ಒಂದೇ ಒಂದು ಕಲ್ಲೀಗಿ ಹೊಂದಲದವ್ವ ಈ ಕ್ವಾಟಿ ಕೋಲೆನ್ನಕೋಲೆ
ಎಡ್ಡೇ ಎಡ್ಡು ಕಲ್ಲೀಗಿ ಏರಲದವ್ವ ಈ ಕ್ವಾಟಿ
ಮೂರೇ ಮೂರು ಕಲ್ಲೀಗಿ ಮುಗಿಯಲದವ್ವ ಈ ಕ್ವಾಟಿ
ಈ ಕ್ವಾಟಿ ಮುಗಿಯಲ್ದರ ತೋರಸಿ ನೋಡಲ ನಡದಾರೆ
ತೋರಾಸಿ ನೋಡಿದರೆ ದೀವರಿಲ್ಲ ದಿಂಡರಿಲ್ಲ
ಆದಿಮೂದೀಯ ಕೂಡಿ ಮನಿಗಾರ ಬಂದರ

ಮನಿಗಾರ ಬಂದರ ಕಟ್ಟಿಮ್ಯಾಲ ಕುಂತಾರ

ಯಾಕ್ಯಾಕ್ರಿ ಮಾವಯ್ಯ ಮಾರ‍್ಯಾಕ ಬಾಡ್ಯವರಿ
ಒಂದೂರ ಬಿರಾಡ ಬಂದು ಮ್ಯಾಲ ಬಿದ್ದವ್ ಸಂಗಮ್ಮ
ಕೊಳ್ಳಾಗಿನ ವಸ್ತ ಕೊಟ್ಟ ಬಿರಾಡ ಕಟ್ಟರಿ ಮಾವಯ್ಯ

ಮಾವಯ್ಯ ಮಾವಯ್ಯ ಮಾರ‍್ಯಾಕ ಬಾಡ್ಯವರಿ
ಎದ್ಡೂರ ಬಿರಾಡ ಬಂದು ಮ್ಯಾಲ ಬಿದ್ದವು ಸಂಗಮ್ಮ
ಟೊಂಕಿನಾಗನ ಡಾಬ ಕೊಟ್ಟು ಬಿರಾಡ ಕಟ್ಟರಿ ಮಾವಯ್ಯ

ಮಾವಯ್ಯ ಮಾವಯ್ಯ ಮಾರ‍್ಯಾಕ ಬಾಡ್ಯವರಿ
ಮೂರೂರ ಬಿರಾಡ ಬಂದು ಮ್ಯಾಲ ಬಿದ್ದವು ಸಂಗಮ್ಮ
ಕೊರಳಾಗಿನ ವಸ್ತ ಕೊಟ್ಟು ಬಿರಾಡ ಕಟ್ಟರಿ ಮಾವಯ್ಯ
ಅದಗೀಯ ಮನಿಗಿ ಹೋಗಿ ಝಳಕಾರೆ ಮಾಡ್ಯಾರೆ

ದೇವಾರ ಕೊಲ್ಯಾಗ್ ಹೋಗಿ ದೇವರಿಗಿ ಶರಣೆಂದೆ
ದೇವಾರೆ ದೇವಾರೆ ನಮದು ನಿಮದು ಸರಿ ತರಿ
ತೊಟ್ಳಾಗ ಕಂದಗ ತೊಗೊಂಡು ತೊಡಿಮ್ಯಾಲೆ ಹೈಕೊಂಡೆ
ಇವತ್ ಮsಲಿ ಕುsಡಸಿದಂಗೆ ನಾಳ್ಯಾರ ಕುಡಸ್ಯಾರೊ

ಈವತ್ ಕಟ್ಟಿದ ಕುಲೈ ನಾಳ್ಯಾರ ಕಟ್ಯಾರೊ
ಅಡಗೀಯ ಮನಿಗ್ಹೋಗಿ ಅತ್ಯಮ್ಮಗ ಶರಣಂದ
ಅತ್ಯಮ್ಮ ಅತ್ಯಮ್ಮ ನಮದು ನಿಮದು ಸರಿ ತರಿ
ಅತ್ಯಮ್ಮ ಅತ್ಯಮ್ಮ ಮಾಣಿಕುರಾಯಗ ಜ್ವಾಕೀನೆ
ತೊಟ್ಳಾಗ್ಹಾಕಿ ತೂಗರಿ ಬಟ್ಳಾಗ್ಹಾಕಿ ಉಣಸರಿ
ಕೇಳ್ಕೋತ ಕೇಳ್ಕೋತ ಹೊರಿಯಾಕ ಬಂದಾಳೆ
ಕಟ್ಟಿನ್ ಮ್ಯಾಗ ಕೂಡ್ಯಾರೆ ಪಟ್ಟನ್ ಮಾಡ ಮಾವಯ್ಯ

ಮಾವಯ್ಯ ಮಾವಯ್ಯ ಮಾಣಿಕುರಾಯರ ಜ್ವಾಕೀರಿ
ಕಡ್ಡೀ ಹೋಳಾಗಿ ಮಾಡಿ ಬಂಡಿ ಬಂಡಿ ತುಂಬ್ಯಾರೆ
ಗವಡಾರ ಸಂಗಮ್ಮ ಹೋಗವ ಕಿಂಡಿ ಕಿಂಡಿ ಮಂದೀನೆ
ಕೇಳಕೋತ ಕೇಳಕೋತ ಅಗಸೀನ್ಯಾರ ದಾಟ್ಯಾರೆ
ಗವಡಾರ ಸಂಗಮ್ಮ ಹೋಗನ ಕಿಂಡಿ ಕಿಂಡಿ ಮಂದೀನೆ

ಗೆಳದೇರೆ ಗೆಳದೇರೆ ಮಾಣಿಕುರಾಯಗ ಜ್ವಾಕೀರೆ
ತೊಟ್ಳಾಗ್ಹಾಕಿ ತೂಗಾರಿ ಬಟ್ಳಾಗ್ಹಾಕಿ ಉಣಸಾರಿ
ಅಲ್ಲಿಂದು ಹೋಗ್ಯಾರೆ ಕ್ವಾಟಿಕೀಲುಕ ನಿಂತಾರೆ
ಇಷ್ಟೆಲ್ಲ ಆಗಿದ್ದು ತಾಯಿ ಕನಸ ಬಿದ್ದಾವ್ರಿ
ಆತಕೋತ ಕರಕೋತ ಓಡಿ ಓಡಿ ಹೊಂಡಾರೆ

ಒಂದ ಗುಡ್ಡ ಇಳದಾಳೆ ದನಕಾಯ ಅಣದೀರೆ
ದನ ಕಾಯ ಅಣದೀರೆ ದನ ಕಾಯ ತಮದೀರೆ
ಕ್ವಾಟಿಖಿಲ್ಲೇದ ಮ್ಯಾಗ ಮಂದಿ ಯಾಕ ನೆರದಾರ
ಗವಡಾರ ಸೊಸಿ ಸಂಗಮ್ಮ ಕ್ವಾಟೀಖಿಲ್ಲೇಗ್ ಕೊಟ್ಯಾರ
ನಿಮದsನ ಸಾಯಲಿ ನಿಮ್ಮ ಬಡಗಿ ಮುರಿಯಾಲೋ

ಎಡಗುಡ್ಡ ಸೌರ‍್ಯಾಳೆ ಕುರಿಕಾಯ ಅಣದೀರೆ
ಕುರಿಕಾಯ ಅಣದೀರೆ ಕುರಿಕಾಯ ತಮದೀರೆ
ಕ್ವಾಟಿಖಿಲ್ಯಾದಾಗ ಮಂದಿ ಯಾಕೆ ನೆರುದಾರೊ
ಗವಡಾರ ಸೊಸಿ ಸಂಗಮ್ಮ ಕ್ವಾಟಿಕಿಲ್ಯಾಗ್ ಕೊಟ್ಯಾರ
ನಿಮಕುರಿ ಸಾಯಲಿ ನಿಮ ಬಡಗಿ ಮುರಿಯಲೊ
ಬಿರಿಬೀರಿ ಹೋಗ್ಯಾಳೆ ಕ್ವಾಟಿಖಿಲ್ಯಕ ಮುಟ್ಯಾಳೆ

ಹಡದವ್ವ ಹಡದವ್ವ ಮಾಣಿಕುರಾಯಗ ಜ್ವಾಕೀನೆ
ಮಗಳೀಗಿ ಬಿಡರಪ್ಪ ನನ್ನಗಾರರ‍್ಹಾಕಾರೊ
ಹಣಿಬಾರ‍್ಕ ಬಂದಿಂದು ತಪ್ಪಲದ್ಹೋಗ ಹಡದಮ್ಮ
ಹಡದಮ್ಮ ಹಡದಮ್ಮ ಮಾಣಿಕುರಾಯಗ ಜ್ವಾಕೀರೆ
ತೊಟ್ಳಾಗ್ಹಾಕಿ ತೂಗಾರಿ ಬಟ್ಳಾಗ್ಹಾಕಿ ಉಣಸಾರಿ
ಖಿಲ್ಲೆದಾಗ ಹಾಕ್ಯರೆ ಮಣ್ಣಾರ ಎಳದಾರೆ

ಒಂದೇ ಒಂದು ಕಲ್ಲೀಗಿ ಹೊಂದೀತವ್ವ ಆ ಕ್ವಾಟಿ
ಎಡ್ಡೇ ಎಡ್ಡು ಕಲ್ಲೀಗಿ ಏರಿತವ್ವ ಆ ಕ್ವಾಟಿ
ಮಾರೇ ಮೂರು ಕಲ್ಲೀಗಿ ಮುಗದೀತವ್ವ ಆ ಕ್ವಾಟಿ

 

ಪಾಠಾಂತರಗಳು ಮತ್ತು ಸಮಾನ ಆಶಯದ ಗೀತೆಗಳು

೧) ಧರಣಿಯಮ್ಮನ ಬಲಿದಾನ; ಹನೂರು ಕೃಷ್ಣಮೂರ್ತಿ, ಕತ್ತಾಲು ದಾರಿ ದೂರ; ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೮೩, ಪು.ಸಂ. ೧೫೯-೧೮೯.

೨) ರಾಚೂರು ಕೋಟೆಗೆ ಹಾರ; ಕೃಷ್ಣಯ್ಯ, ಎಸ್.ಎ.; ಬಾಚಿಗೊಂಡನಹಳ್ಳಿ ಮತ್ತು ಏಣಗಿ ಬಸಾಪೂರದ ಜನಪದ ಗೀತೆಗಳು, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಉಡುಪಿ, ೧೯೯೨ ಪು.ಸಂ. ೧೫೬-೧೬೦.

೩) ಕ್ವಾಟೀಯ ಏರ‍್ಯಾಳ ಕೊಲ್ಲಂತ ಕೂಗ್ಯಾಳ; ನಾಗೇಗೌಡ ಎಚ್.ಎಲ್.. ದುಂಡುಮಲ್ಲಿಗಿ ಹೂವ ಬುಟ್ಟಿಲಿ ಬಂದಾವ, ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ೧೯೯೫, ಪು.ಸಂ. ೧೫೨-೧೫೩.

೪) ಸಂಗಮ್ಮನ ಹಾಡು; ಹೆಬ್ಬಾಳೆ ಜಗನ್ನಾಥ, ಬುಲಾಯಿ ಹಾಡುಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ೧೯೯೭ ಪು.ಸಂ. ೬೬-೬೯.

೫) ಮಲರೆಡ್ಡಿ ಸಾಹುಕಾರನ ಹಾಡು; ಹೆಬ್ಬಾಳೆ ಜಗನ್ನಾಥ; ಬುಲಾಯಿ ಹಾಡುಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ೧೯೯೭, ಪು.ಸಂ. ೫೮-೬೧.

೬) ತಾಳಿಕೋಟೆ ಕಿಲ್ಲಾದ ಹಾಡು; ನಾಯಕ ಡಿ.ಬಿ. ಬುಲಾಯಿ ಹಾಡುಗಳು, ಬಂಜಾರು ಪ್ರಕಾಶನ ಗುಲ್ಬರ್ಗಾ ೨೦೦೧, ಪು.ಸಂ. ೮೦-೮೪*      ಕೋಟಿ ಕಿಲ್ಲೆದ ಕಥಿ, ರಾಮಣ್ಣ ಕ್ಯಾತನಹಳ್ಳಿ, ಬೀದರ ಜಿಲ್ಲೆಯ ಜನಪದ ಗೀತೆಗಳು; ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೭೬ ಪು.ಸಂ. ೧೫೭-೧೬೦