ಜೀವನದ ಅತ್ಯಂತ ಕಠಿಣ ಸಂಗತಿಗಳಲ್ಲಿ ಸಂದರ್ಭಗಳಿಂದ ನಿಯಂತ್ರಿತವಾಗಲಾರದಂಥ ನಡತೆಯ ದಾರಿ ಹುಡುಕುವುದು. ಸಂದರ್ಭಗಳು ಹಾಗೂ ಜನರು ನಮ್ಮನ್ನು ತಮ್ಮ ಆದೇಶಕ್ಕನುಗುಣವಾಗಿ ನಡೆದುಕೊಳ್ಳಲು ಬಯಸುತ್ತಾರೆ. ನೀವು ನಡೆದುಕೊಳ್ಳುವ ರೀತಿ, ನೀವು ಊಟ ಮಾಡುವ ರೀತಿ, ನೀವು ಮಾತನಾಡುವ ರೀತಿ, ನಿಮ್ಮ ನೈತಿಕ ನಡತೆ ಇವೆಲ್ಲವು ನೀವು ವಾಸಿಸುವ ಸ್ಥಳವನ್ನು ಅವಲಂಭಿಸಿವೆ. ಆದ್ದರಿಂದ ಇವು ಬದಲಾವಣೆ ಹೊಂದುತ್ತವೆ. ನಿಮ್ಮ ತಂದೆ, ತಾಯಿ, ನೌಕರ ಜೊತೆ ಮಾತನಾಡುವಗ ನಿಮ್ಮ ಧ್ವನಿ, ಶಬ್ದಗಳು ಭಿನ್ನವಾಗಿರುತ್ತವೆ. ವಾತಾವರಣದ ಪ್ರಭಾವದಿಂದ ನಡತೆಯ ದಾರಿಗಳು ನಿಯಂತ್ರಿಸಲ್ಪಡುತ್ತವೆ. ನಡತೆಯನ್ನು ವಿಶ್ಲೇಷಿಸಿ ಜನರು ಏನು ಮಾಡುತ್ತಾರೆಂಬುದನ್ನು ಹೇಳಬಹುದು.

ಹೊರಗಡೆ ವಾತಾವರಣದಲ್ಲೇನೇ ಇದ್ದರೂ ಸಹ ಅಂತರಂಗದಲ್ಲಿ ಒಂದೇ ರೀತಿಯ ನಡೆತೆ ಹೊಂದಲು ಸಾಧ್ಯವೇ? ನಿಮ್ಮ ಬಗ್ಗೆ ಜನರು ಏನೇ ಭಾವಿಸಿದರೂ, ಯಾವುದೇ ರೀತಿಯಿಂದ ಕಂಡರೂ ಸಹ ನಿಮ್ಮ ನಡತೆ ಅಂತರಂಗದಿಂದ ಅರಳಬಲ್ಲುದೆ? ಇದು ಕಠಿಣ ಏಕೆಂದರೆ ಒಳಗೇನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಒಳಗೆ ಸತತವಾದ ಬದಲಾವಣೆ ಆಗುತ್ತಿರುತ್ತದೆ. ನಿನ್ನೆ ನೀವೇನಿದ್ದೀರೋ ಇಂದು ಇಲ್ಲ, ಇತರರು, ಸಮಾಜ, ಸಂದರ್ಭಗಳು, ಧಾರ್ಮಿಕ ನಿಯಮಗಳು ಇವುಗಳಿಂದ ನಿಯಂತ್ರಿತವಾಗದ ನಡತೆಯ ದಾರಿ ತನ್ನಿಂದ ಹುಡುಕಲು ಶಕ್ಯವಿಲ್ಲವೇ?ಪ್ರೀತಿ ಏನೆಂಬುದು ತಿಳಿದರೆ ಅಂತಹ ದಾರಿ ಹುಡುಕುವುದು ಶಕ್ಯ.

ಪ್ರೀತಿ ಎಂದರೆ ಏನು ನಿಮಗೆ ಗೊತ್ತೆ? ಜನರನ್ನು ಪ್ರೀತಿಸುವುದೆಂದರೆ ಗೊತ್ತೆ? ಒಂದು ಮರಕ್ಕೆ ಪೋಷಣೆ ಮಾಡುವದರಿಂದ, ಒಂದು ನಾಯಿಗೆ ಸ್ವಚ್ಛ ಮಾಡಿ ಊಟ ಹಾಕಿದರೆ ಅದಕ್ಕೆ ಕಾಳಜಿ ಮಾಡಿದಂತಾಯಿತು. ರಸ್ತೆಯಲ್ಲಿರುವ ಮರ, ಯಾರಿಂದಲೂ ಲಕ್ಷವಹಿಸಲ್ಪಡದ ಮರದ ಬಗ್ಗೆ ನಿಮಗೆ ಗೊತ್ತಿರಲಿಕ್ಕಿಲ್ಲ. ಯಾವಾಗಲಾದರೊಮ್ಮೆ ಜನರು ಅದರೆಡೆ ನೋಡುತ್ತಾರೆ ಹಾಗೂ ನಿರ್ಗಮಿಸುತ್ತಾರೆ. ತೋಟದಲ್ಲಿ ಆರೈಕೆ ಮಾಡಿದ ಮರಕ್ಕಿಂತಲೂ ಅದು ಭಿನ್ನವಾಗಿದೆ. ತೋಟದ ಮರದ ಕೆಳಗೆ ಕುಳಿತುಕೊಳ್ಳುತ್ತೀರಿ ನೋಡುವಿರಿ. ಎಲೆಗಳು ಮೂಡುವದನ್ನು ಕಾಣುವಿರಿ. ರೆಂಬೆಗಲ ಮೇಲೆ ಹತ್ತುವಿರಿ. ಅಂತಹ ಮರ ಶಕ್ತಿಯೊಂದಿಗೆ ಬೆಳೆಯುತ್ತದೆ. ನೀವು ಒಂದು ಮರದ ಆರೈಕೆ ಮಾಡಿದಾಗ, ಅದಕ್ಕೆ ನೀರು ಹಾಕಿದಾಗ, ಅನವಶ್ಯಕ ರೆಂಬೆಗಳನ್ನು ಕತ್ತರಿಸಿದಾಗ, ಕಾಳಜಿವಹಿಸಿದಾಗ ಅದರ ಬೆಳವಣಿಗೆ ರಸ್ತೆಯಲ್ಲಿರುವ ಮರಕ್ಕಿಂತ ಭಿನ್ನವಾಗಿರುತ್ತದೆ.

ಕಾಳಜಿ ಭಾವನೆ ಪ್ರೀತಿಯ ಪ್ರಾರಂಭ. ವಸ್ತುಗಳ ಆರೈಕೆ ಹೆಚ್ಚಿಗೆ ಮಾಡಿದಂತೆ ನೀವು ಹೆಚ್ಚು ಸೂಕ್ಷ್ಮ ಮನಸ್ಸಿನವರಾಗುತ್ತೀರಿ. ಆದ್ದರಿಂದ ಪ್ರೀತಿ ಮೃದುತ್ವ, ದಯೆ, ಉದಾರತೆಯ ಭಾವನೆಗಳು ಇರಬೇಕು. ಈ ಗುಣಗಳು ಇದ್ದರೆ ನಿಮ್ಮ ನಡತೆ ಸಂದರ್ಭ, ಜನರು ಹಾಗೂ ವಾತಾವರಣದಿಂದ ಪ್ರಭಾವಿತವಾಗುವುದಿಲ್ಲ, ಇಂತಹ ಪ್ರೀತಿಯನ್ನು ಹುಡುಕುವುದು ಕಷ್ಟ. ಜನರು ಕರುಣೆ ಅಥವಾ ಕ್ರೌರ್ಯ ತೋರಿಸಲಿ, ಒರಟುತನದಿಂದ ವರ್ತಿಸಲಿ ನೀವು ಮಾತ್ರ ಪ್ರೀತಿ ತೋರಬೇಕು. ಮಕ್ಕಳಲ್ಲಿ ಇಂತಹ ವರ್ತನೆ ಇದೆ. ಯುವಕರಾಗಿದ್ದಾಗ ನಿಮ್ಮಲ್ಲಿ ಕೂಡ ಇದೆ. ಇತರರೊಂದಿಗೆ ಮೈತ್ರಿಯಿಂದ ಇರುವಿರಿ, ನಾಯಿಯ ಮೈನೇವರಿಸುವಿರಿ ಸರಳವಾಗಿ ನಗುವಿರಿ ಆದರೆ ವಯಸ್ಸಾದಂತೆ ಇವೆಲ್ಲ ಮಾಯವಾಗುತ್ತವೆ. ಜೀವನದುದ್ದಕ್ಕೂ ಪ್ರೀತಿಯನ್ನು ಬೆಳೆಸಿಕೊಳ್ಳುವುದು ಕಷ್ಟದ ಕೆಲಸ. ಅದಿಲ್ಲದಿದ್ದರೆ ಜೀವನ ಬರಿದು. ನಿಮಗೆ ಮಕ್ಕಳಿರಬಹುದು, ಸುಂದರವಾದ ಮನೆ ಇರಬಹುದು, ಕಾರು ಇರಬಹುದು, ಆದರೆ ಪ್ರೀತಿ ಇಲ್ಲದ ಜೀವನ ಸುವಾಸನೆ ಇಲ್ಲದ ಹೂವಿನಂತೆ. ಶಿಕ್ಷಣದ ಉದ್ದೇಶ ಇಂತಹ ಹರ್ಷಕೊಡುವ ಪ್ರೀತಿಯನ್ನು ಕಲಿಸುವದು.

ನಮ್ಮಲ್ಲಿ ಬಹಳಷ್ಟು ಜನರು ಪ್ರೀತಿ ಎಂದರೆ ಸ್ವಾಮಿತ್ವ ಹೊಂದುವದು ಎಂದು ಭಾವಿಸಿದ್ದಾರೆ. ಅಸೂಯೆ-ವೈರತ್ವ ಇಲ್ಲದಾಗ ಮಾತ್ರ ಪ್ರೀತಿ ಚಿಗುರುತ್ತದೆ. ಪ್ರೀತಿ ಇಲ್ಲದ ಜೀವನ ಬಂಜರುಭೂಮಿ ಇದ್ದಂತೆ. ಪ್ರೀತಿ ಹೊಮ್ಮಿದಾಗ ನೀರುಂಡು ಚಿಗುರುವ ಭೂಮಿಯಂತೆ ಸುಂದರವಾಗಿ ಕಾಣುವುದು. ಬಾಲಕರಾಗಿದ್ದಾಗ ಇವೆಲ್ಲವನ್ನೂ ಅರಿಯಬೇಕು. ವಯಸ್ಸಾದಾಗ-ತಡವಾಗಿ ಕಲಿತರೆ ನಿರುಪಯುಕ್ತ. ಆಗ ನೀವು ಸಮಾಜದ ವಾತಾವರಣದ, ಹೆಂಡತಿಯ, ಗಂಡನ, ಕಚೇರಿಯ ಕೈದಿಗಳಾಗುವಿರಿ. ಇತರರು ನಿಮ್ಮ ದಾರಿ ಕಾಯುವುದು ಬೇಡವೆಂದು ನೀವು ವರ್ಗಕ್ಕೆ ಹೋಗುವಿರಾ? ಇತರರು ನಿಮ್ಮೊಂದಿಗೆ ಇದ್ದಾರೆಂದು ನೀವು ಜೋರಾಗಿ ಕೂಗುವುದು ಬೀಡುತ್ತಿದ್ದೀರಾ?

ನಡತೆ, ಸಭ್ಯತೆ ಪ್ರೀತಿಯಿಲ್ಲದೆ ಕೃತ್ರಿಮವಾದರೆ ಅವುಗಳಿಗೆ ಅರ್ಥವಿಲ್ಲ. ಆದರೆ ಪ್ರೀತಿ, ಕರುಣೆ, ಗೌರವ ಇದ್ದರೆ ಅವುಗಳಿಂದ ಸಭ್ಯತೆ, ಒಳ್ಳೆಯ ರೀತಿ ಬೆಳೆದು ತಾನು ತನ್ನ ಬಗ್ಗೆ ಕಡಿಮೆ ವಿಚಾರಿಸುತ್ತಾನೆ ಎಂದು ಅರ್ಥವಗುತ್ತದೆ. ಆದರೆ ಇದು ಕಷ್ಟ. ತನ್ನ ಬಗ್ಗೆ ಹೆಚ್ಚು ಯೋಚನೆ ಮಾಡದೆ ಹೋದರೆ ಆತ ಸ್ವತಂತ್ರ ವ್ಯಕ್ತಿ. ಆಗ ಮಾತ್ರ ಆಕಾಶ, ಬೆಟ್ಟಗಳು, ಪರ್ವತಗಳು, ನದಿಗಳು, ಪಕ್ಷಿಗಳು, ಹೂಗಳು ಇವೆಲ್ಲವನ್ನು ಹೊಸ ಮನಸ್ಸಿನಿಂದ ನೋಡಬಹುದು, ಪ್ರೀತಿಯಿಂದ ನೋಡಬಹುದು.