ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿಂದು ಕರ್ನಾಟಕ ತುತ್ತತುದಿಯಲ್ಲಿದೆ. ಅದನ್ನು ಗೌರವದಿಂದ ಕಾಣಲಾಗುತ್ತಿದೆ. ಶೃತಿ ಶುದ್ದತೆಗಾಗಿ ಇಡಿ ದೇಶ ಕರ್ನಾಟಕದತ್ತ ನೋಡುತ್ತದೆ. ಅನೇಕಾನೇಕ ಪ್ರತಿಷ್ಠಿತ ಸಂಗೀತ ಪ್ರಶಸ್ತಿಗಳು ನಮ್ಮ ದಿಗ್ಗಜರ ಮಡಿಲಿಗೆ ಬಿದ್ದಿವೆ. ಕಾಳಿದಾಸ ಸಮ್ಮಾನಗಳು, ತಾನಸೇನ ಸಮ್ಮಾನಗಳು, ಪದ್ಮಭೂಷಣಗಳು, ಪದ್ಮವಿಭೂಷಣಗಳನ್ನು ಕರ್ನಾಟಕದ ಹಿಂದುಸ್ತಾನಿ ಸಂಗೀತಗಾರರು ಪಡೆದಿದ್ದಾರೆ. ಸವಾಯಿ ಗಂಧರ್ವ, ಪಂಚಾಕ್ಷರಿ ಗವಾಯಿ, ಸಿತಾರರತ್ನ ರಹಿಮತ್ ಖಾನ, ಮಲ್ಲಿಕಾರ್ಜುನ ಮನಸೂರ, ಗಂಗೂಬಾಯಿ ಹಾನಗಲ್ಲ, ಬಸವರಾಜ ರಾಜಗುರು, ಭೀಮಸೇನ ಜೋಶಿ, ಕುಮಾರಗಂಧರ್ವ ಮೊದಲಾದವರು ಘನಮಹಿಮರು.

ಕೇವಲ ಒಂದು ನೂರು ವರ್ಷಗಳ ಹಿಂದೆ, ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತದ ಲವಲೇಶವೂ ಇರಲಿಲ್ಲವೆಂಬುದನ್ನು ನೋಡಿದಾಗ ಈ ಸಾಧನೆ ಅಚ್ಚರಿ ಹುಟ್ಟಿಸುತ್ತದೆ. ಹಿಂದುಸ್ತಾನಿ ಸಂಗೀತದ ಚತುರ್ವಾಹಿನಿಗಳಾದ ಗ್ವಾಲಿಯರ, ಆಗ್ರಾ, ಕಿರಾಣಾ, ಜೈಪುರ ಘರಾಣೆಗಳು ಕರ್ನಾಟಕದಲ್ಲಿ ಪ್ರತಿನಿಧಿತಗೊಂಡಿರುವುದು ಸ್ವಾರಸ್ಯಕರ, ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತ ಹಬ್ಬಲು ಪ್ರೇರಣೆ ನೀಡಿದುದು ಕರ್ನಾಟಕ ಸಂಗೀತದ ಗಂಡುಮೆಟ್ಟಾದ ಮೈಸೂರೆಂಬುದು ಕೌತುಕದಾಯಕ.

ನಾಲ್ವಡಿ ಕೃಷ್ಣರಾಜ ಒಡೆಯರಿಗೆ (ಜನನ ೧೮೮೪, ಪಟ್ಟಾಭಿಷೇಕ ೧೮೯೫, ಆಳ್ವಿಕೆ ೧೯೦೨-೧೯೪೦) ಹಿಂದುಸ್ತಾನಿ ಸಂಗೀತದಲ್ಲಿ ಆಸಕ್ತಿ, ಚಿಕ್ಕಂದಿನಲ್ಲಿಯೇ ಗೋಹರಜಾನಳ ಠುಮರಿ ಮತ್ತು ಬರ್ಕತುಲ್ಲಾಖಾನರ ಸಿತಾರ ಆಲಿಸಿ ಮನಸೋತಿದ್ದರು. ಒಮ್ಮೆ ಮುಂಬೈಯಲ್ಲಿ ಆಗ್ರಾ ಘರಾಣೆಯ ಅಧ್ವರ್ಯ ನತ್ಥನಖಾನರ ಗಾಯನಕ್ಕೆ ಮಾರುಗೋಗಿ ತಮ್ಮ ಆಸ್ಥಾನಕ್ಕೆ ಅವರನ್ನು ಕರೆತಂದರು. ಅಂದಿನ ಅಗ್ಗದ ಕಾಲದಲ್ಲಿ ಅವರಿಗೆ ತಿಂಗಳಿಗೆ ರೂ. ೧೭೫ ಸಂಬಳ. ನತ್ಥನಖಾನರಿಗೆ ಮಹಾರಾಜರು ರತ್ನಖಚಿತ ತೋಡಾ ಉಡುಗೋರೆಯಾಗಿ ಕೊಟ್ಟಿದ್ದರು. ಒಮ್ಮೆ ಅಸ್ಥಾನದಲ್ಲಿ ಹಾಡುವಾಗ ಅವರ ಕೈಯಲ್ಲಿ ತೋಡಾ ಕಾಣಲಿಲ್ಲ. ಎಲ್ಲರೂ ಹೊರಟುಹೋದ ಮೇಲೆ ಮಹಾರಾಜರು ವಿಚಾರಿಸಿದರು. ನತ್ಥನಖಾನರದು ದೊಡ್ಡ ಸಂಸಾರ. ‘ಮಕ್ಕಳ ಹೊಟ್ಟೆಗೆ ಹೋಯಿತು, ಖಾವಂದರೆ’ ಎಂದರು ನತ್ಥನಖಾನ. ‘ಅಲ್ಲ ಅದು ಗೌರವದ ಸಂಕೇತ. ತಾಪತ್ರಯವಿದ್ದರೆ ನನಗೆ ಹೇಳಬಾರದಾಗಿತ್ತೇ?’ ಎಂದು ಮಹಾರಾಜರು ಮತ್ತೊಂದು ತೋಡಾ ಮಾಡಿಸಿಕೊಟ್ಟರು. ದುಲ್ಲೆಖಾನನೆಂದೆ ಪ್ರೀತಿಪಾತ್ರನಾಗಿದ್ದ ಅವರ ಪುತ್ರ ಅಬ್ದುಲ್ಲಾಖಾನನಿಗೂ ರಾಜಮನ್ನಣೆ. ಮುಂದೆ ದುಲ್ಲೇಖಾನ ಹಲವು ವರ್ಷ ಬಾಗಲಕೋಟೆಯಲ್ಲಿದ್ದು ಶಿಷ್ಯರಿಗೆ ಕಲಿಸಿದರು.

ನತ್ಥನಖಾನರ ಪ್ರಭಾವದಿಂದ ವೀಣೆ ಶೇಷಣ್ಣನವರು ಕೆಲವು ತಿಲ್ಲಾನಗಳನ್ನು ರಚಿಸಿದರು. ೧೯೦೧ ರಲ್ಲಿ ನತ್ಥನಖಾನರು ಮೃತರಾದ ಮೇಲೆ ಆಸ್ಥಾನದಲ್ಲಿ ಯಾರು ಹಿಂದುಸ್ತಾನಿ ಸಂಗೀತಗಾರರು ಇಲ್ಲದಾಯಿತು. ಆಗ್ರಾ ಘರಾಣೆಯವರೇ ಆದ ಫೈಯಾಜಖಾನರನ್ನು ಮಹಾರಾಜರು ಆಹ್ವಾನಿಸಿದರು. ‘ಮಹಾರಾಜರೆ, ನಾನು ಈಗಾಗಲೇ ಬರೋಡಾ ಸಂಸ್ಥಾನದ ಆಸ್ಥಾನ ಸಂಗೀತಗಾರನಾಗಿರುವೆ. ಎರಡೆರಡು ಆಸ್ಥಾನಗಳ ಕಲಾವಿದನಾಗುವುದು ಸರಿಯಲ್ಲ. ನೀವು ನತ್ಥನಖಾನರ ಮಗ ವಿಲಾಯತ ಹುಸೇನಖಾನರನ್ನೇಕೆ ಕರೆದೊಯ್ಯಬಾರದು?’ ಎಂದು ಫೈಯಾಜಖಾನರು ಅರಿಕೆ ಮಾಡಿಕೊಂಡರು. ಮಹಾರಾಜರು ಹಾಗೆಯೇ ಮಾಡಿದರು. ಕರ್ನಾಟಕ ಸಂಗೀತ ಕಲಿತ ಕೆಲವು ಚೂಟಿ ಹುಡುಗರನ್ನು ಮಹಾರಾಜರು ವಿಲಾಯತ ಹುಸೇನಖಾನರಿಗೆ ಒಪ್ಪಿಸಿದರು. ಅವರಲ್ಲಿ ವೀಣೆ ದೊರೆಸ್ವಾಮಿ ಅಯ್ಯಂಗಾರರೂ ಒಬ್ಬರಾಗಿದ್ದರು.

ಜುಲೈ ೧೦, ೧೯೦೪ ರಂದು ಸಿತಾರವಾದಕ ಬರ್ಕತುಲ್ಲಾಖಾನರಿಗೆ ಆಸ್ಥಾನದಲ್ಲಿ ಕಾರ್ಯಕ್ರಮ ನೀಡಲು ಆಮಂತ್ರಣ. ರೂ.೧೦೦೦ ಸಂಭಾವನೆ, ಖಿಲ್ಲಿತ್ತು, ಪಯಣ ವೆಚ್ಚ. ಜುಲೈ, ೧೫ ೧೯೧೯ ರಂದು ಅಸ್ಥಾನ ಸಿತಾರವಾದಕರಾಗಿ ಬರ್ಕತುಲ್ಲಾಖಾನರ ನೇಮಕ. ತಿಂಗಳಿಗೆ ರೂ.೧೦೦ ವೇತನ. ಬರಹೋಗುವ ಖರ್ಚು, ಬಂದಾಗ ವಸತಿ, ವಾಹನ ಸೌಕರ್ಯ. ಅಕ್ಟೋಬರ ೧೯, ೧೯೧೯ ರಂದು ಬರ್ಕತುಲ್ಲಾಖಾನರಿಗೆ ಆಪ್ಥಾಬೆ ಸಿತಾರ (ಸಿತಾರ ಭಾಸ್ಕರ) ಬಿರುದು ಪ್ರದಾನ. ಮರುವರ್ಷದಿಂದ ಮೈಸೂರಿನಲ್ಲಿಯೇ ವಾಸ್ತವ್ಯ ಮಾಡಲು ಅಪ್ಪಣೆ. ನಜರಬಾದ ಮೊಹಲ್ಲಾದಲ್ಲಿರುವ ಚಾಮುಂಡಿ ವಿಹಾರದ ಅರಮನೆ ಕಾಟೇಜಿನಲ್ಲಿ ಉಚಿತ ವಸತಿ ಪೀಠೋಪಕರಣಗಳು. ವೇತನ ರೂ. ೨೦೦ ಕ್ಕೆ ಹೆಚ್ಚಳ. ಲಾವಜಮಾ ದಿನಂಪ್ರತಿ ರೂ. ೨ ರಿಂದ ರೂ. ೩ ಕ್ಕೆ ಏರಿಕೆ. ೧೯೩೦ ರಲ್ಲಿ ಮೃತರಾಗುವವರೆಗೆ ಬರ್ಕತುಲ್ಲಾಖಾನ ಹತ್ತೂವರೆ ವರ್ಷ ಆಸ್ಥಾನ ಸಿತಾರವಾದಕರಾಗಿದ್ದರು.

೧೯೨೭ ರಲ್ಲಿ ವೀಣೆ ಶೇಷಣ್ಣ ಮತ್ತು ಬಿಡಾರಂ ಕೃಷ್ಣಪ್ಪನವರಂಥ ಆಸ್ಥಾನ ಕರ್ನಾಟಕ ಸಂಗೀತ ದಿಗ್ಗಜರಿಗೆ ಕೂಡ ಕೇವಲ ರೂ ೧೦೦ ವೇತನ. ಮಿಕ್ಕ ಆಸ್ಥಾನ ಕರ್ನಾಟಕ ಸಂಗೀತಗಾರರಿಗೂ ರೂ. ೬೬, ೫೫, ೨೨, ೧೯, ೧೪, ೧೨, ೧೦ ವೇತನವಿತ್ತು. ಇದನ್ನು ನೋಡಿದರೆ ಮಹಾರಾಜರು ಹಿಂದುಸ್ಥಾನಿ ಸಂಗೀತಗಾರರಿಗೆ ಅತ್ಯಂತ ಧಾರಾಳಿತನ ತೋರಿದ್ದು ವೇದ್ಯವಾಗುತ್ತದೆ. ೧೯೩೦ ರ ದಸರಾ ಉತ್ಸವಕ್ಕೆ ಕರೆಸಿದ್ದ ಪ್ಯಾರೆಸಾಹೇಬರಿಗೆ ರೂ ೨೩೦೨ ಅಣೆ ೨ (ಪಯಣ ವೆಚ್ಚ ಸೇರಿ ಹೀಗೆ ಅಪೂರ್ಣ ಮೊತ್ತವಾಗಿರಬೇಕು) ಸಂಭಾವನೆ, ರೂ. ೧೯೮ ಬೆಲೆಯುಳ್ಳ ಖಿಲ್ಲಿತ್ತು ನೀಡಿದ್ದಿದೆ. ಅಗಸ್ಟ್ ೧೯೨೮ ರಲ್ಲಿ ಆಸ್ಥಾನ ಗಾಯಕಿಯಾಗಿ ಸುಪ್ರಸಿದ್ಧ ಠುಮರಿ ಗಾಯಕಿ ಗೋಹರಜಾನಳ ನೇಮಕ. ತಿಂಗಳಿಗೆ ರೂ. ೫೦೦ ವೇತನ. ರಾಜ್ಯದ ಅತ್ಯುನ್ನತ ಅಧಿಕಾರಿಗೂ ಎಟುಕದ ಮೊತ್ತವಿದು.

ಆಸ್ಥಾನ ವಿದ್ವಾಂಸರಲ್ಲದೆ ದಸರಾ ವಿದ್ವಾಂಸರಲ್ಲದೆ ದಸರಾ ಮತ್ತು ವರ್ಧಂತಿ ಉತ್ಸವಗಳಿಗೆ ಅನೇಕ ಹಿಂದುಸ್ಥಾನಿ ಸಂಗೀತಗಾರರನ್ನು ಅಹ್ವಾನಿಸಿ ಮಹಾರಾಜರು ಅವರ ಕಲೆಗೆ ತಲೆದೂಗಿ ಪುರಸ್ಕರಿಸುತ್ತಿದ್ದರು. ಹೀಗೆ ಬಂದವರಲ್ಲಿ ಕಿರಾಣಾ ಘರಾಣೆಯ ಸಂಸ್ಥಾಪಕ ಅಬ್ದುಲ್ ಕರೀಮಖಾನರೂ ಒಬ್ಬರು. ಅವರಿಗೆ ಮಹಾರಾಜರು ವೀಣೆ ಶೇಷಣ್ಣನವರ ಹಸ್ತದಿಂದ ಸಂಗೀತರತ್ನ ಬಿರುದು, ಕಂಠೀಹಾರ ತೊಡಿಸಿದರು. ಆಗ್ರಾ ಘರಾಣೆಯ ಅಧ್ವರ್ಯ ಫೈಯಾಜಖಾನರೆಂದರೆ ಮಹಾರಾಜರಿಗೆ ವಿಶೇಷ ಪ್ರೀತಿ. ೧೯೩೦ ರಲ್ಲಿ ರೂ. ೧೪೦೮ ಆಣೆ ೧೨ ಸಂಭಾವನೆ, ರೂ. ೨೦೦ ಬೆಲೆಯುಳ್ಳ ಖಿಲ್ಲಿತ್ತು. ೧೯೩೧ ರಲ್ಲಿ ರೂ. ೧೫೭೨ ಆಣೆ ೮ ಸಂಭಾವಣೆ. ಅವರನ್ನು ಹತ್ತು ಹಲವು ಬಾರಿ ಕರೆಸಿದ್ದಿದೆ. ಉಳಿದ ಸಂಗೀತಗಾರರಿಗೆ ರೂ.೨೦೦-೩೦೦ ಸಂಭಾವನೆ ನೀಡಿದರೆ ಫೈಯಾಜಖಾನರಿಗೆ ರೂ.೭೦೦, ೮೦೦, ೧೫೦೦ ರವರೆಗೆ ಸಂಭಾವನೆ ನೀಡಿದ ದಾಖಲೆಗಳಿವೆ. ೧೯೩೭ ರಲ್ಲಿ ಫೈಯಾಜಖಾನರಿಗೆ ಅನಾರೋಗ್ಯದಿಂದಾಗಿ ಬರಲಾಗದಿದ್ದರೂ ರೂ.೮೦೦ ಕಾಣಿಕೆ ಕಳಿಸಿದ್ದಿದೆ. ಫೈಯಾಜಖಾನರಿಗೆ ಅಫ್ತಾಬೆ ಮೌಸಿಕೀ (ಸಂಗೀತ ಭಾಸ್ಕರ) ಬಿರುದು ನೀಡಿ ಗೌರವಿಸಿದ್ದಿದೆ. ಜೈಪುರ ಘರಾಣೆಯ ಪ್ರತಿಷ್ಟಿತ ಗಾಯಕಿ ಕೇಸರಿಬಾಯಿ ಕೇರಕರರಿಗೆ ರೂ.೧೦೦೦ ಸಂಭಾವನೆ ಇತ್ತದ್ದಿದೆ. ನಾಲ್ವಡಿ ಕೃಷ್ಣರಾಜ ಒಡೆಯರು ಮಹಾನ್ ರಸಿಕರಾಗಿದ್ದರಲ್ಲದೆ ಸ್ವತಃ ವೈಣಿಕರೂ ಆಗಿದ್ದರು. ಅವರಿಂದ ಸೈ ಎನಿಸಿಕೊಳ್ಳುವುದು ತಮ್ಮ ಕಲೋತ್ಕೃಷ್ಟತೆಗೆ ತುರಾಯಿಯೆಂದೇ ಸಂಗೀತಗಾರರನ್ನು ಆಕರ್ಷಿಸುವ ಚುಂಬಕವಾಗಿತ್ತು.

ದಸರಾ ಮತ್ತು ವರ್ಧಂತಿ ಉತ್ಸವಗಳಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ಭಾರತದ ಎಲ್ಲೆಡೆಗಳಿಂದ ಹಿಂದುಸ್ತಾನಿ ಸಂಗೀತಗಾರರನ್ನು ಆಮಂತ್ರಿಸುತ್ತಿದ್ದರು. ಹೀಗೆ ಬಂದವರು ಜೈಪುರದ ಸಿತಾರವಾದಕ ನನ್ನೆಖಾನ, ಲಾಹೋರದ ಗವಾಯಿ ದಿಲೀಪಚಂದ, ಅಲಿಗಡದ ಗವಾಯಿ ಮೊಹಮ್ಮದ ಬಶೀರಖಾನ, ಕೊಲ್ಲಾಪುರದ ಗವಾಯಿ ವಿಶ್ವನಾಥ ಜಾಧವ, ಹೈದರಾಬಾದಿನ ಬಾಬುರಾವ ಮತ್ತು ವಿಮಲಾಬಾಯಿ, ಮುಂಬೈಯ ಸರಸ್ವತಿ ರಾಣೆ ಮತ್ತು ಪದ್ಮಾವತಿ ಸಾಲಿಗ್ರಾಮ, ಕಲಕತ್ತೆಯ ಇಂದುಬಾಲಾ ಮತ್ತು ಕೆ.ಸಿ.ಡೇ, ಕುರಂದವಾಡದ ನಾರಾಯಣ ಬಂಡು ಜೋಶಿ, ಬೆಳಗಾವಿಯ ಕಾಗಲಕರಬುವಾ, ಧಾರವಾಡದ ಕೊಳಲುವಾದಕ ಹೊಂಬಳ ಇತ್ಯಾದಿ, ಇತ್ಯಾದಿ.

ಈ ಕಲಾವಿದರು ಮೈಸೂರಿಗೆ ಹೋಗುವಾಗ, ಅಲ್ಲಿಂದ ಬರುವಾಗ ಹುಬ್ಬಳ್ಳಿ ಧಾರವಾಡದ ರಸಿಕರು ಅವರನ್ನು ಇಳಿಸಿಕೊಂಡು ಕಚೇರಿ ಏರ್ಪಡಿಸುತ್ತಿದ್ದರು. ಬರಬರುತ್ತಾ ಹಿಂದುಸ್ತಾನಿ ಸಂಗೀತವನ್ನು ಸವಿಯುವ ಆಸಕ್ತಿ ಅದನ್ನು ಕಲಿಯುವ ಹಂಬಲದಲ್ಲಿ ಪರಿವರ್ತಿತಗೊಂಡಿತು. ಕಿರಾಣಾ ಘರಾಣೆಯ ಸಂಸ್ಥಾಪಕ ಅಬ್ದುಲ್ ಕರೀಮಖಾನರು ಕರ್ನಾಟಕದ ತುಂಬ ಸಂಚರಿಸುತ್ತಿದ್ದರು. ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಕುಂದಗೋಳಕ್ಕೆ ಮೇಲಿಂದ ಮೇಲೆ ಬರುತ್ತಿದ್ದರು. ಹೀಗೆ, ಕುಂದಗೋಳ ಬಾಲಕ ರಾಮಚಂದ್ರ ಅವರ ಶಿಷ್ಯನಾಗಿ ಸವಾಯಿ ಗಂಧರ್ವರಾಗಿ ಅಮರರಾದರು. ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ ಸವಾಯಿ ಗಂಧರ್ವರ ಶಿಷ್ಯರಾಗಿ ಕಿರಾಣಾ ಘರಾಣೆಯ ಕರ್ನಾಟಕದಲ್ಲಿ ಭದ್ರವಾಗಿ ಬೇರೂರಲು ಕಾರಣರಾದರು. ಅಬ್ಧುಲ್ ಕರೀಮಖಾನರ ಇನ್ನೋರ್ವ ಶಿಷ್ಯ ಗಣಪತರಾವ ಗುರವ ಜಮಖಂಡಿ ಸಂಸ್ಥಾನದ ಗಾಯಕರಾದರು. ಅವರ ಮಗ ಸಂಗಮೇಶ್ವರ ಗುರವರನ್ನು ತಮ್ಮ ಗರಡಿಯಲ್ಲಿ ಬೆಳಸಿದರು. ಸಂಗಮೇಶ್ವರ ಗುರವರ ಮಗ ಕೈವಲ್ಯಕುಮಾರ ಕಿರಾಣಾ ಪರಂಪರೆಯನ್ನು ಮುಂದುವರೆಸಿದ್ದಾರೆ.

ನತ್ಥನಖಾನರ ಶಿಷ್ಯರೂ ಗ್ವಾಲಿಯರ, ಆಗ್ರಾ, ಜೈಪುರ ಘರಾಣೆಗಳ ತ್ರಿವೇಣಿಯಾಗಿದ್ದ ಭಾಸ್ಕರಬುವಾ ಬಖಲೆ ಧಾರವಾಡದ ಗಂಡು ಮಕ್ಕಳ ಟ್ರೇನಿಂಗ ಕಾಲೇಜಿನಲ್ಲಿ ೧೯೦೮ ರಿಂದ ೧೯೧೬ ರವರೆಗೆ ಸಂಗೀತ ಶಿಕ್ಷಕರಾಗಿದ್ದರು. ಭಾಸ್ಕರಬುವಾ ಹಲವು ಹಿಂದುಸ್ತಾನಿ ಸಂಗೀತಗಾರರ ಕಚೇರಿಗಳನ್ನು ಧಾರವಾಡದಲ್ಲಿ ಏರ್ಪಡಿಸಿದ್ದರು. ಅವರು ಟಿ.ಕೆ. ಪಿತ್ರೆ ವಕೀಲರು ಮೊದಲಾದವರಿಗೆ ಸಂಗೀತ ಕಲಿಸಿದ್ದರು. ಟಿ.ಕೆ.ಪಿತ್ರೆ ವಕೀಲರು ಹಲವರಿಗೆ ಹಿಂದುಸ್ತಾನಿ ಸಂಗೀತದ ಮೂಲಪಾಠ ಹೇಳಿಕೊಟ್ಟರು.

ಕರ್ನಾಟಕ ಸಂಗೀತದಲ್ಲಿ ಆಗಲೆ ಪಳಗಿದ್ದ ಪಂಚಾಕ್ಷರಿ ಗವಾಯಿಗಳು ಆಗಾಗಾ ಶಿವಯೋಗಮಂದಿರದಿಂದ (ಬಾದಾಮಿ ತಾಲುಕು, ಬಾಗಲಕೋಟೆ ಜಿಲ್ಲೆ) ಹುಬ್ಬಳ್ಳಿಗೆ ಬಂದು ಹಿಂದುಸ್ತಾನಿ ಗಾಯಕರನ್ನು ಆಲಿಸಿ ಹಿಂದುಸ್ತಾನಿ ಸಂಗೀತವನ್ನು ಕಲಿಯಬಯಸಿದರು. ಕಿರಾಣಾ ಘರಾಣೆಯ ಹಿರಿಯ ಗಾಯಕ ಅಬ್ದುಲ್ ವಹೀದಖಾನರನ್ನು ಶಿವಯೋಗಮಂದಿರಕ್ಕೆ ಕರೆಸಿಕೊಂಡು ೧೯೧೭ ರಿಂದ ೧೯೨೨ ರವೆರೆಗೆ ಕಳಿತರು. ತತ್ಫಲವಾಗಿ ಉಭಯ ಗಾಯನಚಾರ್ಯರಾದರು. ಅನೇಕ ಶಿಷ್ಯರನ್ನು ತಯಾರಿಸಿದರು. ಅವರಲ್ಲಿ ಪುಟ್ಟರಾಜ ಗವಾಯಿ ಮತ್ತು ಬಸವರಾಜ ರಾಜಗುರು, ಪಂಚಾಕ್ಷರಿ ಮತ್ತಿಗಟ್ಟಿ, ಸಿದ್ಧರಾಮ ಜಂಬಲದಿನ್ನಿ ಪ್ರಮುಖರು. ಪುಟ್ಟರಾಜ ಗವಾಯಿಗಳ ಹಾಗೂ ಬಸವರಾಜ ರಾಜಗುರು ಅವರ ಅನೇಕ ಶಿಷ್ಯರು ಈ ಪರಂಪರೆಯನ್ನು ಮುಂದುವರಿಸುತ್ತಿರುವರು.

ನೀಲಕಂಠಬುವಾ ಮಿರಜಕರ ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತ ಪಸರಿಸಲು ಇನ್ನೊಬ್ಬ ಕಾರಣಕರ್ತರು. ಅವರು ಮೂಲತಃ ಗದಗ ಜಿಲ್ಲೆಯ ಹೊಳೆಆಲೂರಿನವರು. ಅಡ್ಡಹೆಸರು ಆಲೂರಮಠ, ಎರಡು ಮೂರು ತಲೆಮಾರು ಹಿಂದೆ ಮಿರಜಿನಲ್ಲಿ ನೆಲೆಸಿದ್ದರಿಂದ ಮಿರಜಕರ ಆಯಿತು. ನೀಲಕಂಠಬುವಾ ಗ್ವಾಲಿಯರ ಘರಾಣೆಯ ಬಾಳಕೃಷ್ಣಬುವಾ ಈಚಲಕರಂಜಿಕರ ಶಿಷ್ಯ. ನೀಲಕಂಠಬುವಾ ಶ್ರೇಷ್ಠ ಗುರುಗಳು. ಮಲ್ಲಿಕಾರ್ಜುನ ಮನಸೂರ, ಪಂಚಾಕ್ಷರಿ ಗವಾಯಿ, ಬಸವರಾಜ ರಾಜಗುರುಗಳಿಗೆ ಗುರುಗಳಾದವರು.

ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಕಬೀರದಾಸರೆಂಬ ಸಂತರಿದ್ದರು. ಸಿದ್ಧಾರೂಢರ ಶಿಷ್ಯರು. ಅವರು ಎಲ್ಲಿಯವರು, ಯಾವಾಗ ಸಿದ್ಧಾರೂಢಮಠಕ್ಕೆ ಬಂದರು ಎಂಬದೊಂದು ತಿಳಿಯದು. ಅವರು ಜ್ಞಾನಿಗಳು. ಮೇಲಾಗಿ ಸಂಗೀತಗಾರರು. ಹೀಗಾಗಿ, ಹುಬ್ಬಳ್ಳಿಗೆ ಬರುವ ಸಂಗೀತಗಾರರಿಗೆಲ್ಲ ಸಿದ್ಧಾರೂಢಮಠ ಪಾದಗಟ್ಟೆಯಾಗಿತ್ತು. ಅಬ್ದುಲ್ ಕರೀಮಖಾನರು ಒಮ್ಮೆ ಹುಬ್ಬಳ್ಳಿಗೆ ಬಂದಾಗ ನೇರವಾಗಿ ಸಿದ್ದಾರೂಢಮಠಕ್ಕೆ ನಡೆದರು ಭರ್ಜರಿ ಹಾಡಿದರು. ಕಬೀರದಾಸರ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಂದು ‘ಗಲಾ ಅಚ್ಛಾ ಹೈ’ ಎಂದಿತು. ಭಾರತಾದ್ಯಂತ ಜಯಭೇರಿ ಹೊಡಿದಿದ್ದ ಅಬ್ದುಲ್ ಕರೀಮಖಾನರ ಗಾಯನದ ಬಗೆಗೆ ಏನೂ ಹೇಳದೆ ಕಂಠ ಮಾತ್ರ ಚೆನ್ನಾಗಿದೆ ಎಂದು ಹೇಳುವ ಧಾರ್ಷ್ಟ್ಯ ತೋರಿದ ವ್ಯಕ್ತಿ ಯಾರಿರಬೇಕು? ಅವರೇ ಭೂಗಂಧರ್ವ ರೆಹಮತ್ ಖಾನರು.

ರೆಹಮತ್ ಖಾನರು ಗ್ವಾಲಿಯರ ಘರಾಣೆಯ ಆದ್ಯರಾದ ಹದ್ದೂಖಾನರ ಪುತ್ರರು. ಏಶಿಯಾದಲ್ಲಿಯೆ ಪ್ರಥಮ ಸರ್ಕಸ್‌ ಕಂಪನಿ ಕಟ್ಟಿದ ವಿಜಾಪುರದ ವಿಷ್ಣುಪಂತ ಛತ್ರೆ ಸಿದ್ಧಾರೂಢರ ಭಕ್ತರು. ಹದ್ದೂಖಾನರ ಶಿಷ್ಯರು. ರೆಹಮತ್ ಖಾನರ ಗುರುಬಂಧು. ಒಂದು ದಿನ ಬನಾರಸದಲ್ಲಿ ಹುಚ್ಚರಂತೆ ಅಲೆದಾಡುತ್ತಿದ್ದ ರೆಹಮತ್ ಖಾನರನ್ನು ಕಂಡರು. ಎಪ್ಪಾ, ಎಣ್ಣಾ ಅಂದು ಕರೆತಂದು ತಮ್ಮ ಸರ್ಕಸ್‌ ಹುಲಿಗಳೊಂದಿಗೆ ಈ ಸಂಗೀತಹುಲಿಯನ್ನು ತಮ್ಮೊಂದಿಗೆ ಇಟ್ಟುಕೊಂಡರು. ಔಲಿಯಾರಂತೆಯೆ ಇದ್ದ ರೆಹಮತ್ ಖಾನರಿಗೆ ಕಬೀರದಾಸರ ಸಹವಾಸವೆಂದರೆ ಪಂಚಪ್ರಾಣ ರೆಹಮತ್ ಖಾನರು ತಮಗೆ ಇಷ್ಟವಾದರೆ ಮಾತ್ರ ಹಾಡುವರು. ಎಷ್ಟು ದಮ್ಮಯ್ಯ ಅಂದರೂ ಹಾದುವವರಲ್ಲ. ಯಾರಾದರೂ ಚೆನ್ನಾಗಿ ಹಾಡಲಾರಂಭಿಸಿ ಮಧ್ಯದಲ್ಲಿ ಬೇಸೂರ ಮಾಡಿದರೆ ಕೈಗೆ ಸಿಕ್ಕಿದ್ದನ್ನು ಅವನತ್ತ ಎಸೆದು ಅಲ್ಲಿಂದ ತಾವು ಗಾಯನ ಮುಂದುವರೆಸುತ್ತಿದ್ದರು. ಈ ತಂತ್ರ ಬಳಸಿ ಒಮ್ಮೆ ಅವರನ್ನು ಸಿದ್ಧಾರೂಢಮಠದಲ್ಲಿ ಹಾಡಿಸಿದ್ದುಂಟು. ರಾತ್ರಿ ೧೦ ರಿಂದ ಬೆಳಗಿನ ೨ ರವರೆಗೆ ಒಂದೇ ರಾಗ ಹಾಡಿದ್ದರಂತೆ. ಅಂಥ ಸಮರ್ಥರು.

ಕರ್ನಾಟಕದಲ್ಲಿ ಗ್ವಾಲಿಯರ ಘರಾಣೆಯ ಗಾಯನದ ರುಚಿ ಹಚ್ಚಿದವರು ರೆಹಮತ್ ಖಾನರಾದರೆ ಅದನ್ನು ಪ್ರಚುರಪಡಿಸಿದವರು ರಾಮಕೃಷ್ಣಬುವಾ ವಝೆ ಅವರು ರೆಹಮತ್ ಖಾನರ ಅಣ್ಣ ನಿಸ್ಸಾರ ಹುಸೇನ ಖಾನರ ಶಿಷ್ಯರು. ವಝೆಬುವಾ ಎಲ್ಲ ಕಡೆ ಸುತ್ತಾಡಿ ಪ್ರಸಿದ್ಧಿ ಪಡೆದು ಬೆಳಗಾವಿಯಲ್ಲಿ ನೆಲಸಿದರು. ಅವರ ಶಿಷ್ಯರಲ್ಲೊಬ್ಬರಾದ ಗುರುರಾವ ದೇಶಪಾಂಡೆ ಧಾರವಾಡದಲ್ಲಿ ಸಂಗೀತಶಾಲೆ ಆರಂಭಿಸಿ ಅನೇಕ ವರ್ಷ ವಿದ್ಯಾದಾನ ಮಾಡಿದರು. ಗುರುರಾವರ ಶಿಷ್ಯ ವಿನಾಯಕ ತೊರವಿ ಗುರುಗಳು ಪರಂಪರೆಯನ್ನು ಮುಂದುವರೆಸಿದ್ದಾರೆ. ಆಗ್ರಾ ಘರಾಣೆಯ ವಿಲಾಯತ ಹುಸೇನಖಾನರ ಶಿಷ್ಯ ಹನುಮಂತರಾವ ವಾಳ್ವೆಕರರೂ ಧಾರವಾಡದಲ್ಲಿ ಹಲವಾರು ವರ್ಷ ಸಂಗೀತ ಕಲಿಸಿದರು.

ಈಗ ದೃಶ್ಯ ಉತ್ತರ ಭಾರತದ ಭಾವನಗರದಲ್ಲಿ ಆರಂಭಗೊಂಡು ಧಾರವಾಡದಲ್ಲಿ ಅಂತ್ಯಗೊಳ್ಳುತ್ತದೆ. ಇನ್ನೊಬ್ಬ ರಹಿಮತ್ ಖಾನರು-ಸಿತಾರರತ್ನ ರಹಿಮತ್ ಖಾನರು-ಮೈಸೂರು ದರಬಾರದಲ್ಲಿ ಕಾರ್ಯಕ್ರಮ ನೀಡಲು ಹೋಗುವ ದಾರಿಯಲ್ಲಿ ಧಾರವಾಡದಲ್ಲಿ ತಂಗಿದ್ದರು. ಧಾರವಾಡದ ಸೃಷ್ಟಿಸೌಂದರ್ಯ, ಪ್ರಶಾಂತ ವಾತಾವರಣಕ್ಕೆ ಮನಸೋತು ೧೯೧೨ರಲ್ಲಿ ಧಾರವಾಡದಲ್ಲಿ ನೆಲಸಿದರು. ರಹಿಮತ್ ಖಾನ ಧಾರವಾಡಕರ ಎಂದೇ ಹೆಮ್ಮೆಯಿಂದ ಕರೆದುಕೊಂಡರು. ವಿಂಧ್ಯದೀಚೆ ಸಿತಾರ ಸಂಸ್ಕೃತಿ ತಂದ ಶ್ರೇಯಸ್ಸು ಅವರದು. ಮೊಮ್ಮಕ್ಕಳಾದ ಉಸ್ಮಾನಖಾನ, ಬಾಲೆಖಾನ, ಹಮೀದಖಾನ, ಛೋಟೆ  ರಹಿಮತ್ ಖಾನ, ಶಫೀಕ ಖಾನ, ರಫೀಕಖಾನ ಅಜ್ಜನ ಭವ್ಯ ಪರಂಪರೆಯನ್ನು ಮುಂದುವರೆಸಿದ್ದಾರೆ. ದಕ್ಷಿಣ ಭಾರತದಲ್ಲಿ ಇರದಿದ್ದ ಸಿತಾರ ಕಲೆ ಧಾರವಾಡದಲ್ಲಿ ಮಹಾವೃಕ್ಷವಾಗಿ ಬೆಳೆದಿದೆ.

೧೯೫೪ ರಲ್ಲಿ ಬೆಂಗಳೂರಿನಲ್ಲಿ ಒಂದು ರಾತ್ರಿ ರವಿಶಂಕರ-ಅಲಿ ಅಕ್ಬರಖಾನರ ಸಿತಾರ-ಸರೋದ ಜುಗಲಬಂದಿ. ರಾಜೀವ ತಾರಾನಾಥ ಮೈಸೂರಿನಲ್ಲಿ ಇಂಗ್ಲೀಷ ಉಪನ್ಯಾಸಕರು. ರವಿಶಂಕರ ಸಿತಾರ ಕೇಳಲು ಬೆಂಗಳೂರಿಗೆ ಬಂದರು. ಸರೋದದಲ್ಲಿ ಆಸಕ್ತಿಯಿರಲಿಲ್ಲ. ಕಚೇರಿ ಮುಗಿದ ಮೇಲೆ ಆದುದೇ ಬೇರೆ. ನೌಕರಿಗೆ ಶರಣು ಹೊಡೆದು ಅಲಿ ಅಕಬರಖಾನರ ಬೆನ್ನು ಹತ್ತಿ ಕಲಕತ್ತೆಗೆ ಹೋದರು. ಆರು ವರ್ಷ ಸರೋದ ಅಭ್ಯಾಸಗೈದರು. ಇಂದು ರಾಜೀವ ತಾರಾನಾಥ ಭಾರತದ ಶ್ರೇಷ್ಠ ಸರೋದವಾದಕರಲ್ಲಿ ಒಬ್ಬರು. ದಕ್ಷಿಣ ಭಾರತದ ಏಕೈಕ ಸರೋದಿಯಾ. ಆಗ್ರಾ ಘರಾಣೆಯ ಹುಲಿ ಫೈಯಾಜಖಾನರ ಗಾಯನವನ್ನು ಮೈಸೂರಿನಲ್ಲಿ ಕೇಳಿ ಬೆಂಗಳೂರಿನ ರಾಮರಾವ ನಾಯಕ ಉಸ್ತಾದರ ಬೆನ್ನು ಹತ್ತಿ ಬರೋಡಾಕ್ಕೆ ಹೋಗಿ ಹಿಂದುಸ್ತಾನಿ ಗಾಯನ ಕಲಿತು ಬಂದರು ಹುಬ್ಬಳ್ಳಿಯ ದತ್ತೋಪಂಥ ಪಾಠಕ ಬೀನ (ರುದ್ರವೀಣೆ) ಕಾರರು. ಮುರಾದಖಾನ ಬೀನಕಾರರಿಂದ ಕಲಿತವರು. ಅವರ ಮಗ ಬಿಂದುಮಾಧವ ಪಾಠಕ ತಂದೆಯ ಪರಂಪರೆ ಮುಂದುವರೆಸಿದ್ದಾರೆ. ಹುಬ್ಬಳ್ಳಿಯ ವಿಠ್ಠಲ ಕೋರೆಗಾಂವಕರ ಶ್ರೇಷ್ಠ ಹಾರ್ಮೋನಿಯಮ್ ವಾದಕ ಗೋವಿಂದರಾವ ಟೇಂಬೆಯವರಿಗೆ ಸರಿದೊರೆಯಾಗಿದ್ದವರು. ಇಂದಿನವರಲ್ಲಿ ಗದುಗಿನ ಪುಟ್ಟರಾಜ ಗವಾಯಿ, ಬೆಳಗಾವಿಯ ರಾಮಭಾವು ವಿಜಾಪುರೆ ಹಾಗು ಸುಧಾಂಶು ಕುಲಕರ್ಣಿ, ಧಾರವಾಡದ ವಸಂತ ಕನಕಾಪುರ, ಬೆಂಗಳೂರಿನ ವ್ಯಾಸಮೂರ್ತಿ ಕಟ್ಟಿ ಹಾಗೂ ರವೀಂದ್ರ ಕಾತೋಟಿ ಇದ್ದಾರೆ. ತಬಲಾವಾದಕರಾಗಿರುವಂತೆಯೆ ರಘುನಾಥ ನಾಕೋಡ, ರವೀಂದ್ರ ಯಾವಗಲ್ಲ. ಓಂಕಾರ ಗುಲ್ವಾಡಿ, ಗೌರಂಗ ಕೋಡಿಕಲ್ಲ ಇಂದಿನ ತಲೆಮಾರಿನ ಉತ್ಕೃಷ್ಟ ತಬಲಾವಾದಕರಾಗಿರುವರು.

ಕರ್ನಾಟಕದ ಅನೇಕ ಸಂಗೀತಗಾರರು ಹೊರನಾಡಿನಲ್ಲಿ ನೆಲಸಿದವರು. ಸಂತ ಸಂಗೀತಗಾರ ದತ್ತಾತ್ರಯ ಪರ್ವತಿಕರರದು ಮೂಲತಃ ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡದ ಮನೆತನ. ಹೃಷಿಕೇಶದಲ್ಲಿ ನೆಲಸಿದ್ದರು. ದತ್ತವೀಣೆ ಎಂಬ ಹೊಸ ವಾದ್ಯವನ್ನು ಆವಿಷ್ಕರಿಸಿದರು. ಅದು ವೀಣೆ, ಸಿತಾರ, ಸ್ವರಮಂಡಲಗಳ ಸಮನ್ವಯದಂತಿದೆ. ಅವರು ನುಡಿಸುತ್ತಿದ್ದುದು ಅದನ್ನೆ, ಸಂಗೀತದಲ್ಲಿ ತಮ್ಮದೇ ಹಾದಿ ತುಳಿದ ಕುಮಾರಗಂಧರ್ವ ಮಧ್ಯಪ್ರದೇಶದ ದೇವಾಸದಲ್ಲಿ ನೆಲೆಸಿದ್ದರು. ಮೂಲತಃ ಬೆಳಗಾವಿ ಜಿಲ್ಲೆಯ ಸುಳೆಭಾವಿಯವರು. ನಿಜನಾಮ ಶಿವಪುತ್ರ ಕೊಂಕಾಳಿಮಠ. ಭೀಮಸೇನ ಜೋಶಿ ಪುಣೆಯಲ್ಲಿ ನೆಲೆಸಿದ್ದರೆ. ಬಹಳ ಜನ ಮುಂಬೈನಲ್ಲಿ ನೆಲಸಿದವರು. ಪ್ರಭುದೇವ ಸರದಾರ ಸೊಲ್ಲಾಪುರದವರು. ಆಗ್ರ ಘರಾಣೆಯ ಕೆ.ಜಿ. ಗಿಂಡೆ ಬೈಲಹೊಂಗಲದವರು. ದಿನಕರ ಕಾಯ್ಕಿಣಿ, ಎಸ್.ಸಿ.ಆರ್. ಭಟ್, ಲಲಿತಾ ರಾವ್ ಆಗ್ರಾ ಘರಾಣೆಯ ಗಾಯಕರೆ. ದೇವೆಂದ್ರ ಮುರ್ಡೇಶ್ವರ ಮತ್ತು ನಿತ್ಯಾನಂತ ಹಳದೀಪುರ ಇಬ್ಬರೂ ಬಾಂಸುರಿವಾದಕರು. ಇವರೆಲ್ಲ ಉತ್ತರ ಕನ್ನಡ ಜಿಲ್ಲೆಯವರು. ಅಂತೆಯೇ ಗಾಯಕ-ಸಂಗೀತಜ್ಞ  ರಮೇಶ ನಾಡಕರ್ಣಿ ಮತ್ತು ಶ್ರೇಷ್ಠ ಸಂಗೀತ ವಿಮರ್ಶಕ  ಮೋಹನ ನಾಡಕರ್ಣಿ.

ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತದ ರಸಬಳ್ಳಿ ಹಬ್ಬಲು ಇನ್ನೂ ಒಂದು ಅಂಶ ಪೋಷಕವಾಗಿತ್ತು. ಬಾಲಗಂಧರ್ವ ಮತ್ತಿತರ ಮರಾಠಿ ನಾಟಕ ಕಂಪನಿಗಳು ಕರ್ನಾಟಕದಲ್ಲಿ ಸಂಚರಿಸುತ್ತ ಧನ, ಮಾನ ಗಳಿಸುತ್ತಿದ್ದ ಕಾಲವದು. ಹಿಂದುಸ್ತಾನಿ ಸಂಗೀತದ ರುಚಿಯನ್ನು ರಂಗಗೀತೆಗಳ ಮೂಲಕ ಹಚ್ಚಿದ್ದವು. ಅವುಗಳಿಂದ ಪ್ರೇರಿತವಾಗಿ ಉತ್ತರ ಕರ್ನಾಟಕದ ನಾಟಕ ಕಂಪನಿಗಳೆಲ್ಲ ಸಂಗೀತಮಯವಾದವು. ಕೂತರೆ ಹಾಡು, ನಿಂತರೆ ಹಾಡು, ಬಂದರೆ ಹಾಡು, ಹೋದರೆ ಹಾಡು, ಸಿಟ್ಟು ಬಂದರೆ ಹಾಡು, ದುಃಖವಾದರೆ ಹಾಡು, ಸಂತೋಷವಾದರಂತೂ ಸರಿಯೇ. ಅಷ್ಟೆ ಏಕೆ, ರಣರಂಗದಲ್ಲೂ ಹಾಡು. ಒಟ್ಟಿನಲ್ಲಿ ಹಾಡೇ ಹಾಡು. ಒಂದೊಂದು ನಾಟಕದಲ್ಲೂ ೪೦, ೫೦, ೬೦, ೭೦, ೮೦ ಹಾಡುಗಳು. ಇದರ ಮೇಲೆ ‘ಒನ್ಸ್ ಮೋರ್’ ಗಳು. ನೋಡುವುದಕ್ಕಿಂತ ಹೆಚ್ಚಾಗಿ ಸಂಗೀತ ಸವಿಯಲು ಬರುತ್ತಿದ್ದರು.

ಶಿರಹಟ್ಟಿ ವೆಂಕೋಬರಾಯರ ಕಂಪನಿಯಲ್ಲಿ ಶ್ರೇಷ್ಠ ರಂಗಗಾಯಕ ವಾಮನರಾವ ಮಾಸ್ತರ ಇದ್ದರು. ದೀನಾನಾಥ ಮಂಗೇಷ್ವರರ ಶಿಷ್ಯ ಮರೋಳ ರಾಮಣ್ಣ ಇದ್ದರು. ರಾಮಣ್ಣನವರ ತಮ್ಮ ನೀಲಕಂಠಪ್ಪ ಇದ್ದರು. ಮುಂದೆ ಸ್ವಂತ ನಾಟಕ ಕಂಪನಿ ಕಟ್ಟಿದ ವಾಮನರಾವ ಮಾಸ್ತರ ಕಂಪನಿಯಲ್ಲಿ ಬಸವರಾಜ ಮನಸೂರ, ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಗುಳೇದಗುಡ್ಡ ಗಂಗೂಬಾಯಿ ಇದ್ದರು. ಹಂದಿಗನೂರ ಸಿದ್ಧರಾಮಪ್ಪನವರ ನಾಟಕ ಕಂಪನಿಯಲ್ಲಿ ಸವಾಯಿ ಗಂಧರ್ವರ ಶಿಷ್ಯ ವೆಂಕಟರಾವ ರಾಮದುರ್ಗ ಇದ್ದರು. ಗರುಡ ಸದಾಶಿವರಾಯರ ಕಂಪನಿಯಲ್ಲಿ ಸವಾಯಿ ಗಂಧರ್ವರ ಇನ್ನೋರ್ವ ಶಿಷ್ಯ ನೀಲಕಂಠ ಗಾಡಗೋಳಿ ಇದ್ದರು.

ಗರುಡರು ಔಚಿತ್ಯ ಪ್ರಜ್ಞೆಯುಳ್ಳವರು. ಸಂಗೀತದ ಬಗೆಗೂ ಕಟ್ಟುನಿಟ್ಟು. ಸನ್ನಿವೇಶಕ್ಕೆ ಪೂರಕವಾಗಿರುವಷ್ಟು ಮಾತ್ರ ಹಾಡು ಇರಬೇಕೆನ್ನುವವರು. ಒಂದು ಹಾಡನ್ನು ಐದು ನಿಮಿಷಕ್ಕಿಂತ ಹೆಚ್ಚು ಹಾಡುವಂತಿರಲಿಲ್ಲ. ಆದರೊಮ್ಮೆ ರಾಮ ಪಾತ್ರಧಾರಿ ನೀಲಕಂಠ ಗಾಡಗೋಳಿ ಒಳ್ಳೆಯ ಮೂಡಿನಲ್ಲಿದ್ದರು. ಐದು ನಿಮಿಷ ಮುಗಿದರೂ ಹಾಡು ಮುಗಿಯಲೊಲ್ಲದು. ಗರುಡರು ವಿಂಗಿನಲ್ಲಿ ನಿಂತುಕೊಂಡು ಸೀಟಿ ಊದಿದರು. ನೀಲಕಂಠರು ಕೇಳಲೊಲ್ಲರು. ಗರುಡರು ಪಡದೆ ಕೆಳಗಿಳಿಸಲು ಸೂಚನೆಯಿತ್ತರು. ನೀಲಕಂಠ ಎರಡು ಹೆಜ್ಜೆ ಮುಂದೆ ಬಂದು ಪಡದೆಯ ಮುಂದುಗಡೆ ನಿಂತು ಹಾಡು ಮುಂದುವರೆಸಿದರು. ಅದಕ್ಕೂ ಮುಂದಿನ ಪಡದೆ ಇಳಿಸಲಾಯಿತು. ನೀಲಕಂಠ ಗಾಡಗೋಳಿ ಅದಕ್ಕೂ ಮುಂದೆ ಬಂದು ಅಡಿದೀಪಗಳ ಬಳಿ ನಿಂತು ಹಾಡು ಮುಂದುವರೆಸಿದರು. ಇನ್ನುಳಿದುದು ರಟ್ಟೆ ಹಿಡಿದು ಎಳೆದೊಯ್ಯುವುದೊಂದೆ. ಗರುಡರ ಕೋಪ ನಗೆಯಲ್ಲಿ ಕೊನೆಗೊಂಡಿತು.

ಕರ್ನಾಟಕದ ಮೊಟ್ಟ ಮೊದಲ ಸ್ತ್ರೀ ನಾಟಕ ಕಂಪನಿ ಕಟ್ಟಿದ ಲಕ್ಷ್ಮೇಶ್ವರದ ಬಚ್ಚಾ ಸಾನಿಯೂ ಒಳ್ಳೆಯ ಗಾಯಕಿಯಾಗಿದ್ದಳು. ಒಮ್ಮೆ ಅನಕೃ ಧಾರವಾಡಕ್ಕೆ ಬಂದಾಗ ಮಲ್ಲಿಕಾರ್ಜುನ ಮನಸೂರರ ಜೊತೆಗೂಡಿಕೊಂಡು ಲಕ್ಷ್ಮೇಶ್ವರಕ್ಕೆ ಹೋಗಿ ಬಚ್ಚಾಸಾನಿಯ ಸಂಗೀತ ಕೇಳಿಬಂದರು. ಅಂದಿನ ನಾಟಕ ಕಂಪನಿಗಳು ಕ್ಯಾಂಪ್ ಮಾಡಿದಲ್ಲಿಗೆ ಯಾರಾದರೂ ಪ್ರಸಿದ್ಧ ಗವಾಯಿ ಬಂದರೆ ಸಂಪೂರ್ಣ ರಾಮಾಯಣ ನಾಟಕ ಆಡಿ ಅವರಿಗೆ ರಾಮನ ಪಾತ್ರ ನೀಡಿ ಅವರ ಗಾನಸುಧೆ ಸವಿಯಲು ಅವಕಾಶ ಕಲ್ಪಿಸಿಕೊಡಲಾಗುತ್ತಿತ್ತು. ಇಲ್ಲವೆ, ನಾಟಕ ಮಧ್ಯದಲ್ಲಿ ಅವರ ಬೈಠಕ್ ಏರ್ಪಡಿಸಲಾಗುತ್ತಿತ್ತು. ಇದೆಲ್ಲದರ ಫಲವಾಗಿ ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತದ ವಾತಾವರಣ ನಿರ್ಮಾಣಗೊಂಡಿತು.

ವಿಶ್ವವಿದ್ಯಾಲಯಗಳಲ್ಲಿ ಸಂಗೀತ ಕಲಿಸಲು ಆರಂಭವಾಗಿದೆ. ಅನೇಕ ವಿದ್ಯಾರ್ಥಿಗಳು ಕಲಿಯುತ್ತಿರುವರು. ವಿಶ್ವವಿದ್ಯಾಲಯಗಳು ಒಬ್ಬ ತಾನಸೇನನನ್ನು ಸೃಷ್ಟಿ ಮಾಡಿರದಿದ್ದರೂ ಸಾವಿರಾರು ಕಾನಸೇನರನ್ನಂತೂ (ಕಾನ=ಕಿವಿ; ಕಾನಸೇನರು=ಕೇಳುಗರು) ಸೃಷ್ಟಿಸಿವೆ. ಹಿಂದುಸ್ತಾನಿ ಸಂಗೀತದ ತಿಳುವಳಿಕೆಯುಳ್ಳ ಶೋತೃವರ್ಗ ನಿರ್ಮಾಣಗೊಂಡಿದೆ.

ಕನ್ನಡಕ್ಕೆ ಏಳು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಅದು ಇನ್ನಾವುದೇ ಭಾಷೆಗಿಂತ ಹೆಚ್ಚು ಎಂದು ಬೀಗುತ್ತೇವೆ. ತಪ್ಪಲ್ಲ. ಆದರೆ, ನಮ್ಮ ಹಿಂದುಸ್ತಾನಿ ಸಂಗೀತಗಾರರ ಸಾಧನೆ ಅದಕ್ಕಿಂತ ಮಿಗಿಲಾದದು ಎಂಬುದನ್ನು ಗಮನಿಸುವುದಿಲ್ಲ. ನಮ್ಮ ಹಿಂದುಸ್ತಾನಿ ಸಂಗೀತಗಾರರಿಗೆ ಕಾಳಿದಾಸ ಸಮ್ಮಾನ, ತಾನಸೇನ ಸಮ್ಮಾನ, ಪದ್ಮವಿಭೂಷಣ ಪ್ರಶಸ್ತಿ ಬಂದಿವೆ. ಅದಾವುದೂ ಜ್ಞಾನಪೀಠ ಪ್ರಶಸ್ತಿಗಿಂತ ಕಡಿಮೆಯಾದುದೇನಲ್ಲ. ಬಸವರಾಜ ರಾಜಗುರು ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಿದೆ. ಮಲ್ಲಿಕಾರ್ಜುನ ಮನಸೂರ, ಗಂಗೂಬಾಯಿ ಹಾನಗಲ್ಲ, ಭೀಮಸೇನ ಜೋಶಿ, ಕುಮಾರ ಗಂಧರ್ವ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಬಂದಿದೆ. ಕನ್ನಡ ಸಾಹಿತಿಗಳಿಗೆ ಹೆಚ್ಚೆಂದರೆ ಒಬ್ಬಿಬ್ಬರಿಗೆ ಮಾತ್ರ ಪದ್ಮವಿಭೂಷಣ ಬಂದಿರಬಹುದು. ಮಲ್ಲಿಕಾರ್ಜುನ ಮನಸೂರ, ಪುಟ್ಟರಾಜ ಗವಾಯಿ, ಕುಮಾರ ಗಂಧರ್ವ ಅವರಿಗೆ ಕಾಳಿದಾಸ ಸಮ್ಮಾನ ಬಂದಿದೆ. ಅದು ಸಂಗೀತಕ್ಕೆ ಮಾತ್ರ ಮೀಸಲಾಗಿರದೆ ಎಲ್ಲ ಪ್ರದರ್ಶಕ ಕಲಾವಿದರಿಗೆ ವರ್ಷಕ್ಕೊಬ್ಬರಿಗೆ ಸಲ್ಲುವ ಪ್ರಶಸ್ತಿ. ಅಷ್ಟೊಂದು ಪೈಪೋಟಿಯಲ್ಲಿ ನಮ್ಮ ಮೂವರು ಸಂಗೀತಗಾರರಿಗೆ ಬಂದಿದೆ. ಗಂಗೂಬಾಯಿ ಹಾನಗಲ್ಲ, ಭೀಮಸೇನ ಜೋಶಿ, ಕುಮಾರ ಗಂಧರ್ವ, ಸಂಗಮೇಶ್ವರ ಗುರವ, ರಾಜೀವ ತಾರಾನಾಥರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಬಂದಿದೆ. ರಾಜೀವ ತಾರಾನಾಥರಿಗೆ ಅಖಿಲ ಭಾರತ ಮಟ್ಟದ ಟಿ.ಚೌಡಯ್ಯ ಪ್ರಶಸ್ತಿ ಬಂದಿದೆ. ಮಲ್ಲಿಕಾರ್ಜುನ ಮನಸೂರ, ಗಂಗೂಬಾಯಿ ಹಾನಗಲ್ಲ, ಪುಟ್ಟರಾಜ ಗವಾಯಿ, ಬಸವರಾಜ ರಾಜಗುರು, ಭೀಮಸೇನ ಜೋಶಿ, ಕುಮಾರ ಗಂಧರ್ವ ಅವರುಗಳಿಗೆ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಬಂದಿವೆ. ಇವರಲ್ಲಿ ಬಹುತೇಕರಿಗೆ ಎರಡು ಮೂರು ಡಾಕ್ಟರೇಟ್ ಬಂದಿವೆ. ಗಂಗೂಬಾಯಿ ಹಾನಗಲ್ಲ ಅವರಿಗೆ ನಾಲ್ಕು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಬಂದುದಿದೆ. ಇಂತು, ಮಾನ ಸಮ್ಮಾನಗಳ ದೃಷ್ಟಿಯಿಂದ ನೋಡಿದರೂ ಕರ್ನಾಟಕದ ಹಿಂದುಸ್ತಾನಿ ಸಂಗೀತಗಾರರದು ಮಿಗಿಲಾದ ಸಾಧನೆ.

ಇನ್ನೂ ಒಂದು ದೃಷ್ಟಿಯಿಂದಲೂ ಈ ಮೇರು ಸಾಧನೆಯನ್ನು ನೋಡಬೇಕು. ನಮ್ಮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೆಲ್ಲ -ಶಿವರಾಮ ಕಾರಂತರನ್ನು ಬಿಟ್ಟರೆ- ಉನ್ನತ ಶಿಕ್ಷಣವನ್ನು ಪಡೆದವರು. ಗುರುಗಳ ಪದತಲದಲ್ಲಿ ಕುಳಿತು ಲೇಖನವಿದ್ಯೆ ಕಲಿಯಬೇಕಿರಲಿಲ್ಲ. ಆದರೆ ನಮ್ಮ ಸಂಗೀತಗಾರರಾದರೋ ನಿರಕ್ಷರ ಕುಕ್ಷಿಗಳೆ ೪/೫ ಈಯತ್ತೆಗಿಂತ ಹೆಚ್ಚು ಕಲಿತವರಲ್ಲ. ಆದರೆ, ಗುರುಗಳ ಪದತಲದಲ್ಲಿ ಎಷ್ಟೋ ವರ್ಷ ಪರಿಶ್ರಮಪಟ್ಟು ಸಂಗೀತವಿದ್ಯೆ ಸಂಪಾದಿಸಿದವರು. ಕಡು ಬಡತನದಲ್ಲಿ ಬೆಂದರೂ ಸಂಗೀತ ನಿಷ್ಠೆಯನ್ನು ಬಿಡದವರು. ಸಂಗೀತವನ್ನೇ ಉಂಡುಟ್ಟುವರು. ಹಾಸಿಕೊಂಡವರು, ಹೊದ್ದುಕೊಂಡವರು, ಸಂಗೀತಸಾಧನೆಯ ತಮ್ಮ ಸೋಕ್ಷ ಮೋಕ್ಷವೆಂದು ನಂಬಿ ಜೀವನವಿಡಿ ಸಾಧನೆಗೈದವರು. ಸಂಗೀತದ ಗೌರಿಶಿಖರವನ್ನೇರಿದವರು.

ಇನ್ನೂ ಒಂದು ಅಂಶವನ್ನು ಗಮನಿಸಬೇಕು. ಸಾಹಿತ್ಯ ಕಲೆ ಮೂರ್ತಸ್ವರೂಪದ್ದಾದರೆ ಸಂಗೀತ ಕಲೆ ಅಮೂರ್ತವನ್ನು ಹಿಡಿಯುವುದು, ಪಡೆಯುವುದು. ಅದರಲ್ಲಿ ಶಿಖರಸಾಧನೆ ಮಾಡುವುದು ಬಲು ಕಷ್ಟಸಾಧ್ಯ ಈ ಸಂದರ್ಭದಲ್ಲಿ ಒಂದು ಮಾತನ್ನು ನೆನಪಿಡಬೇಕು. ಈ ಸಂಗೀತಗಾರರು ನಮ್ಮವರೆಂದು ಅಭಿಮಾನಪಡುವುದು ಸರಿಯೆ. ಆದರೆ, ಸಂಗೀತಕ್ಕೆ ಭಾಷೆ, ರಾಜ್ಯ, ದೇಶ ಗಡಿಗಳಿಲ್ಲ.

ಈ ಹಿನ್ನೆಲೆಯಲ್ಲಿ ಕರ್ನಾಟಕದ ಹಿಂದುಸ್ತಾನಿ ಸಂಗೀತಗಾರರು ಕೇವಲ ಒಂದು ಶತಮಾನದಲ್ಲಿ ಸಾಧಿಸಿದ್ದು ಅತ್ಯದ್ಭುತವಾದದು. ವರ್ಣಿಸಲಸದಳವಾದದು. ಸರಿಸಾಟಿಯಿಲ್ಲದುದು. ಬೇರಾವ ರಾಜ್ಯವು ಈ ಸಾಧನೆಯ ಸಮೀಪಕ್ಕೆ ಬರದಂತಹದು. ಇದನ್ನು ಅರಿವಿಗೆ ತಂದುಕೊಂಡು ಕರ್ನಾಟಕ ಹೆಮ್ಮೆ ಪಡಬೇಕಲ್ಲವೇ?