ಹಲವಾರು ವರ್ಷಗಳ ಕಾಲ ಸತತವಾಗಿ ವೈಜ್ಞಾನಿಕ ರೀತಿಯಿಂದ ನಡೆದ ತಳಿ ಅಭಿವೃದ್ಧಿ ಕಾರ್ಯದ ಪರಿಣಾಮವಾಗಿ ಯುರೋಪ್ ಖಂಡದಲ್ಲಿ ಉತ್ತಮ ಹೈನ ಹಾಗೂ ಮಾಂಸ ಉತ್ಪಾದಕ ತಳಿಗಳು ರೂಪುಗೊಂಡಿವೆ. ಇಂದು ಹೈನ ಹಾಗೂ ಮಾಂಸಗಳಿಗಾಗಿ ವಿಶೇಷ ಪ್ರಾಮುಖ್ಯತೆ ಪಡೆದ ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮೊದಲಾದ ಇತರ ದೇಶಗಳಿಗೂ ಈ ತಳಿಗಳೇ ಸಾಗಿಹೋವು ಅವುಗಳಲ್ಲಿ ಮುಖ್ಯವಾದ ಜಿರ್ಸಿ ಮತ್ತು ಗರನ್ಸಿ, ಪ್ರೀಜಿಯನ್, ಅಲ್ ಡೇನ್ ಬರ್ಗ ಮತ್ತು ರೆಡ್ ಡೇನ್, ಐರ್ಶೈರ್, ಅಬರ್ ಡೀನ್ ಆಂಗ್ಯಸ್, ಕೆರ‍್ರ ಮತ್ತು ಕೆರ್ರಿ‍ಡೆಕ್ಸಟರ್, ಶಾರ್ಟಹಾರ್ನ್, ರೆಡ್ಪೋಲ್, ಲಿಂಕನ್ ಶಯರ್ ಹಾಗೂ ಹೆರಿಪೋರ್ಡ ಶಯರ್ ತಳಿಗಳ ಬಗ್ಗೆ ಇಲ್ಲಿ ಸಂಕ್ಷೇಪ ವಿವರಣೆ ನೀಡಲಾಗಿದೆ.

೧. ಜರ್ಸಿ ಮತ್ತು ಗರೆನ್ಸಿ

ಫ್ರಾನ್ಸ ತೀರ ಪ್ರದೇಶಕ್ಕೆ ಕೆಲವು ಮೈಲಿಗಳ ದೂರದಲ್ಲಿ ನಾರ್ಮಂಡಿಯ ಪಶ್ಚಿಮಕ್ಕೆ ಮತ್ತು ಬ್ರಿಟಿನ್ನಿನ ಉತ್ತರಕ್ಕೆ ಜರ್ಸಿ, ಗರನ್ಸಿ, ಆಲ್ ಡರ್ ನಿ ಮತ್ತು ಹರಮ್ ದ್ವೀಪಗಳ ಸಮೂಹವನ್ನು : ಚಾನಲ್ ಐಲೆಂಡ್ಸಗಳೇ ಜರ್ಸಿ ಮತ್ತು ಗರನ್ಸಿ ದನಗಳ ಮೂಲ ಸ್ಥಳ. ಈ ದ್ವೀಪಗಳ ಗುಂಪಿನಲ್ಲಿ ಜರ್ಸಿ ಮತ್ತು ಗರನ್ಸಿ ದ್ವೀಪಗಳು ದೊಡ್ಡವು ಮತ್ತು ಮುಖ್ಯವಾದವುಗಳು. ಈ ಎಲ್ಲ ದ್ವೀಪಗಳು ಫ್ರಾನ್ಸನ ಸರಹದ್ದಿನಲ್ಲಿದ್ದಾಗ್ಯೂ ಕ್ರಿ. ಶ. ೧೦೬೬ ರಿಂದ ಇಂಗ್ಲೆಂಡಿನ ವಸಾಹತು ದ್ವೀಪಗಳಾಗಿ ಉಳಿದಿವೆ. ಇಲ್ಲಿಯ ದನಗಳು ನೂ‌ರ್ಸ್ ಜಾತಿಯ ದನಗಳಿಂದ ಉತ್ಪತ್ತಿಯಾಗಿವೆ. ಇಲ್ಲಿಯ ಭೂಮಿ ಫಲವತ್ತಾದಿದಲ್ಲ. ಈ ಬಂಜರು ಪ್ರದೇಶದಲ್ಲಿ ದನಗಳ ಏಳಿಗೆ ಸರಿಯಾಗಿ ಆಗುತ್ತಿರಲಿಲ್ಲ. ಅಂದಿನ ಕಾಲದಲ್ಲಿ ಹೈನ ಮತ್ತು ಮಾಂಸದ ಉದ್ಯೋಗಗಳು ಅಷ್ಟು ಲಾಭದಾಯಕವಾಗಿರಲಿಲ್ಲ. ಆದುದರಿಂದ ಅಲ್ಲಿಯ ಜನರು ಮೊದಮೊದಲಿಗೆ ದನಗಳ ತಳಿವೃದ್ಧಿಯ ಬಗ್ಗೆ ಆಸಕ್ತಿಯನ್ನು ವಹಿಸಿರಲಿಲ್ಲ. ಈ ದ್ವೀಪಗಳಲ್ಲಿಯ ಜನರು ಬಹಳ ಬಡವರಾಗಿದ್ದರು. ಅವರು ತಮ್ಮ ನಿತ್ಯ ಜೀವನವನ್ನು ಮೀನುಗಾರಿಕೆ ಮತ್ತು ಕೈಹೆಣಿಗೆಯ ಉಣ್ಣೆಬಟ್ಟೆಗಳ ತಯಾರಿಕೆಯಿಂದ ಸಾಗಿಸುತ್ತದ್ದರು. ಈ ಉದ್ಯೋಗಕ್ಕೆ ಬೇಕಾ‌ಗುವ ಉಣ್ಣೆ ಹೊರಗಿನಿಂದಲೇ ಬರುತ್ತಿತ್ತು. ಅಲ್ಲಿಯ ಹವಾಮಾನದಲ್ಲಿ ಕುರಿಗಳೂ ಸಹ ಸರಿಯಾಗಿ ಬೆಳೆಯುತ್ತಿರಲಿಲ್ಲ. ಹದಿನಾರನೆಯ ಶತಮಾನದಲ್ಲಿ ಇಲ್ಲಿ ತಯಾರಿಸಿದ ಕೈಹೆಣಿಗೆಯ ಉಣ್ಣೆ ಅಂಗಿಗಳು ಇಂಗ್ಲೆಂಡಿನಲ್ಲಿ ಬಹಳ ಮೆಚ್ಚುಗೆಯನ್ನು ಪಡೆದಿದ್ದವು. ಈ ಉಣ್ಣೆಯ ಅಂಗಿಗಳನ್ನು ಇಂಗ್ಲೆಂಡಿನಲ್ಲಿ ‘ಜರ್ಸಿ ಮತ್ತು ಗರನ್ಸಿ ಅಂಗಿಗಳು’ ಎಂದು ಕರೆಯುತ್ತಿದ್ದರು. ಸುಮಾರು ೨೫೦ ವರ್ಷಗಳ ಹಿಂದೆ ಈ ದ್ವೀಪಗಳ ಜನರು ಇಂ‌ಗ್ಲೆಂಡಿನೊಂದಿಗೆ ‌ದನಕರುಗಳ ವ್ಯಾಪಾರವನ್ನು ಪ್ರಾರಂಬಿಸಿದರು. ದನಗಳನ್ನು ಈ ದ್ವೀಪಗಳಿಂದ ಆರಿಸಿ ಒಂದು ಕಡೆ ಗುಂಪುಗೂಡಿಸಿ, ಕಡೆಯ ಬಂದರು ಸ್ಥಳವಾದ ಅಲ್ ಡರ್ ನಿ ದ್ವೀಪದಿಂದ ಹಡಗಿನ ಮೂಲಕ ಇಂಗ್ಲೆಂಡಿಗೆ ಸಾಗಿಸುತ್ತಿದ್ದುದರಿಂದ     ಬಹಳ ಕಾಲದವರೆಗೆ ಇಂಗ್ಲೆಂಡಿನಲ್ಲಿ ಈ ದನಗಳನ್ನು ‘ಅಲ್‌ಡರ್ನಿ’ ದನಗಳೆಂದು ಕರೆಯುತ್ತಿದ್ದರು  ಆಗಿನ ಕಾಲದಲ್ಲಿ ಹಡಗಿನ ಪ್ರಯಾಣಿಕರ ಹಾಲಿನ ಪೂರೈಕೆಗಾಗಿ ಆಕಳುಗಳನ್ನು ಮತ್ತು ಆಡುಗಳನ್ನು ಹಡಗಿನಲ್ಲಿಯೇ ತೆಗೆದುಕೊಂಡು ಹೋಗುತ್ತಿದ್ದರು. ಈ ದ್ವೀಪಗಳ ಆಕಳುಗಳ ಗಾತ್ರದಲ್ಲಿ ಸಣ್ಣಗುದ್ದುದರಿಂದ ಅವುಗಳನ್ನು ಹಡಗಿನಲ್ಲಿ ಸಾಗಿಸಿಕೊಂಡು ಹೋಗುವುದು ಸುಲಭವಾಗಿತ್ತು ಅಂತೆಯೇ ಈ ದನಗಲನ್ನು “ಹಡಗಿನ ದನಗಳು”ಎಂದೂ ಕರೆಯುತ್ತಿದ್ದರು. ಇಂಗ್ಲಿಷ್ ಶ್ರೀಮಂತ ಜನರು ಇವುಗಳ ಸೌಂದರ್ಯಕ್ಕೆ ಮೆಚ್ಚಿತಮ್ಮ ಮನೆಗಳ ಉದ್ಯಾನ ಹಾಗೂ ಸಾರ್ವಜನಿಕ ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಈ ದನಗಳನ್ನು ಸಾಕಲು ಪ್ರಾರಂಭಿಸಿದರು. ಕಾಲಕ್ರಮೇಣ ಇಂಗ್ಲೆಂಡಿಗೆ ಈ ದ್ವೀಪಗಳ ಹೈನ ದನಗಳ ಮಾರಾಟ ಹೆಚ್ಚಿತು, ಈ ಹೆಚ್ಚಿನ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಈ ಚಾನಲ್ ಐಲೆಂಡಿನ ದನಹಳ ವ್ಯಾಪಾರಸ್ಥರು ಬ್ರಿಟನ್ನಿನಿಂದ ಫ್ರೆಂಚ್ ದನಗಲನ್ನು ಅಧಿಕ ಸಂಖ್ಯೆಯಲ್ಲಿ ತರಿಸಿಕೊಂಡರು. ಇವುಗಳನ್ನು “ಆಲ್ ಡರ್ ನಿ” ದನಗಳೆಂಬ ಹೆಸರಿನಿಂಲೇ ಇಂಗ್ಲೆಂಡಿಗೆ ಕಳುಹಿಸುತ್ತಿದ್ದರು. ಈ ಬ್ರಿಟನಿಯ ಫ್ರೆಂಚ್ ದನಗಳು ಬಹುಮಟ್ಟಿಗೆ ಚಾನಲ್ ಐಲೆಂಡಿನ ‌ದನಗಳನ್ನು ಹೋಲುತ್ತಿದ್ದವು. ಈ ರೀತಿ  ಈ ದ್ವೀಪಗಳಿಂದ ಇಂಗ್ಲೆಂಡಡಿನೊಂದಿಗೆ ದನಗಳ ವ್ಯಾಪಾರವು ಬಹುಕಾಲ ನಡೆದಿತ್ತು. ಆದರೆ ಫ್ರಾನ್ಸ್ ಮತ್ತು ಇಂಗ್ಲೆಂಡಗಳ ನಡುವೆ ನಡೆದ ನೂರಾರು ವರ್ಷಗಳ ಯುದ್ಧದ ಪರಿಣಾಮವಾಗಿ ಈ ಫ್ರೆಂಚ್ ದನಗಳನ್ನು ಇಂಗ್ಲೆಂಡಿಗೆ ಸಾಗಿಸುವುದನ್ನು ಕಾಯಿದೆಯಿಂದ ಪ್ರತಿಬಂಧಿಸಲಾಯಿತು. ಜರ್ಸಿ ದ್ವೀಪದ ಪಶುಪಾಲಕರ ರಕ್ಷಣೆಗಾಗಿ ಫ್ರೆಂಚ್ ದನಗಳನ್ನು ಈ ದ್ವೀಪಗಳಿಗೆ ತರದಂತೆ ಮತ್ತು ಹೊರಗೆ ಕಳುಹಿಸದಂತೆ ೧೭೮೯ ರಲ್ಲಿ ಕಾಯಿದೆ ಜಾರಿ ಮಾಡಲಾಯಿತು. ಇದೇ ಪ್ರಕಾರ ೧೮೯೧ ರಲ್ಲಿ ಗರನ್ಸಿ ದ್ವೀಪಕ್ಕೂ ಸಹ ಫ್ರೆಂಚ್ ದನಗಳನ್ನು ತರುವುದನ್ನು ಕಾಯಿದೆಯಿಂದ ಪ್ರತಿಬಂದಿಸಲಾಯಿತು. ಆದಾಗ್ಯೂ ಅವುಗಳ ಸಾಗಾಟವನ್ನು ಸಂಪೂರ್ಣ ತಡೆಯಲು ಸಾಧ್ಯವಾಗಲಿಲ್ಲ ಈ ಕಾಯಿದೆಯ ಪರಿಣಾಮದಿಂದ ಅಲ್ಲಿಯ ದನಗಳಿಗೆ ಬೇರೆ ಹೊರಗಿನ ದನಗಳೊಡನೆ ಸಂಪರ್ಕ ನಿಂತುಹೋಯಿತು. ಅನ್ಯಮಾರ್ಗವಿಲ್ಲದೆ ಇಲ್ಲಿಯ ದನಗಳನ್ನು ಅವುಗಳೊಂದಿಗೆ ಸಂವರ್ಧನೆ ಮಾಡಬೇಕಾಯಿತು. ಇದು ಹೀಗೆ ಬಹಳ ಕಾಲ ನಡೆದಿದ್ದರಿಂದ ತೀರ ಹತ್ತಿರದ ಸಂಬಂಧದ ದನಗಳು ಒಂದಕ್ಕೊಂದು ಬೆರೆತವು. ಇದರ ಪರಿಣಾಮವಾಗಿ ಈ ದನಗಳು ಬೆಳವಣಿಗೆಯಲ್ಲಿ ಪ್ರಗತಿಯಲ್ಲಿ, ಆಕಾರದಲ್ಲಿ ಸಣ್ಣವಾಗಿ, ಸಣ್ಣಗಾತ್ರದ ದನಗಳಾದವು. ಆದರೆ ಅವುಗಳ ಹಾಲು ಕರೆಯುವ ಗುಣದ ಮೇಲೆ ಯಾವ ರೀತಿಯ ಕೆಟ್ಟಪರಿಣಾಮವೂ ಆಗಲಿಲ್ಲಿ. ಇಂದು ಜಗತ್ತಿನಲ್ಲಿ ಅದಿಕ ಹಾಲಿನ ಉತ್ಪಾದನೆಗೆ ಈ ದನಗಳು ಹೆಸರುಗಳಿಸಿವೆ. ಈ ದನಗಳು ಇಂಗ್ಲೆಂಡಿನಲ್ಲಿ ಹೆಚ್ಚು ಪ್ರೀತಿಯನ್ನು ಗಳಿಸಿದ್ದವು, ದಿನದಿನಕ್ಕೆ ಇವುಗಳ ಬೇಡಿಕೆ ಹೆಚ್ಚಾಗಿ ದನಗಳ ವ್ಯಾಪಾರವು ದೊಡ್ಡ ಪ್ರಮಾಣದಲ್ಲಿ ನಡೆಯತೊಡಗಿದ್ದರೂ ೧೯ ನೇ ಶತಮಾನದ ಮಧ್ಯಕಾಲದವರೆಗೆ ಈ ದ್ವೀಪಗಳಿಂದ ಹೊರಗೆ ಹೈನದ ಆಕಳುಗಳನ್ನು ಮಾತ್ರ ಕಳುಹಿಸಲಾಗುತ್ತಿತ್ತು. ಹೋರಿಗಳನ್ನು ರಫ್ತು ಮಾಡುತ್ತಿರಲಿಲ್ಲ. ಇದರಿಂದ ಅಲ್ ಡರ್ ನಿ ‌ದನಗಳ ಪೀಳಿಗೆಯು ಈ ದ್ವೀಪಗಳಿಂದ ಹೊರಗೆ ಬೆಳೆಯುವ ಅವಕಾಶ ಇಲ್ಲವಾಗಿತ್ತು. ನೆಪೋಲಿಯನ್ನನ ಯುದ್ದಾನಂತರ ಇಂಗ್ಲಿಷ್ ಶ್ರೀಮಂತ ಜನರಿಂದ ಈ ದ್ವೀಪದ ದನಗಳಿಗೆ ಬೇಡಿಕೆ ಹೆಚ್ಚಾಯಿತು. ಇಂಗ್ಲೆಂಡ್ ಜನರು ಮಿಶ್ರಬಣ್ಣದ ಹಾಲು ಮತ್ತು ಮಾಂಸ ಉತ್ಪಾದನಾಗುಣಗಳಿಂದ ಕೂಡಿರುವ ಆಕಳುಗಳನ್ನು ಹೆಚ್ಚು ಹೆಚ್ಚಾಗಿ ಕೇಳತೊಡಗಿದರು. ಇದೂ ಅಲ್ಲದೆ ಅಂದಿನ ಪರಿಸ್ಥಿತಿಯಲ್ಲಿ ಕೇವಲ ಹೈನದ ಉದ್ಯೋಗವೋಂದೇ ಅಷ್ಟು ಲಾಭದಾಯಕವಾಗಿ ಸಾಗಿದಂತಾಗಿತ್ತು. ಇದಕ್ಕಾಗಿ ಹೈನ ಇದ್ದುದರಿಂದ ಇಂಥ ಎರಡೂ ಗುಣವುಳ್ಳ ದನಗಳನ್ನು ಉತ್ಪಾದಿಸುವುದರ ಸಲುವಾಗಿ ಈ ದ್ವೀಪಗಳ ಪಶುಪಾಲಕರು “ಶಾರ್ಟ್ ಹಾರ್ನ, “ಐರ್ಶೈರ್” “ಫೀಜಿಯನ್” ಮತ್ತು “ಬ್ರೌನ್ ಸ್ವಿಸ್” ಜಾತಿಯ ಹೋರಿಗಳನ್ನು ತರಿಸಿಕೊಂಡು ತಮ್ಮಲ್ಲಿಯ ತಳಿಗಳೊಂದಿಗೆ  ಜೊತೆಗೂಡಿಸಿ ಮಿಶ್ರಿತಳಿ ದನಗಳನ್ನು ಉತ್ಪಾದಿಸಿ ಬೆಳೆಸಿಕೊಂಡರು. ಈ ಮಿಶ್ರತಳಿಯ ದನಗಳು ಆಕಾರದಲ್ಲಿ ದೊಡ್ಡವಾಗಿ ಮಿಶ್ರಬಣ್ಣ ಹೊಂದಿದ್ದು ಹಾಲು ಮತ್ತು ಮಾಂಸ ಉತ್ಪಾದನಾ ಗುಣಗಳಿಂದ ಕೂಡಿದ್ದವು. ಈ ದ್ವೀಪಗಳಿಗೆ ೧೮೯೧ ಹೊರಗಿನಿಂದ ಮಾಂಸದ ದನಗಳನ್ನು ಬಿಟ್ಟು ಬೇರೆ ಹೈನದನಗಳನ್ನು ತರಿಸಿಕೊಳ್ಳುವುದನ್ನು ನಿಲ್ಲಿಸಲಾಯಿತು. ಜರ್ಸಿ ಮತ್ತು ಗರನ್ಸಿ ದನಗಳಲ್ಲಿ ಸ್ವಜಾತಿಯ ದನಗಳಲ್ಲಿಯೇ ಉತ್ತಮವಾದುವುಗಳನ್ನು ಆರಿಸಿ ಪ್ರತ್ಯೇಕವಾಗಿ ಅವುಗಳ ತಳಿ ಅಭಿವೃದ್ಧಿಗೊಳಿಸುವ ಕಾರ್ಯ ೧೮೯೧ ರಿಂದ ಪ್ರಾರಂಭವಾಯಿತು. ೧೯ನೇ ಶತಮಾನದ ಮಧ್ಯಕಾಲದಲ್ಲಿ ಜರ್ಸಿ ಮತ್ತು ಗರನ್ಸಿ ದನಗಳನ್ನು  ಬೇರ್ಪಡಿಸಲಾಯಿತು. ಅಂದಿನಿಂದ ಈ ದನಗಳನ್ನು ಹಿಂದೆ ಕರೆಯುತ್ತಿದ್ದ “ಅಲ್ ಡರ್ ನಿ” ದನಗಳೆಂಬ ಹೆಸರಿನ ಬದಲಾಗಿ ಜೆರ್ಸಿ ದ್ವೀಪದ ದನಗಳನ್ನು “ಜರ್ಸಿ” ದನಗಳೆಂದೂ “ಅಲ್ ಡರ್ ನಿ” ದ್ವೀಪದ ದನಗಳನ್ನು “ಗರನ್ಸಿ” ದನಗಳೆಂದೂ ಕರೆಯುವ ರೂಢಿ ಬಳಕೆಯಲ್ಲಿ ಬಂದಿತು.

ಜರ್ಸಿ ದ್ವೀಪದ ದನಗಳನ್ನು ೧೮೩೪ ರಲ್ಲಿ ಜರ್ಸಿ ತಳಿಯ ದನಗಳೆಂದು ಅಧಿಕೃತವಾಗಿ ಘೋಷಿಸಲಾಯಿತು. ಅದೇ ವರ್ಷ “ಜರ್ಸಿ ಕೃಷಿ ಮತ್ತು ತೋಟಗಾರಿಕೆಯ ಸಂಘ” ಸ್ಥಾಪನೆಯಾಯಿತು. ಎಲ್ಲ ಜರ್ಸಿ ಪಶುಪಾಲಕರು ತಮ್ಮ ಜರ್ಸಿ ದನಗಳನ್ನು ಈ ಸಂಘದಲ್ಲಿ ನೋಂದಾಯಿಸಿದರು. ಈ ಸಂಘವು ಅಂದಿನಿಂದ ಈ ಜರ್ಸಿದನಗಳ ದಾಖಲೆಯನ್ನು ಮತ್ತು ಅವುಗಳ ಆನುವಂಶಿಕ ಚರಿತ್ರೆಯ ದಾಖಲೆಯನ್ನು ಕಾದಿಡುವ ಕೆಲಸವನ್ನು ಕೈಗೊಂಡಿದೆ. ಈ ದನಗಳನ್ನು ಅಮೆರಿಕೆಯ ವಲಸೆಗಾರರು ತಮ್ಮೊಂದಿಗೆ ಒಯ್ದರು. ಕ್ರಮೇಣ ಈ ದನಗಳು ಆಸ್ಟ್ರೇಲಿಯಾ ಮೊದಲಾದ ದೇಶಗಳಿಗೆ ಹರಡಿದವು. ಅಮೆರಿಕೆಯಲ್ಲಿ ಜರ್ಸಿದನಗಳ ದಾಖಲೆ ಇಡುವ ಕಾರ್ಯವು ೧೮೬೮ ರಲ್ಲಿ ಪ್ರಾರಂಭವಾಯಿತು. ಹದಿನೈದು ವರ್ಷಗಳ ನಂತರ ಇಂಗ್ಲೀಷ್ ಜರ್ಸಿ ದನಗಳ ಸಂಘವು ೧೮೮೩ರಲ್ಲಿ ಸ್ಥಾಪಿತವಾಯಿತು. ಆಸ್ಟ್ರೇಲಿಯಾ   ತನ್ನಲ್ಲಿಯ ಜರ್ಸಿ ದನಗಳನ್ನು ನೋಂದಾಯಿಸುವ ಸಂಘವನ್ನು ೧೯೦೦ ರಲ್ಲಿ ಸ್ಥಾಪಿಸಿತು. ಕ್ವೀನ್ಸ ಲ್ಯಾಂಡಿನ ಗೊಪಾಲಕರು ತಮ್ಮದೇ ಆದ ಪ್ರತ್ಯೇಕವಾದ ಒಂದು ಜರ್ಸಿದನಗಳ ಸಂಘವನ್ನು ೧೯೦೭ ರಲ್ಲಿ ಸ್ಥಾಪಿಸಿಕೊಂಡರು. ಆಸ್ಟ್ರೇಲಿಯಾ ಮತ್ತು ಕ್ವೀನ್ಸ ಲ್ಯಾಂಡ್ ಗಳಲ್ಲಿ ಜರ್ಸಿ ದನಗಳ ಸಂಘವು ಪ್ರಾರಂಭವಾದದಿನಿಂದ ಆಸ್ಟ್ರೇಲಿಯ ಜರ್ಸಿ ತಳಿಯ ದನಗಳು ಹೆಚ್ಚು ಸುಧಾರಣೆಯಾಗಿ ಎಲ್ಲ ಕಡೆ ಪ್ರಸಿದ್ಧಿ ಹೊಂದಿರುತ್ತವೆ.

ಜರ್ಸಿ ದನಗಳ ಹಿಂಡಿನ ಹಾಲಿನ ಪ್ರಮಾಣದ ಪರೀಕ್ಷಾಲಯ ವಿಕ್ಟೋರಿಯಾದಲ್ಲಿ ೧೯೧೨ ರಲ್ಲಿ ಉದ್ಘಾಟಿಸಲ್ಪಟ್ಟಿತು. ಇದಕ್ಕೆ ಅನೇಕ ಜರ್ಸಿ ಹೈನ ದನಗಳನ್ನು ಸೇರಿಸಲಾಯಿತು. ಅಲ್ಲಿಯ ತನಕ ಐರ್ಶೈರ್ ಹಸುಗಳು ಅಲ್ಲಿ ಹೆಚ್ಚು ಪ್ರತಿಭೆಯನ್ನು ಪಡೆದಿದ್ದವು ಕೆಲವು ಶ್ರೀಮಂತ ಜರ್ಸಿ ಪಶುಪಾಲಕರು ತಮ್ಮ ‌ದನಗಲ ಅಭಿವೃದ್ಧಿಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಜರ್ಸಿದನಗಳನ್ನು ಬಹುಮಟ್ಟಿಗೆ ಅಭಿವೃದ್ಧಿಗೊಳಿಸಿದರು. ಇದರ ಪರಿಣಾಮವಾಗಿ ಜರ್ಸಿ ಆಕಳು ಹಾಲಿನ ಉತ್ಪಾದನೆಯಲ್ಲಿ ಅಯರ್ ಶಯರ್ ಆಕಳುಗಳ ಮೇಲೆ ತಮ್ಮ ವಿಕ್ರಮವನ್ನು ಸ್ಥಾಪಿಸುವಂತಾಯಿತು. ಹೀಗಾಗಿ ಅವು ಹೆಚ್ಚು ಜನಪ್ರೀಯವಾದವು. ವಿಕ್ಟೋರಿಯಾದಲ್ಲಿ ೧೯೧೦ ರಿಂದ ೧೯೩೫ ರವರೆಗೆ ಜರ್ಸಿ ಹೋರಿಗಳನ್ನು ತಳಿ ಅಬಿವೃದ್ಧಿಗಾಗಿ ಅಲ್ಲಿಯ ಕೆಂಪು ಮತ್ತು ಬಿಳಿಯ ಹೈನದ ಆಕಳುಗಳ ಮೇಲೆ ಉಪಯೋ‌ಗಿಸಲಾಯಿತು. ಇದರ ಪರಿಣಾಮದಿಂದ ವಿಕ್ಟೋರಿಯಾದಲ್ಲಿ ಐರ್ಶೈರ್, ಶಾರ್ಟ್‌ಹಾರ್ನ್ ಜಾತಿಯ ದನಗಳಲ್ಲಿ ಜರ್ಸಿ ಜಾತಿಯು ಬೆರೆಯಿತು. ಈ ಮಿಶ್ರ ತಳಿಯ ಜರ್ಸಿ ಆಕಳುಗಳ ಹಾಲಿನಲ್ಲಿ ಬೆಣ್ಣೆ ಪ್ರಮಾಣವು ಮೂಲ ಐರ್ಶೈರ್ ಮತ್ತು ಶಾರ್ಟ್ ಹಾರ್ನ್ ಆಕಳುಗಳಿಗಿಂತ ಹೆಚ್ಚಾಯಿತು. ಈ ಸುಧಾರಣೆಯಿಂದ ಅಲ್ಲಿಯ ಪಶುಪಾಲಕರಿಗೆ ಹೆಚ್ಚಿನ ಲಾಭ ದೊರೆತುದಲ್ಲದೆ ಜರ್ಸಿ ತಳಿದನಗಳು ಹೆಚ್ಚು ಜನಪ್ರೀಯತೆ ಮತ್ತು ಕೀರ್ತಿಯನ್ನು ಸಂಪಾದಿಸಿದುವು.

ಜರ್ಸಿದನಗಳು ಆಕಾರದಲ್ಲಿ ಸಣ್ಣವು : ಅಂದರೆ ಫ್ರೀಜಿಯನ್ ದನಗಳಿಗಿಂತ ಗಿಡ್ಡ ದನಗಳು. ಮೈಕಟ್ಟಿನಲ್ಲಿ ಅಚ್ಚುಕಟ್ಟಾಗಿ ನೋಡಲು ಮಾಟಾಗಿ ಕಾಣುತ್ತವೆ. ಮಧ್ಯಮ ಗಾತ್ರದ ಜರ್ಸಿ ಆಕಳ ಮೈತೂಕ ೩೨೫ ರಿಂದ ೪೦೦ ಕಿ. ಗ್ರಾಂ. ಹೋರಿಯು ಆಕಳಿಗಿಂತ ೫೦ ರಿಂದ ೭೫ ಕಿ. ಗ್ರಾಂ. ಹೆಚ್ಚು ಭಾರವಿರುತ್ತದೆ. ಶುದ್ಧ ಜರ್ಸಿ ದನಗಳ ಬಣ್ಣ ಕಂದು ಅಥವಾ ನಸುಗೆಂಪು ಅಥವಾ ತಾಮ್ರ ವರ್ಣಗಳಿಂದ ಕೂಡಿರುತ್ತದೆ. ಕೆಂಪು ಹಳದಿ ಮಿಶ್ರಿತ ಬಣ್ಣ ಅಥವಾ ಜಿಂಕೆ ಬಣ್ಣದವೂ ಕೆಲವಿರುತ್ತವೆ. ಹೊಟ್ಟೆಯ ಕೆಳಭಾಗ ಬಿಳಿಯದಾಗಿರುತ್ತದೆ. ಕಾಲುಗಳು ಗಿಡ್ಡಾಗಿದ್ದು, ಗೊರಸುಗಳು ಕಪ್ಪಾಗಿ ಗಟ್ಟಿಯಾಗಿರುತ್ತವೆ. ಬೆನ್ನು ಸರಳವಾಗಿ ಹೊಟ್ಟೆ ಸ್ಥೂಲವಾಗಿ ಜೋತಾಡುವಂತೆ ಕಾಣಿಸುತ್ತದೆ. ಮುಂಭಾಗವು ಸಣ್ಣದಾಗಿದ್ದು ಹಿಂಭಾಗವು ದೊಡ್ಡದಾಗಿ ಬೆಣ್ಣೆಯ ಆಕಾರದಂತೆ ಕಾಣಿಸುತ್ತದೆ. ಕುತ್ತಿಗೆ ಉದ್ದವಾಗಿ ತೆಳ್ಳಗಿರುತ್ತದೆ. ಬಾಲ ಉದ್ದವಾಗಿರುತ್ತದೆ. ಕಿವಿಗಳು ಮುಖ ಮತ್ತು ಹಣೆ ಸಣ್ಣವು, ಸ್ವಲ್ಪ ಜೋತಾಡುವಂತೆ ಇದ್ದು ಹಿಂಭಾಗಕ್ಕಿಂತ ಮುಂಭಾಗ ಸಣ್ಣದಿರುತ್ತದೆ, ಕೆಚ್ಚಲ ಮೇಲೆ ರೇಷ್ಮೆಯಂತೆ ನಯವಾದ ಹೊಳಪಿನಿಂದ ಕೂಡಿದ ಕೂದಲುಗಳು ಹೇರಳವಾಗಿ ಬೆಳೆದಿರುತ್ತವೆ. ಇವುಗಳನ್ನು ಸಾಕುವುದಕ್ಕೆ ಫ್ರೀಜಿಯನ್ ಆಕಳಿಗಿಂತ ಕಡಿಮೆ ಖರ್ಚು ತಗಲುತ್ತದೆ. ಇವುಗಳ ಹಾಲಿನಲ್ಲಿ ಬೆಣ್ಣೆಯ ಅಂಶ ಶೇ. ೪-೫ ರಷ್ಟು ಇರುತ್ತದೆ. ಇವು ಇಂದು ಜಗತ್ತಿನಲ್ಲಿ ಜರ್ಸಿದನಗಳು ಉತ್ತಮ ಹಾಗೂ ಶ್ರೇಷ್ಠ ಹೈನದನಗಳೆಂದು ಹೆಸರನ್ನು ಗಳಿಸಿಕೊಂಡಿವೆ.

ನಾರ್ಮಂಡಿಯಿಂದ ಗರನ್ಸಿ ದ್ವೀಪಕ್ಕೆ ತಂದ ದನಗಳೇ ಮುಂದೆ ಗರನ್ಸಿ ದನಗಳೆಂದು ಹೆಸರು ಪಡೆದವು. ಗರನ್ಸಿ ದ್ವೀಪ ಜರ್ಸಿ ದ್ವೀಪಕ್ಕಿಂತಲೂ ಸಣ್ಣದು ಮತ್ತು ಬಡದ್ವೀಪ. ಜರ್ಸಿ ದನಗಳ ಅಭಿವೃದ್ಧಿಯೊಂದಿಗೆ ಹೋಲಿಸಿದರೆ ಗರನ್ಸಿ ದನಗಳ ಅಭಿವೃದ್ಧಿಯ ಕಾರ್ಯ ಬಹಳ ಮಂದಗತಿಯಿಂದ ನಡೆಯಿತೆಂದು ಹೇಳಬೇಕು.

ಈ ಆಕಳುಗಳಲ್ಲಿ ಕೆಚ್ಚಲು ದೊಡ್ಡದಾಗಿರುತ್ತದೆ. ಇದರ ತಲೆ ಉದ್ದ ಮತ್ತು ದೊಡ್ಡದು; ಕಣ್ಣುಗಳು ದೊಡ್ಡವು ಮತ್ತು ಮುಂದೆ ಉಬ್ಬಿ ಬಂದಂತಿರುತ್ತವೆ. ಹಣೆ ಪ್ರಶಸ್ತವಾಗಿರುತ್ತದೆ. ಕೊಂಬು ಸಣ್ಣದು ;ಕುತ್ತಿಗೆ ಉದ್ದ ಮತ್ತು ತೆಳುವಾಗಿರುತ್ತದೆ. ಈ ಹಸುಗಳ ಹಾಲಿನಲ್ಲಿ ಬೆಣ್ಣೆಯ  ಪ್ರಮಾಣ ಜರ್ಸಿ ಆಕಳ ಹಾಲಿನಲ್ಲಿ ಬೆಣ್ಣೆಯ ಪ್ರಮಾಣಕ್ಕಿಂತ ಹೆಚ್ಚಾಗಿರುತ್ತದೆ. ಬೆಣ್ಣೆಯ ಬಣ್ಣ ಜರ್ಸಿಯ ಬೆಣ್ಣೆಯ ಬಣ್ಣದಂತೆಯೇ ಹಳದಿಯಾಗಿರುತ್ತದೆ. ಇವು ಬಹು ಬಲಿಷ್ಠ ಹಾಗೂ ಕಷ್ಟ ಸಹಿಷ್ಣುತೆಯ ದನಗಳು. ಅಮೆರಿಕಾದವರು ಇವುಗಳನ್ನು ಬಹಳವಾಗಿ ಖರೀದಿ ಮಾಡಿ ತಮ್ಮ ದೇಶಕ್ಕೆ ಕೊಂಡೊಯ್ದಿದ್ದಾರೆ.

೨. ಫ್ರೀಜಿಯನ್ (Holstien Friegian (HF))

ಫ್ರೀಜಿಯನ್ ದನಗಳು ಹಾಲೆಂಡ್ ದೇಶದ ದನಗಳು. ಹಾಲೆಂಡಿನ ಜನರು ಶ್ರಮಜೀವಿಗಳು. ಜನರು ಪಶುಪಾಲನೆ ಮತ್ತು ಸಂವರ್ಧನೆಯಲ್ಲಿ ಹೆಚ್ಚು ಆಸಕ್ತಿಯಿಂದ ಶ್ರಮವಹಿಸಿ ನಿರಂತರ ದುಡಿಯುತ್ತಿದ್ದಾರೆ. ಹಾಲೆಂಡಿನಲ್ಲಿ ರಸಭರಿತವಾದ ಹಸಿಹುಲ್ಲು ದನಗಳಿಗೆ ಮೇಯಲು ಸದಾಕಾಲ ಯಥೇಚ್ಛವಾಗಿ ಸಿಗುತ್ತದೆ. ಅಲ್ಲಿಯ ಜನರ ಮುಖ್ಯ ಜೀವನೋಪಾಯ ಹೈನೋತ್ಪಾದನೆ. ಫ್ರೀಜಿಯನ್ ಜಾತಿಯ ದನಗಳನ್ನು ಮೊದಲಿಗೆ ಹಾಲೆಂಡ್ ದೇಶದ ಫ್ರೇಜಿಲ್ಯಾಂಡ್ ನಲ್ಲಿ ಅಭಿವೃದ್ಧಿಗೊಳಿಸಿ ಬೆಳೆಸಲಾಯಿತು. ಆದ್ದರಿಂದ ಇದಕ್ಕೆ “ಫ್ರೀಜಿಯನ್” ದನಗಳೆಂದು ಹೆಸರು. ಈ ದನಗಳನ್ನು ಜರ್ಮನಿಯ ಹೋಲ್ ಸ್ಟೀನ್ “ಬಂದರಿನಿಂದ ಹೊರಗೆ ರಫ್ತು ಮಾಡುತ್ತಿದ್ದುದರಿಂದ “ಹೋಲ್ ಸ್ಟೀನ್ ಫ್ರೀಜಿಯನ್”ಎಂದು ಇವುಗಳಿಗೆ ಹೆಸರು. ರೋಮನ್ ಸೈನಿಕರು ಯುರೋಪಿನ ಮೇಲೆ ದಾಳಿ ಮಾಡಿದಾಗ ತಮ್ಮ ಜೊತೆಯಲ್ಲಿ “ಟಾಸ್ ಕನಿ”ಮತ್ತು “ಲಂಬರ್ ಡಿಯ ಎಂಬ ಈಜಿಪ್ಟಿನ ದನಗಳನ್ನು ತೆಗೆ‌ದುಕೊಂಡು ಹೋಗಿದ್ದರು. ಈ ದನಗಳು ಅಲ್ಲಿಯ ಸ್ಥಳೀಯ ದನಗಳೊಂದಿಗೆ ಸಂಕರಗೊಂಡವು. ಈ ಸಂಕರ ತಳಿಯ ದನಗಳೇ ಫ್ರೀಜಿಯನ್ ದನಗಳು ಫ್ರೀಜಿಯನ್ ಹೋರಿಗಳನ್ನು ಇಂಗ್ಲೇಂಡ್, ಸ್ಕಾಟ್ಲೆಂಡ್ ಮತ್ತು ಚಾನಲ್ ಐಲೆಂಡ್ ಗಳಿಗೆ ಅಲ್ಲಿಯ ದನಗಳನ್ನು ಸುಧಾರಿಸುವುದರ ಸಲುವಾಗಿ ಕಾಲಾಂತರದಲ್ಲಿ ತೆಗೆದುಕೊಂಡು ಹೋಗಿ ಉಪಯೋಗಿಸಲಾಯಿತು. ಫ್ರೀಜಿಯನ್ ಹೋರಿಗಳನ್ನು “ಲಾಂಗ್ ಹಾರ್ನ್” ಶಾರ್ಟ್ ಹಾರ್ನ್” ಐರ್ಶೈರ್ “ಜರ್ಸಿ ಮತ್ತು ಗರನ್ಸಿ” ಆಕಳುಗಳ ಮೇಲೆ ಉಪಯೋಗಿಸಿ ಕೆಲವು ಉತ್ತಮ ಹೈನತಳಿಯ ದನಗಳನ್ನು ಉತ್ಪಾದಿಸಲಾಯಿತು. ಡಚ್ಚರೂ ಸಹ ಫ್ರೀಜಿಯನ್ ಹೋರಿಗಳಿಂದ ತಮ್ಮಲ್ಲಿಯ ತಳಿಯನ್ನು ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಇಂದು ಆಸ್ಟ್ರೇಲಿಯಾ, ಅಮೆರಿಕ, ಡೆನ್ ಮಾರ್ಕ್, ಹಾಲೆಂಡ್ ಮೊದಲಾದ ಹೈನುಗಾರಿಕೆಯಲ್ಲಿ ಅಭಿವೃದ್ಧಿ ಪಡೆದ ರಾಷ್ಟ್ರಗಳಲ್ಲಿ ಫ್ರೀಜಿಯನ್ ದನಗಳನ್ನು ನೋಡಬಹುದು.

ಫ್ರೀಜಿಯನ್ ಆಕಳುಗಳು ದೊಡ್ಡ ಗಾತ್ರದ ಹೈನುದನಗಳು. ಬಲಿತ ಆಕಳುಗಳು ೬೦೦ ರಿಂದ ೭೫೦ ಕಿ. ಗ್ರಾಂ. ತೂಗುತ್ತವೆ. ಹೋರಿಗಳ ತೂಕವು ೯೦೦ ಕಿ. ಗ್ರಾಂ. ಇವು ದೊಡ್ಡ ಮತ್ತು ಬೀಸಾದ ದನಗಳು, ಕಾಲುಗಳು ಗಿಡ್ಡಾಗಿ, ದಪ್ಪವಾಗಿದ್ದು ಒಳ್ಳೆ ಸಾಮರ್ಥ್ಯ ಹೊಂದಿವೆ. ದೇಹವು ಜಡವಿದ್ದು, ಗೊರಸುಗಳು ಬಹಳ ಮೆದುವಾಗಿರುವುದರಿಂದ ಗಟ್ಟಿಯಾದ ರಸ್ತೆಗಳ ಮೇಲೆ ಸಾರಿಗೆಗೆ ಉಪಯೋಗವಾಗಲಾರವು. ಉಪಯೋಗಿಸಿದಲ್ಲಿ ಗೊರಸುಗಳ ಮೇಲು ಭಾಗವು ಬಾತು ದನಗಳು ಕುಂಟುತ್ತವೆ. ಇದರ ಕೆಂಪಗೆ ಗಜ್ಜರಿ (ಕ್ಯಾರೆಟ್) ಬಣ್ಣವಾಗಿರುತ್ತವೆ. ಈ ದನಗಳ ಇಣೆ ಬೆಳೆದಿರುವುದಿಲ್ಲ. ಹೀಗಾಗಿ ಬೆನ್ನಿನ ಮೇಲುಭಾಗ ಸರಳವಾಗಿ, ಉದ್ದವಾಗಿ ಒಂದೇ ಸಮನಾಗಿ ಕಾಣುತ್ತದೆ. ಇವು ಆಕಾರದಲ್ಲಿ ಎತ್ತರವಾದ ಮತ್ತು ಮೈಕಟ್ಟಿನಲ್ಲಿ ಅಚ್ಚುಕಟ್ಟಾದ ಬೀಸಾದ ದನಗಳು ಮುಂಭಾಗಕ್ಕಿಂತ ಹಿಂಭಾಗ ದೊಡ್ಡದಾಗಿರುತ್ತದೆ. ಬೆನ್ನು ಕಿರಿದಾಗಿರುತ್ತದೆ. ಈ ದನಗಳು ಮಾಂಸ ಹಾಗೂ ಹಾಲು ಎರಡನ್ನೂ ಉತ್ಪಾದಿಸುತ್ತವೆ. ಇವುಗಳ ಮೈಬಣ್ಣದ್ದೇ ಒಂದು ವೈಶಿಷ್ಟ್ಯ. ಬಿಳುಪು ಮತ್ತು ಕಪ್ಪು ಬಣ್ಣಗಳ ದೊಡ್ಡ ಮಚ್ಚೆಗಳಿಂದ ಕೂಡಿರುತ್ತವೆ. ಫ್ರೀಜಿಯನ್ ದನ ಜಗತ್ತಿನಲ್ಲಿ ಅತಿ ಶ್ರೇಷ್ಠವಾದ ಹೈನುತಳಿಯೆಂದು ಹೆಸರು ಗಳಿಸಿದೆ. ಈ ದನಗಳು ಕೊಡುವಷ್ಟು ಹಾಲು ಬೇರೆ ಯಾವ ದನಗಳೂ ಕೊಡಲಾರವು. ಇವು ಶಾಂತ, ದೈರ್ಯ ಸ್ವಭಾವದವಾಗಿದ್ದು ನೋಡಲು ಸುಂದರವಾಗಿರುತ್ತವೆ. ಇವುಗಳ ಹಾಲಿನಲ್ಲಿ ಬೆಣ್ಣೆಯ ಅಂಶ ಶೇ. ೩. ೬ ರಷ್ಟು ಮಾತ್ರ.

೩. ರೆಡ್ ಡೇನ್ :

ಈ ದನಗಳ ಮೂಲಸ್ಥಾನ ಡೆನ್ಮಾರ್ಕ್ ದೇಶ. ಒಂದು ಕಾಲದಲ್ಲಿ ಈ ದೇಶದ ಜಮೀನಿನ ಸಾರ ತೀರ ಕಡಿಮೆಯಾಗಿತ್ತು ಆದ್ದರಿಂದ ಅಲ್ಲಿಯ ವ್ಯವಸಾಯವು ಲಾಭದಾಯಕವಾಗದೆ ರೈತರ ಆರ್ಥಿಕ ಸ್ಥಿತಿ ಬಹಳ ಹೀನಾವಸ್ಥೆಗೆ ಬಂದಿತ್ತು. ಆಗ ರೈತರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವುದಕ್ಕಾಗಿ ಹಸುಗಳ ಸಾಕಾಣಿಕೆ, ಪೋಷಣೆ, ಪಾಲನೆಗಳನ್ನು ಅತ್ಯಂತ ಕ್ರಮಬದ್ಧವಾಗಿ ಪ್ರಾರಂಭಿಸಿದರು. ಇದರಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ಅವರು ಪಶುಪಾಲನೆಯನ್ನು ತಮ್ಮ ಮುಖ್ಯ ಉದ್ಯೋಗವನ್ನಾಗಿ ಮುಂದುವರಿಸಿಕೊಂಡು ಬಂದರು. ಈ ಹೈನ ಅಭಿವೃದ್ಧಿಯ ಉದ್ಯೋಗ ಇಂದು ಡೆನ್ಮಾರ್ಕ್‌ನ ರಾಷ್ಟ್ರೀಯ ಉದ್ಯೋಗವಾಗಿದೆ. ಡೆನ್ಮಾರ್ಕ್‌ನಲ್ಲಿ ಶೇ. ೬೦ ರಷ್ಟು ದನಗಳು ರೆಡ್ ಡೇನ್, ಶೇ. ೨೦ ರಷ್ಟು ಹೋಲ್ ಸ್ಟೀನ್ ಫ್ರೀಜಿಯನ್, ಶೇ. ೧೫ ರಷ್ಟು ಜರ್ಸಿ ಹಾಗೂ ಮಿಕ್ಕ ಶೇ ೫ ರಷ್ಟು ಇತರ ಜಾತಿಯ ದನಗಳು. ಇಲ್ಲಿಯ ಪಶುಪಾಲಕರು ಜಗತ್ತಿನಲ್ಲೇ ಉತ್ತಮ ಪಶುಪಾಲಕರೆಂದು ಹೆಸರುಗಳಿಸಿಕೊಂಡಿರುತ್ತಾರೆ. ಅವರಲ್ಲಿ ಬಹುಮಂದಿ ಹೆಂಗಸರು ಒಬ್ಬೊಬ್ಬರೂ ಸುಮಾರು ೧೦೦ ರಿಂದ ೧೫೦ ರಷ್ಟು ದನಗಳ ಹಿಂಡನ್ನು ಪಾಲನೆ ಮಾಡುತ್ತಾರೆ. ಕಳೆದ ಸುಮಾರು ೮೬ ವರ್ಷಕಾಲದಲ್ಲಿ ಡೆನ್ಮಾರ್ಕ್‌ನ ಪಶುಪಾಲಕರ ಪರಿಶ್ರಮದಿಂದ ಹೈನ ತಳಿಯ ದನಗಳ ಸಂಖ್ಯೆ ದ್ವಿಗುಣಗೊಂಡಿದೆ. ಹೀಗೆ ಹೈನ ತಳಿಯ ಅಭಿವೃದ್ಧಿಯು ತೀವ್ರಗತಿಯಿಂದ ಮುಂದುವರಿದು ಇಂದು ಡೆನ್ಮಾರ್ಕ್ ದೇಶವು ಕ್ಷೀರ ಕೇಂದ್ರವೆಂದು ಕೀರ್ತಿ ಗಳಿಸಿದೆ. ಹಾಗೂ ಪಶು ಸಂಪತ್ತಿನ ಆಗರವಾಗಿದೆ. ಇಲ್ಲಿಯ ಖೋವಾ, ಬೆಣ್ಣೆ ಹಾಗೂ ಇತರ ಹಾಲಿನಿಂದ ತಯಾರಿಸಿದ ಪದಾರ್ಥಗಳು ಯೂರೋಪಿನ ಬೇರೆ ಬೇರೆ ದೇಶಗಳಿಗೆ ರಫ್ತಾಗುತ್ತವೆ. ರೆಡ್ ಡೇನ್ ದನಗಳು ಇಂದು ಹೈನಕ್ಕೆ ಸರ್ವೋತ್ಕೃಷ್ಟವಾದ ದನಗಳೆಂದು ಕೀರ್ತಿಯನ್ನು ಪಡೆದಿವೆ. ಈ ದನಗಳ ಹೆಸರೇ ಸೂಚಿಸುವಂತೆ ಇವುಗಳ ಮೈಬಣ್ಣ ಅಚ್ಚಕೆಂಪು : ಇವು ನಮ್ಮಲ್ಲಿಯ ಕೆಂಪು ಸಿಂದಿದನಗಳನ್ನು ಬಣ್ಣದಲ್ಲಿ ಹೋಲುತ್ತವೆ. ಇವು ಗಾತ್ರದಲ್ಲಿ ದೊಡ್ಡದಾಗಿರುವ ಬೀಸಾದ ದನಗಳು, ಮೈ ಮಾಂಸಖಂಡಗಳಿಂದ ತುಂಬಿಕೊಂಡಿರುತ್ತದೆ. ಇವು ಹಾಲು ಮತ್ತು ಮಾಂಸಗಳೆರಡಕ್ಕೂ ಉಪಯೋಗ ದನಗಳು. ಇವು ಶಾಂತ ಸ್ವಭಾವ ಹಾಗೂ ಧೈರ್ಯಗುಣವುಳ್ಳ ದನಗಳು, ಕಣ್ಣುಗಳು ಕೆಂಪಾಗಿ ಕಾಂತಿಯುಕ್ತವಾಗಿರುತ್ತವೆ. ಕಾಲುಗಳು ದಪ್ಪವಾಗಿದ್ದು :ಬಲಿಷ್ಠವಾಗಿರುತ್ತವೆ. ಗೊರಸುಗಳು ಕಪ್ಪಾಗಿ ಗಟ್ಟಿಯಾಗಿರುತ್ತವೆ. ಕೆಚ್ಚಲಿನ ಗಾತ್ರ ಬಹಳ ದೊಡ್ಡದಾಗದ್ದು ಜೋತಾಡುತ್ತಿರುತ್ತವೆ. ಮೈಚರ್ಮ ಮೃದುವಾಗಿ ಮಿಂಚುತ್ತಿರುತ್ತದೆ. ಇಣೆಯು ಬೆಳೆದಿರುವುದಿಲ್ಲ. ಮಣಕಗಳು ಕೇವಲ ೨ ವರ್ಷಗಳೊಳಗೆ ವಯಸ್ಸಿಗೆ ಬರುತ್ತವೆ. ಹಾಲಿನಲ್ಲಿ ಬೆಣ್ಣೆ ಅಂಶ ಶೇ. ೪ ರಷ್ಟು ಇರುತ್ತದೆ. ೪೦ ಬೇರೆ ಬೇರೆ ದೇಶಗಳು ಇಂದು ರೆಡ್ ಡೇನ್ ಜಾತಿಯ ತಳಿಯ ಹೋರಿಗಳನ್ನು ತಮ್ಮ ದೇಶದ ದನಗಳನ್ನು ಅಭಿವೃದ್ಧಿಗೊಳಿಸಲು ಉಪಯೋಗಿಸುತ್ತಿದ್ದಾರೆ ನಮ್ಮ ದೇಶಕ್ಕೂ ಈ ಜಾತಿಯ ಆಕಳು ಹಾಗೂ ಹೋರಿಗಳನ್ನು ತರಿಸಿಕೊಳ್ಳಲಾಗಿದೆ.

೪. ಐರ್ಶೈರ್:

ಹೋರಿಗಳನ್ನು ಉಪಯೋಗಿಸಿ ಪಡೆಯಲಾದ ದನಗಳೇ “ಐರ್ಶೈರ್ ದನಗಳು. ಸಾಮಾನ್ಯವಾಗಿ ಇವುಗಳ ಮೈಮಣ್ಣ ಕೆಂಪು ಮತ್ತು ಬಿಳುಪು ಮಿಶ್ರಿತ ಬಣ್ಣ; ಅಚ್ಚಕೆಂಪು ಅಥವಾ ಅಚ್ಚಬಿಳಿಪು ಬಣ್ಣದ ದನಗಳೂ ಇರುವುದುಂಟು. ಈ ದನಗಳ ಕಾಲು ತೆಳುವಾಗಿ ಜಿಂಕೆಯ ಕಾಲುಗಳಂತಿರುತ್ತವೆ. ಕೋಡು ಸ್ವಲ್ಪ ದೊಡ್ಡವು ಮತ್ತು ಬಹಳ ತೆಳ್ಳಗಿರುತ್ತವೆ. ಇವು ಕಡಿಮೆ ತಿನ್ನುವುದರಿಂದ ಸಾಕುವುದು ಸುಲಭ.

ಸಾಕಲು ಹೆಚ್ಚು ಖರ್ಚು ತಗಲುವುದಿಲ್ಲ. ಈ ಆಕಳುಗಳು ರುಚಿಕರವಾದ ಹೆಚ್ಚು ಹಾಲು ಕೊಡುತ್ತವೆ. ಇವು ಬಹಳ ಕಷ್ಟ ಸಹಿಷ್ಣು ದನಗಳು ; ವಿಶ್ವದ ವಿವಿಧ ಪ್ರದೇಶಗಳ ಆಹಾರ, ನೀರು ಮತ್ತು ಹವಾಮಾನಗಳಿಗೆ ಹೊಂದಿಕೊಂಡು ಹೋಗುವ ಒಂದು ವಿಶೇಷ ಗುಣ  ಇವು ಪಡೆದಿವೆ. ಅಂತೆಯೇ ಇವುಗಳನ್ನು ಎಲ್ಲ ಕಡೆಯೂ ಸಾಕಬಹುದು. ಈ ದನಗಳ ಬಗ್ಗೆ ಸ್ಕಾಟ್ಲೆಂಡ್ ಜನರಿಗೆ ಬಹಳ ಅಭಿಮಾನ ಅವರು ಹೊರನಾಡಿಗೆ ಹೋದಾಗ ತಮ್ಮ ಈ ಹೆಮ್ಮೆಯ ದನಗಳನ್ನು ತಮ್ಮ ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದರು  ಈದನಗಳು ಪ್ರಪಂಚದ ಎಲ್ಲ ಭಾಗಗಳಲ್ಲಿ ಹರಡಿಕೊಂಡಿವೆ.