ರಾಣಿ ಚೆನ್ನಮ್ಮಾಜಿಯ ಕರೆಯನ್ನು ಕಿತ್ತೂರಿನ ಕಲಿಗಳೆಲ್ಲರೂ ಗೌರವಿಸಿದರು. ತಮ್ಮ ತಮ್ಮ ವೀರರನ್ನು ಕೂಡಿಕೊಂಡು ಕಿತ್ತೂರಿಗೆ ಓಡೋಡಿ ಬರಹತ್ತಿದರು. ಸಂಗೊಳ್ಳಿ ರಾಯಣ್ಣನಂತಹ ವೀರರು ನಾಡಿಗಾಗಿ ಸಾಕ್ಷಿ ನುಡಿದಿದ್ದಾರೆ. ಕ್ರಿ.ಶ. ೧೮೨೦ ರ ಜನೇವರಿಯಲ್ಲಿ ರಾಯಣ್ಣನು ಚೆನ್ನಮ್ಮಾಜಿಯ ಅರಮನೆಗೆ ಹಾಜರಾದನು.

ಗೆದ್ದ ಕಿತ್ತೂರ ತಂದು ಉದ್ದ ಬೀಳುವ ತಾಯಿ
ಕದ್ದ ಮಾತಲ್ಲ ನಿಮ್ಮಾಣೆ
ಕದ್ದ ಮಾತಲ್ಲ ನಿಮ್ಮಾಣೆ| ಇರದಿರಕ
ಬಿದ್ದು ಹೋಗುವೆ ರಣದಾಗೋ.

ಈ ರೀತಿಯ ಅಭಿಮಾನದ ಸಂಗತಿಗಳನ್ನು ತಿಳಿದರೆ, ಚನ್ನಮ್ಮಾಜಿಯ ಸುತ್ತ ಮಹಾನ್‌ಶಕ್ತಿಗಳೇ ರಣರಂಗಕ್ಕಾಗಿ ಕೂಡುತ್ತಿದ್ದವು.

ಕಿತ್ತೂರ ರಾಣಿ ಚೆನ್ನಮ್ಮಾಜಿಯನ್ನು ದತ್ತಕ ಪುತ್ರನಿಗಾಗಿ ಬ್ರಿಟೀಶರು ತೆಗೆದ ನೆಪಕ್ಕಾಗಿ, ಕಿತ್ತೂರಿನ ಯುದ್ಧವೇ ನಡೆಯಬೇಕಾಯಿತು.

ಶಿವಲಿಂಗರುದ್ರ ಸರ್ಜನ ಅವಸಾನದ ನಂತರ, ಮಾಸ್ತಮರಡಿಯೊ ಶಿವಲಿಂಗಪ್ಪನನ್ನು ಆಸ್ಥಾನದಲ್ಲಿ ಇಟ್ಟುಕೊಳ್ಳಲಾಯಿತು. ಉಳಿದ ಊರುಗಳಿಂದ (ಇಂಚಲ, ಚಿಕ್ಕೊಪ್ಪ, ಮುತವಾಡ, ಮರಿಕಟ್ಟಿ, ಸಿಂದೊಳ್ಳಿ ಮುಂತಾದ) ಬಂದವರನ್ನು ಯೋಗ್ಯ ಸನ್ಮಾನ ಮಾಡಿ ತಿರುಗಿ ಕಳುಹಿಸಿಕೊಡಲಾಗಿತ್ತು.

ಬ್ರಿಟೀಶರ ಅವಗುಣಗಳು, ಮನ್ರೋ ಕಾಲಕ್ಕೆ ಆದ ಒಪ್ಪಂದಗಳು, ಥ್ಯಾಕರೆ ಸಾಹೇಬನ ದೂರ್ತವಿಚಾರಗಳು, ಚೆನ್ನಮ್ಮಾಜಿಲಯ ಮನಕಲಕಿದವು. ರಾಜ ಗದ್ದುಗೆಗೆ ಬರುವ ಒಳ್ಳೆಯ ರಾಜನನ್ನೇ ತಯಾರಿಸುವ ವಿಚಾರ ಚೆನ್ನಮ್ಮಾಜಿಯದು. ಆದರೆ ಯುದ್ಧವಾದರೆ ಹೋರಾಡುವ ಪ್ರಮುಖ ಸ್ಥಾನವನ್ನು ತಾನೇ ವಹಿಸಿಕೊಂಡಳು. ಆ ಪ್ರಸಂಗದ ತೈಯಾರಿಗೆ ಜನಪದ ತ್ರಿಪದಿಗಳು ಸಾಕ್ಷಿ ನುಡಿಯುತ್ತಿವೆ.

ಕಿತ್ತೂರ ಚೆನ್ನಮ್ಮ ಸುತ್ತೂರ ಒಡತ್ಯಾಗಿ
ಕತ್ತಿ ಕವಚನಗಳ ಉಡುಪುಟ್ಟು| ಅಬ್ಬರದಿ
ಬತ್ತಲಗುದರಿಯ ಜಿಗದಾಳೋ||

ಕಿತ್ತೂರಿನ ಬಂಟರಾದ ಸಹಸ್ರ ಸಹಸ್ರ ಜನರು ರಾಜಧಾನಿ ಕಿತ್ತೂರ ಸೇರ ತೊಡಗಿದರು. ಕಿತ್ತೂರಿನ ೧೬೦೦೦ ಸೇತಸನ್ನದಿಗಳು, ಸನ್ನದಿಗಳು ವಾಲೀಕಾರರು, ರಾವುತರು, ಕಾಟಕರು, ಕೇವಲ ಬಾಡಿಗೆಯ ಸೈನಿಕರಾಗಿರಲಿಲ್ಲ. ತಾವು ಸೋಲುವುದು ಗೊತ್ತಾದರೂ, ಸಾಯುವುದು ನಿಶ್ಚಿತವಾದರೂ ಅವರು ಎಂದೆಂದಿಗೂ ಬ್ರಿಟೀಶರ ಬಾಲಬಡಕರಾಗಲಿಲ್ಲ. ಇಲ್ಲಿ ಸೋಲು ಗೆಲುವಿನ ಪ್ರಶ್ನೆಗಿಂತ ಅವರು ತಾವಿದ್ದ ಪರಿಸ್ಥಿತಿಯನ್ನು ಎದುರಿಸಿ ಯಾವ ರೀತಿ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಗೊಳಿಸಿದರೆಂಬುದು ಮಹತ್ವದ್ದಾಗಿದೆ.

[1]

ಸಂಗೊಳ್ಳಿಯ ವೀರರು ಚೆನ್ನಮ್ಮನ ಕರೆಯನ್ನು ಮನ್ನಿಸಿದರು. ರಾಯಣ್ಣನು ಅತೀ ತೀವ್ರವಾಗಿ ಕಿತ್ತೂರಿಗೆ ಬಂದನು. ಚೆನ್ನಮ್ಮಾಜಿಯನ್ನು ಕಂಡು ವೀರರನ್ನು ಕೂಡಿ ಹಾಕುವುದಾಗಿಯೂ ಆಂಗ್ಲರ ಜೊತೆ-ಯುದ್ಧ ಮಾಡುವುದಾಗಿಯೂ ವಚನವಿತ್ತನು. ಕನ್ನಡದ ಗರತಿಯರ ಎರಡು ತ್ರಿಪದಿಗಳು ಇಲ್ಲಿ ಸಾಕ್ಷಿ ನುಡಿಯುತ್ತಿವೆ.

೧.     ಸಂಗೊಳ್ಳಿ ರಾಯಣ್ಣ ಹಂಗರಿದ ದಳವಾಯಿ
ದಂಗೆ ಎಬ್ಬಿಸದಿ ನಾಡಾಗ | ಕಿತ್ತೂರ
ಕಂಗೆಟ್ಟ ಜನರ ಕೂಗ್ಯಾರs ||

೨.      ಹತ್ತಲಡಾಯಿ ಮಾಡಿ ಮತ್ತ ತಯಾರಾಗಿ
ಕತ್ತು ಹಿಚಕ್ಯಳ ಪಿರಂಗ್ಯಾರನ | ಚನ್ನಮ್ಮ
ಮತ್ತ ರಾಯಣ್ಣನ ಕರೆ ಕಳುಹಿದಳs ||[2]

ರಾಯಣ್ಣನು ರಾಣಿ ಚೆನ್ನಮ್ಮಾಜಿಯನ್ನು ಕಂಡು “ ನಿಮ್ಮ ಉಪ್ಪುಂಡ ಈ ಸೇವಕರು ಇರುವ ತನಕ ನೀವು ಆಶೆ ಬಿಡಬಾರದು ಅವ್ವನವರೆ, ನಾವು ಬೇರೆ ಏನಾದರೂ ಯುಕ್ತಿ ಮಾಡಿ ಹಣಾ ಕೂಡಸ್ತೀವಿ, ದಂಡೂ ಕಟ್ಟತೀವಿ, ಸರದಾರ ವೀರಪ್ಪನವರೂ ಗಂಗಾಧರಪ್ಪನವರೂ ಅದರ ಗಯಾರಿ ಮಾಡಿದಾರ. ಕೊಲ್ಲಾಪುರದ ರಾಜರ ಸಹಾಯ ಸಿಕ್ಕರೂ ಸರಿ, ಸಿಗದಿದ್ದರೂ ಸರಿ, ನಾವು ಮಾಡುವ ಪ್ರಯತ್ನ ಮಾಡತೀವಿ. ಕಿತ್ತೂರ ನಾಡ ಜನಗಳೇನು ಹೇಡಿಗಳಲ್ಲ ತಾಯಿ ನಿಮಗೆ ಗೊತ್ತೆ ಐತಿ”, ಚೆನ್ನಮ್ಮಾಜಿಯ ಮುಖದಲ್ಲಿ ನಗೆ ಮೂಡಿತು.[3]

ಸಂಗೊಳ್ಳಿ ರಾಯಣ್ಣ ಸ್ವತಂತ್ರವಾಗಿ ವೀರರೆಲ್ಲೆಲ್ಲಿ ಇರುವರೊ ಅಲ್ಲಲ್ಲಿಗೆ ಹೋಗಿ ಅವರ ಗೆಳೆತನ ಬೆಳಸಿದನು. ಕಿತ್ತೂರಿನಿಂದ ಯುದ್ಧ ತಯಾರಿ, ಆಂಗ್ಲರನ್ನು ದೂರ ಅಟ್ಟುವ ಪ್ರಯತ್ನ, ತನ್ನ ಎಲ್ಲ ಕಾರ್ಯಗಳು ಕೈಗೂಡಿದರೆ, ಬಹುದೂರ ಆಂಗ್ಲರನ್ನು ಕಳುಹಿಸಬೇಕು. ತನ್ನ ಬಲ ಹೆಚ್ಚಿಸಿಕೊಂಡು, ಬರ ಬರುತ್ತ ಭಾರತದಿಂದ ಆಂಗ್ಲರನ್ನು ಅಟ್ಟುವ ಮನಸ್ಸು ಅವನದಾಗಿತ್ತು. ತನಗೆ ಯಾವ ಸ್ಥಾನಮಾನ ಕಿತ್ತೂರಿನಲ್ಲಿ ಬೇಕಾಗಿರಲಿಲ್ಲ. ಆದರೆ ಆಂಗ್ಲರು ಮಾತ್ರ ದೂರ ಹೋದ ನಂತರ ಅವರ ಬಾಲಬಡಕರಿಗೆ ಬುದ್ಧಿ ಕಲಿಸುವ ಕೆಲಸ ಮಡಲು ಸಂಕಲ್ಪಸಿದ್ದನು. ರಾಯಣ್ಣ ಕಾಳಿ ಭೀಮಣ್ಣ, ಒಡ್ಡರ ಯಲ್ಲಣ್ಣ, ಗಟ್ಟಿ ಗಜವೀರ, ಬಿಚ್ಚಗತ್ತಿ ಚನಬಸಪ್ಪ, ಮುಂತಾದ ವೀರರು ತನ್ನವರಿರುವ ಸಂಗತಿಯನ್ನು ನೆನಪಿಸಿ ಹಿಗ್ಗುತ್ತಿದ್ದನು.

ರಾಯಣ್ಣ ತನ್ನ ಸೈನ್ಯವನ್ನು ಒಂದೆಡೆ ಸೇರಿಸುವ ಕೆಲಸ ಮಾಡಿದನು. (ಬಾಳಗುಂದ್ರ) ಬಾಳೇಗುಂಡಿ ಗುಡ್ಡದಲ್ಲಿ ಅಡಗುದಾನ ಗೊತ್ತು ಮಾಡಿದನು. ಆಗಿನ ಕಾಲದಲ್ಲಿ ಸಹ್ಯಾದ್ರಿಯು ತಪ್ಪಲು ಪ್ರದೇಶವಾಗಿತ್ತು. ನಂದಗಡವು ಸಹ್ಯಾದ್ರಿಯ ಅಡಿಗುದಾಣವಾಗಿತ್ತು. ಜನಜಂಗುಳಿಯ ಗದ್ದಲವಿರಲಿಲ್ಲ. ಕಕ್ಕೇರಿಯ ‘ಬಿಸ್ಟವ್ವ ದೇವಿ’ಯಲ್ಲಿ ತನ್ನ ಮೊರೆಯನ್ನು ಇಟ್ಟು ಭಕ್ತಿಯಿಂದ ಬೇಡಿಕೊಂಡನು. ಹಾಗೆ ಹಂಡಿಬಡಗನಾಥನ ಸ್ಥಳಕ್ಕೆ ಹೋದನು. ತನ್ನ ಡಾಲು ಮತ್ತು ಖಡ್ಗ ಮಾತ್ರ ಸಂಗಾತಿಯಾಗಿ ನಡೆದಾಡಿದನು. ತನಗೊಂದು ಕುದುರೆ ಬೇಕೆನಿಸಿತ್ತು. ಬರೇ ಓಡಾಟದಿಂದ ದಣವಿನ ಅರಿವು ಆಗುತ್ತಿತ್ತು. ಬಾಳಗುಂದದ ಗಡ್ಡದಲ್ಲಿರುವವರಿಗೆ ಊಟದ ವ್ಯವಸ್ಥೆ ಮಾಡಿದ್ದನು. ಶ್ರಮದ ನಡುಗೆಯಿಂದ ಹೋಗಿ, ಹಂಡಿ ಬಡಗನಾಥನ ಸ್ಥಳದಲ್ಲಿರುವ ಶಾಂತಾನಂದ ಗುರುಗಳಿಗೆ ವಂದಿಸಿದನು. ‘ಶ್ರೀ ಬಡಗನಾಥನು ರಾಯಣ್ಣನಿನಗೆ ಕಲ್ಯಾಣ ಮಾಡುತ್ತಾನೆ. ಕಿತ್ತೂರಿನ ಬಂಟನಾಗಿ ಸೈನ್ಯ ಕೂಡಿಸುತ್ತಿರುವಿರಿ. ನಿನ್ನಂತಹ ವೀರರು ಕಿತ್ತೂರಿಗೆ ಶೋಭಾಯಮಾನರು. ನೀನು ಖಡ್ಗದ ಮೊನೆಯ ಮೇಲೆ ಕುಣಿದಾಡತಕ್ಕವನು. ನಿನಗೆ ಒಂದು ಪ್ರಸಂಗದಲ್ಲಿ ಗಾಯಗಳೇನಾದರೂ ಆದರೆ, ಒಂದು ವನಸ್ಪತಿಯನ್ನು ತೋರಿಸುವೆನು, ಮೊದಲು ಊಟಮಾಡು. ಊಟಮಾಡಿಯಾದ ಮೇಲೆ ರಾಯಣ್ಣನಿಗೆ ಶಾಂತಾನಂದರು ಆ ದಿವ್ಯ ವನಸ್ಪತಿಯನ್ನು ತೋರಿಸಿದರು. ನಿನ್ನ ಸೈನಿಕರಿಗೆ ಇಲ್ಲಿ ಸ್ಥಾನವುಂಟು. ಬೇಕಾದಾಗ ಬನ್ನಿರಿ, ಕಿತ್ತೂರ ಸಂಸ್ಥಾನ ಉಳಿಸಿರಿ,ಬ್ರಿಟೀಶನರನ್ನು ಅಟ್ಟರಿ. ಶ್ರೀ ಬಡಗನಾಥನು ನಿಮಗೆ ಕಲ್ಯಾಣ ಮಾಡಲಿ ಎಂದು ಹರಸುತ್ತ ರಾಯಣ್ಣನನ್ನು ಕಳುಹಿಸಿ ಕೊಟ್ಟರು, ಶಾಂತಾನಂದರು.

ರಾಯಣ್ಣನ ಚಟುವಟಿಕೆಗಳನ್ನು ಕೇಳುತ್ತಿದ್ದರು. ಒಮ್ಮೆ ರಾಯಣ್ಣ ೧೨೦೦ ಜನ ಸೈನಿಕರನ್ನು ಕೂಡಿಸಿದ ಸುದ್ದಿ ಕೇಳಿ ಸಂತೋಷ ಭರಿತರಾಗಿ, ೧೨೦೦೦ ಜನರೂ ಕೂಡಬಹುದು, ಜಯ್‌ಹಂಡಿಬಡಂಗನಾಥ ಎಂದು ಶಾಂತಾನಂದರು ಉದ್ಗರಿಸಿದ್ದರು.

ಕಿತ್ತೂರಿನಲ್ಲಿ ರಾಜನು ೧೨,೯.೧೮೨೪ರಲ್ಲಿ ಸತ್ತನಂತರ ಧಾರವಾಡದಲ್ಲಿ ವಾಸವಾಗಿದ್ದ ಥ್ಯಾಕರೆ ಚಾಪ್ಲಿನ್‌ಸಂಗಡ ಹೋಗಿ ಅಲ್ಲಿರುವ ಸ್ಥಿತಿಯನ್ನು ಅರಿತುಕೊಂಡನು. ಥ್ಯಾಕರೆ ಮಲ್ಲಪ್ಪ ಕನ್ನೂರ ಎಂಬುವವನನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿದನು. ಇದು ಯಾರಿಗೂ ಒಪ್ಪಿಗೆಯಾಗಿರಲಿಲ್ಲ.

ಥ್ಯಾಕರೆ ಮತ್ತು ಕನ್ನೂರ ಮಪ್ಪಲ್ಪ ಇವರೀರ್ವರೂ ಕಿತ್ತೂರನ್ನು ನುಂಗುವ ಹಂಚಿಕೆ ಹಾಕಿದರು . ಆಗಿನ ಇತಿಹಾಸವನ್ನು ಜನಪದ ತ್ರಿಪದಿಗಳು ರುಜುವಾತ ನೀಡುತ್ತವೆ.

೧.         ಕನ್ನೂರ ಮಲ್ಲಗ ತನ್ನಿ ಬ್ಯಾನಹತ್ತಲಿ
ಚೆನ್ನಮ್ಮನ ರಾಜ್ಯ ನುಂಗಾಕೋ | ಥ್ಯಾಕರೆಗೆ
ಗುನ್ನೆ ಮಾಡುದಕ ಪುಸಲಿಟ್ಟೊ |

೨.         ಕಲ್ಲೂರ ಮಲ್ಲನ ಎಲ್ಲಾರು ಬಡಿಯಲಿ
ಗುಲ್ಲಾ ಗುಂಟೇರು ಉಗಳಲಿ | ಥ್ಯಾಕರೆಗೆ
ಸಲ್ಲಾ ಕೊಟ್ಟಾನೋ ಮುತ್ತಾಕೋ ||[4]

ಅಕ್ಟೋಬರದಲ್ಲಿ ದಸರೆಯ ಉತ್ಸವ (೧೮೨೪) ನಡೆಯ ಬೇಕಾಗಿತ್ತು ಇದರಿಂದ ಥ್ಯಾಕರೆ ಅರಮನೆಯ ತಿಜೋರಿಗಳನ್ನೆಲ್ಲ ಮೋಹಬಂದ ಮಾಡಲಾಯಿತು. ದಸರೆಯನ್ನು ಆಚರಿಸಿಯೇ ತೀರೋಣ ಎಂಬ ಕೂಗು ಹಬ್ಬಿತು. ವೀರರೆಲ್ಲ ಕೂಡಿದರು. ಆಚರಣೆಯ ಸಂಗತಿ ಥ್ಯಾಕರೆಗೆ ಗೊತ್ತಾಯಿತು. ಥ್ಯಾಕರೆ ಬರುವುದರೊಳಗಾಗಿ ಕೋಟೆಯ ಎಲ್ಲ ಬಾಗಿಲುಗಳು ಮುಚ್ಚಿದ್ದವು. ೩೬ ಮಹತ್ವದ ತೋಪುಗಳು ಒಳಗಡೆಗೆ ಸಿಕ್ಕಿದ್ದವು. ಎರಡು ತೋಪುಗಳನ್ನು ಕ್ಯಾಪ್ಟನ್‌ಬ್ಲ್ಯಾಕ್‌, ಕ್ಯಾಪ್ಟನ್‌ಸಿವೆಲ್ ತಂದು ನಿಲ್ಲಿಸಿದರು. ಕ್ಯಾಪ್ಟನ್‌ಇಲಿಯಟ್‌ಹೇಳುವಂತೆ’ ಒಂದು ತೋಪು ಬಾಗಿಲುಗಳಿಗೆ ಗುರಿ ಇಟ್ಟರೆ, ಕ್ಯಾಪ್ಟನ್‌ಸಿವ್ಹಿಲ್‌ರ ತೋಪು ಗೋಡೆಯ ಮೇಲಿನ ತೋಪಿಗೆ ಗುರಿ ಇಡಲಾಗಿತ್ತು.[5]

ಕಿತ್ತೂರಿನ ಈ ಕಾಳಗದಲ್ಲಿ ವೀರರು ಕೋಟೆಯ ಒಳಗೂ ಹೊರಗೂ ‘ಹರಹರ ಮಹಾದೇವ’ ಎಂಬ ಘೋಷಣೆಗಳನ್ನು ಕೂಗುತ್ತ ಖಡ್ಗಗಳಿಂದ ಥ್ಯಾಕರೆ ಸೈನ್ಯವನ್ನು ಕಡಿಯುತ್ತ ಚೆಲ್ಲುತ್ತ ತೋಪುಗಳನ್ನು ಹಾರಿಸುತ್ತ ಹೋರಾಟ ಮಾಡಿದರು. ಆಮಟೂರ ಬಾಳಪ್ಪ, ಬಿಚ್ಚ ಗತ್ತಿ ಚೆನ್ನಬಸಪ್ಪ, ಸಂಗೊಳ್ಳಿ ರಾಯಣ್ಣ, ಗಜಬೀರ, ಗುರುಸಿದ್ಧಪ್ಪ ಮುಂತಾದವರ ಮಾರ್ಗದರ್ಶನದಲ್ಲಿಯೇ ಲಡಾಯಿ ನಡೆಯಿತು. ಸಂಗೊಳ್ಳಿ ರಾಯಣ್ಣ ಡಾಲು ಕತ್ತಿ ಹಿಡಿದು ಯುದ್ಧ ಮಾಡುತ್ತಲೇ ವೈರಿಗಳನ್ನು ಚಂದಾಡಿದನು. ಕಿತ್ತೂರ ರಾಣಿ ಚೆನ್ನಮ್ಮಾಜಿ ಸೈನಿಕರಿಗೆ ಹುರಿದುಂಬಿಸಿ, ಕುದುರೆಯನ್ನು ಓಡಾಡಿಸಿ, ವೈರಿಗಳನ್ನು ಸಂಹರಿಸುತ್ತಿದ್ದಳು. ಈ ಯುದ್ಧದಲ್ಲಿ ಕಿತ್ತೂರಿನ ವೀರರು ಹದಿನಾರು ಸಾವಿರಕ್ಕೂ ಮಿಕ್ಕಿ ಕೂಡಿದ್ದರೆಂದು ವರದಿಯಾಗಿದೆ. ಬ್ರಿಟೀಶರು ಮಾತ್ರ ಸಣ್ಣ ಸಂಖ್ಯೆಯಲ್ಲಿ ಕಿತ್ತೂರ ಸೈನಿಕರಿದ್ದಾರೆಂದು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತಿದ್ದರು. ಆದರೆ ಕಿತ್ತೂರಿನ ವೀರರು ರಣರಂಗದಲ್ಲಿ ಕಾದಿದರು.

೧.         ಧಾರವಾಡದ ದಂಡು ವಾರ್ಯಾಗ ಬರುತಿರಲು
ಏರಿಯ ಹತ್ತಿ ಸುರಸ್ಯಾರೋ | ಕಿತ್ತೂರ
ವೀರರೊಗೆದಾರೋ ಗುಂಡೊಲ್ಯೊ ||

೨.         ಕೆಂಪು ಮೊರೆಯದಂಡು ಚಿಂಪಾಗಿ ಸಿಡದಿತೋ
ರಂಪ ರಂಪೆಂದು ಓಡಿತೋ | ಆಮಟೂರ
ಬಾಳಪ್ಪ ಗುಂಡಿಟ್ಟೋ ಥ್ಯಾಕರೆಗೋ ||

೩.         ಸಂಗೊಳ್ಳಿ ರಾಯಣ್ಣ ಸಾವಿರಾಳಿನ ಬಂಟ
ಸಾಲಿರುವ ಪಿರಂಗ್ಯಾರನ ಕಡದಾನೋ | ರಾಯಣ್ಣ
ಕಿತ್ತೂರ ಸಿರಿಯ ಕಾದಾನೋ ||

ಲಡಾಯಿಯಲ್ಲಿ ರಣಗಾಂಭೀರ್ಯ ಭೂಮಿಯನ್ನು ನಡಗಿಸುವಷ್ಟು ವೀರಾವೇಷದ ಧ್ವನಿಗಳು ಮೊಳಗಿದವು. ಕೊಂಬು ಕಹಳೆ, ನಗಾರಿಗಳು ಚೇಗಡಗಳು, ತೋಪುಗಳ ಸದ್ದುಗಳು ಆಕಾಶದೆತ್ತಕ್ಕೇರಿದವು. ತೋಪುಗಳ ಸದ್ದು ದಿಕ್ಕನ್ನು ತಪ್ಪುವಂತೆ ಮಾಡಿತ್ತಿದ್ದವು. ಆ ಕಡೆ ಈ ಕಡೆ ಸದ್ದಿನಿಂದಾಗಿ ದಿಕ್ಕೆ ತೋಚದಾಯಿತು. ಬೆಳಗಿನ ಜಾವ ಸೂರ್ಯನ ಪ್ರಖರ ಕಿರಣಗಳು ವೈರಿಗಳನ್ನು ಗುರುತಿಸುತ್ತಿದ್ದವು. ‘ಗೋಡೆಯ ಮೇಲಿಂದ ಗುಂಡು ಬಂದು ಬಡಿದು ಸಿವ್ಹೆಲ್‌ಸತ್ತನು. ಥ್ಯಾಕರೆಯು ಯುದ್ಧದಲ್ಲಿ ಮಡಿದನು. ಮಲ್ಲಪ್ಪ ಶೆಟ್ಟಿ ಹುಮನಾಬಾದದ ಶೆಟ್ಟಿ ಸೆರೆಹಿಡಿಯಲ್ಪಟ್ಟರು. ಈಲಿಯಟ್‌ಸ್ಟಿವನ್‌ಸನ್‌ರನ್ನು ಓಡುತ್ತಿದ್ದಾಗ ಬಸಲಿಂಗಪ್ಪ ತೇಲಿ ಸಂರಕ್ಷಿಸಿ ತನ್ನ ಮನೆಯಲ್ಲಿರಿಸಿಕೊಂಡನು. ಬ್ರಿಟೀಶರಿಗೆ ಯುದ್ಧದಲ್ಲಿ ಸೋಲಾಯಿತು.’[6]

ಇಡೀ ಕಿತ್ತೂರು ನಾಡಿನ ಹಳ್ಳಿ ಹಳ್ಳಿಗಳಲ್ಲಿ ಉತ್ಸಾಹಗಳು ಏರ್ಪಟ್ಟವು. ಥ್ಯಾಕರೆಯ ಶವವನ್ನು ಒಯ್ದು ಧಾರವಾಡದಲ್ಲಿ ಮಣ್ಣು ಮಾಡಲಾಯಿತು. ದಕ್ಷಿಣ ಭಾರತದ ತುಂಬ ಕಿತ್ತೂರಿನ ಜಯಭೇರಿ ಗುಣಗಟ್ಟಿತು. ಬ್ರಿಟೀಶ ಅಧಿಕಾರಿಗಳಿಗೆ, ಮುಂಬಯಿಗೆ ವಾರ್ತೆ ಹೋದ ಮೇಲೆ ನಡುಕ ಹುಟ್ಟಿತು. ಬ್ರಿಟೀಶರಿಗೆ ಕುತಂತ್ರಗಳನ್ನು ಮಾಡದೆ ಬೇರೆ ಮಾರ್ಗ ಇಲ್ಲದಾಯಿತು.

ಕೊನೆಯ ಹೋರಾಟ

ಕಿತ್ತೂರಿನ ಜಯದ ನಂತರ ಚಾಪ್ಲಿನ್‌ದೊರೆ, ಕಿತ್ತೂರ ಕೈವಶ ಮಾಡಿಕೊಳ್ಳಲು ಲೆಕ್ಕವಿಲ್ಲದಷ್ಟು ಸೈನ್ಯ ಕೂಡಿಸತೊಡಗಿದನು. ಮತ್ತೆ ಯುದ್ಧವಾಗುವುದೆಂದು ಗೊತ್ತಾಯಿತು. ಕಿತ್ತೂರಿನ ವೀರರು ಮತ್ತೆ ಜಯಭೇರಿ ಬಾರಿಸುವುದಾಗಿ ಪಣತೊಟ್ಟರು. ಕಿತ್ತೂರ ಉಳವಿಗಾಗಿ ಬ್ರಿಟೀಶರನ್ನು ಓಡಿಸುವುದಾಗಿ ಸೈನಿಕರೆಲ್ಲರೂ ಪಣತೊಟ್ಟದ್ದೂ ಚಾಪ್ಲಿನ್‌ಗೆ ತಿಳಿಯಿತು. ದತ್ತಕ ಪ್ರಕರಣದಲ್ಲಿ ಅಸಮಾಧಾನಿಗಳಾದ ಜನರನ್ನು ಆಶೆ ಆಮಿಷಗಳನ್ನು ಒಡ್ಡಿ, ತಮ್ಮ ಬಲೆಗೆ ಹಾಕಿಕೊಂಡರು. ಕಿತ್ತೂರಿನ ತೋಪುಗಳಲ್ಲಿ ಸಗಣಿ-ನೀರು ಬೆರೆಯಿಸಿಟ್ಟರು ಮೋಸಗಾರರು. ಯುದ್ಧ ನಡೆಯಿತು. ಮೊದಲಿನಂತೆ ಕಿತ್ತೂರಿನ ವೀರರು ಹೋರಾಟಕ್ಕೆ ಅಣಿಯಾದರು.

ಚೆನ್ನವ್ವ ತಾಳಿ ಶಕ್ತಿ ಅವತಾರಾ
ಉಗ್ರ ಕೋಪ ತಾಳ್ಯಾಳು ಬಹುಬಾರಾ
ತುಂಬಿದ ತೋಪ ಇತ್ತ ಐನೂರಾ
ಬಾಣವ ಬಿಟ್ಟು ಕೊಂದರು ಐನೂರಾ

(ದೊಡ್ಡ ಭಾವೆಪ್ಪ ಮೂಗಿ-ಕಿತ್ತೂರ ಕಾಳಗ ಪು. -೩೧)

ಈ ಹೋರಾಟದಲ್ಲಿ ಸಂಗೋಳ್ಳಿ ರಾಯಣ್ಣ, ಬಿಚಗತ್ತಿ ಚನಬಸಣ್ಣ ಮುಖ್ಯವಾಗಿ ಓಡಾಡಿ ಯುದ್ಧ ನಡೆಯಿಸಿದಂತಿದೆ. ಜನಪದ ಹಾಡು ಹೇಳುತ್ತಿದೆ.

ಜೀವದ ಗೆಳೆಯ ರಾಯಣ್ಣ
ಬಿಚ್ಚಗತ್ತಿ ಚನಬಸಣ್ಣ
ಕೂಡಿದಂಗ ರಾಮ ಲಕ್ಷ್ಮಣಾ
ಸಿಕ್ಕಂಗ ಕಡದ ಚಲ್ಲತಾರೋ
ಬಿದ್ದಾವೋ ಲೆಕ್ಕವಿಲ್ಲದ ಹೆಣಾ
ಅಕ್ಕರತಿಯಿಂದ ನಕ್ಕಾರೋ ಎಣ್ಣಾs
ರಕ್ತ ಮೈಯಾಗ ಕೆಂಪ ಮಣಾ
ಕೈ ಕೈ ಹಿಡಕೊಂಡ ಬರವೂರಣ್ಣಾ
ಇವರನ್ನ ನೋಡಿ ಭೂಮಿತಾಯಿ
ನಗತಾಳೊ ಒಂದ ಸವನಾ
ನನ್ನ ಹೊಟ್ಟೀಲಿ ಇಂತಾರತನಾ
ಹುಟ್ಟಬೇಕೋ ರಾಯಣ್ಣ

(ಜಾನಪದದಲ್ಲಿ ಕಿತ್ತೂರು. ಪುಟ ೮೦ ನಿಂಗಣ್ಣ, ಸಣ್ಣಕ್ಕಿ, ಶಿವಲಿಂಗಪ್ಪ ಭಾವಿಕಟ್ಟಿ) ಯುದ್ಧ ನಡೆಯಿತು ಬಲ್‌ಬಾರಾ, ಪಿರಂಗ್ಯಾರ ಮೋಸ ತೋರಿತು. ತೋಪುಗಳು ಹಾರಲಿಲ್ಲ. ಆದರೆ ಪಿರಂಗ್ಯಾರ ತೋಪುಗಳ ಗದ್ದಲ ನಡೆಯಿತು. ಖಡ್ಗ-ಬಂದುಕುಗಳು ತೋಪಿನ ಕಾಳಗದಲ್ಲಿ ಗೌಣವಾದವು. ಕಿತ್ತೂರ ಸೈನಿಕರು ದಿಕ್ಕಾಪಾಲು ಓಡತೊಡಗಿದರು. ಕೆಲವರು ಎದುರಿಗೆ ಹೋರಾಡಿ ವೀರಮರಣ ಹೊಂದಿದರು. ಈ ಪ್ರಸಂಗವನ್ನು ಕೋಲು ಪದದಲ್ಲಿ ಕೇಳಬೇಕು.

ಕಿತ್ತೂರ ಕೋಟೆಯ ಸುತ್ತವರಿಯಿತ ಚಾಪ್ಲಿನ್‌ದಂಡ
ಕಿತ್ತೂರ ದಂಡ ಜಯಘೋಷ ಹೊರ ಬಿಂತ ಹರಹರ
ಮಹಾದೇವೆಂದು ಕೋಲ:

ಸದ್ದು ಗದ್ದಲವಿಲ್ಲದ ನಾಡಾಗ ಮದ್ದು ಗುಂಡಿನ ಅಡಿಮಳೆ ಆಗಿ
ಮಣ್ಣಪಾಲಾತ ನಾಡ ಸಿರಿ ಪರಕೀಯರ ವಶನಾಡ ಕಾಡಾತ ಕೋಲ

ಭರತಖಂಡದೊಳಗೆ ಮೊದಲು ಕಿತ್ತೂರ ರಾಜ್ಯ
ಪರಸತ್ತೆಯ ಕಿತ್ತೆಸಯಾಕ ಕದನ ಹೂಡಿತ ಕೋಲ

ಬೀಕರ ಕದನವ ನಡೆದುಹೋತ ಬಲು ಭಯಂಕರಾ
ಮದ್ದಿಗಿ ಲದ್ದಿ ಬೆರೆಯಿಸಿ ಹಾರಿಸಿದರ ಹುಸಿಗುಂಡ
ಪತನಾತ ಕಿತ್ತೂರ ಕೋಲ

ಮಲ್ಲಪ್ಪ ಶೆಟ್ಟಿಯಂತ ಘಾತಕರಿಗತ್ತ ಮಸಲತ್ತಿಗಿ
ಬಿಲಬಿತ್ತ ಕಿತ್ತೂರ ಹಾಳಾತ ಸುತ್ತೆಲ್ಲ ಕ್ರಂದನ ಕೋಲ
ಆನಿ ಅಂಬಾರಿ ಮ್ಯಾಲ ಮೆರಿಬೇಕೆಂದಿದ್ದ ಮಲ್ಲಪ್ಪ ಶೆಟ್ಟಿ
ಆನಿಕಾಲಾಗ ಅಂಬಾ ಎಂದ ಒದರಿಸತ್ತದನದಂಗ ಕೋಲ.

ಚೆನ್ನಮ್ಮ ರಾಣಿಯನ್ನು ಹಾಗೂ ಅರಮನೆಯ ವೀರಮ್ಮ , ಜಾನಕೀಬಾಯಿಯನ್ನು ಬೈಲ ಹೊಂಗಲದಲ್ಲಿ ಇರಿಸಿದ್ದರು. ಇವರನ್ನು ಪ್ರತ್ಯೇಕವಾಗಿ ಚಾಪ್ಲಿನ್‌ಇರಲು ಆಜ್ಞೆ ಮಾಡಿಸಿದ್ದನು. ಜನತೆಗೆ ಅಂಜಿಕೆ ಬರಲೆಂದು ಸೆರೆಯಾಳದ ೪೦ ಜನ ವೀರ ಸರದಾರರನ್ನು ಬೆಳಗಾವಿ ಕಿಲ್ಲೆ (ಕೋಟೆ)ಯಲ್ಲಿ ಕೊಲ್ಲಲಾಯಿತು.
[1]     ಕಿತ್ತೂರ ಇತಿಹಾಸ ಪುಟ ೪೩ ೧೯೯೮. ಸಂ.ಜಿ.ವಿ. ಕೊಂಗವಾಡ.

[2]     ಜಾನಪದದಲ್ಲಿ ಕಿತ್ತೂರು (ಪುಟ-೫೮) ಸಂ. ನಿಂಗಣ್ಣ ಸಣ್ಣಕ್ಕಿ ಮತ್ತು ಶಿವಲಿಂಗಪ್ಪ ಭಾವಿಕಟ್ಟಿ, ಶ್ರೀಗಿರಿ ಪ್ರಕಾಶನ, ಅಕ್ಕ ತಂಗೇರಿಹಾಳ. ೧೯೭೬.

[3]     ಸಂಗೊಳ್ಳಿ ರಾಯನಾಯಕ, (ಪುಟ-೮೮) ಬಸವರಾಜ ಕಟ್ಟೀಮನಿ, ತೃತೀಯ ಮುದ್ರಣ ೧೯೭೨ (ಪಠ್ಯದ ಆವೃತ್ತಿ).

[4]     ಜಾನಪದದಲ್ಲಿ ಕಿತ್ತೂರು ಪು ೬೦ ಸಂ. ನಿಂಗಣ್ಣ ಸಣ್ಣಕ್ಕಿ ಶಿವಲಿಂಗಪ್ಪ ಭಾವಿಕಟ್ಟಿ.

[5]    Waltter Elliot-Miscellaneues Notes of Sri Waltor Elliot P.P. 71

[6]     ಕಿತ್ತೂರ ಇತಿಹಾಸ (ಪುಟ ೪೬) ೧೯೯೮. ಸಂ.ಜಿ.ವಿ. ಕೊಂಗವಾಡ. ಜಿಲ್ಲಾಧಿಕಾರಿಗಳು ಬೆಳಗಾವಿ.