“ಒಂದಿಷ್ಟು ಜಾಗ ಕೊಡಿ ಸ್ವಾಮಿ ನನಗೆ ಈ ಮೂಲೆಯಲಿ
ನಾನು ಒಬ್ಬ ಕವಿ,
ನನಗೆ ಬೇಕಾದದ್ದು ಹೃದಯವಿರುವಂಥ
ಐದೊ ಆರೊ ಕಿವಿ!”

ಕವಿಯಾದವನು ಕಾವ್ಯವನ್ನು ಬರೆಯುವುದು ಏಕೆ ಎನ್ನುವ ಪ್ರಶ್ನೆಗೆ ತೀರ ಸಹಜವಾಗಿ ಎಲ್ಲರೂ ಕೊಡಬಹುದಾದ ಉತ್ತರ ‘ಓದುಗರಿಗಾಗಿ’ ಎನ್ನುವುದು. ನಿಜ; ಕವಿ ಕಾವ್ಯವನ್ನು ಬರೆದಾದ ಮೇಲೆ ಜನ ಅದನ್ನು ಓದುತ್ತಾರಾದರೂ, ಕವಿ ಕೃತಿಯನ್ನು ರಚಿಸುವಾಗ ತಾನು ಓದುಗರಿಗಾಗಿ ಬರೆಯುತ್ತಿದ್ದೇನೆ ಎಂದು ಅಂದು ಕೊಳ್ಳುತ್ತಾನೆಯೇ? ಈ ಬಗ್ಗೆ ಎರಡು ಅಭಿಪ್ರಾಯಗಳಿವೆ : ಒಂದು, ಕವಿ ಮೊದಲು ಕೃತಿಯನ್ನು ತನಗಾಗಿ ರಚಿಸುತ್ತಾನೆ, ಅನಂತರ ಅದು ಓದುಗರನ್ನು ಸೇರುತ್ತದೆ. ಮತ್ತೊಂದು, ಕವಿ ಬರೆಯುವಾಗ ಓದುಗರನ್ನು ಗಮನದಲ್ಲಿರಿಸಿಕೊಂಡೆ ಬರೆಯುತ್ತಾನೆ. ಆದರೆ ಈ ಎರಡು ಮಾತುಗಳೂ ಒಂದಕ್ಕೊಂದು ವಿರುದ್ಧವೇನಲ್ಲ. ಏಕೆಂದರೆ ಒಂದರ ಗಮನ ಕವಿಯ ಕಡೆಯಿಂದ, ಮತ್ತೊಂದರ ಗಮನ ಸಹೃದಯನ ಕಡೆಯಿಂದ.

ಕವಿ ಏಕೆ ಬರೆಯುತ್ತಾನೆ ಎನ್ನುವುದರ ಮೊದಲ ಕಾರಣ, ಆತ ತಾನು ಬರೆಯಲೇಬೇಕಾಗುವಂಥ ಒತ್ತಡಕ್ಕೆ ಸಿಲುಕುತ್ತಾನೆ ಎನ್ನುವುದು. ಆತ ಹಾಗೆ ಬರೆಯದಿದ್ದರೆ ಸುಮ್ಮನೆ ಇರಲು ಸಾಧ್ಯವೇ ಇಲ್ಲ. ಕವಿಗೆ ಒದಗುವ ಈ ಅನುಭವ ಅಭಿವ್ಯಕ್ತಿಯೊಂದರಲ್ಲಿ ಮೈದೋರುವುದರ ಮೂಲಕ ಕವಿ ಹೃದಯಕ್ಕೆ ಬಿಡುಗಡೆಯ ಉಲ್ಲಾಸವನ್ನೂ, ತನ್ನನ್ನು ತಾನು ಕಂಡುಕೊಂಡ ಸಂತೃಪ್ತಿಯನ್ನೂ ತಂದುಕೊಡುತ್ತದೆ. ಈ ಆನಂದವೇ ಕವಿ ಕೃತಿ ನಿರ್ಮಾಣಕ್ಕೆ ಮೊದಲಕಾರಣ. ಈ ಕ್ರಿಯೆ ಪ್ರಕೃತಿ ವ್ಯಾಪಾರಗಳಂತೆ ಸಹಜವಾದುದ್ದು. ಆದಕಾರಣ ಕವಿತಾನು ಕೃತಿರಚನೆಗೆ ತೊಡಗಿದಾಗ ಅವನ ಎದುರಿಗೆ ಸಹೃದಯರಿಗಾಗಿ ತಾನು ಬರೆಯುತ್ತಿದ್ದೇನೆ ಎನ್ನುವ ಭಾವನೆ ಪ್ರಧಾನವಾಗಿರದೆ, ತನ್ನ ಅನುಭವಕ್ಕೆ ಅಭಿವ್ಯಕ್ತಿಯನ್ನು ನೀಡುವುದೇ ಪ್ರಧಾನವಾಗಿರುತ್ತದೆ.[1]

ಹಾಗಾದರೆ ಕವಿಗಳು ತಮ್ಮ ಕೃತಿಯನ್ನು ಓದುಗರು ಓದಲಿ ಎಂದು ಏಕೆ ಹಂಬಲಿಸುತ್ತಾರೆ ? ಕವಿಗಳ ಕೊರಗನ್ನು ಕೇಳಿ : “ಎನಿತನೊರಲ್ದು ಪೇಳ್ವ ಕವಿ ಏವನ್? ಅದಂ ಪೆಸರಿಟ್ಟು ಮೆಚ್ಚಬಲ್ಲನನ್ ಅರಸಲ್ಕೆವೇಳ್ಪುದು ;……ಕಟ್ಟಿಯುಮೇನೋ ಮಾಲೆಗಾರನ ಪೊಸಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿಪೋಗದೆ!?” ಎನ್ನುತ್ತಾನೆ ಕವಿ ಜನ್ನ. ಕವಿ ಏನು ಬರೆದರೆ ಏನು, ಅದನ್ನು ಗುರುತಿಸಿ ಮೆಚ್ಚುವರಿಲ್ಲದಿದ್ದರೆ? ಹೂವಾಡಿಗ ಹೂಮಾಲೆಯನ್ನು ಕಟ್ಟಿಯೂ ಏನುಪಯೋಗ ಅದನ್ನು ಎತ್ತಿ ಮುಡಿದು ಸುಖಿಸಬಲ್ಲ ರಸಿಕರಿಲ್ಲದ ಮೇಲೆ? ಹೀಗೆ ಕವಿಗಳು ತಮ್ಮ ಕೃತಿಗೆ ರಸಿಕರಿಂದ ಸಲ್ಲಬೇಕಾದ ಪ್ರತಿಕ್ರಿಯೆಗಾಗಿ ಕೊರಗಿದ್ದಾರೆ. ಕಾವ್ಯ ಹೂಮಾಲೆಯಂತೆ ನೋಡಲು ಸುಂದರವಾಗಿರುತ್ತದೆ. ಹೂಮಾಲೆ ಎತ್ತಿ ಮುಡಿವ ಭೋಗಿಗಳಿಲ್ಲದೆ  ಬಾಡಿಹೋಗಬಹುದು ; ಆದರೆ ಕಾವ್ಯ ಹಾಗೇನೂ ಅಂದೇ ಬಾಡಿ ಹೋಗುವ ಹೂವಲ್ಲವಲ್ಲ?  ಆದರೆ ತಾನು ಕಟ್ಟಿದ ಹೂಮಾಲೆಯನ್ನು ಎತ್ತಿ ಮುಡಿವ ಭೋಗಿಗಳಿಲ್ಲದೆ ಹೋದಾಗ ಹೂವಾಡಿಗನಿಗೆ ಆಗುವ ವೇದನೆಗೆ ಸಂವಾದಿಯಾಗುತ್ತದೆ, ತನ್ನ ಕೃತಿಗೆ ಸರಿಯಾದ ಓದುಗರು ಸಿಕ್ಕದೆ ಹೋದಾಗ  ಕವಿಗಾಗುವ ವೇದನೆಯೂ. “ಕಾಲ ಅನಂತವಾಗಿದೆ ; ಪೃಥ್ವಿ ವಿಪುಲವಾಗಿದೆ. ಇಂದಲ್ಲದಿದ್ದರೂ ನಾಳೆ ಯಾವನೋ ಮಹಾನುಭಾವ ಹುಟ್ಟುತ್ತಾನೆ ತನ್ನ ಕೃತಿಯನ್ನು ಓದಿ ಸುಖಿಸತಕ್ಕವನು”[2] ಎಂದು ಸದ್ಯಕ್ಕೆ ದೊರೆಯದ ತೃಪ್ತಿಗೆ ದೂರದ ಕಲ್ಪನೆಯ ಸಹೃದಯನನ್ನು ಕವಿ ನೆನೆದು ಸಮಾಧಾನಪಟ್ಟು ಕೊಳ್ಳುತ್ತಾನೆ. ಹೀಗೆ ಕವಿಗಳು ಓದುಗರಿಗಾಗಿ ಹಂಬಲಿಸಿದ್ದಾರಲ್ಲ ? ಅಂದಮೇಲೆ ಕವಿ ಓದುಗರಿಗಾಗಿ ಕೃತಿಯನ್ನು ಬರೆಯಲಿಲ್ಲ, ತನ್ನ ಆನಂದಕ್ಕೆ ತಾನು ಬರೆದ ಎನ್ನುವ ಮಾತು ನಿಲ್ಲುವುದಾದರೂ ಹೇಗೆ ? ಕವಿಯಲ್ಲಿ ಅಭಿವ್ಯಕ್ತಿಗೆ ಮುನ್ನ ಒಂದು ಅನುಭವ ರೂಪತಾಳಿತು ಎಂದರೆ ಅದು ಯಾರಿಗೋ ಅಭಿವ್ಯಕ್ತ ಮಾಡಿ ತೋರಿಸಬೇಕಾದದ್ದು ಎನ್ನುವ ಪೂರ್ವಸಿದ್ಧತೆ ಅದರಲ್ಲಿದೆ ಎಂದೇ ಅರ್ಥ. ಒಂದು ವೇಳೆ ಕವಿಗೆ ತನ್ನ ಕೃತಿಯನ್ನು ಯಾರೂ ಓದುವುದಿಲ್ಲವೆಂದೋ ಓದಬಾರದೆಂದೋ ಖಚಿತವಾಗಿ ಗೊತ್ತಿದ್ದರೆ ಆತ ಬರೆಯುವ ಗೋಜಿಗೇ ಹೋಗುತ್ತಿರಲಿಲ್ಲ. ಯಾರಾದರೂ ನಾಲ್ಕು ಜನ ಓದುತ್ತಾರೆ, ಓದಲಿ ಎನ್ನುವ ಅಪೇಕ್ಷೆ ಕವಿಗೆ ಇರುವುದರಿಂದ ತಾನೆ ಕವಿ ಓದುಗರಿಗೂ ತನಗೂ ಸಮಾನವಾದ ಭಾಷಾಸಾಮಗ್ರಿಯನ್ನು ಬಳಸಿಕೊಂಡು ತನ್ನ ಅನುಭವಗಳನ್ನು ಅಭಿವ್ಯಕ್ತಪಡಿಸುವುದು?[3] ನಿಜ ಕವಿಗೆ ಓದುಗರು ಬೇಕು; ಅತ್ಯಗತ್ಯವಾಗಿ ಬೇಕು-  ಅತಿ ಕೃತಿಯನ್ನು ಬರೆದಾದಮೇಲೆ. ಆದರೆ ಬರೆಯುವ ಹೊತ್ತಿನಲ್ಲಿ ತಾನು ಇಂಥ ಒಂದು ಜನತೆಗೆ ಬರೆಯುತ್ತಿದ್ದೇನೆ ಎನ್ನುವ ಅರಿವು ತಾನೇತಾನಾಗಿ ಇರುವುದಿಲ್ಲ ; ಎಂದರೆ ಕವಿಗೆ ಕೃತಿರಚನೆಯ ಸಮಯದಲ್ಲಿ ಒಂದು ನಿರ್ದಿಷ್ಟ ಸಹೃದಯ ಸಮೂಹದ ಕಲ್ಪನೆ ಇರುವುದಿಲ್ಲ. ಅಷ್ಟೇ ಅಲ್ಲ ; ಇರಬಾರದು. ತಾನು ಈ ಅನುಭವವನ್ನು ಇನ್ನೊಬ್ಬರಿಗೆ ತಿಳಿಸುವುದಕ್ಕಾಗಿಯೇ ಬರೆಯುತ್ತಿದ್ದೇನೆ ಎನ್ನುವ ಭಾವನೆ ಇಲ್ಲದೆ ಇರುವುದು ಯಾವ ರೀತಿಯಲ್ಲಿಯೂ ಆತನ ಅಭಿವ್ಯಕ್ತಿಯ ಕ್ರಿಯೆಗೆ ಮಾರಕವಾಗುವುದಿಲ್ಲ. ಸೃಷ್ಟಿಶೀಲನಾದ ಲೇಖಕನಿಗೆ ಆ ಹೊತ್ತಿನಲ್ಲಿ ಪ್ರಧಾನವಾದದ್ದು ತನ್ನ ಅಭಿವ್ಯಕ್ತಿಗಾಗಿ ಕಾತರಿಸುವ ಭಾವಕ್ಕೆ ರೂಪು ಕೊಡುವುದೆಷ್ಟೋ ಅಷ್ಟೆ. ಅದರಲ್ಲಿಯೇ ಕವಿಗೆ ಸೊಗಸಿದೆ. ಹಾಗೆ ಅಭಿವ್ಯಕ್ತಗೊಂಡದ್ದು ಆನಂತರ ಸಹಜವಾಗಿಯೇ ಓದುಗರನ್ನು ತಲುಪುತ್ತದೆ.[4] ಈ ಸಂದರ್ಭದಲ್ಲಿ ಕುವೆಂಪು ಅವರ ಕವನವೊಂದು ನೆನಪಿಗೆ ಬರುತ್ತದೆ :

“ನೀರದೇಕೆ ಹರಿವುದು ?
ಹರಿವುದು.
ಕಡಲಸೇರ‍್ವುದಲ್ಲವೆ ?
ಸೇರ‍್ವುದು.
ಕಡಲಸೇರಲೆಂದು ನೀರು ಹರಿವುದಿಲ್ಲವು
ಹರಿಯೆ ಕಡಲ ಸೇರ‍್ದುದಷ್ಟೆ ಬೇರೆ ಅಲ್ಲವು-“

ಇದೇ ಪ್ರಶ್ನೋತ್ತರ ಸಿದ್ಧಾಂತ ಕಾವ್ಯಕ್ಕೂ ಅನ್ವಯಿಸುತ್ತದೆ. ಕವಿ ಬರೆಯುತ್ತಾನಲ್ಲವೆ? ಬರೆಯುತ್ತಾನೆ. ಸಹೃದಯರು ಅದನ್ನು ಓದುತ್ತಾರಲ್ಲವೆ?  ಓದುತ್ತಾರೆ.  ಸಹೃದಯರು ಓದುತ್ತಾರೆಂದೇ ಕವಿ ಕಾವ್ಯ ಬರೆಯುವುದಿಲ್ಲ ; ಕವಿ ಬರೆದದ್ದರಿಂದ ಸಹೃದಯರು ಓದುತ್ತಾರೆ, ಅಷ್ಟೆ. ಕವಿ ಬರೆಯುತ್ತಾನೆ ಮೊದಲು ತನ್ನ ಭಾವದ ಬಿಡುಗಡೆಗೆ ; ಆದರೆ ಆನಂತರ ಅದು ಸುತ್ತ ಹತ್ತೂ ಜನದ ಕಣ್ಣಿಗೆ ಬೀಳಬೇಕೆಂದು ಬಯಸುತ್ತಾನೆ. ಮೊದಲನೆಯದಾಗಿ ಆತ ಬರೆಯುವುದು ತನಗಾಗಿ, ತನ್ನ ಅನುಭವಕ್ಕೆ ಭಾಷೆಯ ಚೌಕಟ್ಟು ಹಾಕಿ ನಿಲ್ಲಿಸಿಕೊಳ್ಳುವ, ತನ್ನ ಪರಿಭಾವನೆಗೆ ಮತ್ತೆ ಮತ್ತೆ ಅವಕಾಶವಾಗುವ ಕಲಾರೂಪವೊಂದನ್ನು ನಿರ್ಮಿಸಿಕೊಳ್ಳುವ ಹಂಬಲದಿಂದ.  ಅನಂತರ ಅದನ್ನು ಪ್ರಕಟಮಾಡುವುದು ಓದುಗರಿಗಾಗಿ. ಹೀಗಾಗಿ ಈ ಅನುಭವದಲ್ಲಿ ಕವಿ ತನ್ನ ಭಾವಕ್ಕೆ ತಕ್ಕ ಅಭಿವ್ಯಕ್ತಿಯನ್ನು ಕೊಟ್ಟುಕೊಳ್ಳುವುದರಲ್ಲಿ ಆತ ತುಷ್ಟ ; ಆನಂತರ ಅದನ್ನು ಹತ್ತು ಜನದೊಂದಿಗೆ ಹಂಚಿಕೊಂಡು ಸುಖಿಸುವುದು ಆತನಿಗೆ ಇಷ್ಟ. ಈ ಇಷ್ಟವೇ ತನ್ನ ಕೃತಿಯಿಂದ ಲಭಿಸುವ ಸಹೃದಯ ಮನಃಪ್ರೀತಿಯ ನೆಲೆಯಲ್ಲಿ ಆತನನ್ನು ನಿಲ್ಲಿಸುತ್ತದೆ. ಆಗ ಅನ್ನಿಸುತ್ತದೆ ಕವಿಗೆ “ಎನಿತನೊರಲ್ದು ಪೇಳ್ವ ಕವಿ ಏವನ್ ? ಅದಂ ಪೆಸರಿಟ್ಟು ಮೆಚ್ಚಬಲ್ಲನನ್ ಅರಸಲ್ಕೆ ವೇಳ್ಪುದು”-ಎಂದು. ಆಗ ಮೊದಲಾಗುತ್ತದೆ ಕವಿಹೃದಯದಲ್ಲಿ ಸಹೃದಯರ ಕ್ರಿಯೆ-ಪ್ರತಿಕ್ರಿಯೆಗಳ ಪರಿಣಾಮ. ತನ್ನ ಕೃತಿಗೆ ಉತ್ತಮವಾದ, ಹಾರ್ದಿಕವಾದ ಸ್ವಾಗತ ದೊರೆಯಿತೋ ಸಂತೋಷ ; ದೊರೆಯಲಿಲ್ಲವೋ ಕೊರಗು. ತನ್ನ ಕೃತಿಯನ್ನು ಮೆಚ್ಚತಕ್ಕವರನ್ನು ಕುರಿತು ಗೌರವ, ಪ್ರಶಂಸೆ ; ಮೆಚ್ಚದಿದ್ದವರ ಮೇಲೆ ತಿರಸ್ಕಾರ. ಇಲ್ಲಿ ಮೊದಲಾಗುತ್ತದೆ “ಸತ್ಕವಿ ಪ್ರಶಂಸೆ ಕುಕವಿನಿಂದೆ”ಯ ಅಧ್ಯಾಯ. “ಕವಿತಾ ಪ್ರೌಢನೆ ಸೋಲ್ವವೋಲ್ ಕೃತಿಯೊಳಜ್ಞಂ ಸೋಲ್ವನೆ ? ಚಂದ್ರಕಾಂತಮೊಸರ್ವಂತಿರೆ ಗೋರಿಕಲ್ಲೊಸರ್ಗುಮೇ ಬೆಳ್ದಂಗಳೊಳ್?” “ಶುಷ್ಕವೈಯಾಕರಣಂಗಂ ಶುಷ್ಕತಾರ್ಕಿಕಂಗಂ ವಿಷಯಮೆ ಕಾವ್ಯರತ್ನಮತಿಚತುರ ಕವಿ ಕದಂಬಕ ವಿಷಯಂ ?” “ಕೋಗಿಲೆಯ ಸರವರಣ್ಯದೊಳೇಗೈವುದೊ ಮೂರ್ಖಜನ ಜಡಾರಣ್ಯದೊಳ್ ?” ಈ ಕೊರಗಿನಲ್ಲಿ ಕವಿ ಬ್ರಹ್ಮನನ್ನು ಬೇಡಿಕೊಳ್ಳುತ್ತಾನೆ :

“ಉಳಿದೆಲ್ಲ ಕರ್ಮಫಲಗಳನು ಮನಬಂದಂತೆ
ಕಳುಹು ; ಸಹಿಸುವೆನಯ್ಯ ನಾನವನು ವಿಧಿಯೆ,
ಅರಸಿಕರ ಮುಂದೆ ಕವಿತೆಯನೊಪ್ಪಿಸುವುದೊಂದ
ಬರೆಯದಿರು ಬರೆಯದಿರು ಬರೆಯದಿರು ಶಿರದಿ !”[5]

ಎಂದು. ತಮ್ಮ ಕೃತಿಗಳ ಬಗೆಗೆ ರಸಿಕರಲ್ಲದವರನ್ನು ಕುರಿತು ಕವಿಗಳ ಕೊರಗು, ತಿರಸ್ಕಾರ ಎಷ್ಟು ! ತಾವು ಕಾವ್ಯ ಬರೆದದ್ದು ಸಹೃದಯರಿಗಾಗಿಯೇ, ಆದರೆ ಅದನ್ನು ಮೆಚ್ಚಬಲ್ಲವರು ಎಷ್ಟು ವಿರಳ ಎನ್ನುವ ಭಾವವನ್ನು ಕವಿಗಳು ತೋಡಿಕೊಂಡಂತೆ ತೋರುತ್ತದೆ. ಅದರಲ್ಲೂ ಓದುವ ರಸಿಕರು ದೊರೆತರೆ ಕವಿಯ ಸುಖಕ್ಕೆ ಪಾರವೇ ಇಲ್ಲ. “ಆದರಿಸರ್ ಖಳರ್ ಕೆಲಬರೀ ಪೊಸಕಬ್ಬಮನೆಂದು ಮನಃ ಖೇದಮ- ನಾಳದಿರ್”-ಹೇಳುತ್ತಿದ್ದಾನೆ ಒಬ್ಬ ಹಿರಿಯ ಕವಿ ಮತ್ತೊಬ್ಬ ಮರಿಕವಿಗೆ “ನೋಡೆ ಸಜ್ಜನರ್ಗೆ ಸೇವ್ಯಮದಾದೊಡೆ ಸಾಲದೆ ?”-ಎನ್ನುವ ಸಮಾಧಾನವನ್ನು. ತಮ್ಮ ಕೃತಿಯ ಮೃದು ಪದಬಂಧವನ್ನೂ, ಬಗೆಯ ಭಾವದ ಮೆಯ್ಸಿರಿಯನ್ನೂ, ರಸಪ್ರವಾಹದ ಆಧಿಕ್ಯವನ್ನೂ ಅರಿತು ಭಾವಿಸಿ ಮೆಚ್ಚಿ, ರೋಮಾಂಚನ ತಾಳಿ “ನಯದಿಂ ಕರೆಗಣ್ಮಿದ ಹರ್ಷಬಾಷ್ಪವರ್ಷದಿನನುರಾಗಮಂ ಪಡೆವ ಸಜ್ಜನ ಸಂಸ್ತವನವೊಂದೆ ಸಾಲದೆ?”[6] ಎಂದು ಕವಿಗಳು ತೃಪ್ತರಾಗಿದ್ದಾರೆ. ಕವಿಗೆ ಬೇಕಾದದ್ದು ಕಾವ್ಯಾಸ್ವಾದದಿಂದ ಮೈದುಂಬಿದ ಸಜ್ಜನ ಸಂಸ್ತವನ. ಕವಿ ಬೇಂದ್ರೆಯವರೂ “ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ, ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ !” ಎನ್ನುತ್ತಾರೆ. ಹೀಗೆ ಹಿಂದಿನ ಕವಿಗಳಿಂದ ಹಿಡಿದು ಇಂದಿನ ಕವಿಗಳ ತನಕವೂ ಸಹೃದಯರ ಆಹ್ಲಾದದಿಂದ ದೊರೆಯುವ ಸುಖಕ್ಕಾಗಿ ಕವಿಗಳು ಹಂಬಲಿಸಿದ್ದಾರೆ. ಈ ದೃಷ್ಟಿಯಿಂದ ನೋಡಿದರೆ ಕವಿ ಕೃತಿರಚನೆ ಮಾಡುವುದು ಕೇವಲ ತಮ್ಮ ಆನಂದಕ್ಕೆ, ಸಹೃದಯರನ್ನು ಕುರಿತಾದ ಪ್ರಜ್ಞೆ ಅವರ ಕೃತಿ ರಚನೆಯ ಮೇಲೆ ಯಾವ ಪರಿಣಾಮವನ್ನೂ ಮಾಡಿಲ್ಲ ಎಂದು ಒಪ್ಪುವುದಾದರೂ ಹೇಗೆ ?

ಈ ಹಿನ್ನೆಲೆಯಿಂದ  ನೋಡಿದಾಗ, ಕವಿ ತನ್ನ ಅನುಭವಕ್ಕೆ ಕೇವಲ ರೂಪು ಕೊಡುವ ಉದ್ದೇಶವೊಂದೇ ಪ್ರಧಾನವಾಗಿರುತ್ತದೆ ಎಂದಷ್ಟೇ ಅಲ್ಲ, ಹಾಗೆ ರೂಪುತಾಳುವ ಅನುಭವ ತನಗೆ ಕೊಟ್ಟ ಸಂತೋಷವನ್ನು ಉಳಿದವರಿಗೂ ಕೊಡಬೇಕು;  ಒಂದು ಕ್ಷಣದ ಅನುಭವ ಅನಂತ ಕಾಲದ ಅನುಭವವಾಗಬೇಕು ; ಹಾಗಾಗಬೇಕಾದರೆ ಆ ಅನುಭವವನ್ನೂ ಪುನರ್‌ಸೃಷ್ಟಿಸಿಕೊಳ್ಳುವಂಥ ಸಮಾನ ಹೃದಯಗಳು ಬೇಕು; ತನ್ನ ಅನುಭವ ಆ ಸಹೃದಯರ ಮೇಲೆ ಪರಿಣಾಮವನ್ನು ಮಾಡಿಯೇ ಮಾಡುತ್ತದೆ- ಎನ್ನುವಂಥ ಭಾವನೆಗಳು ಕವಿಯ ಕೃತಿರಚನೆಗೆ ಪ್ರೇರಣೆಯಾಗಿರುತ್ತವೆ ಎನ್ನುವುದೂ ಗಮನಿಸಬೇಕಾದ ಸಂಗತಿ. ಈ ದೃಷ್ಟಿಯಿಂದ ಸಹೃದಯರಿಲ್ಲದೆ ಕಾವ್ಯವೇ ಇಲ್ಲ, ಭಕ್ತರಿಲ್ಲದೆ ದೇವರೇ ಇಲ್ಲ ಎಂದಹಾಗೆ! ಕಾವ್ಯಕ್ಕೆ ಕವಿಹೃದಯ ಉಗಮಸ್ಥಾನವಾದರೆ ಸಹೃದಯ ಸಂಗಮಸ್ಥಾನ. ಸಹೃದಯರಿಲ್ಲದೆ ಕವಿಯನ್ನೂ, ಕವಿಯಿಲ್ಲದೆ ಸಹೃದಯರನ್ನೂ ನಾವು ಕಲ್ಪಿಸಿಕೊಳ್ಳುವುದೇ ಅಸಾಧ್ಯ. ಏಕೆಂದರೆ ಕವಿ ಜನಜೀವನದ ಒಂದು ಭಾಗ ; ಜನಜೀವನದ ಒಂದು ಭಾಗವಾಗಿ ಎದ್ದು ನಿಂತು, ತನ್ನ ಜನತೆಯ ಮೂಕಭಾವಗಳನ್ನು, ಆಶೋತ್ತರಗಳನ್ನು, ಮಾತಿನ ಮೋಡಿಯಲ್ಲಿ ಅಭಿವ್ಯಕ್ತಗೊಳಿಸಿ ಅವರಿಗೇ ಕೊಡುವಾಗ, ತನ್ನ ಕೃತಿಯಿಂದ ತಾನು ತನ್ನ ಸಹೃದಯರನ್ನು ಶ್ರೇಯಸ್ಸಿಗೋ, ಅಶ್ರೇಯಸ್ಸಿಗೋ ಒಯ್ಯುವ ಜವಾಬ್ದಾರಿ ತನಗೆ ಉಂಟೆಂಬ ಪ್ರಜ್ಞೆ ಇಲ್ಲದಿರಲು ಸಾಧ್ಯವಿಲ್ಲ. ಕೇವಲ ಕಾಮಪ್ರಚೋದಕವಾದ ಕಾದಂಬರಿಯನ್ನು ಬರೆಯುವ ಲೇಖಕ, ತಾನು ಸಮಾಜದಲ್ಲಿ ಕಂಡ ಅಶ್ಲೀಲ ಮುಖವೊಂದಕ್ಕೆ ಪ್ರಾಮಾಣಿಕವಾಗಿ ರೂಪು ಕೊಡುವುದೇ ತನ್ನ ಉದ್ದೇಶ, ತನ್ನ ಅನುಭವದ ಬಿಡುಗಡೆಗಾಗಿ ತಾನು ಬರೆಯುತ್ತೇನೆ, ಓದುಗರಿಗಾಗಿ ಅಥವಾ ತನ್ನ ಜನತೆಗಾಗಿ ನಾನು ಬರೆಯುತ್ತಿಲ್ಲ-ಎಂದು ವಾದಿಸಿದರೆ ಎಂತಹ ಅನಾಹುತವಾಗುತ್ತದೆ! ಆದ ಕಾರಣ ಕವಿ-ಕಲಾವಿದರಿಗೆ ತಾವು ಯಾರಿಗಾಗಿ ಬರೆಯುತ್ತಿದ್ದೇವೋ ಅಂಥ ಸಹೃದಯರ ಪರವಾದ ಈ ಜವಾಬ್ದಾರಿ, ಅವರು ಕೃತಿರಚನೆಗೆ ತೊಡಗಿದ ಕಾಲದಲ್ಲಿ ಬುದ್ಧಿಪೂರ್ವಕವಾಗಿ ಇರುವುದಿಲ್ಲವಾದರೂ ಅದು, ಅದಕ್ಕೆ ಪೂರ್ವಭಾವಿಯಾದ ಆಲೋಚನೆ-ವಿಚಾರಗಳಲ್ಲಿ ಚರ್ಚಿತವಾಗಿ, ಚರ್ವಿತವಾಗಿ ಅವರ ಕೃತಿ ರಚನೆಯ ಮೇಲೂ ಅಗೋಚರವಾದ ಪ್ರಭಾವವನ್ನು ಬೀರುತ್ತದೆ ಎಂದು ಹೇಳಬಹುದು. ಆದುದರಿಂದಲೇ ಎಲ್ಲ ಕವಿಗಳೂ ತಾವು ಯಾರಿಗಾಗಿ ಬರೆಯುತ್ತಿದ್ದೇವೆ, ಏನನ್ನು ಬರೆಯುತ್ತಿದ್ದೇವೆ ಎನ್ನುವ ಭಾವನೆಯಿಂದ ಸಂಪೂರ್ಣ ದೂರವಾಗಿಲ್ಲ.[7] ಕವಿಗಳು ಕಾವ್ಯಾರಂಭದಲ್ಲಿ ಹೇಳಿಕೊಳ್ಳುವ ಉದ್ದೇಶ ಮತ್ತು ಫಲಶೃತಿಗಳಲ್ಲಿ ಇದನ್ನು ಗುರುತಿಸಬಹುದು. ಮಿಲ್ಟನ್ ತನ್ನ ಮಹಾಕಾವ್ಯವನ್ನು ಬರೆಯುವಲ್ಲಿ “To Justify the ways of God to men” ಎನ್ನುತ್ತಾನೆ. ಜನ್ನ ಯಶೋಧರ ಚರಿತೆಯನ್ನು ಬರೆಯುವಾಗ “ಪರೆವುದು ದುರಿತ ತಮಿಸ್ರಂ ಪೊರೆಯೇರುವುದಮಳದೃಷ್ಟಿ ಕುವಳಯವನಂ ಆಚರಿಪ ಜನಕ್ಕೆ” ಎನ್ನುತ್ತಾನೆ. ಜೈನಕವಿಗಳು ತಾವು ತಮ್ಮ ಧರ್ಮಕ್ಕೆ ಸಂಬಂಧಪಟ್ಟ ಕೃತಿಗಳನ್ನು ಹೇಳುವುದು ಜೈನ ಶ್ರಾವಕರಿಗಾಗಿ ಎಂದುಕೊಂಡಂತೆ, ವೀರಶೈವ ಕವಿಗಳೂ ತಮ್ಮ ಕಾವ್ಯವನ್ನು ಕೇಳತಕ್ಕವರು ಶಿವಭಕ್ತರು- ಎಂದುಕೊಳ್ಳುತ್ತಾರೆ. ಹೀಗೆ ಕೇವಲ ಧರ್ಮಶ್ರದ್ಧೆ ಮಾತ್ರವಲ್ಲದೆ ಕವಿಗಳಿಗೆ ತಮ್ಮ ಆಶ್ರಯದಾತರಿಂದ ಅಥವಾ ಪಂಡಿತ ಮಂಡಲಿಯಿಂದ ದೊರೆಯಬಹುದಾದ ಸನ್ಮಾನ, ಗೌರವ, ಕೀರ್ತಿ, ಸಂಪತ್ತು ಇತ್ಯಾದಿಗಳೂ ಕೃತಿರಚನೆಗೆ ಪ್ರೇರಣೆಯಾಗಿ ಕೆಲಸ ಮಾಡಿಲ್ಲ ಎಂದು ಹೇಳುವಂತಿಲ್ಲ. ಅಂತೂ ಕವಿಗಳಿಗೆ ತಮ್ಮ ಕಾವ್ಯದ ಉದ್ದೇಶ ಮತ್ತು ಅದನ್ನು ಆಲಿಸುವ ಸಹೃದಯರ ಕಲ್ಪನೆ ಎರಡೂ ತಕ್ಕಮಟ್ಟಿಗೆ ಇಲ್ಲದೆ ಇಲ್ಲ. ಪಂಪ, ರನ್ನ, ಇಬ್ಬರೂ ತಮ್ಮ ಆಶ್ರಯದಾತರಾದ ಅರಿಕೇಸರಿ, ಇರಿವಬೆಡಂಗ ಅವರನ್ನು ತಮ್ಮ ಕೃತಿಗಳ ಮುಖ್ಯಪಾತ್ರದಲ್ಲಿ ಸಮಾವೇಶ ಮಾಡಿ ಬರೆಯುವ ವೇಳೆಯಲ್ಲಿ, ನಾಳೆ ಈ ಕೃತಿಗಳನ್ನು ತಮ್ಮ ಆಶ್ರಯದಾತರು ಮತ್ತು ಆಸ್ಥಾನದ ಪಂಡಿತ ವರ್ಗದವರು ಕೇಳುತ್ತಾರೆ ಎನ್ನುವ ಅರಿವು ತಕ್ಕಮಟ್ಟಿಗೆ ಅವರ ಕೃತಿರಚನೆಯ ಉದ್ದಕ್ಕೂ ಇರುವಂತೆ ತೋರುತ್ತದೆಯಲ್ಲವೆ? ನಮ್ಮ ಹಳಗನ್ನಡ ಕವಿಗಳಲ್ಲಿ, ಬಹುಮಟ್ಟಿಗೆ ಆಸ್ಥಾನದಲ್ಲಿದ್ದವರಿಗೆಲ್ಲಾ ತಮ್ಮ ಕೃತಿ ನಾಳೆ ಪಂಡಿತ ಮಂಡಲಿಯ ಮುಂದೆ ಓದಲ್ಪಡತಕ್ಕದ್ದು ಎನ್ನುವ ಅರಿವಿನಿಂದ ಬಿಡುಗಡೆ ಇದ್ದಿರಲಾರದು. ಆದಕಾರಣವೇ ಅವರ ಕೃತಿಗಳಲ್ಲಿ ಎಷ್ಟೋ ಭಾಗಗಳು, ಕೇವಲ ಪಂಡಿತಪ್ರಿಯವಾದ ಅಲಂಕಾರಾದಿವೈಚಿತ್ರ್ಯ ರಚನೆಗಳ ಕಡೆಗೂ, ಸಂಪ್ರದಾಯದ ನಿಯಮಗಳನ್ನು ಪಾಲಿಸುವ ಕಡೆಗೂ ಜಾರಿಹೋಗಿ ಕೇವಲ ಚಮತ್ಕಾರ ಪ್ರಧಾನವಾಗಿ, ಕಾವ್ಯದ ಗುಣವನ್ನು ತಗ್ಗಿಸಿಕೊಂಡಿರುವುದು. ಸಮಕಾಲೀನ ಕಾವ್ಯವನ್ನು ಗಮನಿಸಿದರೂ, ಕಾವ್ಯ ಹೇಗಿರಬೇಕು, ಹೇಗಿರಬಾರದು ಎಂಬ ಬಗ್ಗೆ ಕವಿಯಾದವನು ತಾನು ಯಾವುದೋ ಒಂದು ಕಾವ್ಯಪಂಥದ ಅಥವಾ ಚಳುವಳಿಯ ಅಂಗವಾಗಿ ನಿಂತ ಹೊತ್ತಿನಲ್ಲಿ, ಅವನೋ ಅವನ ಪಕ್ಷವೋ ಹಾಕಿಕೊಂಡ ಸಿದ್ಧಾಂತಗಳಿಂದ ಅವನಿಗೆ ಬಿಡುಗಡೆ  ಇರಲಾರದು.  ಅಂತೂ ಯಾವ ಕಲಾವಿದರು ಮತ್ತು ಕವಿಗಳು ತಾವು ಯಾರಿಗೋ ಏನನ್ನೋ ಹೇಳಲೆಂದೇ ತಮ್ಮ ಕೃತಿಗಳನ್ನು ತಾವು ಬರೆಯುತ್ತಿದ್ದೇವೆಂಬ ಕಡೆ ಪ್ರತ್ಯೇಕವಾದ ಮತ್ತು ವಿಶೇಷವಾದ ಗಮನವನ್ನು ಕೊಡುತ್ತಾರೊ, ಅಂಥವರ ಕೃತಿಗಳು ಶ್ರೇಷ್ಠತೆಯ ಮಟ್ಟದಿಂದ ಕೆಳಗೆ ಇಳಿಯುವ ಸಂಭವ ಉಂಟು[8] ಎನ್ನುವ ಮಾತಿಗೆ ಅವಕಾಶವಾಗುತ್ತದೆ. ನಿಜ, ಕವಿ ಪ್ರಜ್ಞಾಪೂರ್ವಕ ರಚನೆಗೆ ತೊಡಗುವುದರಿಂದ ಆ ಸಂದರ್ಭದಲ್ಲಿ ಕೃತಿ ಕೇವಲ ‘ರಚನೆ’ಯಂತೆ ತೋರಬಹುದು. ಆದರೆ ಅದು ಕೃತಿಯ ಗುಣ ಕಡಿಮೆಯಾಗುವುದಕ್ಕೆ ಆಸ್ಪದವಾದ ಹಲವು ಕಾರಣಗಳಲ್ಲಿ ಒಂದು ಕಾರಣವಿರಬಹುದು. ಕಾವ್ಯ ಉತ್ಕೃಷ್ಟವಾಗುವುದೂ, ಉತ್ಕೃಷ್ಟವಾಗದಿರುವುದೂ, ಕೇವಲ ಕವಿ ಕೃತಿ ರಚನೆಯ ಕಾಲದಲ್ಲಿ ತನ್ನ ಅನುಭವ ನಿರೂಪಣೆ ಬಗ್ಗೆ ಪ್ರಜ್ಞಾಪೂರ್ವಕವಾಗಿಲ್ಲದಿರುವುದೂ ಅಥವಾ ಪ್ರಜ್ಞಾಪೂರ್ವಕವಾಗಿರುವುದೂ ಇವುಗಳ ಮೇಲೆ ನಿಂತಿದೆ ಎನ್ನುವುದಕ್ಕಿಂತ, ಅದು ಅವರ ಪ್ರತಿಭಾ ಶಕ್ತಿಯ ಏರುಪೇರುಗಳನ್ನೂ ಅವಲಂಬಿಸಿದೆ ಎನ್ನುವುದು ಹೆಚ್ಚು ಸರ್ಮಪಕವೇನೋ. ಪಂಪ, ರನ್ನರಂಥ ಕವಿಗಳು ತಾವು ಯಾರಿಗಾಗಿ ಹೇಳುತ್ತಿದ್ದೇವೆ, ಕಾವ್ಯನಿರ್ವಹಣಾಕ್ರಮದಲ್ಲಿ ತಮ್ಮ ಪೋಷಕರನ್ನು ಸಮಾವೇಶಗೊಳಿಸಿದ್ದೇವೆ ಎನ್ನುವ ಅರಿವಿದ್ದೂ ಎಷ್ಟು ಸೊಗಸಾದ ಕಾವ್ಯಗಳನ್ನು ಬರೆದಿದ್ದಾರೆ !  ಆ ಅರಿವಿನಿಂದ ಅವರ ಕೃತಿ ಅಲ್ಲಲ್ಲಿ ಕೆಳಗಿಳಿದಿರುವುದೂ ನಿಜ ;  ಅಂತಹ ಅರಿವಿಲ್ಲದಿದ್ದರೆ ಅವರ ಕೃತಿಗಳು ಇನ್ನೂ ಉತ್ತಮವಾಗುತ್ತಿದ್ದುವೆಂದು ಒಪ್ಪಬಹುದಾದರೂ, ನಿಜವಾದ ಶಕ್ತಿಪ್ರತಿಭೆಗೆ ಇದಾವುದೂ ಅಡ್ಡಿಯಲ್ಲವೆಂದೇ ಧಾರಾಳವಾಗಿ ಹೇಳಬಹುದು. ಕವಿ ತಾನು ಇಂಥವರಿಗಾಗಿ ಬರೆಯುತ್ತಿದ್ದೇನೆ ಅಂದುಕೊಳ್ಳುವುದರಿಂದಲೇ ಆತನ ಪ್ರತಿಭೆ ಕುಂಠಿತವಾಗಲಾರದು. ಕವಿ ತಾನು ಇಂಥ ಒಂದು ಜನಕ್ಕೆ ಬರೆಯುತ್ತಿದ್ದೇನೆ ಎಂದು ಅಂದುಕೊಂಡರೂ ಅದೇನೂ ಪ್ರಮಾದವಲ್ಲ. ಹಾಗೆ ನೋಡಿದರೆ ಅದೇನು ವೈಯಕ್ತಿಕವಾದ ಆಪೇಕ್ಷೆ ಅಲ್ಲ. ರಾಘವಾಂಕ ಹೇಳುತ್ತಾನೆ: “ಕಾವ್ಯಮಂ ಕೇಳ್ದು ಜನ ಬದುಕಬೇಕೆಂದು ಪೇಳ್ದೆನನಪೇಕ್ಷೆಯಿಂದೆ”-ಎಂದು. ‘ಕಾವ್ಯಮಂ ಕೇಳ್ದು ಜನ ಬದುಕಬೇಕು’-ಎನ್ನುವುದು ಆಪೇಕ್ಷೆಯಲ್ಲವೆ ಎಂದರೆ ರಾಫವಾಂಕನ ಉತ್ತರ, ಅದು ಅಪೇಕ್ಷೆಯಲ್ಲ ‘ಅನಪೇಕ್ಷೆ’ ಎಂದು. ತಾನು ಬರೆಯುವ ಕೃತಿಯಿಂದ ತನಗೆ ಬಿರುದು, ಮನ್ನಣೆ, ತನ್ನ ಆಶ್ರಯದಾತನಿಗೆ ಸಂತೋಷ ಇತ್ಯಾದಿ ಲಭಿಸಬೇಕು ಎಂಬ ಉದ್ದೇಶದಿಂದ ಕೃತಿ ರಚನೆ ಮಾಡುವುದು, ಯಾವುದೋ ಅಪೇಕ್ಷೆಗೆ ಕಾವ್ಯ ಶಕ್ತಿಯನ್ನು ಅಡಿಯಾಳನ್ನಾಗಿ ಮಾಡಿದಂತೆ. ಆದರೆ ‘ಕಾವ್ಯಮಂ ಕೇಳ್ದು ಜನ ಬದುಕಬೇಕು’-ಎನ್ನುವುದು ಜನಸಮಷ್ಟಿಯ ಶ್ರೇಯಸ್ಸನ್ನು ಕುರಿತ ಕಾರಣ ಅದು ಎಲ್ಲ ‘ಅಪೇಕ್ಷೆ’ಗಳಂತೆ ಒಂದು ‘ಅಪೇಕ್ಷೆ’ ಅಲ್ಲ, ‘ಅನಪೇಕ್ಷೆ’. ಎಲ್ಲ ದೊಡ್ಡ ಕವಿಗಳೂ ಈ ಬಗೆಯ ‘ಅನಪೇಕ್ಷೆ’ಯಿಂದಲೇ ಬರೆದಿರುವುದು. ಆದುದರಿಂದ ನಮ್ಮ ಕವಿಗಳ ಗಮನ ಜನದ ಕಡೆಗೆ. ತಾವು ಹೇಳುವವರು, ಆ ಜನ ಅಥವಾ ಸಹೃದಯರು ಕೇಳುವವರು. ತಾವು ಬರೆಯುತ್ತಿರುವುದು ಕೇವಲ ತಮ್ಮ ಆತ್ಮಾನಂದಕ್ಕೆ, ಸಹೃದಯರ ಆಹ್ಲಾದವೇನಿದ್ದರೂ ಗೌಣ ಎಂದು ನಮ್ಮ ಯಾವ ಕವಿಗಳೂ ಹೇಳಿಕೊಂಡಿಲ್ಲ. ತಾವು ಹೇಳುತ್ತಿರುವುದು ಒಂದು ಸಹೃದಯ ಸಮೂಹಕ್ಕೆ ಎನ್ನುವ ಅರಿವು ಎಲ್ಲ ಕವಿಗಳಿಗೂ ಉಂಟು. ನಮ್ಮ ದೇಶದ ಕಾವ್ಯ-ಪುರಾಣಗಳ ನಿರೂಪಣಾಕ್ರಮವನ್ನು ಗಮನಿಸಿ. ಅದರಲ್ಲಿ ಈ ಭಾವನೆಯೇ ರೂಪ ತಾಳಿದೆ. ರಾಮಾಯಣವಾಗಲಿ ಮಹಾಭಾರತವಾಗಲಿ ಉಕ್ತವಾದದ್ದು ಋಷಿಗಳ, ಜನಗಳ ಸಮೂಹದ ಮುಂದೆ. ಲವಕುಶರು ರಾಮಾಯಣವನ್ನು ರಾಮನ ಸಭೆಯ ಮುಂದೆ ಹಾಡಿದರು. ವೈಶಂಪಾಯನರು ಜನಮೇಜಯರಾಜನಿಗೆ ಮಹಾಭಾರತವನ್ನು ಹೇಳಿದರು. ಪುರಾಣಗಳ ಕ್ರಮವೂ ಹಾಗೆಯೇ. ಪಾರ್ವತಿಗೆ ಪರಮೇಶ್ವರನು ಹೇಳಿದ್ದು, ಗೌತಮ ಗಣಧರರು ಶ್ರೇಣಿಕ ಮಹಾರಾಜನಿಗೆ ಹೇಳಿದ್ದು. ಅಂತೂ ಒಬ್ಬರು ಹಿರಿಯರು, ಪೂಜ್ಯರು ಕೇಳುವ ಜನಕ್ಕೆ ಹೇಳಿದ್ದು. ಇವತ್ತಿಗೂ ನಮ್ಮ ಹಳ್ಳಿಗಳ ಕಡೆ ರಾಮಾಯಣ ವಾಚನವನ್ನು ಏರ್ಪಡಿಸಿದರೆ ಅಲ್ಲಿ ಒಂದು ಕಡೆ ಒಂದು ಮಣೆ ಹಾಕಿ ದೀಪ ಹಚ್ಚಿಡುತ್ತಾರೆ, ಆಂಜನೇಯ ಬಂದು ಕೂತು ಕೇಳುತ್ತಾನೆ ಎನ್ನುವ ಭಾವನೆಯಿಂದ. ಮಹಾಭಾರತ ಓದಿಸುವಾಗಲೂ ಅಷ್ಟೆ, ಅಲ್ಲಿ ಅಶ್ವತ್ಥಾಮ ಬಂದು ಕೇಳುತ್ತಾನೆ ಎಂಬ ಭಾವನೆಯಿದೆ. ಇದರ ಅರ್ಥ, ಕಾವ್ಯ ಪಾರಾಯಣ ನಡೆಯುವಲ್ಲಿ, ಎದುರಿಗೆ ಕೂತು ಕೇಳುವ ಸಹೃದಯರು ಮಾತ್ರ ಅಲ್ಲದೆ, ಅಶರೀರಿಗಳಾದ ಚಿರಂಜೀವ ಚೇತನಗಳೂ ಸಹೃದಯರಾಗಿ ಬಂದು ಕೇಳುತ್ತಾರೆ ಎಂಬ  ನಂಬಿಕೆಯಿದೆ. ಅಂತೂ ಈ ಜನಮೇಜಯಾದಿಗಳ ಪಾತ್ರನಿರ್ಮಾಣದಿಂದ, ನಮ್ಮವರು, ಹೇಳುವವನೊಬ್ಬನಿದ್ದರೆ ಕೇಳುವವನೊಬ್ಬನಿದ್ದೇ ತೀರುತ್ತಾನೆ ಎನ್ನುವ ಭಾವನೆಗೆ ಅಥವಾ ಕವಿ-ಸಹೃದಯತತ್ವಕ್ಕೆ ಸೊಗಸಾದ ನಿದರ್ಶನವನ್ನು ಒದಗಿಸಿದ್ದಾರೆ. ಕಾವ್ಯದ ಕಟ್ಟಡದೊಳಗೇ ಕವಿ-ಸಹೃದಯ ತತ್ವವನ್ನು ಅಳವಡಿಸಿರುವ ಈ ತಂತ್ರ ಅರ್ಥಪೂರ್ಣವಾಗಿದೆ.

ಭಾರತೀಯ ಕಾವ್ಯವಿಮಾಂಸೆಯಂತೂ, ಸಹೃದಯಾನುಭವವನ್ನೇ ಪ್ರಧಾನವಾಗಿ ಗಮನದಲ್ಲಿರಿಸಿಕೊಂಡು ನಡೆದ ವಿವೇಚನೆ. ಕಾವ್ಯದ ಗುರಿ ಏನು ? ರಸ. ಅದು ಯಾರಿಗೆ ? ಸಹೃದಯರಿಗೆ. ಕಾವ್ಯ “ತದ್ವಿದಾಹ್ಲಾದಕಾರಿಣಿ”. ಭಾರತೀಯ ‘ರಸತತ್ವ’ದ ವ್ಯಾಖ್ಯಾನವೆಲ್ಲಾ, ಕವಿಕೃತಿ ಸಹೃದಯನ ಮೇಲೆ ಹೇಗೆ ಪರಿಣಾಮಮಾಡುತ್ತದೆ, ಏನು ಪರಿಣಾಮ ಮಾಡುತ್ತದೆ ಎನ್ನುವುದನ್ನು ಕುರಿತದ್ದೆ. “ಕಾವ್ಯವು ಸಾರ್ಥಕವಾಗುವುದು ರಸಿಕನ ಸಹೃದಯದಲ್ಲಿ ಮತ್ತೆ ನೆಲೆಗೊಂಡಾಗ. ಆದಕಾರಣವೇ, ಕವಿ-ಸಹೃದಯರಿಬ್ಬರೂ ಒಂದೇ ಸಾರಸ್ವತ ತತ್ವದ  ಅಂಗಗಳೆಂದೂ, ಇಬ್ಬರೂ ಒಂದುಗೂಡಿಯೇ ಕಾವ್ಯವಾಗುವುದೆಂದೂ ಅರ್ಥ ಬರುವಂತೆ ಅಭಿನವಗುಪ್ತನು “ಸರಸ್ವತ್ಯಾಸ್ತತ್ವಂ ಕವಿ ಸಹೃದಯಾಖ್ಯಂ ವಿಜಯತೇ” ಎಂದು ಪ್ರಶಂಸೆ ಮಾಡಿದನು. ಇದಕ್ಕಿಂತ ಹೆಚ್ಚಿನ ಮಹತ್ವ ಓದುಗನಿಗೆ ಯಾವುದು?”[9]

ಗತಿಬಿಂಬ-೧೯೬೯


[1] ಕವಿಯ ಪ್ರತಿಭಾ ವ್ಯಾಪಾರದಲ್ಲಿ, ಕವಿಪ್ರತಿಭೆಗೆ ಅವನ ಒಳಗಣ್ಣಿಗೆ ಗೋಚರವಾಗುವ ಕೃತಿಯೇ ನಿಜವಾದ ಕೃತಿ, ಅಲ್ಲೇ ಕೃತಿರಚನೆ ಪೂರ್ಣವಾಯಿತು ; ಅದನ್ನು ಭಾಷೆಯಲ್ಲಿ ಅಭಿವ್ಯಕ್ತಗೊಳಿಸುವುದೂ ಕೇವಲ ಗೌಣವಾದ ಕ್ರಿಯೆ-ಎನ್ನುವ ಒಂದು ಅತಿರೇಕದ ವಾದವಿದೆ, ಕ್ರೋಚೆಯ ಕಲಾಸಿದ್ಧಾಂತದಲ್ಲಿ !

[2] ಭವಭೂತಿ : ಮಾಲತೀಮಾಧವ ೧-೮

[3] “An expierence has to be formed, no doubt, before it is communicated, but it takes the form it does  largely because it may have to be communicated.” I. A. Richards. `Principles of literary criticism’. P. 25.

[4] ಕೃತಿವಿಮರ್ಶೆಯಲ್ಲಿ ಕೆಲವು ಮಾತುಗಳು ಕೇಳಿಬರುತ್ತವೆ : ಈ ಕವಿ ಕೇವಲ ಪಂಡಿತರಿಗಾಗಿ ಬರೆದ. ಅವನ ಕೃತಿ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಈತ ತನ್ನ ಕಾಲದ ಜನ ಸಾಮಾನ್ಯರನ್ನು ನಿರ್ಲಕ್ಷಿಸಿದ್ದಾನೆ-ಎಂದು. ಆದರೆ ವಾಸ್ತವವಾಗಿ ಯಾವ ಕವಿಯೂ ತಾನು ಪಂಡಿತರಿಗಾಗಿ ಬರೆಯುತ್ತಿದ್ದೇನೆ ಅಥವಾ ಜನಸಾಮಾನ್ಯರಿಗಾಗಿ ಬರೆಯುತ್ತಿದ್ದೇನೆ-ಎಂದು ತಾನು ಕೃತಿರಚನೆಮಾಡುವ ಕಾಲದಲ್ಲಿ ಭಾವಿಸಲಾರ. ಹಾಗೆ ಅಂದುಕೊಂಡು ತನ್ನ ಕೃತಿರಚನೆಯನ್ನು (ತನ್ನ ಸ್ವಭಾವಕ್ಕೆ ವಿರುದ್ಧವಾಗಿಯಾದರೂ) ಓದುಗರ ತಿಳಿವಿನ ಮಟ್ಟಕ್ಕೆ ಅನುಸಾರವಾಗಿ ಬದಲಾಯಿಸಿಕೊಳ್ಳಲಾರ. ನಿಜವಾದ ಕವಿ ತನ್ನ ಕಾಲದ ಸಹೃದಯರ ಅಭಿರುಚಿಯನ್ನು ಸಂಸ್ಕರಿಸಿ, ತಿದ್ದಬಲ್ಲ. ಅವರ ರುಚಿ ಈತನ ಕೃತಿರಚನೆಯನ್ನು ನಿರ್ಣಯಿಸಲಾರದು.

[5] ತೀ. ನಂ. ಶ್ರೀ. ಅವರ ಅನುವಾದ : ಭಾರತೀಯ ಕಾವ್ಯ ವಿಮಾಂಸೆ (ದ್ವಿತೀಯ ಮುದ್ರಣ, ಪು. ೨೨೨).

[6] ಇಲ್ಲಿ ಉದಾಹರಿಸಿರುವ ಹಳಗನ್ನಡ ಭಾಗವೆಲ್ಲಾ “ಸೂಕ್ತಿಸುಧಾರ್ಣವ”ದ ಪೀಠಿಕಾ ಪ್ರಕರಣದಿಂದ.

[7] The primary aim of the artist may be to express himself and his ideas, but there is nearly always (though truely not quite) a secondary desire to move, to influence, to alter the rest of the world or some special section of it.  The great artist seems to move through three stages : first he contemplates or evolves his idea, then he expresses it, then he looks for its effect on the world. An artist cannot exist without an audience. It is not true that he expresses merely for his own satisfaction and delight. Intuition : K.W. Wild, P. 189.

[8] “Those artists and poets who can be suspected of close seperate attention to the communieative aspect tend (there are exceptions to this, of which Shakespeare might be one) to fall into a sobordinate rank”-I.A. Richards, Principles of Literary criticism, P. 27.

[9] ತೀ. ನಂ. ಶ್ರೀ. : ಭಾರತೀಯ ಕಾವ್ಯವಿಮಾಂಸೆ, ಪು. ೨೨೦.