೧. ಕೃಷ್ಣಮೂರ್ತಿಯವರ ನೋಟಬುಕ್‌ – ಮೇರಿ ಲುತ್‌ಯೆನ್ಸ್‌
(From Krishnamurti’s Note Book-Mary Lutyens)

ಇಡೀ ರಾತ್ರಿ ಮಳೆಯಾಗುತ್ತಿದೆ. ಅನೇಕ ವಾರಗಳ ಬಿಸಿಲು – ಧೂಳಿನ ನಂತರ ಈಗ ಆಹ್ಲಾದಕರ ವಾತಾವರಣ. ಭೂಮಿ ಒಣಗಿ ಬಿರುಕು ಬಿಟ್ಟಿತ್ತು. ಎಲೆಗಳ ಮೇಲೆ ದಟ್ಟನೆಯ ಧೂಳು ತುಂಬಿತ್ತು. ಹುಲ್ಲುಗಾವಲಿಗೆ ನೀರು ಬಿಟ್ಟಿದ್ದರು. ಜನದಟ್ಟಣೆಯಿಂದ ತುಂಬಿದ, ಕೊಳೆಯಿಂದ ಕೂಡಿದ ನಗರದಲ್ಲಿ ಬಹಳ ದಿನಗಳಿಂದ ಬಿದ್ದ ಬಿಸಿಲು ಅಪ್ರಿಯವಾಗಿತ್ತು, ಗಾಳಿ ಭಾರವಾಗಿತ್ತು, ಈಗ ಅನೇಕ ಗಂಟೆಗಳಿಂದ ಮಳೆ ಬೀಳುತ್ತಿದೆ. ಪಾರಿವಾಳಗಳಿಗೆ ಮಾತ್ರ ಈ ಮಳೆ ಇಷ್ಟವಿಲ್ಲ. ತಮ್ಮ ಸ್ಥಳದಲ್ಲಿ ಆಶ್ರಯ ಪಡೆದು ಖಿನ್ನತೆಯಿಂದ ಗುಟುಕು ಹಾಕುತ್ತಿಲ್ಲ. ಗುಬ್ಬಿಗಳು ಎಲ್ಲಿಯೋ ಅಡಗಿ ಕುಳಿತಿವೆ. ತಾರಸಿಯ ಮೇಲೆ ಹಾರಾಡುವ ಗುಬ್ಬಿಗಳು ಈಗ ಹೊರಗೆ ಬರುತ್ತಿಲ್ಲ, ಭೂಮಿ ಹಸಿಯಾಗಿದೆ.

ಇಡೀ ರಾತ್ರಿ ಆ ಅನುಭವ ಇತ್ತು. ನಿದ್ರೆಯಲ್ಲಿಯೂ ಇತ್ತು. ಎಚ್ಚರವಾದಾಗ ಸಹ ಅದು ಶಕ್ತಿಶಾಲಿಯಾಗಿತ್ತು. ಅದರೊಂದಿಗೆ ಸೌಂದರ್ಯವಿತ್ತು. ಆ ಸೌಂದರ್ಯ ಪ್ರತಿಮೆ, ಭಾವನೆ, ವಿಚಾರ ಇವುಗಳಿಂದ ನಿರ್ಮಾಣವಾದದ್ದಲ್ಲ, ಸೌಂದರ್ಯ ವಿಚಾರವೂ ಅಲ್ಲ, ಭಾವನೆಯೂ ಅಲ್ಲ.

ಈ ಜಗತ್ತಿನಲ್ಲಿ ಭಯ ಇದೆ. ಆದರೆ ಭಯ ನೈಜವಾದುದಲ್ಲ, ಅದು ಪರಿಣಾಮಕಾರಿಯಾದ ವರ್ತಮಾನದ ಮೊದಲು ಅಥವಾ ನಂತರದಲ್ಲಿ ಇರುತ್ತದೆ. ಚುರುಕಾದ ವರ್ತಮಾನದಲ್ಲಿ ಭಯ ಇದ್ದರೆ ಅದು ಭಯವೇ? ಭಯ ಅಲ್ಲಿ ಇದೆ. ಅದರಿಂದ ಪಾರಾಗಲು ಶಕ್ಯವಿಲ್ಲ, ದೈಹಿಕ ಅಥವಾ ಮಾನಸಿಕ ಅಪಾಯದ ಕ್ಷಣದಲ್ಲಿ, ಆ ಪರಿಣಾಮಕಾರಿಯಾದ ಕ್ಷಣದಲ್ಲಿ ಸಂಪೂರ್ಣ ಗಮನ (attention) ಇರತಕ್ಕದ್ದು. ಸಂಪೂರ್ಣ ಗಮನವಿಟ್ಟಾಗ ಭಯ ಇರುವುದಿಲ್ಲ. ಗಮನ ಇಲ್ಲದಿರುವಿಕೆ ಭಯ ಹುಟ್ಟಿಸುತ್ತದೆ. ವಾಸ್ತವಿಕತೆಯಿಂದ ದೂರವಾಗುವದರಿಂದ ಭಯ ಹುಟ್ಟುತ್ತದೆ. ಭಯದಿಂದ ಪಾರಾಗುವಿಕೆ ಭಯ ನಿರ್ಮಿಸುತ್ತದೆ.

ಭಯ ಮತ್ತು ಅದರ ಇತರ ರೂಪಗಳಾದ ಅಪರಾಧ, ಆತಂಕ, ಆಶೆ, ನಿರಾಶೆ ಇವುಗಳು ಸಂಬಂಧಗಳ ಚಲನೆಯಲ್ಲಿ ಇರುತ್ತವೆ. ಭದ್ರತೆಯ (Security) ಪ್ರತಿಯೊಂದು ಹುಡುಕಾಟದಲ್ಲಿ ಭಯ ಇದೆ. ಪ್ರೀತಿ-ಪೂಜೆಯಲ್ಲಿ ಕೂಡ ಭಯ ಇದೆ, ಮಹಾತ್ವಾಕಾಂಕ್ಷೆ ಹಾಗೂ ಯಶಸ್ಸಿನಲ್ಲಿ ಭಯ ಇದೆ. ಜೀವನ ಹಾಗೂ ಮರಣಗಳಲ್ಲಿ ಸಹ ಭಯ ಇದೆ. ದೈಹಿಕ ಹಾಗೂ ಮಾನಸಿಕ ಸಂಗತಿಗಳಲ್ಲಿ ಭಯ ಇದೆ, ನಮ್ಮ ಪ್ರಜ್ಞೆಯ ಎಲ್ಲ ಸ್ತರಗಳಲ್ಲಿ, ಎಲ್ಲ ರೂಪಗಳಲ್ಲಿ ಭಯ ಇದೆ. ರಕ್ಷಣೆ ಪ್ರತಿರೋಧ, ನಿರಾಕರಣ ಇವುಗಳು ಭಯದಿಂದ ನಿರ್ಮಿತಗೊಂಡಿವೆ. ಕತ್ತಲೆಯ ಭಯ, ಬೆಳಕಿನ ಭಯ, ಹೋಗುವ ಭಯ, ಬರುವ ಭಯ. ಭದ್ರತೆಯ ಬಯಕೆಯಿಂದ ಭಯದ ಪ್ರಾರಂಭ ಹಾಗೂ ಕೊನೆ ಇರುತ್ತದೆ. ಆಂತರಿಕ ಭದ್ರತೆ ಹಾಗೂ ಬಾಹ್ಯ ಭದ್ರತೆ ಹಾಗೂ ಶಾಶ್ವತವಾದ ಭದ್ರತೆಯ ಬಯಕೆಯಲ್ಲಿ ಭಯ ಇದೆ. ನಾವು ಎಲ್ಲ ಸಂಬಂಧಗಳಲ್ಲಿ, ಎಲ್ಲ ದಿಕ್ಕುಗಳಲ್ಲಿ, ಕೃತಿಯಲ್ಲಿ, ಅನುಭವದಲ್ಲಿ, ಜ್ಞಾನದಲ್ಲಿ, ಆಂತರಿಕ ಹಾಗೂ ಬಾಹ್ಯ ವಸ್ತುಗಳಲ್ಲಿ ಶಾಶ್ವತತೆಯನ್ನು ಬಯಸುತ್ತೇವೆ. ಭದ್ರತೆಯ ಹುಡುಕಾಟವೆ ನಮ್ಮ ಮುಗಿಯದ ಅಳಲು. ಈ ಬಯಕೆ ಭಯವನ್ನು ನಿರ್ಮಿಸುತ್ತದೆ.

ಆದರೆ ಅಂತರಂಗ-ಬಹಿರಂಗದಲ್ಲಿ ಈ ಶಾಶ್ವತ ಸ್ಥಿತಿ ಇದೆಯೆ? ಬಹಿರಂಗದಲ್ಲಿ ಅಲ್ಪ ಪ್ರಮಾಣದಲ್ಲಿ ಇರಬಹುದು. ಅದು ಕೂಡ ಅನಿಶ್ಚಿತ. ಈ ಜಗತ್ತಿನಲ್ಲಿ ಯುದ್ಧಗಳು, ಕ್ರಾಂತಿಗಳು, ಪ್ರಗತಿ, ಅಪಘಾತ ಮತ್ತು ಭೂಕಂಪಗಳು. ಆಹಾರ, ಬಟ್ಟೆ, ವಸತಿ ಎಲ್ಲರಿಗೂ ಬೇಕು. ಇವು ಎಲ್ಲರಿಗೂ ಅವಶ್ಯ, ಎಲ್ಲರೂ ಇವನ್ನು ಬಯಸಿದರೂ ಆಂತರಿಕ ಖಚಿತತೆ, ಶಾಶ್ವತ ಸ್ಥಿತಿ ಇದೆಯೆ? ಇಲ್ಲ ವಾಸ್ತವತೆಯಿಂದ ಪಾರಾಗುವಿಕೆ ಭಯದ ಮೂಲವಾಗಿದೆ. ಈ ಸತ್ಯ ಅರಿಯದಿರುವಿಕೆ ಎಲ್ಲ ರೀತಿಯ ಆಶೆ-ನಿರಾಶೆಗೆ ಉಗಮವಾಗಿದೆ.

ವಿಚಾರವೇ ಭಯದ ಮೂಲ. ವಿಚಾರವು ಸಮಯವಾಗಿದೆ. ‘ನಾಳೆ’ಯ ವಿಚಾರವು ನಲಿವು ಅಥವಾ ನೋವು ನಿರ್ಮಿಸುತ್ತದೆ. ವಿಚಾರವು ಹರ್ಷವು ಕೊನೆಯಾಗಬಾರದೆಂದು ವಿಚಾರ ಅದನ್ನು ಅರಸುತ್ತದೆ. ಒಂದು ವೇಳೆ ನೋವುದಾಯಕವಿದ್ದರೆ ಅದರಿಂದ ಪಾರಾಗುವಿಕೆಯೇ ಭಯ. ನಲಿವು-ನೋವು ಭಯದ ಕಾರಣಗಳು. ವಿಚಾರ ಹಾಗೂ ಭಾವೆನೆ ರೂಪದಲ್ಲಿ ಇರುವ ಸಮಯ ಭಯವನ್ನು ನಿರ್ಮಿಸುತ್ತದೆ. ವಿಚಾರದ ಸರಿಯಾದ ತಿಳುವಳಿಕೆ,ನೆನಪು ಹಾಗೂ ಅನುಭವದ ರಚನೆ ಮಾತ್ರ ಭಯವನ್ನು ಕೊನೆಗಾಣಿಸುತ್ತದೆ. ಮುಕ್ತವಾದ ಮತ್ತು ರಹಸ್ಯವಾದ ಪ್ರಜ್ಞೆಯ ಕಾರ್ಯವಿಧಾನ ವಿಚಾರವೇ ಆಗಿದೆ. ವಿಚಾರವೇ ವಿಚಾರದ ಮೂಲವಾಗಿದೆ. ವಿಚಾರ ಕೇವಲ ನಂಬಿಕೆ. ಸಿದ್ಧಾಂತ, ಕಲ್ಪನೆ ಅಲ್ಲ, ಆದರೆ ಇವುಗಳ ಉಗಮಸ್ಥಾನ. ಈ ಕೇಂದ್ರವೇ ಭಯದ ಮೂಲ. ಇದರ ಅರಿವು ಇದೆಯೇ? ದೈಹಿಕ ಆತ್ಮರಕ್ಷಣೆ ಸಹಜ ಆರೋಗ್ಯಪೂರ್ಣ. ಆದರೆ ಆಂತರಂಗಿಕವಾದ ರಕ್ಷಣೆ ಭಯವನ್ನು ನಿರ್ಮಿಸುತ್ತದೆ. ಈ ಆಂತರಂಗಿಕ ಭಯ ಬಹಿರಂಗದ ವರ್ಗ, ಪ್ರತಿಷ್ಠೆ, ಅಧಿಕಾರ ಇವುಗಳ ಸಮಸ್ಯೆ ನಿರ್ಮಿಸುತ್ತದೆ.

ವಿಚಾರದ ಸಮಗ್ರ ಅಧ್ಯಯನ, ಸಮಯ ಮತ್ತು ಭಯ ಇವುಗಳ ಬೌದ್ಧಿಕಸೂತ್ರ ಗಮನಿಸಿದಾಗ ಮಾತ್ರ ಭಯ ಅಂತ್ಯವಾಗುತ್ತದೆ. ತನ್ನ ಅರಿವು ಭಯದ ನಾಶಕ್ಕೆ ಕಾರಣವಾಗುತ್ತದೆ.