೧. ಉಣ್ಣೆಯನ್ನು ಮಾರಾಟ ಮಾಡಲು ಮಾರಕಟ್ಟೆಗೆ ತರಬೇಕಾದರೆ ಅದನ್ನು ಶುದ್ಧಪಡಿಸಿ ಸಂಸ್ಕರಣೆ ಮಾಡುವುದು ಬಹಳ ಅಗತ್ಯ. ಕಚ್ಚಾ ಉಣ್ಣೆಯಲ್ಲಿ ಬಹಳ ವಿಧವಾದ ಗಲೀಜು ವಸ್ತುಗಳು, ಧೂಳು, ಪ್ರಾಣಿಗಳ ಸಗಣಿ, ಮುಳ್ಳುಗಳು ಇತ್ಯಾದಿ ಇರುತ್ತವೆ. ಇಷ್ಟು ಗಲೀಜು ಇರುವ ಉಣ್ಣೆಯನ್ನು ಸಂಸ್ಕರಣೆ ಮಾಡಲು ಬೇಕಾದ ಹಲವಾರು ಕ್ರಮಗಳು ಮತ್ತು ಅದಕ್ಕೆ ತಗಲುವ ವೃಥಾ ಖರ್ಚ್ಚನ್ನು ರೈತರಿಗೆ ವಿಸ್ತಾರವಾಗಿ ತಿಳಿ ಹೇಳುವ ವಿಸ್ತರಣಾ ಕ್ರಮಗಳನ್ನು ಇನ್ನೂ  ಅನುಸರಿಸಿಲ್ಲ. ಮುಖ್ಯವಾಗಿ ಅವಿದ್ಯಾವಂತರು ಹಾಗೂ ಓದು ಬರಹ ಬಾರದೆ ಇರುವ ಆರ್ಥಿಕ ಮತ್ತು ಹಿಂದುಳಿದ ಜನಾಂಗದಲ್ಲಿ ಕುರಿ ಸಾಕಣೆ ಹಾಗೂ ಉಣ್ಣೆ ಉತ್ಪಾದನೆ ಇರುವುದರಿಂದ ಅವರಿಗೆ ಒಳ್ಳೆಯ ಶುದ್ಧವಾದ ಉಣ್ಣೆಯನ್ನು ಉತ್ಪಾದನೆ ಮಾಡುವಲ್ಲಿ ಹಾಗೂ ಅಧಿಕ ದರ ಸಿಕ್ಕುವ ಅಂಶಗಳನ್ನು ಮನದಟ್ಟು ಮಾಡಿಕೊಡಲು ಅಗತ್ಯ ಮಿಸ್ತರಣಾ ಕ್ರಮಗಳನ್ನು ಉಪಯೋಗಿಸುವ ಕ್ರಮದ ಅಗತ್ಯವಿದೆ.

೨. ಬಹಳಷ್ಟು ಉಣ್ಣೆ ಉತ್ಪಾದಕರಿಗೆ ಅವರು ಉತ್ಪಾದಿಸಿದ ಉಣ್ಣೆಯನ್ನು ಮಾರುಕಟ್ಟೆಗೆ ತರುವ ಪ್ರವೃತ್ತಿಯೇ ಇಲ್ಲ. ಇದಕ್ಕೆ ಮುಖ್ಯವಾಗಿ ಅವರಲ್ಲಿ ಮಾರಲಿರುವ ಉಣ್ಣೆ ಪ್ರಮಾಣ ಕಡಿಮೆ ಇದೆಯೆಂದು ಅಥವಾ ಅವರ ಉತ್ಪಾದನೆ ಸ್ಥಳದಿಂದ ಬಹಳ ದೂರದಲ್ಲಿರುವ ಮಾರುಕಟ್ಟೆಗೆ ತೆಗೆದುಕೊಂಡು ಬರಬೇಕಾದ ಕಷ್ಟದಿಂದಲೂ ಉಣ್ಣೆಯನ್ನು ಮಾರುಕಟ್ಟೆಯ ಸ್ಥಳಕ್ಕೆ ತಂದುಮಾರುವುದು ಬಹಳ ಕಡಿಮೆ. ಅವರು ಆರ್ಥಿಕವಾಗಿ ಹಿಂದುಳಿದುದರಿಂದ ಸರ್ವೇ ಸಾಮಾನ್ಯವಾಗಿ ಅವರ ಸ್ಥಳಕ್ಕೇ ಬಂದು ಉಣ್ಣೆಯನ್ನು ಕೊಂಡು ಕೊಳ್ಳುವ ದಲ್ಲಾಳಿಗಳಿಗೆ ಮಾರುವುದೇ ಸುಲಭ ಎಂದುಕೊಂಡಿರುವುದು ಇದಕ್ಕೆ ಮುಖ್ಯ ಕಾರಣ. ಆ ಉತ್ಪಾದನೆಯನ್ನು ಅಡವಿಟ್ಟು ಮುಂಗಡವಾಗಿ ಪಡೆಯುವ ಸೌಲಭ್ಯವನ್ನು ಉಣ್ಣೆಯಲ್ಲಿ ದಲ್ಲಾಳಿಗಳು ಮುಂಗಡ ಅಷ್ಟೋ ಇಷ್ಟೋ ಹಣ ಕೊಟ್ಟು ರೈತರ ಉತ್ಪಾದನೆ ಮಾಡುವ ಉಣ್ಣೆಯ ಪ್ರಮಾಣ ಗಳನ್ನು ಮೊದಲೇ ಮಾತನಾಡಿ ಅದರ ಲಭ್ಯತೆಯನ್ನು ಸ್ಥಿರಪಡಿಸಿಕೊಂಡಿರುತ್ತಾರೆ.

೩. ಇನ್ನು ಕೆಲವು ರಾಜ್ಯಗಳಲ್ಲಿ ಪರಿವೀಕ್ಷಣೆ ಮಾಡಿ ಕಂಡುಕೊಂಡ ಅಂಶವೆಂದರೆ ಉಣ್ಣೆಯ ಮಾರುಕಟ್ಟೆ ಮತ್ತು ವ್ಯವಸ್ಥಿತ ರೀತಿಯಲ್ಲಿ ಮಾರಾಟ ಮಾಡುವ ವ್ಯವಸ್ಥೆ ಇಲ್ಲವೇ ಇಲ್ಲ. ಇನ್ನು ಹಲವಾರು ರಾಜ್ಯಗಳಲ್ಲಿ ೩ನೇ ಘಟ್ಟದ ಅಥವಾ ಅಂತಿಮ ಘಟ್ಟದ ಮಾರುಕಟ್ಟೆ ವ್ಯವಸ್ಥೆಗಳು ಕಂಡು ಬರುವುವು.

೪. ಇತ್ತೀಚೆಗೆ ಕಂಡು ಬರುವ ಅಂಶಗಳೆಂದರೆ ಉಣ್ಣೆಯನ್ನು ಮುಕ್ತ ಮಾರಿಕಟ್ಟೆಯಲ್ಲಿ ಹರಾಜು ಮೂಲಕ ಮಾರುವ ಕ್ರಮವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಸ್ವಲ್ಪಮಟ್ಟಿನ ಮ್ರಮಾಣದಲ್ಲಿ ಪಶುಪಾಲನಾ ಇಲಾಖೆ ಹಾಗೂ ಉಣ್ಣೆ ನಿಗಮಗಳು ಕೊಂಡುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಗುಜರಾತ್ ಹಾಗೂ ಇತರ ಕೆಲವೇ ರಾಜ್ಯಗಳಲ್ಲಿ ಅನುಚಾನವಾಗಿ ಬೆಳೆದು ಬಂದಂಥ ಕ್ರಮಗಳನ್ನು ಉಣ್ಣೆ ಮಾರುಕಟ್ಟೆಯಲ್ಲಿ ಅಳವಡಿಸಿಕೊಂಡು ಹಾಗೆಯೇ ನಡೆಸಿಕೊಡು ಬಂದಿದ್ದಾರೆ. ಇದರಲ್ಲಿಯೂ ದಲ್ಲಾಳಿಗಳ ಮೇಲುಗೈ ಕಂಡು ಬರುತ್ತದೆ.

೫. ಸರ್ವೇ ಸಾಮಾನ್ಯವಾಗಿ ಉಣ್ಣೆಯನ್ನು ಗೋಣಿಚೀಲಗಳಲ್ಲಿ ಅಥವಾ ಬೋರಾಗಳಲ್ಲಿ ತುಂಬಿ ಪ್ಯಾಕ್ ಮಾಡಲಾಗುತ್ತದೆ. ರಪ್ತು ಮಾಡುತ್ತಿರುವ ಉಣ್ಣೆಯ ಪ್ರಮಾಣವನ್ನು ಬೇಲುಗಳಲ್ಲಿ ತುಂಬಿ ಕಳುಹಿಸಲಾಗುತ್ತದೆ. ಸಾಮಾನ್ಯವಾಗಿ ಉಣ್ಣೆಯನ್ನು ತುಂಬಲು ಉಪಯೋಗಿಸಲಾಗುತ್ತದೆ. ಸಾಮಾನ್ಯವಾಗಿ ಉಣ್ಣೆಯನ್ನು ತುಂಬಲು ಉಪಯೋಗಿಸಲಾಗುತ್ತಿರುವ ಬೋರುಗಳಲ್ಲಿ ಹಿಡಿಯುವ ಪ್ರಮಾಣ ೧೦೦-೧೬೦ ಕಿ.ಗ್ರಾಂಗಳು. ಈ ರೀತಿ ಉಪಯೋಗಿಸುತ್ತಿರುವ ಸಾಕಾಣಿಕೆ ವಸ್ತುಗಳಲ್ಲಿ ಗೋಣಿ ಚೀಲಗಳೇ ಒಳ್ಳೆಯವೆಂದು ಕಂಡು ಬರುತ್ತದೆ. ಏಕೆಂದರೆ ಬೇರೆ ವಸ್ತುಗಳಿಗೆ ಅವುಗಳನ್ನು ಹೋಲಿಸಿದರೆ ಬೆಲೆಯಲ್ಲಿ ಸ್ವಲ್ಪ ಕಡಿಮೆಯಾಗುವುದು. ಒಟ್ಟಾರೆ ಸಾಕಾಣೆಯಲ್ಲಿ ಆಗುತ್ತಿರುವ ಉಣ್ಣೆಯ ನಷ್ಟ ಎಂದರೆ ಶೇ. ೧ ರಿಂದ ೨.

೬. ಉಣ್ಣೆ ಕಟಾವು ಮಾಡುವುದು, ಅದನ್ನು ಶೇಖರಣೆ ಮಾಡವುದು ಮತ್ತು ಮಾರಾಟ ಮಾಡುವುದು ಈ ಎಲ್ಲಾ ಅಂಶಗಳು ಬಹಳ ದೂರದ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಾ ಇದ್ದು, ಅಲ್ಲಿಗೆ ರಸ್ತೆಗಳೇ ಇರುವುದಿಲ್ಲ ಮತ್ತು ಸಾಗಾಣಿಕೆಗೆ ವಾಹನ ಸೌಕರ್ಯ ಕೂಡ ಇರುವುದಿಲ್ಲ.

೭ ಸಾಮಾನ್ಯವಾಗಿ ಉಣ್ಣೆ ಉತ್ಪಾದಕರು ಮತ್ತು ಉಣ್ಣೆಯನ್ನು ಕೊಳ್ಳತಕ್ಕಂತಹ ಮಧ್ಯವರ್ತಿ ದಲ್ಲಾಳಿಗಳು ಉಣ್ಣೆಯನ್ನು ಒಂದು ಅಥವಾ ಎರಡು ತಿಂಗಳವರೆಗೆ ಅವರ ಮನೆಯಲ್ಲಿಯೇ ಶೇಖರಣೆ ಮಾಡುತ್ತಾರೆ. ಮಾರುಕಟ್ಟೆಯ ನಗರದಲ್ಲಿ ಇತರರು ಸಾಮಾನ್ಯ ಉಣ್ಣೆಯನ್ನು ೮-೯ ತಿಂಗಳವರೆಗೆ ಮತ್ತು ಇನ್ನು ಕೆಲವರು ಒಂದು ವರ್ಷದವರೆಗೂ ಕೂಡ ಶೇಖರಣೆ ಮಾಡಿ ಇಟ್ಟುಕೊಂಡಿರುವುದು ರೂಢಿಯಾಗಿದೆ.

೮. ಉತ್ತತ್ಪಿದಾರರಿಗೆ ಹಾಗೂ ಉಣ್ಣೆಯನ್ನು ಉಪಯೋಗಿಸುವ ಜನರಿಗೆ ಒಳ್ಳೆಯ ಉಣ್ಣೆ ಸಿಗುವ ಹಾಗೆ ಮಾಡುವುದು ಮತ್ತು ಉತ್ಪತ್ತಿದಾರರಿಗೆ ಒಳ್ಳೆಯ ಕ್ರಯ ಸಿಗುವ ಹಾಗೆ ಮಾಡಬೇಕಾದರೆ ಉಣ್ಣೆಯ ಗುಣಮಟ್ಟದ ಮೇಲೆ ಅದನ್ನು ವಿಂಗಡಣೆ ಮಾಡುವುದು ಬಹಳ ಅಗತ್ಯ.

೯. ಉತ್ಪತ್ತಿದಾರರಿಗೆ ಸಹಾಯವಾಗಲಿ ಎಂದು ಹಲವಾರು ರಾಜ್ಯಗಳಲ್ಲಿ ಈ ಉಣ್ಣೆ ವಿಂಗಡಣೆ ಮತ್ತು ಮಾರುಕಟ್ಟೇಯ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ರಾಷ್ಟ್ರ ಮಟ್ಟದಲ್ಲಿ ಉಣ್ಣೆಯ ಮಾರುಕಟ್ಟೆ ಮತ್ತು ವೀಕ್ಷಣಾ ನಿರ್ದೇಶನಾಲಯದಲ್ಲಿ ಗುಣಮಟ್ಟವನ್ನು ನಿರ್ಧಾರ ಮಾಡಲು ಆಗ್‍ಮಾರ್ಕ್ ಎನ್ನುವ ಲಾಂಛನದ ಕೆಳಗಡೆ ಉಣ್ಣೆಯನ್ನು ವಿಂಗಡಿಸಿ ರಫ್ತಿಗೆ ತಯಾರು ಮಾಡುತ್ತಾರೆ. ಇಲ್ಲವೇ ಒಳ ಮಾರುಕಟ್ಟೆಗೆ ತಯಾರು ಮಾಡುತಾರೆ. ಉತ್ಪಾದನೆ ಹಾಗೂ ಅಲೆಮಾರಿ ಖರೀದಿದಾರರು ಅನುಸರಿಸುತ್ತಿರುವ ಕ್ರಮದಲ್ಲಿ ಸರ್ವೇ ಸಾಮಾನ್ಯವಾಗಿ ಬೆಲೆಗಳನ್ನು ನಿಯಂತ್ರಿಸಲಾಗುವುದಿಲ್ಲ ಹಾಗೂ ಬೆಲೆಯ ದಾಖಲೆ ಇಡುವುದಿಲ್ಲ. ಈ ಉಣ್ಣೆಯ ಬೆಲೆಯಲ್ಲಿ ಕ್ರಮಬದ್ಧವಾದ ಏರಿಳಿತಗಳನ್ನು ಅಂದಾಜು ಮಾಡುವುದು ಬಹಳ ಕಷ್ಟ. ಉಣ್ಣೆಯು ಒಂದೇ ಗುಣಮಟ್ಟಕ್ಕೆ ಇಲ್ಲದೇ ಇರುವುದು ಹಲವಾರು ವಿಧವಾದ ಉಣ್ಣೆಯ ಗುಣಗಳು ಮತ್ತು ವಿಧಗಳು ಇರುವುದರಿಂದ ಉಣ್ಣೆಯ ಮಾರುಕಟ್ಟೆ ಹಾಗೂ ಉತ್ಪತ್ತಿದಾರರಿಗೆ ಬಹಳ ಕಡಿಮೆ ಬೆಲೆ ಕೊಡುವ ದಲ್ಲಾಳಿಗಳಿಗೆ ಅನುಕೂಲವಾದ ಮಾರ್ಗವನ್ನು ಒದಗಿಸಿಕೊಟ್ಟೆದೆ.

೧೦. ಕೇಂದ್ರ ಸರ್ಕಾರ ಕುರಿ ಸಾಕಾಣಿಕೆ ಹಾಗೂ ಉಣ್ಣೆಯ ಉತ್ಪತ್ತಿಯನ್ನು ಹೆಚ್ಚಿಸಿ ಅಭಿವೃದ್ಧಿಪಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಅದರಲ್ಲಿ ರಾಜಸ್ಥಾನದ ಆವಿಕ ನಗರದಲ್ಲಿ ಸ್ಥಳೀಯ ಕುರಿ ಸಾಕಾಣಿಕೆ ಮತ್ತು ಉಣ್ಣೆಯ ಅನುಸಂಧಾನಕ್ಕೆ ಒಂದು ಕೇಂದ್ರವನ್ನು ಸ್ಥಾಪನೆ ಮಾಡಿದೆ. ಭಾರತೀಯ ಕೃಷಿ ಅನುಸಂದಾನ ಪರಿಷತ್‍ (ಐಸಿಎಆರ್) ಉಣ್ಣೆ ಉತ್ಪತ್ತಿಗೋಸ್ಕರ ಬಹಳ ಮುಖ್ಯವಾದ ಯೋಜನೆಗಳನ್ನು ಹಮ್ಮಿಕೊಂಡಿದೆ. ರಾಜ್ಯಮಟ್ಟದಲ್ಲಿ ಆಯಾ ಪಶುಪಾಲನಾ ಇಲಾಖೆಗಳ ಮೂಲಕ ಕುರಿ ಮತ್ತು ಉಣ್ಣೆಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಇತ್ತೀಚಿನ ದಿನಗಳಲ್ಲಿ ಬಹು ಸಾಂದ್ರೀಕೃತ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಕೆಲವು ಸಾಂದ್ರೀಕೃತ ಕುರಿ ಸಾಕಾಣಿಕಾ ವ್ಯವಸ್ಥೆ ಇರುವ ರಾಜ್ಯಗಳಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಗಳನ್ನು ಮತ್ತು ಮಂಡಳಿಗಳನ್ನು ಹಾಗೂ ಫೆಡರೇಷನ್‍ಗಳನ್ನು ಸ್ಥಾಪನೆ ಮಾಡುವಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಕೇಂದ್ರ ಉಣ್ಣೆ ಉತ್ಪತ್ತಿ ಪರಿವೀಕ್ಷಣೆ ಹಾಗೂ ಮಾರುಕಟ್ಟೆ ನಿರ್ದೇಶನಾಲಯದ ಸಂಸ್ಥೆ ಶಿಫಾರಸ್ಸು ಮಾಡಿರುವ ಕೆಲವು ಅಂಶಗಳನ್ನು ಈ ಕೆಳಗೆ ಕೊಡಲಾಗಿದೆ.

ಉಣ್ಣೆ ಹೆಚ್ಚು ಉತ್ಪತ್ತಿ ಮಾಡುತ್ತಿರುವ ರಾಜ್ಯದಲ್ಲಿ ಪಶು ಸಂಗೋಪನಾ ಇಲಾಖೆಗಳು ಅಥವಾ ಉಣ್ಣೆ ಅಭಿವೃದ್ಧಿ ಮಂಡಳಿಗಳು ಕುರಿಗಾರರ ಸಂಖ್ಯೆ, ಉಣ್ಣೆ ಉತ್ಪತ್ತಿ ಮತ್ತು ಕುರಿಗಾರರ ಕುಂದು ಕೊರತೆಗಳ ಒಂದು ಮಾದರಿಯನ್ನು ತಯಾರಿಸಿ ಅದನ್ನು ಇತ್ತೀಚಿನ ಅಂಕಿ-ಅಂಶಗಳೊಡನೆ ಸಿದ್ಧಪಡಿಸುವುದು. ಉಣ್ಣೆ ಉತ್ಪತ್ತಿ ಮಾಡುವಲ್ಲಿ ಅದರಲ್ಲಿ ಇರುವ ಗಲೀಜು, ಮುಳ್ಳು, ಸಗಣಿ, ಧೂಳು ಮತ್ತು ಇತರ ಉಣ್ಣೆ ಗುಣಮಟ್ಟವನ್ನು ಕಡಿಮೆ ಮಾಡತಕ್ಕ ಮಸ್ತುಗಳು ಮಿಶ್ರಣ ಆಗಿ ಉಣ್ಣೆ ಬೆಲೆಯನ್ನು ತಗ್ಗಿಸುವುದರ ಬಗ್ಗೆ ವಿಸ್ತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಕುರಿಗಾರರಿಗೆ ತಿಳಿಸಿ ಹೇಳುವುದು ಬಹಳ ಅಗತ್ಯವಾಗಿದೆ.

ಕುರಿಗಳಿಗೆ ಮೇವು ಹಾಗೂ ಅವುಗಳು ಮುಕ್ತವಾಗಿ ಮೇಯಲು ಹೆಚ್ಚು ಹೆಚ್ಚು ಭೂಮಿಯನ್ನು ಹಾಗೂ ಗೋಮಾಳಗಳನ್ನು ಅವುಗಳಿಗೆ ಮೀಸಲಾಗಿ ಇಡಬೇಕು. ಗುಡ್ಡಗಾಡು ಪ್ರದೇಶಗಳಲ್ಲಿ ಮೇಯಲು ಇರತಕ್ಕ ಸ್ಥಳದಲ್ಲಿರುವ ಕಳೆಯನ್ನು ಹಾಗೂ ಬೇಡವಾದ ಗಿಡಗಳನ್ನು ತೆಗೆದು ರಾಸಾಯನಿಕ ಗೂಬ್ಬರಗಳನ್ನು ಮತ್ತು ಸುಧಾರಿತ ತಳಿಯ ಬೀಜಗಳನ್ನು ಬಿತ್ತಿ ಮೇಯಲು ಇರುವ ಸ್ಥಳವನ್ನು ಉಪಯುಕ್ತವಾದ ಉತ್ಪತ್ತಿ ಸ್ಥಳವಾಗಿ ಮಾಡುವುದು ಅತಿ ಮುಖ್ಯ. ಕಾಡುಗಳಲ್ಲಿ ಸಾಕಷ್ಟು ಬೆಳೆದ ಹುಲ್ಲು ಕಳೆಗಳನ್ನು ಮೇಯಲು ಮುಕ್ತವಾಗಿ ಯಾವ ಶುಲ್ಕವನ್ನೂ ವಸೂಲು ಮಾಡದೇ ಬಿಡುವಂತೆ ಇರಬೇಕು. ಪಶುಸಂಗೋಪನಾ ಇಲಾಖೆ ಮಳೆ ಇಲ್ಲದಿರುವಾಗ ಹಾಗೂ ಬರಪೀಡಿತ ಪ್ರದೇಶಗಳಲ್ಲಿ ಮುಫತ್ತಾಗಿ ನೀರನ್ನು ಒದಗಿಸಿ ಕೊಡುವುದು ಅತಿ ಮುಖ್ಯ.

ಕೈಗೊಳ್ಳಬೇಕಾದ ಕ್ರಮಗಳು

೧. ನಮ್ಮ ದೇಶದ ರತ್ನಗಂಬಳಿ ಹಾಗೂ ಉಣ್ಣೆಯ ವಸ್ತ್ರ ಉತ್ಪಾದನೆಯ ಉದ್ದಿಮೆಗೆ ಅಗತ್ಯವಾದ ಉಣ್ಣೆಯನ್ನು ಪ್ರಮುಖವಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‍ಗಳಿಂದ ಆಮದು ಮಾಡಿಕೊಳ್ಳುತ್ತಾ ಇದ್ದೇವೆ. ಪ್ರಸ್ತುತವಾಗಿ ನಮ್ಮ ದೇಶದಿಂದ ಉಣ್ಣೆಯನ್ನು ಹೊರದೇಶಗಳಿಗೆ ಕಳುಹಿಸುವ ಪ್ರಮಾಣ ಹೆಚ್ಚು ಇಲ್ಲದಿದ್ದರೂ ಸಹ ಒರಟು ಉಣ್ಣೆಯನ್ನು ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಉಣ್ಣೆಯ ವಸ್ತುಗಳನ್ನು ಅಥವಾ ಇತರ ಸಿದ್ಧ ವಸ್ತುಗಳನ್ನು ನಿರ್ಮಾಣ ಮಾಡುವಲ್ಲಿ ಈಗಲೂ ಸಹ ನಮ್ಮ ರತ್ನಗಂಬಳಿಗಳಿಗೆ ಮೊದಲನೇ ಸ್ಥಾನ. ಅದರ ಹಿಂದೆಯೇ ಕೈ ಕಸೂತಿ ಮಾಡಿದ ಉಣ್ಣೆಯ ವಸ್ತುಗಳು ೨ನೇ ಸ್ಥಾನವನ್ನು ಆಕ್ರಮಿಸದೆ ಉಣ್ಣೆಯ ಕೈಮಗ್ಗದ ಬಟ್ಟೆಗಳು, ಉಣ್ಣೆಯ ನೂಜು ಹಾಗೂ ಉಣ್ಣೆಯ ತಲೆಗೂದಲನ್ನು ಕಟ್ಟುವ ಬೆಲ್ಟುಗಳು ಉಣ್ಣೆಯ ಟಾಪ್ಸ್ ಮತ್ತು ನೋಯ್ಗಳು ಇವುಗಳ ರಫ್ತು ೧೯೮೮-೮೯ನೇ ಸಾಲಿನಿಂದ ಪ್ರಾರಂಭವಾಗಿವೆ.

೨. ಬಡತನ ಹಾಗೂ ಹಲವಾರು ಕಾರಣಗಳಿಂದಾಗಿ ಮತ್ತು ವಾಯುಗುಣ ಸರಿ ಹೊಂದದೆ ಇರುವ ಶಷ್ಕ ವಾತಾವರಣದಲ್ಲಿ ಸಾಮಾನ್ಯವಾಗಿ ಅಲೆಮಾರಿ ಕ್ರಮದಿಂದ ಅಂದರೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಮೇವು ಸಿಕ್ಕುವ ಕಡೆಗಳಲ್ಲಿ ಕುರಿಗಳನ್ನು ತೆಗೆದುಕೊಂಡು ಹೋಗಿ ಸಾಕುವ ಈ ಅಲೆಮಾರಿಗಳ ಕುರಿಗಳನ್ನು ಪರೀಕ್ಷೆ ಮಾಡಿ ಅವುಗಳ ಹೊರ ಪರತಂತ್ರ ಜೀವಿಗಳಿಗೆ ಔಷಧಿಗಳನ್ನು ಸಿಂಪಡಿಸುವುದು ಮತ್ತು ಆಂತರಿಕ ಪರತಂತ್ರ ಜೀವಿಗಳಿಗೆ ಆಗಾಗ್ಗೆ ಔಷಧ ಒದಗಿಸುವುದು ಪಶುಪಾಲನಾ ಇಲಾಖೆಯ ಕರ್ತವ್ಯವಾಗಿದೆ.

೩. ಸಾಮಾನ್ಯವಾಗಿ ಉಣ್ಣೆಯ ಪ್ರಮಾಣ ಬಹು ಕಡಿಮೆಯಾಗಿದ್ದು, ಉತ್ಪತ್ತಿದಾರರು ದೂರ ದೂರದ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಲು ಉತ್ಸಾಹವಿಲ್ಲದೆ ಹಿಂಜರಿಯುತ್ತಾರೆ ಹೀಗಾಗಿ ಉಣ್ಣೆಯನ್ನು ಉತ್ಪತ್ತಿದಾರರ ಅಂಗಳದಲ್ಲಿಯೇ ಖರೀದಿ ಮಾಡಲು ಪಶುಪಾಲನಾ ಇಲಾಖೆ, ಉಣ್ಣೆ ಮಂಡಳಿಗಳು, ನಿಗಮಗಳು ಹಾಗೂ ಇತರ ಮಾರುಕಟ್ಟೆ ಏಜೆಂಟರುಗಳು ದೊಡ್ಡ ಮ್ರಮಾಣದಲ್ಲಿ ಸಹಾಯ ಮಾಡುವುದು ಅಗತ್ಯವಾಗಿದೆ. ಉತ್ಪತ್ತಿದಾರರಿಗೆ ನಿಜವಾದ ಸಹಾಯವಾಗುವುದು ಯಾವಾಗ ಎಂದರೆ ಉಣ್ಣೆಯನ್ನು ಸ್ಥಳೀಯವಾಗಿ ಕೊಳ್ಳಲು ಸಂಚಾರಿ ಉಣ್ಣೆ ಕೇಂದ್ರಗಳು ಪ್ರಾರಂಭವಾದಾಗ. ಉಣ್ಣೆಯನ್ನು ಕೊಳ್ಳಲು ಬಂಡವಾಳ ಇಲ್ಲದಿರುವುದು ಮಾರುಕಟ್ಟೆಯ ಅತಿದೊಡ್ಡ ಸಮಸ್ಯೆಯಾಗಿದೆ. ಇದನ್ನು ಪರಿಶೀಲಿಸಲು ಉಣ್ಣೆ ಕೊಳ್ಳುವ ವ್ಯವಸ್ಥೆಗೆ ಹಾಗೂ ನಿಗಮ ಮತ್ತು ಮಂಡಳಿಗೆ ಹೆಚ್ಚು ಬಂಡವಾಳವನ್ನು ಒದಗಿಸುವುದು ಅತಿಮುಖ್ಯವಾದುದು.

ಗುಣಮಟ್ಟದ ಮತ್ತು ದೊಡ್ಡ ಪ್ರಮಾಣದ ಕುರಿ ಅಭಿವೃದ್ಧಿ ಕಾರ್ಯಕ್ರಮ ನಡೆಸಲು ಸರ್ಕಾರ ವಿಶೇಷವಾದ ರಿಯಾಯಿತಿಗಳನ್ನು ಕುರಿಗಾರರಿಗೆ ಕೊಡಬೇಕಾಗಿರುತ್ತದೆ. ರಾಜ್ಯ ಸರ್ಕಾರವು ಗುಣಮಟ್ಟವನ್ನು ಉತ್ತಮಗೊಳಿಸಲು ವಿಶೇಷ ಯೋಜನೆಗಳನ್ನು ರೂಪಿಸಿಕೊಳ್ಳಬೇಕಾಗಿರುತ್ತದೆ. ಅಲೆಮಾರಿ ಕುರಿಗಾರರಿಗೆ ಇದುವರೆಗೂ ನಾವು ಹೇಳಿಕೊಟ್ಟಿರುವ ಆಧುನಿಕ ಸಾಕಾಣಿಕೆ ಕ್ರಮಗಳನ್ನು ಮತ್ತು ನಮ್ಮ ಕುರಿಗಳ ಗುಣಮಟ್ಟವನ್ನು ಹೆಚ್ಚಿಸಲು ಮಾಡಿದ ಪ್ರಯತ್ನಗಳು ಅಷ್ಟೇನು ಫಲ ಕೊಟ್ಟಿಲ್ಲ. ಈಗಲೂ ಇರುವ ಸ್ಥಳೀಯ ಕುರಿ ಮಂದೆಗಳೇ ಇದಕ್ಕೆ ಸಾಕ್ಷಿ. ಈ ಸ್ಥಿತಿಯನ್ನು ತಪ್ಪಿಸಲು ಕುರಿಗಾರರೇ ಅವುಗಳನ್ನು ಆರೈಕೆ ಮಾಡಿಕೊಳ್ಳುವಂತ ಔಷಧಿ ಕುಡಿಸುವುದು. ಆಧುನಿಕ ರೀತಿಯಲ್ಲಿ ಅವುಗಳ ಉಣ್ಣೆ ಕತ್ತರಿಸುವುದು ಮತ್ತು ಉಣ್ಣೆಯನ್ನು ಸಂಸ್ಕರಣೆ ಮಾಡುವಂತಹ ವಿಷಯಗಳಲ್ಲಿ ವಿಶೇಷ ತರಬೇತಿ ಕೊಡಬೇಕಾಗಿದೆ. ಕುರಿಗಾರರಿಗೆ ಸರ್ಕಾರದವರು ರಾಜ್ಯಮಟ್ಟದಲ್ಲಿ ಮತ್ತು ಕೇದ್ರ ಮಟ್ಟದಲ್ಲಿ ಕೊಡುತ್ತಿರುವ ಸೌಲಭ್ಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಸಹಕಾರ ಸಂಘಗಳನ್ನು ಸ್ಥಾಪಿಸಲು ಉತ್ತೇಜನ ಕೊಡಬೇಕು. ನಿರ್ದೇಶನಾಲಯಗಳು ವಿಸ್ತರಣಾ ಘಟಕಗಳು, ಸಂಚಾರಿ ವಿಸ್ತರಣಾ ಘಟಕಗಳನ್ನು ಸ್ಥಾಪಿಸಿ ಎಲ್ಲಾ ಕಡೆ ದೃಶ್ಯ, ಶ್ರವಣ ಉಪಕರಣಗಳನ್ನು ಅಳವಡಿಸಿ ಆಧುನಿಕ ಕುರಿ ಸಾಕಣೆ ಮತ್ತು ಆಧುನಿಕ ಉಣ್ಣೆ ಕಟಾವಣೆ ಘಟಕಗಳು ಇತ್ಯಾದಿ ವಿಷಯಗಳ ಬಗ್ಗೆ ಚಿತ್ರಗಳನ್ನು ತೋರಿಸಬೇಕು. ಈ ಕಾರ್ಯಕ್ರಮಗಳನ್ನು ಅವರಿಗೆ ಪ್ರಯೋಗ ಮಾಡಿ ತೋರಿಸುವುದೇ ಅಲ್ಲದೆ ವಿಡಿಯೋ ಚಿತ್ರಗಳನ್ನು ತೋರಿಸಿದರೆ ಒಳ್ಳೆಯ ಪರಿಣಾಮಕಾರಿ ಪ್ರಭಾವ ಕಂಡು ಬರುವುದು. ವಿಸ್ಥರಣಾ ಕಾರ್ಯಕ್ರಮಕ್ಕೆ ತಕ್ಕ ಮಾರ್ಪಾಟು ಮಾಡಿದಲ್ಲಿ ಕುರಿಗಾರರಿಗೆ ಶೀಘ್ರವಾಗಿ ಆಧುನಿಕ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲು ಸಹಾಯಕವಾಗುವುದು.

ಈ ಸಂಚಾರಿ ವಿಸ್ತರಣಾ ಘಟಕಗಳಲ್ಲಿ ಉಣ್ಣೆ ಕಟಾವಣೆ ಯಂತ್ರಗಳನ್ನು ಸಹ ಅಳವಡಿಸಿಕೊಂಡು ಅವರು ಹೋದ ಕಡೆ ಕುರಿಗಳನ್ನು ಯಾಂತ್ರೀಕೃತವಾಗಿ ನಯವಾಗಿ ಕಟಾವಣೆ ಮಾಡಿ ಅದನ್ನು ಸಂಸ್ಕರಣೆ ಮಾಡುವ ತಾಂತ್ರಿಕ ವಿಷಯಗಳನ್ನು ಸಹ ಸ್ಥಳೀಯ ರೈತರಿಗೆ ಕೊಡಬಹುದಾಗಿದೆ.

ಈ ಸಂಚಾರಿ ಘಟಕಗಳು ರೈತರಿಗೆ ಅಗತ್ಯವಾದ ಮುಂಗಡವನ್ನು ಸಹ ಕೊಡುವ ವ್ಯವಸ್ಥೆ ಹೊಂದಿರಬೇಕು. ಉತ್ಪತ್ತಿಯಾದ ಉಣ್ಣೆಯನ್ನು ಉತ್ಪತ್ತಿದಾರರು ಪಶುಪಾಲನಾ ಇಲಾಖೆ ಅಥವಾ ಉಣ್ಣೆ ನಿಗಮ ಇವುಗಳಿಗೆ ಒದಗಿಸುವ ಕ್ರಮದ ಬಗ್ಗೆ ಮಾಹಿತಿ ಮಡೆಯಬಹುದು. ಯಾಂತ್ರೀಕೃತ ಉಣ್ಣೆ ಕಟಾವನ್ನು ಅಳವಡಿಸಿಕೊಳ್ಳುವುದರಿಂದ ಕೈ ಕತ್ತರಿಗಳನ್ನು ಉಪಯೋಗಿಸಿದಾಗ ಕುರಿಗಳಿಗಾಗುವ ಹಲವಾರು ಪೆಟ್ಟುಗಳು ಮತ್ತು ಗಾಯಗಳನ್ನು ರೈತರ ಸಾಕಣೆದಾರರ ಗಮನಕ್ಕೆ ತರಬಹುದಾಗಿದೆ. ಹೀಗೆ ಕಟಾವಣೆ ಮಾಡಿ ತೋರಿಸಿ ಕೊಟ್ಟಾದ ಮೇಲೆ ಉಣ್ಣೆಯನ್ನು ಈ ಸಂಚಾರಿ ವಿಸ್ಥರಣಾ ಮೂಲ ಕೇಂದ್ರಗಳಿಗೆ ತಂದು ಅಲ್ಲಿ ಸಂಸ್ಕರಣೆ ಮಾಡುವುದು ಮತ್ತು ಅದನ್ನು ಗುಣಮಟ್ಟದ ಮೇಲೆ ವಿಂಗಡಿಸುವ ಕಾರ್ಯಕ್ರಮವನ್ನು ಸಹ ಇಟ್ಟುಕೊಂಡು ರೈತರಿಗೆ ಉಣ್ಣೆಗೆ ನಿಜವಾದ ಲಾಭದಾಯಕ ಬೆಲೆ ಬರುಮಂತೆ ಮಾಡುವ ಸಾಧ್ಯತೆ ಇದೆ.

ಕುರಿ ಮತ್ತು ಉತ್ಪನ್ನಗಳಿಂದ ದೇಶದ ಆರ್ಥಿಕತೆ ಹಾಗೂ ವಿದೇಶಿ ವಿನಿಮಯಕ್ಕೆ ಇಷ್ಟೊಂದು ಕೊಡುಗೆಯಿದ್ದರೂ ಸಹ ಕುರಿ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ತೊಡಗಿಸಿರುವ ಧನ ಹೂಡಿಕೆ ಕುರಿ ಮತ್ತು ಕುರಿ ಉತ್ಪನ್ನಗಳಿಂದ ಬರುವ ಆದಾಯಕ್ಕೆ ಹೋಲಿಸಿದರೆ ಕುರಿಗಳ ಅಭಿವೃದ್ಧಿಗಾಗಿ ಶೇ. ೨ ರಷ್ಟಕ್ಕಿಂತಲೂ ಕಡಿಮೆಯಿದೆ. ಆದ್ದರಿಂದ ಕುರಿಯ ಅಭಿವೃದ್ಧಿಗಾಗಿ ಷ್ಟ್ರೀಯ ಕುರಿ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸುವುದು ಅತ್ಯವಶ್ಯಕವಾಗಿದೆ. ಇದರ ಮೂಲಕ ರಾಜ್ಯಗಳಲ್ಲಿ ಕುರಿ ಮತ್ತು ಕುರಿ ಉತ್ಪನ್ನಗಳ ಅಭಿವೃದ್ಧಿಗಾಗಿ ಹೆಚ್ಚಿನ ಆರ್ಥಿಕ ನೆರವು ಆಧುನಿಕ ತಂತ್ರಜ್ಞಾನದ ಸೌಲಭ್ಯಗಳು ಹಾಗೂ ರಚನಾತ್ಮಕ ಕ್ರಮಗಳನ್ನು ದೊರಕಿಸಿಕೊಡುವುದು ಸಾಧ್ಯವಾಗುತ್ತದೆ. ಇದರಿಂದ ರಾಷ್ಟ್ರದ ಆರ್ಥಿಕತೆಗೆ ಅಧಿಕ ಕೊಡುಗೆ ನೀಡಲು ನೆರವಾಗುತ್ತದೆ.

ಮೇವು ಬೆಳೆ

೧. ಆಹಾರಧಾನ್ಯಗಳ ಬೆಳೆಗಳನ್ನು ಕಟಾವು ಮಾಡಿದ ನಂತರ ಪರ್ಯಾಯ ಬೆಳೆಯಾಗಿ ಮೇವಿನ ಬೆಳೆಗಳನ್ನು ಬೆಳೆಯುವುದು.

೨. ಸರ್ಕಾರವು ಈಗಾಗಲೇ ಹಮ್ಮಿಕೊಂಡಿರುವ ಜಲಾನಯನ ಪ್ರದೇಶ ಅಭಿವೃದ್ಧಿ ಅಡಿಯಲ್ಲಿ ಸುಧಾರಿಸಿದ ಹುಲ್ಲು ಹಾಗೂ ಮೇವಿನ ಮರಗಿಡಗಳನ್ನು ಬೆಳೆಸುವುದು.

೩. ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಜಾನುವಾರು ಹಾಗೂ ಕುರಿ, ಮೇಕೆಗಳಿಗೋಸ್ಕರ ಮೇವು ದೊರಕುವ ಮರಗಳನ್ನು ಬೆಳೆಸುವುದು, ಹುಲ್ಲುಗಾವಲು ಪುನಃಶ್ಚೇತನ ಹಾಗೂ ಮಿಕಾಸಗೋಳಿಸುವ ಯೋಜನೆ.

ಅ) ಮೇವು ತಳಿಗಳ ಬೀಜೋತ್ಪತ್ತಿ ಸಂಸ್ಕರಣೆ ಹಾಗೂ ಬೀಜಾಭಿವೃದ್ಧಿ ಯೋಜನೆ.

ಆ) ಮೇವು ನಿಧಿ (ಬ್ಯಾಂಕ್).

ಇ) ಫಾಡರ್ ಮಿನಿ ಕಿಟ್ಸ್ ವಿತರಣೆ ಯೋಜನೆ.

ಈ) ಮೇವು ಮರಗಳ ಸಸಿ ಬೆಳೆಸುವಿಕೆ, ಸಂರಕ್ಷಣೆ ಹಾಗೂ ವಿತರಣೆ ಯೋಜನೆ.

ಮಾಂಸೋತ್ಪತ್ತಿ: ಉತ್ಪತ್ತಿ ಮಾಡುವ ಗ್ರಾಮಾಂತರ ಪ್ರದೇಶಗಳಲ್ಲಿಯೇ ಸಣ್ಣ ಪ್ರಮಾಣದ ವಧಾಗಾರಗಳನ್ನು ಸ್ಥಾಪಿಸಿ ಮಾಂಸೋತ್ಪತ್ತಿಯ ಉಪ ಉತ್ಪನ್ನಗಳನ್ನು ಪೋಲಾಗದೆ ಉಪಯೋಗಿಸಲು ಕ್ರಮ ತೆಗೆದುಕೊಳ್ಳಬೇಕು. ಅಗತ್ಯ ಬಿದ್ದರೆ ವಧೆ ಮಾಡುವ ಪ್ರಾಣಿಗಳನ್ನು ಬಹು ದೂರ ನಡೆಸುವುದನ್ನು ತಪ್ಪಿಸಲು ಚಲಿಸುವ ಸಣ್ಣ ಗಾತ್ರದ ವಧಾಗಾರಗಳನ್ನು ಸ್ಥಾಪನೆ ಮಾಡಲು ಪ್ರಯತ್ನಿಸಬಹುದು. ಚರ್ಮಗಳು ಹಾಳಾಗದಂತೆ ಉತ್ಪಾದಿಸಲು ಸೂಕ್ತವಾದ ವೈಜ್ಞಾನಿಕ ವಿಧವಾದ ವಧಾಗಾರ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಮಾಂಸದ ಉಪ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವಲ್ಲಿ ಅವಶ್ಯಕ. ವಧಾಗಾರಗಳಲ್ಲಿ ಪೋಲಾಗಬಹುದಾದಂತಹ ಅಂಗಗಳು ಅಂಗಭಾಗಗಳನ್ನು ಪರಿಣಾಮಕಾರಿಯಗಿ ಉಪಯೋಗಿಸುವಲ್ಲಿ ತಂತ್ರಜ್ಞಾನವನ್ನು ವೃದ್ಧಿಪಡಿಸ ಬೇಕಾಗಿದೆ. ಕಲಬೆರಕೆ ಮಾಡುವುದನ್ನು ತಪ್ಪಿಸಲು ವಿವಿಧ ಮಾಂಸಗಳ ಮಾದರಿಗಳು ಸುಲಭವಾಗಿ ಕಂಡು ಹಿಡಿಯುವ ಕ್ರಮಗಳನ್ನು ವೃದ್ಧಿಪಡಿಸಬೇಕು.

ಮಾರುಕಟ್ಟೆ: ಸಜೇವ ಕುರಿಗಳನ್ನು ಮತ್ತು ವಧಿಸಿ ಚರ್ಮ ಬೇರ್ಪಡಿಸಿದ ಕಳೇಬರಗಳನ್ನು ಪ್ರತಿ ಜಾನುವಾರುಗಳ ಲೆಕ್ಕದ ಮೇಲೆ ವ್ಯಾಪಾರ ಮಾಡುವುದುಕ್ಕಿಂತ ಶರೀರ ತೂಕದ ಮೇಲೆ ಮಾರುವುದು ಯಾವಾಗಲೂ ವೈಜ್ಞಾನಿಕ ಕ್ರಮ ಹಾಗೂ ಲಾಭದಾಯಕ.

ಶುದ್ಧ ಸ್ವಚ್ಚ ವಾತಾವರಣದಲ್ಲಿ ವಧೆ ಮಾಡಬೇಕು. ಸಜೀವ ಪ್ರಾಣಿಗಳ ಹಾಗೂ ಸಂಸ್ಕರಿಸಿದ ಮಾಂಸದ ಮಾರುಕಟ್ಟೆಯನ್ನು ಸ್ಥಾಪಿಸಿದರೆ ಮಾತ್ರ ನ್ಯಾಯ ಬೆಲೆಯಲ್ಲಿ ಶುಚಿಯಾದ ಮಾಂಸ ಅಪೇಕ್ಷಿತ ಪ್ರಮಾಣದಲ್ಲಿ ಲಭ್ಯವಾಗುವುದು.

ಇತರ ಅಂಶಗಳು

೧. ಜಾತಿ ಕುರಿಗಳಲ್ಲಿರುವ ಉತ್ತಮ ಗುಣಮಟ್ಟದ ವಂಶಾವಳಿಗಳನ್ನು ಗುರ್ತಿಸಿ ಅಭಿವೃದ್ಧಿಪಡಿಸುವುದು.

೨. ಕುರಿಗಳ ಆರೋಗ್ಯ ರಕ್ಷಣಾ ಕಾರ್ಯಕ್ರಮಗಳು.

೩. ಕುರಿಗಾರರ ತರಬೇತಿ ಮತ್ತು ಉತ್ತಮ ಕುರಿಗಳ ಪ್ರದರ್ಶನ ಕಾರ್ಯಕ್ರಮಗಳು.

೪. ಉಣ್ಣೆಯ ಗುಣಮಟ್ಟದ ದರ್ಜೆಯ ಮೇಲೆ ವಿಂಗಡಣೆ ಹಾಗೂ ಮಾರುಕಟ್ಟೆ ವ್ಯವಸ್ಥೆ.

ಸ್ಥಳೀಯ ಕುರಿಗಳಿಗೆ ಉತ್ತಮ ಜಾತಿಯ ವಿದೇಶಿ ತಳಿ ಟಗರುಗಳಿಂದ ಗಬ್ಬ ಕಟ್ಟಿಸಿ ಉತ್ಪಾದಿಸಲಾಗುವ ಉತ್ತಮ ಸಂಕರಣ ಸಂತತಿಗಳ ಉತ್ಪಾದನಾ ಸಾಮರ್ಥ್ಯವನ್ನು ಮೂಲ ತಳಿಯ ಸಮಕ್ಕೆ ತರುವಲ್ಲಿ ಅಗತ್ಯವಾದ ಉತ್ತಮವಾದ ಟಗರುಗಳ ಸರಬಾಜು, ತಿಂಡಿ ಮತ್ತು, ಮೇವು, ಆರೋಗ್ಯ ರಕ್ಷಣೆ, ತಾಂತ್ರಿಕ ಸಲಹೆ ಹಾಗೂ ಮಾರುಕಟ್ಟೆ ವ್ಯವಸ್ಥೆಗಳ ಸಾಂದ್ರೀಕೃತ ಮಟ್ಟದಲ್ಲಿ ಕುರಿಗಾರರಿಗೆ ಒದಗಿಸುವುದು. ಆರಿಸಿದ ಉತ್ತಮ ಸಂಕರಣ ತಳಿ ಟಗರುಗಳನ್ನು ಇಳಿಸಿದ ಬೆಲೆಗೆ ಮಾರುವುದು. ರೈತರಲ್ಲಿ ಹುಟ್ಟಿದ ಗಂಡು ಮತ್ತು ಹೆಣ್ಣು ಸಂಕರಣ ತಳಿ ಮರಿಗಳ ಬೆಳವಣಿಗೆ ಸರಿಯಾಗಿರಲು ಆರಿಸಿದ ಶೇ. ೨೦ರಷ್ಟು ಮರಿಗಳಿಗೆ ದಿನವೋಂದಕ್ಕೆ ತಲಾ ೨೫೦ ಗ್ರಾಂಗಳಷ್ಟು ಕೈ ತಿಂಡಿಯನ್ನು ಅವು ೧೮ ತಿಂಗಳ ವಯಸ್ಸಿಗೆ ಬರುವವರೆಗೆ ಒದಗಿಸುವ ಕಾರ್ಯಕ್ರಮ. ಕ್ರಮಬದ್ಧವಾದ ಆರೋಗ್ಯ ರಕ್ಷಣಾ ಕಾರ್ಯಕ್ರಮಗಳು ೩-೪ ದಿವಸಗಳ ರೈತರ ತರಬೇತಿ ಶಿಬಿರಗಳನ್ನು ಏರ್ಪಡಿಸುವುದೇ ಅಲ್ಲದೆ ಪ್ರತಿ ಜಿಲ್ಲೆಗಳಲ್ಲಿಯೂ ಕುರಿ ಪ್ರದರ್ಶನಗಳನ್ನೇರ್ಪಡಿಸುವುದು.

ಸಂಕರಣ ತಳಿ ಟಗರುಗಳನ್ನು ರೈತರ ಮಂದೆಯಲ್ಲಿ ಹೆಚ್ಚು ಹೆಚ್ಚು ಉತ್ಪಾದಿಸಲು ಅಗತ್ಯವಾದ ಸೌಲಭ್ಯಗಳನ್ನು ನೀಡಿ ಉತ್ತೇಜನ ಮಾಡುವುದು. ರಾಜಸ್ತಾನದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಇಲಾಖೆಯ ಉತ್ತಮ ಸಂಕರಣ ತಳಿಮರಿಗಳನ್ನು ಅಗತ್ಯವಿರುವ ಸ್ಥಳಗಳಲ್ಲಿ ರೈತರಿಗೆ ಸರಬರಾಜು ಮಾಡಲು ಉತ್ತೇಜಕ ಬೆಲೆಗಳಿಗೆ ಕೊಳ್ಳುವುದು. ಭ್ರೂಣ ವರ್ಗಾವಣೆ ತಂತ್ರಜ್ಞಾನ, ಶಸ್ತ್ರ ಕ್ರಿಯಾ ವಿಧಾನ ಉಪಯೋಗಿಸಿ ಆಡುಗಳಲ್ಲಿ ಅಧಿಕ ಅಂಡೋತ್ಪಾದನೆ, ಭ್ರೂಣ ಶೇಖರಣೆ, ಭ್ರೂಣ ವರ್ಗಾವಣೆ ಹಾಗೂ ಬೆದೆ ಸಂಯೋಜನೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಕುರಿಗಳ ಭ್ರೂಣವನ್ನು ಪ್ರನಾಳದಲ್ಲಿ ಹದ ಮಾಡಿ ಫಲಗೊಳಿಸುವಲ್ಲಿ ಪ್ರಯತ್ನಗಳು ನಡೆದಿದೆ.

ಆರೋಗ್ಯ ರಕ್ಷಣಾ ಕಾರ್ಯಕ್ರಮಗಳು: ಖಾಯಿಲೆಗಳ ಹತೋಟಿ ಕಾರ್ಯಕ್ರಮಗಳಲ್ಲಿ ಕುರಿ ಕರುಳುಬೇನೆ ಮತ್ತು ಕುರಿಗಳ ಸಿಡುಬು ರೋಗಗಳ ವಿರುದ್ಧ ಲಸಿಕೆ ಹಾಕುವುದೇ ಅಲ್ಲದೆ ಒಳ ಮತ್ತು ಹೊರ ಪರತಂತ್ರ ಜೀವಿಗಳ ಬಾಧೆಯಿಂದ ಕುರಿಗಳನ್ನು ಮುಕ್ತಗೊಳಿಸಲು ಔಷಧಿ ಕುಡಿಸುವುದು ಮತ್ತು ಕಾಲ ಕಾಲಕ್ಕೆ ಸಿಂಪಡಿಸುವುದು.

ಸಂಚಾರಿ ಕುರಿ ಚಿಕಿತ್ಸಾ ಘಟಕಗಳನ್ನು ಪ್ರಾರಂಭಿಸಿ ಬುಡಕಟ್ಟು ಜನಾಂಗದವರ ಕುರಿಗಳಿಗೆ ಮೇಲೆ ವಿವರಿಸಿದ ಆರೋಗ್ಯ ರಕ್ಷಣಾ ಕಾರ್ಯಕ್ರಮಗಳನ್ನು ತಲುಪಿಸುವುದು. ಸಂಕರಣ ತಳಿ ಕುರಿಗಳ ಆರೋಗ್ಯ ತಪಾಸಣೆಗಾಗಿ ಪ್ರತಿ ಜಿಲ್ಲೆಯಲ್ಲಿಯೂ ತಪಾಸಣಾ ಘಟಕಗಳನ್ನು ಸ್ಥಾಪಿಸುವುದು.

ತರಬೇತಿ: ಆಧುನಿಕ ಕುರಿ ಮಂದೆ ನಿರ್ವಹಣಾ ವಿಧಾನ, ರೋಗಗಳ ಹತೋಟಿ ಮತ್ತು ಟಗರುಗಳನ್ನು ಆರಿಸುವ ವಿಷಯಗಳಲ್ಲಿ ಯುವ ರೈತರಿಗೆ ತರಬೇತಿ ನೀಡುವುದು. ಇಲಾಖೆಯ ತಾಂತ್ರಿಕ ಹಾಗೂ ಮೇಲ್ವಿಚಾರಣಾ ಸಿಬ್ಬಂದಿಗೆ ಹೊಸ ತಂತ್ರಜ್ಞಾನ ದರ್ಶನ ಮೂಡಿಸುವ ಏರ್ಪಾಡು ಮಾಡಿ ವೈಜ್ಞಾನಿಕ ವಿಧಾನದ ಕುರಿ ಸಾಕಣೆಯಲ್ಲಿ ಜ್ಞಾನ ನೀಡುವುದು.

ಮುಖ್ಯವಾಗಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಸರಿಯಾದ ಧೋರಣೆ ಅಂದರೆ ತಳಿ ಅಭಿವೃದ್ಧಿ ಕಾರ್ಯಕ್ರಮ ಅತಿ ನಿಧಾನದ ಕೆಲಸವಿದ್ದು ಸಂಗೋಪನಾ ಕ್ಷೇತ್ರಗಳಿಗೆ ಸಾಕಷ್ಟು ಹಣ ಒದಗಿಸಿ ಅವುಗಳ ಕುರಿ ಸಂಖ್ಯೆ ಭರಿಸುವ ಸಾಮರ್ಥ್ಯವನ್ನು  ಹೆಚ್ಚಿಸಿ ಅಗತ್ಯವಾದ ಟಗರುಗಳನ್ನು ಸರಬರಾಜು ಮಾಡುವುದು ಅಗತ್ಯವಿದೆ. ಈ ತಳಿ ಅಭಿವೃದ್ಧಿ ಕ್ಷೇತ್ರಗಳಲ್ಲಿ ಲಾಭ ಸಂಪಾದನೆಯಾಗಿಲ್ಲವೆಂಬ ದೋಷಾರೊಪಣೆ ಹೊರಿಸಬಾರದು. ಏಕೆಂದರೆ ಲಾಭದ ದೃಷ್ಟಿ ಇಟ್ಟುಕೊಂಡರೆ ಉತ್ಪಾದಿಸಲಾದ ಟಗರುಗಳನ್ನು ಆರಿಸುವಲ್ಲಿ ಕಳಪೆ ತಾಯಿ ಕುರಿ ಮತ್ತು ಟಗರು ಸಂತತಿಗಳನ್ನು ತ್ಯಜಿಸಿ ಉಳಿದವುಗಳಿಗೆ ಬೆಲೆ ಕಟ್ಟಿದರೆ ಅವುಗಳ ಟಗರೊಂದಕ್ಕೆ ರೂ. ೧೦,೦೦೦ ಆಗುವುದು. ಅದನ್ನು ಕೊಳ್ಳುವ ಸಾಮರ್ಥ್ಯ ನಮ್ಮ ರೈತರಲ್ಲಿಲ್ಲ.