ಗ್ರಾಮದ ದೇವಸ್ಥಾನಗಳಲ್ಲಿ ಕಂಡುಬರುವ ಪೂಜಾರಿಗಳು, ಅವರ ಸೇವೆ, ಆಚಾರ-ವಿಚಾರಗಳು ಅದರಂತೆಯೆ ಭಕ್ತರು ಸಲ್ಲಿಸುವ ಸೇವೆ ಆಚಾರ, ವಿಚಾರಗಳೂ ಸಾಂಸ್ಕೃತಿಕ ನೆಲೆಯಲ್ಲಿ ತುಂಬ ಗಮನಾರ್ಹವೆನಿಸುತ್ತವೆ. ಗ್ರಾಮದೇವತೆಗಳ ಬಗೆಗೆ ಹೆಚ್ಚಿನ ಪ್ರಮಾಣದಲ್ಲಿ ಐತಿಹ್ಯಗಳು ಸಿಗುತ್ತವೆ. ಈ ಹಿನ್ನೆಲೆಯಲ್ಲಿ ನಂಬಿಕೆ, ಹಾಗೂ ಸಂಪ್ರದಾಯಗಳು ಬೆಳೆದು ಕೊಂಡುಬಂದಿವೆ. ಈ ನಂಬಿಕೆ ಸಂಪ್ರದಾಯಗಳ ಹಿನ್ನೆಲೆಯಲ್ಲಿ ಭಕ್ತರು ಸಲ್ಲಿಸುವ ಸೇವೆ ಆಯಾ ಸಂಸ್ಕೃತಿಯ ಒಂದು ಮಹತ್ವದ ಅವಿಭಾಜ್ಯ ಅಂಗವಾಗಿ ನಡೆದುಕೊಂಡು ಬರುತ್ತದೆ. ಸೇವೆಯ ಸಂದರ್ಭದಲ್ಲಿ ಭಕ್ತ ಮತ್ತು ದೇವರ ನಡುವೆ ಪೂಜಾರಿ ಮಧ್ಯವರ್ತಿಯ ಪಾತ್ರವಹಿಸುತ್ತಾನೆ.

ಸೇವೆ ಹಾಗೂ ಕರ್ತವ್ಯಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಪ್ರಾದೇಶಿಕ ವೈಶಿಷ್ಟ್ಯ, ಸಂಪ್ರದಾಯದ ದೃಷ್ಟಿಯಿಂದ ಈ ವಿವಿಧತೆಯಲ್ಲಿಯೇ ಐಕ್ಯತೆ ಸಾಧ್ಯವಿದೆ. ದೇವತಾಕಾರ್ಯದಲ್ಲಿ ಪೂಜಾರಿ ಹಾಗೂ ಭಕ್ತರಿಬ್ಬರೂ ಪಾಲುಗೊಳ್ಳುತ್ತಾರೆ. ಆದರೂ ಕೂಡಾ ಅವರವರ ಸ್ಥಾನಕ್ಕೆ ತಕ್ಕಂತೆ ಅವರ ಆಚರಣೆಗಳು ಕಾರ್ಯಗಳು ಬೇರೆ ಬೇರೆಯಾಗುತ್ತವೆ. ಈ ಸೇವೆ ಕರ್ತವ್ಯಗಳ ಹಿಂದೆ ವೈಯಕ್ತಿಕವಾದ ಅಭೀಪ್ಸೆ, ಫಲಾಪೇಕ್ಷೆ ಅಡಗಿರುವುದನ್ನೂ ಕಾಣಬಹುದು. ಜನರ ಸೇವೆಯ ವಿಧಿ ವಿಧಾನಗಳು ಮಾತ್ರ ವ್ಯಕ್ತವಾಗುತ್ತವೆ. ದೇವಿಯು ಭಕ್ತರ ಫಲ ರಕ್ಷಣೆಯ ಭಾರ ಹೊತ್ತಿರುವುದರಿಂದ ಭಕ್ತರ ಸೇವೆಯಲ್ಲಿ ಶ್ರದ್ಧೆ ನಿಷ್ಠೆ ಇರುತ್ತದೆ. ಈ ಶ್ರದ್ಧೆ ನಿಷ್ಠೆಯ ಪರಿಣಾಮವಾಗಿ ಭಕ್ತರು ಅನೇಕ ರೀತಿಯಲ್ಲಿ ಸೇವೆಗಳನ್ನು ಸಲ್ಲಿಸುವುದನ್ನು ಅನೇಕ ಸಂದರ್ಭಗಳಲ್ಲಿ ಕಾಣುತ್ತೇವೆ. ಮನೆಯಲ್ಲಿ ಮಗುವಿನ ಜನನವಾದಾಗ, ಮಕ್ಕಳ ಜವಳ ತೆಗೆಯಿಸುವಾಗ, ಮದುವೆ ಮುಂಜಿವೆ ನಡೆಯುವಾಗ ಹಾಗೂ ಒಕ್ಕಲತನದ ಮನೆತನಗಳಲ್ಲಿ ಬೀಜ ಬಿತ್ತುವಾಗ, ರಾಶಿ ಮಾಡುವಾಗ ಹೀಗೆ ಅನೇಕ ಸಂದರ್ಭಗಳಲ್ಲಿ ದೇವತೆಗೆ ಎಣ್ಣೆ ಬತ್ತಿಯನ್ನು ಕೊಡುವ ಸಂಪ್ರದಾಯ ಸಾಮಾನ್ಯವಾಗಿ ಕಂಡುಬರುತ್ತದೆ. ಈ ರೀತಿಯಾಗಿ ದೇವತೆಗೆ ಸೇವೆ ಸಲ್ಲಿಸುವುದರ ಮೂಲಕ ಕೃತಜ್ಞತೆಯನ್ನು ವ್ಯಕ್ತಪಡಿಸುವ ಕರ್ತವ್ಯ ಪ್ರಜ್ಞೆ ಭಕ್ತನಲ್ಲಿ ಅಡಗಿರುತ್ತದೆ. ಧರ್ಮದ, ಸಂಸ್ಕೃತಿಯ ಹಿನ್ನೆಲೆಯಲ್ಲಿ ಮೂಡಿಬರುವಂಥ ಸೇವಾ ಕಾರ್ಯಗಳು ವ್ಯಕ್ತಿಗತವಾಗಿರಬಹುದು ಇಲ್ಲವೆ ಕೌಟುಂಬಿಕವಾಗಿರಬಹುದು ಈ ಸೇವೆಯ ಕ್ರಿಯೆಯಲ್ಲಿ ಮೂರು ಹಂತಗಳನ್ನು ಕಾಣಬಹುದು. ನಂಬಿಕೆಯ ಮೂಲದಿಂದ ಸೇವಾಭಾವ ಮೊಳಕೆಗೊಳ್ಳುತ್ತದೆ. ಇದು ಮೊದಲ ಹಂತ. ನಂಬಿಕೆಯಿಂದಾಗಿ ಫಲಸಾಧನೆಗಾಗಿ ಹರಕೆಯನ್ನು ಕೈಕೊಳ್ಳುತ್ತಾನೆ ಇದು ಎರಡನೆ ಹಂತ. ಇನ್ನೂ ಮುಂದುವರೆದು ಹರಕೆಯನ್ನು ಆಚರಣೆಯಲ್ಲಿ ತರುತ್ತಾನೆ, ಇದು ಮೂರನೆಯ ಹಂತ. ಹೀಗೆ ಭಕ್ತನ ನಡವಳಿಕೆಯು ಮುಂದುವರೆದಂತೆ ಕ್ರಮೇಣ ಒಂದು ಸಂಪ್ರದಾಯ ನಿರ್ಮಾಣವಾಗುತ್ತದೆ.

ಮೊದಲೆ ಹೇಳಿದಂತೆ ಪೂಜಾರಿಯು, ದೇವರು ಹಾಗೂ ಭಕ್ತರ ನಡುವೆ ಮಧ್ಯಸ್ಥಿಕೆ ವಹಿಸುವ ಒಬ್ಬ ವ್ಯಕ್ತಿ ಎಂದು ಪರಿಗಣಸಲ್ಪಡುವನು. ಸಾರ್ವಜನಿಕ ಸೇವಾ ಸಂದರ್ಭಗಳಲ್ಲಿ ಆತನ ಸ್ಥಾನಮಾನ ಅತ್ಯಂತ ದೊಡ್ಡದು. ಪೂಜೆ ಹಾಗೂ ಇತರ ಅನೇಕ ಸಂದರ್ಭಗಳಲ್ಲಿ ಪೂಜಾರಿಯು ಅನಿವಾರ್ಯವೆನ್ನುವಷ್ಟರ ಮಟ್ಟಿಗೆ ಅವನ ಸ್ಥಾನ ಬೆಳೆದು ನಿಂತಿದೆ. ಪೂಜೆ ಪುನಸ್ಕಾರಗಳಲ್ಲಿಂತೂ ಈತನ ಪಾತ್ರ ಇನ್ನೂ ಮುಖ್ಯವಾಗಿರುತ್ತದೆ. ಅಲ್ಲದೆ ಪ್ರತಿಯೊಂದು ಆರಾಧನಾ ವಿಧಾನಗಳಲ್ಲಿ ಪೂಜಾರಿಗೆ ಮಹತ್ವದ ಸ್ಥಾನವಿರುತ್ತದೆ.

ಪೂಜಾರಿಗಳಲ್ಲಿ ಎರಡು ವರ್ಗಗಳನ್ನು ಕಾಣಬಹುದು:

೧ ಆನುವಂಶಿಕವಾಗಿ ಪೂಜಾಕಾರ್ಯವನ್ನು ವೃತ್ತಿಯಾಗಿ ನಡೆಸಿಕೊಂಡು ಬಂದ ಪೂಜಾರಿತನ.

೨ ಆಡಳಿತ ವರ್ಗದವರಿಂದ ನಿಯಮಿಸಲ್ಪಟ್ಟ, ನಿಯಮಿತಕಾಲದವರೆಗೆ ಪೂಜೆ, ಕಾರ್ಯಗಳನ್ನು ನೌಕರಿಯ ರೂಪದಲ್ಲಿ ನಡೆಸಿಕೊಂಡು ಬರುವ ನಿಯಮಿತ ಪೂಜಾರಿತನ.

ಆನುವಂಶಿಕವಾಗಿ ಬಂದ ಪೂಜಾರಿಗೆ ದೇವರಸ್ಥಾನದ ಮೇಲೆ ಒಡೆತನವಿರುತ್ತದೆ. ದೇವಸ್ಥಾನಗಳ ಎಲ್ಲ ಕಾರ್ಯಕ್ರಮಗಳ ನಿರ್ವಹಣೆ ದೇವರ ಅರ್ಚನಾ ಕ್ರಿಯೆಗಳು ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟ, ಆಸ್ತಿಗಳ ಹಕ್ಕು ಈತನಿಗೆ ಇರುತ್ತದೆ. ಇಂಥಹ ಹಕ್ಕನ್ನುಳ್ಳ ಪೂಜಾರಿಯಲ್ಲಿ ವೃತ್ತಿ ಪರಿಸರದ ಪ್ರಭಾವದಿಂದಾಗಿ ಸ್ವಭಾವ ಜನ್ಯವೆನ್ನುವಂತಹ ದೇವರ ಬಗೆಗೆ ನಂಬಿಕೆ, ಭಕ್ತಿ, ಮತ್ತು ಶ್ರದ್ಧೆ ಬೆಳೆದು ಬಂದಿರುತ್ತವೆ. ದೇವಾರ್ಚನೆಯ ವಿಧಿ ವಿಧಾನಗಳು, ಮತ್ತು ಕ್ರಿಯೆಗಳು ಸಂಪೂರ್ಣವಾಗಿ ಈ ಪೂಜಾರಿಯದು. ದೇವರನ್ನು ನಂಬಿ ಸಂಕಟ ಪರಿಹಾರಕ್ಕಾಗಿ ಬಂದ ಭಕ್ತರನ್ನು ಈ ಪೂಜಾರಿಯದು ದೇವರ ಪ್ರತಿನಿಧಿಯಾಗಿ ಅಭಯವನ್ನಿತ್ತು ಆಶೀರ್ವದಿಸುತ್ತಾನೆ. ಇಂಥ ಸಂದರ್ಭಗಳಲ್ಲಿ ಭಕ್ತರಿಂದ ಕಾಣಿಕೆಯಾಗಿ ಬಂದ ನೈವೇದ್ಯ ಮುಂತಾದ ಉತ್ಪನ್ನಗಳು ಪೂಜಾರಿಯ ಸ್ವತ್ತಾಗುತ್ತವೆ. ಎಲ್ಲಮ್ಮ, ಬನಶಂಕರಿ, ಚಿಂಚಲಿ ಮಾಯಮ್ಮ, ಗುಡಗೇರಿ ದ್ಯಾಮವ್ವ ಮುಂತಾದ ದೇವಸ್ಥಾನಗಳಲ್ಲಿ ಪೂಜೆಪುನಸ್ಕಾರಗಳು ವಂಶಪಾರಂಪರ್ಯವಾಗಿ ನಡೆದುಕೊಂಡು ಬಂದಿವೆ. ಧಾರವಾಡದ ದುರ್ಗಾದೇವತೆಯನ್ನು ೧೮೩೪ ರಿಂದ ಇಲ್ಲಿಯವರೆಗೆ ಒಂದೇ ಮನೆತನದವರು ಅನುವಂಶಿಕವಾಗಿ ಪೂಜಾರಿತನವನ್ನು ನಿರ್ವಹಿಸುತ್ತ ಬಂದಿರುವುದನ್ನು ಇಲ್ಲಿ ಸ್ಮರಿಸಬಹುದು.

ಅನುವಂಶಿಕವಾಗಿ ಪೂಜಾರಿತನವನ್ನು ಹೊಂದಿದವನು, ಬೆಳಗಿನ ಜಾವದಲ್ಲಿ ದೇವಿಯ ಗುಡಿಯನ್ನು ಸ್ವಚ್ಛಗೊಳಿಸುತ್ತಾನೆ. ಭಕ್ತಿ ಭಾವದಿಂದ ಮಡಿಯಾಗಿ ಕುಂಕುಮ, ಗಂಧ ಅರಿಷಣ, ಪುಷ್ಪ, ಪತ್ರಿ ಹಾಗೂ ಇತರ ಪೂಜಾ ಸಾಮಗ್ರಿಯೊಂದಿಗೆ ಶುಚಿಯಾಗಿ ಗುಡಿಗೆ ಆಗಮಿಸಿ ದೇವತೆಯನ್ನು ಪೂಜಿಸುತ್ತಾನೆ. ಬೆಳಗಿನಿಂದ ಸಂಜೆಯವರೆಗೆ ಭಕ್ತರ ಬರುವಿಕೆಯನ್ನು ಕಾಯುತ್ತಾನೆ. ಆ ಭಕ್ತರು ಅಪೇಕ್ಷಿಸುವ ಪೂಜಾ ವಿಧಾನವನ್ನು ಕೈಕೊಳ್ಳುವನು. ಹೀಗೆ ಬೆಳಗಿನಿಂದ ಸಂಜೆಯವರೆಗೆ ದೇವರ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವನು. ಹೀಗೆ ಜೀವನೋಪಾಯಕ್ಕಾಗಿ ದೇವರ ಸೇವೆಯನ್ನೇ ಸಂಪೂರ್ಣವಾಗಿ ಅವಲಂಬಿಸುವುದರಿಂದ ವೃತ್ತಿ ಪೂಜಾರಿ ಎನಿಸಿಕೊಳ್ಳುತ್ತಾನೆ.

ಆಡಳಿತ ವರ್ಗದವರಿಂದ ನೇಮಿಸಿದಂಥ ಪೂಜಾರಿಗಲು ಸಹ ಬೆಳಗಿನ ಜಾವದಲ್ಲಿ ದೇವಸ್ಥಾನವನ್ನು ಸ್ವಚ್ಛಗೊಳಿಸಿ ಅರ್ಚನೆಯಲ್ಲಿ ನಿರತರಾಗುತ್ತಾರೆ. ದೇವರ ಅರ್ಚನೆಯೊಂದು ಮಾತ್ರ ಇವರಿಗೆ ಮಾತ್ರ ಸಿಮೀತವಾಗಿರುತ್ತದೆ. ಈ ಒಂದು ಕಾರ್ಯವನ್ನು ಹೊರತು ಪಡಿಸಿ ಬೇರೆ ಜವಾಬ್ದಾರಿಗಳು ಇವರ ಮೇಲೆ ಇರುವುದಿಲ್ಲ. ಆ ಎಲ್ಲ ಜವಾಬ್ದಾರಿಗಳು ದೇವಸ್ಥಾನದ ಆಡಳಿತ ವರ್ಗಕ್ಕೆ ಸಂಬಂಧಪಟ್ಟಿರುತ್ತವೆ. ದೇವಸ್ಥಾನದ ಆಯವ್ಯಯಗಳು ಸಹಿತ ಆಡಳಿತ ವರ್ಗದವರಲ್ಲಿ ಕೇಂದ್ರಿಕೃತವಾಗಿರುತ್ತವೆ. ಉದಾಹರಣೆಗಾಗಿ, ಶಿರಸಿಯ ಮಾರಿಕಾಂಬಾ ದೇವಸ್ಥಾನದಲ್ಲಿ ಆಡಳಿತ ವರ್ಗವಿದ್ದು, ಈ ವರ್ಗದವರ ಆದೇಶದಂತೆ ನೇಮಕಗೊಂಡ ಪೂಜಾರಿ ಕಾರ್ಯನಿರ್ವಹಿಸುವದನ್ನು ಸ್ಮರಿಸಬಹುದು.

ಆನುವಂಶಕ ಪೂಜಾರಿಗಳು ಅರ್ಚನೆಯಲ್ಲಿ ನಿರತರಾಗಿದ್ದರೂ ಸಹಿತ ದೇವಸ್ಥಾನದ ಎಲ್ಲ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಹಾಗೂ ದೇವಸ್ಥಾನದ ಆಸ್ತಿ ಜಮೀನುಗಳಿಗೆ ಸಂಬಂಧಪಟ್ಟಂತೆ ನೇರವಾಗಿ ವರ್ತಿಸುತ್ತಾರೆ.