮುಲಗಳಿಂದ ಬಾಧೆ ಪಡುತ್ತಿರುವವರಿಗೆ ಪರಿಣಿತೆ ಸಂಗೀತ ತಜ್ಞರಿಂದ ಸಂಗೀತ ಚಿಕಿತ್ಸೆ ನೀಡಿ ಪದವಿ ಸಮಾಧಾನವನ್ನು ಒದಗಿಸಲಾಯಿತು. ಈ ಹಿನ್ನಲೆಯಲ್ಲಿ ವಿಶ್ವದಲ್ಲಿಯೇ ಪ್ರಪ್ರಥಮ ಬಾರಿಗೆ ೧೯೪೪ ರಲ್ಲಿ ಮಿಚಿಗನ್ ರಾಜ್ಯ ವಿಶ್ವವಿದ್ಯಾಲಯದಲ್ಲಿ ಸಂಗೀತ ಚಿಕಿತ್ಸೆ ಪದವಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಇಂದು ಅಮೇರಿಕದಲ್ಲಿ ‘ಸರ್ಟಿಫಿಕೇಷನ್ ಬೋರ್ಡ್ ಫಾರ್ ಮ್ಯೂಸಿಕ್ ಥೆರಪಿಸ್ಟ್’ ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ ಪರೀಕ್ಷೆಗಳನ್ನು ನಡೆಸುತ್ತಿದೆ. ಸಂಗೀತ ಚಿಕಿತ್ಸೆಯ ಉದ್ದೇಶದಿಂದಲೇ ೧೯೯೮ ರಲ್ಲಿ ವಿಶೇಷವಾಗಿ ‘ದಿ ಅಮೇರಿಕನ್ ಮ್ಯೂಸಿಕ್ ಥರೆಪಿ ಅಸೋಸಿಯೇಷನ್’ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

ಭಾರತೀಯ ಸಂಗೀತ ಚಿಕಿತ್ಸೆ:

ಭಾರತೀಯ ಸಂಗೀತದಲ್ಲಿ ತತ್ವಶಾಸ್ತ್ರ, ಮನಃ ಶಾಸ್ತ್ರ, ಆಧ್ಯಾತ್ಮ ಸೌಂದರ್ಯ ಎಲ್ಲವೂ ಅಡಕಗೊಂಡಿವೆ. ಭಾರತೀಯ ಸಂಗೀತದ ರಾಗಗಳು ಸಾಮಗಾನ ರೂಪದಲ್ಲಿದ್ದವು. ನಿರ್ದಿಷ್ಟ ರಾಗವನ್ನು ಹಾಡಿದರೆ ನಿರ್ದಿಷ್ಟ ಕಾಯಿಲೆ ಉಪಶಮನಗೊಳ್ಳುತ್ತದೆ ಎಂಬ ಜ್ಞಾನ ಪ್ರಾಚೀನ ಭಾರತದಲ್ಲಿಯೆ ‘ರಾಗ ಚಿಕಿತ್ಸೆ’ ಎಂಬ ಹೆಸರಿನಲ್ಲಿ ಪ್ರಚಲಿತದಲ್ಲಿತ್ತು. ಇದು ಚೆನ್ನೈನ ‘ನಾವ್ ಸೆಂಟ್’ ನಲ್ಲಿ ನಾದರೋಗವನ್ನು ಶಾಸ್ತ್ರೀಯವಾಗಿ ಅಭ್ಯಸಿಸಲಾಗುತ್ತದೆ. ಅಷ್ಟೇ ಅಲ್ಲದೇ ಜನವರಿಯಲ್ಲಿ ಚನ್ನೈನಲ್ಲಿ ನಡೆದ ಸಂಗೀತ ಚಿಕಿತ್ಸೆಯ ರಾಷ್ಟ್ರೀಯ ಸಮ್ಮೇಳನದಲ್ಲಿ ‘ಸುನಾಮಿ ಪೀಡಿತರು ಅನುಭವಿಸುತ್ತಿರುವ ಮಾನಸಿಕ ಒತ್ತಡವನ್ನು ಉಪಶಮಪಗೊಳಿಸಲು ಹಾಗೂ ಅವರಲ್ಲಿ ಸಮಾಧಾನ ನೆಲೆಸುವಂತೆ ಮಾಡಲು ಸಂಗೀತ ಚಿಕಿತ್ಸೆಯನ್ನು ಬಳಸಬೇಕು ಎಂಬ ಸಲಹೆಯೂ ಕೇಳಿ ಬಂದಿತು. ಸಂಗೀತವು ಮಾನವನ ದೇಹದ ಪ್ರತಿಯೊಂದು ಹಂತದ ಚೇತನಕ್ಕೆ ಸಂಚಲನೆಯನ್ನು ಉಂಟುಮಾಡುತ್ತದೆ, ಎಂಬುದಕ್ಕೆ ನಾದಯೋಗದಲ್ಲಿಯ ಈ ಪರಿಕಲ್ಪನೆ ಹೆಚ್ಚು ಪರಿಣಾಮ ಬೀರುತ್ತದೆ. ಉದಾಹರಣೆಗೆ ‘ಸ’ ಸ್ವರವು ಅತ್ಯಂತ ಕೆಳಗಿನ ಮೂಲಾಧಾರ ಚಿತ್ರಕ್ಕೆ ಸಂವಾದಿಯವಾಗಿದೆ. ಅಂದರೆ ಸ್ವರದ ಪಠನವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿದ್ದೇ ಆದರೆ ಆ ಮುಲಕ ಮೂಲಾಧಾರ ಚಕ್ರವನ್ನು ಚೇತನಗೊಳಿಸಲು ಸಾಧ್ಯವಿದೆ. ಇದೇ ರೀತಿ ‘ರೆ’ ಸ್ವರವು ಸ್ವಾಧಿಸ್ತಾನ ಚಕ್ರಕ್ಕೆ ‘ಗ’ ವು ಮಣಿಪುರ ಚಕ್ರಕ್ಕೆ ‘ನಿ’ ಯು ಅತ್ಯಂತ ಉನ್ನತಸ್ತರದ ಚಕ್ರವಾದ ಸಹಸ್ತ್ರಾರಕ್ಕೆ ಸಂವಾದಿಯಾಗಿರುತ್ತದೆ. ಸಂಗೀತದಲ್ಲಿ ಆರೋಹ ಮತ್ತು ಅವರೋಹಗಳು ಅದೇ ಪ್ರಕಾರವಾಗಿ ದಕ್ರಗಳಲ್ಲಿ ಶಕ್ತಿ ಸಂಚಾರಕ್ಕೆ ಕಾರಣವಾಗುತ್ತವೆ. ಹೀಗೆ ಅನಾದಿಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಸಂಗೀತ ಚಿಕಿತ್ಸೆ ವಿಶೇಷವಾದ ಮನ್ನಣೆಯನ್ನು ಪಡೆದಿದೆ.

ಇತ್ತಿಚಿನ ದಿನಗಳಲ್ಲಿ ಸಂಗೀತ ಚಿಕಿತ್ಸೆಯನ್ನು ವಿಶ್ವದಲ್ಲಿ ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ: ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಸಂಗೀತ ಚಿಕಿತ್ಸೆಯದೇ ಒಂದು ವಿಭಾಗವಿದ್ದು ಅಲ್ಲಿ ಅಧಿಕ ರಕ್ತದೊತ್ತಡ, ಉಗ್ಗು, ನೋವು, ಮೈಗ್ರೇನ್, ತಲೆನೋವು ಅರ್ಥೆಟಿಸ ಮೊದಲಾದ ಕಾಯಿಲೆಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ. ಗುಜರಾತ್ ನ ಬರೋಡ ನಗರದಲ್ಲಿರುವ ಕೆ.ಎಂ.ಶಾಹ್ ದಂತ ವೈದ್ಯ ಕಾಲೇಜು ಮತ್ತು ಆಸ್ಪತ್ರೆಗಳ ವರಾಂಡದಲ್ಲಿ ಸಂಗೀತ ಚಿಕಿತ್ಸಾ ವಿಧಾನವನ್ನು ಅಳವಡಿಸಿದ್ದು, ಸರದಿ ಕಾಯುವ ರೋಗಿಗಳು ಈ ಸಂಗೀತವನ್ನು ಕೇಳುತ್ತಾ ಬೇಜಾರಾಗದೆ ಉಲ್ಲಸಿತರಾಗಿ ಕುಳಿತಿರುತ್ತಾರೆ. ೪೦ – ೫೦ ರ ದಶಕದಲ್ಲಿ ಪಿಟೀಲು ಚೌಡಯ್ಯನವರು ಸಸ್ಯಗಳು ಮತ್ತು ಬೆಲೆಗಳು ಸಂಗೀತದ ಅಲೆಗಳಿಂದ ಸೊಂಪಾಗಿ ಬೆಲೆಯುತ್ತವೆ ಮತ್ತು ಇಳುವರಿಯಲ್ಲಿ ಗನನೀಯವಾಗಿ ಏರಿಕೆಯಾಗುತ್ತದೆ ಅಂದು ತಿಳಿಸಿದರು. ಅದರಂತೆ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯ ಸುತ್ತ ಮುತ್ತ ಕೆಲ ರೈತರು ಈಗಲೂ ಹೊಲಗಳಲ್ಲಿ ಸಣ್ಣಗಾತ್ರದ ಧ್ವನಿವರ್ಧಕದಲ್ಲಿ ಸಂಗೀತವನ್ನು ಅಳವಡಿಸಿ ಜೋಳ, ರಾಗಿ, ಸೂರ್ಯಕಾಂತಿ ಬೆಳೆಗಳಲ್ಲಿ ಹೆಚ್ಚಿನ ಇಳುವರಿಯನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಈಚೆಗೆ ‘ಬಿಬಿಸಿ’ ಪುಟಾಣಿಗಳ ಆರೋಗ್ಯ ಕಾಪಾಡುವಲ್ಲಿ ಶಾಸ್ತ್ರೀಯ ಸಂಗೀತದ್ದು ಗಣನೀಯ ಪಾತ್ರ. ಸಂಗೀತ ಮಗುವಿನ ಮೆದುಳಿನ ಸಂಚಲನವನ್ನು ಹೆಚ್ಚಿಸಿ ಸೂಕ್ಷ್ಮ ವಿಚಾರಗಳ ಗ್ರಹಿಕೆಗೆ ಅನುಕೂಲ ಮಾಡಿಕೊಡುವದು. ಉತ್ತಮ ಸಂಗೀತ ಮಗುವಿನ ಭಾವನೆಗಳಿಗೆ ಸ್ಪಂದಿಸಿ ಆರೋಗ್ಯಯುತ ಬೆಳವಿಗೆಗೆ ಸಹಕರಿಸುತ್ತದೆ ಅಂಬ ವರದಿಯನ್ನು ಬಿತ್ತ ಮಾಡಿತ್ತು.

೧೯೬೧ ರಲ್ಲಿ ಉಸ್ತಾದ್ ಬಡೇ ಗುಲಾಮ್ ಅಲಿಖಾನರು ಪಾರ್ಶ್ಚವಾಯುವಿಗೆ ತುತ್ತಾದರು. ಆಗ ಅವರ ದೇಹೆ ಉಪಭಾಗ ಸಂಪೂರ್ಣ ನಿಷ್ಕ್ರಿಯವಾಯಿತು. ಮತ್ತು ಮತು ಕೂಡ ನಿಂತು ಹೊಯಿತು. ಆದರೆ ಬಡೇ ಬುಲಾಮ್ ಅಲಿಕಾನರು ಇದನ್ನು ಲೆಕ್ಕಿಸದೇ ಹಾಡಲು ಪ್ರಾರಂಭಿಸಿದರು. ಅವರನ್ನು ನೋಡುವ ವೈದ್ಯರುಗಳು ಹಾಡಿನಿಂದ ನಿಮಗೆ ನೆಚ್ಚಿನ ದಣಿವಾಗುತ್ತದೆ. ನೀವು ಹಾಡಬೇಡಿರಿ ಎಂದು ವಿನಂತಿಸಿಕೊಂಡರು. ಆಗ ಅವರು ‘ನಾನು ಜೀವಂತವಾಗಿರಬೇಕಾದರೆ ನಾನು ಹಾಡಬೇಕು’ ಎಂದು ಹೇಳಿದರು. ಮುಂದೆ ಎರಡೇ ವರ್ಷದಲ್ಲಿ ಸಂಪೂರ್ಣ ಗುಣಮುಖರಾಗಿ ನಾಡಿನ ವಿಖ್ಯಾತ ಸಂಗೀತ ಕಲಾವಿರಾಗಿ ಹೆಸರುವಾಸಿಯಾದರು. ಹೀಗೆ ಸಂಗೀತವು ವಿವಿಧ ರೋಗಗಳ ಉಪಶಮನಕ್ಕೆ ಸಹಕಾರಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಉದಾ: ಸಾವೇರಿ ರಾಗವನ್ನು ಅರ್ಥೈಟಿಸ್ನಿಂದ ಬಳಲುವವರಿಗೆ ಕೇಳಿಸಿದ್ದಾದರೆ ಹೆಚ್ಚಿನ ಪರಿಣಾಮ ಕಂಡುಬರುತ್ತದೆ. ಅತಿಯಾದ ಚಟುವಟಿಕೆಗಳಿಂದ ಕೂಡಿದ ಮಕ್ಕಳಿಗೆ ಭಜನಗಳಲ್ಲಿ ತೊಡಗಿಸಲಾಗುತ್ತದೆ. ಮಧ್ಯಮಾವತಿಯು ಉತ್ತೇಜಿತ ಮನಸ್ಸನ್ನು ಶಾಂತಗೊಳಿಸುತ್ತದೆ. ಕಫದೋಷಕ್ಕೆ ಸಂಬಂಧಿಸಿದ ಖಾಯಿಲೆಗಳಾದ ಅಸ್ತಮಾ, ಕೆಮ್ಮು ಶೀತ, ಕ್ಷಯರೋಗ (ಟೀಬಿ), ಮೊದಲಾದ ಸಮಸ್ಯಗಳನ್ನು ಭೈರವಿ ರಾಗವು ನಿವಾರಿಸಬಲ್ಲದು. ರಾಗ ಮಲ್ಹಾರ ಸಿಟ್ಟು ಒತ್ತಡಗಳಿಗೆ ಮದ್ದಾದರೆ, ರಾಗ ಸೌರವ, ಜೈಜೈವಂತೆ ಮಾನಸಿಕ ಕ್ಲೇಶವನ್ನು ಕಡಿಮೆ ಮಾಡುತ್ತವೆ. ರಾಗ ಹಿಂಡೋಳವು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಯಕೃತ ಸಂಬಂಧಿ ಕಾಯಿಲೆಗಳಿಗೆ ಮದ್ದಾಗುತ್ತದೆ. ಇದರಿಂದ ರಾಗಗಳ ಚಿಕಿತ್ಸಕ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಸಂಗೀತ ಚಿಕಿತ್ಸೆಯು ಮಾನವನ ಜೀವನದ ಅನೇಕ ಪ್ರಯೋಜನಗಳಿಗೆ ಈ ರೀತಿಯಾಗಿ ಕಾರಣೀಭೂತವಾಗಿದೆ.

 • ಮನಸ್ಸಿನ ಆಹ್ಲಾದತೆಗೆ ಸಹಕಾರಿ
 • ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ದಿಸುತ್ತದೆ.
 • ಒತ್ತಡ ದುರ ಮಾಡುತ್ತದೆ.
 • ನೋವನ್ನು ಉಪಶನಗೊಳಿಸುತ್ತದೆ
 • ಎಲ್ಲರ ಜೊತೆ ಸ್ನೇಹ ಸಹಕಾರದಿಂದ ಇರಲು ಸಹಕಾರಿ
 • ಸ್ನೇಹಪರ ವಾತಾವರಣದ ಮನೋಭಾವ ಉಂಟುಮಾಡುತ್ತದೆ.
 • ಸಂಗೀತದ ‘ರಿದಂ’ ಮತ್ತು ‘ಸೊಬಗು’ ಮಗುವಿನ ಮೆದುಳಿನ ತರಂಗಾಂತರಗಳನ್ನು ತಲುಪಿ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುತ್ತದೆ.
 • ಶಾಸ್ತ್ರೀಯ ಸಂಗೀತದಲ್ಲಿ ಬರುವ ರಾಗ, ತಾಳ, ಗತಿ, ನಡೆ, ಸ್ಥಾಯಿ, ಮಕ್ಕಳ ಗಣಿತ ಜ್ಞಾನವನ್ನು ಹೆಚ್ಚಿಸುವುದ ನಿಸ್ಸಂಶಯ.
 • ನಮ್ಮ ನೆನಪಿನ ಜ್ಞಾನವನ್ನು ವೃದ್ದಿಗೊಳಿಸುತ್ತದೆ.
 • ಸಂಗೀತದ ಬೆಳಗಿನ ರಾಗಗಳು ದಿನವಿಡೀ ಉಲ್ಲಾಸದಿಂದಿರಲು ಸಹಕರಿಸಿದರೆ ಸಂಜೆಯ ರಾಗಗಳು ದಿನದ ಬಳಲಿಕೆಯನ್ನು ನಿವಾರಿಸಿ ಮನಸ್ಸನ್ನು ಚೇತೋಹಾರಿಯನ್ನಾಗಿಸುತ್ತದೆ.
 • ಉದ್ರೇಕಗೊಂಡ ಮಾಂಸಖಂಡಗಳು ಹಾಗೂ ನರ ವ್ಯವಸ್ಥೆಯನ್ನು ಉಪಶಮನಗೊಳಿಸುತ್ತದೆ.

ಪ್ರತಿ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಸ್ಥಿತಿಗತಿಯನ್ನು ಆಧರಿಸಿ ನಿರ್ದಿಷ್ಟ ಸಂಗೀತ ಚಿಕಿತ್ಸೆಯನ್ನು ನೀಡಲಾಗುತ್ತದೆ. ಆಧುನಿಕ ಮನೋಭಾವದವರು ‘ರಾಕ್’, ‘ಪಾಪ್’, ‘ಜಾಜ್’ ಇತ್ಯಾದಿ ವಿದೇಶಿ ಸಂಗೀತಗಳನ್ನು ಇಷ್ಟಪಡುವದು ಸಹಜ. ಅವರ ತೀವ್ರ ತಂತ್ರಜ್ಞಾನ ಆಧಾರಿತ ಈ ಸಂಗೀತವಾಗಲಿ, ಸಿಟ್ಟು ಅಥವಾ ಪ್ರತಿಭಟನೆಯ ಸ್ವರೂಪವಾಗಿ ಹುಟ್ಟಿಕೊಂಡ ಆರ್ ಅಂಡ್ ಬಿ; ಜಾಜ್, ಬ್ಲೂಸ್ ನಂತಹ ಸಂಗೀತಗಳಾಗಲೀ ಮೂಲಭೂತವಾಗಿ ನಮ್ಮೊಳಗೆ ಅನೈಸರ್ಗಿಕ ಹಾಗೂ ನೆಗೆಟಿವ್ ತರಂಗಗಳನ್ನು ಹೊಂದಿರುತ್ತವೆ. ಇಂತಹ ಸಂಗೀತ ಕೇಳುಗರಲ್ಲಿ ಉನ್ಮಾದ, ಆವೇಶ, ಕಾಮೋತ್ಸಾಹಗಳನ್ನು ತುಂಬಬಲ್ಲವು. ಕೆಲಕಾಲದಲ್ಲಿ ಈ ಸಂಗೀತದ ದುಷ್ಪರಿಣಾಮ ಕಿವಿ ತಮಟೆ ಹಾಗೂ ನರಮಂಡಲದ ಮೇಲೆ ಉಂಟಾಗುತ್ತದೆ.

ಆಧುನಿಕ ಜಗತ್ತಿನಲ್ಲಿ ಕೈಗಾರಿಕರಣದಿಂದ, ವ್ಯಾಪಾರೀಕರಣದಿಂದ ಹಾಗೂ ನಗರೀಕರಣದಿಂದ ಅನೇಕ ಹೊಸ ಹೊಸ ಬಗೆಯ ರೋಗಗಳಿಗೆ ಮಾನವನು ತುತ್ತಾಗುತ್ತಿದ್ದಾನೆ ಮತ್ತು ಅವುಗಳಿಂದ ಮುಕ್ತಿ ಪಡೆಯಲು ವೈದ್ಯರು ಹೇಳುವ ದುಬಾರಿ ಬೆಲೆಯ ಔಷಧಿಗಳಿಗೆ ಮೊರೆಹೋಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿಚಾರ ಮಾಡಿದಾಗ ಅತ್ಯಂತ ಸರಳವಾದ, ಯಾವುದೇ ಆರ್ಥಿಕ ಸಹಾಯವಿಲ್ಲದೆ ಕೆಟ್ಟ ಪರಿಣಾಮಗಳನ್ನು ಬೀರದೆ ಇರುವ ‘ಸಂಗೀತ ಚಿಕಿತ್ಸೆ’ ಪದ್ಧತಿಯನ್ನು ‘ವೈಜ್ಞಾನಿಕ ಚಿಕಿತ್ಸೆ’ ಪದ್ಧತಿಯಲ್ಲಿ ಅಳವಡಿಸಿಕೊಂಡರೆ ಜನರಿಗೆ ಹೆಚ್ಚು ಅನುಕೂಲಕರವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.